ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಮಾತು ಮನವ ಕೆದುಕುವಾಗ ಮೌನವೇ ಉತ್ತಮಸತ್ಯ ಬದುಕು ಕದಡುವಾಗ ಮೌನವೇ ಉತ್ತಮ ಸಂಭಾಷಣೆ ಸಂಪ್ರೀತಿಯಿಂದ ಕೂಡಿದರೆ ರಸಗವಳನುಡಿಯಲಿ ಹುಡಿ ಹಾರುವಾಗ ಮೌನವೇ ಉತ್ತಮ  ಮಾತು ಹೃದಯ ಹೃದಯಗಳನು ಕಟ್ಟಿ ಆಳಬಹುದುಅರಿಕೆಯಿಂದ ಅಪಾಯವೆಂದಾಗ ಮೌನವೇ ಉತ್ತಮ  ನುಡಿದರೆ ಈ ಜಗವು ಮೆಚ್ಚಿ ಹಾರ ಹಾಕುವಂತಿರಬೇಕು ನಡೆ ನುಡಿಗಳು ಬೇರೆಯಾದಾಗ ಮೌನವೇ ಉತ್ತಮ ಒಲವು ಗೆಲುವುಗಳು ಸೇಡಿನ ಕಿಡಿಯಲಿ ಸುಡುತಿವೆ ಸಾಕಿಜ್ಯೋತಿ ಬೆಳಗದೆ ಬೂದಿಯಾದಾಗ ಮೌನವೇ ಉತ್ತಮ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ”

ಕಾವ್ಯ ಸಂಗಾತಿ ಹೆಬಸೂರ ರಂಜಾನ್ “ಖಾಲಿ” ನಿನ್ನ ಎದೆ ಖಾಲಿ ಇದೆಅದು ಇಂಚುಗಳ ಅಳತೆಗೆ ಒಗ್ಗುವುದುಅಲ್ಲಿ ತಲೆಯಾನಿಸಿ ನಿಟ್ಟುಸಿರುವೇನೆಂದರೆಅಲ್ಲಿ ಮೊಳೆಗಳನ್ನು ಜಡಿಯಲಾಗಿದೆ ನಿನ್ನ ಎದೆ ಬರಡಾಗಿದೆಅಲ್ಲಿ ಸದಾ  ಜಿನುಗುವ ಪಸೆಬತ್ತಿಹೋಗಿದೆನಿನ್ನ ಎದೆಗೂ ಮೊಲೆಗಳು ಮೂಡಿರಬೇಕಿತ್ತುಹಸಿದ ಹಾಲುಗಲ್ಲುಗಳತುಟಿಗಳಲಿ  ಎದೆ ಹಾಲು ಜಿನುಗುತ್ತಿತ್ತು ನಿನ್ನದೆಯ ರೋಮಗಳನುಸವರುತ್ತಿದ್ದರೆಮುಳ್ಳುಗಳು ಪರುಚುತ್ತಿವೆಅದೆಷ್ಟು ವರುಷಗಳ ರಕ್ತದ ದಾಹವಿದೆ ಅವುಗಳಿಗೆ ನಿನ್ನ ಬೆರಳುಗಳ ಸಹವಾಸಸಾಕುಲಾಠಿಗಳನ್ನೆ ಪಠಿಸುತ್ತೀವೆನಾಲಿಗೆಯ ತುಂಬ ಸಿಡಮದ್ದಿನ ವಾಸನೆಯ ಘಮಲು ತುಂಬಿದೆ ಸಾಕು ದೊರೆಯೇನಿನ್ನನಾಟಕದ ಕೊನೆಯ ಅಂಕನಟಿಸುವ ಆ ಪಟ್ಟುಗಳ ಗತ್ತು ಬಿನ್ನಾಣಎಲ್ಲವನ್ನೂ ಅರಿತಿರುವೆ ಹಸುಳೆಗಳು ಬೀದಿಗಳಿದಿವೆಈಗಲಾದರೂ ನಟಿಸುವುದು ಸಾಕುಒಂದು ಕಡ್ಡಿ ಸಾಕು ಹೊತ್ತಿ ಉರಿಯಲು ಮಕ್ಕಳಿದ್ದರೆ ಗೊತ್ತಾಗುತ್ತಿತ್ತುಅಪ್ಪನ ಎದೆಯೊಳಗೆ ಮೊಲೆಗಳಿವೆ..ಅಳತೆಗಳಿಲ್ಲ..!ಹೆಬಸೂರ ರಂಜಾನ್

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ” Read Post »

ಕಥಾಗುಚ್ಛ

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ

ಕಥಾ ಸಂಗಾತಿ ಸೌಮ್ಯ ಕೆ ವಿ “ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..”       ಜೇನುಪುರದ ತಾವರೆ ಕೆರೆ ಹಿಂದೆಂದೂ  ಸುದ್ದಿಯಾಗಿರಲಿಲ್ಲ. ಮಳೆಗಾಲದಲ್ಲಿ ತುಂಬಿ, ಬೇಸಿಗೆಯಲ್ಲಿ ಕುಗ್ಗಿ, ವರ್ಷದಿಂದ ವರ್ಷಕ್ಕೆ ಅದೇ ತಾವರೆ ಹೂಗಳನ್ನು ಅರಳಿಸುತ್ತಾ, ಊರಿನ ಹಿರಿಯರಂತೆ ಗಂಭೀರವಾಗಿ ಬದುಕಿತ್ತು. ಆ ದಿನ ಮಾತ್ರ ಕೆರೆಯ ದಂಡೆಯಲ್ಲಿ ಜನಸಂದಣಿ. “ಮೊಸಳೆ… ಮೊಸಳೆ ಬಂದಿದೆ!” ಎಂಬ ಕೂಗು ಕೇಳುತ್ತಿದ್ದಂತೆ ಊರಿನ ಜನರೆಲ್ಲ ಓಡಿಬಂದಿದ್ದರು. ನೀರಿನ ಅಂಚಿನಲ್ಲಿ ಒಂದು ಪುಟ್ಟ ಮೊಸಳೆಯ ಮರಿ ಬಿಸಿಲಿಗೆ ಮೈಯೊಡ್ಡಿ ಮಲಗಿತ್ತು. ಯಾರೋ ಮೊಬೈಲ್‌ನಲ್ಲಿ ಚಿತ್ರ ತೆಗೆಯುತ್ತಿದ್ದರು. ಯಾರೋ ಮಕ್ಕಳನ್ನು ಹಿಂದೆ ಸರಿಸುತ್ತಿದ್ದರು. ಇನ್ನೂ ಕೆಲವರು ಅರಣ್ಯ ಇಲಾಖೆಗೆ ಕರೆ ಮಾಡುತ್ತಿದ್ದರು. ಮನೆಯ ನಾಲ್ಕು ಗೋಡೆಗಳ ಮಧ್ಯೆ ದಿನವಿಡೀ ಸಿಲುಕಿ ಬೇಸರಗೊಂಡು ಸಹನಾ  ಎಂದಿನಂತೆ ಸಂಜೆಯ ವಾಕಿಂಗ್‌ಗೆ ಬಂದಿದ್ದಳು. ಜನಸಂದಣಿ ಕಂಡು ಕುತೂಹಲದಿಂದ ಮುಂದೆ ಹೋಗಿ ಮೊಸಳೆಯನ್ನು ನೋಡಿದಳು. ಅವಳೂ ಮೊಬೈಲ್ ತೆಗೆದು ಎರಡು ಚಿತ್ರ, ಒಂದು ಚಿಕ್ಕ ವಿಡಿಯೋ ಮಾಡಿಕೊಂಡಳು.  ಮನೆಗೆ ಬಂದು ಅಡುಗೆ, ಮಕ್ಕಳ ಓದು, ಅತ್ತೆ-ಮಾವಂದಿರ ಔಷಧಿ—ಇವೆಲ್ಲದರ ನಡುವೆ ಆ ವಿಡಿಯೊವನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದಾಗ, ಅರಿವಿಲ್ಲದೆ ಹಳೆಯ ಪ್ರಾಥಮಿಕ ಶಾಲಾ ಸಹಪಾಠಿಗಳ ವಾಟ್ಸ್ಆಪ್‌ ಗುಂಪಿಗೂ ಕಳುಹಿಸಿಬಿಟ್ಟಳು. ಆ ಗುಂಪು ವರ್ಷಗಳಿಂದ ಚಾಲ್ತಿಯಿದ್ದರೂ ಅದರಲ್ಲಿ ಜೀವಂತಿಕೆಯೇನಿರಲಿಲ್ಲ.ಬೆಳಿಗ್ಗೆ “ಶುಭೋದಯ” ಹೂವುಗಳು, ದೇವರ ಚಿತ್ರಗಳು, ಹಬ್ಬದ ಶುಭಾಶಯಗಳು… ಅಷ್ಟಕ್ಕೇ ಸೀಮಿತವಾಗಿತ್ತು. ಮೊಸಳೆಯ ವಿಡಿಯೊ ಕಳುಹಿಸಿದ ನಂತರವೂ ಸಹನಾ ಅದನ್ನು ಮರೆತುಬಿಟ್ಟಳು. ಆದರೆ ಮರುದಿನ  ಅವಳ ಮೊಬೈಲ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಒಂದು ಸಂದೇಶ ಬಂತು. “ಹಲೋ… ನಾನು ಕಿಶನ್ ಭಾರದ್ವಾಜ್. ನಿನ್ನ ಪ್ರಾಥಮಿಕ ಶಾಲಾ ಸಹಪಾಠಿ.. ನೆನಪಿದೆಯೇ?” ಆ ಒಂದು ಸಾಲು ಅವಳನ್ನು ಮೂವತ್ತು ವರ್ಷಗಳ  ಹಿಂದಕ್ಕೆ ಕರೆದೊಯ್ದಿತು. ಕಿಶನ್… ಪುಸ್ತಕಗಳೊಳಗೇ ಬದುಕುತ್ತಿದ್ದ ಹುಡುಗ. ತರಗತಿಯಲ್ಲಿ ಶಿಕ್ಷಕರು ಪ್ರಶ್ನೆ ಕೇಳುವ ಮೊದಲೇ ಉತ್ತರ ಹೇಳುತ್ತಿದ್ದ ಹುಡುಗ. ದಪ್ಪ ಕನ್ನಡಕದ ಹಿಂದೆ ಯಾವಾಗಲೂ ಏನನ್ನೋ ಯೋಚಿಸುತ್ತಿದ್ದ ಕಣ್ಣುಗಳು. ಆದರೆ ಯಾರೊಂದಿಗೂ ಹೆಚ್ಚು ಮಾತನಾಡದ ಮೌನ. ಸಹನಾ ಅವನನ್ನು ನೆನಪಿಸಿಕೊಂಡಳು. ಆದರೆ ಅವನ ಜೊತೆ ಮಾತನಾಡಿದ ಒಂದೇ ಒಂದು ಸಂದರ್ಭ ನೆನಪಿಗೆ ಬರಲಿಲ್ಲ. “ಹೇಗಿದ್ದೀರಾ? ಇಷ್ಟು ವರ್ಷಗಳ ನಂತರ ನನ್ನ ನೆನಪಾಯಿತೇ?” ಎಂದು ಅವಳು ಉತ್ತರ ಕಳುಹಿಸಿದಳು. ಕೆಲವೇ ಕ್ಷಣಗಳಲ್ಲಿ ಉತ್ತರ ಬಂತು. “ನಿನ್ನ ಮೊಸಳೆಯ ವಿಡಿಯೋ ವನ್ನು ಗ್ರೂಪ್ ನಲ್ಲಿ ನೋಡಿದೆ. ಆ ಕೆರೆ ನಿಮ್ಮ ಊರಿನಲ್ಲೇ ಇದೆಯಾ?” ಸಹನಾಳಿಗೆ ನಗು ಬಂತು. ಇಷ್ಟು ವರ್ಷಗಳ ನಂತರ ಕೇಳುವ ಪ್ರಶ್ನೆ ಇದೇನಾ? ಆದರೂ ಮಾತು ಅಲ್ಲಿಂದಲೇ ಆರಂಭವಾಯಿತು. ಕಿಶನ್ ಈಗ ಒಡಿಶಾದ ಒಂದು ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿ. ದೇಶ-ವಿದೇಶ ಅಲೆದ ಜೀವನ. ಮದುವೆಯಾಗಿತ್ತು. ಮುರಿದುಹೋಗಿತ್ತು. ಮಕ್ಕಳು ಇರಲಿಲ್ಲ. ಈಗ ಕೆಲಸವೇ ಅವನ ಸಂಗಾತಿ. ಸಹನಾ ತನ್ನ ಬಗ್ಗೆ ಹೆಚ್ಚು ಹೇಳಲಿಲ್ಲ. “ಜೇನುಪುರದಲ್ಲಿ ಇದ್ದೇನೆ. ಇಬ್ಬರು ಮಕ್ಕಳು. ಗಂಡನಿಗೆ ಬಟ್ಟೆ ಅಂಗಡಿ.” ಅಷ್ಟೇ. ಮಾತುಗಳು ಕಡಿಮೆಯಿದ್ದರೂ, ದಿನಕ್ಕೆ ಒಂದೆರಡು ಸಂದೇಶಗಳು ಬರತೊಡಗಿದವು. ಸಹನಾಳ ದಿನಚರಿಯೂ ಬದಲಾಯಿತು. ಬೆಳಿಗ್ಗೆ ಎದ್ದ ಕೂಡಲೇ ಅವಳು ಮೊಬೈಲ್ ನೋಡುತ್ತಿದ್ದಳು. ಅವನು ಏನಾದರೂ ಕಳುಹಿಸಿದ್ದಾನಾ? ಒಂದು ಸಂದೇಶ ಬಂದರೂ ಮನಸ್ಸು ಹಗುರವಾಗುತ್ತಿತ್ತು. ಅವಳಿಗೆ ಗಂಡನ ಬಗ್ಗೆ ದೂರುಗಳಿರಲಿಲ್ಲ. ಅವನು ದುಡಿತದ ಹಿಂದೆ ಬಿದ್ದ ಮನುಷ್ಯ. ಮನೆ, ಮಕ್ಕಳು, ಅತ್ತೆ-ಮಾವ—ಎಲ್ಲರ ಹೊಣೆ.. ಅವರ ಬದುಕು ಯಾವಾಗಲೋ ಲೆಕ್ಕಾಚಾರವಾಗಿಬಿಟ್ಟಿತ್ತು. ಮಾತುಗಳಿದ್ದವು. ಮಮತೆ ಇರಲಿಲ್ಲ. ಕಾಳಜಿಯಿತ್ತು. ಕುತೂಹಲ ಇರಲಿಲ್ಲ. ಸಹನಾ ಯಾವಾಗ ನಕ್ಕಳು, ಯಾವಾಗ ಬೇಸರಪಟ್ಟಳು ಎಂಬುದನ್ನು ಗಮನಿಸುವಷ್ಟು ಬಿಡುವು ಯಾರಿಗೂ ಇರಲಿಲ್ಲ. ಹಳೆಯ ಗೆಳತಿ ಶುಭಾಳೊಂದಿಗೆ ಮೊಬೈಲ್ ನಲ್ಲಿ ಸಂಪರ್ಕಿಸುವುದನ್ನು ಬಿಟ್ಟರೆ ಬದುಕಿನ ಯಾವ ಸಂಗತಿಯಲ್ಲೂ ಉಮೇದಿಯಿರಲಿಲ್ಲ.. ಗಂಡ ನಾಲ್ಕು ಸಲ ಲೆಕ್ಕ ಮಾಡಿ ಕೊಡುವ ಎರಡು ಮೂರು ನೋಟುಗಳಲ್ಲಿ ಆನ್ ಲೈನ್ ಬಟ್ಟೆ ಆರ್ಡರ್ ಮಾಡುವ, ಧರಿಸಿ ಫೋಟೋ ಹೊಡಕೊಂಡು ಆಮೇಲೆ ರಿಟರ್ನ್ ಮಾಡಿ  ಆ ದುಡ್ಡಿನಲ್ಲಿ ಮತ್ತೇನೋ ಆರ್ಡರ್ ಮಾಡುವುದಷ್ಟೇ ಅವಳಿಗೆ ಖುಷಿ ಕೊಡುವ ಸಂಗತಿಯಾಗಿತ್ತು.. ಕಿಶನ್‌ನ  ಪ್ರತಿಯಂದು ಸಂದೇಶ  ಅವಳ ದೈನಂದಿನ ಬದುಕಿನಲ್ಲಿ ಹೊಸ ಅಲೆ ಎಬ್ಬಿಸತೊಡಗಿತ್ತು. ಕೆಲವೊಮ್ಮೆ ಮನುಷ್ಯನಿಗೆ ಪ್ರೀತಿಗಿಂತ ಮೊದಲು ಬೇಕಾಗುವುದು, ಯಾರೋ ತನ್ನನ್ನು ನೆನಪಿಸಿಕೊಂಡಿದ್ದಾರೆ ಎಂಬ ಭಾವನೆ. ಬಹುಶಃ ಸಹನಾ ಅನುಭವಿಸುತ್ತಿದ್ದುದೂ ಅದೇ. ಒಂದು ಸಂಜೆ ಕಿಶನ್ ಸಂದೇಶ ಕಳುಹಿಸಿದ. “ನಾನು ಜೇನುಪುರಕ್ಕೆ ಬರಬಹುದಾ? ಆ ಮೊಸಳೆಯನ್ನು ಕಣ್ಣಾರೆ ನೋಡಬೇಕು.” ಸಹನಾ ಮೊಬೈಲ್ ಪರದೆಯತ್ತ ಬಹಳ ಹೊತ್ತು ನೋಡುತ್ತ ಕುಳಿತಳು. ಗೆಳತಿ ಶುಭಾಗೆ ಹೀಗೆಲ್ಲ ನಡೀತು ಅಂದರೆ  ಮೊಸಳೆ ಒಂದು ನೆವ ಅಷ್ಟೇ.. ಅವನು ಭೇಟಿ ಮಾಡಲು ಬಯಸಿರುವುದು ನಿನ್ನನ್ನು.. ! ಹೊಸ ಕಥೆ ಶುರುವಾಗುತ್ತಿದೆಯೋ ಅಥವಾ ಹಳೆಯ ಕಥೆಯೇ ಮರುಜೀವ ಪಡೆಯುತ್ತಿದೆಯೋ ಎಂದು ಕಾಲೆಳೆದಿದ್ದಳು.. ಕಿಶನ್ ಜೇನುಪುರಕ್ಕೆ ಬರುವ  ದಿನ, ಸಹನಾ ತನ್ನ ವಯಸ್ಸನ್ನು ಮರೆತು ಕನ್ನಡಿಯ ಮುಂದೆಯೇ  ನಿಂತಿದ್ದಳು.ಅದು ಅವಳಿಗೆ ಹೊಸ ಅನುಭವ.ಮದುವೆಯ ಮೊದಲ ವರ್ಷಗಳಲ್ಲಿ ಗಂಡನಿಗಾಗಿ ಸಿಂಗಾರ ಮಾಡಿಕೊಂಡಿದ್ದ ನೆನಪು ಇತ್ತು. ನಂತರ ಮಕ್ಕಳು, ಮನೆ, ಜವಾಬ್ದಾರಿಗಳು—ಇವೆಲ್ಲದರ ನಡುವೆ ತನ್ನ ಮುಖವನ್ನು ನೋಡುವುದಕ್ಕೂ ಸಮಯ ಸಿಕ್ಕಿರಲಿಲ್ಲ.ಆದರೆ ಆ ದಿನ ನಾಲ್ಕು ಸೀರೆ ಬದಲಿಸಿದಳು. ಕೂದಲು ಮತ್ತೆ ಮತ್ತೆ ಸರಿಪಡಿಸಿದಳು. ಕಣ್ಣಿನ ಕೆಳಗಿನ ಆಯಾಸವನ್ನು ಮುಚ್ಚಲು ಸ್ವಲ್ಪ ಮೇಕಪ್ ಹಚ್ಚಿಕೊಂಡಳು.ಯಾರಿಗೂ ಗೊತ್ತಾಗದಂತೆ.ತನ್ನನ್ನೇ ಮೋಸಗೊಳಿಸುತ್ತಾ.. ಅವಳ ಬುದ್ದಿ, ಮನಸ್ಸು, ಹೃದಯ ಯಾವುದೂ ಅವಳ ಹತೋಟಿಯಲ್ಲಿ ಇರಲಿಲ್ಲ.. ಆದರೆ ಕಿಶನ್‌ನ್ನು ನೋಡಿದ  ತಕ್ಷಣ ಅವಳ ಮನಸ್ಸಿನೊಳಗೆ ನಿರೀಕ್ಷೆಯ ಬಲೂನು  ಢಮ್ಮೆಂದು  ಒಡೆದ ಶಬ್ದ ಕೇಳಿಸಿತು!! ಶಾಲೆಯ ದಿನಗಳ ಸಣಕಲು ಹುಡುಗ ಈಗ ಎಲ್ಲಿದ್ದ!ಬೊಜ್ಜು ದೇಹ. ವಿರಳವಾಗಿರುವ ಕೂದಲು. ಆಯಾಸಗೊಂಡ ಕಣ್ಣುಗಳು. ವಯಸ್ಸಿಗಿಂತ ಹೆಚ್ಚು ಮುಪ್ಪು. ವರ್ಷಗಳ ಸಂಶೋಧನೆ, ನಿರಂತರ ಪ್ರಯಾಣ, ಏಕಾಂತ—ಇವೆಲ್ಲ ಸೇರಿ ಅವನ ಮುಖದ ಮೇಲೆ  ಅಳಿಸಲಾರದ ಗುರುತು ಬಿಟ್ಟಿದ್ದವು.ಸಹನಾ ಮನಸ್ಸಿನಲ್ಲೇ ನಕ್ಕಳು.“ಇವನಿಗಿಂತ ನನ್ನ ಗಂಡನೇ ಚೆನ್ನಾಗಿ ಕಾಣುತ್ತಾರೆ.”ಆ ಸಂಜೆ ಶುಭಾಗೆ ಕರೆ ಮಾಡಿದಾಗ ಮೊದಲ ಮಾತೇ ಅದಾಗಿತ್ತು.                         ಶುಭಾ ಹೊಟ್ಟೆ ಹಿಡಿದು ನಕ್ಕಳು.“ಅಯ್ಯೋ, ನೀನು ಹೀರೋನನ್ನೇ ಕಲ್ಪಿಸಿಕೊಂಡಿದ್ದೆಯಾ ಏನು!”ಸಹನಾ ಕೂಡ ನಕ್ಕಳು.ಆದರೆ ಆ ನಗುವಿನೊಳಗೆ ಸ್ವಲ್ಪ ನಿರಾಶೆಯೂ ಇತ್ತು.ಅವಳು ಕಾಯುತ್ತಿದ್ದದ್ದು ಹಳೆಯ ನೆನಪುಗಳ ಮಾತುಗಳನ್ನು. ಆದರೆ ಕಿಶನ್‌ಗೆ ಆಸಕ್ತಿ ಇದ್ದದ್ದು ಕೇವಲ ಮೊಸಳೆಯ ಮೇಲೆ. ಅಯ್ಯೋ ..ಅದರ ಮೇಲೆ ಸಂಶೋಧನೆ ಮಾಡಲೆಂದು ಅಷ್ಟು ದೂರದಿಂದ ಬಂದನೇ?? ಮುಂದಿನ ಎರಡು ದಿನ ಅವನು ತಾವರೆ ಕೆರೆಯ ದಂಡೆಯಲ್ಲೇ ಕಳೆದ. ಬೆಳಿಗ್ಗೆ. ಮಧ್ಯಾಹ್ನ. ಸಂಜೆ. ಕೆರೆಯ ಸುತ್ತ ತಿರುಗುತ್ತಿದ್ದ. ನೀರಿನ ಅಂಚಿನಲ್ಲಿ ಕುಳಿತು ದೂರ ನೋಡುತ್ತಿದ್ದ. ಗ್ರಾಮಸ್ಥರನ್ನು ಪ್ರಶ್ನಿಸುತ್ತಿದ್ದ. ಆದರೆ ಮೊಸಳೆ ಮತ್ತೆ ಕಾಣಿಸಲಿಲ್ಲ. ಹಿಂತಿರುಗುವ ಮುನ್ನ ಒಂದು ಸಂಜೆ ಇಬ್ಬರೂ ಕೆರೆಯ ದಡದಲ್ಲಿ ನಿಂತಿದ್ದರು. ಸೂರ್ಯ ಅಸ್ತಮಿಸುತ್ತಿದ್ದ. ತಾವರೆ ಎಲೆಗಳ ನಡುವೆ ಗಾಳಿ ನಿಧಾನವಾಗಿ ಹರಿಯುತ್ತಿತ್ತು. ಆಗ ಕಿಶನ್   ಮನದಾಳದ ಮಾತುಗಳನ್ನು ಹಂಚಿಕೊಂಡ.. “ನನ್ನ ತಾಯಿ ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ತೀರಿಕೊಂಡರು.. -ಬ್ರೇನ್ ಕ್ಯಾನ್ಸರ್..  ಕೊನೆಯ ದಿನಗಳಲ್ಲಿ ಅವರು ನನ್ನನ್ನು ಗುರುತಿಸಲೂ ಆಗುತ್ತಿರಲಿಲ್ಲ.” ಅವನು ಸ್ವಲ್ಪ ಹೊತ್ತು ನೀರಿನತ್ತ ನೋಡಿದ. “ಕಳೆದ ಕೆಲವು ವರ್ಷಗಳಿಂದ ಒಂದು ಕನಸು ಪದೇಪದೇ ಬೀಳುತ್ತಿದೆ.” “ಯಾವ ಕನಸು?” ಎಂದು ಸಹನಾ ಕೇಳಿದಳು. “ನನ್ನ ತಾಯಿ  ಮೊಸಳೆಯಾಗಿ ಹುಟ್ಟಿದ್ದಾರೆ ಅಂತ!” ಸಹನಾಳಿಗೆ ಅವನು ತಮಾಷೆ ಮಾಡುತ್ತಿದ್ದಾನೇನೋ ಅನಿಸಿತು. ಆದರೆ ಅವನ ಮುಖದಲ್ಲಿ ನಗುವಿರಲಿಲ್ಲ. ಅವನು ನಿಜವಾಗಿಯೇ ಹೇಳುತ್ತಿದ್ದ. ವಿಜ್ಞಾನಿಯಾಗಿದ್ದೂ? ಸಂಶೋಧಕನಾಗಿದ್ದೂ? ಸಹನಾ ಗೊಂದಲಕ್ಕೊಳಗಾದಳು. “ಅದು ನಿಜವೋ ಸುಳ್ಳೋ ಗೊತ್ತಿಲ್ಲ, ನೀನು ಮೊಸಳೆಯ ವಿಡಿಯೋ ಶೇರ್ ಮಾಡಿದ ಮೇಲೆ ಇವಳೇ ನನ್ನ ಅಮ್ಮ ಎಂದು ಮತ್ತೆ ಕನಸಾಯಿತು!!” ಎಂದು ಕಿಶನ್ ನಿಧಾನವಾಗಿ ಹೇಳಿದ. ಒಬ್ಬ ವಿಜ್ಞಾನಿ.. ಒಬ್ಬ ಬುದ್ಧಿವಂತ ಮನುಷ್ಯ..  ತನ್ನ ತಾಯಿಯನ್ನು ಒಂದು ಮೊಸಳೆಯೊಳಗೆ ಹುಡುಕುತ್ತಿದ್ದಾನೆ!! ಮನುಷ್ಯನ ದುಃಖಕ್ಕೆ ತರ್ಕದ ಭಾಷೆ ಗೊತ್ತಿರದಿರಬಹುದು ಎಂದು ಮೊದಲ ಬಾರಿಗೆ ಅವಳಿಗೆ ಅನಿಸಿತು. ಹಿಂತಿರುಗುವಾಗ ಕಿಶನ್ ಒಂದು ವಿನಂತಿ ಮಾಡಿದ. “ಮೊಸಳೆ ಮತ್ತೆ ಕಂಡರೆ ನನಗೆ ಫೋಟೋ ಕಳುಹಿಸು.” “ಸರಿ.” “ಸಾಧ್ಯವಾದರೆ ಅದರ ಬಗ್ಗೆ ಗಮನವಿಡು.” “ಅಂದರೆ?” “ಆಹಾರ ಹಾಕು. ಯಾರಾದರೂ ತೊಂದರೆ ಕೊಡದಂತೆ ನೋಡಿಕೋ.” ಸಹನಾ ನಕ್ಕಳು. “ನಾನು ಮೊಸಳೆಯ ಕಾವಲುಗಾರ್ತಿಯಾ?” “ನಾನು ಖರ್ಚು ಕಳುಹಿಸುತ್ತೇನೆ.” ಆ ಮಾತು ಕೇಳಿದಾಗ ಸಹನಾ ಏನೂ ಹೇಳಲಿಲ್ಲ. ಮೊದಲ ತಿಂಗಳು ಕಿಶನ್ ಸ್ವಲ್ಪ ಹಣ ಕಳುಹಿಸಿದ. ಸಹನಾ ನಿಜವಾಗಿಯೇ ಕೆಲವು ಮೀನುಗಳನ್ನು ತಂದು ಕೆರೆಯ ಬಳಿ ಹಾಕಿದಳು. ಮುಂದಿನ ತಿಂಗಳು ಮತ್ತೆ ಹಣ ಬಂತು. ಅದಾದ ಮೇಲೆ ಇನ್ನೊಮ್ಮೆ. ಇದರ ಮಧ್ಯೆ ಕಿಶನ್ ಜರ್ಮನಿಗೆ ಹೊರಟ. ದೂರದ ದೇಶದಿಂದಲೂ ಅವನು ಮೊಸಳೆಯ ವಿಚಾರ ಕೇಳುತ್ತಿದ್ದ. “ಇವತ್ತು ಕಂಡಿತಾ?” “ನೀರಿನ ಮಟ್ಟ ಹೇಗಿದೆ?” “ಅದಕ್ಕೆ ಆಹಾರ ಹಾಕಿದ್ದೀಯಾ?” ಸಹನಾ ಉತ್ತರಿಸುತ್ತಿದ್ದಳು. ಆದರೆ ನಿಧಾನವಾಗಿ ಅವಳ ಉತ್ತರಗಳಲ್ಲಿ ಸತ್ಯ ಕಡಿಮೆಯಾಗತೊಡಗಿತು. ಒಂದು ದಿನ ಅವಳು ಬರೆದಳು: “ಮೊಸಳೆಗೆ ಮೀನು ತರಲು ಖರ್ಚು ಹೆಚ್ಚಾಗಿದೆ.” ಕಿಶನ್ ತಕ್ಷಣ ಹಣ ಕಳುಹಿಸಿದ. ಮತ್ತೊಂದು ದಿನ: “ಕೆರೆಯ ನೀರು ಕಲುಷಿತವಾಗಿದೆ. ಸ್ವಚ್ಛಗೊಳಿಸಬೇಕು.” ಮತ್ತೆ ಹಣ ಬಂತು. ಮೊದಲ ಬಾರಿ ಹಣ ಬಂದಾಗ ಅವಳಿಗೆ ಸಂಕೋಚವಾಯಿತು.ಎರಡನೇ ಬಾರಿ ಕಡಿಮೆ ಆಯಿತು.ಮೂರನೇ ಬಾರಿ ಸಂಪೂರ್ಣ ಮಾಯವಾಯಿತು. ಅವಳು ತನ್ನೊಳಗೆ ಒಂದು ಸಮರ್ಥನೆ ಕಂಡುಕೊಂಡಳು. “ನಾನು ಕದಿಯುತ್ತಿಲ್ಲ. ಅವನೇ ಕೊಡುತ್ತಿದ್ದಾನೆ.” ಆದರೆ ಕೆಲವು ಸುಳ್ಳುಗಳು ಮೊದಲಿಗೆ ಇತರರನ್ನು ಮೋಸಗೊಳಿಸುತ್ತವೆ.ನಂತರ ಅವುಗಳನ್ನು ಹೇಳಿದವರನ್ನೇ. ಅದನ್ನು ಸಹನಾ ಇನ್ನೂ ಅರಿತಿರಲಿಲ್ಲ. ಕೆರೆಯ ನೀರು ನಿಶ್ಚಲವಾಗಿತ್ತು. ಮೊಸಳೆ ಅಪರೂಪಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಸಹನಾಳ ಬದುಕಿನಲ್ಲಿ ಹೊಸ ಅಲೆಗಳು ಎದ್ದಿದ್ದವು. ಅವು ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದು ಅವಳಿಗೂ ಗೊತ್ತಿರಲಿಲ್ಲ.ವರ್ಷಗಳು ಕೆಲವೊಮ್ಮೆ ಮನುಷ್ಯರನ್ನು ದೊಡ್ಡವರನ್ನಾಗಿಸುವುದಿಲ್ಲ.ಅವರೊಳಗಿನ ಆಸೆಗಳನ್ನು ಮೊಸಳೆಯ ಬಾಯಿಗಿಂತ ದೊಡ್ಡದಾಗಿಸುತ್ತವೆ.. ಕಿಶನ್ ಕಳುಹಿಸುತ್ತಿದ್ದ ಹಣದಿಂದ ಸಹನಾ ಮೊದಲು ಒಂದು ಬಂಗಾರದ ಸರ ಕೊಂಡಳು. ನಂತರ ಇನ್ನೊಂದು. ದುಬಾರಿ ಸೀರೆಗಳು ಬಂದವು. ಗಂಡನ ಬಟ್ಟೆ ಅಂಗಡಿಯ ಒಂದು ಮೂಲೆಯಲ್ಲಿ ಮಹಿಳೆಯರ ಸಿದ್ಧ ಉಡುಪು ಮತ್ತು ಕೃತಕ ಆಭರಣಗಳ ಪುಟ್ಟ ಮಳಿಗೆಯನ್ನೂ ತೆರೆದಳು.“ತವರು ಮನೆಯಿಂದ ಸ್ವಲ್ಪ ಆಸ್ತಿ ಬಂದಿದೆ,” ಎಂದು ಗಂಡನಿಗೆ ಹೇಳಿದಳು.ಅವನು ಪ್ರಶ್ನಿಸಲಿಲ್ಲ.ನಂಬಿಕೆ ಕೆಲವೊಮ್ಮೆ ಪ್ರಶ್ನೆಗಳಿಗಿಂತ ದೊಡ್ಡದು. ಮೂರು ವರ್ಷಗಳು ಕಳೆದುಹೋದವು.ಒಂದು ಬೆಳಿಗ್ಗೆ ಕಿಶನ್‌ನ ಸಂದೇಶ ಬಂತು.“ನನ್ನ ಜರ್ಮನಿ ನಿಯೋಜನೆ ಮುಗಿದಿದೆ.  ಒಂದೆರಡು  ವಾರದಲ್ಲಿ  ಜೇನುಪುರಕ್ಕೆ ಬರುತ್ತಿದ್ದೇನೆ.”ಆ ಒಂದು ಸಾಲು ಓದಿದ ಕ್ಷಣದಿಂದ ಸಹನಾಳ ಮನಸ್ಸು ತನ್ನದೇ ಧ್ವನಿಯನ್ನು ಕಳೆದುಕೊಂಡಿತು. ರಾತ್ರಿ ಮಲಗಿದರೆ ನಿದ್ದೆ ಬರುತ್ತಿರಲಿಲ್ಲ.ಬಂದರೂ ಮಧ್ಯರಾತ್ರಿಯಲ್ಲಿ ಬೆಚ್ಚಿ ಎಚ್ಚರವಾಗುತ್ತಿತ್ತು.ಕನಸಿನಲ್ಲಿ ಕೆರೆಯ ನೀರು ಕಾಣಿಸುತ್ತಿತ್ತು.ಆ ನೀರಿನಲ್ಲಿ ಮೊಸಳೆಯಲ್ಲ…ತನ್ನ ಮುಖವೇ ತೇಲುತ್ತಿತ್ತು.ಕುತ್ತಿಗೆಯ ತುಂಬ ಬಂಗಾರದ ಸರಗಳಿದ್ದರೂ, ಕಣ್ಣುಗಳಲ್ಲಿ ಬೆಳಕು ಇರಲಿಲ್ಲ. ರಾತ್ರಿಯಿಡೀ ಕೆಟ್ಟ ಕನಸುಗಳು.. ಸರಗಳೇ ನೇಣಿನ ಕುಣಿಕೆಯಾದಂತೆ.. ತನ್ನ ಮೈಯಿಡೀ ಮೊಸಳೆಯ ಚರ್ಮದಂತಾಗಿ ಬಿಟ್ಟಂತೆ.. ಯಾವ ಸೀರೆ ಉಡಲು ಹೋದರೂ ಮೊಸಳೆಯ ವಾಸನೆ ಬಂದಂತೆ..

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-127 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ತರಗತಿಗೆ ತಡವಾಗಿ ಹೋದ ಮಗಳು ತನ್ನನ್ನು ಅಪ್ಪಿಕೊಂಡ ಮಗಳ ತಲೆಯನ್ನು ನೇವರಿಸುತ್ತಾ…. ಏನಾಯ್ತು ಮಗಳೇ, ಇಷ್ಟೊಂದು ಸಂತೋಷದಲ್ಲಿರುವೆ? … ಎಂದು ಸುಮತಿ ಕೇಳಲು,…. “ಅಮ್ಮಾ …ನಿನಗೆ ಇನ್ನೂ ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸಹುದೆಂದು ಡಾಕ್ಟರ್ ಹೇಳಿದ್ದಾರೆ….. ನಾವು ಆದಷ್ಟು ಬೇಗ ಬೆಂಗಳೂರಿಗೆ ಹೋಗೋಣ…. ಅಲ್ಲಿನ ಕಿಡ್ನಿ ಫೌಂಡೇಶನ್ ಗೆ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೇವೆ”….ಎಂದು ಮಗಳು ಹೇಳಿದಾಗ…. “ಏನು ಹೇಳುತ್ತಿದ್ದಯಾ? ನಾವು ಬೆಂಗಳೂರಿಗೆ ಹೋಗುವುದೇ?… ಬೆಂಗಳೂರಿಗೆ ಹೋಗಬೇಕಾದರೆ ಹಾಗೂ ಅಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಹೆಚ್ಚಿನ ಹಣದ ಅಗತ್ಯವಿರುತ್ತದೆ…. ನಮ್ಮಲ್ಲಿ ಅಷ್ಟು ಹಣವಿಲ್ಲ…. ಸುಮ್ಮನೇ ತೊಂದರೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು ಬೇಡ”…. ಎಂದು ಸುಮತಿ ಹೇಳಿದಾಗ ಮಗಳು ತಾಯಿಯ ಹಸ್ತವನ್ನು ತನ್ನ ಕರದಲ್ಲಿ ಭದ್ರವಾಗಿ ಹಿಡಿದು….” ಅಮ್ಮಾ …. ನೀನೇನೂ ಚಿಂತಿಸಬೇಡ… ನೀನು ಚಿಕಿತ್ಸೆ ಪಡೆಯುವುದಕ್ಕೆ ತಯಾರಾಗು…. ಬೆಂಗಳೂರಿಗೆ ಹೋಗಲು ನಮಗೆ ಸಹಾಯ ಮಾಡುತ್ತೇವೆ ಎಂದು ಸಣ್ಣ ಸಾಹುಕಾರರು ಮತ್ತು ಅಮ್ಮ ಇಬ್ಬರೂ ಭರವಸೆ ನೀಡಿದ್ದಾರೆ…. ನಾನು ವೈದ್ಯರನ್ನು ಕಂಡು ಈ ಬಗ್ಗೆ ಮಾತನಾಡುತ್ತೇನೆ ಮತ್ತು ನಿನ್ನನ್ನು ಡಿಸ್ಚಾರ್ಜ್ ಮಾಡಲು ವಿನಂತಿಸಿಕೊಳ್ಳುತ್ತೇನೆ…. ಆದಷ್ಟು ಬೇಗ ನಾವು ಬೆಂಗಳೂರಿಗೆ ಹೋಗೋಣ…. ಈ ಬಗ್ಗೆ ತಂಗಿಯ ಜೊತೆಗೂ ಮಾತನಾಡಿದ್ದೇನೆ…ಅವಳು ಸರಿ ಹೋಗಿ ಬನ್ನಿ ನಾನು ಇಲ್ಲಿಯೇ ಇದ್ದು ಅಮ್ಮನ ಪರವಾಗಿ ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ಅಕ್ಕನ ಮನೆಗೆ ಹೋಗಿ, ಬಾವ ನಮ್ಮ ಜೊತೆಗೆ ಬರುವಂತೆ ವಿನಂತಿಸಿಕೊಳ್ಳುತ್ತೇನೆ…. ಖಂಡಿತ ಅವರು ಒಪ್ಪುತ್ತಾರೆ”… ಎಂದಳು ಸುಮತಿಗೆ ಸಂತೋಷವಾಯಿತು. ತಾನು ಪ್ರತಿದಿನವೂ ಅನುಭವಿಸುತ್ತಿರುವ ಸಂಕಟ, ನೋವು ಇನ್ನಾದರೂ ಕಡಿಮೆಯಾಗುತ್ತದೆ ಎನ್ನುವ ಸಮಾಧಾನವೂ ಆಯಿತು. ಆದರೆ ಬೆಂಗಳೂರಿಗೆ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು? ಎನ್ನುವ ಚಿಂತೆ ಕಾಡಿತು…. “ನೀನು ಹೇಳಿದ್ದು ಎಲ್ಲವೂ ಸರಿ ಮಗಳೇ…. ಆದರೆ ಅಲ್ಲಿ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು?”… ಎಂದು ಸುಮತಿ ಕೇಳಿದಾಗ…. “ಅಮ್ಮಾ …ಬೆಂಗಳೂರಿನಲ್ಲಿ ನಮ್ಮ ಹಿರಿಯ ಮಾವ ( ಸುಮತಿಯ ಹಿರಿಯ ತಮ್ಮ) ಕುಟುಂಬ ಸಮೇತ ಅಲ್ಲಿಯೇ ಇದ್ದಾರಲ್ಲವೇ ?… ಅವರು ಯಾವ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎನ್ನುವ ಬಗ್ಗೆ ದೊಡ್ಡಮ್ಮನನ್ನು ಕೇಳಿ ತಿಳಿದುಕೊಳ್ಳುತ್ತೇನೆ…. ಅವರ ವಿಳಾಸ ಪಡೆದು ಅಲ್ಲಿಗೆ ಹೋದರಾಯಿತು”…. ಎಂದಳು ಮಗಳು. ಅವಳು ಹೇಳಿದ್ದು ಸರಿ ಎನಿಸಿತು ಸುಮತಿಗೆ. ಹಾಸನದಿಂದ ಬೆಂಗಳೂರಿಗೆ ತನ್ನ ತಮ್ಮ ವರ್ಗವಾಗಿ ಹೋದ ನಂತರ ಸುಮತಿ ಒಮ್ಮೆಯೂ ಅವನನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ತಮ್ಮನನ್ನು ನೋಡಬಹುದು ಮತ್ತು ಆಸ್ಪತ್ರೆಗೆ ಹೋಗಿ ಬರಲು ನಮಗೆ ಅವನು ಖಂಡಿತಾ ಸಹಾಯ ಮಾಡಿಯೇ ಮಾಡುತ್ತಾನೆ ಎನ್ನುವ ಭರವಸೆಯೂ ಮೂಡಿತು…. “ಸರಿ ಹಾಗೆಯೇ ಆಗಲಿ ಮಗಳೇ…. ನಾಳೆ ಬೆಳಗ್ಗೆ ಡಾಕ್ಟರ್ ರೌಂಡ್ಸ್ ಗೆ ಬರುವಾಗ ಈ ಬಗ್ಗೆ ಅವರೊಂದಿಗೆ ಮಾತನಾಡು”…. ಎಂದು ಸುಮತಿ ಮಗಳಿಗೆ ಹೇಳಿದಳು.  ನಾಳೆ ಬೆಳಗ್ಗೆ ಕಾಲೇಜು ಮುಗಿದ ನಂತರ ದೊಡ್ಡಮ್ಮನ ಮನೆಗೆ ಹೋಗಿ ಮಾವನ ಅಡ್ರೆಸ್ ಪಡೆಯುವುದು ಎಂದು ಆ ಹುಡುಗಿ ತೀರ್ಮಾನಿಸಿದಳು.  ಸಂಜೆ ಆಶ್ರಮಕ್ಕೆ ಹೋಗಿ ಬಂದು ರಾತ್ರಿ ಅಮ್ಮನ ಜೊತೆಗೆ ಆಸ್ಪತ್ರೆಯಲ್ಲಿ ಉಳಿದುಕೊಂಡ ಹುಡುಗಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಒಂದೊಂದೇ ಲೆಕ್ಕಾಚಾರ ಮನದಲ್ಲಿ. ಏನೇನೋ ಆಲೋಚನೆಗಳು ಸುಳಿದು ಅವಳ ನಿದ್ರೆಗೆಡಿಸಿದ್ದವು. ಮೊದಲೇ ತೀರ್ಮಾನಿಸಿದಂತೆ ಬೆಳಗ್ಗೆ ಬೇಗನೆ ಎದ್ದು ಆಶ್ರಮಕ್ಕೆ ಹೋದಳು. ಅಲ್ಲಿ ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕಾಲೇಜಿಗೆ ಹೊರಟಳು. ಅಂದು ಕಾಲೇಜಿಗೆ ತಡವಾಯಿತು. ಗಡಿಬಿಡಿಯಲ್ಲಿ ತರಗತಿಯ ಕಡೆಗೆ ಹೋಗುತ್ತಿದ್ದಾಗ ಅದಾಗಲೇ ಲೆಕ್ಚರರ್ ತರಗತಿಯೊಳಗೆ ಪ್ರವೇಶಿಸಿ ಪಾಠ ಮಾಡುತ್ತಿದ್ದರು. ಹಾಗಾಗಿ ತರಗತಿಯ ಆಚೆಯೇ ನಿಂತಳು ಆ ಹುಡುಗಿ. ಪಕ್ಕದ ತರಗತಿಗೆ ಹೋಗಲು ಬಂದ ಅವಳ ಕಸಿನ್ ತರಗತಿಯ ಹೊರಗೆ ನಿಂತಿರುವ ಅವಳನ್ನು ಕಂಡು ಅವಳ ಬಳಿಗೆ ಬಂದು…. “ಏನಾಯ್ತು?…. ಏಕೆ ಇಷ್ಟು ತಡವಾಗಿ ಕಾಲೇಜಿಗೆ ಬಂದಿರುವೆ?… ಸದಾ ಬೇಗನೆ ಬರುತ್ತಿದ್ದ ನಿನಗೆ ಇಂದು ಏನಾಯಿತು?”… ಎಂದು ಕೇಳಿದ. ಅವಳ ಕಸಿನ್ ಕೂಡ ಇದೇ ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ಲೆಕ್ಚರರ್ ಆಗಿ ಸೇರ್ಪಡೆಗೊಂಡಿದ್ದ.‌ ಕಸಿನ್ ಕೇಳಿದ ಪ್ರಶ್ನೆಗೆ…. “ನನ್ನ ತಾಯಿಯ ಆರೋಗ್ಯ ಸರಿ ಇಲ್ಲ…. ಅವಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ”…. ಎಂದು ಹೇಳುತ್ತಾ ಈವರೆಗೂ ನಡೆದ ಎಲ್ಲಾ ವಿಚಾರವನ್ನೂ ಆತನಿಗೆ ತಿಳಿಸಿದಳು. ಅತ್ತೆಗೆ ಹುಷಾರಿಲ್ಲ ಎನ್ನುವುದನ್ನು ಅರಿತ ಆತನ ಮನಸ್ಸಿಗೆ ತುಂಬಾ ಬೇಸರವಾಯಿತು…. “ಒಂದು ಕೆಲಸ ಮಾಡು…. ತರಗತಿಗಳು ಮುಗಿದ ನಂತರ ನೀನು ಆಸ್ಪತ್ರೆಗೆ ಹೋಗುವಾಗ ನನಗಾಗಿ ಸ್ವಲ್ಪ ಹೊತ್ತು ಇಲ್ಲಿಯೇ ಕಾದಿರು…. ನನ್ನ ತರಗತಿ ಮುಗಿದ ನಂತರ ನಾವಿಬ್ಬರೂ ಜೊತೆಯಾಗಿಯೇ ನಮ್ಮ ಮನೆಗೆ ಹೋಗೋಣ…. ಅತ್ತೆಯನ್ನು ನೋಡಲು ನಿನ್ನ ಜೊತೆಗೆ ನಾನೂ ಬರುತ್ತೇನೆ”.. ಎಂದು ಹೇಳಿ, ಅವಳ ತರಗತಿಯ ಬಾಗಿಲನ್ನು ಡಸ್ಟರ್ನಿಂದ ಮೆಲ್ಲಗೆ ತಟ್ಟಿದನು.  ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಲೆಕ್ಚರರ್ ಬಾಗಿಲ ಕಡೆಗೆ ನೋಡಿದಾಗ ತನ್ನ ಗೆಳೆಯ ತನ್ನ ತರಗತಿಯ ವಿದ್ಯಾರ್ಥಿನಿಯೊಂದಿಗೆ ಹೊರಗಡೆ ನಿಂತಿರುವುದು ಕಂಡಿತು….” ಒಂದು ನಿಮಿಷ ಇರಿ ಮಕ್ಕಳೇ…. ಇದೋ ಬಂದೆ”…. ಎಂದು ಹೇಳುತ್ತಾ, ಗೆಳೆಯನಿಗೆ ಹಸ್ತಲಾಘವ ಕೊಟ್ಟು,… “ಇದೇನು ಹುಡುಗೀ…, ತರಗತಿಗೆ ಬರದೇ ಇಲ್ಲೇಕೆ ನಿಂತಿರುವೆ? ….. ದಿನವೂ ತರಗತಿಗೆ ಸರಿಯಾದ ಸಮಯದಲ್ಲಿ ಹಾಜರಾಗುತ್ತಿದ್ದ ನಿನಗೆ ಇಂದೇನಾಯಿತು?…. ಎಂದಾಗ ಆತನ ಗೆಳೆಯ ತನ್ನ ಕಸಿನ್ ಬಗ್ಗೆ ಎಲ್ಲಾ ವಿವರವನ್ನೂ ತಿಳಿಸಿದ. ಆ ಲೆಕ್ಚರರ್ ಹುಡುಗಿಯನ್ನು ನೋಡಿ ಅನುಕಂಪದಿಂದ…. “ಸರಿ ಹೋಗು…. ತರಗತಿಯಲ್ಲಿ ಕುಳಿತುಕೋ”… ಎಂದು ಹೇಳಿ, ಮತ್ತೆ ಸಿಗೋಣ ಎಂದು ಗೆಳೆಯನಿಗೆ ಹೇಳುತ್ತಾ ಕೈ ಬೀಸಿ, ಲೆಕ್ಚರರ್ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರಾರಂಭಿಸಿದರು. ಅವಳ ಗೆಳತಿಯರು ಮತ್ತು ಇತರೇ ವಿದ್ಯಾರ್ಥಿಗಳು ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದರು. ಆದರೆ ಇವಳ ಗಮನ ಯಾರಡೆಗೂ ಇರಲಿಲ್ಲ. ತರಗತಿಗಳೆಲ್ಲವೂ ಮುಗಿದ ನಂತರ ಇಂದು ತಾನು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದಳು. ತರಗತಿಯಲ್ಲಿ ಪಾಠದ ಕಡೆಗೆ ಕೂಡ ಗಮನ ಹರಿಸಲು ಅವಳಿಂದ ಸಾಧ್ಯವಾಗಲಿಲ್ಲ. ತರಗತಿಗಳಿಲ್ಲವೂ ಮುಗಿದ ಕೂಡಲೇ ಕಾಲೇಜಿನ ಆವರಣದಲ್ಲಿದ್ದ ಮರದ ಕೆಳಗೆ ಕುಳಿತು ತನ್ನ ಕಸಿನ್ ಬರುವಿಕೆಗಾಗಿ ಕಾಯುತ್ತಿದ್ದಳು. ಕಸಿನ್ ಬಂದು ಕೂಡಲೇ ಎದ್ದು ಆತನ ಜೊತೆಗೆ ಅವನ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ದಾರಿಯುದ್ದಕ್ಕೂ ಮೌನವಾಗಿದ್ದ ಆ ಹುಡುಗಿಯನ್ನು ಕಂಡು ಆತನ ಮನ ಮರುಗಿತು. 

Read Post »

ನಿಮ್ಮೊಂದಿಗೆ

ಕಾವ್ಯ ಸುಧೆ ಅವರ ಕವಿತೆ “ಭಾವಯಾನ “

ಕಾವ್ಯ ಸಂಗಾತಿ ಕಾವ್ಯ ಸುಧೆ “ಭಾವಯಾನ “ ತುಂಬಿದ ನಿನ್ನೊಲವ ಜೋಳಿಗೆಯಿಂದನನಗೂ ತುಸು ಉಣಬಡಿಸಬಾರದೇಕನಸು ಮುನಿಸು ಸಮವಾಗಿ ಜೋಡಿಸುಶುರುವಾಗಲಿ ನಮ್ಮಿ ಭಾವಯಾನ ಜೊತೆಗಿರಲು ಬೇಕಷ್ಟಿಷ್ಟು ಸಡಿಲತೆಇರಬೇಕು ಎಚ್ಚರಿಕೆ ಇನಿತುನೆನಪಲೆ ನಗುವ ಕಲಿಯಲಿ ಮನಮಧುರ ಸಂಯಮವೇ ಹೆಸರದಕೆ ಅದೇನಿದ್ದರೂ ನಿನ್ನ ನಂತರನಿನ್ನ ಅನುರಾಗವೇ ನಿರಂತರಹಾಕಲ್ಹೇಗೆ ಮನಕೆ ಕಡಿವಾಣಭೇದಿಸುವುದೇ ಪ್ರೇಮದ ನಿಯಮ….!! ಕಾವ್ಯ ಸುಧೆ.

ಕಾವ್ಯ ಸುಧೆ ಅವರ ಕವಿತೆ “ಭಾವಯಾನ “ Read Post »

ಕಾವ್ಯಯಾನ

ಬಾಗೇಪಲ್ಲಿ  ಅವರ ಕವಿತೆ “ಗಾಜು”

ಕಾವ್ಯ ಸಂಗಾತಿ ಬಾಗೇಪಲ್ಲಿ   “ಗಾಜು” ನಂಬಿಕೆ ಗಾಜಿ ನಂತೆನಮ್ಮನೋಟ ಒಳ ತೂರಿ ಹೋಗುವಷ್ಟು ಸ್ಪಷ್ಟ ಸ್ವಚ್ಛ ಜಾಗ್ರತೆ ರಹಿತ ನಮ್ಮ ಸ್ಪರ್ಶ ನೆನಪಿಡಲು ಅದು ಬಲು ಸೂಕ್ಷ್ಮ ಮೊದಲ ಬಾರಿಯ ಅಂತ ಸ್ಪರ್ಶಕೆ ಒಡೆಯದೆ ಉಳಿದಿದೆಎಲ್ಲಿಯವರೆಗೆ? ಒಂದು ಸಾಮಾನ್ಯ ದಿನ ಬಹು ಸಣ್ಣ ಒತ್ತಡಕೆ ಅದರಲಿ ಬಿರುಕು ಕಾಣಲೂ ಬಹುದುನಮ್ಮ ಸಂಬಂಧಗಳೂ ಬಹುಶಃ ಹಾಗೆಯೇ! ಅದು ನಮಗರಿವಿಗೆ ಬರುವುದು ಸರಿಪಡಿಸ ಹೋದಾಗಅದು ಆಗಲೇ ಬಿರಕು ಬಿಟ್ಟಿದೆ ಎಂದು.(ಮು.ಪು ವಿನ ಆಂಗ್ಲ ಬರಹದ ಕನ್ನಡೀಕರಣ.) ಬಾಗೇಪಲ್ಲಿ  

ಬಾಗೇಪಲ್ಲಿ  ಅವರ ಕವಿತೆ “ಗಾಜು” Read Post »

ಕಥಾಗುಚ್ಛ

“ಏಕ ಪೋಷಕತ್ವ” ವಿಶೇಷ ಲೇಖನ, ಡಾ.ರೇಖಾ ಉದಯ್

ವಿಶೇಷ ಸಂಗಾತಿ ಡಾ.ರೇಖಾ ಉದಯ್ “ಏಕ ಪೋಷಕತ್ವ” ನದಿಗಳ ಕೊನೆಗೆ ಸೇರುವುದು ಸಮುದ್ರವನ್ನೇ ಎಂದು ಹೇಳುವುದು ಸಹಜವಾದ ಮಾತು. ಆದರೆ ಕೆಲವು ನದಿಗಳು ಸಮುದ್ರ ಸೇರದೆ ಕೆರೆ-ತೊರೆಗಳಾಗಿ ವಸುಂಧರೆಯ ಚೆಲುವನ್ನು ಹೆಚ್ಚಿಸುತ್ತವೆ. ಈ ಮಾತನ್ನು ಏಕೆ ಹೇಳುತ್ತಿರುವೆ ಎಂದರೆ ಸಿಂಗಲ್ ಪೇರೆಂಟ್ಸ ಅಥವಾ ಏಕ ಪೋಷಕತ್ವ ಇದು ಇತ್ತೀಚಿನ  ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳುತ್ತಿರುವ ಮತ್ತು ನೋಡುತ್ತಿರುವ ವಿಷಯವಾಗಿದೆ. ನಾನು ತುಂಬಾ ಹತ್ತಿರದಲ್ಲಿ ನೋಡಿರುವುದಕ್ಕೆ ಈ ವಿಚಾರ ಬರೆಯಲು ತೆಗೆದುಕೊಂಡೆ ಎಲ್ಲೋ ಕೇಳಿದಾಗ, ಮತ್ತೆಲ್ಲೂ ಓದಿದಾಗ, ಯಾರನ್ನೋ ನೋಡಿದಾಗ ಮನಸ್ಸಿಗೆ ಅಷ್ಟು ನಾಟದೆ ಇರಬಹುದು. ಆದರೆ ನಮ್ಮ ಆತ್ಮೀಯರು ಇಂತಹ ಪರಿಸ್ಥಿತಿಗಳನ್ನ ಎದುರಿಸಿದಾಗ ಸಹಜವಾಗಿ ನೋವಾಗುತ್ತದೆ. ಮಾನಸಿಕ ಯಾತನೆ ಉಂಟಾಗುತ್ತದೆ.ಜೊತೆಗಾರ ಅಥವಾ ಜೊತೆಗಾತಿ ಇದ್ದು ಅನೇಕ ಸಮಸ್ಯೆಗಳನ್ನ ಇಂದು ಎದುರಿಸುತ್ತಿರುವಾಗ ಒಂಟಿಯಾಗಿ ಎಲ್ಲವನ್ನೂ ಎದುರಿಸುವುದು ಇದೆಯಲ್ಲ ಅದು ಹೇಳಲಸಾಧ್ಯ ಹಿಂಸೆ, ಅದರಲ್ಲೂ ಒಬ್ಬ ಹೆಣ್ಣುಮಗಳು ಸಿಂಗಲ್ ಪೇರೆಂಟ್ಸ್  ಆದಾಗ ತಂದೆ ಪ್ರೀತಿ, ತಾಯಿ ಪ್ರೀತಿ ಒಬ್ಬಳೇ ನೀಡುತ್ತಾ ಅನೇಕ ಸವಾಲುಗಳನ್ನು ಎದುರಿಸುತ್ತಾ ಹೋರಾಡಬೇಕು. ವಿಚ್ಛೇದನ, ಸಂಗಾತಿ ಸಾವು, ಅಥವಾ ದತ್ತು ತೆಗೆದುಕೊಂಡು ಸಾಕುವುದು,ಇದರ ಹಂತವಾಗಿರುತ್ತದೆ        “ಯಾವ ಹಾದಿಯಲ್ಲಾದರು ನಡೆ, ನಿನ್ನ ಆತ್ಮವಿಶ್ವಾಸವೇ ನಿನಗೆ ದಾರಿ ದೀಪ” ಎಂಬ ಕುವೆಂಪುರವರ ಮಾತು ಸ್ಪೂರ್ತಿ ನೀಡುತ್ತದೆ. ಜೀವನ ಪಥದಲ್ಲಿ ಒಂಟಿಯಾಗಿ ಸಾಗುವಾಗ ಮಗುವಿನ ಸುಖ ಸಂತೋಷ, ವಿದ್ಯಾಭ್ಯಾಸ ಆರೋಗ್ಯ ಹೀಗೆ ಹತ್ತು ಹಲವಾರು ಜವಾಬ್ದಾರಿ ಹೊರುವ ದೀಪ ಸ್ತಂಭವಿದ್ದಂತೆ, ಬಿರುಗಾಳಿಯೇ ಬರಲಿ ,ಸುನಾಮಿ ಅಲೆಗಳೇ ಅಪ್ಪಳಿಸಲಿ  ಮಗುವಿನ ಭವಿಷ್ಯಕ್ಕಾಗಿ ಎಲ್ಲವನ್ನು ಎದುರಿಸುತ್ತಲೆ ಸಾಗುತ್ತಾಳೆ.ಒಮ್ಮೆ ತಮ್ಮ ಸಂಬಂಧಗಳಿಂದ ಹೊರ ಬಿದ್ದು ಸಿಂಗಲ್ ಪೇರೆಂಟ್ ಎಂಬ ಹಣೆ ಪಟ್ಟಿ ಬಿದ್ದ ಮೇಲೆ ಅವಳ ಅಸ್ತಿತ್ವವನ್ನೇ ಅಲ್ಲಾಡಿಸಿ ಅವಳ ಜಂಘಾಬಲ ಉಡುಗಿಸಿ ಬಿಡುತ್ತಾರೆ ಸುತ್ತಮುತ್ತಲಿನವರು. ಗಂಡ ಇಲ್ಲದೆ ಇರುವ ಮಹಿಳೆಯರು  ಮೇಲೆ ಒಂದು ತೆರನಾದ ಅನುಕಂಪ, ಅಯ್ಯೋ ಪಾಪ ಹೀಗಾಗಬಾರದಿತ್ತು ,ಮಗು ಚಿಕ್ಕದು ಎಂಬ ಕಾರಣಗಳಿಂದ, ಒಂದು ಕಡೆಯಿಂದ ಮಾನಸಿಕ ಬೆಂಬಲ ಅಥವಾ ಆರ್ಥಿಕ ಬೆಂಬಲ ಕೂಡ ದೊರೆಯಬಹುದು, ಅವಳ  ಕಷ್ಟಕ್ಕೆ ಎಲ್ಲರೂ ಸಾತ್ ಕೊಡಬಹುದು.  ಆದರೆ ಎಲ್ಲರಿಗೂ ಹೀಗೆ ಆಗಬೇಕು ಎಂಬುವ ಹಾಗಿಲ್ಲ, ಅವಳಿಗೆ ತವರು ಮನೆಯಲ್ಲಿ, ಗಂಡನ ಮನೆಯಲ್ಲಿ ಸ್ಥಾನ ಸಿಗದೇ ಒಂಟಿಯಾಗಿ ಸಮಾಜದ ಕೊಂಕು ನುಡಿಗಳನ್ನ ,ಸಮಸ್ಯೆಗಳನ್ನ ಎದುರಿಸುತ್ತಾ ಮಗುವನ್ನು ಬೆಳೆಸಿ ಒಳ್ಳೆಯ ಶಿಕ್ಷಣ ,ಆರೋಗ್ಯ ಕೊಟ್ಟು ಪಾಲನೆ ಪೋಷಣೆ ಮಾಡುವುದು ಒಂದು ದೊಡ್ಡ ಸವಾಲು ಎಂಬುದು ಸುಳ್ಳಲ್ಲ.ವಿಚ್ಛೇದಿತ ಮಹಿಳೆಗೆ ಇಂತಹ ಸಂಪೂರ್ಣ ಬೆಂಬಲ ಸಿಗಲಾರದು ಏಕೆಂದರೆ ಡಿವೋಸ೯ ತಗೋತಾ ಇರೋದೇ ಮೊದಲು ಕುಟುಂಬದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ, ಹೊಂದಿಕೊಂಡು ಹೋಗುವುದರ ಬಗ್ಗೆ ಸಾಕಷ್ಟು ತಿಳಿ ಹೇಳಿರುತ್ತಾರೆ. ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ. ಆದರೆ ಅವಳ ದಿಟ್ಟ ನಿರ್ಧಾರ ಕೆಲವರಲ್ಲಿ ಅಸಮಾಧಾನ ಉಂಟು ಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ಅವಳು ಏಕಾಂಗಿ ಹೋರಾಟ ನಡೆಸಲೇ ಬೇಕಾಗುತ್ತದೆ ತನ್ನ ದುಡಿಮೆಯೊಂದಿಗೆ ಮಗುವಿನ ಆಗುಹೋಗುಗಳ ಜವಾಬ್ದಾರಿ ಹೆಗಲೇರುತ್ತದೆ. ಎಲ್ಲಾ ಸಮಸ್ಯೆಗಳನ್ನ ಒಂಟಿಯಾಗಿ ನಿಭಾಯಿಸುತ್ತಾ ಆರ್ಥಿಕವಾಗಿ, ಮಾನಸಿಕವಾಗಿ ,ಸಾಮಾಜಿಕವಾಗಿ, ಸದೃಡರಾಗಬೇಕಾಗುತ್ತದೆ. ಮಗು ದೊಡ್ಡದಾಗುತ್ತಾ ಬಂದಂತೆ ಮಗುವಿನ ಬದುಕಿನ ಮಜಲುಗಳನ್ನು ತಿಳಿಸಬೇಕಾಗುತ್ತದೆ. ಎಲ್ಲ ರೀತಿಯ ಪ್ರೀತಿಯ ಹೂಮಳೆ ಸುರಿಸಬೇಕಾಗುತ್ತದೆ, ಕೆಲವೊಮ್ಮೆ ಇದೆಂತಹ ಬದುಕು ಅನ್ನಿಸದಿರದು. ಮಗುವಿಗಾಗಲಿ, ತನಗೆ ಆಗಲಿ ಆರೋಗ್ಯ ಸಮಸ್ಯೆಗಳು ಉಂಟಾದಾಗ ಆಸ್ಪತ್ರೆ, ಮನೆ, ಮಗು ,ಹಣ ಇವೆಲ್ಲವು ಪೇಡಂಭೂತವಾಗಿ ಕಾಡುತ್ತದೆ .ಇತ್ತೀಚೆಗೆ ಸಿಂಗಲ್ ಪೇರೆಂಟ್ ಎಂಬುದು ಟ್ರೆಂಡ್ ಆಗಿದೆ, ಇದೆಲ್ಲ ಕಾಮನ್ ಎಂಬ ಮಾತು ಎಲ್ಲರ ಬಾಯಲ್ಲೂ ಸಹಜವಾಗಿ ಬರತೊಡಗಿದೆ. ಹಿರಿಯರ ವಿರೋಧ ಸದಾ ಇದಕ್ಕೆ ಇದ್ದೇ ಇರುತ್ತದೆ ,ಅವರ ಮನಸ್ಸು ಇಂಥವುಗಳಿಗೆ ಒಪ್ಪದು, ಆದರೆ ಜಮಾನ ಬದಲಾಗಿದೆ. ಭಾವನೆಗಳ ನೆಲಗಟ್ಟಿನ ಮೇಲೆ ಬದುಕು ಸಾಗುತ್ತಿಲ್ಲ. ನಾನು ಎಂಬ ಅಹಂ ತಾಂಡವವಾಡುತ್ತಿದೆ.ಅಡ್ಜೇಸ್ಟ ಆಗಬೇಕಾ?,ನಾನೇ ಆಗಬೇಕಾ? ಯಾಕೆ  ಆಗಬೇಕು, ನಾನು ದುಡಿತಾ ಇಲ್ವಾ,ಎಂಬ ಪ್ರಶ್ನೆಗಳ ಸುರಿಮಳೆ, ಇಬ್ಬರಲ್ಲೂ ಅಹಂ ಹೆಚ್ಚಾದಂತೆ ಸಂಬಂಧಗಳ ನಡುವೆ ಬಿರುಕು ಸರ್ವೇಸಾಮಾನ್ಯ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವರಿಬ್ಬರ ಜಗಳ ಮನಸ್ತಾಪಗಳಿಂದ ಮಗು ಖಿನ್ನತೆಗೆ ಒಳಗಾಗಬಹುದು. ಅಥವಾ ದುರ್ಮಾರ್ಗ, ದುರಭ್ಯಾಸಗಳಗತ್ತ ವಾಲಬಹುದು.ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸಮಾಧಾನದಿಂದ ಕುಳಿತು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ!? ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಒಂದು ವೇಳೆ ಇದು ಅಸಾಧ್ಯ ಎಂದಾಗ ಅನಿವಾರ್ಯ. ಆದರೆ ಮಕ್ಕಳ ಬೆಳವಣಿಗೆಯಲ್ಲಿ ಇಬ್ಬರ ಪಾತ್ರ ಎಷ್ಟು ಮುಖ್ಯವಾದದ್ದು .ಒಂಟಿಯಾದಾಗ ಆ ಜವಾಬ್ದಾರಿ ದ್ವಿಗುಣವಾಗುತ್ತೆ ಮಗುವಿನ ಮನಸ್ಥಿತಿಗೆ ಸ್ಪಂದಿಸುತ್ತಾ ಅವರಲ್ಲಿ ಒಂದು ಸಕಾರಾತ್ಮಕ ಸದೃಢ ಭಾವನೆ ಬೆಳೆಸಿ ಒಂಟಿಯಾಗಿದ್ದರು ಎಷ್ಟು ಚೆನ್ನಾಗಿ ಮಗುವನ್ನು ಬೆಳೆಸಿದ್ದಾರೆ, ತಮ್ಮ ಜೀವನ ರೂಪಿಸಿಕೊಂಡಿದ್ದಾರೆ ಎಂದು ಬಾಯಿ ಮೇಲೆ ಬೆರಳು ಇಡುವಂತಾಗಬೇಕು, ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಬೇಕು ಅಷ್ಟೇ…. ಡಾ.ರೇಖಾ ಉದಯ 

“ಏಕ ಪೋಷಕತ್ವ” ವಿಶೇಷ ಲೇಖನ, ಡಾ.ರೇಖಾ ಉದಯ್ Read Post »

You cannot copy content of this page

Scroll to Top