ಸ್ಪೂರ್ತಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ.
“ಕುಶಲತೆ ಕಲಿತರೆ
ಜೀವನದ ಸವಿಜೇನು
ಚಪ್ಪರಿಸಬಹುದು”


ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು”ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತಿಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ. ನಿನಗೆ ಅದರಿಂದ ಬೇಸರ ಆಗುವುದಿಲ್ಲವೇ?” ಜೇನು ಹುಳು ಹೇಳಿತು: ‘ಇಲ್ಲ ಜನರು ನನ್ನ ಜೇನನ್ನು ಕದಿಯಬಹುದು, ಆದರೆ ಯಾರೊಬ್ಬರೂ ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.’ ಇದರ ಅರ್ಥ ಇಷ್ಟೇ ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ”
ಪೂರ್ವ ವೈಭವ
ಮೊದಲೆಲ್ಲ ನಮ್ಮ ತಾತ ಮುತ್ತಾಂದಿರು ನೂರು ವರ್ಷಗಳ ತುಂಬು ಜೀವನ ಸಂತೃಪ್ತಿಯಿoದ ಬಾಳಿ ಬದುಕುತ್ತಿದ್ದರು. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಮನೆ ಮನವನ್ನು ಬೆಳಗುವ ಜ್ಯೋತಿಯಾಗುತ್ತಿದ್ದರು. ಹೆಣ್ಣಾದರೆ ತವರು ಮನೆಯ ಕೀರ್ತಿಯನ್ನು ಬೆಳಗುವ ಸದಾಶಯದೊಂದಿಗೆ ಸದಾ ಜೀವವನ್ನು ಸವೆಸುತ್ತಿದ್ದಳು. ಬದುಕಿನ ಪಯಣದಲ್ಲಿ ಬರುವ ಎಲ್ಲ ನೋವನ್ನು ನುಂಗಿಕೊoಡು ಕುಟುಂಬಕ್ಕಾಗಿ ಜೀವ ತೇಯುತ್ತಿದ್ದಳು. ಗಂಡಾದರೆ ಹೊಲದ ಕೃಷಿ ಕೆಲಸಗಳಲ್ಲಿ ವೃತ್ತಿ ವ್ಯಾಪಾರ ಕರ್ತವ್ಯದಲ್ಲಿ ಶ್ರಮವಹಿಸುತ್ತಿದ್ದರು. ಬದುಕು ಹೋರಾಟ ಎರಡೂ ಬೇರೆ ಬೇರೆ ಅಲ್ಲ ಎನ್ನುವ ತಲೆಮಾರಿಗೆ ಸೇರಿದವರಾಗಿದ್ದರು. ಅನನ್ಯ ಜೀವನದ ಅನುಭವವನ್ನು ಪಡೆಯುತ್ತಿದ್ದರು. ಬಹುಶಃ ಆ ತಲೆಮಾರಿನ ಕೊನೆಯ ಕೊಂಡಿಗಳು ಕಳಚಿ ಹೋಗಿವೆ. ನಮ್ಮ ಹಿರಿಯರ ಬದುಕು ನಮಗೆ ಜೀವನದ ವಿಶಿಷ್ಟ ಹೊಳಹುಗಳನ್ನು ನೀಡುತ್ತದೆ. .ಪೂರ್ವಜರ ಬದುಕು ಅವರ ಪಾರಂಪರಿಕ ಜ್ಞಾನ ವಿಜ್ಞಾನವನ್ನು ಪರಿಚಯಿಸುತ್ತದೆ. ಜನಪದ ಸಾಹಿತ್ಯ ಅವರ ಅಗಾಧ ಜ್ಞಾನಕ್ಕೆ ತೋರುಬೆರಳಿನಂತಿದೆ.
ಬದಲಾದ ಕಾಲ
ಈಗ ಕಾಲ ಬದಲಾಗಿದೆ. ಮನುಷ್ಯನ ಜೀವನಶೈಲಿ ಅಗಾಧವೆನಿಸುವಷ್ಟು ಬದಲಾಗಿದೆ. ವ್ಯಕ್ತಿತ್ವದ ವಕ್ರತೆಯನ್ನು ತಿದ್ದಿಕೊಳ್ಳುವ ಮನಸ್ಥಿತಿ ಕಡಿಮೆಯಾಗಿದೆ. ಒತ್ತಡ ದಾವಂತ ಹೆಚ್ಚಿದೆ. ಹೀಗಾಗಿ ನೂರು ವಸಂತಗಳನ್ನು ಸಂತಸದಿoದ ಕಳೆಯುವುದು ದುರ್ಭರವಾಗಿದೆ. ಐಶಾರಾಮಿ ಬದುಕಿನ ಆಕರ್ಷಣೆಗೆ ಒಳಗಾಗಿ ಮೋಸ ವಂಚನೆ ದರೋಡೆ ಸುಲಿಗೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಸರಳ ಜೀವನವೇ ಸುಖೀ ಜೀವನವೆಂಬ ಕಲೆಯನ್ನು ಕಲಿತರೆ ಎತ್ರರವು ವಿಸಾರವೂ ಆಗಿರುವ ಅಮೂಲ್ಯ ಬದುಕನ್ನು ಸವಿಯಬಹುದು.
ಜೀವನವೆಂದರೆ..
ಜೀವನಕ್ಕೆ ಒಂದೇ ಮುಖವಿಲ್ಲ. ಹಲವಾರು ಮುಖಗಳಿವೆ. ಇದೊಂದು ಜೈವಿಕ ಜಗತ್ತಿನ ವ್ಯಾಪಾರ.
ಜೀವನವೆಂಬುದು ಒಂದು ಸಾಗರವಿದ್ದಂತೆ ಅದನ್ನು ಈಜುವುದು ಬಹಳ ಕಷ್ಟ. ಅದಕ್ಕೆ ದಾಸರು ‘ಈಸಬೇಕು ಇದ್ದು ಜಯಿಸಬೇಕು.’ ಎಂದು ಹೇಳಿದರು. ಈಸುವುದು ಬಲು ಕಠಿಣ. ಈಜಿ ದಡ ಸೇರುವುದೇ ಜೀವನ. ದಾರ್ಶನಿಕರು ಶರಣರು ಸಾಧು ಸಂತರು ತತ್ವಜ್ಞಾನಿಗಳು ಮೇದಾವಿಗಳು ತಾವು ಕಂಡoತೆ ಅದನ್ನು ವ್ಯಾಖ್ಯಾನಿಸಿದರು ಕೆಲವರು ಹೋರಾಟವೆಂದರು. ಇನ್ನೂ ಕೆಲವರು ಒಂದು ಆಟವೆಂದರು ನಾಟಕವೆಂದರು ಸವಾಲೆಂದರು. ಇದನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಎನ್ನಬಹುದು
ಅನುಭವಿಸುವಂಥದ್ದು
ಜೀವನವೆoದರೆ ಅರ್ಥ ಮಾಡಿಕೊಳ್ಳುವಂಥದ್ದಲ್ಲ. ಅನುಭವಿಸುವಂತದ್ದು. ಸೋಲು ಗೆಲುವು ಅಳುವು ನಗುವು ಜೀವನದ ಅವಿಭಾಜ್ಯ ಅಂಗಗಳು. ಸುಖ ದುಃಖಗಳು ಇದರ ಭಾಗಗಳು. ಅವು ಒಂದರ ನಂತರ ಒಂದು ಬರುತ್ತವೆ.
ಸುಖ ದುಃಖಗಳನ್ನು
ಸಮಾನವಾಗಿ ಸ್ವೀಕರಿಸುವುದು
ಸಮಾಧಾನದಿಂದ ಇರುವುದೇ ಕಷ್ಟಗಳಿಗೆ ಮದ್ದು. ಬಲ್ಲವರು ಹೇಳಿದ ಮಾತಿನಂತೆ ’ಸೋಲಿನ ಪಾಠ ಚಂದ. ಹಸಿವಿನ ಊಟ ಚೆಂದ ಪ್ರೀತಿಯ ಕೋಪ ಚೆಂದ ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ.’
ಜೀವಿಸುವುದು ಮುಖ್ಯವಲ್ಲ
ಜೀವನದಲ್ಲಿ ಕೇವಲ ಜೀವಿಸುವುದು ಮುಖ್ಯವಲ್ಲ. ಯಾವ ರೀತಿ ಜೀವಿಸುತ್ತೇವೆ ಎನ್ನುವುದು ಮುಖ್ಯ. ನಮಗಾಗಿ ಜೀವಿಸುವುದಕ್ಕಿಂತ ನಮ್ಮವರಿಗಾಗಿ ಮತ್ತು ಬೇರೆಯವರಿಗಾಗಿ ಜೀವಿಸುವುದು ಹೆಚ್ಚು ಬೆಲೆಯನ್ನು ತರುತ್ತದೆ. ಬದುಕನ್ನು ಒಂದು ಕ್ಷಣದಲ್ಲಿ ಬದಲಿಸಲು ಸಾಧ್ಯವಿಲ್ಲ. ಆದರೆ, ಆ ಒಂದು ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಬದುಕನ್ನು ಬದಲಿಸಬಲ್ಲದು.
ಐದು ಸಂಗತಿಗಳು
ಹೇಳಿದ ವಿಷಯವನ್ನು ಬಿಟ್ಟು ಸಂಬoಧವೇ ಇಲ್ಲದ ಬೇರೆ ವಿಷಯದ ಬಗ್ಗೆ ಮಾತನಾಡುವುದು, ಮಾಡಿದ ಕೆಲಸವು ಸಮರ್ಪಕವಾಗಿದ್ದರೂ ಕಾರಣವಿಲ್ಲದೇ ದ್ವೇಷಿಸುವುದು, ಅವಶ್ಯವಾಗಿ ಇರಬೇಕಾದ ಸ್ಥಳದಲ್ಲಿ ಇಲ್ಲದೇ ಇರುವುದು, ತಮ್ಮ ಸಂಶಯ ನಿವಾರಣೆಗೆ ಯಾರೇ ಯಾವುದೋ ಒಂದು ಪ್ರಶ್ನೆ ಮಾಡಿದಾಗ ಉತ್ತರಿಸದೇ ಇರುವುದು ಮತ್ತು ಪ್ರೀತಿಯಿಂದ ಆಮಂತ್ರಣ ಕೊಟ್ಟಾಗ ಉಪೇಕ್ಷಾ ಭಾವದಿಂದ ಅಲ್ಲಿಗೆ ಹೋಗದೇ ಇರುವುದು ಈ ಐದು ಸಂಗತಿಗಳು ಗುಣರಹಿತನ ಲಕ್ಷಣಗಳಾಗಿವೆ.
ಇವುಗಳ ಬಗ್ಗೆ ಅಲಕ್ಷö್ಯ ಮಾಡದೇ ಸದ್ಗುಣವಂತನಾಗಲು ಪ್ರಯತ್ನಿಸಬೇಕು ಅಪರಮಿತ ತ್ಯಾಗ ಮಾಡಿದ ಬದುಕಿಗೆ ಬೆಲೆಯನ್ನು ಕಟ್ಟಲಾಗುವುದಿಲ್ಲ.
ಹಿಡಿ ಪ್ರೀತಿ
ಮಾತಿಲ್ಲದಿದ್ದರೆ ಜೀವನವೇ ಮೂಕವಾಗುತ್ತದೆ. ಕೊಂಕು ಮಾತುಗಳು ಹೆಚ್ಚಾದರೆ ಮೂಕರೋಧನವನ್ನು ಅನುಭವಿಸಬೇಕಾಗುತ್ತದೆ. ಯಾರೇ ಆಗಲಿ ಬಯಸುವುದು ಒಂದು ಹಿಡಿ ಪ್ರೀತಿಯನ್ನು. ಮಾತೆಯ ಮಮತೆಯನ್ನು ಧಾರೆಯೆರೆಯುವ ಹೃದಯ ನಮ್ಮದಾಗಬೇಕು. ಪ್ರತಿಯೊಬ್ಬರೊಂದಿಗೂ ಪ್ರೀತಿ ವಿಶ್ವಾಸ ವಾತ್ಸಲ್ಯದೊಂದಿಗೆ ನಡೆದುಕೊಳ್ಳಬೇಕು. ಒಪ್ಪ ಓರಣ ಶಿಸ್ತು ಸಹನೆ ಕಲಿಯಬೇಕು.
“ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ,”ಎಲ್ಲವನ್ನೂ ಅನುಭವಿಸುತ್ತ ಬಾಳುವುದೇ ಬದುಕು. ಕೈಯಲ್ಲಿ ಅಧಿಕಾರವಿರುವಾಗ ಸ್ಥಾನದ ಮಹತ್ವವನ್ನು ಅರಿಯದೆ, ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಅಧಿಕಾರವಿರುವಾಗ ಅರಿತು ನಡೆದುಕೊಳ್ಳಬೇಕು. ಹಣವಿದೆ ಆಸ್ತಿಯಿದೆ ಎಂಬ ಕಾರಣಕ್ಕೆ ಅಸಭ್ಯವಾಗಿ ವರ್ತಿಸುವುದು ಉಚಿತವಲ್ಲ. ಜಗಕೆ ಮಾದರಿಯಾಗಿ ಬಾಳಬೇಕು. ಸಭ್ಯ ಸಂಸ್ಕೃತಿಯ ಹರಿಕಾರರಾಗಬೇಕು. ಪ್ರತಿಯೊಬ್ಬರ ಅಭಿರುಚಿ ಆಸಕ್ತಿ ಹವ್ಯಾಸಗಳು ವಿಭಿನ್ನ.ಆದ್ದರಿಂದ ತಿಳಿದು ನಡೆಯಬೇಕು.
ಸವಾಲುಗಳು
ಸವಾಲುಗಳು ಏಕಾಏಕಿ ಹರಡಿಕೊಳ್ಳುತ್ತವೆ. ಇನ್ನೇನು ಜೀವನ ಮುಗಿದು ಹೋಯಿತಲ್ಲ ಎನ್ನುವಷ್ಟರಲ್ಲಿ ಭರವಸೆಯ ಬೆಳಕಿನ ಕಿರಣವೊಂದು ಮೂಡುತ್ತದೆ. ಬದುಕಿನ ಏರಿಳಿತಗಳು ಇತ್ತೀಚಿಗೆ ಮೈ ತಾಳಿದ ವಿದ್ಯಮಾನಗಳಲ್ಲ. ಅನಾದಿಕಾಲದಿಂದಲೂ ಈ ಜೀವನ ಇರುವುದೇ ಹೀಗೆ. ಸುಖ ದುಃಖಗಳು ಪ್ರತಿ ಕ್ಷಣವನ್ನು ವರ್ಣಮಯವಾಗಿಸುತ್ತದೆ. ಬದುಕು ನಮಗೆ ಬದುಕುವುದನ್ನು ಕಲಿಸುತ್ತದೆಯೇ? ಎಂಬ ಪ್ರಶ್ನೆ ಕೇಳಬಹುದು. ಬದುಕೇ ಅದಕ್ಕೆ ಉತ್ತರ ನೀಡುತ್ತದೆ. ಜೀವನದಲ್ಲಿ ಬಗೆಬಗೆಯ ಪಾಠಗಳಿವೆ.ಅವುಗಳ ಪಟ್ಟಿ ನಮ್ಮ ಪದಕೋಶದಲ್ಲೇ ಇಲ್ಲ.
ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಜೀವನದಲ್ಲಿ ಕಹಿ ಅನುಭವಾದಾಗಲೇ ಆ ವ್ಯಕ್ತಿಗೆ ಹೊಸ ಜೀವನ ಶುರು ಆದಂತೆ.
ಹೇಗೆಂದರೆ ಇಲ್ಲಿ ಯಾರಿಗೆ ಯಾರೂ ಇಲ್ಲ. ನಮಗೆ ನಾವೇ ಎಲ್ಲ ಅನ್ನೋ ಸತ್ಯ ಆಗಲೇ ಸ್ಪಷ್ಟವಾಗಿ ಅರ್ಥವಾಗೋದು.’ ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ. ಎನ್ನುವುದೇ ಬದುಕು ಕಲಿಸುವ ಪಾಠ. ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು. ಮುಳ್ಳಿನ ಗಿಡವಾಗುವುದಕ್ಕಿಂತ, ನೆರಳು ನೀಡುವ ಫಲಭರಿತ ವೃಕ್ಷವಾಗಬೇಕು.
ಕೊನೆ ಹನಿ
ನಿನ್ನೆಯದನ್ನು ಚಿಂತಿಸಬಾರದು. ನಾಳೆ ಏನಾಗುತ್ತದೆಂದು ಅತಿಯಾಗಿ ಯೋಚಿಸಬಾರದು. ಇಂದಿನ ಬದುಕನ್ನು ವ್ಯಥೆಗೆ ದೂಡಿ ವ್ಯರ್ಥವಾಗಿ ಮಾಡಿಕೊಳ್ಳಬಾರದು. ವರ್ತಮಾನವೆಂಬುದು ಭಗವಂತನ ಮೌಲಿಕ ಕಾಣಿಕೆಯೆಂದು ಬಾಳಬೇಕು. ಇದೇ ಮಾತನ್ನು ಸುಭಾಷಿತವೊಂದು ಹೀಗೆ ಹೇಳುತ್ತದೆ. ‘ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ ಹಾರಾಡಲಿ ಬಿಡಿ. ಆದರೆ, ಅಲ್ಲೇ ಗೂಡು ಕಟ್ಟಲು ಅವಕಾಶ ನೀಡಬೇಡಿ.’ ಜೀವನವೆಂಬುದು, ಹೆಮ್ಮರದ ತುದಿಯಲ್ಲಿ ಕಟ್ಟಿದ ಜೇನುಗೂಡುಗಳಿಂದ ತುಪ್ಪವನ್ನು ತೆಗೆಯುವಂತಿದೆ. ಆ ಕುಶಲತೆಯನ್ನು ಕಲಿತುಕೊಂಡರೆ ಜೀವನದ ಸವಿಜೇನು ಚಪ್ಪರಿಸಬಹುದು.
ಜಯಶ್ರೀ.ಜೆ. ಅಬ್ಬಿಗೇರಿ.



