ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಕಾಲ ಬದಲಾಗಿದೆ”


ಐದು ದಶಕದ ಹಿಂದೆ,
ಕಾಲ ಸರಳವಾಗಿತ್ತು,
ಬದುಕು ಹಸನಾಗಿತ್ತು;
ಮಣ್ಣ ಗೋಡೆಯ ತೊಲೆಯ
ಹಳೆ ಮನೆಯೊಳಗೆ,
ಬೆಳಕಿಂಡಿಯ ಪ್ರೀತಿ ಬೆಳಕು
ಬಡ ರೈತರ ಬದುಕು
ಮೊಬೈಲ್ ಇರದ ದಿನಗಳಲ್ಲಿ,
ಮಾತುಗಳು ಮನಸ್ಸನ್ನು
ಮುಟ್ಟುತ್ತಿದ್ದವು;
ಪತ್ರದ ಬರುವಿಕೆಗಾಗಿ
ಕಾಯುವ ಕಣ್ಣುಗಳು,
ಬಾಂಧವ್ಯದ ಆಳ
ಅಳೆಯುತ್ತಿದ್ದವು.
ಜಾತ್ರೆ ಪಾರಿಜಾತದ ಸದ್ದು
ಓಣಿ ತುಂಬಾ ಆಟದ ಗದ್ದಲ,
ಸಿಡಿಯಲು ಸಿದ್ಧ ಪಟಾಕಿ ಮದ್ದು
ಹಿರಿಯರ ಬಾಯಲ್ಲಿ ಕಥೆಗಳ ಹಬ್ಬ;
ಅಕ್ಕಿ-ಬೇಳೆ ಹಂಚಿ ಉಣ್ಣುವ ಪ್ರೀತಿ,
ಕೂಡು ಕುಟುಂಬವೇ ನಮಗೆ
ಒಂದು ದೊಡ್ಡ ನೀತಿ.
ಬೀದಿ ದೀಪದ ಕೆಳಗಿನ ಓದು,
ಚಿಮಣಿ ಬಡ್ಡಿಯ ಸುತ್ತ
ಮಸುಕಾದ ಬೆಳಕು;
ಕಷ್ಟ ದುಃಖದ ಮಧ್ಯೆ
ಮಂದಹಾಸದ ನಗೆ ಇತ್ತು,
ಬರಿಗಾಲಲಿ ಶಾಲೆ ಪಾಠ
ನಿತ್ಯ ಕಸರತ್ತು
ಇಂದು ಕಾಲ ಬದಲಾಗಿದೆ,
ವೇಗ ಹೆಚ್ಚಾಗಿದೆ,
ಕೈಯಲ್ಲಿ ಜಗತ್ತಿದೆ, ಆದರೆ
ಮನುಜ ಒಂಟಿಯಾಗಿರುವ
ಐದು ದಶಕದ ಆ ದಿನಗಳು,
ನೆನಪಿನ ಪುಟಗಳಲ್ಲಿ
ಅಚ್ಚಳಿಯದೆ ಉಳಿದಿವೆ.
ಎಷ್ಟೋ ವರುಷಗಳ ಮೇಲೆ
ಅವಳ ಭೇಟಿ
ಕಣ್ಣಿನಲ್ಲಿ ಮಾತು ಹರಿದವು
ಮೌನ ಮುರಿದು ಮಾತು
ಸಂಜೆ ಬಾನಿನ ಚುಕ್ಕಿ ಮೂಡಿದವು
ಹುಣ್ಣಿಮೆಯ ಚಂದ್ರ ನಕ್ಕನು
ಮತ್ತೆ ಗೂಡು ಸೇರಿದೆವು
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಅತ್ಯಂತ ಮನೋಜ್ಞ ಕವನ ಸರ್
ಸುಂದರ ಕವನ ಸರ್
“ಕಾಲ ಬದಲಾಗಿದೆ”ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ, ಅರ್ಥ ಪೂರ್ಣವಾಗಿ ರಚಿಸಿದ್ದೀರಿ ಸರ್.