ಬದುಕಿನ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ನಮ್ಮ ಬದುಕಿನ ಬ್ಯಾಟರಿಯ . ಚಾರ್ಜಿಂಗ್… ನಮ್ಮದೇ ಜವಾಬ್ದಾರಿ” ಈ ಹಿಂದೆ ನಮ್ಮ ಮನೆಗಳಲ್ಲಿ ರಾತ್ರಿಯ ಸಮಯದಲ್ಲಿ ಹಿತ್ತಲಿಗೆ ಹೋಗಲು, ಕರೆಂಟ್ ಇಲ್ಲದ ಸಮಯದಲ್ಲಿ ರಸ್ತೆಯಲ್ಲಿ ಓಡಾಡಲು,, ಹೊಲಗಳಿಗೆ ಹೋಗಲು ಹೀಗೆ ಹತ್ತಾರು ಕೆಲಸ ಕಾರ್ಯಗಳಿಗೆ ಟಾರ್ಚ್ ಗಳನ್ನು ಬಳಸುತ್ತಿದ್ದರು .ರೂಢಿಯ ಭಾಷೆಯಲ್ಲಿ ಬ್ಯಾಟರಿ ಎಂದು ಇವುಗಳನ್ನು ಕರೆಯುತ್ತಿದ್ದರು. ಜೇಬಿನಲ್ಲಿ ಇಟ್ಟುಕೊಳ್ಳುವ ಅಂಗೈಯಲ್ಲಿ ಹಿಡಿಯುವಷ್ಟು ಪುಟ್ಟದಾದ ಪೆನ್ಸಿಲ್ ಟಾರ್ಚ್ ನಿಂದ ಹಿಡಿದು 50-60 ಅಡಿ ದೂರದವರೆಗೆ ಬೆಳಕನ್ನು ಚೆಲ್ಲುವ ದೊಡ್ಡ ಟಾರ್ಚ್ ಗಳು ಪ್ರತಿಯೊಬ್ಬರ ಮನೆಯ ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತಿದ್ದವು. ಅವುಗಳ ಆಕರ ಕೋಶಗಳನ್ನು ಬ್ಯಾಟರಿ ಎಂದು ಕರೆಯುತ್ತಿದ್ದರು. ಸೆಲ್ ಗಳನ್ನು ಬಳಸಿ ಬೆಳಕನ್ನು ಪಡೆಯುವ ಈ ಬ್ಯಾಟರಿಗಳು ಇದೀಗ ಅತ್ಯಂತ ಪುಟ್ಟ ಗಾತ್ರಗಳನ್ನು ಹೊಂದಿದ್ದು ಗಡಿಯಾರದಿಂದ ಹಿಡಿದು ಎಲ್ಲ ಎಲೆಕ್ಟ್ರಾನಿಕ್ ಸಾಮಾನುಗಳಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿವೆ.ಆದರೆ ಸ್ನೇಹಿತರೆ !ನಿಮಗೆ ಗೊತ್ತೇ ?ನಮ್ಮ ದೇಹ ಒಂದು ಮಾನವ ಬ್ಯಾಟರಿ. ಮನುಷ್ಯನೇ ಒಂದು ಹ್ಯೂಮನ್ ಬ್ಯಾಟರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ದೇಹ ಎಂಬ ಬ್ಯಾಟರಿಯು ನೀಡುವ ಶಕ್ತಿಯಿಂದ ನಾವು ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ದೈಹಿಕ ಶಕ್ತಿಯು….ನಮ್ಮ ದೇಹವು ಒಂದು ಇಂಧನವಾಗಿ ಇಡೀ ದೇಹದ ಎಲ್ಲಾ ಅಂಗಗಳು ಸಕ್ಸಮವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ಆಹಾರದ ಮೂಲಕ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗೆ ಸಂಚಯವಾದ ಶಕ್ತಿಯನ್ನು ವಿವಿಧ ಅಂಗಗಳ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬಳಸುತ್ತದೆ. ದೈಹಿಕ ಸಾಮರ್ಥ್ಯವನ್ನು, ದೇಹದ ಚಾಲಕ ಬಲವನ್ನು ಹೆಚ್ಚಿಸುತ್ತದೆ. ನಮ್ಮ ದೇಹದ ಭಾವನಾಶಕ್ತಿಯ ಆಕರ ಹೃದಯವಾಗಿದ್ದು ಇದು ನಮ್ಮ ಮನಸ್ಸಿನ ಭಾವಗಳನ್ನು ನಿಯಂತ್ರಿಸುತ್ತದೆ. ರಕ್ತವನ್ನು ಪಂಪ್ ಮಾಡುವ ಕಾರ್ಯ ಚಟುವಟಿಕೆಯ ಜೊತೆಗೆ ನಮ್ಮ ಮಾನಸಿಕ, ಭಾವನಾತ್ಮಕ ಚಟುವಟಿಕೆಗಳಿಗೆ ಇದುವೇ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಬಂಧಗಳನ್ನು ಜೋಡಿಸುವ, ಸೌಹಾರ್ದತೆಯನ್ನು ತುಂಬುವ ಸಾಮರ್ಥ್ಯ ಇದಕ್ಕಿದೆ. ಪ್ರೀತಿ,ಪ್ರೇಮ, ಸ್ನೇಹ, ಕರುಣೆ, ವಿಶ್ವಾಸ, ಸಹಾನುಭೂತಿಗಳಂತಹ ಒಳ್ಳೆಯ ಭಾವಗಳ ಜೊತೆಗೆ ಸಿಟ್ಟು, ಸೆಡವು, ಕ್ರೌರ್ಯ, ಅಸಮಾಧಾನ, ಅಜ್ಞಾನ ಮುಂತಾದ ಭಾವಗಳನ್ನು ಕೂಡ ಇದು ಹೊಂದಿರುತ್ತದೆ. ಇದರಲ್ಲಿ ಯಾವುದನ್ನು ನಾವು ಹೆಚ್ಚು ಪೋಷಿಸುತ್ತೇವೆಯೋ ಅವೇ ಗುಣಗಳು ನಮ್ಮನ್ನು ಆಳುತ್ತವೆ. ಒಳ್ಳೆಯ ಕುಟುಂಬ, ಪಾಲಕರು, ಉತ್ತಮ ಸಂಸ್ಕಾರಗಳು, ಸೌಹಾರ್ದ ಮತ್ತು ಸಾಮರಸ್ಯಗಳನ್ನು ಹೊಂದಿರುವ ಸಾಮಾಜಿಕ ಪರಿಸರ ನಮ್ಮನ್ನು ರೂಪುಗೊಳಿಸುತ್ತದೆ…. ಇದೆಲ್ಲವನ್ನು ತನ್ನ ಮೂಲಕ ಗ್ರಹಿಸುವ ಹೃದಯವು ನಮ್ಮೆಲ್ಲ ಭಾವನಾತ್ಮಕ ಯೋಚನೆಗಳು ಹಾಗೂ ಯೋಜನೆಗಳಿಗೆ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.ಮಾನಸಿಕ ಶಕ್ತಿ …. ಸಾಮಾನ್ಯವಾಗಿ ಬುದ್ಧಿ, ಜ್ಞಾನ ಎಂದೆಲ್ಲ ಕರೆಯಲ್ಪಡುವ ಈ ಶಕ್ತಿಯನ್ನು ನಮ್ಮ ದೇಹದ ಮೆದುಳಿನ ಭಾಗ ಹೊಂದಿದೆ. ಸೃಷ್ಟಿ ಕಾರ್ಯದ ಶಕ್ತಿಯನ್ನು ಮೆದುಳು ಹೊಂದಿದೆ. ನಮ್ಮೆಲ್ಲ ಕಾರ್ಯ ಯೋಜನೆಗಳ ಸೃಷ್ಟಿಯಾಗುವುದು ಮೊದಲು ಇಲ್ಲಿಯೇ. ನಂತರ ವಿವಿಧ ಅಂಗಗಳ ಮೂಲಕ ಅದು ಕಾರ್ಯಗತವಾಗುತ್ತದೆ ಆ ಮಾತು ಬೇರೆ. ನಮ್ಮ ಯೋಚನೆಗಳು, ಯೋಜನೆಗಳು ಸೃಷ್ಟಿಯಾಗುವುದು ನಮ್ಮ ಮೆದುಳಿನಲ್ಲಿಯೇ. ನಮ್ಮ ಗ್ರಹಿಕೆಗಳು ಬೇರೂರುವುದು ಕೂಡ ನಮ್ಮ ಮೆದುಳಿನಲ್ಲಿಯೇ. ನಮ್ಮ ಬದುಕಿನಲ್ಲಿ ನಾವು ಸಾಧಿಸಬೇಕೆಂದಿರುವ ಗುರಿಯನ್ನು ಹೊಂದುವ ಉದ್ದೇಶ ಸೃಷ್ಟಿಯಾಗುವುದು ಕೂಡ ನಮ್ಮ ಮೆದುಳಿನಲ್ಲಿಯೇ. ನಮ್ಮ ಯೋಚನೆಗಳಲ್ಲಿ ಹುಟ್ಟುವ ತಪ್ಪು-ಸರಿ, ಒಳಿತು-ಕೆಡುಕು ಗಳ ಕುರಿತು ಸ್ಪಷ್ಟವಾದ ತಿಳುವಳಿಕೆಯನ್ನು ನಮಗೆ ನೀಡಲು ಮೆದುಳು ಅತ್ಯಂತ ಸಹಾಯಕ.ಸ್ನೇಹಿತರೆ, ಒಂದೊಮ್ಮೆ ನಮ್ಮ ದೇಹ, ಭಾವ, ಬುದ್ಧಿಗಳು ಏಕಾತ್ಮಕವಾದರೆ ಅದು ದಿವ್ಯ ಶಕ್ತಿಯಾಗಿ ಪರಿಣಮಿಸುತ್ತದೆ. ನಮ್ಮ ದೇಹ ಮನಸ್ಸು ಮತ್ತು ಬುದ್ಧಿಗಳನ್ನು ಒಂದು ಸರಳ ರೇಖೆಯಲ್ಲಿ ಹಿಡಿದಿಡುವ ದಿವ್ಯ ಶಕ್ತಿ ಅಷ್ಟಾಂಗ ಯೋಗದಲ್ಲಿದೆ. ಹೌದು ಅಷ್ಟಾಂಗ ಯೋಗದ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಗಳಲ್ಲಿ ಮೊದಲ ಎರಡು ನಿಯಮಗಳು ನಮಗೆ ಸಾಮಾಜಿಕ ಮತ್ತು ವೈಯುಕ್ತಿಕ ಬದುಕಿನಲ್ಲಿ ನಾವು ಪಾಲಿಸಬಹುದಾದ ಶಿಸ್ತಿನ ಪಾಠವನ್ನು ನಮಗೆ ಹೇಳಿ ಕೊಡುತ್ತವೆ. ಆಸನವು ನಮಗೆ ದೇಹವನ್ನು ಸುಲಲಿತವಾಗಿ ಬಳಸುವ ಮೂಲಕ ನಿಯಮಿತವಾದ ಉಚ್ಚ್ವಾಸ ಮತ್ತು ನಿ:ಶ್ವಾಸಗಳ ಜೊತೆಗೆ ವಿವಿಧ ಬಗೆಯ ಭಂಗಿಗಳನ್ನು ವ್ಯಾಯಾಮದ ರೂಪದಲ್ಲಿ ಅಭ್ಯಾಸ ಮಾಡಲು…ತನ್ಮೂಲಕ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ. ಪ್ರಾಣಾಯಾಮದ ವಿವಿಧ ಕ್ರಿಯೆಗಳು ಮಾನಸಿಕ ಸ್ಥಿತಿಯ ಸಮತೋಲನಕ್ಕೆ ಕಾರಣವಾಗುತ್ತದೆ. ಪ್ರತ್ಯಾಹಾರವು ನಮ್ಮನ್ನು ವಿಚಲಿತಗೊಳಿಸುವ ಇಂದ್ರಿಯಗಳನ್ನು ನಿಗ್ರಹಿಸಲು ಸಹಾಯಕವಾಗುತ್ತದೆ ನಮ್ಮನ್ನು ಆಕರ್ಷಿಸುವ ಎಲ್ಲ ಬಗೆಯ ಲೌಕಿಕ ವಿಷಯಗಳ ಮೇಲೆ ನಿಯಂತ್ರಣವನ್ನು ಹೊಂದುವ ಕ್ರಿಯೆಯೇ ಪ್ರತ್ಯಾಹಾರ. ಅಷ್ಟಾಂಗ ಯೋಗದ ಕೊನೆಯ ಮೂರು ಅಂಗಗಳಾದ ಧ್ಯಾನ ಧಾರಣ ಹಾಗೂ ಸಮಾಧಿಗಳು ಮನುಷ್ಯನನ್ನು ಆಂತರಿಕವಾಗಿ ಬಲಿಷ್ಠಗೊಳಿಸಿ ಲೌಕಿಕ ವಿಷಯಗಳಿಂದ ಒಂದು ಒಳ್ಳೆಯ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ…. ಎಲ್ಲವನ್ನು ಸಮಚಿತ್ತ, ಸಮಭಾವದಿಂದ ನೋಡುವ ಮಾನಸಿಕ ಶಕ್ತಿ ಇವುಗಳನ್ನು ರೂಡಿಸಿಕೊಳ್ಳುವವರ ಪಾಲಾಗುತ್ತದೆ ಧಾರಣ ಎಂದರೆ ಏಕಾಗ್ರತೆ. ಮಾಡುವ ಯಾವುದೇ ಕೆಲಸದಲ್ಲಿಯೂ ಶ್ರದ್ದೆ ಹಾಗೂ ತನ್ಮಯತೆಯನ್ನು ಹೊಂದಿ ಏಕಾಗ್ರ ಚಿತ್ರದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು. ಅಷ್ಟಾಂಗ ಯೋಗದ ಮೊದಲ ಏಳು ಅಂಗಗಳನ್ನು ನಾವು ನಿರ್ವಹಿಸಿದಾಗ ನಮಗೆ ದೊರೆಯುವ ಸ್ಥಿತಿಯೇ ಸಮಾಧಿ. ಸಮಾಧಿ ಸ್ಥಿತಿಯಲ್ಲಿ ವ್ಯಕ್ತಿಯು ತನ್ನ ಅಹಮಿಕೆಯಿಂದ,, ಎಲ್ಲ ರೀತಿಯ ಇಂದ್ರಿಯ ಲಾಲಸೆಗಳಿಂದ ಸಂಪೂರ್ಣ ಮುಕ್ತವಾಗಿರುತ್ತಾನೆ ಹಾಗೂ ಈ ಬ್ರಹ್ಮಾಂಡದ ಅನಂತತೆಯಲ್ಲಿ ತನ್ನನ್ನು ತಾನು ಒಂದಾಗಿಸಿಕೊಳ್ಳುತ್ತಾನೆ.ಹೀಗೆ ತನ್ನ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದುಕನ್ನು ಏಕತ್ರಗೊಳಿಸುವ ವ್ಯಕ್ತಿಯ ಬದುಕು ಖಂಡಿತವಾಗಿಯೂ ಬದಲಾಗುತ್ತದೆ. ಆತನ ಸುತ್ತಲೂ ಆತನ ವ್ಯಕ್ತಿತ್ವದ ಪ್ರಭಾವಳಿ ಹರಡುತ್ತದೆ. ಆತನ ನಿರ್ಣಯಗಳು ವೈಯುಕ್ತಿಕತೆಯನ್ನು ಹಿಂದಕ್ಕೆಳಸಿ ಮನುಕುಲದ ಉದ್ಧಾರವನ್ನು ಕುರಿತಾಗಿ ಇರುತ್ತದೆ.ನೋಡಿದಿರಾ ಸ್ನೇಹಿತರೆ ಬದುಕು ನಮ್ಮದು ನಿರ್ಧಾರಗಳು ಕೂಡ ನಮ್ಮವೇ ಆಗಿರಬೇಕು ನಮ್ಮ ಬದುಕಿನ ಚುಕ್ಕಾಣಿಯನ್ನು ನಾವೇ ಹಿಡಿದು ಒಳ್ಳೆಯ ಹವ್ಯಾಸಗಳನ್ನು ನಮಗಾಗಿಸಿಕೊಂಡು ಬದುಕನ್ನು ಬಂಗಾರವಾಗಿಸಿಕೊಳ್ಳುವ ಆಯ್ಕೆ ಹಾಗೂ ಹಕ್ಕು ನಮ್ಮದೇ ಏನಂತೀರಾ? ವೀಣಾ ಹೇಮಂತ್ ಗೌಡ ಪಾಟೀಲ್