ಅಂಕಣ ಬರಹ ಕಬ್ಬಿಗರ ಅಬ್ಬಿ ಕ್ಯಾನುವಾಸು ಮತ್ತು ಕಾವ್ಯ ರಾತ್ರೆ ಆಗಷ್ಟೇ ಲಂಗದಾವಣಿ ತೊಟ್ಟು ಕುಳಿತಿತ್ತು. ಆ ಹೊತ್ತಿಗೆ ಆ ಪುಟ್ಟ ಮನೆಯೊಳಗೆ ಬಡಕಲು ಕ್ಯಾಂಡಲ್ ಮಾತ್ರ ಉರಿಯುತ್ತಿದೆ. ನಸುಗೆನ್ನೆಯ ಹೊಳೆವ ಕಣ್ಣುಗಳ ಬಾಲಕ ಮತ್ತು ಆತನ ಉಬ್ಬುಗೆನ್ನೆಯ ಕನಸುನೇತ್ರದ ತಂಗಿಗೆ ತಿನ್ನಲು ಬರೇ ಎರಡು ಸ್ಲೈಸ್ ಬ್ರೆಡ್ ಮಾತ್ರ ಉಳಿದಿದೆ. ಆ ಮಕ್ಕಳ ಅಮ್ಮ ಬ್ರೆಡ್ ಬಿಸಿ ಮಾಡಿಕೊಡಲು ವಿದ್ಯುತ್ ಪೂರೈಕೆ ಇಲ್ಲದೇ, ಆ ಛಳಿಯಲ್ಲೂ ತಣ್ಣಗಿನ ಬ್ರೆಡ್ ಮಕ್ಕಳಿಗೆ ತಿನ್ನಲು ಕೊಡುತ್ತಾಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಆಗಸದಲ್ಲಿ ರಾತ್ರೆ ಬ್ರಿಟನ್,ಅಮೆರಿಕಾ ಇತ್ಯಾದಿ ರಾಷ್ಟ್ರ ಗಳ ಯುದ್ಧವಿಮಾನಗಳು ಬಾಂಬು ಸುರಿಯುತ್ತಿದ್ದವು. ಸಾಧಾರಣವಾಗಿ ಯುದ್ಧಕಾಲದಲ್ಲಿ ರಾತ್ರಿಯಿಡೀ ಪೇಟೆ ಪಟ್ಟಣಗಳನ್ನು ಬ್ಲಾಕ್ ಔಟ್ ಮಾಡುತ್ತಾರೆ. ಜರ್ಮನಿಯ ವೈರಿಪಡೆಗಳೂ ಅಮವಾಸ್ಯೆಯಂತಹ ಕಗ್ಗತ್ತಲ ರಾತ್ರೆಯನ್ನೇ ವೈಮಾನಿಕ ದಾಳಿಗೆ ಉಪಯೋಗಿಸುತ್ತಾರೆ. ಹಾರಿ ಬರುವ ಯುದ್ಧವಿಮಾನಗಳನ್ನು ಹೊಡೆದುರುಳಿಸಲು ನೆಲಸೇನೆಯ ಗನ್ ಗಳು ಆಗಸಕ್ಕೆ ಮುಖಮಾಡಿ ಬೆಂಕಿಯುಗುಳಲು ಕಾಯುತ್ತವೆ. ಅದೋ ಸ್ಪೋಟದ ಸದ್ದುಗಳು ಕೇಳುತ್ತಿದೆ. ಮಕ್ಕಳು ಹೆದರಿ ಅಮ್ಮನ ಕೋಟಿನ ಬೆಚ್ಚಗಿನ ಅಪ್ಪುಗೆಯಲ್ಲಿ ಥರಗುಟ್ಟುತ್ತಿವೆ. ಜಗ್ಗನೆ ಬೆಳಕು, ಅಮೇಲೆ ಬಾಂಬಿನ ಸ್ಪೋಟದ ಸದ್ದು. ಅವರ ಮನೆಯಿಂದ ತುಸು ದೂರದಲ್ಲಿ ಇರುವ ಮನೆಗಳ ಸಮುಚ್ಛಯದ ಮೇಲೆ ಬಾಂಬು ಬಿದ್ದು ಉರಿಯುವುದು ಕಿಟಿಕಿಯ ಮೂಲಕ ಕಾಣಿಸುತ್ತಿದೆ. ಆ ಸಮುಚ್ಛಯದಲ್ಲಿಯೇ, ಈ ಮಕ್ಕಳ ಗೆಳೆಯ ಗೆಳತಿಯರ ವಾಸ. ಮರಣಾಕ್ರಂದನ ಒಡೆದ ಗಾಜುಗಳ ಕಿಟಿಕಿಯನ್ನ ದಾಟಿ ಈ ಮಕ್ಕಳಿಗೂ ಕೇಳಿಸುತ್ತೆ. ಅವರು ಅಮ್ಮನನ್ನು ಬಿಗಿ ಹಿಡಿದು ಸಣ್ಣಗೆ ಅಳುತ್ತವೆ. ಇಂತಹ ನಾಲ್ಕಾರು ವರ್ಷ, ಜರ್ಮನಿ,ಬ್ರಿಟನ್, ಫ್ರಾನ್ಸ್, ಇಟಲಿ ಇತ್ಯಾದಿ ದೇಶಗಳಲ್ಲಿ ಪರಸ್ಪರ ದಾಳಿ ನಡೆದು, ಅಲ್ಲಿ ಬದುಕುಳಿದ ಮಕ್ಕಳ ಮನೋ ಸ್ಥಿತಿ ಹೇಗಿದ್ದಿರಬಹುದು?. ಎರಡನೇ ಮಹಾಯುದ್ಧದ ನಂತರ ಸುಮಾರು ಮೂರು ದಶಕಗಳಷ್ಟು ಕಾಲ, ಈ ದೇಶಗಳಲ್ಲಿ ರಚಿತವಾದ ಕವಿತೆ, ಕತೆ ಕಾದಂಬರಿಗಳಲ್ಲಿ, ಈ ನೋವು, ಅನೂಹ್ಯ ಭಯ, ಅಸ್ಥಿರತೆ, ಬಡತನ ಎಲ್ಲದರ ಚಿತ್ರಣ ಒಂದಲ್ಲ ಒಂದು ರೀತಿಯಲ್ಲಿ ಧ್ವನಿಯಾಗಿ ಹರಿದಿತ್ತು. ಹಾಗಿದ್ದರೆ ಕಾವ್ಯದ ಮೂಲ ಸೆಲೆ ಸೃಜಿಸುವುದು ಎಲ್ಲಿಂದ?. ಕಾವ್ಯಬ್ರಹ್ಮ ಕುಳಿತ ತಾವರೆಯ ದಂಟಿನ ಬುಡ ಯಾವ ಕೆರೆಯ ಕೆಸರಲ್ಲಿ ಹುದುಗಿದೆ?. ಒಂದು ಬಿಳಿ ಬಣ್ಣದ ಬಟ್ಟೆಯ ಕ್ಯಾನುವಾಸು ಮೇಲೆ ಬಣ್ಣದ ದ್ರಾವಣ ಎರೆಯೋಣ. ಬಟ್ಟೆಯ ಮಧ್ಯದಲ್ಲಿ ಬಿದ್ದ ಬಣ್ಣದ ಬಿಂದು ನಿಧಾನವಾಗಿ ನೂಲೆಳೆಯ ಎಳೆಹಿಡಿದು ವರ್ತುಲ ವರ್ತುಲವಾಗಿ ಹರಡುತ್ತೆ. ಹಾಗೆ ಹರಡಿದ ಬಣ್ಣಹೀರಿದ ಬಟ್ಟೆಯ ಮೇಲೆ ಮತ್ತೊಂದು ಬಣ್ಣದ ನೀರನ್ನು ಎರೆಯೋಣ. ಈಗ ಮೊದಲು ಹರಡಿದ ಬಣ್ಣ ಮತ್ತು ಈ ಬಣ್ಣ ಒಂದಕ್ಕೊಂದು ಕಲೆತು ಹರಡಿ ಚಿತ್ತಾರವಾಗುತ್ತವೆ. ಮತ್ತೆ ಇವುಗಳ ಮೇಲೆ ಇನ್ನೊಂದು ಬಣ್ಣ, ಅದು ಹರಡಿ ಮಿಳಿತವಾದಂತೆ ಮಗುದೊಂದು ಬಣ್ಣದ ದ್ರಾವಣಗಳನ್ನು ಎರೆಯುತ್ತಾ ಹೋದರೆ, ಕ್ಯಾನುವಾಸು ಮೇಲೆ ಸುಂದರವಾದ ವರ್ಣ ಚಿತ್ತಾರ ಮೂಡುತ್ತೆ. ಆ ಬಣ್ಣಗಳು ಒಂದರೊಡನೊಂದು ಕಲೆಯುವ ರೀತಿ, ಕಲೆಯುವ ಅನುಪಾತ, ಇವುಗಳು ಚಿತ್ರಕ್ಕೆ ಹಲವು ಶೇಡ್ ಗಳನ್ನು ಕೊಡುತ್ತವೆ. ಆ ಚಿತ್ರದ ಅಂಚುಗಳು ಬಣ್ಣಗಳೇ ಸ್ವತಂತ್ರವಾಗಿ ವಿಕಸನಕೊಂಡ ವಿಸ್ತಾರದ ಕೊನೆ ಗೆರೆಗಳು. ಈ ವರ್ಣ ವಿಕಸನಕ್ಕೆ ಒಂದು ಕೇಂದ್ರಬಿಂದು ಇರುತ್ತೆ. ಆ ಕೇಂದ್ರದ ಸುತ್ತ ನಿರ್ದಿಷ್ಟ ರೀತಿಯ ಸಿಮ್ಮೆಟ್ರಿ, ಆ ಪ್ಯಾಟರ್ನ್ ಗೆ ಇರುತ್ತೆ. ಬಣ್ಣಗಳ ಕಾಂಟ್ರಾಸ್ಟ್ಗಳನ್ನು, ಮಬ್ಬು ಛಾಯೆಗಳನ್ನು ಚಿತ್ರದ ಪೂರ್ಣತ್ವದಿಂದ ಭಿನ್ನವಾಗಿಸಿ ತುಂಡಾಗಿಸಿ ನೋಡಲಾಗದು. ಒಮ್ಮೆ ಹರಡಿ, ಬೆರೆತ ಬಣ್ಣಗಳನ್ನು ಮೊದಲಿನಂತೆಯೇ ಪುನಃ ಬಿಡಿಸಿ ಹಿಂಪಡೆಯಲೂ ಆಗಲ್ಲ. ಕಲೆಸಿದ ಬಣ್ಣ ಕಲೆತೇ ಇರುತ್ತೆ. ಬಾಲ್ಯದಿಂದಲೂ ಕಾಣುವ ದೃಶ್ಯಗಳು ನಮ್ಮ ಮನಸ್ಸಿನ ಹಾಳೆಯ ಮೇಲೆ ಹೀಗೆಯೇ ಬಣ್ಣದ ದ್ರಾವಣವಾಗಿ ಎರೆಯಲ್ಪಡುತ್ತವೆ. ದಿನ ದಿನವೂ ಹೊಸ ದೃಶ್ಯ, ಹೊಸ ಬಣ್ಣ. ಮನಸ್ಸಿನಲ್ಲಿ ಅದು ಹರಡುತ್ತದೆ, ಪದರ ಪದರವಾಗಿ ಒಂದು ಕೇಂದ್ರದ ಸುತ್ತ. ನಾವು ಕರೆದುಕೊಳ್ಳುವ, ಅನುಭವ, ನೆನಪು ಇವುಗಳೆಲ್ಲ ನಮ್ಮ ಮನಸ್ಸಿನ ಕ್ಯಾನುವಾಸಿನ ಮೇಲೆ ಮೂಡಿದ ವರ್ಣಚಿತ್ರಗಳು. ಪ್ರತೀ ಮನಸ್ಸನ್ನೂ ನೋವು, ಆಘಾತಗಳು, ಕಾಡಿದಷ್ಟು ಬೇರೆ ಭಾವಗಳು ಕಾಡಲ್ಲ. ಮನಸ್ಸಿನ ಚಿತ್ರಪಟಲದಲ್ಲಿ ಅಂತಹ ಘಟನೆಗಳು ತುಂಬಾ ಆಳವಾದ ಅಚ್ಚೊತ್ತು ಆಗುತ್ತೆ. ಅಮೂರ್ತ ವರ್ಣಚಿತ್ರಕಾರ ಹೆಚ್ಚೆಂದರೆ ಒಂದು ವರ್ಣ ಚಿತ್ರ ಬರೆಯಲು ಕೆಲವು ತಿಂಗಳ ಸಮಯ ತಗೋಬಹುದು. ಹಾಗೆ ಆತ, ತನ್ನ ಜೀವನದಲ್ಲಿ ಹತ್ತಾರು ವರ್ಣಚಿತ್ರಗಳನ್ನು ಬರೆಯುತ್ತಾನೆ. ಆದರೆ ಈ ಮನಸ್ಸಿನಲ್ಲಿ ಮೂಡುವ ವರ್ಣ ಚಿತ್ರ ಒಂದೇ. ಅದು ಶುರುವಾಗುವುದು, ಹೆರಿಗೆ ಕೋಣೆಯಲ್ಲಿ, ಅದರ ಚಿತ್ರಣ ಮುಗಿಯುವುದು ಸ್ಮಶಾನದಲ್ಲಿ. ಚೆಲ್ಲಿದ ಬಣ್ಣ ಅಳಿಸಲಾಗದೇ ಚಿತ್ರದ ಹಂದರವೇ ಆಗುತ್ತಾ ಚಿತ್ರ ವಿಕಸಿತವಾಗುತ್ತೆ. ದಿನ ದಿನವೂ ವಿಕಸಿತವಾಗುವ ಈ ಚಿತ್ರದಲ್ಲಿ ಎಷ್ಟೊಂದು ಪದರಗಳು, ಗೆರೆಗಳು,ಅಂಚುಗಳು, ಮೂಲೆಗಳು,ಛಾಯೆಗಳು ವರ್ತುಲಗಳು, ಶೃಂಗಗಳು, ಶೃಂಗಾರಗಳು. ಒಂದು ವಿಸ್ತಾರವಾದ ಖಾಲಿ ಗುಡ್ಡವಿದೆ, ಅಂದುಕೊಳ್ಳೋಣ. ತುಂಬಾ ಮಳೆಸುರಿದು ಗಿಡಗಳು ಮೊಳಕೆಯೊಡೆಯುತ್ತವೆ. ಕೆಲವು ವರ್ಷಗಳ ನಂತರ ಗಿಡಗಳು ಮರಗಳಾಗುತ್ತವೆ. ಮರಗಳ ಸುತ್ತ ಬಳ್ಳಿಗಳು, ಕೆಲವು ಮುಳ್ಳಿನ ಗಿಡ ಪೊದೆಗಳು, ಒಂದಕ್ಕೊಂದು ಅವಲಂಬಿತವಾಗಿ ಒಟ್ಟಾಗಿ, ಅದನ್ನು ನಾವು ಕಾಡು ಎಂದು ಕರೆಯ ತೊಡಗುತ್ತೇವೆ. ಕಾಡೊಳಗೆ ಕ್ರಿಮಿ ಕೀಟಗಳು, ಪ್ರಾಣಿ ಪಕ್ಷಿಗಳು ರಂಗೋಲಿಯ ಚುಕ್ಕಿಗಳಾಗುತ್ತವೆ. ಜೇಡ ಬಲೆ ಹೆಣೆಯುತ್ತೆ. ಹಲವು ವರ್ಷಗಳ ನಂತರ, ಹಳೆಯ ಮರಗಳು ಬೀಳುತ್ತವೆ,ಹೊಸ ಮರ ಬೆಳೆಯುತ್ತದೆ. ಭೂಕಂಪವಾದಾಗ, ಗುಡ್ಡದ ಅಂಚಿನಲ್ಲಿ ಮಣ್ಣು ಜರಿದು ಇಳಿಜಾರಿನ ಹೊಸ ಚಿತ್ರ ಬರೆಯುತ್ತೆ. ಮನಸ್ಸಿನೊಳಗೂ ಹಾಗೆ!. ಚಿತ್ರ ನಿಧಾನವಾಗಿ ವಿಕಸಿತವಾಗುತ್ತೆ. ಅದಕ್ಕೊಂದು ಮೂರು ಆಯಾಮ ಕೊಡುತ್ತೆ. ನಾವು ಯಾವುದೇ ವಸ್ತುವಿನ ಸ್ವರೂಪವನ್ನು ನೋಡುವಾಗ, ಆ ವಸ್ತುವಿನ ಹಿಂದೆ ಯಾವ ಹಿನ್ನೆಲೆಯಿದೆಯೋ ಅದಕ್ಕೆ ಸಾಪೇಕ್ಷವಾಗಿ ಆ ಸ್ವರೂಪ ಕಾಣುತ್ತೆ. ಮನಶ್ಶಾಸ್ತ್ರದಲ್ಲಿ, ಇದಕ್ಕೆ ಫಿಗರ್- ಗ್ರೌಂಡ್ ರಿಲೇಶನ್ ಶಿಪ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಂದು ಕೆಂಪು ಬಣ್ಣದ ಚೆಂಡನ್ನು, ಕೆಂಪು ಬಣ್ಣದ ಪರದೆಯ ಮುಂದಿಟ್ಟರೆ ಗುರುತಿಸಲು ಕಷ್ಟ. ಅದೇ ಚೆಂಡನ್ನು, ಕಪ್ಪು ಬಣ್ಣದ ಅಥವಾ ಬಿಳಿ ಇನ್ನಿತರ ಬಣ್ಣದ ಪರದೆಯ ಮುಂದೆ ಇಟ್ಟರೆ ಸುಲಭವಾಗಿ ಕಾಣಿಸುತ್ತದೆ. ನಿಜ ಜೀವನದಲ್ಲಿ ನಾವು ಯಾವುದೇ ಘಟನೆಯನ್ನು ನೋಡುವಾಗ, ನಮ್ಮ ಅದುವರೆಗಿನ ಬದುಕಿನ ಅನುಭವದ ವರ್ಣ ಚಿತ್ರದ ಹಿನ್ನೆಲೆಯಲ್ಲಿ ಆ ಘಟನೆ ಬಿಂಬ ಪಡೆದು, ಹಿನ್ನೆಲೆಗೆ ಸಾಪೇಕ್ಷವಾಗಿ ನಮಗೆ ಕಾಣಿಸುತ್ತೆ. ಈ ಹೊಸ ಅನುಭೂತಿಯೂ ನಮ್ಮ ಮನಸ್ಸಿನ ಕ್ಯಾನುವಾಸಿನ ಚಿತ್ರದಲ್ಲಿ ಹೊಸ ಚುಕ್ಕಿಯಾಗಿ ಛಾಪೊತ್ತುತ್ತೆ. ಹೀಗೆ ನಮ್ಮ ವರ್ತಮಾನದ ಘಟನೆಗಳ ಗ್ರಹಿಕೆ ನಮ್ಮ ಭೂತಕಾಲದ ಅಷ್ಟೂ ಅನುಭವದ ಮನಃಚಿತ್ರದ ಮೇಲೆ ಅವಲಂಬಿಸಿರುತ್ತದೆ. ಇದರ ಜತೆಗೆ, ನಾವು ನೋಡುವ ಚಿತ್ರದ ಅನುಭೂತಿ, ನೋಟದ ಕೋನದ ಮೇಲೂ ಅವಲಂಬಿತ ತಾನೇ. ಅದನ್ನೇ ನಾವು ದೃಷ್ಟಿಕೋನ ಎನ್ನುತ್ತೇವೆ. ವಿಮಾನದಿಂದ ಕೆಳಗೆ ನೋಡುವಾಗ ನಿಮಗೆ ಕಾಣುವ ಪಟ್ಟಣದ ಚಿತ್ರ, ನೆಲದಲ್ಲಿ ಚಲಿಸುತ್ತಾ ನೋಡುವಾಗಿನ ಚಿತ್ರದಿಂದ ಎಷ್ಟೊಂದು ಭಿನ್ನ ಅಲ್ಲವೇ. ಇಂತಹಾ ಜಿಗಿಹಲಗೆಯ ಮೇಲೆ ನಿಂತು ಮೇಲಕ್ಕೆ ಜಿಗಿದರೆ!. ಹೌದು, ಅದೇ ಕಲ್ಪನೆ, ಕನಸು, ಭಾವೋತ್ಕರ್ಷ,ಚಿಂತನೆ ಮಂಥನೆಗಳು. ಕವಿ ತಾನು ನೋಡಿದ್ದನ್ನು, ಅನುಭವಿಸಿದ್ದನ್ನು ಬಣ್ಣದ ಕಾಗದದಲ್ಲಿ ಚಿತ್ರಿಸಿ, ಗಾಳಿ ಪಟ ಮಾಡಿ ಹಾರಿ ಬಿಡುತ್ತಾನಲ್ಲ!. ಕಾಫಿ ಕಾಯಿಯನ್ನು ಹಾಗೆಯೇ ತಿಂದರೆ ರುಚಿ ಸಿಗುತ್ತದೆಯೇ?. ಅದನ್ನು ಒಣಗಿಸಿ, ಹದವಾಗಿ ಹುರಿದು ಸರಿಮಾತ್ರೆಯಲ್ಲಿ ಚಿಕೋರಿ ಸೇರಿಸಿ, ಸರಿಗಾತ್ರದ ಹುಡಿ ಮಾಡಿ, ಡಿಕಾಕ್ಷನ್ ಪಾತ್ರೆಯ ಉಗಿಯಲ್ಲಿ ಬೇಯಿಸಿ, ತಯಾರಾದ ಸಾಂದ್ರದ್ರವವನ್ನು ಬಿಂದು ಬಿಂದಾಗಿ ತೊಟ್ಟಿಕ್ಕಿಸಿ, ರಾತ್ರಿಯಿಡೀ ಸಂಗ್ರಹಿಸಿ, ಮೊದಲ ಸೂರ್ಯನ ಕಿರಣದ ಬೆಚ್ಚಗಿನ ಸಾನ್ನಿಧ್ಯದಲ್ಲಿ ಕುದಿಸಿದ ಹಾಲು ಸಕ್ಕರೆಗೆ ಬೆರೆಸಿ ಹಬೆಯಾಡುತ್ತಾ ಇರುವ ಕಾಫಿಯನ್ನು ಹೀರಿದರೆ ರುಚಿ!. ಸೃಜನಶೀಲತೆ ತಂದು ಕೊಡುವ ಅನನ್ಯ ಅವಕಾಶವೇ ಹಾಗೆ!. ಹೀಗೆ ಕವಿಕಂಡ ವಸ್ತು, ಕವಿತೆಯಾಗಿ ಬಿಂದುವಿನಿಂದ ಮೂರು ಆಯಾಮದ ಸುಂದರ ಬಿಂಬವಾಗಿ ಹೊರ ಬರಲು, ಕವಿಯ ಅನುಭವ ಮತ್ತು ಸೃಜನಶೀಲತೆ ಎರಡೂ ಶಿಲ್ಪಿಯ ಉಳಿಯಂತೆ ಕೆಲಸ ಮಾಡುತ್ತೆ. ಗೋಪಾಲಕೃಷ್ಣ ಅಡಿಗರ ಈ ಸಾಲುಗಳನ್ನು ನೋಡಿ. ” ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ ಉತ್ಸಾಹಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು” ಮಾಂತ್ರಿಕನ ಮಾಟದ ಚಿತ್ರಣ, ಉಕ್ಕುವ ಕಡಲಿನ ಚಿತ್ರಣ ಬಾಲ್ಯದ ಮನಸ್ಸಲ್ಲಿ ವರ್ಣ ಚಿತ್ರವಾಗಿ, ಈ ಕವಿತೆಯಲ್ಲಿ ಪ್ರತಿಮೆಗಳಾಗಿ ಹೊರಬಂದಿವೆ. ಕಡಲನ್ನು ನೋಡದೇ ಬೆಳೆದ ಮನಸ್ಸಿಗೆ, ಈ ಕ್ಷುಬ್ಧ ಸಾಗರ ಅಂತ ಬರೆಯಲು ಬರಬಹುದೇ?. ” ಇರುಳಿರಳಳಿದು ದಿನದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದಕೆ ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? ಕರಿನೆರೆ ಬಣ್ಣದ ಪುಚ್ಚಗಳುಂಟು ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು ಕೆನ್ನನ ಹೊನ್ನನ ಬಣ್ಣಬಣ್ಣಗಳ ರೆಕ್ಕೆಗಳೆರಡೂ ಪಕ್ಕದಲುಂಟು ಹಕ್ಕಿ ಹಾರುತಿದೆ ನೋಡಿದಿರಾ? ನೀಲಮೇಘಮಂಡಲ-ಸಮ ಬಣ್ಣ ! ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ ! ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ ಹಕ್ಕಿ ಹಾರುತಿದೆ ನೋಡಿದಿರಾ? “ ಹಾರುವ ಹಕ್ಕಿಯನ್ನು ತನ್ಮಯತೆಯಿಂದ ನೋಡುತ್ತಾ, ದಿನಗಳು,ರಾತ್ರಿಗಳು, ಕಳೆದಾಗ ಬೇಂದ್ರೆ ಅಜ್ಜನ ಕಲ್ಪನಾ ವಿಲಾಸ ಹಕ್ಕಿ ಹಾರುತಿದೆ ನೋಡಿದಿರಾ ಕವನವಾಗುತ್ತೆ. ಹಕ್ಕಿ ಅಮೂರ್ತ ವರ್ಣಚಿತ್ರ ಬರೆಯುವ ಕುಂಚವಾಗುತ್ತೆ. ಹಕ್ಕಿಗಳನ್ನು ಕಾಣಸಿಗದ ಮರುಭೂಮಿ ಪ್ರದೇಶದಲ್ಲಿ ಬೇಂದ್ರೆ ಜೀವಿಸಿದ್ದರೆ,ಈ ಕವಿತೆ ಬರಲು ಅಸಾಧ್ಯ. ಆ ಸನ್ನಿವೇಶದಲ್ಲಿ ಅವರ ಸೃಜನಶೀಲ ಮನಸ್ಸು, ಮರುಭೂಮಿಯ ಬೇರೇನೋ ಅನುಭವದ ಕವಿತೆ ಚಿಲುಮಿಸುತ್ತಿತ್ತು. ” ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ” ಬಾಲ್ಯದಲ್ಲಿ ಅಮ್ಮನನ್ನು ಅತ್ಯಂತ ಸಮೀಪದಿಂದ ಕಂಡು ಪ್ರೀತಿಸಿದ ಬಾಲಕನಿಗೆ, ಸೃಷ್ಟಿಯ ಅಷ್ಟಲ್ಲೂ ಅಮ್ಮನನ್ನೇ ಕಾಣುವ ದೃಷ್ಟಿ ಪ್ರಾಪ್ತವಾಗುವ ವರ್ಣ ಚಿತ್ರದ ಮನಸ್ಸು ಲಂಕೇಶ್ ಅವರದ್ದು. ಅಲ್ಲವಾದರೆ ಇಂತಹ ಕವನ ಸಾಧ್ಯವೇ?. ********************************************* ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ