ಕಾವ್ಯ ಸಂಗಾತಿ
ಜ್ಯೋತಿ ಮಾಳಿ
ಗಜಲ್


ಬೆಸೆದ ಮನಸು ಕನಸುಗಳ ಮೇಲೊಂದು ದೂರು ನೀಡಬೇಕಿದೆ
ಬಸಿದ ಹನಿಯು ನಯನಗಳ ಮೇಲೊಂದು ದೂರು ನೀಡಬೇಕಿದೆ
ತೊರೆದು ಭಾವ ಉರಿದ ಎದೆಯು ತಾಳಲಾರದು ಬೇಗುದಿ
ಮುರಿದು ಮೌನವು ಮಾತುಗಳ ಮೇಲೊಂದು ದೂರು ನೀಡಬೇಕಿದೆ
ಎರೆದ ಪ್ರೀತಿ ಇರಿದ ರೀತಿ ತನುಮನಕೆ ತಾಗಿನಿಂತು ನರಳಿದೆ
ಬೆಂದ ಎದೆಯು ತುಡಿತಗಳ ಮೇಲೊಂದು ದೂರು ನೀಡಬೇಕಿದೆ
ಮುರಿದ ವೀಣೆ ಹರಿದ ತಂತಿ ಹಾಡಲಾಗದ ಅಪಸ್ವರ
ಬೆರೆತ ಸ್ವರವು ಬೆರಳುಗಳ ಮೇಲೊಂದು ದೂರು ನೀಡಬೇಕಿದೆ
ಬರೆದ ಕವಿಯು ಬ್ರಹ್ಮನಲ್ಲ ಗೀಚುತಿರುವನು ತನ್ನ ಲಯದಲಿ
ಉರಿದ ಜ್ಯೋತಿಯು ತೆರೆಗಳ ಮೇಲೊಂದು ದೂರು ನೀಡಬೇಕಿದೆ



