ಅಂಕಣ ಬರಹ ರಂಗ ರಂಗೋಲಿ – ೪ ಚಾವಡಿಯಲ್ಲಿ ರಂಗ ಗೀತೆ ಎಂಟನೇ ತರಗತಿಯ ಕ್ಲಾಸಿನಲ್ಲಿ ಪುಟ್ಟ ಗುಬ್ಬಚ್ಚಿ ದೇಹದ ನಾನು ಮೊದಲನೇ ಬೆಂಚಿನಲ್ಲಿ ಮುದುಡಿ ಕುಳಿತಿದ್ದೆ. ” ದೇವದಾಸಿ ಪದ್ದತಿ,ಬಸವಿ ಪದ್ದತಿ,ಗೆಜ್ಜೆಪೂಜೆ ನಿಷೇಧಿಸಿದರು” ತರಗತಿಯಲ್ಲಿ ಕನ್ನಡದ ಬಾಲಕೃಷ್ಣ ಮೇಷ್ಟ್ರು ಕರ್ನಾಟಕದ ಇತಿಹಾಸದ ಬಗ್ಗೆ ಬಿಡುವಿನಲ್ಲಿ ಕಥೆಯ ರೂಪದಲ್ಲಿ ಹೇಳುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಮೈಸೂರಿನ ಕರ್ತೃ. ಜಾರಿಗೆ ತಂದ ಈ ಕಾನೂನುಗಳು ಹೊಸದಾದ ಮನ್ವಂತರಕ್ಕೆ ನಾಂದಿ ಹಾಡಿತ್ತು. ಥಟ್ಟನೆ ನನ್ನ ಕಣ್ಣೆದುರು, ಆ ದೊಡ್ಡ ಸುಂದರ ಮನೆ, ಒಳಗೆ ಗೋಡೆಗೆ ತೂಗುಹಾಕಿದ ಗೆಜ್ಜೆ, ಹಾಡುತ್ತಿದ್ದ ಭಜನೆ, ಜೊತೆಗೆ ಅವರ ಮುಖಗಳು ಸ್ಥಿರವಾಗಿ ಯಾವುದೋ ತಳಮಳಕ್ಕೊಳಕ್ಕಾಗಿ ಅಂತರ್ಮುಖಿಯಾಗುತ್ತಿದ್ದೆ. ಕಲೆಯ ಬಗೆಗಿನ ಕನಸಿಗೆ ಸೇತುವೆ ಕಟ್ಟಲು ಇವರ ದೇಣಿಗೆ ಚಿಕ್ಕದೇನು?. ಶಾಲೆಯ ಮೈದಾನದಲ್ಲಿ ಗೆಳತಿಯರು ಥ್ರೋಬಾಲ್, ಓಟ, ಎಂದು ಆಟದ ಹುಮ್ಮಸ್ಸಿನಲ್ಲಿದ್ದರೆ ಬದಿಯಲ್ಲಿ ಸಾಲಾಗಿದ್ದ ಮರಗಳಲ್ಲಿ ಒಂದರ ನೆರಳಿಗೆ ಆತುಕೊಂಡು ಆಗಾಗ ಬಾಲ್ಯದಲ್ಲಿ ಆ ಮನೆಯ ಇಂಚು ಇಂಚುಗಳಲ್ಲಿ ಹುದುಗಿಸಿಟ್ಟ ನೆನಪುಗಳನ್ನು ಬೊಗಸೆಗಿಳಿಸಿ ತಾಜಾಗೊಳಿಸುತ್ತಿದ್ದೆ. ಎಂತದೋ ಸುಪ್ತ ನೆನಪುಗಳ ಗುಂಗಿನ ಸುಖ. ಅದು ಮುಗ್ಧತೆ ಆವರಿಸಿದ್ದ ಎಲ್ಲವನ್ನೂ ಕುತೂಹಲದ ಮನಸ್ಸಿನಿಂದ ನೋಡಿ ಅದನ್ನು ಅನುಕರಿಸಿ ಅಭಿನಯಿಸುವ ಬಾಲ್ಯ. ರಾಮಾಯಣ, ಮಹಾಭಾರತ, ಕಥಾಸರಿತ್ಸಾಗರದ ಕಥೆಗಳ ಓದು. ಅಲ್ಲಿ ಕಾಣ ಸಿಕ್ಕಂತಹ ರಾಜಕುಮಾರಿಯರು ನನ್ನ ಕಣ್ಮುಂದೆ ಗೆಜ್ಜೆ ಕಟ್ಟಿ ತಿರುಗುತ್ತಿದ್ದರು. ನಾಯಕಿಯರೆಂದರೆ ದೊಡ್ಡ ಅರಮನೆಯಲ್ಲಿ ಇರುವವರು..ಹಿಂದೆ ಮುಂದೆ ಸಖಿಯರು ಇರಬೇಕು. ಅವರು ನಾಯಕಿಯ ಹಿಂದೆ ಸುತ್ತುವವರು. ಶಾಲೆಯಲ್ಲಿ ನನ್ನ ಗೆಳತಿಯರಿಗೆ ನಾನು ಓದಿದ,ಮರು ಸೃಷ್ಟಿಸಿದ, ಕಟ್ಟಿದ ಕಥೆಗಳನ್ನು ಹೇಳಿ,ಅದನ್ನು ನಾನೂ ಅನುಭವಿಸುತ್ತಿದ್ದೆ. ಅಂತರಂಗದಲ್ಲೊಬ್ಬಳು ರಾಜಕುಮಾರಿ. ನಾನು ಒಬ್ಬಳೇ ಇರುವಾಗ ಒಳಲೋಕದ ಭ್ರಮರ ಹೊರಗೂ ಹಾರಿ ನನ್ನ ಹೆಜ್ಜೆಗಳು ರಾಜಕುಮಾರಿಯ ಹೆಜ್ಜೆಗಳೇ ಆಗಿ ರೂಪಾಂತರಗೊಳ್ಳುತ್ತಿತ್ತು. ನಾನು ರಾಜಕುಮಾರಿ. ಹೌದು ಹಾಗೆಂದೇ ಭಾವಿಸಿದ್ದೆ, ಭ್ರಮಿಸಿದ್ದೆ. ರಂಗು ರಂಗಾದ ರಂಗ ನನ್ನೊಳಗೆ ಪ್ರವೇಶಿಸಿದಾಗ ನಾಟಕದ ಪಾತ್ರದೊಳಗೆ ಮಾಡುವ ಪರಕಾಯ ಪ್ರವೇಶದ ಮೊದಲ ಪಾಠ ನನಗರಿವಿಲ್ಲದೇ ಬದುಕು ಕಲಿಸುತ್ತಿತ್ತು. ನಾನು ಇದ್ದ ಮನೆ ಹಳೆಯಮನೆ, ಚಿಕ್ಕ ಮನೆ. ನಮ್ಮ ಈ ಮನೆಯ ಹತ್ತಿರವೇ ನನ್ನ ಕನಸಿನ ಅರಮನೆ ಒಂದಿತ್ತು. ಎದುರು ಉದ್ದದ ಚಾವಡಿ, ಸುಂದರ ಕೆತ್ತನೆಯ ಬಾಗಿಲು, ಆಗಿನ ಕಾಲಕ್ಕೆ ಬಲು ಅಪರೂಪದ ಟೇರೆಸ್ ಹೊದ್ದ ಮನೆಯದು. ಮನೆ ಎದುರು ಹೂವಿನ ಗಿಡಗಳು. ಗಿಡಗಳನ್ನು ಸಿಂಗರಿಸಿದ ಬಗೆಬಗೆಯ ಹೂವುಗಳು. ಬಟನ್ ಸೇವಂತಿಗೆ, ಗುಲಾಬಿ ಬಣ್ಣದ ಗುಲಾಬಿ, ಗಿಡ್ಡ ದೇಹದ ಮಲ್ಲಿಗೆ, ನಂದಿಬಟ್ಟಲು, ದೇವರಿಗೆ ಏಕಾಂತದಲ್ಲಿ ಶಂಖ ಊದಿ ಎಬ್ಬಿಸುವ ಶಂಖಪುಷ್ಪ ಹೂಗಳು ಎತ್ತರದ ದೇವಮಂದಾರ ಮರಕ್ಕೆ ಸುತ್ತಿ ಹತ್ತಿದ ಬಳ್ಳಿಯಲ್ಲಿ ಅರಳಿದ್ದವು. ಇನ್ನೂ ಅದೆಷ್ಟೋ ಬಣ್ಣಗಳು ಅಲ್ಲಿ ಹೂವಿನ ರೂಪದಲ್ಲಿ ಆ ಮನೆಯ ಅಂದ ಹೆಚ್ಚಿಸಿತ್ತು. ಆ ಹೂವಿನ ಗಿಡಗಳ ಮುಂದೆ ಅದರ ರಕ್ಷಣೆಗೇ ನಿಂತ, ಕಾದು ಕಪ್ಪಾದ ಕಲ್ಲಿನ ಕಾಂಪೌಂಡ್. ದೊಡ್ಡಬೀಗದ ಗೇಟು. ಮುಖ್ಯ ರಸ್ತೆಯ ಬಳಿಯಲ್ಲೇ ಇರುವ ನಮ್ಮ ಮನೆಯ ಎದುರು ನನ್ನ ಗೆಳತಿಯರು ಆಗಾಗ ತಿರುಗಾಡುವುದಿತ್ತು. ಆಗೆಲ್ಲ ಮನೆಗಳಲ್ಲಿ ಕಠಿಣ ನಿರ್ಬಂಧಗಳು ಇರುತ್ತಿರಲಿಲ್ಲ. ಊರಿಡೀ ಸುತ್ತುವ ಸ್ಚಾತಂತ್ರ್ಯ ನಮಗಿತ್ತು. ಈ ಗೆಳತಿಯರು ಬರುವ ವಿಷಯ ನನಗೆ ತಿಳಿದರೆ, ಎಲ್ಲಿದ್ದರೂ ಓಡಿಹೋಗಿ ಆ ಅರಮನೆಯ ಹೊರಗಿನ ಎತ್ತರದ ಚಾವಡಿ ಹತ್ತಿ ಗಿಡಗಳ ನಡುವಿನಿಂದ ನುಸುಳಿಕೊಂಡು ಆ ಗೇಟಿನ ಒಳಗಡೆ ಗೋಣು ಎತ್ತರಿಸಿ ಗೆಳತಿಯರಿಗೆ ಕಾಣುವಂತೆ ವಿಶಿಷ್ಟ ಭಂಗಿಯಲ್ಲಿ ನಿಂತಿರುತ್ತಿದ್ದೆ. ಒಂದು ಕೈ ಗೇಟಿನ ಮೇಲಿರಿಸಿ ರಸ್ತೆಯ ಮೇಲೆ ದೃಷ್ಟಿ ಗಟ್ಟಿ ಮಾಡಿ ಕಾಯುತ್ತಿದ್ದೆ. ಒಮ್ಮೆ ಈ ಹುಡುಗಿಯರ ದಂಡು ಆ ರಸ್ತೆಯಲ್ಲಿ ಮನೆಯೆದುರಿಂದ ಹಾದು ಮರೆಯಾಯಿತೋ ನಾನು ರಾಜಕುಮಾರಿಯ ಪಾತ್ರದ ಜಂಭದಿಂದ ಅರೆನಕ್ಕು ನನ್ನ ಗುಡಿಸಲಲ್ಲಿ ಬಂದು ಹುದುಗಿ ಕೊಳ್ಳುತ್ತಿದ್ದೆ. ಅಂತಹ ವಿಶೇಷ, ವಿಶಿಷ್ಟ ಅನುಭೂತಿಯನ್ನು ನೀಡಿದಂತಹ ಆ ಮನೆ ಹಾಗೂ ಅದರ ಒಳಗಿರುವ ರಾಣಿಯರು ನನ್ನ ರಂಗೋಲಿಗೆ ಚುಕ್ಕಿ ಬರೆದವರು. ಹೀಗಾಗಿ ಕನ್ನಡದ ಮೇಷ್ಟ್ರು ಇತಿಹಾಸದ ಕಥೆ ಕಲಿಸಿ ಕೊಟ್ಟಾಗಲೂ ನಿರ್ಧಿಷ್ಟ ವಿಷಯಗಳು ಎದುರು ಸಿಕ್ಕಾಗ ಅವರ ಪಾಶ ಸೆಳೆಯುತ್ತಿತ್ತು. ನಿಮಗೀಗ ಅವರನ್ನು ಪರಿಚಯಿಸುವೆ. ಅವರು ನಾವು ಇದ್ದ ಬಾಡಿಗೆ ಮನೆಯ ಮಾಲೀಕರು. ಹೆಂಗಸರು. ಅವರದ್ದು ನಮ್ಮ ಪಕ್ಕದ ಮನೆ. ದೊಡ್ಡ ಮನೆ. ಅಲ್ಲಿ ಮೂವರು ಮಹಿಳೆಯರು, ಊರಿನ ಅವಿಭಾಜ್ಯ ಪಾತ್ರದಂತಿದ್ದರು. ನಂತರದಲ್ಲಿ ಇಬ್ಬರು. ಅವರನ್ನು ಅಜ್ಜಮ್ಮ, ಸಣ್ಣಜ್ಜಿ, ವತ್ಸಲ ಚಿಕ್ಕಿ ಎಂದು ಕರೆಯುತ್ತಿದ್ದೆ. ಹಾಗೆ ಕರೆಯಲು ಅವರೇ ನನಗೆ ಕಲಿಸಿ ಕೊಟ್ಟದ್ದು. ಅಲ್ಲಿ ಕಾಣುತ್ತಿದ್ದುದು ಶ್ರೀಮಂತ ಬದುಕು. ಗಂಡಸರು ಬಂದು ಹೋದರೂ ವಾಸ ಇರಲಿಲ್ಲ. ಅಜ್ಜಿ ಪಿಸಪಿಸ ಅಂದಿದ್ದು ಕೇಳಿದ್ದೆ..’ ಅವರಿಗೆ ಮದುವೆ ಇಲ್ಲ’ ಆ ಮನೆ ನನ್ನ ಬಾಲ್ಯಕ್ಕೆ ಅನೂಹ್ಯ ಹಾಸು ಹೊದಿಸಿತ್ತು. ಅಂಬೆಗಾಲಿನಿಂದ ಬಡ್ತಿಹೊಂದಿ ತಪ್ಪು ಹೆಜ್ಜೆ ಇರಿಸಿ ನಡೆಯಲು ಕಲಿತಾಗ ಆ ಕೆಂಪು ಸಿಮೆಂಟಿನ ತಂಪು ಪಾದಕ್ಕೆ ಅಪ್ತ ಬಂಧ ಬೆಸೆದಿತ್ತು. ಅಜ್ಜಿಯಿಂದ ಜೋರು, ಮತ್ತು ಪೆಟ್ಟಿನಿಂದ ತಪ್ಪಿಸಿಕೊಂಡು ಓಡಲು ಸಿಗುತ್ತಿದ್ದ ಸುರಕ್ಷಿತ ತಾಣವೂ ಹೌದು. ” ಅಜ್ಜಮ್ಮ” ಅಲ್ಲಿನ ಯಜಮಾನಿ. ಆಗಲೇ ಅವರಿಗೆ ಇಳಿ ವಯಸ್ಸು. ಆದರೂ ರಾಣಿಯ ಗಾಂಭೀರ್ಯ,ಗತ್ತು. ಮಿತ ಮಾತು. ಅವರು ಯಾವಾಗಲೂ ಹೂಗಳಿದ್ದ ಬಿಳೀ ತೆಳ್ಳಗಿನ ಹತ್ತಿಯ ಸೀರೆ ಉಡುತ್ತಿದ್ದರು. ಅವರ ಹತ್ತಿರ ಹೋದರೆ ಎಂತದೋ ಸುವಾಸನೆ. ನಾನು ವಿನಾ ಕಾರಣ ಅವರ ಬಳಿ ಹೋಗಿ ನಾಸಿಕ ಅರಳಿಸಿ ಉಸಿರಿಗೆ ತಾಲೀಮು ನೀಡಿ ಸಂಭ್ರಮಿಸುತ್ತಿದ್ದೆ. ನನಗೆ ಅವರನ್ನು ಮುಟ್ಟುವುದೆಂದರೆ ಎಂತದೋ ಪುಳಕ. ಅದು ರೇಶಿಮೆಯಂತಹ ನುಣುಪು ಸ್ಪರ್ಶ, ಸ್ವಚ್ಛ ಬಿಳಿ ಮೈ ಬಣ್ಣ, ಹದ ಎತ್ತರದ, ತುಸು ದಪ್ಪನೆಯ ಮೈಕಟ್ಟು. ಅಗಲ ಮುಖ.ನನಗೆ ಅವರೆಂದರೆ ಏಕೋ ಕಾಣೆ, ಅಚ್ಚರಿ, ಹೆಮ್ಮೆ, ಪ್ರೀತಿ. ಅವರು ಪ್ರೀತಿಯಿಂದ ಕರೆಯುತ್ತಿದ್ದರು. ತಾವು ತಿಂಡಿ ತಿನ್ನುವಾಗ,ಊಟದ ಸಮಯ ನನ್ನ ಕರೆದು ಹತ್ತಿರ ಕುಳ್ಳಿರಿಸುತ್ತಿದ್ದರು. ದೊಡ್ಡ ಊಟದ ಬಟ್ಟಲು. ತರತರಹದ ವ್ಯಂಜನಗಳು, ಬೆಳ್ಳಿಯ ಲೋಟದಲ್ಲಿ ಹದಬಿಸಿ ಹಾಲು. ಪಕ್ಕದಲ್ಲಿ ಒಂದು ತಂಬಿಗೆ ನೀರು. ಅವರು ಊಟಕ್ಕೆ ಬರುವಾಗ ಇಷ್ಟೂ ತಯಾರು ಮಾಡಿ ಇಡುತ್ತಿದ್ದರು. ಅವರು ನಿಧಾನವಾಗಿ ಅಡುಗೆ ಮನೆಗೆ ಬರುತ್ತಿದ್ದರು. ಮನೆಯ ಹಜಾರದಿಂದ ಅಡುಗೆ ಮನೆ ಒಂದಷ್ಟು ದೂರ. ಅದು ಉದ್ದನೆಯ ಮನೆ. ನಾನು ಅವರ ಹೆಜ್ಜೆಗಳನ್ನು ಅನುಕರಿಸುತ್ತ ಅವರ ಹಿಂದೆ ಹಿಂದೆ ನಡೆಯುತ್ತಿದ್ದೆ. ಪ್ರತಿಸಲವೂ ಅಷ್ಟೇ ಅಚ್ಚರಿಯಿಂದ ಅವರ ಊಟವನ್ನು ನೋಡುವಾಗ ನನಗೆ ಅದರಲ್ಲಿ ಆಸೆಯಿರುತ್ತಿರಲಿಲ್ಲ. ಆದರೆ ಅದನ್ನು ಕಾಣುವುದು ದೊಡ್ಡ ಸಂಭ್ರಮ. ಬೆಳಗ್ಗೆ ಸ್ನಾನ ಮಾಡಿ ದೇವರ ಕೋಣೆ ಸೇರುತ್ತಿದ್ದರು. ಆ ಹೊತ್ತಿಗೆ ಅಲ್ಲಿ ಹರಿವಾಣದ ತುಂಬ ಹೂಗಳು, ಬಗೆಬಗೆಯ ಆರತಿ ತಟ್ಟೆಗಳು, ಗಂಧ, ಊದುಬತ್ತಿ, ಅದೆಷ್ಟು ದೇವರ ಪಟಗಳು, ತಾಳೆಗರಿಯ ಕಟ್ಟುಗಳು. ಆ ಸಮಯ ಮಾತ್ರ ಅವರು ಮಣೆ ಇಟ್ಟು ನೆಲದಲ್ಲಿ ಕೂರುವುದು. ಅವರೇ ಪ್ರಾರ್ಥನೆಯನ್ನು ನನಗೆ ಕಲಿಸಿದ್ದು. ಅದೆಷ್ಟು ಕೀರ್ತನೆಗಳು, ಹಾಡುಗಳು ಅವರಿಗೆ ತಿಳಿದಿತ್ತು. ಅವರ “ಜೊತೆಗೆ ಕುಳಿತುಕೋ” ಎಂಬ ಮೃದುವಾದ ಅಪ್ಪಣೆ ನನಗೆ ತುಂಬಾ ಪ್ರಿಯ. ನಾನು ಆ ವಯಸ್ಸಿಗೆ ಸಹಜ ಕುತೂಹಲದಿಂದ ನೋಡುತ್ತಿದ್ದೆ. ಅವರು ಒಳಹೋದೊಡನೆ ಆ ಕೋಣೆಯೆಲ್ಲವೂ ಊದುಬತ್ತಿಯ ಸುವಾಸನೆ, ಕರ್ಪೂರದ ಪರಿಮಳ, ಬಗೆಬಗೆಯ ಆರತಿಗಳು, ಯಾವುದೋ ಮಂತ್ರ ಪಠನೆ ಗಳಿಂದ ತುಂಬುತ್ತಿತ್ತು. ಅವರು ಎಲ್ಲವನ್ನೂ ಮುಗಿಸಿ ಅಡ್ಡಬಿದ್ದು ಹೊರಬರುತ್ತಿದ್ದರು. ಅಲ್ಲಿಗೆ ಆ ಕೋಣೆಯ ಬಾಗಿಲು ಮುಚ್ಚುತ್ತಿತ್ತು. ನಂತರ ಅಲ್ಲಿ ಸಂಜೆ ಭಜನೆ. ಭಜನೆ ಮುಗಿದ ತಕ್ಷಣ ರಾತ್ರಿಯ ಊಟ. ಇವರಿಂದ ಸಾಲುಸಾಲು ಭಜನೆ ಹಾಡುಗಳು ನನಗೆ ಕಂಠಪಾಠವಾದವು. ನನ್ನಿಂದ ಅವರು ಹಾಡಿಸುತ್ತಿದ್ದರು. ಅವರ ಮನೆಗೆ ಬಂದವರ ಎದುರು ನನ್ನ ಸಂಗೀತ ಕಛೇರಿ ನಡೆಯುತ್ತಿತ್ತು. ಹೆಚ್ಚಾಗಿ ಅವರ ನೆಂಟರು, ಹೆಂಗಸರೇ ಹೆಚ್ಚಾಗಿ ಬರುತ್ತಿದ್ದುದು. ಬರುವವರು ಕಾರಿನಲ್ಲಿ. ನಾನು ತಕ್ಷಣ ಪ್ರಸ್ತುತಿಗೆ ಅನುವಾಗಿ ಕಾಯುತ್ತಿದ್ದೆ. ಅವರು ಜೋರಾಗಿ ನನ್ನ ಕೂಗುತ್ತಿದ್ದರು. ಥಟ್ಟನೆ ನಾನು ಹಾರಿ ಜಿಗಿದು ಹೋಗಿ ದೊಡ್ಡ ಹಜಾರದ ಮೂಲೆಯಲ್ಲಿ ನಿಲ್ಲುತ್ತಿದ್ದೆ. ಅವರು ನನ್ನ ಪರಿಚಯವನ್ನು ಸೊಗಸಾಗಿ ಮಾಡುತ್ತಿದ್ದರು. ಬಂದವರು ಕಣ್ಣರಳಿಸಿ ನನ್ನ ನೋಡುವುದು. ನಂತರ ಅಜ್ಜಮ್ಮನ ಅಪ್ಪಣೆಯಾಗುತ್ತಿತ್ತು. “ಹಾಡು..ನಾರಾಯಣತೇ ನಮೋನಮೋ..” ಅಪರೂಪಕ್ಕೆ ಕೆಲವೊಮ್ಮೆ ಅತಿಥಿ ಗಳ ಮುಖಚರ್ಯೆಯ ಭಾವಕ್ಕೆ ಹೆದರಿ ನಾನು ಮತ್ತು ಹಾಡು ಬೇರೆಯಾಗುವುದೂ ಇತ್ತು. ಆಗಲೂ ನಡುವೆ ಅವರು ಸರಿಪಡಿಸಿ ನನ್ನ ಪರಾಕುಗಳನ್ನು ಸೊಗಸಾಗಿ ನುಡಿಸುತ್ತಿದ್ದರು. ಸ್ಪಷ್ಟ ಉಚ್ಛಾರಣೆ, ಗಾಯನ, ಹಾಡಿನ ಸಾಲುಗಳನ್ನು ಉರು ಹಚ್ಚಿ ಕಂಠಪಾಠ ಮಾಡುವ ಕಲೆ ಇತ್ಯಾದಿಗಳನ್ನು, ಕಲಿಸಿದ ಚಾವಡಿಯಲ್ಲಿ ನನಗರಿವಿಲ್ಲದೆಯೇ ಕಲಿಸಿದ ಗುರುಮಾತೆ ಅವರು. ಅಲ್ಲಿ ಹೊಸದೊಂದು ನಂಟು ಬೆಸೆದಿತ್ತು. ಯಾರೂ ಇರದಿದ್ದಾಗ ಪ್ಲಾಸ್ಟಿಕ್ ನ ಬಳ್ಳಿ ಹೆಣೆದ ಮರದ ಚೌಕಟ್ಟಿದ್ದ ಕುರ್ಚಿಯಲ್ಲಿ ಅವರು ಕೂತರೆ ನಾನು ಅವರ ಪಾದದ ಬಳಿ. ತಲೆ ಎತ್ತಿದ್ದರೆ ಬಹಳ ಎತ್ತರಕ್ಕೆ ಅವರು ಇದ್ದಂತೆ ಕಾಣುತ್ತಿತ್ತು. ಅವರ ಜೊತೆಗೆ ಮಾತು. “ಮೊನ್ನೆ ಬಂದವರ ಹೆಸರು ಹೇಳು” ” ಕಳೆದ ವಾರ ಬಂದವರು” “ನಿನ್ನೆ ಊಟಕ್ಕೆ ಏನೆಲ್ಲ ಇತ್ತು” ನನ್ನ ಉತ್ತರಕ್ಕೆ ಅವರದ್ದು ಸುಂದರ ನಗು. ನನಗೆ ಅದೇ ದೊಡ್ಡ ಬಹುಮಾನ. ಅಜ್ಜಮ್ಮನ ಮಲಗುವ ಕೊಠಡಿ ವಿಶಾಲವಾಗಿತ್ತು. ಮಂಚದ ಬಳಿ ಪುಟ್ಟ ಕೆತ್ತನೆ ಇದ್ದ ಸ್ಟೂಲ್ ರೀತಿಯ ಉಪಕರಣ. ಒಬ್ಬರೇ ಕೂತಿದ್ದರೆ ಮೆಲ್ಲನೆ ದೇವರ ಹಾಡು ಮಣಮಣಿಸುತ್ತಿದ್ದರು. ನಾನು ಅಡಗಿಕೊಂಡು ಕೇಳಲು ಯತ್ನಿಸುತ್ತಿದ್ದೆ. ನನ್ನ ಮುಖ ಕಂಡರೆ ಅವರ ಹಾಡು ನಿಲ್ಲುತ್ತಿತ್ತು. ” ಬಾ ಎದುರು” ಅಪ್ಪಣೆಯಾಗುತ್ತಿತ್ತು. ಇಲ್ಲಿ ಕೂತುಕೋ. “ನನಗೀಗ ನಿನ್ನ ಅಜ್ಜಿ ಹೇಳಿದ ಒಂದು ಕಥೆ ಹೇಳು” ಉಳಿದವರಿಗೆ ಹೇಳಿದಷ್ಟು ಸಲೀಸಾಗಿ ಕಥೆ ಅವರೆದುರು ತೆರೆದುಕೊಳ್ಳುತ್ತಿರಲಿಲ್ಲ. ಒಂದಿಷ್ಟು ಯೋಚನೆ, ಲಜ್ಜೆ, ಸಂಕೋಚ ಪ್ರದರ್ಶನದ ನಂತರ ಕಥೆ ಆರಂಭ. ಅವರದ್ದು ಚೆಂದದಲ್ಲಿ ಗಟ್ಟಿಯಾಗಿ,ಒಂದು ಲಾಲಿತ್ಯದಲ್ಲಿ ಹೂಂಗುಟ್ಟುವಿಕೆ. .ಜಾತ್ರೆ ಹತ್ತಿರ ಬಂದಾಗ ಅವರು ಹೇಳುತ್ತಿದ್ದರು: ” ನಾಳೆ ಹೋಗುತ್ತೀಯಲ್ವಾ, ದೇವರು ಜಾತ್ರೆಯಲ್ಲಿ ಹೋಗುವಾಗ ದೇವರ ಎದುರು ಝರಿ ಸೀರೆ ಕಚ್ಚೆಹಾಕಿ ಉಟ್ಟ ಹೆಂಗಸು ಇರಬಹುದು. ನೋಡಿ ಬಾ. ಮೊದಲೆಲ್ಲ ನೃತ್ಯದ ಹೆಜ್ಜೆ ಹಾಕುತ್ತ ಹೋಗುತ್ತಿದ್ದೆವು . ದೇವರ “ಬಲಿ” ಹೋಗುತ್ತಿರುವಾಗ ದೇವರ ಎದುರಿನಿಂದ ಚಾಮರ ದೇವರಿಗೆ ಬೀಸುತ್ತ ಹೋಗುವುದು. ಅದು ನನ್ನ ಹಕ್ಕಾಗಿತ್ತು. ಅದು ನನಗೆ ಸಿಕ್ಕಿದ ಸೌಭಾಗ್ಯವಾಗಿತ್ತು. ದೇವರ ಬಲಬದಿಯ ಹೆಣ್ಣು ನಾನು.” ನನಗೆ ಏನೊಂದು ಅರ್ಥ ಆಗುತ್ತಿರಲಿಲ್ಲ. ಮನೆಗೆ ಬಂದು ನನ್ನ ಅಜ್ಜಿಯ ಬಳಿ ಕೇಳುತ್ತಿದ್ದೆ. “ಅಮ್ಮಾ..ಬಲಬದಿ ಅಂದರೇನು” ಆಕೆ ತನ್ನ ಬಲ ಕೈ ತೋರಿಸಿದರೆ ನಾನು ಪೆಚ್ಚಾಗುತ್ತಿದ್ದೆ. ಅಜ್ಜಿ ಅನ್ನುತ್ತಿದ್ದಳು. “ಜಾತ್ರೆಯಲ್ಲಿ ನೃತ್ಯ ಮಾಡುವುದು ದೇವದಾಸೀ ಸಂಪ್ರದಾಯವಾಗಿತ್ತು. ಈಗ ಅದೆಲ್ಲ ನಿಷೇಧ. ಆದರೂ ಹರಕೆ ತೀರಿಸುವಂತೆ ಬಂದು ಹೋಗುತ್ತಾರೆ. ಅವರು ಮದುವೆಯಾಗುವುದೂ ಇಲ್ಲ. ದೇವಾಲಯದಿಂದ ಅವರಿಗೆ ಕುಂಕುಮ,ತಾಳಿ ಶಾಸ್ತ್ರ ಬದ್ದವಾಗಿ ನೀಡಲಾಗುತ್ತಿತ್ತು. ಈಗ ಅದೆಲ್ಲ ನಿಂತಿದೆ.” ದೇವರಿಗೇ ಸಮರ್ಪಣೆ ಮಾಡಿಕೊಂಡ ಈ ಮಾತೃ ಪಾತ್ರಗಳು ನನ್ನನ್ನು ಪ್ರೀತಿಸಿದ್ದು, ಸಮರ್ಪಣಾ ಭಾವದಿಂದ ಬದುಕನ್ನು ಪ್ರೀತಿಸಲು ನನಗೆ ಕಲಿಸಿದ್ದು ರಂಗೋಲಿಗೆ ಜೀವ, ಭಾವ, ಬಣ್ಣ ತುಂಬಿವೆ. ************************************************************** ರಂಗಭೂಮಿ ಹಾಗೂ
ಗಜಲ್
ಗಜಲ್ ವಿನುತಾ ಹಂಚಿನಮನಿ ಹುಟ್ಟಿನಿಂದ ಚಟ್ಟದ ವರೆಗೆ ಹೆಣ್ಣಿಗೆ ಅಸ್ತಿತ್ವಕ್ಕಾಗಿ ಹೋರಾಟಸಿಕ್ಕ ಬದುಕ ಭವಸಾಗರದಲಿ ಈಜಿ ದಾಟುವದಕ್ಕಾಗಿ ಹೋರಾಟ ತಾಯಿಯ ಗರ್ಭದಲ್ಲಿರುವ ಹೆಣ್ಣುಭ್ರೂಣ ನೇಣು ತಪ್ಪಿಸಲು ಸೆಣಸಾಟಪುರುಷಪ್ರಧಾನ ಲೋಕದಲಿ ಪ್ರಾಣಸಹಿತ ಬರುವದಕ್ಕಾಗಿ ಹೋರಾಟ ಒಡಹುಟ್ಟಿರುವ ಅಣ್ಣ ತಮ್ಮಂದಿರೊಂದಿಗೆ ಹಕ್ಕಿಗಾಗಿ ಪರದಾಟಕನಿಷ್ಠ ವಿದ್ಯೆ ಅನ್ನ ಬಟ್ಟೆಯ ಪಾಲು ಪಡೆಯುವದಕಾಗಿ ಹೋರಾಟ ಯೌವನಾವಸ್ಥೆಯಲ್ಲಿ ಕಾಮುಕರಿಂದ ಅತ್ಯಾಚಾರದ ಕೆಣಕಾಟಕನ್ಯೆಗೆ ಬಹುಮೂಲ್ಯ ಶೀಲ ಕಾಯ್ದುಕೊಳ್ಳುವದಕ್ಕಾಗಿ ಹೋರಾಟ ಪತ್ನಿಯ ಬೇಕು ಬೇಡಗಳ ಹತ್ತಿಕ್ಕುತ ಬಾಳ ಬಂಡಿಯ ಎಳೆದಾಟಅವಲಂಬಿತರ ಅವಶ್ಯಕತೆಗಳ ಪೂರೈಸುವದಕ್ಕಾಗಿ ಹೋರಾಟ ಇಳಿವಯಸ್ಸಿನಲಿ ಪರಾಧೀನತೆ ತಂದ ಅವಮಾನದಿಂದ ಸಂಕಟವಿನುತಳ ಜೀವನ ಸಂಜೆಯಲಿ ಪತಿಸುತರ ಆಸರೆಗಾಗಿ ಹೋರಾಟ *********************************
ಪ್ರೇಮವ್ಯೋಮಯಾನ…!
ಕವಿತೆ ಪ್ರೇಮವ್ಯೋಮಯಾನ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಡಾ. ಅರಕಲಗೂಡು ನೀಲ ಚಂದ್ರನ ಗುರುತು ಹಿಡಿಯುವುದೇ ಹಾಗೆಗುರುತ್ವ ಹಗುರುಮೇಲ್ಮೈ ಭೂಮಿಗಿಂತ ನವುರುಮೇಲೆ ಬಿದ್ದುದೆಲ್ಲದರ ಅಲ್ಪ ಜಿಗಿತಹಾಗಿದ್ದೂ ನಮ್ಮ ಜನ ನೂರಾರುನಗರಿ ನಿರ್ಮಿಸಿ ಚಂದಿರನೀಗನಿರ್ಭರ ಭರ್ತಿ ಭಾರ! ಚಂದ್ರನಾಗರಿಕ ಸೂರ್ಯಕುವರತಾನಲ್ಲಿಂದಲೆ ಇಣುಕಿಅವನಿಯತ್ತ ಕಣ್ಣಲ್ಲೆ ಕುಟುಕಿಭುವನಸುಂದರಿ ವಸುಕಾಂತೆಗೆಗಂಟು ಮೂರನುಅಂಘ್ರಿ ಏಳನುಅಂಗೀಕರಿಸಿ ಪೂರ್ಣಚಂದ್ರನ ಕಡೆರಾಕೆಟ್ಟು ಬಿಟ್ಟನು! ದಿಗ್ಭ್ರಾಂತಳಾದಳು ವಸುಕಾಂತೆಕೇಳರಿಯದೆ ಕಂಡ ಆ ಚಂದ್ರಸಂತೆ!ಭುವಿಯಲ್ಲಿ ಬರಿ ಬಸ್ಸು, ಈಗೀಗಸೂಪರ್ ಸ್ಪೀಡ್ ರೈಲು, ವಿಮಾನಮಾನವರಹಿತ ಅಥವಾಅವನನ್ನೂ ಹೊತ್ತ ರಾಕೆಟ್ಟುಆಗೊಮ್ಮೆ ಈಗೊಮ್ಮೆ ವಿರಳವಾಗಿ! ಇಲ್ಲಿ, ವ್ಯೋಮದ ಉತ್ತುಂಗಕ್ಕೇಅಂತರಂಗಕ್ಕೇ ಪಯಣತಾಸುತಾಸಿಗೂ ಹತ್ತಿಪ್ಪತ್ತುಝೇಂಕರಿಸಿ ಹಾರಾಡುವದೈತ್ಯಾಕಾರ ರಾಕೆಟ್ಟು!ನಭೋನಿಲ್ದಾಣಗಳಲಿ ಎಲ್ಲೆಲ್ಲೂಕಂಡರಿಯದ ಸೌಲಭ್ಯ ಸಂಪತ್ತು…ಕ್ಷೀರಪಥದ ಎಲ್ಲ ಗ್ರಹಕ್ಕೂಕ್ಷುದ್ರಗ್ರಹ ಒಂದೊದಕ್ಕೂಸಂಪರ್ಕದೊತ್ತಡಹಾಗೆಯೇ ವ್ಯೋಮಗರ್ಭದಅನಂತದಲ್ಲಿ ಅವಿತಕಂಡು ಕಾಣದೆಲ್ಲ ದೈತ್ಯ ಕಾಯಕ್ಕೂಕ್ಷಣಾರ್ಧದಲಿ ಚಿಮ್ಮಿ ಮಿಂಚಂತೆಭುಸುಗುಟ್ಟು ಹರಿದೋಡಿ ಮಾಯಸುರಿಮಳೆ ರಾಕೆಟ್ಟು…! ಸೂರ್ಯಕುವರ ವಸುಕಾಂತೆಇಬ್ಬರೂ ವೈವಾಹಿಕ ಮಧುಸ್ಪರ್ಷಕೆಹಾರಿದಲೆಲ್ಲ ವಿನೂತನ ಚಂದ್ರರೂಪಕಣ್ಣು ತುಂಬಿ ಚಲ್ಲುವ ಬೆಳದಿಂಗಳುಅಮರಾಮೃತ ಮೀರಿದಮೃದು ಮಧುರ ಮಧುಪಾತದಓಕುಳಿಯಲಿ ಈಜು ಈಜಾಟ… ***************************** ಕಂಠ ಮೂರ್ತಿ.
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಬಳ್ಳಿಯಂತೆ ಬಳಕುತ ಗೆಜ್ಜೆ ಸದ್ದಲಿ ಜಗ ಗೆಲ್ಲುವ ಆಸೆಕಣ್ಣ ನೋಟದಲಿ ಹೂ ಬಾಣ ಹೂಡಿ ಹೃದಯ ಕೊಲ್ಲುವ ಆಸೆ ಎದೆ ಹೊಲದಲಿ ಗೆಜ್ಜೆ ಹೆಜ್ಜೆ ಮೂಡಿಸುತ ಹೊಸ ಹಾದಿ ಮಾಡಿದೆಒಲವಿನ ಅಮಲೇರಿಸುವ ಹನಿ ಹನಿ ಶರಾಬು ಚೆಲ್ಲುವ ಆಸೆ ಪ್ರೀತಿಯ ಬನದಲಿ ಚಿಗುರಿದ ಹೂ ಕಾಯಿ ಹಣ್ಣು ಮನ ಸೆಳೆಯುತಿವೆಅನುರಾಗದ ತೋಟದಲ್ಲಿನ ಮಾಗಿದ ಮಾವು ಮೆಲ್ಲುವ ಆಸೆ ಮನದಂಗಳದಲಿ ಗರಿಬಿಚ್ಚಿದ ನಾಟ್ಯ ಮಯೂರಾಗಿ ಕುಣಿದೆಬೆರಗು ಮೂಡಿಸುವ ಚೆಲುವ ಶಿಲಾ ಬಾಲೆಯಾಗಿ ನಿಲ್ಲುವ ಆಸೆಗೆ ಮೃದಂಗದ ನಾದ ತಾಳಕ್ಕೆ ತುಂಡಾಯಿತು ನೂಪುರ ಮಾಲೆಅವನ ಧ್ಯಾನ “ಪ್ರಭೆ”ಯಲಿ ತಲೀನಳಾಗಿ ಸೋಲುವ ಆಸೆ ************************************
ಹೊಸ ದಿಗಂತ
ಕವಿತೆ ಹೊಸ ದಿಗಂತ ಅಕ್ಷತಾ ಜಗದೀಶ ಚುಮ್ಮು ಚುಮ್ಮು ನಸುಕಿನಲಿಮುಂಜಾನೆಯ ನಡಿಗೆ..ತಾ ಬರುವ ಸೂಚನೆ ನೀಡುತದಿನಕರ ಮೂಡುವ ಘಳಿಗೆ..ಹಕ್ಕಿಗಳ ಮಧುರ ಇಂಚರ ನಾದತಲೆ ತೂಗುತ ನಿಂತಿವೆನಡೆವ ದಾರಿಯ ಇಕ್ಕೆಲಗಳಲ್ಲಿಹೂ ಗಿಡ ಬಳ್ಳಿಗಳು….. ಅದೇಕೋ ಏನೋ..ಕಾಣದಾಗಿದೆ ಇಂದುಆ ಸುಂದರ ಕ್ಷಣಗಳು..ಮುಂಜಾನೆ ನಡಿಗೆ ಇದೆ…ಮೈ ಕೊರೆಯುವ ಚಳಿಯು ಇದೆದಿನಕರನ ಆಗಮನವು ಆಗುತಿದೆ..ಆದರೇನು…?ಹಕ್ಕಿಗಳ ನಾದವಿಲ್ಲದಾರಿಯ ಇಕ್ಕೆಲಗಳಲ್ಲಿಸ್ವಾಗತ ಕೋರುತ ನಿಂತಮರಗಿಡಗಳು ಕಾಣದಾಗಿದೆ… ಹಾ! ಈಗ ಅರಿವಾಯಿತೆನಗೆನಾ ನಡೆದ ದಾರಿ ಈಗಮರ ಗಿಡಗಳ ನುಂಗಿ ನಗರವಾಗಿದೆಕೆರೆಗಳಿಲ್ಲ ಮರ ಗಿಡಗಳಿಲ್ಲಚಿಲಿಪಿಲಿ ಹಾಡುವ ಹಕ್ಕಿಗಳಿಲ್ಲ ವಿಪರ್ಯಾಸವೆಂದರೆ …..ಅದರ ಆಲೋಚನೆ ನಮಗಿಲ್ಲ..ಹೊಸ ದಿಗಂತದ ಹಾದಿಯಲಿಬಾಡಿಹೋಗಿವೆ ಹೂ ಗಿಡ ಬಳ್ಳಿ.. ಮತ್ತೆ ಮೂಡಣದಲಿ ರವಿ ಮೂಡುತಲಿರುವ…ಮುಂಜಾನೆಯ ನಡಿಗೆ ಮತ್ತೆನಿರಂತರವಾಗಿ ಸಾಗಿದೆಹೊಸ ದಿಗಂತದೆಡೆಗೆ….. *********************************
ಗಜಲ್
ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು ***************************
ರಿಂಗಣ
ಕವಿತೆ ರಿಂಗಣ ನೀ. ಶ್ರೀಶೈಲ ಹುಲ್ಲೂರು ವಿರಮಿಸದ ಮನವೆ ನೀನುರಮಿಸಬೇಡ ಹೀಗೆ ನನ್ನಕೆನ್ನೆ ತಟ್ಟಿ ತುಟಿಯ ಮುಟ್ಟಿಹೇಳಬೇಡ ‘ನೀನೆ ಚೆನ್ನ’ ಏಕೆ ಹೀಗೆ ಲಲ್ಲೆಗರೆವೆ ?ಮೆಲು ದನಿಯಲಿ ನನ್ನ ಕರೆವೆನಿನ್ನ ಬಳಿಗೆ ಬರುವೆ ನಾನುಒಲವ ತೋರಿ ನನ್ನೆ ಮರೆವೆ ಬಾನ ದಾರಿಗುಂಟ ನಡೆವೆನಿನ್ನ ತೋಳ ಮೇಳದಲ್ಲಿಚಂದ್ರ ತಾರೆ ಹಿಡಿದು ತರುವೆಕಣ್ಣ ಬಿಂಬದಾಳದಲ್ಲಿ ನಭಕು ನೆಲಕು ಸೆರಗ ಹಾಸಿಚುಕ್ಕಿ ಚಿತ್ರ ಬರೆವೆ ನಾನುನನ್ನ ಅಂದ ಕಂಡು ಹಿಗ್ಗಿಹೊತ್ತು ಒಯ್ವೆ ನನ್ನ ನೀನು ಹೀಗೆ ಇರಲಿ ನಮ್ಮ ಒಲವುಸುರಿಸುತಿರಲಿ ಜೇನು ಮಾವುಸವಿದು ಕುಣಿದು ತಣಿದು ಚಣದಿಬೀಗಿ ನೀಗಲೆಮ್ಮ ನೋವು ***********************************
ಅಂಕಣ ಬರಹ ಎಡವಿದವನಿಗೂ ಸಣ್ಣ ಸಹಾನುಭೂತಿ ಸಿಗಲಿ ಬಹುಶಃ ನಾನವಾಗ ನಾಲ್ಕನೆಯ ತರಗತಿಯಲ್ಲಿದ್ದೆ. ಅಂದು ಭಾನುವಾರ. ಅವತ್ತು ನಾವೆಲ್ಲ ಹೀಗೇ ಆಟ ಆಡುತ್ತಿದ್ದೆವು. ಶಾಲೆಯ ಸುತ್ತಮುತ್ತ ನಾನು, ಶ್ರುತಿ, ಸ್ವಪ್ನ ಮತ್ತೆ ಇನ್ನೂ ಒಂದಿಷ್ಟು ಗೆಳತಿಯರು, ಆಡಿ ಆಡಿ ಸುಸ್ತಾದೆವು. ಕೊನೆಗೆ ನೀರು ಕುಡಿಯಬೇಕೆನಿಸಿತು ಎಲ್ಲರಿಗೂ. ಅಲ್ಲಿಯೇ ಇದ್ದ ಬೋರನ್ನು ಹೊಡೆಯತೊಡಗಿದೆವು. ನೀರು ಬಂತು. ಒಬ್ಬೊಬ್ಬರೇ ನೀರು ಹೊಡೆಯುವುದು, ಉಳಿದೆಲ್ಲರು ಸರತಿಯಲ್ಲಿ ಮುಖತೊಳೆದು ನೀರುಕುಡಿಯುವುದು ಮಾಡುತ್ತಿರುವಾಗ, ನಾನೊಂದಿಷ್ಟು ಬೋರು ಹೊಡೆಯುವ ಉಳಿದವರು ಕುಡಿಯಲಿ ಎಂದು ಹಿಂದೆ ಬಂದೆ. ಆದರೆ ಅಚಾನಕ್ ಬೋರಿನ ಸಂದಿಯಲ್ಲಿ ಶ್ರುತಿ ಕಿರುಬೆರಳು ಇಟ್ಟಿದ್ದು ಗೊತ್ತೇ ಆಗಿರಲಿಲ್ಲ. ನಾನು ಹೊಡೆದ ಮೊದಲ ಹೊಡೆತಕ್ಕೇ ಅವಳು ಪ್ರಾಣ ಹೋಗುವಂತೆ ಚೀರಿಬಿಟ್ಟಿದ್ದಳು. ನನಗಾದ ಗಾಬರಿಯೂ ವರ್ಣಿಸಲಸದಳ. ಅವಳ ಕೈಯಿಂದ ಧಾರಾಕಾರ ರಕ್ತ ಸುರಿಯತೊಡಗಿತ್ತು. ಅಲ್ಲೇ ಇದ್ದ ಅಕ್ಕಪಕ್ಕದ ಮನೆಯವರು ಅರಶಿನ ತಂದು ಗಾಯಕ್ಕೆ ಒತ್ತಿ ಬಟ್ಟೆ ಕಟ್ಟಿದರು. ಅವಳನ್ನು ಸಮಾಧಾನಿಸುತ್ತಿದ್ದರು. ಉಳಿದ ಗೆಳತಿಯರೆಲ್ಲರೂ ಅವಳ ಆಜೂ ಬಾಜೂ ನಿಂತು ಅವಳನ್ನು ಸಮಾಧಾನಿಸತೊಡಗಿದರು. ಅವಳ ಅಳು ತಹಬದಿಗೆ ಬರತೊಡಗಿತ್ತು. ಯಾರೊಬ್ಬರೂ ನನ್ನನ್ನು ಅತಿಯಾಗಿ ಬೈದದ್ದು ನೆನಪಿಲ್ಲ. ಆದರೆ ಅವರೆಲ್ಲರ ದೃಷ್ಟಿ ಮಾತ್ರ ನನ್ನನ್ನು ತಪ್ಪಿತಸ್ಥಳೆಂದು ನೋಡುತ್ತಿದ್ದವು. ಅದು ಮಾತ್ರ ಚಂದ ನೆನಪಿದೆ. ಶ್ರುತಿ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಅವಳಿಗೆ ಬಹಳ ನೋವಾಗಿತ್ತು. ಆ ಕ್ಷಣ ಭೂಮಿ ಬಾಯಿಬಿಡಬಾರದಾ ಅಂತನಿಸಿದ್ದು ಸುಳ್ಳಲ್ಲ ನನಗೆ. ಅವಳ ಅಪ್ಪ ಅಮ್ಮ ನನಗೆ ಬಯ್ಯುತ್ತಾರಾ? ನನ್ನ ಅಪ್ಪ ಅಮ್ಮನಿಗೆ ನಾ ಹೀಗೆ ಮಾಡಿದೆ ಅಂತ ಗೊತ್ತಾದರೆ ಖಂಡಿತಾ ಹೊಡೆಯುತ್ತಾರೆ, ಈಗ ಏನು ಮಾಡಲಿ? ಮತ್ತೆ ನನ್ನೊಂದಿಗೆ ಅವಳು ಆಟಕ್ಕೆ ಬರುವುದಿಲ್ಲವಾ? ಇಲ್ಲಿಗೆ ಎಲ್ಲ ಮುಗಿಯಿತಾ? ಅದೆಂಥ ಆತಂಕ, ಭಯ, ಹಿಂಸೆ ಆಗತೊಡಗಿತೆಂದರೆ, ನನ್ನೊಂದಿಗೆ ಧೈರ್ಯಹೇಳಲಿಕ್ಕೆ ಯಾರೂ ಇರಲಿಲ್ಲ. ಏನು ಮಾಡಲಿ, ಎತ್ತ ಹೋಗಲಿ, ಮನೆಗೆ ಹೋಗಲಾ, ಬೇಡವಾ… ಹೋಗದೆ ಆದರೂ ಎಲ್ಲಿ ಹೋಗಲಿ… ಕಾಡತೊಡಗಿತು. ಅವತ್ತು ಅದೆಷ್ಟು ಸಂಕಟವಾಗಿತ್ತು ನನಗೆ. ಬಹಳ ಅತ್ತಿದ್ದೆ. ಅಷ್ಟೊಂದು ರಕ್ತವನ್ನ ಅದೇ ಮೊದಲು ನಾನು ನೋಡಿದ್ದದ್ದು. ವಿಪರೀತ ಭಯವಾಗಿಬಿಟ್ಟಿತ್ತು. ಶ್ರುತಿ ಅಳುತ್ತಿದ್ದರೆ, ಅವಳನ್ನು ತಬ್ಬಿ ಸಂತೈಸಬೇಕು ಅನಿಸುತ್ತಿತ್ತು. ಆದರೆ ಸುತ್ತಲಿದ್ದ ಯಾರೂ ಅದಕ್ಕೆ ಅವಕಾಶ ಕೊಡದಂತೆ ಅವಳನ್ನು ತಮ್ಮ ಕರುಣೆಯ ಅರಿವೆಯಲ್ಲಿ ಸುತ್ತಿಟ್ಟುಬಿಟ್ಟಿದ್ದರು. ನನ್ನ ಅಳು ಯಾರಿಗೂ ಕಾಣಲಿಲ್ಲ. ಅವತ್ತೆಲ್ಲ ಬಹಳ ಹೊತ್ತು ಹೊರಗೇ ಎಲ್ಲೆಲ್ಲೋ ಅಲೆದು ಮನೆಗೆ ಬಂದೆ. ನಾನು ಎಣಿಸಿದಷ್ಟು ಘೋರವಾದದ್ದು ಏನೂ ನಡೆಯಲಿಲ್ಲ. ಆದರೆ ಆ ಘಟನೆಯ ನಂತರ ಶ್ರುತಿ ಮತ್ತೆ ನಾನು ಮತ್ತೆ ಆಟ ಆಡಲಿಲ್ಲ. ಬಹುಶಃ ನನ್ನೊಂದಿಗೆ ಆಟವಾಡಲಿಕ್ಕೆ ಭಯವಾಯಿತಾ ಅವಳಿಗೆ, ಅಥವಾ ಅವಳ ಅಪ್ಪ ಅಮ್ಮನಿಗೆ ಬೇಸರವಾಗಿತ್ತಾ, ಅಥವಾ ಬೇರೆ ಏನಾದರೂ ಆಯಿತಾ… ಏನೇನೋ ತಳಮಳಗಳು… ಅವರ ಕಣ್ಣೋಟಗಳು ವಿಚಿತ್ರವಾಗಿರುತ್ತಿದ್ದವು. ಅವುಗಳ ಅರ್ಥ ತಿಳಿಯುವಷ್ಟು ದೊಡ್ಡವಳಿರಲಿಲ್ಲ ನಾನು… ಆದರೆ ಶ್ರುತಿಯ ಬಗ್ಗೆ ನೆನೆದಾಗಲೆಲ್ಲ ಪಾಪ ಎನಿಸುತತಿತ್ತು. ಅವಳಿಗೆ ನಿಜಕ್ಕೂ ಬಹಳ ನೋವಾಗಿತ್ತು. ಅವಳ ಅಪ್ಪ ಅಮ್ಮನಿಗೂ ಬೇಸರವಾಗಿದ್ದಿರಬಹುದು… ಅದು ತಪ್ಪೂ ಅಲ್ಲ… ಆದರೆ ಬಹಳ ವರ್ಷಗಳ ನಂತರ ನಾನೀಗ ಶಿಕ್ಷಕಿ… ನನ್ನದೇ ಶಾಲೆಯಲ್ಲಿ ಇಂತಹ ಅದೆಷ್ಟೋ ಘಟನೆಗಳಿಗೆ ನಾನು ಪ್ರತಿನಿತ್ಯ ಸಾಕ್ಷಿಯಾಗುತ್ತಿರುತ್ತೇನೆ. ಆದರೆ ಇಂತಹ ಆಕಸ್ಮಿಕ ಪ್ರಕರಣಗಳಲ್ಲಿ ಸಹಾನುಭೂತಿ ಎನ್ನುವುದು ಅವಘಡಕ್ಕೆ ಗುರಿಯಾದವರಿಗೆ ಸಿಗುವಷ್ಟು ಸುಲಭವಾಗಿ ಅದನ್ನು ಮಾಡಿದವರಿಗೆ ಸಿಗುವುದಿಲ್ಲ. ಅವರ ಅರಿವನ್ನು ಮೀರಿ ನಡೆದ ಘಟನೆಯೊಂದು ಅವರನ್ನು ಅದೆಷ್ಟು ನೋಯುವಂತೆ, ಅವಮಾನ ಪಡುವಂತೆ ಮಾಡಿಬಿಡುತ್ತದೆಂದರೆ ಅದು ಅಳತೆಗೂ ಮೀರಿದ್ದು. ನಾನೀಗ ಶಿಕ್ಷಕಿಯಾಗಿ ಬಹಳಷ್ಟು ಸರ್ತಿ ಇಂತಹ ಘಟನೆಗಳು ನಡೆದಾಗ ಇಬ್ಬರ ಪರವಾಗಿಯೂ ನಿಲುವು ತೆಗೆದುಕೊಳ್ಳುತ್ತೇನೆ. ಗುರಿಯಾದವರಿಗೆ ಸಹಾನುಭೂತಿ ತೋರಿಸುವ ಹೊತ್ತಿನಲ್ಲೇ ಮಾಡಿದವರು ದುರುದ್ದೇಶದಿಂದಾಗಲೀ, ಉದ್ದೇಶ ಪೂರ್ವಕವಾಗಿಯೋ ಅಥವಾ ಕೆಟ್ಟ ಉದ್ದೇಶದಿಂದಲೋ ಖಂಡಿತ ಮಾಡಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಇಬ್ಬರಲ್ಲೂ ಒಂದು ಸ್ನೇಹ ಹಾಗೇ ಉಳಿದಿರುವಂತೆ ನೋಡಿಕೊಳ್ಳುತ್ತಿರುತ್ತೇನೆ. ಮತ್ತೆ ಮಾಡಿದವರಿಗೆ ಅದರ ಬಗ್ಗೆ ತಿಳುವಳಿಕೆ ಹೇಳಿ ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಲು ತಿಳಿಸಿಕೊಡುತ್ತಿರುತ್ತೇನೆ. ಒಮ್ಮೆ ಹೀಗಾಯಿತು. ಊಟದ ವೇಳೆಯಲ್ಲಿ ಮೂರನೇ ತರಗತಿಯ ಹುಡುಗನೊಬ್ಬ ತರಗತಿಯ ಕೋಣೆಗೆ ಜೋರಾಗಿ ನುಗ್ಗುವಾಗ, ತನ್ನ ಸಹಪಾಟಿಯ ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ. ಆ ಹೊಡೆತಕ್ಕೆ ಇವನ ಮುಖ ಬೆಂಚಿಗೆ ತಗುಲಿ, ಮೂಗಲ್ಲಿ ರಕ್ತ ಸೋರತೊಡಗಿದೆ. ಅಂದು ಜೋರಾಗಿ ನುಗ್ಗಿದವನಿಗೆ ಹಾಗೆ ಒಳ ನುಗ್ಗಿದ್ದಕ್ಕಾಗಿ ಬೈದೆವಾದರೂ ನೋವಾದವನಿಗೆ, ಅವನು ಬೇಕಂತ ಮಾಡಿಲ್ಲ, ಮತ್ತೆ ಅವ ನಿನ್ನ ಸಹಪಾಠಿ ಮತ್ತು ಗೆಳೆಯ ತಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು ಮತ್ತೆ ಅವನಿಗೆ ಸೂಕ್ತ ಚಿಕಿತ್ಸೆಯನ್ನೂ ಮಾಡಿದೆವು (ಇಂತಹ ನಿತ್ಯದ ಅದೆಷ್ಟೋ ಘಟನೆಗಳಿಗೆ ಶಿಕ್ಷಕರಾದ ನಾವು ಸದಾ ಸಿದ್ಧರಿರಲೇಬೇಕಿರುತ್ತದೆ…). ಆದರೂ ಎಲ್ಲೋ ಒಂದು ಕಡೆ ಅವನ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಬಹುದು, ಬೀಳಿಸಿದ ಮಗುವಿಗೂ ಏನಾದರೂ ಬೈಯ್ಯಬಹುದು… ಅಂತೆಲ್ಲ ಭಯ ನಾವೆಲ್ಲ ಶಿಕ್ಷಕರಿಗೂ ಇತ್ತು. ಆದರೆ ಹಾಗಾಗಲಿಲ್ಲ. ಮರು ದಿನ ಅವ ಶಾಲೆಗೆ ಬಂದ. ಮೂಗಿನ ಗಾಯ ದೊಡ್ಡದಾಗಿ ಕಾಣುತ್ತಿತ್ತು. ಆದರೆ ಅವ ತನ್ನ ತಂದೆ ತಾಯಿಯರಿಗೆ ತಾನೇ ಹೇಗೋ ಶಾಲೆಯಲ್ಲಿ ಬಿದ್ದೆ ಎಂದು ಹೇಳಿದ್ದನಂತೆ. ಮತ್ತೆ ಮರುದಿನದಿಂದ ಅವರಿಬ್ಬರೂ ಏನೂ ಆಗಿಲ್ಲದಂತೆ ಪಕ್ಕ ಪಕ್ಕವೇ ಕೂತು ಆಡಿಕೊಂಡು, ಓದಿಕೊಳ್ಳತೊಡಗಿದರು… ಹೀಗೆ ಇಂತಹ ಘಟನೆಗಳಲ್ಲಿ ಎಲ್ಲ ಸುಖ ಅನ್ನಿಸಿದಾಗ ಸದಾ ನನ್ನ ಬಾಲ್ಯದ ಆ ಘಟನೆ ನೆನಪಾಗಿ, ಸಧ್ಯ ಈ ಮಕ್ಕಳಿಗೆ ಹಾಗಾಗಲಿಲ್ಲವಲ್ಲ ಅನಿಸಿ ಮನಸು ಹಗುರವಾಗುತ್ತದೆ… ************************************************* –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.







