ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಬದಲಾವಣೆ ನಮ್ಮಿಂದಲೇ”ವಿಶೇಷ ಲೇಖನ ಡಾ.ಪಿ.ಸುಮತಿ

ವಿಶೇಷ ಸಂಗಾತಿ ಡಾ.ಪಿ.ಸುಮತಿ “ಬದಲಾವಣೆ ನಮ್ಮಿಂದಲೇ” “ನೀನು ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ನೋಡಬಯಸುವೆಯೋ, ಮೊದಲು ಆ ಬದಲಾವಣೆ ನಿನ್ನಲ್ಲೇ ಆಗಲಿ.”ಎಂಬ ಮಹಾತ್ಮ ಗಾಂಧೀಜಿಯವರ ಮಾತು ಬದಲಾವಣೆ ನಮ್ಮಿಂದಲೇ ಎಂಬ ಮಾತನ್ನು ಪುಷ್ಠಿಕರಿಸುತ್ತದೆ . ಬದಲಾವಣೆ’ ಎಂಬುದು ಜಗತ್ತಿನ ಶಾಶ್ವತ ನಿಯಮ. ಆದರೆ, ಬಾಹ್ಯ ಜಗತ್ತಿನ ಬದಲಾವಣೆಯ ಮುನ್ನ ವ್ಯಕ್ತಿಯ ಅಂತರಂಗದ ಬದಲಾವಣೆ ಅತ್ಯಂತ ಮುಖ್ಯವಾದುದು. “ಬದಲಾವಣೆ ನಮ್ಮಿಂದಲೇ” ಎಂಬ ಪರಿಕಲ್ಪನೆಯು ಆಳವಾದ ತಾತ್ವಿಕ ತಳಹದಿಯನ್ನು ಹೊಂದಿರುವ ಜೀವನ ದರ್ಶನವಾಗಿದೆ. ಸಮಾಜವೆಂಬುವುದು ನಿಂತ ನೀರಲ್ಲ. ಪ್ರತಿ ದಿನ ದಿನವೂ, ಕ್ಷಣ ಕ್ಷಣವೂ ಹೊಸ ಹೊಸ ಬದಲಾವಣೆಗಳು ಆಗುತ್ತಲೇ ಇರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ,ಮನುಷ್ಯನ ವಿಚಾರ ಶಕ್ತಿಯೂ ಬೆಳೆದು, ಇಂದು ಜಗತ್ತು ಕ್ಷಣ ಕ್ಷಣವೂ ಬದಲಾಗುತ್ತಿದೆ, ಬದಲಾವಣೆಯ ಜಗತ್ತಿನೊಂದಿಗೆ ನಾವು ಕೂಡ ವೇಗವಾಗಿ ಹೆಜ್ಜೆ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಬದಲಾವಣೆಯನ್ನು ಮಾಡಬೇಕಾಗಿದೆ, ಬದಲಾವಣೆಗೆ ನಾವು ಹೊಂದಿಕೊಂಡು ಬದುಕಬೇಕಾಗಿದೆ. ಅಂದರೆ ಬದಲಾಗುತ್ತಿರುವ ಸಮಾಜದ ಜೊತೆ ಜೊತೆಯಲಿ ಹೆಜ್ಜೆ ಹಾಕಿಕೊಂಡು ಮುನ್ನಡೆಯುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.ಇದು ಒಂದು ರೀತಿಯ ಬದಲಾವಣೆಯಾದರೆ,ಇನ್ನೊಂದು ರೀತಿಯ ಬದಲಾವಣೆಯಿದೆ ಅದು ನಮ್ಮ ಮಾನಸಿಕವಾದ ಬದಲಾವಣೆ ಅರ್ಥಾತ್ ತ್ಯಾಗ ಮಾಡಬೇಕಾದ ನಮ್ಮತನ. ಮನುಷ್ಯ ಸಂಗ ಜೀವಿ, ಸಮಾಜ ಜೀವಿ. ಸಮಾಜದಲ್ಲಿ ಕೂಡು ಜೀವನ ನಡೆಸುತ್ತಿರುವಾಗ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಅಂತಹ ಸಂದರ್ಭದಲ್ಲಿ ಸಮಷ್ಟಿಯ ಸುಖಕ್ಕಾಗಿ ನಾವು ನಮ್ಮತನವನ್ನು ತ್ಯಾಗ ಮಾಡಬೇಕಾಗುತ್ತದೆ. ಅಂದರೆ ನಾವು ಬದಲಾಗಬೇಕಾಗುತ್ತದೆ. ಬದಲಾವಣೆ ನಮ್ಮಿಂದಲೇ ಆಗಬೇಕಾಗಿದೆ. ಬುದ್ಧಿವಂತನಾದ ಮನುಜ ಇನ್ನೊಬ್ಬರಲ್ಲಿ ಹುಳುಕು ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ.ಆದರೆ ತನ್ನಲ್ಲಿರುವ ತಪ್ಪುಗಳನ್ನು ಅರಿತುಕೊಂಡು ತಿದ್ದಿಕೊಳ್ಳುವಲ್ಲಿ ಮನಸ್ಸು ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಬದಲಾವಣೆ ನನ್ನಿಂದಲೇ ಎಂಬ ಮಾತು ಅರ್ಥವನ್ನು ಪಡೆದುಕೊಳ್ಳುತ್ತದೆ.ಪ್ರತಿಯೊಬ್ಬರೂ ಪರಿಸ್ಥಿತಿ ಬದಲಾವಣೆ ಆಗಬೇಕೆಂದೂ, ಇನ್ನೊಬ್ಬರು ಬದಲಾಗಲಿ ಎಂದು ಕಾದು ಕುಳಿತರೆ, ಪರಿಸ್ಥಿತಿ ಬದಲಾಗದು. ಅದರ ಬದಲಾಗಿ ಬದಲಾವಣೆ ನನ್ನಿಂದಲೇ ಆಗಲಿ ಎಂದು ಎಲ್ಲರೂ ತಾವು ಬದಲಾದರೆ, ಪರಿಸ್ಥಿತಿ ಖಂಡಿತ ಬದಲಾಗುತ್ತದೆ.ನಾವು ಯೋಚಿಸುವ ರೀತಿ, ಮಾಡುವ ಕೆಲಸ ಮತ್ತು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತಂದುಕೊಂಡಾಗ ಮಾತ್ರ ಸಮಾಜದಲ್ಲಿ ದೊಡ್ಡ  ಬದಲಾವಣೆ ಸಾಧ್ಯ. ಒಂದು ಸಣ್ಣ ಬದಲಾವಣೆಯೂ ಸಹ ನಮ್ಮಿಂದಲೇ ಆರಂಭವಾಗಬೇಕು. ನಾವು ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದರೆ, ಸುಂದರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.”ಯದ್ಭಾವಂ ತದ್ಭವತಿ” ಅಂದರೆ ನಾವು ಹೇಗೋ, ಜಗತ್ತು ನಮಗೆ ಹಾಗೆಯೇ ಕಾಣುತ್ತದೆ. ನಾವು ಸಮಾಜದಲ್ಲಿ ಶಾಂತಿ, ಪ್ರಾಮಾಣಿಕತೆ ಮತ್ತು ಪ್ರೀತಿಯನ್ನು ನೋಡಬಯಸಿದರೆ, ಮೊದಲು ಆ ಗುಣಗಳು ನಮ್ಮ ಆತ್ಮದಲ್ಲಿ ಜಾಗೃತಗೊಳ್ಳಬೇಕು. ವ್ಯಕ್ತಿಯೊಬ್ಬನ ಮನಸ್ಸಿನ ಪರಿವರ್ತನೆಯೇ ಸಮಾಜದ ಪರಿವರ್ತನೆಗೆ ಮೊದಲ ಹೆಜ್ಜೆಯಾಗಬೇಕು. ವ್ಯವಸ್ಥೆಯನ್ನು ಅಥವಾ ಇತರರನ್ನು ದೂಷಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ತಾತ್ವಿಕ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವ್ಯಕ್ತಿತ್ವಕ್ಕೆ ತಾನೇ ಜವಾಬ್ದಾರನಾಗಿರುತ್ತಾನೆ. ನಾವು ಮಾಡುವ ಪ್ರತಿಯೊಂದು ಸಣ್ಣ ಸತ್ಕಾರ್ಯವೂ ಜಗತ್ತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. “ನಾನೊಬ್ಬ ಬದಲಾದರೆ ಏನು ಪ್ರಯೋಜನ?” ಎಂಬ ನಕಾರಾತ್ಮಕ ಚಿಂತನೆಯನ್ನು ಬಿಟ್ಟು, ಬದಲಾವಣೆಯ ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ನಿಜವಾದ ಧರ್ಮ. “ಬದಲಾವಣೆ ಜಗತ್ತಿನ ನಿಯಮ” ಎಂಬುದು ಎಷ್ಟು ಸತ್ಯವೋ, “ಆ ಬದಲಾವಣೆಯ ಜವಾಬ್ದಾರಿ ನಮ್ಮದು” ಎಂಬುದು ಅಷ್ಟೇ ಸತ್ಯ. ಸಮಾಜದಲ್ಲಿ ಬದುಕುವ ಮನುಷ್ಯ ವ್ಯವಸ್ಥೆಯ ಲೋಪದೋಷಗಳನ್ನು, ಸಮಾಜದ ನೈತಿಕ ಅಧಃಪತನವನ್ನು ಕಂಡು ನಿರಂತರವಾಗಿ ದೂರುತ್ತಿರುತ್ತಾನೆ. ಆದರೆ, ಇಡೀ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಮತ್ತು ನೈತಿಕ ಹಕ್ಕು ಪ್ರತಿಯೊಬ್ಬ ವ್ಯಕ್ತಿಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ತನ್ನ ಸ್ವಂತ ಜೀವನದಲ್ಲಿ ಬದಲಾವಣೆಯನ್ನು ತಂದುಕೊಂಡಾಗ ಮಾತ್ರ ಸಮಾಜಿಕ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಶರಣರು ಹೇಳುವಂತೆ “ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ” ಒಟ್ಟಿಗೆ ಸಾಗಿದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ನಮ್ಮ ಅಹಂಕಾರ, ಜಾತಿವಾದ ಮತ್ತು ಮೂಢನಂಬಿಕೆಗಳನ್ನು ನಾವೇ ತೊರೆದು ನಡೆದಾಗ, ಸಮಾಜ ತಾನಾಗಿಯೇ ಪರಿವರ್ತನೆ ಹೊಂದುತ್ತದೆ. ಯಾವುದೇ ವ್ಯವಸ್ಥೆಯನ್ನು ನಿಂದಿಸುವುದರಿಂದ ಕಹಿತನ ಹೆಚ್ಚುತ್ತದೆಯೇ ಹೊರತು, ಪರಿಹಾರ ಸಿಗದು. ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕರ್ಮಗಳನ್ನು ನಾವೇ ಜಾಗೃತವಾಗಿ ಗಮನಿಸಿ, ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಜಗತ್ತನ್ನು ತಿದ್ದುವ ಮೊದಲ ಹೆಜ್ಜೆಯಾಗಿದೆ. ಸಮಾಜ ಎಂಬುದು ವ್ಯಕ್ತಿಗಳ ಸಮೂಹ.ಬಿಂದುಗಳೇ ಸೇರಿ ಸಿಂಧುವಾಗುವಂತೆ, ವೈಯಕ್ತಿಕ ನೈತಿಕತೆಯೇ ಸಾಮಾಜಿಕ ವ್ಯವಸ್ಥೆಯಾಗಿ ಮಾರ್ಪಡುತ್ತದೆ. ಪ್ರಪಂಚದಲ್ಲಿ ಕ್ರಾಂತಿಗಳು ಕೇವಲ ಯುದ್ಧಭೂಮಿಯಲ್ಲಿ ಆಗಲಿಲ್ಲ. ಅವು ಮೊದಲು ಮನುಷ್ಯನ ಆಲೋಚನಾ ಲಹರಿಯಲ್ಲಿ ಮೊಳಕೆಯೊಡೆಯುತ್ತವೆ. ಆದ್ದರಿಂದ, ಸಮಾಜದ ಉದ್ಧಾರಕ್ಕೆ ಕಾಯುವ ಬದಲು, ನಮ್ಮ ಅಂತರಂಗದ ದೀಪವನ್ನು ಮೊದಲು ಬೆಳಗಿಸೋಣ. ಬದಲಾವಣೆ ನಮ್ಮಿಂದಲೇ ಆರಂಭವಾಗಲಿ. ಡಾ.ಸುಮತಿ ಪಿ

“ಬದಲಾವಣೆ ನಮ್ಮಿಂದಲೇ”ವಿಶೇಷ ಲೇಖನ ಡಾ.ಪಿ.ಸುಮತಿ Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಲೆಕ್ಕವೇ ಇಲ್ಲ” ಎದೆ ಗೂಡಲಿ ಬಚ್ಚಿಟ್ಟ ಕನಸುಗಳಿಗೆ ಲೆಕ್ಕವೇ ಇಲ್ಲಬಿರಿದ ಭಾವನೆಗಳ ನೋಟಗಳಿಗೆ ಲೆಕ್ಕವೇ ಇಲ್ಲ ಸುಳಿ ಗಾಳಿಯಲಿ ಒಮ್ಮೆಯೂ ಪಿಸುಗೂಡಬಾರದೆಹಿಡಿದಿಟ್ಟ ಬಯಕೆಗಳು ನೀಲ ನೀಲಿಯಲಿ ಸೇರುವ ಸಾಲಿಗೆ ಲೆಕ್ಕವೇ ಇಲ್ಲ ಮೋಹ ಮಧುವಿಗೆ ವಾಸ್ತವವೇ ಮರೆತು ಬಿಟ್ಟಿರುವೆತೀರದ ಬಯಕೆಗಳ ಹರಿವ ನೀರಿಗೆ ತೇಲುವ ದಾರಿಗೆ  ಲೆಕ್ಕವೇ ಇಲ್ಲ ಮಾಮರ ಕೋಗಿಲೆ ಮೂಕ ಮರ್ಮರ ತಾಳಿದೆಕಟ್ಟಿದ ಗೋಪುರಕೆ ಕಳಸ ಬಿದ್ದು ಶೋಕಗೀತೆಗೆ ಲೆಕ್ಕವೇ ಇಲ್ಲ ಒಲವ ಭಾವದ ವೀಣೆ ತಂತಿ ನುಡಿಸುವುದೇ ಮರೆತು ಬಿಟ್ಟಿದೆಕಹಿ ಬೇವು ಜಗಿಯುತ ರೇಶಿಮೆ ದೂಡುವ ದಿನಗಳಿಗೆ ಲೆಕ್ಕವೇ ಇಲ್ಲ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ” Read Post »

ಪುಸ್ತಕ ಸಂಗಾತಿ

ರಾಜಶೇಖರ ಕುಕ್ಕುಂದಾ ಅವರ ಕೃತಿ “ಬಿಸಿ ಬಿಸಿ ಬಾತು” ಒಂದು ಅವಲೋಕನ,ಪ್ರಭುರಾಜ ಅರಣಕಲ್

ಪುಸ್ತಕ ಸಂಗಾತಿ ಪ್ರಭುರಾಜ ಅರಣಕಲ್ ರಾಜಶೇಖರ ಕುಕ್ಕುಂದಾ “ಬಿಸಿ ಬಿಸಿ ಬಾತು” ಒಂದು ಅವಲೋಕನ, ತಮ್ಮಪ್ರತಿ ಪದ್ಯಕ್ಕೆ ನವೀಕರಿಸುವ ಕವಿ ನೃಪತುಂಗನನೆಲದ , ಕಲಬುರಗಿ ಜಿಲ್ಲೆಯ ಸೇಡಂತಾಲ್ಲೂಕಿನ ಕುಕ್ಕುಂದಾ ಗ್ರಾಮದರಾಜಶೇಖರಕುಕ್ಕುಂದಾ ಅವರು ಕುರಿತೋದುತ್ತ ‘ಮಕ್ಕಳಕವಿತೆಗೆ’ ಅಪ್ಪಿಕೊಂಡು, ಒಪ್ಪಿಕೊಂಡವರು.- ಚೆಲುವ ಚಂದಿರ, ಗೋಲಗುಮ್ಮಟ, ಪುಟಾಣಿ ಪ್ರಾಸಗಳು, ಸೋನಪಾಪಡಿ, ಶೀರ್ಷಿಕೆಗಳ ನಾಲ್ಕು ಮಕ್ಕಳ ಕವಿತಾ ಸಂಕಲನಗಳನ್ನು ಪ್ರಕಟಿಸಿ, ಕನ್ನಾಡಿನ ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ‘ಬಿಸಿಬಿಸಿ ಬಾತು’ ಅವರ ಐದನೆಯ ಕೃತಿ. ಇದನ್ನು ಪ್ರಕಟಿಸಿದ್ದು ಬೆಂಗಳೂರಿನ ‘ಅವ್ಯಕ್ತ ಪ್ರಕಾಶಾನದ’ ವಸುವತ್ಸಲೆಯವರು. ಕ್ರೌನ್ 1/4 ಆಕಾರದ, ಕೃತಿಯ ಸುಂದರ ಮುಖಪುಟದವಿನ್ಯಾಸದಲ್ಲಿ – ಕಣ್ಸೆಳೆಯುವ ‘ಕಾಮನಬಿಲ್ಲು’ ಕುಂಚಿಸಿದವರು’ ಸೌಮ್ಯ ಕಲ್ಯಾಣಕರ್ ಅವರು. ‘ಹೋದೆಯಾ ದೂರ ಓ ಜೊತೆಗಾರ ಸೇರಲು ಬಂದಾಗ, ನೀ ಅರಿಯದೆ ಹೋದೆ ಪ್ರೇಮದನಾ ಸಂದೇಶವ ತಂದಾಗ’ ಅನುಭವ ಸಿನೆಮಾದ, ವಾಣಿಜಯರಾಮ್ ಹಾಡಿದ, ಗೀತೆ ರಚಿಸಿದ ಖ್ಯಾತ ಸಂಗೀತ ನಿರ್ದೇಶಕ, ನಟ, ವಿ. ಮನೋಹರ್ ಅವರು ಇಲ್ಲಿನ -26 ಪದ್ಯಗಳಿಗೆ, 7 ಪುಟಾಣಿ ಪ್ರಾಸಗಳಿಗೆ – ಒಟ್ಟು 33 – ಪದ್ಯಗಳ ಭಾವಕ್ಕೆ ಹೋಲುವ ಸುಂದರ ಚಿತ್ರ ಗಳನ್ನು ರಚಿಸಿದ್ದು, ‘ಉತ್ತಮರೇಖಾ ಚಿತ್ರ ಕಲಾವಿದರಾಗಿ’ ಹೊರಹೊಮ್ಮಿದ್ದಾರೆ. ಒಳ ಪುಟದ ವಿನ್ಯಾಸ ಕಲ್ಲೂರ ನಾಗೇಶ ಅವರದು. ‘ ಕವಿಯಾಗಿದ್ದುಕೊಂಡೇ ಮಕ್ಕಳ ಜಾಗದಲ್ಲೂ ನಿಲ್ಲುವುದು ಸಾಧ್ಯವಾದಾಗಷ್ಟೇ “ಬಿಸಿಬಿಸಿ ಬಾತು”ಸಂಕಲನದಲ್ಲಿ ಇರುವವಂಥ ರಚನೆಗಳು ಮೈದಳೆಯುವುದು ಸಾಧ್ಯ’ ವೆಂದು ಬೆನ್ನುಡಿಯಲ್ಲಿ ಲೇಖಕ ಪತ್ರಕರ್ತ ರಘುನಾಥ ಚ. ಹ. ಅವರು ಉಲ್ಲೇಖಸಿದ್ದಾರೆ. “ಮಕ್ಕಳಕಾವ್ಯ ನನಗೆ ಇಷ್ಟವಾದ ಪ್ರಕಾರ. ಇದಕ್ಕೂ ನನಗೂ ಬಾಲ್ಯದಿಂದಲೇ ಬಿಟ್ಟೂಬಿಡದ ನಂಟು. ನನ್ನ ರಚನೆಗಳೆಲ್ಲ ಹೆಚ್ಚಾಗಿ ನಾನು ಕಾಪಿಟ್ಟು ಕೊಂಡುಬಂದ ನನ್ನಹಳ್ಳಿ ಮತ್ತು ಶಹರ ಜೀವನದ ಬಾಲ್ಯದ ಅನುಭವಗಳಿಂದ ಪ್ರೇರಣೆ ಪಡೆದವುಗಳೇ. ಅದೇಕೋ ನಾನು ಮಾತ್ರ ಮಕ್ಕಳ ಕಾವ್ಯ ರಚನೆಗಷ್ಟೇಸೀಮಿತನಾದೆ.”ಎಂದು, ‘ಸವಿಯುವಮುನ್ನ’ ಎಂಬ – ತಲೆಬರಹದ ಲೇಖಕನಮಾತುಗಳಲ್ಲಿ, ಕುಕ್ಕುಂದಾ ಅವರು ಹೇಳಿಕೊಂಡಿದ್ದಾರೆ. ಕವಿಯ ಈ ಹೇಳಿಕೆಯಲ್ಲಿ – ಒಂದು ಹಗುರ ತಳಮಳಿಕೆ ಇಣುಕಿದೆ. ಈ ತಳಮಳಿಕೆಗೆ ತಳ್ಳಿಹಾಕುವ ಒಂದು ಅತ್ಯಾಶ್ಚರ್ಯಕರವಾದ ಖಾಸಾ ಹೊಳಪನ್ನು ಇವರ ಮಕ್ಕಳಕಾವ್ಯ ದಕ್ಕಿಸಿಕೊಂಡಿದೆ ಎಂಬುದನ್ನು ಕನ್ನಡ ಮಕ್ಕಳ ಸಾಹಿತ್ಯವಲಯ, ಹಾಗೂ ಕರ್ನಾಟಕಸಾಹಿತ್ಯಅಕಾಡೆಮಿಕೂಡ ಗುರುತಿಸಿದೆ. ಕನ್ನಡ ಹಾಗೂ ಮರಾಠಿ ಪಠ್ಯ ಪುಸ್ತಕಗಳಲ್ಲಿ, ಮತ್ತು ಶಿಶುಗೀತೆಯ ಆಲ್ಬಮ್ ಗಳಲ್ಲಿ ಇವರ ಕವಿತೆಗಳು ಸೇರಿವೆ.ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಹಲವುಬಾರಿ ಬಹುಮಾನ ಪಡೆದಿವೆ. ಹಲವು ಸಂಸ್ಥೆಗಳ ಪ್ರಶಸ್ತಿಗಳ ಸಂಖ್ಯೆ ದೊಡ್ಡದು.- ಅವುಗಳಲ್ಲಿ ಮುಖ್ಯವೆನಿಸುವ ಪ್ರಸ್ತುತ “ಬಿಸಿ ಬಿಸಿ ಬಾತು” ಕೃತಿಗೆ – 2024 ನೇ ಸಾಲಿನ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮತ್ತು 2024 ನೇ ಅಬ್ದದ ಕರ್ನಾಟಕ ಸಾಹಿತ್ಯ ಅಕಾಡೆಮಿಯಪುಸ್ತಕಬಹುಮಾನಕ್ಕೆ”ಬಿಸಿಬಿಸಿಬಾತು”ಆಯ್ಕೆಯಾಗಿದೆ. ಪ್ರಸ್ತುತ ಕೃತಿಯ ಪದ್ಯಗಳ ಬಗ್ಗೆಮೊದಲಕವಿತೆ ಹಬ್ಬ- ಹೀಗೆ ಪ್ರಾರಂಭವಾಗುತ್ತದೆ.ಹೂವು ಅರಳಿ ನಿಂದಿದೆದುಂಬಿ ಹಾರಿ ಬಂದಿದೆಬಿಸಿಲು ಮಳೆಯು ಕೂಡಿದೆಮಳೆಯಬಿಲ್ಲು ಮೂಡಿದೆ! ಹೌದು, ಬಿಸಿಲು ಮಳೆಯು ಕೂಡಿದಾಗಲೇ, ಇಂದ್ರಚಾಪ ಮೂಡುವುದೆಂಬ ಬಣ್ಣನೆಯಲ್ಲಿ – ಈಕೃತಿಯ ಮುಖಪುಟದಲ್ಲಿನ ಸೌಮ್ಯ ಕಲ್ಯಾಣಕರ್ ಅವರ ‘ಕಾಮನಬಿಲ್ಲು’ ಚಿತ್ತಾರ ಗಮನಿಸಬಹುದು. ಆನೆ – ಕವಿತೆಯಲ್ಲಿ, – ಆನೆ ಬಹಳ ದೊಡ್ಡದು, ಅದರಬಾಲ ಗಿಡ್ಡದು /ಕಣ್ಣು ಸಣ್ಣ ಸಣ್ಣದು, ಚರ್ಮ ಬೂದು ಬಣ್ಣದು; ಉದ್ದದೊಂದು ಸೊಂಡಿಲು, ದಿಮ್ಮಿ ಎತ್ತಿ,ಕೊಳ್ಳಲು,/ ಅಗಲ ಅಗಲ ಕಿವಿಗಳು, ಗಾಳಿಬೀಸಿ ಕೊಳ್ಳಲು; ಹೀಗೆ ಮಕ್ಳಳು ಓದಿ – ನಕ್ಕು ನಲಿಯಲು ಪೂರಕವಾದ ಶಬ್ದ ಪಂಜಗಳು ಕೃತಿಯುದ್ದಕ್ಕೂ ಮನಸೆಳೆಯುತ್ತವೆ. ಸೊಳ್ಳೆ, ನಾಯಿಮರಿ ಬಾಬಾ,ಗಡಿಯಾರ,ನಮ್ಮಮನೆಅಂದ, ದಂತಹಪದ್ಯಗಳುಮಕ್ಕಳಲ್ಲದೆ ಕಾವ್ಯ ಪ್ರಿಯ ದೊಡ್ಡವರಲ್ಲೂ ಉಲ್ಲಾಸ ತುಂಬಬಲ್ಲವು. ‘ನಿದ್ದೆ ಎಲ್ಲಿ ಇರುವುದು’ ಪದ್ಯದಲ್ಲಿ ‘ಕ್ಲಾಸಿನಲ್ಲಿ ಕಾಡಲಿಕ್ಕೆ ಧುತ್ತನೆಂದು ಬರುವುದು /ಪಾಠ ಕೇಳುವಾಗ ತನ್ನ ಆಟ ನಡೆಸುತಿರುವುದು! / ಹಗಲಿ ನಲ್ಲಿ ಚಂದ್ರತಾರೆ ಗಳನು ತೂರಿಬಿಡುವುದು /ಸಿನೆಮದಂತೆ ಕನಸುಗಳನು ತಲೆಗೆ ತೂರಿಬಿಡುವುದು… ಶಾಲೆಯಲ್ಲಿ ಡೆಸ್ಕಿನಮೆಲೆ ಕುಳಿತ ಚಿಣ್ಣರ ಚಿತ್ರಣವಿದು.- ಸಹಜ ಹಾಗೂ ನೈಜತೆಗೆ ಪಕ್ಕಾದ ರಚನೆ; ಬಾರೋ ಬಾರೋ ಮಳೆರಾಯ, ಡ್ರೈವರ ಅಣ್ಣ, ಐಯ್ಯಾಮ್ ವೆರಿ ಸಾರಿ, ಯಾಕೆ ಹೀಗೆ? ಗುಲಾಬ್ ಜಾಮೂನ್, ಪದ್ಯಗಳು ಮಕ್ಕಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಈಕೃತಿಯಶಿರೋನಾಮೆಯಪದ್ಯ’ಬಿಸಿಬಿಸಿಬಾತು’ಮಕ್ಕ ಳಲ್ಲದೆ, ಓದುಗರೆಲ್ಲರಬಾಯಿಯಲ್ಲಿ ನೀರೂರಿಸುವ “ರಚನೆ.ಬಿಸಿಬಿಸಿಬಾತು, ಕೇಸರಿಬಾತು ಬಾಯ್ತೆಗಿ ಚಿನ್ನು ಗಪ್ ಚುಪ್ ತಿನ್ನು /ಬಿಸಿಬಿಸಿ ಬಾತು ಟೊಮೆeಟೊe ಬಾತು ಬಾಯ್ತೆಗಿ ಚಿನ್ನು ಗಪಚುಪ್ ತಿನ್ನು -ಎಂದು ತಾಯಿ ತನ್ನ ಪುಟ್ಟಕಂದನಿಗೆ – ಬಿಸಿಬೇಳೆಬಾತು, ವಾಂಗೀ ಬಾತು, ಚೌ ಚೌ ಬಾತು ತಿನ್ನಿಸಿ – ಕೊನೆಗೆ, ತಾಯಿ ಮಗನಿಗೆ – ಬಿಸಿ ಬಿಸಿ ಬಾತು ತಿಂದದ್ದಾತು, ಚಿನ್ನು ಚಿನ್ನು, ನಿದ್ದೆಮಾಡಿನ್ನು!ಎಂಬಲ್ಲಿಗೆ ಕವಿತೆ ಮುಕ್ತಾಯ ಗೊಳ್ಳುತ್ತದೆ.ಇನ್ನೂ ಇಂತಹ ಮನಮಿಡಿಯುವ ಪದ್ಯಗಳು ಈ ಕೃತಿಯಲ್ಲಿವೆ. ರಾಜಶೇಖರ ಎಂಬ ಈ ಎಂಜಿನಿಯರಿಂಗ್ ಮೇಷ್ಟ್ರರ ಪುಟಾಣಿ ಪ್ರಾಸಗಳ ಗಮ್ಮತ್ತೆe ಬೇರೆಯದು. ತನ್ನದೇ ಮುದ್ರೆ ಹೊಂದಿದ ರಚನೆಗಳಿಗೆ ಒತ್ತುಕೊಟ್ಟು – ಪುಟಾಣಿಪ್ರಾಸಗಳಿಗೆ ಮೀಸಲಾದ ಪದ್ಯ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿ ಯಲ್ಲಿ ಕಾಡೆಲ್ಲಿ? ಎಂಬ ಮುಕ್ತಕದಲ್ಲಿ -“ಕಾಡಿಗೆ ಹೋಗೋ ರಾಮ – ಸೀತೆ – ಈಗೆಲ್ಲಿ? ಈಗೆಲ್ಲಿ? /ಒಂದು ವೇಳೆ ಇದ್ರು ಅನ್ಕೊ ಕಾಡೆಲ್ಲಿ? ಕಾಡೆಲ್ಲಿ?/.. ಇಲ್ಲಿ – ಕಾಡಿಲ್ಲದ ನಾಡಿನ ಭೀಭತ್ಸ ಚಿತ್ರಣ ವಿದೆ. ‘ಒಂದು ಎರಡು’ – ಪದ್ಯ, ಒಂಭತ್ತು ಹತ್ತರ ವರೆಗೆ ಪವಣಿಸಿಕೊಂಡ ಪರಿ ನೋಡಿ.” ಒಂದು ಎರಡು ಸೇರಿ ಆಟ ಆಡ್ತಿದ್ವು /ಮೂರು ನಾಲ್ಕುಸೆರಿ ಪಾಠ ಕೇಳ್ತಿದ್ವು /ಐದು ಆರು ಸೇರಿ ಊಟ ಮಾಡ್ತಿದ್ವು/ ಏಳು ಎಂಟು ಸೇರಿ ಜಗಳ ಆಡ್ತಿದ್ವು / ಒಭತ್ತು ಹತ್ತು ಸೇರಿ ನಿಂತು ನೋಡ್ತಿದ್ವು! ಇಂತಹ ನಿರ್ವಚನಗಳ ಮೋಡಿಯು – ಬಹುತೇಕ ಪುಟಾಣಿ ಪ್ರಾಸಗಳಲ್ಲಿ ಹಾಸುಹೊಕ್ಕಾಗಿವೆ.ಇರ್ವೆಗೆ ನೆಗಡಿ ಬಂದ್ರೆ? ಪದ್ಯದ ಗುಣ ಲಾವಣ್ಯವು ವೈಚಿತ್ರ್ಯ ಗಳಿಂದ ಕೂಡಿದೆ.ಇರ್ವೆಗೆ ನೆಗಡಿ ಬಂದ್ರೆ ಮೂಗುಹೇಗೆ ಒರ್ಸೋದು /ಮೈ ತಿಂಡಿಬಿಟ್ರೆ ಹೇಗಪ್ಪಾತುರ್ಸೋದು?ಕಿರಿಕಿರಿ ಮಾಡ್ದ್ರೆ ನಿದ್ದೆಹೇಗೆ ಬರ್ಸೋದು? ಹುಷಾರು ಇಲ್ದೆ ಹೋದ್ರೆ ಯಾರನ್ನ ಕರ್ಸೋದು? ಹೇಗಪ್ಪ ಬಾಯಿ ತೆರ್ಸಿ ಗುಳ್ಗೆನುಂಗ್ಸೋದು? ರಕ್ತನಾಳಹುಡ್ಕಿಹುಡ್ಕಿ ಸಲೈನ್ ಏರ್ಸೋದು?…ಇವರ ಆಲೋಚನಾ ಲಹರಿಯಲ್ಲಿ ‘ವಸ್ತುನವೀನತೆ’ ಇದೆ . ಇರುವೆಗೆ ನರನಂತೆ ಪರಿಕಿಸುವಪರಿ – ಇಲ್ಲಿ ಅಚ್ಚರಿ ಗೊಳಿಸುತ್ತದೆ!°°°ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಂಯೋಜಿತ ಪ್ರಾಧ್ಯಾಪಕರಾಗಿ ಸುದೀರ್ಘಸೇವೆಸಲ್ಲಿಸಿದ ಕುಕ್ಕುಂದಾ ಅವರು ಪ್ರಸಕ್ತ ವರ್ಷದ ಜುಲೈ 31 ಕ್ಕೆ, ತಮ್ಮ ಸೇವಾ ಹುದ್ದೆಯಿಂದ ನಿವೃತ್ತಿಹೊಂದಲಿದ್ದಾರೆ. ಎಡೆಬಿದದ ಬೋಧಕವೃತ್ತಿ ಯಲ್ಲಿಯಲ್ಲಿದ್ದೂ ಐದು ಕವಿತಾ ಸಂಕಲನ ಪ್ರಕಟಿಸಿ – ತಮ್ಮ ರಚನೆಗಳಲ್ಲಿ ನವೀಕರಣಕ್ಕೆ ಒತ್ತುಕೊಡುತ್ತ ಬಂದ ಈ ಕವಿ ಸದ್ಯ ಕಟ್ಟುಬಿಡಿಸಿಕೊಂಡಿದ್ದು, ಮುಂದಿನ (Re-tired) ಅವಧಿಯಲ್ಲಿನ ಇವರ ಕಾವ್ಯದ ಬೆಳವಣಿಗೆ ಇನ್ನೂ ಹೊಸತಿನಿಂದ ಪಡಿಮೂಡುತ್ತಿರಲಿ ಎಂದು ಮನದುಂಬಿ ಹಾರೈಸುವೆ. ಪ್ರಭುರಾಜ ಅರಣಕಲ್

ರಾಜಶೇಖರ ಕುಕ್ಕುಂದಾ ಅವರ ಕೃತಿ “ಬಿಸಿ ಬಿಸಿ ಬಾತು” ಒಂದು ಅವಲೋಕನ,ಪ್ರಭುರಾಜ ಅರಣಕಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ‌ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಜ್ವಲಿಸುವ ಪ್ರೀತಿಯ ಸಹಿಸಿ ನುಂಗಲೆಂಗ ಹೇಳುಸುಡುವ ಕೆಂಡವ ಕಟ್ಟಿಕೊಂಡು ತಾಳಲೆಂಗ ಹೇಳು ಬಯಕೆ ಬಾಂದಳ ತೋಟ ನಳನಳಿಸುತಿದೆ ನೋಡುಒಲವಿನೊರತೆಯ ಒತ್ತರವ ತಡೆಯಲೆಂಗ ಹೇಳು ಮನಸು ಕಂಡ ಆಸೆಯೆಲ್ಲಾ ಫಲಿಸದೆಂದು ನಾ ಬಲ್ಲೆಪ್ರೇಮದುಯ್ಯಾಲೆಯ ಏರಿಳಿತ ತಾಳಲೆಂಗ ಹೇಳು ಜೀವ ಜೀವಕಂಟಿದ ನಂಟಿನ ಗಂಟು ಬಿಡಿಸಲುಂಟೆಪ್ರೇಮಾಮೃತವೇ ವಿಷವಾದರೆ ಬಾಳಲೆಂಗ ಹೇಳು ಒಡಲಾಳ ವಿರಹ ಭೋಗ೯ರೆತಕೆ ಸಿಕ್ಕು ತಪ್ತವಾಗಿದೆತುಟಿಯ ಮಧು ಹೆಪ್ಪುಗಟ್ಟಿದರೆ ಉಸುರಲೆಂಗ ಹೇಳು ಸರಸವಿಲ್ಲದ ಕೋಲಾಹಲ ಅವುಡುಗಚ್ಚಿಸಿ ಚುಚ್ಚುತಿದೆಹಾರಬೇಕೆನುವ ಬಯಕೆ ಪುಕ್ಕವ ಕತ್ತರಿಲೆಂಗ ಹೇಳು ಹುಚ್ಚೆದ್ದ ಆಸೆಗಳ ಸೊಕ್ಕನೆಲ್ಲ ಮುರಿಯಲಾಗುತಿಲ್ಲಕುದಿವ ಬೆಚ್ಚನೆಯ ಆ  ಭಾವ ಹೊಚ್ಚಲೆಂಗ ಹೇಳು ಅನುಳೆದೆಯಲ್ಲೆ ಅಚ್ಚಾದ  ಚಿತ್ರ ಕೊಚ್ಚಿ ಕತ್ತರಿಸಲುಂಟೆಚಿತ್ತ ಬಿತ್ತಿಯ ನೆನಪು ವಿಧಿ ಚೋರಗ ಒಪ್ಪಿಸಲೆಂಗ ಹೇಳು// ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ‌ ಗಜಲ್ Read Post »

ಇತರೆ

“ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ  ವಂಶವೃಕ್ಷ ನಾಟಕ” ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ  ವಂಶವೃಕ್ಷ ನಾಟಕ” ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ  ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಡಾ. ಗೊರೂರು, ಡಾ.ಎಸ್.ಎಲ್. ಭೈರಪ್ಪ, ಶ್ರೀಮತಿ ಭಾನು ಮುಷ್ತಾಕ್ ಅವರ ಸಾಹಿತ್ಯ ಸಹವಾಸ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿತ್ತು. ಈ ಮೂವರು ಸಾಹಿತಿಗಳ ಸಾಹಿತ್ಯವನ್ನು ಮೂರು ವಿಭಿನ್ನ ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳಿಗೆ  ತಲುಪಿಸಲು ಸಾಫಲ್ಯ ಸಾಧಿಸಿತು. ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತಿಗಳಷ್ಟೇ ಅಗಿ ಉಳಿಯಲಿಲ್ಲ. ಸ್ವಾತಂತ್ರö್ಯ ಹೋರಾಟದಲ್ಲಿ ಗಾಂಧಿ ಪ್ರಭಾವಕ್ಕೆ ಒಳಗಾದವರು. ಆ ದಿಶೆಯಲ್ಲಿ ಬದುಕು ರೂಪಿಸಿಕೊಂಡವರು. ತಾವು ಜನ್ಮ ತಳೆದ ಊರು ನದಿಯನ್ನು ಆವರಿಸಿಕೊಂಡು  ಗ್ರಾಮ್ಯ ಬದುಕನ್ನು ಪ್ರಬಂಧ ಸಾಹಿತ್ಯದಲ್ಲಿ ಹಾಸ್ಯ ಪ್ರಜ್ಞೆಯಲ್ಲಿ ಚಿತ್ರಿಸಿದವರು. ಆ ಕಾಲದ  ಬದುಕನ್ನು ಇಂದಿಗೆ ಹೋಲಿಸಿ   ಮಾತನಾಡಿದವರು ಡಾ.ರಶ್ಮಿ ಪಿ. ಅವರು. ಇವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಪು.ತಿ.ನರಸಿಂಹಾಚಾರ್ ಅವರ ಲಲಿತ ಪ್ರಬಂಧಗಳು ತೌಲನಿಕ ಅಧ್ಯಯನ ಪ್ರಬಂಧಕ್ಕೆ ಪಿಹೆಚ್‌ಡಿಯನ್ನು ಇದೇ ಆಗಸ್ಟ್ ೧೭ರಂದು ಪಡೆದಿದ್ದಾರೆ.  ಇವರು ಗೊರೂರರ ಸಾಹಿತ್ಯ ಸಮಕಾಲೀನ ದೃಷ್ಟಿಕೋನ ವಿಷಯವಾಗಿ ಪ್ರಬಂಧ ಮಂಡಿಸುವಲ್ಲಿ  ಪ್ರಚಲಿತ ಬದುಕನ್ನು ನೋಡಿದ್ದಾರೆ ನಿಜ. ಆ ಕಾಲಘಟ್ಟದ  ಬದುಕನ್ನು ಓದಿ ತಿಳಿದಿದ್ದಾರೆ ಖರೆ. ನಮ್ಮೂರ ಜನರನ್ನು ಬಂದು ಮಾತನಾಡಿಸಿ  ಮಾತನಾಡಿದ್ದರೆ ಚೆಂದಿತ್ತು ಎನಿಸಿತು.  ಶ್ರೀಮತಿ ವಾಸಂತಿಮೂರ್ತಿ  ಅವರು ಹೊಸ ತಲೆಮಾರಿಗೆ ಗೊರೂರರ ಸಾಹಿತ್ಯ ಕೆಲವು ಆಲೋಚನೆಗಳು ಮತ್ತು ಯೋಜನೆಗಳು ವಿಷಯದಲ್ಲಿ ಮಾತನಾಡಿದ ವಿಡಿಯೋವನ್ನು  ಪ್ರದರ್ಶಿಸಲಾಯಿತು. ಮೇಡಂ ಕೆನಡದಲ್ಲಿ ನೆಲೆಸಿದ್ದಾರೆ. ಮರ‍್ನಾಲ್ಕು ವರ್ಷಗಳಿಂದ ಡಾ.ಗೊರೂರರ ಜನ್ಮ ದಿನ ಜುಲೈ೪ರ ಸಂಧರ್ಭ  ಭಾರತಕ್ಕೆ ಬಂದು  ಡಾ.ಗೊರೂರು ಸಾಹಿತ್ಯ ಗೋಷ್ಟಿಗಳಲ್ಲಿ  ಭಾಗಿಯಾಗಿದ್ದಾರೆ.  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್ ಇತ್ತೀಚಿಗೆ ನೋಂದಣಿ ಕೂಡ ಮಾಡಿಸಿದ್ದಾರೆ. ಇವರು ತಮ್ಮ ತಂದೆ ಜೊತೆಗಿನ ಒಡನಾಟ ನೆನಪಿಸಿಕೊಂಡರು ಜೊತೆಗೆ  ಸರ್ಕಾರಕ್ಕೆ ಹೀಗೆ ಮನವಿ ಮಾಡಿದರು. ಹಾಸನ ಹೇಮಗಂಗೋತ್ರಿಯಲ್ಲಿ  ಗೊರೂರು ಅಧ್ಯಯನ ಪೀಠ ಸ್ಥಾಪಿಸಿ, ಬೆಂಗಳೂರು ಗೊರೂರರು ವಾಸವಿದ್ದ  ರಾಜಾಜಿನಗರ ಮೆಟ್ರೊ ಸ್ಟೇಷನ್‌ಗೆ ಗೊರೂರರ ಹೆಸರು ಇಡಬೇಕೆಂದು ಮತ್ತು  ಗೊರೂರು ಮನೆಯನ್ನು ಸರ್ಕಾರ ಪಡೆದು  ಸ್ಮಾರಕ ಮಾಡಲೆಂಬುದು ಅವರ ಬೇಡಿಕೆ ಆಗಿತ್ತು.  ಶ್ರೀಮತಿ ಭಾನುಮುಷ್ತಾಕ್ ಲಂಕೇಶ್ ಪತ್ರಿಕೆ ವರದಿಗಾರ್ತಿ ಜೊತೆಗೆ  ವಕೀಲ ವೃತ್ತಿ   ನಿರ್ವಹಿಸಿದವರು.  ಇವರ ಎದೆಯ ಹಣತೆ ಕಥಾ ಸಂಕಲನವು ಮಡಿಕೇರಿ ದೀಪಾ ಭಾಸ್ತಿ ಇವರಿಂದ ಇಂಗ್ಲೀಷ್‌ಗೆ ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಅನುವಾದವಾಗಿ ಈ ಕೃತಿಗೆ ೨೦೨೫ರ ಪ್ರತಿಷ್ಠಿತ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ಲಭಿಸಿದೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಸಿಕ್ಕ ದೊಡ್ಡ ಗೌರವ.   ಗೋಷ್ಠಿ ೧ರಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರೊಂದಿಗೆ ಡಾ.ರೇಖಾದತ್ತ, ದಯಾನಂದ ಸಾಗರ್ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಸಂವಾದ ನಡೆಸಿದರು.  ಬಾನು ಮೇಡಂ ಬೂಕರ್ ಪ್ರಶಸ್ತಿ ಸ್ವೀಕಾರಕ್ಕೆ ಹೋದ ದಿನ ಸೂಟ್ ಕೇಸ್ ಕಳೆದುಕೊಂಡ ಫಜೀತಿ ಹೇಳುವಾಗ ಡಾ.ಗೊರೂರರ ಅಮೇರಿಕಾದಲ್ಲಿ ಗೊರೂರು ಕಾದಂಬರಿ  ನೆನಪಾಗುತ್ತದೆ. ಈ ಕೃತಿ ೧೯೮೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇರಲಿ ಎದೆಯ ಹಣತೆ ಕೃತಿಯಲ್ಲಿ ಬಾನು ಮೇಡಂ ಹೇಳಿದ್ದಾರೆ.  ಇದು ನನ್ನ ಬದುಕಿನ ಅತ್ಯಂತ ಸಂತೋಷದ ಸಂದರ್ಭ. ನನ್ನ ಬದುಕು ಮತ್ತು ಬರಹವು ಅತ್ಯಂತ ಕ್ರಿಯಾಶೀಲವಾಗಿ ಕವಲೊಡೆದ ಸಂದರ್ಭ. ಬುಕರ್ ಅದು ಕೈಗೆಟುಕಲಾರದ ಗಗನ ಕುಸುಮ ಎಂದೇ ನನ್ನ ಎಣಿಕೆಯಾಗಿತ್ತು. ಅದರ ಆರಂಭಿಕ ಹಂತದ ಸ್ಫರ್ಧೆಯೇ ನಾನು ಕಂಡು ಕೇಳಲರಿಯದ ಅನೇಕ ಸವಾಲುಗಳಿಂದ ಕೂಡಿತ್ತು. ಯಾವುದೇ ಭಾಷೆಯಿಂದ ಇಂಗ್ಲೀಷಿಗೆ ಅನುವಾದವಾದ ಕೃತಿಯಾಗಿರಬೇಕು. ಆಯಾ ವರ್ಷ ಮೇನಿಂದ  ಸೆಪ್ಟಂಬರ್ ತಿಂಗಳಲ್ಲಿ ಪ್ರಕಟವಾಗಿರಬೇಕು. ಇಂಗ್ಲೆAಡ್ ಅಥವಾ ಐರ್ಲೆಂಡಿನ ಪ್ರಕಾಶನ ಸಂಸ್ಥೆಯಿAದ ಪ್ರಕಟವಾಗಿರಬೇಕು. ಹೀಗೆ ಅರ್ಹತೆಯ ಹಣೆಪಟ್ಟಿಯಲ್ಲಿ ಭಾಗವಹಿಸಿದ ಪುಸ್ತಕಗಳು ೧೫೪.  ಜ್ಯೂರಿಗಳ ತಂಡ ೧೩ ಪುಸ್ತಕ ಆಯ್ಕೆ ಮಾಡಿ, ಬಿಡುಗಡೆಯಾದ  ಪಟ್ಟಿ ಕಂಡು ನನಗೆ ಏನೇನೂ ಅನಿಸಲಿಲ್ಲ. ನನಗೆ ನನ್ನ ಮಕ್ಕಳ ಪೋನ್ ಕರೆ ಮರುದಿನದಿಂದ ಆರಂಭವಾಗಿ  ಪತ್ರಕರ್ತರ  ಸಂದರ್ಶನ ನಡೆದವು. ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂಬ ಅಪವಾದ ಸುಳ್ಳು ಮಾಡುವ ದಿಕ್ಕಿನಲ್ಲಿ ನನ್ನ  ಪುಸ್ತಕಗಳು ಓದುಗರ ಕೈ ಸೇರುತ್ತಿವೆ. ಪುಸ್ತಕ ಪ್ರೀತಿಯ ನೈಜ ಅನುಭವ ನನಗೆ ಇಂಗ್ಲೆAಡ್ ನಲ್ಲಿ ದೊರಕಿತು. ಅಲ್ಲಿಯ ಜನರ ಪುಸ್ತಕ ಪ್ರೀತಿ ಲೇಖಕರ ಬಗೆಗಿನ ಅಭಿಮಾನವು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿತು. ಪುಸ್ತಕ ಮತ್ತು ಕಲೆಯನ್ನು ಜೀವಂತ ಇರಿಸುವ ಅವರ ಪ್ರಯತ್ನ ಎಂಥಾ ಸ್ಫೂರ್ತಿದಾಯಕ..?  ಡಾ.ಎಸ್.ಎಲ್.ಬೈರಪ್ಪನವರು ಕಾದಂಬರಿಕಾರರಾಗಿ ಜನಪ್ರಿಯರು. ಇವರ ಕೃತಿಗಳು ಇಂಗ್ಲೀಷ್ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ. ಇವರಿಗೆ ಭಾರತ ಸರ್ಕಾರದ  ಪದ್ಮಭೂಷಣ ಪ್ರಶಸ್ತಿ ೨೦೨೩ರಲ್ಲಿ ಲಭಿಸಿದೆ. ಇವರ ಗೃಹಭಂಗ, ವಂಶವೃಕ್ಷ, ನಾಯಿ ನೆರಳು, ದಾಟು ಕಾದಂಬರಿಗಳನ್ನು ನನ್ನ ಓದಿನ ದಿನಗಳಲ್ಲೇ ಓದಿದ್ದೆನು. ಇವರ ವಂಶವೃಕ್ಷ ಕಾದಂಬರಿಯ ನಾಟಕ ರೂಪಾಂತರವನ್ನು  ಮೈಸೂರಿನ  ಕಲಾಸುರುಚಿ ತಂಡದವರು ನಾಗಭೂಷಣ್ ಪಿ. ನಿರ್ದೇಶನದಲ್ಲಿ ಪ್ರದರ್ಶಿಸಿದರು. ಹಿಂದಿ ರೂಪಾಂತರ ಪ್ರತಿಭಾ ಅಗರವಾಲ್ ಅವರದು ಮತ್ತೇ  ಕನ್ನಡಕ್ಕೆ  ಶಾರದಾ ವೆಂಕಟಸುಬ್ಬಯ್ಯ ತಂದಿದ್ದಾರೆ. ವಂಶವೃಕ್ಷ ಒಂದು ವಂಶದ ಪರಂಪರೆಯ ಕಥೆ. ಈ ಪರಂಪರೆಯಲ್ಲಿ ಕಂಡುಬರುವ ಬಿರುಕಿನ ಕಥೆ ಇಂದಿನ ನಮ್ಮ ಬದುಕಿನಲ್ಲೂ ಪ್ರತಿಫಲಿಸುತ್ತದೆ. ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯವರದು ಆತ್ರೇಯ ಗೋತ್ರಕ್ಕೆ ಸೇರಿದ ಸಂಸ್ಕಾರ ಸಂಪ್ರದಾಯನಿಷ್ಠ ಮನೆತನ. ಈ ಪಾತ್ರದಲ್ಲಿ ಎನ್.ಧನಂಜಯ ಅವರು ತುಂಬು ಗಾಂಭೀರ್ಯ ನಡೆನುಡಿ ಅಭಿನಯದಲ್ಲಿ ಜೀವ ತುಂಬಿದರು. ಇವರ ಧರ್ಮಪತ್ನಿ ಭಾಗೀರಥಿ ಪಾತ್ರದಲ್ಲಿ ದೀಪಾ ರವಿಶಂಕರ್ ಕೂಡ ಅಷ್ಟೇ ಗಮನ ಸೆಳೆದರು. ಇವರ  ಮಗ ನಂಜುAಡ ಆಕಸ್ಮಿಕವಾಗಿ ಕಪಿಲಾ ನದಿಯಲ್ಲಿ ಜಾರಿಬಿದ್ದು ಸಾವಿಗೀಡಾಗಿದ್ದಾನೆ.  ಸೊಸೆ ಕಾತ್ಯಾಯಿನಿ ಚಿಕ್ಕ ವಯಸ್ಸಿಗೆ ವಿಧವೆ ಆಗಿದ್ದಾಳೆ. ಅವಳ ಓದಿನ ಆಕಾಂಕ್ಷೆಗೆ  ಮಾವ ಅಡ್ಡಿಯಾಗದೇ ಕಾಲೇಜಿಗೆ ಕಳಿಸುತ್ತಾನೆ. ಈ ಪಾತ್ರವನ್ನು ಅದಿತಿ ಕೂಡ ಸಮರ್ಥವಾಗಿ ನಿಭಾಯಿಸಿದರು.  ಅಲ್ಲಿ  ರಾಜಾರಾವ್ ಎಂಬ ಅಧ್ಯಾಪಕನ ಪರಿಚಯ ಪ್ರೇಮಕ್ಕೆ ತಿರುಗಿ ಗಂಡನ ಮನೆ ತೊರೆಯುತ್ತಾಳೆ. ಇತ್ತ ನಂಜುAಡ ಶ್ರೋತ್ರಿಯ ಮಗ ಚೀನಿ ತನ್ನ ತಾತ ಶ್ರೀನಿವಾಸ ಶ್ರೋತ್ರಿಗಳ ಆರೈಕೆಯಲ್ಲಿ ಬೆಳೆದು ದೊಡ್ಡವನಾಗುತ್ತಾನೆ.  ಶ್ರೀನಿವಾಸ ಶ್ರೋತ್ರಿಗಳಿಗೆ ತಮ್ಮ ಹುಟ್ಟಿನ ರಹಸ್ಯ ಮನೆಯಲ್ಲೇ ಇದ್ದ ಲಕ್ಷಿö್ಮÃಯಿಂದ ತಿಳಿಯುತ್ತದೆ. ತಾನು ಶ್ರೋತ್ರೀಯ ವಂಶದವನಲ್ಲವೆAಬ, ತನ್ನದು ಆತ್ರೇಯ ಗೋತ್ರವೂ ಅಲ್ಲ ಬದಲು ಶಾಮದಾಸನೆಂಬ ಹರಿಕಥೆದಾಸರಿಗೆ ತನ್ನ ತಾಯಿಯ ಅನೈತಿಕ ಸಂಬAಧದಿAದ ಹುಟ್ಟಿದÀವನೆಂದು ತಿಳಿದು ಹತ್ತಾನಾಗುತ್ತಾನೆ. ತಾನು ಆವರೆಗೂ  ನಂಬಿಕೊAಡು ಬಂದ ಆಚಾರ ವಿಚಾರ ಸಂಸ್ಕಾರಗಳೆಲ್ಲಾ ಎಷ್ಟು ಸುಳ್ಳು ಎಂಬ ಕಟು ಸತ್ಯ ಅರಿವಾಗಿ ಅತನ ಸ್ವಾಭಿಮಾನಿ ಕಟ್ಟಡÀ ತಳಹದಿ ಕುಸಿಯುತ್ತದೆ.  ಜಿಗುಪ್ಸೆಗೊಂಡು  ಶ್ರೋತ್ರಿಗಳು ವಾರಸುದಾರರು ಸಿಗದೆ ಎಲ್ಲವನ್ನೂ ದಾನ ಮಾಡುತ್ತಾರೆ.  ಇತ್ತ ಕಾತ್ಯಾಯಿನಿಯಾದರೂ  ಓದಿನ ನಂತರ  ಕಾಲೇಜು ಅದ್ಯಾಪಕಿಯಾಗಿದ್ದಾಳೆ. ಅದೇ ಕಾಲೇಜು ಸೇರುವ ಚೀನಿ ಅವಳನ್ನು ಗುರುತಿಸಲೂ ಇಷ್ಟಪಡದೆ ಕಾಲೇಜು ತೊರೆಯುತ್ತಾನೆ. ಮರುಮದುವೆದ ಕಾತ್ಯಾಯಿನಿಗೆ ಮಕ್ಕಳಾದೆ ಕರ್ತವ್ಯ ಧರ್ಮಗಳ ತೊಳಲಾಟದಲ್ಲಿ ಸಿಲುಕಿ ಸಾವನ್ನಪ್ಪುತ್ತಾಳೆ. ಮುಂದೆ  ಶ್ರೋತ್ರಿಗಳು ರಾಜಾರಾವ್‌ರನ್ನು ಭೇಟಿಯಾಗಿ ಆತ ತನ್ನ ಚಿಕ್ಕಪ್ಪನ ಮೊಮ್ಮಗನೇ ಎಂದು ತಿಳಿದು ಖಿನ್ನರಾಗುತ್ತಾರೆ. ಪ್ರಬುದ್ಧ ಮನಸ್ಸಿನ ಪರಿಪಕ್ವ ವ್ಯಕ್ತಿತ್ವದ ಶ್ರೀನಿವಾಸ ಶ್ರೋತ್ರಿಗಳು ಲೌಕಿಕ ಬದುಕಿನ ವ್ಯಾಮೋಹ ತೊರೆದು ಬೆಳಕಿನ ಪಥದತ್ತ ಸಾಗುತ್ತಾರೆ.  ಪ್ರಯೋಗದಲ್ಲಿ ಕೆಲವು ಬದಲಾವಣೆಗಳನ್ನು ಸನ್ನಿವೇಶಕ್ಕೆ ಪೂರಕ ಹಾಡುಗಳನ್ನು ಸಂಯೋಜಿಸಿದ್ದು (ರಚನೆ: ಪ್ರೊ.ಡಿ.ಎ.ಶಂಕರ್) ಗಂಭೀರ ನಾಟಕಕ್ಕೆ ರಂಜನೆ ನೀಡಿದೆ.   ಹಾಡುಗಾರಿಕೆಯಲ್ಲಿ ಸುಮನಾ, ನಿಸರ್ಗಾ, ವಿಸ್ಮಯ ತಂಡ ಮತ್ತು ಇವರಿಗೆ ಸಂಗೀತ ಸಾಂಗತ್ಯದಲ್ಲಿ ವಿದ್ವಾನ್ ಪುಟ್ಟಣ್ಣಯ್ಯ ವೈ.ಎಂ. ಅವರ  ಹರ‍್ಮೋನಿಯಂ ಕೀಬೋರ್ಡ್ನ್ನು ಮೀರಿಸುತ್ತದೆ. ಮಹದೇವ್ ತಬಲ ಸಾತ್ ನೀಡಿದರು.  ನಾಟಕದಲ್ಲಿ ಬರುವ ಲಕ್ಷಿö್ಮ ಪಾತ್ರದಲ್ಲಿ ವಿಜಯಲಕ್ಷಿö್ಮ ಎಂ. ಚೀನಿಯಾಗಿ ಬಾಲಾಜಿ ಎಂ.ಎನ್. ಹಾಗೂ ಸದಾಶಿವರಾವ್ ಪಾತ್ರವನ್ನು ಮಂಜುನಾಥ್ ಎಂ.ಎನ್ ನಿಭಾಯಿಸಿದರು.   ರಾಜಾರಾವ್ ಆಗಿ  ಉಲ್ಲಾಸ್ ಎಚ್.ಎಸ್. ಹಾಗೂ ಅನಂತ ಮೇಷ್ಟುç ಪಾತ್ರವನ್ನು ಪ್ರದೀಪ್ ಎಂ. ನಿರ್ವಹಿಸಿದರು. ಬೆಳಕು: ಮಧುಸೂದನ್ ನೀನಾಸಂ,  ರಂಗಸಜ್ಜಿಕೆ ನರಸಿಂಹಕುಮಾರ್. ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶಯ ನುಡಿಯಲ್ಲಿ ಸಾಹಿತಿ ವಿಮರ್ಶಕರು ಕೆ.ಸತ್ಯನಾರಾಯಣ ಅರ್ಥಪೂರ್ಣವಾಗಿ  ಮೂವರು ಸಾಹಿತಿಗಳ ಒಟ್ಟಾರೆ ಸಾಹಿತ್ಯವನ್ನು ತಮ್ಮ ಟೈಮ್ ಲಿಮಿಟ್‌ನಲ್ಲಿ ಚೆನ್ನಾಗಿಯೇ ಕಟ್ಟಿಕೊಟ್ಟರು. ಸುಧೀಶ್ ವೆಂಕಟೇಶ್, ಮುಖ್ಯ ಸಂವಹನಾಧಿಕಾರಿಗಳು ಪ್ರಾಸ್ತಾವಿಕ ನುಡಿ, ಸಂಸ್ಥೆಯ ಮಹೇಶ್ ಕುಮಾರ್ ಸಿ.ಎಸ್. ರಾಘವೇಂದ್ರ ಹೇರ್ಳೆ, ಎಸ್.ವಿ.ಮಂಜುನಾಥ್ ಅವರ ಕಾರ್ಯ ತತ್ಪರತೆ ಮೂವರು ಸಾಹಿತಿಗಳ ಚಿತ್ರಪಟಗಳ ಸಂಗ್ರಹಣೆ ಪ್ರದರ್ಶನ ಏರ್ಪಾಡು ಮೆಚ್ಚತಕ್ಕದ್ದು. ಇದು ಅಜೀಂ ಪ್ರೇಮ್‌ಜಿ ವಿಶ್ವ ವಿದ್ಯಾಲಯ, ಬೆಂಗಳೂರು ಇವರ ೮ನೇ ಸಾಹಿತ್ಯ ಸಹವಾಸ ಕಾರ್ಯಕ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ವಿಶೇಷವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸಲು ಕಾರ್ಯಕ್ರಮ ಯಶಸ್ವಿಯೇ ನಮಗೆ ಸ್ಫೂರ್ತಿ, ಪ್ರೇರಣೆಯಾಗುತ್ತದೆ ಎಂಬ ಸಂಸ್ಥೆಯ ಆಶಯಕ್ಕೆ ಕಾಲೇಜು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕಾಗಿದೆ.  

“ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ  ವಂಶವೃಕ್ಷ ನಾಟಕ” ಗೊರೂರು ಅನಂತರಾಜು Read Post »

ಇತರೆ

“ಎಸ್ .ವಿ‌.ಪರಮೇಶ್ವರ ಭಟ್ಟರ ಕೆಲವು‌ ಮುಕ್ತಕಗಳು”ಒಂದು ಓದು,ಡಾ.ವೈ.ಎಂ.ಯಾಕೊಳ್ಳಿ

ಸಾಹಿತ್ಯ ಸಂಗಾತಿ ಡಾ.ವೈ.ಎಂ.ಯಾಕೊಳ್ಳಿ “ಎಸ್ .ವಿ‌.ಪರಮೇಶ್ವರ ಭಟ್ಟರ ಕೆಲವು‌ ಮುಕ್ತಕಗಳು” ಹಿರಿಯ ಕವಿ ಎಸ್ ವಿ‌.ಪರಮೇಶ್ವರ ಭಟ್ಟರು‌ ಕನ್ನಡದಲ್ಲಿ ಮುಕ್ತ ಕ ಸಾಹಿತ್ಯವನ್ನು ಬೆಳೆಸಿದವರು. ಅವರು ಆಧುನಿಕ ವಚನಕಾರರೆಂದೂ,ಅನುವಾದಕರೆಂದೂ ಕೂಡ ಹೆಸರಾದ ವರು. ಅವರ ಅನುವಾದಗಳು ತುಂಬ  ಮೌಲಿಕವಾಗಿವೆ ಸಂಸ್ಕೃತದ ,ಪ್ರಾಕೃತದ ಮಹಾಮಹಾ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಅವುಗಳಲ್ಲಿ ಕನ್ನಡ ಕಾಳಿದಾಸ ಮಹಾಸಂಪುಟ,ಭಾಸ ಕವಿ ಮಹಾಸಂಪುಟ ,ಅಮರು ಶತಕ,ಗಾಥಾ ಸಪ್ತಶತಿ,ಭತೃಹರಿ ಕಾವ್ಯ ಸಂಪುಟ, ಗೀತಗೋವಿಂದ ಮೊದಲಾದ ಮಹತ್ವದ ಕೃತಿ ಸಂಪುಟ ಗಳನ್ನು ಅವರು‌ ಕನ್ನಡ ಓದುಗರಿಗೆ‌ ನೀಡಿದ್ದಾರೆ. ಹೊಸಗನ್ನಡದ ಆದ್ಯ ವಚನಕಾರ ರಲ್ಲಿ ಒಬ್ಬರಾದ ಅವರು‌ ಎಂಟು ಆಧುನಿಕ ವಚನ ಸಂಕಲನಗಳನ್ನು‌ ಪ್ರಕಟಿಸಿದ್ದು ಅವುಗಳಲ್ಲಿ ‘ಉಪ್ಪು ಕಡಲು’,  ‘ಇಂದ್ರ ಗೋಪ’ ಮೊದಲಾದವು ಪ್ರಸಿದ್ಧವಿವೆ.  ಹಾಗೆಯೆ ಕನ್ನಡದಲ್ಲಿ ಮುಕ್ತಕಗಳನ್ನು ಬರೆದ ಆದ್ಯರಲ್ಲಿ ಒಬ್ಬರಾದ ಅವರು ಐದು ಮುಕ್ತಕ ಸಂಕಲನ ಪ್ರಕಟಿಸಿದ್ದು’ ಇಂದ್ರಚಾಪ’,’ಚಂದ್ರವೀಧಿ,’ ‘ಸುರಗಿ ಸುರಹೊನ್ನೆ’, ‘ ತುಂಬೆ ಹೂವು’  ..ಮೊದಲಾದವು ಪ್ರಸಿದ್ಧವಾಗಿವೆ. ಅವರ ಇಂದ್ರಚಾಪ ಸಂಕಲನದ ಕೆಲವು ಮುಕ್ತಕಗಳ ಓದು ಇಲ್ಲಿದೆ. ಅವರಿಗೆ ಕವಿತೆಯೇ ಇಂದ್ರಚಾಪ ವಾಗಿ ( ಮಳೆ ಮೋಡ) ವಾಗಿ ಕಂಡಿದೆ.ತಮ್ಮ ಒಂದು ಮುಕ್ತಕದಲ್ಲಿ ಮನವೇ ಬಾನಂಗಣ,ದುಗುಡವೇ ಮಳೆ ಮೋಡಕವಿಗಣ ಸೂಕ್ತಿಯೆ ದಿನಪಮೂಡಿತು ಮಳೆ ಬಿಸಿಲಿನ ಮೇಳದೊಳು ನೋಡಾಕವಿತೆಯ ಇಂದ್ರಚಾಪ ಕವಿಗೆ ಬಾನಂಗಣವನ್ನು ಸುಂರಗೊಳಿಸುವಂತೆ ಮೂಡಿದ ಕಾಮನಬಿಲ್ಲು ,ಕವಿಯ ಮನದಲ್ಲಿ ಉದಿಸಿದ ಕವಿತೆ ಎರಡೂ ಅಷ್ಟೇ ಸುಂದರವಾಗಿ ಕಂಡಿವೆ.ಇಲ್ಲ ಕವಿತೆ ಮೂಡಲು ಮನವೇ ಬಾನಂಗಣವಾದರೆ ಅವನ ಮನದ ಭಾವಗಳ  ರೂಪುಗೊಂಡು ಕವಿತೆಯಂಬ ಇಂದ್ರಚಾಪ ವಾಗಿವೆ ಎನ್ನುತ್ತಾರೆ‌ ಕವಿ. ಅವರ ಇನ್ನೊಂದು‌ ಮುಕ್ತಕ ಸಾಹಿತ್ಯ ಮತ್ತು ಮಿತ್ರರ ಗುಂಪಿನ ಮಹತ್ವ ಸಾರಿದೆ.ಕವಿಗೆ‌ ಕವಿತೆಯೆ ಸಂಜಿವಿನಿ ಶಕ್ತಿಯಾಗಿದೆ. ಅದನ್ನು ಕವಿ ಸಾಹಿತ್ಯವೊಂದೆಯೆನ್ನ ಸಂಜೀವಿನಿಅದೆ ನನ್ನ ತಾರಕಶಕ್ತಿಮಿತ್ರಸಲ್ಲಾಪವೆ ಚಿತ್ತಾಹ್ಲಾದಿನಿಅದರಿಂದಲೆಯೆ ನನ್ನ‌ಮುಕ್ತಿ ತನ್ನೊಳಿರುವ ಸಾಹಿತ್ಯ ಶಕ್ತಿಯೆ ನನ್ನ ಬಲ ಎನ್ನುವ ಕವಿ ಅಷ್ಟೇ ಮಹತಗವದ ಸ್ಥಾನವನ್ನು ಮಿತ್ರರೊಡನೆ ಆಡುವ ಸಲ್ಲಾಪಕ್ಕೂ ನೀಡುತ್ತಾರೆ.ಮಿತ್ರರೊಡನೆ ಆಡುವ ಮಾತು ವ್ಯರ್ಥ ಸಲ್ಲಾಪವಲ್ಲ ಅದು ಕವಿಯ ಮನಸಿಗೆ ಆಹ್ಲಾದ ವನ್ಬು ಕೊಡುವ ಚಿತ್ತಾಹ್ಲಾದಿನಿ,ಮಾತ್ರವಲ್ಲ ಅದರಿಂದಲೇ ಕವಿಗೆ ಮುಕ್ತಿ  ಎನ್ನುತ್ತಾರೆ. ಕವಿತೆ‌ಮಾತ್ರವಲ್ಲ ಕವಿಗೆ ಮಿತ್ರ ಗಣ ಸಲ್ಲಾಪವೂ ಮುಖ್ಯವೆನಿಸಿದೆ. ಇರುವ ಬಾಳಿನಲಿ ಆನಂದ ಹುಡುಕದಿದ್ದರೆ ಸಂಸಾರ ನಿಸ್ಸಾರವೆನಿಸುತ್ತದೆ.ಕಷ್ಟ ಸುಖ ಗಳ ನಡುವೆಯೆ ಸಂತಸವ ಹುಡುಕಿದರೆ ಸಂಸಾರವೂ ರಸಮಯವೆನಿಸುತ್ತದೆ.ಕವಿ ತನ್ನ ಕವಿತೆಯೊಡನೆ ಸಂಸಾರವನ್ನು ಮೇಳವಿಸುವದು ಹೀಗೆ. ಸಾಹಿತ್ಯವನು ಕಂಡೆ ಸಂಸಾರದೊಳು ಹೀಗೆಸಾಂಗತ್ಯವಾಗಿಸಿ ಕೊನೆಗೆಇಲ್ಲದೆ ಹೋದರೆ ಉಸಿರಾಡುವುದು ಹೇಗೆಹೊಗೆಗಟ್ಟಿದೀ ಗೂಡಿನೊಳಗೆ ಇರುವ ಬಾಳಿನಲ್ಲಿಯೆ ಸುಖ ಕಾಣಬೇಕು.ಹೇ ಇದರಲ್ಲೇನಿ ದೆ ? ಎಂದು ಅಲಕ್ಷಿಸುತ್ತಾ ಹೋದರೆ ಅದು ಹೊಗೆಗಟ್ಟಿದ ಗೂಡಾಗುತ್ತದೆ.ಅದನ್ನೆ ಬಹಳ ಹಿಂದೆ  ಮಹಾಕವಿ ಪಂಪ “ಸಾರಂ ಅನಂಗ ಜಂಗಮ‌ಲಲಿತಾಲತಾಂಗಿಯರಿಂದಮಲ್ತೇ ಸಂಸಾರಂ ” ಎಂದು ಸಂಸಾರವನ್ನು ಸಾರವಾಗಿಸುವ ದಾರಿ ಕಂಡಿದ್ದ‌ನು.ಇಲ್ಲ ಕವಿ ಪರಮೇಶ್ವರಭಟ್ಟರೂ ಕೂಡ ಅದೇ ಮಾರ್ಗವನ್ನು ಹೇಳುತ್ತಾರೆ. ಬಾಳು ಎಂದ ಮೇಲೆ ಕಷದಟಗಳು ಬರುವವೇ.ಆದರೆ ಅವು‌ ಹೇಳಿ‌ಕೇಳಿ ಬರುವದಿಲ್ಲ.ಆಕಸ್ಮಿಕವಾಗಿಯೆ ಬರುತ್ತವೆ. ಕೆಲವೊಮ್ಮೆ ಒಳ್ಳೆಯವರೇ ಇಲ್ಲಿ ತೊಂದರೆಗೀಡಾಗುತ್ತಾರೆ. ಅವರದೇನೂ ತಪ್ಪಿರುವದಿಲ್ಲ.ಆದರೂ ತೊಂದರೆಗಳು ಅವರಿಗೆ ಬರುತ್ತವೆ. ಅದನ್ನು ಸುಂದರವಾದ ರೂಪಕದಿಂದ ಕವಿ ಬಣ್ಣಿಸುತ್ತಾರೆ. ಬಾಳೆ ಹಣ್ಣನು ತಿಂದವರೆಸೆದರು ಸಿಪ್ಪೆಯ  ಬೀದಿಯ ಕೊನೆಗೆಕಾಣದೆ ಕಾಲಿಟ್ಟು ಜಾರುವನ್ಯರುಕಷ್ಟವು‌ ಬರುವುದೆ ಹೀಗೆ ಯಾರೋಬಾಳೆ ಹಣ್ಣನು ತಿಂದು ಸಿಪ್ಪೆಯನ್ನು ಬೀದಿಯಲ್ಲಿ ಎಸೆದು ಬಿಡುತ್ತಾರೆ.ಆದರೆ ಅದನ್ನು ನೋಡದ ಇನ್ನು ಯಾರೊ ಅದರ‌ ಮೇಲೆ‌ ಕಾಲಿಟ್ಟು ಜಾರಿ ಬೀಳುತ್ತಾರೆ. ಅವರದೇನು ತಪ್ಪೇ ಇರದು ಆದರೂ ಕೆಲವು ಸಲ ತೊಂದರೆ ಅವರನ್ನು ಹುಡುಕಿ ಬಂದು ಬಿಡುತ್ತವೆ.ಇದೇ ಬಾಳಿನ ವೈಚಿತ್ರ್ಯ. ಕವಿ ಎಷ್ಟೇ ಶ್ರೇಷ್ಠವಾದ ಕವಿತೆ ಬರೆಯಲಿ ಅದನ್ನು ಮೆಚ್ಚುವವರು ಎಲ್ಲ‌ಕಾಲಕ್ಕೂ ಸಿಗುವದು ಅಸಾಧ್ಯ.ಎಲ್ಲೊ‌ಕೆಲವು ಭಾಗ್ಯವಂತರಿಗೆ ಮಾತ್ರ ಅವರ ಕವಿತೆಯ ಕುರಿತು ಸರಿಯಾದ ವಿಮರ್ಶೆ,ಮೆಚ್ಚಿಕೆ ಗೌರವ ಗಳು ಸಿಗುತ್ತವೆ .ಆಧುನಿಕ‌ಕಾಲದ ಕವಿಗಳು ತಮ್ಮ ಕವಿತೆಯನ್ನು  ಕುರಿತು ತಾವೇ ಜಾಹಿರಾತು ಕೊಟ್ಟು ಇತರರಿಗೆ ಪರಿಚಯ‌ ಮಾಡಿಕೊಡುತ್ತಾರೆ.ಇಂಥ ಪರಿಚಯಅವರಿಗೆ ಗೌರವವನ್ನು‌ ತಂದುಕೊಡುತ್ತದೆ. ನನಗೆ ಯಾರ ಗೌರವ ಪ್ರಶಸ್ತಿ ಬೇಡ ಎಂದು‌ ಕವಿತೆ ಬರೆಯುತ್ತ ಕೂಡ್ರುವ ಜನ ಆಧುನಿಕ ಕಾಲಕ್ಕಂತೂ ಕಡಿಮೆ. ಎಲ್ಲರೂ ಏನಾದರೂ‌ ಪ್ರಯತ್ನ‌ ಮಾಡುವವರೆ .ಇಂಥವರನ್ನು‌ ಕಂಡು ಕವಿ ಪರಮೇಶ್ವರ ಭಟ್ಟರು ಪ್ರತಿಭೆಯೊಂದಿರಬೇಕು, ವುತ್ಪನ್ನಮತಿಅಭ್ಯಾಸ, ಗುರುಸೇವೆ ಬೇಕುಈ ಹಳೆಯ ಪಟ್ಟಿಗಿನ್ನೊಂದು ಸೇರಬೇಕುಕವಿಗೆ ಜಾಹಿರಾತು ಬೇಕು ಕವಿತೆ ಬರೆಯಲು ಏನೆನು ಬೇಕು ಎಂದು ಪ್ರಶಗನಿನಿಸ ಕಾವ್ಯ‌ಮೀಮಾಂಸಕರು ಪ್ರತಿಭೆ,ವುತ್ಪತ್ತಿ,ಗುರುಸೇವೆ ,ಅಭಾಸ ಹೀಗೆ ಆರು ಗುಣಗಳು ಬೇಕು ಎಂದು ಹೇಳಿದ್ದರು .ಆದರೆ ಆಧುನಿಕ‌ಕಾಲಕ್ಕೆ  ಇಷ್ಟೇ ಸಾಕಾಗೊಲ್ಲ. ಎಷ್ಟೇ ಪ್ರತಿಭಾವಂತ ರಿದ್ದರೂ ಜಾಹಿರಾತು ಇಲ್ಲದೆ ಕವಿ ಯ ಕಾವ್ಯ ‌ಪ್ರಸಿದ್ಧಿಗೆ ಬಾರದು ಎಂಬ ನೈರಾಸ್ಯ ಬಾವವನ್ನು ವ್ಯಕ್ತ ಮಾಡಿದ್ದಾರೆ.ಒಮ್ಮೊಮ್ಮೆ ಜಾಹಿರಾತಿನ ಬಲದಿಂದ ಅಂಥ ಶ್ರೇಷ್ಟ ಕಾವ್ಯವಲ್ಲದ್ದೂ ಕೂಡ ಮಿಂಚತೊಡಗುತ್ತದೆ. ಇಂಥದನ್ನು ಕಂಡು ನಿಜ ಕವಿಗಳು ಮರುಗಬೇಕಾಗುತ್ತದೆಯಷ್ಠೆ. ಇವು ಕೆಲವು ಅರ್ಥಪೂರ್ಣ ಮುಕ್ತಕಗಳ ಉದಾಹರ ಣೆ ಯಷ್ಟೇ.ಇಂಥ ಹಲವಾರು ಸುಂದರ ಮುಕ್ತಕಗಳ ಕಣಜವೇ ಅವರ ಸಂಕಲನಗಳಲ್ಲಿದೆ.ಓದುವ , ಸವಿಯುವ ಗುಣ ನಮ್ಮದಾಗಬೇಕಷ್ಟೇ. ಡಾ.ವೈ.ಎಂ.ಯಾಕೊಳ್ಳಿ

“ಎಸ್ .ವಿ‌.ಪರಮೇಶ್ವರ ಭಟ್ಟರ ಕೆಲವು‌ ಮುಕ್ತಕಗಳು”ಒಂದು ಓದು,ಡಾ.ವೈ.ಎಂ.ಯಾಕೊಳ್ಳಿ Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” ​ತಲ್ಲಣಗಳೆಲ್ಲ ಮೀರಿದಮೇಲೆ—ಕದ ತಟ್ಟಿದೆ ನೀನು;ದೀಪ ಹಚ್ಚುವ ತವಕವೇ ಇರಲಿಲ್ಲ ನನಗೆ,ನೀನು ಹೊತ್ತಿಸಿದ ಬೆಳಕಿಗೆಕತ್ತಲೆ ಗೋಳಾಡಿ ಕರಗಿತು. ​ಒಡೆದು ಗಾಯಗೊಂಡಅಪರಾಹ್ನದ ಕನಸಿಗೆ,ಬಂದೆರಗಿದ ತಂಗಾಳಿತಲೆ ಸವರಿದಂತಿತ್ತು;ಇಂಗಿಹೋದ ಒಣ ಹಂಗುಕಂಬಳಿಯ ಮರೆಯಲ್ಲಿಮುತ್ತೈದೆಯಂತೆಪಿಸುಗುಟ್ಟಿತು. ​ನೆನಪು ಕೊಯ್ದ ಕಂಬನಿ,ಟಪಕ್ಕನೆ ಉದುರಿತೆರೆಯ ಮರೆಯಲ್ಲಿನೆಲ ಹಿಡಿಯಿತು;ಹಳಸಲು ಪ್ರೀತಿಯಹಿಲಾಲು ಒಗೆದುಇಸ್ತ್ರಿ ಹಾಕಿ ನೀನುಲೇಪನ ಹಚ್ಚಿದರೂ—ಲವಲವಿಕೆಯೇ ಲೇವಡಿ ಮಾಡಿತು! ​ನೀನು ಬಂದದ್ದುತುಸು ತಡವಾಯ್ತೇನೋ…?ಕತ್ತಲು ಮುಸುಕಿದ ತೇವದಲಿಒಣಗಿಹೋದ ಶಬ್ದಗಳುಗದ್ಗದಿಸಿ ಬಿಕ್ಕಳಿಸಿದವು;ಬಹು ಬಿರಿಯಾದ ಎದೆಯೊಳಗೆಉತ್ತರವಿಲ್ಲದ ಪ್ರಶ್ನೆಗಳುಮತ್ತೆ ನರಳಿಸಿದವು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” Read Post »

ಇತರೆ

“ಗೃಹ ಕೃತ್ಯಗಳ ನಿರ್ವಹಣೆ(ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ವೀಣಾ ಹೇಮಂತ್ ಗೌಡ ಪಾಟೀಲ್

ಗೃಹ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಗೃಹ ಕೃತ್ಯಗಳ ನಿರ್ವಹಣೆ (ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ಇತ್ತೀಚಿಗೆ ಮುಖ ಪುಸ್ತಕದಲ್ಲಿ ಒಂದು ಜಾಹೀರಾತು ನೋಡಿದೆ. ಪುಟ್ಟ ವಯಸ್ಸಿನ ಇಬ್ಬರು ಮಕ್ಕಳು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ಅಮ್ಮನ ಮಾರ್ಗದರ್ಶನದಲ್ಲಿ ಅಡುಗೆ ತಯಾರಿಸುತ್ತಿದ್ದರು. ಇದನ್ನು ನೋಡಿದ ಅಜ್ಜಿ ಅರೆ ಮಕ್ಕಳು ಅಮ್ಮನಿಗೆ ಸಹಾಯ ಮಾಡುವಷ್ಟು ದೊಡ್ಡವರಾದರೆ! ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ಕೂಡಲೇ ಬಾಯಿಯ ಮೇಲೆ ಬೆರಳಿಟ್ಟ ಮಗಳು ಅಮ್ಮ.. ಪ್ಲೀಸ್ ಹಾಗೆಲ್ಲ ಹೇಳಬೇಡ ಮಕ್ಕಳು ಮನೆಯ ಕೆಲಸದಲ್ಲಿ ಪಾಲ್ಗೊಳ್ಳುವುದು ಅವರು ನಮಗೆ ಮಾಡುವ ಸಹಾಯವಲ್ಲ, ಬದಲಾಗಿ ಅದು ಅವರ ಜೀವನದಲ್ಲಿ ಅತ್ಯವಶ್ಯಕವಾಗಿ ಕಲಿಯಲೇಬೇಕಾದ ಒಂದು ಕೌಶಲ ಸಹಾಯ ಮಾಡುವ ಮೂಲಕ ತಾವು ಮತ್ತೊಬ್ಬರಿಗೆ ಮಹದುಪಕಾರ ಮಾಡುತ್ತಿದ್ದೇವೆ ಎಂಬ ಭಾವ ಮಕ್ಕಳಲ್ಲಿ ಮೂಡುವುದು ಬೇಡ ಎಂದು  ತಾಯಿಗೆ ಹೇಳಿದಾಗ ಆಕೆಯ ತಾಯಿ ಹೌದು ಎಂಬಂತೆ ತಲೆಯಾಡಿಸಿದರು.ಕಲಿತ ಹೆಣ್ಣು ಮಗಳೊಬ್ಬಳು ಮನೆಯವರ ಸ್ನೇಹಿತರ ಅದೆಷ್ಟೇ ಒತ್ತಾಯದ ನಡುವೆಯೂ ಕೂಡ ಒಂದೇ ಒಂದು ಅಡುಗೆಯನ್ನು ಕಲಿಯಲಿಲ್ಲ….ಅಡುಗೆ ಮಾಡುವುದನ್ನು ಹೆಣ್ಣು ಮಕ್ಕಳು ಕಡ್ಡಾಯವಾಗಿ ಕಲಿಯಲೇಬೇಕು ಎಂಬ ಸಾಮಾಜಿಕ ಗ್ರಹಿಕೆಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಆಕೆ ಹಾಗೆ ವರ್ತಿಸುತ್ತಿದ್ದಳು.ಅದೊಂದು ದಿನ ಆಕೆಯ ಪುಟ್ಟ ಸಹೋದರಿ ಅಕ್ಕನಿಗೆ ಅಕ್ಕ ನಿನಗೂ ಹಸಿವಾಗುತ್ತದಲ್ಲವೇ?’ ಆದ್ದರಿಂದ ನೀನು ಅಡುಗೆ ಮಾಡುವುದನ್ನು ಕಲಿತುಕೋ ಎಂದು ಹೇಳಿದಾಗ ಅದನ್ನು ಮೂಲಭೂತ ಅವಶ್ಯಕತೆ ಎಂದು ಸಹಜವಾಗಿ ಸ್ವೀಕರಿಸಿದ ಆ ಹೆಣ್ಣು ಮಗಳು ಅಡುಗೆ ಮಾಡುವುದನ್ನು ಕಲಿತಳು.ಮೇಲಿನ ಎರಡು ಜಾಹೀರಾತುಗಳು ನಿಜವಾಗಿಯೂ ಅಡುಗೆ ಎಂಬ ಕಲೆ ಕೇವಲ ಹೆಣ್ಣು ಮಕ್ಕಳು ಕಲಿಯಲೇಬೇಕಾದ ಕೌಶಲವಲ್ಲ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರು ತಮ್ಮ ಬದುಕನ್ನು ನಿರ್ವಹಿಸಲು ಹೊಂದಿರಲೇಬೇಕಾದ ಅಗತ್ಯ ಮೂಲಭೂತ ಕೌಶಲಗಳಲ್ಲಿ ಒಂದು ಎಂಬುದನ್ನು ನಮಗೆ ತೋರಿಸಿಕೊಡುತ್ತವೆ.ಮತ್ತೊಂದು ಕಡೆ ಇನ್ನೇನು ಕೆಲವೇ ದಿನಗಳಲ್ಲಿ ತನ್ನದೇ ವೃತ್ತಿಯಲ್ಲಿ ಇರುವ ಹೆಣ್ಣು ಮಗಳನ್ನು ವಿವಾಹವಾಗುತ್ತಿರುವ ಮಗನಿಗೆ ಅಡುಗೆ ಕೆಲಸಗಳನ್ನು ಕಲಿಸಿದ ತಾಯಿ ಇಬ್ಬರು ಒಟ್ಟಿಗೆ ಕೆಲಸಕ್ಕೆ ಹೋಗುತ್ತಾರೆ ಎಂದ ಮೇಲೆ ಮನೆಯ ಕೆಲಸಗಳನ್ನು ಕೂಡ ಒಟ್ಟಾಗಿ ನಿರ್ವಹಿಸಬೇಕು ಎಂದು ಹೇಳುವುದು ಹಾಗೂ ಅದಕ್ಕೆ ಮಗ ಅತ್ಯಂತ ಪ್ರೀತಿಯಿಂದ ಸಮ್ಮತಿಸಿ ಕಲಿಯಲು ಉತ್ಸಾಹ ತೋರುವುದು ಸ್ವಾಗತಾರ್ಹ ಬೆಳವಣಿಗೆ. ಮುಂದಿನ ದಿನಮಾನಗಳಲ್ಲಿ ಈ ಮಾದರಿಯನ್ನು  ನಾವು ಇನ್ನೂ ಹೆಚ್ಚು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಖಂಡಿತವಾಗಿಯೂ ಇದೆ.ನಿಜ ಅಲ್ಲವೇ ಸ್ನೇಹಿತರೆ ?… ಗೃಹ ಕೃತ್ಯಗಳು ಯಾರು ಯಾರಿಗೂ ಮಾಡಬಹುದಾದ ಉಪಕಾರವಲ್ಲ ಬದಲಾಗಿ ಅವು ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕಾದ ಜೀವನ ಕೌಶಲ್ಯಗಳು. ಅಡುಗೆ ಮಾಡುವುದು ಕೇವಲ ಹೆಣ್ಣು ಮಕ್ಕಳ ಕೆಲಸವಲ್ಲ. ಅಂತೆಯೇ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಎಲ್ಲಾ ಕೆಲಸಗಳು ಕೇವಲ ಮಹಿಳೆಯರವಲ್ಲ. ಅಡುಗೆ ಮಾಡುವ ಮೂಲಕ ಗಂಡಸು ಹೆಣ್ಣಾಗುವುದಿಲ್ಲ ಅಥವಾ ಅಡುಗೆ ಮಾಡುವ ಮನೆ ಕೆಲಸಗಳನ್ನು ನಿರ್ವಹಿಸುವುದು ಲಿಂಗ ಆಧಾರದ ಕೆಲಸ ಕಾರ್ಯಗಳಲ್ಲ.ಮಾತೆತ್ತಿದರೆ ಭೀಮಸೇನ, ನಳ ಮಹಾರಾಜರು ಅತ್ಯಂತ ಪಾಕ ಪ್ರವೀಣರು ಎಂದು ಬೊಬ್ಬೆ ಹೊಡೆಯುವ ಗಂಡಸರು ತಮ್ಮ ತಮ್ಮ ಮನೆಗಳಲ್ಲಿ ಒಂದು ಕಪ್ ಚಹಾ ಮಾಡಿಕೊಳ್ಳಲು ಕೂಡ ಪರದಾಡುವುದನ್ನು ನಾವು ನೋಡುತ್ತೇವೆ. ಅದು ಹೋಗಲಿ ಕುಟುಂಬದ ಇತರ ಮಹಿಳಾ ಸದಸ್ಯರೇ ಅವರಿಗೆ ಅವರು ಕುಳಿತಲ್ಲಿಯೇ ನೀರು ಚಹಾ ತಿಂಡಿ, ಊಟಗಳನ್ನು ಕಾಲಕಾಲಕ್ಕೆ ಒದಗಿಸಬೇಕು.ಒಗೆದು ಇಸ್ತ್ರಿ ಮಾಡಿದ ಬಟ್ಟೆಗಳನ್ನು ಪೂರೈಸಬೇಕು, ಓರಣವಾಗಿ ಮನೆಯನ್ನು ಇಟ್ಟುಕೊಳ್ಳಬೇಕು. ಹಬ್ಬ ಹುಣ್ಣಿಮೆಗಳಲ್ಲಿ ಮನೆ ದೇವರ ಪೂಜೆಯಿಂದ ಹಿಡಿದು ಹಬ್ಬದ ಅಡುಗೆಯನ್ನು ಕೂಡ ಹೆಣ್ಣು ಮಕ್ಕಳೇ ಮಾಡ್ತಾ ಬಂದಿದ್ದು ಅದೊಂದು ರೀತಿಯಲ್ಲಿ ಗಂಡು ಮಕ್ಕಳ ಪಾತ್ರ ಕೇವಲ ತಂದು ಹಾಕುವುದು ಎಂಬಂತಹ ಪರಿಸ್ಥಿತಿ ಅವರದ್ದಾಗಿದೆ.ನಮ್ಮ ಮನೆಯ ಗಂಡು ಮಕ್ಕಳನ್ನು ನಾವು ರಾಜಾ ಬೇಟಾ ಎಂಬಂತೆ ಬೆಳೆಸುತ್ತಿದ್ದು ದೈನಂದಿನ ಎಲ್ಲ ಜವಾಬ್ದಾರಿಗಳಿಂದ ದೂರವಿರಿಸುತ್ತೇವೆ… ಆದರೆ ಹೀಗೆ ಗಂಡು ಮಕ್ಕಳನ್ನು ಬೆಳೆಸುವ ಮೂಲಕ ನಾವು ಅವರನ್ನು ಇತರರ ಮೇಲೆ ಅವಲಂಬನೆ ಹೊಂದಿರುವಂತೆ ಮಾಡುತ್ತೇವೆ. ತಮ್ಮೆಲ್ಲ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಳ್ಳುವ ಓರ್ವ ಸಮರ್ಥ ವ್ಯಕ್ತಿಯನ್ನಾಗಿಸದೆ ಪರಾವಲಂಬಿ ಆಗಿಸುತ್ತೇವೆ.ಗೃಹ ಕೃತ್ಯಗಳನ್ನು ತಮ್ಮ ಮಕ್ಕಳ ನಡುವೆ ಹಂಚಿ ಕೊಟ್ಟು ಕೆಲಸ ಮಾಡಿಸುವ ಮೂಲಕ ಪಾಲಕರು ಕೌಟುಂಬಿಕ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸಬೇಕು. ಇದು ಅವರನ್ನು ಆತ್ಮ ನಿರ್ಭರ, ಕಾಳಜಿಪರ ಹಾಗೂ ಆತ್ಮವಿಶ್ವಾಸವುಳ್ಳ ನಾಗರಿಕರನ್ನಾಗಿಸುತ್ತದೆ. ಮಗು ಗಂಡಿರಲಿ ಹೆಣ್ಣಿರಲಿ ಇದು ನನ್ನ ಕೆಲಸ ನಾನು ಇದನ್ನು ಮಾಡುವ ಮೂಲಕ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಹೇಳಿದಾಗ ಅದು ಸಂಪೂರ್ಣ ಆತ್ಮ ನಿರ್ಭರತೆಯ ಸ್ವತಂತ್ರ ವ್ಯಕ್ತಿತ್ವವನ್ನು ಸೂಚಿಸುತ್ತದೆ…. ಅದು ನಿಜವಾದ ಸಬಲೀಕರಣ.ಹೋಂ ಮೇಕರ್ ಎಂದರೆ ಕೇವಲ ಅದು ಮಹಿಳೆಯರು ಎಂಬಂತೆ ಅನಾದಿಕಾಲದಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ.ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಎಂಬುದಕ್ಕೆ ಪುಷ್ಠಿ ನೀಡಲು ಇತ್ತೀಚೆಗೆ ಕರ್ನಾಟಕದ ಉಚ್ಚ ನ್ಯಾಯಾಲಯವು ಹೋಂ ಮೇಕರ್ ಎಂಬ ಪದವನ್ನು ಗಂಡು ಮತ್ತು ಹೆಣ್ಣು ಎರಡು ಆಗಿರಬಹುದಾದ ನ್ಯೂಟ್ರಲ್ ಅಂದರೆ ತಟಸ್ಥ  ಲಿಂಗ ಅಂದರೆ ಎಲ್ಲರಿಗೂ ಅನ್ವಯಿಸಲಾಗುತ್ತದೆ. ವ್ಯಕ್ತಿ ತಮ್ಮ ಮನೆಯ ದೈನಂದಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ದುಡಿಯುವ ಕೂಲಿಯಾಗಿದ್ದರೂ, ದೊಡ್ಡ ಆಫೀಸರ್ ಆಗಿದ್ದರೂ ಅದು ಗಂಡೇ ಇರಲಿ, ಹೆಣ್ಣೇ ಇರಲಿ ಗೃಹ ಕೃತ್ಯಗಳನ್ನು ಮಾಡಿಕೊಳ್ಳಲು ಕಲಿತಿರಬೇಕು ಹಾಗೂ ಮಾಡಲೂಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಹೇಳಿದೆ.ಪಂಪಾಲಾಲ್ ಎಂಬ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ತೀವ್ರ ಗಾಯಗೊಂಡ. ನಂತರ ಪರಿಹಾರಕ್ಕೆ ಅರ್ಜಿ ಗುಜರಾಯಿಸಿದ ಸಂಬಂಧ ನಡೆದ ವಿಚಾರಣೆಯಲ್ಲಿ ಗೃಹಕೃತ್ಯದ ವಿಷಯ ಮುನ್ನೆಲೆಗೆ ಬಂದಿತ್ತು  ಅವರಿಗೆ ವಿರೋಧವಾದ ಎದುರಾಳಿಗಳ ವಾದ ಗಮನಾರ್ಹವಾಗಿತ್ತು. ಸ್ನಾತಕೋತ್ತರ ಪದವಿಯನ್ನು ಹೊಂದಿದ್ದ ಹಾಗೂ ಈ ಹಿಂದೆ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಣ್ಣು ಮಗಳನ್ನು ಗೃಹಿಣಿ ಎಂದು ಹೇಳಲು ಬರುವುದಿಲ್ಲ ಎಂಬ ಮಾತನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದ್ದು  ಒಪ್ಪಲಿಲ್ಲತನ್ನ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯವು ಹೆಣ್ಣುಮಗಳು ಅನಕ್ಷರಸ್ಥ ಳೇ ಆಗಬೇಕಾಗಿಲ್ಲ ಆಕೆ ದಿನದ 24 ಗಂಟೆಯೂ ಮನೆಯಲ್ಲಿ ಇರುವ ಹಾಗೂ ಗೃಹ ಕೃತ್ಯಗಳನ್ನು ನಿಭಾಯಿಸುವುದನ್ನು ಗೃಹಿಣಿ ಎಂದು ಹೇಳಲಾಗುವುದಿಲ್ಲ. ಗೃಹಿಣಿಯಾಗಿರುವ ಆಕೆಗೆ 1.96 ಲಕ್ಷ ರೂ ಹಣವನ್ನು ಆರು ಶೇಕಡ ವಾರ್ಷಿಕ ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶ ಮಾಡಿತು.ಆದರೂ ಕೂಡ ಗೃಹ ಕೃತ್ಯಗಳು ಪ್ರಾಥಮಿಕವಾಗಿ ಕೇವಲ ಹೆಣ್ಣು ಮಕ್ಕಳದ್ದೇ ಎಂಬಂತೆ ನಾವೇಕೆ ಯೋಚಿಸುತ್ತೇವೆ ಎಂಬುದು ಪ್ರಶ್ನೆಯಾಗಿದೆ ಉಳಿಯುತ್ತದೆ.   ಹಾಗಾದರೆ ನಾವೇನು ಮಾಡಬೇಕು ?ಗೃಹ ಕೃತದ ಎಲ್ಲಾ ಕೆಲಸಗಳನ್ನು ಯಾವುದೇ ಬಗೆಯ ಲಿಂಗ ಭೇದವಿಲ್ಲವೇ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಕಲಿಸಬೇಕು. ದೈನಂದಿನ ಬದುಕಿನಲ್ಲಿ ಕುಟುಂಬದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಅಡುಗೆ ಮಾಡುವುದನ್ನು, ಮನೆಯ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದನ್ನು ಸ್ವಲ್ಪವಾದರೂ ಕಲಿತಿರಲೇಬೇಕು… ಅದು ಅವರ ಮೂಲಭೂತ ಅವಶ್ಯಕತೆಯೂ ಹೌದು. ಕಲಿತಿರುವವರು ಬದುಕಿನ ಎಲ್ಲ ಬಗೆಯ ಪರೀಕ್ಷೆಗಳಿಗೆ ಸಿದ್ಧರಾಗಿರುತ್ತಾರೆ.ಕಳೆದ ಒಂದೆರಡು ದಶಕಗಳಿಂದ ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿರುವ ಯುವಕ ಯುವತಿಯರು ತಮ್ಮ ದೈನಂದಿನ ಬದುಕಿಗೆ ಅತ್ಯವಶ್ಯಕವಾದ ಈ ಎಲ್ಲವನ್ನು ಕಲಿಯುತ್ತಿದ್ದಾರೆ ಆದರೆ ಒಂದೊಮ್ಮೆ ಮದುವೆಯಾದರೆ ಕೂಡಲೇ ಇದೆಲ್ಲವನ್ನು ಹೆಣ್ಣು ಮಕ್ಕಳ ಜವಾಬ್ದಾರಿಗೆ ಒಪ್ಪಿಸಿ ಗಂಡಸರು ತಾವು ನಿಶ್ಚಿಂತರಾಗುವರು…. ಇದು ಸಲ್ಲದು.ಗೃಹ ಕೃತ್ಯಗಳನ್ನು ಅರಿತಿರುವುದು ವೈಯುಕ್ತಿಕವಾಗಿ ನಮ್ಮೆಲ್ಲ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿದಷ್ಟೇ ಒಳ್ಳೆಯದು.ಗಂಡಿರಲಿ ಹೆಣ್ಣಿರಲಿ ಸಮಯ ಸಂದರ್ಭ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮಗೆ ತಾವು ಪರಾವಲಂಬಿ ಗಳಾಗದೆ ಇರುವ ನಿಟ್ಟಿನಲ್ಲಿ ಎಲ್ಲ ಬಗೆಯುವ ಗೃಹ ಕೃತ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.  ವೀಣಾ ಹೇಮಂತ್ ಗೌಡ ಪಾಟೀಲ್ 

“ಗೃಹ ಕೃತ್ಯಗಳ ನಿರ್ವಹಣೆ(ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ̲38 ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ಪಾಲಿಸಿ ವಿಭಾಗದಲ್ಲಿ ಮತ್ತಷ್ಟು ಮೈಸೂರಿನಸಿಲ್ಕ್‌ ಫ್ಯಾಕ್ಟರಿ ಹೀಗೆ ವಿವಿಧ ರೀತಿಯ ತಪ್ಪುಗಳ ಪಟ್ಟಿಯನ್ನು ಸರಿ ಮಾಡುತ್ತಾ ಹೋಗುವುದು ತುಂಬಾ ಆಸಕ್ತಿದಾಯಕವಾದ ವಿಷಯವಾಗಿತ್ತು. ನಗದು ಕಟ್ಟುವ ಪಾಲಿಸಿಗಳಿಗೆ ಆಗ ತಾನೇ ಎಲ್ಲಿ ಬೇಕಾದರೂ ಕಟ್ಟಬಹುದು ಎನ್ನುವ ವ್ಯವಸ್ಥೆ ಆರಂಭವಾಗಿತ್ತು. ಆದರೆ ಮೊದ ಮೊದಲು ಸಮಸ್ಯೆಗಳು ಎದುರಾಗಿದ್ದವು. ಬೇರೆ ಕಡೆ ಕಟ್ಟಿದ್ದು ಅಪ್ಡೇಟ್ ಆಗದೆ ಎರಡೆರಡು ಬಾರಿ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಕೆಲವೊಮ್ಮೆ ಕ್ಲೇಮ್ಸ್ ನಿಂದ ಮುರಿದುಕೊಂಡಿದ್ದರೂ ಸಹ ಅದು ಮಾನ್ಯ ಆಗದೆ ಮತ್ತೆ ಮತ್ತೆ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಈ ಎಲ್ಲವೂ ಸೆಂಟ್ರಲ್ ಆಫೀಸಿನಲ್ಲಿ ತಿಂಗಳಿಗೆ ಒಮ್ಮೆ ಸರಿಯಾಗಿ ಈ ರೀತಿ ತಪ್ಪುಗಳು ಪಟ್ಟಿ ಆಗಿ ಬರುತ್ತಿದ್ದವು. ಅವುಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ನಿಜವಾಗಿ ಎರಡು ಬಾರಿ ಕಟ್ಟಿದ್ದಾರೆ ಎಂದರೆ ಆ ವ್ಯಕ್ತಿಗಳಿಗೆ ಅದನ್ನು ವಾಪಸ್ಸು ಮಾಡುವ ಕೆಲಸ ಈ ಕ್ಯಾಶ್ ಎರರ್ ಸರಿ ಮಾಡುವ ಕೆಲಸ. ಅದು ಸಹ ಮೊದಮೊದಲು ತಿಂಗಳಿಗೆ 30 40 ಆ ರೀತಿ ಬರುತ್ತಿತ್ತು. ಈಗ ಎಲ್ಲಾ ಕಡೆಯೂ ಸರಿಯಾಗಿ ಆಗಿದೆ. ಗೂಗಲ್ ಪೇ ಮುಂತಾದವುಗಳಿಂದ ಕಟ್ಟಿದ್ದು ಸಹ ತಕ್ಷಣವೇ ಸರಿಯಾಗಿ ತೋರಿಸುತ್ತದೆ. ಅಂದರೆ ತಂತ್ರಜ್ಞಾನ ಎಷ್ಟು ಚೆನ್ನಾಗಿ ಈಗ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ಕಾಣಬಹುದು. ಮೊದಲೇ ಹೇಳಿದಂತೆ ಸಾಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿ ಪಾಲಿಸಿದಾರರಿಂದ ಪಡೆದ ಬಾಂಡುಗಳು ಅವರ ಅರ್ಜಿಗಳು ಸಂಗ್ರಹ ಮಾಡಿ ಇಡುತ್ತೇವೆ. ಲೋನ್ ಡಾಕೆಟ್ ಎಂದು ಇದಕ್ಕೆ ಹೆಸರು. ಸಾಲ ತೆಗೆದುಕೊಂಡಾಗಿನಿಂದ ಹಿಡಿದು ಸಾಲ ವಾಪಸ್ ಆಗುವವರೆಗೆ ಇವುಗಳನ್ನು ಜೋಪಾನ ಮಾಡಬೇಕಾಗುತ್ತದೆ.  ಅವರು ನಗದು ತಂದು ಕಟ್ಟಿ ಸಾಲ ತೀರಿಸಿದರೂ ಸಹ ಬಾಂಡುಗಳನ್ನು ಮತ್ತೆ ವಾಪಸ್ ಮಾಡಬೇಕಾಗುತ್ತದೆ. ಹಾಗಾಗಿ ಪಾಲಿಸಿಗಳು ಬೇರೆ ಊರಿನಿಂದ ವರ್ಗವಾಗಿ ಬಂದರು ಅಲ್ಲಿಂದ ಲೋನ್ ಡಾಕೆಟ್ ಗಳನ್ನು ತರಿಸಬೇಕಾಗುತ್ತದೆ. ನಮ್ಮಿಂದ ಹೋಗುವ ಪಾಲಿಸಿಗಳ ಫೈಲ್ ಜೊತೆಯಲ್ಲೂ ಸಾಲದ ಡಾಕೆಟ್ಗಳನ್ನು ಕಳಿಸಬೇಕಾಗುತ್ತದೆ. ಹಾಗಾಗಿ ಇವುಗಳು ಬೇಕಾದ ಸಮಯಕ್ಕೆ ಸರಿಯಾಗಿ ಸಿಗಬೇಕಾದದ್ದು ಅತ್ಯವಶ್ಯ. ಆದರೆ ಕೆಲವೊಮ್ಮೆ ಅವುಗಳು ನಮಗೆ ಬೇಕಾದಾಗ ದೊರೆಯದೆ ಹೋಗುತ್ತಿದ್ದುದು ಒಂದು ಸಮಸ್ಯೆಯಾಗಿತ್ತು. ಸಕಲೇಶಪುರದಲ್ಲಿ ಈ ರೀತಿ ಸಾಲದ ವಿಭಾಗ ಕಂಪ್ಯೂಟರೀಕರಣ ಆದಾಗ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದೆಲ್ಲವನ್ನು ಕಂಪ್ಯೂಟರ್ ಮಾಹಿತಿಗೆ ತುಂಬಿದ ವಿಷಯ ಹೇಳಿದ್ದೆ .ಆ ರೀತಿ ಕೆಲವು ಶಾಖೆಗಳಲ್ಲಿ ಸರಿಯಾಗಿ ಮಾಡದೆ ಹೋದಾಗ ನಮಗೆ ಆ ಪಾಲಿಸಿಗಳು ವರ್ಗವಾಗಿ ಬಂದಾಗ ತೊಂದರೆ ಉಂಟಾಗುತ್ತಿತ್ತು. ಇವುಗಳನ್ನೆಲ್ಲ ನಿವಾರಿಸಲು ಸರಿಯಾದ ಮಾರ್ಗವೆಂದರೆ ಇತ್ತೀಚಿನ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಲೋನ್ ಡಾಕೆಟ್ ಗಳು ಇದೆಯಾ ಎಂದು ಪರಿಶೀಲಿಸುವುದು.  ಈ ಕೆಲಸಕ್ಕೆ “ಲೋನ್ ಡಾಕೆಟ್ ಪ್ಯೂರಿಫಿಕೇಶನ್” ಎಂದು ಹೇಳುತ್ತಿದ್ದರು .ನಾನು ಸಾಲದ ವಿಭಾಗದಲ್ಲಿ ಇದ್ದಾಗ ಮಾಮೂಲಿಯ ಕೆಲಸದ ಜೊತೆ ದಿನ ಸ್ವಲ್ಪ ಸ್ವಲ್ಪ ಮಾಡಿ ಈ ರೀತಿ ಸಾಲದ ಪ್ಯೂರಿಫಿಕೇಶನ್ ಕೆಲಸ ಮಾಡಿದ್ದು ಸಹ ಒಂದು ರೀತಿಯ ಹೆಮ್ಮೆಯ ವಿಷಯವೇ. ನಮ್ಮಲ್ಲಿ ಷೆಡ್ಯೂಲಿನಲ್ಲಿ ಇಲ್ಲದೆ ಇರುವ ಡಾಕೆಟ್ಗಳನ್ನು ಬೇರೆ ಶಾಖೆಗಳಿಗೆ ಕಳಿಸುವುದು ಈಗಾಗಲೇ ಪರಿಪಕ್ವ ಅಥವಾ ಸಾವಿನ ದಾವಾ ಗಳು ಇದ್ಯರ್ಥ ಆಗಿದ್ದ ಪಾಲಿಸಗಳ ಸಾಲದ ಡಾಕೆಟ್ಳನ್ನು ನಾಶ ಮಾಡುವುದು ಇವೆಲ್ಲವುಗಳಿಂದ ಜಾಗ ಸಹ ಹೆಚ್ಚು ದೊರೆಯುವಂತೆ ಆಯಿತು. ಹೆಚ್ಚು ಹುಡುಕಾಟ ಮಾಡುವ ಕೆಲಸವು ತಪ್ಪಿತು. ಇಷ್ಟೆಲ್ಲ ಆಗುವ ವೇಳೆಗೆ ಮತ್ತೆ ಶಾಖಾಧಿಕಾರಿಗಳ ಬದಲಾವಣೆ. ಈ ಬಾರಿ ಮಹಿಳಾ ಶಾಖಾಧಿಕಾರಿಗಳು. ಅನುರಾಧ ಎನ್ನುವವರು ಶಾಖಾಧಿಕಾರಿಗಳಾಗಿ ಬಂದರು. ನಮಗೆಲ್ಲ ಅದು ಸಂತಸದ ಹಾಗೂ ಹೆಮ್ಮೆಯ ವಿಷಯವೇ ಆಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರು ದಿನಾಲು ಉಟ್ಟುಕೊಂಡು ಬರುತ್ತಿದ್ದ ಮೈಸೂರು ಸಿಲ್ಕ್ ಸೀರೆ ನಮ್ಮೆಲ್ಲರ ಗಮನ ಸೆಳೆದಿತ್ತು. ಒಂದು ರೀತಿ ನಮಗೆಲ್ಲ ಸ್ಪೂರ್ತಿಯೇ ಆದ ಅವರಿಂದ ನಾವು ಸಹ ಹೆಚ್ಚು ಮೈಸೂರ್ ಸಿಲ್ಕ್ ಸೀರೆಗಳನ್ನು ಕೊಳ್ಳಲು ಆರಂಭಿಸಿದ್ದೆವು. ಅದಕ್ಕೆ ಮತ್ತೊಂದು ಕಾರಣ ಎಂದರೆ ಮೈಸೂರು ಸಿಲ್ಕ್ ಫ್ಯಾಕ್ಟರಿ ಅವರು ತಾವೇ ಶಾಖೆಗೆ ಬಂದು ಕಂತಿನ ರೂಪದಲ್ಲಿ ಸೀರೆಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದು. ಒಂದು ಕಂತು ನಗದು ಕೊಟ್ಟರೆ ಮಿಕ್ಕ ಕಂತುಗಳನ್ನು  9 ಚೆಕ್ ಗಳಾಗಿ ಮುಂಚೆಯೇ ಕೊಟ್ಟರೆ ಆಯಿತು .ಪ್ರತಿ ತಿಂಗಳು ಬ್ಯಾಂಕ್ನಿಂದ ಅದು ಡೆಬಿಟ್ ಆಗಿ ಹೋಗುತ್ತಿತ್ತು .ಒಂದು ರೀತಿ ಒಳ್ಳೆಯ ಅನುಕೂಲವೇ ಆಗಿ ಎಲ್ಲರೂ ಆಗ ಮೈಸೂರು ಸಿಲ್ಕ್ ಖರೀದಿ ಕಡೆ ಮುಖ ತಿರುಗಿಸುವ ಹಾಗೆ ಮಾಡಿತ್ತು. ಶಾಖೆಯಲ್ಲಿ ವಿಮಾ ಉತ್ಸವ ಶಾಖೆ ೫ಕ್ಕೆ ಬಂದಮೇಲೆ ಪ್ರತಿ ಸೆಪ್ಟೆಂಬರ್ ಒಂದರಂದು ನಡೆಸುವ ಜೀವ ವಿಮಾ ನಿಗಮದ ವಾರ್ಷಿಕೋತ್ಸವ ಸಮಾರಂಭಗಳಿಗೆ ಒಂದು ಹೊಸ ಕಳೆ ಬಂದಿತ್ತು. ಇಲ್ಲಿ ಬಹಳ ವಿಜೃಂಭಣೆಯಿಂದ ಅದನ್ನು ಆಚರಿಸುವ ಪದ್ಧತಿ ಅಥವಾ ಎಲ್ಲಾ ಶಾಖೆಗಳಲ್ಲೂ ಆಗ ಆ ರೀತಿ ಆಚರಿಸುವ ಅಭ್ಯಾಸ ಆರಂಭವಾಗಿತ್ತು ಅನ್ನಿಸುತ್ತೆ.  ಬೇರೆ ಬೇರೆ ಶಾಲೆಯ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳು, ಸಿಬ್ಬಂದಿ ವರ್ಗದವರಿಗೆ ಸ್ಪರ್ಧೆಗಳು ಹಾಗೂ ಪ್ರತಿನಿಧಿಗಳನ್ನು ಒಳಗೊಂಡು ತುಂಬಾ ಸಂಭ್ರಮದಿಂದ ಸೆಪ್ಟೆಂಬರ್ ಒಂದರಿಂದ ಏಳರವರೆಗಿನ ವಿಮಾ ಸಪ್ತಾಹವನ್ನು ಸಡಗರದಿಂದ ಆಚರಿಸಲಾಗುತ್ತಿತ್ತು. ಅದಕ್ಕೆ ಎಂಟು ಹತ್ತು ದಿನ ಮುಂಚೆ ಬೇರೆ ಬೇರೆ ವಿಭಾಗಗಳಿಗೆ ಕಮಿಟಿಗಳನ್ನು ರಚಿಸಿ ಅವರಿಗೆ ಕೆಲಸಗಳನ್ನು ವಹಿಸಿಕೊಡಲಾಗುತ್ತಿತ್ತು . ಸೆಪ್ಟೆಂಬರ್ ಒಂದರ ಬೆಳಿಗ್ಗೆ ದೀಪ ಹಚ್ಚಲು ರಂಗೋಲಿ ಅಲಂಕಾರದಿಂದ ಹಿಡಿದು ಹೆಂಗಳೆಯರು ಒಂದೊಂದು ದಿನ ಒಂದೊಂದು ಬಣ್ಣದ ಥೀಮ್ ನಲ್ಲಿ ಅಲಂಕರಿಸಿಕೊಂಡು ಬಂದು ಇಡೀ ಶಾಖೆಯೇ ಬಣ್ಣ ಬಣ್ಣವಾಗಿ ತೋರುತ್ತಿತ್ತು. ಸಿಬ್ಬಂದಿಗಳಿಗೆ ಸ್ಪರ್ಧೆಗಳನ್ನು ತಮಾಷೆಯಾಗಿ ಇರುವ ಹಾಗೆ ಇಡುತ್ತಿದ್ದಿದರಿಂದ ಆ ಸ್ಪರ್ಧೆಗಳು ನಡೆಯುವಷ್ಟು ಹೊತ್ತು ಎಲ್ಲರಿಗೂ ಮನರಂಜನೆ. ಗೆಲುವು ಸೋಲು ಮುಖ್ಯವಲ್ಲ, ಎಲ್ಲರೂ ಭಾಗವಹಿಸಿ ಆ ಕ್ಷಣಗಳನ್ನು ಸ್ಮರಣೀಯ ಮಾಡಿಕೊಳ್ಳುತ್ತಿದ್ದು ವಿಶೇಷ. ಹಾಗೆಯೇ ಹಿಂದಿ ದಿನದ ಆಚರಣೆಯು ಸಹ. ಇಲ್ಲಿ ಸಿಬ್ಬಂದಿಗಳಿಗೆ ಪ್ರತ್ಯೇಕ ಸ್ಪರ್ಧೆ ಇರುತಿರಲಿಲ್ಲ ಬೇರೆ ಶಾಖೆಗಳಲ್ಲಿ ಇದ್ದಂತೆ. ಆದರೆ ಒಬ್ಬ ಮುಖ್ಯ ಅತಿಥಿಯನ್ನು ಕರೆದು ಅವರಿಂದ ಹಿಂದಿ ಬಗ್ಗೆ ಮಾತನಾಡಿಸಿ ಅವರಿಗೊಂದು ಉಡುಗೊರೆ ಕೊಟ್ಟು ಕಳಿಸುವುದು ಹಾಗೂ ಇಡೀ ಶಾಖೆಯ ಸಿಬ್ಬಂದಿಗೆ ಸಂಜೆ ಒಂದು ಹೈಟೀ. ಸಾಮಾನ್ಯ ಸೆಪ್ಟೆಂಬರ್ 2ನೆಯ ವಾರದಲ್ಲಿ ಈ ಹಿಂದಿ ದಿನಾಚರಣೆಯನ್ನು ನಡೆಸುತ್ತಿದ್ದು. ನಾನು  ಹಿಂದಿ ಕಮಿಟಿಯ ಸದಸ್ಯಳೂ ಆಗಿದ್ದರಿಂದ ಈ ದಿನಾಚರಣೆಯ ಕೆಲಸಗಳಲ್ಲಿ  ತುಂಬಾ ಖುಷಿಯಿಂದ ಪಾಲ್ಗೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಿಂದಿ ದಿನದ ಆಚರಣೆಯ ನಿರೂಪಣೆಯನ್ನು ನಾನೇ ನಿರ್ವಹಿಸುತ್ತಿದ್ದೆ.ಒಮ್ಮೆ ಅನುರಾಧ ಅವರ ನೇತೃತ್ವದಲ್ಲಿ ವಿಮಾ ಸಪ್ತಾಹದಲ್ಲಿ ಗಾಡಿ ತೆಗೆದುಕೊಂಡು ಜಾಥಾ ಹೋಗಿದ್ದ ನೆನಪು ಸಹ ಇದೆ. ವಿಮಾ ಸಪ್ತಾಹದ ಒಂದು ನೋಟ ಅಲ್ಲದೆ ವಿಭಾಗೀಯ ಮಟ್ಟದಲ್ಲಿ ಸಿಬ್ಬಂದಿ ವರ್ಗದವರಿಗಾಗಿ ಹಿಂದಿ‌ ಪ್ರಬಂಧ ಮತ್ತು ಪತ್ರಲೇಖನ ಸ್ಪರ್ಧೆಗಳು ನಡೆಸಲು ಆರಂಭಿಸಿದರು. ಮುಂಚೆಯೇ ನೋಂದಾಯಿಸಿಕೊಳ್ಳ ಬೇಕಿತ್ತು. ಸ್ಪರ್ಧೆಗೆ ಐದು ನಿಮಿಷ ಮುಂಚೆ ಇ-ಮೇಲ್ ಮುಖಾಂತರ ವಿಷಯಗಳು ಬರುತ್ತಿತ್ತು ಒಂದು ದಿನ ಪ್ರಬಂಧ ಸ್ಪರ್ಧೆ ಮತ್ತೊಂದು ದಿನ ಕಚೇರಿ ಕೆಲಸಕ್ಕೆ ಸಂಬಂಧ ಪಟ್ಟಂತೆ ನೋಟ್ ಮತ್ತು ಪತ್ರಲೇಖನಗಳು ಹಾಗೂ ವಿಮಾ ಪಾರಿಭಾಷಿಕ ಶಬ್ದಗಳ ಬಗ್ಗೆ ಕ್ವಿಜ್ ಇಷ್ಟು ಇರುತ್ತಿತ್ತು . ಸಾಮಾನ್ಯ ಪ್ರತಿ ವರ್ಷ ನಾನು ಈ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಮೊದಮೊದಲು ಎರಡರಲ್ಲೂ ಬಹುಮಾನ ಸಿಗುತ್ತಿತ್ತು. ನಂತರ ಯಾವುದಾದರೂ ಒಂದರಲ್ಲಿ ಮಾತ್ರ ಬಹುಮಾನ ಎಂದು ನಿಗದಿಪಡಿಸಿದರು. ಅಂತೂ ಭಾಗವಹಿಸಿದಾಗೆಲ್ಲ ಒಂದೊಂದು ಬಹುಮಾನ ಗೆದ್ದ ಖುಷಿ ನನ್ನದು. ಇದಕ್ಕೆ ನಗದು ಬಹುಮಾನ ಅದು ಸಹ ಒಳ್ಳೆಯ ಮೊತ್ತವೇ. ಮೊದಲ ಬಹುಮಾನ ೧೫00 ಎರಡನೆಯ ಬಹುಮಾನ ೧೨೦೦ ಹಾಗೂ ತೃತೀಯ ಬಹುಮಾನ  ರೂ.‌೧೦೦೦. ಬರುತ್ತಿದ್ದ ಹಣದಲ್ಲಿ ಶಾಖೆಗೆ ಸಿಹಿ ಕೊಡಿಸಲು ಅರ್ಧ ಮೊತ್ತ ಖರ್ಚಾಗುತ್ತಿದ್ದು ಅದು ಬೇರೆ ವಿಚಾರ. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಎರಡನೆಯ ಬಾರಿ ವಾಹನ ಸಾಲ ತೆಗೆದುಕೊಂಡು ನನ್ನ ಪತಿಗೆ ಹೀರೋ ಹೋಂಡಾ ಗಾಡಿ ಕೊಡಿಸಿದ್ದು. ಸಾಲವಿಲ್ಲದೆ ನನ್ನ ಮೊಟ್ಟ ಮೊದಲ ಹೊಸ ದ್ವಿಚಕ್ರ ವಾಹನ ಸ್ಟ್ರೀಕ್ ಕೊಂಡಿದ್ದು ಸಹ ಅದಾಗಿ ಒಂದೆರಡು ತಿಂಗಳಿಗೇ… ಈ ವೇಳೆಗೆ ನನ್ನ ತಂಗಿ ಛಾಯಾಳಿಗೆ ಆಡಳಿತ ಅಧಿಕಾರಿ ಪದೋನ್ನತಿ ಸಿಕ್ಕಿ ದೂರದ ಧಾರವಾಡ ವಿಭಾಗದ ಹಾವೇರಿ ಶಾಖೆಗೆ ಹಾಕಿದ್ದರು. ಈಗಾಗಲೇ ಒಮ್ಮೆ ನಿರಾಕರಿಸಿದರಿಂದ ಈ ಪದೋನ್ನತಿ ಮತ್ತೆ ನಿರಾಕರಿಸುವ ಹಾಗೆ ಇರಲಿಲ್ಲ .ಹಾಗಾಗಿ ಅವಳು ಅದನ್ನು ಒಪ್ಪಿಕೊಂಡು ಹೋದಳು ಮತ್ತೆ ಕೆಲವೇ ದಿನಗಳಲ್ಲಿ ಅವಳ ಪತಿ ಪ್ರಸನ್ನ ಅವರಿಗೂ ಅದೇ ಶಾಖೆಗೆ ವರ್ಗ ದೊರೆಯಿತು. ನಾವು ಒಮ್ಮೆ ಹಾವೇರಿಗೆ ಹೋಗಿ ಅಲ್ಲಿ ಸುತ್ತಮುತ್ತಲ ಜಾಗಗಳನ್ನೆಲ್ಲ ನೋಡಿಕೊಂಡು ಒಂದೆರಡು ದಿನ ಇದ್ದು ಬಂದೆವು. ಅವಳಿದ್ದ ಹಾವೇರಿ ಶಾಖೆ ತುಂಬಾ ದೊಡ್ಡದು ಅಲ್ಲಿ ಸಾಲ ತೆಗೆದುಕೊಳ್ಳಲು ಬಂದವರಿಗೆ ಟೋಕನ್ ಕೊಟ್ಟು ಪ್ರತಿದಿನವೂ ನಗದು ಸಾಲ ವಿತರಿಸಲಾಗುತ್ತಿತ್ತು ಈ ರೀತಿ ವಿಶೇಷವಾಗಿ ಟೋಕನ್ ಮೂಲಕ ಸಾಲ ಕೊಡುವ ಶಾಖೆಗಳಲ್ಲಿ ಕರ್ನಾಟಕದಲ್ಲಿ ಅದೊಂದೇ ಅಂತೆ ಆಗ ಇದ್ದದ್ದು. ಈಗಂತೂ ನಗದು ಸಾಲ ಕೊಡುವ ಪದ್ಧತಿಯೇ ಇಲ್ಲ ಎಲ್ಲವೂ ನೆಫ್ಟ್ ಮೂಲಕ ಬ್ಯಾಂಕಿಗೆ ಹಾಕುವ ವ್ಯವಸ್ಥೆ. ಮತ್ತೊಂದು ಖುಷಿ ಇರುವ ಬೆಳವಣಿಗೆ ಎಂದರೆ ನಾವು ಮನೆಗೆ ಹೋಗುವ ದಾರಿಯಲ್ಲೇ ಕಚೇರಿಯ ಪಕ್ಕದ್ದಲ್ಲ ಪಕ್ಕದ ರಸ್ತೆಯಲ್ಲಿ ಜನನಿ ಟೆಕ್ಸ್ಟೈಲ್ ಎಂದು ಮನೆಯಲ್ಲಿಯೇ ಒಂದು ಅಂಗಡಿ ಆರಂಭವಾಗಿದ್ದು ನಮಗೆಲ್ಲ ಆಹ್ವಾನಪತ್ರಿಕೆ ಕೊಟ್ಟು ಹೋದರು. ಮುಖ್ಯ ಆಕರ್ಷಣೆ ಎಂದರೆ ಕಂತಿನಲ್ಲಿ ಬಟ್ಟೆ ತೆಗೆದುಕೊಳ್ಳುವ ಅವಕಾಶ. ಹೊಸ ಸ್ಟಾಕ್ ಬಂದಾಗ ಯಾರಿಗಾದರೂ ಒಬ್ಬರಿಗೆ ಫೋನ್ ಮಾಡಿ ಹೇಳುವರು. ಸಂಜೆ ಮನೆಗೆ ಹೋಗುತ್ತಾ ನೋಡಿಕೊಂಡು ತೆಗೆದುಕೊಂಡು ಹೋಗುವುದು. ಅದರ ಕಂತು ಕಟ್ಟಲು ಹೋದಾಗ ಮತ್ತೆ ತೆಗೆದುಕೊಳ್ಳುವುದು. ಅಂತೂ ಅವರು ಆ ಮನೆ ಬಿಟ್ಟು ಬೇರೆ ಕಡೆ ಹೋಗುವ ತನಕ ನಮ್ಮ ಅಕೌಂಟ್ ಅವರಲ್ಲಿ ಇದ್ದೇ ಇತ್ತು ಅಂದರೆ ನಮ್ಮ ಬಟ್ಟೆಯ ವ್ಯಾಮೋಹ ಅರ್ಥವಾಗಬಹುದು. ಸೀರೆ ಚೂಡಿದಾರ್ ಎಲ್ಲವೂ ಅವರ ಬಳಿಯೇ ತೆಗೆದುಕೊಳ್ಳುತ್ತಿದ್ದುದು. ೧೦೦೦೦ದ ರೇಷ್ಮೆ ಸೀರೆಯಿಂದ ಹಿಡಿದು  300 ರೂಗಳ ಸಾಮಾನ್ಯ ಸೀರೆಯವರೆಗೂ ಅಲ್ಲಿ ದೊರೆಯುತ್ತಿತ್ತು ಮತ್ತು ನಾವೆಲ್ಲ ಅಲ್ಲಿಗೆ ಖಾಯಂ ಗ್ರಾಹಕರು. ಹಳೆಯ ಶಾಖೆಯ ಪಕ್ಕ ಇದ್ದ ಕನಕಗಿರಿ ಟೆಕ್ಸ್ ಟೈಲ್ಸ್ ನಲ್ಲಿ ಆ ಶಾಖೆಯಲ್ಲಿದ್ದಾಗ ತುಂಬಾ ಕೊಳ್ಳುತ್ತಿದ್ದೆವು. ಈ ಕಟ್ಟಡಕ್ಕೆ ಬಂದಮೇಲೆ ಅಲ್ಲಿ ಹೋಗಿ ಕೊಳ್ಳುವುದು ಕಡಿಮೆಯಾಯಿತು. ಆದರೆ ಈ ಹೊಸ ಅಂಗಡಿ ಆ ಕೊರತೆ ನಿವಾರಿಸಿತ್ತು. (ಮುಂದುವರೆಯುವುದು) ಸುಜಾತಾ ರವೀಶ್

Read Post »

ಪುಸ್ತಕ ಸಂಗಾತಿ

ಡಾ. ನೀ. ಗೂ. ರಮೇಶ್ ಅವರ ಪ್ರಬಂಧ ಸಂಕಲನ “ಸರಳರೇಖೆ” ಅವಲೋಕನ ಡಾ.ರೇಖಾ ಉದಯ

ಪುಸ್ತಕ ಸಂಗಾತಿ ಡಾ.ರೇಖಾ ಉದಯ ಡಾ. ನೀ. ಗೂ. ರಮೇಶ್ ಪ್ರಬಂಧ ಸಂಕಲನ “ಸರಳರೇಖೆ” ಕೃತಿ ಹೆಸರು.ಸರಳರೇಖೆ(ಪ್ರಬಂಧಗಳು)ಕೃತಿಕರ್ತೃ. -ಡಾ. ನೀ. ಗೂ. ರಮೇಶ್ಪುಸ್ತಕದ ಬೆಲೆ.-250ಪ್ರಕಾಶನದ ಹೆಸರು.- ಯದುನಂದನ ಪ್ರಕಾಶನಪುಟಗಳ ಸಂಖ್ಯೆ.210ಕೃತಿ ಬೇಕಾದಲ್ಲಿ ಸಂಪರ್ಕ.+91 82966 98801 ಸಹಜತೆಯೆಡೆಗೆ ಸಾಗುವ ಸುಂದರ ಹಾದಿ ಡಾ. ನೀ. ಗೂ. ರಮೇಶ್ ಅವರ ‘ಸರಳರೇಖೆ’ ಪ್ರಬಂಧ ಸಂಕಲನದ ಪರಿಚಯ ಮತ್ತು ಅವಲೋಕನಸರಳವಾದ ಬದುಕಿಗೆ ಮುನ್ನುಡಿಯೇ ‘ಸರಳರೇಖೆ’. ಸಹಜವಾಗಿ, ಸರಳವಾಗಿ ಬದುಕು ನಡೆಸಲು ನಮ್ಮ ಮುಂದೆ ಮಾರ್ಗಗಳು ಸಾವಿರಾರು ಇವೆ. ಆದರೆ ಆ ಸಹಜ ಹಾದಿಯನ್ನು ಬಿಟ್ಟು ಕವಲು ದಾರಿಗಳನ್ನೂ, ಕಲ್ಲು-ಮುಳ್ಳಿನ ಹಾದಿಗಳನ್ನೂ ನಾವೇ ಆಯ್ದುಕೊಂಡಾಗ ಬದುಕು ಸಂಕೀರ್ಣವಾಗುತ್ತದೆ. ಸರಳತೆಯಿಂದ ದೂರ ಸರಿದು ಆಡಂಬರ ಮತ್ತು ಕೃತಕತೆಯತ್ತ ಸಾಗುತ್ತಿರುವ ಇಂದಿನ ಬದುಕಿನ ಹಲವು ಮುಖಗಳನ್ನು ಡಾ. ನೀ. ಗೂ. ರಮೇಶ್ ಅವರ ‘ಸರಳರೇಖೆ’ ಪ್ರಬಂಧ ಸಂಕಲನ ಅತ್ಯಂತ ಆಳವಾಗಿ ಮತ್ತು ಪ್ರಬುದ್ಧವಾಗಿ ತೆರೆದಿಡುತ್ತದೆ.ಈ ಸಂದರ್ಭದಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಅರ್ಥಪೂರ್ಣ ನುಡಿಯನ್ನು ನೆನಪಿಸಿಕೊಳ್ಳಬಹುದು:“ಹಸಿವಿಗೆ ತಕ್ಕ ಅನ್ನ, ನೆರಳಿಗೊಂದು ಸೂರು ಸಾಕು / ಹೆಚ್ಚಿಗೆ ಬಯಸಿ ಹೊರಟರೆ ನೆಮ್ಮದಿ ನಾಶ.”ಎಷ್ಟು ಅರ್ಥಪೂರ್ಣವಾದ ಮಾತಿದು! ಇರುವುದನ್ನು ಬಿಟ್ಟು ಇಲ್ಲದ ಕಡೆಗೆ ಸಾಗುವ ಧಾವಂತ, ಆಡಂಬರದ ಜೀವನಕ್ಕಾಗಿ ಮನಸ್ಸು ಮತ್ತು ಆರೋಗ್ಯವನ್ನು ಹಾಳು ಮಾಡಿಕೊಂಡು ಒತ್ತಡದ ಬದುಕಿನಲ್ಲಿ ಸಿಲುಕಿರುವ ಇಂದಿನ ಮನುಷ್ಯನ ಬದುಕನ್ನು ಈ ನುಡಿ ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ. ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯವಷ್ಟೇ ಅಲ್ಲ, ಸಾಮಾಜಿಕ ಆರೋಗ್ಯವೂ ಎಷ್ಟು ಮುಖ್ಯ ಎಂಬುದನ್ನು ಲೇಖಕರು ತಮ್ಮ ಪ್ರಬಂಧಗಳ ಮೂಲಕ ವಿವರಿಸಿದ್ದಾರೆ. ಸಹಜತೆ ಮತ್ತು ಸರಳತೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಾಣಿಗಳು ಸಹಜತೆಯ ಗಡಿಯನ್ನು ದಾಟಿ ಎಂದೂ ಹೊರಬಂದಿಲ್ಲ; ಆದರೆ ಬುದ್ಧಿವಂತ ಜೀವಿ ಎನಿಸಿಕೊಂಡ ಮಾನವ ಮಾತ್ರ ಸಂಕೀರ್ಣತೆಯತ್ತ ಸಾಗಿ ತನ್ನ ಜೀವನವನ್ನು ತಾನೇ ಕ್ಲಿಷ್ಟಗೊಳಿಸಿಕೊಳ್ಳುತ್ತಿದ್ದಾನೆ.*ಸರಳವಾಗುವ ಸುಖ *ಆಧುನಿಕತೆಯ ಓಟಮನುಷ್ಯ ದಿನದಿಂದ ದಿನಕ್ಕೆ ತೃಪ್ತಿಯ ಬದುಕನ್ನು ಬಿಟ್ಟು, ದುರಾಸೆಯ ಬೆನ್ನತ್ತಿ ಸಾಗುತ್ತಿದ್ದಾನೆ. ಹಿಂದೆ ಪ್ರಕೃತಿಯ ಸನಿಹದಲ್ಲಿದ್ದಾಗ ಪ್ರೀತಿ-ನೀತಿಗಳಿಂದ ಬದುಕು ನಡೆಸುತ್ತಿದ್ದ ಅವನು, ಇಂದು ಯಾವುದಕ್ಕೂ ತೃಪ್ತನಾಗದೆ ಪ್ರತಿಯೊಂದರಲ್ಲೂ ಹೆಚ್ಚಿನ ಆಸೆ-ಆಮಿಷಗಳನ್ನು ಬೆಳೆಸಿಕೊಳ್ಳುತ್ತಿದ್ದಾನೆ. ನಡೆಯುವ ಮನುಷ್ಯ ಇಂದು ಎಷ್ಟೇ ವೇಗವಾಗಿ ಓಡುವ ರೈಲು ಮತ್ತು ವಿಮಾನಗಳಿಗಿಂತಲೂ ವೇಗವಾಗಿ ಸಾಗಬಲ್ಲ ವಾಹನಗಳ ಅನ್ವೇಷಣೆಯಲ್ಲಿದ್ದಾನೆ. ಒಂದಲ್ಲ ಒಂದು ದಿನ ಮನುಷ್ಯ ತನ್ನ ಕಾಲನ್ನೇ ಕಳೆದುಕೊಳ್ಳಬಹುದೆಂಬ ಎಚ್ಚರಿಕೆಯ ವಿಚಾರವನ್ನು ಲೇಖಕರು ತುಂಬಾ ಅರ್ಥಪೂರ್ಣವಾಗಿ ಪ್ರಸ್ತಾಪಿಸುತ್ತಾರೆ.ಅತಿಯಾದ ಆಸೆಯಿಂದಾಗಿ ಮನುಷ್ಯ ಸಂಬಂಧಗಳನ್ನು ಕಳೆದುಕೊಳ್ಳುತ್ತಾ, ಔದಾರ್ಯದ ಬದುಕಿನಿಂದ ದೂರ ಸರಿದು ಸಂಕುಚಿತ ಮನಸ್ಥಿತಿಗೆ ಜಾರುತ್ತಿದ್ದಾನೆ. ಇವೆಲ್ಲವನ್ನೂ ಬಿಟ್ಟು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುತ್ತಾ, ತೋರಿಕೆಯ ಬದುಕನ್ನು ತೊರೆದು ಸಹಜತೆಯಿಂದ ಬದುಕಿದರೆ ಮಾತ್ರ ನಿಜವಾದ ಪ್ರಶಾಂತತೆಯನ್ನು ಕಂಡುಕೊಳ್ಳಲು ಸಾಧ್ಯ ಎಂಬ ಸಂದೇಶ ಈ ಕೃತಿಯ ಪ್ರಮುಖ ಆಶಯಗಳಲ್ಲಿ ಒಂದಾಗಿದೆ.‘ಮನರಂಜನೆ ಮಿತಿಮೀರಿದ ಕಾಲ! ಎಂಬ ಲೇಖನವು ಇಂದಿನ ವಾಸ್ತವಿಕತೆಗೆ ಅತ್ಯಂತ ಸನಿಹವಾಗಿದೆ. ಇಂದಿನ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಆಳವಾಗಿ ತೊಡಗಿಸಿಕೊಂಡಿದೆ ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಮನರಂಜನೆ ತನ್ನ ಮಿತಿಯನ್ನು ಮೀರಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಇಂದು ಮೊಬೈಲ್ ಮತ್ತು ಕಂಪ್ಯೂಟರ್ ಲೋಕದಲ್ಲಿ ತನ್ನ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ.ಕಾಲದ ಮೌಲ್ಯ ಎಷ್ಟು ಅಮೂಲ್ಯವಾದುದು ಎಂಬುದನ್ನು ತಿಳಿಯದಂತಾಗಿದೆ; ತಿಳಿಸಿಹೇಳಿದರೂ ಅರ್ಥವಾಗದ ಸ್ಥಿತಿ ನಿರ್ಮಾಣವಾಗಿದೆ. ಊಟ-ನಿದ್ರೆಯನ್ನು ಲೆಕ್ಕಿಸದೆ ರೀಲ್ಸ್ ಲೋಕದಲ್ಲಿ ಮುಳುಗಿಹೋಗಿರುವ ಯುವಜನತೆಗೆ ಮೊಬೈಲ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮುಂತಾದ ಜಾಲತಾಣಗಳೇ ಜೀವನವಾಗಿಬಿಟ್ಟಿವೆ. ಮನರಂಜನೆಯ ಮಿತಿ ಮೀರಿದಾಗ ಅದರ ಪರಿಣಾಮ ವ್ಯಕ್ತಿಯ ಬದುಕು, ಆರೋಗ್ಯ, ಸಂಬಂಧಗಳು ಮತ್ತು ಚಿಂತನೆಯ ಮೇಲೂ ಬೀಳುತ್ತದೆ ಎಂಬ ಗಂಭೀರ ಆತಂಕವನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ. ಪ್ರಕೃತಿಯ ಮೊದಲ ಸಹಜ ಆಹಾರ – ನೀರುಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೂ ನೀರು ಅತಿ ಅವಶ್ಯಕ ಮತ್ತು  ಅಮೂಲ್ಯವಾದುದು. ಗಾಳಿ ಪ್ರಾಣಧಾತು ಆದರೆ, ನೀರು ಜೀವಧಾತುವಾಗಿದೆ. ಹಾಗಾಗಿ ನೀರನ್ನು ಅಮೃತವೆಂದೇ ಹೇಳಲಾಗುತ್ತದೆ. ಪ್ರತಿಯೊಂದು ಜೀವಿಗೂ ನೀರು ಅನಿವಾರ್ಯ. ಹಿಂದಿನ ಕಾಲದಲ್ಲಿ ಹರಿಯುವ ನದಿ ನೀರನ್ನೇ ನೇರವಾಗಿ ಕುಡಿಯುತ್ತಿದ್ದರೂ ಜನ ಆರೋಗ್ಯವಾಗಿದ್ದರು; ಆದರೆ ಇಂದು ‘ಶುದ್ಧ ನೀರು’ ಎಂದು ಕರೆಯಲ್ಪಡುವ ಬಾಟಲಿ ನೀರಿನಲ್ಲಿ ನಿಜಕ್ಕೂ ಎಷ್ಟು ಶುದ್ಧತೆಯಿದೆ ಎಂಬ ಗಂಭೀರ ಪ್ರಶ್ನೆಯನ್ನು ಲೇಖಕರು ಮುಂದಿಡುತ್ತಾರೆ.ದೇಹಕ್ಕೆ ನೀರಿನ ಅವಶ್ಯಕತೆ ಎಷ್ಟರಮಟ್ಟಿಗಿದೆ, ಯಾವ ರೀತಿಯಲ್ಲಿ ನೀರಿನ ಸೇವನೆ ಮಾಡಬೇಕು ಮತ್ತು ದೇಹದ ಜೈವಿಕ ಕ್ರಿಯೆಗಳಿಗೆ ನೀರು ಎಷ್ಟು ಮುಖ್ಯ ಎಂಬ ವಿಚಾರಗಳನ್ನು ಲೇಖಕರು ವಿಶಿಷ್ಟ ಹಾಗೂ ಚಿಂತನಶೀಲ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಆರೋಗ್ಯಕರ ಬದುಕಿಗೆ ಪ್ರಕೃತಿಯೊಂದಿಗೆ ಹೊಂದಿಕೊಂಡ ಸರಳ ಜೀವನಶೈಲಿಯೂ ಅಗತ್ಯ ಎಂಬುದನ್ನು ಈ ಪ್ರಬಂಧ ಮನವರಿಕೆ ಮಾಡಿಕೊಡುತ್ತದೆ.“ಬದುಕು ಬದಲಿಸುವ ವಿವೇಕಾನಂದರ ವಿಚಾರಧಾರೆ”ಭರತಭೂಮಿ ತಪೋಭೂಮಿ. ಇಲ್ಲಿನ ಮಹಾನ್ ವ್ಯಕ್ತಿಗಳ ಸಾಧನೆಗಳು ಮತ್ತು ನುಡಿಗಳನ್ನು ಕೇಳಿದಾಗ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡುತ್ತದೆ. ಇಂತಹ ಭಾರತ ದೇಶದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು ಎಂಬ ಭಾವನೆಯನ್ನು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಮೂಲಕ ಲೇಖಕರು ನೆನಪಿಸುತ್ತಾರೆ.ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸ. ಭಯದಿಂದ ಹಿಂದುಳಿದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಭಯ ನಮ್ಮ ಸಾಮರ್ಥ್ಯವನ್ನು ಕುಗ್ಗಿಸಿ, ಸಾಧನೆಯ ಹಾದಿಯಿಂದ ದೂರ ಸರಿಸುತ್ತದೆ. ಇಂದಿನ ಯುವಜನತೆಯಿಂದ ಮಾತ್ರ ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯ ಎಂಬ ಆಶಯವನ್ನು ಲೇಖಕರು ವಿವೇಕಾನಂದರ ಚಿಂತನೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಗುರಿ ತಲುಪುವ ತನಕ ನಿಲ್ಲದಿರು ಎಂಬ ವಿವೇಕಾನಂದರ ಸಂದೇಶ ಪ್ರತಿಯೊಬ್ಬರಲ್ಲಿಯೂ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಬಲ್ಲದು.“ಏನೂ ಇಲ್ಲದವರೇ ಎಲ್ಲ ಸಾಧಿಸಿದವರು” ಇರುವವನ್ನು ನೋಡುವುದಕ್ಕಿಂತ, ಏನೂ ಇಲ್ಲದವರನ್ನು ನೋಡಿ ಕಲಿಯುವುದು ಹೆಚ್ಚು” ಎಂಬ ಹಿರಿಯರ ಮಾತು ಅತ್ಯಂತ ಸತ್ಯವಾದುದು. ನಾವು ಯಾವ ವಾತಾವರಣದಲ್ಲಿರುತ್ತೇವೋ ಅದು ನಮ್ಮ ಬದುಕನ್ನು ರೂಪಿಸುತ್ತದೆ. ಸಾಧಕರನ್ನು ಆದರ್ಶವಾಗಿಟ್ಟುಕೊಂಡಾಗ ನಮ್ಮ ಬದುಕಿನಲ್ಲೂ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಸಾಧಕನ ಗೆಲುವಿನ ಹಿಂದೆ ಸಾಕಷ್ಟು ನೋವು-ಸೋಲುಗಳು ಮತ್ತು ಸವಾಲುಗಳಿರುತ್ತವೆ.ಆಪಲ್ ಕಂಪನಿಯ ಸಹ-ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ ಅವರ ಕಷ್ಟದ ದಿನಗಳು ಹಾಗೂ ಸಾಧನೆಯ ಹಾದಿಯನ್ನು ನಿದರ್ಶನಗಳ ಮೂಲಕ ಲೇಖಕರು ವಿವರಿಸಿದ್ದಾರೆ. ಯಾವಾಗಲೂ ಎಲ್ಲಾ ಸೌಕರ್ಯಗಳಿರುವವನಿಗಿಂತ, ಏನೂ ಇಲ್ಲದ ಸ್ಥಿತಿಯಲ್ಲಿಯೂ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗುವ ವ್ಯಕ್ತಿಯೇ ಸಾಧನೆಯ ಎತ್ತರವನ್ನು ತಲುಪಬಲ್ಲ ಎಂಬ ಸತ್ಯವನ್ನು ಈ ಪ್ರಬಂಧ ಮನವರಿಕೆ ಮಾಡಿಕೊಡುತ್ತದೆ. ಪರಿಸ್ಥಿತಿಯನ್ನು ನೆಪವಾಗಿಸಿಕೊಳ್ಳದೆ, ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಮುನ್ನಡೆಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶ ಇಲ್ಲಿ ಅಡಗಿದೆ.ಒಟ್ಟಾರೆಯಾಗಿ ನೋಡಿದರೆ ‘ಸರಳರೇಖೆ’ ಕೇವಲ ಪ್ರಬಂಧಗಳ ಸಂಕಲನವಲ್ಲ; ಸಮಕಾಲೀನ ಬದುಕಿನ ಹಲವು ಸಂಕೀರ್ಣ ಪ್ರಶ್ನೆಗಳ ನಡುವೆ ಸರಳತೆ ಮತ್ತು ಸಹಜತೆಯತ್ತ ಮುಖಮಾಡುವ ಚಿಂತನಯಾನವಾಗಿದೆ. ಆರೋಗ್ಯ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಬದುಕು, ಯುವಜನತೆ, ಮನರಂಜನೆಯ ಅತಿರೇಕ, ಪ್ರಕೃತಿ ಮತ್ತು ಸಾಧನೆಯ ಹಾದಿ—ಹೀಗೆ ಬದುಕಿನ ಹಲವು ಮುಖಗಳನ್ನು ಸ್ಪರ್ಶಿಸುವ ಪ್ರಬಂಧಗಳ ಮೂಲಕ ಲೇಖಕರು ಓದುಗರನ್ನು ಆತ್ಮಾವಲೋಕನಕ್ಕೆ ಹಚ್ಚುತ್ತಾರೆ. ನಾವು ಬದುಕುತ್ತಿರುವ ರೀತಿ ಸರಿಯೇ? ನಮ್ಮ ಓಟದ ಗುರಿಯೇನು? ನಮ್ಮ ಬದುಕಿನಲ್ಲಿ ಕಳೆದುಹೋಗುತ್ತಿರುವ ಸಹಜತೆ ಯಾವುದು? ಎಂಬ ಪ್ರಶ್ನೆಗಳನ್ನು ಈ ಕೃತಿ ನಮ್ಮ ಮುಂದಿಡುತ್ತದೆ.ಕೃತಿಕಾರರ ಪರಿಚಯಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನೀಲಕಂಠನಹಳ್ಳಿಯವರಾದ ಡಾ. ನೀ. ಗೂ. ರಮೇಶ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಕಾವ್ಯ, ವಿಮರ್ಶೆ, ಪ್ರಬಂಧ, ಅಂಕಣ ಬರಹ, ಸಂಶೋಧನೆ ಮತ್ತು ಸಂಪಾದನೆಯ ಮೂಲಕ ತಮ್ಮದೇ ಆದ ಸಾಹಿತ್ಯಿಕ ಗುರುತನ್ನು ಮೂಡಿಸಿದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಪಡೆದಿರುವ ಇವರು ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಹುಣಸೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕಾವ್ಯ, ವಿಮರ್ಶೆ, ಸಂಶೋಧನೆ, ಪ್ರಬಂಧ, ಜೀವನಚರಿತ್ರೆ ಮತ್ತು ಸಂಪಾದನೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 20 ಪ್ರಕಟಿತ ಕೃತಿಗಳನ್ನು ಹೊಂದಿರುವ ಡಾ. ನೀ. ಗೂ. ರಮೇಶ್ ಅವರ ಸಾಹಿತ್ಯ ಸೇವೆಗೆ ರತ್ನಾಕರವರ್ಣಿ, ಮುದ್ದಣ ಕಾವ್ಯ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಕುವೆಂಪು ಕನ್ನಡ ಕಾಯಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.ಸಾಹಿತ್ಯ ಸಂಘಟನೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ನೀ. ಗೂ. ರಮೇಶ್ ಅವರ ‘ಸರಳರೇಖೆ’ ಪ್ರಬಂಧ ಸಂಕಲನವು ಸರಳತೆ, ಸಹಜತೆ, ಆರೋಗ್ಯ, ವ್ಯಕ್ತಿತ್ವ ವಿಕಸನ ಮತ್ತು ಸಮಕಾಲೀನ ಬದುಕಿನ ಹಲವು ಸವಾಲುಗಳನ್ನು ಓದುಗರ ಮುಂದಿಡುವ ಮಹತ್ವದ ಕೃತಿಯಾಗಿದೆ. ಬದುಕನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಕೃತಕತೆಯ ನಡುವೆ, ಸಹಜವಾದ ಬದುಕಿನತ್ತ ಮರಳುವ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಈ ಕೃತಿ ಓದುಗರಿಗೆ ಚಿಂತನೆಯ ಹೊಸ ದಿಕ್ಕನ್ನು ನೀಡಬಲ್ಲದು.ಸರಳವಾಗಿ ಬದುಕುವುದು ಸುಲಭವೆನಿಸಿದರೂ, ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ದೊಡ್ಡ ಸವಾಲು. ಆ ಸವಾಲಿನ ನಡುವೆ ಸಹಜತೆಯ ಹಾದಿಯನ್ನು ಹುಡುಕುವ ಪ್ರತಿಯೊಬ್ಬ ಓದುಗನಿಗೂ ‘ಸರಳರೇಖೆ’ ಒಂದು ಚಿಂತನಶೀಲ ಸಂಗಾತಿಯಾಗಬಲ್ಲ ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಇದೇ ಸೋಮವಾರ 31/8/26ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜ್ , ಜೆ ಎಲ್‌ ಬಿ ರಸ್ತೆ ಮೈಸೂರಿನಲ್ಲಿ  ಈ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ . ಡಾ. ರೇಖಾ ಉದಯ್ ಹೊಸಪೇಟೆ

ಡಾ. ನೀ. ಗೂ. ರಮೇಶ್ ಅವರ ಪ್ರಬಂಧ ಸಂಕಲನ “ಸರಳರೇಖೆ” ಅವಲೋಕನ ಡಾ.ರೇಖಾ ಉದಯ Read Post »

You cannot copy content of this page

Scroll to Top