ಧಾರಾವಾಹಿ ಸಂಗಾತಿ-38
ಡಾ.ವಿಶ್ವನಾಥ ಎನ್ ನೇರಳೆಕಟ್ಟೆ

ಅರ್ಜುನ ಉವಾಚ
ಗರ್ಭವತಿಯಾದಳುಭೂಗರ್ಭಸಂಜಾತೆಸೀತೆ

ತಮ್ಮ ತಮ್ಮ ಪ್ರೀತಿಪಾತ್ರರನ್ನು ಕೂಡಬಯಸುವ, ಸೇರಿ ಆನಂದಿಸುವ, ಆನಂದವನ್ನು ವರ್ಧಿಸುವ ಬಯಕೆಗಳನ್ನು ಮನದಲ್ಲಿ ಒಗ್ಗೂಡಿಸುವ ವಸಂತಕಾಲವದು ಓಡಿಬಂತು ಇಳೆಯ ಬಳಿಗೆ. ಅದೇ ಸಮಯದಲ್ಲಿ ಬುವಿಸುತೆ ರಾಮಸತಿ ಸೀತೆ ಋತುಮತಿಯಾದಳು. ಮಲ್ಲಿಗೆಯಂತಹ ಶುಭ್ರ ನಗೆಯನ್ನು ಹೊಂದಿರುವ, ಚಿಗುರಿನಂತಹ ಅಧರದಿಂದ ಶೋಭಿಸುವ, ದುಂಬಿಯ ತೆರದ ಮುಂಗುರುಳಿನಿAದ ಚೆಲುವು ಪಡೆದ, ಗಿಳಿ- ಕೋಗಿಲೆಗಳ ಮೃದು ಮಧುರ ಧ್ವನಿಯನ್ನು ತನ್ನದಾಗಿಸಿಕೊಂಡ, ಹೂವಿನಂತಹ ಕಣ್ಣಿನಿಂದ ಅಂದ ಹೆಚ್ಚಿಸಿಕೊಂಡ, ಚಂದಿರಸದೃಶ ಮೊಗದವಳಾದ ಸೀತೆ ಸೊಬಗಿನಿಂದ ಮೆರುಗು ಪಡೆದಳು ಋತುಮತಿಯಾದ ಆ ಸಮಯದಲ್ಲಿ. ಮೈನೆರೆದ ಹೆಣ್ಣು ಪೂರೈಸಬೇಕಾದ ನೀತಿನಿಯಮಗಳಷ್ಟನ್ನೂ ಅಚ್ಚುಕಟ್ಟಾಗಿ ಸಹನೆಯಿಂದ ಪಾಲಿಸಿದಳು ಪೃಥ್ವಿಸುತೆ.
ನಾಲ್ಕನೆಯ ದಿನ ವಿಶಿಷ್ಟ ಸ್ನಾನವನ್ನು ಮುಗಿಸಿದಳು. ಮಿಂದು ಶುಭ್ರಳಾಗಿ ನಿಂದು ಕುಂದಿಲ್ಲದ ಇಂದುವಿನAತೆ ಶೋಭಿಸುತ್ತಿದ್ದ ಸೀತೆ ಶ್ರೀರಾಮನ ಕಣ್ಣಿಗೆ ಹೊಸಬಗೆಯಲ್ಲಿ ಕಂಡಳು. ನಿಮಿಷದಲ್ಲಿಯೇ ಮೂರೂ ಲೋಕಗಳನ್ನು ಗೆಲ್ಲುವ ಉತ್ಸುಕತೆಯಲ್ಲಿ ಮನ್ಮಥ ಹರಿತಗೊಳಿಸಿಟ್ಟ ಆಯುಧದಂದದಿ ತೋರಿದಳು. ಕಳಂಕವನ್ನೆಲ್ಲಾ ಕಳೆದು ಆ ಮದನ ಇರಿಸಿದ ಸೌಂದರ್ಯಸಾರದAತೆ ಗೋಚರಿಸಿದಳು. ಕಾಮನ ಸಂಪೂರ್ಣ ಯಶಸ್ಸದು ಸಾಕಾರಗೊಂಡAತಹ ಅನುಭವವಾಯಿತು ಶ್ರೀರಾಮನಿಗೆ, ಪೂರ್ಣ ಪರಿಶುದ್ಧತೆಯಿಂದ ತನ್ನೆದುರು ನಿಂತ ಸೀತೆಯನ್ನು ನೋಡಿದಾಗ.
ಮಂದಗಮನೆಯ ಮಂದಹಾಸವದು ಅವನಿಗೆ ಮುದ್ದಾಗಿ ತೋರಿತು. ಅಂದದ ಮುಖಾರವಿಂದದವಳ ಕುಂದಿಲ್ಲದ ಅಂಗಾAಗ ಸೌಂದರ್ಯ ಅವನಿಗೆ ಮುದ ನೀಡಿತು. ಚಂದನದ ಸುಗಂಧವನ್ನು ಬೀರುತ್ತಿದ್ದ ಅವಳ ಶರೀರ, ಚಂದ್ರನAತಿದ್ದ ಅವಳ ಮುಖ ಅವನ ಮನಸ್ಸನ್ನು ತಣಿಸಿತು. ಹಣೆಯಲ್ಲಿ ತಿಲಕವಿತ್ತು. ವದನದಲ್ಲಿ ಮಂದಸ್ಮಿತ. ಉಟ್ಟ ಉಡುಗೆಯದು ಮನೋಹರವಾಗಿತ್ತು. ಮೂರು ಸರಗಳನ್ನು ಧರಿಸಿದ್ದಳು. ನೀಳವಾದ ಕೇಶರಾಶಿ ಹೊಂದಿದವಳಾಗಿದ್ದಳು.
ಮಹಾವಿಷ್ಣು ಸಾಗರದ ಮಧ್ಯೆ ಹಾವಿನ ಹಾಸಿಗೆಯ ಮೇಲೆ ಲಕ್ಷಿö್ಮಯ ಜೊತೆಗೆ ಭೋಗಿಸಿದ ರೀತಿಯಲ್ಲಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಸುಖವನ್ನು ಪಡೆಯತೊಡಗಿದ ಸೀತೆಯ ಜೊತೆಗೆ.
ಎರಡು ದೇಹಗಳಾಗ, ಈಗ ಒಂದು. ಅವನು ಸಾಗರ, ಅವಳು ಬಿಂದು. ಅವನು ಸಾಸಿರ, ಅವನು ಒಂದು. ಅವಳು ಇಲ್ಲದೆ ಅವನು ಇಲ್ಲ. ಅವನ ಜೊತೆಯದು ಅವಳಿಗೆಲ್ಲ. ಅವನೀಗ ಸುರನಲ್ಲ. ಅನುರಾಗ ಪ್ರಿಯ ನಲ್ಲ. ಪುಳಕವದು ಶಾಶ್ವತ. ಅಕ್ಕರೆಯು ಅವಿರತ. ಶ್ರೀರಾಮ ಸೀತೆಯರ ಸಮರತಿಯ ಸಂಗವನು ಕಂಡು ಶ್ರಮಕೀಡಾದ ಆ ಮನ್ಮಥ. ಮದನನಿಗೆ ಶ್ರಮ, ಇಲ್ಲ ವಿರಾಮ. ಅಂಗಜ ಸಂಗದಲಿ ಸೀತೆ ಶ್ರೀರಾಮ, ಮನಕೆ ಹೊಸಬಗೆಯ ಆರಾಮ.
ಈ ಬಗೆಯಲ್ಲಿ ಶ್ರೀರಾಮ ದೇಹವದು ಮಿಲನಗೊಂಡಿತು ಸೀತೆಯಲ್ಲಿ. ಮನಸ್ಸುಗಳು ಸಮಾಗಮಗೊಂಡವು ಹೊಸಬಗೆಯ ಹುರುಪಿನಲ್ಲಿ.
ವರವಿಷ್ಣು ನಕ್ಷತ್ರವದು ಕೊನೆಗಾಣುತ್ತಿರುವ ಸಮಯದಲ್ಲಿ ಗರ್ಭವತಿಯಾದಳು ಆ ಭೂಗರ್ಭೆ. ಸೀತೆಯ ಗರ್ಭದ ಫಲವನ್ನು ತಿಳಿದವರಲ್ಲಿ ಕೇಳಿದ ಶ್ರೀರಾಮ. “ನಿನ್ನನ್ನವಳು ತೊರೆದು ಬೇರಾವುದೋ ಪರಸ್ಥಳದಲ್ಲಿ ಮಕ್ಕಳನ್ನು ಪಡೆಯುತ್ತಾಳೆ” ಎಂಬ ಭವಿಷ್ಯವದು ತಿಳಿದುಬಂತು.
ಇದನ್ನರಿಯದ ಸೀತೆ ತಾಯ್ತನದ ಸುಖದ ಭಾವದಲ್ಲಿದ್ದಳು. ರಾಮಚಂದ್ರನನ್ನೇ ಹೋಲುವ ಅವಳಿ ಚಂದ್ರ ಸದೃಶರಾದ ಶಿಶುಗಳನ್ನು ಗರ್ಭದಲ್ಲಿ ಹೊತ್ತುನಿಂತಿದ್ದ ಚಂದ್ರಮುಖಿ ಸೀತೆ ಪೌರ್ಣಮಿಯ ಚಂದ್ರನAದದಿ ಶೋಭಿಸುತ್ತಿದ್ದಳು ಗರ್ಭಿಣಿಯಾದ ಸಮಯದಲ್ಲಿ.
ಸೀತೆ ಗರ್ಭವತಿಯೆನಿಸಿಕೊಂಡ ನಾಲ್ಕನೆಯ ತಿಂಗಳಿಗೆ ಅವಳ ಸೀಮಂತ ಶಾಸ್ತçವನ್ನು ನಡೆಸಿದ ಶ್ರೀರಾಮಚಂದ್ರ. ವಸಿಷ್ಠ, ವಿಶ್ವಾಮಿತ್ರರ ಸಲಹೆಗನುಗುಣವಾಗಿ ನಡೆಯಿತದೋ ಸೀಮಂತ ಶಾಸ್ತç. ಮೂರು ಯೋಜನ ವಿಸ್ತೀರ್ಣತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಉತ್ಸವವನ್ನು. ಬ್ರಾಹ್ಮಣರಿಗೆ ಅವರು ಬಯಸಿದ್ದನ್ನು ಕೊಡಲಾಯಿತು. ರಾಜರುಗಳಿಗೆ, ಸುಗ್ರೀವ, ವಿಭೀಷಣ ಮೊದಲಾದವರಿಗೆ ಭೋಜನ, ಸುಗಂಧ, ತಾಂಬೂಲ, ಪುಷ್ಪ, ಅಕ್ಷತೆ, ವಸ್ತಾçಭರಣಗಳನ್ನಿತ್ತು ಗೌರವಿಸಿದ ಶ್ರೀರಾಮ. ಪೂರ್ಣ ಭೂಮಿಯದು ಹೊಗಳುವಂತೆ ನಡೆಯಿತು ಭೂಸುತೆಯ ಸೀಮಂತ ಶಾಸ್ತç.
ಉತ್ಸವಕ್ಕೆ ಬಂದವರೆಲ್ಲರೂ ಸಂತಸದಿAದ ತೆರಳಿದ ಬಳಿಕ ಶ್ರೀರಾಮನ ಬಳಿಗೆ ಬಂದಳು ಸೀತೆ. ತನ್ನ ಮನದಿಂಗಿತವನ್ನು ತೋಡಿಕೊಂಡಳು. ವನವಾಸದ ಸಮಯದಲ್ಲಿ ಅವಳು ಶ್ರೀರಾಮನ ಜೊತೆ ಹಲವು ಆಶ್ರಮಗಳಿಗೆ ಹೋಗಿದ್ದಳು. ಋಷಿಪತ್ನಿಯರ ಜೊತೆಗೆ ಮಾತನಾಡಿದ್ದಳು. ಆನಂದದಿAದ ಬೆರೆತಿದ್ದಳು. ಅದರ ನೆನಪದು ಈಗ ಮೂಡಿತ್ತು ಸೀಮಂತಿನಿ ಸೀತೆಗೆ. ಈಗ ಬಸುರಿ ಬಯಕೆಯದು ಅವಳಲ್ಲಿ ಮೂಡಿತ್ತು. ಮುನಿಪತ್ನಿಯರನ್ನು ಈಗ ಮತ್ತೆ ನೋಡಬೇಕು, ಮಾತನಾಡಿಸಬೇಕು, ಅವರೊಂದಿಗೆ ದಿನ ಕಳೆಯಬೇಕು ಎಂದು ಆಸೆಪಟ್ಟಿತ್ತು ಅವನ ಮನಸ್ಸು. ಅದನ್ನೇ ಹೇಳಿಕೊಂಡಳು ಪತಿ ಶ್ರೀರಾಮಚಂದ್ರನಲ್ಲಿ. “ನಾನೀಗ ಮತ್ತೆ ವನವನ್ನು ಸೇರಿಕೊಳ್ಳುತ್ತೇನೆ. ಅನುವು ಮಾಡಿಕೊಡಬೇಕು ನೀವು” ಎಂದು ಕೇಳಿಕೊಂಡಳು. ಜನಕಸುತೆಯ ಮನದಿ ಜನಿಸಿದ್ದ ಬಯಕೆಯದು ನಗುವನ್ನು ತರಿಸಿತು ರಘುಕುಲೋತ್ತಮನಿಗೆ. ಅವಳ ಇಚ್ಛೆಯನ್ನು ಈಡೇರಿಸುವ ಭರವಸೆ ಕೊಟ್ಟ ಶ್ರೀರಾಮ.
ಹೀಗಿದ್ದ ಕಾಲದಲ್ಲಿಯೇ ಒಂದು ಇರುಳು ಕನಸೊಂದನ್ನು ಕಂಡ ರಘುಪತಿ. ಗಂಗೆಯನ್ನು ದಾಟಿದ ಸೀತೆ ಕಾಡನ್ನು ಸೇರಿ ದಿಕ್ಕುದೆಸೆ ಇಲ್ಲದವರಂತೆ ಅಸಹಾಯಕಳಾಗಿ ದೆಸೆದೆಸೆಯ ಈಕ್ಷಿಸುತ, ಮರುಗುತ್ತಿರುವುದನ್ನು ಕನಸಿನಲ್ಲಿ ಕಂಡು ಕನಲಿದ ಶ್ರೀರಾಮ.
ತನ್ನ ಕನಸನ್ನು ವಸಿಷ್ಠರಲ್ಲಿ ಹೇಳಿಕೊಂಡ. “ಈ ಕನಸು ಶುಭದ ಸೂಚನೆಯೋ? ಅಶುಭದ ಸುಳುಹೋ?” ಎಂದು ಕೇಳಿದ. “ಒಳ್ಳೆಯದನ್ನು ತಿಳಿಸುವ ಕನಸಲ್ಲವಿದು” ಎಂಬ ನುಡಿ ಮೂಡಿಬಂತು ಅವರಿಂದ. ಶ್ರೀರಾಮ ಮನಸ್ಸದು ಕನಸಿನ ಅಳುಕಿನಿಂದ ಮುಕ್ತವಾಗುವಂತಹ ಮಾತುಗಳನ್ನಾಡಿ ಶಾಂತಿ ಮೂಡಿಸುವ ಯತ್ನ ಮಾಡಿದರು.
ಡಾ.ವಿಶ್ವನಾಥ ಎನ್ ನೇರಳೆಕಟ್ಟೆ




