ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕೆಂಪು ಮೃತ್ಯುವಿನ ಛದ್ಮವೇಷ

ಎಡ್ಗರ್‌ ಅಲಾನ್‌ ಪೋನ ಕತೆ ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌ ನ ರೂಪಾಂತರ

“ಕೆಂಪು ಮೃತ್ಯು” ದೀರ್ಘ ಕಾಲದವರೆಗೆ ನಾಡನ್ನು ಹಾಳುಗೆಡವಿತ್ತು. ಅಲ್ಲಿಯವರೆಗಿನ ಯಾವ ಜಾಡ್ಯವೂ ಅಷ್ಟು ಮಾರಣಾಂತಿಕ ಅಥವಾ ವಿಕಾರವಾಗಿರಲಿಲ್ಲ. ರಕ್ತವೇ – ರಕ್ತದ ಕೆಂಪು ಮತ್ತು ಅದರ ಭೀಕರತೆಯೇ – ಅದರ ಅವತಾರ, ಮೊಹರು. ಚುಚ್ಚಿದಂತ ನೋವು, ಮತ್ತು ತಲೆ ತಿರುಗುವಿಕೆ, ಮತ್ತು ರಂಧ್ರಗಳ ಮೂಲಕ ಸೋರುತ್ತಿರುವ ರಕ್ತ ಮತ್ತು ಕೀವು, – ಇವು ಅದರ ಲಕ್ಷಣಗಳು. ಬಲಿಪಶುವಿನ ದೇಹದ, ಅದರಲ್ಲೂ ಮುಖದ ಮೇಲಿನ ಕಡುಕೆಂಪು ಕಲೆಗಳು ಅವನನ್ನು ಕ್ರಿಮಿಯಾಗಿಸಿ ಸಹಚರರ ಸಹಾಯ ಹಾಗು ಸಹಾನುಭೂತಿಯಿಂದ  ದೂರ ಮಾಡುತ್ತಿದ್ದವು.  ಮತ್ತು ರೋಗ ಬರುವುದು, ಜೋರಾಗುವುದು, ಮತ್ತು ಸಾವಿನಲ್ಲಿ ಕೊನೆಗೊಳ್ಳುವುದು – ಕೇವಲ ಅರ್ಧ ತಾಸಿನ ಘಟನೆಗಳಾಗಿದ್ದವು.

ಆದರೆ ದೊರೆ ಪ್ರಾಸ್ಪೆರೊ ಖುಷಿಯಾಗಿದ್ದ, ನಿರ್ಭೀತನಾಗಿದ್ದ ಮತ್ತು ಜಾಣನಾಗಿದ್ದ. ತನ್ನ ನಾಡಿನ ಜನಸಂಖ್ಯೆ ಅರ್ಧಕರ್ಧ ಅಳಿದುಹೋದಾಗ, ತನ್ನ ಆಸ್ಥಾನಿಕರಲ್ಲಿ ಗಂಡು ಹೆಣ್ಣು ಸೇರಿದಂತೆ ಗಟ್ಟಿಮುಟ್ಟಾದ ಮತ್ತು ಉಲ್ಲಾಸದಿಂದ ತುಂಬಿರುವ ಸಾವಿರ ಜನರನ್ನು ಸನ್ನಿಧಿಗೆ ಕರೆದು  ಕೋಟೆಯೊಂದರಲ್ಲಿ ಸಂಪೂರ್ಣ ಪ್ರತ್ಯೇಕ ವಾಸಕ್ಕೆ ತೆರಳಿದ. ಆ ಕೋಟೆಯೋ, ವಿಶಾಲವಾದ ಮತ್ತು ಮಹಾವೈಭವದ ಆಕೃತಿ – ದೊರೆಯ ವಿಲಕ್ಷಣ ಆದರೂ ಭವ್ಯ ಅಭಿರುಚಿಯ ಪ್ರತೀಕ. ಆ ಕೋಟೆಗೆ ಎತ್ತರದ ಗಟ್ಟಿಮುಟ್ಟಾದ ಗೋಡೆಯಿತ್ತು. ಈ ಗೋಡೆಗೆ ಕಬ್ಬಿಣದ ದ್ವಾರಗಳಿದ್ದವು. ಒಳಸೇರಿಕೊಂಡ ಆಸ್ಥಾನಿಕರು ಕುಲುಮೆಗಳನ್ನು ಮತ್ತು ಭಾರವಾದ ಸುತ್ತಿಗೆಗಳನ್ನು ತಂದು ಅಗಣಿಗಳನ್ನು ಜೋಡಿಸಿದರು. ಒಳಗಿನ ಹತಾಶೆ ಅಥವಾ ಉನ್ಮಾದದ ಹಠಾತ್‌ ಪ್ರಚೋದನೆಗಳಿಗೆ ಆಗಮನದ್ದಾಗಲೀ, ನಿರ್ಗಮನದ್ದಾಗಲೀ ಯಾವುದೇ ದಾರಿಯಿರಬಾರದೆಂದು ತೀರ್ಮಾನ ಮಾಡಿದರು. ಕೋಟೆಯಲ್ಲಿ ಸಾಕಷ್ಟು ಸಾಮಾನು ಸರಂಜಾಮುಗಳಿದ್ದವು. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿರುವುದರಿಂದ ಆಸ್ಥಾನಿಕರು ಸೋಂಕಿಗೆ ಸವಾಲೆಸೆಯುವುದು ಸಾಧ್ಯವಿತ್ತು. ಹೊರ ಜಗತ್ತಿಗೆ ಏನಾದರೂ ಆಗಲಿ. ಅದಕ್ಕಾಗಿ ದುಃಖಿಸುವುದಾಗಲೀ, ಅದರ ಬಗ್ಗೆ ಚಿಂತಿಸುವುದಾಗಲೀ, ಮೂರ್ಖತನ. ದೊರೆ ವಿಲಾಸಕ್ಕೆ ಅಗತ್ಯವಾದ ಎಲ್ಲದ್ದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದ. ಅಲ್ಲಿ ವಿದೂಷಕರಿದ್ದರು. ಅಲ್ಲಿ ಆಶುಕವಿಗಳಿದ್ದರು, ಅಲ್ಲಿ ನರ್ತಕರಿದ್ದರು, ಅಲ್ಲಿ ಸಂಗೀತಗಾರರಿದ್ದರು, ಅಲ್ಲಿ ಸೌಂದರ್ಯವಿತ್ತು, ಅಲ್ಲಿ ಹೆಂಡವಿತ್ತು. ಇವೆಲ್ಲಾ ಮತ್ತು ರಕ್ಷಣೆಗೆ ಭಟರು ಒಳಗೆ: ಹೊರಗಡೆ ʼʼಕೆಂಪು ಮೃತ್ಯುʼʼ.

ಈ ಗುಪ್ತವಾಸದಲ್ಲಿರುವ ಐದನೇ ಅಥವಾ ಆರನೇ ತಿಂಗಳು ಹತ್ತಿರ ಬಂದಾಗ, ಮತ್ತು ಹೊರಗಡೆ ಮಹಾಮಾರಿ ರೌದ್ರಾವತಾರದಲ್ಲಿ ಅಬ್ಬರಿಸುತ್ತಿರುವಾಗ, ದೊರೆ ತನ್ನ ಸಾವಿರ ಹಿಂಬಾಲಕರಿಗೆ ಅಸಾಮಾನ್ಯ ಭವ್ಯತೆಯ ಛದ್ಮವೇಷದ ಔತಣಕೂಟವನ್ನು ಏರ್ಪಟಿಸಿದನು.

ಆ ಔತಣಕೂಟವೋ, ಅತೀವ ಭೋಗವಿಲಾಸದ್ದಾಗಿತ್ತು. ಆದರೆ ಮೊದಲು ಆ ಔತಣಕೂಟ ನಡೆದ ವಿಲಾಸ ಖಾನೆಯ ಕೊಠಡಿಗಳ ವಿವರಣೆ ಕೊಡುತ್ತೇನೆ ಇರಿ. ಅದು ಏಳು ಕೊಠಡಿಗಳ ಒಂದು ಸೌದ. ಅನೇಕ ಸೌದಗಳಲ್ಲಿ ಕೊಠಡಿಗಳು ಸಾಮಾನ್ಯವಾಗಿ ಒಂದರ ಪಕ್ಕ ಒಂದು ಮತ್ತು ಎದುರು ಬದುರು ಇದ್ದು ಅಷ್ಟನ್ನು ಒಟ್ಟಿಗೆ ನೋಡುವುದಕ್ಕಾಗುವ ಹಾಗಿರುತ್ತದೆ. ಆದರೆ ಇಲ್ಲಿ ಹಾಗಿರಲಿಲ್ಲ; ದೊರೆಯ ಅತಿರೇಕಗಳ ಮೇಲಿನ ಮೋಹ ಹಾಗಿರಲು ಬಿಡುತ್ತಿರಲಿಲ್ಲ. ಕೋಣೆಗಳು ಹೇಗೆ ಅಡ್ಡಾದಿಡ್ಡಿಯಾಗಿದ್ದವೆಂದರೆ ಒಮ್ಮೆಗೆ ಒಂದು ಕೋಣೆ ಮಾತ್ರ ಕಾಣುತಿತ್ತು. ಪ್ರತಿ ಇಪ್ಪತ್ತು ಮೂವತ್ತು ಗಜಗಳಲ್ಲಿ ಒಂದು ಹಠಾತ್‌ ತಿರುವಿತ್ತು, ಮತ್ತು ಪ್ರತೀ ತಿರುವಿನಲ್ಲೂ ಏನೋ ಹೊಸ ದೃಶ್ಯ. ಪ್ರತೀ ಗೋಡೆಯ ಮಧ್ಯಭಾಗದಲ್ಲಿ, ಎಡಕ್ಕೆ ಹಾಗು ಬಲಕ್ಕೆ, ಕಿರಿದಾದ, ನೀಳವಾದ ಕಿಟಕಿಗಳು. ಈ ಕಿಟಕಿಗಳಿಗೆ ಪ್ರತಿ ಕಿಟಕಿಯ ಒಳಗಿನ ಕೋಣೆಯಲ್ಲಿನ ಒಳಾಂಗಣ ವಿನ್ಯಾಸದ ಬಣ್ಣದ್ದೇ ಗಾಜು. ಉದಾಹರಣೆಗೆ, ತೀರಾ ಪೂರ್ವದ ಕೊಠಡಿಯಲ್ಲಿನ ಅಲಂಕಾರಿಕ ಬಟ್ಟೆಗಳ ಬಣ್ಣ ನೀಲಿ – ಮತ್ತು ಅದರ ಕಿಟಕಿಯ ಗಾಜುಗಳು ಅಚ್ಚ ನೀಲಿ ಬಣ್ಣದವು. ಎರಡನೇ ಕೊಠಡಿಯ ತೂಗು ಬಟ್ಟೆಗಳು ಬೂದಿ ಬಣ್ಣದ್ದು; ಅದರ ಕಿಟಕಿಯ ಗಾಜೂ ಬೂದಿ ಬಣ್ಣದ್ದು. ಮೂರನೆಯ ಕೊಠಡಿ ಹಸಿರುಮಯ, ಅದರ ಕಿಟಕಿಯ ಗಾಜುಗಳೂ ಅಷ್ಟೆ. ನಾಲಕ್ಕನೆಯ ಕೊಠಡಿಯ ಅಲಂಕಾರ ಹಾಗು ಬಣ್ಣ ಕಿತ್ತಳೆ, ಐದನೆಯದು ಬಿಳಿ, ಆರನೆಯದು ನೇರಳೆ. ಏಳನೆಯ ಕೊಠಡಿಯಲ್ಲಿ ಕಪ್ಪು ವೆಲ್ವೆಟ್‌ ಅಲಂಕಾರಿಕ ಬಟ್ಟೆಗಳು ತಾರಸಿ ಗೋಡೆಗಳ ಮೇಲೆಲ್ಲ ಆವರಿಸಿ ಕೆಳಗಿನ ಅದೇ ಬಣ್ಣದ ಅದೇ ರೀತಿಯ ನೆಲಹಾಸಿನ ಮೇಲೆ ಮಡಿಕೆ ಮಡಿಕೆಯಾಗಿ ಬಿದ್ದಿದ್ದವು. ಆದರೆ ಈ ಕೊಠಡಿಯಲ್ಲಿ ಮಾತ್ರ ಒಳಗಿನ ಅಲಂಕಾರದ ಬಣ್ಣಕ್ಕೆ ಸಮನಾಗಿ ಕಿಟಕಿ ಗಾಜಿನ ಬಣ್ಣವಿರಲಿಲ್ಲ. ಕಿಟಕಿ ಗಾಜುಗಳು ಕಡುಕೆಂಪಿನ ಬಣ್ಣದ್ದಾಗಿದ್ದವು – ರಕ್ತ ಕೆಂಪು ಬಣ್ಣ. ಏಳೂ ಕೊಠಡಿಗಳಲ್ಲಿ ಸುವರ್ಣ ಆಭರಣಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಆಥವಾ ತಾರಸಿಯಿಂದ ತೂಗುಹಾಕಿಸಿಕೊಂಡು ಇದ್ದವೇ ಹೊರತು ಯಾವುದರಲ್ಲೂ ದೀಪಗಳಾಗಲೀ, ದೀಪಸ್ತಂಭಗಳಾಗಲೀ ಇರಲಿಲ್ಲ. ಈ ವಿಲಾಸ ಖಾನೆಯ ಯಾವುದೇ ಕೊಠಡಿಗಳಲ್ಲಿ ದೀಪದಿಂದಾಗಲೀ, ಹಣತೆಯಿಂದಾಗಲೀ ಹರಡುವ ಬೆಳಕಿರಲಿಲ್ಲ. ಆದರೆ ಪ್ರತೀ ಕೊಠಡಿಯ ಹೊರಗಿನ ಹಜಾರದಲ್ಲಿ, ಪ್ರತೀ ಕಿಟಕಿಯ ಹೊರಗೆ ಒಂದು ದೊಡ್ಡ ಪಂಜು ಬೆಂಕಿ ಉಗುಳುತ್ತಾ ಬಣ್ಣದ ಗಾಜಿನ ಮೂಲಕ ಕಿರಣಗಳನ್ನು ತೂರಿಸಿ ಪ್ರತೀ ಕೊಠಡಿಗೆ  ಕಣ್ಣು ಕುಕ್ಕುವ ಬೆಳಕನ್ನು ಚೆಲ್ಲುತಿತ್ತು. ಮತ್ತು ಹೀಗೆ ಅನೇಕ ಆಡಂಬರದ ಭ್ರಾಮಕ ರೂಪಗಳು ಸೃಷ್ಟಿಯಾಗಿದ್ದವು. ಆದರೆ ಪಶ್ಚಿಮದ ಅಥವಾ ಕಪ್ಪು ಕೋಣೆಯಲ್ಲಿ ರಕ್ತ ಸಿಂಚಿತ ಗಾಜುಗಳ ಮೂಲಕ ಕಪ್ಪು ಪರದೆಗಳ ಮೇಲೆ ಹರಡಿದ ಬೆಂಕಿ-ಬೆಳಕಿನ ಪ್ರತಿಫಲನ ಎಷ್ಟು ಭಯಾನಕವಾಗಿತ್ತೆಂದರೆ, ಆ ಕೊಠಡಿಯನ್ನು ಪ್ರವೇಶಿಸಿದವರ ಮುಖ ಗಾಭರಿಯನ್ನು ವ್ಯಕ್ತಪಡಿಸುತಿತ್ತು ಮತ್ತು ಆ ಆವರಣದೊಳಗೆ ಕಾಲಿಡುವ ಧೈರ್ಯವನ್ನು ಮಾಡುವವರಾರೂ ಆ ಕೂಟದಲ್ಲಿ ಇರಲಿಲ್ಲ.

ಈ ಕೊಠಡಿಯಲ್ಲೇ ಅದರ ಪಶ್ಚಿಮದ ಗೋಡೆಗೆ ನೇತುಹಾಕಿಕೊಂಡು ಕಾಡಿಗೆ ಕಪ್ಪು ಬಣ್ಣದ  ಮತ್ತಿ ಮರದಿಂದ ಮಾಡಿದ ಒಂದು ದೈತ್ಯ ಗಡಿಯಾರವಿತ್ತು. ಅದರ ಲೋಲಕ ನೀರಸ, ಗಂಭೀರ, ಏಕತಾನತೆಯ ಠೇಂಕಾರವನ್ನು ಮಾಡುತ್ತಾ ಆಚೆ ಈಚೆ ತೋಯ್ದಾಡುತ್ತಿತ್ತು. ಮತ್ತು ನಿಮಿಷದ ಮುಳ್ಳು ಒಂದು ಸುತ್ತು ಬಂದು ಗಂಟೆಯ ಘಂಟೆ ಬಾರಿಸಬೇಕಾದಾಗ ಆ ಗಡಿಯಾರದ ಲಜ್ಜೆಗೆಟ್ಟ ಶ್ವಾಸಕೋಶಗಳಿಂದ ಸ್ಪಷ್ಟವಾದ, ಗಟ್ಟಿಯಾದ, ಆಳವಾದ, ಮತ್ತು ಸಂಪೂರ್ಣವಾಗಿ ಸಂಗೀತಮಯವಾದ, ಆದರೆ  ತೀರ ವಿಚಿತ್ರ ಸ್ವರ ಮತ್ತು ಭಾವದಿಂದ ಕೂಡಿದ ಸದ್ದು ಹೊರಡುತಿತ್ತು. ಅದು ಎಷ್ಟು ವಿಲಕ್ಷಣವಾಗಿರುತ್ತಿತ್ತೆಂದರೆ, ಸಂಗೀತಗಾರರು ಆ ಸದ್ದಿಗೆ ಕಿವಿಕೊಡಲು ತಮ್ಮ ಪ್ರದರ್ಶನಕ್ಕೆ ವಿರಾಮ ಕೊಡಬೇಕಾಗುತಿತ್ತು; ಹೀಗಾಗಿ ನರ್ತಕರು ತಮ್ಮ ನರ್ತನವನ್ನು ನಿಲ್ಲಿಸಬೇಕಾಗುತಿತ್ತು; ಮತ್ತು ಆ ಇಡೀ ವಿಲಾಸಮಯೀ ಗುಂಪಿಗೆ ಸ್ವಲ್ಪ ಸಮಯದ ಆಯೋಮಯ ಪರಿಸ್ಥಿತಿ ಎದುರಾಗುತಿತ್ತು; ಮತ್ತು ಗಡಿಯಾರದ ಘಂಟೆ ಮೊಳಗುತ್ತಿರುವವರೆಗೆ ಅಳುಕಿನವರು ಪೇಲವವಾಗುತಿದ್ದರು ಮತ್ತು ಹೆಚ್ಚು ವಯಸ್ಸಾದವರು ಮತ್ತು ಸ್ತಿಮಿತ ಸ್ವಭಾವದವರು ಗೊಂದಲಮಯ ಸ್ವಪ್ನದಲ್ಲೋ, ಧ್ಯಾನದಲ್ಲೋ ಇರುವಂತೆ ಹಣೆಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. ಆದರೆ ಮಾರ್ದನಿಗಳು ಸಂಪೂರ್ಣವಾಗಿ ನಿಂತು ಹೋದಾಗ, ಆ ಕೂಟವನ್ನು ಹಗುರವಾದ ನಗು ಆವರಿಸಿಕೊಳ್ಳುತಿತ್ತು; ಸಂಗೀತಗಾರರು ತಮ್ಮದೇ ಪುಕ್ಕಲುತನವನ್ನು, ದಡ್ಡತನವನ್ನು  ಅಣಗಿಸಿಕೊಳ್ಳುವಂತೆ ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುತ್ತಿದ್ದರು, ಮತ್ತು  ಮುಂದಿನ ಬಾರಿ ಗಡಿಯಾರದ ಘಂಟೆ ಬಾರಿಸುವಾಗ ಈ ರೀತಿಯ ಅಂಜಿಕೆಗೆ ಎಡೆ ಮಾಡಿಕೊಡಬಾರದೆಂದು ತಮ್ಮ ತಮ್ಮಲ್ಲಿ ವಾದ ಮಾಡಿಕೊಳ್ಳುತ್ತಿದ್ದರು; ಮತ್ತೆ ಅರವತ್ತು ನಿಮಿಷಗಳು ಆದ ಮೇಲೆ ( ಅದು ಹರಿಯುತ್ತಿರುವ ಸಮಯದ ಮೂರು ಸಾವಿರ ಮತ್ತು ಆರು ನೂರು ಕ್ಷಣಗಳನ್ನು ಒಳಗೊಂಡಿರುತ್ತದೆ), ಮತ್ತೊಮ್ಮೆ ಘಂಟೆಯ ನಾದ ಮೊಳಗುತಿತ್ತು, ಮತ್ತು ಮತ್ತೆ ಅದೇ ಆಯೋಮಯತೆ, ಮತ್ತು ನಡುಕ ಮತ್ತು ಧ್ಯಾನ, ಹಿಂದಿನಂತೆ.

 ಇದೆಲ್ಲಾ ಹೇಗೇ ಇದ್ದರೂ ಅದು ಒಂದು ವಿಲಾಸೀ ಹಾಗು ಅದ್ದೂರಿ ಉತ್ಸವವಾಗಿತ್ತು. ದೊರೆಯದು ವಿಲಕ್ಷಣವಾದ ಅಭಿರುಚಿ. ಬಣ್ಣ ಮತ್ತು ಅಲಂಕಾರದಲ್ಲಿ ಅವನ ಗ್ರಹಿಕೆ ಸೂಕ್ಷವಾಗಿತ್ತು. ಕೇವಲ ಕಟ್ಟಳೆಗೋಸ್ಕರ ಮಾಡುವ ಸಿಂಗಾರವನ್ನು ಅವನು ಕೈ ಬಿಟ್ಟನು. ಅವನ ಏರ್ಪಾಡುಗಳಲ್ಲಿ ದಿಟ್ಟತನ ಹಾಗೂ ಉನ್ಮಾದವಿತ್ತು ಮತ್ತು ಅವನ ಕಲ್ಪನೆಗಳಲ್ಲಿ ಒಂದು ಒರಟು ಹೊಳಪಿತ್ತು.  ಅವನು ಹುಚ್ಚ ಅಂದುಕೊಂಡ ಕೆಲವರಿದ್ದರು. ಅವನ ಅನುಯಾಯಿಗಳು ಅವನು ಹುಚ್ಚನಲ್ಲ ಅನ್ನುತ್ತಿದ್ದರು. ಅವನು ಹುಚ್ಚನಲ್ಲ ಎಂದು ಖಾತ್ರಿಯಾಗಬೇಕಾದರೆ ಅವನನ್ನು ಕೇಳಿಸಿಕೊಳ್ಳಬೇಕಾಗಿತ್ತು ಮತ್ತು ನೋಡಬೇಕಾಗಿತ್ತು ಮತ್ತು ಮುಟ್ಟಬೇಕಾಗಿತ್ತು.

ಈ ಭವ್ಯ ಉತ್ಸವದ ಎಲ್ಲಾ ಚರ ಸಿಂಗಾರಗಳನ್ನೂ ಹೆಚ್ಚು ಕಮ್ಮಿ ಅವನೇ ಯೋಜಿಸಿದ್ದನು; ಮತ್ತು ಅವನ ಅಭಿರುಚಿಯೇ ಆ ಛದ್ಮವೇಷಕೂಟದ ಸ್ವಭಾವವನ್ನು ನಿರ್ದೇಶಿಸಿತ್ತು. ಅವು ಕಂಡಿತಾ ವಿಕೃತವಾಗಿದ್ದವು. ಅಲ್ಲಿ ಸಾಕಷ್ಟು ತಳುಕು ಮತ್ತು ಬಳುಕು ಮತ್ತು ಹೊಳಪು ಮತ್ತು ಭ್ರಾಂತು ಇದ್ದವು. ಅಸಂಮಜಸ ಕೈಕಾಲು ಮತ್ತು ಉಡುಪುಗಳಿದ್ದ ವಿಚಿತ್ರ ಆಕೃತಿಗಳಿದ್ದವು. ಹುಚ್ಚನೊಬ್ಬ ಸೃಷ್ಟಿಸಿದಂತ ಮತ್ತು ಬರಿಸುವ ಕಲ್ಪನೆಗಳಿದ್ದವು. ಸುಂದರವಾದದ್ದು ಸಾಕಷ್ಟಿತ್ತು, ಚಂಚಲವಾದದ್ದು ಸಾಕಷ್ಟಿತ್ತು, ವಿಕೃತವಾದದ್ದು ಸಾಕಷ್ಟಿತ್ತು, ಭೀಕರವಾದದ್ದು ಸಾಕಷ್ಟಿತ್ತು, ಮತ್ತು ಅಸಹ್ಯ ತರಿಸಿವಂತದ್ದೂ ಸ್ವಲ್ಪ ಮಟ್ಟಿಗೆ ಇತ್ತು. ಏಳೂ ಕೋಣೆಗಳಲ್ಲಿ ಅಸಂಖ್ಯ ಸ್ವಪ್ನಗಳು ಆಚೆ ಈಚೆ ಅಲೆದಾಡುತಿದ್ದವು. ಮತ್ತು ಇವು – ಈ ಸ್ವಪ್ನಗಳು –  ಕೊಠಡಿಗಳ ಬಣ್ಣವನ್ನೇ ಮೈಮೇಲೇರಿಸಿಕೊಂಡು ನರಳಾಡಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದವು ಮತ್ತು ವಾದ್ಯವೃಂದದ ಒರಟು ಸಂಗೀತ ಅವುಗಳ ಹೆಜ್ಜೆಗಳ ಮಾರ್ದನಿ ಅನ್ನಿಸುತಿತ್ತು. ಮತ್ತು, ಅಲ್ಲಿ ಕೇಳಿಸಿಕೊಳ್ಳಿ, ವೆಲ್ವೆಟ್‌ ಕೋಣೆಯಲ್ಲಿರುವ ಆ ಮತ್ತಿ ಮರದ ಗಡಿಯಾರ ಹೊಡೆಯಲಾರಂಭಿಸಿದೆ. ಸ್ವಪ್ನಗಳು ನಿಂತಲ್ಲೇ ಮರಗಟ್ಟಿವೆ. ಅದರೆ ಘಂಟಾನಾದದ ಮಾರ್ದನಿಗಳು ಕರಗಿ ಹೋಗುತ್ತಿವೆ – ಅವು ಒಂದು ಕ್ಷಣ ಮಾತ್ರ ಬದುಕಿದ್ದವು – ಮತ್ತು ಆ ಸದ್ದು  ಕರಗಿಹೋದಂತೆ ತಿಳಿಯಾದ, ಅರೆ ಅದುಮಿಟ್ಟ ನಗು ಹರಿದಾಡುತ್ತಿದೆ. ಈಗ ಮತ್ತೆ ಸಂಗೀತ ಭೋರ್ಗರೆಯುತ್ತಿದೆ – ಮತ್ತು ಸ್ವಪ್ನಗಳಿಗೆ ಜೀವ ಬಂದಿದೆ, ಮತ್ತು ಅವು ಪಂಜುಗಳ ಕಿರಣಗಳು ತೂರಿ ಬರುತ್ತಿರುವ ಕಿಟಕಿಗಳ ಗಾಜುಗಳ ಬೇರೆ ಬೇರೆ ಬಣ್ಣಗಳನ್ನು ಮೆತ್ತಿಕೊಂಡು ಉಲ್ಲಾಸದಿಂದ ಅತ್ತ ಇತ್ತ ನರಳಾಡುತ್ತಿವೆ. ಆದರೆ ಆ ಏಳು ಕೊಠಡಿಗಳಲ್ಲಿ ತೀರಾ ಪಶ್ಚಿಮಕ್ಕೆ ಇರುವ ಕೊಠಡಿಗೆ ಆ ಛದ್ಮವೇಷಿಗಳಲ್ಲಿ ಯಾರೂ ಕಾಲಿಡುವ ಧೈರ್ಯ ಮಾಡಿಲ್ಲ; ಯಾಕೆಂದರೆ ಕತ್ತಲು ಕರಗುತ್ತಿದೆ; ಮತ್ತು ಅಲ್ಲಿ ರಕ್ತವರ್ಣದ ಗಾಜುಗಳ ಮೂಲಕ ಕಾಂತಿಯುತ ಕೆಂಬಣ್ಣ ಪಸರಿಸುತ್ತಿದೆ; ಮತ್ತು ಕಡುಕಪ್ಪು ಬಣ್ಣದ ಪರದೆಗಳ ಮಂಕು ಗಾಭರಿ ಹುಟ್ಟಿಸುತ್ತಿದೆ; ಮತ್ತು ಕಪ್ಪು ರತ್ನಗಂಬಳಿಯ ಮೇಲೆ ಹೆಜ್ಜೆ ಇಡುವವನ ಕಿವಿಯ ಮೇಲೆ, ಇತರೇ ಕೊಠಡಿಗಳಲ್ಲಿ ಹೆಚ್ಚು ಅಪರಿಚಿತ ಮೋಜುಗಳಲ್ಲಿ ತೊಡಗಿರುವವರ ಕಿವಿಯ ಮೇಲೆ ಬೀಳುವುದಕ್ಕಿಂತ ಹೆಚ್ಚು ಖಚಿತವಾದ  ಮತ್ತಿ ಮರದ ಗಡಿಯಾರದ ಗದ್ಗದಿತ ನಿನಾದ ಬೀಳುತ್ತಿದೆ.

ಆದರೆ ಈ ಇತರೆ ಕೊಠಡಿಗಳು ಜನಜುಂಗಳಿಯಿಂದ ತುಂಬಿರುತ್ತಿದ್ದವು, ಮತ್ತು ಅವುಗಳಲ್ಲಿ ಜೀವ ಹೃದಯ ಉದ್ರಿಕ್ತವಾಗಿ ಬಡಿದುಕೊಳ್ಳುತ್ತಿತ್ತು. ಗಡಿಯಾರವು ಮಧ್ಯರಾತ್ರಿಯ ಘಂಟೆ ಬಾರಿಸುವವರೆಗೆ ಸಂಭ್ರಮ ಕುಣಿದಾಡಿತು. ಮತ್ತು ಆಗ ನಾನು ಮೊದಲೇ ಹೇಳಿದಂತೆ ಸಂಗೀತ ಸ್ಥಗಿತವಾಯಿತು; ನರ್ತಕರ ನರ್ತನ ಸ್ತಂಭಿತವಾಯಿತು; ಮತ್ತು ಮೊದಲು ಆದ ಹಾಗೇ ಎಲ್ಲಾ ಚಟುವಟಿಕೆಗಳು ನಿಂತುಹೋದವು. ಆದರೆ ಈಗ ಗಡಿಯಾರದ ಘಂಟೆ ಹನ್ನೆರಡು ಬಾರಿ ಹೊಡೆಯಬೇಕಾಗಿತ್ತು; ಮತ್ತು ಬಹುಶಃ ಹಾಗಾಗಿ ಮೋಜು ಮಾಡುತ್ತಿರುವವರಲ್ಲಿ ವಿಚಾರಶೀಲರಾಗಿದ್ದವರ ಮಂಥನದಲ್ಲಿ ಹೆಚ್ಚು ಸಮಯವಾದಂತೆ ಹೆಚ್ಚು ವಿಚಾರಗಳು ಮೊಳಕೆಯೊಡೆದವು. ಮತ್ತು, ಬಹುಶಃ ಹಾಗಾಗಿ ಗಡಿಯಾರದ ಕೊನೆಯ ಠೇಂಕಾರದ ಪ್ರತಿಧ್ವನಿಗಳು ನಿಶಬ್ದದಲ್ಲಿ ಕರಗಿಹೋಗುವುದರ ಒಳಗೆಯೇ ಅಲ್ಲಿಯವರೆಗೆ ಯಾರೊಬ್ಬನೂ ಗಮನಿಸದೇ ಇರುವ ಛದ್ಮವೇಷಿಯೊಬ್ಬನ ಇರುವಿಕೆಯ ಅರಿವು ಆ ಗುಂಪಿನ ಅನೇಕರಿಗೆ ಆಯಿತು. ಈ ಹೊಸ ಅಸ್ತಿತ್ವದ ಸುದ್ದಿ ಪಿಸುಗುಟ್ಟಿನ ಮೂಲಕ ಹರಡಿದಂತೆ, ಆ ಇಡೀ ಗುಂಪಿನಿಂದ ಒಂದು ಗುಸುಗುಟ್ಟುವಿಕೆ, ಗೊಣಗಾಡುವಿಕೆ, ತೇಲಿ ಬಂತು – ಇದು ವ್ಯಕ್ತ ಪಡಿಸುತಿದ್ದದ್ದು ತಿರಸ್ಕಾರವನ್ನು, ಆಶ್ಚರ್ಯವನ್ನು, ಅಂತಿಮವಾಗಿ ಭಯ, ಭೀತಿ, ಜುಗುಪ್ಸೆಯನ್ನು.

ನಾನು ವಿವರಿಸಿರುವಂತಹ ವೈಚಿತ್ರಗಳಿಂದ ಕೂಡಿದ ಆ ರೀತಿಯ ಕೂಟದಲ್ಲಿ, ಯಾವುದೇ ಸಾಧಾರಣ ಆಕೃತಿ ಆ ರೀತಿಯ ಸಂವೇದನೆಯನ್ನು ಉಂಟುಮಾಡುವುದು ಸಾಧ್ಯವಿಲ್ಲ ಅಂದುಕೊಳ್ಳಬಹುದು. ನಿಜವಾಗಿ ಹೇಳುವುದಾದರೆ, ಆ ರಾತ್ರಿಯ ಛದ್ಮವೇಷಗಳಿಗೆ ಯಾವುದೇ ಮಿತಿ ಹೇರಿರಲಿಲ್ಲ; ಆದರೆ ನಾವು ಹೇಳುತ್ತಿರುವ ಈ ಆಕೃತಿ ಯಮನನ್ನು ಮೀರಿಸುವ ಯಮನಾಗಿತ್ತು, ಮತ್ತು ದೊರೆಯ ಅನಿರ್ದಿಷ್ಟ ಔಚಿತ್ಯಪ್ರಜ್ಞೆಯ ಗಡಿಗಳನ್ನೂ ದಾಟಿತ್ತು. ಅತಿ ಭಂಡರ ಹೃದಯದಲ್ಲೂ ಭಾವನೆಗಳನ್ನು ಉದ್ದೀಪಿಸದೇ ತಲುಪಲಾಗದ ಮೂಲೆಗಳಿರುತ್ತವೆ. ಜೀವನ ಮತ್ತು ಸಾವು ಕೇವಲ ಆಟಗಳಾಗಿರುವ ತೀರಾ ಉಡಾಫೆ ಜನರಿಗೂ, ತಮಾಷೆ ಮಾಡಬಾರದಂತಹ ವಿಷಯಗಳಿರುತ್ತವೆ. ಆ ಇಡೀ ಕೂಟ ಈಗ ಆ ವ್ಯಕ್ತಿಯ ವೇಷ ಹಾಗು ಭಂಗಿಯಲ್ಲಿ ವಿನೋದವಾಗಲೀ, ಔಚಿತ್ಯವಾಗಲೀ ಇಲ್ಲ ಎಂದು ಆಳವಾಗಿ ಭಾವಿಸಲಾರಂಭಿಸಿತು. ಆ ಆಕೃತಿ ಎತ್ತರವಾಗಿತ್ತು, ನರಪೇತಲವಾಗಿತ್ತು, ಮತ್ತು ತಲೆಯಿಂದ ಕಾಲಿನವರೆಗೆ ಮಸಣದ ಬೂದಿಯನ್ನು ಬಳಿದುಕೊಂಡಿತ್ತು. ಅದರ ಮುಖವನ್ನು ಮುಚ್ಚಿದ್ದ ಮುಖವಾಡ ಮರಗಟ್ಟಿದ ಹೆಣವನ್ನು ಎಷ್ಟು ಹೋಲುತ್ತಿತ್ತೆಂದರೆ ತೀರಾ ಕೂಲಂಕಷ ವಿಚಾರಣೆಗೂ ಅದು ಮುಖವಾಡವಲ್ಲ ಅನ್ನುವುದನ್ನು ತೋರಿಸುವುದಕ್ಕೆ ಆಗುತ್ತಿರಲಿಲ್ಲ. ಆದರೂ, ಸುತ್ತುವರೆದಿದ್ದ ಹುಚ್ಚು ಮೋಜುಗಾರರು ಇವೆಲ್ಲವನ್ನು ಒಪ್ಪದಿದ್ದರೂ, ತಾಳಿಕೊಳ್ಳಬಹುದಾಗಿತ್ತು. ಆದರೆ ಆ ಆಕೃತಿ ಕೆಂಪು ಮೃತ್ಯುವಿನ ಛದ್ಮವೇಷವನ್ನೇ ಹಾಕಿಕೊಳ್ಳುವ ಅತಿರೇಕಕ್ಕೆ ಹೋಗಿತ್ತು. ಅದರ ಉಡುಪು ರಕ್ತದಲ್ಲಿ ತೋಯ್ದು ಹೋಗಿತ್ತು – ಮತ್ತು ಅದರ ವಿಶಾಲ ಹಣೆ, ಅದರ ಮುಖದ ಎಲ್ಲಾ ಭಾಗಗಳೂ, ಕಡುಕೆಂಪು ದಿಗಿಲಿನಿಂದ ಒದ್ದೆಯಾಗಿತ್ತು.

ದೊರೆ ಪ್ರಾಸ್ಪೆರೋವಿನ ಕಣ್ಣು ಈ ಪ್ರೇತದಂತಃ ಆಕೃತಿ ಮೇಲೆ ಬಿದ್ದಾಗ ( ಆ ಆಕೃತಿ ತನ್ನ ಪಾತ್ರವನ್ನು ಸಂಪೂರ್ಣವಾಗಿ ನಿಭಾಯಿಸಲೋ ಎಂಬಂತೆ, ನಿಧಾನ ಗಂಭೀರ ಚಲನೆಯಲ್ಲಿ ನರ್ತಕರ ನಡುವೆ ನರ್ತಿಸಲಾರಂಭಿಸಿತ್ತು) ಮೊದಲ ಕ್ಷಣದಲ್ಲಿ ಅವನು ಭೀತಿ ಅಥವಾ ಅಸಹ್ಯದಿಂದ ನಡುಗಿದ.; ಆದರೆ, ತಕ್ಷಣವೇ, ಅವನ ಮುಖ ಕೋಪದಿಂದ ಕೆಂಪಾಯಿತು.

ʼʼಯಾರಿಗೆ ಈ ಸೊಕ್ಕು?”, ತನ್ನ ಬಳಿಯಿರುವ ಹಿಂಬಾಲಕರಿಗೆ ಅವನು ಗರ್ಜಿಸಿ ಕೇಳಿದ – “ಯಾರು ಈ ದೈವದ್ರೋಹಿ ಅಪಹಾಸ್ಯದ ಮೂಲಕ ನನ್ನ ಅವಮಾನ ಮಾಡುವ ಧೈರ್ಯ ತೋರುವವನು? ಹಿಡಿಯಿರಿ ಅವನನ್ನು, ವೇಷ ಕಳಚಿರಿ – ನಾವು ಸೂರ್ಯೋದಯದ ವೇಳೆಗೆ ಹೆಬ್ಬಾಗಿಲ ಬಳಿ ನೇಣಿಗೇರಿಸಬೇಕಾದವರು ಯಾರು ಎಂದು ನಮಗೆ ತಿಳಿಯಲಿ!”

ಈ ಮಾತುಗಳನ್ನು ಹೇಳುವಾಗ ದೊರೆ ಪ್ರಾಸ್ಪೆರೋ ನಿಂತದ್ದು ಪೂರ್ವದ ಅಥವಾ ನೀಲಿ ಕೋಣೆಯಲ್ಲಿ. ಅವನ ಧ್ವನಿ ಏಳು ಕೋಣೆಗಳಲ್ಲೂ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಹರಡಿತು –  ದೊರೆ ಶಕ್ತಿಶಾಲಿ ಹಾಗೂ ಗಟ್ಟಿಮುಟ್ಟಿನ ಮನುಷ್ಯನಾಗಿದ್ದ, ಮತ್ತು ಅವನು ಕೈ ಎತ್ತಿದ ಕ್ಷಣಕ್ಕೆ ಸಂಗೀತ ನಿಂತು ಹೋಗಿತ್ತು.

ದೊರೆ ಪೇಲವ ಮುಖದ ತನ್ನ ಹಿಂಬಾಲಕರೊಂದಿಗೆ ನಿಂತಿದ್ದು ನೀಲಿ ಕೊಣೆಯಲ್ಲಿ. ಮೊದಲು, ಅವನು ಮಾತನಾಡಿದಾಗ, ಅವನ ಹಿಂಬಾಲಕರ ಗುಂಪು ಈ ಅಗಂತುಕನ ಕಡೆಗೆ ಸಣ್ಣದಾಗಿ ಗಲಿಬಿಲಿಯಿಂದ ಚಲಿಸಿತು; ಆ ಸಮಯದಲ್ಲಿ ಹತ್ತಿರವಿದ್ದ ಅವನು ಉದ್ದೇಶಪೂರ್ವಕ ಹಾಗೂ ರಾಜಗಾಂಭೀರ್ಯ ನಡೆಯ ಮೂಲಕ ದೊರೆಯ ಕಡೆ ಹೆಜ್ಜೆ ಹಾಕಿದನು. ಆದರೆ ಆ ಛದ್ಮವೇಷಿಯ ಹುಚ್ಚು ವೇಷದಿಂದ ಪ್ರಚೋದಿತವಾದ  ಯಾವುದೋ ಹೆಸರಿಸಲಾಗದ ಹೆದರಿಕೆ ಇಡೀ ಗುಂಪನ್ನು ಆವರಿಸಿ ಆ ಗುಂಪಿನಲ್ಲಿ ಅವನನ್ನು ತಡೆಯಲು ಯಾರೂ ಕೈ ಎತ್ತದಂತೆ ಮಾಡಿತ್ತು; ಹಾಗಾಗಿ ಅಡೆತಡೆಯಿಲ್ಲದೇ ಅವನು ದೊರೆಯ ಇರುವಿಕೆಯ ಒಂದು ಗಜ ಹತ್ತಿರದಲ್ಲೇ ಹಾದು ಹೋದನು; ಆ ಇಡೀ ಕೂಟ ಒಂದೇ ಪ್ರೇರಣೆಗೆ ಒಳಗಾದಂತೆ ಕೊಠಡಿಯ ಮಧ್ಯ ಭಾಗದಿಂದ ಗೋಡೆಗಳ ಕಡೆಗೆ ತೆವಳಿದಂತೆ, ಅವನು ಅಡೆತಡೆಯಿಲ್ಲದೇ, ಹಾಗೆಯೇ ಮೊದಲಿಂದಲೂ ಅವನಿಗೇ ವಿಶಿಷ್ಟವಾಗಿದ್ದ ಘನಗಂಭೀರ ಹಾಗು ಎಚ್ಚರಿಕೆಯ ಹೆಜ್ಜೆಯಿಡುತ್ತಾ ನೀಲಿ ಕೋಣೆಯಿಂದ ಬೂದಿಬಣ್ಣದ ಕೋಣೆಗೆ – ಬೂದಿಯಿಂದ ಹಸಿರು – ಹಸಿರಿಂದ ಕಿತ್ತಳೆ – ಮತ್ತೆ ಇದರಿಂದ ಬಿಳಿ – ಮತ್ತೆ ಅಲ್ಲಿ ನಿಲ್ಲದೇ ನೇರಳೆ ಕೋಣೆಯ ಕಡೆಗೆ ತೆರಳುವ ತನಕ ಅವನನ್ನು ತಡೆಯುವ ಯಾವುದೇ ನಿರ್ಣಾಯಕ ನಡೆ ಸಂಭವಿಸಲಿಲ್ಲ. ಆಗ, ಆದರೆ ಆಗ, ದೊರೆ ಹುಚ್ಚು ಸಿಟ್ಟಿನಿಂದ ಹಾಗೂ ತನ್ನದೇ ತಾತ್ಕಾಲಿಕ ಹೇಡಿತನದ ನಾಚಿಕೆಯನ್ನು ಮೀರಲೋ ಎಂಬಂತೆ ಆರು ಕೊಠಡಿಗಳ ಮೂಲಕ ಮುನ್ನುಗ್ಗಿದನು; ಮಾರಣಾಂತಿಕ ಭೀತಿಯ ಹಿಡಿತದಲ್ಲಿದ್ದ ಉಳಿದವರು ಯಾರೂ ಅವನನ್ನು ಹಿಂಬಾಲಿಸಲಿಲ್ಲ. ದೊರೆಯು ಕತ್ತಿಯನ್ನು ಹಿರಿದು ಸಾಗುತ್ತಿರುವ ಆಕೃತಿಯ ಮೂರು ಅಥವಾ ನಾಲಕ್ಕು ಅಡಿ ಹತ್ತಿರ ಹಠಾತ್‌ ಆಗಿ ಬಂದಾಗ, ಆ ಆಕೃತಿ ವೆಲ್ವೆಟ್‌ ಕೋಣೆಯ ತುದಿಯನ್ನು ತಲುಪಿರುವುದರಿಂದ ಇದ್ದಕ್ಕಿದ್ದಂತೆ ತಿರುಗಿ ತನ್ನ ಬೆನ್ನಟ್ಟಿದವನನ್ನು ಎದುರಿಸಿತು. ಒಂದು ತೀಕ್ಷ ಕೂಗು ಕೇಳಿಸಿತು – ಮತ್ತು ಹೊಳೆಯುತ್ತಿರುವ ಕತ್ತಿ ಕಡುಕಪ್ಪು ರತ್ನಕಂಬಳಿಯ ಮೇಲೆ ಬಿದ್ದಿತು, ಮತ್ತು ಅದರ ಜೊತೆಗೇ ದೊರೆ ಹೆಣವಾಗಿ ಮಕಾಡೆ ಬಿದ್ದನು. ಆಗ, ಹತಾಶೆಯು ನೀಡುವ ಒರಟು ಧೈರ್ಯದಿಂದ ಮೋಜುಗಾರರ ಗುಂಪು ಕಪ್ಪು ಕೋಣೆಯೊಳಗೆ ನುಗ್ಗಿ, ಮತ್ತಿ ಮರದ ಗಡಿಯಾರದ ನೆರಳೊಳಗೆ ಎತ್ತರಕ್ಕೆ, ನಿಶ್ಚಲವಾಗಿ ನಿಂತಿದ್ದ ಆ ಛದ್ಮವೇಷಿಯನ್ನು ಹಿಡಿದು,  ತಾವು ಒರಟಾಗಿ ಎಳೆದಾಡಿದ ಆ ಮಸಣದ ಬೂದಿ ಮೆತ್ತಿದ ದೇಹ ಹಾಗು ಹೆಣದ ರೀತಿಯ ಮುಖವಾಡದ ಹಿಂದೆ ಯಾವುದೇ ಮೂರ್ತ ಆಕಾರವಿಲ್ಲ ಎಂದು ಕಂಡುಹಿಡಿದಾಗ ಹೇಳಲಾಗದ ಭೀತಿಯಿಂದ ಏದುಸಿರು ಬಿಟ್ಟರು.

ಮತ್ತೆ, ಈಗ, ಕೆಂಪು ಮೃತ್ಯುವಿನ ಅಸ್ತಿತ್ವವನ್ನು ಒಪ್ಪಿಕೊಳ್ಳಲಾಯಿತು. ಅವನು ಕಳ್ಳನಂತೆ ಕತ್ತಲಲ್ಲಿ ಬಂದಿದ್ದನು. ಮತ್ತು ಒಬ್ಬರಾದ ಮೇಲೆ ಒಬ್ಬರು ಮೋಜುಗಾರರು ರಕ್ತದಿಂದ ಆರ್ದ್ರವಾದ ಆ ಉತ್ಸವದ ಕೋಣೆಗಳಲ್ಲಿ ಕೆಳಬಿದ್ದರು, ಮತ್ತು ತಾವು ಬಿದ್ದ ಹತಾಶೆಯ ಭಂಗಿಯಲ್ಲೇ ಎಲ್ಲರೂ ಮೃತರಾದರು. ಆ ಮೋಜುಗಾರರಲ್ಲಿ ಕೊನೆಯವನ ಸಾವಿನೊಂದಿಗೆ ಮತ್ತಿ ಮರದ ಗಡಿಯಾರದ ಜೀವವೂ ಹೋಯಿತು. ಮತ್ತು ಪಂಜುಗಳ ಜ್ವಾಲೆ ನಂದಿ ಹೋಯಿತು. ಮತ್ತು ಅಂಧಃಕಾರ ಮತ್ತು ಅವನತಿ ಮತ್ತು ಕೆಂಪು ಮೃತ್ಯು ಎಲ್ಲದರ ಮೇಲೆ ಆಧಿಪತ್ಯ ಸ್ಥಾಪಿಸಿದ


About The Author

Leave a Reply

You cannot copy content of this page

Scroll to Top