ಅಂಕಣ ಬರಹ
ಎಡವಿದವನಿಗೂ ಸಣ್ಣ ಸಹಾನುಭೂತಿ ಸಿಗಲಿ
ಬಹುಶಃ ನಾನವಾಗ ನಾಲ್ಕನೆಯ ತರಗತಿಯಲ್ಲಿದ್ದೆ. ಅಂದು ಭಾನುವಾರ. ಅವತ್ತು ನಾವೆಲ್ಲ ಹೀಗೇ ಆಟ ಆಡುತ್ತಿದ್ದೆವು. ಶಾಲೆಯ ಸುತ್ತಮುತ್ತ ನಾನು, ಶ್ರುತಿ, ಸ್ವಪ್ನ ಮತ್ತೆ ಇನ್ನೂ ಒಂದಿಷ್ಟು ಗೆಳತಿಯರು, ಆಡಿ ಆಡಿ ಸುಸ್ತಾದೆವು. ಕೊನೆಗೆ ನೀರು ಕುಡಿಯಬೇಕೆನಿಸಿತು ಎಲ್ಲರಿಗೂ. ಅಲ್ಲಿಯೇ ಇದ್ದ ಬೋರನ್ನು ಹೊಡೆಯತೊಡಗಿದೆವು. ನೀರು ಬಂತು. ಒಬ್ಬೊಬ್ಬರೇ ನೀರು ಹೊಡೆಯುವುದು, ಉಳಿದೆಲ್ಲರು ಸರತಿಯಲ್ಲಿ ಮುಖತೊಳೆದು ನೀರುಕುಡಿಯುವುದು ಮಾಡುತ್ತಿರುವಾಗ, ನಾನೊಂದಿಷ್ಟು ಬೋರು ಹೊಡೆಯುವ ಉಳಿದವರು ಕುಡಿಯಲಿ ಎಂದು ಹಿಂದೆ ಬಂದೆ. ಆದರೆ ಅಚಾನಕ್ ಬೋರಿನ ಸಂದಿಯಲ್ಲಿ ಶ್ರುತಿ ಕಿರುಬೆರಳು ಇಟ್ಟಿದ್ದು ಗೊತ್ತೇ ಆಗಿರಲಿಲ್ಲ. ನಾನು ಹೊಡೆದ ಮೊದಲ ಹೊಡೆತಕ್ಕೇ ಅವಳು ಪ್ರಾಣ ಹೋಗುವಂತೆ ಚೀರಿಬಿಟ್ಟಿದ್ದಳು. ನನಗಾದ ಗಾಬರಿಯೂ ವರ್ಣಿಸಲಸದಳ. ಅವಳ ಕೈಯಿಂದ ಧಾರಾಕಾರ ರಕ್ತ ಸುರಿಯತೊಡಗಿತ್ತು. ಅಲ್ಲೇ ಇದ್ದ ಅಕ್ಕಪಕ್ಕದ ಮನೆಯವರು ಅರಶಿನ ತಂದು ಗಾಯಕ್ಕೆ ಒತ್ತಿ ಬಟ್ಟೆ ಕಟ್ಟಿದರು. ಅವಳನ್ನು ಸಮಾಧಾನಿಸುತ್ತಿದ್ದರು. ಉಳಿದ ಗೆಳತಿಯರೆಲ್ಲರೂ ಅವಳ ಆಜೂ ಬಾಜೂ ನಿಂತು ಅವಳನ್ನು ಸಮಾಧಾನಿಸತೊಡಗಿದರು. ಅವಳ ಅಳು ತಹಬದಿಗೆ ಬರತೊಡಗಿತ್ತು. ಯಾರೊಬ್ಬರೂ ನನ್ನನ್ನು ಅತಿಯಾಗಿ ಬೈದದ್ದು ನೆನಪಿಲ್ಲ. ಆದರೆ ಅವರೆಲ್ಲರ ದೃಷ್ಟಿ ಮಾತ್ರ ನನ್ನನ್ನು ತಪ್ಪಿತಸ್ಥಳೆಂದು ನೋಡುತ್ತಿದ್ದವು. ಅದು ಮಾತ್ರ ಚಂದ ನೆನಪಿದೆ. ಶ್ರುತಿ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಅವಳಿಗೆ ಬಹಳ ನೋವಾಗಿತ್ತು. ಆ ಕ್ಷಣ ಭೂಮಿ ಬಾಯಿಬಿಡಬಾರದಾ ಅಂತನಿಸಿದ್ದು ಸುಳ್ಳಲ್ಲ ನನಗೆ. ಅವಳ ಅಪ್ಪ ಅಮ್ಮ ನನಗೆ ಬಯ್ಯುತ್ತಾರಾ? ನನ್ನ ಅಪ್ಪ ಅಮ್ಮನಿಗೆ ನಾ ಹೀಗೆ ಮಾಡಿದೆ ಅಂತ ಗೊತ್ತಾದರೆ ಖಂಡಿತಾ ಹೊಡೆಯುತ್ತಾರೆ, ಈಗ ಏನು ಮಾಡಲಿ? ಮತ್ತೆ ನನ್ನೊಂದಿಗೆ ಅವಳು ಆಟಕ್ಕೆ ಬರುವುದಿಲ್ಲವಾ? ಇಲ್ಲಿಗೆ ಎಲ್ಲ ಮುಗಿಯಿತಾ? ಅದೆಂಥ ಆತಂಕ, ಭಯ, ಹಿಂಸೆ ಆಗತೊಡಗಿತೆಂದರೆ, ನನ್ನೊಂದಿಗೆ ಧೈರ್ಯಹೇಳಲಿಕ್ಕೆ ಯಾರೂ ಇರಲಿಲ್ಲ. ಏನು ಮಾಡಲಿ, ಎತ್ತ ಹೋಗಲಿ, ಮನೆಗೆ ಹೋಗಲಾ, ಬೇಡವಾ… ಹೋಗದೆ ಆದರೂ ಎಲ್ಲಿ ಹೋಗಲಿ… ಕಾಡತೊಡಗಿತು. ಅವತ್ತು ಅದೆಷ್ಟು ಸಂಕಟವಾಗಿತ್ತು ನನಗೆ. ಬಹಳ ಅತ್ತಿದ್ದೆ. ಅಷ್ಟೊಂದು ರಕ್ತವನ್ನ ಅದೇ ಮೊದಲು ನಾನು ನೋಡಿದ್ದದ್ದು. ವಿಪರೀತ ಭಯವಾಗಿಬಿಟ್ಟಿತ್ತು. ಶ್ರುತಿ ಅಳುತ್ತಿದ್ದರೆ, ಅವಳನ್ನು ತಬ್ಬಿ ಸಂತೈಸಬೇಕು ಅನಿಸುತ್ತಿತ್ತು. ಆದರೆ ಸುತ್ತಲಿದ್ದ ಯಾರೂ ಅದಕ್ಕೆ ಅವಕಾಶ ಕೊಡದಂತೆ ಅವಳನ್ನು ತಮ್ಮ ಕರುಣೆಯ ಅರಿವೆಯಲ್ಲಿ ಸುತ್ತಿಟ್ಟುಬಿಟ್ಟಿದ್ದರು. ನನ್ನ ಅಳು ಯಾರಿಗೂ ಕಾಣಲಿಲ್ಲ. ಅವತ್ತೆಲ್ಲ ಬಹಳ ಹೊತ್ತು ಹೊರಗೇ ಎಲ್ಲೆಲ್ಲೋ ಅಲೆದು ಮನೆಗೆ ಬಂದೆ. ನಾನು ಎಣಿಸಿದಷ್ಟು ಘೋರವಾದದ್ದು ಏನೂ ನಡೆಯಲಿಲ್ಲ. ಆದರೆ ಆ ಘಟನೆಯ ನಂತರ ಶ್ರುತಿ ಮತ್ತೆ ನಾನು ಮತ್ತೆ ಆಟ ಆಡಲಿಲ್ಲ. ಬಹುಶಃ ನನ್ನೊಂದಿಗೆ ಆಟವಾಡಲಿಕ್ಕೆ ಭಯವಾಯಿತಾ ಅವಳಿಗೆ, ಅಥವಾ ಅವಳ ಅಪ್ಪ ಅಮ್ಮನಿಗೆ ಬೇಸರವಾಗಿತ್ತಾ, ಅಥವಾ ಬೇರೆ ಏನಾದರೂ ಆಯಿತಾ… ಏನೇನೋ ತಳಮಳಗಳು… ಅವರ ಕಣ್ಣೋಟಗಳು ವಿಚಿತ್ರವಾಗಿರುತ್ತಿದ್ದವು. ಅವುಗಳ ಅರ್ಥ ತಿಳಿಯುವಷ್ಟು ದೊಡ್ಡವಳಿರಲಿಲ್ಲ ನಾನು… ಆದರೆ ಶ್ರುತಿಯ ಬಗ್ಗೆ ನೆನೆದಾಗಲೆಲ್ಲ ಪಾಪ ಎನಿಸುತತಿತ್ತು. ಅವಳಿಗೆ ನಿಜಕ್ಕೂ ಬಹಳ ನೋವಾಗಿತ್ತು. ಅವಳ ಅಪ್ಪ ಅಮ್ಮನಿಗೂ ಬೇಸರವಾಗಿದ್ದಿರಬಹುದು… ಅದು ತಪ್ಪೂ ಅಲ್ಲ…
ಆದರೆ ಬಹಳ ವರ್ಷಗಳ ನಂತರ ನಾನೀಗ ಶಿಕ್ಷಕಿ… ನನ್ನದೇ ಶಾಲೆಯಲ್ಲಿ ಇಂತಹ ಅದೆಷ್ಟೋ ಘಟನೆಗಳಿಗೆ ನಾನು ಪ್ರತಿನಿತ್ಯ ಸಾಕ್ಷಿಯಾಗುತ್ತಿರುತ್ತೇನೆ. ಆದರೆ ಇಂತಹ ಆಕಸ್ಮಿಕ ಪ್ರಕರಣಗಳಲ್ಲಿ ಸಹಾನುಭೂತಿ ಎನ್ನುವುದು ಅವಘಡಕ್ಕೆ ಗುರಿಯಾದವರಿಗೆ ಸಿಗುವಷ್ಟು ಸುಲಭವಾಗಿ ಅದನ್ನು ಮಾಡಿದವರಿಗೆ ಸಿಗುವುದಿಲ್ಲ. ಅವರ ಅರಿವನ್ನು ಮೀರಿ ನಡೆದ ಘಟನೆಯೊಂದು ಅವರನ್ನು ಅದೆಷ್ಟು ನೋಯುವಂತೆ, ಅವಮಾನ ಪಡುವಂತೆ ಮಾಡಿಬಿಡುತ್ತದೆಂದರೆ ಅದು ಅಳತೆಗೂ ಮೀರಿದ್ದು. ನಾನೀಗ ಶಿಕ್ಷಕಿಯಾಗಿ ಬಹಳಷ್ಟು ಸರ್ತಿ ಇಂತಹ ಘಟನೆಗಳು ನಡೆದಾಗ ಇಬ್ಬರ ಪರವಾಗಿಯೂ ನಿಲುವು ತೆಗೆದುಕೊಳ್ಳುತ್ತೇನೆ. ಗುರಿಯಾದವರಿಗೆ ಸಹಾನುಭೂತಿ ತೋರಿಸುವ ಹೊತ್ತಿನಲ್ಲೇ ಮಾಡಿದವರು ದುರುದ್ದೇಶದಿಂದಾಗಲೀ, ಉದ್ದೇಶ ಪೂರ್ವಕವಾಗಿಯೋ ಅಥವಾ ಕೆಟ್ಟ ಉದ್ದೇಶದಿಂದಲೋ ಖಂಡಿತ ಮಾಡಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಇಬ್ಬರಲ್ಲೂ ಒಂದು ಸ್ನೇಹ ಹಾಗೇ ಉಳಿದಿರುವಂತೆ ನೋಡಿಕೊಳ್ಳುತ್ತಿರುತ್ತೇನೆ. ಮತ್ತೆ ಮಾಡಿದವರಿಗೆ ಅದರ ಬಗ್ಗೆ ತಿಳುವಳಿಕೆ ಹೇಳಿ ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಲು ತಿಳಿಸಿಕೊಡುತ್ತಿರುತ್ತೇನೆ.
ಒಮ್ಮೆ ಹೀಗಾಯಿತು. ಊಟದ ವೇಳೆಯಲ್ಲಿ ಮೂರನೇ ತರಗತಿಯ ಹುಡುಗನೊಬ್ಬ ತರಗತಿಯ ಕೋಣೆಗೆ ಜೋರಾಗಿ ನುಗ್ಗುವಾಗ, ತನ್ನ ಸಹಪಾಟಿಯ ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ. ಆ ಹೊಡೆತಕ್ಕೆ ಇವನ ಮುಖ ಬೆಂಚಿಗೆ ತಗುಲಿ, ಮೂಗಲ್ಲಿ ರಕ್ತ ಸೋರತೊಡಗಿದೆ. ಅಂದು ಜೋರಾಗಿ ನುಗ್ಗಿದವನಿಗೆ ಹಾಗೆ ಒಳ ನುಗ್ಗಿದ್ದಕ್ಕಾಗಿ ಬೈದೆವಾದರೂ ನೋವಾದವನಿಗೆ, ಅವನು ಬೇಕಂತ ಮಾಡಿಲ್ಲ, ಮತ್ತೆ ಅವ ನಿನ್ನ ಸಹಪಾಠಿ ಮತ್ತು ಗೆಳೆಯ ತಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು ಮತ್ತೆ ಅವನಿಗೆ ಸೂಕ್ತ ಚಿಕಿತ್ಸೆಯನ್ನೂ ಮಾಡಿದೆವು (ಇಂತಹ ನಿತ್ಯದ ಅದೆಷ್ಟೋ ಘಟನೆಗಳಿಗೆ ಶಿಕ್ಷಕರಾದ ನಾವು ಸದಾ ಸಿದ್ಧರಿರಲೇಬೇಕಿರುತ್ತದೆ…). ಆದರೂ ಎಲ್ಲೋ ಒಂದು ಕಡೆ ಅವನ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಬಹುದು, ಬೀಳಿಸಿದ ಮಗುವಿಗೂ ಏನಾದರೂ ಬೈಯ್ಯಬಹುದು… ಅಂತೆಲ್ಲ ಭಯ ನಾವೆಲ್ಲ ಶಿಕ್ಷಕರಿಗೂ ಇತ್ತು. ಆದರೆ ಹಾಗಾಗಲಿಲ್ಲ. ಮರು ದಿನ ಅವ ಶಾಲೆಗೆ ಬಂದ. ಮೂಗಿನ ಗಾಯ ದೊಡ್ಡದಾಗಿ ಕಾಣುತ್ತಿತ್ತು. ಆದರೆ ಅವ ತನ್ನ ತಂದೆ ತಾಯಿಯರಿಗೆ ತಾನೇ ಹೇಗೋ ಶಾಲೆಯಲ್ಲಿ ಬಿದ್ದೆ ಎಂದು ಹೇಳಿದ್ದನಂತೆ. ಮತ್ತೆ ಮರುದಿನದಿಂದ ಅವರಿಬ್ಬರೂ ಏನೂ ಆಗಿಲ್ಲದಂತೆ ಪಕ್ಕ ಪಕ್ಕವೇ ಕೂತು ಆಡಿಕೊಂಡು, ಓದಿಕೊಳ್ಳತೊಡಗಿದರು…
ಹೀಗೆ ಇಂತಹ ಘಟನೆಗಳಲ್ಲಿ ಎಲ್ಲ ಸುಖ ಅನ್ನಿಸಿದಾಗ ಸದಾ ನನ್ನ ಬಾಲ್ಯದ ಆ ಘಟನೆ ನೆನಪಾಗಿ, ಸಧ್ಯ ಈ ಮಕ್ಕಳಿಗೆ ಹಾಗಾಗಲಿಲ್ಲವಲ್ಲ ಅನಿಸಿ ಮನಸು ಹಗುರವಾಗುತ್ತದೆ…
*************************************************
–ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ತುಂಬಾ ಒಳ್ಳೆಯ ಅಬ್ಸರ್ವೇಷನ್ ನಿಮ್ಮದು ಮೇಡಂ.ಸೂಕ್ಷವಾಗಿ ಗಮನಿಸಿ ಎಲ್ಲವನ್ನೂ ,ಎಲ್ಲರನ್ನೂ ಸಮಾನವಾಗಿ ,ಸಮಾಧಾನವಾಗಿ ನೋಡಿಕೊಳ್ಳಲು ಎರಡೆರಡು ಹ್ರದಯ ಬೇಕು.
ನಾವೊಮ್ಮೆ ಕಾರಿನಲ್ಲಿ ಗೋವಾಗೆ ಹೋಗಬೇಕಾದರೆ ಮಧ್ಯದಲ್ಲಿ ಆಕ್ಸಿಡೆಂಟ್ ಆಯ್ತು.ನಾವೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದೆವು.ಕಾರಿಗೆ ಏಟಾಗಿತ್ತು.ಡ್ರೈವರ್ ತುಂಬಾ ಹೆದರಿ ನಿಂತಿದ್ದರು.ನಾನೂ ಮತ್ತು ಗಂಡ ಇಬ್ಬರೂ ಹೋಗಿ ಅವರನ್ನು ಸಮಾಧಾನ ಮಾಡಿ ಧೈರ್ಯ ತುಂಬಿದ್ದೆವು.