ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಹೈದರಾಬಾದ ಕರ್ನಾಟಕ ವಿಮೋಚನಾ ಸಂಘಟನೆ   ರಜಾಕಾರರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಹೈದರಾಬಾದ ಕರ್ನಾಟಕ ಭಾಗದ ಜನರು ತಮ್ಮ ಜೀವ ಮತ್ತು ಮಾನವನ್ನು ಉಳಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂಥ ಸಂದರ್ಭದಲ್ಲಿ *ಹೈದರಾಬಾದ ಕರ್ನಾಟಕ ವಿಮೋಚನಾ* ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಡಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಕೇವಲ ಆಶ್ರಯ ಕೇಂದ್ರಗಳಾಗಿರದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ, ಸಂಘಟನೆ ಮತ್ತು ಜನಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ಈ ಗಡಿ ಶಿಬಿರಗಳಲ್ಲಿ ಆರ. ವಿ. ಬಿಡಪ್ಪ, ಭೀಮಣ್ಣ ಕಂಡ್ರೆ, ಕಿಸಾನ್ ರಾವ ಚಿಡುಗುಪ್ಕರ, ಪ್ರಭುರಾವ ಕಂಬಳಿವಾಲೆ, ಸಂಗ್ರಾಮಪ್ಪ ಶಟಗಾರ ಮೊದಲಾದ ಧೀಮಂತ ನಾಯಕರು ಪ್ರಮುಖ ಪಾತ್ರ ವಹಿಸಿದರು. ಅವರ ದೇಶಭಕ್ತಿ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು. ಈ ನಾಯಕರಿಗೆ  ಜಯದೇವಿ ತಾಯಿಯವರು ಪ್ರೇರಣೆಯಾಗಿದ್ದರು. ಹೈದರಾಬಾದ ವಿಮೋಚನ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾದರು. ಗಡಿ ಶಿಬಿರಗಳಲ್ಲಿ ನಡೆಯುತ್ತಿದ್ದ ಸಭೆಗಳು, ತರಬೇತಿಗಳು ಮತ್ತು ಸ್ವಾತಂತ್ರ್ಯದ ಸಂದೇಶಗಳು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಇನ್ನಷ್ಟು ಪ್ರಜ್ವಲಿಸಿದವು. ಹೋರಾಟವು ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯರೂ ಸಮಾನವಾಗಿ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೃಢ ಸಂಕಲ್ಪ ಅವರಲ್ಲಿ ಮೂಡಿತು. ಹೀಗಾಗಿ, ರಜಾಕಾರರ ದೌರ್ಜನ್ಯದಿಂದ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಗಡಿ ಶಿಬಿರಗಳ ಸ್ಥಾಪನೆಗೆ ಕಾರಣವಾದರೆ, ಶಿಬಿರಗಳಲ್ಲಿ ನಡೆದ ಸಂಘಟನೆ ಮತ್ತು ನಾಯಕರ ಮಾರ್ಗದರ್ಶನವೇ ಜಯದೇವಿ ತಾಯಿಯವರನ್ನು ಹೈದರಾಬಾದ ವಿಮೋಚನ ಹೋರಾಟದ ಸಕ್ರಿಯ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು. ವಿ.ಎನ. ಪಾಟೀಲ, ಸಿಧ್ಧಲಿಂಗಪ್ಪ ಕಾಕನಾಳೆ, ಮಹದೇವಪ್ಪ ಮೀಸೆ, ಮೊದಲಾದವರು ಸೇರಿ ಜಿಲ್ಲಾಮಟ್ಟದಲ್ಲಿ *ಕರ್ನಾಟಕ ಏಕೀಕರಣ ಸಮಿತಿಯ ಘಟಕವನ್ನು* ಹುಟ್ಟುಹಾಕಿದರು ಮುಂದೆ ಜಿಲ್ಲಾ ಸಮಿತಿಯು ತಾಲೂಕ ಸಮಿತಿಯ ರಚನೆಯ ಪ್ರಕ್ರಿಯೆ ಯಾಗಿ ಪ್ರಾರಂಭಿಸಿತು .ಜಯದೇವಿ ತಾಯಿಯವರು ಈ ಸಮಿತಿಯ ಕಾರ್ಯಗಳನ್ನು ನಿರಂತರವಾಗಿ ಭಾಗವಹಿಸುತ್ತಿದ್ದರು. ಜಯದೇವಿ ತಾಯಿಯವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಯಿತು.*ಕನ್ನಡ ಮಕ್ಕಳು ಕನವರಿಸಿ ಕರೆದಾಗಇನ್ನಾವ ನೆವ ಹೇಳದೆ ನನ ಮನತನ್ನಿಂದ ತಾನೇ ಎಳದಿತ್ತ* ಎಂದೆನ್ನುತ ಜಯದೇವಿತಾಯಿ ಅವರುಕನ್ನಡದ ಮಕ್ಕಳು, ಕನ್ನಡ ನಾಡು ಹಾಗೂ ಕನ್ನಡದ ಹಿತಕ್ಕಾಗಿ ಹೋರಾಟಕ್ಕೆ ಕರೆ ನೀಡಿದಾಗ, ಯಾವುದೇ ಕಾರಣ ಅಥವಾ ನೆಪ ಹೇಳದೆ ಅವರ ಮನಸ್ಸು ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಲು ಮುಂದಾರು ಎನ್ನುತ್ತಾರೆ. ಇದು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ, ನಾಡಿನ ಬಗ್ಗೆ ಇರುವ ಜವಾಬ್ದಾರಿ ಮತ್ತು  ಮನೋಭಾವವನ್ನು ಪ್ರತಿಬಿಂಬಿಸುತ್ತದೆ.ಜಯದೇವಿ ತಾಯಿಯವರು ಕನ್ನಡ ಭಾಷೆ, ಗಡಿಭಾಗ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟದ ಸಮಯದಲ್ಲಿ ಕನ್ನಡಿಗರ ನೋವು, ಅವರ ಆಶಯಗಳು ಮತ್ತು ಏಕತೆಯ ಕರೆಗೆ ಸ್ಪಂದಿಸಿದ ಅವರು ದೇಶಪ್ರೇಮ, ಕನ್ನಡಾಭಿಮಾನ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿವೆ.  ಕನ್ನಡಿಗರ ಕರೆಯ ಮುಂದೆ ಯಾವುದೇ ವೈಯಕ್ತಿಕ ನೆಪಕ್ಕೂ ಅವಕಾಶ ನೀಡದೆ, ಕನ್ನಡ ನಾಡಿನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಜಯದೇವಿ ತಾಯಿಯವರ ಹೋರಾಟದ ಮನೋಭಾವವನ್ನು  ವ್ಯಕ್ತಪಡಿಸುತ್ತವೆ. ಸ್ವಾತಂತ್ರ್ಯಾನಂತರವೂ ಹೈದರಾಬಾದ ಸಂಸ್ಥಾನದ ಆಡಳಿತದ ಅವಶೇಷಗಳು ಅನೇಕ ಪ್ರದೇಶಗಳ ಜನರ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಅದರಲ್ಲೂ ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿದ್ದ ಬೀದರ ಜಿಲ್ಲೆಯ ಭಾಲ್ಕಿ ಮತ್ತು ಉದಗೀರ ತಾಲೂಕಿನ ಜೆವರಗಿ ಪ್ರದೇಶಗಳ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸಿದರು.  ಕನ್ನಡ ಪ್ರದೇಶದ ಜನರ ಮೇಲೆ ಸೇಡು ತೀರಿಸುವ ಕ್ರಮವೆಂಬಂತೆ, ಈ ಭಾಗದ ಜಾಗೀರು ಜಮೀನುಗಳ ಮೇಲೆ ಒಂದಕ್ಕೆ ಮೂರು ಪಟ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಈ ಭಾರೀ ತೆರಿಗೆ ಜೀವನಾಡಿಯನ್ನೇ ಕಸಿದುಕೊಳ್ಳುವಂತಾಯಿತು. ಸಾಲದ ಹೊರೆಯಲ್ಲಿ ಸಿಲುಕಿದ ರೈತರು ತಮ್ಮ ಕುಟುಂಬಗಳನ್ನು ಸಾಕುವುದು, ಕೃಷಿ ನಡೆಸುವುದು ಕೂಡ ಕಷ್ಟಕರವಾಯಿತು.ಈ ಸಂದರ್ಭದಲ್ಲಿ ಜನರ ಆಶಾಕಿರಣವಾಗಿ ಮುಂದೆ ಬಂದವರು ಜಯದೇವಿ ತಾಯಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜಸೇವಕಿಯಾಗಿ ಮತ್ತು ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರ ಮೇಲೆ ಜನರಿಗೆ ಅಪಾರ ವಿಶ್ವಾಸವಿತ್ತು. ತಮ್ಮ ಸಂಕಷ್ಟವನ್ನು ಪರಿಹರಿಸಬಲ್ಲ ನಾಯಕತ್ವ ಅವರಲ್ಲಿದೆ ಎಂಬ ನಂಬಿಕೆಯಿಂದ ಭಾಲ್ಕಿ ಮತ್ತು ಉದಗೀರ ಭಾಗದ ರೈತರು ಜಯದೇವಿ ತಾಯಿಯವರನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.ಜನರ ನೋವನ್ನು ತಮ್ಮದೇ ನೋವೆಂದು ಭಾವಿಸಿದ ಜಯದೇವಿ ತಾಯಿ ಸಮಸ್ಯೆಯನ್ನು  ವೈಯಕ್ತಿಕ ಮನವಿಯಾಗಿ ಪರಿಗಣಿಸಿ…. ಮೊದಲು ದೊಡ್ಡ ಸಾರ್ವಜನಿಕ ಸಭೆಯನ್ನು ಕರೆದು ರೈತರ ಸವಾಲುಗಳನ್ನು ಆಲಿಸಿದರು. ತೆರಿಗೆಯಿಂದ ಉಂಟಾದ ಅನ್ಯಾಯ, ರೈತರ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು. ನಂತರ ಜನರು ಒಮ್ಮತವನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡರು. ಜನರಿಂದ ಸಹಿಗಳನ್ನು ಸಂಗ್ರಹಿಸಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮನವಿಯನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲು ಮುಂದಾದರು.ಆ ಸಂದರ್ಭದಲ್ಲಿ ಹೈದರಾಬಾದ ರಾಜ್ಯದ *ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ಕೆ. ವೆಲ್ಲೋಡಿ* ಅವರನ್ನು ಜಯದೇವಿ ತಾಯಿ ಭೇಟಿ ಮಾಡಿದರು. ರೈತರ ಪರವಾಗಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿ, ಹೆಚ್ಚುವರಿ ತೆರಿಗೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ವಿವರಿಸಿದರು. ಕನ್ನಡ ಪ್ರದೇಶದ ರೈತರು ಎದುರಿಸುತ್ತಿದ್ದ ಸಂಕಷ್ಟವನ್ನು ಅಂಕಿ-ಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರು. ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ನಿಲುವಿನಿಂದ ಪ್ರಭಾವಿತರಾದ ವೆಲ್ಲೋಡಿ ಅವರು ತೆರಿಗೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡುವ ಭರವಸೆಯನ್ನು ನೀಡಿದರು. ಈ ಆಶ್ವಾಸನೆ ರೈತರಿಗೆ ದೊಡ್ಡ ನಿರಾಳತೆಯನ್ನು ತಂದಿತು. ಜಯದೇವಿ ತಾಯಿಯವರ ಪ್ರಯತ್ನದಿಂದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಹೊರೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಹರಕರಬಿ ಮೈಮ್ಯಾಲ |ಗಾಳಿ ಬಿಸಿಲು ಮಳಿಅರ ಹೊಟ್ಟೀಲಿ ಉಂಡು ದುಡಿತಾನ- ನೆಲದವ್ವ ಮರಮರ ಮರಗ್ಯಾಳ ಮನದಾಗ||  ರೈತನು ಗಾಳಿ, ಬಿಸಿಲು, ಮಳೆ ಎಂಬ ಪ್ರಕೃತಿಯ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಅರ್ಧ ಹೊಟ್ಟೆ ಊಟ ಮಾಡಿಕೊಂಡೇ ಹೊಲದಲ್ಲಿ ದುಡಿಯುವ ಸ್ಥಿತಿಯನ್ನು ಬಿಂಬಿಸಿದ್ದಾರೆ.. ರೈತನು ತನ್ನ ಬದುಕನ್ನೇ ಭೂಮಿಗೆ ಅರ್ಪಿಸಿದರೂ, ಬೆಳೆ ಹಾಳಾದರೂ, ಸಾಲದ ಹೊರೆ, ಬೆಲೆಯ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ದುಡಿಯುತ್ತಲೇ ಇರುತ್ತಾನೆ. ಅವನ  ನಿರಂತರವಾದ ಸಮಸ್ಯೆಗಳನ್ನು ನೋಡುತ್ತಿದ್ದ ಭೂತಾಯಿಯೇ ಮರ ಮರ ಮರುವುಳೆಂದು ವರ್ಣಿಸುತ್ತಾರೆ. ಕೆಸರಾಯ್ತು ಕೈಯ|ಬಾಯಿಯೂ ಕೆಸರಾಯ್ತು ಮೊಸರು ಕಡಿತ ಸಿಗಲಿಲ್ಲ -ರೈತಣ್ಣಉಸ್ಸೆಂದಾನ ತನ್ನ ಬಾಳೇಕ|| ರೈತನ ಶ್ರಮ, ತ್ಯಾಗ, ನೋವು ಮತ್ತು ಸಂಕಷ್ಟಮಯ ಜೀವನವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತ ಹೇಳತಾರೆ. ಹಾಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮೇಲೆ ಹೇರಿದ ಕೇರಿಗೆಯನ್ನು ಆದಷ್ಟು ಕಡಿಮೆ ಮಾಡಿಕೊಟ್ಟು ಹಿಂದಿರುಗುತ್ತಾರೆ. ಜಯದೇವಿ ತಾಯಿಯವರ ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಯಾವುದೇ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲಿಲ್ಲ.  ಮನವಿ, ಸಾರ್ವಜನಿಕ ಸಭೆಗಳು, ಜನಜಾಗೃತಿ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.ಸತ್ಯ, ಅಹಿಂಸೆ ಮತ್ತು ನ್ಯಾಯ ಎಂಬ ಗಾಂಧೀಜಿ ಬೋಧಿಸಿದ ಮೌಲ್ಯಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ದ್ವೇಷ ಅಥವಾ ಪ್ರತೀಕಾರದ ಮನೋಭಾವವಿಲ್ಲದೆ, ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸಿ ಜನರ ಹಕ್ಕುಗಳನ್ನು ಕಾಪಾಡಿದರು.  ಜಯದೇವಿ ತಾಯಿಯವರು  ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೋರಾಡಿದರೆ.. ಸ್ವಾತಂತ್ರ್ಯಾನಂತರವೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಜನನಾಯಕಿ ಆಗಿದ್ದರು, ಎಂಬುವದ ಸಾಬೀತುಪಡಿಸುತ್ತದೆ. ರೈತರ ಪರವಾಗಿ ನಿಂತು, ಅವರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಟ್ಟ ಅವರ ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ಅಹಿಂಸಾ ಮಾರ್ಗದ ಮೇಲಿನ ನಂಬಿಕೆ ಇಂದಿಗೂ ಜನಸೇವೆಗೆ ಆದರ್ಶವಾಗಿದೆ. ಸವಿತಾ ದೇಶಮುಖ

Read Post »

ಜೀವನ

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್

ಸಂಬಂಧಗಳ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಸಂಬಂಧಗಳನ್ನು ಕಟ್ಟುವುದು ಪ್ರೀತಿಯಿಂದ, ಆದರೆ ಅವನ್ನು ಉಳಿಸುವುದು ನಂಬಿಕೆಯಿಂದ. ಪ್ರೀತಿ ಎಷ್ಟೇ ಆಳವಾಗಿದ್ದರೂ, ಒಂದು ಕ್ಷಣದ ಅನುಮಾನ ಅದರ ಬೇರುಗಳನ್ನು ಅಲ್ಲಾಡಿಸಬಲ್ಲದು. ಕೆಲವೊಮ್ಮೆ ತಪ್ಪು ನಡೆದಿರಲೂಬಹುದು, ಕೆಲವೊಮ್ಮೆ ತಪ್ಪೇ ಇರದೇ ಇರಬಹುದು. ಆದರೆ ಒಮ್ಮೆ ಮನಸ್ಸಿನಲ್ಲಿ ಅನುಮಾನದ ಬೀಜ ಬಿದ್ದರೆ, ಅದು ನಿಧಾನವಾಗಿ ಸಂಬಂಧದ ಪ್ರತಿಯೊಂದು ಕೊಂಬೆಯನ್ನೂ ಒಣಗಿಸಲು ಆರಂಭಿಸುತ್ತದೆ. ಜೀವಂತವಾಗಿರುವ ಮನುಷ್ಯನನ್ನು ಸತ್ತವನಂತೆ ಮಾಡುವ ಶಕ್ತಿ ಕತ್ತಿಗೆ ಇಲ್ಲ; ಅನುಮಾನಕ್ಕೆ ಇದೆ. ದೇಹ ಉಸಿರಾಡುತ್ತಿರಬಹುದು, ಆದರೆ ಮನಸ್ಸು ಪ್ರತಿದಿನ ಸಾಯುತ್ತಿರುತ್ತದೆ. ಒಮ್ಮೆ ಕಳೆದುಹೋದ ನಂಬಿಕೆಯನ್ನು ಮರಳಿ ಕಟ್ಟುವುದು ಮನೆ ಕಟ್ಟುವುದಕ್ಕಿಂತ ಕಷ್ಟ. ಒಡೆದ ಗಾಜನ್ನು ಅಂಟಿಸಬಹುದು, ಆದರೆ ಅದರ ಬಿರುಕು ಎಂದಿಗೂ ಕಾಣದಂತೆ ಮಾಡಲಾಗುವುದಿಲ್ಲ. ಅದೇ ರೀತಿ ಒಡೆದ ವಿಶ್ವಾಸ ಮತ್ತೆ ಹುಟ್ಟಿದರೂ, ಅದರ ಗಾಯದ ಗುರುತು ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿಯೊಬ್ಬ ಮನುಷ್ಯನೂ ತಪ್ಪು ಮಾಡಬಹುದು. ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಒಮ್ಮೆ ನಡೆದ ತಪ್ಪನ್ನು ಜೀವಮಾನವಿಡೀ ಹಿಡಿದುಕೊಂಡು ಪ್ರತಿದಿನ ಅವಮಾನಿಸುವುದು, ಮಾತಿನ ಮೂಲಕ ಕಿರುಕುಳ ಕೊಡುವುದು, ಕುಟುಂಬದವರನ್ನೂ ಕೀಳಾಗಿ ಕಾಣುವುದು ನ್ಯಾಯವಲ್ಲ. ಕ್ಷಮೆ ಎನ್ನುವುದು ತಪ್ಪನ್ನು ಮರೆತಂತೆ ಅಲ್ಲ; ಮತ್ತೊಬ್ಬರ ಮಾನವೀಯತೆಯನ್ನು ಗೌರವಿಸಿದಂತೆ. ಮಾತುಗಳಿಗೆ ಗಾಯಗೊಳಿಸುವ ಶಕ್ತಿ ಇದೆ. ಕತ್ತಿಯಿಂದ ಆದ ಗಾಯಕ್ಕೆ ಔಷಧ ಸಿಗುತ್ತದೆ. ಆದರೆ ಮಾತಿನಿಂದ ಆದ ಗಾಯಕ್ಕೆ ಔಷಧವೇ ಇರುವುದಿಲ್ಲ. ಕೆಲವರು ಒಂದು ದಿನ ಅತ್ತು ಮರೆತುಬಿಡುತ್ತಾರೆ. ಆದರೆ ಇನ್ನೂ ಕೆಲವರು ಪ್ರತಿದಿನ ನಗುವ ಮುಖವಾಡ ಧರಿಸಿ ಬದುಕುತ್ತಾರೆ. ಹೊರಗೆ ನಗುವರು, ಒಳಗೆ ಮಾತ್ರ ಸಾವಿರ ಬಾರಿ ಮುರಿಯುತ್ತಾರೆ. ಆ ನಗುವಿನ ಹಿಂದೆ ಎಷ್ಟು ಕಣ್ಣೀರು, ಎಷ್ಟು ಮೌನ, ಎಷ್ಟು ನೋವು ಅಡಗಿದೆ ಎಂಬುದು ಯಾರಿಗೂ ಕಾಣುವುದಿಲ್ಲ. ಸಂಸಾರವೆಂದರೆ ಇಬ್ಬರು ಮನುಷ್ಯರ ಒಪ್ಪಂದವಲ್ಲ; ಅದು ಎರಡು ಹೃದಯಗಳ ಜವಾಬ್ದಾರಿ. ಅಲ್ಲಿ ಗಂಡನಿಗೂ ಗೌರವ ಬೇಕು, ಹೆಂಡತಿಗೂ ಗೌರವ ಬೇಕು. ಇಬ್ಬರಿಗೂ ತಮ್ಮ ಭಾವನೆ ಹೇಳುವ ಹಕ್ಕು ಇದೆ. ಇಬ್ಬರಿಗೂ ಸ್ವಾತಂತ್ರ್ಯ ಇದೆ. ಯಾರನ್ನೂ ಸದಾ ಅನುಮಾನದಿಂದ ನೋಡುತ್ತಾ, ಅವರ ವ್ಯಕ್ತಿತ್ವವನ್ನು ಕುಗ್ಗಿಸುತ್ತಾ ಬದುಕಿಸುವುದು ಸಂಬಂಧವಲ್ಲ; ಅದು ಮನಸ್ಸಿನ ಬಂಧನ. ಒಮ್ಮೆ ಕಳೆದುಕೊಂಡ ನಂಬಿಕೆ ಮರಳಿ ಬರಬಹುದು. ಆದರೆ ಅದಕ್ಕೆ ಸಮಯ, ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ನಿಜವಾದ ಬದಲಾವಣೆ ಬೇಕು. ಪ್ರತಿದಿನ ಹಳೆಯ ಗಾಯವನ್ನು ಕೆದಕುತ್ತಾ ಹೋದರೆ ಅದು ಎಂದಿಗೂ ಮಾಯವಾಗುವುದಿಲ್ಲ. ಗಾಯ ಗುಣವಾಗಬೇಕಾದರೆ ಅದನ್ನು ಮರುಮರು ಹರಿಯಬಿಡಬಾರದು. ಮಕ್ಕಳು ಮನೆಯ ಗೋಡೆಗಳನ್ನು ಮಾತ್ರ ನೋಡುವುದಿಲ್ಲ; ತಂದೆ-ತಾಯಿಯ ಮಾತುಗಳನ್ನು, ವರ್ತನೆಯನ್ನು, ಪರಸ್ಪರ ಗೌರವವನ್ನು ನೋಡಿ ಬದುಕು ಕಲಿಯುತ್ತಾರೆ. ಪ್ರೀತಿಗಿಂತ ಹೆಚ್ಚು ಅವರಿಗೆ ಬೇಕಾಗಿರುವುದು ಸುರಕ್ಷಿತವಾದ ವಾತಾವರಣ. ಪ್ರತಿದಿನ ಜಗಳ, ಅನುಮಾನ, ಅವಮಾನ ಇರುವ ಮನೆಯಲ್ಲಿ ಬೆಳೆದ ಮನಸ್ಸು ನಿಧಾನವಾಗಿ ತನ್ನ ನಗುವನ್ನೇ ಕಳೆದುಕೊಳ್ಳುತ್ತದೆ. ಕೆಲವು ನೋವುಗಳು ಕಾಲದೊಂದಿಗೆ ಮಾಸುತ್ತವೆ. ಆದರೆ ಕೆಲವು ನೋವುಗಳು ಪ್ರತಿದಿನ ಜೀವಂತವಾಗಿಯೇ ಉಳಿಯುತ್ತವೆ. ಅವು ಕಣ್ಣಿಗೆ ಕಾಣುವುದಿಲ್ಲ, ಆದರೆ ಹೃದಯವನ್ನು ನಿಧಾನವಾಗಿ ಕರಗಿಸುತ್ತವೆ. ಅದಕ್ಕಾಗಿಯೇ ಸಂಬಂಧದಲ್ಲಿ ಗೆಲ್ಲುವುದು ಮುಖ್ಯವಲ್ಲ; ಒಬ್ಬರ ಮನಸ್ಸನ್ನು ಮತ್ತೊಬ್ಬರು ಕಾಪಾಡುವುದು ಮುಖ್ಯ. ಒಳ್ಳೆಯ ವ್ಯಕ್ತಿ ಎಂದರೆ ಎಂದಿಗೂ ತಪ್ಪು ಮಾಡದವನು ಅಲ್ಲ. ತನ್ನ ತಪ್ಪನ್ನು ಅರಿತು ತಿದ್ದಿಕೊಳ್ಳುವವನು, ಎದುರಾಳಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವವನು, ಕ್ಷಮೆ ಕೇಳಬೇಕಾದಲ್ಲಿ ಕೇಳುವವನು, ಕ್ಷಮಿಸಬೇಕಾದಲ್ಲಿ ಕ್ಷಮಿಸುವವನು. ಜೀವನದ ಕೊನೆಯಲ್ಲಿ ಜನರು ನೆನಪಿಡುವುದು ಯಾರು ಗೆದ್ದರು ಎಂಬುದಲ್ಲ. ಯಾರು ಪ್ರೀತಿಸಿದರು, ಯಾರು ಕಾಪಾಡಿದರು, ಯಾರು ಕಣ್ಣೀರನ್ನು ಒರೆಸಿದರು ಎಂಬುದನ್ನು. ನಂಬಿಕೆ ಇದ್ದರೆ ಸಂಬಂಧಗಳು ಅರಳುತ್ತವೆ.ಗೌರವ ಇದ್ದರೆ ಸಂಸಾರ ಉಳಿಯುತ್ತದೆ.ಕ್ಷಮೆ ಇದ್ದರೆ ಗಾಯಗಳು ಗುಣವಾಗುತ್ತವೆ.ಪ್ರೀತಿ ಇದ್ದರೆ ಜೀವನ ಸುಂದರವಾಗುತ್ತದೆ.*ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಭಾವನೆಗಳಿವೆ, ತನ್ನ ಕನಸುಗಳಿವೆ, ತನ್ನ ಗೌರವವಿದೆ, ತನ್ನ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆ ಗೌರವವನ್ನು ಕಾಪಾಡಿದಾಗ ಮಾತ್ರ ಯಾವುದೇ ಸಂಬಂಧ ನಿಜವಾದ “ಸರಿಯಾದ ವ್ಯಕ್ತಿ”ಯ ಸಂಬಂಧವಾಗುತ್ತದೆ.* ಕೆ.ಎಂ. ಕಾವ್ಯ ಪ್ರಸಾದ್

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್ Read Post »

ಇತರೆ

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು

ಗ್ರಂಥಾಲಯ ಸಂಗಾತಿ ಗೊರೂರು ಅನಂತರಾಜು “ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗ್ರಂಥಾಲಯ ಪರಿಕಲ್ಪನೆ ರಾಜಕೇಂದ್ರಿತವಾಗಿತ್ತು ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್: ಡಾ. ಕುಶಾಲ್ ಬರಗೂರು ಗ್ರಂಥಾಲಯದ ಚಾರಿತ್ರಿಕ ಪರಿಕಲ್ಪನೆ ನಗರ ಕೇಂದ್ರಿತವಾದದ್ದು, ರಾಜ ಪ್ರಣೀತವಾದದ್ದಾಗಿತ್ತು. ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಕನ್ನಡ ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ತಿಳಿಸಿದರು. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ, ಹಾಸನ ಜಿಲ್ಲೆ  ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಡಾ.ಬಿ.ಡಿ.ಕುಮಾರ್, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬಾಗೇಶಪುರ ಗುಡ್ಡದಮನೆ ಇಲ್ಲಿ ಏರ್ಪಡಿಸಿ ಪ್ರಾಸ್ತವಿಕವಾಗಿ ಅವರು ಮಾತನಾಡುತ್ತಿದ್ದರು.  ನಗರದಲ್ಲಿ ಇದ್ದದ್ದನ್ನು ತಮ್ಮ ಮನೆಯಲ್ಲೆ ಗ್ರಂಥಾಲಯ ಮಾಡಿ, ಮನೆಯನ್ನೆ ಜ್ಞಾನಕೇಂದ್ರ ಮಾಡಿ, ರಾಜಗೃಹ ಎಂದು ಹೆಸರಿಟ್ಟ ಪ್ರಥಮ ಜ್ಞಾನಿ. ಆ ದಾರಿಯ ಹಾದಿ ಹಿಡಿದವರು ಡಾ. ಬಿ.ಡಿ.ಕುಮಾರ್  ತಮ್ಮ ಮನೆಯನ್ನು ಹಳ್ಳಿಗಾಡಿನಲ್ಲಿ ಮಾಡಿ ಅದನ್ನು ಸಾಹಿತ್ಯ ಚರ್ಚಾ ಕ್ಷೇತ್ರವನ್ನಾಗಿ ಮಾಡಿರುವರು. ಕ್ಷೇತ್ರಕಾರ್ಯ ಸಂಶೋಧಕರಾಗಿ ನಾನಾ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಸಂಗ್ರಹಿಸಿಟ್ಟಿದ್ದಾರೆ.  ಇದು ಕನ್ನಡ ಸಾಹಿತ್ಯ ಸಂಶೋಧಕರಿಗೆ ಆಧಾರ ಮಾಹಿತಿ ಕೇಂದ್ರವಾಗಿದೆ. ಅಂದು ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಪಾದಿಸಿದಂತೆ, ಹಲಸಂಗಿ ಗೆಳೆಯರು, ಜೀ.ಶಂ.ಪ, ಕ್ಯಾತನಹಳ್ಳಿ ರಾಮಣ್ಣ, ಪಿ.ಕೆ.ರಾಜಶೇಖರ್ ಮುಂತಾದವರು  ಜಾನಪದ ಕ್ಷೇತ್ರ ಕಾರ್ಯ ಮಾಡಿದಂತೆ   ಕುಮಾರ್ ತಮ್ಮ ಮನೆಯನ್ನು ಮಾಹಿತಿ ಕಣಜ ಮಾಡಿದ್ದಾರೆ. ಇದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮಾದರಿ  ಪ್ರೇರಣಿಯೂ ಹೌದು.  ಇಲ್ಲಿ 18,000 ಪುಸ್ತಕ, ಪತ್ರಿಕೆ, ಸಂಚಿಕೆ, ಹಸ್ತಪ್ರತಿ ಇನ್ನಿತರೆ ಸಾಹಿತ್ಯ ಗ್ರಂಥಗಳಿವೆ ಎನ್ನುತ್ತಾರೆ.  ಇಂತಹ ಶೋಧನಾ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ಮಾನಸ ಮತ್ತು ಅವರ ಜೊತೆಗೂಡಿ  ಪ್ರಾಧಿಕಾರ ಸದಸ್ಯರು   ಮಾಡುತ್ತಿರುವರು.  ಈ ಕಾರ್ಯಕ್ರಮ ಈಗ  ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ, ಪಾಶ್ಚಿಮಾತ್ಯ ರಾಷ್ಟ್ರಗಳ ಗಮನವನ್ನು  ಸೆಳೆದಿದೆ ಎಂದರು.ಡಾ.ಬಿ.ಡಿ.ಕುಮಾರ್ ಅವರು ಸಂಗ್ರಹಿಸಿ ಕಾಪಾಡಿಟ್ಟಿರುವ ತಾಳೆಗರಿ ಗ್ರಂಥ ರಾಮಾಯಣ ಕಟ್ಟುಗಳ ಕಟ್ಟು ಬಿಚ್ಚಿ  ಉದ್ಘಾಟನಾ ಭಾಷಣ  ಮಾಡಿದ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ತಾವು ಕನ್ನಡ ಪುಸ್ತಕ ಪ್ರಾಧಿಕಾರದ 10ನೇ ಅಧ್ಯಕ್ಷರು. ಮೊದಲನೇ ಅಧ್ಯಕ್ಷರು   ಎಲ್.ಎನ್. ಶೇಷಗಿರಿರಾವ್ ಅವರು.  ಅಂದಿನಿಂದ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಪುಸ್ತಕ ಪ್ರಕಾಶಕರು, ಮುದ್ರಕರನ್ನುಪ್ರೋತ್ಸಾಹಿಸಲು ಪುಸ್ತಕ ಸೊಗಸು ಪ್ರಶಸ್ತಿ, ನಗದು ಬಹುಮಾನ ಯೋಜನೆ ಇದೆ.  ಪುಸ್ತಕ ಓದುಗರನ್ನು ಗುರುತಿಸಿ ಪ್ರೋತ್ಸಾಹಿಸಲು ವಲಯವಾರು    ನಾಲ್ಕು ಪ್ರಶಸ್ತಿಗಳನ್ನು 25000 ನಗದು ಬಹುಮಾನ ನೀಡಲಾಗುವುದು ಎಂದರು.  ಡಾ. ಬಿ ಡಿ. ಕುಮಾರ್ ಅವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಪುಸ್ತಕದ ಸಂಪಾದಕರು ಹಾಗೂ ಕನ್ನಡ ಪ್ರಾಧ್ಯಾಪಕರು ಡಾ. ಹರೀಶ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಸೀಕೆರೆ ಕೃತಿ ಪರಿಚಯಿಸಿ ಮಾತನಾಡಿ ಕುಮಾರ್  ಅವರು ಅರಸೀಕೆರೆಯಲ್ಲಿ ಬಹು ಧೀರ್ಘಕಾಲ  ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ, ಕಲಾವಿದರಾಗಿ ದೆಹಲಿಯಲ್ಲಿ ಜನಪದ ಕಾರ್ಯಕ್ರಮ ನೀಡಿ ಬಂದಿದ್ದಾರೆ. ಪ್ರಗತಿಪರ  ಕೃಷಿಕರಾಗಿ ಹಳ್ಳಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ,  ಇವರ ಜೀವನಶೈಲಿ ಇಂದಿನ ಸಮಾಜಕ್ಕೆ ಮಾದರಿ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಅನಂತರಾಜು     ಬಾರೆ ನೆಲದಲ್ಲಿ ಗುಡ್ಡದ ಮನೆ  ಮಾಡಿ, ಉತ್ತು ಭಿತ್ತಿ ಹಸನಾದ, ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿರುವ ಪ್ರಗತಿಶೀಲ ಕುಮಾರ್ ಅವರ ತೋಟದ ಮನೆ, ಪ್ರಾಚೀನ ತಾಳೆಗರಿ, ಹಳೆಯ ಬೆಲೆ ಬಾಳುವ ಮೌಲ್ಯಯುತ ಪುಸ್ತಕಗಳ ಸಂಗ್ರಹ ಸಂರಕ್ಷಣೆ ನೋಡುತ್ತಿದ್ದರೆ ಬಂಗಾರದ ಮನುಷ್ಯ ಚಿತ್ರ ನನಗೆ ನೆನಪಾಗುತ್ತದೆ. ಈ ಗ್ರಂಥಾಲಯವನ್ನು ಸಂರಕ್ಷಿಸುವುದು ಅಗತ್ಯವಾಗಿದೆ.  ಇದು ಕನ್ನಡ ಸಂಶೋಧಕ ವಿದ್ಯಾರ್ಥಿಗಳಿಗೆ,  ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಬೇಕಿದೆ. ಈ ದಿಶೆಯಲ್ಲಿ, ಸಂಘ ಸಂಸ್ಥೆಗಳು ಅವರಿಗೆ ಸಹಕರಿಸಿ ನೆರವಾಗಬೇಕಿದೆ ಎಂದರು.  ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಡಾ. ಬರಾಳು ಶಿವರಾಮ ಚನ್ನರಾಯಪಟ್ಟಣ,  ಸುಂದರೇಶ್ ಡಿ ಉಡುವಾರೆ, ರೈತ ಹೋರಾಟಗಾರರು ಮನೋಹರ್ ಪಾಟೀಲ್, ತಿಪಟೂರು, ಕವಿ ಎನ್.ಎಲ್. ಚನ್ನೇಗೌಡ, ಕೊಬ್ಬರಿ ಕೆತ್ತನೆ  ಕಲಾವಿದರು ಅರಸೀಕೆರೆ ಹರೀಶ್ ಕುಮಾರ್, ಹರ್ಷ ಇದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ  ಕುಮಾರ್  ದಂಪತಿಗಳನ್ನು  ಶಾಲು ಓದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಡಾ.ಬಿ.ಡಿ..ಕುಮಾರ್ ಜನಪದ ಗೀತೆ ಹಾಡಿ ಪ್ರಾರ್ಥಿಸಿದರು. ಗೊರೂರು ಅನಂತರಾಜು

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು Read Post »

You cannot copy content of this page

Scroll to Top