ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಬೆಳಗುವ ಬಾಳಿಗೆ ಕರಗುವ ಮನಸ್ಸು ಪ್ರತಿದಿನದ ಓಟದಲ್ಲಿ ನಮ್ಮಲ್ಲಿ ಬಹುತೇಕರು ಇತರರ ಭಾವನೆಗಳನ್ನು ಕಷ್ಟಗಳನ್ನು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಎಲ್ಲರಿಗೂ ತಮ್ಮತಮ್ಮ ಹಿತಾಸಕ್ತಿ ಮಾತ್ರ ಮುಖ್ಯ. ದಾವಂತದ ಈ ದಿನಗಳಲ್ಲಿ ಎಲ್ಲದಕ್ಕೂ ಅವಸರ ಬೇರೆ. ಹೀಗಾಗಿ ಬೇರೆಯವರಿಗೆ ಮಿಡಿಯುವುದನ್ನು ಮರೆಯುತ್ತಿದ್ದೇವೆ. ಈಗಿನ ಸಮಯದಲ್ಲಿ ಸಂಬoಧಗಳು ಹಳಸಿ ಹೋಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು: ನಮ್ಮಲ್ಲಿ ದಯೆ ಅಥವಾ ಕರುಣೆಯ ಕೊರತೆ ಎದ್ದು ಕಾಣುತ್ತಿರುವುದು. ಇದರೊಂದಿಗೆ ಇನ್ನೊಂದು ವಿಷಯವೆಂದರೆ ನಾವು ಬಾಹ್ಯ ಸೌಂದರ್ಯಕ್ಕೆ ಜೋತು ಬಿದ್ದಿದ್ದೇವೆ. ಬ್ರಾಂಡೆಡ್ ಉಡುಪುಗಳು ಉನ್ನತ ಪದವಿಗಳು ನಮ್ಮನ್ನು ಗುರುತಿಸುವಂತೆ ಮಾಡಬಹುದು ಆದರೆ ನಮ್ಮನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಸುವುದು ನಮ್ಮಲ್ಲಿರುವ ದಯಾಗುಣ ಒಂದೇ. ಬೆಳಗುವ ಬಾಳಿಗೆ ದಯೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ. ದಯೆ ಎಂದರೇನು? ದಯೆ ಎನ್ನುವುದು ಕೇವಲ ಯಾರಿಗಾದರೂ ಹಣ ಇಲ್ಲವೇ ವಸ್ತುಗಳನ್ನು ದಾನ ಮಾಡುವುದು ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ, ನಿಜವಾದ ದಯೆಯು ಮುಂದಿನವರ ಕಷ್ಟವನ್ನು ತನ್ನದೇ ಕಷ್ಟ ಎಂದು ಭಾವಿಸುವುದಾಗಿದೆ. ನಮ್ಮ ಸಹಜೀವಿಗಳಿಗೆ ಅಂದರೆ ಪ್ರಾಣಿ ಪಕ್ಷಿಗಳಿಗೆ ಪ್ರೀತಿ ತೋರುವುದು. ಬೇರೆಯವರ ನೋವಿಗೆ ಸ್ಪಂದಿಸುವುದು ಮತ್ತು ಮುಂದಿನವರು ಹೇಳುವ ಮುನ್ನವೇ ಸ್ವಯಂಪ್ರೇರಿತವಾಗಿ ಒಳ್ಳೆಯದನ್ನು ಮಾಡುವುದೇ ದಯೆ ಆಗಿದೆ. ‘ದಯೆಯ ಯಾವುದೇ ಕೆಲಸವು ಎಷ್ಟೇ ಚಿಕ್ಕದಾಗಿದ್ದರೂ, ಅದು ಎಂದಿಗೂ ವ್ಯರ್ಥವಾಗುವುದಿಲ್ಲ.’ ಅಷ್ಟಕ್ಕೂ ದಯಾಗುಣದಲ್ಲಿ ನಿಸ್ವಾರ್ಥ ಭಾವ ಇರುತ್ತದೆ. ಅಂದರೆ ಇಲ್ಲಿ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಒಳ್ಳೆಯದನ್ನು ಮಾಡುವುದು ಒಳಗೊಂಡಿದೆ. ಮನಷ್ಯನನ್ನು ಮನುಷ್ಯನನ್ನಾಗಿಸುವ ದಿವ್ಯ ಶಕ್ತಿಯೂ ಇದಕ್ಕಿದೆ. ಅಷ್ಟೇ ಅಲ್ಲ ಅದು ಸಮಾಜವನ್ನು ಒಂದುಗೂಡಿಸುವ ಅತ್ಯದ್ಭುತ ಶಕ್ತಿಯೂ ಆಗಿದೆ.ನಮ್ಮ ಕಷ್ಟ ಕಾಲದಲ್ಲಿ ದಯಾಳುಗಳು ಸ್ಪಂದಿಸಿದಾಗ ನಮಗೂ ಅವರ ಹಾಗೆ ಬೇರೆಯವರ ನೋವಿಗೆ ಮಿಡಿಯಬೇಕೆಂದು ಅನ್ನಿಸದೇ ಇರದು. ಆದರೆ ದಯೆಯನ್ನು ಹೇಗೆ ಬೆಳೆಸಿಕೊಳ್ಳುವುದೆಂದು ತಿಳಿಯುವುದೇ ಇಲ್ಲ. ನಿತ್ಯ ಬದುಕಿನಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವೂ ದಯಾಳುಗಳಾಗಬಹುದು. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಸರಳ ತಂತ್ರಗಳು. ಸಹಾನುಭೂತಿ ನಮಗೆ ಗೊತ್ತಿಲ್ಲದಂತೆ ಬೇರೆಯವರನ್ನು ಟೀಕಿಸದಿದ್ದರೆ ನಿಂದಿಸದಿದ್ದರೆ ಉಂಡ ಅನ್ನ ಕರಗುವುದೇ ಇಲ್ಲವೆಂಬ ಕೆಟ್ಟ ಸ್ವಭಾವವನ್ನು ಅಂಟಿಸಿಕೊoಡಿರುತ್ತೇವೆ. ಇದು ಸಾಲದೆಂಬoತೆ ಕೋಪದಿಂದ ಪರಿಸ್ಥಿತಿಯನ್ನು ನಮಗೆ ಪೂರಕವಾಗುವಂತೆ ಮಾಡಿಕೊಳ್ಳಲು ನೋಡುವುದು. ಹಾಗೆ ಟೀಕಿಸುವ ಸ್ವಭಾವ ಬೇರೆಯವರಿಗೆ ಅದೆಷ್ಟು ನೋವನ್ನು ಉಂಟು ಮಾಡುತ್ತದೆಂಬುದು ನಮಗೆ ಗೊತ್ತಾಗುವುದೇ ಇಲ್ಲ. ದಯಾಳುಗಳಾಗಬೇಕೆಂದರೆ, ಯಾರನ್ನಾದರೂ ಟೀಕಿಸುವ ಮುನ್ನ ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ ಎಂದು ಯೋಚಿಸಬೇಕು. ಬೇರೆಯವರ ಪರಿಸ್ಥಿತಿಯನ್ನು ಅವರ ಸ್ಥಾನದಲ್ಲಿ ನಿಂತು ನೋಡುವುದೇ ಸಹಾನುಭೂತಿ. ಈ ರೀತಿಯ ಸಹಾನುಭೂತಿ ದಯೆಯನ್ನು ಹೆಚ್ಚಿಸುತ್ತದೆ. ದ್ವೇಷದ ಬದಲು ಪ್ರೀತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಇದು ಕಲಿಸುತ್ತದೆ. ದಲೈ ಲಾಮಾ ಉಲ್ಲೇಖದಂತೆ ‘ಸಾಧ್ಯವಾದಾಗಲೆಲ್ಲ ದಯೆ ಉಳ್ಳವರಾಗಿರಿ ಮತ್ತು ದಯೆ ತೋರಿಸುವುದು ಯಾವಾಗಲು ಸಾಧ್ಯವಿರುತ್ತದೆ.’ ಆಲಿಸಿ ಇತ್ತೀಚಿಗೆ ನಾವೆಲ್ಲ ಬೇರೆಯವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದೇವೆ. ಎದುರಿಗಿನವರು ಏನೋ ಹೇಳುತ್ತಿದ್ದರೆ ನಾವು ಮೊಬೈಲ್‌ನಲ್ಲಿ ಬ್ಯುಸಿ ಇರುತ್ತೇವೆ. ಇಲ್ಲವೇ ಏನೂ ಸಂಬoಧವಿಲ್ಲದoತೆ ಕುಳಿತು ಬಿಡುತ್ತೇವೆ. ಉತ್ತಮ ಸಂವಹನವೆoದರೆ ಕೇವಲ ಮಾತನಾಡುವುದಲ್ಲ, ಎದುರಿಗಿನವರ ಮಾತನ್ನು ತಾಳ್ಮೆಯಿಂದ ಕೇಳುವುದು. ಬೇರೆಯವರು ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವಾಗ ಅವರ ಮಾತನ್ನು ಮಧ್ಯದಲ್ಲೇ ಕತ್ತರಿಸದೇ ಪೂರ್ಣವಾಗಿ ಕೇಳಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನಾನು ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಳ್ಳಬೇಕು. ಆದರೆ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ ಎಂದರೆ ಸ್ವಾರ್ಥವಾಗಿ ಬಿಡುತ್ತದೆ. ಆದ್ದರಿಂದ ಇತರರನ್ನು ಸಾವಧಾನದಿಂದ ಆಲಿಸುವುದನ್ನು ಬೆಳೆಸಿಕೊಳ್ಳಬೇಕು.ಸಕಾರಾತ್ಮಕತೆಸಾಮಾಜಿಕ ಜಾಲತಾಣದಲ್ಲಿ ಯಾರನ್ನೋ ಟ್ರೋಲ್ ಮಾಡುವುದು ಕೀಳುಮಟ್ಟದ ಕಾಮೆಂಟ್ ಮಾಡುವುದು ಹೆಚ್ಚಾಗಿದೆ. ಇದರ ಬದಲು ಸಕಾರಾತ್ಮಕ ಕಾಮೆಂಟ್‌ಗಳನ್ನು ಹಾಕುವ ಮೂಲಕ ಡಿಜಿಟಲ್ ಲೋಕದಲ್ಲಿ ದಯಾಗುಣವನ್ನು ಮೆರೆಯಬಹುದು. ಮಾಯಾ ಎಂಜಿಲೋ ಅವರ ಉಲ್ಲೇಖವು ಇಲ್ಲಿ ಸೂಕ್ತವೆನಿಸುತ್ತದೆ. ‘ಜನರು ನೀವು ಹೇಳಿದ್ದನ್ನು ಮರೆಯಬಹುದು, ನೀವು ಮಾಡಿದ್ದನ್ನು ಮರೆಯಬಹುದು, ಆದರೆ ನೀವು ಅವರಿಗೆ ಹೇಗೆ ಅನಿಸುವಂತೆ ಮಾಡಿದ್ದೀರಿ ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಎಂದು ನಾನು ಕಲಿತಿದ್ದೇನೆ.’ ಪ್ರಕೃತಿ ಪ್ರಕೃತಿ ಸುಂದರ ಬದುಕಿಗೆ ಬೇಕಾಗಿದ್ದನ್ನೆಲ್ಲ ನಮಗೆ ನೀಡಿದೆ. ಹೀಗಾಗಿ ನಾವೂ ಸಹ ಪ್ರಕೃತಿಯ ಮೇಲೆ ಕರುಣೆ ತೋರಬೇಕು. ಅನಗತ್ಯವನ್ನು ಗಿಡ-ಮರಗಳನ್ನು ಕತ್ತರಿಸದಿರುವುದು. ಹಸಿದ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದು. ಹಸಿದವರಿಗೆ ಅನ್ನ ನೀಡುವುದು, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವುದು. ಹಿರಿಯರನ್ನು ಗೌರವಿಸುವುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡುವುದನ್ನು ಮರೆಯಬಾರದು. ಕ್ಷಮಾ ಗುಣ ಮಾರ್ಕ್ ಟ್ವೆನ್ ಹೇಳಿದ ಉಲ್ಲೇಖವು ಅತ್ಯದ್ಭುತವಾಗಿದೆ.’ ದಯೆ ಎನ್ನುವುದು ಕಿವುಡರು ಕೇಳಬಲ್ಲ, ಕುರುಡರು ನೋಡಬಲ್ಲ ಒಂದು ಅದ್ಭುತ ಭಾಷೆ.’ ಬೇರೆಯವರು ಮಾಡಿದ ತಪ್ಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವುದಾಗಲಿ, ಇಲ್ಲವೇ ಕೊರಗುವುದರಿಂದ ಏನೂ ಪ್ರಯೋಜನವಿಲ್ಲ. ಸಾದ್ಯವಾದಷ್ಟು ಬೇಗನೆ ಮರೆತು ಕ್ಷಮಿಸಬೇಕು. ಬೇರೆಯವರ ತಪ್ಪುಗಳನ್ನು ಸಾರ್ವಜನಿಕವಾಗಿ ನಿಂದಿಸದೆ ಖಾಸಗಿಯಾಗಿ ಮೃದುವಾಗಿ ತಿದ್ದಿ ಹೇಳಬೇಕು. ಅಂತೆಯೆ ನಿಮ್ಮ ಮೇಲೆ ನಿಮಗೆ ಪ್ರೀತಿ ದಯೆ ಇರುವುದು ಮುಖ್ಯವಾಗುತ್ತದೆ. ಎಂದೋ ಮಾಡಿದ ತಪ್ಪಿಗೆ ಇವತ್ತಿಗೂ ಕೂಡ ನಮ್ಮನ್ನು ನಾವು ದೂಷಿಸಿಕೊಳ್ಳುವುದು ಸರಿಯಲ್ಲ. ಭೂತಕಾಲದ ತಪ್ಪುಗಳಿಗಾಗಿ ದೂಷಿಸಿಕೊಳ್ಳುತ್ತಿದ್ದರೆ ಮನಸ್ಸು ಕಲುಷಿತಗೊಳ್ಳುತ್ತದೆ. ಆದ್ದರಿಂದ ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಬೇಕು. ಅದು ಶಾಂತಿಯನ್ನು ನೀಡುತ್ತದೆ.ಭಾವನಾತ್ಮಕತೆಎದುರಿಗಿದ್ದವರು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲು ಅವರಿಗೆ ಸಮಾಧಾನದಿಂದ ಮಾತನಾಡಿಸಿ ಏನಾದರೂ ತೊಂದರೆ ಇರಬಹುದೇ ಎಂದು ಯೋಚಿಸಬೇಕು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು. ನಿಮ್ಮ ಮಾತು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದ ಮಾತು ಮೃದುವಾದಷ್ಟು ಒಳಿತು.  ‘ನುಡಿದರೆ ಮುತ್ತಿನ ಹಾರದಂತಿರಬೇಕು. ಎಂಬ ನುಡಿಯಂತೆ ನಮ್ಮ ಮಾತುಗಳು ಇತರರನ್ನು ಪ್ರೋತಾಹಿಸುವಂತಿರಬೇಕು. ಮಾತು ಮುಂದಿನವರಿಗೆ ಚೂರಿ ಇರಿಯುವಂತಿದ್ದರೆ ಅವರು ಎಂದೂ ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಮಾತು ಮುಂದಿನವರಿಗೆ ನೋವುಂಟು ಮಾಡದಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗೌರವಿಸುತ್ತಾರೆ.  ಗೌತಮಬುದ್ಧ ಹೇಳಿದಂತೆ ‘ಕೋಪವನ್ನು ಪ್ರೀತಿಯಿಂದ ಗೆಲ್ಲಿ, ಕೆಡುಕನ್ನು ಒಳಿತಿನಿಂದ ಗೆಲ್ಲಿ, ಜಿಪುಣತನವನ್ನು ದಾನದಿಂದ ಗೆಲ್ಲಿ, ಸುಳ್ಳನ್ನು ಸತ್ಯದಿಂದ ಗೆಲ್ಲಿ.’ ಬದುಕಲು ಬಿಡೋಣ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮನುಷ್ಯನಲ್ಲಿ ದಯೆ ಇಲ್ಲದಿದ್ದರೆ ಆತ ಜೀವಂತ ಶವಕ್ಕೆ ಸಮಾನ. ಅಂಥ ಸಮಾಜಕ್ಕೆ ಬೆಲೆಯೂ ಇರುವುದಿಲ್ಲ. ಮಹಾತ್ಮಾ ಗಾಂಧೀಜಿ ಹೇಳಿದಂತೆ ‘ಎಲ್ಲಿ ದಯೆ ಮತ್ತು ಪ್ರೀತಿ ಇರುತ್ತದೆಯೋ, ಅಲ್ಲಿ ದೇವರು ಇರುತ್ತಾನೆ.’ ದಯೆ ಹಣಕ್ಕಿಂತಲೂ ಮುಖ್ಯ ಹೀಗಾಗಿ ದಯೆ ತೋರಲು ಶ್ರೀಮಂತ ಇರಬೇಕೆಂದೇನೂ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು. ಅಗತ್ಯವಿದ್ದವರಿಗೆ  ಸಣ್ಣ ಪುಟ್ಟ ಸಹಾಯದಿಂದಲೂ ದಯೆ ತೋರಬಹುದು. ದಾರಿ ತಪ್ಪಿದವರಿಗೆ ದಾರಿ ತೋರಿಸಬಹುದು. ಪ್ರಕೃತಿ ಮೇಲೆ ಪವಿತ್ರ ಭಾವ ಹೊಂದಬೇಕು. ಪರರ ಕಷ್ಟಗಳನ್ನು ಕಂಡು ಕರಗುವ ಮತ್ತು ಫಲಾಪೇಕ್ಷೆಯಿಲ್ಲದೇ ಸಹಾಯ ಮಾಡಲು ಮುಂದಾಗುವ ಮನಸ್ಸನ್ನು ಬೆಳಸಿಕೊಳ್ಳಬೇಕು. ‘ಬದುಕೋಣ ಬದುಕಲು ಬಿಡೋಣ.’ ಎಂಬ ತತ್ವವನ್ನು ಪಾಲಿಸಿದರೆ ಜೀವನ ನಂದನವನವಾಗುವುದು ಜಯಶ್ರೀ.ಜೆ. ಅಬ್ಬಿಗೇರಿ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ Read Post »

ಕಾವ್ಯಯಾನ

ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ”

ಕಾವ್ಯ ಸಂಗಾತಿ ಚಂಪಾ ಬಿ. ಜಿ. “ಒಲವಿನೋಲೆ” ಮಣ್ಣಿನ ವಾಸನೆ ಹೊತ್ತ ಮೊಗಸಿರಿಮುಗ್ಧ ನಗುವಿನ ಮೋಹನಾಂಗಿನಿನ್ನ ನಡಿಗೆಯ ಲಯಕೆಸುಳಿಗಾಳಿ ತಿಳಿಯಾಗಿತುಂತುರು ಹನಿಯಾಗಿಭುವಿಯೆಲ್ಲಾ ಹರಡಿತೇನೋಇವಳ ಒಡನಾಟವೇಮಧುರ ಸಂಗೀತವಾಗಿಝರಿಯಾಗಿ ಹರಿಯಿತೇನೋಸೂರ್ಯನ ಕಿರಣ ಕೂಡನಾಚಿ ಮೇಘಗಳ ಹಿಂದೆ ಸರಿಯಿತೇನೋನೀ ನಡೆವ ಹಾದಿಯಲಿ ನಿಸರ್ಗವೇಬರೆಯಿತೇನೋ ಒಲವಿನೋಲೆ. ಚಂಪಾ ಬಿ. ಜಿ.

ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಮರದ ಮೌನ” ನನ್ನನ್ನುನೆರಳಿನ ಗಾಢತೆಯಿಂದ ಅಳೆಯುತ್ತೀರಿಬೇರುಗಳ ಆಳವನ್ನುಯಾರೂ ಗಮನಿಸುವುದಿಲ್ಲ! ನಾನು ನಿಂತಿರುವುದುನಿಮಗೆ ಸುಲಭವೆನಿಸುತ್ತದೆ;ನೆಲದೊಳಗೆ ಪ್ರತಿದಿನಕುಸಿಯದೆ ಹಿಡಿದಿಟ್ಟುಕೊಳ್ಳುವಬೇರಿನ ಹೋರಾಟ ನಿಮಗೆ ಕಾಣುವುದಿಲ್ಲ ನನ್ನ ಕೊಂಬೆಗಳಲ್ಲಿಹಕ್ಕಿಗಳು ಗೂಡು ಕಟ್ಟಿದಾಗಅದು ಅವುಗಳ ಮನೆಯೆನ್ನುತ್ತೀರಿ;ಗಾಳಿ ಅವನ್ನು ಕೆಡವಿದಾಗನನ್ನನ್ನೇ ಶಾಪಗ್ರಸ್ತವೆನ್ನುತ್ತೀರಿ! ನಾನು ಉದುರಿಸಿದ ಎಲೆಗಳುನನ್ನ ಸೋಲಲ್ಲ ಕೇಳಿರಿ;ಹೊಸ ಋತುವಿಗೆ ಬರೆದಮುನ್ನುಡಿಯಷ್ಟೇ ನೋಡಿರಿ! ನನ್ನ ಹಣ್ಣುಗಳ ಸಿಹಿಯನ್ನುನಿಮ್ಮ ನಾಲಿಗೆ ನೆನಪಿಡುತ್ತದೆ;ಆ ಸ್ವಾದಕ್ಕೆ ಕಾರಣವಾದನನ್ನ ಕಹಿ ಬೇರುಗಳನ್ನುಯಾರೂ ನೆನಪಿಸಿಕೊಳ್ಳುವುದಿಲ್ಲ! ಕಲ್ಲೆಸೆದ ಕೈಗಳಿಗೂನೆರಳನ್ನೇ ಕೊಟ್ಟಿದ್ದೇನೆ!ಆದರೂ ನನ್ನ ಮೌನವನ್ನುದುರ್ಬಲತೆಯೆಂದು ಕರೆಯುತ್ತೀರಿ! ನಾನು ಆಕಾಶದ ಕಡೆಎತ್ತರವಾಗಿ ಬೆಳೆದಂತೆಯೇಭೂಮಿಯ ಆಳಕ್ಕೆವಿನಯದಿಂದ ಇಳಿದಿದ್ದೇನೆ! ಕೊನೆಗೆ ನನ್ನನ್ನು ಇಂಚಿಂಚು ಕಡಿದುಮೇಜು ಬಾಗಿಲು ಚಿತೆಯನ್ನಾಗಿ ಮಾಡುತ್ತೀರಿ;ರೂಪಗಳು ಬದಲಾಗುತ್ತವೆ!ನನ್ನ ಮರತ್ವ ಮಾತ್ರ ಸಾಯುವುದಿಲ್ಲ! ನೀವು ಕಾಣುವುದುಮರದಂತಹ ನನ್ನ ಸಪೂರ ದೇಹ!ನಾನು ಬದುಕುವುದುಬೇರುಗಳ ಗಾಢ ನಿಗೂಢ ಮೌನ! ನಿಮ್ಮ ನೋಟಕ್ಕೆನಾನು ಕೇವಲ ಮರದಂತ ಸ್ವತ್ರು!ನನ್ನ ಆತ್ಮದ ಸಮಾಧಾನಕ್ಕೆಲೋಕದ ಸತ್ಯ ವ್ಯವಹಾರಕ್ಕುನಾನೇ ಒಂದು ಭೂಮಿ ಸಂಪತ್ತು! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ” Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ” ಕಟು ಪದದಿ ಕುಟುಕಿ ಪ್ರೀತಿಯಿಂದ ನಗುವ ಹೂಮನದ ಸ್ನೇಹ ಗಾನಕೆ ಅದೆಂತಹ ಹೆಸರನಿಟ್ಟೆಹಾಡಿ ಹರಸಿ ಹೃದಯದುಂಬಿ ಕುಣಿವ ಭಾವ ತಾನಕೆ ಅದೆಂತಹ ಹೆಸರನಿಟ್ಟೆ ನೂರು ಸಲ ದೂರ ನೂಕಿದರೂ  ಉಸಿರೆತ್ತದ ಹದುಳ ಜೀವ ಮಿಡಿದ ಮಧುರ ಗಾನವದುಮಾತಿನ ಚೂರಿಯಿಂದ ಇರಿದು ಕೊಂದು ಪವಿತ್ರ ನೇಹ ಪಾನಕೆ ಅದೆಂತಹ ಹೆಸರನಿಟ್ಟೆ ಕಾವ್ಯಯಾನದ ಪಥಿಕ ಮೃದು ಮಧುರ ಎದೆಹಾಸ ತುಂಬೆಲ್ಲ ಮಾತಿನ ಮುಳ್ಳುಗಳ ನೇವರಿಕೆಮಲ್ಲಿಗೆ ಮನದ ಮೌನ ದೋಣಿಯ ಪ್ರೀತಿ ಪಯಣ ಯಾನಕೆ  ಅದೆಂತಹ  ಹೆಸರನಿಟ್ಟೆ ತೊಟ್ಟು ನೀನಿತ್ತ ಗಾಯಗಳ ಆಭರಣ ಮೈ ನೇವರಿಸಿ ಹೃದಯ ಭಿತ್ತಿಯಲ್ಲಿ ಕಾಪಿಟ್ಟು ಕೊಂಡಿರುವೆ.ಕೊಟ್ಟ ನೋವುಗಳ ಸರಮಾಲೆ ಹೊತ್ತು ನಿನ್ನೆಡೆಗೆ ಬರುವ ಒಲವ ಹೆಜ್ಜೆ ಪಾದಕೆ ಅದೆಂತಹ ಹೆಸರನಿಟ್ಟೆ. ಬೆಳದಿಂಗಳ ಕಸಿದು ಕಾರ್ಗತ್ತಲು ನೀವಿದ ಶಶಿಗೆ ಗೊತ್ತಿಲ್ಲವೇ  ತಾನು ನೀಡಿದ ನೋವುಇಂದುವಿನ ಅಂತರಂಗದಿ ಅರಳಿದ  ಹೂಗೆಜ್ಜೆ ನಾದಕೆ ಅದೆಂತಹ ಹೆಸರನಿಟ್ಟೆ – ಇಂದಿರಾ  ಮೋಟೆಬೆನ್ನೂರ. ಬೆಳಗಾವಿ.

ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ” Read Post »

ಕಾವ್ಯಯಾನ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ”

ಕಾವ್ಯ ಸಂಗಾತಿ ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” ಮಸೀದೆಯ ಅಜಾನ್ಚರ್ಚ್ ನಲ್ಲಿ  ಕೇಳಬೇಕು ಚರ್ಚ್ ನಲ್ಲಿಯ ಪ್ರಾರ್ಥನೆಮಂದಿರ ದಲ್ಲಿ  ಜರುಗಬೇಕು ಮಂದಿರ ದಲ್ಲಿ ಸೇರಿದ ಜನಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ನನ್ನ ಕಾಯಕರ್ಪುರ ವಾಗಬೇಕು ಮಂದಿರ ಮಸೀದೆಚರ್ಚ್ ನಲ್ಲಿ ಬೆಳಗಬೇಕು ನರನಾಡಿಗಳುನೀಲಾಂಜನಕೆ ಬತ್ತಿ ಯಾಗಬೇಕು ರಕುತ ಎಣ್ಣಿಯಾಗಬೇಕುಮನಸು ಬೆಣ್ಣಿಯಂತೆ ಕರಗಬೇಕು ಆ ಕಾಲಕ್ಕಾಗಿ ನನ್ನಕಣ್ಣುಗಳು ಕಾಯಬೇಕು ಎ.ಎಸ್. ಮಕಾನದಾರ ಗದಗ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” Read Post »

ಕಾವ್ಯಯಾನ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಶ್ರೀಶೈಲ ಮಾದಣ್ಣವರ ಗಜಲ್ ಮುಗಿಲ ವೀಣೆ ಮೀಟಿದವರಾರು ನುಡಿಸುತಿದೆ ಮೇಘ ರಾಗಹೃದಯ ಕೋಣೆಯ ತಟ್ಟಿದವರಾರು ಹರಿಸುತಿದೆ ಅನುರಾಗ ಸುರಿವ ಮಳೆ ಮೋಡಗಳಲಿ ಮಿಂಚುತಿದೆ ಬೆಳಕಿನ ಕೋಲುಬಾನಿನ ಎದೆಗಿಳಿದವರಾರು ಬೆಳಗಿಸುತಿಹರು ಪ್ರೀತಿ ಚಿರಾಗ ಹರಿದ ಹನಿ ಹನಿಗಳಿಗೂ ಹೂ ಅರಳಿಸುವ ಹಂಬಲಗಳುಮುತ್ತು ಮಣಿ ಬಿತ್ತಿದವರಾರು ಹರಡುತಿದೆ ಪ್ರೇಮ ಪರಾಗ ಉಂಡ ನೆಲವು ಹಸಿಯಾಗಿದೆ ಪ್ರೀತಿ ಇಂಗಿ ಒಡಲಿನೊಳಗೆಎದೆಹಾಲು ಉಣಿಸಿದವರಾರು ತೊದಲಿನಲೂ ಹೊಸರಾಗ ಹಸಿರು ಉಸಿರು ಬೆಳೆಸಿಕೊಂಡು ನಗುತಿದೆ ನೋಡು ಪರಿಸರಬಾಳು ತೆನೆಗಟ್ಟಿಸಿದವರಾರು ಬದುಕು ಈಗ ಬಲು ಸರಾಗ ಡಾ. ಶ್ರೀಶೈಲ ಮಾದಣ್ಣವರ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-29 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್‌ ಚೇತನ ಕನ್ನಡ ಕೋಟಿ ಪ್ರಕಾಶನ ನಿರ್ಮಾಣ ಗಡಿನಾಡ ಸೊಲ್ಲಾಪುರದಲಿ ಕನ್ನಡ ಕೋಟಿ ಪ್ರಕಾಶನ ಸ್ಥಾಪನೆ ಸ್ವಾತಂತ್ರ್ಯಾನಂತರ ಭಾರತದ ರಾಜ್ಯಗಳ ಪುನರ್ರಚನೆಗೆ ಭಾಷೆಯನ್ನು ಪ್ರಮುಖ ಆಧಾರವನ್ನಾಗಿ ಪರಿಗಣಿಸುವ ಚರ್ಚೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನಿಪ್ಪಾಣಿ, ಬೀದರ ಮೊದಲಾದ ಭಾಗಗಳಲ್ಲಿ ಭಾಷಾ ಆಧಾರಿತ ಗುರುತಿನ ಪ್ರಶ್ನೆ ತೀವ್ರ ಸ್ವರೂಪ ಪಡೆದಿತು.ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿತ್ತು.  ಕನ್ನಡಿಗರಲ್ಲಿದ್ದ ಅಜಾಗರೂಕತೆ ಹಾಗೂ ಸಂಘಟನೆಯ ಕೊರತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು.ಆ ಸಮಯದಲ್ಲಿ ದೇಶದಾದ್ಯಂತ ಜನಗಣತಿ ಕಾರ್ಯ ಆರಂಭವಾಗಿತ್ತು. ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಯಾವ ಭಾಷೆಯೆಂದು ದಾಖಲಿಸುತ್ತಾರೋ, ಅದರ ಆಧಾರದ ಮೇಲೆಯೇ ಮುಂದಿನ ಭಾಷಾವಾರು ರಾಜ್ಯಗಳ ರಚನೆಗೆ ಮಹತ್ವದ ಆಧಾರ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಗಡಿನಾಡಿನ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿತ್ತು.  ಒಳನಾಡಿನ ಕನ್ನಡಿಗರಿಗಿಂತ ಗಡಿನಾಡಿನ ಕನ್ನಡಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇಂಥ ಸಂದರ್ಭದಲ್ಲಿ ಕೆಲವು ಮಹಾರಾಷ್ಟ್ರ ಪರ ಸಂಘಟನೆಗಳು ಮುಗ್ಧ ಹಾಗೂ ಅಶಿಕ್ಷಿತ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದವು. ಮರಾಠಿಯನ್ನು ಮಾತೃಭಾಷೆಯಾಗಿ ದಾಖಲಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ ಎಂಬ ಸುಳ್ಳು ಪ್ರಚಾರ ಮಾಡಲಾಯಿತು. ಇದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯ ಎದುರಾಯಿತು.ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತ ಜಯದೇವಿ ತಾಯಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಕೋಟಿ ಎನ್ನುವ  ಪ್ರಕಾಶನವನ್ನು ಪ್ರಾರಂಭಿಸಿದರು.ಅವರ ಜೊತೆ ಕನ್ನಡ ಪರ ಹೋರಾಟಗಾರರು ಮತ್ತು ಸಮಾಜಮುಖಂಡರು ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ಮುಂದಾದರು. ಜನರಿಗೆ ಕನ್ನಡದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮನೆ ಮನೆಗೆ ತೆರಳಿ, ಸಭೆ-ಸಮಾರಂಭಗಳನ್ನು ಆಯೋಜಿಸಿ, ಕನ್ನಡವೇ ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಜಾಗೃತಿ ಅಭಿಯಾನದ ಪ್ರಮುಖ ಭಾಗವಾಗಿ ಸೊಲ್ಲಾಪುರದಲ್ಲಿ “ಕನ್ನಡ ಕೋಟಿ” ಎಂಬ ಪ್ರಕಾಶನ ಸ್ಥಾಪಿಸಲಾಯಿತು. ಇದರ ಉದ್ದೇಶ ಗಡಿಭಾಗದ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಮರಾಠೀಕರಣದ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸುವುದು ಹಾಗೂ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿತ್ತು.ಕನ್ನಡ ಕೋಟಿಯ ಮೂಲಕ ಕನ್ನಡ ಶಾಲೆಗಳ ರಕ್ಷಣೆ, ಕನ್ನಡ ಸಾಹಿತ್ಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸಾರ್ವಜನಿಕ ಸಭೆಗಳು ಮತ್ತು ಜಾಗೃತಿ ಬರಹಗಳನ್ನು ಹೊರತಂದರು….ಜನಗಣತಿಯಲ್ಲಿ ಕನ್ನಡವನ್ನೇ ತಮ್ಮ ಮಾತೃಭಾಷೆಯಾಗಿ ದಾಖಲಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸು ಪ್ಲಾಮಪ್ಲೇಟ್ಸ್ಗಳನ್ನು, ಬುಕ್ಲಿಟ್ಸ್ ಗಳನ್ನು ಪ್ರಕಟಿಸಲಾಯಿತು. ಹಳ್ಳಿ ಹಳ್ಳಿಗೆ ಹೋಗಿ ಹಂಚಲಾಯಿತು. ಗಡಿಭಾಗದ ಕನ್ನಡಿಗರಲ್ಲಿ ಹೊಸ ಚೈತನ್ಯ ಮೂಡಿಸಿ, ಕನ್ನಡ ಭಾಷೆ ಗಡಿಭಾಗದ ಜನರಲ್ಲಿ ಬಲವಾದ ಅಡಿಪಾಯ ಹಾಕಿದವು. ಹೀಗೆ ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನವು ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಹಾಗೂ ಸ್ವಾಭಿಮಾನವನ್ನು ಕಾಪಾಡುವ ಮಹತ್ವದ ಚಳವಳಿಯಾಗಿ ರೂಪುಕೊಡುವಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಇತಿಹಾಸದಲ್ಲಿ ಗಡಿನಾಡಿನ ಕನ್ನಡ ಜಾಗೃತಿಗೆ ಕೊಟ್ಟ ಕೊಡುಗೆ ಸ್ಮರಣೀಯವಾಗಿದೆ. “ಸುಲಭ ಕನ್ನಡದೊಳು | ಸಲ್ಲಲಿತ ವಚನಾದಿ |ಸಲ್ಲಿಸಿದರು ಅನುಭವ ದಾಸೋಹ – ನಮ್ಮವರು ಕಲಿಸಿದರು ಸರಳ ಶೈಲಿಯನು ||”ಎನ್ನು ತ ಜಯದೇವಿ ತಾಯಿಯವರು ಕನ್ನಡ ಸಾಹಿತ್ಯದ ಶರಣರು ಮತ್ತು ದಾಸರು ಕನ್ನಡ ಭಾಷೆಗೆ ನೀಡಿದ ಅಪೂರ್ವ ಕೊಡುಗೆ”ಸುಲಭ ಕನ್ನಡದೊಳು” ಎಂದರೆ ಎಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ.ಸುಂದರವಾದ, ಲಲಿತವಾದ ವಚನಗಳು ಹಾಗೂ ಇತರ ಸಾಹಿತ್ಯ ಕೃತಿಗಳನ್ನು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರಿಗೆ ಹಂಚಿದರು. ಅದೇ ಅವರ ಅನುಭವ ದಾಸೋಹ.“ನಮ್ಮವರು ಕಲಿಸಿದರು ಸರಳ ಶೈಲಿಯನು”  ನಮ್ಮ ಕನ್ನಡದ ಶರಣರು, ದಾಸರು ಮತ್ತು ಕವಿಗಳು ಅಲಂಕಾರಿಕ, ಕಠಿಣ ಭಾಷೆಯ ಬದಲು ಸರಳ, ಸುಲಭ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಸಾಹಿತ್ಯ ರಚಿಸುವ ಪರಂಪರೆಯನ್ನು ಬೆಳೆಸಿದರು. ಕನ್ನಡದ ಶರಣರು ಮತ್ತು ದಾಸರು ಸರಳ ಕನ್ನಡದಲ್ಲಿ ವಚನಗಳು ಹಾಗೂ ಭಕ್ತಿಸಾಹಿತ್ಯವನ್ನು ರಚಿಸಿ, ತಮ್ಮ ಜೀವನಾನುಭವಗಳನ್ನು ಜನರೊಂದಿಗೆ ಹಂಚಿಕೊಂಡು, ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಭಾಷೆಯನ್ನಾಗಿ ರೂಪಿಸಿದ ಮಹತ್ವದ ಸೇವೆಯನ್ನು ಕೊಂಡಾಡುತ…. ಜನಸಾಮಾನ್ಯರಿಗೆ ತಲುಪಬೇಕಾದರೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ನಿರ್ಮಿಸಿ ಜನರಿಗೆ ಹಂಚುವ ಕಾರ್ಯಕ್ಕಾಗಿ….. ೧೯೫೦ ರಲ್ಲಿ ಕನ್ನಡ ಕೋಟಿ ಪ್ರಕಾಶನ ಪ್ರಾರಂಭಿಸಿದರು ಅದಕ್ಕೆ ಅಧ್ಯಕ್ಷರಾಗಿ ಡಾ. ಶಂಕರ ಮೂಗಿ ಅವರು ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು(ನನ್ನ ತಂದೆ) ನಿರ್ವಹಿಸಿದರು.  ಭಾಷಾ ಜಾಗೃತಿಯ ಕ್ರಾಂತಿಕಾರಿ ಹೆಜ್ಜೆ೧೯೫೦ನೇ ವರ್ಷ ಗಡಿಭಾಗದ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವದ ತಿರುವಿನ ವರ್ಷವಾಗಿತ್ತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆ ದೇಶಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿತ್ತು.ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾಡು, ನುಡಿ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಡಾ. ಜಯದೇವಿ ತಾಯಿಯವರು ಮುಂಚೂಣಿಗೆ ಬಂದರು. ಜಯದೇವಿ ತಾಯಿಯವರಿಗೆ ಕನ್ನಡವೆಂದರೆ  ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿತ್ತು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದರು. ಗಡಿಭಾಗದ ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಉದ್ದೇಶದಿಂದ  ಸೊಲ್ಲಾಪುರದಲ್ಲಿ ತಮ್ಮ ಸ್ವಂತ ಹಣದಿಂದ “ಕನ್ನಡ ಕೋಟಿ” ಪ್ರಕಾಶನ ಸ್ಥಾಪಿಸಿದರು. ಆ ಕಾಲದಲ್ಲಿ ಯಾವುದೇ ದೊಡ್ಡ ಆರ್ಥಿಕ ನೆರವು ಅಥವಾ ಸರ್ಕಾರಿ ಬೆಂಬಲವಿಲ್ಲದೆ ಇಂತಹ ಸಂಘಟನೆಯನ್ನು ಕಟ್ಟುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಆದರೆ ಜಯದೇವಿ ತಾಯಿಯವರ ಅಚಲ ಸಂಕಲ್ಪದ ಮುಂದೆ ಆರ್ಥಿಕ ಅಡೆತಡೆಗಳು ಅಡ್ಡಿಯಾಗಲಿಲ್ಲ.ಕನ್ನಡ ಕೋಟಿಯ ಮುಖ್ಯ ಉದ್ದೇಶ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರನ್ನು ಸಂಘಟಿಸುವುದು ಹಾಗೂ ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ದೃಢಪಡಿಸುವುದಾಗಿತ್ತು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕನ್ನಡದ ಮಹತ್ವವನ್ನು ವಿವರಿಸುವುದು, ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸುವುದು, ಯುವಕರನ್ನು ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿದ್ದವು. ಜನಗಣತಿ ಸಂದರ್ಭದಲ್ಲಿ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನೇ ದಾಖಲಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕನ್ನಡವನ್ನು ಮರೆತು ಬೇರೆ ಭಾಷೆಯನ್ನು ದಾಖಲಿಸಿಕೊಳ್ಳುವುದು ತಮ್ಮ ಸ್ವಂತ ಗುರುತನ್ನು ಕಳೆದುಕೊಳ್ಳುವುದಕ್ಕೆ ಸಮಾನ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿ ಕನ್ನಡ ಕೋಟಿ ಪ್ರಮುಖ ಪಾತ್ರವಹಿಸಿತು.ಜಯದೇವಿ ತಾಯಿಯವರು ನಡೆಸಿದ ಈ ಭಾಷಾ ಉತ್ತೇಜಕ ಪ್ರಯೋಗವು  ಗಡಿನಾಡಿನ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿತ್ತು. ಕನ್ನಡದ ಮೇಲಿನ ಅಭಿಮಾನವನ್ನು ಜನಮನಗಳಲ್ಲಿ ಪುನರುಜ್ಜೀವನಗೊಳಿಸಿದ ಈ ಪ್ರಯತ್ನ ಮುಂದಿನ ಕನ್ನಡ ಹೋರಾಟಗಳಿಗೆ ಭದ್ರ ಬುನಾದಿಯಾಯಿತು. ಹೀಗೆ, ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ  ಪ್ರಕಾಶನ ಸಂಸ್ಥೆ ಜಯದೇವಿ ತಾಯಿಯವರ ದೂರದೃಷ್ಟಿ, ಧೈರ್ಯ ಮತ್ತು ಕನ್ನಡಪ್ರೇಮದ ಜೀವಂತ ಸಂಕೇತವಾಗಿ  ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಅವರು ಮಾಡಿದ ಈ ಕಾರ್ಯ ಕನ್ನಡ ಇತಿಹಾಸದಲ್ಲಿ ಅಕ್ಷರಶಃ ಚಿರಸ್ಥಾಯಿಯಾಗಿ ಉಳಿದಿದೆ. “ನನ್ನಿಯಿದು ಕಂಡದ್ದು ನುಡಿ | ತಾನಾಗಿ ಬಂದದ್ದು |ಜೇನು ಸವಿದಂತೆ ತುಂಬಿದ – ಪದಗಳದನಿ ದನಿಗೂಡಿಸಿ ಹಾಡುವೆನು || ಎನ್ನುತ ಜಯದೇವಿ ತಾಯಿಯವರುಈ ತ್ರಿಪದಿಯಲ್ಲಿ ತನ್ನ ಮನಸ್ಸಿನಲ್ಲಿ ಸಹಜವಾಗಿ ಮೂಡಿದ ಭಾವನೆಗಳು ಕನ್ನಡದಲ್ಲಿಯೇ…. ಅವು ಯಾರ ಒತ್ತಾಯದಿಂದಲೂ ಬಂದದ್ದಲ್ಲ.. ಸ್ವಯಂಸ್ಫೂರ್ತಿಯಿಂದ ಉದಿಸಿದವು. ಆ ಭಾವನೆಗಳು ಜೇನಿನ ಸವಿಯಂತೆ ಮಧುರವಾಗಿದ್ದು, ಪದಗಳ ರೂಪದಲ್ಲಿ ಹೊರಹೊಮ್ಮಿವೆ. ಆ ಮಧುರ ಪದಗಳಿಗೆ ಧ್ವನಿಯನ್ನು ಸೇರಿಸಿ ಹಾಡುವ ಮೂಲಕ ತಮ್ಮ ಸಂತೋಷ, ಕೃತಜ್ಞತೆ ಹಾಗೂ ಭಾವನೆಗಳನ್ನು ಲೋಕಕ್ಕೆ ಹಂಚಿಕೊಳ್ಳುವ ಸಂಕಲ್ಪವನ್ನು ತಾಯಿಯ ವರು ವ್ಯಕ್ತಪಡಿಸುತ್ತಾರೆ.(ಮುಂದುವರೆಯುವುದು) ಸವಿತಾ ದೇಶಮುಖ

Read Post »

You cannot copy content of this page

Scroll to Top