ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸುಮತಿಗೆ ಸಂತೋಷವಾಯಿತು. ತಾನು ಪ್ರತಿದಿನವೂ ಅನುಭವಿಸುತ್ತಿರುವ ಸಂಕಟ, ನೋವು ಇನ್ನಾದರೂ ಕಡಿಮೆಯಾಗುತ್ತದೆ ಎನ್ನುವ ಸಮಾಧಾನವೂ ಆಯಿತು. ಆದರೆ ಬೆಂಗಳೂರಿಗೆ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು? ಎನ್ನುವ ಚಿಂತೆ ಕಾಡಿತು…. “ನೀನು ಹೇಳಿದ್ದು ಎಲ್ಲವೂ ಸರಿ ಮಗಳೇ…. ಆದರೆ ಅಲ್ಲಿ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು?”… ಎಂದು ಸುಮತಿ ಕೇಳಿದಾಗ…. “ಅಮ್ಮಾ …ಬೆಂಗಳೂರಿನಲ್ಲಿ ನಮ್ಮ ಹಿರಿಯ ಮಾವ ( ಸುಮತಿಯ ಹಿರಿಯ ತಮ್ಮ) ಕುಟುಂಬ ಸಮೇತ ಅಲ್ಲಿಯೇ ಇದ್ದಾರಲ್ಲವೇ ?… ಅವರು ಯಾವ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎನ್ನುವ ಬಗ್ಗೆ ದೊಡ್ಡಮ್ಮನನ್ನು ಕೇಳಿ ತಿಳಿದುಕೊಳ್ಳುತ್ತೇನೆ…. ಅವರ ವಿಳಾಸ ಪಡೆದು ಅಲ್ಲಿಗೆ ಹೋದರಾಯಿತು”…. ಎಂದಳು ಮಗಳು. ಅವಳು ಹೇಳಿದ್ದು ಸರಿ ಎನಿಸಿತು ಸುಮತಿಗೆ. ಹಾಸನದಿಂದ ಬೆಂಗಳೂರಿಗೆ ತನ್ನ ತಮ್ಮ ವರ್ಗವಾಗಿ ಹೋದ ನಂತರ ಸುಮತಿ ಒಮ್ಮೆಯೂ ಅವನನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ತಮ್ಮನನ್ನು ನೋಡಬಹುದು ಮತ್ತು ಆಸ್ಪತ್ರೆಗೆ ಹೋಗಿ ಬರಲು ನಮಗೆ ಅವನು ಖಂಡಿತಾ ಸಹಾಯ ಮಾಡಿಯೇ ಮಾಡುತ್ತಾನೆ ಎನ್ನುವ ಭರವಸೆಯೂ ಮೂಡಿತು…. “ಸರಿ ಹಾಗೆಯೇ ಆಗಲಿ ಮಗಳೇ…. ನಾಳೆ ಬೆಳಗ್ಗೆ ಡಾಕ್ಟರ್ ರೌಂಡ್ಸ್ ಗೆ ಬರುವಾಗ ಈ ಬಗ್ಗೆ ಅವರೊಂದಿಗೆ ಮಾತನಾಡು”…. ಎಂದು ಸುಮತಿ ಮಗಳಿಗೆ ಹೇಳಿದಳು. 

ನಾಳೆ ಬೆಳಗ್ಗೆ ಕಾಲೇಜು ಮುಗಿದ ನಂತರ ದೊಡ್ಡಮ್ಮನ ಮನೆಗೆ ಹೋಗಿ ಮಾವನ ಅಡ್ರೆಸ್ ಪಡೆಯುವುದು ಎಂದು ಆ ಹುಡುಗಿ ತೀರ್ಮಾನಿಸಿದಳು. 

ಸಂಜೆ ಆಶ್ರಮಕ್ಕೆ ಹೋಗಿ ಬಂದು ರಾತ್ರಿ ಅಮ್ಮನ ಜೊತೆಗೆ ಆಸ್ಪತ್ರೆಯಲ್ಲಿ ಉಳಿದುಕೊಂಡ ಹುಡುಗಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಒಂದೊಂದೇ ಲೆಕ್ಕಾಚಾರ ಮನದಲ್ಲಿ. ಏನೇನೋ ಆಲೋಚನೆಗಳು ಸುಳಿದು ಅವಳ ನಿದ್ರೆಗೆಡಿಸಿದ್ದವು. ಮೊದಲೇ ತೀರ್ಮಾನಿಸಿದಂತೆ ಬೆಳಗ್ಗೆ ಬೇಗನೆ ಎದ್ದು ಆಶ್ರಮಕ್ಕೆ ಹೋದಳು. ಅಲ್ಲಿ ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕಾಲೇಜಿಗೆ ಹೊರಟಳು. ಅಂದು ಕಾಲೇಜಿಗೆ ತಡವಾಯಿತು. ಗಡಿಬಿಡಿಯಲ್ಲಿ ತರಗತಿಯ ಕಡೆಗೆ ಹೋಗುತ್ತಿದ್ದಾಗ ಅದಾಗಲೇ ಲೆಕ್ಚರರ್ ತರಗತಿಯೊಳಗೆ ಪ್ರವೇಶಿಸಿ ಪಾಠ ಮಾಡುತ್ತಿದ್ದರು. ಹಾಗಾಗಿ ತರಗತಿಯ ಆಚೆಯೇ ನಿಂತಳು ಆ ಹುಡುಗಿ. ಪಕ್ಕದ ತರಗತಿಗೆ ಹೋಗಲು ಬಂದ ಅವಳ ಕಸಿನ್ ತರಗತಿಯ ಹೊರಗೆ ನಿಂತಿರುವ ಅವಳನ್ನು ಕಂಡು ಅವಳ ಬಳಿಗೆ ಬಂದು…. “ಏನಾಯ್ತು?…. ಏಕೆ ಇಷ್ಟು ತಡವಾಗಿ ಕಾಲೇಜಿಗೆ ಬಂದಿರುವೆ?… ಸದಾ ಬೇಗನೆ ಬರುತ್ತಿದ್ದ ನಿನಗೆ ಇಂದು ಏನಾಯಿತು?”… ಎಂದು ಕೇಳಿದ. ಅವಳ ಕಸಿನ್ ಕೂಡ ಇದೇ ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ಲೆಕ್ಚರರ್ ಆಗಿ ಸೇರ್ಪಡೆಗೊಂಡಿದ್ದ.‌ ಕಸಿನ್ ಕೇಳಿದ ಪ್ರಶ್ನೆಗೆ…. “ನನ್ನ ತಾಯಿಯ ಆರೋಗ್ಯ ಸರಿ ಇಲ್ಲ…. ಅವಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ”…. ಎಂದು ಹೇಳುತ್ತಾ ಈವರೆಗೂ ನಡೆದ ಎಲ್ಲಾ ವಿಚಾರವನ್ನೂ ಆತನಿಗೆ ತಿಳಿಸಿದಳು. ಅತ್ತೆಗೆ ಹುಷಾರಿಲ್ಲ ಎನ್ನುವುದನ್ನು ಅರಿತ ಆತನ ಮನಸ್ಸಿಗೆ ತುಂಬಾ ಬೇಸರವಾಯಿತು…. “ಒಂದು ಕೆಲಸ ಮಾಡು…. ತರಗತಿಗಳು ಮುಗಿದ ನಂತರ ನೀನು ಆಸ್ಪತ್ರೆಗೆ ಹೋಗುವಾಗ ನನಗಾಗಿ ಸ್ವಲ್ಪ ಹೊತ್ತು ಇಲ್ಲಿಯೇ ಕಾದಿರು…. ನನ್ನ ತರಗತಿ ಮುಗಿದ ನಂತರ ನಾವಿಬ್ಬರೂ ಜೊತೆಯಾಗಿಯೇ ನಮ್ಮ ಮನೆಗೆ ಹೋಗೋಣ…. ಅತ್ತೆಯನ್ನು ನೋಡಲು ನಿನ್ನ ಜೊತೆಗೆ ನಾನೂ ಬರುತ್ತೇನೆ”.. ಎಂದು ಹೇಳಿ, ಅವಳ ತರಗತಿಯ ಬಾಗಿಲನ್ನು ಡಸ್ಟರ್ನಿಂದ ಮೆಲ್ಲಗೆ ತಟ್ಟಿದನು. 

ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಲೆಕ್ಚರರ್ ಬಾಗಿಲ ಕಡೆಗೆ ನೋಡಿದಾಗ ತನ್ನ ಗೆಳೆಯ ತನ್ನ ತರಗತಿಯ ವಿದ್ಯಾರ್ಥಿನಿಯೊಂದಿಗೆ ಹೊರಗಡೆ ನಿಂತಿರುವುದು ಕಂಡಿತು….” ಒಂದು ನಿಮಿಷ ಇರಿ ಮಕ್ಕಳೇ…. ಇದೋ ಬಂದೆ”…. ಎಂದು ಹೇಳುತ್ತಾ, ಗೆಳೆಯನಿಗೆ ಹಸ್ತಲಾಘವ ಕೊಟ್ಟು,… “ಇದೇನು ಹುಡುಗೀ…, ತರಗತಿಗೆ ಬರದೇ ಇಲ್ಲೇಕೆ ನಿಂತಿರುವೆ? ….. ದಿನವೂ ತರಗತಿಗೆ ಸರಿಯಾದ ಸಮಯದಲ್ಲಿ ಹಾಜರಾಗುತ್ತಿದ್ದ ನಿನಗೆ ಇಂದೇನಾಯಿತು?…. ಎಂದಾಗ ಆತನ ಗೆಳೆಯ ತನ್ನ ಕಸಿನ್ ಬಗ್ಗೆ ಎಲ್ಲಾ ವಿವರವನ್ನೂ ತಿಳಿಸಿದ. ಆ ಲೆಕ್ಚರರ್ ಹುಡುಗಿಯನ್ನು ನೋಡಿ ಅನುಕಂಪದಿಂದ…. “ಸರಿ ಹೋಗು…. ತರಗತಿಯಲ್ಲಿ ಕುಳಿತುಕೋ”… ಎಂದು ಹೇಳಿ, ಮತ್ತೆ ಸಿಗೋಣ ಎಂದು ಗೆಳೆಯನಿಗೆ ಹೇಳುತ್ತಾ ಕೈ ಬೀಸಿ, ಲೆಕ್ಚರರ್ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರಾರಂಭಿಸಿದರು. ಅವಳ ಗೆಳತಿಯರು ಮತ್ತು ಇತರೇ ವಿದ್ಯಾರ್ಥಿಗಳು ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದರು. ಆದರೆ ಇವಳ ಗಮನ ಯಾರಡೆಗೂ ಇರಲಿಲ್ಲ. ತರಗತಿಗಳೆಲ್ಲವೂ ಮುಗಿದ ನಂತರ ಇಂದು ತಾನು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದಳು. ತರಗತಿಯಲ್ಲಿ ಪಾಠದ ಕಡೆಗೆ ಕೂಡ ಗಮನ ಹರಿಸಲು ಅವಳಿಂದ ಸಾಧ್ಯವಾಗಲಿಲ್ಲ. ತರಗತಿಗಳಿಲ್ಲವೂ ಮುಗಿದ ಕೂಡಲೇ ಕಾಲೇಜಿನ ಆವರಣದಲ್ಲಿದ್ದ ಮರದ ಕೆಳಗೆ ಕುಳಿತು ತನ್ನ ಕಸಿನ್ ಬರುವಿಕೆಗಾಗಿ ಕಾಯುತ್ತಿದ್ದಳು. ಕಸಿನ್ ಬಂದು ಕೂಡಲೇ ಎದ್ದು ಆತನ ಜೊತೆಗೆ ಅವನ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ದಾರಿಯುದ್ದಕ್ಕೂ ಮೌನವಾಗಿದ್ದ ಆ ಹುಡುಗಿಯನ್ನು ಕಂಡು ಆತನ ಮನ ಮರುಗಿತು. 


About The Author

Leave a Reply

You cannot copy content of this page

Scroll to Top