ಕಾವ್ಯ ಸಂಗಾತಿ
ಗೌರಾ ಹಾಲಭಾವಿ.
ಯುದ್ಧ ಯುದ್ಧ ಯುದ್ಧ!


ಯುದ್ಧ ಯುದ್ಧ ಯುದ್ಧ!
ಮುಗಿಯಲಾರದ ವಿಲಕ್ಷಣ ಮನಸ್ಸಿನ ಉನ್ಮಾದ!
ಯಾಕಿಷ್ಟು ಮಮಕಾರ ಈ ಯುದ್ಧ ಎಂಬ ಮಾರಿಯ ಮೇಲೆ ನಿನಗೆ ಏ ಮನುಷ್ಯ ಜೀವಿಯೇ?
ಯಾರಿಗಾಗಿ?
ಏನು ಸಾಧಿಸಿದೆ?
ಯಾರಿಗಾಯಿತು ಪ್ರಯೋಜನ?
ನಿನಗಾಗಿ , ನಿನ್ನ ಅಹಂಕಾರಕ್ಕಾಗಿ,
ನಿನ್ನ ಕೀರ್ತಿಗಾಗಿ,
ನೀನು ಎಲ್ಲರನ್ನು ನಿನ್ನ ಆಧೀನದಲ್ಲಿ ಇರಿಸುವದಕ್ಕಾಗಿ!
ಎಲ್ಲದರ ಮೇಲಿನ ಅಧಿಪತ್ಯಕ್ಕಾಗಿ ,
ನಿನ್ನ ಪ್ರತಿಷ್ಠೆಗಾಗಿ , ಹಠಕ್ಕಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ,ಹೊನ್ನಿಗಾಗಿ!
ಏನು ಮಾಡಿದೆ ?
ಏನು ಮಾಡಿದೆ ಹಿಂತಿರುಗಿ ನೋಡೊಮ್ಮೆ!
ಯಾವುದು ನಿನಗೆ ಸುಖ ಕೊಟ್ಟಿತು?
ಯಾವದು ನಿನ್ನೊಡನೆ ಬಂದಿತು ಉಸಿರೊಮ್ಮೆ!
ರಾಮಾಯಣದ ರಾಮ ರಾವಣರ ಯುದ್ಧ,
ಮಹಾಭಾರತದ ಪಾಂಡವ ಕೌರವರ ಮಹಾಯುದ್ಧದಿಂದ,
ಶುರುವಾದ ಈ ಯುದ್ಧವೆಂಬ ಮಹಾ ಪಿಡುಗು ,
ಇಂದು ಎಲ್ಲರ ಮನೆಯ ಬಾಗಿಲಿಗೆ ಬಂದು ನಂತಿತಲ್ಲ!
ಸತ್ತವರೆಷ್ಟೋ, ನೊಂದವರೆಷ್ಟೋ,
ಕಳೆದುಕೊಂಡವರೆಷ್ಟೋ,
ಕಳೆದುಹೋದವರೆಷ್ಟೋ,
ಅನಾಥರಾದವರೆಷ್ಟೋ?
ಯಾರಿಗೆ ಗೊತ್ತು ,
ಯಾರಿಟ್ಟಿದ್ದಾರೆ ಲೆಕ್ಕ ?
ಗೆದ್ದವರ ಲೆಕ್ಕ ಇದೆ,
ಸೋತವರದ್ದೂ ಇದೆ ಲೆಕ್ಕ!
ನಿಜವಾಗಿ ಹೋರಾಡಿ ಜೀವ ಕಳೆದುಕೊಂಡು ,
ಏನನ್ನೂ ಪಡೆಯದವರ ಲೆಕ್ಕ ಎಲ್ಲಿದೆ?
ಒಂದಲ್ಲ ಎರಡಲ್ಲ , ಸಾಲು ಸಾಲು,ಸಾವಿರಾರು.
ಎಷ್ಟೆಲ್ಲ ಯುದ್ಧಗಳು,
ಏನೆಲ್ಲ ಸಾಧಿಸಿವೆ?
ಜಗದ ಜನರ ವಿಚಾರ ಬದಲಾಯಿತಾ?
ಮತ್ತೆ ಮತ್ತೆ ಅದೇ ಪುನರಾವರ್ತನೆ.
ಯಾಕೆ ಕೆಡುಕಿನ ಉನ್ಮಾದ ಮನುಷ್ಯ ಮನದಲ್ಲಿ?
ಎರಡು ಮಹಾಯುದ್ಧದಿಂದ ಪಾಠ ಕಲಿತಿಲ್ಲ!
ಈಗ ರಷ್ಯಾ ಉಕ್ರೇನ ಯುದ್ಧ!
ಮುಗಿಯಲಿಲ್ಲ,
ಮುಗಿಯುವ ಲಕ್ಷಣ ಇಲ್ಲ ಇನ್ನೂ!
ನಿನ್ನ ನಾಶ ನನ್ನ ಗುರಿ!
ಎನೀ ಸಾಧನೆ?
ಈ ಪ್ರಶ್ನೆಯ ಕೊನೆ ಎಲ್ಲಿ?
ಗೊತ್ತಿಲ್ಲ.
ಬಹುಶಃ ಮನುಷ್ಯ ಇರುವವರೆಗೆ!
ಮನುಷ್ಯ ಕುಲ ಅಳಿಯುವವರೆಗೆ !
ಬಗೆಹರಿಯದ ಸಮಸ್ಯೆ!!
ಯುದ್ಧ ಯುದ್ಧ ಯುದ್ಧ!
ಮುಗಿಯಲಾರದ ವಿಲಕ್ಷಣ ಈ ಮನಸ್ಸಿನ ಉನ್ಮಾದ!
ಗೌರಾ ಹಾಲಭಾವಿ.



