ಧಾರಾವಾಹಿ ಸಂಗಾತಿ-125
ರುಕ್ಮಿಣಿ ನಾಯರ್

ಒಬ್ಬ ಅಮ್ಮನ ಕಥೆ
ಸುಮತಿಗೆ ಡಯಾಲಿಸಿಸ್ ಮಾಡಿಸಲು ಮಗಳ ಪ್ರಯತ್ನ

ಮರುದಿನ ಬೆಳಿಗ್ಗೆ ಸುಮತಿಯ ಎರಡನೇ ಮಗಳು ತನ್ನ ತಾಯಿಯ ಚಿಕಿತ್ಸೆಯನ್ನು ಮಾಡುತ್ತಿದ್ದ ವೈದ್ಯರ ಬಳಿಗೆ ಹೋದಳು. ಅವಳನ್ನು ನೋಡಿದ ವೈದ್ಯರು…. ಏನಮ್ಮ ನಿನ್ನ ತಾಯಿ ಹೇಗಿದ್ದಾರೆ?…. ಎಂದು ಕೇಳಿದರು. ಹಿಂದಿನ ದಿನ ತಂಗಿಯು ಹೇಳಿದ್ದ ವಿಚಾರವನ್ನು ಮಾತನಾಡಲೆಂದು ಅವಳು ವೈದ್ಯರಲ್ಲಿಗೆ ಬಂದಿದ್ದಳು…. _ಸರ್ ನನ್ನ ತಾಯಿಯ ಆರೋಗ್ಯ ಸುಧಾರಿಸಲು ಬೇರೆ ಯಾವ ಚಿಕಿತ್ಸೆಯೂ ಇಲ್ಲವೇ?”… ಎಂದು ಕೇಳಿದಳು. ಆಗ ವೈದ್ಯರು…. “ಇದೆಯಮ್ಮಾ….. ಆದರೆ ಅದು ಬಹಳ ದುಬಾರಿ…. ನಿನ್ನ ತಾಯಿಯ ಆಂತರಿಕ ಅಂಗಾಂಗಗಳೆಲ್ಲವೂ ತಮ್ಮ ಕಾರ್ಯವನ್ನು ನಿರ್ವಹಿಸಲು ವಿಫಲವಾಗಿವೆ….. ಆದರೆ ಆಗಾಗ ಡಯಾಲಿಸಿಸ್ ಮಾಡಿಸುವ ಮೂಲಕ ನಿನ್ನ ತಾಯಿಯ ಆರೋಗ್ಯವನ್ನು ಸ್ವಲ್ಪ ಹೆಚ್ಚು ಕಾಲ ಸುಧಾರಿಸಿಕೊಳ್ಳುವಂತೆ ಮಾಡಬಹುದು”….. ಎಂದು ವೈದ್ಯರು ಹೇಳಿದ ಈ ವಿಚಾರ ಆ ಹುಡುಗಿಗೆ ಸರಿಯಾಗಿ ತಿಳಿದಿರಲಿಲ್ಲ ಹಾಗಾಗಿ…._ “ಡಯಾಲಿಸಿಸ್ ಎಂದರೇನು, ಸರ್?”… ಎಂದು ಕೇಳಿದಳು….”ನಮ್ಮ ಶರೀರವನ್ನು ನಿರಂತರವಾಗಿ ಶುದ್ಧೀಕರಣಗೊಳಿಸಲು ಮುಖ್ಯವಾಗಿ ಕಿಡ್ನಿಗಳು ಕೆಲಸ ಮಾಡಬೇಕು…. ಅವುಗಳು ಕೆಲಸ ಮಾಡಲು ವಿಫಲವಾದಾಗ ರಕ್ತದಲ್ಲಿನ ವಿಷಕಾರಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಕೃತಕವಾಗಿ ಫಿಲ್ಟರ್ ಮಾಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯುತ್ತಾರೆ…. ಇದನ್ನು ಮಾಡಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಕಾಲ ನಿನ್ನ ತಾಯಿ ಜೀವಂತವಾಗಿರಬಹುದು…. ಆದರೆ ಇದನ್ನು ಆಗಾಗ ಮಾಡಿಸುತ್ತಿರಬೇಕಾಗುತ್ತದೆ…. ಇದರ ಖರ್ಚು ಅಧಿಕ…. ಎಂದರು”….. “ಹಾಗಾದರೆ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಬಹುದಲ್ಲವೇ?”… ಎಂದು ಕೇಳಿದಳು.
ಅವಳ ಮಾತಿಗೆ,… “ಹೌದು ಆಕೆಯು ಹೆಚ್ಚಿನ ಕಾಲ ಬದುಕುಳಿಯಬೇಕಾದರೆ ಈ ಚಿಕಿತ್ಸೆಯನ್ನು ನಿಮ್ಮ ತಾಯಿಗೆ ಕೊಡಿಸಲೇಬೇಕು”…. ಎಂದಾಗ….” ಸರ್ ದಯವಿಟ್ಟು ಆದಷ್ಟು ಬೇಗ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಿಸಿ”…. ಎಂದು ಆ ಹುಡುಗಿ ಕೇಳಿಕೊಂಡಾಗ, ಅವಳ ಮುಗ್ದತೆಯನ್ನು ಅರಿತ ವೈದ್ಯರು…. “ಮಗು ಈ ಚಿಕಿತ್ಸೆಯನ್ನು ಇಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊಡಲು ಸಾಧ್ಯವಿಲ್ಲ…. ಅದಕ್ಕೆ ಬೇಕಾದ ಉಪಕರಣಗಳು ಇಲ್ಲಿಲ್ಲ…. ಈ ಚಿಕಿತ್ಸೆಯನ್ನು ಕೊಡಲು ವಿಶೇಷ ಯಂತ್ರವು ಬೇಕಾಗಿದೆ…. ಇದು ಬಹಳ ಅಪರೂಪಕ್ಕೆ ಈ ಚಿಕಿತ್ಸೆಗೆಂದೇ ವಿಶೇಷವಾದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ”…. ಎಂದು ವೈದ್ಯರು ಹೇಳಿದಾಗ…. “ಯಾವ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಕೊಡಬಹುದು?… ಎಂದು ಕೇಳಿದಳು,…. “ಬೆಂಗಳೂರಿನ ಕಿಡ್ನಿ ಫೌಂಡೇಶನ್ ಎನ್ನುವ ಆರೋಗ್ಯ ಸಂಸ್ಥೆಯಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ…. ಸಾಧ್ಯವಾದರೆ ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಮ್ಮ”…. ಎಂದು ವೈದ್ಯರು ಹೇಳಿದರು. ಅದನ್ನು ಕೇಳಿದ ಹುಡುಗಿಯ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಏನು ಮಾಡಬೇಕು ಎನ್ನುವುದು ಹೊಳೆಯಲಿಲ್ಲ. ವೈದ್ಯರಿಗೆ ಧನ್ಯವಾದ ತಿಳಿಸಿ, ಕೊಠಡಿಯಿಂದ ಹೊರ ನಡೆದಳು.
ಆಸ್ಪತ್ರೆಯ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡು ಆಲೋಚನೆ ಮಾಡ ತೊಡಗಿದಳು. ಅಕ್ಕ-ಬಾವನಿಗೆ ಹೇಳಿದರೆ ಹೇಗೆ? ಅವರು ಏನಾದರೂ ಸಹಾಯ ಮಾಡಬಹುದೇ? ಹಾಗೆ ಯೋಚಿಸಿದಾಗ ಅವರಿಂದ ಅದು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸಿತು. ಏಕೆಂದರೆ ಅವರು ಕೂಡ ಹೆಚ್ಚು ಹಣವಂತರಾಗಿರಲಿಲ್ಲ. ಬಾವ ಟಿಂಬರ್ ಕೆಲಸದಿಂದ ಬರುವ ಆದಾಯದಲ್ಲಿ ಅಕ್ಕ ಮತ್ತು ಮಕ್ಕಳ ಖರ್ಚು ವೆಚ್ಚ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಿದ್ದಾರೆ.
ತಾಯಿಯ ತಮ್ಮಂದಿರು ಹಾಗೂ ನೆಂಟರಿಷ್ಟರನ್ನು ಕೇಳುವಂತೆ ಇಲ್ಲ. ತಾಯಿಯ ಎರಡನೇ ತಮ್ಮ ಅವರ ಕೈಲಿ ಆಗುವಷ್ಟು ಮತ್ತು ಅವರ ಶಕ್ತಿಯನ್ನೂ ಮೀರಿ ಹಲವು ಸಲ ನಮಗೆ ಸಹಾಯ ಮಾಡಿದ್ದಾರೆ. ಇನ್ನು ನೆಂಟರಿಷ್ಟರು ಇದ್ದರೂ ಕೂಡ ಅಮ್ಮನ ಕಷ್ಟಕರ ಜೀವಿತ ಹಾಗೂ ಅಪ್ಪ ತೀರಿ ಹೋದ ನಂತರ ಒಬ್ಬರ ಸುಳಿವೂ ಇಲ್ಲ. ನೆಂಟರಿಷ್ಟರಾದ ಯಾರನ್ನೂ ಆಶ್ರಯಿಸದೇ ಸ್ವಾಭಿಮಾನದಿಂದ ಬದುಕಿದ ತಾಯಿ ನಮಗೂ ಅದನ್ನೇ ಕಲಿಸಿದ್ದಾರೆ. ಇನ್ನು ಉಳಿದಿರುವುದು ನಮಗೆ ಆಶ್ರಯವಿತ್ತು ನಮ್ಮ ಕಷ್ಟಕ್ಕೆ ಸದಾ ಹೆಗಲಾಗಿ ನಿಂತಿರುವವರು ನಮ್ಮ ಎಸ್ಟೇಟಿನ ದಯಾಳುವಾದ ಸಾಹುಕಾರರು ಮತ್ತು ಅವರ ಪತ್ನಿ ‘ಅಮ್ಮ’. ಅವರಲ್ಲಿ ಈ ಬಗ್ಗೆ ತಿಳಿಸಿ ನೋಡೋಣ. ಏಕೆಂದರೆ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ, ಈವರೆಗೂ ಅಮ್ಮನಿಗೆ ಬೇಕಾದ ಇನ್ಸುಲಿನ್ ಚುಚ್ಚುಮದ್ದು ಹಾಗೂ ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರೆ ಚಿಕಿತ್ಸೆಗಳಿಗೆ ಅವರು ಸಹಾಯ ಮಾಡಿದ್ದಾರೆ. ಬಹುಶಃ ಈ ವಿಚಾರ ತಿಳಿದರೆ ಖಂಡಿತ ನಮಗೆ ಏನಾದರೂ ಒಂದು ಸಹಾಯ ಮಾಡಿಯೇ ಮಾಡುತ್ತಾರೆ ಎಂಬ ವಿಚಾರ ಮನಸ್ಸಿಗೆ ಬಂದಾಗ, ನನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಇರುವಾಗಲೇ ನಾನು ಎಸ್ಟೇಟ್ ಗೆ ಹೋಗಿ ಅಲ್ಲಿ ಸಾಹುಕಾರರನ್ನು ಕಂಡು ಅವರಲ್ಲಿ ಈ ಬಗ್ಗೆ ಮಾತನಾಡಿ ವಿನಂತಿಸಿಕೊಳ್ಳುತ್ತೇನೆ. ಅವರು ಖಂಡಿತ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಮೂಡಿದ ಕೂಡಲೇ ಕುಳಿತಲ್ಲಿಂದ ಎದ್ದು ನೇರವಾಗಿ ವಾರ್ಡಿಗೆ ಹೋದಳು.
ಈ ವಿಷಯವನ್ನು ತಾಯಿಗೆ ತಿಳಿಸಲಿಲ್ಲ. ಏನಾದರೂ ಒಂದು ವ್ಯವಸ್ಥೆ ಆದ ಮೇಲೆ ತಿಳಿಸಿದರಾಯ್ತು. ಈಗಲೇ ಹೇಳಿ ಮನಸ್ಸಿನಲ್ಲಿ ಇಲ್ಲದ ಆಸೆಯನ್ನು ತರಿಸುವುದು ಬೇಡವೆಂದು ತೀರ್ಮಾನಿಸಿದಳು. ತಾಯಿ ಊಟ ಮಾಡಿದ ನಂತರ ಅಲ್ಲಿಂದ ಆಶ್ರಮಕ್ಕೆ ಹೊರಟಳು. ಅವಳ ಕಾಲೇಜಿನ ಕಲಿಕೆ ಆಶ್ರಮದ ಮಕ್ಕಳಿಗೆ ಪಾಠ ಮಾಡುವುದು ಜೊತೆಗೆ ಅಮ್ಮನ ಆರೈಕೆ ಅವಳ ಗೆಳತಿಯ ಸಹಾಯದಿಂದ ನಿರಾತಂಕವಾಗಿ ನಡೆಯುತ್ತಿತ್ತು. ಆಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ ಅವರನ್ನು ಭೇಟಿ ಮಾಡಿದಳು. ನಾಳೆ ತಾನು ಕಾಲೇಜಿಗೆ ರಜೆ ಹಾಕಿ ಎಸ್ಟೇಟಿಗೆ ಹೋಗಿ ಸಾಹುಕಾರರನ್ನು ಹಾಗೂ ಅವರ ಪತ್ನಿ ‘ಅಮ್ಮ’ನನ್ನು ಕಂಡು ತನ್ನ ತಾಯಿಯ ಡಯಾಲಿಸಿಸ್ ಗೆ ಸಹಾಯವನ್ನು ಕೋರಿ, ಅಲ್ಲಿರುವ ತನ್ನ ತಂಗಿಯನ್ನು ಕಂಡು ಅವಳಿಗೆ ವಿಷಯ ತಿಳಿಸಿ ಸಂಜೆ ಪುನಹ ಆಶ್ರಮಕ್ಕೆ ಬರುರುವುದಾಗಿ ವಿನಂತಿಸಿಕೊಂಡು ಅವರ ಅನುಮತಿಯನ್ನು ಪಡೆದಳು. ಆತ ಒಬ್ಬ ದಯಾಳು ಮನುಷ್ಯನಾದ ಕಾರಣ ಹಾಗೂ ಸುಮತಿಯ ಮಗಳ ಜವಾಬ್ದಾರಿಯುತ ನಡೆಯನ್ನು ಮೆಚ್ಚುತ್ತಿದ್ದ ಕಾರಣ ಅವಳಿಗೆ ತನ್ನಿಂದಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದರು. ತನ್ನ ಗೆಳತಿಗೂ ಈ ವಿಷಯವನ್ನು ತಿಳಿಸಿದಳು. ಅವಳು…. “ನಿಶ್ಚಿಂತೆಯಿಂದ ಹೋಗಿ ಬಾ… ಇಲ್ಲಿನ ಎಲ್ಲಾ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ…. ಮೊದಲು ನಿನ್ನ ತಾಯಿಯ ಆರೋಗ್ಯದ ಕಡೆ ನಿನ್ನ ಗಮನವನ್ನು ಹರಿಸು…. ಆದಷ್ಟು ಬೇಗ ನಿನ್ನ ತಾಯಿ, ಚಿಕಿತ್ಸೆಯನ್ನು ಪಡೆಯುವಂತಾಗಲಿ”… ಎಂದಳು.




