ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಬಿದ್ದ ಕನಸದು ಬೀಳಿಸಿತು ಶ್ರೀರಾಮನನ್ನು ಆರಾಮ, ವಿರಾಮಗಳಿರದ ಚಿಂತೆಯ ಕೂಪದಲ್ಲಿ. ಪ್ರಜಾಪರ ಪುರುಷೋತ್ತಮ ಪ್ರಭುವೆನಿಸಿಕೊಂಡವನು ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದನ್ನೂ ಮರೆತುಬಿಟ್ಟ. ಮೂರು ಹಗಲುಗಳು ಎರಡು ಇರುಳುಗಳು ಕಳೆದುಹೋದವು.ಮೂರನೆಯ ಇರುಳು ಅರಮನೆಯನ್ನು ಬಿಟ್ಟು ಹೊರಟ ಶ್ರೀರಾಮ ಪ್ರಭು ಗೂಢಚಾರನೊಬ್ಬನನ್ನು ಕಂಡು ಕೇಳಿದ ತನ್ನ ಆಳ್ವಿಕೆಯ ಪರಿಯನ್ನು. ತನ್ನನ್ನು ನಿಂದಿಸುವ, ಹೀಗಳೆಯುವ ಪ್ರಜೆಗಳು ಯಾರಾದರೂ ಇದ್ದಾರೆಯೇ? ಹಾಗೆ ಟೀಕಿಸುವವರಿದ್ದರೆ ಯಾವ ಕಾರಣಕ್ಕೆ ತೆಗಳುತ್ತಿರಬಹುದು ತನ್ನನ್ನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು ಅವನಲ್ಲಿ. “ಕೊಂಕು ಕೊರತೆಗಳೇನಿವೆ ನನ್ನ ಬಗೆಗೆ ಪ್ರಜೆಗಳದ್ದು?” ಎಂದು ಕೇಳಿದ ಗೂಢಚಾರನಲ್ಲಿ.ಒಳ್ಳೆಯ ರಾಜನ ಲಕ್ಷಣವಿದು. ಅರಸನಾದವನು ತನ್ನನ್ನು ಹೊಗಳುವವರ ಮಾತನ್ನು ಎದೆಗಿಸಿಕೊಂಡರಷ್ಟೇ ಸಾಲದು. ತೆಗಳುವವರ ಕಟು ನುಡಿಗಳನ್ನೂ ತಲೆಗೇರಿಸಿಕೊಳ್ಳಬೇಕು. ಬೈದದ್ದರಲ್ಲಿ ನಿಜಾಂಶವೆಷ್ಟಿದೆ ಎನ್ನುವುದನ್ನು ವಿವೇಚಿಸಿ, ತನ್ನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕು. ಪೂರ್ಣ ಜಗವದು ಹೊಗಳಿ ನಲಿಯುವಂತೆ ಆಡಳಿತ ನೀಡಿದ್ದ ಶ್ರೀರಾಮಚಂದ್ರನೀಗ ತನ್ನ ಆಳ್ವಿಕೆಯ ಲೋಪದೋಷಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದ್ದ.ಗೂಢಚಾರ ವಿನಯಪೂರ್ವಕವಾಗಿ ನುಡಿದ. “ಪ್ರಭುಗಳೇ, ಸೂರ್ಯನನ್ನು ಮಂಜು ಮುಸುಕಿದ ತಕ್ಷಣವೇ ಸೂರ್ಯನ ಕಾಂತಿಯದು ಮಂಕಾಗುವುದೇ! ಸೂರ್ಯನ ಪ್ರಬಲ ಕಿರಣಗಳಿಗೆ ಮಂಜು ಮಣಿದುಹೋಗುತ್ತದೆಯಷ್ಟೇ” ಎಂಬ ಗೂಢಚಾರನ ಮಾತು ಬಲವಾದ ಸುಳುಹನ್ನು ಒದಗಿಸಿತು, ಶ್ರೀರಾಮನ ಸೂಕ್ಷö್ಮಮತಿಗೆ.ಸೂರ್ಯನನ್ನು ಮಂಜು ಮುಸುಕಿದೆಯೆಂದು ಗೂಢಚಾರ ಹೇಳಬೇಕಾದರೆ ತನ್ನ ಬಗೆಗೆ ಕೆಟ್ಟ ಮಾತು ವ್ಯಕ್ತವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅಧಿಕ ಸಮಯ ಬೇಕಾಗಲಿಲ್ಲ ಅಯೋಧ್ಯಾಪತಿಗೆ. “ಯಾವ ಟೀಕೆಯ ಮಾತದು ಬಂದಿದೆ ನನ್ನ ಬಗೆಗೆ?” ಎಂದು ಕೇಳಿದ ಅವನನ್ನು.“ಅಂದು ಗೌತಮ ಋಷಿಯ ಪತ್ನಿ ಅಹಲ್ಯೆಗೆ ಮೋಕ್ಷದ ದಾರಿ ತೋರಿದವರು ನೀವು. ಎಂತಹ ಪರಮಪಾವನರು ನೀವು ಎನ್ನುವುದನ್ನು ಅರಿತುಕೊಳ್ಳಲು ಇನ್ನೇನು ಬೇಕು! ಮೂರ್ಖರೆನಿಸಿಕೊಂಡವರು ನುಡಿದ ಮಾತನ್ನು ನಿಮಗೆ ಹೇಳುವ ಇಚ್ಛೆಯಿಲ್ಲ ನನಗೆ. ಮನ್ನಿಸಬೇಕು ನನ್ನನ್ನು” ಎಂದು ಹೇಳಲು ಹಿಂಜರಿದ ಆ ಗೂಢಚಾರ.ಶ್ರೀರಾಮ ಕೌತುಕವದು ಕೆರಳಿತು. ಇನ್ನು ಆಲಿಸದಿರಲಾರೆ ಟೀಕೆಯ ಮಾತನ್ನು ಎಂದುಕೊAಡವನು ಗೂಢಚಾರನನ್ನು ಒತ್ತಾಯಪಡಿಸಿದ. “ಅರಸನ ಆಜ್ಞೆಯಿದು. ನುಡಿಯಲೇಬೇಕು ನೀನೀಗ. ಮುಚ್ಚಿಟ್ಟರೆ ನನ್ನ ಮೇಲಾಣೆ” ಎಂದ.ಅರಸನ ಮೇಲಿನ ಪ್ರೀತಿ ಗೂಢಚಾರನ ಬಾಯಿ ತೆರೆಸಿತು. ತಾನು ಗುಟ್ಟಾಗಿ ಕಂಡದ್ದನ್ನು, ಕೇಳಿದ್ದನ್ನು ಅರುಹತೊಡಗಿದ. “ನಿಮ್ಮ ಮಹಿಮೆಯನ್ನು ಅರಿಯುವ ಸಾಮರ್ಥ್ಯವಿರದ ಅಗಸನೊಬ್ಬ ಆಡಿದ ಮಾತಿದು. ಅವನ ಹೆಂಡತಿ ಅವನ ಮೇಲೆ ಮುನಿಸಿಕೊಂಡು ತವರುಮನೆ ಸೇರಿಕೊಂಡಿದ್ದಳು. ಅವಳ ತಂದೆ ತಾಯಿ ಮಗಳನ್ನು ಮತ್ತೆ ಗಂಡನ ಮನೆಗೆ ಬಿಟ್ಟುಹೋಗುವುದಕ್ಕಾಗಿ ಬಂದಿದ್ದರು. ಆಗ ಆ ಅಗಸ ಕೋಪದಿಂದ “ಬಿಟ್ಟುಹೋದ ಪತ್ನಿಯನ್ನು ಮತ್ತೆ ಆ ರಾಮನಂತೆ ಜೊತೆ ಸೇರಿಸಿಕೊಂಡು ಬದುಕುವವ ನಾನಲ್ಲ” ಎಂದು ಅಬ್ಬರಿಸಿದ. ಇಂಥದ್ದೊAದು ಟೀಕೆ ವ್ಯಕ್ತವಾಗಿದೆ ನಿಮ್ಮ ಬಗೆಗೆ” ಹೀಗೆ ಹೇಳಿದ ಗೂಢಚಾರ.ಅವನನ್ನು ಕಳುಹಿಸಿದ ಶ್ರೀರಾಮ ಯೋಚನಾಸಾಗರದಲ್ಲಿ ಮುಳುಗಿಹೋದ. ಬಂಧನಕ್ಕೆ ಸಿಲುಕಿದ ಮದಗಜದಂತಾಯಿತು ಅವನ ಸ್ಥಿತಿ. ಪ್ರತೀ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ಅವನಿಗೆ ಬಟ್ಟೆಯನ್ನೊಗೆದು ಮಲಿನವನ್ನು ಇನ್ನಿಲ್ಲವಾಗಿಸುವವನ ಮಲಿನದ ಮಾತು ಬಲವಾಗಿಯೇ ಘಾಸಿಯನ್ನುಂಟುಮಾಡಿತ್ತು. ಒಬ್ಬನ ಮಾತು ಹಲವರ ಮಾತಾಗಿರಬಹುದು. ಹಲವರ ಅಭಿಪ್ರಾಯವದು ಒಬ್ಬನ ಸಿಡಿನುಡಿಯಲ್ಲಿ ವ್ಯಕ್ತಗೊಂಡಿರಬಹುದು ಎನಿಸಿತು ಅವನಿಗೆ. ಸೀತೆಯನ್ನು ತೊರೆಯುವುದೇ ಸೂಕ್ತ ಎಂದುಕೊAಡ ಪ್ರಭು ಶ್ರೀರಾಮಚಂದ್ರ.ಸಭೆಯನ್ನು ನಡೆಸದೆ, ಯಾರಲ್ಲಿಯೂ ಬೆರೆಯದೆ, ರಾಜರಲ್ಲಿ ಮಾತನಾಡದೆ ಅನ್ಯಮನಸ್ಕನಾಗಿದ್ದ ಅಣ್ಣನ ರೀತಿ ಅಚ್ಚರಿ ಮೂಡಿಸಿತು ಅವನ ತಮ್ಮಂದಿರಲ್ಲಿ. ಅಂತಃಪುರ ಹೊಕ್ಕವರು ಕಂಡದ್ದು, ಆಲಸ್ಯದ ಭಾವದಲ್ಲಿ ಮೈಮರೆತವನಂತೆ ಕುಳಿತಿದ್ದ ಸಹೋದರ ಶ್ರೀರಾಮನನ್ನು. ಕಾಲಿಗೆರಗಿದರು ತಮ್ಮಂದಿರು. ನುಡಿಸುವ ಮನಸ್ಸಾಗಲಿಲ್ಲ.ರಾಮನೇ ಮಾತನಾಡಿದ ಅವರಲ್ಲಿ. ಮನದ ದುಗುಡವನ್ನು ಬಿಚ್ಚಿಟ್ಟ. ಅಗಸನಾಡಿದ ಮಾತನ್ನು ಅವರಿಗೆ ಅರುಹಿದ. ತನ್ನ ಸತಿ ಸೀತೆ ಪತಿವ್ರತೆ ಎನ್ನುವುದರ ಅರಿವು ತನಗಿದೆ ಎಂದ. ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಅವಳನ್ನು ತೊರೆಯುವವ ತಾನೆಂದ.ಅಣ್ಣನ ಮಾತು ಅಸಹನೀಯವಾಯಿತು ಆ ಕ್ಷಣವೇ ಅವನ ತಮ್ಮಂದಿರಿಗೆ. ಭರತನ ಕಂಠ ಗದ್ಗದಿಸಿತು ಶೋಕದಿಂದ. ಭಾರ ಹೃದಯದವನಾದ ಭರತ. “ಬುದ್ಧಿ ಇದ್ದವರು ಹಾಲು ಕೊಡುವ ಹಸುವನ್ನು ಕಾಡಿಗೆ ಬಿಡುತ್ತಾರೆಯೇ! ಅಂದು ನಿನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಗಿದೆ. ಆಗಲೇ ಅವಳ ಸತ್ಯ ಸಾಬೀತಾಗಿದೆ. ಹಾಗಿದ್ದೂ ಈಗ ಇಂಥ ನಿರ್ಧಾರವೇಕೆ?” ಎಂದು ಕೈಕೊಡವಿದ ಕೈಕೇಯಿಸುತ.“ಸರಿ ತಪ್ಪುಗಳ ವಿವೇಚನೆಯಿಲ್ಲದೆ ಮೂರ್ಖನಂತೆ ವರ್ತಿಸಬೇಡ” ಎಂದು ಅಣ್ಣ ರಾಮನ ಮೇಲೆ ಉರಿಉರಿದ ಶತ್ರುಘ್ನ, ಶತ್ರುವಿನಂತೆ.“ತುಂಬು ಗರ್ಭಿಣಿಯಾದವಳನ್ನು ಪ್ರೀತಿಯಿಂದ ಸಲಹಬೇಕೇ ಹೊರತು ತೊರೆಯುವುದು ಉಚಿತವಲ್ಲ” ಎಂದ ಲಕ್ಷö್ಮಣ.ತಮ್ಮಂದಿರ ನುಡಿಯ ಹಿಂದಿನ ಒಲವದು ಶ್ರೀರಾಮನಿಗೆ ಮನದಟ್ಟಾಯಿತು. ಆದರೆ ಪರಿಸ್ಥಿತಿಗೆ ಕಟ್ಟುಬಿದ್ದ ಅವನು ಸೀತೆಯನ್ನು ತ್ಯಜಿಸಿ ಬದುಕುವ ದೃಢನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದ. ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರುವ ಹೊಣೆಯನ್ನವನು ವಹಿಸಿದ್ದು ತಮ್ಮ ಲಕ್ಷö್ಮಣನಿಗೆ.
ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಗರ್ಭವತಿಯಾದಳುಭೂಗರ್ಭಸಂಜಾತೆಸೀತೆ ತಮ್ಮ ತಮ್ಮ ಪ್ರೀತಿಪಾತ್ರರನ್ನು ಕೂಡಬಯಸುವ, ಸೇರಿ ಆನಂದಿಸುವ, ಆನಂದವನ್ನು ವರ್ಧಿಸುವ ಬಯಕೆಗಳನ್ನು ಮನದಲ್ಲಿ ಒಗ್ಗೂಡಿಸುವ ವಸಂತಕಾಲವದು ಓಡಿಬಂತು ಇಳೆಯ ಬಳಿಗೆ. ಅದೇ ಸಮಯದಲ್ಲಿ ಬುವಿಸುತೆ ರಾಮಸತಿ ಸೀತೆ ಋತುಮತಿಯಾದಳು. ಮಲ್ಲಿಗೆಯಂತಹ ಶುಭ್ರ ನಗೆಯನ್ನು ಹೊಂದಿರುವ, ಚಿಗುರಿನಂತಹ ಅಧರದಿಂದ ಶೋಭಿಸುವ, ದುಂಬಿಯ ತೆರದ ಮುಂಗುರುಳಿನಿAದ ಚೆಲುವು ಪಡೆದ, ಗಿಳಿ- ಕೋಗಿಲೆಗಳ ಮೃದು ಮಧುರ ಧ್ವನಿಯನ್ನು ತನ್ನದಾಗಿಸಿಕೊಂಡ, ಹೂವಿನಂತಹ ಕಣ್ಣಿನಿಂದ ಅಂದ ಹೆಚ್ಚಿಸಿಕೊಂಡ, ಚಂದಿರಸದೃಶ ಮೊಗದವಳಾದ ಸೀತೆ ಸೊಬಗಿನಿಂದ ಮೆರುಗು ಪಡೆದಳು ಋತುಮತಿಯಾದ ಆ ಸಮಯದಲ್ಲಿ. ಮೈನೆರೆದ ಹೆಣ್ಣು ಪೂರೈಸಬೇಕಾದ ನೀತಿನಿಯಮಗಳಷ್ಟನ್ನೂ ಅಚ್ಚುಕಟ್ಟಾಗಿ ಸಹನೆಯಿಂದ ಪಾಲಿಸಿದಳು ಪೃಥ್ವಿಸುತೆ.ನಾಲ್ಕನೆಯ ದಿನ ವಿಶಿಷ್ಟ ಸ್ನಾನವನ್ನು ಮುಗಿಸಿದಳು. ಮಿಂದು ಶುಭ್ರಳಾಗಿ ನಿಂದು ಕುಂದಿಲ್ಲದ ಇಂದುವಿನAತೆ ಶೋಭಿಸುತ್ತಿದ್ದ ಸೀತೆ ಶ್ರೀರಾಮನ ಕಣ್ಣಿಗೆ ಹೊಸಬಗೆಯಲ್ಲಿ ಕಂಡಳು. ನಿಮಿಷದಲ್ಲಿಯೇ ಮೂರೂ ಲೋಕಗಳನ್ನು ಗೆಲ್ಲುವ ಉತ್ಸುಕತೆಯಲ್ಲಿ ಮನ್ಮಥ ಹರಿತಗೊಳಿಸಿಟ್ಟ ಆಯುಧದಂದದಿ ತೋರಿದಳು. ಕಳಂಕವನ್ನೆಲ್ಲಾ ಕಳೆದು ಆ ಮದನ ಇರಿಸಿದ ಸೌಂದರ್ಯಸಾರದAತೆ ಗೋಚರಿಸಿದಳು. ಕಾಮನ ಸಂಪೂರ್ಣ ಯಶಸ್ಸದು ಸಾಕಾರಗೊಂಡAತಹ ಅನುಭವವಾಯಿತು ಶ್ರೀರಾಮನಿಗೆ, ಪೂರ್ಣ ಪರಿಶುದ್ಧತೆಯಿಂದ ತನ್ನೆದುರು ನಿಂತ ಸೀತೆಯನ್ನು ನೋಡಿದಾಗ.ಮಂದಗಮನೆಯ ಮಂದಹಾಸವದು ಅವನಿಗೆ ಮುದ್ದಾಗಿ ತೋರಿತು. ಅಂದದ ಮುಖಾರವಿಂದದವಳ ಕುಂದಿಲ್ಲದ ಅಂಗಾAಗ ಸೌಂದರ್ಯ ಅವನಿಗೆ ಮುದ ನೀಡಿತು. ಚಂದನದ ಸುಗಂಧವನ್ನು ಬೀರುತ್ತಿದ್ದ ಅವಳ ಶರೀರ, ಚಂದ್ರನAತಿದ್ದ ಅವಳ ಮುಖ ಅವನ ಮನಸ್ಸನ್ನು ತಣಿಸಿತು. ಹಣೆಯಲ್ಲಿ ತಿಲಕವಿತ್ತು. ವದನದಲ್ಲಿ ಮಂದಸ್ಮಿತ. ಉಟ್ಟ ಉಡುಗೆಯದು ಮನೋಹರವಾಗಿತ್ತು. ಮೂರು ಸರಗಳನ್ನು ಧರಿಸಿದ್ದಳು. ನೀಳವಾದ ಕೇಶರಾಶಿ ಹೊಂದಿದವಳಾಗಿದ್ದಳು.ಮಹಾವಿಷ್ಣು ಸಾಗರದ ಮಧ್ಯೆ ಹಾವಿನ ಹಾಸಿಗೆಯ ಮೇಲೆ ಲಕ್ಷಿö್ಮಯ ಜೊತೆಗೆ ಭೋಗಿಸಿದ ರೀತಿಯಲ್ಲಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಸುಖವನ್ನು ಪಡೆಯತೊಡಗಿದ ಸೀತೆಯ ಜೊತೆಗೆ.ಎರಡು ದೇಹಗಳಾಗ, ಈಗ ಒಂದು. ಅವನು ಸಾಗರ, ಅವಳು ಬಿಂದು. ಅವನು ಸಾಸಿರ, ಅವನು ಒಂದು. ಅವಳು ಇಲ್ಲದೆ ಅವನು ಇಲ್ಲ. ಅವನ ಜೊತೆಯದು ಅವಳಿಗೆಲ್ಲ. ಅವನೀಗ ಸುರನಲ್ಲ. ಅನುರಾಗ ಪ್ರಿಯ ನಲ್ಲ. ಪುಳಕವದು ಶಾಶ್ವತ. ಅಕ್ಕರೆಯು ಅವಿರತ. ಶ್ರೀರಾಮ ಸೀತೆಯರ ಸಮರತಿಯ ಸಂಗವನು ಕಂಡು ಶ್ರಮಕೀಡಾದ ಆ ಮನ್ಮಥ. ಮದನನಿಗೆ ಶ್ರಮ, ಇಲ್ಲ ವಿರಾಮ. ಅಂಗಜ ಸಂಗದಲಿ ಸೀತೆ ಶ್ರೀರಾಮ, ಮನಕೆ ಹೊಸಬಗೆಯ ಆರಾಮ.ಈ ಬಗೆಯಲ್ಲಿ ಶ್ರೀರಾಮ ದೇಹವದು ಮಿಲನಗೊಂಡಿತು ಸೀತೆಯಲ್ಲಿ. ಮನಸ್ಸುಗಳು ಸಮಾಗಮಗೊಂಡವು ಹೊಸಬಗೆಯ ಹುರುಪಿನಲ್ಲಿ.ವರವಿಷ್ಣು ನಕ್ಷತ್ರವದು ಕೊನೆಗಾಣುತ್ತಿರುವ ಸಮಯದಲ್ಲಿ ಗರ್ಭವತಿಯಾದಳು ಆ ಭೂಗರ್ಭೆ. ಸೀತೆಯ ಗರ್ಭದ ಫಲವನ್ನು ತಿಳಿದವರಲ್ಲಿ ಕೇಳಿದ ಶ್ರೀರಾಮ. “ನಿನ್ನನ್ನವಳು ತೊರೆದು ಬೇರಾವುದೋ ಪರಸ್ಥಳದಲ್ಲಿ ಮಕ್ಕಳನ್ನು ಪಡೆಯುತ್ತಾಳೆ” ಎಂಬ ಭವಿಷ್ಯವದು ತಿಳಿದುಬಂತು.ಇದನ್ನರಿಯದ ಸೀತೆ ತಾಯ್ತನದ ಸುಖದ ಭಾವದಲ್ಲಿದ್ದಳು. ರಾಮಚಂದ್ರನನ್ನೇ ಹೋಲುವ ಅವಳಿ ಚಂದ್ರ ಸದೃಶರಾದ ಶಿಶುಗಳನ್ನು ಗರ್ಭದಲ್ಲಿ ಹೊತ್ತುನಿಂತಿದ್ದ ಚಂದ್ರಮುಖಿ ಸೀತೆ ಪೌರ್ಣಮಿಯ ಚಂದ್ರನAದದಿ ಶೋಭಿಸುತ್ತಿದ್ದಳು ಗರ್ಭಿಣಿಯಾದ ಸಮಯದಲ್ಲಿ.ಸೀತೆ ಗರ್ಭವತಿಯೆನಿಸಿಕೊಂಡ ನಾಲ್ಕನೆಯ ತಿಂಗಳಿಗೆ ಅವಳ ಸೀಮಂತ ಶಾಸ್ತçವನ್ನು ನಡೆಸಿದ ಶ್ರೀರಾಮಚಂದ್ರ. ವಸಿಷ್ಠ, ವಿಶ್ವಾಮಿತ್ರರ ಸಲಹೆಗನುಗುಣವಾಗಿ ನಡೆಯಿತದೋ ಸೀಮಂತ ಶಾಸ್ತç. ಮೂರು ಯೋಜನ ವಿಸ್ತೀರ್ಣತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಉತ್ಸವವನ್ನು. ಬ್ರಾಹ್ಮಣರಿಗೆ ಅವರು ಬಯಸಿದ್ದನ್ನು ಕೊಡಲಾಯಿತು. ರಾಜರುಗಳಿಗೆ, ಸುಗ್ರೀವ, ವಿಭೀಷಣ ಮೊದಲಾದವರಿಗೆ ಭೋಜನ, ಸುಗಂಧ, ತಾಂಬೂಲ, ಪುಷ್ಪ, ಅಕ್ಷತೆ, ವಸ್ತಾçಭರಣಗಳನ್ನಿತ್ತು ಗೌರವಿಸಿದ ಶ್ರೀರಾಮ. ಪೂರ್ಣ ಭೂಮಿಯದು ಹೊಗಳುವಂತೆ ನಡೆಯಿತು ಭೂಸುತೆಯ ಸೀಮಂತ ಶಾಸ್ತç.ಉತ್ಸವಕ್ಕೆ ಬಂದವರೆಲ್ಲರೂ ಸಂತಸದಿAದ ತೆರಳಿದ ಬಳಿಕ ಶ್ರೀರಾಮನ ಬಳಿಗೆ ಬಂದಳು ಸೀತೆ. ತನ್ನ ಮನದಿಂಗಿತವನ್ನು ತೋಡಿಕೊಂಡಳು. ವನವಾಸದ ಸಮಯದಲ್ಲಿ ಅವಳು ಶ್ರೀರಾಮನ ಜೊತೆ ಹಲವು ಆಶ್ರಮಗಳಿಗೆ ಹೋಗಿದ್ದಳು. ಋಷಿಪತ್ನಿಯರ ಜೊತೆಗೆ ಮಾತನಾಡಿದ್ದಳು. ಆನಂದದಿAದ ಬೆರೆತಿದ್ದಳು. ಅದರ ನೆನಪದು ಈಗ ಮೂಡಿತ್ತು ಸೀಮಂತಿನಿ ಸೀತೆಗೆ. ಈಗ ಬಸುರಿ ಬಯಕೆಯದು ಅವಳಲ್ಲಿ ಮೂಡಿತ್ತು. ಮುನಿಪತ್ನಿಯರನ್ನು ಈಗ ಮತ್ತೆ ನೋಡಬೇಕು, ಮಾತನಾಡಿಸಬೇಕು, ಅವರೊಂದಿಗೆ ದಿನ ಕಳೆಯಬೇಕು ಎಂದು ಆಸೆಪಟ್ಟಿತ್ತು ಅವನ ಮನಸ್ಸು. ಅದನ್ನೇ ಹೇಳಿಕೊಂಡಳು ಪತಿ ಶ್ರೀರಾಮಚಂದ್ರನಲ್ಲಿ. “ನಾನೀಗ ಮತ್ತೆ ವನವನ್ನು ಸೇರಿಕೊಳ್ಳುತ್ತೇನೆ. ಅನುವು ಮಾಡಿಕೊಡಬೇಕು ನೀವು” ಎಂದು ಕೇಳಿಕೊಂಡಳು. ಜನಕಸುತೆಯ ಮನದಿ ಜನಿಸಿದ್ದ ಬಯಕೆಯದು ನಗುವನ್ನು ತರಿಸಿತು ರಘುಕುಲೋತ್ತಮನಿಗೆ. ಅವಳ ಇಚ್ಛೆಯನ್ನು ಈಡೇರಿಸುವ ಭರವಸೆ ಕೊಟ್ಟ ಶ್ರೀರಾಮ.ಹೀಗಿದ್ದ ಕಾಲದಲ್ಲಿಯೇ ಒಂದು ಇರುಳು ಕನಸೊಂದನ್ನು ಕಂಡ ರಘುಪತಿ. ಗಂಗೆಯನ್ನು ದಾಟಿದ ಸೀತೆ ಕಾಡನ್ನು ಸೇರಿ ದಿಕ್ಕುದೆಸೆ ಇಲ್ಲದವರಂತೆ ಅಸಹಾಯಕಳಾಗಿ ದೆಸೆದೆಸೆಯ ಈಕ್ಷಿಸುತ, ಮರುಗುತ್ತಿರುವುದನ್ನು ಕನಸಿನಲ್ಲಿ ಕಂಡು ಕನಲಿದ ಶ್ರೀರಾಮ.ತನ್ನ ಕನಸನ್ನು ವಸಿಷ್ಠರಲ್ಲಿ ಹೇಳಿಕೊಂಡ. “ಈ ಕನಸು ಶುಭದ ಸೂಚನೆಯೋ? ಅಶುಭದ ಸುಳುಹೋ?” ಎಂದು ಕೇಳಿದ. “ಒಳ್ಳೆಯದನ್ನು ತಿಳಿಸುವ ಕನಸಲ್ಲವಿದು” ಎಂಬ ನುಡಿ ಮೂಡಿಬಂತು ಅವರಿಂದ. ಶ್ರೀರಾಮ ಮನಸ್ಸದು ಕನಸಿನ ಅಳುಕಿನಿಂದ ಮುಕ್ತವಾಗುವಂತಹ ಮಾತುಗಳನ್ನಾಡಿ ಶಾಂತಿ ಮೂಡಿಸುವ ಯತ್ನ ಮಾಡಿದರು. ಡಾ.ವಿಶ್ವನಾಥ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-36 ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ ಅರ್ಜುನ ಉವಾಚ ದಶರಥಸುತ ದಮನಿಸಿದ ದಶಕಂಠನನ್ನು ಇಕ್ಷಾಕು ಮೊದಲಾದ ರಾಜಾಧಿರಾಜರನ್ನು ಹೊಂದಿದ ಶ್ರೇಷ್ಠಕುಲವಾಗಿತ್ತು ಸೂರ್ಯವಂಶ. ಅಯೋಧ್ಯೆಯನ್ನು ಆಧಾರವಾಗಿಟ್ಟುಕೊಂಡು ಇವರೆಲ್ಲರೂ ಆಳ್ವಿಕೆ ನಡೆಸಿದರು. ಹೀಗಿದ್ದ ರವಿಕುಲದಲ್ಲಿ, ಅಯೋಧ್ಯಾಪುರದಲ್ಲಿ ಪುತ್ರಕಾಮೇಷ್ಠಿ ಯಾಗದ ಫಲವಾಗಿ, ದಶರಥಪುತ್ರನಾಗಿ ಜನಿಸಿದ ಮಹಾವಿಷ್ಣು, ಶ್ರೀರಾಮಚಂದ್ರನೆಂಬ ಹೆಸರನ್ನು ಹೊತ್ತು. ಕೌಸಲ್ಯೆಯ ಗರ್ಭದೊಳಗಿಂದ ಈ ಇಳೆಗಿಳಿದ ಶ್ರೀರಾಮ ಬೆಳೆದದ್ದು ಲಕ್ಷಣ, ಭರತ, ಶತ್ರುಘ್ನರೆಂಬ ತಮ್ಮಂದಿರೊಡನೆ. ಕೌಶಿಕ ರಾಜನ ಯಾಗವನ್ನು ಕಾಪಾಡುವ ಹಿರಿದು ಹೊಣೆಯದು ಕಿರಿದು ವಯಸ್ಸಿನಲ್ಲಿಯೇ ಅವನದ್ದಾಯಿತು. ತಾಟಕಿಯೆಂಬ ರಕ್ಕಸಿಯನ್ನು ಕೊಂದ ಕೌಸಲ್ಯಾ ಸುತ. ಶಾಪದ ಫಲವಾಗಿ ಶಿಲೆಯಾಗಿದ್ದ ಗೌತಮ ಋಷಿಯ ಮಡದಿ ಅಹಲ್ಯೆಯನ್ನು ಉದ್ಧರಿಸಿದ ದಶರಥನಂದನ. ಮಿಥಿಲೆಯಲ್ಲಿ ನಡೆಯುತ್ತಿದ್ದ ಸೀತಾ ಸ್ವಯಂವರಕ್ಕೆ ಹೋದವನು ಶಿವಧನುಸ್ಸನ್ನು ಮುರಿದು, ಜನಕರಾಜನ ಸುತೆಯಾದ ಜಾನಕಿಯನ್ನು ಸತಿಯಾಗಿ ಪಡೆದ.ಹೀಗೆ ಬದುಕಿನಲ್ಲಿ ಏಳಿಗೆಯನ್ನು ಗಳಿಸುತ್ತಾ, ಪ್ರವರ್ಧಮಾನಕ್ಕೆ ಬರುತ್ತಿರುವ ಮಗ ಶ್ರೀರಾಮನಿಗೆ ಅಯೋಧ್ಯೆಯ ಪೂರ್ಣ ಜವಾಬ್ದಾರಿಯನ್ನು ನೀಡಬೇಕು ಎನಿಸಿತು ದಶರಥನಿಗೆ. ರಘುಕುಲತಿಲಕನ ಪಟ್ಟಾಭಿಷೇಕಕ್ಕೆ ಮುಹೂರ್ತವದು ನಿಗದಿಗೊಂಡಿತು. ಈ ವಿಚಾರವನ್ನು ಮಂಥರೆಯ ಮೂಲಕ ತಿಳಿದಳು ಕೈಕೇಯಿ. ದಶರಥನ ಪ್ರೀತಿಯ ರಾಣಿ. ಮಂಥರೆಯ ಮತ್ಸರದ ನುಡಿಯದು ಕೈಕೇಯಿ ಮನವನ್ನು ಮಥಿಸಿತು ಹೀನವಾಗಿ. ತನ್ನ ಮಗ ಭರತನಿಗೇ ಪಟ್ಟ ದೊರೆಯಬೇಕೆಂದು ಹಠ ಹಿಡಿದಳು ಗಂಡನಲ್ಲಿ. ಹಿಂದೆ ಅವಳಿಗೆ ಕೊಟ್ಟಿದ್ದ ಮಾತು ಈಗವನ ಬಾಯಿಯನ್ನು ಮುಚ್ಚಿಸಿತು. ಭರತನಿಗೆ ದೊರಕಿತು ಅಯೋಧ್ಯೆಯ ಸಿಂಹಾಸನ. ಪ್ರಭುವಾಗಬೇಕಿದ್ದ ಶ್ರೀರಾಮನದ್ದು ವನದೆಡೆಗಿನ ಗಮನ. ಜೊತೆಗಿದ್ದದ್ದು ಒಲವಿನ ಮಡದಿ ಸೀತೆ, ಪ್ರಿಯ ಸೋದರ ಲಕ್ಷö್ಮಣ.ವನವಾಸದ ಅವಧಿಯಲ್ಲಿ ಅದೆಷ್ಟೋ ರಕ್ಕಸರು ಕೊನೆಗಂಡರು, ರಾಮಬಾಣಕ್ಕೆ ಸಿಲುಕಿ. ಋಷಿಸಂತತಿಯದು ಸಂತಸ ಪಡೆಯಿತು, ಶ್ರೀರಾಮ ಸಹವಾಸದಲಿ.ಹೀಗೆ ರಾಮ, ಲಕ್ಷö್ಮಣ, ಸೀತೆಯರು ದಂಡಕಾರಣ್ಯದಲ್ಲಿದ್ದಾಗ ಅವರನ್ನು ಕಂಡವಳು ರಾವಣ ಸೋದರಿ ಶೂರ್ಪನಖಿ. ರಾಮನಲ್ಲಿ ಮನಸ್ಸಾಯಿತು ಆಕೆಗೆ. ಲಕ್ಷö್ಮಣನಲ್ಲಿಗೆ ಕಳುಹಿಸಿಕೊಟ್ಟ ರಾಮ, ಆ ದುಷ್ಟೆಗೆ ಬುದ್ಧಿ ಕಲಿಸುವ ತೆರದಿ. ಅಂಗಭAಗಕ್ಕೆ ಒಳಗಾಗಿ ಅವಮಾನಕ್ಕೀಡಾದವಳು ಸೀತೆಯ ಚೆಲುವನ್ನು ಹೊಗಳಿದಳು ರಾವಣನಲ್ಲಿ. ಕಾಮದಾಸೆಯಲ್ಲಿ ಅಂಕುಶ ಮೀರಿದ ಲಂಕೆಯ ಅಧಿಪತಿ, ಕಪಟ ವೇಷದಿಂದ ರಾಮ ಲಕ್ಷö್ಮಣರನ್ನು ಮರುಳುಗೊಳಿಸಿ, ಸೀತೆಯನ್ನು ಅಪಹರಿಸಿದ.ಕಾಣದಾದ ಸತಿಯನ್ನು ಹುಡುಕಿ ಹೊರಟ ಶ್ರೀರಾಮ ರಾವಣನನ್ನು ಎದುರಿಸಿ, ಬಿದ್ದಿದ್ದ ಜಟಾಯುವನ್ನು ಕಂಡ. ವಿವರವನ್ನು ಕೇಳಿದ. ಮಾರ್ಗಮಧ್ಯೆ ಕಬಂಧ ಎಂಬ ಅಸುರನನ್ನು ಕೊಂದ. ತನ್ನ ಆಗಮನಕ್ಕಾಗಿ ಕಾಯುತ್ತಿದ್ದ ಶಬರಿಗೆ ದರುಶನವನ್ನಿತ್ತು, ಅವಳನ್ನು ಧನ್ಯಗೊಳಿಸಿದ. ಆಂಜನೇಯ ಬಲವದು ಆ ಸಮಯದಲ್ಲಿಯೇ ಅವನನ್ನು ಸೇರಿತು. ವಾಲಿ ಸುಗ್ರೀವ ಸಹೋದರ ಕಲಹದಲ್ಲಿ ಭಾಗವಹಿಸಿ, ವಾಲಿಯನ್ನು ಕೊಂದ. ಸುಗ್ರೀವ ಸಹಾಯವನ್ನು ಸದಾ ತನ್ನದಾಗಿಸಿಕೊಂಡ. ಜಾಂಬವAತನ ನೆರವು ದೊರಕಿತು ರಘುಕುಲವೀರನಿಗೆ.ಜನಕಸುತೆಯನ್ನು ಹುಡುಕುವುದಕ್ಕೆ ಅಂಜನಾಸುತನನ್ನು ಕಳುಹಿಸಿಕೊಟ್ಟ. ಅಮಿತ ಬಲದಿಂದ ಸಮುದ್ರವನ್ನು ಉಲ್ಲಂಘಿಸಿದ ಹನುಮಂತ. ಶ್ರೀರಾಮಸತಿ ಸೀತೆಗೆ ಶ್ರೀರಾಮಾಂಕಿತದ ಮುದ್ರಿಕೆಯನ್ನಿತ್ತ. ಅವಳ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವ ಮಾತುಕೊಟ್ಟ. ರಾವಣನ ಅಶೋಕವನವನ್ನು ಧೂಳೀಪಟ ಮಾಡಿದ. ತಡೆಯಲು ಬಂದ ರಕ್ಕಸರನ್ನು ಕೊಂದ. ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಯನ್ನೇ ಸುಟ್ಟ. ಸೀತೆಯಿತ್ತ ಸಂದೇಶವನ್ನು ಶ್ರೀರಾಮನಿಗೆ ಹೇಳಿದ.ರಾಮ ರಾವಣರ ಮಧ್ಯೆ ನಡೆಯಿತದೋ ಘೋರ ಕಾಳಗ. ಅಸುರ ಕುಲದ ಹೆಸರೇ ಅಳಿದುಹೋಗುವಂತೆ ಪರಾಕ್ರಮ ತೋರಿದ ಶ್ರೀರಾಮಚಂದ್ರ. ರಾವಣ ಮರಣವನ್ನಪ್ಪಿದ. ವಿಭೀಷಣ ಲಂಕಾಧಿಪತಿ ಎನಿಸಿಕೊಂಡ.ರಾವಣ ಸೆರೆಯಲ್ಲಿದ್ದ ಸೀತೆಯನ್ನು ಮರಳಿ ತನ್ನವಳನ್ನಾಗಿಸಿಕೊಂಡ ಶ್ರೀರಾಮ ಅಯೋಧ್ಯೆಯನ್ನು ಮರಳಿ ಕಂಡ. ತನ್ನವರೆಲ್ಲರನ್ನೂ ನೋಡಿ ಹರ್ಷಗೊಂಡ. ಮಗನ ಮೈಯ್ಯಲ್ಲಿದ್ದ ಗಾಯಗಳನ್ನು ಕಂಡೊಡನೆಯೇ ಕೌಸಲ್ಯೆ ಕರುಳದು ನೊಂದಿತು. “ನಿನ್ನ ಕೋಮಲಕಾಯವನ್ನು ನೋಯಿಸಿದವರು ಯಾರು?” ಎಂದು ಕೇಳುತ್ತಾ, ಪೂರ್ಣ ನೊಂದಳು ರಾಮಮಾತೆ. ತಾಯಿಯನ್ನು ಸಂತೈಸಿದ ಅವಳ ಪ್ರಿಯಸುತ.ಅಯೋಧ್ಯೆಯ ಅಧಿಕಾರವದು ಈಗ ಶ್ರೀರಾಮನದ್ದಾಯಿತು. ಪಟ್ಟಾಭಿಷಿಕ್ತನಾದ ಪರಮ ಪಾವನ ಪುರುಷೋತ್ತಮ. ಒಂಭತ್ತು ಸಾವಿರ ವರ್ಷಗಳದು ಉರುಳಿಹೋದವು. ಶ್ರೀರಾಮನ ಆಳ್ವಿಕೆಯ ಆ ಕಾಲದಲ್ಲಿ ಪೂರ್ಣ ಅಯೋಧ್ಯೆ ಪರಿಪೂರ್ಣತೆಯನ್ನು ಹೊತ್ತುನಿಂತಿತು. ಎಲ್ಲಿ ನೋಡಿದರೂ ಸಮೃದ್ಧಿ, ಸಂಪನ್ನತೆ. ನೀತಿಶಾಸ್ತçಗಳಿಂದಲೇ ಹೆಸರು ಗಳಿಸಿತು ಅಯೋಧ್ಯೆ.ಹೀಗಿದ್ದಾಗಲೇ ರಘುಕುಲವದು ತನ್ನಿಂದ ಮುಂದಕ್ಕೆ ಮುಂದುವರಿಯಬೇಕೆAಬ ಬಯಕೆ ಮೂಡಿತು ರಾಮನಲ್ಲಿ. ಸಂತಾನದ ಅಪೇಕ್ಷೆ ಅವನದ್ದು. ಏಕಾಂತದಲ್ಲಿ ಸತಿ ಸೀತೆಯ ಜೊತೆಗೆ ಮನದ ಭಾವನೆಯನ್ನು ಹಂಚಿಕೊAಡ.“ಇಕ್ಷಾ÷್ವಕು ವಂಶ ಇದುವರೆಗೂ ಅವಿರತವಾಗಿ ಮುನ್ನಡೆಯುತ್ತಾ ಬಂದಿದೆ. ಈಗ ನಾನು ಮಕ್ಕಳನ್ನು ಪಡೆಯದೇ ಹೋದರೆ ನನ್ನಿಂದ ಈ ಕುಲ ಅಳಿಯಿತೆಂಬ ಕಳಂಕ ನನ್ನದಾಗುತ್ತದೆ. ಸಂಸಾರದ ಭ್ರಾಂತಿಯದು ತನ್ನಿಂದ ತೊಲಗಿಹೋಗಬೇಕಾದರೆ ಸಂತಾನದ ಏಳಿಗೆ ಆಗಬೇಕು. ಆದ್ದರಿಂದ ನಾವಿಬ್ಬರೂ ಕೂಡಿ ಸಂತಾನ ಪ್ರಾಪ್ತವಾಗಿಸಿಕೊಳ್ಳಬೇಕು ಎಂದು ಬಯಸುತ್ತಿದೆ ನನ್ನ ಮನಸ್ಸು” ಎಂದವನು ಅವಳ ಒಪ್ಪಿಗೆಯನ್ನು ಬಯಸಿದ.ಸೀತೆ ಚಿತ್ತವದು ತಾಯ್ತನದೆಡೆಗೆ ಆಕರ್ಷಿತವಾಗಿತ್ತು. ಮಗುವನ್ನು ಹೊಂದುವ ಸಹಜ ಆಸೆ ಅವಳದಾಗಿತ್ತು. ಅದನ್ನೇ ಹೇಳಿಕೊಂಡಳು ಪತಿಯಲ್ಲಿ. ಅವನ ಆಕಾಂಕ್ಷೆಯೇ ತನ್ನ ಆಕಾಂಕ್ಷೆ ಎಂದು ನುಡಿದಳು. ಮುದ್ದು ಶಿಶುವನ್ನು ಪಡೆಯುವ ಹಿರಿದು ಭಾಗ್ಯವದು ಸಕಲ ಹೆಂಗಳೆಯರಿಗೆ ದೊರೆಯುವುದೇ! ಎಂದು ಸಂದೇಹ ವ್ಯಕ್ತಪಡಿಸಿದ್ದಳು.ಹೀಗಿದ್ದಾಗಲೇ ಶ್ರೀರಾಮ ಆಸ್ಥಾನಕ್ಕೆ ಮುನಿಶ್ರೇಷ್ಠ ವಸಿಷ್ಠರ ಆಗಮನವಾಯಿತು. ಸಂತಾನದ ಬಯಕೆಯನ್ನು ಅವರಲ್ಲಿ ಹೇಳಿಕೊಂಡ ಶ್ರೀರಾಮ. “ನಿಮಗಿಬ್ಬರಿಗೂ ಸಂತಾನ ಭಾಗ್ಯವಿದೆ. ಮುಂದೆ ಒಳ್ಳೆಯದಾಗಲಿದೆ” ಎಂಬ ಒಳಿತಿನ ನುಡಿ ಅವರಿಂದ ಮೂಡಿಬಂತು. ಹರ್ಷಚಿತ್ತನಾದನು ಶ್ರೀರಾಮ. ಆಗಲೇ ವಸಂತಕಾಲವದು ಬಂತು… ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-35 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮುನಿಸು ಮಾತಿನ ಮಳೆಗರೆದೆ ಮಣಿಪುರದರಸನ ಮೇಲೆ ನ್ನನ್ನು ತಂದೆಯೆಂದು ಕರೆದು ನನ್ನ ಶುದ್ಧ ಚಾರಿತ್ರ್ಯಕ್ಕೆ ಧಕ್ಕೆ ತಂದನಲ್ಲಾ ಎಂಬ ಕೋಪ ಕಾಡಿತು ನನ್ನನ್ನು. ನನ್ನ ಆಪ್ತರ ಕಣ್ಣನನಗೆ ಸಂಬಂಧಪಡದವನು ನಲ್ಲಿ ನನ್ನ ಮಗನೆಂದೆನಿಸಿ ಯುದ್ಧ ವಿಮುಖನಾಗಿ, ಶರಣಾಗತಿಯನ್ನು ಸಾರಿ ಈ ವೀರಾರ್ಜುನನ ಪರಾಕ್ರಮದ ಹೆಸರಿಗೆ ಕಳಂಕ ತಂದನಲ್ಲಾ ಎಂಬ ಕ್ರೋಧವೂ ಮೂಡಿತು. ನನ್ನನ್ನು ಅವಮಾನಕ್ಕೆ ಈಡುಮಾಡಿದವನ ಚಿತ್ತವನ್ನು ಕ್ಷಣಕ್ಷಣ ಕಣಕಣ ನೋಯಿಸಿ, ಅವನ ಮನಕ್ಕೆ ಮರಣವನ್ನು ತರಬೇಕೆಂಬ ಬಗೆಯ ಉತ್ಸುಕತೆ ನನ್ನದಾಯಿತು. ಆಗದವರನ್ನು ಕೊಲ್ಲುವುದರಲ್ಲಿ ಎರಡು ಬಗೆಗಳಿವೆ. ಬಾಣ ಖಡ್ಗಗಳಿಂದ ಶರೀರವನ್ನು ಘಾಸಿಗೊಳಿಸಿ, ಗಾಯಕ್ಕೆ ಸಿಲುಕಿದ ದೇಹಕ್ಕೆ ಉಪ್ಪು ಸವರಿ ಇನ್ನಿಲ್ಲದ ಯಾತನೆಯನ್ನು ನೀಡಿ ಸಾಯಿಸುವುದು ಒಂದು ಬಗೆ. ಹಾಗೇನೂ ಮಾಡದೆ ನುಡಿಯ ಕಿಡಿಗಳನ್ನು ಸೂಸಿ, ಟೀಕೆಯ ಬೆಂಕಿಯನ್ನು ಎದೆಗಿಟ್ಟು, ಅಪಹಾಸ್ಯದ ಜ್ವಾಲೆಯನ್ನೆಬ್ಬಿಸಿ ಉರಿಉರಿಸಿ ಹಾಕುವುದು ಇನ್ನೊಂದು ಬಗೆ. ಯುದ್ಧಕ್ಕೆ ನಿಂತ ವೀರನಲ್ಲ ಬಭ್ರುವಾಹನ. ಮಾತಿನ ಬಾಣಗಳಿಂದಲೇ ಅವನ ಪ್ರಾಣ ತೆಗೆಯುವುದು ಸರಿಯೆಂದು ತೋರಿತು ನನಗೆ.ನನ್ನ ಪಾದದ ಬಳಿಯಲ್ಲಿ ಕುಳಿತಿದ್ದ ಅವನನ್ನು ಬಲವಾಗಿ ಒದೆದೆ. “ಎಲವೋ ಹೇಡಿ. ನನಗೆ ಜನಿಸಿದವ ನೀನಾಗಿದ್ದರೆ ಈ ಪರಿಯಲ್ಲಿ ಯುದ್ಧಕ್ಕೆ ಹೆದರಿ ಶರಣು ಬರುತ್ತಿರಲಿಲ್ಲ. ಮೊದಲು ಅಶ್ವವನ್ನು ಕಟ್ಟಿದವನು ನೀನು. ಈಗ ಯುದ್ಧ ಮಾಡದೆಯೇ ಅದನ್ನು ಬಿಟ್ಟು ಕಳುಹಿಸುವುದಕ್ಕೆ ಸಿದ್ಧನಾಗಿದ್ದೀಯಲ್ಲಾ! ನೀನಂತೂ ನನ್ನ ಮಗನಲ್ಲ” ಎಂದೆ ರೋಷಾವೇಶದಿಂದ.ನನ್ನ ಕಾಲಿನ ಒದೆತಕ್ಕೆ ಎರಡು ಹೆಜ್ಜೆಗಳಷ್ಟು ಆಚೆಗೆ ಬಿದ್ದ ಬಭ್ರುವಾಹನ. ಅರ್ಜುನನ ಮಗ ನೀನೆಂಬ ಯೋಚನೆಯನ್ನು ಅವನಲ್ಲಿ ಬಿತ್ತಿದವಳು ಅವನ ತಾಯಿ. ಅವಳ ಮಾತನ್ನು ಕೇಳಿಸಿಕೊಂಡು ತಾನೇ ಅವನಿಲ್ಲಿಗೆ ಬಂದದ್ದು! ಹಾಗಿರುವಾಗ ಅವಳನ್ನೂ ತೆಗಳದೇ ಇರಬಾರದು ಎನಿಸಿತು. ಅವನು ಹೇಳಿದ ಹೆಸರೇನದು?! ಚಿತ್ರಾಂಗದೆ! ಅದೇ ಹೆಸರನ್ನು ಮುಂದುಮಾಡಿಕೊAಡು ಬೈಯ್ಯತೊಡಗಿದೆ.“ಆ ಚಿತ್ರಾಂಗದೆಗೆ ವೈಶ್ಯನಿಂದ ಜನಿಸಿದ ಪುತ್ರ ನೀನು. ಅದಂತೂ ಖಚಿತ. ನನಗೆ ಜನಿಸಿದವನಲ್ಲ. ನನ್ನ ಮಗನಾಗಿದ್ದರೆ ಕ್ಷಾತ್ರಧರ್ಮವನ್ನು ಬಿಟ್ಟು ಈ ಬಗೆಯಲ್ಲಿ ವರ್ತಿಸುತ್ತಿರಲಿಲ್ಲ” ಎಂದು ಅಬ್ಬರಿಸಿದೆ, ಅವನ ಕರುಳ ಬಳ್ಳಿಯನ್ನು ಹಿಡಿದೆಳೆದು.ನಾನವನ ತಾಯಿಯನ್ನು ನಿಂದಿಸಿದ್ದು ಅತಿಯಾಗಿಯೇ ನೋಯಿಸಿತು ಅವನನ್ನು. ಅವನ ಮುಖಭಾವದಲ್ಲಿಯೇ ಅದು ಗೋಚರವಾಗುತ್ತಿತ್ತು. ನೆಲದ ಮೇಲೆ ಬಿದ್ದವನಿಗೆ ಇನ್ನೊಂದು ಬಲವಾದ ಹೊಡೆತವಿಕ್ಕಿದರೆ ಪೂರ್ಣವಾಗಿ ಮಣ್ಣುಮುಕ್ಕುತ್ತಾನೆ ಎಂಬ ಯೋಚನೆ ಬಂತು. ಯಾರೇ ಆಗಿರಲಿ, ಇನ್ನೊಬ್ಬರ ಜೊತೆಗಿನ ಕೀಳು ಹೋಲಿಕೆಯನ್ನು ಸಹಿಸಲಾರರು. ಇದು ನನಗೆ ಗೊತ್ತಿತ್ತು. ನನ್ನ ಮಗನೆಂದು ಸುಳ್ಳು ಹೇಳಿಕೊಂಡು ಬಂದವ ಈ ಬಭ್ರುವಾಹನ. ನನ್ನ ನಿಜತನಯನಾದ ಅಭಿಮನ್ಯುವಿನ ಪರಾಕ್ರಮವನ್ನು ಮುಂದುಮಾಡಿಯೇ ಇವನನ್ನು ಹಿಂದಕ್ಕೆಳೆಯುತ್ತೇನೆ ಎಂದುಕೊAಡೆ.“ಸುಭದ್ರೆಗೆ ನನ್ನಿಂದ ಜನಿಸಿದವ ಅಭಿಮನ್ಯು. ಕುರುಕ್ಷೇತ್ರ ಯುದ್ಧವದು ನಡೆಯುತ್ತಿದ್ದಾಗ ಏಕಾಂಗಿಯಾಗಿ ಚಕ್ರವ್ಯೂಹದ ಒಳಹೊಕ್ಕ. ಯುದ್ಧದ ಸಹವಾಸವಿದು ನಿನಗೆ ಬೇಡ ಎಂಬ ಧರ್ಮರಾಯನ ಮಾತಿಗೂ ಕಿವಿಗೊಡಲಿಲ್ಲ. ಅಂತಹ ಪರಾಕ್ರಮಿಯಾಗಿದ್ದ ಅವನು. ಶತ್ರುಸೇನೆಯನ್ನು ಪುಡಿಗಟ್ಟಿ ವೀರಮರಣವನ್ನು ಹೊಂದಿದ. ಅಂತಹ ಸಮರ್ಥನನ್ನು ನನ್ನ ಮಗ ಎಂದು ಒಪ್ಪಿಕೊಳ್ಳುತ್ತೇನೆ. ಅದುಬಿಟ್ಟು ನಿನ್ನಂಥ ಹೇಡಿಯನ್ನು ಮಗನೆಂದು ಸ್ವೀಕರಿಸಲಾದೀತೇ!” ಎಂದು ಚುಚ್ಚಿದೆ.ಸಂತಸದಿAದ, ತುಂಬು ಆನಂದದಿAದ ನನ್ನ ಬಳಿಗೆ ಬಂದಿದ್ದವನು ಬಭ್ರುವಾಹನ. ಅವನ ಮೊಗದ ನಲಿವದು ಕಡಿಮೆಯಾಗುತ್ತಾ ಆಗುತ್ತಾ ನೋವಿನ ಛಾಯೆ ದಟ್ಟವಾಗತೊಡಗಿತ್ತು. ನನಗಿನ್ನೂ ಸಮಾಧಾನ ಆಗಿರಲಿಲ್ಲ.“ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ. ನರಿ ಹುಟ್ಟುವುದಿಲ್ಲ. ವೀರನೆಂದು ಜಗತ್ತು ಗುರುತಿಸುತ್ತದೆ, ಗೌರವಿಸುತ್ತದೆ ನನ್ನನ್ನು. ನನ್ನಂತಹ ಪರಾಕ್ರಮಿಗೆ ಮಗನಾಗಿ ನಿನ್ನಂತಹ ಕಡುಹೇಡಿ ಜನಿಸುವುದು ಸಾಧ್ಯವೇ! ಕದನಗೈಯ್ಯದೆ ಕುದುರೆಯನ್ನು ಬಿಟ್ಟುಕೊಡುವ ಮನಸ್ಸು ಮಾಡಿದೆಯೇಕೆ! ಸಾಹಸಿಗಳನ್ನು ಸೋಲಿಸುವ ಸಾಮರ್ಥ್ಯ ಇರುವ ವೀರರಿಗೆ ಸೇನೆ ಬೇಕು; ಛತ್ರ ಚಾಮರಗಳ ಸೊಗಸಿರಬೇಕು. ಆದರೆ ನಿನಗೆ ಚತುರಂಗ ಬಲವೇಕೆ! ಛತ್ರ ಚಾಮರಗಳು ಅದೇಕೆ! ಶತ್ರುಗಳನ್ನು ಕೊಲ್ಲಲು ನೆರವಾಗುವ ಆಯುಧಗಳಾದರೂ ಬೇಕೇ ನಿನಗೆ! ಜೀವದಾಸೆಯನ್ನು ಬಿಡು. ಹೋಗು” ಎಂದು ಹಂಗಿಸಿದೆ ಅವನನ್ನು.ಅವನ ತಾಯಿಯನ್ನು ಆಗ ಬೈದದ್ದು ಸಾಲದು ಎನಿಸಿತು. ಮತ್ತೆ ಬೈದೆ. “ನಿನ್ನ ಮಾತೆ ಚಿತ್ರಾಂಗದೆ ನರ್ತಕಿಯಾಗಿರಬೇಕು. ಯಾವುದೋ ಗಂಧರ್ವನಾಯಕನ ಮಗಳಾಗಿರಬೇಕು. ಅವಳು ನಟನೆಯಲ್ಲಿ ಪರಿಣತಿ ಪಡೆದವಳಿರಬೇಕು. ಇಲ್ಲವಾದರೆ ನೀನು ಈ ಬಗೆಯಲ್ಲಿ ಮಣಿಪುರವನ್ನು ಆಳುವ ಅರಸನ ನಟನೆಯನ್ನು ಮಾಡಲು ಸಾಧ್ಯವಿಲ್ಲ. ನಿನ್ನದಿದು ನಿಜ ರಾಜ ಪರಾಕ್ರಮವಲ್ಲ. ಶಕ್ತಿವಂತನ ನಟನೆಯಷ್ಟೇ ನಿನ್ನದು. ಬಹಳ ಪೌರುಷ ತೋರಿದ್ದೀಯ ಬಿಡು! ಕುದುರೆಯನ್ನು ತಡೆದ ಹೋರಾಡಿದ ಅರಸರೆಲ್ಲಾ ಇಲ್ಲಿಯೇ ಇದ್ದಾರೆ. ಅವರ ಮುಂದೆ ಹೋಗು” ಎಂದು ಕುಹಕದ ನುಡಿಯನ್ನಾಡಿದೆ.ನನ್ನ ಬಿರುಸಿನ ನುಡಿಗೆ ಕನಲಿದ ಕಳ್ಳಸುತ ಬಭ್ರುವಾಹನ. ಸುಬುದ್ಧಿಯಲ್ಲಿ ತನ್ನ ದುಃಖವನ್ನು ತೋಡಿಕೊಂಡ. ನನ್ನ ಬಾಯಿಯಿಂದ ಹೊರಬಿದ್ದ ಪ್ರತಿಯೊಂದು ಅಕ್ಷರಗಳೂ ಬತ್ತಳಿಕೆಯಿಂದ ಹೊರಬಂದ ಬಾಣಗಳಂತೆ ಅವನನ್ನು ನೋಯಿಸಿದ್ದವು. ಅವನನ್ನು ಮಾತ್ರವೇ ಬೈದಿದ್ದರೆ ಸಹಿಸಿಕೊಳ್ಳುತ್ತಿದ್ದನೋ ಏನೋ, ಅವನ ತಾಯಿಯನ್ನು ತೆಗಳಿದ್ದನ್ನು ಸಹಿಸಿಕೊಳ್ಳುವುದಕ್ಕಾಗಲಿಲ್ಲ ಅವನಿಗೆ.“ನನ್ನ ತಾಯಿಯನ್ನೇ ಬೈದೆಯಲ್ಲಾ! ನಿನ್ನ ತಲೆಯನ್ನು ಉರುಳಿಸದೆ ಬಿಡುವವನು ನಾನಲ್ಲ. ಇದಂತೂ ನಿಜ” ಎಂದು ಪ್ರತಿಜ್ಞೆಗೈದವನು ತನ್ನವರ ಜೊತೆಗೆ ಅಲ್ಲಿಂದ ಹೊರಟುಹೋದ. ನನಗೆ ಮರಳಿಸಲೆಂದು ಅವನು ತಂದಿದ್ದ ಕುದುರೆಯದು ಮತ್ತೆ ಮರಳಿ ಅವನ ಲಾಯವನ್ನು ಸೇರಿಕೊಂಡಿತು.ನನ್ನವರ ಜೊತೆಗೆ ಶಿಬಿರಕ್ಕೆ ಮರಳಿದ ನನ್ನೊಳಗೆ ಬಭ್ರುವಾಹನ ನುಡಿಯ ನರ್ತನ. ಅವನು ಹೇಳಿದ್ದ ಮಾತದು ನಿಜವಿರಬಹುದೇ! ಎಂಬ ಯೋಚನೆ ಮತ್ತೆ ಮತ್ತೆ ಕಾಡಿತು. ಬಭ್ರುವಾಹನ ನನ್ನೊಡನೆ ಯುದ್ಧ ಹೂಡದೆ ಇನ್ನು ಸುಮ್ಮನಿರುವವಂತೂ ಅಲ್ಲ ಎನ್ನುವುದು ದೃಢವಾಗಿತ್ತು. ಅವನು ನನ್ನ ಮಗನೇ ಆಗಿದ್ದರೆ ನನ್ನೊಂದಿಗಿನ ಅವನ ಯುದ್ಧ ಹಿಂದೆ ತ್ರೇತಾಯುಗದಲ್ಲಿ ಲವಕುಶರು ಶ್ರೀರಾಮನ ಜೊತೆಗೆ ಹೋರಾಡಿದಂತಿರುತ್ತದೆ ಎನಿಸಿತು. ನನ್ನೊಳಗೀಗ ಶ್ರೀರಾಮ ಕಥನದ ಹಿರಿದಕ್ಷರಗಳು ಮೂಡತೊಡಗಿದವು… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-34 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ರಣವೀರನಾಗಬೇಕಾದ ಮಣಿಪುರದರಸ ಮಣಿದ ನನಗೆ ‘ಮಣಿಪುರದರಸು ಬಭ್ರುವಾಹನ ನಿಮ್ಮ ಯಜ್ಞಾಶ್ವವನ್ನು ಕಟ್ಟಿಹಾಕಿದ್ದಾನೆ. ಬಿಡಿಸಿಕೊಂಡುಹೋಗುವ ಸಾಮರ್ಥ್ಯವಿದ್ದರೆ ಯುದ್ಧರಂಗದಲ್ಲಿ ಪರಾಕ್ರಮ ತೋರುವವರಾಗಬೇಕು’ ಎಂಬ ಸಂದೇಶವದು ನಮ್ಮನ್ನು ತಲುಪಿತು. ಅದಾಗಲೇ ಸೂರ್ಯ ಅಸ್ತಂಗತನಾಗಿದ್ದ. ಆ ದಿನ ಯುದ್ಧ ನಡೆಯುವುದು ಸಾಧ್ಯವಿರಲಿಲ್ಲ. ಇನ್ನೇನಿದ್ದರೂ ಮರುದಿನವಷ್ಟೇ ಕದನಕೋಲಾಹಲ ಆರಂಭ.ನನ್ನ ಆಪ್ತರ ಜೊತೆ ಮರುದಿನದ ಯುದ್ಧತಂತ್ರಗಳನ್ನು ಚರ್ಚಿಸಿದೆ. ಸಮರ್ಥನೆನಿಸಿಕೊಂಡ ಬಭ್ರುವಾಹನನನ್ನು ಹೀನಾಯವಾಗಿ ಸೋಲಿಸಿದರೆ ನನ್ನ ವಿಜಯಮಾಲೆಗೆ ಹೊಸದೊಂದು ಕುಸುಮದ ಆಗಮನವದು ಖಚಿತ ಎನಿಸಿತು. ಬಭ್ರುವಾಹನನ ಸ್ಮರಣೆಯಲ್ಲಿಯೇ ಇರುಳು ಕಳೆಯಿತು.ಬೆಳಕು ಮೂಡಿತು. ನಿತ್ಯಕರ್ಮಗಳನ್ನು ಪೂರೈಸಿದೆ. ಜಪತಪಾದಿಗಳನ್ನು ಮುಗಿಸಿದೆ. ಕೃಷ್ಣ ಪಾದಪದ್ಮಗಳನ್ನು ನೆನೆದೆ. ನಮ್ಮ ಪಾಳಯದ ವೀರರೆಲ್ಲರನ್ನೂ ಕರೆಸಿದೆ. ಅವರ ಜೊತೆಗೆ ಯುದ್ಧರಂಗಕ್ಕೆ ಹೊರಟೆ.ಅನುಸರಿಸುತ್ತಿತ್ತು ಅನುಸಾಲ್ವಕನ ಸೇನೆ ನನ್ನನ್ನು. ಯುಕ್ತಿಯ ಯಾದವ ಚತುರಂಗವದು ಜೊತೆಗಿತ್ತು. ಒಡನೆಯೇ ಬಂತು ವೃಷಕೇತುವಿನ ವ್ಯಗ್ರಸೇನೆ. ಯುದ್ಧಚತುರ ಯೌವನಾಶ್ವನ ದಂಡು ಹಿಂದೆಯೇ ಇತ್ತು. ಹಂಸಧ್ವಜನ ಹೋರಾಟದ ಪಡೆಯದು ಮುನ್ನುಗ್ಗುತ್ತಿತ್ತು. ಘನವಾದ್ಯಗಳ ಧ್ವನಿಯದು ಮೊಳಗಿರಲು ನಾವೆಲ್ಲರೂ ಬಂದುಸೇರಿದೆವು ರಣರಂಗವನ್ನು.ನಾನು ಮುಂಚೂಣಿಯಲ್ಲಿದ್ದೆ. ಬಭ್ರುವಾಹನನ ಆಗಮನಕ್ಕಾಗಿ ನನ್ನ ಕಣ್ಣು ಕಾತರಿಸುತ್ತಿತ್ತು. ಅಪಾರ ಜನಸಮೂಹದೊಂದಿಗೆ ಮಣಿಪುರದೊಡೆಯ ಬರುತ್ತಿರುವುದು ಕಂಡಿತು. ನೋಡಿದೆ! ಸರಿಯಾಗಿ ಇನ್ನೊಮ್ಮೆ ನೋಡಿದೆ! ಯುದ್ಧೋನ್ಮುಖವಾಗಿ ಬರುತ್ತಿರುವ ದಂಡು ಅದಲ್ಲ ಎಂದು ತೋರಿತು ನನಗೆ.ಘನವಾದ್ಯದ ಮೊರೆತವಿರಲಿಲ್ಲ. ಕಾಳಗದ ಆರ್ಭಟವದು ಅಲ್ಲಿರಲಿಲ್ಲ. ಶುಭಸೂಚಕವಾದ ಇಂಪು ವಾದನಗಳ ಧ್ವನಿಯದು ಕೇಳಿಬರುತ್ತಿತ್ತು. ಕಳಶ, ಕನ್ನಡಿಗಳನ್ನು ಹಿಡಿದು ಅಲಂಕೃತರಾಗಿ ಮಂದಗಮನೆಯರಾಗಿ ಸಾಗಿಬರುತ್ತಿದ್ದರು ಲಲಿತಾಂಗಿಯರು. ಬ್ರಾಹ್ಮಣರಿದ್ದರು ಆ ಮೆರವಣಿಗೆಯಲ್ಲಿ, ವೇದಮಂತ್ರಗಳನ್ನು ಪಠಿಸುತ್ತಾ. ಈ ಬಗೆಯಲ್ಲಿ ಯುದ್ಧಕ್ಕೆ ಆಗಮಿಸುವುದೂ ಇದೆಯೇ! ಎಂದು ಅಚ್ಚರಿಯಾಯಿತು ನನಗೆ.ಮೆರವಣಿಗೆಯ ಮೊಟ್ಟಮೊದಲಲ್ಲಿದ್ದ ಬಭ್ರುವಾಹನ. ಹತ್ತಿರ ಬಂದAತೆಲ್ಲಾ ಅವನ ರೂಪವದು ಸ್ಪಷ್ಟವಾಯಿತು. ಒಂದಷ್ಟು ವರ್ಷಗಳಿಗೆ ಮೊದಲು ನಾನು ಹೇಗಿದ್ದೆನೋ ಹಾಗೆಯೇ ಇದ್ದಾನೆ.ನೇರವಾಗಿ ಬಂದ ನನ್ನೆಡೆಗೆ, ನಗುವನ್ನು ಸೂಸುತ್ತಾ. ಕದನ ಭಾವವದು ಅವನ ಮುಖದಲ್ಲಿ ಎಳ್ಳಷ್ಟೂ ಕಾಣಿಸಲಿಲ್ಲ. ನನಗೆ ತೀರಾ ಸನಿಹದವನಾಗಿ ನಿಂತ, ಆನಂದದಿAದ ನನ್ನ ಮೊಗವನ್ನು ನಿಟ್ಟಿಸುತ. ಒಡನೆಯೇ ತನ್ನ ಶಿರದಲ್ಲಿ ಶೋಭಿಸುತ್ತಿದ್ದ ಕಿರೀಟವನ್ನು ತೆಗೆದ. ನನ್ನ ಪಾದಗಳ ಬಳಿಯಿಟ್ಟ. ಅದು ಶರಣಾಗತಿಯ ಸಂಕೇತ. ಅಚ್ಚರಿಯಾಯಿತು ನನಗೆ. ಯುದ್ಧಕ್ಕೂ ಮೊದಲೇ ಶರಣು ಬಂದನೇ ಈತ! ಎನಿಸಿತು. ಮುಂದೇನು ಮಾಡಲಿದ್ದಾನೋ ಎಂಬAತೆ ನೋಡಿದೆ. ಅನರ್ಘ್ಯ ರತ್ನಗಳನ್ನು ನನ್ನ ಪಾದಮೂಲಕ್ಕೆ ಸುರಿದ. ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ಹಾಗೆಯೇ ಸಾಷ್ಟಾಂಗ ಪ್ರಣಾಮವನ್ನೇ ಮಾಡಿದ, ನೆಲದ ಮೇಲೆ ಒರಗಿ.ತಕ್ಷಣವೇ ಅಲ್ಲಿ ನೆರೆದಿದ್ದ ಮಣಿಪುರದ ಜನರು, ಹೆಂಗಳೆಯರು ನನ್ನ ಮೇಲೆ ಮುತ್ತಿನ ಮಳೆಗರೆದರು. ಬಗೆಬಗೆಯ ಕಾಣಿಕೆಗಳನ್ನು ನನಗಿತ್ತರು ಅಲ್ಲಿಯ ಸಚಿವರು. ಪರಾಕ್ರಮದ ಮಾತು, ಹರಿತ ಬಾಣಗಳ ಪ್ರಯೋಗ, ಹೀಗಳೆವ ಹೀನನನುಡಿ ಇವುಗಳನ್ನೆಲ್ಲಾ ನಿರೀಕ್ಷಿಸಿ ಹೋಗಿದ್ದ ನಾನು ಬಭ್ರುವಾಹನನ ವಿನಯಶೀಲತೆ, ಅಲ್ಲಿನ ಜನರ ಮುತ್ತಿನ ಮಳೆ, ಅಪೂರ್ವ ಕಾಣಿಕೆಗಳು ಇದನ್ನೆಲ್ಲಾ ಕಂಡು ವಿಸ್ಮಯಚಕಿತನಾದೆ. ನನ್ನ ಜೊತೆಗಿದ್ದ ನನ್ನ ಆಪ್ತರೂ ಸಹ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿದ್ದರು. ಕೇಳಿದೆ ಬಭ್ರುವಾಹನನಲ್ಲಿ, “ಏನಿದೆಲ್ಲಾ?! ಯಾಕೆ ಈ ಪರಿಯ ವಿನಯಶೀಲತೆ?!”ಒಡನೆಯೇ ಅವನು ನನ್ನನ್ನು ‘ತಂದೆ’ ಎಂದು ಸಂಭೋದಿಸಿದ. ನನ್ನ ಕಣ್ಣುಗಳರಳಿದವು, ಚಕಿತತೆಯಿಂದ. “ನಾನು ನಿಮ್ಮ ಮಗ. ನೀವಂದು ತೀರ್ಥಯಾತ್ರೆಗೆಂದು ಇಲ್ಲಿಗೆ ಬಂದಾಗ ನಿಮ್ಮಿಂದ ಜನಿಸಿದವನು ನಾನು. ನನ್ನ ತಾಯಿ ಚಿತ್ರಾಂಗದೆ. ಪ್ರೀತಿಯಿಂದ ಸಲಹಿದವಳು ಉಲೂಪಿ. ನೀವೆನ್ನ ಜನಕ ಎಂಬ ಸತ್ಯವನ್ನು ಅರಿಯದೆಯೇ ಕಟ್ಟಿದೆ ಕುದುರೆಯನ್ನು. ಕ್ಷಮಿಸಬೇಕು ನಾ ಮಾಡಿದ ಈ ಬಗೆಯ ತಪ್ಪನ್ನು” ಎಂದವನು ತಪ್ಪು ಮಾಡಿ ಸಿಕ್ಕಿಬಿದ್ದ ಎಳೆಮಗುವಿನಂತೆ ಕಾಲಿಗೆ ಬಿದ್ದ.ನಾನು ಏನೊಂದು ನುಡಿಯನ್ನೂ ಆಡಲಿಲ್ಲ. ನನ್ನನ್ನೇ ನೋಡುತ್ತಿದ್ದರು ನನ್ನಾಪ್ತರು, ಆತ್ಮೀಯರು. ಇದಾವ ಹೊಸ ಬಾಂಧವ್ಯವಿದು ಬಂದಪ್ಪಿದೆ ಈ ಅರ್ಜುನನನ್ನು ಎಂಬ ಭಾವವಿತ್ತು ಅವರ ಆ ಕಣ್ಣೋಟದಲ್ಲಿ. ಬಭ್ರುವಾಹನ ನನ್ನ ಮಗ ಎನ್ನುವುದನ್ನು ಸಂಪೂರ್ಣವಾಗಿ ನಂಬಿದAತಿತ್ತು ಅವರ ಮಾತುಗಳು.“ನಿನ್ನ ಮಗನಾದ ಈ ಬಭ್ರುವಾಹನ ಮಹಾ ಪರಾಕ್ರಮಿ. ವೈಭವಯುತನಾಗಿದ್ದಾನೆ. ಹೊಗಳಿಕೆಗೆ ಅರ್ಹನೆನಿಸಿಕೊಂಡಿದ್ದಾನೆ. ನಿನ್ನನ್ನೇ ಹೋಲುತ್ತಾನೆ ರೂಪದಲ್ಲಿ. ಪಾದವನ್ನಪ್ಪಿರುವ ಈತನನ್ನು ಕ್ಷಮಿಸದೆಯೇ ಸುಮ್ಮನೆ ಏಕೆ ನಿಂತೆ?! ಮನ್ನಿಸು ಅವನನ್ನು” ಎಂದರು ಅವರೆಲ್ಲರೂ.ಹೀಗೆ ಬಭ್ರುವಾಹನ ನಡೆದುಕೊಳ್ಳುವುದರ ಹಿಂದೆ ಒಂದು ಬಲವಾದ ಕಾರಣವಿತ್ತು. ಹಿಂದಿನ ದಿನ ನಮ್ಮ ಕುದುರೆಯನ್ನು ಕಟ್ಟಿಸಿದ್ದ ಆತ ನಮ್ಮೆದುರಿನ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದ. ಈ ಸಮಯದಲ್ಲಿಯೇ ಅವನ ತಾಯಿಗೆ ಈ ವಿಷಯ ಗೊತ್ತಾಯಿತಂತೆ. ತಕ್ಷಣವೇ ಅವನ ಬಳಿಹೋಗಿ, “ಅರ್ಜುನ ನಿನ್ನ ತಂದೆ. ಅವನ ಕುದುರೆಯನ್ನು ಕಟ್ಟಿರುವುದು ಸರಿಯಲ್ಲ” ಎಂದಳAತೆ. ಈ ವಿಚಾರವನ್ನು ಸುಬುದ್ಧಿಯ ಜೊತೆಗೆ ಚರ್ಚಿಸಿದನಂತೆ ಬಭ್ರುವಾಹನ. “ತಂದೆಯೆAದು ತಿಳಿಯದೇ ಇದ್ದಾಗ ಕುದುರೆಯನ್ನು ಕಟ್ಟಿಸಿದವ ನೀನು. ಈಗ ನಿಜ ವಿಚಾರ ತಿಳಿದ ಬಳಿಕವೂ ಹಾಗೆಯೇ ನಡೆದುಕೊಳ್ಳುವುದು ಉಚಿತವಲ್ಲ” ಎಂಬ ಸಲಹೆಯನ್ನು ನೀಡಿದನಂತೆ ಸುಬುದ್ಧಿ. ಈ ಕಾರಣಕ್ಕೇ ಬಭ್ರುವಾಹನ ಯುದ್ಧಚಂತನೆಯನ್ನು ತೊರೆದು, ಶರಣಾಗತನಾಗಿ ನನ್ನೆದುರಿಗೆ ಬಂದದ್ದು.ನನಗಂತೂ ಬಭ್ರುವಾಹನ ನುಡಿದದ್ದೆಲ್ಲವೂ ಕಟ್ಟುಕಥೆ ಎಂದೇ ತೋರಿತು. ನನ್ನನ್ನು ಎದುರಿಸಲಾರದ ಅಧೈರ್ಯಕ್ಕೆ ಒಳಗಾದವನು ಸುಳ್ಳು ಹೇಳುತ್ತಿದ್ದಾನೆ ಎನಿಸಿತು. ಹೀಗಿದ್ದಾಗಲೇ ನಮ್ಮವರಾಡಿದ “ಕ್ಷಮಿಸು ಮಗನನ್ನು” ಎಂಬ ಮಾತು ನನ್ನನ್ನು ಕೆರಳಿಸಿತು. ಉಗ್ರನೋಟ ಬೀರಿದೆ ಬಭ್ರುವಾಹನನೆಡೆಗೆ… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮದನಾರಿಯಂತಿತ್ತು ಮಣಿಪುರ ಮದನಾರಿಯಂತಿತ್ತು ಮಣಿಪುರ ಮಣಿಪುರವನ್ನು ನಾವು ಸೇರಿದ ವೇಳೆಗೆ ಮಳೆಯ ಮಣಿಗಳು ಗಗನಮುಖದಿಂದ ಧರಣಿವದನದೆಡೆಗೆ ಬೀಳುತ್ತಿದ್ದವು. ವರ್ಷ ಕಾಲ ಆರಂಭವಾಗಿತ್ತು. ಮಳೆಯ ನೀರಿಗಾಗಿಯೇ ಕಾದುಕುಳಿತಿದ್ದ ಚಾತಕ ಪಕ್ಷಿಗಳು ಹನಿಹನಿಗಳನ್ನು ಕುಡಿಯುತ್ತಿದ್ದ ಪರಿಯನ್ನು ಕಂಡು ಅಸೂಯೆಯನ್ನು ತಾಳದಾದವು ಹಂಸಗಳು. ತಮಗೆ ಸಲ್ಲಬೇಕಾದ ವರ್ಷಧಾರೆಯನ್ನು ಭೂಮಿ ಸೇರುವುದಕ್ಕೂ ಮೊದಲೇ ಕುಡಿದು ಮುಗಿಸುತ್ತಿವೆ ಚಾತಕ ಪಕ್ಷಿಗಳು ಎಂಬ ಮತ್ಸರ ಹಂಸಗಳಲ್ಲಿ. ಭರದಿಂದ ಓಡುತ್ತಿದ್ದವು ಆಚೆಗೆ.ಮಣಿಪುರದ ಸಮೃದ್ಧತೆಯನ್ನೇ ಕಾಣುತ್ತಾ ಬರುತ್ತಿದ್ದೆ ನಾನು. ಚಿನ್ನ ಬೆಳ್ಳಿಗಳ ಕೋಟೆಗಳಿದ್ದವು. ಮಾಣಿಕ್ಯ ವಜ್ರವೈಢೂರ್ಯಗಳಿಂದ ಮಾಡಲ್ಪಟ್ಟ ಕೊತ್ತಳಗಳ ಸಾಲುಗಳಿದ್ದವು. ಕೆಂಪು ಹವಳದ ತೋರಣಗಳಿದ್ದವು. ಮುತ್ತು ರತ್ನಗಳಿಂದ ನಿರ್ಮಿಸಲಾದ ಗೋಪುರಗಳಿದ್ದವು. ಚಿತ್ರಚಿತ್ತಾರಗಳಿಂದ ಶೋಭಿಸುತ್ತಿದ್ದವು ಅಲ್ಲಿಯ ದ್ವಾರಗಳು. ಹಗಲಿಗೆ ಹೆದರಿ ಚದುರಿಹೋಗಿದ್ದ ಬೆಳದಿಂಗಳು ಮಣಿಪುರವನ್ನು ಹೊಕ್ಕು, ಮುತ್ತಿಗೆ ಹಾಕಿ, ಯುದ್ಧಕ್ಕಾಗಿ ಕಾದು ಕುಳಿತಿರಲು ಅದರ ಜೊತೆಗಿನ ಯುದ್ಧಕ್ಕಾಗಿ ಇಲ್ಲಿಗೆ ಬಂದು ಇಡಿಯ ನಗರವನ್ನು ವಶಪಡಿಸಿಕೊಂಡಿದೆ ಎಳೆಬಿಸಿಲು ಎಂಬAತೆ ತೋರುತ್ತಿತ್ತು ಮಣಿಪುರದಲ್ಲಿದ್ದ ಸೌಧಗಳು, ಕೋಟೆಗಳು. ಬೆಳದಿಂಗಳ ಕಾಂತಿಯನ್ನು ಎತ್ತರೆತ್ತರದ ಸೌಧಗಳಲ್ಲಿ ಕಾಣಬಹುದಾಗಿತ್ತು. ಹೊಚ್ಚಹೊಸತಾದ ಚಿನ್ನದ ಕೋಟೆಗಳ ಹೊಳಪದು ಎಳೆಬಿಸಿಲಿನ ನೆನಪನ್ನು ಮೂಡಿಸುವಂತಿತ್ತು.ಶ್ರೇಷ್ಠವಾದ ಗಿರಿಶಿಖರಗಳನ್ನು ಮೀರಿಸುವಂತಿದ್ದ ಅಲ್ಲಿಯ ಚಿನ್ನದ ಗೋಪುರಗಳು ಹೆಣ್ಣಿನ ದಪ್ಪ ಮೊಲೆಯಂತೆ ತೋರಿದವು, ನನ್ನ ಕಣ್ಣಿಗೆ. ಲಾವಣ್ಯವತಿಯ ಬಾಹುಬಳ್ಳಿಯಂತೆ ಕಾಣುತ್ತಿತ್ತು ಅಲ್ಲಿಯ ರಾಜಮಾರ್ಗ. ಕಮಲಮುಖಿಯ ಸುಂದರ ವದನದಂತಿತ್ತು ಅರಮನೆ. ಮೇಲೆ ಹಾರಾಡುತ್ತಿದ್ದ ಧ್ವಜಗಳು ಮುಗುದೆಯ ಮುಂಗುರುಳನ್ನು ಜ್ಞಾಪಿಸುವಂತಿದ್ದವು. ಮದನಾರಿಯ ಮಣಿಹಾರವಾಗಿತ್ತು ಕಟ್ಟಿದ್ದ ತೋರಣಗಳು. ಕೋಟೆಗಳವು ಹೆಣ್ಣಿನ ಮೈಯ್ಯಲ್ಲಿ ಶೋಭಿಸುವ ಉಡುಗೆಯಿದ್ದ ಹಾಗೆ. ನಗರದ ಗಡಿಯದು ಸುಂದರಿಯ ಸೊಂಟವನ್ನಲAಕರಿಸುವ ಡಾಬು. ಅಲ್ಲಿನ ಶ್ವೇತವರ್ಣದ ಗೃಹಗಳು ಹೆಣ್ಣಿನ ದಂತಗಳು. ಮಣಿಪುರ ನಗರವದು ಚೆಲುವ ನಾರಿಯಂದದಿ ಗೋಚರವಾಯಿತು ನನ್ನ ದೃಷ್ಟಿಗೆ.ಅತೀವ ಜನಸಮೂಹವಿತ್ತು ನಗರದೊಳಗೆ. ಗುಂಪುಗುAಪಾಗಿ ನಗರವನ್ನು ಪ್ರವೇಶಿಸುವವರಿದ್ದರು. ಅಲ್ಲಿಂದ ತಂಡೋಪತAಡವಾಗಿ ಹೊರಹೋಗುವವರಿದ್ದರು. ಆನೆಗಳು, ಕುದುರೆಗಳು ಎಲ್ಲೆಡೆಯೂ ಕಾಣಸಿಗುತ್ತಿದ್ದವು. ಪುರಜನರು ತೋರುತ್ತಿದ್ದರು ದೆಸೆದೆಸೆಯಲ್ಲಿ. ಮಣಿಪುರದ ಅರಸನಾಗಿದ್ದವ ಬಭ್ರುವಾಹನ. ಇವನಿಗೆ ಅನುದಿನವೂ ಸಾವಿರ ಬಂಡಿಗಳಷ್ಟು ಧನಕನಕಗಳು ಸಲ್ಲುತ್ತಿದ್ದವು ರಾಜರ ಕಡೆಯಿಂದ. ನನ್ನ ಜೊತೆಯಲ್ಲಿದ್ದ ಹಂಸಧ್ವಜ ಅರಸನೂ ಸಹ ಬಭ್ರುವಾಹನನಿಗೆ ತಪ್ಪದೆಯೇ ಕಪ್ಪಕಾಣಿಕೆಗಳನ್ನು ಸಲ್ಲಿಸುವವನಾಗಿದ್ದ.“ಅಧಿಕ ಸೊಗಸಿನಿಂದ ಕಂಗೊಳಿಸುತ್ತಿದೆ ಈ ನಗರ. ಇದನ್ನಾಳುತ್ತಿರುವ ಅರಸ ಯಾರು? ಅವನು ಕುದುರೆಯನ್ನು ಕಟ್ಟಿ, ನಮ್ಮೊಡನೆ ಯುದ್ಧ ಹೂಡುವ ಮನಸ್ಸು ಮಾಡಿಯಾನೇ?” ಎಂದು ಪ್ರಶ್ನಿಸಿದೆ ಹಂಸಧ್ವಜನಲ್ಲಿ.ಮಣಿಪುರದರಸನ ಸಾಮರ್ಥ್ಯವನ್ನು ಬಣ್ಣಿಸತೊಡಗಿದ ಚಂಪಕಾ ನಗರಿಯ ದೊರೆ. “ಮಣಿಪುರವೆಂಬ ಈ ನಗರವನ್ನು ಪಾಲಿಸುತ್ತಿರುವವನು ಬಭ್ರುವಾಹನ ಎಂಬ ರಾಜ. ಸಮರ್ಥ ದೊರೆ ಎಂಬ ಪ್ರಸಿದ್ಧಿ ಪಡೆದವನವನು. ದೊರೆಗಳಲ್ಲಿ ಶ್ರೇಷ್ಠನೆನಿಸಿಕೊಂಡವನು. ಇವನ ಸಾಮರ್ಥ್ಯ ಸಾಧನೆಗಳನ್ನು ಒಪ್ಪಿಕೊಂಡ ಅರಸರು ಪ್ರತೀದಿನವೂ ತಪ್ಪದೆ ಸಾವಿರ ಬಂಡಿ ಕನಕವನ್ನು ತಂದೊಪ್ಪಿಸುತ್ತಾರೆ ಇವನಿಗೆ. ಒಂದುವೇಳೆ ಲೋಪವಾದರೆ ಶಿಕ್ಷೆಯಿತ್ತಾನು ಎಂಬ ಭೀತಿ ಎಲ್ಲರಲ್ಲಿಯೂ ಇದೆ” ಎಂದ ಹಂಸಧ್ವಜ, ಬಭ್ರುವಾಹನನ ಸಚಿವನ ಬಗೆಗೆ ಹೇಳತೊಡಗಿದ.“ಸುಬುದ್ಧಿಯೆಂಬ ಸಚಿವನಿದ್ದಾನೆ ಇವನಿಗೆ. ಈ ನಗರವನ್ನು ನಿಜಾರ್ಥದಲ್ಲಿ ಪಾಲಿಸುತ್ತಿರುವವನು ಅವನೇ. ಧರ್ಮಕ್ಕೆ ಒಂದಿಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾನೆ. ಪ್ರಜೆಗಳ ಬಗೆಗೆ ಅನುರಾಗವನ್ನು ಇಟ್ಟುಕೊಂಡಿದ್ದಾನೆ. ಪುರದ ಜನರಿಗೆ ಸೌಖ್ಯ ನೀಡುವವರಾಗಿ ಗುರುತಿಸಿಕೊಂಡಿದ್ದಾರೆ ಈ ರಾಜ ಸಚಿವರು” ಎಂದ ಹಂಸಧ್ವಜನಿಗೆ ಬಭ್ರುವಾಹನನ ಸೇನೆಯ ಸಾಮರ್ಥ್ಯ ತಿಳಿದಿತ್ತು.ಒಂದೇ ಕಿವಿಯಿರುವ ಕಪ್ಪನೆಯ ಕುದುರೆಗಳು, ಶುದ್ಧ ಶ್ವೇತವರ್ಣದ ಆನೆಗಳು, ಚಿನ್ನದ ರಥಗಳು ಅಗಣಿತ ಸಂಖ್ಯೆಯಲ್ಲಿದ್ದವು ಮಣಿಪುರದಲ್ಲಿ. ಅವುಗಳ ಸಂಖ್ಯೆ ಅದೆಷ್ಟು ಎನ್ನುವುದು ಬಭ್ರುವಾಹನನ ಕರಣಿಕರಿಗೇ ತಿಳಿದಿರಲಿಲ್ಲ. ಉಳಿದ ಸಾಮಾನ್ಯ ಕುದುರೆ, ಆನೆ, ರಥಗಳ ಲೆಕ್ಕಾಚಾರವದು ಸುಲಭವಾಗಿ ಸಿಗುವಂತಿರಲಿಲ್ಲ. ಪರಾಕ್ರಮಶಾಲಿಯಾದ ಅರಸನಿವನು ಎನ್ನುವುದು ನನಗೆ ದೃಢವಾಯಿತು.ಮಣಿಪುರದಲ್ಲಿದ್ದ ಜನರೆಲ್ಲರೂ ಹರಿಭಕ್ತರಾಗಿದ್ದರು. ವೇದ ಶಾಸ್ತçಗಳನ್ನು ತಿಳಿದವರಾಗಿದ್ದರು. ಸತ್ಯವನ್ನೇ ನುಡಿಯುವ ವ್ರತವನ್ನು ಪಾಲಿಸುತ್ತಿದ್ದರು. ಕೋಪವನ್ನು ತೊರೆದವರಾಗಿದ್ದರು. ಅಹಿಂಸೆಯೆಡೆಗೆ ಮನಸ್ಸು ಮಾಡಿದ್ದರು. ತಮ್ಮನ್ನು ತಾವು ಚೆನ್ನಾಗಿ ಅರ್ಥಮಾಡಿಕೊಂಡವರಾಗಿದ್ದರು. ಕದನ ಸಮರ್ಥರಾಗಿದ್ದರು. ದಾನದ ಗುಣವಿತ್ತು. ಅಸೂಯೆ ಇದ್ದವರಲ್ಲ. ಅಲ್ಲಿಯ ಸಕಲ ನಾರಿಯರು ಪತಿವ್ರತೆಯರೆನಿಸಿಕೊಂಡಿದ್ದರು. ಹೀಗೆ ಸರ್ವ ಸಜ್ಜನರನ್ನೇ ಒಳಗೊಂಡ ಈ ನಗರವನ್ನು ಶ್ರೀಮನ್ನಾರಾಯಣ ಎರಡನೇ ವೈಕುಂಠವಿದು ತನ್ನ ಪಾಲಿಗೆ ಎಂಬ ಮಮಕಾರದಿಂದ ಪೊರೆಯುತ್ತಿದ್ದ.“ಬಭ್ರುವಾಹನನೆಂಬ ಈ ಬಲುವೀರ ಕಟ್ಟದಿರುತ್ತಾನೆಯೇ ಯಜ್ಞಾಶ್ವವನ್ನು!” ಎಂದ ಹಂಸಧ್ವಜ. ಹೀಗೆ ಅವನು ನುಡಿದ ಕ್ಷಣದಲ್ಲಿಯೇ ಹದ್ದೊಂದು ಹಾರಿಬಂದು ನನ್ನ ಕಿರೀಟದ ತುದಿಯಲ್ಲಿ ಕಾಲೂರಿ ಕುಳಿತಿತು. ನನ್ನ ಗಮನಕ್ಕಿದು ಬಂದಿರಲಿಲ್ಲ. ನನ್ನ ಜೊತೆಗಿದ್ದ ವೀರರು ವಿವರಿಸಿದರು ಇದನ್ನು. ಸೋಲಿನ ಸೂಚನೆಯಿದು ಎಂದು ನುಡಿದರವರು ಆತಂಕದಿAದ.ಹೀಗೆ ಚಿಂತೆಯ ಕಾರ್ಮೋಡವೊಂದು ನಮ್ಮನ್ನು ಕವಿದ ಕ್ಷಣದಲ್ಲಿಯೇ ಬಭ್ರುವಾಹನ ಅವನ ಸೇವಕರನ್ನು ಅಟ್ಟಿ, ನಮ್ಮ ಕುದುರೆಯನ್ನು ಕೊಂಡೊಯ್ದು, ಕಟ್ಟಿಸಿಯೇಬಿಟ್ಟ. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-32 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಅಸುರರನ್ನು ಮಣಿಸಿದೆ ಅಂಜನಾಸುತನ ಬಲದಿಂದ ನಮ್ಮೆಡೆಗೆ ಮುನ್ನುಗ್ಗಿಬರುತ್ತಿದ್ದ ದೈತ್ಯಸೇನೆಯಲ್ಲಿ ಅಪರಿಮಿತ ಬಲದ ರಾಕ್ಷಸಿಯರೂ ಇದ್ದರು. ಯುದ್ಧಕ್ಕೆ ಸಿದ್ಧನಾಗಿ ನಿಂತಿದ್ದ ನನ್ನ ರಥದಲ್ಲಿದ್ದ ಧ್ವಜವದು ಅವರ ಕ್ರೂರದೃಷ್ಟಿಗೆ ಬಿತ್ತು. ನಾನು ಹನುಮಧ್ವಜಧಾರಿ. ನನ್ನ ರಥದ ಬಾವುಟದಲ್ಲಿದ್ದವನು ಆ ಶ್ರೀರಾಮನ ಪ್ರಿಯಭಂಟ ಹನುಮಂತ. ರಕ್ಕಸಿಸಮೂಹವದು ಅಳುಕಿತು ಮಾರುತಸುತನನ್ನು ಕಂಡೊಡನೆಯೇ. ಅಂದು ಸಾಗರ ಉಲ್ಲಂಘನದ ಆ ಸಮಯದಲ್ಲಿ ತನ್ನನ್ನು ನುಂಗಿದ ರಾಕ್ಷಸಿಯ ದೇಹ ಸೀಳಿದವನು ಆಂಜನೇಯ. ಲಂಕೆಗೆ ಹೋದ ಬಳಿಕ ಅಲ್ಲಿ ಎದುರಾದ ರಕ್ಕಸಿ ಪಡೆಗೆ ರಾಕ್ಷಸ ರೂಪ ತೋರಿದವನು ವಾಯುಪುತ್ರ. ಆ ಭೀಕರ ನೆನಪು ಮೂಡಿತು ನನ್ನನ್ನು ಎದುರಿಸಲು ಬಂದಿದ್ದ ರಾಕ್ಷಸಿಯರಿಗೆ.ಅಂದು ಲಂಕಿಣಿಯನ್ನು ಬಲವಾಗಿ ಒದೆದ ಬಲಶಾಲಿ ಹನುಮಂತ ಇಂದಿಲ್ಲಿಗೆ ಮತ್ತೆ ಬಂದಿದ್ದಾನೆ ಎಂಬ ಭ್ರಮೆಗೆ ಒಳಗಾದ ರಕ್ಕಸಿಯೊಬ್ಬಳು ದೂರದೂರಕ್ಕೆ ಓಡಿದಳು, ರಣದ ಆಸಕ್ತಿಯನ್ನೇ ತೊರೆದವಳಂತೆ, ಮರಣ ಭಯಕ್ಕೆ ಒಳಗಾದವಳಂತೆ.ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಗೆ ಬೆಂಕಿಯಿತ್ತ ಹನುಮ ಸಾಹಸ ನೆನಪಾಯಿತು ಇನ್ನೊಬ್ಬ ರಕ್ಕಸಿಗೆ. “ಮೊದಲೇನಿದ್ದರೂ ನನ್ನ ಮನೆಯನ್ನು ಉಳಿಸಿಕೊಳ್ಳುತ್ತೇನೆ. ಆಮೇಲೆ ಯುದ್ಧದ ಮಾತು” ಎಂದು ಬೊಬ್ಬೆ ಹೊಡೆದವಳು ತನ್ನ ಮನೆಗೆ ಓಡಿದಳು. ಮನೆಯೊಳಗಿದ್ದ ಸರಕನ್ನೆಲ್ಲಾ ಹೊರಗೆಸೆಯಲು ಶುರುಮಾಡಿದಳು.“ರಕ್ಕಸಿಯ ನೆರಳನ್ನು ಸಹಿಸುವುದಿಲ್ಲ ಈ ಕಪಿ” ಎಂದ ಇನ್ನೊಬ್ಬ ರಾಕ್ಷಸಿ ತನ್ನ ನೆರಳದು ಭೂಮಿಯ ಮೇಲೆ ಬೀಳದಂತಹ ತಾಣವನ್ನು ಹುಡುಕಿ ಅಲ್ಲಿ ಹೋಗಿ ನಿಂತಳು.ಹೀಗೆ ಯುದ್ಧಾಸಕ್ತರಾಗಿ ಬಂದ ರಕ್ಕಸಿಯರಿಗೆ ಭೀತಿ ಮೂಡಲು ನನ್ನ ಧ್ವಜದಲ್ಲಿದ್ದ ಹನುಮ ಕಾರಣನಾದ. ಹೀಗಿದ್ದಾಗಲೇ ಹನುಮನಿಗೆ ಹೆದರುವವಳು ತಾನಲ್ಲ ಎಂದು ಗತ್ತು ಗಾಂಭೀರ್ಯದಿAದ ಮುಂದೆ ಬಂದಳು ಒಬ್ಬ ರಕ್ಕಸಿ. ತನ್ನ ದೈತ್ಯ ಮೊಲೆಗಳಿಂದಲೇ ಶತ್ರು ಸೈನ್ಯವನ್ನು ಪುಡಿಗಟ್ಟುತ್ತೇನೆ ಎಂದು ಅಬ್ಬರಿಸಿದಳು. ಹಾಗೆ ಹೇಳಿದವಳು ಯೋಜನಸ್ತನಿಯೆಂಬ ರಾಕ್ಷಸಿ. ಅರ್ಜುನ ಸೇನೆಯನ್ನು ನಾಶಮಾಡಲು ನನ್ನ ಹೊಟ್ಟೆಯಿದು ಸಾಕು ಎಂದು ಆರ್ಭಟಿಸಿದಳು ಲಂಬೋದರಿ ಎಂಬ ನಿಶಾಚರಿ ದೈತ್ಯೆ. ಹೀಗೆ ಇವರಿಬ್ಬರೂ ಹೊಟ್ಟೆ, ಮೊಲೆಗಳನ್ನು ಮುಂದುಮಾಡಿಕೊAಡು, ಉಳಿದ ಅಸುರ ಪಡೆಯೊಡನೆ ನಮ್ಮ ಸೇನೆಯನ್ನು ನಾಶಪಡಿಸುವ ಉತ್ಸಾಹ ತೋರಿದರು.ಆಗಲೇ ಭೀಕರ ರೂಪದಲ್ಲಿ ಬಂದ ಭೀಷಣ ಮಹಾಸ್ತçಗಳ ಮಳೆಯನ್ನೇ ಕರೆದ, ನನ್ನ ಮೇಲೆ. ಬಗೆಬಗೆಯ ಮೃಗಗಳ ರೂಪವನ್ನು ತಾಳಿ ಬೆದರಿಸುವ ಯತ್ನ ಮಾಡಿದ. “ನನಗೆ ಜನ್ಮ ಕೊಟ್ಟವನಿಗೆ ಮರಣವನ್ನು ತಂದಿಟ್ಟವನು ನಿನ್ನ ಅಣ್ಣ ಭೀಮ. ನೀನೆಂತು ಪ್ರಾಣ ಉಳಿಸಿಕೊಳ್ಳುವೆಯೋ ನೋಡುತ್ತೇನೆ. ನಿನ್ನನ್ನು ಹಿಡಿದು ನರಮೇಧ ಯಾಗಕ್ಕೆ ಬಲಿಪಶುವಾಗಿಸದೆ ಬಿಡುವುದಿಲ್ಲ” ಎಂದು ಭೂಮಿ ನಡುಗುವಂತೆ ಬೊಬ್ಬಿರಿದ ಭೀಷಣ.ಅವನ ಭೀಕರ ಬೊಬ್ಬೆಯದು ನನ್ನಲ್ಲಿ ನಗು ಮೂಡಿಸಿತು. ನನ್ನ ರಕ್ಷೆಗಾಗಿ ಉಗ್ರವಾದ ಬಾಣವೊಂದನ್ನು ಹೂಡಿದೆ. ನನ್ನ ಒಂಟಿ ಬಾಣದ ಏಟಿಗೆ ಜಂಟಿ ಜಂಟಿಯಾಗಿ ತತ್ತರಿಸಿಹೋದರು ಅಸುರರು. ಒಂದರ ಹಿಂದೊAದರAತೆ ಶರಗಳನ್ನು ಪ್ರಯೋಗಿಸುತ್ತಲೇ ಹೋದೆ ಅಸುರರ ಮೇಲೆ.ಬಿರುಗಾಳಿ ಬೀಸಿದಾಗ ಮೋಡಗಳೆಲ್ಲಾ ಚದುರಿಹೋಗುವಂತೆ ದಿಕ್ಕುದಿಕ್ಕಿಗೆ ಹೋಗಿಬಿದ್ದರು ಅಸುರರು. ಕೆಲವರ ಅಂಗಾAಗಗಳು ಮುರಿದುಹೋದವು. ಕೈಕಾಲುಗಳನ್ನು ಕಳೆದುಕೊಂಡರು ಕೆಲವರು. ಕೆಲವರ ದೇಹದಲ್ಲಿ ನಾನು ಪ್ರಯೋಗಿಸಿದ ಬಾಣಗಳು ನೆಟ್ಟಿದ್ದವು. ವೇದನೆಗಳನ್ನು ತಾಳಲಾರದೆ ಕೆಲವರು ಪ್ರಾಣಬಿಟ್ಟರು. ಜೀವ ಉಳಿಸಿಕೊಳ್ಳುವುದಕ್ಕಾಗಿ ಗಿಡಮರಗಳ ಆಶ್ರಯ ಪಡೆದರು ಕೆಲವರು. ಯುದ್ಧರಂಗದಿAದಲೇ ಓಡಿಹೋಗಿ ಉಳಿದೆವು ತಾವು ಎಂದು ಬೀಗಿದರು ಕೆಲವರು.ಈಗ ನನಗೆ ನನ್ನ ಧ್ವಜದಲ್ಲಿ ಕುಳಿತಿದ್ದ ಹನುಮನ ನಿಜ ನೆರವು ದೊರಕಿತು. ಸ್ತನ, ಉದರಗಳಿಂದ ಸೈನಿಕರನ್ನು ಬಡಿಬಡಿದು ಕೊಲ್ಲುತ್ತಿದ್ದ ಯೋಜನಾಸ್ತನಿ, ಲಂಬೋದರಿಯರೆAಬ ರಕ್ಕಸಿಯರನ್ನು ಕಂಡು ಅಚ್ಚರಿಪಟ್ಟ ಅಂಜನಾಸುತ. ಹಿಂದಿನ ನೆನಪೆಲ್ಲವೂ ಬಂತು ಅವನಿಗೆ. ನಸುನಕ್ಕ. ತನ್ನ ಬಾಲವನ್ನು ಅಸುರರಿದ್ದ ದಿಕ್ಕುದಿಕ್ಕಿಗೆ ಬಡಿದ. ಹನುಮಂತನ ಬಾಲದ ಬಲವಾದ ಏಟಿಗೆ ಇನ್ನೂ ಶಕ್ತಿ ಮೂಡದ ಬಾಲರಂತಾಗಿಹೋದರು ರಕ್ಕಸರು. ಜೋರುಜೋರಾಗಿ ಚೀರುತ್ತಾ ಪ್ರಾಣ ಕಳೆದುಕೊಂಡರು. ಎಲ್ಲೆಡೆಯೂ ಅಸುರರ ಉಗ್ರರೂಪವನ್ನು ತೋರುತ್ತಿದ್ದ ರಣರಂಗವೀಗ ಜೀವಂತ ಅಸುರರಿಲ್ಲದೆಯೇ ಶೂನ್ಯವಾಗಿ ತೋರುತ್ತಿತ್ತು. ಅಸುರರನ್ನು ಕೊಲ್ಲುವ ಬಯಲಾಟದೆಡೆಗೆ ಮನಸ್ಸು ಮಾಡಿದ್ದ ಹನುಮಂತ ಈಗ ಅಸುರ ತಾಣವನ್ನು ಬಯಲು ಬಯಲಾಗಿಸಿದ್ದ.ತನ್ನವರನ್ನು ಕಳೆದುಕೊಂಡ ಭೀಷಣ ಭೀತಿಗೆ ಒಳಗಾದ. ತಾನು ಹೀಗೆಯೇ ಇದ್ದರೆ ತನ್ನ ಪ್ರಾಣವೂ ಉಳಿಯಲಾರದು ಎನ್ನುವುದು ದೃಢವಾಯಿತು ಅವನಿಗೆ. ಮಾಯಾವಿಯಾಗಿ ಕೈಚಳಕ ತೋರಿಸಲು ನಿರ್ಧಾರ ಮಾಡಿದ.ತಕ್ಷಣವೇ ಅಲ್ಲೊಂದು ಪುಣ್ಯಾಶ್ರಮ ಕಾಣಿಸಿಕೊಂಡಿತು. ಅಸುರ ರೂಪವನ್ನು ಕಳಚಿಕೊಂಡ ಭೀಷಣ ಮುನಿರೂಪದಲ್ಲಿ ಕಾಣಿಸಿಕೊಂಡ. ಅದೀಗ ಯುದ್ಧರಂಗವಾಗಿರಲಿಲ್ಲ. ಅಸುರ ಪಟ್ಟಣವಾಗಿರಲಿಲ್ಲ. ಎಲ್ಲೆಡೆಯೂ ಗಂಗಾನದಿಯ ನೀರಿನ ಹರಿವು. ಮುನಿಗಳ ಕುಟೀರಗಳು. ಯಜ್ಞಕುಂಡದಿದೆದ್ದ ಹೊಗೆ. ಹೂವಿನ ಗಿಡಗಳು. ಹಣ್ಣಿನ ಮರಗಳು. ಭೀಷಣನ ಭೀಕರತೆಯನ್ನು ಕಣ್ಣಾರೆ ಕಂಡಿದ್ದ ನನ್ನ ಕಣ್ಣಿಗೂ ಭ್ರಾಂತಿ ಮೂಡುವಂತಹ ವಾತಾವರಣವಲ್ಲಿ ನಿರ್ಮಾಣಗೊಂಡಿತ್ತು.ಮುನಿಯ ವೇಷದಲ್ಲಿ ನನ್ನೆದುರು ಬಂದ ಭೀಷಣ “ಅಸುರರನ್ನು ಕೊಲ್ಲುವುದು ಸರಿಯಲ್ಲ. ಹಿಂಸೆಯನ್ನು ಮಾಡದಿರು. ದೇವರ ಅರ್ಚನೆಯ ಮೂಲಕ ಸನ್ಮಾರ್ಗದಲ್ಲಿ ಸಾಗು” ಎಂದು ಕಪಟ ಬೋಧನೆ ಮಾಡಿದ.ತಕ್ಷಣವೇ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅವನ ಮೂಲರೂಪವೇ ಒದಗಿಬಂತು. ಮುನಿಯಾಗಿದ್ದವ ಮತ್ತೆ ಅಸುರನಾದ. ಒಡನೆಯೇ ಆಕ್ರಮಿಸಿ ಅವನ ಪಟ್ಟಣದಲ್ಲಿದ್ದ ಸಂಪತ್ತೆಲ್ಲವನ್ನೂ ಸೂರೆಗೊಂಡೆ. ಅದನ್ನು ಹಸ್ತಿನಾವತಿಗೆ ಕಳುಹಿಸಿಕೊಟ್ಟೆ. ಕುದುರೆಯ ಜೊತೆಗೆ ಮುಂದಕ್ಕೆ ಸಾಗಿದ ನಮ್ಮನ್ನು ಕರಬೀಸಿ ಕರೆಯುತ್ತಿತ್ತು ಮಣಿಪುರ… ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-31 ಅರ್ಜುನ ಉವಾಚ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅಸುರಾಂತಕ ಮಿತ್ರ ನಾನು ಅಸುರಪಟ್ಟಣವ ಸೇರಿದೆಆಲಿಸಿದೆ ಅಶರೀರವಾಣಿಯನ್ನು ಪರಿಪೂರ್ಣವಾಗಿ. “ಬಾಣವನ್ನು ಪ್ರಯೋಗಿಸದಿರು ಪಾರ್ಥ. ಆ ವನಿತೆಯ ಕೊಲೆಗೆ ಹೇಸದೆ ಶರವನ್ನು ತೊಡುವುದು ತರವಲ್ಲ. ಕೋಪವನ್ನು ಬಿಡು. ಪ್ರಮೀಳೆಯನ್ನು ವರಿಸು. ಮುಂದೆ ನಿನಗೆ ಒಳ್ಳೆಯದಾಗಲಿದೆ” ಎಂಬ ಧ್ವನಿಯದು ಕೇಳಿಬಂತು. ನನ್ನೊಬ್ಬನಿಗೇ ಕೇಳಿದ ಸ್ವರವಲ್ಲ. ಅಲ್ಲಿದ್ದ ಪ್ರತಿಯೊಬ್ಬರಿಗೂ ಕೇಳಿಸಿತು.ಪ್ರಯೋಗಿಸಲೆಂದು ಎತ್ತಿಹಿಡಿದಿದ್ದ ಬಾಣವನ್ನು ಇಳಿಸಿದೆ. ನನ್ನ ಜೊತೆಗಿದ್ದ ಆಪ್ತರಲ್ಲಿ ಇದರ ಬಗೆಗೆ ಚರ್ಚಿಸಿದೆ. ನಿರ್ಣಯವನ್ನು ಮಾಡಿದೆ. ಪ್ರಮೀಳೆಯನ್ನು ನನ್ನ ಬಳಿಗೆ ಕರೆಸಿಕೊಂಡೆ. ಒಪ್ಪಂದವೊAದಕ್ಕೆ ಒಳಪಡುವಂತೆ ಅವಳ ಕರಗಳನ್ನು ಹಿಡಿದುಕೊಂಡೆ. ಮನದಿಂಗಿತವನ್ನು ಹೇಳಿದೆ.“ಮರುಳುಗೊಳಿಸುವ ಮಾತು ನನ್ನದೆಂದು ಭಾವಿಸದಿರು. ಈಗ ನಾನು ನಿನ್ನನ್ನು ವರಿಸಲು ಸಾಧ್ಯವಿಲ್ಲ. ಯಾಗ ಮುಗಿಯುವವರೆಗೂ ಹೆಣ್ಣಿನ ಸಹವಾಸವನ್ನು ತೊರೆದಿರುವ ವ್ರತವನ್ನು ಪಾಲಿಸುತ್ತಿದ್ದಾನೆ ನನ್ನಣ್ಣ ಧರ್ಮಜ. ನಾನೂ ಅದೇ ವ್ರತದ ಆಚರಣೆಯಲ್ಲಿದ್ದೇನೆ. ಈಗ ನಾನು ನಿನ್ನೆಡೆಗೆ ಮನಸ್ಸು ಮಾಡಲು ಸಾಧ್ಯವಿಲ್ಲ. ಆದರೆ ಮುಂದೆ ಅಶ್ವಮೇಧ ಯಾಗ ನಡೆಯುವ ಕಾಲದಲ್ಲಿ ನಾನು ನಿನ್ನನ್ನು ಬಂದು ಸೇರುತ್ತೇನೆ. ನೀನು ಯಾಗಕ್ಕೆ ಬಂದು, ಅಲ್ಲಿ ಕೃಷ್ಣನನ್ನು ಕಂಡು, ನಿನ್ನ ದೇಹದ ವಿಷವನ್ನು ನೀಗಿಕೊಳ್ಳಬೇಕು. ಆ ಬಳಿಕ ನಾನು ನಿನ್ನ ಜೊತೆ ಸೇರಿ ಬಾಳುವುದಕ್ಕೆ ತೊಂದರೆಯಿಲ್ಲ” ಎಂದೆ, ಒಲವಿನಿಂದ.ನನ್ನ ಮಾತಿನಲ್ಲಿ ಕಪಟವಿಲ್ಲದ್ದನ್ನು ಅರ್ಥೈಸಿಕೊಂಡಳು ಪ್ರಮೀಳೆ. ನನ್ನ ಮಾತಿಗೆ ಒಪ್ಪಿಕೊಂಡಳು. ಕಟ್ಟಿಹಾಕಿದ್ದ ನಮ್ಮ ಕುದುರೆಯನ್ನು ತರಿಸಿಕೊಟ್ಟಳು. ಅವಳಿಗೆ ಆದರದ ವಿದಾಯ ಹೇಳಿ, ಸೇನೆಸಹಿತನಾಗಿ ಅಲ್ಲಿಂದ ಹೊರಟೆ. ಅವಳು ಸಂಪತ್ತನ್ನು ಜೊತೆಗಿರಿಸಿಕೊಂಡು, ವನಿತಾ ಸೈನ್ಯದ ಜೊತೆಗೆ ಹಸ್ತಿನಾವತಿಯನ್ನು ಸೇರಿಕೊಂಡಳು.ಮುಂದೆ ಹೋದಂತೆ ಹಲವು ದೇಶಗಳು ಕಂಡವು ನಮ್ಮ ಕಣ್ಣಿಗೆ. ಆನೆ, ಕುದುರೆ, ಗೋವು, ಮಹಿಷ ಮೊದಲಾದ ಪ್ರಾಣಿಸಮೂಹಗಳನ್ನು ಕಂಡೆವು. ಸೂರ್ಯ ಉದಯಿಸಿದೊಡನೆ ಜನಿಸಿ, ಮಧ್ಯಾಹ್ನದ ವೇಳೆಗೆ ಯೌವ್ವನಾವಸ್ಥೆಯನ್ನು ಪಡೆದು, ಸೂರ್ಯಾಸ್ತ ಸಮಯಕೆ ಮರಣವನ್ನಪ್ಪುವ ಅತಿಸೂಕ್ಷö್ಮ ಜೀವಿಗಳನ್ನು ನೋಡಿದೆವು, ಗಿಡಗಳ ಪೊದರುಗಳಲ್ಲಿ.ಕುದುರೆ ಮುಂದಕ್ಕೆ ಚಲಿಸಿತು. ವಿಚಿತ್ರವಾಗಿ ತೋರುತ್ತಿದ್ದ ಮನುಷ್ಯರನ್ನು ಕಂಡು ಅಚ್ಚರಿಗೊಳ್ಳುವಂತಾಯಿತು. ಚರ್ಮವನ್ನೇ ಉಡುಗೆಯಾಗಿ ಹೊಂದಿದ್ದರು ಅವರು. ಶರೀರವೆಲ್ಲಾ ವಕ್ರವಕ್ರವಾಗಿತ್ತು. ಅವರಿಗಿದ್ದದ್ದು ಒಂದೇ ಕೈ; ಒಂದೇ ಕಾಲು; ಒಂದೇ ಕಣ್ಣು. ಅವರಲ್ಲಿ ಕೆಲವರಿಗೆ ಮೂರು ಮೂರು ಕಣ್ಣುಗಳು. ಕುಬ್ಜರಾಗಿದ್ದರು. ಮೂರಡಿಯನ್ನು ಮೀರಿದ ಶರೀರವಲ್ಲ ಅವರದ್ದು. ತೀರಾ ಉದ್ದವಾದ ಮೂಗು. ನೆತ್ತಿಯ ಮೇಲೆ ಎರಡು ಕೋಡುಗಳಿದ್ದವು. ಕೆಲವರ ಮುಖ ಕತ್ತೆಯನ್ನು ಹೋಲುವಂತಿತ್ತು. ಇನ್ನೂ ಕೆಲವರು ಕುದುರೆಮುಖಿಗಳು.ವಿಚಿತ್ರವಾದ ದೇಶವಿದು ಎನಿಸಿತು ನನಗೆ. ಅಸಹ್ಯ ಭಾವ ಮೂಡಿತು. ಮರುಕ್ಷಣವೇ ಬಾಹ್ಯ ರೂಪ ಹೀಗಾದದ್ದರಲ್ಲಿ ಇವರ ತಪ್ಪೇನಿದೆ ಎನಿಸಿತು. ಎದುರಾದವರ ಚೆಲುವನ್ನು ಕಂಡು ಅವರನ್ನು ಆದರಿಸುವ, ಕುರೂಪವನ್ನು ಮೂದಲಿಸುವ ಲೋಕರೂಢಿಯ ಕ್ರಮವೊಂದಿದೆ. ಆದರೆ ಮನುಷ್ಯರೆನಿಸಿಕೊಂಡವರು ಒಳ್ಳೆಯ ಮನಸ್ಸನ್ನು ಹೊಂದಲು, ಒಳ್ಳೆಯ ಸ್ವಭಾವವನ್ನು ರೂಢಿಸಿಕೊಳ್ಳಲು ಮಾತ್ರ ಶಕ್ತರು. ಒಳ್ಳೆಯ ರೂಪವದು ಪ್ರಕೃತಿ ನಿರ್ಧರಿತವಾದದ್ದು. ಚೆಲುವೆನ್ನುವುದು ಶಾಶ್ವತವಲ್ಲ. ಹಾಗಿರುವಾಗ ಅದನ್ನು ಮುಂದಿಟ್ಟುಕೊAಡು ಸಹ್ಯ ಭಾವ ತಾಳುವುದಾಗಲೀ, ಅಸಹ್ಯವನ್ನು ಹೊಂದುವುದಾಗಲೀ ತಕ್ಕುದಲ್ಲ ಎನಿಸಿತು.ಹಾಗೆಯೇ ಮುಂದೆ ಹೋದೆವು. ಈಗ ನಮ್ಮ ಕುದುರೆ ಕಾಲಿಟ್ಟದ್ದು ಭೀಷಣ ಎನ್ನುವ ರಾಕ್ಷಸನ ಪಟ್ಟಣಕ್ಕೆ. ಮೂರು ಕೋಟಿ ಅಸುರರಿದ್ದರು ಅಲ್ಲಿ. ಅತಿಭಯಂಕರ ರೂಪ ಅವರದ್ದು. ಕ್ಷಣಕ್ಷಣವೂ ಆರ್ಭಟ. ಸಲ್ಲದ ಕೃತ್ಯಗಳೇ ಅಲ್ಲಿ ಎಲ್ಲ. ನೀಳವಾದ ದೈತ್ಯ ದೇಹವಿತ್ತು. ಶೀಘ್ರವೇ ಕೋಪಗೊಳ್ಳುತ್ತಿದ್ದರು. ಗಂಡೆದೆಯವರನ್ನೂ ಅಳುಕಿಸುವ ಘೋರ ಮುಖ ಅವರಿಗಿತ್ತು. ಮಾಯಾವಿಗಳಾಗಿದ್ದರು. ದಯೆಗೆ ಅವರೆದೆಯಲ್ಲಿ ಕಿಂಚಿತ್ ಸ್ಥಾನವೂ ಇರಲಿಲ್ಲ. ಸಂಹಾರದಲ್ಲಿಯೇ ಸಂತಸ ಕಾಣುವವರು. ಸಮರಕ್ಕೆ ಇಳಿದರೆ ಸಮಯ ಸಂದರ್ಭ ನೋಡದೆ ಹೋರಾಡುವವರು.ಹೀಗಿದ್ದ ಅಸುರರ ಪುರವನ್ನು ಆಳುತ್ತಿದ್ದ ಭೀಷಣನಿಗೆ ನಮ್ಮ ಪ್ರವೇಶದ ಸುದ್ದಿಯನ್ನು ಮುಟ್ಟಿಸಿದ್ದು ರಾಕ್ಷಸ ಪುರೋಹಿತನೆನಿಸಿದ್ದ ಮೇದೋಹೋತ. ಅವನು ಆಹಾರ ಹುಡುಕಿಕೊಂಡು ಕಾಡಿಗೆ ಬಂದಿದ್ದ. ಆ ಸಮಯದಲ್ಲಿ ನಾನು ನನ್ನ ಸೇನೆಸಹಿತ ಅದೇ ಅರಣ್ಯದಲ್ಲಿದ್ದೆ. ಅವನು ನನ್ನನ್ನು ಕಂಡ. ಕುದುರೆಯನ್ನು ನೋಡಿದ. ಸೈನಿಕರೆಡೆಗೆ ದೃಷ್ಟಿ ಹರಿಸಿದ. ಯಜ್ಞದ ಕುದುರೆಯಿದು ಅರ್ಜುನನ ರಕ್ಷೆಯಲಿ ಸೇನೆಸಹಿತವಾಗಿ ಬಂದಿದೆ ಇಲ್ಲಿಗೆ ಎನ್ನುವುದನ್ನು ಊಹಿಸಿದ. ಅವನು ನನ್ನನ್ನು ನೋಡಿದ್ದು ನನ್ನ ಅರಿವಿಗೆ ನಿಲುಕಿರಲಿಲ್ಲ ಆ ಕ್ಷಣಕ್ಕೆ.ಅವನು ತಕ್ಷಣವೇ ಹೋದದ್ದು ಭೀಷಣನ ಬಳಿಗೆ. ವಿಚಾರವನ್ನು ಅರುಹಿದ. “ಅರ್ಜುನ ಇಲ್ಲಿಗೆ ಬಂದಿದ್ದಾನೆ, ಯಾಗದ ಕುದುರೆಯನ್ನು ಜೊತೆಮಾಡಿಕೊಂಡು. ಅವನನ್ನು ಹಿಡಿದು ತಂದು ನರಮೇಧ ಯಾಗವನ್ನು ನಡೆಸು. ಅವನನ್ನು ಬಲಿಗೊಡು” ಎಂಬ ಸಲಹೆಯಿತ್ತ ಮೇದೋಹೋತ.ಭೀಷಣ ನಡೆಸುವ ನರಮೇಧ ಯಾಗಕ್ಕೆ ಪುರೋಹಿತ ತಾನಾಗಿ ಸಕಲ ಗೌರವವನ್ನೂ, ಸಮಸ್ತ ಸಂಪದವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿತ್ತು ಆ ಅಸುರ ಪುರೋಹಿತನಲ್ಲಿ.ಭೀಷಣ ಅವನ ಮಾತಿಗೆ ಒಪ್ಪಿಕೊಂಡ. “ನರಮೇಧ ಯಾಗಕ್ಕಾಗಿ ಈಗಲೇ ಮಂಟಪವನ್ನು ನಿರ್ಮಿಸು. ನಾನೀಗಲೇ ಹೋಗಿ ಆ ಅರ್ಜುನನನ್ನು ಎಳೆದುಕೊಂಡು ಬರುತ್ತೇನೆ” ಎಂದು ಬೊಬ್ಬೆ ಹೊಡೆದ, ಮೇದೋಹೋತನಲ್ಲಿ.ಹೀಗೆ ಭೀಷಣ ಮೇದೋಹೋತನ ಮಾತಿಗೆ ತಕ್ಷಣವೇ ಒಪ್ಪಿಕೊಳ್ಳುವುದರ ಹಿಂದೆ ಬಲವಾದ ಕಾರಣವಿತ್ತು. ಅವನು ಬಕಾಸುರನ ಮಗನಾಗಿದ್ದ. ಹಿಂದೆ ಭೀಮನಿಂದ ಮಡಿದಿದ್ದ ತಂದೆಯ ಸಾವಿನ ಸೇಡನ್ನು ಭೀಷಣ ತೀರಿಸಿಕೊಳ್ಳಬಯಸಿದ್ದು ಭೀಮ ಸೋದರನಾದ ನನ್ನನ್ನು ಕೊಲ್ಲುವುದರ ಮೂಲಕ. ಮುಕ್ಕೋಟಿ ರಾಕ್ಷಸರು ಸೇರಿಕೊಂಡರು ಅವನ ಜೊತೆಗೆ… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-29 ಅರ್ಜುನ ಉವಾಚ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಹೀಗಿದ್ದರು ಸ್ತ್ರೀರಾಜ್ಯದ ಸ್ತ್ರೀಯರು ನಮ್ಮ ಕುದುರೆ ಪ್ರವೇಶಿಸಿದ್ದು ಸ್ತ್ರೀರಾಜ್ಯವನ್ನು. ನಾವು ಹೊಕ್ಕದ್ದು ವನಿತಾ ಸೀಮೆಯನ್ನು. ಭಾರವನ್ನು ತಾಳಲಾರದೆ ಧರಣಿ ಕುಗ್ಗಿದೆಯೋ ಏನೋ! ತುಸು ಮುಂದೆ ಹಿಗ್ಗಿದೆಯೋ ಏನೋ! ಎಂಬಂತಿತ್ತು ಅಲ್ಲಿಯ ಭೂಮಿಯ ಸ್ವರೂಪ. ಹೀಗೆ ಏರಿಳಿತಗಳಲ್ಲಿಯೇ ಸಾಗಿದೆವು ನಾವು. ಸ್ತ್ರೀರಾಜ್ಯದ ಬಗೆಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ನನ್ನಲ್ಲಿ ಅಳುಕು ಮೂಡತೊಡಗಿತು. ನನ್ನ ಜೊತೆಗಿದ್ದವರೆಲ್ಲಾ ಸಂಯಮದ ಮನಸ್ಸನ್ನು ಕಾಪಾಡಿಕೊಳ್ಳದಿದ್ದರೆ ಆ ಸ್ತ್ರೀರಾಜ್ಯವನ್ನು ದಾಟಿ ಮುಂದೆ ಹೋಗುವುದು ಸಾಧ್ಯವಿಲ್ಲ ಎಂಬ ಭಯ ನನ್ನಲ್ಲಿ ಉಂಟಾಯಿತು. ಅಲ್ಲಿದ್ದವರೆಲ್ಲಾ ನಾರಿಯರೇ. ಪುರುಷರು ಜೀವನ ನಡೆಸುವುದಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಅಲ್ಲಿದ್ದ ಸ್ತ್ರೀಯರು ಯೌವ್ವನಾವಸ್ಥೆಯನ್ನು ಹೊಂದಿದವರು. ಮಧುಪಾನದಿಂದ ಮತ್ತೇರಿಸಿಕೊಳ್ಳುವ ಚಟವನ್ನು ಇಟ್ಟುಕೊಂಡವರು. ಚೆಲುವಿತ್ತು ಅವರಿಗೆ. ಲಾವಣ್ಯವತಿಯರಾಗಿದ್ದರು. ಬಗೆಬಗೆಯ ಕಲೆಗಳಲ್ಲಿ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದರು. ಹಾಡನ್ನು ಇಂಪಾಗಿ ಹಾಡುವ ಕೌಶಲ್ಯವಿತ್ತು. ನೃತ್ಯವನ್ನು ಸೊಂಪಾಗಿ ಮಾಡುವ ಪ್ರತಿಭೆಯಿತ್ತು. ಕೊಳಲನ್ನು ನುಡಿಸುತ್ತಿದ್ದರು ಕೋಗಿಲೆ ಕೊರಳಿನಿಂದ ಧ್ವನಿಸರವು ಹೊಮ್ಮಿದಂತೆ. ವೀಣೆಯನ್ನು ನುಡಿಸುತ್ತಿದ್ದರು ರಸಿಕ ಹೃದಯದಿಂದ ಸ್ವರರಸವು ಚಿಮ್ಮಿದಂತೆ. ಮಾತುಮಾತಿಗೆ ನಗುವ, ಮಾತುಮಾತಿನಲಿ ನಗಿಸುವ ವಿನೋದ ಪ್ರಜ್ಞೆಯಿತ್ತು ಅಲ್ಲಿಯ ವಿನೋದಿನಿಯರಲ್ಲಿ. ಭೋಗಾಸಕ್ತರಾಗಿದ್ದರು ಅಲ್ಲಿನ ವನಿತೆಯರು. ಹೀಗೆ ಸ್ತ್ರೀಗಣವದು, ಸ್ತ್ರೀಗುಣಗಳ ಹೊಂದಿ, ಸ್ತ್ರೀಗಡಣದಲ್ಲಿಯೇ ಬದುಕು ನಡೆಸುತ್ತಾ, ಸ್ತ್ರೀಗಣಿಯೊಂದನ್ನು ನಿರ್ಮಿಸಿತ್ತು ಈ ಭೂಮಿಯೊಳಗೆ. ಹೀಗಿದ್ದ ವನಿತಾ ರಾಜ್ಯವನ್ನು ಪ್ರವೇಶಿಸಿ ಅಲ್ಲಿಂದ ಜೀವಂತವಾಗಿ ಹೊರಬಂದ ಪುರುಷರು ಇರಲಿಲ್ಲ. ಬಂದ ಗಂಡಸರನ್ನು ಆಕರ್ಷಿಸಿ, ಕೊನೆಗೆ ಮರಣವನ್ನೀಯುವ ಕಠೋರತೆಯಿತ್ತು ಅಲ್ಲಿನ ಹೆಂಗಳೆಯರ ಹೃದಯದಲ್ಲಿ. ಸೌಂದರ್ಯಮಯ ದೇಹವನ್ನು ಮುಂದಿಟ್ಟು ಪುರುಷರನ್ನು ಯಮಪಾಶಕ್ಕೆ ಸಿಲುಕಿಸುತ್ತಿದ್ದ ಮೋಹನಾಂಗಿಯರು ಅಲ್ಲಿನವರು. ಬಂದ ಗಂಡಸರನ್ನು ಕಂಡು ಚೆಲ್ಲುಚೆಲ್ಲಾಗಿ ನೋಡುತ್ತಾ, ಆಸೆಯ ಕಣ್ಣೋಟ ಬೀರುತ್ತಿದ್ದರು. ಆಕರ್ಷಕವಾದ ಭಂಗಿಯಲ್ಲಿ ನಿಂತು, ಕಾಲ ಉಗುರುಗಳಿಂದ ನೆಲವನ್ನು ಕೆರೆಯುತ್ತಾ ಹುಸಿಲಜ್ಜೆಯ ಭಾವವನ್ನು ತೋರಿಸುತ್ತಿದ್ದರು. ಸರಸಗೈಯ್ಯುವ ಸಮಯದಲ್ಲಿ ದೇಹಸಿರಿಯನ್ನು ಉಣಬಡಿಸುತ್ತಾ ಗಂಡಸರಿಗೆ ಹುಚ್ಚು ಹಿಡಿದು ಅವರ ಅರಿವು ಇನ್ನಿಲ್ಲವಾಗುವ ಹಾಗೆ ಮದವನ್ನು ಏರಿಸುತ್ತಿದ್ದರು. ಇಲ್ಲಿನ ಸ್ತ್ರೀಯೊಡನೆ ಒಮ್ಮೆ ಸರಸಕೇಳಿಗೆ ಇಳಿದ ಬಳಿಕ ಅದೇ ವಿಷಯದಲ್ಲಿ ಸಂಪೂರ್ಣ ಆಸಕ್ತನಾಗಿಬಿಡುತ್ತಿದ್ದ ಇಲ್ಲಿಗೆ ಬಂದ ಪುರುಷ. ಇಲ್ಲಿಂದ ತೆರಳಲು ಅವನಿಗೆ ಮನಸ್ಸೇ ಆಗುತ್ತಿರಲಿಲ್ಲ. ನಾನಾ ಪ್ರಕಾರದ ಕಾಮಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ಬಗೆಯಲ್ಲಿಯೇ ಒಂದು ತಿಂಗಳು ಸುಖಿಸುತ್ತಿದ್ದರು. ಉತ್ತಮವಾದ ಸುಗಂಧವನ್ನು ಮೈಗೆ ಬಳಿದುಕೊಂಡು, ಸುಗಂಧ ದ್ರವ್ಯವನ್ನು ಬಾಯಿಗೆ ಹಾಕಿಕೊಂಡು, ತಾಂಬೂಲ, ಮಧುಪಾನ ಮೊದಲಾದವುಗಳ ಮೂಲಕ ಮದನಕೇಳಿಯ ಉತ್ತುಂಗ ಸೊಗವನ್ನು ಅನುಭವಿಸುತ್ತಿದ್ದರು. ವಿಧವಿಧವಾದ ಬಗೆಯಲ್ಲಿ ಶೋಭಿಸುವ ಕುಸುಮಸಮೂಹಗಳ ಪರಿಮಳಭರಿತವಾದ ಮಕರಂದಗಳನ್ನು ಚಿನ್ನದ ಬಟ್ಟಲಲ್ಲಿ ಸುರಿಯುತ್ತಿದ್ದಳು ಹೆಣ್ಣು. ಆ ಮಕರಂದಕ್ಕೆ ತನ್ನ ತುಟಿಯ ಸಿಹಿಯನ್ನು ಸೇರಿಸುವಂತೆ ಬಟ್ಟಲಿಗೆ ಮುಖವಿಟ್ಟು ಅದನ್ನು ಸವಿಯುತ್ತಿದ್ದಳು. ಉಳಿದ ಮಕರಂದವನ್ನು ನೋಡಿ ನಗು ಬೀರುತ್ತಿದ್ದಳು. ಬಟ್ಟಲನ್ನು ಪುರುಷನ ಬಳಿಗೆ ತೆಗೆದುಕೊಂಡು ಹೋಗಿ ಬಟ್ಟಲಿನಲ್ಲಿದ್ದ ಮಕರಂದವನ್ನು ಇಬ್ಬರೂ ಹಂಚಿಕೊಂಡು ಸವಿಯುತ್ತಿದ್ದರು. ಮಕರಂದದ ಸವಿಯನ್ನು ತೊರೆದು ಇರುವವರಲ್ಲ ಎಂಬಂತೆ ಇಬ್ಬರೂ ಬಿಡದೆ ಮುಖವಿಟ್ಟು ರುಚಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಚಿನ್ನದ ಬಟ್ಟಲಲ್ಲಿ ಮೂಡಿದ ಪುರುಷನ ಬಿಂಬವನ್ನು ಆ ಹೆಣ್ಣು, ಅವಳ ಬಿಂಬವನ್ನು ಆ ಪುರುಷ ಇಬ್ಬರೂ ಕಂಡು ಅನ್ಯೋನ್ಯತೆಯ ಸಂಪ್ರೀತಿ ಭಾವ ಅವರನ್ನು ಆವರಿಸುತ್ತಿತ್ತು. ಬಟ್ಟಲಲ್ಲಿ ತುಂಬಿರುವ ಮಕರಂದ ಮುಗಿದುಹೋದರೆ ಜೊತೆಜೊತೆಗೆ ಅದನ್ನು ಸವಿಯುವ ಗಳಿಗೆಯದು ಮುಗಿದುಹೋಗುವುದು ಎಂಬ ಯೋಚನೆ ಬಂದ ಕ್ಷಣವೇ ಆತುರಾತುರವಾಗಿ ರಸವನ್ನು ಹೀರುವುದನ್ನು ನಿಲ್ಲಿಸುತ್ತಿದ್ದರು. ಬೇಕುಬೇಕೆಂದೇ ವಿಳಂಬ ಮಾಡುತ್ತಿದ್ದರು. ಜೊತೆಜೊತೆಗೆ ಸವಿವ ರಸಗಳಿಗೆಯದು ಅವರಿಗೆ ಮುದವನ್ನು ನೀಡುತ್ತಿತ್ತು. ಮನಸೆಳೆಯುವ ರತಿಕೇಳಿಯಲ್ಲಿ ತಲ್ಲೀನರಾಗುತ್ತಿದ್ದರು. ಹೆಣ್ಣು ತನ್ನ ತುಟಿಯ ಸಿಹಿರಸವನ್ನು ಕುಡಿಸಿ ಪುರುಷನನ್ನು ತಣಿಸುತ್ತಿದ್ದರು. ಮಿಲನದಲ್ಲಿ ಮನವದು ಮುಳುಗಿಹೋಗಿ ಸುಖ ಅವರದ್ದಾಗುತ್ತಿತ್ತು. ಕಾಮಕಲೆಗಳಲ್ಲಿ ಪರಿಣತಳಾದ ಹೆಣ್ಣು ಈ ಮೂಲಕ ಉನ್ನತ ನೆಮ್ಮದಿಯನ್ನು ತನ್ನದಾಗಿಸಿಕೊಳ್ಳುತ್ತಿದ್ದಳು. ಹಾಗಿದ್ದಾಗಲೇ ಅವಳ ಅಧರದ ಸ್ಪರ್ಶಕ್ಕೆ ಸಿಲುಕಿ ವಿಷವಾದ ಆ ಮಕರಂದ ಅವನಿಗೆ ಪ್ರಾಣಸಂಕಟವನ್ನು ಕೊಡುವ ಕಾಟವನ್ನು ಆರಂಭಿಸುತ್ತಿತ್ತು. ಇನ್ನೇನು ಮರಣ ತನ್ನನ್ನು ಬಂದು ಅಪ್ಪಿಕೊಳ್ಳುತ್ತದೆ ಎಂದು ಬೆದರಿದ ಪುರುಷ ಮಧ್ಯೆಯೇ ಕಾಮಕೇಳಿಯನ್ನು ನಿಲ್ಲಿಸಿಬಿಡುತ್ತಿದ್ದ. ತಕ್ಷಣವೇ ಅವನ ಚರಣಕ್ಕೆ ಎರಗಿ, ಒಪ್ಪಿಸುವ ನಾಟಕವನ್ನಾಡುತ್ತಿದ್ದಳು. ದೈನ್ಯತೆಯನ್ನು ತೋರಿಸುತ್ತಿದ್ದಳು. ಕರುಣೆ ನೋಟ ಹರಿಸುತ್ತಿದ್ದಳು. ಅದಕ್ಕೂ ಅವನು ಸಹಿಸದವನಾದರೆ ಬೊಬ್ಬೆ ಹೊಡೆದು ಅವನನ್ನು ಹೊಡೆಯುತ್ತಿದ್ದಳು, ಕೊಲ್ಲುತ್ತಿದ್ದಳು. ಕೈಗಳಿಂದ ಬಡಿದು ಪ್ರಾಣ ಹೋಗುವವರೆಗೂ ಅವಳು ಸುಮ್ಮನಾಗುತ್ತಿರಲಿಲ್ಲ. ಸಂಪಿಗೆ ಹೂವಿಗೆ ಮನಸೋತು, ಅದರ ಆಸ್ವಾದನೆಗೆ ಬಂದು, ಹೂ ಬಾಡುವವರೆಗೂ ಮಕರಂದವನ್ನು ಹೀರಿಕೊಂಡಿದ್ದು, ಕೊನೆಗೆ ಅದರೊಳಗಡೆಯೇ ಸಿಲುಕಿ ಮರಣವನ್ನಪ್ಪುವ ದುಂಬಿಯಂತಹ ಸ್ಥಿತಿ ಸ್ತ್ರೀರಾಜ್ಯಕ್ಕೆ ಬಂದ ಪುರುಷರದ್ದು. ಅಲ್ಲಿಗೆ ಬಂದ ಎಲ್ಲಾ ಪುರುಷರಿಗೂ ಇದೇ ಅವಸ್ಥೆ ಒದಗಿಬರುತ್ತಿತ್ತು. ಅಲ್ಲಿದ್ದ ಎಲ್ಲಾ ಮಹಿಳೆಯರೂ ಇದೇ ತೆರದಲ್ಲಿದ್ದರು. ಹೀಗೆ ಪುರುಷರನ್ನು ಸಾಯಿಸಿದ ಕೆಲವು ಮಹಿಳೆಯರು ತಿಂಗಳು ಕಳೆದಾಗ ಅಗ್ನಿಪ್ರವೇಶ ಮಾಡುತ್ತಿದ್ದರು. ಇನ್ನೂ ಕೆಲವರು ಹೆಣ್ಣುಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಅಲ್ಲಿಯ ಸ್ತ್ರೀಸಂತತಿ ಬೆಳೆಯುತ್ತಲೇ ಬಂದಿತ್ತು. ಹೀಗೆ ವಿಷಾಂಗನೆಯರಾಗಿದ್ದ ಆ ರಾಜ್ಯಕ್ಕೆ ಪ್ರಮೀಳೆ ಎನ್ನುವವಳು ಅರಸಿಯಾಗಿದ್ದಳು. ನನ್ನ ಜೊತೆಗಿದ್ದವರನ್ನು ಎಚ್ಚರಿಸದೇ ಇದ್ದರೆ ಅಪಾಯವಾಗುತ್ತದೆ ಎನ್ನುವುದು ನನಗೆ ದೃಢವಾಗಿತ್ತು. ಇದುವರೆಗೂ ಪರಾಕ್ರಮವನ್ನಿಟ್ಟುಕೊಂಡು ಯುದ್ಧ ಹೂಡಿದ್ದ ನಾವು ಇದೀಗ ಸಂಪೂರ್ಣ ಬುದ್ಧಿವಂತಿಕೆಯಿAದ, ವಿವೇಚನೆಯಿಂದ ನಡೆದುಕೊಂಡು ಮುನ್ನಡೆಯಬೇಕಿತ್ತು. “ಇಲ್ಲಿನವರು ವಿಷಕನ್ನಿಕೆಯರು. ಕಂಡ ಕೂಡಲೇ ಆಕರ್ಷಿಸುತ್ತಾರೆ. ಅವರೆಡೆಗೆ ಮಾರುಹೋದರೆ ನಿಮ್ಮ ಆಯುಷ್ಯವನ್ನೇ ಅಪಹರಿಸಿಬಿಡುತ್ತಾರೆ. ಕಾಮಕ್ರೀಡೆಯಲ್ಲಿ ಆಸಕ್ತಿ ವಹಿಸದೆ ಬುದ್ಧಿವಂತರಾಗಿರಬೇಕು” ಎಂದು ಹೇಳಿ ಜಾಗೃತಿ ಮೂಡಿಸಿದೆ ನಮ್ಮವರಲ್ಲಿ. ಅರಸಿ ಪ್ರಮೀಳೆ ನಮ್ಮ ಕುದುರೆಯನ್ನು ಕಟ್ಟಿಹಾಕುವ ಲಕ್ಷಣ ತೋರಿತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ -28 ಅರ್ಜುನ ಉವಾಚ ಡಾ.ವಿಶ್ವನಾಥ್ ಎನ್ ನೇರಳಕಟ್ಟೆ ಶಾಪದ ಕಥೆಗಳನ್ನು ತಿಳಿದು ಮುನ್ಡೆನದದ್ದು ಸ್ತ್ರೀ ರಾಜ್ಯದೆಡೆಗೆ ಗುರುಗಳನ್ನು ಹಿರಿಯರನ್ನು ದೇವತೆಯರನ್ನು ಕಂಡಾಗ ಪ್ರಣಾಮ ಮಾಡುವುದು ರೂಢಿ. ಪಾರ್ವತಿಯೆದುರಿಗೆ ಬಂದ, ದುಷ್ಟದೃಷ್ಟಿ ಬೀರುತ ನಿಂದ ಆ ದೈತ್ಯ ಶಿವಸತಿಗೆ ನಮಿಸಲಿಲ್ಲ. ಅವಳನ್ನು ಬಯಸಿದ. ಮನ್ಮಥನ ಹೂಬಾಣ ಅವನನ್ನು ಬಾಧಿಸಿತು. ಕಾಮಾತುರಕ್ಕೆ ಒಳಗಾದ ದಾನವ. ಜಗದ ಮಾತೆಯೊಡನೆ ಮದನಕೇಳಿಯಾಡುವ ಕೆಡುಬಯಕೆ ಅವನಲ್ಲಿ ಮೂಡಿತು. ಪಾರ್ವತಿಯನ್ನು ಮಾತನಾಡಿಸಲು ಮುಂದಾದ. ಮಹಾದೈತ್ಯನ ಮನದಿಂಗಿತ ಅರ್ಥವಾಯಿತು ಅವಳಿಗೆ. ಕಡುಕೋಪದಿಂದ ಕೆಡುಕಿನ ಕಾಯವನ್ನು ದಿಟ್ಟಿಸಿದಳು. ಉರಿಉರಿದು ಬೂದಿಯಾಗಿ ಹೋದ ಆ ರಾಕ್ಷಸ. ಬಳಿಕ ಪಾರ್ವತಿದೇವಿ ಶಾಪರೂಪದ ಮಾತೊಂದನ್ನು ಆಡಿದಳು. “ಇಂದಿನಿಂದ ಈ ವನಕ್ಕೆ ಕಾಲಿಡುವ ಪುರುಷ ರೂಪದ ಪ್ರಾಣಿಗಳೆಲ್ಲವೂ ಹೆಣ್ಣಾಗಿ ಹೋಗಲಿ” ಎಂಬ ನುಡಿಯದು ಅವಳಿಂದ ಹೊರಬಂತು. ತನ್ನನ್ನೇ ಬಯಸಿದ ಅಸುರನ ಹೀನ ಗಂಡಸ್ತನದ ಬಗೆಗೆ ಆಕ್ರೋಶ ಹುಟ್ಟಿದ್ದು ಖಚಿತ ಅವಳಲ್ಲಿ. ಗಂಡಸ್ತನದ ಬಗೆಗಿನ ತಿರಸ್ಕಾರ ತುರೀಯಾವಸ್ಥೆಯನ್ನು ತಲುಪಿದಾಗ ಹೆಂಗಳೆಯರೇ ತುಂಬಿಹೋದರೆ ಒಳಿತು ಈ ಲೋಕದಲ್ಲಿ ಎಂಬ ಭಾವವೇ ಮೂಡುತ್ತದೋ ಏನೋ! ಆ ಕಾರಣಕ್ಕೇ ಇಂಥದ್ದೊಂದು ಘನಶಾಪ ಇತ್ತಳು ಎನಿಸುತ್ತದೆ, ಮುಂದಣ ಕಾಲಕ್ಕೂ ಸಲ್ಲುವಂತೆ. ಆ ಬಳಿಕವೂ ಅವಳ ತಪಸ್ಸು ಮುಂದುವರಿಯಿತು. ಯಾವ ತಾಪತ್ರಯವೂ ಎದುರಾಗಲಿಲ್ಲ ಅವಳಿಗೆ ಪುರುಷವರ್ಗದವರಿಂದ. ಶಂಕರವಲ್ಲಭೆಯ ಶಾಪದ ಬಲದಿಂದಲೇ ನಮ್ಮ ಯಾಗದ ಕುದುರೆ ಹೆಣ್ಣಾಗಿ ಬದಲಾದದ್ದು. ಹುಲಿಯ ರೂಪವನ್ನು ಪಡೆದದ್ದರ ಹಿಂದೆಯೂ ಒಂದು ಕಥಾನಕವಿತ್ತು. ಬಹಳ ಹಿಂದೆ ಅಕೃತವ್ರಣಾಖ್ಯ ಎಂಬ ಬ್ರಾಹ್ಮಣ ದಿವ್ಯಸ್ನಾನವನ್ನು ಮಾಡುವುದಕ್ಕಾಗಿ ಇಲ್ಲಿನ ಸರೋವರಕ್ಕೆ ಬಂದ. ಸಮಸ್ತ ಭೂಮಿಯ ಬಹುಕಡೆಗಳಲ್ಲಿ ತೀರ್ಥಸ್ನಾನವನ್ನು ಪೂರೈಸಿಯೇ ಬಂದಿದ್ದ ಆತ. ಸರೋವರದ ನೀರಿಗಿಳಿದಿದ್ದ ಆತ ವರುಣದೇವರ ಮಂತ್ರವನ್ನು ಜಪಿಸುತ್ತಿದ್ದ. ಅದೇ ಸಮಯದಲ್ಲಿ ಮೊಸಳೆಯೊಂದು ಬಂದು ಅವನ ಪಾದವನ್ನು ಬಲವಾಗಿ ಕಚ್ಚಿತು. ಕಾಲನ್ನು ಹಿಡಿದು ರಭಸದಿಂದ ಎಳೆಯುತ್ತಿರುವ ಜೀವಿ ಯಾವುದದು ಎನ್ನುವುದು ಆತನ ಅರಿವಿಗೆ ಬರಲಿಲ್ಲ. ಜಲದ ಒಳಗಿದ್ದುದು ಅವನ ಹೊರನೋಟಕ್ಕೆ ದಕ್ಕಲಿಲ್ಲ. ಯಾವುದೋ ರಾಕ್ಷಸರ ಮಾಯೆಯೋ ಏನೋ! ಎಂಬ ಅಳುಕು ಮೂಡಿತು. ಹಾವು ಇರಬಹುದೇ! ಎಂಬ ಸಂಶಯ ಕಾಡಿತು. ದೈತ್ಯ ಗಾತ್ರದ ಮತ್ಸ್ಯವಿರಬೇಕಿದು ಎಂದುಕೊಂಡ. ಮಹಾಸುಳಿಯೆಂದು ಭಾವಿಸಿ ನೊಂದುಕೊಂಡ. ಮೊಸಳೆಯೇ ತನ್ನ ಕಾಲನ್ನು ಹಿಡಿದಿದೆ ಎಂಬ ಯೋಚನೆಯೇ ಬರಲಿಲ್ಲ ಅವನಲ್ಲಿ. ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಎಂದುಕೊAಡವನು ಬಲವಾಗಿ ಕಾಲನ್ನೊಮ್ಮೆ ಕೊಡವಿದ. ಅವನ ಆ ಬಿರುಸಿಗೆ ಮೊಸಳೆಯ ಬಲಿಷ್ಠ ದಂತಗಳು ಮುರಿದುಹೋದವು. ಹಿಡಿತವದು ಸಡಿಲವಾಯಿತು. ತಕ್ಷಣವೇ ಸರೋವರದ ದಡವನ್ನು ಸೇರಿಕೊಂಡ ಆ ಬ್ರಾಹ್ಮಣ. ಅವನಿಗೆ ಕೋಪ ಬಂದಿತ್ತು. ನೀರಿನಲ್ಲಿರುವ ದೇವತೆಗಳು ಕೇಳಿಸಿಕೊಳ್ಳಲಿ ಎಂಬAತೆ ನುಡಿದ. “ಈ ಸರೋವರ ದುಷ್ಟಭಾವವನ್ನು ಹೊತ್ತುನಿಂತಿದೆ. ಅತಿಯಾದ ಭಯವನ್ನು ನನ್ನಲ್ಲಿ ಹುಟ್ಟುಹಾಕಿದೆ. ಆ ಕಾರಣಕ್ಕೆ ಇನ್ನುಮುಂದೆ ಈ ಸರೋವರದ ನೀರನ್ನು ಕುಡಿದ ಜೀವಿಗಳು ಭೂಮಿಗೆ ಅತೀ ಭೀತಿಯನ್ನು ಉಂಟುಮಾಡುವAತೆ ಹುಲಿಯಾಗಿ ಹೋಗಲಿ” ಎಂದು ಶಾಪವಿತ್ತ. ಬೇರೆಲ್ಲಾ ಪ್ರದೇಶಗಳ ನದಿನೀರಿನಲ್ಲಿ ಮಿಂದೆದ್ದಿದ ಅವನಿಗೆ ಇಲ್ಲಿ ಮಾತ್ರ ಈ ಬಗೆಯ ಭಯಾನಕ ಅನುಭವ ಆದದ್ದು. ಆದ್ದರಿಂದಲೇ ಆ ಬಗೆಯ ಶಾಪವೊಂದನ್ನು ಕೊಟ್ಟ ಸರೋವರದ ನೀರಿಗೆ. ಹುಲಿಯಾಗಲು ಇಚ್ಛಿಸದೆ ಸರೋವರದ ಜಲವನ್ನು ಸರ್ವ ಜೀವಿಗಳೂ ತಿರಸ್ಕರಿಸುವಂತಾಗಲಿ ಎಂಬ ಉದ್ದೇಶ ಇದ್ದಿರಬಹುದು ಅವನಲ್ಲಿ. ಈ ಕಾರಣಕ್ಕೆ ನಮ್ಮ ಯಜ್ಞಾಶ್ವ ವ್ಯಾಘ್ರವಾಗಿ ಪರಿವರ್ತನೆಯಾದದ್ದು. ಕುದುರೆಯ ಈ ಬಗೆಯ ರೂಪಾಂತರವನ್ನು ಆ ಕೃಷ್ಣನ ಸ್ಮರಣೆಯ ಬಲದಿಂದ ಸರಿಮಾಡಿದೆ. ನನ್ನ ಜೊತೆಗೆ ಇದ್ದ ಸೈನಿಕರು ನನ್ನ ಪ್ರಾರ್ಥನೆಗೆ ಶ್ರೀಕೃಷ್ಣ ಪ್ರತಿಸ್ಪಂದಿಸಿದ ಬಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. “ಆಪತ್ತಿನ ಭೀತಿ ಈ ಪಾಂಡವರನ್ನು ಯಾವತ್ತಿಗೂ ಬಾಧಿಸಲಾರದು. ಇವರಿಗೆ ನೋವಾಗುವುದನ್ನು, ಭಯ ಎದುರಾಗುವುದನ್ನು ಆ ಕೃಷ್ಣ ಸಹಿಸಲಾರನು. ಅವನ ನೆರವು ಇವರಿಗೆ ಯಾವಾಗಲೂ ಇದೆ” ಎಂದು ಸೈನಿಕರು ಮಾತನಾಡುತ್ತಿದ್ದುದನ್ನು ಕೇಳಿ ಹೆಮ್ಮೆಯ ಭಾವ ಮೂಡಿತು. “ಶ್ರೀಕೃಷ್ಣ ತನ್ನ ಭಕ್ತರನ್ನು ಯಾವತ್ತೂ ಕಾಪಾಡುತ್ತಾನೆ ಎನ್ನುವುದು ಈ ಕ್ಷಣಕ್ಕೆ ಮತ್ತೊಮ್ಮೆ ಸಾಬೀತಾಯಿತು. ನಂಬಿದವರ ರಕ್ಷಣೆ ಮಾಡುವುದೇ ಮಹಾಸಂತೋಷ ಆ ಅಸುರಾರಿಗೆ. ಅಶ್ವಮೇಧ ಯಾಗಕ್ಕೆ ಅಡಿಗಡಿಗೆ ಎದುರಾದ ಅಡೆತಡೆಗಳನ್ನು ಮೀರಿ ಪಾಂಡುರಾಜನ ಸುತರನ್ನು ಅಪಾಯದಿಂದ ಪಾರುಮಾಡುವುದನ್ನೇ ಮಹಾಕಾರ್ಯವಾಗಿಸಿಕೊಂಡಿದ್ದಾನೆ ಆ ಮೋಹಕ ಮಾಧವ” ಎಂಬ ಮಾತೂ ಕೇಳಿಬಂತು. ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ನಿಜರೂಪವನ್ನು ಕುದುರೆ ಪಡೆದುದನ್ನು ಬಗೆಬಗೆಯ ವಾದ್ಯಗಳ ಶಬ್ದವನ್ನೆಬ್ಬಿಸಿ ಸಂಭ್ರಮಿಸಿದರು ನಮ್ಮ ಪಾಳಯದ ಸೈನಿಕರು. ಅತೀವವಾಗಿ ಹಿಗ್ಗಿದೆ ನಾನು. ಶ್ರೀಕೃಷ್ಣ ನಮಗಿತ್ತ ಉಪಕಾರವನ್ನು ನಮ್ಮ ಸೇನೆ ಅರಿತಿದೆಯಲ್ಲಾ ಎಂದು ಸಂಭ್ರಮಿಸಿದೆ. ಜಗವೆಲ್ಲಾ ಅರಿಯುವಂತೆ ಆ ಹರಿಯಿಂದ ಮಹದುಪಕಾರವನ್ನು ಪಡೆಯುತ್ತಿರುವ ನಾನೇ ಧನ್ಯ ಎಂಬ ಭಾವ ಮೂಡಿತು ನನ್ನಲ್ಲಿ. ಪಾರಿಪ್ಲವ ದೇಶದಿಂದ ನಮ್ಮ ಕುದುರೆ ಮುಂದಕ್ಕೆ ಚಲಿಸಿತು. ಅತಿವೇಗ ಪಡೆಯಿತು ಅದರ ಚಲನೆ. ಬಹಳ ದೇಶಗಳು ಕಳೆದುಹೋದವು. ಈಗ ಕುದುರೆ ಸಾಗುತ್ತಿದ್ದುದು ರಾಜ್ಯದ ಒಳಸೀಮೆಯಲ್ಲಿ. ಅದಾವ ಪ್ರದೇಶ ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡೆ. ಹೆಂಗಳೆಯರು ಮಾತ್ರವೇ ಇರುವ ಪ್ರದೇಶ ಅದೆನ್ನುವುದು ತಿಳಿದುಬಂತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
