ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಶತಕದ ಸಾಧಕ ಪುಲಿಗೆರೆ ಸೋಮನಾಥ ಕನ್ನಡ ಸಾಹಿತ್ಯ ಪರಂಪರೆ ಕನ್ನಡ ಸಾಹಿತ್ಯ ಪರಂಪರೆಯು ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾದ ಸಂಪ್ರದಾಯವಾಗಿದೆ. ಭಾರತದ ಅತ್ಯಂತ ಹಳೆಯ ಸಾಹಿತ್ಯ ಸಂಪ್ರದಾಯಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಚಳವಳಿಗಳೊಂದಿಗೆ ಬೆರೆತು ವಿಕಸನಗೊಂಡಿದೆ. ಕನ್ನಡ ಭಾಷೆ ಹಲ್ಮಡಿ ಶಾಸನದಲ್ಲಿ ಕಂಡು ಬಂದರೂ ಸಹಿತ ಅದಕ್ಕಿಂತ ಮೂರು ಶತಮಾನಕ್ಕೂ ಅಧಿಕವಾದ ಪ್ರಾಚೀನ ಭಾರತೀಯ ದ್ರಾವಿಡ ಭಾಷೆಯಾಗಿದೆ. ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲ (ಜೈನ ಯುಗ / ಪಂಪ ಯುಗ) ಕ್ರಿ.ಶ. ೫ ನೇ ಶತಮಾನದ ಹಲ್ಮಿಡಿ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದೆ. ಕ್ರಿ.ಶ. ೮೫೦ ರ ಸುಮಾರಿನ ಅಮೋಘವರ್ಷ ನೃಪತುಂಗನ ‘ಕವಿರಾಜಮಾರ್ಗ’ ನಮಗೆ ದೊರೆತಿರುವ ಮೊದಲ ಸಾಹಿತ್ಯಿಕ ಗ್ರಂಥವಾಗಿದೆ. ಪಂಪ ಯುಗ: ೧೦ ನೇ ಶತಮಾನವನ್ನು ಕನ್ನಡ ಸಾಹಿತ್ಯದ ‘ಚಿನ್ನದ ಯುಗ’ ಎನ್ನಲಾಗುತ್ತದೆ. ರತ್ನತ್ರಯರು: ಆದಿಕವಿ ಪಂಪ (ವಿಕ್ರಮಾರ್ಜುನ ವಿಜಯ, ಆದಿಪುರಾಣ), ಪೊನ್ನ ಮತ್ತು ರನ್ನ ಕನ್ನಡದ ಮಹಾಕವಿಗಳಾಗಿದ್ದಾರೆ. ಶೈಲಿ: ಈ ಕಾಲದಲ್ಲಿ ‘ಚಂಪೂ’ (ಗದ್ಯ ಮತ್ತು ಪದ್ಯ ಮಿಶ್ರಿತ) ಶೈಲಿಯು ಪ್ರಸಿದ್ಧವಾಗಿತ್ತು. ೨. ನಡುಗನ್ನಡ ಕಾಲ (ವಚನ ಮತ್ತು ವೈಷ್ಣವ ಯುಗ) ೧೨ ನೇ ಶತಮಾನದಿಂದ ಕನ್ನಡ ಸಾಹಿತ್ಯವು ರಾಜಾಶ್ರಯದಿಂದ ಹೊರಬಂದು ಸಾಮಾನ್ಯ ಜನರ ಭಾಷೆಯಾಗಿ ಮಾರ್ಪಟ್ಟಿತು.ವಚನ ಸಾಹಿತ್ಯ: ೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ವಚನ ಚಳವಳಿ ಆರಂಭವಾಯಿತು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ವಚನಕಾರರು ಸರಳ ಕನ್ನಡದಲ್ಲಿ ಬದುಕಿನ ತತ್ವಗಳನ್ನು ಬರೆದರು. ಹರಿಹರ ಮತ್ತು ರಾಘವಾಂಕ: ಹರಿಹರನು ‘ರಗಳೆ’ ಸಾಹಿತ್ಯವನ್ನೂ, ರಾಘವಾಂಕನು ‘ಷಟ್ಪದಿ’ ಶೈಲಿಯನ್ನೂ ಪರಿಚಯಿಸಿದರು. ದಾಸ ಸಾಹಿತ್ಯ: ಭಕ್ತಿ ಪಂಥದ ಭಾಗವಾಗಿ ಪುರಂದರದಾಸರು, ಕನಕದಾಸರು ಮುಂತಾದ ಹರಿದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕುಮಾರವ್ಯಾಸ: ‘ಕರ್ಣಾಟ ಭಾರತ ಕಥಾಮಂಜರಿ’ (ಗದಗಿನ ಭಾರತ) ಮಹಾಕಾವ್ಯದ ಮೂಲಕ ನಡುಗನ್ನಡದ ಶ್ರೇಷ್ಠ ಕವಿಯಾಗಿ ಹೊರಹೊಮ್ಮಿದನು. ಇಂತಹ ಸುದೀರ್ಘ ಸಾಹಿತ್ಯ ಪರಂಪರೆಯ ಶ್ರೇಷ್ಠ ಶತಕ ಸಾಧಕ ಪುಲಿಗೆರೆ ಸೋಮನಾಥ (ಪುಲಗೇರೆ ಸೋಮನಾಥ) ಕನ್ನಡ ಸಾಹಿತ್ಯ ಲೋಕದ ಒಬ್ಬ ಪ್ರಸಿದ್ಧ ಹಳಗನ್ನಡದ ಕವಿ. ಇವರು ಪ್ರಮುಖವಾಗಿ ತಮ್ಮ ನೀತಿಪ್ರಧಾನ ಕಾವ್ಯವಾದ ಸೋಮೇಶ್ವರ ಶತಕ’ಕ್ಕಾಗಿ ಜನಪ್ರಿಯರಾಗಿದ್ದಾರೆ.ಕವಿಯ ಕುರಿತಾದ ಪ್ರಮುಖ ವಿವರಗಳು ವೈಯಕ್ತಿಕ ವಿವರಗಳು ಮತ್ತು ಕಾಲ ಇವರು ಸುಮಾರು ಕ್ರಿ.ಶ. ೧೨೯೯ ಅಥವಾ ೧೩ನೆಯ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದರು ಎಂದು ಅಂದಾಜಿಸಲಾಗಿದೆ. ಇವರು ಹೊಯ್ಸಳ ರಾಜರ ಆಶ್ರಯದಲ್ಲಿದ್ದರು. ಜನ್ಮಸ್ಥಳ: ಇವರು ಪ್ರಸ್ತುತ ಗದಗ ಜಿಲ್ಲೆಯ (ಹಳೆಯ ಧಾರವಾಡ ಜಿಲ್ಲೆ) ಲಕ್ಷ್ಮೇಶ್ವರ ತಾಲೂಕಿನ ಪುಲಿಗೆರೆ (ಈಗಿನ ಲಕ್ಷ್ಮೇಶ್ವರ) ಎಂಬ ಊರಿನವರು.ಪಾಂಡಿತ್ಯ: ಸೋಮನಾಥನು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಮಹಾ ಪಂಡಿತನಾಗಿದ್ದನು. ಸಾಹಿತ್ಯ ಕೃಷಿ ಮತ್ತು ಅಂಕಿತ ನಾಮ ಇವರ ಪದ್ಯಗಳ ಅಂಕಿತ ನಾಮ “ಹರಹರಾ ಶ್ರೀ ಚೆನ್ನಸೋಮೇಶ್ವರಾ” ಅಥವಾ “ಹರಹರ ಶ್ರೀ ಚನ್ನಸೋಮೇಶ್ವರ”.ಸೋಮೇಶ್ವರ ಶತಕ: ಇದು ಇವರ ಅತ್ಯಂತ ಪ್ರಸಿದ್ಧ ಕೃತಿ. ವೃತ್ತ ಛಂದಸ್ಸಿನಲ್ಲಿ (ಮತ್ತೇಭವಿಕ್ರೀಡಿತ ವೃತ್ತ) ರಚಿತವಾಗಿರುವ ಈ ಕಾವ್ಯವು ಒಟ್ಟು 100 ಪದ್ಯಗಳನ್ನು ಒಳಗೊಂಡಿದೆ. ಇವು ಸಮಾಜಕ್ಕೆ ಉತ್ತಮ ನೀತಿ, ಆದರ್ಶ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ. ರತ್ನಾಕರಂಡಕ: ಇವರು ಚಂಪೂ ಶೈಲಿಯಲ್ಲಿ ‘ರತ್ನಾಕರಂಡಕ’ ಎಂಬ ಕಾವ್ಯವನ್ನೂ ರಚಿಸಿದ್ದಾರೆ. ಪ್ರಸಿದ್ಧ ಸಾಲುಗಳುಇವರ ಸೋಮೇಶ್ವರ ಶತಕದ ಈ ಸಾಲು ಕನ್ನಡ ನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿದೆ:”ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ…”(ಇದರ ಅರ್ಥ: ಮನುಷ್ಯನು ಸ್ವಲ್ಪ ಜ್ಞಾನವನ್ನು ತಿಳಿದವರಿಂದ ಕಲಿತು, ಇನ್ನು ಸ್ವಲ್ಪ ಜ್ಞಾನವನ್ನು ಶಾಸ್ತ್ರಗಳನ್ನು ಕೇಳಿ ಪಡೆಯುತ್ತಾ ಜ್ಞಾನಿಯಾಗಬೇಕು.) ಪುಲಿಗೆರೆ ಸೋಮನಾಥ ಮೂಲತಃ ಜೈನ ಧರ್ಮೀಯನಾಗಿದ್ದು ಶರಣರ ವಚನಗಳನ್ನು ಆಳವಾಗಿ ಓದಿಕೊಂಡು ನಡುಗನ್ನಡ ದೇಸಿ ಪದ್ಧತಿಯನ್ನು ತನ್ನ ಕಾವ್ಯ ಶೈಲಿಯನ್ನಾಗಿ ಪರಿವರ್ತಿಸಿದನು. ಬಸವಣ್ಣ ಅಕ್ಕ ಮಹಾದೇವಿ ಮತ್ತು ಇತರ ಶರಣರ ವಚನಗಳ ಪ್ರಭಾವ ಈತನ ಮೇಲೆ ಅಪಾರವಾಗಿ ಬೀರಿತ್ತು. ಇವನ ಶತಕಗಳು ಮುಂದೆ ಸರ್ವಜ್ಞ ಮತ್ತು ತತ್ವ ಪದಕಾರರಿಗೆ ಪ್ರಭಾವ ಬೀರಿರಬಹುದು ಎಂದೆನಿಸುತ್ತಿದೆ.ಒಟ್ಟಾರೆ ಸೋಮನಾಥನ ಶತಕಗಳು ಇಂದಿಗೂ ಕನ್ನಡ ಸಾಹಿತ್ಯ ಲೋಕದ ಅಪೂರ್ವ ಆಸ್ತಿ ಎಂದು ಹೇಳ ಬಹುದು ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-35 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮುನಿಸು ಮಾತಿನ ಮಳೆಗರೆದೆ ಮಣಿಪುರದರಸನ ಮೇಲೆ ನ್ನನ್ನು ತಂದೆಯೆಂದು ಕರೆದು ನನ್ನ ಶುದ್ಧ ಚಾರಿತ್ರ್ಯಕ್ಕೆ ಧಕ್ಕೆ ತಂದನಲ್ಲಾ ಎಂಬ ಕೋಪ ಕಾಡಿತು ನನ್ನನ್ನು. ನನ್ನ ಆಪ್ತರ ಕಣ್ಣನನಗೆ ಸಂಬಂಧಪಡದವನು ನಲ್ಲಿ ನನ್ನ ಮಗನೆಂದೆನಿಸಿ ಯುದ್ಧ ವಿಮುಖನಾಗಿ, ಶರಣಾಗತಿಯನ್ನು ಸಾರಿ ಈ ವೀರಾರ್ಜುನನ ಪರಾಕ್ರಮದ ಹೆಸರಿಗೆ ಕಳಂಕ ತಂದನಲ್ಲಾ ಎಂಬ ಕ್ರೋಧವೂ ಮೂಡಿತು. ನನ್ನನ್ನು ಅವಮಾನಕ್ಕೆ ಈಡುಮಾಡಿದವನ ಚಿತ್ತವನ್ನು ಕ್ಷಣಕ್ಷಣ ಕಣಕಣ ನೋಯಿಸಿ, ಅವನ ಮನಕ್ಕೆ ಮರಣವನ್ನು ತರಬೇಕೆಂಬ ಬಗೆಯ ಉತ್ಸುಕತೆ ನನ್ನದಾಯಿತು. ಆಗದವರನ್ನು ಕೊಲ್ಲುವುದರಲ್ಲಿ ಎರಡು ಬಗೆಗಳಿವೆ. ಬಾಣ ಖಡ್ಗಗಳಿಂದ ಶರೀರವನ್ನು ಘಾಸಿಗೊಳಿಸಿ, ಗಾಯಕ್ಕೆ ಸಿಲುಕಿದ ದೇಹಕ್ಕೆ ಉಪ್ಪು ಸವರಿ ಇನ್ನಿಲ್ಲದ ಯಾತನೆಯನ್ನು ನೀಡಿ ಸಾಯಿಸುವುದು ಒಂದು ಬಗೆ. ಹಾಗೇನೂ ಮಾಡದೆ ನುಡಿಯ ಕಿಡಿಗಳನ್ನು ಸೂಸಿ, ಟೀಕೆಯ ಬೆಂಕಿಯನ್ನು ಎದೆಗಿಟ್ಟು, ಅಪಹಾಸ್ಯದ ಜ್ವಾಲೆಯನ್ನೆಬ್ಬಿಸಿ ಉರಿಉರಿಸಿ ಹಾಕುವುದು ಇನ್ನೊಂದು ಬಗೆ. ಯುದ್ಧಕ್ಕೆ ನಿಂತ ವೀರನಲ್ಲ ಬಭ್ರುವಾಹನ. ಮಾತಿನ ಬಾಣಗಳಿಂದಲೇ ಅವನ ಪ್ರಾಣ ತೆಗೆಯುವುದು ಸರಿಯೆಂದು ತೋರಿತು ನನಗೆ.ನನ್ನ ಪಾದದ ಬಳಿಯಲ್ಲಿ ಕುಳಿತಿದ್ದ ಅವನನ್ನು ಬಲವಾಗಿ ಒದೆದೆ. “ಎಲವೋ ಹೇಡಿ. ನನಗೆ ಜನಿಸಿದವ ನೀನಾಗಿದ್ದರೆ ಈ ಪರಿಯಲ್ಲಿ ಯುದ್ಧಕ್ಕೆ ಹೆದರಿ ಶರಣು ಬರುತ್ತಿರಲಿಲ್ಲ. ಮೊದಲು ಅಶ್ವವನ್ನು ಕಟ್ಟಿದವನು ನೀನು. ಈಗ ಯುದ್ಧ ಮಾಡದೆಯೇ ಅದನ್ನು ಬಿಟ್ಟು ಕಳುಹಿಸುವುದಕ್ಕೆ ಸಿದ್ಧನಾಗಿದ್ದೀಯಲ್ಲಾ! ನೀನಂತೂ ನನ್ನ ಮಗನಲ್ಲ” ಎಂದೆ ರೋಷಾವೇಶದಿಂದ.ನನ್ನ ಕಾಲಿನ ಒದೆತಕ್ಕೆ ಎರಡು ಹೆಜ್ಜೆಗಳಷ್ಟು ಆಚೆಗೆ ಬಿದ್ದ ಬಭ್ರುವಾಹನ. ಅರ್ಜುನನ ಮಗ ನೀನೆಂಬ ಯೋಚನೆಯನ್ನು ಅವನಲ್ಲಿ ಬಿತ್ತಿದವಳು ಅವನ ತಾಯಿ. ಅವಳ ಮಾತನ್ನು ಕೇಳಿಸಿಕೊಂಡು ತಾನೇ ಅವನಿಲ್ಲಿಗೆ ಬಂದದ್ದು! ಹಾಗಿರುವಾಗ ಅವಳನ್ನೂ ತೆಗಳದೇ ಇರಬಾರದು ಎನಿಸಿತು. ಅವನು ಹೇಳಿದ ಹೆಸರೇನದು?! ಚಿತ್ರಾಂಗದೆ! ಅದೇ ಹೆಸರನ್ನು ಮುಂದುಮಾಡಿಕೊAಡು ಬೈಯ್ಯತೊಡಗಿದೆ.“ಆ ಚಿತ್ರಾಂಗದೆಗೆ ವೈಶ್ಯನಿಂದ ಜನಿಸಿದ ಪುತ್ರ ನೀನು. ಅದಂತೂ ಖಚಿತ. ನನಗೆ ಜನಿಸಿದವನಲ್ಲ. ನನ್ನ ಮಗನಾಗಿದ್ದರೆ ಕ್ಷಾತ್ರಧರ್ಮವನ್ನು ಬಿಟ್ಟು ಈ ಬಗೆಯಲ್ಲಿ ವರ್ತಿಸುತ್ತಿರಲಿಲ್ಲ” ಎಂದು ಅಬ್ಬರಿಸಿದೆ, ಅವನ ಕರುಳ ಬಳ್ಳಿಯನ್ನು ಹಿಡಿದೆಳೆದು.ನಾನವನ ತಾಯಿಯನ್ನು ನಿಂದಿಸಿದ್ದು ಅತಿಯಾಗಿಯೇ ನೋಯಿಸಿತು ಅವನನ್ನು. ಅವನ ಮುಖಭಾವದಲ್ಲಿಯೇ ಅದು ಗೋಚರವಾಗುತ್ತಿತ್ತು. ನೆಲದ ಮೇಲೆ ಬಿದ್ದವನಿಗೆ ಇನ್ನೊಂದು ಬಲವಾದ ಹೊಡೆತವಿಕ್ಕಿದರೆ ಪೂರ್ಣವಾಗಿ ಮಣ್ಣುಮುಕ್ಕುತ್ತಾನೆ ಎಂಬ ಯೋಚನೆ ಬಂತು. ಯಾರೇ ಆಗಿರಲಿ, ಇನ್ನೊಬ್ಬರ ಜೊತೆಗಿನ ಕೀಳು ಹೋಲಿಕೆಯನ್ನು ಸಹಿಸಲಾರರು. ಇದು ನನಗೆ ಗೊತ್ತಿತ್ತು. ನನ್ನ ಮಗನೆಂದು ಸುಳ್ಳು ಹೇಳಿಕೊಂಡು ಬಂದವ ಈ ಬಭ್ರುವಾಹನ. ನನ್ನ ನಿಜತನಯನಾದ ಅಭಿಮನ್ಯುವಿನ ಪರಾಕ್ರಮವನ್ನು ಮುಂದುಮಾಡಿಯೇ ಇವನನ್ನು ಹಿಂದಕ್ಕೆಳೆಯುತ್ತೇನೆ ಎಂದುಕೊAಡೆ.“ಸುಭದ್ರೆಗೆ ನನ್ನಿಂದ ಜನಿಸಿದವ ಅಭಿಮನ್ಯು. ಕುರುಕ್ಷೇತ್ರ ಯುದ್ಧವದು ನಡೆಯುತ್ತಿದ್ದಾಗ ಏಕಾಂಗಿಯಾಗಿ ಚಕ್ರವ್ಯೂಹದ ಒಳಹೊಕ್ಕ. ಯುದ್ಧದ ಸಹವಾಸವಿದು ನಿನಗೆ ಬೇಡ ಎಂಬ ಧರ್ಮರಾಯನ ಮಾತಿಗೂ ಕಿವಿಗೊಡಲಿಲ್ಲ. ಅಂತಹ ಪರಾಕ್ರಮಿಯಾಗಿದ್ದ ಅವನು. ಶತ್ರುಸೇನೆಯನ್ನು ಪುಡಿಗಟ್ಟಿ ವೀರಮರಣವನ್ನು ಹೊಂದಿದ. ಅಂತಹ ಸಮರ್ಥನನ್ನು ನನ್ನ ಮಗ ಎಂದು ಒಪ್ಪಿಕೊಳ್ಳುತ್ತೇನೆ. ಅದುಬಿಟ್ಟು ನಿನ್ನಂಥ ಹೇಡಿಯನ್ನು ಮಗನೆಂದು ಸ್ವೀಕರಿಸಲಾದೀತೇ!” ಎಂದು ಚುಚ್ಚಿದೆ.ಸಂತಸದಿAದ, ತುಂಬು ಆನಂದದಿAದ ನನ್ನ ಬಳಿಗೆ ಬಂದಿದ್ದವನು ಬಭ್ರುವಾಹನ. ಅವನ ಮೊಗದ ನಲಿವದು ಕಡಿಮೆಯಾಗುತ್ತಾ ಆಗುತ್ತಾ ನೋವಿನ ಛಾಯೆ ದಟ್ಟವಾಗತೊಡಗಿತ್ತು. ನನಗಿನ್ನೂ ಸಮಾಧಾನ ಆಗಿರಲಿಲ್ಲ.“ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ. ನರಿ ಹುಟ್ಟುವುದಿಲ್ಲ. ವೀರನೆಂದು ಜಗತ್ತು ಗುರುತಿಸುತ್ತದೆ, ಗೌರವಿಸುತ್ತದೆ ನನ್ನನ್ನು. ನನ್ನಂತಹ ಪರಾಕ್ರಮಿಗೆ ಮಗನಾಗಿ ನಿನ್ನಂತಹ ಕಡುಹೇಡಿ ಜನಿಸುವುದು ಸಾಧ್ಯವೇ! ಕದನಗೈಯ್ಯದೆ ಕುದುರೆಯನ್ನು ಬಿಟ್ಟುಕೊಡುವ ಮನಸ್ಸು ಮಾಡಿದೆಯೇಕೆ! ಸಾಹಸಿಗಳನ್ನು ಸೋಲಿಸುವ ಸಾಮರ್ಥ್ಯ ಇರುವ ವೀರರಿಗೆ ಸೇನೆ ಬೇಕು; ಛತ್ರ ಚಾಮರಗಳ ಸೊಗಸಿರಬೇಕು. ಆದರೆ ನಿನಗೆ ಚತುರಂಗ ಬಲವೇಕೆ! ಛತ್ರ ಚಾಮರಗಳು ಅದೇಕೆ! ಶತ್ರುಗಳನ್ನು ಕೊಲ್ಲಲು ನೆರವಾಗುವ ಆಯುಧಗಳಾದರೂ ಬೇಕೇ ನಿನಗೆ! ಜೀವದಾಸೆಯನ್ನು ಬಿಡು. ಹೋಗು” ಎಂದು ಹಂಗಿಸಿದೆ ಅವನನ್ನು.ಅವನ ತಾಯಿಯನ್ನು ಆಗ ಬೈದದ್ದು ಸಾಲದು ಎನಿಸಿತು. ಮತ್ತೆ ಬೈದೆ. “ನಿನ್ನ ಮಾತೆ ಚಿತ್ರಾಂಗದೆ ನರ್ತಕಿಯಾಗಿರಬೇಕು. ಯಾವುದೋ ಗಂಧರ್ವನಾಯಕನ ಮಗಳಾಗಿರಬೇಕು. ಅವಳು ನಟನೆಯಲ್ಲಿ ಪರಿಣತಿ ಪಡೆದವಳಿರಬೇಕು. ಇಲ್ಲವಾದರೆ ನೀನು ಈ ಬಗೆಯಲ್ಲಿ ಮಣಿಪುರವನ್ನು ಆಳುವ ಅರಸನ ನಟನೆಯನ್ನು ಮಾಡಲು ಸಾಧ್ಯವಿಲ್ಲ. ನಿನ್ನದಿದು ನಿಜ ರಾಜ ಪರಾಕ್ರಮವಲ್ಲ. ಶಕ್ತಿವಂತನ ನಟನೆಯಷ್ಟೇ ನಿನ್ನದು. ಬಹಳ ಪೌರುಷ ತೋರಿದ್ದೀಯ ಬಿಡು! ಕುದುರೆಯನ್ನು ತಡೆದ ಹೋರಾಡಿದ ಅರಸರೆಲ್ಲಾ ಇಲ್ಲಿಯೇ ಇದ್ದಾರೆ. ಅವರ ಮುಂದೆ ಹೋಗು” ಎಂದು ಕುಹಕದ ನುಡಿಯನ್ನಾಡಿದೆ.ನನ್ನ ಬಿರುಸಿನ ನುಡಿಗೆ ಕನಲಿದ ಕಳ್ಳಸುತ ಬಭ್ರುವಾಹನ. ಸುಬುದ್ಧಿಯಲ್ಲಿ ತನ್ನ ದುಃಖವನ್ನು ತೋಡಿಕೊಂಡ. ನನ್ನ ಬಾಯಿಯಿಂದ ಹೊರಬಿದ್ದ ಪ್ರತಿಯೊಂದು ಅಕ್ಷರಗಳೂ ಬತ್ತಳಿಕೆಯಿಂದ ಹೊರಬಂದ ಬಾಣಗಳಂತೆ ಅವನನ್ನು ನೋಯಿಸಿದ್ದವು. ಅವನನ್ನು ಮಾತ್ರವೇ ಬೈದಿದ್ದರೆ ಸಹಿಸಿಕೊಳ್ಳುತ್ತಿದ್ದನೋ ಏನೋ, ಅವನ ತಾಯಿಯನ್ನು ತೆಗಳಿದ್ದನ್ನು ಸಹಿಸಿಕೊಳ್ಳುವುದಕ್ಕಾಗಲಿಲ್ಲ ಅವನಿಗೆ.“ನನ್ನ ತಾಯಿಯನ್ನೇ ಬೈದೆಯಲ್ಲಾ! ನಿನ್ನ ತಲೆಯನ್ನು ಉರುಳಿಸದೆ ಬಿಡುವವನು ನಾನಲ್ಲ. ಇದಂತೂ ನಿಜ” ಎಂದು ಪ್ರತಿಜ್ಞೆಗೈದವನು ತನ್ನವರ ಜೊತೆಗೆ ಅಲ್ಲಿಂದ ಹೊರಟುಹೋದ. ನನಗೆ ಮರಳಿಸಲೆಂದು ಅವನು ತಂದಿದ್ದ ಕುದುರೆಯದು ಮತ್ತೆ ಮರಳಿ ಅವನ ಲಾಯವನ್ನು ಸೇರಿಕೊಂಡಿತು.ನನ್ನವರ ಜೊತೆಗೆ ಶಿಬಿರಕ್ಕೆ ಮರಳಿದ ನನ್ನೊಳಗೆ ಬಭ್ರುವಾಹನ ನುಡಿಯ ನರ್ತನ. ಅವನು ಹೇಳಿದ್ದ ಮಾತದು ನಿಜವಿರಬಹುದೇ! ಎಂಬ ಯೋಚನೆ ಮತ್ತೆ ಮತ್ತೆ ಕಾಡಿತು. ಬಭ್ರುವಾಹನ ನನ್ನೊಡನೆ ಯುದ್ಧ ಹೂಡದೆ ಇನ್ನು ಸುಮ್ಮನಿರುವವಂತೂ ಅಲ್ಲ ಎನ್ನುವುದು ದೃಢವಾಗಿತ್ತು. ಅವನು ನನ್ನ ಮಗನೇ ಆಗಿದ್ದರೆ ನನ್ನೊಂದಿಗಿನ ಅವನ ಯುದ್ಧ ಹಿಂದೆ ತ್ರೇತಾಯುಗದಲ್ಲಿ ಲವಕುಶರು ಶ್ರೀರಾಮನ ಜೊತೆಗೆ ಹೋರಾಡಿದಂತಿರುತ್ತದೆ ಎನಿಸಿತು. ನನ್ನೊಳಗೀಗ ಶ್ರೀರಾಮ ಕಥನದ ಹಿರಿದಕ್ಷರಗಳು ಮೂಡತೊಡಗಿದವು… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-126 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಡಯಾಲಿಸಿಸ್ ಗೆ ಬೆಂಗಳೂರಿಗೆ? ರಾತ್ರಿ ತಾಯಿಯ ಜೊತೆಗೆ ಆಸ್ಪತ್ರೆಯಲ್ಲಿ ಮಲಗಲು ಬಂದ ಮಗಳು ಮಾರನೇ ದಿನ ಕಾಲೇಜಿಗೆ ರಜೆ ಹಾಕಿ ಬೆಳಗಿನ ಬಸ್ಸಿನಲ್ಲಿ ತನ್ನ ಊರಿಗೆ ಹೊರಟಳು. ಅಲ್ಲಿ ಹೋಗಿ ತೋಟದ ಸಾಹುಕಾರರು ಹಾಗೂ ಅವರ ಪತ್ನಿ ‘ಅಮ್ಮ’ ಅವರನ್ನು ಭೇಟಿ ಮಾಡಿದಳು. ತನ್ನ ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸೂಚಿಸಿರುವ ಬಗ್ಗೆ ಎಲ್ಲಾ ವಿವರಗಳನ್ನು ಅವರಿಗೆ ತಿಳಿಸಿದಳು….ನಿನ್ನ ಅಕ್ಕನಿಗೂ ತಿಳಿಸಿ ಕೊಡಿಸಬೇಕಾದ ಚಿಕಿತ್ಸೆಯನ್ನು ಕೊಡಿಸು….ಇಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ನೀವು ಹೋಗಲು ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಮಾಡುತ್ತೇವೆ…. ಎಂದರು. ಸಾಹುಕಾರರು ಹಾಗೂ ಅವರ ಪತ್ನಿಯ ಮಾತನ್ನು ಕೇಳಿದ ಹುಡುಗಿಗೆ ಸಂಜೀವಿನಿ ಸಿಕ್ಕಷ್ಟು ಸಂತೋಷವಾಯಿತು. ತನ್ನ ತಾಯಿಯ ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಹಾಯಕ್ಕೆ ನಿಲ್ಲುವ ಸಾಹುಕಾರರು ಅವರ ಪತ್ನಿಯ ಬಗ್ಗೆ ಗೌರವ ಹೆಚ್ಚಿತು. ತನ್ನ ಕೃತಜ್ಞತೆಯನ್ನು ತಿಳಿಸಲು ಅವಳಿಗೆ ಪದವಿಲ್ಲದಾಯಿತು. ಸಾಹುಕಾರರಿಗೆ ಹಾಗೂ ಅವರ ಪತ್ನಿಗೆ ವಂದಿಸಿ ತುಸು ನೆಮ್ಮದಿಯಿಂದ ತಂಗಿಯನ್ನು ಭೇಟಿ ಮಾಡಲು ಮನೆಗೆ ಹೋದಳು. ತಂಗಿ ಶಾಲೆಗೆ ಹೊರಡುವ ತರಾತುರಿಯಲ್ಲಿದ್ದಳು. ಅಕ್ಕ ಇದ್ದಕ್ಕಿದ್ದ ಹಾಗೆ ಮನೆಗೆ ಬಂದಿರುವುದನ್ನು ಕಂಡು, ತಂಗಿಗೆ ಆಶ್ಚರ್ಯವಾಯಿತು. ಆದರೆ ತಾಯಿಗೆ ಹೆಚ್ಚಿನ ಚಿಕಿತ್ಸೆ ದೊರಕುವ ವಿಷಯ ತಿಳಿದು ಅವಳು ಸಂತೋಷ ಕೊಟ್ಟಳು…. “ಹಾಗಾದರೆ ತಾಯಿಯನ್ನು ಹೇಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೀಯಾ?…. ತಾಯಿಗೆ ಹೆಚ್ಚು ನಡೆದಾಡಲು ಸಾಧ್ಯವಿಲ್ಲ ಅಲ್ಲವೇ?…. ನಿನಗೆ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೋಗಿ ಅಭ್ಯಾಸವಿಲ್ಲ… ಯಾರ ಜೊತೆಗೆ ಹೋಗುತ್ತೀಯಾ?…. ಒಬ್ಬಳೇ ಅಮ್ಮನನ್ನು ಕರೆದುಕೊಂಡು ಹೋಗಲು ಸಾಧ್ಯವೇ ನಿನಗೆ? …. ನಾನು ಈ ಕೆಲಸವನ್ನು ಬಿಟ್ಟು ನಿನ್ನ ಜೊತೆ ಬರುವುದು ಸಾಧ್ಯವಿಲ್ಲ…. ಅದೂ ಅಲ್ಲದೇ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಮತ್ತು ಚಿಕಿತ್ಸೆ ಕೊಡಿಸಲು ಹೆಚ್ಚು ಹಣ ಬೇಕಲ್ಲವೇ ನಮ್ಮಲ್ಲಿ ಅಷ್ಟು ಹಣ ಇಲ್ಲವಲ್ಲ”…. ಎಂದು ಚಿಂತಿತಳಾಗಿ ಅಕ್ಕನನ್ನು ಕೇಳಿದಳು. ತಂಗಿಯು ಕೇಳಿದ ಪ್ರಶ್ನೆಗಳಿಗೆ….”ತೋಟದ ಸಾಹುಕಾರರು ನಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ…. ಅವರ ಕಾರಿನಲ್ಲಿಯೇ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಕೂಡಾ ತಿಳಿಸಿದ್ದಾರೆ…. ನೋಡೋಣ ….ಚಿಕಿತ್ಸೆಯ ಖರ್ಚಿಗೆ ಹಣವನ್ನು ಅವರು ಕೊಡಬಹುದು…. ಅಮ್ಮನನ್ನು ಕರೆದುಕೊಂಡು ಹೋಗಲು ಜೊತೆಗೆ ಬಾವನನ್ನು ಬರುವಂತೆ ಕೇಳಿಕೊಳ್ಳುತ್ತೇನೆ…. ನೀನು ಹೆಚ್ಚು ಯೋಚನೆ ಮಾಡಬೇಡ…. ನೀನೊಬ್ಬಳೇ ಇಲ್ಲಿರುವುದನ್ನು ಯೋಚಿಸಿ ನನ್ನ ಮನಸ್ಸು ಸದಾ ಚಿಂತೆಗೆ ಒಳಗಾಗುತ್ತಿದೆ…. ನಮ್ಮ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀನು ಒಬ್ಬಳೇ ಇಲ್ಲಿದ್ದು ಅಮ್ಮನ ಕೆಲಸವನ್ನು ಕೂಡ ಮಾಡುತ್ತಿದ್ದೀಯಾ….. ನನ್ನ ಜೊತೆಗೆ ಹೆಗಲುಕೊಟ್ಟು ನಿಂತಿರುವ ನೀನು ಇಷ್ಟು ಚಿಕ್ಕ ವಯಸ್ಸಿಗೆ ನನಗಿಂತ ದೊಡ್ಡವಳಾಗಿ ಬಿಟ್ಟೆ”….. ಎಂದು ಹೇಳುತ್ತಾ ತಂಗಿಯನ್ನು ಬಿಗಿಯಾಗಿ ಅಪ್ಪಿಕೊಂಡಳು…. ಅಕ್ಕ ಈಗ ನಮಗೆ ನಾವೇ ಇರುವುದು…. ಹಾಗಾಗಿ ನಾವಿಬ್ಬರೂ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು…. ನೀನು ಧೈರ್ಯವಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ…. ನನಗೆ ಈಗ ಒಬ್ಬಳೇ ಇದ್ದು ಅಭ್ಯಾಸವಾಗಿ ಹೋಗಿದೆ”….ಎಂದಳು. ಇಬ್ಬರ ಕಣ್ಣುಗಳೂ ಹನಿ ಗೂಡಿದವು. ಕೆಲಸಕ್ಕೆ ಹೋಗುವ ಸಮಯವಾಗಿದ್ದರಿಂದ ತಂಗಿ ಮನೆಗೆ ಬೇಗ ಹಾಕಿ ಹೊರಟಳು. ಅಕ್ಕನೂ ಬಸ್ ನಿಲ್ದಾಣದ ಕಡೆಗೆ ಹೊರಟಳು. ಹಿಂತಿರುಗಿ ಸಕಲೇಶಪುರಕ್ಕೆ ಹೋಗಲು ಮಧ್ಯಾಹ್ನದ ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಹಾಗಾಗಿ ಆ ಹುಡುಗಿ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಕುಳಿತುಕೊಂಡು ತನ್ನ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಆಗ ಅಲ್ಲಿ ಹಾದು ಹೋಗುತ್ತಿದ್ದ ಕೆಲಸಗಾರರು ಈ ಹುಡುಗಿಯನ್ನು ನೋಡಿ…. “ಸುಮತಿ ಟೀಚರ್ ಹೇಗಿದ್ದಾರೆ?”…. ಎಂದು ವಿಚಾರಿಸಿಕೊಳ್ಳುತ್ತಿದ್ದರು…. “ಪರವಾಗಿಲ್ಲ…. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…. ಸುಧಾರಿಸಿಕೊಳ್ಳುತ್ತಿದ್ದಾರೆ”…. ಎಂದು ಉತ್ತರ ಕೊಡುತ್ತಿದ್ದಳು. ಅದೇ ರೀತಿ ತಮ್ಮ ಕುಟುಂಬಕ್ಕೆ ಆಪ್ತರಾದ ಮಲಯಾಳಿ ಡ್ರೈವರ್ ಹಾಗೂ ಅವರ ಪತ್ನಿ ಆ ದಾರಿಯಲ್ಲಿ ಬಂದರು. ಸುಮತಿಯ ಎರಡನೇ ಮಗಳನ್ನು ಕಂಡು ಅವಳ ಬಳಿಗೆ ಬಂದು, ಸುಮತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ಅವರು ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಕಾರಣ ಎಲ್ಲಾ ವಿಚಾರವನ್ನು ಆ ಹುಡುಗಿ ಅವರಿಗೆ ತಿಳಿಸಿದಳು. ಅವರಿಬ್ಬರೂ ಕೂಡ ಎಸ್ಟೇಟಿನ ಸಾಹುಕಾರರು ಹಾಗೂ ಅಮ್ಮನನ್ನು ಕೊಂಡಾಡಿದರು…. “ನೀನು ಯಾವುದಕ್ಕೂ ಹೆದರಬೇಡ…. ನಮ್ಮ ಸಾಹುಕಾರರು ಮತ್ತು ಅಮ್ಮ ಇದ್ದಾರೆ…. ಅವರಿಬ್ಬರೂ ಬಹಳ ಒಳ್ಳೆಯವರು…. ದಯಾಳುಗಳು…. ಎಲ್ಲರಿಗೂ ಸಹಾಯ ಮಾಡುವ ಗುಣ ಉಳ್ಳವರು…. ನೀನು ಧೈರ್ಯವಾಗಿ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ….. ಎಲ್ಲವೂ ಒಳ್ಳೆಯದಾಗಲಿ”…. ಎಂದು ಹೇಳಿ ಆ ಹುಡುಗಿಯ ತಲೆಯನ್ನು ನೇವರಿಸಿ ಅಲ್ಲಿಂದ ಹೊರಟುಹೋದರು. ಮಧ್ಯಾಹ್ನದ ಹನ್ನೆರಡು ಗಂಟೆಯ ಬಸ್ಸು ಬಂದಿತು. ಬಸ್ಸಿನಲ್ಲಿ ಹುಡುಗಿಯು ಸಕಲೇಶಪುರದ ಕಡೆಗೆ ಹೊರಟಳು. ಅವಳು ಆಶ್ರಮಕ್ಕೆ ಬಂದಾಗ ಅವಳ ಗೆಳತಿ ಮಧ್ಯಾಹ್ನದ ಅಡುಗೆಯನ್ನು ಮಾಡಿ ಮುಗಿಸಿ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದಳು. ಸುಮತಿಯ ಮಗಳನ್ನು ಕಂಡೊಡನೆ, ಹೋದ ವಿಷಯ ಏನಾಯ್ತು ಎಂದು ಉತ್ಸುಕತೆಯಿಂದ ಕೇಳಿದಳು. ಸಾಹುಕಾರರು ಮತ್ತು ಅವರ ಪತ್ನಿ ಹೇಳಿದ ವಿಷಯವನ್ನು ತಿಳಿಸಿದಳು. ಅವಳಿಗೂ ಸಂತೋಷವಾಯಿತು…. “ಸರಿ ನಡಿ ಊಟ ಮಾಡು…. ಆಸ್ಪತ್ರೆಗೆ ಹೋಗಿ ನಿನ್ನ ತಾಯಿಗೆ ಈ ವಿಷಯವನ್ನ ತಿಳಿಸು…. ಅವರಿಗೂ ಬಹಳ ಸಂತೋಷವಾಗುತ್ತದೆ”…. ಎಂದಳು. ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡಿದರು. ನಂತರ ಸುಮತಿಯ ಮಗಳು ತಾಯಿಯನ್ನು ನೋಡಲು ಆಸ್ಪತ್ರೆಗೆ ಹೊರಟಳು. ತಾಯಿಯ ಬಳಿಗೆ ಹೋಗಿ ಈ ಸಂತಸದ ಸುದ್ದಿ ಯಾವಾಗ ತಿಳಿಸುತ್ತೇನೋ ಎನ್ನುವ ತವಕ ಅವಳಲ್ಲಿತ್ತು. ಹಾಗಾಗಿ ಬೇಗನೇ ಹೆಜ್ಜೆ ಹಾಕಿದಳು. ಲಘುಬಗೆಯಿಂದ ಆಸ್ಪತ್ರೆಯ ಮೆಟ್ಟಿಲು ಹತ್ತಿದಳು. ಓಡು ನಡಿಗೆಯಲ್ಲಿ ವಾರ್ಡ್ ತಲುಪಿದಳು. ಸುಮತಿ ಆಸ್ಪತ್ರೆಯಿಂದ ದೊರೆತ ಮಧ್ಯಾಹ್ನದ ಊಟವನ್ನು ಮಾಡಿ, ಸಣ್ಣಗೆ ನಿದ್ರೆ ಮಾಡುತ್ತಿದ್ದಳು. ಯಾರೋ ಬಂದು ನಿಂತದ್ದು ಅರಿವಾಗಿ ಕಣ್ಣುಬಿಟ್ಟಳು. ಮಗಳ ಮುಖವನ್ನು ನೋಡಿದಳು ಅವಳು ಇಂದು ಬಹಳ ಖುಷಿಯಲ್ಲಿ ಇರುವಂತೆ ಕಂಡಿತು. ನಿಧಾನವಾಗಿ ಎದ್ದು ಕುಳಿತು ….”ಮಗಳೇ ಊಟ ಮಾಡಿದೆಯಾ?”…. ಎಂದು ಕೇಳಿದಳು ಅದಕ್ಕುತ್ತರವಾಗಿ ‘ಹೂಂ’ ಎಂದು ಹೇಳಿ ತಾಯಿಯನ್ನು ಬಿಗಿಯಾಗಿ ಅಪ್ಪಿಕೊಂಡಳು.
ಧಾರಾವಾಹಿ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ನೋಟ -37 ಜನವರಿ ೨೦೦೫ ರಿಂದ ಏಪ್ರಿಲ್ ೨೦೨೬ ರಲ್ಲಿ ನಾನು ನಿವೃತ್ತಿ ಹೊಂದುವ ತನಕ ಕೆಲಸ ಮಾಡಿದ್ದು ಈ ಶಾಖೆ ಐದರಲ್ಲಿ ವೃತ್ತಿ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗ ಕಳೆದದ್ದು ಇಲ್ಲೇ. ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂದೆ ತೋಚದಷ್ಟು ಸುದೀರ್ಘ ನೆನಪಿನ ಯಾನ ಇದು. ಒಂದು ಬಾರಿ ಲೂನಾದಿಂದ ಬಿದ್ದು ಅಪಘಾತವಾಗಿ ಒಂದು ರೀತಿ ಬಿಸಿ ಹಾಲು ಕಂಡ ಬೆಕ್ಕಿನಂತೆ ಆಗಿಬಿಟ್ಟಿದ್ದೆ. ಆದರೆ ರವೀಶ್ ಅವರು ಸೇಲ್ಸ್ ಮೇಲೆ ಬೇರೆ ಊರುಗಳಿಗೆ ಹೋದಾಗ ಆಟೋದಲ್ಲಿ ಹೋಗಬೇಕಿತ್ತು. ಗೆಳತಿ ಶೈಲಾ ಒಮ್ಮೊಮ್ಮೆ ಅವಳ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದರೂ ಸದಾ ತೊಂದರೆ ಕೊಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಮತ್ತೆ ಒಂದು ಸೆಕೆಂಡ್ ಹ್ಯಾಂಡ್ ವಾಹನ ಕೊಂಡು ಧೈರ್ಯವಾಗಿ ಆಫೀಸಿಗೆ ಹೋಗಲು ಆರಂಭಿಸಿದೆ. ನಾನು ಶಾಖೆ ಎರಡರಲ್ಲಿ ಇದ್ದಾಗಲೇ ನನ್ನ ತಂಗಿ ವೈಶಾಲಿ ಅವರು ರಾಮಕೃಷ್ಣನಗರದ ಮನೆ ಕೊಂಡುಕೊಂಡು ಅಲ್ಲಿಗೆ ಬಂದಿದ್ದರು. ಅವರ ಜೊತೆಯೇ ನನ್ನ ತಂದೆ ಇದ್ದದ್ದು .ಹಾಗಾಗಿ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಮನೆಗೆ ಹೋಗುವಾಗ ಹೋಗಿ ಅವರನ್ನು ಭೇಟಿಯಾಗಲು ನನಗೆ ವಾಹನವಿದ್ದುದು ತುಂಬಾ ಅನುಕೂಲಕರವಾಗಿತ್ತು. ಹೊಸ ವ್ಯವಹಾರ ವಿಭಾಗದಲ್ಲಿ ಇದ್ದರಿಂದ ಆ ವರ್ಷ ಮಾರ್ಚ್ ಕೊನೆಯ ವರ್ಷಾಂತ್ಯದ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ವಿಭಾಗೀಯ ಕಚೇರಿಗೆ ಹೋಗಿ ಸಲ್ಲಿಸಿ ಬಂದಿದ್ದಾಯಿತು. ಈ ಶಾಖೆಯಲ್ಲಿ ಎಲ್ಲರೂ ಪಕ್ಕದಲ್ಲಿ ಇದ್ದ ಜಯಲಕ್ಷ್ಮಿ ಹೋಟೆಲಿಗೆ ಕಾಫಿಗೆ ಹೋಗುತ್ತಿದ್ದದ್ದು ನಾನು ಅವರೊಂದಿಗೆ ಹೋಗಿ ಬರುತ್ತಿದ್ದೆ. ಅಲ್ಲಿ ಎದುರುಗಡೆ ಮಲ್ಲಿಗೆ ಕೆಫೆ ಎಂಬ ಹೋಟೆಲ್ ಇತ್ತು .ಅಲ್ಲಿ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಒಮ್ಮೊಮ್ಮೆ ಊಟಕ್ಕೆ ಮನೆಗೆ ಹೋಗದೆ ಅಲ್ಲಿ ನಾನು ಗೆಳತಿಯರು ಒಂದೊಂದು ಬಿಸಿಬೇಳೆ ಬಾತ್ ತೆಗೆದುಕೊಂಡು ಮೊಸರನ್ನು ಇಬ್ಬರು ಮೂವರು ಶೇರ್ ಮಾಡುತ್ತಿದ್ದೆವು. ಆ ಹೋಟೆಲ್ ನನ್ನ ಪಿಯುಸಿ ಸಹಪಾಠಿ ಶ್ರೀನಿವಾಸ್ ಅವರದಂತೆ. ಅದು ಆಗಲೇ ಕ್ಲೋಸ್ ಆಗಿತ್ತು .ಆನಂತರ ನಮ್ಮ ಪಿಯುಸಿ ಸಹಪಾಠಿಗಳು ವಾಟ್ಸಾಪ್ ಗುಂಪು ಮಾಡಿಕೊಂಡಾಗ ಆ ವಿಷಯ ತಿಳಿದು ಬಂತು. ನಾನು ರೇಗಿಸುತ್ತಿದ್ದೆ ನಿನ್ನದು ಎಂದು ತಿಳಿದಿದ್ದರೆ ದಿನ ಅಲ್ಲಿಗೆ ಊಟಕ್ಕೆ ಬಂದುಬಿಡಬಹುದಿತ್ತು ಅಂತ.ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಅಲ್ಲೇ ಸರ್ಕಲ್ ಪಕ್ಕದಲ್ಲಿ ಇದ್ದ ಕನಕಗಿರಿ ಸೀರೆಯ ಅಂಗಡಿ. ಅಲ್ಲಿಗೆ ಹೊಸ ಸ್ಟಾಕ್ ಬಂದಾಗಲೆಲ್ಲ ಹೋಗಿ ನೋಡುತ್ತಿದ್ದವು ನೋಡಿದ ಮೇಲೆ ತೆಗೆದುಕೊಳ್ಳದಿದ್ದರೆ ಆಗುತ್ತದೆಯೇ… ಹಾಗಾಗಿ ಬಹಳಷ್ಟು ಸೀರೆಗಳನ್ನು ಆ ಅಂಗಡಿಯಲ್ಲಿ ಕೊಂಡಿದ್ದೆವು. ಈ ಮಧ್ಯೆ ಮುಂದಿನ ಜನವರಿಯಲ್ಲಿ ಶಾಖೆಯ ಕಟ್ಟಡವನ್ನು ಖಾಲಿ ಮಾಡಿ ಅದೇ ರಸ್ತೆಯ ಇನ್ನೊಂದು ತುದಿಯಲ್ಲಿ ಇದ್ದ ಎಸ್ ಬಿ ಎಂ ಬ್ಯಾಂಕಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಅಲ್ಲಿ ಎರಡನೆಯ ಮಹಡಿಯಲ್ಲಿ ನಮ್ಮ ಕಚೇರಿ ಲಿಫ್ಟ್ ಸೌಲಭ್ಯ ಏನೋ ಇತ್ತು .ಆದರೆ ಮೂರು ಮೂರು ದಿನಕ್ಕೂ ಲಿಫ್ಟ್ ಕೆಟ್ಟುಹೋಗುತ್ತಿತ್ತು . ನಾವು ಕೆಲವರಿಗೆನೋ ಸುಲಭವಾಗಿ ಹತ್ತಲು ಆಗುತ್ತಿತ್ತು ಆದರೆ ವಯಸ್ಸಾಗಿದ್ದ ಶಾಂತ ಅವರಿಗೆ ಹಾಗೂ ಆರೋಗ್ಯ ಸರಿ ಇಲ್ಲದಿದ್ದ ಲೀಲಾವತಿ ಅವರಿಗೆಲ್ಲ ತುಂಬಾ ಕಷ್ಟವಾಗುತ್ತಿತ್ತು. ಲೀಲಾವತಿ ಆ ವೇಳೆಗಾಗಲೇ ನಾಟಕ ಸಣ್ಣ ಕಥೆ ಸಂಕಲನಗಳನ್ನು ಪ್ರಕಟಿಸಿ ಹೆಸರಾಂತ ಲೇಖಕಿಯಾಗಿದ್ದರು ಎಷ್ಟು ನಿಯತಕಾಲಿಕೆಗಳಲ್ಲಿ ಅವರ ಕಥೆಗಳು ಬಂದಿದ್ದವು. ಆದರೆ ನಾನು ಆಗ ಬರೆಯಲು ಇನ್ನೂ ಆರಂಭಿಸಿರಲಿಲ್ಲ ಈಗ ಅವರ ಜೊತೆ ಇದ್ದಿದ್ದರೆ ಎಷ್ಟೋ ಮಾರ್ಗದರ್ಶನ ಸಿಗುತ್ತಿತ್ತು ಅನಿಸುತ್ತೆ ನಮ್ಮ ಶಾಖೆಯಿಂದ ವಿಭಾಗೀಯ ಕಚೇರಿಗೆ ವರ್ಗಾವಣೆ ತೆಗೆದುಕೊಂಡು ಹೋಗಿ ಒಂದೆರಡು ವರ್ಷಗಳಾದ ನಂತರ ಅವರ ದೇಹಾಂತವಾಯಿತು ಒಳ್ಳೆಯ ಗೆಳತಿ ಆಕೆ.ಇಲ್ಲಿ ಪಕ್ಕದಲ್ಲಿಯೇ ಮೋರ್ ಹಾಗೂ ರಸ್ತೆ ದಾಟಿದ ನಂತರ ಲಾಯಲ್ ವರ್ಲ್ಡ್ ಗಳು ಇದ್ದಿದ್ದು ಸಂಜೆ ಕಚೇರಿ ಮುಗಿದ ನಂತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ತುಂಬಾ ಅನುಕೂಲವಾಗುತಿತ್ತು. ಅದರಲ್ಲೂ ಮೋರ್ನಲ್ಲಿ ಬುಧವಾರದ ದಿನ ತರಕಾರಿ ಹಾಗೂ ಹಣ್ಣುಗಳು ಸ್ವಲ್ಪ ರಿಯಾಯಿತಿ ದರದಲ್ಲಿ ದೊರೆಯುತ್ತಿತ್ತು. ಇಲ್ಲಿ ಎದುರುಗಡೆ ಶಿವ ಸಾಗರ್ ಎಂಬ ಹೋಟೆಲ್ ಇದ್ದರೂ ಸಹ ಕಚೇರಿಗೆ ಒಬ್ಬ ಹುಡುಗ ಟೀ ತಂದು ಕೊಡುತ್ತಿದ್ದು ಎಲ್ಲರೂ ಅಲ್ಲೇ ತೆಗೆದುಕೊಳ್ಳುತ್ತಿದ್ದೆವು. ಇಲ್ಲಿ ಒಂದೇ ಮಹಡಿಯಲ್ಲಿ ಎರಡು ಭಾಗಗಳಿದ್ದವು ಒಂದು ಭಾಗದಲ್ಲಿ ಕ್ಯಾಶ್ ಕೌಂಟರ್ ಲೆಕ್ಕಪತ್ರ ವಿಭಾಗ ಪಾಲಿಸಿ ಸೇವಾ ವಿಭಾಗ ಎಸ್ಎಸ್ ವಿಭಾಗ ಮತ್ತು ದಾವಾಗಿ ಭಾಗಗಳಿದ್ದವು ಮತ್ತೊಂದು ಭಾಗದಲ್ಲಿ ಕಂಪ್ಯೂಟರ್ ಸೆಕ್ಷನ್ ಸಾಕಾಧಿಕಾರಿಗಳ ಕಚೇರಿ ವಿಕ್ರಯ ವಿಭಾಗ ಮತ್ತು ಹೊಸ ವ್ಯವಹಾರಗಳ ವಿಭಾಗ, ಕಛೇರಿ ಸೇವಾ ವಿಭಾಗಗಳೂ ಇದ್ದು ಡೆವಲಪ್ಮೆಂಟ್ ಆಫೀಸರ್ಸ್ ಹಾಗೂ ಏಜೆಂಟ್ ಗಳ ವಿಭಾಗವೂ ಇಲ್ಲಿಯೇ ಇತ್ತು. ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಚೆನ್ನಾಗಿ ಇದ್ದದ್ದರಿಂದ ಬಹಳ ಬೇಗ ಅಡ್ಜಸ್ಟ್ ಆಗಿಬಿಟ್ಟಿತ್ತು. ಈ ನಡುವೆ ಹಳೆಯ ಕಟ್ಟಡದಲ್ಲಿ ಇದ್ದಾಗಲೇ ನಮ್ಮ ತಂದೆ ಸ್ಕೂಟರ್ನಿಂದ ಬಿದ್ದು ತೊಡೆ ಮೂಳೆ ಆಪರೇಷನ್ ಆಗಿತ್ತು. ನಂತರದಲ್ಲಿ ಅವರ ಆರೋಗ್ಯ ಕೆಟ್ಟು ಕೆಮ್ಮು ಹೆಚ್ಚಾಗಿ ಉಸಿರಾಟ ಕಷ್ಟವಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಿದೆವು. ಕಡೆಗೂ ಅವರನ್ನು ಉಳಿಸಿಕೊಳ್ಳಲು ನಮಗೆ ಆಗಲೇ ಇಲ್ಲ. ಯಾಕೋ ಅಪ್ಪ ನಾನು ಕಳೆದಿಕೊಂಡ ಮೇಲೆ ಎಲ್ಲದರಲ್ಲಿ ನಿರಾಸೆ. ಒಂದು ರೀತಿ ಖಿನ್ನತೆ ಕಾಡುತ್ತಿತ್ತು. ಆಗ ಪೂರ್ತಿ ಕಚೇರಿಯ ಕೆಲಸಗಳಲ್ಲಿ ತೊಡಗಿಸಿಕೊಂಡು ನನ್ನನ್ನು ಮರೆಯಲು ಪ್ರಯತ್ನಿಸುತ್ತಿದೆ . ಪಾಲಿಸಿದಾರರ ಹುಟ್ಟಿದ ದಿನಾಂಕ ಬದಲಾವಣೆ ಆ ರೀತಿ ಎಲ್ಲಾ ತಿದ್ದುವಿಕೆಯ ಕೆಲಸಗಳನ್ನು ಮಾಡತೊಡಗಿದ್ದು ಆಫೀಸ್ನ ಸಮಯದ ನಂತರ 5:30 ಇಂದ 6.30 ತನಕ ಈ ರೀತಿ ಕೆಲಸಗಳನ್ನು ಮಾಡುತ್ತಿದ್ದೆವು. ಆಗ ಶೈಲಾ ನನಗೆ ತುಂಬಾ ಸಹಕಾರ ನೀಡಿ ಜೊತೆಯಲ್ಲಿ ಇರುತ್ತಿದ್ದಳು. ಆಗ ಪಾಲಿಸಿ ಸೇವಾ ವಿಭಾಗದ ಆಡಳಿತ ಅಧಿಕಾರಿಗಳಾಗಿದ್ದವರು ಶ್ರೀ ಲಕ್ಷ್ಮೇಂದ್ರ ಕುಮಾರ್. ಅವರು ಈ ಹಿಂದೆ ಸಕಲೇಶಪುರದಲ್ಲಿ ಅವರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಬೇರೆಯ ಕೆಲಸಗಳನ್ನು ಮಾಡುತ್ತಿದ್ದು ಒಂದು ರೀತಿ ನನಗೆ ನನ್ನ ಸಂಸ್ಥೆಗೆ ಸೇವೆ ಸಲ್ಲಿಸುವುದರಲ್ಲಿ ಒಂದು ತೃಪ್ತಿ ತಂದು ಕೊಟ್ಟಿದ್ದು ಎಂದು ಮಾತ್ರ ಹೇಳಬಹುದು. ಮೊದಲಿನಿಂದಲೂ ನಾನು ನನ್ನ ವಿಭಾಗ ಮಾತ್ರ ಎಂಬ ಚೌಕಟ್ಟು ಹಾಕಿಕೊಂಡಿರಲಿಲ್ಲ . ಈವರೆಗೆ ಮಾಡಿ ನನಗೆ ಚೆನ್ನಾಗಿ ತಿಳಿದ ವಿಭಾಗಗಳ ಕೆಲಸ ಆಗಿದ್ದರೆ ಅಥವಾ ಅಲ್ಲಿ ಹೆಚ್ಚುವರಿ ಕೆಲಸ ಆಗಿ ನನ್ನ ಅವಶ್ಯಕತೆ ಇದ್ದಿದ್ದರೆ ಸದಾ ನನ್ನ ನೆರವಿನ ಹಸ್ತ ನೀಡುತ್ತಲೇ ಇರುತ್ತಿದ್ದೆ .ಈ ಮಾತನ್ನು ನನ್ನೊಂದಿಗೆ ಕೆಲಸ ಮಾಡಿದೆ ಎಲ್ಲಾ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘನೆ ಮಾಡುತ್ತಾರೆ. ಹೊಸ ವ್ಯವಹಾರ ವಿಭಾಗದಲ್ಲಿ ಬಹಳಷ್ಟು ದಿನ ಕೆಲಸ ಮಾಡಿದ್ದರಿಂದ ಒಂದು ರೀತಿಯ “ಪಂಟರ್” ಆಗಿಬಿಟ್ಟಿದ್ದೆ. ಬೇರೆ ಶಾಖೆಯವರು ವಿಭಾಗಿಯ ಕಛೇರಿಯವರೂ ಸಹ ಕೆಲವೊಮ್ಮೆ ನನ್ನ ಬಳಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಿ ಕೆ ರವಿ ಶಾಖಾಧಿಕಾರಿಗಳು ವರ್ಗವಾಗಿ ಹೋಗಿ ಮಂಜುನಾಥ್ ಎನ್ನುವವರು ಬಂದರು. ಅವರು ಮೊದಲು ಪತ್ರಕರ್ತರಾಗಿದ್ದರಂತೆ. ಹಾಗಾಗಿ ಸಾಹಿತ್ಯಾಸಕ್ತರು.ಎಷ್ಟೋ ಸಾಹಿತ್ಯದ ವಿಷಯಗಳನ್ನು ಮಾತನಾಡುತ್ತಿದ್ದೆವು. ಅವರು ಸಹ ನನಗೆ ಹೊಸ ವ್ಯವಹಾರ ವಿಭಾಗದಿಂದ ಬದಲಾವಣೆ ತೆಗೆದುಕೊಳ್ಳಲು ಬಿಡಲೇ ಇಲ್ಲ. ಅವರು ವರ್ಗವಾಗಿ ಹೋಗುವ ಮುಂಚೆ ಎಲ್ಲರಿಗೂ ವಿಭಾಗ ಬದಲಾವಣೆಗಳನ್ನು ಮಾಡಿದರು ಆಗ ನಾನು ತುಂಬಾ ದಿನಗಳಿಂದ ಬಯಸುತ್ತಿದ್ದ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಸಿಕ್ಕಿತು. ಅಲ್ಲಿ ಪಾಲಿಸಿ ಸಾಲ ಕೊಡುವ ವಿಭಾಗ ಮತ್ತು ಇತರೆ ಕೆಲಸಗಳ ವಿಭಾಗ ನನ್ನ ಪಾಲಿಗೆ ಬಂತು. ನನ್ನದೇ ಹೆಸರಿನ ಕೆ ಸುಜಾತ ಎನ್ನುವವರು ಮತ್ತು ಶಿವಶಂಕರ್ ಎನ್ನುವವರು ನನಗೆ ಸಹಾಯಕರು ಮೂರು ಜನವು ಸೇರಿ ಹಳೆಯ ಬಾಕಿ ಇದ್ದದ್ದನ್ನು ಮುಗಿಸಿದಲ್ಲದೆ ಅಂದು ಅರ್ಜಿ ಕೊಟ್ಟ ಸಾಲಗಳನ್ನು ಅಂದೆ ವಿಲೇವಾರಿ ಮಾಡುವಷ್ಟು ಮಟ್ಟಕ್ಕೆ ಒಂದು ತಿಂಗಳಲ್ಲಿ ತೆಗೆದುಕೊಂಡು ಬಂದೆವು. ಅಂದಿನಿಂದ ಇಂದಿನವರೆಗೂ ನಮ್ಮ ಶಾಖೆ ಐದರಲ್ಲಿ ಅಂದು ಕೊಟ್ಟ ಅರ್ಜಿಗಳು ಅಂದೇ ವಿಲೇವಾರಿ ಆಗುವಂತೆ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನಮ್ಮ ಕಾಲದಲ್ಲಿ ಎಂದು ಹೇಳಲು ತುಂಬಾ ಸಂತೋಷವಿದೆ.ಆಗ FEAP Front End Application Programme ಹೊಸದಾಗಿ ಚಾಲ್ತಿಯಲ್ಲಿತ್ತು. 1990 ರ ದಶಕದ ಕೊನೆಯಲ್ಲಿ ಮತ್ತು 2000 ರ ಆರಂಭದಲ್ಲಿ LIC ಪರಿಚಯಿಸಿದ ಒಂದು ಮೂಲಭೂತ ಸಾಫ್ಟ್ವೇರ್ ಇದು.. ಇದಕ್ಕೂ ಮುನ್ನ ಬಹುತೇಕ ಕೆಲಸಗಳು ಹಸ್ತಪ್ರತಿ (Manual ledgers) ಅಥವಾ ಹಳೆಯ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ನಡೆಯುತ್ತಿದ್ದವು. ಅದನ್ನು ಡಿಜಿಟಲೀಕರಣಗೊಳಿಸಲು FEAP ತರಲಾಯಿತು.ಉದ್ದೇಶ: ಎಲ್.ಐ.ಸಿ ಶಾಖೆಗಳ (Branch Offices) ಕೌಂಟರ್ಗಳಲ್ಲಿ ಗ್ರಾಹಕರ ಸೇವೆಗಳನ್ನು ವೇಗಗೊಳಿಸುವುದು.ಮುಖ್ಯ ಕಾರ್ಯಗಳು: ಪಾಲಿಸಿಯ ಸದ್ಯದ ಸ್ಥಿತಿ (Policy Status), ಸಾಲ ಮತ್ತು ಪುನಶ್ಚೇತನದ ಉಲ್ಲೇಖಗಳು (Loan & Revival quotations), ಕಂತು ಪಾವತಿ (Premium payments) ಮತ್ತು ವಿಳಾಸ ಬದಲಾವಣೆಯಂತಹ ಮೂಲಭೂತ ಕೆಲಸಗಳನ್ನು ಮಾಡಲು ಇದು ಸಹಕಾರಿಯಾಗಿತ್ತು.ಕಾರ್ಯವೈಖರಿ: ಇದು ಆಯಾ ಶಾಖೆಯ ಸ್ಥಳೀಯ ಸರ್ವರ್ಗಳ (Local Servers) ಆಧಾರದ ಮೇಲೆ ಕೆಲಸ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಇವುಗಳನ್ನು ವ್ಯಾನ್ (WAN – Wide Area Network) ಮೂಲಕ ಜೋಡಿಸಲಾಯಿತು. ಕಂಪ್ಯೂಟರಿಕರಣ ಎಂದರೆ garbage in garbage out. ಹಾಗಾಗಿ ಅದಕ್ಕೆ ಕೊಡುವ ಎಲ್ಲಾ ಡಾಟಾಗಳು ಸರಿಯಾಗಿರಬೇಕು. ಹಾಗಾಗಿ ರೆಕಾರ್ಡ್ಸ್ ಗಳ ಶುದ್ಧೀಕರಣ ಅಂದರೆ purification of records ಆಗಲೇ ಬೇಕಿತ್ತು ಆ ನಿಟ್ಟಿನಲ್ಲಿ ಪಾಲಿಸಿ ಸೇವಾ ವಿಭಾಗದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇದ್ದವು ಆಗ ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದವರು ವಿಷಕಂಠನಾಯಕ್ ಅನ್ನುವವರು. ಅವರ ಸಹಕಾರದಿಂದ ನಾನು ಮತ್ತೊಬ್ಬರು ಕೆ. ಸುಜಾತ ಮತ್ತು ಶಿವಶಂಕರ್ ಅವರುಗಳು ಸೇರಿ ಕಂಪ್ಯೂಟರ್ ಸಹಾಯದಿಂದ ಕೊಡುತ್ತಿದ್ದ ಎರರ್ ಲಿಸ್ಟ್ ಗಳನ್ನು ಸರಿ ಮಾಡುತ್ತಾ ಹೋಗುತ್ತಿದ್ದೆವು. ಮೂಲಭೂತವಾಗಿ ನಮ್ಮದು ಜಿಎಸ್ಡಿ ಅಂದರೆ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಯೋಜನೆ ಅಡಿ ಬರುವ ಪಾಲಿಸಿಗಳು ಹೆಚ್ಚು ಇದ್ದದ್ದು ಬೇರೆ ಕಡೆಯಿಂದ ಬಂದ ಪಾಲಿಸಿಗಳಲ್ಲಿ ಡಾಟಾ ಎಷ್ಟೋ ಬೇರೆ ವೇಳೆ ತಪ್ಪಾಗಿ ಇರುತ್ತಿತ್ತು ಕೆಲವೊಮ್ಮೆ ಪಾಲಿಸಿಗಳು ವರ್ಗವಾಗಿ ಬಂದಿರುತ್ತಲೇ ಇರುತ್ತಿರಲಿಲ್ಲ ಈ ಎಲ್ಲಾ ಸಮಸ್ಯೆಗಳಿಂದಾಗಿ ಎರರ್ ಗಳು ಹೆಚ್ಚುತ್ತಾ ಹೋಗುತ್ತಿದ್ದವು ಅದು ಒಂದು ರೀತಿ ಮಧ್ಯಂತರ ಸ್ಥಿತಿ ಆದುದರಿಂದ ಪೂರ್ತಿ ಮಾನ್ಯುಯಲ್ ಆಗಿ ಮಾಡಲು ಆಗದೆ ಕಂಪ್ಯೂಟರ್ ಮೂಲಕ ಮಾಡಲು ಮಾಹಿತಿ ಸರಿ ಇರದೆ ತುಂಬಾ ಕಷ್ಟ ಆಗುತ್ತಿತ್ತು ಹಾಗಾಗಿ ಎಲ್ಲಾ ಎರರ್ ಗಳನ್ನು ಸರಿಪಡಿಸಬೇಕಾಗಿದ್ದು ಆಗ ಮೂಲಭೂತವಾಗಿ ಆಗಬೇಕಿದ್ದ ಕಾರ್ಯ. ಇದಕ್ಕಾಗಿ ಮೊದಲು ವಿವಿಧ ರೀತಿಯ ಲಿಸ್ಟ್ಗಳನ್ನು ಡಿಪಿ ವಿಭಾಗದ ಪ್ರೋಗ್ರಾಮರ್ ರಾಮಚಂದ್ರ ಅವರು ತೆಗೆದುಕೊಡುತ್ತಿದ್ದರು ನಂತರ ನಾವು ನಮ್ಮ ವಿಭಾಗದಲ್ಲಿ ಫೈಲ್ಗಳನ್ನು ತೆಗೆದು ಸರಿಯಾದ ಮಾಹಿತಿಗಳನ್ನು ಕಂಪ್ಯೂಟರ್ಗೆ ಹಾಕಿ ಅದನ್ನು ಸರಿ ಮಾಡುತ್ತಿದ್ದೆವು. ತುಂಬಾ ಖುಷಿ ಪಟ್ಟ ಕೆಲಸ ಅದು ಅದಕ್ಕೆ ಸಹಕಾರ ನೀಡಿದ ವಿಶ್ವಕಂಠನಾಯಕ್ ಸರ್ ಸುಜಾತ ಮತ್ತು ಶಿವಶಂಕರ್ ಹಾಗೂ ರಾಮಚಂದ್ರ ಹಾಗೂ ಕೇಳಿದ ಸಮಯಕ್ಕೆ ಸರಿಯಾಗಿ ಫೈಲ್ಗಳನ್ನು ರೆಕಾರ್ಡ್ಸ್ ನಿಂದ ತೆಗೆದುಕೊಡುತ್ತಿದ್ದ ಪ್ರತಾಪ್ ಎಲ್ಲರಿಗೂ ಈ ಮೂಲಕ ಮತ್ತೊಮ್ಮೆ ಧನ್ಯವಾದಗಳು ಈ ರೀತಿ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಹೈದರಾಬಾದ ಕರ್ನಾಟಕ ವಿಮೋಚನಾ ಸಂಘಟನೆ ರಜಾಕಾರರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಹೈದರಾಬಾದ ಕರ್ನಾಟಕ ಭಾಗದ ಜನರು ತಮ್ಮ ಜೀವ ಮತ್ತು ಮಾನವನ್ನು ಉಳಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂಥ ಸಂದರ್ಭದಲ್ಲಿ *ಹೈದರಾಬಾದ ಕರ್ನಾಟಕ ವಿಮೋಚನಾ* ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಡಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಕೇವಲ ಆಶ್ರಯ ಕೇಂದ್ರಗಳಾಗಿರದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ, ಸಂಘಟನೆ ಮತ್ತು ಜನಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ಈ ಗಡಿ ಶಿಬಿರಗಳಲ್ಲಿ ಆರ. ವಿ. ಬಿಡಪ್ಪ, ಭೀಮಣ್ಣ ಕಂಡ್ರೆ, ಕಿಸಾನ್ ರಾವ ಚಿಡುಗುಪ್ಕರ, ಪ್ರಭುರಾವ ಕಂಬಳಿವಾಲೆ, ಸಂಗ್ರಾಮಪ್ಪ ಶಟಗಾರ ಮೊದಲಾದ ಧೀಮಂತ ನಾಯಕರು ಪ್ರಮುಖ ಪಾತ್ರ ವಹಿಸಿದರು. ಅವರ ದೇಶಭಕ್ತಿ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು. ಈ ನಾಯಕರಿಗೆ ಜಯದೇವಿ ತಾಯಿಯವರು ಪ್ರೇರಣೆಯಾಗಿದ್ದರು. ಹೈದರಾಬಾದ ವಿಮೋಚನ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾದರು. ಗಡಿ ಶಿಬಿರಗಳಲ್ಲಿ ನಡೆಯುತ್ತಿದ್ದ ಸಭೆಗಳು, ತರಬೇತಿಗಳು ಮತ್ತು ಸ್ವಾತಂತ್ರ್ಯದ ಸಂದೇಶಗಳು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಇನ್ನಷ್ಟು ಪ್ರಜ್ವಲಿಸಿದವು. ಹೋರಾಟವು ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯರೂ ಸಮಾನವಾಗಿ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೃಢ ಸಂಕಲ್ಪ ಅವರಲ್ಲಿ ಮೂಡಿತು. ಹೀಗಾಗಿ, ರಜಾಕಾರರ ದೌರ್ಜನ್ಯದಿಂದ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಗಡಿ ಶಿಬಿರಗಳ ಸ್ಥಾಪನೆಗೆ ಕಾರಣವಾದರೆ, ಶಿಬಿರಗಳಲ್ಲಿ ನಡೆದ ಸಂಘಟನೆ ಮತ್ತು ನಾಯಕರ ಮಾರ್ಗದರ್ಶನವೇ ಜಯದೇವಿ ತಾಯಿಯವರನ್ನು ಹೈದರಾಬಾದ ವಿಮೋಚನ ಹೋರಾಟದ ಸಕ್ರಿಯ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು. ವಿ.ಎನ. ಪಾಟೀಲ, ಸಿಧ್ಧಲಿಂಗಪ್ಪ ಕಾಕನಾಳೆ, ಮಹದೇವಪ್ಪ ಮೀಸೆ, ಮೊದಲಾದವರು ಸೇರಿ ಜಿಲ್ಲಾಮಟ್ಟದಲ್ಲಿ *ಕರ್ನಾಟಕ ಏಕೀಕರಣ ಸಮಿತಿಯ ಘಟಕವನ್ನು* ಹುಟ್ಟುಹಾಕಿದರು ಮುಂದೆ ಜಿಲ್ಲಾ ಸಮಿತಿಯು ತಾಲೂಕ ಸಮಿತಿಯ ರಚನೆಯ ಪ್ರಕ್ರಿಯೆ ಯಾಗಿ ಪ್ರಾರಂಭಿಸಿತು .ಜಯದೇವಿ ತಾಯಿಯವರು ಈ ಸಮಿತಿಯ ಕಾರ್ಯಗಳನ್ನು ನಿರಂತರವಾಗಿ ಭಾಗವಹಿಸುತ್ತಿದ್ದರು. ಜಯದೇವಿ ತಾಯಿಯವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಯಿತು.*ಕನ್ನಡ ಮಕ್ಕಳು ಕನವರಿಸಿ ಕರೆದಾಗಇನ್ನಾವ ನೆವ ಹೇಳದೆ ನನ ಮನತನ್ನಿಂದ ತಾನೇ ಎಳದಿತ್ತ* ಎಂದೆನ್ನುತ ಜಯದೇವಿತಾಯಿ ಅವರುಕನ್ನಡದ ಮಕ್ಕಳು, ಕನ್ನಡ ನಾಡು ಹಾಗೂ ಕನ್ನಡದ ಹಿತಕ್ಕಾಗಿ ಹೋರಾಟಕ್ಕೆ ಕರೆ ನೀಡಿದಾಗ, ಯಾವುದೇ ಕಾರಣ ಅಥವಾ ನೆಪ ಹೇಳದೆ ಅವರ ಮನಸ್ಸು ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಲು ಮುಂದಾರು ಎನ್ನುತ್ತಾರೆ. ಇದು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ, ನಾಡಿನ ಬಗ್ಗೆ ಇರುವ ಜವಾಬ್ದಾರಿ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ.ಜಯದೇವಿ ತಾಯಿಯವರು ಕನ್ನಡ ಭಾಷೆ, ಗಡಿಭಾಗ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟದ ಸಮಯದಲ್ಲಿ ಕನ್ನಡಿಗರ ನೋವು, ಅವರ ಆಶಯಗಳು ಮತ್ತು ಏಕತೆಯ ಕರೆಗೆ ಸ್ಪಂದಿಸಿದ ಅವರು ದೇಶಪ್ರೇಮ, ಕನ್ನಡಾಭಿಮಾನ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿವೆ. ಕನ್ನಡಿಗರ ಕರೆಯ ಮುಂದೆ ಯಾವುದೇ ವೈಯಕ್ತಿಕ ನೆಪಕ್ಕೂ ಅವಕಾಶ ನೀಡದೆ, ಕನ್ನಡ ನಾಡಿನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಜಯದೇವಿ ತಾಯಿಯವರ ಹೋರಾಟದ ಮನೋಭಾವವನ್ನು ವ್ಯಕ್ತಪಡಿಸುತ್ತವೆ. ಸ್ವಾತಂತ್ರ್ಯಾನಂತರವೂ ಹೈದರಾಬಾದ ಸಂಸ್ಥಾನದ ಆಡಳಿತದ ಅವಶೇಷಗಳು ಅನೇಕ ಪ್ರದೇಶಗಳ ಜನರ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಅದರಲ್ಲೂ ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿದ್ದ ಬೀದರ ಜಿಲ್ಲೆಯ ಭಾಲ್ಕಿ ಮತ್ತು ಉದಗೀರ ತಾಲೂಕಿನ ಜೆವರಗಿ ಪ್ರದೇಶಗಳ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸಿದರು. ಕನ್ನಡ ಪ್ರದೇಶದ ಜನರ ಮೇಲೆ ಸೇಡು ತೀರಿಸುವ ಕ್ರಮವೆಂಬಂತೆ, ಈ ಭಾಗದ ಜಾಗೀರು ಜಮೀನುಗಳ ಮೇಲೆ ಒಂದಕ್ಕೆ ಮೂರು ಪಟ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಈ ಭಾರೀ ತೆರಿಗೆ ಜೀವನಾಡಿಯನ್ನೇ ಕಸಿದುಕೊಳ್ಳುವಂತಾಯಿತು. ಸಾಲದ ಹೊರೆಯಲ್ಲಿ ಸಿಲುಕಿದ ರೈತರು ತಮ್ಮ ಕುಟುಂಬಗಳನ್ನು ಸಾಕುವುದು, ಕೃಷಿ ನಡೆಸುವುದು ಕೂಡ ಕಷ್ಟಕರವಾಯಿತು.ಈ ಸಂದರ್ಭದಲ್ಲಿ ಜನರ ಆಶಾಕಿರಣವಾಗಿ ಮುಂದೆ ಬಂದವರು ಜಯದೇವಿ ತಾಯಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜಸೇವಕಿಯಾಗಿ ಮತ್ತು ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರ ಮೇಲೆ ಜನರಿಗೆ ಅಪಾರ ವಿಶ್ವಾಸವಿತ್ತು. ತಮ್ಮ ಸಂಕಷ್ಟವನ್ನು ಪರಿಹರಿಸಬಲ್ಲ ನಾಯಕತ್ವ ಅವರಲ್ಲಿದೆ ಎಂಬ ನಂಬಿಕೆಯಿಂದ ಭಾಲ್ಕಿ ಮತ್ತು ಉದಗೀರ ಭಾಗದ ರೈತರು ಜಯದೇವಿ ತಾಯಿಯವರನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.ಜನರ ನೋವನ್ನು ತಮ್ಮದೇ ನೋವೆಂದು ಭಾವಿಸಿದ ಜಯದೇವಿ ತಾಯಿ ಸಮಸ್ಯೆಯನ್ನು ವೈಯಕ್ತಿಕ ಮನವಿಯಾಗಿ ಪರಿಗಣಿಸಿ…. ಮೊದಲು ದೊಡ್ಡ ಸಾರ್ವಜನಿಕ ಸಭೆಯನ್ನು ಕರೆದು ರೈತರ ಸವಾಲುಗಳನ್ನು ಆಲಿಸಿದರು. ತೆರಿಗೆಯಿಂದ ಉಂಟಾದ ಅನ್ಯಾಯ, ರೈತರ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು. ನಂತರ ಜನರು ಒಮ್ಮತವನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡರು. ಜನರಿಂದ ಸಹಿಗಳನ್ನು ಸಂಗ್ರಹಿಸಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮನವಿಯನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲು ಮುಂದಾದರು.ಆ ಸಂದರ್ಭದಲ್ಲಿ ಹೈದರಾಬಾದ ರಾಜ್ಯದ *ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ಕೆ. ವೆಲ್ಲೋಡಿ* ಅವರನ್ನು ಜಯದೇವಿ ತಾಯಿ ಭೇಟಿ ಮಾಡಿದರು. ರೈತರ ಪರವಾಗಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿ, ಹೆಚ್ಚುವರಿ ತೆರಿಗೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ವಿವರಿಸಿದರು. ಕನ್ನಡ ಪ್ರದೇಶದ ರೈತರು ಎದುರಿಸುತ್ತಿದ್ದ ಸಂಕಷ್ಟವನ್ನು ಅಂಕಿ-ಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರು. ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ನಿಲುವಿನಿಂದ ಪ್ರಭಾವಿತರಾದ ವೆಲ್ಲೋಡಿ ಅವರು ತೆರಿಗೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡುವ ಭರವಸೆಯನ್ನು ನೀಡಿದರು. ಈ ಆಶ್ವಾಸನೆ ರೈತರಿಗೆ ದೊಡ್ಡ ನಿರಾಳತೆಯನ್ನು ತಂದಿತು. ಜಯದೇವಿ ತಾಯಿಯವರ ಪ್ರಯತ್ನದಿಂದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಹೊರೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಹರಕರಬಿ ಮೈಮ್ಯಾಲ |ಗಾಳಿ ಬಿಸಿಲು ಮಳಿಅರ ಹೊಟ್ಟೀಲಿ ಉಂಡು ದುಡಿತಾನ- ನೆಲದವ್ವ ಮರಮರ ಮರಗ್ಯಾಳ ಮನದಾಗ|| ರೈತನು ಗಾಳಿ, ಬಿಸಿಲು, ಮಳೆ ಎಂಬ ಪ್ರಕೃತಿಯ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಅರ್ಧ ಹೊಟ್ಟೆ ಊಟ ಮಾಡಿಕೊಂಡೇ ಹೊಲದಲ್ಲಿ ದುಡಿಯುವ ಸ್ಥಿತಿಯನ್ನು ಬಿಂಬಿಸಿದ್ದಾರೆ.. ರೈತನು ತನ್ನ ಬದುಕನ್ನೇ ಭೂಮಿಗೆ ಅರ್ಪಿಸಿದರೂ, ಬೆಳೆ ಹಾಳಾದರೂ, ಸಾಲದ ಹೊರೆ, ಬೆಲೆಯ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ದುಡಿಯುತ್ತಲೇ ಇರುತ್ತಾನೆ. ಅವನ ನಿರಂತರವಾದ ಸಮಸ್ಯೆಗಳನ್ನು ನೋಡುತ್ತಿದ್ದ ಭೂತಾಯಿಯೇ ಮರ ಮರ ಮರುವುಳೆಂದು ವರ್ಣಿಸುತ್ತಾರೆ. ಕೆಸರಾಯ್ತು ಕೈಯ|ಬಾಯಿಯೂ ಕೆಸರಾಯ್ತು ಮೊಸರು ಕಡಿತ ಸಿಗಲಿಲ್ಲ -ರೈತಣ್ಣಉಸ್ಸೆಂದಾನ ತನ್ನ ಬಾಳೇಕ|| ರೈತನ ಶ್ರಮ, ತ್ಯಾಗ, ನೋವು ಮತ್ತು ಸಂಕಷ್ಟಮಯ ಜೀವನವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತ ಹೇಳತಾರೆ. ಹಾಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮೇಲೆ ಹೇರಿದ ಕೇರಿಗೆಯನ್ನು ಆದಷ್ಟು ಕಡಿಮೆ ಮಾಡಿಕೊಟ್ಟು ಹಿಂದಿರುಗುತ್ತಾರೆ. ಜಯದೇವಿ ತಾಯಿಯವರ ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಯಾವುದೇ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲಿಲ್ಲ. ಮನವಿ, ಸಾರ್ವಜನಿಕ ಸಭೆಗಳು, ಜನಜಾಗೃತಿ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.ಸತ್ಯ, ಅಹಿಂಸೆ ಮತ್ತು ನ್ಯಾಯ ಎಂಬ ಗಾಂಧೀಜಿ ಬೋಧಿಸಿದ ಮೌಲ್ಯಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ದ್ವೇಷ ಅಥವಾ ಪ್ರತೀಕಾರದ ಮನೋಭಾವವಿಲ್ಲದೆ, ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸಿ ಜನರ ಹಕ್ಕುಗಳನ್ನು ಕಾಪಾಡಿದರು. ಜಯದೇವಿ ತಾಯಿಯವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೋರಾಡಿದರೆ.. ಸ್ವಾತಂತ್ರ್ಯಾನಂತರವೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಜನನಾಯಕಿ ಆಗಿದ್ದರು, ಎಂಬುವದ ಸಾಬೀತುಪಡಿಸುತ್ತದೆ. ರೈತರ ಪರವಾಗಿ ನಿಂತು, ಅವರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಟ್ಟ ಅವರ ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ಅಹಿಂಸಾ ಮಾರ್ಗದ ಮೇಲಿನ ನಂಬಿಕೆ ಇಂದಿಗೂ ಜನಸೇವೆಗೆ ಆದರ್ಶವಾಗಿದೆ. ಸವಿತಾ ದೇಶಮುಖ
ಶರಣರ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ ಸಾವಿಲ್ಲದ ಶರಣರು ಲಿಂಗತತ್ವ ನಿಷ್ಠ. ಹಡಪದ ಅಪ್ಪಣ್ಣ ಸಂಗಮೇಶ್ವರ ಅಪ್ಪಣ್ಣ ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಕಾಲ – ಹನ್ನೆರಡನೆಯ ಶತಮಾನ ಬಸವ ಸಮಕಾಲೀನ ಶರಣಒಟ್ಟು ವಚನಗಳು – 102 +250=352ಅಂಕಿತ: ಬಸವಪ್ರಿಯ ಕೂಡಲ ಚೆನ್ನಸಂಗಮದೇವ ,/ ಬಸವ ಪ್ರಿಯ ಚೆನ್ನಬಸವಣ್ಣ ಊರು- ಕೂಡಲ ಸಂಗಮ ,ಮುಸುಬಿನಾಳ ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನಕಾರರು ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿ. ಇವರು ಬಸವಣ್ಣನವರ ಬಲಗೈ ಬಂಟರೆಂದು ಪ್ರಸಿದ್ಧರು. ‘ಅನುಭವ ಮಂಟಪದಲ್ಲಿ’ ಪ್ರಮುಖ ಪಾತ್ರ ವಹಿಸಿದ್ದರು. ಇವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರ ಪತ್ನಿ ಲಿಂಗಮ್ಮನವರು ಕೂಡ ವಚನಗಾರ್ತಿಯಾಗಿದ್ದರು ಅಪ್ಪಣ್ಣನ ಹೆಸರಿನ ಹಿಂದೆ ಸೇರಿದ ‘ಸಂಗಮೇಶ್ವರ’ (ಕೂಡಲಸಂಗಮ) ಈತನ ಸ್ಥಳವಾಗಿರಬೇಕು. ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ಬೋಧೆ ಕಾಯಕ ದಾಸೋಹದ ಮಹತ್ವ ಮುಂತಾದ ಅನೇಕ ವಿಷಯಗಳ ಮೇಲೆ ಭಿನ್ನ ಚಿಂತನೆ ನಡೆಸಿದವರು. ಎಲ್ಲವೂ ತಾತ್ವಿಕವಾಗಿವೆ. ಅನ್ಯಮತ ಖಂಡನೆ, ಶಿವಪಾರಮ್ಯ ಸ್ಥಾಪನೆಗೆ ವಿಶೇಷ ಸ್ಥಾನ ಸಂದಿದೆ. ಶರಣಸ್ತುತಿ, ಶೂನ್ಯಸಿಂಹಾಸನ, ಅನುಭವ ಮಂಟಪಗಳ ಉಲ್ಲೇಖ, ಪ್ರಭುದೇವರು ಕಲ್ಯಾಣಕ್ಕೆ ಬಂದ ಪ್ರಸಂಗ ಮತ್ತು ಆರೋಗಣೆ ನಡೆಸಿದ ಸಂದರ್ಭಗಳನ್ನು ಪ್ರಸ್ತಾಪಿಸುವುದು ಮಹತ್ವದ ಅಂಶಗಳೆನಿಸಿವೆ. ತುಂಬ ದೀರ್ಘವಾಗಿದ್ದು ಗದ್ಯಲಕ್ಷಣವನ್ನು ಹೊಂದಿದ ರಚನೆಗಳ ಜೊತೆಗೆ ಮುಕ್ತಕ ರೂಪದ ವಚನಗಳೂ ಸಮಾವೇಶಗೊಂಡಿವೆ. ಲಿಂಗತತ್ವ ಸಂಗಮೇಶ್ವರ ಅಪ್ಪಣ್ಣನಿಗೆ ಅಪಾರವಾಗಿದೆ. ತರ್ಕ ಶಕ್ತಿ ಅಗಾಧವಾಗಿದೆ. ಲಿಂಗಾಯತ ತತ್ತ್ವ ಪ್ರತಿಪಾದನೆ ವಿಶೇಷವಾಗಿ ಕಂಡು ಬರುತ್ತದೆ. ಶಿವಪಾರಮ್ಯ, ಅನ್ಯಮತ ಖಂಡನೆ, ಬ್ರಾಹ್ಮಣರ ಕರ್ಮಠತನದ ಖಂಡನೆ, ಅಷ್ಟಾವರಣ, ಪಂಚಾಚಾರಗಳ ವಿವರಣೆ ಇವನ ವಚನಗಳಲ್ಲಿ ಬಂದಿದೆ. ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಇತ್ತೀಚಿನ ನನ್ನ ಅಧ್ಯಯನ ಮತ್ತು ಸಂಶೋಧನೆಯಿಂದ ನಾನು ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಎಂದು ಖಚಿತ ಪಡಿಸಲು ಇಚ್ಛಿಸುತ್ತೇನೆ . ಇದಕ್ಕೆ ಕೆಲ ಪುರಾವೆಗಳನ್ನೂ ಇಲ್ಲಿ ನೀಡುತ್ತಿದ್ದೇನೆ. 1 ವಚನಾಂಕಿತ – ಬಸವಪ್ರಿಯ ಕೂಡಲ ಚೆನ್ನಸಂಗಮದೇವ -ಈ ವಚನಾಂಕಿತ ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣನವರ ವಚನಾಂಕಿತವಾಗಿದ್ದು ಇಬ್ಬರೂ ಒಬ್ಬರೇ ಎನ್ನುವ ನಿರ್ಧಾರ ಬಲವಾಗುತ್ತದೆ. 2 ಇಬ್ಬರ ವಚನಗಳಲ್ಲಿ -ಲಿಂಗ ತತ್ವ ಷಟಸ್ಥಲ, ಸಿದ್ಧಾಂತ ಅಪಾರವಾಗಿ ಕಂಡು ಬರುತ್ತದೆ. ವಚನ ರಚನಾ ಕೌಶಲ್ಯ,ಭಾವ,ಚಿಂತನೆಗಳು ಒಂದೇ ರೀತಿಯಾಗಿ ಕಂಡು ಬರುತ್ತವೆ.3 ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪಣನವರ ವಚನಗಳಲ್ಲಿ ತಮ್ಮ ಬಸವಣ್ಣನವರ ಸಂಬಂಧವು ಎದ್ದು ಕಾಣುತ್ತದೆ,ಹೀಗಾಗಿ ಇಬ್ಬರೂ ಬೇರೆ ಬೇರೆ ಅಲ್ಲ ಒಬ್ಬರೇ ಎಂದು ನಿರ್ಧರಿಸಬಹುದು. 3 ಹಡಪದ ಅಪ್ಪಣ್ಣ ಬಾಗೇವಾಡಿಯ ಹತ್ತಿರದ ಮುಸುಬಿನಾಳ ಗ್ರಾಮದವನು, ಅವನ ಹೆಂಡತಿ ಲಿಂಗಮ್ಮ ಅದೇ ಊರಿನ ಹೂಗಾರ ನಾಗಪ್ಪನ ಮಗಳು ಎಂದು ಇತ್ತೀಚಿನ ಅಧ್ಯಯನ ಮತ್ತು ಸಂಶೋಧನೆಯಿಂದ ತಿಳಿದು ಬರುತ್ತದೆ. ಬಾಲಕ ಬಸವಣ್ಣ ಬಾಗೇವಾಡಿ ಅಗ್ರಹಾರದ ವಿರುದ್ಧ ಬಂಡೆದ್ದು ಮನೆ ಬಿಟ್ಟು ಹೋಗುವಾಗ ಅಕ್ಕ ಅಕ್ಕನಾಗಮ್ಮ ಪತಿ ಶಿವಸ್ವಾಮಿ ಜೊತೆಗೆ ಹಿರಿಯ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅವರ ಜೊತೆಗೆ ಕೂಡಲ ಸಂಗಮಕ್ಕೆ ಹೋಗಿರಬಹುದು , ಹನ್ನೆರಡು ವರುಷ ಕೂಡಲ ಸಂಗಮ್ಮದಲ್ಲಿ ಇದ್ದು ತನ್ನ ಕಾಯಕ ಮಾಡುತ್ತಾ ಬಸವಣ್ಣನವರ ಅಧ್ಯಯನಕ್ಕೆ ಸಹಾಯ ಮಾಡುತ್ತ ಮುಂದೆ ಮಂಗಳವೆಡೆಗೆ ಹೋಗಿ ಬಸವಣ್ಣನವರ ನೆರಳಂತೆ ನಿಂತದ್ದು ಸ್ಪಷ್ಟವಾಗಿ ಕಂಡು ಬರುತ್ತದೆ. 4 ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲಸಂಗಮವಾಗಿದ್ದು ಬಾಗೇವಾಡಿ ಅಗ್ರಹಾರ ತೊರೆದ ಬಸವಣ್ಣನಿಗೆ ಆಶ್ರಯಕ್ಕೆ ಬಂದಿದ್ದು ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲ ಸಂಗಮ, ಸಹೋದರ ಮಾವ ಬಲದೇವನು ಸಹಾಯ ಮಾಡಿದ್ದೂ ಗಮನಾರ್ಹ, ಇದನ್ನು ಜಾನಪದ ಕವಿಗಳು ಹೇಳುತ್ತಾರೆ. 5 ಬಹಳ ವರ್ಷಗಳವರೆಗೆ ಹಡಪದ ಅಪ್ಪಣ್ಣ ಕೂಡಲ ಸಂಗಮದಲ್ಲಿ ಇದ್ದ ಕಾರಣ ಅವನನ್ನು ಕಲ್ಯಾಣದ ಶರಣರು ಆರಂಭದಲ್ಲಿ ಸಂಗಮೇಶ್ವರ ಅಪ್ಪಣ್ಣ ಎಂದು ಕರೆದಿರಬಹುದು, ಮುಂದೆ ಅಪ್ಪಣ್ಣ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಗೊಂಡ ಮೇಲೆ ಆಡಳಿತದ ಆಸ್ಥಾನದ ಕಡತಗಳನ್ನು,ಕಚೇರಿ ಪತ್ರಗಳನ್ನು,ಮಂತ್ರಿಯ ಆದೇಶಗಳನ್ನು ಇಡಲು ಅಡಪ ( ಕಟ್ಟಿಗೆಯ ಡಬ್ಬಿ) ತನ್ನೊಂದಿಗೆ ಇಡುತ್ತಿದ್ದನು. ಕಲ್ಯಾಣಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಬಲು ದೊಡ್ಡದು, ಬಸವಣ್ಣನವರ ಯೋಜನೆ ಚಿಂತನಾಕ್ರಮದಲ್ಲಿ ಪಾಲ್ಗೊಂಡ ವೈಚಾರಿಕ ಶರಣ, ಬಸವಣ್ಣನವರ ಆಸೆಯಂತೆ ಹಡಪದ ಅಪ್ಪಣ್ಣನವರು ನೀಲಾಂಬಿಕೆಯನ್ನು ಕೂಡಲ ಸಂಗಮಕ್ಕೆ ಕರೆ ತರಲು ಹೇಳಿದಾಗ, ಅವರ ಆದೇಶದಂತೆ ಅಪ್ಪಣ್ಣನವರು ನೀಲಮ್ಮನನ್ನು ಕರೆದುಕೊಂಡು ಬರುವಾಗ ತಂಗಡಗಿಗೆ ಬಂದಾಗ ಬಸವಣ್ಣನವರ ಸಾವಿನ ಸುದ್ಧಿ ಕೇಳಿ ಬರುತ್ತದೆ, ಆಗ ನೀಲಮ್ಮ ಮತ್ತು ಅಪ್ಪಣ್ಣನವರು ಅಲ್ಲಿಯೇ ಐಕ್ಯವಾಗಿದ್ದು ನದಿಯ ದಡದಲ್ಲಿ ಇಬ್ಬರ ಸಮಾಧಿಯ ಕುರುಹು ಸ್ಮಾರಕಗಳು ಕಂಡು ಬರುತ್ತವೆ. ಸಂಗಮೇಶ ಅಪ್ಪಣ್ಣನವರ ಕೆಲ ವಚನಗಳಅಂಗ ಲಿಂಗವೆಂದರಿದಾತಂಗೆ, ಅಂಗದಲೆ ಐಕ್ಯ.ಕಂಗಳು ಲಿಂಗವೆಂದರಿದಾತಂಗೆ, ಕಂಗಳಲೆ ಐಕ್ಯ.ಕರವೆ ಲಿಂಗವೆಂದರಿದಾತಂಗೆ, ಕರದಲೆ ಐಕ್ಯ.ಈ ತ್ರಿವಿಧದ ನೆಲೆಯ, ಶ್ರುತಿ ಸ್ಮೃತಿಗಳರಿಯವು.ಎಮ್ಮ ಬಸವಪ್ರಿಯ ಕೂಡಲಚನ್ನಸಂಗಮದೇವನಲ್ಲಿಈ ಇರವ ಶರಣರೆ ಬಲ್ಲರು./1 ಅಂಗದ ಕಳೆ ಲಿಂಗದಲ್ಲಿ ಲೀಯವಾಗದು.ಲಿಂಗದ ಕಳೆ ಅಂಗದಲ್ಲಿ ಲೀಯವಾಗದು.ಮಾತಿನಮಾಲೆಯ ಬೊಮ್ಮವೇತರದೊ ?ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು.ಪ್ರಾಣ ಜಂಗಮವಾದಡೆ ಅರಿದಿರಬೇಕು.ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ.ಹಿರಿಯರು ಬಂದಡೆ ಇದಿರೆದ್ದು ಬಾರದವರ ಮನೆಗೆ ಅಡಿಯ ಇಡೆವೆಂದು,ಬಸವಪ್ರಿಯ ಕೂಡಲಚನ್ನಸಂಗನ ಶರಣರು ಕಾಡಿಹರು ಕಾಣಾ,ಸಂಗನಬಸವಣ್ಣಾ./2 ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು.ಸಂದ ಪುರಾತನರ ನೆನೆಯುತ್ತಿರಬೇಕು.ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು.ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ./4 ಅಗ್ಗದ ಹರಿಬ್ರಹ್ಮರ ಮರೆದೊಮ್ಮೆ ಹರಂಗೆ ಸಮವೆಂದಡೆ,ಅವನು ಚಾಂಡಾಲನು. ಅವನ ಮುಖವ ನೋಡಲಾಗದು.ಅದೆಂತೆಂದಡೆ: ಯೋ ಮಹಾದೇವಮನ್ಯೇನ ಹೀನದೇವೇನ ದುರ್ಮತಿಃ |ಸಕೃತ್ಸಾಧಾರಣಂ ಬ್ರೂಯಾದಂತ್ಯಜಾನಾಂತ್ಯಜೋಂತಜಃ ||ಇಂತೆಂದುದಾಗಿ, ನಿಮಗೆ ಕಿರುಕುಳದೈವಂಗಳ ಸಮವೆಂದುಬಗಳುವನ ಬಾಯಿ ಪಾಕುಳತಪ್ಪದು,ಬಸವಪ್ರಿಯ ಕೂಡಲಚನ್ನಸಂಗಮದೇವಾ./5 ಅಜಹರಿಸುರರೆಲ್ಲರು ಅಳಿದವರಲ್ಲದೆ, ಉಳಿದವರಿಲ್ಲ.ಶಿವನೆ ನಿತ್ಯನೆಂದು ಹೊಡೆವಡುತ್ತಿವೆ ವೇದ.ಉತೈನಂ ವಿಶ್ವಾಭೂತಾನಿ ಸದೃಷ್ಟೋ ಮೃಡಯಾತಿನಃ |ನಮೋಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಡುಷೇ ||ಎಂಬ ಶ್ರುತಿ, ಬಸವಪ್ರಿಯ ಕೂಡಲಚನ್ನಸಂಗಯ್ಯನೊರ್ವನೆನಿತ್ಯನೆಂದು ಹೊಗಳುತ್ತಲಿದೆ./7 ಅನಿಮಿಷನಾದ ನಿಬ್ಬೆರಗಿನ ಲಿಂಗೈಕ್ಯನು, ಭಾವ ನಿರ್ಭಾವವನೆಯ್ದಿ,ಜ್ಞಾನವೆ ಪರಮಾಶ್ರಯವಾಗಿಪ್ಪ ಲಿಂಗೈಕ್ಯನು,ಮಹವನೊಳಕೊಂಡ ಮಹಿಮ ಲಿಂಗೈಕ್ಯನು,ಬಸವಪ್ರಿಯ ಕೂಡಲ ಚನ್ನಸಂಗಯ್ಯಾ ನಿಮ್ಮ ಶರಣ ಪ್ರಭುದೇವರು./9 ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು,ಮನೆಮನೆದಪ್ಪದೆ ತಿರುಗುವೆನು.ಅವರ ಇಚ್ಛಿಗೆ ಅನುಮಾನವಿಡಿದು ನುಡಿವೆನು.ಅವರ ಮನಧರ್ಮವನರಿಯದೆ ನುಡಿದೆನಾದಡೆ,ಅನೇಕ ಪರಿಯಲ್ಲಿ ಭಂಗಬಡುವೆನು.ದಿಟದ ಭಕುತನಂತೆ,ಪುರಾತರ ವಚನಂಗಳ ಉದರ ನಿಮಿತ್ತವಾಗಿ ಬಳಸುವೆನು.[ಕಡು] ಪಾಪಿಗಿನ್ನೇನು ಹದನಯ್ಯ,ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ ?/10 ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ ಬೆಲ್ಲವ ಕಂಡು, ಎಲ್ಲರೂ ಮೆಲಬಂದರು.ಬೆಲ್ಲಗಳಿದ್ದಡೆ ನಿಲಲೀಸದೆ ಎನ್ನ ಕಾಡುತ್ತಿದಾರೆಯೆಂದು,ಆ ಬೆಲ್ಲವನಲ್ಲಿಯೆ ನುಂಗಿದಡೆ, ಹಲ್ಲು ಮುರಿದವು.ಮೆಲಬಂದವರೆಲ್ಲ ಅಲ್ಲಿಯೆ ಬಯಲಾದರು.ನಾ ನಿಮ್ಮಲ್ಲಿ ಕೂಡಿ ಸುಖಿಯಾದೆನಯ್ಯಾ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ./11 ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ.ಮರ ಬೆಂದು ನಿಂದುರಿಯಿತ್ತು , ಮಣ್ಣು ಜರಿದು ಬಿದ್ದಿತ್ತು.ಉರಿ ಹೊಗೆ ನಂದಿತ್ತು , ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು.ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು .ಇದ ಕಂಡು, ನಾ ಬೆರಗಾಗಿ ನೋಡುತ್ತಿದ್ದೆನಯ್ಯಾ,ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ./12 ಅಲ್ಲಿಂದತ್ತ ಪಶ್ಚಿಮಚಕ್ರಕ್ಕೆ ಏಕದಳ ಪದ್ಮ,ಹವಣಿಸಬಾರದ ತೇಜ, ಏಕಾಕ್ಷರ,ಕುರುಹಿಡಬಾರದ ನಾದ, ಅಪ್ರದರ್ಶನ ವರ್ಣ,ನಿಭರ್ಿನ್ನ ಶಕ್ತಿ, ಸರ್ವಾತ್ಮನೆಂಬ ಜಂಗಮವೆ ಅಧಿದೇವತೆ.ಪರಿಪೂರ್ಣ ಜಂಗಮಲಿಂಗ, ಅಕ್ಷರಾಕ್ಷ[ರ]ತೀತ, ನಿಶ್ಶಬವಾಗಿಪ್ಪುದು.ಇಂತಪ್ಪ ಲಿಂಗಾಂಗವೆ ತಾನಾಗಿ, ಅವಿರಳ ಜಂಗಮಭಕ್ತಿಯ ಮಾಡಬಲ್ಲಾತನೆ,ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿಸಂಗನಬಸವಣ್ಣನಯ್ಯಾ, ಪ್ರಭುವೆ./16 ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು,ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು,ಎನ್ನರಿವು ನಿಮ್ಮ ಘನದೊಳಗೆ ಸವೆದು, ನಿಶ್ಚಲ ನಿಜೈಕ್ಯವಾಗಿ,ಬಸವಪ್ರಿಯ ಕೂಡಲಚೆನ್ನಸಂಗಯ್ಯಾ,ನೀ ನಾನೆಂಬುದೇನಾಯಿತ್ತೆಂದರಿಯೆನು./24 ಹಡಪದ ಅಪ್ಪಣ್ಣನವರ ಕೆಲ ವಚನಗಳು ಅಂಗ ಲಿಂಗವಾಯಿತ್ತೆಂಬಿರಿ, ಲಿಂಗ ಅಂಗವಾಯಿತ್ತೆಂಬಿರಿ.ಅಂಗ ಲಿಂಗ ಸಂಬಂಧ ಎಲ್ಲರಿಗೆ ಎಂತಾಯಿತ್ತು ಹೇಳಿರಣ್ಣಾ.ಅಂಗ ಲಿಂಗ ಸಂಬಂಧವಾದರೆ, ಗುರುವಿನಲ್ಲಿ ಗುಡ್ಡನಾಗಿರಬೇಕು,ಲಿಂಗದಲ್ಲಿ ನಿಷ್ಠನಾಗಿರಬೇಕು, ಜಂಗಮದಲ್ಲಿ ಅವಧಾನಿಯಾಗಿರಬೇಕು.ಇವ ಮೂರರಲ್ಲಿ ದೂರಾಗಿಪ್ಪರ ಎನಗೊಮ್ಮೆ ತೋರದಿರಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ ಕರವನರಿದಂಗೆ ಕಮಲದ ಹಂಗೇಕೊ?ಇರವನರಿದಂಗೆ ಪರದ ಹಂಗೇಕೊ ?ಪರವನರಿದಂಗೆ ಇರವದ ಹಂಗೇಕೊ?ಇಹ ಪರವೆಂಬ ಉಭಯವಳಿದ ಶರಣಂಗೆಮರ್ತ್ಯದ ನರರ ಹಂಗೇಕೊ ಹೇಳಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ? ಮನವನರಿದಂಗೆ ಮತದ ಹಂಗೇಕೊ ?ನಿತ್ಯವನರಿದಂಗೆ ತೀರ್ಥದ ಹಂಗೇಕೊ ?ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೊ ?ಜ್ಯೋತಿಯನರಿದಂಗೆ ಕತ್ತಲೆಯ ಹಂಗೇಕೊ?ಲೋಕವನರಿದಂಗೆ ವ್ಯಾಕುಲದ ಹಂಗೇಕೊ?ಈ ತೆರನನರಿದಂಗೆ ಮುಂದಾವ ಭೀತಿಯುಂಟು ಹೇಳಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ ? ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪನವರ ವಚನಗಳಲ್ಲಿ ಸಾಮ್ಯತೆಯಿದೆ . ಬಹುತೇಕ ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ತಾತ್ವಿಕ ಚಿಂತೆಗಳಲ್ಲಿ ಸಾಮ್ಯತೆ ಎದ್ದು ಕಾಣುತ್ತದೆ. ಹೀಗಾಗಿ ಇವರಿಬ್ಬರೂ ಒಬ್ಬರೇ ಎನ್ನುವ ತೀರ್ಮಾನಕ್ಕೆ ಬರಲಾಗುವುದು. ಹಡಪದ ಅಪ್ಪಣ್ಣ ಕ್ಷೌರಿಕ ವೃತ್ತಿಯವನೇ ? ಹೀಗಾಗಿ ಅಡಪ ಜನಬಳಕೆಯಲ್ಲಿ ಹಡಪ ಆಗಿದೆ ಅಡಪವನ್ನು ಇಟ್ಟುಕೊಂಡವ ಅಡಪದವ ಅಥವಾ ಹಡಪದ ಎಂದು ಬಂದಿದೆ.ಕಲ್ಯಾಣದ ಚಾಲುಕ್ಯರ ಕಳಚೂರ್ಯರ ರಾಜ್ಯದ ವಿಸ್ತಾರ ಎಷ್ಟಿತ್ತಂದರೆ ಛಪ್ಪನ್ನೈವತ್ತಾರು ರಾಜ್ಯಗಳಿದ್ದವು ಎಂದು ಬಸವಣ್ಣನವರ ವಚನವೊಂದರಲ್ಲಿ ಕಾಣಬಹುದು. ಮಹಾರಾಷ್ಟ್ರದ ಮಂಗಳವೆಡೆ, ಉದ್ಗೀರ, ಲಾತೂರ, ಸೋಲಾಪುರ, ತುಳಜಾಪುರ, ಪಂಡರಾಪುರ ಜತ್ತ ಅಕ್ಕಲಕೋಟ ಮುಂತಾದ ಪ್ರದೇಶಗಳ ಭೂ ಪ್ರದೇಶವು ಆಂಧ್ರ ವೆಂಗಿಪಳು ಕರ್ನಾಟಕ ಮುಂತಾದ ಪ್ರದೇಶಗಳನ್ನು ಮುಂತಾದ ಕಡೆಗಳಲ್ಲಿ ಚಾಲುಕ್ಯ ರಾಜ್ಯರ ಆಡಳಿತದ ಶಿಲ್ಪ ಕಲೆ ಶಾಸನಗಳು ಮತ್ತು ಗುಡಿ ಗೋಪುರಗಳ ಶೈಲಿ ಚಾಲುಕ್ಯರದ್ದಾಗಿತ್ತು. ಬಿಜ್ಜಳನೂ ಕ್ಷೌರಿಕ ಕುಲದ ಶೈವನೆಂದು ಕೆಲ ಸಂಶೋಧಕರು ತಮ್ಮ ಅಭಿಮತ ವ್ಯಕ್ತ ಪಡಿಸಿದ್ದಾರೆ. ಹಡಪದ ಅಪ್ಪಣ್ಣ ಅವನ ಹೆಂಡತಿ ಮುಸುಬಿನಾಳ ಹೂಗಾರ ನಾಗಪ್ಪನ ಮಗಳು ಲಿಂಗಮ್ಮ ಎಂದು ತಿಳಿದು ಬರುತ್ತದೆ. ಬಸವಣ್ಣ ಬಿಜ್ಜಳನ ಪ್ರಧಾನಿ ಅರ್ಥ ಸಚಿವ ದಂಡನಾಯಕನಾಗಿದ್ದನು ಇವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣ ಕಲ್ಯಾಣದಲ್ಲಿ ಕ್ಷೌರಿಕ ವೃತ್ತಿಯನ್ನು ಕೈಗೊಂಡಿದ್ದನು ಎಂದೆನ್ನುವುದು ನನ್ನ ದೃಷ್ಟಿಯಲ್ಲಿ ಸರಿ ಅನಿಸುವುದಿಲ್ಲ. ರಾಜ್ಯಾಡಳಿತ ದಾಖಲೆಗಳು ಕಾಗದ ಪಾತ್ರಗಳು ಬೇರೆ ಬೇರೆ ರಾಜರ ಸಾಮಂತರ ಒಲೆಗಳು ಮುಂತಾದ ಅನೇಕ ಮಹತ್ತರ ದಾಖಲೆಗಳನ್ನು ಸಂಗ್ರಹಿಸಿ ಇಡಲು ಕಟ್ಟಿಗೆಯಿಂದ ಮಾಡಿದೆ ಒಂದು ಡಬ್ಬಿ ಅದಕ್ಕೆ ಈಗಲೂ ಅಡಪ ಎಂದು ಉತ್ತರ ಕರ್ನಾಟಕದಲ್ಲಿ ಕರೆಯುತ್ತಾರೆ. ಮಹಾ ಮನೆಯಲ್ಲಿ ಪ್ರಸಾದವಾದ ಮೇಲೆ ತಾಂಬೂಲ ವಿತರಿಸುವ ರೇಚಣ್ಣನೂ ಅಡಪವನ್ನು ಹೊಂದಿದ್ದನ್ನು . ಅಡಪವನ್ನು ಹೊಂದಿದವ ಅಡಪದವ ಅಥವಾ ಹಡಪದ ಎಂಬ ತಪ್ಪು ಉಚ್ಚಾರಣೆಯಿಂದಾಗಿ ಹಡಪದ ಎಂದು ಹೆಸರು ಬಂತು. ಕ್ಷೌರಿಕ ಕಾರ್ಯವನ್ನು ಮಾಡುವವರು ಈಗಲೂ ಕೂಡ ಹಳ್ಳಿಯಲ್ಲಿ ಅಡಪವನ್ನು ಇಟ್ಟುಕೊಂಡು ಮನೆ ಮನೆಗೆ ಹೋಗಿ ಕ್ಷೌರಿಕ ಸೇವೆ ಮಾಡುತ್ತಾರೆ. ಹಡಪದ ಅಪ್ಪಣ್ಣನವರು ಕ್ಷೌರಿಕ ಕುಲದಲ್ಲಿ ಹುಟ್ಟಿದರೂ ಸಹಿತ ಅವರು ಪ್ರಧಾನಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ಮಾಡಿದರು ಎಂದು ತಿಳಿದು ಬರುತ್ತದೆ. ಚೆನ್ನಬಸವಣ್ಣನವರ ಮೇಲೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಪ್ರಭಾವ ಬಸವಣ್ಣನವರು ಬಾಗೇವಾಡಿ ಅಗ್ರಹಾರವನ್ನು ಬಿಟ್ಟು ಕೂಡಲ ಸಂಗಮಕ್ಕೆ ಹೋಗುವಾಗ ಅಕ್ಕನಾಗಮ್ಮ ಮತ್ತು ಅವಳ ಪತಿ ಶಿವಸ್ವಾಮಿಗಳ ಜೊತೆಗೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರೂ ಹೋಗಿದ್ದರು. ಹಡಪದ ಅಪ್ಪಣ್ಣ ಕೂದಲ ಸಂಗಮ್ಮದಲ್ಲಿ ಮಾದಲಾಂಬಿಕೆಯ ತವರು ಮನೆಯಲ್ಲಿ ಕೃಷಿ ಮಾಡುತ್ತಿರಬಹುದು ಅಥವಾ ಬಸವಣ್ಣನವರು ತಮ್ಮ ಶಿಕ್ಷಣವನ್ನು 12 ವರುಷ ಕೂಡಲ ಸಂಗಮದಲ್ಲಿ ಮಾಡುತ್ತಿರುವಾಗ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರಬಹುದು. ಬಲದೇವರ ಆಮಂತ್ರಣದ ಮೇರೆಗೆ ಬಸವಣ್ಣ ಅಕ್ಕನಾಗಮ್ಮ ಬಾಲಕ ಚೆನ್ನಬಸವಣ್ಣ ಮತ್ತು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಮಂಗಳವೇಡೆಗೆ ಹೋದರು. ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ
ಧಾರಾವಾಹಿ ಸಂಗಾತಿ-34 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ರಣವೀರನಾಗಬೇಕಾದ ಮಣಿಪುರದರಸ ಮಣಿದ ನನಗೆ ‘ಮಣಿಪುರದರಸು ಬಭ್ರುವಾಹನ ನಿಮ್ಮ ಯಜ್ಞಾಶ್ವವನ್ನು ಕಟ್ಟಿಹಾಕಿದ್ದಾನೆ. ಬಿಡಿಸಿಕೊಂಡುಹೋಗುವ ಸಾಮರ್ಥ್ಯವಿದ್ದರೆ ಯುದ್ಧರಂಗದಲ್ಲಿ ಪರಾಕ್ರಮ ತೋರುವವರಾಗಬೇಕು’ ಎಂಬ ಸಂದೇಶವದು ನಮ್ಮನ್ನು ತಲುಪಿತು. ಅದಾಗಲೇ ಸೂರ್ಯ ಅಸ್ತಂಗತನಾಗಿದ್ದ. ಆ ದಿನ ಯುದ್ಧ ನಡೆಯುವುದು ಸಾಧ್ಯವಿರಲಿಲ್ಲ. ಇನ್ನೇನಿದ್ದರೂ ಮರುದಿನವಷ್ಟೇ ಕದನಕೋಲಾಹಲ ಆರಂಭ.ನನ್ನ ಆಪ್ತರ ಜೊತೆ ಮರುದಿನದ ಯುದ್ಧತಂತ್ರಗಳನ್ನು ಚರ್ಚಿಸಿದೆ. ಸಮರ್ಥನೆನಿಸಿಕೊಂಡ ಬಭ್ರುವಾಹನನನ್ನು ಹೀನಾಯವಾಗಿ ಸೋಲಿಸಿದರೆ ನನ್ನ ವಿಜಯಮಾಲೆಗೆ ಹೊಸದೊಂದು ಕುಸುಮದ ಆಗಮನವದು ಖಚಿತ ಎನಿಸಿತು. ಬಭ್ರುವಾಹನನ ಸ್ಮರಣೆಯಲ್ಲಿಯೇ ಇರುಳು ಕಳೆಯಿತು.ಬೆಳಕು ಮೂಡಿತು. ನಿತ್ಯಕರ್ಮಗಳನ್ನು ಪೂರೈಸಿದೆ. ಜಪತಪಾದಿಗಳನ್ನು ಮುಗಿಸಿದೆ. ಕೃಷ್ಣ ಪಾದಪದ್ಮಗಳನ್ನು ನೆನೆದೆ. ನಮ್ಮ ಪಾಳಯದ ವೀರರೆಲ್ಲರನ್ನೂ ಕರೆಸಿದೆ. ಅವರ ಜೊತೆಗೆ ಯುದ್ಧರಂಗಕ್ಕೆ ಹೊರಟೆ.ಅನುಸರಿಸುತ್ತಿತ್ತು ಅನುಸಾಲ್ವಕನ ಸೇನೆ ನನ್ನನ್ನು. ಯುಕ್ತಿಯ ಯಾದವ ಚತುರಂಗವದು ಜೊತೆಗಿತ್ತು. ಒಡನೆಯೇ ಬಂತು ವೃಷಕೇತುವಿನ ವ್ಯಗ್ರಸೇನೆ. ಯುದ್ಧಚತುರ ಯೌವನಾಶ್ವನ ದಂಡು ಹಿಂದೆಯೇ ಇತ್ತು. ಹಂಸಧ್ವಜನ ಹೋರಾಟದ ಪಡೆಯದು ಮುನ್ನುಗ್ಗುತ್ತಿತ್ತು. ಘನವಾದ್ಯಗಳ ಧ್ವನಿಯದು ಮೊಳಗಿರಲು ನಾವೆಲ್ಲರೂ ಬಂದುಸೇರಿದೆವು ರಣರಂಗವನ್ನು.ನಾನು ಮುಂಚೂಣಿಯಲ್ಲಿದ್ದೆ. ಬಭ್ರುವಾಹನನ ಆಗಮನಕ್ಕಾಗಿ ನನ್ನ ಕಣ್ಣು ಕಾತರಿಸುತ್ತಿತ್ತು. ಅಪಾರ ಜನಸಮೂಹದೊಂದಿಗೆ ಮಣಿಪುರದೊಡೆಯ ಬರುತ್ತಿರುವುದು ಕಂಡಿತು. ನೋಡಿದೆ! ಸರಿಯಾಗಿ ಇನ್ನೊಮ್ಮೆ ನೋಡಿದೆ! ಯುದ್ಧೋನ್ಮುಖವಾಗಿ ಬರುತ್ತಿರುವ ದಂಡು ಅದಲ್ಲ ಎಂದು ತೋರಿತು ನನಗೆ.ಘನವಾದ್ಯದ ಮೊರೆತವಿರಲಿಲ್ಲ. ಕಾಳಗದ ಆರ್ಭಟವದು ಅಲ್ಲಿರಲಿಲ್ಲ. ಶುಭಸೂಚಕವಾದ ಇಂಪು ವಾದನಗಳ ಧ್ವನಿಯದು ಕೇಳಿಬರುತ್ತಿತ್ತು. ಕಳಶ, ಕನ್ನಡಿಗಳನ್ನು ಹಿಡಿದು ಅಲಂಕೃತರಾಗಿ ಮಂದಗಮನೆಯರಾಗಿ ಸಾಗಿಬರುತ್ತಿದ್ದರು ಲಲಿತಾಂಗಿಯರು. ಬ್ರಾಹ್ಮಣರಿದ್ದರು ಆ ಮೆರವಣಿಗೆಯಲ್ಲಿ, ವೇದಮಂತ್ರಗಳನ್ನು ಪಠಿಸುತ್ತಾ. ಈ ಬಗೆಯಲ್ಲಿ ಯುದ್ಧಕ್ಕೆ ಆಗಮಿಸುವುದೂ ಇದೆಯೇ! ಎಂದು ಅಚ್ಚರಿಯಾಯಿತು ನನಗೆ.ಮೆರವಣಿಗೆಯ ಮೊಟ್ಟಮೊದಲಲ್ಲಿದ್ದ ಬಭ್ರುವಾಹನ. ಹತ್ತಿರ ಬಂದAತೆಲ್ಲಾ ಅವನ ರೂಪವದು ಸ್ಪಷ್ಟವಾಯಿತು. ಒಂದಷ್ಟು ವರ್ಷಗಳಿಗೆ ಮೊದಲು ನಾನು ಹೇಗಿದ್ದೆನೋ ಹಾಗೆಯೇ ಇದ್ದಾನೆ.ನೇರವಾಗಿ ಬಂದ ನನ್ನೆಡೆಗೆ, ನಗುವನ್ನು ಸೂಸುತ್ತಾ. ಕದನ ಭಾವವದು ಅವನ ಮುಖದಲ್ಲಿ ಎಳ್ಳಷ್ಟೂ ಕಾಣಿಸಲಿಲ್ಲ. ನನಗೆ ತೀರಾ ಸನಿಹದವನಾಗಿ ನಿಂತ, ಆನಂದದಿAದ ನನ್ನ ಮೊಗವನ್ನು ನಿಟ್ಟಿಸುತ. ಒಡನೆಯೇ ತನ್ನ ಶಿರದಲ್ಲಿ ಶೋಭಿಸುತ್ತಿದ್ದ ಕಿರೀಟವನ್ನು ತೆಗೆದ. ನನ್ನ ಪಾದಗಳ ಬಳಿಯಿಟ್ಟ. ಅದು ಶರಣಾಗತಿಯ ಸಂಕೇತ. ಅಚ್ಚರಿಯಾಯಿತು ನನಗೆ. ಯುದ್ಧಕ್ಕೂ ಮೊದಲೇ ಶರಣು ಬಂದನೇ ಈತ! ಎನಿಸಿತು. ಮುಂದೇನು ಮಾಡಲಿದ್ದಾನೋ ಎಂಬAತೆ ನೋಡಿದೆ. ಅನರ್ಘ್ಯ ರತ್ನಗಳನ್ನು ನನ್ನ ಪಾದಮೂಲಕ್ಕೆ ಸುರಿದ. ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ಹಾಗೆಯೇ ಸಾಷ್ಟಾಂಗ ಪ್ರಣಾಮವನ್ನೇ ಮಾಡಿದ, ನೆಲದ ಮೇಲೆ ಒರಗಿ.ತಕ್ಷಣವೇ ಅಲ್ಲಿ ನೆರೆದಿದ್ದ ಮಣಿಪುರದ ಜನರು, ಹೆಂಗಳೆಯರು ನನ್ನ ಮೇಲೆ ಮುತ್ತಿನ ಮಳೆಗರೆದರು. ಬಗೆಬಗೆಯ ಕಾಣಿಕೆಗಳನ್ನು ನನಗಿತ್ತರು ಅಲ್ಲಿಯ ಸಚಿವರು. ಪರಾಕ್ರಮದ ಮಾತು, ಹರಿತ ಬಾಣಗಳ ಪ್ರಯೋಗ, ಹೀಗಳೆವ ಹೀನನನುಡಿ ಇವುಗಳನ್ನೆಲ್ಲಾ ನಿರೀಕ್ಷಿಸಿ ಹೋಗಿದ್ದ ನಾನು ಬಭ್ರುವಾಹನನ ವಿನಯಶೀಲತೆ, ಅಲ್ಲಿನ ಜನರ ಮುತ್ತಿನ ಮಳೆ, ಅಪೂರ್ವ ಕಾಣಿಕೆಗಳು ಇದನ್ನೆಲ್ಲಾ ಕಂಡು ವಿಸ್ಮಯಚಕಿತನಾದೆ. ನನ್ನ ಜೊತೆಗಿದ್ದ ನನ್ನ ಆಪ್ತರೂ ಸಹ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿದ್ದರು. ಕೇಳಿದೆ ಬಭ್ರುವಾಹನನಲ್ಲಿ, “ಏನಿದೆಲ್ಲಾ?! ಯಾಕೆ ಈ ಪರಿಯ ವಿನಯಶೀಲತೆ?!”ಒಡನೆಯೇ ಅವನು ನನ್ನನ್ನು ‘ತಂದೆ’ ಎಂದು ಸಂಭೋದಿಸಿದ. ನನ್ನ ಕಣ್ಣುಗಳರಳಿದವು, ಚಕಿತತೆಯಿಂದ. “ನಾನು ನಿಮ್ಮ ಮಗ. ನೀವಂದು ತೀರ್ಥಯಾತ್ರೆಗೆಂದು ಇಲ್ಲಿಗೆ ಬಂದಾಗ ನಿಮ್ಮಿಂದ ಜನಿಸಿದವನು ನಾನು. ನನ್ನ ತಾಯಿ ಚಿತ್ರಾಂಗದೆ. ಪ್ರೀತಿಯಿಂದ ಸಲಹಿದವಳು ಉಲೂಪಿ. ನೀವೆನ್ನ ಜನಕ ಎಂಬ ಸತ್ಯವನ್ನು ಅರಿಯದೆಯೇ ಕಟ್ಟಿದೆ ಕುದುರೆಯನ್ನು. ಕ್ಷಮಿಸಬೇಕು ನಾ ಮಾಡಿದ ಈ ಬಗೆಯ ತಪ್ಪನ್ನು” ಎಂದವನು ತಪ್ಪು ಮಾಡಿ ಸಿಕ್ಕಿಬಿದ್ದ ಎಳೆಮಗುವಿನಂತೆ ಕಾಲಿಗೆ ಬಿದ್ದ.ನಾನು ಏನೊಂದು ನುಡಿಯನ್ನೂ ಆಡಲಿಲ್ಲ. ನನ್ನನ್ನೇ ನೋಡುತ್ತಿದ್ದರು ನನ್ನಾಪ್ತರು, ಆತ್ಮೀಯರು. ಇದಾವ ಹೊಸ ಬಾಂಧವ್ಯವಿದು ಬಂದಪ್ಪಿದೆ ಈ ಅರ್ಜುನನನ್ನು ಎಂಬ ಭಾವವಿತ್ತು ಅವರ ಆ ಕಣ್ಣೋಟದಲ್ಲಿ. ಬಭ್ರುವಾಹನ ನನ್ನ ಮಗ ಎನ್ನುವುದನ್ನು ಸಂಪೂರ್ಣವಾಗಿ ನಂಬಿದAತಿತ್ತು ಅವರ ಮಾತುಗಳು.“ನಿನ್ನ ಮಗನಾದ ಈ ಬಭ್ರುವಾಹನ ಮಹಾ ಪರಾಕ್ರಮಿ. ವೈಭವಯುತನಾಗಿದ್ದಾನೆ. ಹೊಗಳಿಕೆಗೆ ಅರ್ಹನೆನಿಸಿಕೊಂಡಿದ್ದಾನೆ. ನಿನ್ನನ್ನೇ ಹೋಲುತ್ತಾನೆ ರೂಪದಲ್ಲಿ. ಪಾದವನ್ನಪ್ಪಿರುವ ಈತನನ್ನು ಕ್ಷಮಿಸದೆಯೇ ಸುಮ್ಮನೆ ಏಕೆ ನಿಂತೆ?! ಮನ್ನಿಸು ಅವನನ್ನು” ಎಂದರು ಅವರೆಲ್ಲರೂ.ಹೀಗೆ ಬಭ್ರುವಾಹನ ನಡೆದುಕೊಳ್ಳುವುದರ ಹಿಂದೆ ಒಂದು ಬಲವಾದ ಕಾರಣವಿತ್ತು. ಹಿಂದಿನ ದಿನ ನಮ್ಮ ಕುದುರೆಯನ್ನು ಕಟ್ಟಿಸಿದ್ದ ಆತ ನಮ್ಮೆದುರಿನ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದ. ಈ ಸಮಯದಲ್ಲಿಯೇ ಅವನ ತಾಯಿಗೆ ಈ ವಿಷಯ ಗೊತ್ತಾಯಿತಂತೆ. ತಕ್ಷಣವೇ ಅವನ ಬಳಿಹೋಗಿ, “ಅರ್ಜುನ ನಿನ್ನ ತಂದೆ. ಅವನ ಕುದುರೆಯನ್ನು ಕಟ್ಟಿರುವುದು ಸರಿಯಲ್ಲ” ಎಂದಳAತೆ. ಈ ವಿಚಾರವನ್ನು ಸುಬುದ್ಧಿಯ ಜೊತೆಗೆ ಚರ್ಚಿಸಿದನಂತೆ ಬಭ್ರುವಾಹನ. “ತಂದೆಯೆAದು ತಿಳಿಯದೇ ಇದ್ದಾಗ ಕುದುರೆಯನ್ನು ಕಟ್ಟಿಸಿದವ ನೀನು. ಈಗ ನಿಜ ವಿಚಾರ ತಿಳಿದ ಬಳಿಕವೂ ಹಾಗೆಯೇ ನಡೆದುಕೊಳ್ಳುವುದು ಉಚಿತವಲ್ಲ” ಎಂಬ ಸಲಹೆಯನ್ನು ನೀಡಿದನಂತೆ ಸುಬುದ್ಧಿ. ಈ ಕಾರಣಕ್ಕೇ ಬಭ್ರುವಾಹನ ಯುದ್ಧಚಂತನೆಯನ್ನು ತೊರೆದು, ಶರಣಾಗತನಾಗಿ ನನ್ನೆದುರಿಗೆ ಬಂದದ್ದು.ನನಗಂತೂ ಬಭ್ರುವಾಹನ ನುಡಿದದ್ದೆಲ್ಲವೂ ಕಟ್ಟುಕಥೆ ಎಂದೇ ತೋರಿತು. ನನ್ನನ್ನು ಎದುರಿಸಲಾರದ ಅಧೈರ್ಯಕ್ಕೆ ಒಳಗಾದವನು ಸುಳ್ಳು ಹೇಳುತ್ತಿದ್ದಾನೆ ಎನಿಸಿತು. ಹೀಗಿದ್ದಾಗಲೇ ನಮ್ಮವರಾಡಿದ “ಕ್ಷಮಿಸು ಮಗನನ್ನು” ಎಂಬ ಮಾತು ನನ್ನನ್ನು ಕೆರಳಿಸಿತು. ಉಗ್ರನೋಟ ಬೀರಿದೆ ಬಭ್ರುವಾಹನನೆಡೆಗೆ… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-125 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಗೆ ಡಯಾಲಿಸಿಸ್ ಮಾಡಿಸಲು ಮಗಳ ಪ್ರಯತ್ನ ಮರುದಿನ ಬೆಳಿಗ್ಗೆ ಸುಮತಿಯ ಎರಡನೇ ಮಗಳು ತನ್ನ ತಾಯಿಯ ಚಿಕಿತ್ಸೆಯನ್ನು ಮಾಡುತ್ತಿದ್ದ ವೈದ್ಯರ ಬಳಿಗೆ ಹೋದಳು. ಅವಳನ್ನು ನೋಡಿದ ವೈದ್ಯರು…. ಏನಮ್ಮ ನಿನ್ನ ತಾಯಿ ಹೇಗಿದ್ದಾರೆ?…. ಎಂದು ಕೇಳಿದರು. ಹಿಂದಿನ ದಿನ ತಂಗಿಯು ಹೇಳಿದ್ದ ವಿಚಾರವನ್ನು ಮಾತನಾಡಲೆಂದು ಅವಳು ವೈದ್ಯರಲ್ಲಿಗೆ ಬಂದಿದ್ದಳು…. _ಸರ್ ನನ್ನ ತಾಯಿಯ ಆರೋಗ್ಯ ಸುಧಾರಿಸಲು ಬೇರೆ ಯಾವ ಚಿಕಿತ್ಸೆಯೂ ಇಲ್ಲವೇ?”… ಎಂದು ಕೇಳಿದಳು. ಆಗ ವೈದ್ಯರು…. “ಇದೆಯಮ್ಮಾ….. ಆದರೆ ಅದು ಬಹಳ ದುಬಾರಿ…. ನಿನ್ನ ತಾಯಿಯ ಆಂತರಿಕ ಅಂಗಾಂಗಗಳೆಲ್ಲವೂ ತಮ್ಮ ಕಾರ್ಯವನ್ನು ನಿರ್ವಹಿಸಲು ವಿಫಲವಾಗಿವೆ….. ಆದರೆ ಆಗಾಗ ಡಯಾಲಿಸಿಸ್ ಮಾಡಿಸುವ ಮೂಲಕ ನಿನ್ನ ತಾಯಿಯ ಆರೋಗ್ಯವನ್ನು ಸ್ವಲ್ಪ ಹೆಚ್ಚು ಕಾಲ ಸುಧಾರಿಸಿಕೊಳ್ಳುವಂತೆ ಮಾಡಬಹುದು”….. ಎಂದು ವೈದ್ಯರು ಹೇಳಿದ ಈ ವಿಚಾರ ಆ ಹುಡುಗಿಗೆ ಸರಿಯಾಗಿ ತಿಳಿದಿರಲಿಲ್ಲ ಹಾಗಾಗಿ…._ “ಡಯಾಲಿಸಿಸ್ ಎಂದರೇನು, ಸರ್?”… ಎಂದು ಕೇಳಿದಳು….”ನಮ್ಮ ಶರೀರವನ್ನು ನಿರಂತರವಾಗಿ ಶುದ್ಧೀಕರಣಗೊಳಿಸಲು ಮುಖ್ಯವಾಗಿ ಕಿಡ್ನಿಗಳು ಕೆಲಸ ಮಾಡಬೇಕು…. ಅವುಗಳು ಕೆಲಸ ಮಾಡಲು ವಿಫಲವಾದಾಗ ರಕ್ತದಲ್ಲಿನ ವಿಷಕಾರಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಕೃತಕವಾಗಿ ಫಿಲ್ಟರ್ ಮಾಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯುತ್ತಾರೆ…. ಇದನ್ನು ಮಾಡಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಕಾಲ ನಿನ್ನ ತಾಯಿ ಜೀವಂತವಾಗಿರಬಹುದು…. ಆದರೆ ಇದನ್ನು ಆಗಾಗ ಮಾಡಿಸುತ್ತಿರಬೇಕಾಗುತ್ತದೆ…. ಇದರ ಖರ್ಚು ಅಧಿಕ…. ಎಂದರು”….. “ಹಾಗಾದರೆ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಬಹುದಲ್ಲವೇ?”… ಎಂದು ಕೇಳಿದಳು. ಅವಳ ಮಾತಿಗೆ,… “ಹೌದು ಆಕೆಯು ಹೆಚ್ಚಿನ ಕಾಲ ಬದುಕುಳಿಯಬೇಕಾದರೆ ಈ ಚಿಕಿತ್ಸೆಯನ್ನು ನಿಮ್ಮ ತಾಯಿಗೆ ಕೊಡಿಸಲೇಬೇಕು”…. ಎಂದಾಗ….” ಸರ್ ದಯವಿಟ್ಟು ಆದಷ್ಟು ಬೇಗ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಿಸಿ”…. ಎಂದು ಆ ಹುಡುಗಿ ಕೇಳಿಕೊಂಡಾಗ, ಅವಳ ಮುಗ್ದತೆಯನ್ನು ಅರಿತ ವೈದ್ಯರು…. “ಮಗು ಈ ಚಿಕಿತ್ಸೆಯನ್ನು ಇಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊಡಲು ಸಾಧ್ಯವಿಲ್ಲ…. ಅದಕ್ಕೆ ಬೇಕಾದ ಉಪಕರಣಗಳು ಇಲ್ಲಿಲ್ಲ…. ಈ ಚಿಕಿತ್ಸೆಯನ್ನು ಕೊಡಲು ವಿಶೇಷ ಯಂತ್ರವು ಬೇಕಾಗಿದೆ…. ಇದು ಬಹಳ ಅಪರೂಪಕ್ಕೆ ಈ ಚಿಕಿತ್ಸೆಗೆಂದೇ ವಿಶೇಷವಾದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ”…. ಎಂದು ವೈದ್ಯರು ಹೇಳಿದಾಗ…. “ಯಾವ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಕೊಡಬಹುದು?… ಎಂದು ಕೇಳಿದಳು,…. “ಬೆಂಗಳೂರಿನ ಕಿಡ್ನಿ ಫೌಂಡೇಶನ್ ಎನ್ನುವ ಆರೋಗ್ಯ ಸಂಸ್ಥೆಯಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ…. ಸಾಧ್ಯವಾದರೆ ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಮ್ಮ”…. ಎಂದು ವೈದ್ಯರು ಹೇಳಿದರು. ಅದನ್ನು ಕೇಳಿದ ಹುಡುಗಿಯ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಏನು ಮಾಡಬೇಕು ಎನ್ನುವುದು ಹೊಳೆಯಲಿಲ್ಲ. ವೈದ್ಯರಿಗೆ ಧನ್ಯವಾದ ತಿಳಿಸಿ, ಕೊಠಡಿಯಿಂದ ಹೊರ ನಡೆದಳು. ಆಸ್ಪತ್ರೆಯ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡು ಆಲೋಚನೆ ಮಾಡ ತೊಡಗಿದಳು. ಅಕ್ಕ-ಬಾವನಿಗೆ ಹೇಳಿದರೆ ಹೇಗೆ? ಅವರು ಏನಾದರೂ ಸಹಾಯ ಮಾಡಬಹುದೇ? ಹಾಗೆ ಯೋಚಿಸಿದಾಗ ಅವರಿಂದ ಅದು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸಿತು. ಏಕೆಂದರೆ ಅವರು ಕೂಡ ಹೆಚ್ಚು ಹಣವಂತರಾಗಿರಲಿಲ್ಲ. ಬಾವ ಟಿಂಬರ್ ಕೆಲಸದಿಂದ ಬರುವ ಆದಾಯದಲ್ಲಿ ಅಕ್ಕ ಮತ್ತು ಮಕ್ಕಳ ಖರ್ಚು ವೆಚ್ಚ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ತಾಯಿಯ ತಮ್ಮಂದಿರು ಹಾಗೂ ನೆಂಟರಿಷ್ಟರನ್ನು ಕೇಳುವಂತೆ ಇಲ್ಲ. ತಾಯಿಯ ಎರಡನೇ ತಮ್ಮ ಅವರ ಕೈಲಿ ಆಗುವಷ್ಟು ಮತ್ತು ಅವರ ಶಕ್ತಿಯನ್ನೂ ಮೀರಿ ಹಲವು ಸಲ ನಮಗೆ ಸಹಾಯ ಮಾಡಿದ್ದಾರೆ. ಇನ್ನು ನೆಂಟರಿಷ್ಟರು ಇದ್ದರೂ ಕೂಡ ಅಮ್ಮನ ಕಷ್ಟಕರ ಜೀವಿತ ಹಾಗೂ ಅಪ್ಪ ತೀರಿ ಹೋದ ನಂತರ ಒಬ್ಬರ ಸುಳಿವೂ ಇಲ್ಲ. ನೆಂಟರಿಷ್ಟರಾದ ಯಾರನ್ನೂ ಆಶ್ರಯಿಸದೇ ಸ್ವಾಭಿಮಾನದಿಂದ ಬದುಕಿದ ತಾಯಿ ನಮಗೂ ಅದನ್ನೇ ಕಲಿಸಿದ್ದಾರೆ. ಇನ್ನು ಉಳಿದಿರುವುದು ನಮಗೆ ಆಶ್ರಯವಿತ್ತು ನಮ್ಮ ಕಷ್ಟಕ್ಕೆ ಸದಾ ಹೆಗಲಾಗಿ ನಿಂತಿರುವವರು ನಮ್ಮ ಎಸ್ಟೇಟಿನ ದಯಾಳುವಾದ ಸಾಹುಕಾರರು ಮತ್ತು ಅವರ ಪತ್ನಿ ‘ಅಮ್ಮ’. ಅವರಲ್ಲಿ ಈ ಬಗ್ಗೆ ತಿಳಿಸಿ ನೋಡೋಣ. ಏಕೆಂದರೆ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ, ಈವರೆಗೂ ಅಮ್ಮನಿಗೆ ಬೇಕಾದ ಇನ್ಸುಲಿನ್ ಚುಚ್ಚುಮದ್ದು ಹಾಗೂ ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರೆ ಚಿಕಿತ್ಸೆಗಳಿಗೆ ಅವರು ಸಹಾಯ ಮಾಡಿದ್ದಾರೆ. ಬಹುಶಃ ಈ ವಿಚಾರ ತಿಳಿದರೆ ಖಂಡಿತ ನಮಗೆ ಏನಾದರೂ ಒಂದು ಸಹಾಯ ಮಾಡಿಯೇ ಮಾಡುತ್ತಾರೆ ಎಂಬ ವಿಚಾರ ಮನಸ್ಸಿಗೆ ಬಂದಾಗ, ನನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಇರುವಾಗಲೇ ನಾನು ಎಸ್ಟೇಟ್ ಗೆ ಹೋಗಿ ಅಲ್ಲಿ ಸಾಹುಕಾರರನ್ನು ಕಂಡು ಅವರಲ್ಲಿ ಈ ಬಗ್ಗೆ ಮಾತನಾಡಿ ವಿನಂತಿಸಿಕೊಳ್ಳುತ್ತೇನೆ. ಅವರು ಖಂಡಿತ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಮೂಡಿದ ಕೂಡಲೇ ಕುಳಿತಲ್ಲಿಂದ ಎದ್ದು ನೇರವಾಗಿ ವಾರ್ಡಿಗೆ ಹೋದಳು. ಈ ವಿಷಯವನ್ನು ತಾಯಿಗೆ ತಿಳಿಸಲಿಲ್ಲ. ಏನಾದರೂ ಒಂದು ವ್ಯವಸ್ಥೆ ಆದ ಮೇಲೆ ತಿಳಿಸಿದರಾಯ್ತು. ಈಗಲೇ ಹೇಳಿ ಮನಸ್ಸಿನಲ್ಲಿ ಇಲ್ಲದ ಆಸೆಯನ್ನು ತರಿಸುವುದು ಬೇಡವೆಂದು ತೀರ್ಮಾನಿಸಿದಳು. ತಾಯಿ ಊಟ ಮಾಡಿದ ನಂತರ ಅಲ್ಲಿಂದ ಆಶ್ರಮಕ್ಕೆ ಹೊರಟಳು. ಅವಳ ಕಾಲೇಜಿನ ಕಲಿಕೆ ಆಶ್ರಮದ ಮಕ್ಕಳಿಗೆ ಪಾಠ ಮಾಡುವುದು ಜೊತೆಗೆ ಅಮ್ಮನ ಆರೈಕೆ ಅವಳ ಗೆಳತಿಯ ಸಹಾಯದಿಂದ ನಿರಾತಂಕವಾಗಿ ನಡೆಯುತ್ತಿತ್ತು. ಆಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ ಅವರನ್ನು ಭೇಟಿ ಮಾಡಿದಳು. ನಾಳೆ ತಾನು ಕಾಲೇಜಿಗೆ ರಜೆ ಹಾಕಿ ಎಸ್ಟೇಟಿಗೆ ಹೋಗಿ ಸಾಹುಕಾರರನ್ನು ಹಾಗೂ ಅವರ ಪತ್ನಿ ‘ಅಮ್ಮ’ನನ್ನು ಕಂಡು ತನ್ನ ತಾಯಿಯ ಡಯಾಲಿಸಿಸ್ ಗೆ ಸಹಾಯವನ್ನು ಕೋರಿ, ಅಲ್ಲಿರುವ ತನ್ನ ತಂಗಿಯನ್ನು ಕಂಡು ಅವಳಿಗೆ ವಿಷಯ ತಿಳಿಸಿ ಸಂಜೆ ಪುನಹ ಆಶ್ರಮಕ್ಕೆ ಬರುರುವುದಾಗಿ ವಿನಂತಿಸಿಕೊಂಡು ಅವರ ಅನುಮತಿಯನ್ನು ಪಡೆದಳು. ಆತ ಒಬ್ಬ ದಯಾಳು ಮನುಷ್ಯನಾದ ಕಾರಣ ಹಾಗೂ ಸುಮತಿಯ ಮಗಳ ಜವಾಬ್ದಾರಿಯುತ ನಡೆಯನ್ನು ಮೆಚ್ಚುತ್ತಿದ್ದ ಕಾರಣ ಅವಳಿಗೆ ತನ್ನಿಂದಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದರು. ತನ್ನ ಗೆಳತಿಗೂ ಈ ವಿಷಯವನ್ನು ತಿಳಿಸಿದಳು. ಅವಳು…. “ನಿಶ್ಚಿಂತೆಯಿಂದ ಹೋಗಿ ಬಾ… ಇಲ್ಲಿನ ಎಲ್ಲಾ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ…. ಮೊದಲು ನಿನ್ನ ತಾಯಿಯ ಆರೋಗ್ಯದ ಕಡೆ ನಿನ್ನ ಗಮನವನ್ನು ಹರಿಸು…. ಆದಷ್ಟು ಬೇಗ ನಿನ್ನ ತಾಯಿ, ಚಿಕಿತ್ಸೆಯನ್ನು ಪಡೆಯುವಂತಾಗಲಿ”… ಎಂದಳು.
ಧಾರಾವಾಹಿ ಸಂಗಾತಿ–27 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ *ನಿಜಾಂ ಪ್ರಾಂತಿಕ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡವಚನ ಸಾಹಿತ್ಯದ ಜಾಗೃತಿ* ಹನ್ನೆರಡನೇ ಶತಮಾನದ ಶರಣರ ವಚನಗಳು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದವು. ಈ ವಚನಗಳ ಪ್ರಭಾವವು ಇಂದಿನ ಕಲ್ಯಾಣ ಕರ್ನಾಟಕ ಹೈದರಾಬಾದ ಕರ್ನಾಟಕ ಪ್ರದೇಶದ ಗಡಿಭಾಗಗಳಲ್ಲಿಯೂ ಆಳವಾಗಿ ಬೇರೂರಿತ್ತು.ನಿಜಾಂ ಆಡಳಿತದ ಕಾಲದಲ್ಲಿ ಕನ್ನಡ ಭಾಷೆ ಮತ್ತು ವಚನ ಸಾಹಿತ್ಯಕ್ಕೆ ಸೂಕ್ತ ಪ್ರೋತ್ಸಾಹ ದೊರೆಯದಿದ್ದರೂ, ಕನ್ನಡಾಭಿಮಾನಿಗಳು ಮತ್ತು ಶರಣ ತತ್ವದ ಅನುಯಾಯಿಗಳು ಈ ಪರಂಪರೆಯನ್ನು ಜೀವಂತವಾಗಿಡಲು ನಿರಂತರವಾಗಿ ಶ್ರಮಿಸಿದರು. ಅದೇ ಸಮಯದಲ್ಲಿ ೧೯೩೪ ರಲ್ಲಿ ಹರಡೇಕರ್ ಮಂಜಪ್ಪನವರು ವಚನ ಧರ್ಮ ಗ್ರಂಥವೆಂದು ವಚನ ಸಪ್ತಾಹವನ್ನು ಪ್ರಾರಂಭಿಸಿದ್ದರು.ಬೀದರ ಜಿಲ್ಲೆಯಲ್ಲಿ ಬಸವ ತತ್ವ ಪ್ರಚಾರ ತುಂಬಾ ವ್ಯಾಪಕವಾಗಿತ್ತು.ಪ್ರಭುರಾಜ ಕಂಬಳಿ ಬಾಬಾ, ಸಂಗ್ರಾಮಪ್ಪ ವಕೀಲ ಹಾಗೂ ಜಯದೇವಿ ತಾಯಿಯವರು ಒಂದಾಗಿ “ನಿಜಾಂ ಪ್ರಾಂತಿಕ ಪರಿಷತ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. *ಕತ್ತಲೆಯೆಂಬ ಅಜ್ಞಾನ |ಭ್ರಾಂತಿಎಂಬೋ ಭೂತರಾತರಿ ಹಗಲು ಕುಣಿದಿತ್ತು- ಲೋಕದಪ್ರೇತಗಳೆಲ್ಲ ಭೂತಾಗಿ ಕೂಣಿದಿತ||* ಎನ್ನುವಂತೆ…. ಜಗದಿ ಅಜ್ಞಾನವೆಂಬುವುದು ಭೂತ ಪ್ರೇತವಾಗಿ ಕುಣಿಯುವ ಸಮಯದಲ್ಲಿ ವಚನಗಳನ್ನು ಶರಣರು ನಮ್ಮ ಕೈಯಲ್ಲಿ ಇಟ್ಟರು. ಇಂಥ ಅಮೂಲ್ಯವಾದ ಜ್ಞಾನವನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವದುಕ್ಕೆ ಕರೆ ನೀಡಿದರು….ಜಯದೇವಿತಾಯಿಯವರು . ಪರಿಷತ್ತಿನ ಪ್ರಮುಖ ಧ್ಯೇಯ ಕನ್ನಡ ಭಾಷೆ, ಶರಣರ ವಚನ ಸಾಹಿತ್ಯ ಮತ್ತು ಬಸವ ತತ್ವಗಳನ್ನು ಜನಸಾಮಾನ್ಯರಲ್ಲಿ ಹರಡುವುದಾಗಿತ್ತು.ಪರಿಷತ್ತಿನ ಆಶ್ರಯದಲ್ಲಿ ಒಂದು ವಾಚನಾಲಯ ಸ್ಥಾಪಿಸಲಾಯಿತು. ಅಲ್ಲಿ ಬಸವ ಸಾಹಿತ್ಯ, ವಚನ ಸಂಕಲನಗಳು ಹಾಗೂ ಕನ್ನಡದ ಅಮೂಲ್ಯ ಕೃತಿಗಳನ್ನು ಸಾರ್ವಜನಿಕರ ಓದಿಗಾಗಿ ಲಭ್ಯವಾಗುವಂತೆ ಮಾಡಲಾಯಿತು. ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ವಾಚನಾಲಯ ಪ್ರಮುಖ ಕೇಂದ್ರವಾಯಿತು.ಅಷ್ಟೇ ಅಲ್ಲದೆ, ಜಗಜ್ಯೋತಿ ಬಸವೇಶ್ವರ, ಅಕ್ಕ ಮಹಾದೇವಿ, ಚೆನ್ನಬಸವಣ್ಣ ಮೊದಲಾದ ಶರಣ ಮಹಾತ್ಮರ ಜಯಂತಿಗಳನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.ಜಯಂತಿ ಕಾರ್ಯಕ್ರಮಗಳಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶರಣರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು.ಈ ರೀತಿಯಾಗಿ ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆಯ ಉಳಿವು, ವಚನ ಸಾಹಿತ್ಯದ ಪ್ರಸಾರ ಮತ್ತು ಶರಣ ಸಂಸ್ಕೃತಿಯ ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. *ಅಪರೂಪವಾದ |ಅಪರಮಿತ ಜ್ಞಾನವಿಪರೀತ ಅಜ್ಞಾನದ ಮಾಯೆ ನುಂಗಿದವುವಚನಗಳು, ರೂಪಿಸಿ ಶರಣರ ಲೋಕವ || *ಎಂದು ಸಾರುತ….. ಜಯದೇವಿ ತಾಯಿಯವರ ನೇತೃತ್ವ ಮತ್ತು ಸಹೋದ್ಯೋಗಿಗಳ ಸೇವಾಭಾವದಿಂದ ಈ ಸಂಸ್ಥೆ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಮತ್ತು ವಚನ ಚಳವಳಿಗೆ ಹೊಸ ಚೈತನ್ಯವನ್ನು ನೀಡಿತು. ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಬಸವತತ್ವದ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸಿತು…..ಇಂಥ ಉದ್ದೇಶಕ್ಕಾಗಿ ಮೈಸೂರು ಮತ್ತು ಬೆಂಗಳೂರಿನಂತಹ ಕನ್ನಡದ ಸಾಂಸ್ಕೃತಿಕ ಕೇಂದ್ರಗಳಿಂದ ಖ್ಯಾತ ಸಾಹಿತಿಗಳು, ಚಿಂತಕರು ಮತ್ತು ಉಪನ್ಯಾಸಕರನ್ನು ಆಹ್ವಾನಿಸಿ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು.ಅಂತಹ ಪ್ರಮುಖ ಅತಿಥಿಗಳಲ್ಲಿ…. ತಾ.ರಾ.ಸು. ಮತ್ತು ಅ.ನಾ.ಕೃ ಮೊದಲಾದ ಪ್ರಸಿದ್ಧ ಸಾಹಿತಿಗಳೂ ಭಾಗವಹಿಸಿ, ಕನ್ನಡ ಸಾಹಿತ್ಯ, ಶರಣರ ವಚನಗಳು ಮತ್ತು ಬಸವ ತತ್ವಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಈ ಸಂಘಟನೆಯ ಕಾರ್ಯಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಜನಪರ ಚಳವಳಿಯಾಗಿದ್ದವು. ಕಾರ್ಯಕರ್ತರು ಹಳ್ಳಿಹಳ್ಳಿಗೆ ತೆರಳಿ ಬಸವತತ್ವದ ಸಮಾನತೆ, ಕಾಯಕ, ದಾಸೋಹ, ಜಾತ್ಯಾತೀತತೆ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದರು. ಸಮಾಜದಲ್ಲಿ ಅಸಮಾನತೆ, ಅಜ್ಞಾನ ಮತ್ತು ಸಾಮಾಜಿಕ ಬೇಧಭಾವವನ್ನು ನಿವಾರಿಸಿ, ಸಮಾನತೆಯ ಸಮಾಜ ನಿರ್ಮಾಣವೇ ಅವರ ಪ್ರಮುಖ ಧ್ಯೇಯವಾಗಿತ್ತು. *ನೆಲದ ಸತ್ವದ ಮೇಲೆ |ಹೊಲ ಬೆಳೆಯುವಂತೆಮೂಲ ತನ್ನ ಅರುವಿನ ಬೀಜ- ಬೆಳೆದಿತ್ತುಸಕಲ ಶರಣ ತತ್ವ ಪ್ರಪಂಚ ವಿಸ್ತಾರ||* ತನ್ನರಿವನ್ನೇ ಗುರುವನ್ನಾಗಿಸಿ ದೇಹವನ್ನೇ ದೇಗುಲುಮಾಡಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಕರೆ ಕೊಡುವ ವಚನಗಳನ್ನು ಪ್ರಚಾರಗೊಳಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ರೀತಿಯ ಕಾರ್ಯಕ್ರಮಗಳಿಗೆ ನಿಜಾಂ ಸರ್ಕಾರದಿಂದ ಹಲವು ರೀತಿಯ ಪ್ರತಿರೋಧ ಮತ್ತು ನಿರ್ಬಂಧಗಳು ಎದುರಾದರೂ, ಪರಿಷತ್ತಿನ ಕಾರ್ಯಕರ್ತರು ಹಿಂದೆ ಸರಿಯಲಿಲ್ಲ.ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಚನ ಸಪ್ತಾಹವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುತ್ತಿದ್ದರು. ಈ ಸಪ್ತಾಹದಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶರಣರ ಆದರ್ಶಗಳ ಕುರಿತು ವಿಶೇಷ ಪ್ರವಚನಗಳನ್ನು ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮಗಳ ಮೂಲಕ ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆದು, ಕನ್ನಡ ಭಾಷೆ, ಶರಣ ಸಂಸ್ಕೃತಿ ಮತ್ತು ಶರಣ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೂ ಯಶಸ್ವಿಯಾಗಿ ತಲುಪಿಸಲಾಯಿತು. ವಚನ ಸಪ್ತಾಹ ಮತ್ತು ಕನ್ನಡ ಜಾಗೃತಿಯ ಕಾರ್ಯಕ್ರಮಗಳು ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ವಚನ ಸಪ್ತಾಹವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಯ ಮಹೋತ್ಸವವಾಗಿತ್ತು. *ನಿಮ್ಮಅಡಿಗಳು ದೊರೆತು|ಹಮ್ಮು ಜರಿದು ಹೋಯ್ತು ನೆಮ್ಮದಿಯಿತು ಎನ ಮನಕ್ಕೆ -ಬಸವಣ್ಣ ಒಮ್ಮನವಾಯಿತು ನಿಮ್ಮಲ್ಲಿ||*ಎಂದು ಬಸವಣ್ಣನನು ಹಾಡಿ ಹೊಗಳುತ್ತಾ ತತ್ವಗಳನ್ನು ಪ್ರಚಾರ ಮಾಡಲಾರಂಭಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಖ್ಯಾತ ವಿದ್ವಾಂಸರು, ಧಾರ್ಮಿಕ ಮುಖಂಡರು, ಸಾಹಿತಿಗಳು ಹಾಗೂ ಸಮಾಜ ಸುಧಾರಕರು ಆಗಮಿಸಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.ಈ ಕಾರ್ಯಕ್ರಮಗಳಲ್ಲಿ ತರಳಬಾಳು ಸ್ವಾಮಿಗಳು, ಎಸ್ ನಿಜಲಿಂಗಪ್ಪ, ಎಂ.ಆರ್ ಶ್ರೀನಿವಾಸ್ ಮೂರ್ತಿ, ಸ್ವಾಮಿ ರಮಾನಂದ ತೀರ್ಥರು, ಮಾನ್ವಿ ನರಸಿಂಹರಾಯರು, ಸಿದ್ದಯ್ಯ ಪುರಾಣಕ, ಬಾಮಣಗಾವ್ಕರ್ ಅಮರಾವತಿ ,ಬಸಪ್ಪ ಮಂಡಗಿ ವಕೀಲರು ,ಚನ್ನಬಸವ ಪಟ್ಟದೇವರು, ವಿಶ್ವನಾಥ್ ರೆಡ್ಡಿ ಮುದನ್ನಾಳ, ವಿದ್ಯಾಧರ್ ಗುರೂಜಿ, ಬಿ. ಮಹದೇವಪ್ಪ, ಭೀಮಣ್ಣ ಖಂಡ್ರೆ ಮೊದಲಾದ ದಿಗ್ಗಜರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು ಹಾಗೂ ಸಮಾಜದ ಗಣ್ಯರು ಭಾಗವಹಿಸುತಿದ್ದರು. ಶರಣರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿತ್ತು. ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಾಮ ವಾಚನಾಲಯಗಳ ಸ್ಥಾಪನೆ, ಕನ್ನಡ ಶಾಲೆಗಳ ಆರಂಭ ಹಾಗೂ ಕನ್ನಡ ಶಿಕ್ಷಣದ ವಿಸ್ತರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿತ್ತು.ಈ ಎಲ್ಲಾ ಚಟುವಟಿಕೆಗಳ ಮೂಲ ಉದ್ದೇಶ ಕನ್ನಡ ಭಾಷೆಯನ್ನು ಬೆಳೆಸುವುದು, ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆಯುವುದು ಮತ್ತು ಬಸವಣ್ಣನವರ ಸಮಾನತೆ, ಕಾಯಕ ಹಾಗೂ ದಾಸೋಹದ ತತ್ವಗಳ ಆಧಾರದ ಮೇಲೆ ಜಾತಿ–ಧರ್ಮ ಭೇದವಿಲ್ಲದ, ಪ್ರಗತಿಪರ ಸಮಾಜವನ್ನು ನಿರ್ಮಿಸುವುದಾಗಿತ್ತು.ನಿಜಾಂ ಆಡಳಿತದ ಪರಿಸ್ಥಿತಿಯಲ್ಲಿಯೂ ಈ ಕಾರ್ಯಗಳು ಕನ್ನಡದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮಹತ್ತರ ಕೊಡುಗೆಯನ್ನು ನೀಡಿದವು. ಸೋಲಾಪುರ ಗಡಿಭಾಗ, ಕನ್ನಡಿಗರ ಆಶಯ ಮತ್ತು ಕರ್ನಾಟಕ ಸೇರ್ಪಡೆಗೆ ನಡೆದ ಚಳವಳಿ ೧೯೪೯ರ ಸಮಯ….ಸೋಲಾಪುರ ಪ್ರದೇಶವು ಭಾಷೆ, ಸಂಸ್ಕೃತಿ ಮತ್ತು ಆಡಳಿತದ ದೃಷ್ಟಿಯಿಂದ ಪ್ರಮುಖ ಚರ್ಚೆಯ ಕೇಂದ್ರವಾಗಿತ್ತು.ಆ ಕಾಲದಲ್ಲಿ ಸೋಲಾಪುರ ತಾಲೂಕನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ದಕ್ಷಿಣ ಸೋಲಾಪುರ ಮತ್ತು ಉತ್ತರ ಸೋಲಾಪುರ ಎಂದು ವಿಭಜಿಸಲಾಯಿತು. ವಿಭಜನೆಯು ಆಡಳಿತಾತ್ಮಕವಾಗಿದ್ದರೂ, ಆ ಭಾಗದಲ್ಲಿ ವಾಸಿಸುತ್ತಿದ್ದ ವಿವಿಧ ಭಾಷಿಕ ಸಮುದಾಯಗಳ ಆಶಯಗಳಿಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿತು.ಅದೇ ಅವಧಿಯಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸಂಘಟನೆಯನ್ನು ಯುವಜನರ ಮಟ್ಟದಲ್ಲಿ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿದ್ದವು.೧೯೪೯ರಲಿ ಜವಹರಲಾಲ್ ನೆಹರು ಸೋಲಾಪುರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಯುವಜನರ ಪಾತ್ರ, ರಾಷ್ಟ್ರೀಯ ಏಕತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅವರು ಕರೆ ನೀಡಿದರು. ಈ ಪ್ರದೇಶದ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಸೂಕ್ತ ಆಡಳಿತ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕನ್ನಡ ಭಾಷೆಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಮರ್ಪಕ ಸ್ಥಾನಮಾನ ದೊರೆಯಬೇಕೆಂಬ ಬೇಡಿಕೆಯನ್ನು ಅವರು ರಾಷ್ಟ್ರೀಯ ನಾಯಕರ ಮುಂದಿಟ್ಟರು. ಸೋಲಾಪುರ ಮತ್ತು ಅದರ ಸುತ್ತಮುತ್ತಲಿನ ಗಡಿಭಾಗಗಳಲ್ಲಿ ಕನ್ನಡಿಗರ ಜೊತೆಗೆ ಮರಾಠಿ ಭಾಷಿಕರೂ ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಕನ್ನಡ ಮಾತನಾಡುವ ಜನ ೪೮% ಇದ್ದರೆ ೩೪% ಅಷ್ಟು ಜನ ಮರಾಠಿ ಮಾತನಾಡುವರು ಹಾಗೂವಿಜಯಪುರ ಅಂದಿನ ಬಿಜಾಪುರ ಮತ್ತು ಅಕ್ಕಲಕೋಟಿನ ಜನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ನಂಟು ಹೊಂದಿದ್ದ ಅನೇಕ ಗಡಿಭಾಗಗಳ ಜನರು ತಮ್ಮ ಪ್ರದೇಶವು ಕರ್ನಾಟಕದೊಂದಿಗೆ ಸೇರಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಭಾಷಾವಾರು ರಾಜ್ಯಗಳ ಪರಿಕಲ್ಪನೆ ಬಲವಾಗುತ್ತಿದ್ದ ಸಂದರ್ಭದಲ್ಲಿ, ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಬೇಕು ಎಂಬ ಅಭಿಪ್ರಾಯವೂ ಬೆಳೆಯತೊಡಗಿತು.ಇಂಥ ಚಳವಳಿಗಳು ನಂತರ ಭಾಷಾವಾರು ರಾಜ್ಯಗಳ ಪುನರ್ರಚನೆ ಕುರಿತ ರಾಷ್ಟ್ರೀಯ ಚರ್ಚೆಗೆ ಪೂರಕವಾದವು. ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಮತ್ತು ಆಡಳಿತಾತ್ಮಕ ನ್ಯಾಯಕ್ಕಾಗಿ ನಡೆದ ಈ ಪ್ರಯತ್ನಗಳು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಹಿನ್ನೆಲೆಯಾಗಿ ಪರಿಣಮಿಸಿದವು. (ಮುಂದುವರೆಯುವುದು) ಸವಿತಾ ದೇಶಮುಖ
ಶರಣ ಸಂಗಾತಿ ಸಾವಿಲ್ಲದ ಶರಣರು ಶಶಿಕಾಂತ್ ಪಟ್ಟಣ ರಾಮದುರ್ಗ ಷಟ್ಪದಿಯ ಕವಿ ರಾಘವಾಂಕ ರಾಘವಾಂಕನು ಹರಿಹರನ ಸೋದರಳಿಯ ಮತ್ತು ಶಿಷ್ಯ ತನ್ನ ಸಾಹಿತ್ಯ ರಚನೆಯ ಆರಂಭದಲ್ಲಿ ರಾಘವಾಂಕನು ಕೇವಲ ವೈಷ್ಣವ ಪರಂಪರೆಯ ಕಾವ್ಯಗಳನ್ನು ರಚಿಸಿದನೆಂದು ಮತ್ತು ತನ್ನ ಗುರು ಮತ್ತು ಸೋದರ ಮಾವನಿಗೆ ಆ ಪುರಾಣಗಳನ್ನು ತೋರಿಸಿದಾಗ ಸಿಟ್ಟಿಗೆದ್ದ ಹರಿಹರ ತನ್ನ ಶಿಷ್ಯ ಮತ್ತು ಸೋದರಳಿಯನಿಗೆ ಬಾಯಿಯ ಮೇಲೆ ಬಡಿದನೆಂದು ಆಗ ಐದು ಹಲ್ಲುಗಳು ಉದರಿದವೆಂದು ಮುಂದೆ ನೀನು ಶರಣರ ಜೀವನಾಧಾರಿತ ಕೃತಿಗಳನ್ನು ಬರೆಯಬೇಕು ಅಂದರೆ ಮಾತ್ರ ನಿನಗೆ ಉದುರಿ ಹೋದ ಹಲ್ಲುಗಳು ಮರಳಿ ಬರುತ್ತವೆ ಎಂದು ಆಜ್ಞಾಪಿಸಿದನಂತೆ. ಆಗ ರಾಘವಾಂಕ 1ಸಿದ್ಧರಾಮ ಪುರಾಣ2.ಸೋಮನಾಥ ಚರಿತೆ3. ವೀರೇಶ ಚರಿತೆ4.ಶರಭ ಚಾರಿತ್ರ5.ಹರಿಹರ ಮಹತ್ವ ಎಂಬ ಶರಣರ ಲಿಂಗಾಯತ ತತ್ವಗಳ ಚರಿತೆಯನ್ನು ಬರೆದನಂತೆ ಮತ್ತೆ ಹಲ್ಲುಗಳು ಕಾಣಿಸಿಕೊಂಡವು ಎಂಬ ಪ್ರತೀತಿ ಇದೆ. ಇದು ಹರಿಹರನ ಸಾತ್ವಿಕ ಕೋಪ ಮತ್ತು ರಾಘವಾಂಕನ ಗುರು ಭಕ್ತಿಯನ್ನು ತೋರುತ್ತದೆ. ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಲಿಂಗಾಯತ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು.ಇವನ ಜೀವನ ಸಂಗತಿಗಳು ತಕ್ಕಮಟ್ಟಿಗೆ ಚೆನ್ನಬಸವಪುರಾಣದಲ್ಲಿ, ಗುರುರಾಜ ಚಾರಿತ್ರದಲ್ಲಿ, ಭೈರವೇಶ್ವರಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ, ಪದ್ಮರಾಜ ಪುರಾಣದಲ್ಲಿ , ಹರಡಿಕೊಂಡಿವೆ.ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ಕವಿಕಾವ್ಯ ಜೀವನವನ್ನೇ ವಸ್ತುವಾಗಿ ಮಾಡಿಕೊಂಡ ಸಿದ್ದನಂಜೇಶನ ರಾಘವಾಂಕ ಚಾರಿತ್ರ ಒಂದು ವಿಶೇಷ ರೀತಿಯ ಕೃತಿಯಾಗಿದೆ. ಜನನ ಮತ್ತು ಜೀವನ ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳೆದವ. ಇವನ ತಂದೆ ಮಹಾದೇವಭಟ್ಟ ,ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು, ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರೂಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು , ಹಂಪೆಯ ಮಾದಿರಾಜ, ಹಂಪೆಯ ಹರೀಶ್ವರ ಇದು ರಾಘವಾಂಕನ ಗುರುಪರಂಪರೆ.ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ.ಈತ ಸಂಸ್ಕೃತ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ ವೈದಿಕ ವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ . ‘ಉಭಯಕವಿ ಕಮಲರವಿ’ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೊ ರಾಜನನ್ನೂ ಮೆಚ್ಚಿಸಿದ್ದ್ದ.. ರಾಜ ಇವನಿಗೆ ‘ಕವಿಶರಭಭೇರುಂಡ’ ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವು ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದಗಳನ್ನು ಬೇಡಿದಾಗ , ಆತ ಮೆಚ್ಚಲೊಲ್ಲದೆ , ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ. ಒಮ್ಮೆ ಓರಂಗಲ್ಲಿನ ಪ್ರತಾಪರುದ್ರದೇವನ ಸಭೆಯಲ್ಲಿ ಏಕದ್ವಿತ್ರಿಸಂಧಿಗ್ರಾಹಿಗಳೆಂಬ ಕುಕವಿಗಳನ್ನು ತನ್ನ ಮೀಸಲು ಕವಿತೆಯಾದ ವೀರೇಶ ಚರಿತ್ರೆಯನ್ನು ಓದುವುದರ ಮೂಲಕ ಭಂಗಿಸಿ ಪ್ರತಾಪರುದ್ರನಿಂದ ಉಭಯಕವಿ ಶರಭಭೇರುಂಡ ಎಂಬ ಹೆಸರು ಪಡೆದ.ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ.ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ . ಉಭಯ ಭಾಷಾಪಂಡಿತ ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಛಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಸಮೀಪವಾದವು. ರಾಘವಾಂಕನ ಹಲ್ಲುಗಳನ್ನು ಹರಿಹರ ಮುರಿದದ್ದು ಅನಂತರ ರಾಘವಾಂಕನು ಶೈವಕೃತಿ ಪಂಚಕಗಳನ್ನು ಬರೆದು ಹಲ್ಲುಗಳನ್ನು ಪಡೆದದ್ದು ಈ ದಂತಕತೆ ವಸ್ತು ರೀತಿಗಳೆರಡರಲ್ಲೂ ಹರಿಹರನ ಪರಂಪರೆಗೆ ವಿರೋಧವಾಗಿ ನಡೆದುಕೊಂಡ ರಾಘವಾಂಕನ ಬಗೆಗೆ ಹರಿಹರ ಪರಂಪರೆ ತೋರಿಸಿದ ಪ್ರತಿಕ್ರಿಯೆಯನ್ನೂ ಅನಂತರ ರಾಘವಾಂಕ ಹರಿಹರ ಪರಂಪರೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸಾಂಕೇತಿಸುತ್ತದೆ ಎನ್ನಬಹುದು. ಕೃತಿಗಳುರಾಘವಾಂಕನ ಕಾವ್ಯಗಳು ಆರು ಕೃತಿಗಳು೧.ಹರಿಶ್ಚಂದ್ರ ಕಾವ್ಯ.೨.ಸಿದ್ಧರಾಮ ಪುರಾಣ೩.ಸೋಮನಾಥ ಚರಿತೆ೪. ವೀರೇಶ ಚರಿತೆ೫.ಶರಭ ಚಾರಿತ್ರ೬.ಹರಿಹರ ಮಹತ್ವ – ಈ ಕೃತಿ ಇನ್ನೂ ಸಿಕ್ಕಿಲ್ಲ. ಇವಗಳಲ್ಲಿ ಮೊದಲ ನಾಲ್ಕು ದೊರೆತು ಪ್ರಕಟವಾಗಿದೆ.ಶರಭ ಚಾರಿತ್ರ ಹಾಗೂ ಹರಿಹರ ಮಹತ್ವ ಇನ್ನೂ ದೊರೆತಿಲ್ಲ.ಇದೂ ಅಲ್ಲದೆ “ದೇವಾಂಗ ದಾರಿಮಯ್ಯನ ಪುರಾಣ”ಎಂಬ ಸಾಂಗತ್ಯ ಗ್ರಂಥವೊಂದು ದೊರಕಿದ್ದು , ರಾಘವಾಂಕನ ಅಂಕಿತದಲ್ಲಿದೆ. ಇದನ್ನು ರಾಘವಾಂಕ ಬರೆದನೇ ಇಲ್ಲವೆ ಎನ್ನುವ ಬಗ್ಗೆ ಖಚಿತವಾಗಿ ತಿಳಿಯಬೇಕಾಗಿದೆ. ವಿಮರ್ಶೆ:ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ.’ ಜನ ಬದುಕಬೇಕೆಂದು ಕಾವ್ಯಮುಖದಿಂಪೇಳ್ದನನಪೇಕ್ಶೆಯಿಂದ’ ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ , ವರಸುತನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು ತನ್ನದೇ ಆದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ.ತನಗೆ ಹಿನ್ನೆಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ವದ ಸಾಧನೆ.ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತೊಬ್ಬ ಕವಿ ರಾಘವಾಂಕ.ಹರಿಶ್ಚಂದ್ರಕಾವ್ಯಹರಿಶ್ಚಂದ್ರಕಾವ್ಯ ರಾಘವಾಂಕನ ಕೃತಿಗಳಲ್ಲಿಯೇ ಶ್ರೇಷ್ಥವಾದುದು ಮಾತ್ರವಲ್ಲ . ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ಕೃತಿ.ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕಾರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿಯೇ ಕಾಣದೊರೆಯುವ ನೂತನ ಸನ್ನಿವೇಶಸೃಷ್ಟಿ , ಕೃತಿಬಂಧೆ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ವಿದ್ವಾಂಸರು ಈ ಕಾವ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು’ ಎನ್ನುವ ತತ್ವವನ್ನು ಜೀವನಕ್ಕೆ ಅಳವಡಿಸಿ ಬದುಕಿದ ಸತ್ಯಸಾಧಕ ಹರಿಶ್ಚಂದ್ರನ ಕರುಣಾದ್ಭುತವಾದ ಕಥೆಯೇ ಹರಿಶ್ಚಂದ್ರಕಾವ್ಯ.. ಇದರಲ್ಲಿ ಹದಿನಾಲ್ಕು ಸ್ಥಳಗಳಿದ್ದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ.ಹರಿಶ್ಚಂದ್ರನ ಪಾತ್ರ ಸತ್ಯ ಸಾಕ್ಷಾತ್ಕಾರಕ್ಕಾಗಿ ನಿರಂತರವೂ ಹೂರಾಡುವ ಆದರ್ಶಾಭೀಪ್ಸೆಯ ಪ್ರತಿಮೆಯಾಗಿದೆ. ಈ ಕೃತಿಯಲ್ಲಿ ಕಂಡುಬರುವ ಶೈಲಿಹದ , ನಾಟ್ಯಮಯವಾದ ಸನ್ನಿವೇಶಗಳು , ಪಾತ್ರಗಳಲ್ಲಿ ಕಂಡುಬರುವ ವೈವಿಧ್ಯ , ಇವೆಲ್ಲವನ್ನೂ ವ್ಯಾಪಿಸಿರುವ ದರ್ಶನ ಇವುಗಳಿಂದ ಈ ಕೃತಿಯನ್ನು ರಾಘವಾಂಕನ ಮಹಾಕಾವ್ಯವೆಂದು ಹೇಳಬಹುದು. ಸಿದ್ಧರಾಮ ಪುರಾಣ‘ಕಾಯಕವೇ ಕೈಲಾಸ’ ಎಂಬ ಶರಣರ ವಚನಕ್ಕೆ ಜೀವಂತ ವ್ಯಾಖ್ಯಾನದಂತೆ ಬಾಳಿದ ಸಿದ್ಧರಾಮನ ಜೀವನವನ್ನು ಕುರಿತ ಕೃತಿ . ‘ ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ’ ಎಂಬ ಸೂತ್ರವೆ ಸಿದ್ಧರಾಮ ಚರಿತ್ರೆಯಲ್ಲಿ ಅಡಕವಾಗಿರುವ ತತ್ವ. ಇದು ರಾಘವಾಂಕನ ಧರ್ಮ ಶ್ರದ್ಧೆಯ ಸಾತ್ವಿಕ ಪ್ರತಿನಿಧಿಯಾಗಿದೆ.ಸೋಮನಾಥ ಚರಿತೆಸೌರಾಶ್ಟ್ರದ ಶಿವಭಕ್ತನಾದ ಆದಯ್ಯ ಪುಲಿಗೆರೆಗೆ ಬಂದು ಸೌರಾಶ್ಟ್ರದ ಸೋಮನಾಥನನ್ನು ಅಲ್ಲಿಯ ಜೈನ ಬಸದಿಯಲ್ಲಿ ಪ್ರತಿಷ್ಠಾಪಿಸಿದ ವೀರಮಾಹೆಶ್ವರ ಮನೋಧರ್ಮವನ್ನು ವ್ಯಗ್ರವಾಗಿ ನಿರೂಪಿಸುವ ಕೃತಿ.ವೀರೇಶ ಚರಿತೆ ಹಾಗೂ ಶರಭ ಚಾರಿತ್ರ ಶಿವಪುರಾಣದ ಕಥೆಗಳು. ವೀರೇಶ ಚರಿತೆಯನ್ನು ಕವಿ ಮೀಸಲುಗವಿತೆ ಎಂದು ಕರೆದಿದ್ದಾನೆ.ಈ ಕೃತಿಯಲ್ಲಿ ರಾಘವಾಂಕ ಪ್ರಯೋಗಿಸಿ ನೋಡಿರುವ ಉದ್ದಂಡ ಷಟ್ಪದಿ ರೌದ್ರರಸವನ್ನು ಅಲೆಅಲೆಯಾಗಿ ಅಭಿವ್ಯಕ್ತಪಡಿಸುವ ಪ್ರಯತ್ನವನ್ನು ತೋರಿಸುತ್ತದೆ.ಶಿವನ ಅವತಾರದ ವೀರಭದ್ರನಿಂದ ದಕ್ಷಯಜ್ಞ ದ್ವಂಸವಾದ ಕಥೆಯೇ ಇದರ ವಸ್ತು. ಇತರೆ ದೇವತೆಗಳಿಗಿಂತ ಶಿವನೇ ಶ್ರೇಶ್ಠ ಎಂಬುದನ್ನು ಸಾರುವ ಉದ್ದೇಶ ಇಲ್ಲಿದೆ.ಶರಭ ಚಾರಿತ್ರ ಹೆಸರೇ ಸೂಚಿಸುವಂತೆ ಮಹಾವಿಷ್ಣುವಿನ ಅವತಾರವನ್ನು ಇಕ್ಕಿಮೆಟ್ಟಿದ ಶಿವನ ಶರಭಾವತಾರದ ಮಹಿಮೆಯನ್ನು ಕುರಿತದ್ದೆಂದು ತೋರುತ್ತದೆ. ವಚನ ರಗಳೆಯ ನಂತರದ ನಡುಗನ್ನಡದ ಸಾಹಿತ್ಯದ ಯುಗ ಪ್ರವರ್ತಕನೆಂದು ಪ್ರತೀತಿ ಪಡೆದ ಹೊಸ ಪ್ರತಿಮೆಗಳನ್ನು ಬಳಸಿದ ಜ್ಞಾನವುಳ್ಳ ಕವಿಯಾಗಿದ್ದಾನೆ.ಸಿದ್ಧರಾಮನ ಚರಿತೆಯಲ್ಲಿ ಕಂಡು ಬೆರಗಾದರಾ ಪುಣ್ಯ ದಂಪತಿಗಳು ಎನ್ನುವ ಕಾವ್ಯದಲ್ಲಿಬಾಲಕನು ಮಲ್ಲಯ್ಯನನ್ನು ಕಾಣುವ ಹಂತದಲ್ಲಿ ಅಳುತ್ತ ಗುಹೆ ಗವ್ವರಗಳ ಮುಂದೆ ಮರಳಿನ ಹುಡಿಯಲ್ಲಿ ಬಿಕ್ಕುತ್ತಿರುವಾಗ ತರು ಗುಲ್ಮ ಲತೆಗಳೆದ್ದು ಅಳುತಿರ್ದವು, ಗುಹೆ ಗವ್ವರಗಳು ಬಾಲಕ ಸಿದ್ಧರ್ಮಯ್ಯನ ಅಳುವಿನ ಆಕ್ರಂದನವನ್ನು ಮಾರ್ದನಿಸುತ್ತಿದ್ದವು ಎಂದು ಸೊಗಸಾಗಿ ವರ್ಣಿಸಿದ್ದಾನೆ. ಶರಣರ ಆಶಯಗಳನ್ನು ಅರ್ಥೈಸಿಕೊಂಡು ನ್ಯಾಯ ಒದಗಿಸಲು ಶ್ರಮಿಸಿದ ದಿಟ್ಟ ಕವಿ ರಾಘವಾಂಕ. ರಾಘವಾಂಕರ ಹೆಸರಿನಲ್ಲಿ ಕೆಲ ಪ್ರಕ್ಷಿಪ್ತ ಚರಿತ್ರೆಗಳು ಸೊಲ್ಲಾಪೂರ ಭಾಗದಲ್ಲಿ ಹುಟ್ಟಿಕೊಂಡು ಸಾಹಿತ್ಯ ಮತ್ತು ಶರಣರ ಚರಿತ್ರೆಗೆದ್ರೋಹ ಮಾಡಿವೆ.————————————————————————– ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ







