ಗಜಲ್
ವಿನುತಾ ಹಂಚಿನಮನಿ


ಹುಟ್ಟಿನಿಂದ ಚಟ್ಟದ ವರೆಗೆ ಹೆಣ್ಣಿಗೆ ಅಸ್ತಿತ್ವಕ್ಕಾಗಿ ಹೋರಾಟ
ಸಿಕ್ಕ ಬದುಕ ಭವಸಾಗರದಲಿ ಈಜಿ ದಾಟುವದಕ್ಕಾಗಿ ಹೋರಾಟ
ತಾಯಿಯ ಗರ್ಭದಲ್ಲಿರುವ ಹೆಣ್ಣುಭ್ರೂಣ ನೇಣು ತಪ್ಪಿಸಲು ಸೆಣಸಾಟ
ಪುರುಷಪ್ರಧಾನ ಲೋಕದಲಿ ಪ್ರಾಣಸಹಿತ ಬರುವದಕ್ಕಾಗಿ ಹೋರಾಟ
ಒಡಹುಟ್ಟಿರುವ ಅಣ್ಣ ತಮ್ಮಂದಿರೊಂದಿಗೆ ಹಕ್ಕಿಗಾಗಿ ಪರದಾಟ
ಕನಿಷ್ಠ ವಿದ್ಯೆ ಅನ್ನ ಬಟ್ಟೆಯ ಪಾಲು ಪಡೆಯುವದಕಾಗಿ ಹೋರಾಟ
ಯೌವನಾವಸ್ಥೆಯಲ್ಲಿ ಕಾಮುಕರಿಂದ ಅತ್ಯಾಚಾರದ ಕೆಣಕಾಟ
ಕನ್ಯೆಗೆ ಬಹುಮೂಲ್ಯ ಶೀಲ ಕಾಯ್ದುಕೊಳ್ಳುವದಕ್ಕಾಗಿ ಹೋರಾಟ
ಪತ್ನಿಯ ಬೇಕು ಬೇಡಗಳ ಹತ್ತಿಕ್ಕುತ ಬಾಳ ಬಂಡಿಯ ಎಳೆದಾಟ
ಅವಲಂಬಿತರ ಅವಶ್ಯಕತೆಗಳ ಪೂರೈಸುವದಕ್ಕಾಗಿ ಹೋರಾಟ
ಇಳಿವಯಸ್ಸಿನಲಿ ಪರಾಧೀನತೆ ತಂದ ಅವಮಾನದಿಂದ ಸಂಕಟ
ವಿನುತಳ ಜೀವನ ಸಂಜೆಯಲಿ ಪತಿಸುತರ ಆಸರೆಗಾಗಿ ಹೋರಾಟ
*********************************