ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

*ಗಡಿ ಭಾಗವೆಂದರೆ |ಕಡಿಮೆ ಇಲ್ಲ ಕನ್ನಡಕೆ
 ಉಡಿಯ ತುಂಬುವೆ ಕನ್ನಡ -ತಾಯಿಗೆ
ಒಡವೆಯ ಇಡಿಸುವೆ ಪದಗಳ||*

ಅಂತ ಹಾಡುತ ಜಯದೇವಿ ತಾಯಿಯವರು
 ಗಡಿಭಾಗದಲ್ಲಿರುವ ಕನ್ನಡಿಗರ ಕನ್ನಡಾಭಿಮಾನವನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾರೆ.

 ಗಡಿಭಾಗದಲ್ಲಿ ವಾಸಿಸುವುದರಿಂದ ಕನ್ನಡದ ಮೇಲಿನ ಪ್ರೀತಿ, ಗೌರವ ಅಥವಾ ನಿಷ್ಠೆ ಕಡಿಮೆಯಾಗುವುದಿಲ್ಲ  ಸ್ಪಷ್ಟಪಡಿಸುತ್ತ* ಉಡಿಯ ತುಂಬುವೆ ಕನ್ನಡ ಪದಗಳ …ಎಂಬುದು ಸಾಂಕೇತಿಕವಾಗಿದೆ. ಮುತ್ತೈದೆಯಾದ ಕನ್ನಡಾಂಬೆಯ ಉಡಿಯನ್ನು ಕನ್ನಡದ ಮಧುರ ಪದಗಳು, ಸಾಹಿತ್ಯ, ಸಂಸ್ಕೃತಿ ಮತ್ತು ಸೇವೆಯಿಂದ ತುಂಬಿಸಿ ಅವಳನ್ನು ಗೌರವಿಸುವ ಸಂಕಲ್ಪವನ್ನು ವ್ಯಕ್ತಪಡಿಸುತ್ತ….

*ಒಡವೆ ಇಡಿಸುವೆ ಕನ್ನಡ ಪದಗಳ* ಎಂಬುದು ಕನ್ನಡದ ಸುಂದರ ಪದಗಳೇ ಕನ್ನಡ ತಾಯಿಗೆ ಧರಿಸುವ ಅಮೂಲ್ಯ ಆಭರಣಗಳೆಂಬ ಭಾವವನ್ನು ತಿಳಿಸುತ್ತದೆ. ಬಂಗಾರ, ಬೆಳ್ಳಿ ಅಥವಾ ರತ್ನಗಳಿಗಿಂತ  ಶ್ರೇಷ್ಠ ಕನ್ನಡದ  ಪದಗಳು….
 ಸಾಹಿತ್ಯ ಮತ್ತು ಸಂಸ್ಕೃತಿಯೇ ಕನ್ನಡಾಂಬೆಯ ನಿಜವಾದ ಅಲಂಕಾರವೆಂದು ಸಾರುವ ತ್ರಿಪದಿ ಗಡಿಭಾಗದ ಕನ್ನಡಿಗರ ಅಚಲ ಕನ್ನಡಾಭಿಮಾನವನ್ನು, ಕನ್ನಡ ತಾಯಿಯನ್ನು ಪದಗಳ ಮೂಲಕ ಆರಾಧಿಸುವ ಮನೋಭಾವವನ್ನು ಹಾಗೂ ಕನ್ನಡ ಭಾಷೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮತ್ತಷ್ಟು ಶ್ರೀಮಂತಗೊಳಿಸುವ ಸಂಕಲ್ಪವನ್ನು ಸುಂದರವಾಗಿ ಅಭಿವ್ಯಕ್ತಿಸುತ್ತ… ಮನದಾಳಕ್ಕೆ ಇಳಿಯುವಂತಹ ತ್ರಿಪದಿಗಳು ರಚಿಸಿದರು….

ಗಡಿನಾಡಿನಲ್ಲಿ ಬದುಕಿದ ತಾಯಿಯವರು‌…ನಿಸರ್ಗದ ಮಡಿಲಿನಲ್ಲಿ ಹುಟ್ಟಿದ ನದಿಯೊಂದು ತನ್ನ ತಾಯಿನಾಡನ್ನು ತೊರೆದು ಹರೆವಂತೆ ಕನ್ನಡದ ಅಸ್ಮಿತೆಯನ್ನು ಎಲ್ಲೆಡೆ ಹರಡಿದವರಲ್ಲಿ ಒಬ್ಬರಾದರು!!!

 ಜಯದೇವಿ ತಾಯಿಯವರ ಹೃದಯವೂ ಕನ್ನಡದ ನೆಲ, ಕನ್ನಡದ ಜನ ಮತ್ತು ಕನ್ನಡದ ಸಂಸ್ಕೃತಿಯನ್ನು ಎಂದಿಗೂ ಬಿಟ್ಟು ದೂರವಾಗಲಿಲ್ಲ.
ಬೆಟ್ಟಗಳಂತೆ ಅಚಲವಾದ ಅವರ ಕನ್ನಡ ಪ್ರೇಮ, ಸಾಗರದಷ್ಟು ವಿಶಾಲವಾಗಿತ್ತು. ಮಳೆಯ ಹನಿಗಳು ಭೂಮಿಗೆ ಜೀವ ತುಂಬುವಂತೆ, ಅವರ ಕನ್ನಡದ ಪ್ರೀತಿ ಸಾವಿರಾರು ಜನರ ಮನಗಳಲ್ಲಿ ಭಾಷೆಯ ಮೇಲಿನ ಗೌರವವನ್ನು ಅರಳಿಸಿತು.
ವಸಂತ ಬಂದಾಗ ಮರಗಳು ಹೊಸ ಚಿಗುರು ಬಿಡುವಂತೆ, ತಾಯಿಯವರ ಮಾತುಗಳನ್ನು ಕೇಳಿದ ಪ್ರತಿಯೊಬ್ಬರ ಮನದಲ್ಲೂ ಕನ್ನಡದ ಹೊಸ ಚೈತನ್ಯ ಮೊಳೆಯುತ್ತಿತ್ತು. ಪರಿಮಳವನ್ನು ಎಲ್ಲೆಡೆ ಹರಡುವ ಹೂವಿನಂತೆ, ಅವರ ಕನ್ನಡದ ಅಭಿಮಾನ ಎಲ್ಲೆಡೆ ಪಸರಿಸಿತು. ಅವರು ಕನ್ನಡವನ್ನು ಕೇವಲ ಸಾಹಿತ್ಯದ ಭಾಷೆಯಾಗಿ ನೋಡದೆ, ಬದುಕಿನ ಮೌಲ್ಯಗಳನ್ನು ಬೆಳೆಸುವ ಸಂಸ್ಕೃತಿಯ ಭಾಷೆಯಾಗಿ ಕಂಡರು.

ಜಯದೇವಿ ತಾಯಿಯವರಿಗೆ ಕನ್ನಡವೇ ಉಸಿರು, ಅವರ ಆತ್ಮ, ಅವರ ಬದುಕಿನ ಧ್ಯೇಯವಾಗಿತ್ತು….  ಕನ್ನಡವನ್ನೇ ಬದುಕಿದರು…!!!
ಅವರ ಪ್ರತಿಯೊಂದು ಮಾತಿನಲ್ಲಿ ಕನ್ನಡದ ಲಾಲಿತ್ಯ,ಪ್ರತಿಯೊಂದು ಬರಹದಲ್ಲಿ ಕನ್ನಡದ ಸೌಂದರ್ಯ, ಪ್ರತಿಯೊಂದು ಕಾರ್ಯದಲ್ಲಿ ಕನ್ನಡದ ಪರಿಮಳ ತುಂಬಿಕೊಂಡಿತ್ತು.

ಅವರ ದೃಷ್ಟಿಯಲ್ಲಿ ಕನ್ನಡ ಎಂದರೆ ಕರುಣೆ, ಸಂಸ್ಕಾರ, ಶರಣ ತತ್ವಗಳ ಪ್ರತಿಪಾದನೆ, ಜ್ಞಾನ ಮತ್ತು ಆತ್ಮಗೌರವದ ಪ್ರತೀಕ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಓದಬೇಕು, ಕನ್ನಡದಲ್ಲೇ ಯೋಚಿಸಬೇಕು ಎಂಬ ಆಶಯವನ್ನು ಅವರು ತಮ್ಮ ಬದುಕಿನ ಮೂಲಕವೇ ಸಾರಿದರು.

ಅವರಿಗೆ ಕನ್ನಡ ತಾಯಿ ಎಂದರೆ ದೇವತೆ. ತಾಯಿಯ ಮಡಿಲು ಮಗುವಿಗೆ ಹೇಗೆ ಸುರಕ್ಷಿತ ಆಶ್ರಯವೋ, ಹಾಗೆಯೇ ಕನ್ನಡ ಭಾಷೆ ಕನ್ನಡಿಗರಿಗೆ ಆತ್ಮೀಯ ನೆಲೆ ಎಂದು ಅವರು ನಂಬಿದ್ದರು. ಆ ಕಾರಣಕ್ಕಾಗಿಯೇ ಕನ್ನಡದ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ಕೂ ಅವರು ತಮ್ಮ ಸಮಯ, ಶ್ರಮ ಮತ್ತು ಪ್ರತಿಭೆಯನ್ನು ಸಮರ್ಪಿಸಿದರು.

ಕನ್ನಡದ ಮೇಲಿನ ಅವರ ಪ್ರೀತಿ ಆಕಾಶದಷ್ಟು ಅಪಾರ, ಭೂಮಿಯಷ್ಟು ಸಹನಶೀಲ, ನದಿಯಷ್ಟು ನಿರಂತರ, ವಟವೃಕ್ಷದಷ್ಟು ಆಶ್ರಯದಾಯಕವಾಗಿತ್ತು. ಕನ್ನಡದ ಗೌರವ ಕುಂದಿದಾಗ ಅವರ ಮನ ನೋಯುತ್ತಿತ್ತು, ಕನ್ನಡದ ಕೀರ್ತಿ ಹೆಚ್ಚಾದಾಗ ಅವರ ಮುಖ ಅರಳಿದ ಹೂವಿನಂತೆ ಸಂತೋಷದಿಂದ ಕಂಗೊಳಿಸುತ್ತಿತ್ತು.
ಜಯದೇವಿ ತಾಯಿಯವರ ಕನ್ನಡಾಭಿಮಾನ ಇಂದು ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶ. ಭಾಷೆಯನ್ನು ಪ್ರೀತಿಸುವುದು ಎಂದರೆ  ಭಾಷೆಯ.. ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಕನ್ನಡಾಭಿಮಾನ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾರಿ ತೋರಿಸಿದರು.

 *ಶರಣ ಸಾಹಿತ್ಯವು ….ಕನ್ನಡಾಂಬೆಯ ದಿವ್ಯ ಬೆಳಕು*
ಶರಣ ಸಾಹಿತ್ಯವು ಕನ್ನಡ ನಾಡಿನ ಆತ್ಮ, ಕನ್ನಡ ಭಾಷೆಯ ದಿವ್ಯ ಬೆಳಕು, ಕನ್ನಡಾಂಬೆಗೆ ಬೆಳಗುವ ಅಮರ ದೀಪವಾಗಿದೆ. ಇದು  ಬದುಕನ್ನು ಬೆಳಗಿಸುವ ಜ್ಞಾನಜ್ಯೋತಿ. ಅಜ್ಞಾನ, ಅಂಧಶ್ರದ್ಧೆ, ಜಾತಿ-ಮತದ ಸಂಕೋಲೆಗಳನ್ನು ಕಳಚಿ ಸಮಾನತೆ, ಪ್ರೀತಿ, ಕರುಣೆ, ಸತ್ಯ ಮತ್ತು ನೈತಿಕತೆಯ ದಾರಿಯನ್ನು ತೋರಿದ ಮಹಾನ್ ಚಳುವಳಿ ನಡೆದದ್ದು ವಚನ ಸಾಹಿತ್ಯದ ಮೂಲಕ ಕನ್ನಡದಲ್ಲಿ ಅಂತ ಹೇಳುತ್ತಿದ್ದರು.

ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಕನ್ನಡವನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದರು. ಅರಮನೆಯ ಭಾಷೆಯಾಗಿದ್ದ ಕನ್ನಡವನ್ನು ಜನರ ಬದುಕಿನ ಭಾಷೆಯನ್ನಾಗಿ ರೂಪಿಸಿದರು. ಅವರ ವಚನಗಳು ಇಂದಿಗೂ ದಾರಿದೀಪಗಳಾಗಿ ಹೊಳೆಯುತ್ತಿವೆ. ಆದ್ದರಿಂದ ಶರಣ ಸಾಹಿತ್ಯವನ್ನು ಕನ್ನಡದ ದಿವ್ಯ ಬೆಳಕು ಎಂದು ಕರೆಯುವುದು ಅತ್ಯಂತ ಸಮಂಜಸ.

*ಕತ್ತಲನ್ನು ಓಡಿಸುವ ಸೂರ್ಯನ ಕಿರಣಗಳಂತೆ, ಶರಣ ಸಾಹಿತ್ಯವು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಹರಡುವದೆಂದು ಜಯದೇವಿ ತಾಯಿಯವರು ಅಭಿಮಾನದಿಂದ ನುಡಿಯವರು *

ಮಳೆಯು ಭೂಮಿಯನ್ನು ಹಸನಾಗಿಸುವಂತೆ, ಈ ಸಾಹಿತ್ಯವು ಮನಸ್ಸುಗಳನ್ನು ಪ್ರೀತಿ, ಸಹಾನುಭೂತಿ ಮತ್ತು ಮಾನವೀಯತೆಯಿಂದ ಹಸನಾಗಿಸಿದೆಂದು.  ಕನ್ನಡಿಗರ ಅಮೂಲ್ಯ ಸಂಪತ್ತಾಗಿ….ಇಡೀ ಮಾನವಕುಲಕ್ಕೆ ಸ್ಫೂರ್ತಿಯಾಗಿರುವ ಶ್ರೇಷ್ಠ ಪರಂಪರೆಯಾಗಿದೆ.

ಶರಣ ಸಾಹಿತ್ಯದ ಬೆಳಕು ಎಂದಿಗೂ ಆರದು. ಅದು ಪ್ರತಿಯೊಂದು ಕನ್ನಡಿಗನ ಹೃದಯದಲ್ಲಿ ಸತ್ಯದ ಜ್ಯೋತಿಯಾಗಿ, ಸಮಾನತೆಯ ಸಂದೇಶವಾಗಿ, ಮಾನವೀಯತೆಯ ಮಹಾಪ್ರಕಾಶವಾಗಿ ಶಾಶ್ವತವಾಗಿ ಬೆಳಗುತ್ತಲೇ ಇರುತ್ತದೆ. ಕನ್ನಡ ಇರುವವರೆಗೆ, ಕನ್ನಡದ ದಿವ್ಯ ಬೆಳಕಾಗಿ ಶರಣ ಸಾಹಿತ್ಯವು ಅನಂತ ಕಾಲದವರೆಗೆ ಜನಮನಗಳನ್ನು ಪ್ರಕಾಶಮಾನಗೊಳಿಸುತ್ತಲೇ ಇರುತ್ತದೆ. ಎಂದು ರಾಜಾರೋಷವಾಗಿ ಎಲ್ಲ ಭಾಷಣಗಳಲ್ಲಿ ತಾಯಿಯವರು ಸಾರುತ್ತಿದ್ದರು.

*ಕನ್ನಡದ ದಿವ್ಯ ಬೆಳಕಾದ ಶರಣ ಸಾಹಿತ್ಯವು ಕನ್ನಡವನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿತು ಅಂತ ಜಯದೇವಿ ತಾಯಿಯವರು ನುಡಿಯುತ್ತಿದ್ದರು…!!!

ಹನ್ನೆರಡನೇ ಶತಮಾನದಲ್ಲಿ ಶರಣರ ವಚನ ಕ್ರಾಂತಿಯು ಇಡೀ ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿತ್ತು. ಆದರೆ ಕಾಲಕ್ರಮೇಣ, ವಿಶೇಷವಾಗಿ ಹೈದರಾಬಾದ ಕರ್ನಾಟಕ ಭಾಗದಲ್ಲಿ ಹಲವು ಶತಮಾನಗಳ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಿಂದ ತೆಲುಗು, ಮರಾಠಿ ಹಾಗೂ ಉರ್ದು ಭಾಷೆಗಳ ಪ್ರಭಾವ ಹೆಚ್ಚಾಯಿತು. ಇದರ ಪರಿಣಾಮವಾಗಿ ಕನ್ನಡ ಭಾಷೆಯ ಬಳಕೆ, ಅದರ ಬಳಕೆ ಮತ್ತು ಶರಣ ಸಾಹಿತ್ಯದ ಅರಿವು ಅನೇಕ ಪ್ರದೇಶಗಳಲ್ಲಿ ಕ್ಷೀಣಿಸತೊಡಗಿತು.

ಇಂತಹ ಸಂದರ್ಭದಲ್ಲಿ, ಕನ್ನಡದ ಆತ್ಮಸ್ವರೂಪವಾಗಿರುವ ಶರಣ ಸಾಹಿತ್ಯದ ಜ್ಯೋತಿಯನ್ನು ಮತ್ತೆ ಜನಮನಗಳಲ್ಲಿ ಪ್ರಜ್ವಲಿಸುವ ಮಹತ್ತರ ಸಂಕಲ್ಪವನ್ನು ಜಯದೇವಿ ತಾಯಿಯವರು ಕೈಗೊಂಡರು. ವಚನ ಸಾಹಿತ್ಯವನ್ನು ಮನೆಮನೆಗೆ, ಮನಸ್ಸುಮನಸ್ಸಿಗೆ ತಲುಪಿಸುವ ಮೂಲಕ ಕನ್ನಡದ ಆತ್ಮಗೌರವವನ್ನು ಮರುಜಾಗೃತಗೊಳಿಸಿದರು. ಅವರ ಪ್ರಯತ್ನವು ಸಾಹಿತ್ಯದ ಪ್ರಸಾರ ಮಾಡುತ…  ಕನ್ನಡದ ಮೆರುಗನ್ನು ಪುನರುಜ್ಜೀವನಗೊಳಿಸುವ ಶರಣರ ಮೌಲ್ಯಗಳ ಪುನರ್‌ಸ್ಥಾಪನೆ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಮಹಾಯಜ್ಞವಾಗಿತ್ತು.

ಸತ್ಯಶರಣರ ಪಾದವ ನೆನೆದರೆ |
ಚಿಂತೆ ಚಿತೆಯು ಶಮನಾಗುವದು ||
ಶಾಂತ ಚಿತ್ತ ನಿಜ ಹಂತವನೇರುತ |
ತಸಂತಸದಿ ನಲಿದಾಡುವದು||
ಎನ್ನುತ…..
ಶರಣರ ವಚನಗಳನ್ನು ಜನಜೀವನದೊಂದಿಗೆ ಬೆಸೆದು, ಕನ್ನಡದ ದಿವ್ಯ ಬೆಳಕನ್ನು ಮತ್ತೆ ಪ್ರಜ್ವಲಿಸಿದ ಸಾಂಸ್ಕೃತಿಕ ಸಾಧಕಿಯಾಗಿ ಜಯದೇವಿ ತಾಯಿಯವರು ಚಿರಸ್ಮರಣೀಯರಾಗಿದ್ದಾರೆ. ಅವರ ಸೇವೆಯಿಂದ ಶರಣ ಸಾಹಿತ್ಯವು ಮತ್ತೊಮ್ಮೆ ಜನಮನಗಳಲ್ಲಿ ಜ್ಞಾನಜ್ಯೋತಿಯಾಗಿ ಹೊಳೆಯಿತು…. ಕನ್ನಡದ ಹೊಳಪು ಹೊಸ ಉತ್ಸಾಹದಿಂದ ನಾಡಿನಾದ್ಯಂತ ಹರಡಿತು.

ಜಯದೇವಿ ತಾಯಿಯವರಲ್ಲಿ ಶರಣ ಸಾಹಿತ್ಯದ ಮೇಲಿನ ಅಭಿರುಚಿ ಬಾಲ್ಯದಲ್ಲಿಯೇ ಮೊಳಕೆಯೊಡೆದಿತ್ತು. ವಚನಗಳಲ್ಲಿದ್ದ  ಮೌಲ್ಯಗಳು, ಸಮಾನತೆಯ ಸಂದೇಶ ಮತ್ತು ಸರಳವಾದ ಜೀವನದರ್ಶನವು ಅವರ ಮನಸ್ಸನ್ನು ಆಳವಾಗಿ ಸೆಳೆದಿತ್ತು.
ವಚನಗಳನ್ನು ಓದಿ ಅರ್ಥೈಸಬೇಕೆಂಬ ಅಪಾರ ಜಿಜ್ಞಾಸೆಯೇ ಅವರಿಗೆ ಕನ್ನಡ ಕಲಿಯುವ ಪ್ರೇರಣೆಯಾಯಿತು.
ಅಕ್ಷರಜ್ಞಾನವನ್ನು ಗಳಿಸುವುದಕ್ಕಾಗಿಯೇ,  ಶರಣರ  ವಚನಗಳ  ಅಮೃತ ಸತ್ವವನ್ನು ಆಸ್ವಾದಿಸುವ ಮಹದಾಸೆಯಿಂದ ಅವರು ಕನ್ನಡವನ್ನು ಅಭ್ಯಾಸ ಮಾಡಿದರು. ಕನ್ನಡ ಭಾಷೆಯನ್ನು  ಸಂವಹನದ ಮಾಧ್ಯಮವಾಗಿ..ಶರಣರ ಚಿಂತನೆಗಳ ಅಪೂರ್ವ ಲೋಕಕ್ಕೆ ಕರೆದೊಯ್ಯುವ ಪವಿತ್ರ ಸೇತುವೆಯೆಂದು ಭಾವಿಸಿದರು.
ವಚನಗಳ ಮೇಲಿನ  ಅಪಾರ ಪ್ರೀತಿ, ಅಧ್ಯಯನಶೀಲತೆ ಮತ್ತು ಕನ್ನಡಾಭಿಮಾನವೇ ಮುಂದೆ ಅವರನ್ನು ಶರಣ ಸಾಹಿತ್ಯದ ಪ್ರಚಾರಕಿ, ಕನ್ನಡ ಸಂಸ್ಕೃತಿಯ ಮುಂಚೂಣಿ ಸೇವಕಿ ಹಾಗೂ ವಚನ ಸಂದೇಶವನ್ನು ಜನಮನಗಳಿಗೆ ತಲುಪಿಸಿದ ಮಹಾನ್ ಸಾಧಕಿಯನ್ನಾಗಿ ರೂಪಿಸಿತು.(ಮುಂದುವರೆಯುವುದು)


About The Author

Leave a Reply

You cannot copy content of this page

Scroll to Top