ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ
“ಕೋಗಿಲೆ ಕರಗಿತು”


ಕೋಗಿಲೆ ಕರಗಿತು
ಕಾಡು ಮೌನವಾಗಲಿಲ್ಲ;
ಅವಳ ಕಂಠದಿಂದ ಹರಿದ
ರಾಗಗಳು
ಇನ್ನೂ ಗಾಳಿಯ
ಎದೆಯಲಿ ತೇಲುತ್ತಿವೆ.
ಸ್ವರವೆಂಬ ಗಂಗೆಯಲ್ಲಿ
ಭಾವದ ದೀಪ ಹಚ್ಚಿದವಳು
ನೀನು;
ನಗುವಿಗೂ ನಾದ ಕೊಟ್ಟೆ,
ಅಳುವಿಗೂ ಆಲಾಪನೆಯ
ರೂಪ ಕೊಟ್ಟೆ.
ನಿನ್ನ ಕಂಠದ ಜೇನಿನ
ಹನಿಗಳು
ಕೋಟಿ ಹೃದಯಗಳ
ದಾಹ ನೀಗಿಸಿದವು;
ಮುಗ್ಧ ಮಗುವಿನ
ಲಾಲಿಯಾಗಿ,
ತಾಯಿಯ ಮಮತೆಯ
ತೊಟ್ಟಿಲಾಗಿ,
ಪ್ರೇಮಿಗಳ ಕನಸಿನ ಭಾವವಾಗಿ
ಭಕ್ತರ ಪ್ರಾರ್ಥನೆಯ
ದೀಪವಾಗಿ
ಅಮರಳಾದೆ ನೀನು.
ನೀ ಹಾಡಿದಾಗ
ಚಂದ್ರನು ಬೆಳದಿಂಗಳ ಹರಡಿದ
ಮಲ್ಲಿಗೆ ತನ್ನ ಪರಿಮಳ ಸೂಸಿತು;
ಗಾಳಿ ನಿಂತು ನಿನ್ನ
ಆಲಾಪನೆಯನ್ನು ಆಲಿಸಿತು;
ನದಿಯ ಅಲೆಗಳೂ
ನಿನ್ನ ತಾಳಕ್ಕೆ ತಲೆದೂಗಿದವು.
ನಿನ್ನ ರಾಗದ ಅಲೆಗಳಲ್ಲಿ
ವಿರಹವು ಕಣ್ಣೀರ
ಮುತ್ತಾಯಿತು;
ಸಂತೋಷವು ನಗುವಿನ
ಹೂವಾಯಿತು;
ವೇದನೆಯೂ ಸಂಗೀತವಾಗಿ
ಅರಳಿತು;
ಮೌನವೂ ಮಧುರ
ಗೀತೆಯಾಗಿ ಮೊಳಗಿತು
ಕಲ್ಲಿನ ಮೇಲೆ ಹೆಸರು
ಬರೆದವಳಲ್ಲ
ಹೃದಯಗಳ ಮೇಲೆ
ಸ್ವರಗಳಿಂದ ಶಾಶ್ವತ ಅಚ್ಚು
ಹಾಕಿದವಳು
ಕೋಗಿಲೆ ಕರಗಿತು
ಎನ್ನುವುದು
ಕಾಲದ ಮಾತು ಮಾತ್ರ;
ಆದರೆ ನಿನ್ನ ಗಾನ
ಬೆಳಗಿನ ಮೊದಲ
ಹಕ್ಕಿಯ ಕೂಗಿನಂತೆ,
ಸಂಜೆಯ ಮೃದುವಾದ
ಗಾಳಿಯಂತೆ,
ಮಳೆಹನಿಯ ಸಂಗೀತದಂತೆ,
ಭಕ್ತಿಯ ದೀಪದ
ಜ್ಯೋತಿಯಂತೆ
ಯುಗಯುಗಕೂ
ಮೊಳಗುತ್ತಲೇ ಇರುವುದು.
ಓ ಗಾನಸರಸ್ವತಿಯೇ!
ನಿನ್ನ ಕಂಠ ಮೌನವಾದರೂ
ನಿನ್ನ ಸ್ವರ ಅಮರವಾಗಿದೆ;
ನಿನ್ನ ದೇಹ ದೂರವಾದರೂ
ನಿನ್ನ ಸಂಗೀತ
ನಮ್ಮ ಉಸಿರಾಗಿದೆ.
ಕೋಗಿಲೆ ಕರಗಲಿಲ್ಲ…
ಜಾನಕಿ ರಾಗವಾಗಿ
ಆಕಾಶದಲ್ಲಿ ಬೆರೆತಳು;
ಭಾವವಾಗಿ ಮನಗಳಲ್ಲಿ
ನೆಲೆಸಿದಳು;ಸಂಗೀತವಾಗಿ
ಕಾಲಾತೀತಳಾದಳು.
ನಿನ್ನ ಅಮರ ಗಾನಕ್ಕೆ
ಶತಶತ ನಮನಗಳು.
ವಿಜಯಲಕ್ಷ್ಮಿ ಹಂಗರಗಿ



