ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮಕ್ಕಳೆಲ್ಲ ತವರಿಗೆ ಬಂದರೆ
ಏನ್ ಸಡಗರ ಈ ಅವ್ವಗ
ವಯಸ್ಸು ಮರುತ ಸಣ್ಣ ಹುಡುಗಿ ಆಗಿಬಿಡುತ್ತಿದ್ಲು
ರವೆ ಉಂಡೆ ಖಾರದ ಮಂಡಾಳ ಮುಂದಿಟ್ಟು ತಿನ್ನು ತಿನ್ನು ಅಂತ
ಒಂದೇ ವರಾತ ಹಚ್ಚತಿದ್ಲು 
ಅವ್ವ ಅದಕ್ಕೆ ನೀನು ಇನ್ನಷ್ಟು ದಿನ ಇರಬೇಕಿತ್ತು.

ಈಗ ಅಲ್ಲಿ ರವೆ ಉಂಡಿನೂ ಇಲ್ಲ ಮಂಡಾಳನು ಇಲ್ಲ ಬರೀ ಶೂನ್ಯ 
ನಿನ್ನ ಕೈ ರುಚಿ ತಿನ್ನೋ ಭಾಗ್ಯನು ಇನ್ನಿಲ್ಲ 
ಏನ್ ಚಂದ ನಿನ್ ಮಾತು ಏನ್ ಚೆಂದ ನಿನ್ನ  ನಗು
ಹಣೆ ತುಂಬಾ ಕುಂಕುಮ ತಲೆ ತುಂಬಾ ಸೆರಗು ತುರುಬಿನಲ್ಲಿ ಸದಾ ಹೂವಿನ ಮಾಲೆ. ನಿನ್ ನೋಡೋದೇ ಒಂದು ಸಡಗರ.
 ಅವ್ವ ಅದಕ್ಕೆ  ನೀನಿನ್ನು ಇರಬೇಕಿತ್ತು.

ಆಷಾಢ ಮಾಸಾ ಶ್ರಾವಣ ಮಾಸ ಅಂತ
ಉಡಿ ತುಂಬಿ ಹರಿಸಿ ಹಾರೈಸಿ ಕಳಿಸ್ತಿದ್ದೆ
ನಿನ್ನಲ್ಲಿರೋದನ್ನೆಲ್ಲ ಮಕ್ಕಳಿಗೆ ಕೊಟ್ಟು ಪ್ರೀತಿಯ  ಅಮೃತದಾರೆ ಹರಿಸುತ್ತಿದ್ದೆ.
ಅವ್ವ ನಿನ್ನ ಆಶೀರ್ವಾದ ಬಲದಿಂದ ಅಸಾಧ್ಯವೆಲ್ಲ ಸಾಧ್ಯವಾಗಿದ್ದು ಸತ್ಯ 
 ಅವ್ವ ಅದಕ್ಕೆ ನೀನಿನ್ನು  ಇರಬೇಕಿತ್ತು.

ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ನಿನ್ನ ಸಂಭ್ರಮಕ್ಕೆ ಮಿತಿಯೇ ಇಲ್ಲ  ನಿನ್ನ ಜೀವನ ಪ್ರೀತಿಗೆ ಸಾಟಿಯೇ ಇಲ್ಲ. ನೀನು ಇಷ್ಟು ಬೇಗ ಅಗಲಿ ಅಂತ ನಾವೆಲ್ಲ ಅಂದುಕೊಂಡೆ ಇರಲಿಲ್ಲ 
ಅಪ್ಪನಗಲಿ ಒಂದು ದಿನ ಇದ್ದವಳಲ್ಲ 
ಈಗ ಅಪ್ಪ ಆಕಾಶ ದಿಟ್ಟಿಸತ್ತಾ ಮೌನವಾಗಿ
 ಕಣ್ಣೀರ್ ಆಗ್ತಾರೆ . 
 ಅವ್ವ ಅದಕ್ಕೆ ನೀನಿನ್ನು ಇರಬೇಕಿತ್ತು.

 ಅವ್ವ ಎಲ್ಲರ ಸ್ಥಾನ ತುಂಬುತ್ತಾಳೆ 
 ಆದ್ರೆ ಅವ್ವನ ಸ್ಥಾನ ಯಾರು ತುಂಬೋಕಾಗಲ್ಲ ಅಂತ ಅರ್ಥ ಆಗಿದೆ.
ನೀನಿಲ್ಲದ ಮನೆ ಮನೆಯೇ ಅಲ್ಲ 
ನೀರಿಲ್ಲದ ಕೆರೆಗೆ ಕರು ಹೋಗಿ  ಬಂದಂತೆ ಆಗಿದೆ ಮಕ್ಕಳ ಸ್ಥಿತಿ.  
ನಿನ್ನ ಬಳೆಗಳ ಸದ್ದಿಲ್ಲದ ಅಡುಗೆ ಮನೆ ಮೌನವಾಗಿ ಮಲಗಿದೆ.
ತಾಯಿ ಇದ್ರೆ ತವ್ರೆಚ್ಚು ಅದಕ್ಕೆ  ನೀನಿನ್ನು ಇರಬೇಕಿತ್ತು ಅವ್ವ.

ಫೋನ್ ಹಚ್ಚಿ ಕೊಡಿ ಹಚ್ಚಿ ಕೊಡಿ ಅಂತ ಅಪ್ಪಗ ದುಂಬಾಲು ಬೀಳ್ತಿದ್ದೆ.
ಫೋನ್ ಹಚ್ಚಿ ಕೊಟ್ರೆ ಮುಗಿಯಿತು ಗಂಟೆಗಟ್ಟಲೆ ಎಲ್ಲವನ್ನು ವಿಚಾರಸ್ತಿದ್ದೆ.
ಈಗ್ ನಿನ್ ಫೋನು ಮಾತು ನಗು
ನಿನ್ನ ಸಾಮಿಪ್ಯ ಎಂದೆಂದಿಗೂ ದೂರಾದವು.
ಅವ್ವ ಅದಕ್ಕೆ ನೀನು ಇನ್ನಷ್ಟು ದಿನ  ಇರಬೇಕಿತ್ತು.


About The Author

2 thoughts on “ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.””

  1. ಹೃದಯ ಕಲಕುವ ಕವಿತೆ. ಅವ್ವ ಎಲ್ಲಿಗೂ ಹೋಗಿಲ್ಲ ನಿಮ್ಮ ಹೃದಯದಲ್ಲಿ ಇದ್ದಾಳೆ.

  2. ನಮ್ಮ ಪ್ರಪಂಚದಿಂದ ಅಗಲಿ ಹೋದ ಆ ಜೀವ ಇನ್ನೊದು ಪ್ರಪಂಚದಿಂದ ರವಿ ಮುಳುಗುವದನ್ನೇ ಕಾಯುತಿತಂತೆ ತನ್ನ ಎಲ್ಲಾ ಪರಿವಾರವನ್ನು
    ಕಣ್ಣತುಂಬಿಕೊಳ್ಳು ಬೆಳ್ಳಿ ಚುಕ್ಕಿಆಗಿ ಕಾರ್ಮೋಡಗಳನ್ನೂ ಬದಿಗೊತ್ತಿ ಆನಂದದಿಂದ ಪ್ರಜ್ವಳಿಸೂ ತಿತಂತೆ ಜೊತೆಗಿರದ ಜೀವ ಯಂದಿಗೂ ಜೀವಂತ

Leave a Reply

You cannot copy content of this page

Scroll to Top