ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಜಾನಕಿ ಅಮ್ಮ…. ಚಿಕ್ಕಂದಿನಲ್ಲಿ ನಾವು ರೇಡಿಯೋದಲ್ಲಿ ಕೇಳುತ್ತಿರುವಾಗ ಬಾಯಿ ಪಾಠವಾದ ನಿಮ್ಮ ಹೆಸರು ಇಂದಿಗೂ ನಮ್ಮ ಕಿವಿಗಳಲ್ಲಿ ಅನುರಣಿಸುತ್ತದೆ . ಚಲನಚಿತ್ರದ ಹಾಡಿನ ಗಾಯಕರು ಎಂದೊಡನೆ ನಾವು ಕೂಡ ನಿಮ್ಮ ಹೆಸರನ್ನು ಉದ್ಘೋಷಕರ ಜೊತೆಗೆ ಅದೆಷ್ಟು ಆತ್ಮವಿಶ್ವಾಸದಿಂದ ಹೇಳುತ್ತಿದ್ದೆವು ಗೊತ್ತೇ?
.ಹಾಗೆ ನಿಮ್ಮ ಸುಶಾವ್ಯವಾದ ಕಂಠಸಿರಿ, ಅತ್ಯಪರೂಪದ ಪ್ರತಿಭೆ, ಭಾವಪೂರ್ಣ ಗಾಯನಗಳಿಂದ ಇಡೀ ಭಾರತ ದೇಶದ ಹೆಮ್ಮೆಯ ಹಿನ್ನೆಲೆ ಗಾಯಕಿಯಾಗಿ ಗಾನ ಸರಸ್ವತಿಯಾದವರು ನೀವಲ್ಲವೇ? ಬಹುಶಹ ಅಂದಿನಿಂದ ಇಂದಿನವರೆಗೂ ನಿಮ್ಮದೇ ಹಾಡುಗಳನ್ನು ಕೇಳುತ್ತಲೇ  ಹುಟ್ಟಿ ಬೆಳೆದು ಅರಳಿ ದೊಡ್ಡವರಾಗಿ ಮಧ್ಯ ವಯಸ್ಸನ್ನು ತಲುಪಿದ್ದೇವೆ. ಪ್ರಸ್ತುತ ನೀವು ನಮ್ಮೊಂದಿಗಿಲ್ಲ, ನಿಜ….ಆದರೆ ನಿಮ್ಮ ಹಾಡುಗಳು…. ಎಂದೆಂದಿಗೂ  ಅಮರ… ಅತ್ಯಂತ ಸುಮಧುರ.
1938ರ ಏಪ್ರಿಲ್ 23ರಂದು ನೀವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಟಣ ಗ್ರಾಮದಲ್ಲಿ ಜನಿಸಿದಿರಿ. ಶಾಸ್ತ್ರೀಯವಾಗಿ ಗಾಯನವನ್ನು ಕಲಿಯದೆ ಹೋದರೂ ಕೂಡ ನಿಮ್ಮ ಆಸಕ್ತಿ, ಶ್ರದ್ದೆ ಹಾಗೂ ನಿರಂತರ ಪರಿಶ್ರಮದ ಫಲವಾಗಿ 1957ರಲ್ಲಿ ಮೊತ್ತ ಮೊದಲ ಬಾರಿಗೆ ತೆಲುಗು ಚಿತ್ರರಂಗದ ಮೂಲಕ ಗಾಯನ ಪ್ರಪಂಚಕ್ಕೆ ಕಾಲಿಟ್ಟಿರಿ. ಮುಂದೆ ನಡೆದದ್ದು ಇತಿಹಾಸ. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿಯಂತಹ ದೇಶಿ ಭಾಷೆಗಳಲ್ಲಿ, ಇಂಗ್ಲೀಷ್ ಜಪಾನಿ ಜರ್ಮನಿ, ಸಿಂಹಳೀಹಾಗೂ ಫ್ರೆಂಚ್ ಭಾಷೆಗಳನ್ನು ಸೇರಿದಂತೆ  ಸುಮಾರು 17 ಭಾಷೆಗಳಲ್ಲಿ ನೀವು ಹಾಡಿದಿರಿ…. ಆ ದೇವಗಂಗೆ ನಿರಂತರವಾಗಿ ಪುಣ್ಯ ಸಲಿಲವನ್ನು  ಹೊತ್ತು ಹರಿದರೆ  ನೀವು ನಿರಂತರವಾಗಿ ಹಾಡುಗಳ ಗಾಯನದ ಶರೀರವನ್ನು ಹೊತ್ತು ನಡೆದಿರಿ ಅಂತೆಯೇ ನೀವು…. ಗಾಯನ ಗಂಗೆ. ಭಕ್ತಿ ಗೀತೆಗಳು ಭಾವಗೀತೆಗಳು ವಿರಹ ಗೀತೆಗಳು ಪ್ರೀತಿ ಪ್ರೇಮ ಸರಸ ಸಲ್ಲಾಪ ಚೆಲ್ಲಾಟ ಹೀಗೆ ಹತ್ತು ಹಲವು ಭಾವಗಳನ್ನು ಸೂಸಿ ಹಾಡುವ ನಿಮ್ಮ ಗಾಯನ ಪ್ರತಿಭೆ ಅದ್ಭುತವಾದದ್ದು. ಭಾಷೆ ಯಾವುದೇ ಇರಲಿ ಭಾವಪೂರ್ಣವಾಗಿ ಹಾಡುವ ನಿಮ್ಮ ಕಲೆಗೆ ನೀವೇ ಸಾಟಿ… ಆದ್ದರಿಂದಲೇ ನೀವು ದಕ್ಷಿಣ ಭಾರತದ ಗಾನ ಸರಸ್ವತಿ ಎಂದರೆ ತಪ್ಪಿಲ್ಲ ಅಲ್ವೇ ಅಮ್ಮ
ನೂರಾರು ಚಲನಚಿತ್ರಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ನಮ್ಮೆಲ್ಲರ ಮನೆ ಮನೆಗಳಲ್ಲಿ ನಿಮ್ಮದೇ ಆದ ಪ್ರೀತಿಯ ನೆಲೆಯನ್ನು ಕಂಡುಕೊಂಡಿರುವ ನೀವು ಹಾಡಿದ ಹಾಡುಗಳ ವಿನ: ನಮ್ಮ ಮುಂಜಾನೆಗಳು ಆರಂಭವಾಗುವುದಿಲ್ಲ ರಾತ್ರಿಗಳು ಕೊನೆಗೊಳ್ಳುವುದಿಲ್ಲ. ಯಾವುದೋ ಒಂದು ರೀತಿಯಲ್ಲಿ ನಿಮ್ಮ ದನಿ ನಮಗೆ ಕೇಳಿಸುತ್ತಲೇ ಇರುತ್ತದೆ. ಸರಿಸುಮಾರು ಆರು ದಶಕಗಳ ಕಾಲ ಒಟ್ಟು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದವರು ನೀವಲ್ಲವೇ ಅಮ್ಮ ?
 ವಿವಿಧ ರಾಜ್ಯಗಳ ಒಟ್ಟು 33 ರಾಜ್ಯ ಪ್ರಶಸ್ತಿಗಳು,. ನಾಲ್ಕು ಬಾರಿ ಭಾರತ ದೇಶದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ನೀವು ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಕೂಡ ನಿಮ್ಮ ಯಶಸ್ಸಿನ ಮುಕುಟದ ಗರಿಗೆ ಸಿಕ್ಕಿಸಿಕೊಂಡವರು. ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವವನ್ನು ಪಡೆದುಕೊಂಡವರು ನೀವು. ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಹಾಗೂ ಕರ್ನಾಟಕದ ಅತ್ಯುನ್ನತ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರು ಕೂಡ ನೀವೇ ಅಲ್ಲವೇ ಕನ್ನಡದಲ್ಲಿ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿಯನ್ನು ನೀಡದೆ ಇರುವುದನ್ನು ವಿರೋಧಿಸಿ ಸರ್ಕಾರವನ್ನು ನಿಷ್ಟುರವಾಗಿ ಖಂಡಿಸಿದವರು. ಆದರೆ ಒಂದೊಮ್ಮೆ ನಿಮ್ಮ ನಿಷ್ಟುರತೆಯ ಹಿಂದಿರುವ ಕಳಕಳಿಯನ್ನು ಅರ್ಥ ಮಾಡಿಕೊಂಡ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಲು ಆರಂಭಿಸಿದಾಗ ಅತಿ ಹೆಚ್ಚು ಸಂತಸ ಪಟ್ಟವರು ಕೂಡ ನೀವೇ ಅಲ್ಲವೇ ಅಮ್ಮ.?
ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಭಾಷೆಗಳಿಗೆ ಇರುವುದು ಕೂಡ ಒಂದೇ ಭಾವ ಅದು ಮನದ ಭಾವ. ದೇಶ ಭಾಷೆ ಗಡಿಗಳನ್ನು ದಾಟಿ ಸಂಗೀತವು ಎಲ್ಲರ ಮನಗಳನ್ನು ತಲುಪುತ್ತದೆ ಎಂದು ನೀವು ಹೇಳಿರುವುದು ಅದೆಷ್ಟು ಸತ್ಯ ಅಲ್ಲವೇ ಅಮ್ಮ ?
 ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾನಿಂದೇ ಎಂದು ನೀವು ಹೇಳಿದಾಗ ಖುದ್ದು ನಮ್ಮ ಅಮ್ಮನೇ ಹಾಡುತ್ತಿರುವಳೇನು ಎಂಬ ಭಾವ.
 ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ವಿನೂತನ ಜೀವಭಾವ ಎಂದು ನೀವು ಹಾಡಿದಾಗ ಹರೆಯದ ಹೆಣ್ಣು ಮಕ್ಕಳ ಮನದಲ್ಲಿ ಉಲ್ಲಾಸವನ್ನು ಕಾಣಬಹುದು ಅಲ್ಲವೇ ಅಮ್ಮ.
 ಎಳೆಯ ಬಾಲಕಿಯ ಧ್ವನಿಯಿಂದ ಹಿಡಿದು ಮುಪ್ಪಾನ ಮುದುಕಿಯವರೆಗೆ ಎಲ್ಲ ವಯೋಮಾನಕ್ಕೆ ಹೊಂದುವಂತೆ ನಿಮ್ಮ ಕಂಠ ಸಿರಿಯನ್ನು ಬದಲಿಸಿ ಹಾಡುವ ಕೌಶಲ್ಯ ನಿಮ್ಮದಾಗಿತ್ತು. ಇದರ ಸಂಪೂರ್ಣ ಲಾಭವನ್ನು ಪಡೆದ ನೀವು ಕಳೆದ ಹಲವಾರು ದಶಕಗಳಿಂದ ನಿಮ್ಮ ಹಾಡುಗಾರಿಕೆಯಿಂದ ನಮ್ಮನ್ನು ತಣಿಸುತ್ತಲೇ ಬಂದಿರುವಿರಿ.
 ನಿಮ್ಮ ಇಂಪಾದ ದನಿಯು ಬದುಕಿನಲ್ಲಿ ನೊಂದವರಿಗೆ ಸಮಾಧಾನ ಹೇಳುವ ಸ್ನೇಹಿತೆಯ ದನಿಯಾಗಿ ಬೆಂದವರಿಗೆ ಆಶಾ ದೀಪವಾಗಿಯೂ, ಪ್ರೇಮಿಗೆ ತನ್ನ ಪ್ರೀತಿಯ ದ್ಯೋತಕವಾಗಿಯೂ ತಾಯಿಗೆ ತನ್ನ ಅಕ್ಕರೆಯ ಪ್ರತೀಕವಾಗಿ ಮಗುವಿಗೆ ತನ್ನ ಅಮ್ಮನ ಮಮತೆಯ ಮಹಾಪೂರದಂತೆ ಭಾಸವಾಗುತ್ತದೆ. ಅಮ್ಮ ನಿಮ್ಮ ಭಕ್ತಿ ಗೀತೆಗಳು ನಮ್ಮನ್ನು ಭಾವ ಪರವಶರನ್ನಾಗಿಸಿದರೆ, ಪ್ರೇಮಗೀತೆಗಳು ಮನವನ್ನು  ಬೆಚ್ಚಗಾಗಿಸುತ್ತದೆ. ತುಂಟಾಟದ ಗೀತೆಗಳು ಆಪ್ತವೆನಿಸಿದರೆ ಭಾವಗೀತೆಗಳು ನಮ್ಮ ಎದೆಯಾಳದ ಭಾವಗಳನ್ನು ಬಗೆದು ತೋರುತ್ತವೆ.
 ನಮ್ಮ ಬದುಕಿನ ಮುಂಜಾನೆಯಿಂದ ಸಂಜೆಯವರೆಗಿನ ಪ್ರತಿ ಗಳಿಗೆಯಲ್ಲೂ, ನಮ್ಮೆದೆಯ ಜೀವ ಭಾವಗಳಲ್ಲಿ ನೀವು ನಿಮ್ಮ ಸಂಗೀತದ ಪ್ರತಿಭೆಯ ಮೂಲಕ ಹಾಡುಗಳ ಮೂಲಕ ಮಧುರ ಭಾವಗಳನ್ನು ತುಂಬಿರುವಿರಿ…… ಮುಂದೆಯೂ ಕೂಡ ಶತಶತಮಾನಗಳ ಕಾಲ ನಿಮ್ಮನ್ನು ನಾವು ಕೇಳುತ್ತೇವೆ.
 ನೀವಿಲ್ಲದ ಈ ಜಗತ್ತಿನಲ್ಲಿ ಕೂಡ ನೀವು ಅಜರಾಮರರಾಗಿರುವುದು ನಿಮ್ಮ ಸುಶ್ರಾವ್ಯ ಕಂಠದಿಂದ… ಅದರ ಸಿರಿಯ ಗರಿಮೆಯಿಂದ.
 ಹೋಗಿ ಬನ್ನಿ ಅಮ್ಮ ನಿಮ್ಮನ್ನು ನಾವು ಮರೆಯಲು ಸಾಧ್ಯವಿಲ್ಲ…. ಎಂದೆಂದಿಗೂ ನಿಮ್ಮ ಆರಾಧಕರಾಗಿ ನಾವು ಇದ್ದೇ ಇರುತ್ತೇವೆ…. ಮತ್ತೆ ನೀವು ಹುಟ್ಟಿ ಬರಲಿ ಎಂಬ ಆಶಯವನ್ನು ಹೊತ್ತು.


About The Author

Leave a Reply

You cannot copy content of this page

Scroll to Top