ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
“ಮರದ ಮೌನ”


ನನ್ನನ್ನು
ನೆರಳಿನ ಗಾಢತೆಯಿಂದ ಅಳೆಯುತ್ತೀರಿ
ಬೇರುಗಳ ಆಳವನ್ನು
ಯಾರೂ ಗಮನಿಸುವುದಿಲ್ಲ!
ನಾನು ನಿಂತಿರುವುದು
ನಿಮಗೆ ಸುಲಭವೆನಿಸುತ್ತದೆ;
ನೆಲದೊಳಗೆ ಪ್ರತಿದಿನ
ಕುಸಿಯದೆ ಹಿಡಿದಿಟ್ಟುಕೊಳ್ಳುವ
ಬೇರಿನ ಹೋರಾಟ ನಿಮಗೆ ಕಾಣುವುದಿಲ್ಲ
ನನ್ನ ಕೊಂಬೆಗಳಲ್ಲಿ
ಹಕ್ಕಿಗಳು ಗೂಡು ಕಟ್ಟಿದಾಗ
ಅದು ಅವುಗಳ ಮನೆಯೆನ್ನುತ್ತೀರಿ;
ಗಾಳಿ ಅವನ್ನು ಕೆಡವಿದಾಗ
ನನ್ನನ್ನೇ ಶಾಪಗ್ರಸ್ತವೆನ್ನುತ್ತೀರಿ!
ನಾನು ಉದುರಿಸಿದ ಎಲೆಗಳು
ನನ್ನ ಸೋಲಲ್ಲ ಕೇಳಿರಿ;
ಹೊಸ ಋತುವಿಗೆ ಬರೆದ
ಮುನ್ನುಡಿಯಷ್ಟೇ ನೋಡಿರಿ!
ನನ್ನ ಹಣ್ಣುಗಳ ಸಿಹಿಯನ್ನು
ನಿಮ್ಮ ನಾಲಿಗೆ ನೆನಪಿಡುತ್ತದೆ;
ಆ ಸ್ವಾದಕ್ಕೆ ಕಾರಣವಾದ
ನನ್ನ ಕಹಿ ಬೇರುಗಳನ್ನು
ಯಾರೂ ನೆನಪಿಸಿಕೊಳ್ಳುವುದಿಲ್ಲ!
ಕಲ್ಲೆಸೆದ ಕೈಗಳಿಗೂ
ನೆರಳನ್ನೇ ಕೊಟ್ಟಿದ್ದೇನೆ!
ಆದರೂ ನನ್ನ ಮೌನವನ್ನು
ದುರ್ಬಲತೆಯೆಂದು ಕರೆಯುತ್ತೀರಿ!
ನಾನು ಆಕಾಶದ ಕಡೆ
ಎತ್ತರವಾಗಿ ಬೆಳೆದಂತೆಯೇ
ಭೂಮಿಯ ಆಳಕ್ಕೆ
ವಿನಯದಿಂದ ಇಳಿದಿದ್ದೇನೆ!
ಕೊನೆಗೆ ನನ್ನನ್ನು ಇಂಚಿಂಚು ಕಡಿದು
ಮೇಜು ಬಾಗಿಲು ಚಿತೆಯನ್ನಾಗಿ ಮಾಡುತ್ತೀರಿ;
ರೂಪಗಳು ಬದಲಾಗುತ್ತವೆ!
ನನ್ನ ಮರತ್ವ ಮಾತ್ರ ಸಾಯುವುದಿಲ್ಲ!
ನೀವು ಕಾಣುವುದು
ಮರದಂತಹ ನನ್ನ ಸಪೂರ ದೇಹ!
ನಾನು ಬದುಕುವುದು
ಬೇರುಗಳ ಗಾಢ ನಿಗೂಢ ಮೌನ!
ನಿಮ್ಮ ನೋಟಕ್ಕೆ
ನಾನು ಕೇವಲ ಮರದಂತ ಸ್ವತ್ರು!
ನನ್ನ ಆತ್ಮದ ಸಮಾಧಾನಕ್ಕೆ
ಲೋಕದ ಸತ್ಯ ವ್ಯವಹಾರಕ್ಕು
ನಾನೇ ಒಂದು ಭೂಮಿ ಸಂಪತ್ತು!
ಟಿ.ಪಿ.ಉಮೇಶ್ ಚಿತ್ರದುರ್ಗ



