ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಸ್ಪತ್ರೆಗೆ ಬಂದ ಸುಮತಿಯ ಎರಡನೇ ಮಗಳು ಸಂಜೆ ವಾರ್ಡಿಗೆ ಕಾಫಿ-ಬ್ರೆಡ್ ಬಂದಾಗ ಸರತಿಯಲ್ಲಿ ನಿಂತು ಪಡೆದುಕೊಂಡು ಅಮ್ಮನಿಗೆ ಕೊಟ್ಟಳು. ಕಾಫಿ ಕುಡಿದು ತಾಯಿ ಮಲಗಿದ ನಂತರ ವಾರ್ಡಿನ ಹೊರಗಿನ ವೆರಾಂಡಾದ ಮೆಟ್ಟಿಲಿನ ಮೇಲೆ ಕುಳಿತು ತನ್ನ ಪಠ್ಯ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಓದಿನಲ್ಲಿ ಸಂಪೂರ್ಣ ಮಗ್ನಳಾಗಿದ್ದ ಅವಳ ಕುತ್ತಿಗೆಯನ್ನು ಎರಡು ಪುಟ್ಟ ಕೈಗಳು ಬಿಗಿಯಾಗಿ ಅಪ್ಪಿಕೊಂಡವು. ತಿರುಗಿ ನೋಡಿದಾಗ ತನ್ನ ಹಿಂದೆ ತುಂಟತನದಿಂದ ನಗುತ್ತಾ ನಿಂತಿದ್ದ ಅಕ್ಕನ ಮಗನನ್ನು ಕಂಡಳು. ತಲೆ ಎತ್ತಿ ನೋಡಿದಾಗ ಬಾವ ಹಾಗೂ ಮಗುವನ್ನು ಎತ್ತಿಕೊಂಡು ನಿಂತಿರುವ ಅಕ್ಕನನ್ನು ಕಂಡಳು. ಅವಳಿಗೆ ಬಹಳ ಆನಂದವಾಯಿತು. ಅಕ್ಕನ ಮಗನನ್ನು ಎತ್ತಿಕೊಂಡು…”ಬನ್ನಿ…ಅಮ್ಮ ಈಗತಾನೇ ಮಲಗಿದ್ದಾಳೆ”…ಎಂದು ಹೇಳುತ್ತಾ ಅಕ್ಕ-ಬಾವನನ್ನು ಒಳಗೆ ಕರೆದುಕೊಂಡು ನಡೆದಳು. ಅಕ್ಕನ ಕಂಕುಳಲ್ಲಿ ಇದ್ದ ಪುಟ್ಟ ಮಗು ಚಿಕ್ಕಮ್ಮನ ಕಡೆಗೆ ಎತ್ತಿಕೋ ಎನ್ನುವಂತೆ ಎರಡೂ ಕೈಗಳನ್ನು ಚಾಚಿತು. ಅಕ್ಕನ ಮಗನ ಕೆನ್ನೆಯನ್ನು ಮೃದುವಾಗಿ ಸವರುತ್ತಾ… “ಪುಟ್ಟಾ ನೀನು ಇಲ್ಲಿ ಕುಳಿತು ಅಜ್ಜಿಯನ್ನು ಎಬ್ಬಿಸು….ನಾನು ನಿನ್ನ ತಂಗಿಯನ್ನು ಎತ್ತಿಕೊಳ್ಳುತ್ತೇನೆ”… ಎಂದ ಚಿಕ್ಕಮ್ಮನ ಮಾತಿಗೆ… “ಹೂಂ”….ಎಂದ ಆ ಮಗು ಖುಷಿಯಿಂದ ಅಜ್ಜಿಯ ಪಕ್ಕ ಕುಳಿತು…..”ಅಮ್ಮಾಮ್ಮಾ…ಣೀಚೇ…ಞಾಯೀ.. ವನ್ನಿಟ್ಟುಂಡ್”….( ಅಜ್ಜೀ ಎದ್ದೇಳು ನಾನು ಬಂದಿದ್ದೇನೆ) ಎಂದು ತೊದಲು ನುಡಿಯಲು, ಮೊಮ್ಮಗನ ಧ್ವನಿ ಕೇಳಿ ಎಚ್ಚೆತ್ತ ಸುಮತಿ ಎದ್ದು ಕುಳಿತು ಮೊಮ್ಮಗನನ್ನು ಅಪ್ಪಿಕೊಂಡಳು. ಹಿರಿಯ ಮಗಳು, ಪುಟ್ಟ ಮೊಮ್ಮಗಳು ಮತ್ತು ಅಳಿಯ ಎಲ್ಲರನ್ನೂ ಕಂಡು ಸುಮತಿ ಹರ್ಷಿತವಾದಳು. ಅಳಿಯನನ್ನು ಉದ್ದೇಶಿಸಿ ಅಲ್ಲಿಯೇ ಇದ್ದ ಸ್ಟೂಲ್ ನ ಮೇಲೆ ಕುಳಿತುಕೊಳ್ಳುವಂತೆ ಹೇಳಿದಳು. 

ಅಳಿಯ ‘ಹ್ಮೂ’ಎಂದು ತಲೆಯಾಡಿಸಿ ಸ್ಟೂಲ್ ಮೇಲೆ ಕುಳಿತುಕೊಂಡ. ಹಿರಿಯಮಗಳು ಅಮ್ಮನ ಪಕ್ಕದಲ್ಲಿಯೇ ಕುಳಿತುಕೊಂಡಳು. ಮೊಮ್ಮಗ ಅಜ್ಜಿಯ ತೊಡೆಯನ್ನು ಏರಿ ಕುಳಿತುಕೊಂಡ….”ಅಜ್ಜಿಗೆ ಹುಷಾರಿಲ್ಲ ಕಂದಾ… ಬೆಡ್ ಮೇಲೆ ಕುಳಿತುಕೋ”…. ಎಂದು ಸುಮತಿಯ ಅಳಿಯ ತನ್ನ ಮಗನಿಗೆ ಹೇಳಿದರೂ ಅವನು ಕೇಳಲಿಲ್ಲ. …”ಉಹೂಂ… ಞಾ…. ಇವೀಡೆಯೇ ಇಚ್ಚಾಂ”… (ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ) ಎಂದು ಹೇಳುತ್ತಾ ಅಜ್ಜಿಯ ಮುಖವನ್ನೊಮ್ಮೆ ನೋಡಿದ. ಸುಮತಿ ಪ್ರೀತಿಯಿಂದ ಮೊಮ್ಮಗನ ಕೆನ್ನೆಗೆ ಹೂ ಮುತ್ತೊಂದನ್ನು ಕೊಟ್ಟು….”ಕುಳಿತುಕೊಳ್ಳಲಿ ತೊಂದರೆಯಿಲ್ಲ”…. ಎಂದು ಹೇಳುತ್ತಾ ಮೊಮ್ಮಗನ ತಲೆಯನ್ನು ನೇವರಿಸಿದಳು.‌ ಅಳಿಯ ಒಂದು ಕ್ಷಣ ಏನನ್ನೋ ಯೋಚಿಸುತ್ತಾ …”ಅಮ್ಮಾ ಹೇಗಿದ್ದೀರಿ?…ಎಂದು ಕೇಳಿದಾಗ….”ಪರವಾಗಿಲ್ಲಪ್ಪ”… ಎಂದು ಉತ್ತರಿಸಿದಳು ಸುಮತಿ…. “ಡಾಕ್ಟರ್ ಏನು ಹೇಳಿದರು ಅಮ್ಮಾ”…..ಎಂದು ಹಿರಿಯ ಮಗಳು ಸುಮತಿಯನ್ನು ಕೇಳಲು,…”ಸ್ವಲ್ಪ ದಿನ ಇಲ್ಲಿದ್ದು ಔಷಧೋಪಚಾರ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ”….ಎಂದು ಹೇಳುತ್ತಾ ಸುಮತಿ ಎರಡನೇ ಮಗಳ ಕಡೆಗೆ ನೋಡಿದಳು. ಅಕ್ಕನ ಮಗಳನ್ನು ಎತ್ತಿಕೊಂಡು ಅವಳನ್ನು ಮುದ್ದು ಮಾಡುತ್ತಿದ್ದ ಎರಡನೇ ಮಗಳ ಮುಖ ಅಮ್ಮನ ಮಾತು ಕೇಳಿ ಮ್ಲಾನವಾಯಿತು. ಇದನ್ನು ಗಮನಿಸಿದ ಹಿರಿಯ ಮಗಳು ತಂಗಿಯ ಕಡೆಗೆ ನೋಡುತ್ತಾ….”ಏನು ಹೇಳಿದರು ಡಾಕ್ಟರ್?…ನೀನೇಕೆ ಹೀಗೆ ಇದ್ದಕ್ಕಿದ್ದ ಹಾಗೆ ಮಂಕಾದೆ”….

ಎಂದು ಕೇಳಲು ಆಮೇಲೆ ಹೇಳುತ್ತೇನೆ ಎಂಬಂತೆ ಸನ್ನೆ ಮಾಡಿದಳು. ಸುಮತಿ ಇದ್ಯಾವುದನ್ನೂ ಗಮನಿಸದೇ ಮೊಮ್ಮಗನ ಬಾಲಭಾಷೆಯನ್ನು ಕೇಳುವುದರಲ್ಲೇ ಮಗ್ನಳಾಗಿದ್ದಳು. 

ತನ್ನ ಅಣ್ಣ ಅಜ್ಜಿಯ ತೊಡೆಯ ಮೇಲೆ ಕುಳಿತು ಮುದ್ದು ಮಾಡಿಸಿಕೊಳ್ಳುತ್ತಿರುವುದನ್ನು ಕಂಡ ಅವನ ಪುಟ್ಟ ತಂಗಿ ತಾನೂ ಅಜ್ಜಿಯ ಬಳಿ ಹೋಗುತ್ತೇನೆ ಎನ್ನುವಂತೆ ಚಿಕ್ಕಮ್ಮನ ತೋಳಿಂದ ಕೆಳಗೆ ಇಳಿಯುವ ಪ್ರಯತ್ನ ಮಾಡುತ್ತಿದ್ದಳು. ಅದನ್ನು ಗಮನಿಸಿದ ಸುಮತಿ…. “ಬಾ ನನ್ನ ಮುದ್ದು ಮೊಮ್ಮಗಳೇ…. ಅಜ್ಜಿಯ ತೊಡೆ ಮೇಲೆ ಕುಳಿತುಕೋ”… ಎಂದು ಹೇಳುತ್ತಾ ಮೊಮ್ಮಗಳನ್ನು ಎತ್ತಿಕೊಂಡು ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಾ ಸುಮತಿ ತನ್ನ ಅನಾರೋಗ್ಯದ ಆಯಾಸವನ್ನು ಮರೆತಳು. ಅವರಿಬ್ಬರನ್ನು ಮುದ್ದಾಡುತ್ತಾ ಅವಳಿಗೆ ಸಮಯ ಹೋದದ್ದೇ ತಿಳಿಯಲಿಲ್ಲ. ವಾರ್ಡಿನ ಬಾಗಿಲಿನ ಮುಂದೆ ಆಸ್ಪತ್ರೆಯ ಊಟದ ತಳ್ಳುಗಾಡಿ ಬಂದು ನಿಂತಿತು. ಅಡುಗೆಯವ…..” ಎಲ್ಲರೂ ಬನ್ನಿ ಬೇಗ ಊಟ ತೆಗೆದುಕೊಳ್ಳಿ”…. ಎಂದು ಕೂಗಿದ. ಸುಮತಿಯ ಎರಡನೇ ಮಗಳು ಊಟದ ತಟ್ಟೆ ಹಾಗೂ ಒಂದು ಬಟ್ಟಲನ್ನು ಹಿಡಿದು ಸರತಿಯ ಸಾಲಿನಲ್ಲಿ ನಿಂತಳು. ರಾತ್ರಿಯ ಊಟಕ್ಕೆ ಅನ್ನ ಮತ್ತು ಸಾರು ಇತ್ತು. ಮಧ್ಯಾಹ್ನದ ಊಟಕ್ಕೆ ಅನ್ನ ಸಾರು ಒಂದು ಮೊಟ್ಟೆ ಎರಡು ಬಾಳೆಹಣ್ಣು ಆಸ್ಪತ್ರೆಯಿಂದ ಕೊಡುತ್ತಿದ್ದರು. ಅಡುಗೆಯವರು ಊಟ ಬಡಿಸಿದಾಗ ಅದನ್ನು ತೆಗೆದುಕೊಂಡು ಬಂದು ಅಲ್ಲಿದ್ದ ಸಣ್ಣ ಕಪಾಟಿನ ಮೇಲೆ ಮತ್ತೊಂದು ತಟ್ಟೆಯಿಂದ ಮುಚ್ಚಿಟ್ಟಳು….”ಬನ್ನಿ ಮಕ್ಕಳೇ…. ಅಜ್ಜಿ ಊಟ ಮಾಡಲಿ…. ನಾವು ಈಗ ಮನೆಗೆ ಹೋಗೋಣ…. ನಾಳೆ ಮತ್ತೆ ಅಜ್ಜಿಯನ್ನು ನೋಡಲು ಅಮ್ಮನ ಜೊತೆ ನೀವಿಬ್ಬರೂ ಇಲ್ಲಿಗೆ ಬರಬಹುದು”… ಎಂದು ಹೇಳಿ, ಹೆಂಡತಿಯ ಕಡೆಗೆ ತಿರುಗಿ ಹೋಗೋಣವೇ ಎಂಬಂತೆ ನೋಡಿದ. ಪತಿಯ ನೋಟದ ಅರ್ಥವನ್ನು ಅರಿತ ಸುಮತಿಯ ಹಿರಿಯ ಮಗಳು ‘ಸರಿ’ ಎನ್ನುವ ತಲೆ ಆಡಿಸಿ ಮಗಳನ್ನು ಸುಮತಿಯ ಮಡಿಲಿನಿಂದ ಎತ್ತಿಕೊಂಡಳು. 

ಆ ಪುಟ್ಟ ಮಗು ತಾನು ಬರುವುದಿಲ್ಲವೆಂದು ಹಠ ಮಾಡಿತು. ಮೊಮ್ಮಗನೂ ಅಜ್ಜಿಯ ಕುತ್ತಿಗೆಯನ್ನು ಬಿಗಿಯಾಗಿ ಅಪ್ಪಿಕೊಂಡು ಞಾಯಿ…ವನ್ನಿಲ್ಲ….ಅಮ್ಮಾಮ್ಮೆಡೆ ಕೂಡೆ ಇಚ್ಚಾಂ….(ನಾನು ಬರುವುದಿಲ್ಲ ಅಜ್ಜಿಯ ಜೊತೆ ಇಲ್ಲೇ ಇರುತ್ತೇನೆ) ಎಂದು ಹೇಳಿದ. ಅವನನ್ನು ಪುಸಲಾಯಿಸಿ ಕರೆದುಕೊಂಡು ಹೋಗಲು ಅಳಿಯ ಹರಸಾಹಸ ಪಡಬೇಕಾಯಿತು…._ನಾಳೆ ಮತ್ತೆ ಬರೋಣ”… ಎಂದು ಹೇಳಿದಾಗ ಒಲ್ಲದ ಮನಸ್ಸಿನಿಂದ ವಾರ್ಡಿನ ಬಾಗಿಲಿನಿಂದ ಆಚೆ ಮರೆಯಾಗುವವರೆಗೂ ಅಜ್ಜಿಯನ್ನೇ ನೋಡುತ್ತಾ ಅಪ್ಪ ಅಮ್ಮನ ಜೊತೆಗೆ ಹೋದ. ಮೊಮ್ಮಕ್ಕಳನ್ನು ಕಳುಹಿಸಲು ಸುಮತಿಗೆ ಮನಸ್ಸಿಲ್ಲದಿದ್ದರೂ ಮತ್ತೆ ಬರುತ್ತಾರೆ ಅಲ್ಲವೇ ಎನ್ನುವ ಕಾರಣದಿಂದ ಕಳುಹಿಸಿಕೊಟ್ಟಳು.‌….”ಅಮ್ಮ ಈಗ ಊಟ ಮಾಡು…. ನರ್ಸ್ ಬಂದು ಔಷಧಿ ಕೊಡುವ ಸಮಯವಾಯಿತು…. ತಡ ಮಾಡಬೇಡ”… ಎಂದ ಮಗಳ ಮಾತಿಗೆ ತಲೆಯಾಡಿಸಿ, ಊಟದ ತಟ್ಟೆಯನ್ನು ಅವಳ ಕೈಯಿಂದ ಪಡೆದಳು. ತಾಯಿ ಊಟ ಮುಗಿಸಿದ ನಂತರ ಅಲ್ಲಿಯೇ ತಟ್ಟೆಯಲ್ಲಿ ಕೈ ತೊಳೆಯಲು ನೀರನ್ನು ಕೊಟ್ಟಳು. ಆಸ್ಪತ್ರೆಯ ಕೈ ತೊಳೆಯುವ ಜಾಗ ಸ್ವಲ್ಪ ದೂರ ಇದ್ದಿದ್ದರಿಂದ ದಿನವೂ ಹೀಗೆ ತಟ್ಟೆಯಲ್ಲಿ ಕೈ ತೊಳೆಯಲು ಹೇಳುತ್ತಿದ್ದಳು. ನಂತರ ತಾನು ಹೋಗಿ ಶುಚಿಯಾಗಿ ತಟ್ಟೆಯನ್ನು ತೊಳೆದುಕೊಂಡು ಬಂದು ಇಡುತ್ತಿದ್ದಳು. ನರ್ಸ್ ಬಂದು ರಾತ್ರಿಯ ಔಷಧಿಯನ್ನು ಕೊಟ್ಟರು. ಔಷಧಿಯನ್ನು ಕುಡಿದು ಸುಮತಿ ದಿಂಬನ್ನು ಬೆನ್ನಿನ ಹಿಂದೆ ಇಟ್ಟು ಒರಗಿ ಕುಳಿತುಕೊಂಡಳು. ತಾಯಿಯ ಹಾಸಿಗೆ ಪಕ್ಕದಲ್ಲಿಯೇ ಸ್ಟೂಲನ್ನು ಎಳೆದುಕೊಂಡು ಮಗಳು ಕುಳಿತುಕೊಂಡು ತಾಯಿಯ ಹಸ್ತವನ್ನು ತನ್ನ ಎರಡೂ ಕರಗಳಲ್ಲಿ ಹಿಡಿದುಕೊಂಡ ತಾಯಿಯ ಮುಖವನ್ನೇ ಎವೆಯಿಕ್ಕದೇ ದಿಟ್ಟಿಸಿ ನೋಡಿದಳು.


About The Author

Leave a Reply

You cannot copy content of this page

Scroll to Top