ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

“ನಂಬಿಕೆಯ ಬಲೆಯಲ್ಲಿ..” ಸಣ್ಣ ಕಥೆ ಪೃಥ್ವಿ ಬಸವರಾಜ್

ಕಥಾ ಸಂಗಾತಿ ಪೃಥ್ವಿ ಬಸವರಾಜ್ “ನಂಬಿಕೆಯ ಬಲೆಯಲ್ಲಿ..” ರಾತ್ರಿ ಹನ್ನೆರಡು ಗಂಟೆ ದಾಟಿತ್ತು. ಕಿಟಕಿಯ ಗಾಜಿನ ಮೇಲೆ ಮಳೆ ಹನಿಗಳು ನಿಧಾನವಾಗಿ ಜಾರುತ್ತಿದ್ದವು. ಮೇಜಿನ ಮೇಲೆ ತೆರೆದಿಟ್ಟಿದ್ದ ಹಳೆಯ ದಿನಚರಿಯ ಒಂದು ಪುಟದಲ್ಲಿ ಅವಳ ಹೆಸರನ್ನು ಮತ್ತೆ ಮತ್ತೆ ಬರೆಯುತ್ತಾ ಕುಳಿತಿದ್ದೆ. “ಅವಳು ನನ್ನವಳಾ?” ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮೂರು ವರ್ಷಗಳು ಕಳೆದಿದ್ದವು.ಮೊದಲ ಬಾರಿ ಅವಳನ್ನು ನೋಡಿದ್ದು ವಿಶ್ವವಿದ್ಯಾನಿಲಯದ ಎಂ.ಎ ತರಗತಿಯಲ್ಲಿ. ಮೊದಲ ದಿನವೇ ಅವಳು ತರಗತಿಗೆ ಬಂದಾಗ ಎಲ್ಲರ ದೃಷ್ಟಿಯೂ ಕ್ಷಣಕಾಲ ಅವಳತ್ತ ನೆಟ್ಟಿತ್ತು. ಅದು ಅವಳ ಸೌಂದರ್ಯಕ್ಕಲ್ಲ. ಅವಳ ಮುಖದಲ್ಲಿ ಕಾಣುತ್ತಿದ್ದ ಮುಗ್ಧತೆಯ ಕಾರಣಕ್ಕೆ.ಅವಳ ಕಣ್ಣುಗಳಲ್ಲಿ ಯಾವುದೇ ಲೆಕ್ಕಾಚಾರ ಇರಲಿಲ್ಲ. ಅವಳ ನಗುವಿನಲ್ಲಿ ನಾಟಕೀಯತೆ ಇರಲಿಲ್ಲ. ಯಾರೇ ಮಾತನಾಡಿದರೂ, ಪರಿಚಯವಿದ್ದರೂ ಇಲ್ಲದಿದ್ದರೂ ಒಂದೇ ರೀತಿಯ ಗೌರವದಿಂದ ಉತ್ತರಿಸುತ್ತಿದ್ದಳು. ಇಂದಿನ ಕಾಲದಲ್ಲಿ ಜನರು ಒಳ್ಳೆಯವರಂತೆ ಕಾಣಲು ಮುಖವಾಡ ಧರಿಸುವುದನ್ನು ನೋಡಿದ್ದ ನನಗೆ ಅವಳು ಒಂದು ಪ್ರಶ್ನೆಯಾಗಿ ಕಂಡಳು. “ಇವಳು ನಿಜವಾಗಿಯೂ ಇಷ್ಟೇ ಸರಳಳಾ? ಇಲ್ಲವೇ ಎಲ್ಲರ ಮುಂದೆ ಒಳ್ಳೆಯವಳೆಂದು ತೋರಿಸಲು ಅಭಿನಯಿಸುತ್ತಿದ್ದಾಳಾ?” ದಿನಗಳು ಕಳೆದವು.ನಾನು ಅವಳನ್ನು ಗಮನಿಸುತ್ತಲೇ ಇದ್ದೆ.ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿದ್ದಳು.ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದಳು.ಕಾಲೇಜು ಮುಗಿದ ತಕ್ಷಣ ಮನೆಗೆ ಹೋಗುತ್ತಿದ್ದಳು.ಹಬ್ಬ ಬಂದರೆ ಮನೆಗೆ ತೆರಳಿ ತಂದೆತಾಯಿಯ ಜೊತೆ ಕಾಲ ಕಳೆಯುತ್ತಿದ್ದಳು.ಸ್ನೇಹಿತೆಯರು ಪ್ರೀತಿ, ಪ್ರೇಮದ ಬಗ್ಗೆ ಮಾತನಾಡಿದಾಗ ಅವಳು ಕೇವಲ ನಗುತ್ತಾ ಹೇಳುತ್ತಿದ್ದಳು. “ನನ್ನ ಅಪ್ಪ ಅಮ್ಮ ನನ್ನನ್ನು ತುಂಬಾ ನಂಬಿದ್ದಾರೆ. ಅವರ ನಂಬಿಕೆಯನ್ನು ಕಳೆದುಕೊಳ್ಳುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ.” ಆ ಮಾತು ಕೇಳಿದ ದಿನ ಅವಳ ಬಗ್ಗೆ ನನ್ನ ಮನಸ್ಸಿನಲ್ಲಿ ಇದ್ದ ಎಲ್ಲಾ ಅನುಮಾನಗಳು ಕರಗಿ ಹೋದವು. ಅವಳು ತನ್ನ ಸುತ್ತ ತಾನೇ ಒಂದು ಬೇಲಿ ಕಟ್ಟಿಕೊಂಡಿದ್ದಳು.ಅದು ಬಂಧನವಲ್ಲ.ಅದು ಅವಳ ತಂದೆತಾಯಿಯ ನಂಬಿಕೆಯಿಂದ ನಿರ್ಮಾಣವಾದ ಬೇಲಿ. ಅವಳ ಪ್ರಪಂಚ ಚಿಕ್ಕದಾಗಿತ್ತು.ತಂದೆ.ತಾಯಿ.ಓದು.ಕನಸುಗಳು.ಅಷ್ಟೇ. ಆ ಪ್ರಪಂಚದಲ್ಲಿ ಪ್ರೀತಿಗೆ ಜಾಗವೇ ಇರಲಿಲ್ಲ. ಆದರೆ ಬದುಕು ಯಾವಾಗಲೂ ನಾವು ಹಾಕಿಕೊಂಡ ನಿಯಮಗಳಂತೆ ನಡೆಯುವುದಿಲ್ಲ.ನನಗೂ ಅವಳಿಗೂ ಸ್ನೇಹ ಬೆಳೆಯಿತು.ಸಣ್ಣ ಸಣ್ಣ ಮಾತುಗಳು.ತರಗತಿಯ ಟಿಪ್ಪಣಿಗಳು.ಪರೀಕ್ಷೆಯ ಚರ್ಚೆಗಳು.ಹುಟ್ಟುಹಬ್ಬದ ಶುಭಾಶಯಗಳು.ನಿಧಾನವಾಗಿ ಸ್ನೇಹ ಹೃದಯದೊಳಗೆ ಬೇರು ಬಿಟ್ಟಿತು.ಒಂದು ದಿನ ನಾನು ಧೈರ್ಯ ಮಾಡಿ ಕೇಳಿದೆ.“ನೀನು ಪ್ರೀತಿಯನ್ನು ನಂಬುತ್ತೀಯಾ?”ಅವಳು ಸ್ವಲ್ಪ ಹೊತ್ತು ಮೌನವಾಗಿದ್ದಳು.ನಂತರ ನಿಧಾನವಾಗಿ ಹೇಳಿದಳು.“ಪ್ರೀತಿ ತಪ್ಪಲ್ಲ. ಆದರೆ ನಮ್ಮನ್ನು ನಂಬಿ ಬದುಕುವವರ ಕಣ್ಣಲ್ಲಿ ನಿರಾಶೆ ಮೂಡಿಸಿದರೆ ಆ ಪ್ರೀತಿಯ ಅರ್ಥವೇನು?”ಅವಳ ಉತ್ತರ ನನ್ನನ್ನು ಮೌನಗೊಳಿಸಿತು.ಆದರೆ ಪ್ರೀತಿಯು ಮೌನವನ್ನು ಅರ್ಥಮಾಡಿಕೊಳ್ಳುವುದಿಲ್ಲ.ಅದು ಮನಸ್ಸಿನೊಳಗೆ ನಿಧಾನವಾಗಿ ಬೆಳೆಯುತ್ತಲೇ ಇರುತ್ತದೆ.ಕೊನೆಗೆ ಒಂದು ಸಂಜೆ ಕಾಲೇಜಿನ ಆವರಣದಲ್ಲಿ ಅವಳ ಮುಂದೆ ನನ್ನ ಮನಸ್ಸಿನ ಮಾತನ್ನು ಹೇಳಿಬಿಟ್ಟೆ.ಅವಳು ಏನೂ ಮಾತನಾಡಲಿಲ್ಲ. ಕೆಲವು ದಿನಗಳ ನಂತರ ಅವಳಿಂದ ಸಂದೇಶವೊಂದು ಬಂದಿತು.“ನಾನು ನಿನ್ನನ್ನು ಇಷ್ಟಪಡಲು ಪ್ರಾರಂಭಿಸಿದ್ದೇನೆ. ಆದರೆ ನನಗೆ ಭಯವಾಗುತ್ತಿದೆ.”“ಯಾಕೆ?”“ನನ್ನ ಅಪ್ಪ ಅಮ್ಮ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವ ಭಯ.” ಆ ದಿನದಿಂದ ನಮ್ಮ ಪ್ರೀತಿ ಆರಂಭವಾಯಿತು.ಆದರೆ ಅದು ಸಂಭ್ರಮದ ಪ್ರೀತಿ ಇರಲಿಲ್ಲ.ಜವಾಬ್ದಾರಿಯ ಪ್ರೀತಿ.ಮಿತಿಯೊಳಗಿನ ಪ್ರೀತಿ.ಗೌರವದ ಪ್ರೀತಿ. ಅವಳು ಪ್ರತಿದಿನ ಹೇಳುತ್ತಿದ್ದಳು.“ನಮ್ಮ ಪ್ರೀತಿ ಯಾರ ಕಣ್ಣಲ್ಲೂ ಕಣ್ಣೀರು ತರಬಾರದು.”ಒಮ್ಮೆ ನಾನು ಕೇಳಿದೆ.“ಒಂದು ವೇಳೆ ನಿನ್ನ ತಂದೆತಾಯಿಗೆ ನಮ್ಮ ಬಗ್ಗೆ ಗೊತ್ತಾದರೆ?”ಅವಳ ಕಣ್ಣುಗಳು ತೇವಗೊಂಡವು.“ನನ್ನನ್ನು ಶಿಕ್ಷಿಸಿದರೂ ಸಹಿಸುತ್ತೇನೆ. ಆದರೆ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಮುರಿಯುವುದನ್ನು ಮಾತ್ರ ಸಹಿಸಲಾರೆ.”ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ.ಒಂದೇ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.“ನನ್ನಿಂದಾಗಿ ಅವಳು ತನ್ನ ತಂದೆತಾಯಿಯ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾಳೆಯೇ?”ಕೆಲವು ಪ್ರೇಮಗಳು ಸೇರಿಸುವುದಕ್ಕಿಂತ ಹೆಚ್ಚು ಕಲಿಸುತ್ತವೆ. ನಾನು ಅವಳನ್ನು ಪ್ರೀತಿಸಿದ್ದೆ.ಆದರೆ ಅವಳ ಪ್ರೀತಿಗಿಂತ ಅವಳ ತಂದೆತಾಯಿಯ ನಂಬಿಕೆ ದೊಡ್ಡದು ಎಂಬುದು ನನಗೆ ಅರಿವಾಯಿತು.ಒಂದು ದಿನ ನಾನು ಅವಳಿಗೆ ಹೇಳಿದೆ.“ನಿನ್ನ ಜೀವನದಲ್ಲಿ ನಾನು ಪ್ರೀತಿಯಾಗಿ ಉಳಿಯದಿದ್ದರೂ ಪರವಾಗಿಲ್ಲ. ಆದರೆ ನಿನ್ನ ತಂದೆತಾಯಿಯ ಹೆಮ್ಮೆಯಾಗಿ ಉಳಿಯಬೇಕು.”ಅವಳು ಕಣ್ಣೀರು ಒರೆಸಿಕೊಂಡು ನಗಿದಳು.“ನೀನು ನನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡೆ.” ಇಂದು ಮೂರು ವರ್ಷಗಳ ನಂತರವೂ ಅವಳ ನೆನಪು ನನ್ನ ಮನಸ್ಸಿನಲ್ಲಿದೆ.ಅವಳು ನನ್ನವಳಾಗಲಿಲ್ಲ.ಆದರೆ ನನಗೆ ಒಂದು ದೊಡ್ಡ ಪಾಠವನ್ನು ಕಲಿಸಿದಳು.ನಂಬಿಕೆಯನ್ನು ಕಾಪಾಡಿಕೊಳ್ಳಲು ತ್ಯಾಗ ಮಾಡಬಲ್ಲವಳೇ ನಿಜವಾದ ಪ್ರೀತಿಯನ್ನು ಅರಿತವಳು. ಹೊರಗೆ ಮಳೆ ನಿಂತಿತ್ತು.ನಾನು ದಿನಚರಿಯ ಕೊನೆಯ ಪುಟದಲ್ಲಿ ಒಂದು ವಾಕ್ಯ ಬರೆದೆ. “ಪ್ರೀತಿ ಎರಡು ಹೃದಯಗಳನ್ನು ಒಂದಾಗಿಸಬಹುದು; ಆದರೆ ನಂಬಿಕೆ ಇಡೀ ಕುಟುಂಬವನ್ನು ಬದುಕಿಸುತ್ತದೆ. ಪ್ರೀತಿಯನ್ನು ಗೆಲ್ಲಬಹುದು, ನಂಬಿಕೆಯನ್ನು ಮಾತ್ರ ಉಳಿಸಿಕೊಳ್ಳಬೇಕು.” ಪೃಥ್ವಿ ಬಸವರಾಜ್

“ನಂಬಿಕೆಯ ಬಲೆಯಲ್ಲಿ..” ಸಣ್ಣ ಕಥೆ ಪೃಥ್ವಿ ಬಸವರಾಜ್ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್                                            ಅವಳ ಕಂಗಳ ಮಿಂಚನು ಅರಸುತಾ ಕಾಡಿನಿಂದ ಬಂದೀನಿಅವಳಿಗಾಗಿ ಸುಂದರ ಕನಸುಗಳ ಮೂಟೆ ಹೊತ್ತು ತಂದೀನಿ ಅವಕುಂಠದೊಳಗಿನ ಮೊಗವು ನಗೆ ಜೊನ್ನ ಚೆಲ್ಲುತಿದೆಮಾನಸ ‌ಸರೋವರದೊಳಗಿನ ಬಿರಿದ ನೈದಿಲೆ ಹಿಡಿದು ನಿಂತೀನಿ ಕರದೊಳಗಿನ ಕುಸುಮ ಜಾರಿದರೂ ಕಂಪು ಉಳಿದಿದೆ ದುಂಬಿ ಯಾಗಿ ಅವಳ ಒಡಲೊಳಗೆ ಪರಾಗ ತುಂಬೀನಿ ನಾನು ಅವಳ ವ್ಯಾಮೋಹದ ಬಲೆಯಲಿ ಸಿಲುಕಿರುವೆ ನೋಡುಹೊಳೆವ ಅವಳ ಕಪೋಲದ ಮೇಲೆ ಪ್ರೇಮದುಂಗುರ ಒತ್ತೀನಿ ಬೆಳದಿಂಗಳ ಇರುಳು ಅರಳಿದ ಪಾರಿಜಾತದ ಘಮಲು ಹರಡಿದೆಅನುರಾಗದ ಕಡಲಿಂದ ಪ್ರಭೆಯ ಹೃದಯದ ಮುತ್ತನು ಕದ್ದೀನಿ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಅನುವಾದ

ತೆಲುಗು ಕವಿತೆ “ಜೆನ್ ಜಿ (Gen Z)”ಕನ್ನಡಾನುವಾದ,ಕೊಡೀಹಳ್ಳಿ  ಮುರಳೀಮೋಹನ್

ಅನುವಾದ ಸಂಗಾತಿ ಜೆನ್ ಜಿ (Gen Z) ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿಕನ್ನಡ ಅನುವಾದ: ಕೊಡೀಹಳ್ಳಿ  ಮುರಳೀಮೋಹನ್ ಎಲ್ಲಾ ತಲೆಮಾರುಗಳೂಗಾಣದ ಎತ್ತುಗಳಂತೆ ಕಾಲವನ್ನು ಹೊರಲೊಲ್ಲವುಅವು ಜಿರಳೆಗಳೇ ಆಗಿರಬಹುದು;ಆದರೆಒಂದೇ ಕಡೆ ಗುಂಪಾದರೆಭೂಕಂಪದ ಕಂಪನಗಳೇ!ಒಂದು ತಲೆಮಾರು ತರ್ಕಿಸಿಒಮ್ಮತಕ್ಕೆ ಬಂದಿತೆಂದರೆ,ಹಿಂದಿನ ಕಾಲದ  ಮೌಲ್ಯಗಳೆಲ್ಲಾತಲೆಕೆಳಗಾಗುವುದು ಖಂಡಿತ!ಜನತಂತ್ರವುಅಪಾಯಕ್ಕೆ ಸಿಲುಕಿದಾಗ,ಒಂದು ಇನ್‌ಸ್ಟಾಗ್ರಾಮ್ ಸಾಕುಸರಣಿ ಬಿರುಗಾಳಿಗಳನ್ನುಎಬ್ಬಿಸಲು!ಬಲಿಷ್ಠ ಕೈಗಳು ಇನ್ನು ಮುಂದೆಉಗುರು ಕಚ್ಚುತ್ತಾ ಕೂರುತ್ತವೆಂಬಭ್ರಮೆ ಬೇಡ,ಅವು ಅಡಿಪಾಯವನ್ನೇ ಅಗೆದು ನೋಡುತ್ತವೆ.ಕೈಯಲ್ಲಿನ ಮೊಬೈಲ್‌ಗಳುಎಲ್ಲರನ್ನೂ ಒಂದಾಗಿಸುತ್ತವೆ!ಒಂದೇ ಒಂದು ಕರೆ ಸಾಕು,ಮೇಡಿಹಣ್ಣಿನಂತಿರುವಓ ಜನತಂತ್ರವೇ,ನಿನ್ನ ಗುಪ್ತ ತಂತುಗಳನ್ನು ಕಿತ್ತು,ಬೆಂಕಿಯ ಜ್ವಾಲೆಗಳನ್ನು ಹಚ್ಚಲು!ದೇಶದ ಬೆನ್ನೆಲುಬುಗಳುನೆಟ್ಟಗೆ ನಿಲ್ಲಲು ಯತ್ನಿಸುತ್ತಿರುವಾಗ,ಬದುಕಲಾರದೆ ಬದುಕು ತಳ್ಳುತ್ತಿರುವಹಿರಿಯ ತಲೆಮಾರೇ,ಎದ್ದು ಚಪ್ಪಾಳೆ ತಟ್ಟಲೇಬೇಕು!! ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

ತೆಲುಗು ಕವಿತೆ “ಜೆನ್ ಜಿ (Gen Z)”ಕನ್ನಡಾನುವಾದ,ಕೊಡೀಹಳ್ಳಿ  ಮುರಳೀಮೋಹನ್ Read Post »

ಇತರೆ, ಜೀವನ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಇರದುದರ ಬಗೆಗೆ ಧೇನಿಸುವ ಬದಲು?! ಪ್ರತಿಕ್ಷಣ ಬೇರೆಯವರಿಗೆ ನಿಮ್ಮನ್ನು ನೀವು ಹೋಲಿಸಿಕೊಂಡು ಅಯ್ಯೋ! ನಾನು ಅವನ/ಅವಳoತಿಲ್ಲ. ನನ್ನ ಬಳಿ ಅವನ/ಳ ಹಾಗೆ ಉತ್ತಮ ಜಾತಿ ಮತ ಭಾಷೆ ಇಲ್ಲ. ಅವನು ನೀಳವಾಗಿ ಸುಂದರವಾಗಿದ್ದಾನೆ ನಾನು ಕುರೂಪಿಯಾಗಿದ್ದೇನೆ. ಕುಬ್ಜವಾಗಿದ್ದೇನೆ. ಅವಳು ಬಿಳುಪು ಸುರೂಪಿ ನಾನು ಕಪ್ಪು ಕುರೂಪಿ ಎಂದು ಸದಾ ನಿಮ್ಮಲ್ಲಿರುವುದನ್ನು ಬಿಟ್ಟು ಇಲ್ಲದುದರ ಬಗೆಗೆ ಚಿಂತಿಸುತ್ತ ಕುಳಿತರೆಫಲವಿಲ್ಲ. ನಿಮ್ಮ ಹಾಗೆ ಈ ಜಗದಲಿ ಯಾರೂ ಇಲ್ಲ. ನೀವು ಒಬ್ಬ ವಿಶಿಷ್ಟ ವ್ಯಕ್ತಿ. ಎನ್ನುವುದನ್ನು ಮರೆಯದಿರಿ. ನಿಮ್ಮಲ್ಲಿರುವುದನ್ನು ನೀವು ಸದಾ ಅಭಿನಂದಿಸಿಕೊಳ್ಳಬೇಕು. ನೆರೆಮನೆಯರ ಹತ್ತಿರವಿರುವುದು  ಬಂಗಾರದ ಸೂಜಿಯೆಂದು ಅದನ್ನು  ಕಣ್ಣಲ್ಲಿ ಚುಚ್ಚಿಕೊಳ್ಳಲು ಸಾಧ್ಯವೇ? ಹಾಗೆಯೇ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೆ  ಕೆಳಗೆ ಬಿದ್ದು ಮುಳ್ಳು ಕಣ್ಣಲ್ಲಿ ಚುಚ್ಚಿಕೊಳ್ಳದಿರುವುದಕ್ಕೆ ಸಂತಸ ಪಡಬೇಕು. ಹಿಂದಿ ಚಿತ್ರ ರಂಗದಲ್ಲಿ ಬಿಗ್ ಬಿ ಎಂದು ಕರೆಸಿಕೊಂಡು ತಮ್ಮ ಇಳಿ ವಯಸ್ಸಿನಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಸಂಚಲನ ಮೂಡಿಸಿದ ಇಂಡಿಯನ್ ಐಕಾನ್ ಆಗಿರುವ ಅಮಿತಾಬ್, ನಂಬರ್ ಒನ್ ಆಗಿ ಮೆರೆಯುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಸಬರೊಂದಿಗೆ ತನ್ನನ್ನು ಹೋಲಿಸಿಕೊಂಡು ಟೀಕಿಸಿಕೊಂಡು ಹಿಂದುಳಿಯಲಿಲ್ಲ. ರಾಜಕೀಯ ತನಗೆ ಸರಿ ಹೊಂದದಿದ್ದಾಗ ಅದರ ಬಗ್ಗೆ ಧೇನಿಸುತ್ತ ಕುಳಿತುಕೊಳ್ಳದೇ,  ಕಿರುತೆರೆಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಎನ್ನುವ ಶೋ ನಡೆಸಲು ಬಂದ ಅವಕಾಶ ಕಡೆಗಣಿಸದೇ ಕನ್ನಡಿಯ ಮುಂದೆ ಮನೆ ಮಂದಿಯ ಮುಂದೆ ವಿಮರ್ಶಕರ ಮುಂದೆ ತಿಂಗಳಾನುಗಟ್ಟಲೇ ತಾಲೀಮು ನಡೆಸಿ ತನ್ನಲ್ಲಿರುವದನ್ನು ಮತ್ತಷ್ಟು ಪೋಷಿಸಿ ಬೆಳೆಸಿ ಬೆಳಕಿಗೆ ಚೆಲ್ಲಿದರು. ಆ ಯಶಸ್ಸು ಮತ್ತೆ ಅವರನ್ನು ಚಲನಚಿತ್ರ ರಂಗ ಕೈ ಬೀಸಿ ಕರೆಯುವಂತೆ ಮಾಡಿತು. ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ವಿಜಯಶಾಲಿಗಳನ್ನು ಕಂಡು ಅವರೆಷ್ಟು ಬುದ್ಧಿವಂತರು ಅವರಿಗೆ ಕೊಟ್ಟಷ್ಟು ಬುದ್ಧಿವಂತಿಕೆಯನ್ನು ದೇವರು ನಮಗೆ ಕೊಟ್ಟಿಲ್ಲ. ಎಂದು ಕರಬುವುದು ಸರಿಯಲ್ಲ. ಬುದ್ಧಿವಂತಿಕೆಯೆನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಹಣ ಕೊಟ್ಟರೆ ದೊರೆಯುವಂಥ ವಸ್ತುವೂ ಅಲ್ಲ! ಛಲದಿಂದ ಕೂಡಿದ ಪ್ರಯತ್ನವುಳ್ಳವರು ಅದನ್ನು ಪಡೆಯಬಲ್ಲರು. ಸಾಧಕರನ್ನು ನೋಡಿ ಅವರೆಷ್ಟು  ಅದೃಷ್ಟವಂತರು ಎನ್ನುವುದು ಸುಲಭ. ಆದರೆ ಅವರು ಹಗಲು ರಾತ್ರಿ ಕಷ್ಟ ಪಟ್ಟು ಶ್ರಮ ವಹಿಸಿ ಅದೃಷ್ಟ ಗಳಿಸಿದರು ಎಂಬುದನ್ನು ತಿಳಿಯಬೇಕು. ಪ್ರಖ್ಯಾತ ಕ್ರಿಡಾಪಟುವೊಬ್ಬ ಹೇಳುತ್ತಾನೆ. ನಾನು ಎಷ್ಟು ಹೆಚ್ಚು ಪ್ರಾö್ಯಕ್ಟೀಸ್ ಮಾಡುತ್ತೇನೋ ಅಷ್ಟೇ ಹೆಚ್ಚು ನನಗೆ ಅದೃಷ್ಟ ಉಂಟಾಗುತ್ತದೆ ಎಂದು. ಹೀಗೆ ಮತ್ತೊಬ್ಬರಲ್ಲಿಯ ಶಕ್ತಿಗಳನ್ನು ನೋಡಿ ನಮ್ಮಲ್ಲಿಲ್ಲ ಎಂದು ಕೊರಗುತ್ತ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಬಹು ಪಾಲಿನ ಜನರು ತಮ್ಮಲ್ಲಿನ ಶಕ್ತಿಗಳನ್ನು ಗುರುತಿಸುವುದಿಲ್ಲ. ಎದುರು ವ್ಯಕ್ತಿಗಳಲ್ಲಿ ಇಲ್ಲದ ಶಕ್ತಿಗಳನ್ನು ಇರುವುದಾಗಿ ಭ್ರಮಿಸುತ್ತಾರೆ. ಪ್ರತಿ ವ್ಯಕ್ತಿಯಲ್ಲಿ ನಿಗೂಢ ಶಕ್ತಿಗಳು ಇರುತ್ತವೆ. ಅವುಗಳನ್ನು ಗುರುತಿಸಿ ಹೊರತೆಗೆದು ದಿನನಿತ್ಯ ಸಾಣೆ ಹಿಡಿಯಬೇಕು. ಮತ್ತೊಬ್ಬರ ಒತ್ತಾಯಕ್ಕೆ ಅಥವಾ ಯಾರೋ ಏನೋ ಮಾಡುತ್ತಿದ್ದಾರೆಂದು ಅದರಲ್ಲಿ ನೀವು ತೊಡಗಿಕೊಳ್ಳಲು ಅಶಕ್ತರೆಂದು ಕೊರಗಿದಿರಿ. ನಿಮ್ಮ ಆಸಕ್ತಿ ಅಭಿರುಚಿಗಳನ್ನು ಅರಿತು ಮುನ್ನಡೆಯಿರಿ.  ನಿಮಗೆ ತಿಳಿದ ರಂಗದಲ್ಲಿ ನಿಷ್ಣಾತರಾಗಿ ಅದ್ಭುತಗಳನ್ನು ಸೃಷ್ಟಿಸುವ ಅತ್ಯುದ್ಭುತ ಶಕ್ತಿ ನಿಮ್ಮಲ್ಲಿ ಹುದುಗಿದೆ. ಎಂಬುದನ್ನು ನೆನಪಿನಲ್ಲಿಟ್ಟು ಮುನ್ನುಗ್ಗಿ. ನಿಮ್ಮಲ್ಲಿರುವ ದೌರ್ಬಲ್ಯಗಳನ್ನು ಶಕ್ತಿಯಾಗಿ ಪರಿವರ್ತಿಸಿ. ಬಹಳಷ್ಟು ಜನರು ತಮ್ಮಲ್ಲಿನ ದೌರ್ಬಲ್ಯಗಳನ್ನು ಮೇಲಿಂದ ಮೇಲೆ ಸಹಜವಾಗಿ ಹೇಳಿಕೊಳ್ಳುತಿರುತ್ತಾರೆ. ಆದರೆ ಅದರಲ್ಲಿ ಬಹುಪಾಲು ಊಹಿಸಿಕೊಂಡಿರುವುದೇ. ಇಲ್ಲಿ ದೌರ್ಬಲ್ಯಗಳೆಂದರೆ ಕೀಳರಿಮೆ, ಶೀಘ್ರ ನಿರ್ಧಾರ ತೆಗೆದುಕೊಳ್ಳದಿರುವುದು ವಿಫಲತೆಯ ಬಗ್ಗೆ ಆತಂಕ ಗಾಬರಿ ದಾಕ್ಷಿಣ್ಯಗಳೇ ಆಗಿವೆ. ಸಿ ಎನ್ ಎನ್ ಟೆಲಿವಿಸನ್ ಮುಖ್ಯಸ್ಥ  ಟೆಡ್ ಟರ್ನರ್ ಆತ್ಮಹತ್ಯೆ ಮಾಡಿಕೊಂಡಾಗ ಜೂನಿಯರ್ ಟರ್ನರ್ ಆತ್ಮವಿಶ್ವಾಸದಿಂದ ಉನ್ನತ ಸ್ಥಾನಕ್ಕೇರಿ,೨೪ ಗಂಟೆಗಳ ವಾರ್ತೆಗಳನ್ನು ಪ್ರಸಾರ ಮಾಡುತ್ತೇನೆ ಎಂದು ಅದನ್ನು ಸಾಧಿಸಿ ತೋರಿಸಿದರು. ಒಂದು ಸಭೆಯಲ್ಲಿ ಟರ್ನರ್ ಮಾತನಾಡುತ್ತ ಬಡಕುಟುಂಬದಲ್ಲಿ ಹುಟ್ಟುವುದು ನಿರಂತರ ಸಮಸ್ಯೆಗಳನ್ನು ಎದುರಿಸುವುದು ಎದುರೇಟುಗಳು ಬೀಳುವುದು ನನ್ನ ಅದೃಷ್ಟ. ನನ್ನ ತಂದೆ ಉಳ್ಳವನಾಗಿದ್ದು. ನನ್ನನ್ನು ಚೆನ್ನಾಗಿ ಓದಿಸಿದ್ದರೆ ನಾನು ಇಂದು ಈ ಸ್ಥಿತಿಗೆ ಖಂಡಿತ ಬರುತ್ತಿರಲಿಲ್ಲ. ಎಂದಿದ್ದ. ಟರ್ನರ್ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುತ್ತಿರುವುದರ ನನ್ನ ಉದ್ದೇಶವೆಲ್ಲ- ನಿಮ್ಮ ದೌರ್ಬಲ್ಯಗಳನ್ನು ತಿಳಿದು ನೀವೇ ಸ್ವಯಂ ನಿರ್ದಾರ ತೆಗೆದುಕೊಳ್ಳಿ. ಇದು ಸ್ವಯಂ ಪ್ರೇರಣೆಯಿಂದ ಮಾತ್ರ ಸಾಧ್ಯ.  ಮುನ್ನಡೆಯ ಚಿನ್ಹೆಗಳಿಗಾಗಿ ಗಮನಿಸಿ. ಅವು ಎಷ್ಟೇ ಚಿಕ್ಕದಾದರೂ ಸರಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಯೋಚಿಸುತ್ತಾರೆ  ಎಂಬ ಚಿಂತೆಯೇ ಕೀಳರಿಮೆ. ಆಶ್ಚರ್ಯವೆಂದರೆ ಇಂಥ ಆಲೋಚನೆಗಳಿಗೆ ಬೇರೆಯವರ ಬಳಿ ಸಮಯವೇ ಇರುವುದಿಲ್ಲ. ಮನುಷ್ಯ ದುರ್ಬಲ ಆಲೋಚನೆಗಳನ್ನು ಪರಿತ್ಯಜಿಸಿದರೆ ಆತನ ದೃಢವಾದ ನಿಶ್ಚಯಗಳಿಗೆ ಸಹಾಯಕವಾಗಲು ಎಲ್ಲ ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಜಾತಿ ಮತ ಬಣ್ಣ ಭಾಷೆ ವಿತಂಡವಾದಗಳ ಹುಚ್ಚನ್ನು ಬೆಂಬಲಿಸುವವರೊoದಿಗೆ ನಿಮಗೆ ಸಂಬoಧಿಸಿದ್ದನ್ನಷ್ಟೇ ಕೇಳಿ ಉಳಿದವುಗಳನ್ನೆಲ್ಲ ಹೊರ ತೂರಿಬಿಡಿ. ಎಲ್ಲರೊಂದಿಗೆ ನಗು ನಗುತ್ತ ಸ್ನೇಹ ಮಾಡಿ.ಅಂತರoಗದ ಮಾತನ್ನು ಕೇಳುತ್ತಿರಿ ಮಾಡಬಾರದ ಕೆಲಸಗಳನ್ನು ಮಾಡಲು ಹೋದಾಗ ನಿಮ್ಮ ಅಂತರoಗ ಬೇಡವೆಂದು ಎಚ್ಚರಿಸುತ್ತದೆ ಅದನ್ನು ಪರಿಗಣಿಸಿ ಮುಂದುವರೆಯಿರಿ. ನಿಮ್ಮಲ್ಲಿರುವ ಬಲಹೀನತೆಗಳನ್ನು ನಿಯಂತ್ರಿಸುವುದಕ್ಕೆ ನೀವು ಪ್ರಾಮಾಣಿಕವಾಗಿ  ಪ್ರಯತ್ನಿಸಿ. ಸ್ವಯಂ ಗೌರವ   ಬೇಕನ್ ಹೇಳುವ ಪ್ರಕಾರ ಆತ್ಮಸಮ್ಮಾನವು ದುರ್ಗಣಗಳನ್ನು ವಶದೊಳಗಿಟ್ಟುಕೊಳ್ಳುವ ಮೊದಲನೆಯ ಕಡಿವಾಣವಾಗಿದೆ. ಮರ್ಯಾದೆ ಇಲ್ಲದ ಮನುಷ್ಯನು ರೆಕ್ಕೆಗಳಿಲ್ಲದ ಹಕ್ಕಿಯಂತೆಯೂ ಒಳ್ಳೆಯ ಬಣ್ಣವಾಗಲಿ  ಸುಗಂಧವಾಗಲಿ ಇಲ್ಲದ ಪುಷ್ಪದಂತೆಯೂ ಆಗುವದುದರಿಂದ ಜನಗಳ ನಡುವೆ ಸರಿಯಾಗಿ ಬಾಳಲಾರನು. ಎಂಬುದು ಜಿ ಕೃಷ್ಣಮೂರ್ತಿಯವರ ಮಾತು. ಬುದ್ಧಿವಂತರೆನಿಸಿಕೊoಡವರೂ ಖುದ್ದಾಗಿ ಏನನ್ನಾದರೂ ಕೈಗೆತ್ತಿಕೊಳ್ಳಬೇಕೆಂದರೆ ಹೆದುರುತ್ತಾರೆ. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಭಯಗೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ಬೆಳೆದು ಬಂದ ಪರಿಸರವಾಗಿರಬಹುದು. ಆದರೆ ಈಗ ಅದು ನಿಷ್ಪಯೋಜಕ. ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಲಲು ನಿಮ್ಮನ್ನು ನೀವು ಸ್ವೀಕರಿಸಿ. ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ. ನಿಮ್ಮ ಭಾವನೆಗಳಲ್ಲಿ ನಂಬಿಕೆಯಿಟ್ಟು ಗೌರವಿಸಿ. ದೌರ್ಬಲ್ಯಗಳನ್ನು ಇತರರೊಂದಿಗೆ ಹೋಲಿಸಬೇಡಿ. ನಿಮಗಿಂತ ಮೇಲೇರಿದವರನ್ನು ಕಂಡು ಅಸೂಯೆ ಪಡಬೇಡಿ. ಅವರಿಂದ ಸ್ಪೂರ್ತಿ ಪಡೆಯುವ ಗುಣ ಬೆಳೆಸಿಕೊಳ್ಳಿ. ಸ್ವ ಗೌರವವು ಯಶಸ್ಸನ್ನು ತಂದು ಕೊಡದಿರಬಹುದು ಆದರೆ ಸೋಲಿನ ಸನ್ನಿವೇಶವನ್ನು ಧೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಖಂಡಿತವಾಗಿಯೂ ತಂದು ಕೊಡಬಲ್ಲುದು. ಪ್ರತಿಯೊಂದನ್ನು ಮಾಡಲು ಶಕ್ತಿಯಿದ್ದರೂ ಪರಾವಲಂಬಿಗಳಾಗಬೇಡಿ. ಕಾರಂತರು ಹೇಳಿದಂತೆ ವಿಶ್ವಾಸವಿದ್ದರೆ ಪ್ರೀತಿ, ಪ್ರೀತಿಯಿದ್ದರೆ ಗೌರವ. ಪ್ರಾರ್ಥಿಸಿ ಪ್ರಾರ್ಥನೆಯಲ್ಲಿನ ಅತ್ಯದ್ಭುತ ಶಕ್ತಿ ಅನುಭವಿಸಿದವನಿಗೇ ಗೊತ್ತು ಅಂತೆಯೇ  ಪ್ರಾರ್ಥನೆಯ ಶಕ್ತಿ ಅರಿತ ಹಿರಿಯರು. ಪ್ರಾರ್ಥನೆಯಲ್ಲಿ ಅಗಾಧವಾದ ನಂಬಿಕೆಯಿಟ್ಟ ಗಾಂಧೀಜಿಯವರೇ ಹೇಳಿದಂತೆ ಪ್ರಾರ್ಥನೆ ಬರೀ ನಾಲಿಗೆ ನುಡಿಯಲ್ಲ ಅಂತಃಕರಣದ ಮಹಾರೂಪ. ಪ್ರಾರ್ಥಿಸಿ ನಿಮ್ಮ ಕೀಳರಿಮೆಯ ದಾಕ್ಷಿಣ್ಯದ ವೈಫಲ್ಯತೆಯ ಮನೋಕ್ಲೇಷವನ್ನು ಮಾಯವಾಗಿಸಿ.ಮೆರುಗಿನಿಂದ ಕೂಡಿದ ಅಪ್ಪಟ ಬಂಗಾರದ ಆಭರಣವನ್ನು  ಕೂಡ ಉಪಯೋಗಿಸದೇ ಹೋದರೆ ಅದರ  ಹೊಳಪು ಕಡಿಮೆಯಾಗುತ್ತದೆ.ಅಗತ್ಯವೆನಿಸಿದಾಗ ಮೆರುಗು ಹಾಕಿಸಬೇಕಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ಬಂಗಾರದ ಮೆರುಗಿನಂಥ ಶಕ್ತಿಗಳನ್ನು ನಾವು ಗುರುತಿಸಿ ಉಪಯೋಗಿಸದೇ ಹೋದರೆ ಬೆಲೆ  ಕಳೆದುಕೊಂಡ ನಾಣ್ಯದಂತಾಗುತ್ತೇವೆ. ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯಗಳ ಬಗ್ಗೆ ಹಕ್ಕಿದೆ. ಆದರೆ ಯಾರಿಗೂ ತನ್ನ ಶಕ್ತಿಗಳ ಬಗೆಗೆ ತಪ್ಪಾಗಿರಲು ಹಕ್ಕಿಲ್ಲ. ಹೀಗಾಗಿ ಇರದುದರ ಬಗೆಗೆ ಧೇನಿಸುವ ಬದಲು ಇರುವುದನು ಪೋಷಿಸಿ ಬೆಳೆಸಿ.ಟಾಗೋರ್ ಹೇಳಿದಂತೆ ಒಮ್ಮೆ ನಿರಾಶೆಯಾದರೆ ಜೀವನ ಸೌಖ್ಯಕ್ಕೆ ತಿಲಾಂಜಲಿ ಕೊಡಬೇಡಿ. ಮೇಣದ ತಲೆಯವರು ಬಿಸಿಲಲ್ಲಿ ಅಲೆಯಬಾರದು ಎಂಬ ಆಂಗ್ಲ ಗಾದೆಯoತಾಗದೇ ಉತ್ತಮವಾದುದನ್ನು ನಿರೀಕ್ಷಿಸಿ, ನಿಮ್ಮ ಪರಿಶ್ರಮದ ಮುಖಾಂತರ ಭಾವನೆಗೆ ತಕ್ಕಂತೆ ಫಲ ಪಡೆಯಿರಿ. ಜಯಶ್ರೀ.ಜೆ. ಅಬ್ಬಿಗೇರಿ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ Read Post »

ಆರೋಗ್ಯ, ಇತರೆ

“ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ ಡಾ.ಸೌಮ್ಯ ಕೆ.ವಿ.ಅವರ ಕಿರು ಬರಹ

ವೈದ್ಯ ಸಂಗಾತಿ ಡಾ.ಸೌಮ್ಯ ಕೆ.ವಿ. “ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ  ಪ್ರತಿ ವರ್ಷ ಜುಲೈ 1 ಬಂತೆಂದರೆ ಸಾಕು, ಮೊಬೈಲ್‌ನಲ್ಲಿ ‘ಹ್ಯಾಪಿ ಡಾಕ್ಟರ್ಸ್ ಡೇ’ ಎಂಬ ಶುಭಾಶಯಗಳ ಮಹಾಪೂರವೇ ಹರಿದುಬರುತ್ತದೆ. ಅನೇಕ ವರ್ಷಗಳ ಹಿಂದೆ ಇದೇ ದಿನ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ..        ಪಿಯುಸಿ ಮುಗಿದಾಗ ನನ್ನೆದುರು ಎರಡು  ದಾರಿಗಳಿದ್ದವು—ಒಂದು ಇಂಜಿನಿಯರಿಂಗ್, ಮತ್ತೊಂದು ವೈದ್ಯಕೀಯ. ಏನೋ ಒಂದು ಸಾಧನೆ ಮಾಡಬೇಕು, ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಅದಮ್ಯ ಉತ್ಸಾಹದಿಂದ ನಾನು ಆರಿಸಿಕೊಂಡಿದ್ದು ಬಿಳಿ ಕೋಟಿನ ವೈದ್ಯಕೀಯ ವೃತ್ತಿಯನ್ನು. ಆದರೆ ವಾಸ್ತವದ ದಿನಗಳು ಆರಂಭವಾದಾಗ ಹೋಲಿಕೆಯೆಂಬ ಭೂತ ಕಾಡತೊಡಗಿತು. ನನ್ನ ಜೊತೆಯಲ್ಲೇ ಇಂಜಿನಿಯರಿಂಗ್ ಆರಿಸಿಕೊಂಡ ಗೆಳೆಯರೆಲ್ಲಾ ನಾಲ್ಕೇ ವರ್ಷಕ್ಕೆ ಓದು ಮುಗಿಸಿ, ಕೈತುಂಬಾ ಸಂಬಳ ಗಳಿಸುತ್ತಾ, ಕಾರು-ಬಂಗಲೆ ಎಂದು ಸೆಟಲ್ ಆಗಿಬಿಟ್ಟಿದ್ದರು. ಇತ್ತ ನಾನೋ ಐದೂವರೆ ವರ್ಷದ ಎಂಬಿಬಿಎಸ್, ಆಮೇಲೆ ಪೋಸ್ಟ್ ಗ್ರಾಜುಯೇಷನ್, ಹಗಲು-ರಾತ್ರಿ ಎನ್ನದೆ ಡ್ಯೂಟಿ, ಎಕ್ಸಾಮ್ಸ್… ಹೀಗೆ ಜೀವನದ ಅಮೂಲ್ಯ ದಿನಗಳನ್ನು ಪುಸ್ತಕಗಳ ಮಧ್ಯೆಯೇ ಕಳೆದುಬಿಟ್ಟಿದ್ದೆ. ಗೆಳೆಯರು ಗಳಿಕೆಯನ್ನು ಎಣಿಸುತ್ತಿದ್ದರೆ, ನಾನು ಇನ್ನೂ ಕರಿಯರ್ ರೂಪಿಸಿಕೊಳ್ಳುವ ಹೋರಾಟದಲ್ಲಿದ್ದೆ. ಮನಸ್ಸಿನಲ್ಲಿ ಅರಿವಿಲ್ಲದಂತೆಯೇ ಮೂಡಿಬಿಡುತ್ತಿತ್ತು—”ಅಯ್ಯೋ… ನಾನೇಕೆ ವೈದ್ಯಳಾದೆ?!”          ಒಮ್ಮೆ ವೈದ್ಯರ ದಿನದ ಪ್ರಯುಕ್ತ ನನ್ನ ಇಂಜಿನಿಯರಿಂಗ್ ಗೆಳತಿ ಟ್ರೀಟ್ ಕೊಡಿಸೆಂದು ಒತ್ತಾಯ ಮಾಡಿದಳು. ಅವಳಂತೆ ಐಷಾರಾಮಿ ಹೋಟೆಲ್ ನಲ್ಲಿ ಟ್ರೀಟ್ ಕೊಡುವಷ್ಟು ನನ್ನ ಪರ್ಸ್ ಭಾರವಿರಲಿಲ್ಲ. ಹೀಗಾಗಿ ಚಾಟ್ಸ್ ತಿನ್ನಲು ಬೀದಿ ಬದಿಯ ಗಾಡಿಯೊಂದರ ಬಳಿ ಹೋಗಿದ್ದೆವು.  ತಿನ್ನುತ್ತಿರುವಾಗ, ಆ ಚಾಟ್ಸ್ ಅಂಗಡಿಯಾತ ನನ್ನನ್ನು ಗುರುತಿಸಿ ಅತ್ಯಂತ ಪ್ರೀತಿ, ಗೌರವದಿಂದ ಮಾತನಾಡಿಸಿದ. ಅಷ್ಟೇ ಅಲ್ಲ, ಕೊನೆಯಲ್ಲಿ ಹಣ ನೀಡಲು ಹೋದಾಗ ಕೈಮುಗಿದು, “ಬೇಡ ಮೇಡಂ, ದುಡ್ಡು ತಗೋಳಲ್ಲ” ಎಂದ. ನಾನು ಆಶ್ಚರ್ಯದಿಂದ ನೋಡಿದಾಗ, ಕೃತಜ್ಞತೆಯ ಕಣ್ಣುಗಳಿಂದ ಅವನು ನೆನಪಿಸಿದ—”ಅಂದು ಮಧ್ಯರಾತ್ರಿ ನನ್ನ ಮಗನಿಗೆ ತಲೆಗೆ ಬಲವಾದ ಗಾಯವಾಗಿ ರಕ್ತ ಸುರಿಯುತ್ತಿದ್ದಾಗ, ನೀವೇ  ಹೊಲಿಗೆ ಹಾಕಿ ಗುಣಪಡಿಸಿದ್ರಿ . ಆ ಉಪಕಾರಕ್ಕೆ ಬೆಲೆ ಕಟ್ಟೋಕಾಗುತ್ತಾ?”        ಅವನ ಕಣ್ಣಲ್ಲಿದ್ದ ಆ ದೈವಿಕ ಕೃತಜ್ಞತೆಯನ್ನು ನೋಡಿ ನನ್ನ ಪಕ್ಕದಲ್ಲಿದ್ದ ಇಂಜಿನಿಯರಿಂಗ್ ಗೆಳತಿ ಸಂಪೂರ್ಣ ಆಶ್ಚರ್ಯಚಕಿತಳಾಗಿ ಮೂಕವಿಸ್ಮಿತಳಾದಳು. ಹಣದಿಂದ ಕೊಳ್ಳಲಾಗದ ಕೋಟಿ ರೂಪಾಯಿಯ ಗೌರವ ಅದಾಗಿತ್ತು.       ಆ ಕ್ಷಣ ನನ್ನ ಕಣ್ಣುಗಳು ತೇವಗೊಂಡವು. ಇಂಜಿನಿಯರಿಂಗ್ ಗೆಳೆಯರು ಗಳಿಸಿದ್ದು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಆಗಿದ್ದರೆ, ಒಬ್ಬ ವೈದ್ಯಳಾಗಿ ನಾನು ಗಳಿಸಿದ್ದು ಜನರ ಅಭಿಮಾನ, ಪ್ರೀತಿ ಮತ್ತು ಕೋಟ್ಯಂತರ ರೂಪಾಯಿ ಕೊಟ್ಟರೂ ಸಿಗದ ಆಶೀರ್ವಾದ. ಆ ಕ್ಷಣವೇ ನನ್ನೊಳಗಿನ ವಿಷಾದ ಮಾಯವಾಗಿ, ಹೆಮ್ಮೆಯಿಂದ ಹೃದಯ ಹೇಳಿತು—”ನಾನು ವೈದ್ಯಳಾಗಿದ್ದು ವ್ಯರ್ಥವಾಗಲಿಲ್ಲ!” -ಡಾ ಸೌಮ್ಯ ಕೆ.ವಿ.

“ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ ಡಾ.ಸೌಮ್ಯ ಕೆ.ವಿ.ಅವರ ಕಿರು ಬರಹ Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ ನಮ್ಮ ದಿನ ನಿತ್ಯದ ಬದುಕಿನಲ್ಲಿ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಬೇಕು.ಅಂದಾಗ ಮಾತ್ರ ಈ ಪ್ರಪಂಚದಲ್ಲಿ ಸ್ವಲ್ಪ ಮಟ್ಟಿಗೆ ಹೊಂದಾಣಿಕೆಯಿಂದ ಬದುಕಲು ಸಾಧ್ಯ.ಹಾಗೆಂದು ಕೆಟ್ಟದ್ದನ್ನು ಮಾಡುವುದು ಸರಿಯಲ್ಲ.ನಾವುಗಳು, ನಾವಾಗಿ ಜೀವಿಸಲು ಕೆಲವು ಸುಲಭ ಸುಲಲಿತ ಮಾರ್ಗಗಳಿವೆ.ಒಳ್ಳೆಯ ಮಾರ್ಗವನ್ನಾರಿಸಿಕೊಂಡು ನಮ್ಮ ದುಡಿತದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು.ಇವತ್ತಿನ ದಿನಮಾನಗಳಲ್ಲಿ ಸರ್ಕಾರಿ ನೌಕರಿರಲಿ,ಕಂಪನಿ ಕೆಲಸಗಾರರಿರಲಿ,ಅಥವಾ ಕಾರ್ಮಿಕ ಕೆಲಸಗಾರರಿರಲಿ,ರೈತರೇ ಇರಲಿ.ರಾಜಕಾರಣಿಯಿರಲಿ,ಅಥವಾ ಇನ್ನಾರಾದರೂ ಇರಲಿ,ಬಾಳಿನ ದೋಣಿ ಸಾಗಿಸಲು ಒಂದು ದುಡಿಮೆಯಂತೂ ಬೇಕು.ತುಸು ತಡವಾದರೂ ಸರಿಯಾದ ರೀತಿಯಲ್ಲಿ ಪರಿಶ್ರಮಪಟ್ಟು ದುಡಿಮೆಯಲ್ಲಿ ತೃಪ್ತಿ ಕಾಣಬೇಕಾಗುತ್ತದೆ.‌ ಮಾಡುವ ಕೆಲಸದಲ್ಲಿ ಸುಖ,ಆನಂದವನ್ನು ಅನುಭವಿಸಿ, ಸನ್ಮಾರ್ಗದೊಂದಿಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿ  ನಿರಂತರವಾಗಿರಬೇಕು.ಒಮ್ಮೆಲೆ ದುಡಿದು ರಾತ್ರೋ ರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ.ದುಡಿತದಲ್ಲಿ  ನಾವೆಷ್ಟು  ಆತುರಾತುರ ಮಾಡಿದರೂ ಕೋಳಿ ಕೂಗುವುದಿಲ್ಲ.ಬೆಳಕರಿಯುವುದಿಲ್ಲ.ಮಾಗಬೇಕು,ಕಾಯಬೇಕು,ಸಹನೆಯಂತೂ ತುಂಬಾನೆ ಬೇಕು.ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬರ ಅಧೀನದಲ್ಲಿ ದುಡಿಯುತ್ತೇವೆಂದರೆ ಯಾವಾಗಲೂ ಯಾರಾದರೂ,ಯಾವುದೇ ಕೆಲಸದಲ್ಲಿ  ಯಜಮಾನರು,ಕೆಲಸ ನೀಡಿದ ಸಂಸ್ಥೆಯವರು,ಹಿರಿಯ ಅಧಿಕಾರಿಗಳು ಬೈಯುತ್ತಾರೆ ಎಂದರೆ ಅವರಿಗೂ ಒತ್ತಡವಿರಬಹುದು?  ಅವರು ಬೈದಾಡುತ್ತಾರೆ ಎಂದರೆ ನಾವೂ ಸಹ ಎದುರು ವಾದಿಸ ಬಾರದು.ಆ ಕೆಲಸದ ಬಗ್ಗೆ ಚರ್ಚೆ ಮಾಡಬೇಕಷ್ಟೆ.ಅದನ್ನು ಬಿಟ್ಟು ಏರು ದನಿಯಲ್ಲಿ ಎದುರುತ್ತರ ನೀಡಿ ಕೆಂಗಣ್ಣಿಗೆ ಗುರಿಯಾಗಬಾರದು. ಅನಾಹುತ,ಅನರ್ಥಗಳಾಗುತ್ತವೆ.ನಮ್ಮ ಸ್ವಾರ್ಥವೆ ಗೆಲ್ಲಬೇಕು ಎನ್ನುವುದು ನಮ್ಮದೇ  ತಪ್ಪು.ಏಕೆಂದರೆ ನಮಗೆ ವಹಿಸಿದ ಕೆಲಸವೇ ಬಹು ಮುಖ್ಯ.ಪ್ರತಿಯೊಬ್ಬರಿಗೂ ಅವರದೆಯಾದ ವಿಚಾರ ಸರಣಿ,ಸಹಾನುಭೂತಿ,ಸಹಾಯ ಸಹಕಾರ ಇದ್ದೇ  ಇರುತ್ತದೆ.ಅದಕ್ಕಾಗಿ ನಮ್ಮ ನಮ್ಮ ಕೆಲಸ ಮಾಡಲು,ಮತ್ತೊಬ್ಬರಿಂದ ಹೇಳಿಸಿಕೊಳ್ಳಬಾರದು.ಅವರು ಹೇಳುವತನಕ ಕೆಲಸ ಮಾಡದೆ ಇರೋದು ನಮ್ಮದೇ ಖಂಡಿತ ತಪ್ಪಾಗುತ್ತದೆ.ನಮ್ಮ ಕೆಲಸ ಕಾರ್ಯಗಳಲ್ಲಿ ಸಹಜತೆ,ದಕ್ಷತೆ , ಪ್ರಾಮಾಣಿಕತೆ, ಪ್ರಬುದ್ಧತೆ,ಮತ್ತು ಸ್ಪಷ್ಟತೆ ಇರಬೇಕು.ಹಾಗಿದ್ದರೆ ಮಾತ್ರ ಬಹು ದಿನಗಳವರೆಗೆ ದುಡಿಮೆಲ್ಲಿರುತ್ತೇವೆ.*ಮಾತು ಬೆಳ್ಳಿ,ಮೌನ ಬಂಗಾರ* ಎಂಬಂತೆ,ಮಾತು ಕಡಿಮೆ ಮಾಡಿ,ಹೆಚ್ಚಿನ ಮೌನದಲ್ಲಿದ್ದರೆ ಮನಸ್ಸಿಗೆ ಒಳ್ಳೆಯದು.ಮನೆಗೂ ಒಳ್ಳೆಯದು,ಸಮಾಜಕ್ಕೂ ಒಳ್ಳೆಯದು.ಆದರೆ ನಾವು ಮಾಡುವ ಕೆಲಸಕ್ಕಿಂತ ಮಾತಿಗೇ ಮೊದಲ ಸ್ಥಾನ ಕೊಟ್ಟರೆ, ಕಚೇರಿ ಎಂಬುದು ಸೋಮಾರಿತನದ  ತಾಣವಾಗುವುದು.ಮಾತು ಅಧಿಕವಾದಷ್ಟು ನಮ್ಮೊಳಗೆ ಅಲ್ಪತನ ಹೊರಬರುತ್ತದೆ.ನಮ್ಮ ಕಚೇರಿಯಲ್ಲಿ ನಮ್ಮ ನಮ್ಮ ಸಿಬ್ಬಂಧಿಯವರು ಸಣ್ಣ ಸಣ್ಣ ವಿಷಯಕ್ಕೆ ಅಹಂಕಾರ ತೋರಿದರೆ ಅದಕ್ಕೆ ಹುಂಬತನ ಎನ್ನಬಹುದು.ಆದರೆ ಕಾಲು ಕೆದರಿ ವಾದಕ್ಕಿಳಿದರೆ…..? ಕೋಪದಿ ಬೈದಾಡಿ ಜೋರು ಮಾಡಿ ಕದನಕ್ಕಿಳಿದರೆ..?ಮೌನವಾಗಿರಬೇಕು. ಇಂತಹ ವಿಷಯಗಳು ಪ್ರತಿ ಸಂಸ್ಥೆಗಳಲ್ಲಿ,ಪ್ರತಿ ಕಚೇರಿಯಲ್ಲಿ ನಡೆದಿರುತ್ತವೆ.ಎಂದಿಗೂ ಬಗೆಹರಿಯುವುದಿಲ್ಲ.ಇಂತವರ ಜೊತೆ ಮಾತಿನ ಕಾಳಗ,ವಿವಾದ, ವಿಚಾರಣೆ,ಮಾಡುವುದರಲ್ಲಿ ಯಾವ ಅರ್ಥವಿಲ್ಲ. ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅದೆಷ್ಟೋ ಮಾತುಗಳಿಗೆ ಮೌನವೆ ಸಮಾಧಾನವಾಗುವುದು.ಸಂದಾನವೂ ಆಗಬಲ್ಲದು.​ಈ ಮೇಲಿನ ಮಾತು  ಕೇವಲ ಜಲಚರಗಳ ಬಗೆಗಿನ ಮಾತಲ್ಲ; ಇದು ಮನುಷ್ಯ ಸಮಾಜ, ರಾಜಕೀಯ, ಉದ್ಯೋಗ,ಕೃಷಿ  ಹಾಗೂ ದೈನಂದಿನ ಜೀವನದ ಅಸ್ತಿತ್ವದ ಹೋರಾಟವನ್ನು ಕುರಿತು ಹೇಳುವ ಅತ್ಯಂತ ಶ್ರೇಷ್ಠವಾದ ತತ್ತ್ವವಾಗಿದೆ.​ಯಾವುದಾದರೂ  ಒಂದು ಮಾತನ್ನು  ಅರ್ಥಮಾಡಿಕೊಳ್ಳಲು ಮೊದಲು ಅದರ ಬಾಹ್ಯ ರೂಪವನ್ನು ನೋಡಬೇಕು. ಈ ಉಕ್ತಿಯು ಪ್ರಕೃತಿಯ ಸಹಜ ನಿಯಮವೊಂದನ್ನು ನಮಗೆ ಪರಿಚಯಿಸುತ್ತದೆ.ನೀರಿನಲ್ಲಿನರುವ ಜಲಚರಗಳಾದ ಮೀನು, ಕಪ್ಪೆ ,ಏಡಿ,ಅಥವಾ ಯಾವುದೇ ಸಣ್ಣ ಜಲಚರಗಳಿಗೆ ನೀರೇ ಆಸರೆ, ನೀರೇ ಜೀವನ. ನೀರನ್ನು ಬಿಟ್ಟು ಅವು ಕ್ಷಣಕಾಲವೂ ಬದುಕಲಾರವು.​ಅತೀ ಬಲಶಾಲಿ ಜಲಚರಗಳಿದ್ದರೂ ಅವುಗಳೂ  ಬದುಕುತ್ತಿವೆ. ನೀರಿನಲ್ಲಿ ಮೊಸಳೆಯೂ ವಾಸಿಸುತ್ತದೆ. ಮೊಸಳೆಯನ್ನು ‘ಜಲರಾಜ’ ಎನ್ನಬಹುದು. ನೀರಿನೊಳಗೆ ಮೊಸಳೆಗೆ ಸಿಗುವಷ್ಟು ದೈಹಿಕ ಶಕ್ತಿ ಮತ್ತು ಹಿಡಿತ ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ. ‘ಆನೆ ಬಿದ್ದರೂ ಕುದುರೆ ಬಿದ್ದರೂ ಮೊಸಳೆಗೆ ನೀರೇ ಬಲ’ ಎಂಬ ಇನ್ನೊಂದು ಗಾದೆಯೂ ಇದೆ.​ ನೀರಿನಲ್ಲೇ ಬದುಕಬೇಕಾದ ಸಣ್ಣ ಜೀವಿಯೊಂದು ಅದೇ ನೀರಿನಲ್ಲಿರುವ ಅತ್ಯಂತ ಶಕ್ತಿಶಾಲಿ ಮೊಸಳೆಯೊಂದಿಗೆ ಹಗೆತನ ಸಾಧಿಸಿದರೆ ಏನಾಗಬಹುದು? ಅದರ ಜೀವಕ್ಕೆ ಗಂಡಾಂತರ ಬರುವುದು ನಿಶ್ಚಿತ. ತನಗಿಂತ ನೂರು ಪಟ್ಟು ಬಲಶಾಲಿಯಾದ ಶತ್ರುವಿನ ಜಾಗದಲ್ಲೇ ಇದ್ದುಕೊಂಡು, ಅವನೊಂದಿಗೇ ದ್ವೇಷ ಸಾಧಿಸುವುದು ಆತ್ಮಹತ್ಯೆಗೆ ಸಮಾನ ಎಂಬುದು ಇದರ ನೇರ ಅರ್ಥ.​ಈ ಮಾತಿನ ಹಿಂದೆ ಒಂದು ಶ್ರೇಷ್ಠವಾದ ಆಧ್ಯಾತ್ಮಿಕ ಚಿಂತನೆಯೂ ಅಡಗಿದೆ. ಇಲ್ಲಿ ‘ನೀರು’ ಎನ್ನುವುದನ್ನು ಈ ಜಗತ್ತು ಅಥವಾ ಸಂಸಾರಕ್ಕೆ ಹೋಲಿಸಬಹುದು. ‘ಮೊಸಳೆ’ ಎನ್ನುವುದನ್ನು ಪ್ರಕೃತಿಯ ನಿಯಮಗಳು, ಕಾಲ ಅಥವಾ ಭಗವಂತನ ಶಕ್ತಿಗೆ ಹೋಲಿಸಬಹುದು.​”ನಾವು ಪ್ರಕೃತಿಯ ಮಡಿಲಲ್ಲಿ ಬದುಕುತ್ತಾ, ಪ್ರಕೃತಿಯ ನಿಯಮಗಳನ್ನೇ ಉಲ್ಲಂಘಿಸಿ ಬಾಳಲು ಸಾಧ್ಯವಿಲ್ಲ.”​ಮನುಷ್ಯನು ಈ ಭೂಮಿಯ ಮೇಲೆ ಹುಟ್ಟಿದ್ದಾನೆ (ನೀರಲ್ಲಿ ವಾಸ). ಈ ಸೃಷ್ಟಿಯನ್ನು ನಿಯಂತ್ರಿಸುವ ಕೆಲವು ಅದೃಶ್ಯ ಶಕ್ತಿಗಳು, ಕರ್ಮ ಸಿದ್ಧಾಂತಗಳು ಮತ್ತು ಪ್ರಕೃತಿಯ ನಿಯಮಗಳಿವೆ (ಮೊಸಳೆ). ಮನುಷ್ಯ ತಾನೇ ಶ್ರೇಷ್ಠನೆಂದು ಅಹಂಕಾರದಿಂದ ಪ್ರಕೃತಿಯ ವಿರುದ್ಧ ತಿರುಗಿಬಿದ್ದರೆ, ಅಂತಿಮವಾಗಿ ವಿನಾಶ ಹೊಂದುವುದು ಅವನೇ. ಆದ್ದರಿಂದ, ನಾವು ಬಾಳುವ ಪರಿಸರ ಮತ್ತು ನಮ್ಮನ್ನು ಸಲಹುವ ಶಕ್ತಿಗಳೊಂದಿಗೆ ದ್ವೇಷ ಸಾಧಿಸದೆ, ಸಾಮರಸ್ಯದಿಂದ ಬದುಕಬೇಕು ಎಂಬ ಉದಾತ್ತ ಸಂದೇಶವಿದು.​ಮಾನವ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಗಾದೆ ಮಾತುಗಳು ದಿಕ್ಸೂಚಿಯಾಗಿವೆ. ಮನುಷ್ಯ ಸಂಘಜೀವಿ. ಅವನು ಸಮಾಜ ಅಥವಾ ಕುಟುಂಬವನ್ನು ಬಿಟ್ಟು ಒಂಟಿಯಾಗಿ ಬಾಳಲಾರನು.​ನಾವು ಒಂದು ಹಳ್ಳಿಯಲ್ಲೋ ಅಥವಾ ನಗರದ ಗಲ್ಲಿಯಲ್ಲೋ ವಾಸಿಸುವಾಗ, ಸುತ್ತಮುತ್ತಲಿನ ಜನರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಸಮಾಜದಲ್ಲಿ ಪ್ರಭಾವಶಾಲಿಯಾಗಿರುವ ವ್ಯಕ್ತಿಗಳೊಂದಿಗೆ,ರಾಜಕಾರಣಿಯೊಂದಿಗೆ, ಅನಗತ್ಯ ದ್ವೇಷ ಕಟ್ಟಿಕೊಂಡರೆ, ಕಷ್ಟಕಾಲದಲ್ಲಿ ನಮಗೆ ಯಾರೂ ನೆರವಾಗುವುದಿಲ್ಲ.ಒಂದು ಜಂಟಿ ಕುಟುಂಬದಲ್ಲಿ ವಾಸಿಸುವಾಗ, ಮನೆಯ ಯಜಮಾನ ಅಥವಾ ಪ್ರಮುಖ ರಾಜಕಾರಣಿ,ಅಧಿಕಾರಿ,ಅಥವಾ ಪುಡಿ ಗುಂಡಾಗಿ ರಿ  ವ್ಯಕ್ತಿಯೊಂದಿಗೆ ಸದಾ ಕಲಹ ಹೂಡುತ್ತಿದ್ದರೆ ಆ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಮನೆಯಲ್ಲೇ ವಾಸಿಸುತ್ತಾ, ಮನೆಯ ಮುಖ್ಯಸ್ಥನನ್ನೇ ದ್ವೇಷಿಸುವುದು ಸಂಸಾರದ ನೆಮ್ಮದಿಯನ್ನು ಕೆಡಿಸುತ್ತದೆ.​ಆಧುನಿಕ ಜಗತ್ತಿನಲ್ಲಿ,ಈ ಮೋಬೈಲ್ ಕಾಲದಲ್ಲಿ ಒಳ್ಳೆಯ ಮಾತನ್ನು ತಿಳಿವಳಿಕೆಗಾಗಿ ಹೇಳಿದರೆ ನಗಾಡುವ ಪಟ್ಟೆ ಹುಡುಗರಿದ್ದಾರೆ.ಮೇಲಿನ ಮಾತು ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾದ ಪಾಠವನ್ನು ಕಲಿಸುತ್ತದೆ. ಕಛೇರಿಗಳಲ್ಲಿ ಅಥವಾ ಉದ್ಯೋಗ ಮಾಡುವ ಸ್ಥಳಗಳಲ್ಲಿ ಇದನ್ನು ನಾವು ಪ್ರತಿದಿನ ನೋಡಬಹುದು.​ಮೇಲಾಧಿಕಾರಿಗಳೊಂದಿಗೆ ಸಂಬಂಧವನ್ನು ನಮ್ರತೆಯಿಂದ ಇಟ್ಟುಕೊಂಡಿರಬೇಕು.ನಾವು ಕೆಲಸ ಮಾಡುವ ಸಂಸ್ಥೆಯೇ ನಮಗೆ ಜೀವನೋಪಾಯ ಅಲ್ಲಿರುವ ನಮ್ಮ ಬಾಸ್ ಅಥವಾ ಮ್ಯಾನೇಜರ್ (ಮೊಸಳೆ) ಅಧಿಕಾರ ಹೊಂದಿರುವ ವ್ಯಕ್ತಿ.​ಬುದ್ಧಿವಂತಿಕೆಯ ನಡವಳಿಕೆಯಿಂದ ತಲೆಬಾಗಿರಬೇಕಾಗುತ್ತದೆ. ಉದ್ಯೋಗದಲ್ಲಿರುವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದೇ ಸಂಸ್ಥೆಯಲ್ಲಿ ಸಂಬಳ ಪಡೆಯುತ್ತಾ, ಸಂಸ್ಥೆಯ ಮುಖ್ಯಸ್ಥರೊಂದಿಗೆ ನೇರ ಹಗೆತನ ಬೆಳೆಸಿಕೊಂಡರೆ ವೃತ್ತಿಜೀವನ ಹಾಳಾಗುತ್ತದೆ. ಇಲ್ಲಿ ಶರಣಾಗತಿ ಮುಖ್ಯವಲ್ಲ, ಬದಲಿಗೆ ‘ಸಮಯಪ್ರಜ್ಞೆ’ ಜಾಣತನ,ನಯವಿನಯತೆ, ಮತ್ತು ‘ರಾಜತಾಂತ್ರಿಕತೆ’ ಮುಖ್ಯವಾಗುತ್ತದೆ. ವ್ಯವಸ್ಥೆಯ ಒಳಗಿದ್ದುಕೊಂಡೇ ವ್ಯವಸ್ಥೆಯನ್ನು ಎದುರಿಸಬೇಕಾದರೆ ವಿವೇಕ ಇರಬೇಕೇ ಹೊರತು ಕೇವಲ ಆವೇಶವಲ್ಲ. ​ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಈ ಗಾದೆಯನ್ನು ಪಾಲಿಸದ ರಾಜರುಗಳು ಹೇಗೆ ನಾಶವಾದರು ಮತ್ತು ಹೇಗೆ ಪಾಲಿಸಿದರು, ಹೇಗೆ ಉಳಿದುಕೊಂಡರು ಎಂಬುದಕ್ಕೆ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಬಲಿಷ್ಠ ಸಾಮ್ರಾಜ್ಯಗಳ ಪಕ್ಕದಲ್ಲಿದ್ದ ಸಣ್ಣ ಪುಟ್ಟ ಸಂಸ್ಥಾನಗಳು, ಆ ಬಲಿಷ್ಠ ರಾಜರೊಂದಿಗೆ ಅನಗತ್ಯವಾಗಿ ಯುದ್ಧ ಸಾರಿದಾಗ ಧೂಳೀಪಟವಾದವು. ಆದರೆ, ಯಾರು ತಮ್ಮ ಮಿತಿಯನ್ನು ಅರಿತು, ಬಲಿಷ್ಠರೊಂದಿಗೆ ಸ್ನೇಹ ಹಸ್ತ ಚಾಚಿದರೋ ಅಥವಾ ತಂತ್ರಗಾರಿಕೆಯಿಂದ ವರ್ತಿಸಿದರೋ ಅವರು ತಮ್ಮ ಪ್ರಜೆಗಳನ್ನು ಮತ್ತು ಸಾಮ್ರಾಜ್ಯವನ್ನು ಉಳಿಸಿಕೊಂಡರು.​ಅಂತರರಾಷ್ಟ್ರೀಯ ರಾಜಕೀಯದಲ್ಲಿ ಇಂದು ಜಾಗತಿಕ ಮಟ್ಟದಲ್ಲೂ ಅಷ್ಟೇ, ಒಂದು ಸಣ್ಣ ದೇಶವು ತನ್ನ ಪಕ್ಕದಲ್ಲೇ ಇರುವ ಸೂಪರ್ ಪವರ್ ದೇಶದೊಂದಿಗೆ ವೈರತ್ವ ಬೆಳೆಸಿಕೊಂಡರೆ ಆ ದೇಶದ ಆರ್ಥಿಕತೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ.*ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ* ಎಂಬ ಗಂಭೀರ ಮಾತು ನಮಗೆ ಹೇಡಿತನವನ್ನು ಕಲಿಸುವುದಿಲ್ಲ, ಬದಲಿಗೆ ಬದುಕುವ ಕಲೆಯಾದ ‘ವಿವೇಕ’ವನ್ನು ಕಲಿಸುತ್ತದೆ.ಶತ್ರು ಬಲಶಾಲಿಯಾಗಿದ್ದಾಗ ಆವೇಶದಿಂದ ಹೋರಾಡುವುದಕ್ಕಿಂತ, ನಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು. ಬಲಹೀನನಾದವನು ಬಲಿಷ್ಠನ ಎದುರು ಜಾಣ್ಮೆಯಿಂದ ವರ್ತಿಸಬೇಕು.​ನಾವು ಎಲ್ಲೇ ಇರಲಿ, ಯಾರೊಂದಿಗೇ ಇರಲಿ, ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಅಲ್ಲಿನ ಪ್ರಭಾವಿ ಶಕ್ತಿಗಳೊಂದಿಗೆ ಅನಗತ್ಯ ಘರ್ಷಣೆಗೆ ಇಳಿಯಬಾರದು. ಬೆಂಕಿಯ ಒಟ್ಟಿಗೆ ಇದ್ದು ಸುಟ್ಟುಕೊಳ್ಳುವುದಕ್ಕಿಂತ, ಅದರ ಶಾಖವನ್ನು ಬಳಸಿಕೊಂಡು ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗುವವರೆ ನಿಜವಾದ ಜಾಣರು ಎಂಬುದೇ ಈ ಶ್ರೇಷ್ಠ ಗಾದೆಯ ಪರಮ ತಾತ್ಪರ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Read Post »

You cannot copy content of this page

Scroll to Top