ಕಥೆ ಉಡ್ಡಾಣ ಹೇಮಾ ಸದಾನಂದ್ ಅಮೀನ್ ಎಡೆಬಿಡದೆ ಅಳುವ ಆ ಮಗುವಿನ ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “ ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ ಸಮೀಕ್ಷಳ ಮನಸ್ಸು ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ ಸವನೆ ನೋಡುತ್ತಾ ಇದ್ದಳು. ಮಗು ಅಳುತ್ತಿದ್ದರೆ ಅದನ್ನು ಪುಸಲಾಯಿಸಿ ಸಮಾಧಾನಪಡಿಸುವುದನ್ನು ಬಿಟ್ಟು ಯಾವುದೋ ಲೋಕದಲ್ಲಿ ಮಗ್ಮಳಾಗಿರುವ ಆಕೆಯ ನಿಸ್ತೇಜ ಕಣ್ಣುಗಳು ಒಂದು ಕಥೆಯನ್ನು ಹೇಳಿದರೆ ಆಕೆಯ ಸ್ಟ್ರೇಟ್ನಿಂಗ್ ಮಾಡಿ ಚದುರಿದ ಹೆರಳು, ಮ್ಯನಿಕೂರ್ ಪೆಡಿಕ್ಯೂರ್ ಮಾಡಿ ಬಣ್ಣ ಮಾಸುತ್ತಾ ಬಂದಿರುವ ನೀಲ ಬೆರಳುಗಳು , ಕೆನ್ನೆಯ ಸುತ್ತ ಹೊಂಬಣ್ಣದ ರೋಮಗಳಿಂದ ಮಸುಕು ಮಸುಕಾಗಿ ಹೊಳೆಯುತ್ತಿರುವ ಮುಖ. ಸೀರೆಯೂ ಅಷ್ಟೇ, ಪ್ರಿಂಟೆಡ್ ರವಕೆಗೆ ತೆಳುವಾದ ಪ್ಲೇನ್ ಹಸಿರು ಬಣ್ಣದಾಗಿದ್ದು ಆಕೆ ನೋಡಲು ಒಂಥರ ಅಪ್ಸರೆ ಅಲ್ಲವಾದರೂ ತೆಳುವಾಗಿ ಚೆಂದವಾಗಿದ್ದಳು. ಅಳುತ್ತಿರುವ ಮಗುವನು ಮುದ್ದಾಡಿ ಮುಖ ಒರೆಸುವುದಾಗಲಿ, ನೀರು ಕುಡಿಸುವುದಾಗಲಿ ಏನೂ ಮಾಡದೇ ತನ್ನದೇ ಗುಂಗಿನಲ್ಲಿರುವಾಗ ಸಮೀಕ್ಷಾಳ ಅನುಮಾನದ ಗರಿ ಶಿಥಿಲಗೊಂಡಿತು . “ ಈ ಮಗು ಅವಳದ್ದೇ ಆಗಿದ್ದರೆ ಆಕೆ ಇಷ್ಟು ಅಳುತ್ತಿರುವ ಮಗುವನ್ನು ನೋಡಿಯೂ ಸುಮ್ಮನಿರಲು ಸಾಧ್ಯವೇ ಇಲ್ಲ . ಬಹುಶಃ ಯಾರದ್ದೋ ಮಗುವನ್ನು ಕದ್ದು ತಂದಿರಬಹುದೇ? ಮತ್ತೊಮ್ಮೆ ಛೆ! ಈಗೀಗ ತಲೆಯಲ್ಲಿ ವಾಟ್ಸ್ ಆಪ್ಗಳಲ್ಲಿ ಓಡಾಡುವ ಸಂದೇಶಗಳೇ ಇಂತಹ ಅನುಮಾನದ ಹುಳುಗಳು” ಎಂದು ತನ್ನಲ್ಲಿಯೇ ನಕ್ಕು ಅಕ್ಕಪಕ್ಕ ನೋಡಿದಳು . ಎಲ್ಲರೂ ಕಿವಿಗೆ ಇಯರ್ ಫೋನ್ ವಾಯರ್ ಸಿಕ್ಕಿ ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದರು. ಇಂತಹ ಹೊಳೆಯುತ್ತಿರುವ ನಿರ್ಭಾವುಕ ಮುಖಗಳೊಂದಿಗೆ ಪಯಣಿಸುತ್ತಿರುವ ಸಮೀಕ್ಷಗೆ ಸಂತೋಷ, ಘನತೆಯ ವಿಷಯಕ್ಕಿಂತ ಬೇಜಾರಾದದ್ದೇ ಜಾಸ್ತಿ. ಕಳೆದ ಆರು ವಾರಗಳಿಂದ ಸಿ. ಎಸ್. ಟಿ. ಲೋಕಲಿನ ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟನಲ್ಲಿ ದಿನಾ ನೋಡುತ್ತಿರುವ ಪರಿಚಿತ ಮುಖಗಳೇ, ಆದರೂ ಯಾರೂ ಒಬ್ಬರನೊಬ್ಬರು ಒಂದು ಕಿರುನಗೆ ಚೆಲ್ಲಿ ಮಾತಾನಾಡಿಸುವ ಸೌಜನ್ಯ ಬಿಡಿ ಪಕ್ಕದಲಿ ಸೀಟು ಖಾಲಿಯಿದ್ದರೂ , ಸರಿದು ಕೂರಲು ತುಟಿಬಿಚ್ಚದ ಮೂಕ ಜಗತ್ತೆಂದು ಸಮೀಕ್ಷಳ ಸಮೀಕ್ಷೆಯಾಗಿತ್ತು. ಇದೇ ದ್ವಿತೀಯ ದರ್ಜೆಯಲ್ಲಾಗಿದ್ದರೆ , ತನ್ನ ಪೂರ್ತಿ ಶಕ್ತಿಯ ಬಂಡವಾಳದಿಂದ ಒಳನುಗ್ಗಿ ಸೀಟಲ್ಲಿ ಕೂತವರು ತಮ್ಮ ಮನೆಯವರೇ ಎನ್ನುವಂತೆ “ ಎಲ್ಲಿ ಇಳಿಯಬೇಕೆಂದು ಕೇಳಿ ತನ್ನ ಆರಾಮಿನ ಸೌಕರ್ಯ ಮಾಡಿಕೊಳ್ಳುವುದಷ್ಟೇ ಅಲ್ಲದೇ ಇತರರಿಗೂ ಖಾಲಿ ಸೀಟುಗಳಿದ್ದರೆ ಕರೆದು ಕೂರಿಸುವ ಮನೋಭಾವ. ಯಾತ್ರಿಗಳೇ ಅಲ್ಲ , ಅಲ್ಲಿ ವ್ಯಾಪಾರ ಮಾಡುತ್ತಿರುವ ಹೆಣ್ಣು ಮಕ್ಕಳು ನಮ್ಮವರೇ ಆಗುತ್ತಾರೆ. ಒಬ್ಬರ ಮಡಿಲಲ್ಲಿಟ್ಟ ಕ್ಲಿಪ್ಪುಗಳ ಬಿಂದಿಗಳ ಟ್ರೇಗಳಿಗೆ ಒಂದೇ ಮನೆಯವರಂತೆ ಹತ್ತಾರು ಮಂದಿ ಮುಗಿಬಿದ್ದು ಚರ್ಚೆ ಮಾಡಿ ಖರೀದಿಸಿದ ಸಣ್ಣ ವಸ್ತುಗಳಲ್ಲಿಯೂ ದೊಡ್ಡ ಖುಷಿ ಪಡುತ್ತಾರೆ. ಇದೆಲ್ಲಾ ರಘುನಂದನನಿಂದಾಗಿಯೇ. “ ಮಗುವಿನ ಸುರಕ್ಷೆಯ ದೃಷ್ಟಿಯಿಂದ’ ಎಂದು ಫಸ್ಟ್ ಕ್ಲಾಸಿನ ಪಾಸ್ ತಂದು ಸಮೀಕ್ಷಳ ಕೈಯಲಿಟ್ಟಾಗ ಒಪ್ಪದೆ ಬೇರೆ ದಾರಿ ಇರಲಿಲ್ಲ. ಈಗ ಈ ಮಗುವಿನ ಅಳಲು ಹೃದಯಕ್ಕೆ ಅಪ್ಪಳಿಸಿ ಚಿಗುರುತ್ತಿರುವ ಆಕೆಯ ತಾಯ್ತನವೇ ಇದ್ದಿದ್ದೂ ಅನುಮಾನದತ್ತ ಮುಖ ಮಾಡಿ, ಆ ತಾಯಿ ಮಗುವಿನ ಪೋಟೋ ಕ್ಲಿಕಿಸಿ ರಘುನಂದನನಿಗೆ ಕಳುಹಿಸುವಂತೆ ಮಾಡಿತ್ತು. ಆ ಸಂದೇಶವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪರಿಗಣಿಸುವುದಕ್ಕಿಂತ ವಿಷಯವನ್ನು ನಿರ್ಲಕ್ಷಿಸಿ ಸಮೀಕ್ಷಳ ಭಾವನೆಗಳನ್ನು ನೋಯಿಸಬಾರದೆಂದು, ಅವಳಿಂದ ಪೂರ್ತಿ ಮಾಹಿತಿ ಪಡೆದು, ರೇಲ್ವೆ ಪೋಲಿಸರಿಗೆ ದೂರು ಸಲ್ಲಿಸಿ, ಅವರು ವಿಕ್ರೋಲಿ ಸ್ಟೇಷನಿನಲ್ಲಿರೈಲು ಹತ್ತಿ ಮುಂದಿನ ಸ್ಟೇಷನಿನಲ್ಲಿ ಅವಳೊಂದಿಗೆ ಇಳಿಯುತ್ತಾರೆ.” ಎಂದು ಸಂದೇಶ ಕಳುಹಿಸಿದ, ಪೊಲೀಸರಿಗೆ ನಿನ್ನ ಹೆಸರು ಹೇಳದೆ ದೂರು ನೀಡಿರುವೆನು ಆದ್ದರಿಂದ ಇವೆಲ್ಲಾ ಗೊಂದಲಗಳಲ್ಲಿ ಬೀಳದೇ ನಿನ್ನ ಪಾಡಿಗೆ ನೀನು ಆಫೀಸಿಗೆ ಹೋಗು ಎಂದೂ ಒತ್ತೊತ್ತಿ ಹೇಳಿದ್ದ. ಸರಿ ಎಂದು ಒಪ್ಪಿದ್ದವಳನ್ನು ಆ ಅನುಮಾನಸ್ಥ ತಾಯಿ ಮಗುವಿನ ಹಿಂದೆ ಹೋಗಲು ಕಾದಿದ್ದು ಮನ ಮಾಡಿದ್ದು ಯಾರು ಎಂದಾಗ, ಅವಳ ಸೆಕೆಂಡ್ ಕ್ಲಾಸ್ ಮೆಂಟಾಲಿಟಿಯೋ, ಅವಳ ತಾಯ್ತನವೋ, ಅಲ್ಲ ಅವಳಲ್ಲಿರುವ ಹೆಣ್ತನವೋ ಗೊತ್ತಿಲ್ಲ? ಆ ತಾಯಿ ಮಾತ್ರ ಎಷ್ಟೂ ಕಾಡಿ ಬೇಡಿದರೂ ಲೇಡಿ ಕ್ವಾನ್ಸ್ಟೇಬಲಿನ ಕರುಣೆ ಕರಗಲಿಲ್ಲ. ಅದು ಅವರ ವೃತ್ತಿಗೂ ಸರಿ ಬರುವುದಿಲ್ಲ ಅನ್ನಿ. ಘಾಟ್ಕೊಪರ್ ಪ್ಲಾರ್ಟಫಾರ್ಮಿನ ಮಧ್ಯದಲ್ಲಿದ್ದ ವಿಚಾರಣೆ, ಕೊಠಡಿಗೆ ಆಕೆಯ ಕೈ ಎಳೆದು ತರುತ್ತಿದ್ದಂತೆ ನಿಬಿಡ ಜನರ ಕಣ್ಣಿಗೆ ಕುತೂಹಲದ ತುತ್ತಾಗಿದ್ದಳು. ಮಗುವನ್ನು ಎದೆಗಾತು, “ ನಾನು ಮಗು ಕದ್ದಿಲ್ಲ ಸಾರ್ ” ಎಂದೇ ಗೋಗರೆಯುತ್ತಾ ಪೋಲಿಸ್ ಅಧಿಕಾರಿಯ ಮುಂದೆ ಕೂತವಳ ಬಾಯಿ ಒಣಗಿ ಕಣ್ಣು ತೇವವಾಗಿತ್ತು. ಸಮೀಕ್ಷ ತಾನಾಗಿಯೇ ಮುಂದು ಬಂದು “ ನಾನೇ ದೂರು ಕೊಟ್ಟರುವುದು. ಮಗು ಎಷ್ಟೊತ್ತಿನಿಂದ ಅಳುತ್ತಿದ್ದರೂ ಪ್ರತಿಕ್ರಿಯೆಯೇ ಇಲ್ಲದೆ ತನ್ನಳೊಳಗೆ ಗುಂಗಿನಲ್ಲಿರುವುದು, ಅ ಮಗುವೂ ತಾಯಿಯ ಮಡಿಲಲ್ಲಿ ಅಪರಿಚಿತರ ಕೈಯಲ್ಲಿರುವಂತೆ ಚಡಪಡಿಸುತ್ತಿರುವುದನ್ನು ನೋಡಿ ಅನುಮಾನ ಬಂತು ಸರ್ ಎಂದಳು. “ಡಾಟ್ಸ್ ಗುಡ್ ಯು ಡನ್ ಆ ಗುಡ್ ಜಾಬ್ “ ಎಂದು ಅವಳನ್ನೂ ಕೂರಿಸಿ ಮಗುವಿಗೂ ನೀರು ಕುಡಿಸಲು ಹೇಳಿ ಆ ತಾಯಿಗೆ ಕುಡಿಯಲು ನೀರು ಕೊಟ್ಟು, ವಿಚಾರಣೆಗೆ ಇಳಿದರು. ವಿಚಾರಣೆ ಗಡುಸಾದಂತೆ, ಅವಳೊಳಗಿನ ಮೌನ ಈ ಅನಿರೀಕ್ಷಿತ ಪ್ರಶ್ನೆಗಳನ್ನು ಕೇಳಿ ಕೇಳಿ ರೋಸಿ , “ ಇನ್ನೆಷ್ಟು ಬಾರಿ ಹೇಳಲಿ ನನ್ನದೇ ಮಗು ಇದು. ನಾನೇ ಈ ಮಗುವಿನ ತಾಯಿ “. ಅಲ್ಲಿಯೇ ಇದ್ದ ಹಿರಿಯ ಅಧಿಕಾರಿ ಪಟವರ್ಧನ್ ಸರ್,ಅವಳ ಒಳಗುದಿತವನ್ನು ಅರ್ಥೈಸಿಕೊಂಡು, ಒತ್ತಾಯವಾಗಿ ಕೇಳುವ ಪ್ರಶ್ನೆಗಳನ್ನೇ ಮೃದುವಾಗಿ, “ ನೋಡಿ ನೀವು ನನ್ನ ಸಹೋದರಿಯಂತೆ, ನಿಮ್ಮ ಹೆಸರೇನು, ಯಾವ ಊರು , ಮಗುವಿಷ್ಟು ಅಳಲು ಕಾರಣವೇನು? ಮಗುವ್ಯಾಕೆ ನಿಮ್ಮನ್ನು ಅಪರಿಚಿತರಂತೆ ಕಾಣುತಿದೆ? ಅನಿರೀಕ್ಷಿತ ಪ್ರಶ್ನೆಗಳನ್ನು ಭೇದಿಸಿ ಆಕೆ ಗಂಟಲು ಸಡಿಲು ಗೊಳಿಸುತ್ತಾ ಉತ್ತರಕ್ಕೆ ತೆರೆದುಕೊಂಡಳು. ………………………… ಶಾಲೆಯಲ್ಲಿ ಮಾತ್ರ ಶರೈಯೂ . ಖೇಡಿನಲ್ಲಿ ಎಲ್ಲರಿಗೂ ಶರು . ನಮ್ಮೂರು ಇಲ್ಲೇ ಹತ್ತಿರ, ಕರ್ಜತ್ದಿಂದ ಐದು ಕಿಲೋಮೀಟರ್ ದೂರ. ಸಾಂಜಾ ಖೇಡ್ ಅಂತ. ರುಕುಮಾಯಿ ಮಂದಿರದ ಹಿಂಬದಿ ನಮ್ಮ ಮನೆ. ಅಪ್ಪ ಸಣ್ಣ ಕಾರಖಾನೆಗೆ ಕೆಲ್ಸಕ್ಕೆ ಹೋಗ್ತಿದ್ರು . ಅಮ್ಮ ಮನೆಯಲ್ಲೇ. ನಾನು ಮತ್ತು ನನ್ನ ಜೊತೆಗೆ ಹುಟ್ಟಿದ ಅವಳಿ ತಮ್ಮ ಸಾರ್ಥಕ್. ಸಾರ್ಥಕನಿಗೆ ಮಿರ್ಗಿ ಹುಟ್ಟು ಕಾಯಿಲೆಯಾಗಿ ಬಂದಿತ್ತು. ಆತನ ಹದಗೊಂಡಿದ್ದ ಜೀವಕ್ಕೆ ನಮ್ಮ ಮನೆ ಆಸ್ಪತ್ರೆಯಂತೆ . ಗುಳಿಗೆ, ಟಾನಿಕ್ , ಡ್ರಾಪ್ಸ್ ಕಿಟಕಿಯ ಪಕ್ಕದಲ್ಲಿ ಮಗುಮ್ಮಾಗಿ ಕೂತು ತನ್ನ ಉಪಸ್ಥಿತಿಯನ್ನು ವ್ಯಕ್ತಪಡಿಸುತ್ತಿತ್ತು. ಆ ಎಳೆಯ ಜೀವ ಈ ನೋವು, ಬೇಸರ , ದ್ವೇಷ, , ನಿರಾಶೆಯ ಒತ್ತಡಗಳನ್ನು ಎಷ್ಟು ಸಹಿಸಿಕೊಳ್ಳಲು ಸಾಧ್ಯ? , ಅಷ್ಟಕ್ಕೂ ಕೆಲವು ಅನಿವಾರ್ಯಗಳು ಅವನ ಸ್ವಾಸ್ಥ್ಯಕ್ಕಾಗಿಯೇ ಮಾಡಬೇಕಾಗಿತ್ತು. ಅಪ್ಪ ಡಬಲ್ ಕೂಲಿ ಮಾಡುತ್ತಿದ್ದ. ಅಮ್ಮ ದೇವಸ್ಥಾನದ ಚಾಕರಿಗೆ ಹೋಗುತ್ತಿದ್ದಳು. ಮನೆಯಲ್ಲಿ ಕಿವಿ ಸರಿ ಕೇಳದ ಅಜ್ಜಿ ನಮ್ಮಿಬ್ಬರನ್ನು ನೋಡಿಕೊಳ್ಳುತ್ತಿದ್ದಳು. ನೋಡಿಕೊಳ್ಳುವುದೇನು ? ಒಮ್ಮೊಮ್ಮೆ ನಾವು ಆತ್ತು ಆತ್ತು ಕಂಗಾಲಾದರೂ ಅಜ್ಜಿ ಕೇಳದೆ ವಿಠಲಾ …….. ಪಾಂಡುರಂಗ…. ನಾಮಾವಳಿಯಲ್ಲಿ ಮಗ್ನರಾಗಿದ್ದಾಗ ಪಕ್ಕದ ಮನೆಯವರು ಬಂದು “ ಏ ಕಿವುಡೆ.. ಕಿವಿಯಂತು ಪೊಳ್ಳಾಗಿದೆ ಕಣ್ಣಿಗೂ ಕಾಣಿಸ್ತಿಲ್ವಾ ? ಎಂದು ಅಣಕಿಸುತ್ತಿದ್ದರು. ಕೊನೆಗೂ ಕಣ್ಣೆವೆಯಲ್ಲಿಟ್ಟು ಕಾದ ಮಗುವನ್ನು ಬೆಂಬಿಡದೆ ವಿಧಿ ಕೊಂಡೊಯ್ಯಿತು. ಹತ್ತು ವರುಷ ನಮ್ಮೊಂದಿಗಿದ್ದು ತೀರಿಹೋದವನ ನೆನಪು ಮರೆಯಾಗಲು ಸಾಧ್ಯವೇ? ಅಮ್ಮನಿಂದ ಈ ಆಘಾತ ಸಹಿಸಲಾರದೆ ಆಕೆಯೂ ದಿನೇ …ದಿನೇ ಕುಸಿಯಲಾರಂಭಿಸಿದಳು. ಮನೆಯ ಎರಡು ಗೋಡೆಯ ಪಕ್ಕದಲ್ಲಿ ಎರಡು ಜೀವಂತ ಶವಗಳಂತೆ ಅಜ್ಜಿ ಮತ್ತು ಅಮ್ಮ . ಯಾರ್ ಮಾಡ್ತಾರೆ ಸಾಹೇಬ್? , ಅಪ್ಪ ಮಾತ್ರ ಬಿರುಗಾಳಿಗೆ ಎದೆಕೊಟ್ಟು ನಿಂತಂತೆ ಸೆಟೆದು ನಿಂತಿದ್ದ. ಅಮ್ಮನಿಗೂ “ ಹೇ ಶ್ಯಾಮೆ, ಇನ್ನು ನಮ್ಮ ಮಗನನ್ನು ಇವಳಲ್ಲೇ ಕಾಣಬೇಕೆಂದು ಹೇಳಿದರೂ, “ ತನ್ನ ಕಡೆ ಕಾಲದ ಆಸರೆ , ಅಪ್ಪನ ದೇಹಕ್ಕೆ ಕೊಳ್ಳಿ ಇಡುತ್ತಿದ್ದ” ಎನ್ನುವ ಖಾಲಿತನದ ಛಾಯೆ ಅವನ ಚಹರೆಯಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬದುಕು ಒಳ್ಳೆಯದನ್ನೂ ಕೆಟ್ಟದನ್ನೂ ಒಂದೇ ಗಿರಣಿಯಲ್ಲಿ ಪುಡಿ ಮಾಡುತ್ತೆ” ಎನ್ನುವಂತೆ ಜೀವನವಂತೂ ಸಾಗುತ್ತಿತ್ತು. ಅಮ್ಮನ ಕಾಯಿಲೆ ಅಪ್ಪನ ಸಾಲದ ಇಳಿಸುವ ಒತ್ತಡದ ಮಧ್ಯೆ ನಾನು ಹತ್ತನೇವರೆಗೆ ಮಾತ್ರ ಕಲಿತೆ. ಮನೆಯೊಳಗಿನ ಎಲ್ಲಾ ಕೆಲಸ ಮಾಡಿ ಮುಂದೆ ಕಲಿಯುವುದು ಕಷ್ಟಕರವಾಗಿತ್ತು. ಹಾಗೆ ಹೆಚ್ಚು ಕಲಿಯುವ ಆಸೆಯಾಗಲಿ, ದೊಡ್ಡ ದೊಡ್ಡ ಕನಸುಗಳನ್ನು ಹೃದಯದಲ್ಲಿಟ್ಟು ಅರಳಿಸುವ ಆಕಾಂಕ್ಷೆಯಾಗಲಿ ನನ್ನಲ್ಲಿ ಅಂದೂ ಇರಲಿಲ್ಲ. ಇಂದೂ ಇಲ್ಲ. ಎನ್ನುವಾಗ ಅವಳ ನಿಸ್ತೇಜ ಕಣ್ಣುಗಳ ಭಾವ ಸಾಕ್ಷಿಯಾಗಿದ್ದವು. ಅಜ್ಜಿ ಸಾಯುವ ಮೊದಲು ನಿನ್ನ ತಲೆಗೆ ಅಕ್ಷತೆಯ ಎರಡು ಕಾಳು ಹಾಕ್ಬೇಕೆಂಬ ಒತ್ತಾಯಕ್ಕೆ ಮಣಿದು ನಾನು ಮದುವೆಗೆ ಒಪ್ಪಿದೆ. ಕಿಶೋರ್ ಸಿಂಪಲ್ ಆಗಿಯೇ ನನ್ನನ್ನು ನೋಡಲು ಬಂದಿದ್ದ. ಆ ಕ್ಷಣದಲ್ಲಿ ಅವಳ ಕೆನ್ನೆಗಳು ಅರಳಿ ಕಣ್ಣಲಿ ಸಣ್ಣ ಬೆಳಕು ಮಿನುಗಿದಂತೆ, “ ಕಿಶೋರನಿಗೆ ಮಾತ್ರ ಹಾಗಲ್ಲ. ಅವನ ಕಣ್ಣಲ್ಲಿ ಕನಸುಗಳು ನಕ್ಷತ್ರ ರಾಶಿಗಳಂತೆ ಮಿನುಗುತ್ತಲೇ ಇತ್ತು. ಅದ್ಯಾವ ಸುಖಕ್ಕಾಗಿ ನನ್ನನ್ನು ಮದುವೆಯಾದನೋ ಗೊತ್ತಿಲ್ಲ. ಮದುವೆ ತೀರ ಸರಳವಾಗಿ ಮಾಡಿ ಮುಗಿಸಿದ್ದಕ್ಕೂ ಅವನ ಸಹಮತವಿತ್ತು. ಮುಂಬಯಿಯಲ್ಲಿ ಸ್ವಂತ ಮನೆಯಂತ ಇರಲಿಲ್ಲ. ಸ್ವಂತ ಮನೆಯೇ ಆಗಬೇಕೆಂಬ ಬಯಕೆಯೂ ನನ್ನಲ್ಲಿ ಇರಲಿಲ್ಲ. ಕುರ್ಲಾದ ಬೈಠಕ್ ಚಾಳಿಯಲ್ಲಿಯ ಮಾಳಿಗೆಯಲ್ಲಿ ಬಾಡಿಗೆದಾರನಾಗಿರುತ್ತಿದ್ದ. ನಮ್ಮ ಮೊದಲ ರಾತ್ರಿಯೂ ಅದೇ ಹತ್ತು ಬೈ ಹತ್ತರ ಆ ಸಣ್ಣ ಕೋಣೆಯಲ್ಲಿಯೇ ನಡೆದಿತ್ತು. ಔಷಧಿಗಳ ಕಮಟು ವಾಸನೆಯಿಂದ ಹೊರಬಂದ ಈ ಸಣ್ಣ ಕೋಣೆಯೂ ಅಂದು ಸ್ವರ್ಗದಂತೆ ಕಂಡಿತ್ತು. ಟ್ರೇನುಗಳ ಅವಜಾಹಿಗಳ ಸಂತೆಯ ಮದ್ಯೆಯೂ ಶರೂನ ಕಥೆ ಕೇಳುವುದರಲ್ಲಿ ಎಲ್ಲರೂ ತಲ್ಲೀನರಾಗಿದ್ದ್ರರು. ಗಡಿಯಾರದ ಮುಳ್ಳು ಮೌನವಾಗಿದ್ದರೂ , ಸಿಲಿಂಗ್ ಪ್ಯಾನಿನ ಟರ್ ಟರ್ ಟರ್ ಸದ್ದಿನ ಏಕತಾನತೆ ಹುಂ… ಗುಡುವಂತ್ತಿತ್ತು. ಮಧ್ಯ ಒಂದೊಂದು ಕ್ಷಣದ ಅಂತರದಲ್ಲಿ ಸಮೀಕ್ಷಾ ಮೊಬೈಲ್ ಗುಂಡಿ ಒತ್ತಿ ಸಮಯ ನೋಡಿದಳು. ಆಗಲೇ ರಘುನಂದನನ ಜೊತೆಗೆ ಆಫೀಸಿನ ಕರೆಗಳು ಮೆಸೇಜ್ಗಳು ಬಂದು ತೆಪ್ಪಗೆ ಬಿದ್ದಿದ್ದವು. ಅದನ್ನು ಹಾಗೆಯೇ ಸ್ಕ್ರೀನ್ ಆಫ್ ಮಾಡಿ, ಬ್ಯಾಗಿನೊಳಗಿಟ್ಟಳು. ಕೈಗೆ ತಾಗಿದ ನೀರಿನ ಬಾಟಲಿಯಿಂದ ಒಂದು ಗುಟುಕು ನೀರು ಗಂಟಲೊಳಗೆ ಇಳಿಸಿ, ಶರೂಗೆ ನೀರು ಬೇಕಾ ಎಂದು ಸನ್ನೆ ಮಾಡಿದಳು. ತನ್ನ ನೆನಪಿನ ಲೋಕದಿಂದ ಹೊರಬರಲು ಮನಸ್ಸಿಲ್ಲದ ಆಕೆ ಬೇಡವೆಂದು ತಲೆಯಾಡಿಸಿ ಮುಂದುವರಿದಳು. ಪಕ್ಕದ್ದಲ್ಲಿದ್ದ ಲೇಡಿ ಕಾಂಸ್ಟೇಬಲ್ , “ನಿನ್ನ ಗಂಡ ಏನ್ ಮಾಡುತ್ತಿದ್ದ” ಎಂದು ಗದರಿಸುತ್ತಾ ಮಧ್ಯ ಬಾಯಿ ಹಾಕಿದಾಗಲೂ . ಪಟವರ್ಧನ್ ಸರ್, ” ಸ್ವಲ್ಪ ತಾಳ್ಮೆ ಇರಲಿ, ಆಕೆ ಹೇಳ್ತಿದ್ದಾಳಲ್ಲ ” ಎಂದು ಖಡಕ್ ಆಗಿಯೇ ಹೇಳಿದರು. “ಇದು ಬೇಕಿತ್ತಾ ?’ ಎನ್ನುವಂತೆ ಬೆಕ್ಕಿನಂತೆ ಮುಖ ಸಪ್ಪಗೆ ಮಾಡಿ ಕುಳಿತಳು. ಶರೂ, “ಸಾಹೇಬ್, ನನ್ನ ಕಿಶೋರ್ “ಅಶ್ವಬಲ” ಕೇಬಲಲ್ಲಿ ಕೆಲಸ ಮಾಡುತ್ತಿದ್ದ. ಟಿ.ವಿ. ಕೇಬಲ್ ಜೋಡಿಸುವುದು , ಹಣ ವಸೂಲಿ, ಮತ್ತೆ ಗಿರಾಕಿಗಳ ಏನಾದರೂ