ಕಥಾ ಸಂಗಾತಿ
ಸೌಮ್ಯ ಕೆ ವಿ
“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..”


ಜೇನುಪುರದ ತಾವರೆ ಕೆರೆ ಹಿಂದೆಂದೂ ಸುದ್ದಿಯಾಗಿರಲಿಲ್ಲ. ಮಳೆಗಾಲದಲ್ಲಿ ತುಂಬಿ, ಬೇಸಿಗೆಯಲ್ಲಿ ಕುಗ್ಗಿ, ವರ್ಷದಿಂದ ವರ್ಷಕ್ಕೆ ಅದೇ ತಾವರೆ ಹೂಗಳನ್ನು ಅರಳಿಸುತ್ತಾ, ಊರಿನ ಹಿರಿಯರಂತೆ ಗಂಭೀರವಾಗಿ ಬದುಕಿತ್ತು.
ಆ ದಿನ ಮಾತ್ರ ಕೆರೆಯ ದಂಡೆಯಲ್ಲಿ ಜನಸಂದಣಿ.
“ಮೊಸಳೆ… ಮೊಸಳೆ ಬಂದಿದೆ!”
ಎಂಬ ಕೂಗು ಕೇಳುತ್ತಿದ್ದಂತೆ ಊರಿನ ಜನರೆಲ್ಲ ಓಡಿಬಂದಿದ್ದರು. ನೀರಿನ ಅಂಚಿನಲ್ಲಿ ಒಂದು ಪುಟ್ಟ ಮೊಸಳೆಯ ಮರಿ ಬಿಸಿಲಿಗೆ ಮೈಯೊಡ್ಡಿ ಮಲಗಿತ್ತು. ಯಾರೋ ಮೊಬೈಲ್ನಲ್ಲಿ ಚಿತ್ರ ತೆಗೆಯುತ್ತಿದ್ದರು. ಯಾರೋ ಮಕ್ಕಳನ್ನು ಹಿಂದೆ ಸರಿಸುತ್ತಿದ್ದರು. ಇನ್ನೂ ಕೆಲವರು ಅರಣ್ಯ ಇಲಾಖೆಗೆ ಕರೆ ಮಾಡುತ್ತಿದ್ದರು.
ಮನೆಯ ನಾಲ್ಕು ಗೋಡೆಗಳ ಮಧ್ಯೆ ದಿನವಿಡೀ ಸಿಲುಕಿ ಬೇಸರಗೊಂಡು ಸಹನಾ ಎಂದಿನಂತೆ ಸಂಜೆಯ ವಾಕಿಂಗ್ಗೆ ಬಂದಿದ್ದಳು. ಜನಸಂದಣಿ ಕಂಡು ಕುತೂಹಲದಿಂದ ಮುಂದೆ ಹೋಗಿ ಮೊಸಳೆಯನ್ನು ನೋಡಿದಳು. ಅವಳೂ ಮೊಬೈಲ್ ತೆಗೆದು ಎರಡು ಚಿತ್ರ, ಒಂದು ಚಿಕ್ಕ ವಿಡಿಯೋ ಮಾಡಿಕೊಂಡಳು.
ಮನೆಗೆ ಬಂದು ಅಡುಗೆ, ಮಕ್ಕಳ ಓದು, ಅತ್ತೆ-ಮಾವಂದಿರ ಔಷಧಿ—ಇವೆಲ್ಲದರ ನಡುವೆ ಆ ವಿಡಿಯೊವನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದಾಗ, ಅರಿವಿಲ್ಲದೆ ಹಳೆಯ ಪ್ರಾಥಮಿಕ ಶಾಲಾ ಸಹಪಾಠಿಗಳ ವಾಟ್ಸ್ಆಪ್ ಗುಂಪಿಗೂ ಕಳುಹಿಸಿಬಿಟ್ಟಳು.
ಆ ಗುಂಪು ವರ್ಷಗಳಿಂದ ಚಾಲ್ತಿಯಿದ್ದರೂ ಅದರಲ್ಲಿ ಜೀವಂತಿಕೆಯೇನಿರಲಿಲ್ಲ.
ಬೆಳಿಗ್ಗೆ “ಶುಭೋದಯ” ಹೂವುಗಳು, ದೇವರ ಚಿತ್ರಗಳು, ಹಬ್ಬದ ಶುಭಾಶಯಗಳು… ಅಷ್ಟಕ್ಕೇ ಸೀಮಿತವಾಗಿತ್ತು.
ಮೊಸಳೆಯ ವಿಡಿಯೊ ಕಳುಹಿಸಿದ ನಂತರವೂ ಸಹನಾ ಅದನ್ನು ಮರೆತುಬಿಟ್ಟಳು.
ಆದರೆ ಮರುದಿನ ಅವಳ ಮೊಬೈಲ್ನಲ್ಲಿ ಅಪರಿಚಿತ ಸಂಖ್ಯೆಯಿಂದ ಒಂದು ಸಂದೇಶ ಬಂತು.
“ಹಲೋ… ನಾನು ಕಿಶನ್ ಭಾರದ್ವಾಜ್. ನಿನ್ನ ಪ್ರಾಥಮಿಕ ಶಾಲಾ ಸಹಪಾಠಿ.. ನೆನಪಿದೆಯೇ?”
ಆ ಒಂದು ಸಾಲು ಅವಳನ್ನು ಮೂವತ್ತು ವರ್ಷಗಳ ಹಿಂದಕ್ಕೆ ಕರೆದೊಯ್ದಿತು.
ಕಿಶನ್…
ಪುಸ್ತಕಗಳೊಳಗೇ ಬದುಕುತ್ತಿದ್ದ ಹುಡುಗ.
ತರಗತಿಯಲ್ಲಿ ಶಿಕ್ಷಕರು ಪ್ರಶ್ನೆ ಕೇಳುವ ಮೊದಲೇ ಉತ್ತರ ಹೇಳುತ್ತಿದ್ದ ಹುಡುಗ.
ದಪ್ಪ ಕನ್ನಡಕದ ಹಿಂದೆ ಯಾವಾಗಲೂ ಏನನ್ನೋ ಯೋಚಿಸುತ್ತಿದ್ದ ಕಣ್ಣುಗಳು.
ಆದರೆ ಯಾರೊಂದಿಗೂ ಹೆಚ್ಚು ಮಾತನಾಡದ ಮೌನ.
ಸಹನಾ ಅವನನ್ನು ನೆನಪಿಸಿಕೊಂಡಳು. ಆದರೆ ಅವನ ಜೊತೆ ಮಾತನಾಡಿದ ಒಂದೇ ಒಂದು ಸಂದರ್ಭ ನೆನಪಿಗೆ ಬರಲಿಲ್ಲ.
“ಹೇಗಿದ್ದೀರಾ? ಇಷ್ಟು ವರ್ಷಗಳ ನಂತರ ನನ್ನ ನೆನಪಾಯಿತೇ?” ಎಂದು ಅವಳು ಉತ್ತರ ಕಳುಹಿಸಿದಳು.
ಕೆಲವೇ ಕ್ಷಣಗಳಲ್ಲಿ ಉತ್ತರ ಬಂತು.
“ನಿನ್ನ ಮೊಸಳೆಯ ವಿಡಿಯೋ ವನ್ನು ಗ್ರೂಪ್ ನಲ್ಲಿ ನೋಡಿದೆ. ಆ ಕೆರೆ ನಿಮ್ಮ ಊರಿನಲ್ಲೇ ಇದೆಯಾ?”
ಸಹನಾಳಿಗೆ ನಗು ಬಂತು.
ಇಷ್ಟು ವರ್ಷಗಳ ನಂತರ ಕೇಳುವ ಪ್ರಶ್ನೆ ಇದೇನಾ?
ಆದರೂ ಮಾತು ಅಲ್ಲಿಂದಲೇ ಆರಂಭವಾಯಿತು.
ಕಿಶನ್ ಈಗ ಒಡಿಶಾದ ಒಂದು ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿ. ದೇಶ-ವಿದೇಶ ಅಲೆದ ಜೀವನ. ಮದುವೆಯಾಗಿತ್ತು. ಮುರಿದುಹೋಗಿತ್ತು. ಮಕ್ಕಳು ಇರಲಿಲ್ಲ. ಈಗ ಕೆಲಸವೇ ಅವನ ಸಂಗಾತಿ.
ಸಹನಾ ತನ್ನ ಬಗ್ಗೆ ಹೆಚ್ಚು ಹೇಳಲಿಲ್ಲ.
“ಜೇನುಪುರದಲ್ಲಿ ಇದ್ದೇನೆ. ಇಬ್ಬರು ಮಕ್ಕಳು. ಗಂಡನಿಗೆ ಬಟ್ಟೆ ಅಂಗಡಿ.”
ಅಷ್ಟೇ.
ಮಾತುಗಳು ಕಡಿಮೆಯಿದ್ದರೂ, ದಿನಕ್ಕೆ ಒಂದೆರಡು ಸಂದೇಶಗಳು ಬರತೊಡಗಿದವು.
ಸಹನಾಳ ದಿನಚರಿಯೂ ಬದಲಾಯಿತು.
ಬೆಳಿಗ್ಗೆ ಎದ್ದ ಕೂಡಲೇ ಅವಳು ಮೊಬೈಲ್ ನೋಡುತ್ತಿದ್ದಳು.
ಅವನು ಏನಾದರೂ ಕಳುಹಿಸಿದ್ದಾನಾ?
ಒಂದು ಸಂದೇಶ ಬಂದರೂ ಮನಸ್ಸು ಹಗುರವಾಗುತ್ತಿತ್ತು.
ಅವಳಿಗೆ ಗಂಡನ ಬಗ್ಗೆ ದೂರುಗಳಿರಲಿಲ್ಲ. ಅವನು ದುಡಿತದ ಹಿಂದೆ ಬಿದ್ದ ಮನುಷ್ಯ. ಮನೆ, ಮಕ್ಕಳು, ಅತ್ತೆ-ಮಾವ—ಎಲ್ಲರ ಹೊಣೆ.. ಅವರ ಬದುಕು ಯಾವಾಗಲೋ ಲೆಕ್ಕಾಚಾರವಾಗಿಬಿಟ್ಟಿತ್ತು.
ಮಾತುಗಳಿದ್ದವು.
ಮಮತೆ ಇರಲಿಲ್ಲ.
ಕಾಳಜಿಯಿತ್ತು.
ಕುತೂಹಲ ಇರಲಿಲ್ಲ.
ಸಹನಾ ಯಾವಾಗ ನಕ್ಕಳು, ಯಾವಾಗ ಬೇಸರಪಟ್ಟಳು ಎಂಬುದನ್ನು ಗಮನಿಸುವಷ್ಟು ಬಿಡುವು ಯಾರಿಗೂ ಇರಲಿಲ್ಲ. ಹಳೆಯ ಗೆಳತಿ ಶುಭಾಳೊಂದಿಗೆ ಮೊಬೈಲ್ ನಲ್ಲಿ ಸಂಪರ್ಕಿಸುವುದನ್ನು ಬಿಟ್ಟರೆ ಬದುಕಿನ ಯಾವ ಸಂಗತಿಯಲ್ಲೂ ಉಮೇದಿಯಿರಲಿಲ್ಲ.. ಗಂಡ ನಾಲ್ಕು ಸಲ ಲೆಕ್ಕ ಮಾಡಿ ಕೊಡುವ ಎರಡು ಮೂರು ನೋಟುಗಳಲ್ಲಿ ಆನ್ ಲೈನ್ ಬಟ್ಟೆ ಆರ್ಡರ್ ಮಾಡುವ, ಧರಿಸಿ ಫೋಟೋ ಹೊಡಕೊಂಡು ಆಮೇಲೆ ರಿಟರ್ನ್ ಮಾಡಿ ಆ ದುಡ್ಡಿನಲ್ಲಿ ಮತ್ತೇನೋ ಆರ್ಡರ್ ಮಾಡುವುದಷ್ಟೇ ಅವಳಿಗೆ ಖುಷಿ ಕೊಡುವ ಸಂಗತಿಯಾಗಿತ್ತು..
ಕಿಶನ್ನ ಪ್ರತಿಯಂದು ಸಂದೇಶ ಅವಳ ದೈನಂದಿನ ಬದುಕಿನಲ್ಲಿ ಹೊಸ ಅಲೆ ಎಬ್ಬಿಸತೊಡಗಿತ್ತು.
ಕೆಲವೊಮ್ಮೆ ಮನುಷ್ಯನಿಗೆ ಪ್ರೀತಿಗಿಂತ ಮೊದಲು ಬೇಕಾಗುವುದು, ಯಾರೋ ತನ್ನನ್ನು ನೆನಪಿಸಿಕೊಂಡಿದ್ದಾರೆ ಎಂಬ ಭಾವನೆ.
ಬಹುಶಃ ಸಹನಾ ಅನುಭವಿಸುತ್ತಿದ್ದುದೂ ಅದೇ.
ಒಂದು ಸಂಜೆ ಕಿಶನ್ ಸಂದೇಶ ಕಳುಹಿಸಿದ.
“ನಾನು ಜೇನುಪುರಕ್ಕೆ ಬರಬಹುದಾ? ಆ ಮೊಸಳೆಯನ್ನು ಕಣ್ಣಾರೆ ನೋಡಬೇಕು.”
ಸಹನಾ ಮೊಬೈಲ್ ಪರದೆಯತ್ತ ಬಹಳ ಹೊತ್ತು ನೋಡುತ್ತ ಕುಳಿತಳು. ಗೆಳತಿ ಶುಭಾಗೆ ಹೀಗೆಲ್ಲ ನಡೀತು ಅಂದರೆ ಮೊಸಳೆ ಒಂದು ನೆವ ಅಷ್ಟೇ.. ಅವನು ಭೇಟಿ ಮಾಡಲು ಬಯಸಿರುವುದು ನಿನ್ನನ್ನು.. ! ಹೊಸ ಕಥೆ ಶುರುವಾಗುತ್ತಿದೆಯೋ ಅಥವಾ ಹಳೆಯ ಕಥೆಯೇ ಮರುಜೀವ ಪಡೆಯುತ್ತಿದೆಯೋ ಎಂದು ಕಾಲೆಳೆದಿದ್ದಳು..
ಕಿಶನ್ ಜೇನುಪುರಕ್ಕೆ ಬರುವ ದಿನ, ಸಹನಾ ತನ್ನ ವಯಸ್ಸನ್ನು ಮರೆತು ಕನ್ನಡಿಯ ಮುಂದೆಯೇ ನಿಂತಿದ್ದಳು.
ಅದು ಅವಳಿಗೆ ಹೊಸ ಅನುಭವ.
ಮದುವೆಯ ಮೊದಲ ವರ್ಷಗಳಲ್ಲಿ ಗಂಡನಿಗಾಗಿ ಸಿಂಗಾರ ಮಾಡಿಕೊಂಡಿದ್ದ ನೆನಪು ಇತ್ತು. ನಂತರ ಮಕ್ಕಳು, ಮನೆ, ಜವಾಬ್ದಾರಿಗಳು—ಇವೆಲ್ಲದರ ನಡುವೆ ತನ್ನ ಮುಖವನ್ನು ನೋಡುವುದಕ್ಕೂ ಸಮಯ ಸಿಕ್ಕಿರಲಿಲ್ಲ.
ಆದರೆ ಆ ದಿನ ನಾಲ್ಕು ಸೀರೆ ಬದಲಿಸಿದಳು. ಕೂದಲು ಮತ್ತೆ ಮತ್ತೆ ಸರಿಪಡಿಸಿದಳು. ಕಣ್ಣಿನ ಕೆಳಗಿನ ಆಯಾಸವನ್ನು ಮುಚ್ಚಲು ಸ್ವಲ್ಪ ಮೇಕಪ್ ಹಚ್ಚಿಕೊಂಡಳು.
ಯಾರಿಗೂ ಗೊತ್ತಾಗದಂತೆ.
ತನ್ನನ್ನೇ ಮೋಸಗೊಳಿಸುತ್ತಾ.. ಅವಳ ಬುದ್ದಿ, ಮನಸ್ಸು, ಹೃದಯ ಯಾವುದೂ ಅವಳ ಹತೋಟಿಯಲ್ಲಿ ಇರಲಿಲ್ಲ..
ಆದರೆ ಕಿಶನ್ನ್ನು ನೋಡಿದ ತಕ್ಷಣ ಅವಳ ಮನಸ್ಸಿನೊಳಗೆ ನಿರೀಕ್ಷೆಯ ಬಲೂನು ಢಮ್ಮೆಂದು ಒಡೆದ ಶಬ್ದ ಕೇಳಿಸಿತು!!
ಶಾಲೆಯ ದಿನಗಳ ಸಣಕಲು ಹುಡುಗ ಈಗ ಎಲ್ಲಿದ್ದ!
ಬೊಜ್ಜು ದೇಹ. ವಿರಳವಾಗಿರುವ ಕೂದಲು. ಆಯಾಸಗೊಂಡ ಕಣ್ಣುಗಳು. ವಯಸ್ಸಿಗಿಂತ ಹೆಚ್ಚು ಮುಪ್ಪು. ವರ್ಷಗಳ ಸಂಶೋಧನೆ, ನಿರಂತರ ಪ್ರಯಾಣ, ಏಕಾಂತ—ಇವೆಲ್ಲ ಸೇರಿ ಅವನ ಮುಖದ ಮೇಲೆ ಅಳಿಸಲಾರದ ಗುರುತು ಬಿಟ್ಟಿದ್ದವು.
ಸಹನಾ ಮನಸ್ಸಿನಲ್ಲೇ ನಕ್ಕಳು.
“ಇವನಿಗಿಂತ ನನ್ನ ಗಂಡನೇ ಚೆನ್ನಾಗಿ ಕಾಣುತ್ತಾರೆ.”
ಆ ಸಂಜೆ ಶುಭಾಗೆ ಕರೆ ಮಾಡಿದಾಗ ಮೊದಲ ಮಾತೇ ಅದಾಗಿತ್ತು.
ಶುಭಾ ಹೊಟ್ಟೆ ಹಿಡಿದು ನಕ್ಕಳು.
“ಅಯ್ಯೋ, ನೀನು ಹೀರೋನನ್ನೇ ಕಲ್ಪಿಸಿಕೊಂಡಿದ್ದೆಯಾ ಏನು!”
ಸಹನಾ ಕೂಡ ನಕ್ಕಳು.
ಆದರೆ ಆ ನಗುವಿನೊಳಗೆ ಸ್ವಲ್ಪ ನಿರಾಶೆಯೂ ಇತ್ತು.
ಅವಳು ಕಾಯುತ್ತಿದ್ದದ್ದು ಹಳೆಯ ನೆನಪುಗಳ ಮಾತುಗಳನ್ನು.
ಆದರೆ ಕಿಶನ್ಗೆ ಆಸಕ್ತಿ ಇದ್ದದ್ದು ಕೇವಲ ಮೊಸಳೆಯ ಮೇಲೆ. ಅಯ್ಯೋ ..ಅದರ ಮೇಲೆ ಸಂಶೋಧನೆ ಮಾಡಲೆಂದು ಅಷ್ಟು ದೂರದಿಂದ ಬಂದನೇ??
ಮುಂದಿನ ಎರಡು ದಿನ ಅವನು ತಾವರೆ ಕೆರೆಯ ದಂಡೆಯಲ್ಲೇ ಕಳೆದ.
ಬೆಳಿಗ್ಗೆ.
ಮಧ್ಯಾಹ್ನ.
ಸಂಜೆ.
ಕೆರೆಯ ಸುತ್ತ ತಿರುಗುತ್ತಿದ್ದ.
ನೀರಿನ ಅಂಚಿನಲ್ಲಿ ಕುಳಿತು ದೂರ ನೋಡುತ್ತಿದ್ದ.
ಗ್ರಾಮಸ್ಥರನ್ನು ಪ್ರಶ್ನಿಸುತ್ತಿದ್ದ.
ಆದರೆ ಮೊಸಳೆ ಮತ್ತೆ ಕಾಣಿಸಲಿಲ್ಲ.
ಹಿಂತಿರುಗುವ ಮುನ್ನ ಒಂದು ಸಂಜೆ ಇಬ್ಬರೂ ಕೆರೆಯ ದಡದಲ್ಲಿ ನಿಂತಿದ್ದರು.
ಸೂರ್ಯ ಅಸ್ತಮಿಸುತ್ತಿದ್ದ.
ತಾವರೆ ಎಲೆಗಳ ನಡುವೆ ಗಾಳಿ ನಿಧಾನವಾಗಿ ಹರಿಯುತ್ತಿತ್ತು.
ಆಗ ಕಿಶನ್ ಮನದಾಳದ ಮಾತುಗಳನ್ನು ಹಂಚಿಕೊಂಡ..
“ನನ್ನ ತಾಯಿ ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ತೀರಿಕೊಂಡರು..
-ಬ್ರೇನ್ ಕ್ಯಾನ್ಸರ್.. ಕೊನೆಯ ದಿನಗಳಲ್ಲಿ ಅವರು ನನ್ನನ್ನು ಗುರುತಿಸಲೂ ಆಗುತ್ತಿರಲಿಲ್ಲ.”
ಅವನು ಸ್ವಲ್ಪ ಹೊತ್ತು ನೀರಿನತ್ತ ನೋಡಿದ.
“ಕಳೆದ ಕೆಲವು ವರ್ಷಗಳಿಂದ ಒಂದು ಕನಸು ಪದೇಪದೇ ಬೀಳುತ್ತಿದೆ.”
“ಯಾವ ಕನಸು?” ಎಂದು ಸಹನಾ ಕೇಳಿದಳು.
“ನನ್ನ ತಾಯಿ ಮೊಸಳೆಯಾಗಿ ಹುಟ್ಟಿದ್ದಾರೆ ಅಂತ!”
ಸಹನಾಳಿಗೆ ಅವನು ತಮಾಷೆ ಮಾಡುತ್ತಿದ್ದಾನೇನೋ ಅನಿಸಿತು.
ಆದರೆ ಅವನ ಮುಖದಲ್ಲಿ ನಗುವಿರಲಿಲ್ಲ.
ಅವನು ನಿಜವಾಗಿಯೇ ಹೇಳುತ್ತಿದ್ದ.
ವಿಜ್ಞಾನಿಯಾಗಿದ್ದೂ?
ಸಂಶೋಧಕನಾಗಿದ್ದೂ?
ಸಹನಾ ಗೊಂದಲಕ್ಕೊಳಗಾದಳು.
“ಅದು ನಿಜವೋ ಸುಳ್ಳೋ ಗೊತ್ತಿಲ್ಲ, ನೀನು ಮೊಸಳೆಯ ವಿಡಿಯೋ ಶೇರ್ ಮಾಡಿದ ಮೇಲೆ ಇವಳೇ ನನ್ನ ಅಮ್ಮ ಎಂದು ಮತ್ತೆ ಕನಸಾಯಿತು!!” ಎಂದು ಕಿಶನ್ ನಿಧಾನವಾಗಿ ಹೇಳಿದ.
ಒಬ್ಬ ವಿಜ್ಞಾನಿ..
ಒಬ್ಬ ಬುದ್ಧಿವಂತ ಮನುಷ್ಯ..
ತನ್ನ ತಾಯಿಯನ್ನು ಒಂದು ಮೊಸಳೆಯೊಳಗೆ ಹುಡುಕುತ್ತಿದ್ದಾನೆ!!
ಮನುಷ್ಯನ ದುಃಖಕ್ಕೆ ತರ್ಕದ ಭಾಷೆ ಗೊತ್ತಿರದಿರಬಹುದು ಎಂದು ಮೊದಲ ಬಾರಿಗೆ ಅವಳಿಗೆ ಅನಿಸಿತು.
ಹಿಂತಿರುಗುವಾಗ ಕಿಶನ್ ಒಂದು ವಿನಂತಿ ಮಾಡಿದ.
“ಮೊಸಳೆ ಮತ್ತೆ ಕಂಡರೆ ನನಗೆ ಫೋಟೋ ಕಳುಹಿಸು.”
“ಸರಿ.”
“ಸಾಧ್ಯವಾದರೆ ಅದರ ಬಗ್ಗೆ ಗಮನವಿಡು.”
“ಅಂದರೆ?”
“ಆಹಾರ ಹಾಕು. ಯಾರಾದರೂ ತೊಂದರೆ ಕೊಡದಂತೆ ನೋಡಿಕೋ.”
ಸಹನಾ ನಕ್ಕಳು.
“ನಾನು ಮೊಸಳೆಯ ಕಾವಲುಗಾರ್ತಿಯಾ?”
“ನಾನು ಖರ್ಚು ಕಳುಹಿಸುತ್ತೇನೆ.”
ಆ ಮಾತು ಕೇಳಿದಾಗ ಸಹನಾ ಏನೂ ಹೇಳಲಿಲ್ಲ.
ಮೊದಲ ತಿಂಗಳು ಕಿಶನ್ ಸ್ವಲ್ಪ ಹಣ ಕಳುಹಿಸಿದ.
ಸಹನಾ ನಿಜವಾಗಿಯೇ ಕೆಲವು ಮೀನುಗಳನ್ನು ತಂದು ಕೆರೆಯ ಬಳಿ ಹಾಕಿದಳು.
ಮುಂದಿನ ತಿಂಗಳು ಮತ್ತೆ ಹಣ ಬಂತು.
ಅದಾದ ಮೇಲೆ ಇನ್ನೊಮ್ಮೆ.
ಇದರ ಮಧ್ಯೆ ಕಿಶನ್ ಜರ್ಮನಿಗೆ ಹೊರಟ.
ದೂರದ ದೇಶದಿಂದಲೂ ಅವನು ಮೊಸಳೆಯ ವಿಚಾರ ಕೇಳುತ್ತಿದ್ದ.
“ಇವತ್ತು ಕಂಡಿತಾ?”
“ನೀರಿನ ಮಟ್ಟ ಹೇಗಿದೆ?”
“ಅದಕ್ಕೆ ಆಹಾರ ಹಾಕಿದ್ದೀಯಾ?”
ಸಹನಾ ಉತ್ತರಿಸುತ್ತಿದ್ದಳು.
ಆದರೆ ನಿಧಾನವಾಗಿ ಅವಳ ಉತ್ತರಗಳಲ್ಲಿ ಸತ್ಯ ಕಡಿಮೆಯಾಗತೊಡಗಿತು.
ಒಂದು ದಿನ ಅವಳು ಬರೆದಳು:
“ಮೊಸಳೆಗೆ ಮೀನು ತರಲು ಖರ್ಚು ಹೆಚ್ಚಾಗಿದೆ.”
ಕಿಶನ್ ತಕ್ಷಣ ಹಣ ಕಳುಹಿಸಿದ.
ಮತ್ತೊಂದು ದಿನ:
“ಕೆರೆಯ ನೀರು ಕಲುಷಿತವಾಗಿದೆ. ಸ್ವಚ್ಛಗೊಳಿಸಬೇಕು.”
ಮತ್ತೆ ಹಣ ಬಂತು.
ಮೊದಲ ಬಾರಿ ಹಣ ಬಂದಾಗ ಅವಳಿಗೆ ಸಂಕೋಚವಾಯಿತು.
ಎರಡನೇ ಬಾರಿ ಕಡಿಮೆ ಆಯಿತು.ಮೂರನೇ ಬಾರಿ ಸಂಪೂರ್ಣ ಮಾಯವಾಯಿತು.
ಅವಳು ತನ್ನೊಳಗೆ ಒಂದು ಸಮರ್ಥನೆ ಕಂಡುಕೊಂಡಳು.
“ನಾನು ಕದಿಯುತ್ತಿಲ್ಲ. ಅವನೇ ಕೊಡುತ್ತಿದ್ದಾನೆ.”
ಆದರೆ ಕೆಲವು ಸುಳ್ಳುಗಳು ಮೊದಲಿಗೆ ಇತರರನ್ನು ಮೋಸಗೊಳಿಸುತ್ತವೆ.
ನಂತರ ಅವುಗಳನ್ನು ಹೇಳಿದವರನ್ನೇ. ಅದನ್ನು ಸಹನಾ ಇನ್ನೂ ಅರಿತಿರಲಿಲ್ಲ.
ಕೆರೆಯ ನೀರು ನಿಶ್ಚಲವಾಗಿತ್ತು.
ಮೊಸಳೆ ಅಪರೂಪಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿತ್ತು.
ಆದರೆ ಸಹನಾಳ ಬದುಕಿನಲ್ಲಿ ಹೊಸ ಅಲೆಗಳು ಎದ್ದಿದ್ದವು.
ಅವು ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದು ಅವಳಿಗೂ ಗೊತ್ತಿರಲಿಲ್ಲ.
ವರ್ಷಗಳು ಕೆಲವೊಮ್ಮೆ ಮನುಷ್ಯರನ್ನು ದೊಡ್ಡವರನ್ನಾಗಿಸುವುದಿಲ್ಲ.
ಅವರೊಳಗಿನ ಆಸೆಗಳನ್ನು ಮೊಸಳೆಯ ಬಾಯಿಗಿಂತ ದೊಡ್ಡದಾಗಿಸುತ್ತವೆ..
ಕಿಶನ್ ಕಳುಹಿಸುತ್ತಿದ್ದ ಹಣದಿಂದ ಸಹನಾ ಮೊದಲು ಒಂದು ಬಂಗಾರದ ಸರ ಕೊಂಡಳು. ನಂತರ ಇನ್ನೊಂದು. ದುಬಾರಿ ಸೀರೆಗಳು ಬಂದವು. ಗಂಡನ ಬಟ್ಟೆ ಅಂಗಡಿಯ ಒಂದು ಮೂಲೆಯಲ್ಲಿ ಮಹಿಳೆಯರ ಸಿದ್ಧ ಉಡುಪು ಮತ್ತು ಕೃತಕ ಆಭರಣಗಳ ಪುಟ್ಟ ಮಳಿಗೆಯನ್ನೂ ತೆರೆದಳು.
“ತವರು ಮನೆಯಿಂದ ಸ್ವಲ್ಪ ಆಸ್ತಿ ಬಂದಿದೆ,” ಎಂದು ಗಂಡನಿಗೆ ಹೇಳಿದಳು.
ಅವನು ಪ್ರಶ್ನಿಸಲಿಲ್ಲ.
ನಂಬಿಕೆ ಕೆಲವೊಮ್ಮೆ ಪ್ರಶ್ನೆಗಳಿಗಿಂತ ದೊಡ್ಡದು.
ಮೂರು ವರ್ಷಗಳು ಕಳೆದುಹೋದವು.
ಒಂದು ಬೆಳಿಗ್ಗೆ ಕಿಶನ್ನ ಸಂದೇಶ ಬಂತು.
“ನನ್ನ ಜರ್ಮನಿ ನಿಯೋಜನೆ ಮುಗಿದಿದೆ. ಒಂದೆರಡು ವಾರದಲ್ಲಿ ಜೇನುಪುರಕ್ಕೆ ಬರುತ್ತಿದ್ದೇನೆ.”
ಆ ಒಂದು ಸಾಲು ಓದಿದ ಕ್ಷಣದಿಂದ ಸಹನಾಳ ಮನಸ್ಸು ತನ್ನದೇ ಧ್ವನಿಯನ್ನು ಕಳೆದುಕೊಂಡಿತು. ರಾತ್ರಿ ಮಲಗಿದರೆ ನಿದ್ದೆ ಬರುತ್ತಿರಲಿಲ್ಲ.
ಬಂದರೂ ಮಧ್ಯರಾತ್ರಿಯಲ್ಲಿ ಬೆಚ್ಚಿ ಎಚ್ಚರವಾಗುತ್ತಿತ್ತು.
ಕನಸಿನಲ್ಲಿ ಕೆರೆಯ ನೀರು ಕಾಣಿಸುತ್ತಿತ್ತು.
ಆ ನೀರಿನಲ್ಲಿ ಮೊಸಳೆಯಲ್ಲ…
ತನ್ನ ಮುಖವೇ ತೇಲುತ್ತಿತ್ತು.
ಕುತ್ತಿಗೆಯ ತುಂಬ ಬಂಗಾರದ ಸರಗಳಿದ್ದರೂ, ಕಣ್ಣುಗಳಲ್ಲಿ ಬೆಳಕು ಇರಲಿಲ್ಲ. ರಾತ್ರಿಯಿಡೀ ಕೆಟ್ಟ ಕನಸುಗಳು.. ಸರಗಳೇ ನೇಣಿನ ಕುಣಿಕೆಯಾದಂತೆ.. ತನ್ನ ಮೈಯಿಡೀ ಮೊಸಳೆಯ ಚರ್ಮದಂತಾಗಿ ಬಿಟ್ಟಂತೆ.. ಯಾವ ಸೀರೆ ಉಡಲು ಹೋದರೂ ಮೊಸಳೆಯ ವಾಸನೆ ಬಂದಂತೆ.. ತನ್ನ ಬಾಯಂಚಲ್ಲಿ ಕೋರೆ ದಾಡೆಗಳು ಬೆಳೆದಂತೆ..ಏನೇನೋ ಭಯದ ಛಾಯೆಗಳು…
ಪ್ರತಿದಿನದ ಆತಂಕಕ್ಕಿಂತ ಒಂದು ದಿನದ ಕಹಿಸತ್ಯವೇ ಮೇಲು ಎಂದು ಕೊನೆಗೆ ನಿರ್ಧರಿಸಿದಳು.
ಕಿಶನ್ ಕಳುಹಿಸಿದ್ದ ಪ್ರತಿಯೊಂದು ರೂಪಾಯಿಯ ಲೆಕ್ಕ ಹಾಕಿದಳು.
ಕೆಲವು ಒಡವೆಗಳನ್ನು ಮಾರಿದಳು.
ಅಂಗಡಿಯ ಲಾಭದಿಂದ ಉಳಿಸಿದ್ದ ಹಣ ಸೇರಿಸಿದಳು.
ಇನ್ನೂ ಸಾಲದಿದ್ದುದನ್ನು ಸಾಲವಾಗಿ ತಂದಳು.
ಕಿಶನ್ ಜೇನುಪುರಕ್ಕೆ ಬಂದ ದಿನ, ಸಹನಾ ಅವನನ್ನು ನೇರವಾಗಿ ತಾವರೆ ಕೆರೆಗೆ ಕರೆದುಕೊಂಡು ಹೋದಳು.
ಸಂಜೆಯ ಹೊತ್ತು.
ಗಾಳಿಯಿಲ್ಲ.
ನೀರಿನ ಮೇಲಿದ್ದ ತಾವರೆ ಎಲೆಗಳೂ ಅಲುಗಾಡುತ್ತಿರಲಿಲ್ಲ.
ಅವಳು ಹಣ ತುಂಬಿದ್ದ ಚೀಲವನ್ನು ಅವನ ಮುಂದೆ ಇಟ್ಟಳು.
“ಇದು… ನಿನ್ನದು.”
ಕಿಶನ್ ಅವಳ ಮುಖ ನೋಡಿದ.
“ಏನಿದು?”
“ನೀನು ಕಳುಹಿಸಿದ ಹಣ. ಮೊಸಳೆಗಾಗಿ ಅಲ್ಲ… ನನ್ನ ಆಸೆಗಳಿಗಾಗಿ ಖರ್ಚು ಮಾಡಿದೆ. ನಿನ್ನನ್ನು ಮೋಸ ಮಾಡಿದೆ.”
ಆ ಮಾತು ಹೇಳಿದ ಕ್ಷಣ ಅವಳ ಹೃದಯದ ಮೇಲಿದ್ದ ವರ್ಷಗಳ ಭಾರ ಸ್ವಲ್ಪ ಇಳಿದಂತಾಯಿತು.
ಬಹಳ ಹೊತ್ತು ಕಿಶನ್ ಮಾತನಾಡಲಿಲ್ಲ.
“ಇದನ್ನು ನಾನು ತೆಗೆದುಕೊಂಡರೆ, ನಿನ್ನ ತಪ್ಪು ತೊಳೆದುಹೋಗುವುದಿಲ್ಲ,” ಎಂದು ಗಂಭೀರವಾಗಿ ಹೇಳಿದ. “ಅದು ಮೊಸಳೆಯಲ್ಲ ನನ್ನ ತಾಯಿ ಎಂದು ನಿನಗೆ ಹೇಳಿದ್ದೆನಲ್ಲ”
ಸಿಟ್ಟಿನಿಂದ ಕೆಂಪಾಗಿ ಅವನು ಮುಖ ತಿರುಗಿಸಿ ನಡೆಯತೊಡಗಿದ.
ಸಹನಾ ಅವನನ್ನು ತಡೆಯಲಿಲ್ಲ.
ಅವನು ನಿಧಾನವಾಗಿ ಕೆರೆಯ ದಂಡೆಯ ತಿರುವಿನ ಆಚೆಗೆ ಮರೆಯಾದ.
ಸಹನಾ ಒಬ್ಬಳೇ ತಾವರೆ ಕೆರೆಯ ದಡದಲ್ಲಿ ನಿಂತಿದ್ದಳು. ಈ ಹಣದಲ್ಲಿ ಟ್ರಸ್ಟ್ ಮಾಡಿ ವೃದ್ಧ ಮಹಿಳೆಯರಿಗೆ ಕಾಳಜಿ ಕೇಂದ್ರ ಮಾಡುವಾ.. ಕ್ಯಾನ್ಸರ್ ಪೀಡಿತರಿಗೆ ಆಸರೆಯಾಗುವಾ ಎಂದೆಲ್ಲಾ ಕಿಶನ್ ನ ಮನವೊಲಿಸಲು ಸಿದ್ಧ ಪಡಿಸಿದ ಮಾತುಗಳು ಅವಳ ಗಂಟಲಲ್ಲೇ ಉಳಿದುಬಿಟ್ಟವು.
ಸಂಜೆಯ ಬೆಳಕು ನೀರಿನ ಮೇಲೆ ಕರಗುತ್ತಿತ್ತು. ತಾವರೆ ಎಲೆಗಳು ನಿಶ್ಚಲವಾಗಿದ್ದವು. ಕೆರೆ ತನ್ನೊಳಗೆ ಸಾವಿರ ರಹಸ್ಯಗಳನ್ನು ಹೂತು ಮೌನವಾಗಿ ಮಲಗಿದಂತಿತ್ತು.
ಅವಳು ನೀರಿನತ್ತ ನೋಡಿದಳು.
ತನ್ನ ಪ್ರತಿಬಿಂಬ ಕಾಣಿಸಿತು.
ಕುತ್ತಿಗೆಯಲ್ಲಿದ್ದ ಬಂಗಾರದ ಸರಗಳಿಗಿಂತ ಕಣ್ಣುಗಳ ಸುತ್ತಲಿನ ಆಯಾಸವೇ ಹೆಚ್ಚು ಹೊಳೆಯುತ್ತಿತ್ತು.
ಅಷ್ಟರಲ್ಲಿ ತಾವರೆ ಎಲೆಗಳ ನಡುವೆ ಸಣ್ಣ ಅಲೆ ಎದ್ದಿತು.
ನೀರಿನ ಮೇಲೆ ಕಪ್ಪನೆಯೊಂದು ನೆರಳು ಕ್ಷಣಕಾಲ ತೇಲಿ, ಮತ್ತೆ ಆಳದೊಳಗೆ ಮರೆಯಾಯಿತು.
ಸಹನಾ ಉಸಿರು ಬಿಗಿಹಿಡಿದಳು.
ಅದು ಮೊಸಳೆಯೋ… ನೆರಳೋ…
ಅಥವಾ ಇಷ್ಟು ವರ್ಷಗಳಿಂದ ತನ್ನೊಳಗೆ ಬದುಕುತ್ತಿದ್ದ ಅಪರಾಧಪ್ರಜ್ಞೆಯೋ…
ಅವಳಿಗೆ ಗೊತ್ತಾಗಲಿಲ್ಲ.
ಗಾಳಿ ಮೆಲ್ಲಗೆ ಬೀಸಿತು.
ನೀರಿನ ಮೇಲಿದ್ದ ಅವಳ ಪ್ರತಿಬಿಂಬ ತುಂಡಾಗಿ, ಅಲೆಗಳಲ್ಲಿ ಕರಗಿಹೋಯಿತು.
ಆ ಕ್ಷಣದಲ್ಲಿ ಸಹನಾಳಿಗೆ ಒಂದು ಸತ್ಯ ಮಾತ್ರ ಸ್ಪಷ್ಟವಾಯಿತು.
ಮನುಷ್ಯನನ್ನು ಹೆಚ್ಚು ಕಾಡುವುದು ಅವನು ಮಾಡಿದ ತಪ್ಪಲ್ಲ. ಅದನ್ನು ಪ್ರತಿದಿನ ತನ್ನೊಳಗೆ ಮರೆಮಾಚಿಕೊಂಡು ಬದುಕಬೇಕಾದ ಶಿಕ್ಷೆ.
ಕೆರೆಯ ನೀರು ಮತ್ತೆ ನಿಶ್ಚಲವಾಯಿತು.
ಆದರೆ ಸಹನಾಳ ಮನಸ್ಸಿನಲ್ಲಿ ಎದ್ದ ಅಲೆಗಳು ಮಾತ್ರ ಮತ್ತೆಂದೂ ಶಾಂತವಾಗಲಿಲ್ಲ.
ಡಾ ಸೌಮ್ಯ ಕೆ.ವಿ.
ಯಲ್ಲಾಪುರ




ವಿಭಿನ್ನ ಕಥಾಹಂದರದಲ್ಲಿ ತುಂಬಾ ಚೆನ್ನಾಗಿ ವಾಸ್ತವಿಕ ಅಂಶವನ್ನು ತೆರೆದಿಟ್ಟಿದಿರಿ ಮೇಡಂ. ಕಥೆ ಇಷ್ಟ ವಾಯಿತು.