ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಇನ್ನೂ ಗಟ್ಟಿ ಇದ್ಲು ಏನಿಲ್ಲಾಂದ್ರೂ ಎಂಟ್ಹತ್ತು ವರುಷ ಬಾಳು ಸವೆಸಬಹುದಿತ್ತು, ಮೊಮ್ಮಕ್ಕಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸು ಹೊತ್ತಿದ್ದ ಶಿವಮ್ಮ; ಎದ್ದು ಓಡಾಡುವ ತ್ರಾಣ ಇಲ್ಲದಿದ್ದರೂ ಹಣ್ಣ ಹಣ್ಣ ಮುದೇಕಿಯೇನೂ ಆಗಿರಲಿಲ್ಲ, ದೇವರು ತನ್ಮೇಲೆ ಯಾಕೆ ಹಾಕೋತ್ತಾನೆ? ಏನಾದರೂ ಒಂದು ಕುಂಟುನೆಪ ಹೇಳಿ ತನ್ನೆಡೆಗೆ ಕರಕೋತ್ತಾನೆ ಅಷ್ಟೇ ಎಂದು ಅಮ್ಮನ ವಾರಿಗೆಯವ್ರು ಕಣ್ಣೀರು ಹಾಕ್ತಾ ಪಾರ್ಥಿವ ಶರೀರದ ಮುಂದೆ ಕೂತು ಕಣ್ಣೀರ ಮಳೆಗಾರೆಯುತ್ತಿದ್ದರು! ಕಳೆದ ಐದಾರು ವರುಷಗಳ ಹಿಂದೆ ಕಣ್ ಆಪರೇಷನ್ ಮಾಡಿಸಬೇಕು ಅಂತ ಮನೆ ಮಂದಿಯೆಲ್ಲ ಯೋಚಿಸಿದಾಗ ಡಾಕ್ಟರ್ ಸಾರಾಸಗಟಾಗಿ ನಿರಾಕರಿಸಿದ್ದ ಆಪರೇಷನ್ ಮಾಡಿದರೂ ಕಣ್ ಬರೋ ಚಾನ್ಸಸ್ ಬಾಳ ಕಮ್ಮಿ ಅಂತ್ಹೇಳಿ,  ಆಗಲೇ ಆ ವಿಚಾರಕ್ಕೆ ಎಳ್ಳು-ನೀರು ಬಿಟ್ಟಾಗಿತ್ತು. ಕಣ್ಣು ಪುಟ್ಟ ಪೂರಾ ಕಾಣತ್ತಿದ್ದಿಲ್ಲ ಅಂತೇನಿಲ್ಲ ಮಸಗು ಮಸಗು ಆಗಿ ಕಾಣತ್ತಿದ್ದವು ಅಂತಿದ್ಲು.

ಅದ್ಯಾವ ವಿಷಗಳಿಯೋ ನಾನರಿಯೆ? ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ ತಪಾಸಣಾ ಶಿಬಿರಕ್ಕೆ ಅದ್ಯಾರೋ ಮಾತು ಕೇಳಿ, ಮತ್ಯಾರನ್ನೋ ಕರಕೊಂಡು ಹೋಗಿ ಬಂದ್ಮೇಲಿಂದ ಒಂದೇ ಹಠ! ಕಣ್ ಬರುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ, ನನಗೆ ಕಣ್ ಆಪರೇಷನ್ ಮಾಡಿಸಿ ಎಂದು; ಅದೂ ಇದೂ ಅಂತ್ಹೇಳಿ ಒಂದು ಮೂರೂ ತಿಂಗಳು ಮುಂದಕ್ಕೆ ತಳ್ಳಿಕೊಂಡು ಹೊಂಟಿದ್ವೀ.., ಅವರಿವರು ಏನಂತಾರೆ? *ಮನೆಯಲ್ಲಿ ದುಡಿದು ತಿನ್ನುವ ಮಕ್ಕಳ್ನಾ ಬಿಡು, ಮಗಳು ನೌಕರಿ ಮಾಡ್ತಾಳ, ಮೊಮ್ಮಗಳು ನೌಕರಿ ಮಾಡ್ತಾಳೆ ಅಷ್ಟೇ ಅಲ್ಲದೇ ಮೊಮ್ಮಗಳ ಗಂಡನೂ ನೌಕರಿ ಮಾಡ್ತಾನೆ ಕಣ್ ಆಪರೇಶನ್ ಮಾಡಿಸೋಕೆ ಏನು? ದುಡ್ಡಿನ ಮಕ ನೋಡ್ತಾರೆ* ಅನ್ನೋ ತಿರಸ್ಕಾರದ ಮಾತುಗಳನ್ನು ಕೇಳಿದ ಮೇಲೂ ಸುಮ್ನೆ ಇರೋದು ಹೇಗೆ ಹೇಳಿ? *ಜೀವ ಮತ್ತು ಜೀವನ ಕೊಟ್ಟ ಅಮ್ಮನಿಗೆ ಕಣ್ ಬಂದ್ರೆ ಎಲ್ಲರಿಗೂ ಖುಷಿ ತಾನೇ* , ಅಮ್ಮನ ಆಸೆ ಮತ್ತು ಹಠಕ್ಕೆ ಸೋತು ಆಪರೇಷನ್ ಸಜ್ಜಾಗೆ, ಪೇಟೆಯ ಮೈಲಾರ ಆಸ್ಪತ್ರೆಗೆ ಹೋಗಿ ಇಡೀ ದಿನ ಕಾದು ತಪಾಸಣೆ ಮುಗಿದಮೇಲೆ ಫಿಟ್ ಇದ್ದಾರೆ, ಬಿ.ಪಿ ನಾರ್ಮಲ್ ಇದೆ, ಆಪರೇಷನ್ ಮಾಡಿ ಲೆನ್ಸ್ ಹಾಕಿದ್ರಾಯ್ತು.., *ನಾಳೆ ಬನ್ನಿ ಎಂದು ಡಾಕ್ಟರ್ ಹೇಳಿ ಕಳಿಸಿದ್ಮೇಲೆ ಲವಲವಿಕೆಯಿಂದ ಇದ್ದ ಅಮ್ಮನ ಮುಖದಲ್ಲಿ ಹೊಸ ಕಳೆ ಬಂದಂತಿತ್ತು!*

ಮಾರನೇ ದಿನ ದುಡ್ಡು ಹೊಂದಿಸಿ ಕೊಟ್ಟು ನಾನು ಕೆಲಸಕ್ಕೆ ಹೋದೆ, ಮಗನನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಆದ್ರು, ಹನ್ನೆರೆಡುಗಂಟೆ ಹೊತ್ತಿಗಾಗಲೇ ಆಪರೇಷನ್ ಮುಗಿತು, ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ ಅಂತ ಅಣ್ಣ ಕಾಲ್ ಮಾಡಿ ಹೇಳಿದ್ದ, ಸಾಯಂಕಾಲ ಆರರೊಳಗೆ ಮೂರು- ನಾಲ್ಕು ಬಾರಿ ಕಾಲ್ ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ, ಕೆಲಸ ಮುಗಿಸಿಕೊಂಡು ಬಂದು ಅಮ್ಮನನ್ನು ಕಂಡು ಮಾತನಾಡಿಸಿ ಇಡ್ಲಿ-ಸಾಂಬಾರ್ ತಿನಿಸಿ, ಚಹಾ ಕುಡಿಸಿದೆ, *ಮಸಗು ಕಣ್ಣಿಗ್ಹಾಕಿದ ಲೆನ್ಸ್ ನೊಂದಿಗೆ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಹೆಬ್ಬಯಕೆ ಅಮ್ಮನ ಮೊಗದಿ ಎದ್ದು ಕಾಣುತ್ತಿತ್ತು!* ಅದೇ ಭರವಸೆಯಲ್ಲಿ ಮನೆಗೆ ಬಂದೆ, ಅಮ್ಮನಿಗೆ ತಾನು ಕಣ್ಣಾದ ಬಗೆಗೆ ನೆನೆದು ನೆಮ್ಮದಿಯ ನಿದ್ದೆಗೈದೆ.

ಮರುದಿನ ಪರೀಕ್ಷಾ ಕಾರ್ಯ ನಿಮಿತ್ತ ಅಮ್ಮನನ್ನು ಕಾಣದೇ ಕಾಲೇಜಿಗೆ ಹೋದೆ.., ಸಾಂಕಾಲದೊತ್ತಿಗೆ ರಾಘಣ್ಣ ಅಮ್ಮನ ಕಣ್ಪಟ್ಟಿ ತೆಗೆಸಿ, ಕರಿಕನ್ನಡಕ ಹಾಕಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದ, ಮನೆ ತುಂಬೆಲ್ಲಾ ಹೂನಗೆ ಚೆಲ್ಲಿತ್ತು. *ಕಪ್ಪು ಕನ್ನಡಕ ಅಮ್ಮನಿಗೆ ಚಂದವಾಗಿ ಒಪ್ಪಿತ್ತು,* ರಾತ್ರಿ ಗಂಜಿ ಕುಡಿದು, ಗುಳುಗಿ ನುಂಗಿ ಅಮ್ಮ ಮಲಗಿದ್ದಳು.

ನಿತ್ಯದ ದಿನಚರಿಯಂತೆ ನಾನೆದ್ದು ರೆಡಿಯಾಗಿ ಕಾಲೇಜಿಗೆ ಹೊರಟು ನಿಂತಿದ್ದೆ, ಇನ್ನೂ ಹಾಸಿಗೆಯಲ್ಲಿ ಮಗ್ಗಲು ಹೊರಳಿಸಿದ್ದ ಅಮ್ಮನನ್ನ ಕಂಡು ಯಾಕೆ ಅಮ್ಮ ಸಪ್ಗಿದ್ದೀಯಾ? ನಿದ್ದೆ ಆಗಿಲ್ವಾ? ಎಂದಿದ್ದಕ್ಕೆ; ಕಣ್ಣು ಸ್ವಲ್ಪ ನೋವಾಗಿದೆ, ಎರಡು ಮೂರು ಬಾರಿ ಭೇದಿ ಆಯ್ತು, ಎದ್ದು ಹೋಗಿ ಬಂದು, ಹೋಗಿ ಬಂದು ಕೈ-ಕಾಲು ಸೋತಂಗಾಗಿದೆ ಅಂದ್ಲು, ಮಗನಿಗೆ ಮೆಡಿಕಲ್ ಶಾಪ್ ನಿಂದ ಒಂದೆರಡು ಭೇದಿ ಗುಳಿಗೆ ತಂದು ಕೊಡು ಅಮ್ಮ ನುಂಗ್ತಾಳೆ, ಆರಾಮ್ ಅನಿಸಿಲ್ಲ ಅಂದ್ರೆ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ಹೇಳಿ ನಾನು ಕಾಲೇಜಿಗೆ ಹೊರಟೆ, ನಾನಿನ್ನೂ ಕಾಲೇಜ್ ಮುಟ್ಟಿದ್ದಿಲ್ಲ.., ನಂತರದ ಬೆಳವಣಿಗೆ ಆಘಾತವನ್ನುಂಟು ಮಾಡಿತ್ತು.

ಅಮ್ಮನಿಗೆ ಮತ್ತೆರಡು ಬಾರಿ ಭೇದಿ ಆಯ್ತಂತೆ, ಸುಸ್ತು, ಡಾಕ್ಟರನ್ನು ಕರೆಸಿ ಸೂಜಿ ಹಾಕ್ಸರಿ ಅಂತ ಕೇಳಿದ್ದಾಳೆ, ಮನೆಯಲ್ಲಿ ಅತ್ತಿಗೆ, ರಶ್ಮಿ, ದೀಪಾ, ಶಶಿ, ಮೊಮ್ಮಕ್ಕಳು ಮರಿ ಮೊಮ್ಮಕ್ಕಳಿದ್ದರು, ಅಪ್ಪ, ಅಣ್ಣ ಎಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದರು.

ದೈವಿಕ್ [ಮರಿ ಮೊಮ್ಮಗ] ಎದ್ದು ಕೂಡಲೇ ಮನೆಯ ಮುಂದಿನ ಮೆಟ್ಟಿಲ ಮೇಲೆ ಆತನನ್ನು ತೊಡೆಯಮೇಲೆ ಕೂಡಿಸಿಕೊಂಡು ಮುದ್ದು ಮಾಡುತ್ತಾ.., ದಾರಿಗುಂಟ ಹೋಗಿ ಬರೋರನ್ನು ಎದ್ರಾ, ಉಂಡ್ರಾ- ತಿಂದ್ರಾ ಎಂದು ಲೋಕಾಭಿರಾಮವಾಗಿ ಮಾತನಾಡಿಸುತ್ತಾ, ಆಗ್ತಾನೇ ಗೂಡಿನಿಂದ ಹೊರಬಿದ್ದ ಕೋಳಿ-ಮರಿಗಳಿಗೆ ಕಾಳು ಹಾಕುತ್ತಾ ಆಡಿಸುತ್ತಾ ಕೂಡುವುದು ಅಮ್ಮನದು  ನಿತ್ಯದ ದಿನಚರಿ. ಎಂದಿನಂತೆ ಇಂದು ಮೊಮ್ಮಗ ಬಂದು ಅವ್ವ ಅವ್ವ ಎಂದು ಕರೆದಾಗ ದೈವಿಕ್ ಇವತ್ತು ನನ್ನ ಕರಿಬೇಡಪ್ಪಾ..,   ನನ ಹತ್ತಿರ ಬರಬೇಡಪ್ಪಾ.., ಹೋಗು ಎಂದು ತನ್ನೊಳಗಿನ ಚಡಪಡಿಕೆ, ದುಃಖದಿಂದ ಗದರಿಸಿದಳೋ ಏನೋ? ಅವನು ಅಳುತ್ತಾ ಬಂದವನು ಮತ್ತೆ ಅವ್ವ ಎನ್ನಲಿಲ್ಲ.

ಪಕ್ಕದ ಮನೆಯವರು ಎದುರಿನ ಮನೆಯ ಕುಮಾರಸ್ವಾಮಿ ಅಣ್ಣ, ಆತನ ಮಗ ಕಾರ್ತಿಕ್ ಓಡಿ ಬಂದಿದ್ದಾರೆ, ಲೋಕಲ್ [ಆರ್.ಎಮ್.ಪಿ] ಡಾಕ್ಟರ್ ನ ಕರೆಸಿ ಒಂದು ಇಂಜೆಕ್ಷನ್ ಮಾಡಿಸಿದ್ದಾರೆ, ಅಮ್ಮ ಸುಸ್ತಾಗಿ ಮಲಗ್ಬಿಟ್ಟಿದ್ದಾಳೆ, *ಮೈ-ಕೈ ಎಲ್ಲಾ ತಣ್ಣಗಾಗಿದ್ದನ್ನು ಕಂಡು ಅತ್ತಿಗೆ ಒಲಿಬೂದಿ ತಂದು ಕೈಕಾಲಿಗೆ ತಿಕ್ಕಿದ್ದಾಳೆ,*  ತಡಮಾಡದೆ.., ಕೂಡಲೇ ಆಟೋ ಬಾಡಿಗೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ, *ಆಸ್ಪತ್ರೆಯ ಆವರಣದಲ್ಲಿ ಡಾಕ್ಟರ್ ಓಡಿ ಬಂದು ಚೆಕ್ ಮಾಡಿ ಅಮ್ಮ ಇನ್ನಿಲ್ಲ* ಎಂದು ದೃಢೀಕರಿಸಿದ್ದಾರೆ.

ಸುದ್ದಿ ತಿಳಿಯುತ್ತಲೇ ಕಾಲೇಜಿಂದ ಹೊರಬಿದ್ದೆ ಮನೆಗೆ ಬಂದು ಸೇರುವಷ್ಟರಲ್ಲಿ ಒಂದು ಗಂಟೆ ಆಗಿತ್ತು, ಮನೆಯ ಮುಂದೆ ಪೆಂಡಾಲ್ ಹಾಕಿ, ಚಪ್ಪರದಡಿಯಲ್ಲಿ ಮಂಚದ ಮೇಲೆ ಹೊಸ ಸೀರೆ ತೊಟ್ಟು ಮಂದಹಾಸದಿ ಮಲಗಿದ್ದ ಅಮ್ಮನ ಮುಖದಲ್ಲಿ ಚೆಲುವಿತ್ತು!  ಅಮ್ಮನ ಬಳಗ ಅಪ್ಪನ ಬಳಗ, ಬಂಧು-ಬಳಗ ಆಗಲೇ ನೆರದಿತ್ತು, ಅವರುಗಳು ತಂದ ಹೂಮಾಲೆಗಳು ರಾಶಿ ರಾಶಿ ಅಮ್ಮನ ಮೇಲೆ ಬಿದ್ದಿತ್ತು, ಅಮ್ಮನ ಜಾತ್ರೆಗೆ ತೇರು ಸಿದ್ದಗೊಂಡಿತ್ತು.., ಮಂತ್ರ ಘೋಷ, ಸನಾಯಿ ನಾಧಾ ಮೊಳಗುತ್ತಲೇ  ಅಮ್ಮನ ತೇರು ಮುಂದೆ ಮುಂದೆ ಸಾಗಿದರೆ ನಾವು ಅವರತ್ತ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ಹಿಂದೆ ಹಿಂದೆ ಸಾಗಿದೆವು ಮಸಣದ ಕಡೆಗೆ.., *ಅಮ್ಮನ ಸಿದಿಗೆ ಹೊತ್ತವರು ಹೆಗಲು ಬದಲಿಸುತ್ತಾ.., ಅಮ್ಮನಿಗೆ ನೋವಾಗದಿರಲೆಂದು ನಿಧಾನ ಹೆಜ್ಜೆ ಹಾಕುತ್ತಾ ಸಾಗಿ* ಕುಣಿಯ ತಲುಪಿ ಅಲ್ಲಿ ಅಮ್ಮನಿಗೆ ಕಡೆಯದಾಗಿ ಬಾಯಿಗೆ ನೀರು ಬಿಟ್ಟು, ಅಂತಿಮ ಪೂಜೆ-ಪುನಸ್ಕಾರ ಮಾಡಿ ಕೈ ಮುಗಿದು ನಿಂತೆವು..,

 *”ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿ ತಿಳಿನೀರು, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಕಂದಮ್ನ ಪಾದದ ಧೂಳ ತೊಳದೇನ”* ಎಂಬ ಅಮ್ಮನ ಜೋಗುಳ ಕೇಳಿ ಮಲಗಿದ *ಮಕ್ಕಳೆಲ್ಲರೂ ಸೇರಿ ಅಮ್ಮನನ್ನು ಗುಂಡಿಯಲಿಟ್ಟು ಮಣ್ಣುಗೂಡಿಸಿ ಬರುವಾಗ ಕರುಳು ಕಿತ್ತು ಬಾಯ್ಗೆ ಬಂದಂತಾಯ್ತು,* ಅಮ್ಮ ಪಾಪ ಅದೆಷ್ಟು ನೊಂದುಕೊಂಡಳೋ..? ಒಬ್ಬಂಟಿಯಾಗಿ ಹೋದಳು, ಕುಣಿ ಮುಂದೆ ನಿಂತುಕೊಂಡು ಮಾದಿಗರ ಚಂದಪ್ಪ.., ಮಸಣದಿ ನೆರೆದ ಜನಸ್ತೋಮದೆದಿರು ಸಲಿಕೆಗೆ ಒಂದು ನಾಣ್ಯದಿಂದ ಗಂಟೆಯಂತೆ ಭಾರಿಸುತ್ತ – *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* ಎಂದು ಮೂರೂ ಬಾರಿ ಸಾರಿದ ಮೇಲೆ; ಅಮ್ಮನ ಅಗಲಿಕೆಯು ಕಣ್ಣು ಕಳೆದುಕೊಂಡ ಕುರುಡರಾದಂತಹ ಅನುಭವ, ಅಕ್ಷರಶಃ ನನ್ನನ್ನು ಅನಾಥಳನ್ನಾಗಿಸಿ ಹೊರಟೆ ಬಿಟ್ಟಳು ಬಾರದ ಲೋಕಕ್ಕೆ, *ಸಗ್ಗದ ಸಿರಿ-ಸೀಮೆಯ, ಸೊಬಗ ಸವಿಯಲು ತನ್ನೆರೆಡು ಕಣ್ಗಳು ಸಾಲದೆಂದು ಲೆನ್ಸ್ ಹಾಕಿಸಿಕೊಂಡು ಹೋದ ಅಮ್ಮ ಮತ್ತೆ ಎಂದಿಗೂ ಬಾರಳು, ಆದರೆ ಅಲ್ಲಿ ಕಂಡುಂಡ ಅನುಭವಗಳನ್ನು ಅಮ್ಮ ಚಿತ್ತದಿ ದಾಖಲಿಸಿಕೊಂಡು ಮರೆಯದೆ ನನಗೆ ಟಪಾಲು ಬರೆದು ಕಳುಹಿಸಬಹುದು* ಎಂದು ಆಸೆಗಣ್ಣಲಿ ಅಂಚೆಯಣ್ಣನ ದಾರಿ ಕಾಯುತ್ತಿರುವೆ.

ನನ್ನ ತಂಗಿ, ಮಗ, ಮಗಳು ಆಡ್ಯಾಡಿಕೊಂಡು ಅತ್ತು ಹಗುರಾದರು, ನೆರೆದವರು ಏನೆಂದುಕೊಂಡರೋ ಏನೋ? ನನ್ನ ಬಗ್ಗೆ ನನಗೆ ಅಳಲು ಬಾರದು, ಕಣ್ಣೀರು ತನ್ತಾನೇ ಸುಮ್ಮನೆ ತಣ್ಣಗೆ ಸುರಿವ ಜಿಟಿ ಜಿಟಿ ಮಳೆಯಂತೆ ಜಿನುಗುಟ್ಟುತ್ತಿತ್ತಿ.., *ಅವ್ಯಕ್ತ ಭಾವನೆಗಳನ್ನು ಹತ್ತಿಕ್ಕಲಾಗದೆ.., ಬರೆದು ಹಗುರ ಆಗೋಣವೆಂದುಕೊಂಡು.., ಒಂದೇ ಉಸಿರಿನಲ್ಲಿ ಬರೆದೆ..,* ನನ್ನ ಬರಹವನ್ನು ಮತ್ತೆ ಮತ್ತೆ ನಾನೇ ಮನಸಿನಲ್ಲಿ ಓದಿಕೊಂಡಂತೆಲ್ಲ; ನನ್ನ ಮನ‌ಸಿನ ನೋವೇ ಅಕ್ಷರ ರೂಪು ಪಡೆದಿವೆ
ಅನ್ನುವಷ್ಟರ ಮಟ್ಟಿಗೆ ಮೂಡಿಬಂದಿದೆ ಎನಿಸಿ *ಅಳು ಜುಳು-ಜುಳು ದಳಿ-ದಳಿ  ಹರಿಯುತ್ತಿತ್ತು.*

 *ಅಮ್ಮ ಕನಸಿನಲ್ಲಿ ಬರಬಹುದೂ, ತನ್ನ ಸಾವಿಗೂ ಮುನ್ನ ಅನುಭವಿಸಿದ ಚಡಪಡಿಕೆಯನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು  ಎನ್ನುವ ನಿರೀಕ್ಷೆಯಲ್ಲಿ ಮಲಗಿದ್ದೇ,* ಅಮ್ಮ ತನ್ನ ಏನೊಂದೂ ಕಷ್ಟ ಹೇಳಿಕೊಳ್ಳದೆ ಪಕ್ಕದಿ ಕೂತು ತಲೆ ನೇವರಿಸುತ್ತಾ ಜೋಗುಳ ಹಾಡುತ್ತಿದ್ದಳು ನಾನು ಹಸುಗಂದಮ್ಮನಂತೆ ನಿದ್ದೆಗೆ ಜಾರಿದೆ.


About The Author

Leave a Reply

You cannot copy content of this page

Scroll to Top