ಧಾರಾವಾಹಿ ಸಂಗಾತಿ-41 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮಕ್ಕಳಿಗೆ ಜನುಮವಿತ್ತು ಮಾತೆ ಎನಿಸಿಕೊಂಡಳು ಸೀತೆ ಲಕ್ಷ್ಮಣನ ಶಿರವದು ಕಣ್ಣಿಂದ ಮರೆಯಾದ ಒಡನೆಯೇ ಬಾಯಾರಿಕೆಯಿಂದ ಕಂಗೆಟ್ಟು ಬಳಲಿದಳು ಸೀತೆ. ಭಯ ಶೋಕಗಳು ಅವಳನ್ನು ಆವರಿಸಿದವು. ಬುಡದಿಂದಲೇ ಕೊಲ್ಲಲ್ಪಟ್ಟ ಬಳ್ಳಿಯಂತೆ ಭೂಮಿಯ ಮೇಲೊರಗಿದಳು ಭೂಮಿಯ ಮಗಳು.ರಾಮಕರುಣೆಗೆ ಈಡಾಗದ ಅವಳ ಮೇಲೆ ಕಾರುಣ್ಯ ಕಣ್ಣೋಟ ಹರಿಸಿದ್ದು ಅಲ್ಲಿದ್ದ ಪಕ್ಷಿ ಪ್ರಾಣಿಗಳು. ಸೀತಾಮಾತೆಯ ಸೋತ ಪರಿಯನ್ನು ಕಂಡ ಮೃಗ- ಖಗಗಳು ಅವಳ ಬಳಿಬಂದವು. ತಮ್ಮ ತಮ್ಮ ವೈರತ್ವವನ್ನೇ ಮರೆತವು. ಆಹಾರ ಬೇಕೆನಿಸಲಿಲ್ಲ ಅವುಗಳಿಗೆ ಆ ಸಮಯಕ್ಕೆ. ಅಲ್ಲಿದ್ದ ಗಿಡ- ಮರ- ಬಳ್ಳಿ- ಕಲ್ಲುಗಳಲ್ಲಿಯೂ ಶೋಕಭಾವ ಮೂಡಿತು. ಒಳ್ಳೆಯ ಗುಣದವಳ ಅಳಿವನ್ನು, ಅಳುವನ್ನು ಸಹಿಸದಾಯಿತು ಅಲ್ಲಿಯ ಪರಿಸರ.ದುಂಬಿಗಳ ನಾದವದು ನಿಂತೇಹೋಯಿತು. ನವಿಲುಗಳ ಕುಣಿತದ ಉತ್ಸಾಹ ಇನ್ನಿಲ್ಲವಾಯಿತು. ಚಕ್ರವಾಕ ಪಕ್ಷಿಗಳಿಗೆ ಬೆರೆಯುವ ಮನಸ್ಸಿಲ್ಲ. ಹಂಸಗಳಿಗೆ ನಡೆಯುವುದರೆಡೆಗೆ ಗಮನವಿಲ್ಲ. ಮೌನವಾದವು ಗಿಳಿಗಳು. ಮೌನಿಗಳಾದವು ಕೋಗಿಲೆಗಳು. ಜಿಂಕೆ. ಆನೆ, ಸಿಂಹ ಇವೆಲ್ಲವೂ ಸೀತೆಯ ಶೋಕಕ್ಕೆ ಸ್ಪಂದಿಸಿದವು, ತಂತಮ್ಮ ರೀತಿಯಲ್ಲಿ.ಪರಿತಾಪದಲ್ಲಿದ್ದ ಸೀತೆಯ ಹೃದಯತಾಪವದು ಅಳಿದುಹೋಗುವಂತೆ ಚಾಮರವ ಬೀಸಿದವು ಚಮರೀ ಮೃಗಗಳು. ಸೀತೆಯ ಕಣ್ಣೀರು ಇನ್ನಿಲ್ಲವಾಗುವಂತೆ ನೀರ ಹನಿಗಳನ್ನು ಚಿಮುಕಿಸಿದವು ನೀರ ಹಕ್ಕಿಗಳು.ಗಂಗಾನದಿಯ ಅಲೆಯ ಮಧ್ಯೆ ಸಿಲುಕಿ ಹೊರಬರದಂತಾಗಿದ್ದರೂ, ಗಂಗೆಯೊಡಲಲ್ಲಿದ್ದ ಕಮಲ ಸುವಾಸನೆಯನ್ನು ಪೂರ್ಣ ಹೊತ್ತು ತರಲಾಗದಿದ್ದರೂ ಸೀತೆಗೆ ಸುಖವನ್ನು ನೀಡಲೇಬೇಕೆಂದು ಬಯಸಿದ ತಂಗಾಳಿಯದು ಗಂಗೆಯ ನೀರಿನ ತಂಪನ್ನು ಹೊಂದಿದ, ಗಂಗೆಯ ಪದುಮ ಗಂಧದಿAದ ಕೂಡಿದ ಗಂಗಾಳಿಯಾಗಿ ಬಂದು ತಲುಪಿತು ಸೀತಾಮಾತೆಯ ಮುಖವನ್ನು, ಮೃದು ಮಧುರ ಭಾವದಲ್ಲಿ ಸ್ಪರುಷಿಸಿ.ಚೇತರಿಸಿಕೊಂಡಳು ಸೀತೆ. ತನಗಿನ್ನು ದಾರಿಯೇನಿದೆ ಎಂದು ಅತ್ತಿತ್ತ ನೋಡಿದಳು. ಶಿಥಿಲವಾಗಿತ್ತು ಅವಳ ಅಂಗಾAಗಗಳು. ಶರೀರವೆಲ್ಲಾ ಧೂಳು ಹಿಡಿದಿತ್ತು. ಮುಡಿ ಬಿಚ್ಚಿಹೋಗಿತ್ತು. ಅದಾವುದೂ ಗಣನೆಗೆ ಬರಲಿಲ್ಲ ಅವಳಿಗೆ ಆ ಕ್ಷಣದಲ್ಲಿ. ಮಿಥಿಲೇಂದ್ರ ವಂಶದಲ್ಲಿ ಜನಿಸಿದ ತಾನು ದಶರಥನ ಸೊಸೆ ಎನಿಸಿಕೊಂಡಿದ್ದರೂ ಈ ಬಗೆಯಲ್ಲಿ ಕಾಡಿನಲ್ಲಿ ದಿಕ್ಕೆಟ್ಟು ಅಲೆಯುವಂತಾಯಿತಲ್ಲಾ! ಎಂದು ರೋಧಿಸಿದಳು, ಕಲ್ಲಿನ ಎದೆಯದು ಕರಗುವಂತೆ.ಈ ಕ್ಷಣವೇ ತೊರೆದುಬಿಡುತ್ತೇನೆ ಈ ಪ್ರಾಣವನ್ನು ಎಂಬ ಯೋಚನೆ ಬಂತು ಅವಳಲ್ಲಿ. ಮರುಕ್ಷಣವೇ, ಭ್ರೂಣಹತ್ಯಾದೋಷಕ್ಕೆ ಗುರಿಯಾಗುವ ಅಳುಕು ಅವಳನ್ನು ಕಾಡಿತು. ಹೀಗೆ ಬಗೆಬಗೆಯಲ್ಲಿ ಪ್ರಲಾಪಿಸುತ್ತಾ ಕಾಡಿನಲ್ಲಿ ಅಲೆದಾಡುತ್ತಿದ್ದಳು ಪೃಥ್ವಿತನುಜೆ.ಆ ಸಮಯದಲ್ಲಿಯೇ ಯಜ್ಞಕ್ಕೆ ಬೇಕಾದ ಸ್ತಂಭವನ್ನು ಅರಸುತ್ತಾ ಆ ವನಕ್ಕೆ ಬಂದವರು ರಾಮಧ್ಯಾನದಲ್ಲಿ ಚಿತ್ತವನ್ನು ಹುತ್ತಗಟ್ಟಿಸಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳು. ಸೀತೆಯ ರೋಧನವದು ಅವರ ಕರ್ಣವನ್ನು ಕೆಣಕಿತು. ಹೆಂಗಳೆಯ ಅಳು ಕೇಳಿ ತಲ್ಲಣಿಸಿದರು ಮುನಿವರ್ಯ. ಮೊರೆತದ ಸ್ವರವನ್ನನುಕರಿಸಿ ಚಲಿಸಿದ ಅವರಿಗೆ ಕಾಣಿಸಿದಳು ಸೀತೆ. ‘ಯಾರಿವಳು? ಏಕಿದ್ದಾಳೆ ಈ ಅರಣ್ಯದಲ್ಲಿ ಒಂಟಿಯಾಗಿ?’ ಎಂಬ ಕೌತುಕ ಮೂಡಿತು ಅವರಲ್ಲಿ.ಮಾತನಾಡಿಸಿದರು. ತಾನು ವಾಲ್ಮೀಕಿ ಎನ್ನುವುದನ್ನು ಹೇಳಿಕೊಂಡರು. ಶೋಕಭಾವವನ್ನು ಮೀರಿದ ಹರುಷ ಭಾವ ಮೂಡಿತು ಸೀತೆಯಲ್ಲಿ. ನಡೆದದ್ದೆಲ್ಲವನ್ನೂ ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಳು ಬುವಿಸುತೆ. ಒಳಗಣ್ಣು ತೆರೆದು ಸೀತೆಯ ಗರ್ಭಸ್ಥಳವನ್ನು ವೀಕ್ಷಿಸಿದ ಮುನಿಗಳಿಗೆ ಅವಳು ಅವಳಿ ಮಕ್ಕಳ ಮಾತೆಯಾಗುವಳೆನ್ನುವುದು ತಿಳಿದುಬಂತು. ಅದನ್ನೇ ಹೇಳಿದರು ಅವಳಲ್ಲಿ. ತನ್ನ ಆಶ್ರಮಕ್ಕೆ ಬರುವಂತೆ ಸೂಚಿಸಿದರು. ಗರ್ಭಿಣಿಯ ಬಯಕೆಗಳೆಲ್ಲವನ್ನೂ ಪೂರೈಸುವ ಹೊಣೆ ತನ್ನದೆಂದರು. ಅವರ ದೃಢವಾದ ನುಡಿಗಡಲು ಸೀತೆಯ ಶೋಕವನ್ನು ಮುಳುಗಿಸಿತು. ಧೈರ್ಯಸ್ಥೆಯಾದಳು ಸೀತೆ. ಅವರೊಡನೆ ನಡೆದಳು ಆಶ್ರಮದೆಡೆಗೆ, ಶ್ರಮವಿಲ್ಲದೆ.ಎಲೆಗಳಿಂದ ಮಾಡಲಾದ ಕುಟೀರ. ಋಷಿಪತ್ನಿಯರ ಉಪಚಾರ. ಋತುಗಳ ಭೇದವೆಣಿಸದೆಯೇ ಬೆಳೆಯುವ ಗಿಡ ಮರಗಳು. ವೈರತ್ವ ಭಾವವನ್ನು ಮರೆತು ಬೆರೆಯುವ ಖಗ- ಮೃಗಗಳು. ಸೊಗಸೆನಿಸಿತು ಸೀತೆಗೆ ಆಶ್ರಮದ ಅ-ಶ್ರಮ ಬದುಕು.ಮುನಿಸತಿಯರ ಸಹವಾಸದಲ್ಲಿಯೇ ಸೀತೆಯ ಬಸುರಿಗೆ ನವಮಾಸ ತುಂಬಿತು. ಗರ್ಭದಲ್ಲಿರುವ ಶಿಶುಗಳನ್ನು ಭೂಮಿಗೆ ಇಳಿತರುವ ಕ್ಷಣವನ್ನು ನಿರುಕಿಸುತ್ತಿದ್ದಳು ಸೀತೆ.ಒಂದಿರುಳು ಅವಳ ತವಕವದು ಸಾಕಾರವಾಯಿತು. ಅವಳಿ ಶಿಶುಗಳು ಬಂದರು ಭೂಮಿಗೆ, ಭೂಸುತೆಯ ಗರ್ಭದಿಂದೀಚೆಗೆ. ಆಶ್ರಮದ ಪ್ರೌಢ ಸ್ತಿçÃಯರು ಅವಳ ಆರೈಕೆ ಮಾಡಿದರು. ಮುನಿವಟುಗಳು ತವಕದಿಂದ ಸುದ್ದಿಯನ್ನು ತಲುಪಿಸಿದರು ವಾಲ್ಮೀಕಿ ಮಹರ್ಷಿಗಳಿಗೆ.ಸಾನಂದದಿAದ ಬಂದು ಕಂದAಗಳ ಮೊಗಗಳನ್ನು ಕಂಡ ಮುನಿಗಳು ದರ್ಭೆಯ ಚೂರಿನಿಂದ ನೀರನ್ನು ಪ್ರೋಕ್ಷಿಸಿ, ದರ್ಭೆಯ ಚೂರನ್ನೇ ಸೂಚಿಸುವ ಕುಶ ಲವ ಎಂಬ ಹೆಸರುಗಳನಿಟ್ಟರು ಅವಳಿ ಮಕ್ಕಳಿಗೆ.ಚೆಲುವು ಎರಡು ರೂಪವನ್ನು ಪಡೆಯಿತೋ! ಶುಭ್ರತೆ ಎರಡು ಕವಲಾಗಿ ಒಡೆಯಿತೋ! ಗೆಲುವು ಗೆಳೆತನವನ್ನು ಗಳಿಸಿತೋ! ಕೀರ್ತಿ ಅಮೃತ ಧಾರೆಯಲ್ಲಿ ಹರಡಿ ಎರಡಾಯ್ತೋ! ಎಂಬAತೆ ಆ ಎಳೆಯ ಶಿಶುಗಳು ತೋರಿದರು ಆಶ್ರಮವಾಸಿಗಳ ಕಣ್ಣಿಗೆ.ಬೆಳೆಯತೊಡಗಿದರು ಕುಶಲವ ಇಬ್ಬರೂ, ಋಷಿಮುನಿಗಳ ಪ್ರೀತಿಯೊಲವನ್ನು ಪಡೆಪಡೆದು. ಕಾಲಕಾಲಕ್ಕೆ ಆಗಬೇಕಾದ ಸಂಸ್ಕಾರಗಳನ್ನೆಲ್ಲವನ್ನೂ ಕೊಡಿಸಿದರು ವಾಲ್ಮೀಕಿ ಮುನಿ ಅವರಿಗೆ. ಹನ್ನೆರಡು ವರುಷಗಳಾದಾಗ ಉಪನಯನ ಶಾಸ್ತç ಮಾಡಿಸಿದರು. ಶಸ್ತಾçಭ್ಯಾಸ ಮತ್ತು ಶಾಸ್ತಾçಭ್ಯಾಸ ಎರಡೂ ನಡೆದವು ಏಕಕಾಲಕ್ಕೆ. ರಾಮನೇ ತಮ್ಮ ತಂದೆಯೆAದು ಅರಿಯದ ಆ ಮಕ್ಕಳು ರಾಮಾಯಣವನ್ನು ಅನುದಿನವೂ ಹಾಡುತ್ತಿದ್ದರು ಭಕ್ತಿಭಾವದಿಂದ. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-132 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹಾಸನ ಜಿಲಾಸ್ಪತ್ರೆಗೆ ಸುಮತಿ ಬೆಂಗಳೂರಿನಿಂದ ಹೊರಟ ಸುಮತಿ ಮತ್ತು ಮಗಳು ಹಾಗೂ ಹಿರಿಯ ಅಳಿಯ ಸಕಲೇಶಪುರವನ್ನು ತಲುಪಿದರು. ಮೂವರೂ ಆಶ್ರಮ ತಲುಪಿದರು. ತನ್ನ ಕೋಣೆಯೊಳಗೆ ಆಯಾಸಗೊಂಡಿದ್ದ ಅಮ್ಮನನ್ನು ಮಲಗಿಸಿ, ಬಾವನಿಗೆ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ತಿಳಿಸಿ….. “ನೀವು ಮನೆಗೆ ಹೋಗಿ ಬಾವ…. ಅಕ್ಕ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮನೆಯಲ್ಲಿದ್ದಾರೆ…. ಮಕ್ಕಳು ನಿಮ್ಮನ್ನು ಬಿಟ್ಟು ಇರುವುದಿಲ್ಲ….. ಅಮ್ಮನನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾನು ದಾಖಲು ಮಾಡುತ್ತೇನೆ”…. ಎಂದಳು. ನಾದಿನಿಯ ಜವಾಬ್ದಾರಿಯುತ ನಡೆಯ ಸಾಮರ್ಥ್ಯವನ್ನು ಅರಿತಿದ್ದ ಬಾವ…. ಹಾಗೆಯೇ ಆಗಲಿ…. ಆದರೆ ಇನ್ನೇನಾದರೂ ಸಹಾಯ ಬೇಕಿದ್ದರೆ ತಡ ಮಾಡದೇ ತಪ್ಪದೇ ನನಗೆ ತಿಳಿಸು…. ನಾನು ಖಂಡಿತ ಬರುತ್ತೇನೆ”…. ಎಂದು ನಾದಿನಿಗೆ ಹೇಳಿ, ಆಯಾಸದಿಂದ ಮಲಗಿದ್ದ ಅತ್ತೆಯ ಬಳಿಗೆ ಹೋಗಿ…. “ಅತ್ತೇ…. ನಿಮ್ಮ ಮಗಳು ಒಬ್ಬಳೇ ಇಬ್ಬರು ಪುಟ್ಟ ಮಕ್ಕಳನ್ನು ಸಂಭಾಳಿಸುತ್ತಾ ಮನೆಯಲ್ಲಿದ್ದಾಳೆ…. ಅದೂ ಅಲ್ಲದೇ ನಾನು ಕೆಲಸಕ್ಕೆ ಕೂಡ ಹೋಗಬೇಕಾಗಿದೆ…. ನಾದಿನಿ ನಿಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ನಾನು ಮತ್ತು ನಿಮ್ಮ ಮಗಳು ಆಗಾಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ….. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಿ ಕೊರಗಬೇಡಿ…. ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮೊಮ್ಮಕ್ಕಳ ಜೊತೆ ಕಾಲ ಕಳೆಯುವಿರಂತೆ…. ನಾನಿನ್ನು ಹೊರಡಲೇ?”…ಎಂದು ಹೇಳುತ್ತಾ ಅತ್ತೆಯ ಅನುಮತಿಗಾಗಿ ಅಲ್ಲಿಯೇ ನಿಂತನು. ಅಳಿಯನ ಮಾತುಗಳನ್ನು ಆಲಿಸಿದ ಸುಮತಿ….”ಹೌದು ಅಳಿಯಂದಿರೇ…. ನೀವೀಗ ಮನೆಗೆ ಹೋಗಲೇಬೇಕು…. ನನ್ನ ಮುದ್ದು ಮೊಮ್ಮಕ್ಕಳು ನಿಮಗಾಗಿ ಕಾಯುತ್ತಿರುತ್ತಾರೆ…. ನೀವು ಕೆಲಸಕ್ಕೂ ಹೋಗಬೇಕಿದೆ….. ಇಲ್ಲಿ ಮಗಳು ಇದ್ದಾಳಲ್ಲವೇ ಅವಳು ಎಲ್ಲವನ್ನೂ ನೋಡಿಕೊಳ್ಳುತ್ತಾಳೆ….. ನೀವು ನಿಶ್ಚಿಂತರಾಗಿರಿ…. ನನ್ನ ಮೊಮ್ಮಕ್ಕಳನ್ನು ನೋಡುವ ಬಯಕೆಯಾಗಿದೆ ನೀವು ಬರುವಾಗ ಅವರನ್ನು ಕರೆದುಕೊಂಡು ಬನ್ನಿ”…. ಎಂದು ಹೇಳಿ ಸುಮತಿ ಅಳಿಯನನ್ನು ಬೀಳ್ಕೊಟ್ಟಳು. ಅನಾರೋಗ್ಯದ ತೀವ್ರತೆಯ ಕಾರಣ ಸುಮತಿಗೆ ಕಣ್ಣುಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ. ಯಾರ ಮುಖವೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಬರಿಯ ಆಕೃತಿ ಮಾತ್ರ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಧ್ವನಿಯಿಂದ ಎಲ್ಲರನ್ನೂ ಗುರುತು ಹಿಡಿಯುತ್ತಿದ್ದಳು. ಸುಮತಿಯ ಎರಡನೇ ಮಗಳಿಗೆ ಆಶ್ರಮದಲ್ಲಿದ್ದ ಗೆಳತಿಯ ಸಹಾಯ ಬಹುದೊಡ್ಡ ಆಧಾರವಾಗಿತ್ತು. ತಡ ಮಾಡದೇ ತಾಯಿಯನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೊರಟಳು. ಆಶ್ರಮದ ಮಕ್ಕಳಿಗೆ ರಜೆ ಇದ್ದ ಕಾರಣ ಎಲ್ಲರೂ ಅವರವರ ಮನೆಗಳಿಗೆ ತರಳಿದ್ದರು. ಹಾಗಾಗಿ ಆಶ್ರಮದಲ್ಲಿದ್ದ ಗೆಳತಿಯು ಸ್ವಲ್ಪ ದಿನದ ಮಟ್ಟಿಗೆ ತಾನು ಮನೆಗೆ ಹೋಗಿ ಬರುತ್ತೇನೆ ಎಂದು ಹೊರಟಳು….”ಆಶ್ರಮದ ಬೀಗದ ಕೀಲಿಯನ್ನು ಸೆಕ್ರೆಟರಿ ಅವರಿಗೆ ಕೊಟ್ಟಿರುತ್ತೇನೆ…. ನೀನು ಆಸ್ಪತ್ರೆಯಿಂದ ಬರುವಾಗ ಅವರಿಂದ ಕೀಲಿಯನ್ನು ಪಡೆದುಕೋ…. ನಿನಗೆ ಪರೀಕ್ಷೆ ಇದೆಯಲ್ಲವೇ?…. ನಿನಗೆ ಏನಾದರೂ ಅಗತ್ಯಗಳು ಇರುತ್ತವೆ”… ಎಂದು ಹೇಳಿ ತನ್ನ ಊರಿನ ಕಡೆಗೆ ಹೊರಟಳು. ಸುಮತಿಯ ಎರಡನೇ ಮಗಳು ತನ್ನ ತಾಯಿಯೊಂದಿಗೆ ಹಾಸನಕ್ಕೆ ಹೊರಡುವ ಮುನ್ನ ಆಶ್ರಮದ ಬಳಿ ಇದ್ದ ಮೆಡಿಕಲ್ ಸ್ಟೋರ್ ಒಂದರ ಟೆಲಿಫೋನ್ ಬೂತಿಗೆ ಹೋಗಿ, ತೋಟದ ಆಫೀಸಿನಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದಳು. ಕರೆಗೆ ಪ್ರತ್ಯುತ್ತರ ನೀಡಿದ್ದು ತೋಟದ ಮ್ಯಾನೇಜರ್ ಆದುದರಿಂದ ಅವರಿಗೆ ಎಲ್ಲ ವಿಷಯವನ್ನು ತಿಳಿಸಿದಳು. ತೋಟದ ಸಾಹುಕಾರಮ್ಮನವರು ವಿದೇಶಕ್ಕೆ ಹೋಗಿರುವುದಾಗಿ ಮ್ಯಾನೇಜರ್ ತಿಳಿಸಿದರು. ಹಾಗಾಗಿ ವಿಷಯವನ್ನೆಲ್ಲ ತನ್ನ ತಂಗಿಗೆ ತಿಳಿಸಲು ವಿನಂತಿಸಿಕೊಂಡಳು. ತಾಯಿಗೆ ಆಯಾಸವಿದ್ದ ಕಾರಣ ನಡೆಯಲು ಆಗುತ್ತಿರಲಿಲ್ಲ. ಹಾಗಾಗಿ ಆಟೋದಲ್ಲಿ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಳು. ಅಲ್ಲಿ ಹಾಸನಕ್ಕೆ ಹೋಗುವ ಬಸ್ ನಿಂತಿತ್ತು. ಮೊದಲು ತಾಯಿಯನ್ನು ಬಸ್ಸಿನಲ್ಲಿ ನಿಧಾನವಾಗಿ ಜಾಗರೂಕತೆಯಿಂದ ಹತ್ತಿಸಿ ಕಿಟಕಿಯ ಬಳಿಯ ಸೀಟಿನಲ್ಲಿ ಕುಳ್ಳಿರಿಸಿ, ತಾನು ಕೆಳಗಿಳಿದು ಬಟ್ಟೆಬರೆ ಇರುವ ಬ್ಯಾಗನ್ನು ಎತ್ತಿಕೊಂಡು ಬಂದು ಮೇಲಿನ ಸ್ಟ್ಯಾಂಡ್ ನಲ್ಲಿ ಇರಿಸಿ ಸುಮತಿಯ ಬಳಿ ಕುಳಿತುಕೊಂಡಳು. ಬಸ್ ಹಾಸನದ ಕಡೆಗೆ ಹೊರಟಿತು. ಹಾಸನ ಬಸ್ ಸ್ಟ್ಯಾಂಡ್ ತಲುಪಿದ ನಂತರ ಅಲ್ಲಿಂದ ಮತ್ತೊಂದು ಆಟೋದಲ್ಲಿ ತಾಯಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಯ ಕಡೆಗೆ ಹೊರಟಳು. ಜಿಲ್ಲಾ ಆಸ್ಪತ್ರೆ ತಲುಪಿದಾಗ ಡಾಕ್ಟರ್ ಬರುವ ಸಮಯವಾಗಿತ್ತು. ನಿಧಾನವಾಗಿ ತಾಯಿಯನ್ನು ಆಟೋದಿಂದ ಇಳಿಸಿ, ಮೆಲ್ಲನೆ ನಡೆಸಿಕೊಂಡು ಹೋಗಿ ಹೊರರೋಗಿಗಳ ವಿಭಾಗದ ಹತ್ತಿರ ಇದ್ದ ಬೆಂಚಿನಲ್ಲಿ ಕುಳ್ಳಿಸಿದಳು. ಸರತಿಯ ಸಾಲಿನಲ್ಲಿ ಹೆಚ್ಚು ಜನರಿರದ ಕಾರಣ ಸ್ವಲ್ಪ ಹೊತ್ತಿನಲ್ಲಿ ಡಾಕ್ಟರನ್ನು ನೋಡುವ ಅವಕಾಶ ದೊರೆಯಿತು. ತಾಯಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿ ಮಗಳು ಮೊದಲು ತಾನು ಒಬ್ಬಳೇ ಡಾಕ್ಟರ್ ಕೊಠಡಿಯನ್ನು ಪ್ರವೇಶಿಸಿದಳು. ಅಲ್ಲಿನ ಡಾಕ್ಟರ್ (ಫಿಜ಼ಷಿಯನ್) ಮೊದಲು ಸಕಲೇಶಪುರದಲ್ಲಿದ್ದವರಾಗಿದ್ದರು. ಅವರು ಆಸ್ಪತ್ರೆಯ ಮೇಲಾಧಿಕಾರಿಯಾಗಿ ಭಡ್ತಿ ಹೊಂದಿ ಇಲ್ಲಿಗೆ ವರ್ಗಾವಣೆಗೊಂಡಿದ್ದರು. ಸುಮತಿಗೆ ಹಲವು ವರ್ಷಗಳಿಂದ ಈ ವೈದ್ಯರೇ ಚಿಕಿತ್ಸೆ ಕೊಡುತ್ತಿದ್ದ ಕಾರಣ ಮಗಳ ಪರಿಚಯವು ಅವರಿಗಿತ್ತು…. “ಏನಮ್ಮಾ ಹುಡುಗಿ…. ನಿನ್ನ ತಾಯಿ ಹೇಗಿದ್ದಾರೆ”… ಎಂದು ಕೇಳಿದರು. ಅದಕ್ಕುತ್ತರವಾಗಿ ವೈದ್ಯರಿಗೆ ವಂದಿಸಿದ ಅವಳು… “ಸರ್ ನಿಮ್ಮ ಬಳಿ ಒಂದು ಮುಖ್ಯವಾದ ವಿಷಯವನ್ನು ನಾನು ಪ್ರಸ್ತಾಪಿಸಬೇಕಿದೆ…. ದಯವಿಟ್ಟು ನನಗೆ ನೀವು ಸಹಾಯ ಮಾಡಬೇಕು”…. ಎಂದಳು….. “ಅದೇನು ಹೇಳಮ್ಮಾ”…. ಎಂದು ವೈದ್ಯರು ಕೇಳಿದಾಗ ಬೆಂಗಳೂರಿನಲ್ಲಿ ನಡೆದ ಅಷ್ಟೂ ಘಟನೆಯನ್ನು ವಿವರಿಸಿದಳು. ವೈದ್ಯರಿಗೆ ಸುಮತಿಯ ಬಗ್ಗೆ ತಿಳಿದು ಬಹಳ ಬೇಸರ ಮತ್ತು ಸಂಕಟವಾಯಿತು. ಆಕೆಯ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು…. “ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಯಿತು…. ನನ್ನಿಂದ ನಿಮಗೇನು ಸಹಾಯವಾಗಬೇಕು ತಿಳಿಸು ಮಗು”…. ಎಂದರು…. “ಸರ್…. ಬೆಂಗಳೂರಿನಲ್ಲಿ ದೊರಕುವ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ದೊರೆಯುತ್ತದೆ ಎಂದು ಅಮ್ಮನಿಗೆ ಸುಳ್ಳು ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ…. ಅವರಿಗೆ ಸತ್ಯ ಸಂಗತಿಯನ್ನು ನಾನು ತಿಳಿಸಿಲ್ಲ….. ತಿಳಿಸುವ ಮನಶಕ್ತಿಯೂ ನನ್ನಲಿಲ್ಲ…. ದಯವಿಟ್ಟು ತಾವು ಈ ಆಸ್ಪತ್ರೆಯಲ್ಲಿ ನನ್ನ ತಾಯಿಯನ್ನು ದಾಖಲು ಮಾಡಿ ಸ್ವಲ್ಪ ದಿನ ಚಿಕಿತ್ಸೆ ಕೊಡುವಿರಾ?” ….. ಎಂದು ಅಂಗಲಾಚುವಂತೆ ಬೇಡಿಕೊಂಡಳು.
ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ಧರೆ ಹತ್ತಿ ಉರಿದೊಡೆ… ಪ್ರಕೃತಿ ಗೆ ದಿನೆ ದಿನೆ ನಮ್ಮ ಮ್ಯಾಲ ಸಿಟ್ಟು ಹೆಚ್ಚಾಗ್ತಾನೆ ಅದ. ಪ್ರಕೃತಿ ವಿಕೋಪಗಳು ಎಷ್ಟೊಂದು ರೀತಿಯೊಳಗ ಮನುಕುಲಕ್ಕ ಕಾಡತಿದ್ದಾವ.ಅದಕ್ಕ ನಾವೂ ಕಾರಣ ಅನ್ನೊದು ಮರಿಬಾರದು.ಅನಿರೀಕ್ಷಿತ ವಾಗಿ ನೇಪಾಳದಾಗ ಆದ ಪ್ರವಾಹಗಳಂತವನ್ನು ಅದೆಂಗ ತಡಕೊಳ್ಳಬೇಕು ಮನುಷ್ಯ ರು.. ಮಳಿ ಗಾಳಿ ಒಂದು ಇರಲಾರದೆ ಒಮ್ಮೆಲೆ ನೀರು ಮನಿ ಊರು ಎಲ್ಲಾ ಮುಳಗಿಸಿ ಬಿಡತದ ಅಂದರ ಇದು ಅದೇಷ್ಟು ಅನಿರೀಕ್ಷಿತ. ವಿಜ್ಞಾನ ಎಷ್ಟೇ ಮುಂದ ವರೆದ್ರು ಇಂತ ಅವಘಡಗಳು ತಪ್ಪಿಸಲಿಕ್ಕ ಆಗಲ್ಲ.ಕೈಲಾಶ್ ಪರ್ವತ ಯಾತ್ರೆ ಇಷ್ಟು ದಿನ ಬಂದ್ ಆಗಿದ್ದು ಈಗ ಒಂದೆರಡು ವರ್ಷ ಗಳಿಂದ ಶುರು ಆಗ್ಯಾದ.ಪ್ರವಾಸ ಅಂದ್ರ ಬಾಯಿ ಬಿಡುವ ನಾನಗ ಮಾನಸ ಸರೋವರ ಯಾತ್ರ ಮಾಡುವ ಕನಸು ಅದ. ಕೈಲಾಶ್ ಪರ್ವತ ನೋಡಬೇಕು ಅವನ್ನು ಇಚ್ಚೆಗಿಂತ ಪರ್ವತದ ವರೆಗೆ ಹೋಗುವ ದಾರಿಯ ರೋಚಕ ಅನುಭವಕ್ಕ ನನ್ನ ಮನ ಇಷ್ಟಪಡತದ.ನೇಪಾಳ ಪ್ರವಾಸಕ್ಕೆ ಹೋದಾಗ ನನಗ ಅದೇನು ಅಷ್ಟು ಇಷ್ಟ ಆಗಿಲ್ಲ.ಹಿಮಾಲಯ ಪರ್ವತಗಳ ಸಮೀಪ ಹೋಗಬಹುದು , ಸಮೀಪದಿಂದ ಹಿಮಾಲಯ ಪರ್ವತ ನೋಡಬಹುದು ಅನ್ನೊ ಆಸೆಯಿಂದ ಹೋಗಿದ್ಧೆ. ಹಿಮಾಲಯ ಪರ್ವತ ಇರಲಿ , ಪರ್ವತದ ತುದಿನೂ ಕಾಣಲಿಲ್ಲ.ಬೇರೆ ಬೇರೆ ಪರ್ವತಗಳ ತುದಿ ಕಡೆ ಬೆರಳು ಮಾಡಿ ತೊರಿಸುತ್ತ ನಮ್ಮ ಗೈಡ ಅವುಗಳ ಹೆಸರು ಹೆಳತಿದ್ರೆ ಹಿಮಾಲಯ ಪರ್ವತ ಎಲ್ಲಿದೆ ಅಂತ ಕೆಳತಿದ್ಧ.ಅದನ್ನು ನೋಡಬೇಕಾದ್ರೆ ಚೀನಾ ಅಥವಾ ಟಿಬೆಟ್ ಬಾರ್ಡರ್ ಕಡಿ ಹೋಗಬೇಕು , ಇಲ್ಲ ಹೆಲಿಕ್ಯಾಪ್ಟರ್ ನಲ್ಲಿ ಹಿಮಾಲಯ ಮತ್ತು ಇತರ ಪರ್ವತಗಳನ್ನು ಸಮೀಪದಿಂದ ನೋಡಬಹುದು ಅಂತ ಹೆಳ್ದ. ಒಂದು ವೇಳೆ ದುಬಾರಿ ಟಿಕೆಟ್ ಕೊಟ್ಟು ಹೆಲಿಕಾಪ್ಟರನಲ್ಲಿ ಹೋದ್ರೂ ವಾತಾವರಣ ಚನ್ನಾಗಿ ಇರಲಿಲ್ಲಂದ್ರ ವಾಪಸ ಬರಬೇಕಾಗತದ ಅಂತ ಎಚ್ಚರಿಕೆ ಕೊಟ್ಟ.ಯಾರೂ ಆಸಕ್ತಿ ತೋರಿಸಲಿಲ್ಲ . ನನಗೂ ಒಬ್ಬಕಿಗೆ ಹೋಗಲಿಕ್ಕ ದೈರ್ಯ ಸಾಲಲಿಲ್ಲ . ಇಡೀ ನೇಪಾಳ ಪ್ರವಾಸದಾಗ ದೂರದಿಂದ ಕಾಣುವ ಪರ್ವತ ತುದಿ ನೋಡಿ ಬಂದಿದ್ದೆವು. ನೇಪಾಳ ಈಗೀಗ ಅಭಿವೃದ್ಧಿ ಆಗತಿರೋ ದೇಶ.ಸದಾ ಚೀನಾದವರ ಅತಿಕ್ರಮಣದ ದಬ್ಬಾಳಿಕೆ ಸಹಿಸ್ತಾ ಅವರ ನೆರವಿನಲ್ಲಿ ಇರಬೇಕಾದ ಅವಶ್ಯಕತೆ . ಮತ್ತು ಟಿಬೇಟ್ , ಭಾರತ ದಂತ ನೆರೆ ರಾಜ್ಯಗಳು , ಯಾರ ಜೊತೆಗೆ ಗೆಳೆತನ ಇಟ್ಟಕೋಬೇಕು ಅನ್ನೊ ಸಂದಿಗ್ಧ ಪರಿಸ್ಥಿತಿ. ಪುರುಷರು ದುಡಿಯಲು ವಲಸೆ ಹೋದ್ರೆ ಮಹಿಳೆಯರೇ ಮನೆ ಮಕ್ಕಳು ನೋಡಕೊಂಡು ಇರತಾರೆ. ಎಲ್ಲಾ ಅಂಗಡಿಯೊಳಗ ಹೆಚ್ಚಾಗಿ ಮಹಿಳೆಯರೆ ಕಾಣತಾರ. ಚೀನಾದವರ ನೆರವಿನ ರಸ್ತೆಗಳು ,ಮತ್ತಿತರ ಕಟ್ಟಡಗಳು ಮಾಡಿ ಪ್ರವಾಸ ಅಭಿವೃದ್ಧಿ ಮಾಡತಿದ್ದಾರ. ಇತ್ತೀಚೆಗಷ್ಟೆ ನೇಪಾಳದ ರಾಜಕೀಯ ಯುವಕರ ದೆಸೆಯಿಂದ ಬದಲಾಗಿ ಹೊಸ ರೂಪ ಪಡಿತಿತ್ತು.ಅಂತದ್ದರಾಗ ಈ ಪ್ರವಾಹದ ಅವಘಡ. ಹಾಳಾಗಿದ್ದದ್ದು ಮೊದಲಿನ ರೂಪಕ್ಕ ಬರಬೇಕಂದ್ರ ಮತ್ತ ಕಾಲ ಒಂದು ಶತಮಾನ ಹಿಂದೆ ಹೋದಂಗ. ಪ್ರವಾಸೋದ್ಯಮ ಅಭಿವೃದ್ಧಿ ಯಿಂದ ವಿಶ್ವ ಕ್ಕ ಯಾವರೀತಿ ಪ್ರಯೋಜನ ಅನ್ನುವ ಪ್ರಶ್ನೆ ಕಾಡತದ.ಬರೀ ದೇಶಗಳು ಅಭಿವೃದ್ಧಿ ಮಾತ್ರ ಆಗತಾವ ಅಂತ ಹೆಳಲಿಕ್ಕಾಗಲ್ಲ.ಅದರೊಂದಿಗೆ ಪ್ರಕೃತಿಗೆ ನಾನಾ ರೀತಿಯ ಅನಾನುಕೂಲಗಳನ್ನು ಮಾಡತದ.ಪ್ರವಾಸಿಗರ ಅನುಕೂಲಕ್ಕ ಅವರ ವಸತಿ ಸೌಕರ್ಯ ಕ್ಕೆ ಅನುಕೂಲ ಮಾಡಿಕೊಡಬೇಕಂದ್ರ ಪ್ರಕೃಗೆ ಹಾನಿ ಮಾಡ್ಲೇಬೇಕು.ಗುಡ್ಡ , ಮರ , ಕಡಿದರೆ ಭೂಮಿ ಸವಕಳಿ ಆಗಿ ಕುಸಿದು ಬಿಳತದ. ರಸ್ತೆ , ಸುರಂಗಗಳು , ಹೊಟೆಲ್ ಗಳು ಇವೆಲ್ಲವೂ ಪ್ರವಾಸೋದ್ಯಮ ಕ್ಕೆ ಬಹಳ ಜರೂರಿ ಇರತವ.ಇದಕ್ಕಾಗಿ ಪರಿಸರಕ್ಕ ಕೆಣಕಿದ್ರೆ ಈ ಅವಘಡಗಳು ಸಂಭವಿಸ್ತಾವ. ಉತ್ತರಾಖಂಡ , ಹಿಮಾಚಲ , ಲಡಾಖ್ ನಂತಹ ಪ್ರದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಪ್ರವಾಸಿ ತಾಣ ಆಗತಿದ್ದಾವ.ಬೆಟ್ಟಗಳ ಮ್ಯಾಲ್ ಮನುಷ್ಯರಿಗಾಗಿ ನಿರ್ಮಾಣ ಆಗತಿರೋ ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣ ದ ಒತ್ತಡ ಆ ಪ್ರಕೃತಿ ತಾಳಕೊಳ್ಳೊದು ಕಷ್ಟ. ವರ್ಷ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗತನೆ ಇಧೆ. ಒಂದು ವೇಳೆ ಪ್ರವಾಸೋದ್ಯಮ ಕ್ಕ ಕಡಿವಾಣ ಹಾಕಿದ್ರ ಆ ರಾಜ್ಯಗಳ ಅಭಿವೃದ್ಧಿ ಕುಂಠಿತ ಆಗತದ.ನಮ್ಮ ದೇಶದ ಎಷ್ಟೋ ರಾಜ್ಯಗಳು ಪ್ರವಾಸೊದ್ಯಮದ ಮ್ಯಾಲ ಅವಲಂಬಿತ ಆಗ್ಯಾವ. ಎಲ್ಲಕ್ಕಿಂತ ಹೆಚ್ಚಾಗಿ ವಾತಾವರಣದಲ್ಲಿನ ಬಿಸಿ ಪ್ರಕೃತಿಗೆ ಬಾಳ ಹಾನಿ ಮಾಡಲತದ.ಕಾಶ್ಮೀರ ಕಣಿವೆಯ ಅಮರನಾಥ ಗುಹೆಯ ಮಂಜಿನಿಂದ ಉಂಟಾಗುವ ಶಿವಲಿಂಗ ಕೆಲವೆ ದಿನಗಳಲ್ಲಿ ಕರಗಿ ಹೋಗಲತದ.ಮೊದಲೆಲ್ಲ ನಾಲ್ಕು ತಿಂಗಳು ಲಿಂಗದ ಆಕಾರದಲ್ಲೆ ಇರುವ ಶಿವಲಿಂಗ ಈಗ ತಿಂಗಳಲ್ಲಿ ಕರಗಿ ಬಿಡಲತದಂತ.ಎರಡು ವರ್ಷ ಕೆಳಗೆ ಸೆಪ್ಟೆಂಬರ್ ನಲ್ಲಿ ಅಮರನಾಥ ಪ್ರವಾಸ ಹೋಗಿದ್ಧ. ಅಷ್ಟರಲ್ಲಿ ಮಂಜಿನಿಂದ ಆದ ಶಿವಲಿಂಗ ಕರಗಿ ನೆಲದ ಮ್ಯಾಲೆಲ್ಲ ಹರಡಿತ್ತು.ದಿನಾ ಲಕ್ಷ ಲಕ್ಷ ಜನ ಗುಹೆಯೊಳಗ ಹೋದ್ರ ಅವರ ಉಸಿರಿನ ಬಿಸಿಗಿ ಗುಹೆಯಲ್ಲಿ ತಂಪು ವಾತಾರಣ ಬಿಸಿ ಆಗತದ. ಬಿಸಿ ಹವಾಕ್ಕ ನಾಲ್ಕು ತಿಂಗಳ ಇರೋ ಲಿಂಗ ಒಂದೇ ತಿಂಗಳಲ್ಲಿ ಕರಗಲತದ. ಉತ್ತರಾಖಂಡ ಕೇದಾರ ಬದರಿನಾಥ ಧಾಮಗಳಲ್ಲೂ ಇತ್ತಿಚಿನ ವರ್ಷ ಗಳಲ್ಲಿ ಅತೀ ಜನದಟ್ಟಣೆ ಆಗಲತದ.ಹೋದ ವರ್ಷ ಮೇ ನಲ್ಲಿ ಹೋದಾಗ ಸಾವಿರಾರು ಜನರ ಲೈನ್. ಬೆಟ್ಟಗಳು ಇಷ್ಟು ಜನರ ಒತ್ತಡ ಹ್ಯಾಂಗ್ ತಡಕೋತಾವ.ಯಾವಾಗ ಯಾವ ಬೆಟ್ಟ ಕುಸಿದು ಬಿಳತದೋ ಅಂತ ಆತಂಕದಲ್ಲೆ ಪ್ರವಾಸ ಮುಗಿಸ್ದೆವು. ಭೂಲೋಕದ ಸ್ವರ್ಗ ಎಂದು ಹೆಸರಾಗಿದ್ದ ಕಾಶ್ಮೀರ ಕ್ಕ ಹೋದಾಗ ಅಲ್ಲಿ ನ ಬಿಸಿಲು ನೋಡಿ ಗಾಬರಿ ಆಗಿತ್ತು.ಅಷ್ಟು ತಾಪಮಾನದಲ್ಲಿ ಎರಿಕೆ ಆಗಿತ್ತು ,ಅಲ್ಲಿನ ಸ್ಥಳಿಯರು ಬಿಸಿಲು ತಡಿಲಾರದೆ ಒದ್ದಾಡ್ತಿದ್ರು.ಕಾಶ್ಮೀರ ಅಂದ್ರೆ ಎನೋ ಅಂತ ತಿಳಕೊಂಡ ಹೋದ ನಮಗೆ ಅಲ್ಲಿನ ಬಿಸಿಲು ನಿರಾಶೆ ಮಾಡಿತ್ತು. ಹಿಮಾಚಲ ಪ್ರದೇಶದ ಕುಲು ಮನಾಲಿಗಳು ಜನದಟ್ಟಣೆ ಪ್ರದೇಶ ಆಗಿಬಿಟ್ಟಾವ.ನಾವು ಡಿಸೆಂಬರ್ ನಲ್ಲಿ ಹೋಗಿದ್ದಕ್ಕ ಹಿಮಪಾತ ಆಗ್ತಿತ್ತು.ಪ್ರಕೃತಿ ಸುಂದರ ಅನಿಸಿತ್ತು.ಪ್ರವಾಸಿಗರಿಗಾಗಿ ಗುಡ್ಡ ಕಡಿದು ಸುರಂಗ ಮಾಡುವಾಗ ಆದ ಅವಘಡದಿಂದ ಎಷ್ಟೋ ಜನ ಒಳಗೆ ಸಿಕ್ಕಿಹಾಕಿಕೊಂಡಿದ್ರು. ಲಡಾಖ್ ಗೆ ಈಗೀಗ ಪ್ರವಾಸಿಗರ ಸಂಖ್ಯೆ ಹೆಚ್ಚು ಆಗಲತದ.ಜನದಟ್ಟಣೆ ಹೆಚ್ಚಾದಂಗ ಪರಿಸರ ಮುನಿಯುವದಕ್ಕ ಶುರು ಆಗತದ.ನನಗ ಲಡಾಖ್ ಸುಂದರ ಮತ್ತ ಶಾಂತ ಅನಿಸ್ತು. ಬೆಟ್ಟಗಳ ನಡು ಶಾಂತವಾಗಿದ್ದ ಸ್ಥಳ ನಮ್ಮಂತ ಪ್ರವಾಸಿ ಗರಿಂದ ಅಶಾಂತಗೊಳ್ಳತದ. ಜನದಟ್ಟಣೆ ಯಾವಾಗಲೂ ಎನಾದ್ರು ಒಂದು ಕೆಟ್ಟ ಘಟನೆಗೆ ಕಾರಣ ಆಗ್ತಾನೆ ಇರತದ.ಕಾಲ್ತುಳಿತದಂತ ಪ್ರಸಂಗಗಳು ಮತ್ತ ಮತ್ತ ಆಗ್ತಾನೆ ಇರತಾವ.ಕಾಲ್ತುಳಿತ ಆಗತದ ಅಂತ ಗೊತ್ತಿದ್ರೂ ಮತ್ತು ದಟ್ಟಣೆಯೊಳಗ ಹೋಗಿ ತೂರಿಕೊಳ್ಳತೀವಿ. ಪ್ರಕೃತಿ ವಿಕೋಪಗಳು , ಯುದ್ದಗಳು ಎಷ್ಟು ಕರಾಳ ನೆನಪುಗಳು ಉಳಿಸಿಬಿಡತಾವ , ಬದುಕುಳಿದವರವರ ಬದುಕು ಮೂರಾಬಟ್ಟೆ. ಜೀವನವೀಡಿ ಚಂದದ ಬದುಕಿಗಿ ಹವಣಿಸಿ ಹೆಣಗಿ ಪರಿಶ್ರಮದಿಂದ ಕಟ್ಟಿಕೊಂಡ ಬದುಕು ಕ್ಷಣದಲ್ಲಿ ನಿರ್ನಾಮ ಆದ್ರ ಅದನ್ನು ತಾಳಕೊಳ್ಳೊ ಕಷ್ಟ ವರ್ಣಿಸಲಕ್ಕ ಆಗದ ಮಾತು. ಆದ್ರೂ ಬದುಕಲೇಬೇಕಲ್ಲ.ಸಮಯದ ಆಧಾರದ ಮ್ಯಾಲ. ಮನುಕುಲ ಈಗಲಾದ್ರು ಪ್ರಕೃತಿ ಬಗ್ಗೆ ವಿಚಾರ ಮಾಡಲೇಬೇಕು.ಅಭಿವೃದ್ದಿ ಹೆಸರಲ್ಲಿ ಗುಡ್ಡ , ನೆಲ ಅಗೀತಾ ಹೋದ್ರ ಮುಂದೆ ಇನ್ನೂ ಘೋರ ಪರಿಣಾಮ ಎದುರಿಸಬೇಕಾಗತದ.ನಾವು ಪ್ರವಾಸ ಮಾಡೋರು ಕೂಡ ಎಲ್ಲಾ ಸೌಕರ್ಯ ಐಶಾರಾಮಿ ಆಗಿ ಇರಬೇಕಂತ ಬಯಸ್ತಿವಿ.ನಮ್ಮ ಸೌಕರ್ಯ ಕ್ಕಾಗಿ ಪ್ರಕೃತಿ ಮ್ಯಾಲ ದಬ್ಬಾಳಿಕೆ ಮಾಡೋದು ಮುಂದುವರಿತಾನೆ ಅದ.ಪ್ರಕೃತಿ ಆದ್ರು ಎಷ್ಟಂತ ಸಹಿಸಿಕೊಳ್ಳತದ ಮನುಷ್ಯರ ಹುಂಬತನ. ಜ್ಯೋತಿ ಡಿ ಬೊಮ್ಮಾ
ಅಂಕಣ ಸಂಗಾತಿ̲38 ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ಪಾಲಿಸಿ ವಿಭಾಗದಲ್ಲಿ ಮತ್ತಷ್ಟು ಮೈಸೂರಿನಸಿಲ್ಕ್ ಫ್ಯಾಕ್ಟರಿ ಹೀಗೆ ವಿವಿಧ ರೀತಿಯ ತಪ್ಪುಗಳ ಪಟ್ಟಿಯನ್ನು ಸರಿ ಮಾಡುತ್ತಾ ಹೋಗುವುದು ತುಂಬಾ ಆಸಕ್ತಿದಾಯಕವಾದ ವಿಷಯವಾಗಿತ್ತು. ನಗದು ಕಟ್ಟುವ ಪಾಲಿಸಿಗಳಿಗೆ ಆಗ ತಾನೇ ಎಲ್ಲಿ ಬೇಕಾದರೂ ಕಟ್ಟಬಹುದು ಎನ್ನುವ ವ್ಯವಸ್ಥೆ ಆರಂಭವಾಗಿತ್ತು. ಆದರೆ ಮೊದ ಮೊದಲು ಸಮಸ್ಯೆಗಳು ಎದುರಾಗಿದ್ದವು. ಬೇರೆ ಕಡೆ ಕಟ್ಟಿದ್ದು ಅಪ್ಡೇಟ್ ಆಗದೆ ಎರಡೆರಡು ಬಾರಿ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಕೆಲವೊಮ್ಮೆ ಕ್ಲೇಮ್ಸ್ ನಿಂದ ಮುರಿದುಕೊಂಡಿದ್ದರೂ ಸಹ ಅದು ಮಾನ್ಯ ಆಗದೆ ಮತ್ತೆ ಮತ್ತೆ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಈ ಎಲ್ಲವೂ ಸೆಂಟ್ರಲ್ ಆಫೀಸಿನಲ್ಲಿ ತಿಂಗಳಿಗೆ ಒಮ್ಮೆ ಸರಿಯಾಗಿ ಈ ರೀತಿ ತಪ್ಪುಗಳು ಪಟ್ಟಿ ಆಗಿ ಬರುತ್ತಿದ್ದವು. ಅವುಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ನಿಜವಾಗಿ ಎರಡು ಬಾರಿ ಕಟ್ಟಿದ್ದಾರೆ ಎಂದರೆ ಆ ವ್ಯಕ್ತಿಗಳಿಗೆ ಅದನ್ನು ವಾಪಸ್ಸು ಮಾಡುವ ಕೆಲಸ ಈ ಕ್ಯಾಶ್ ಎರರ್ ಸರಿ ಮಾಡುವ ಕೆಲಸ. ಅದು ಸಹ ಮೊದಮೊದಲು ತಿಂಗಳಿಗೆ 30 40 ಆ ರೀತಿ ಬರುತ್ತಿತ್ತು. ಈಗ ಎಲ್ಲಾ ಕಡೆಯೂ ಸರಿಯಾಗಿ ಆಗಿದೆ. ಗೂಗಲ್ ಪೇ ಮುಂತಾದವುಗಳಿಂದ ಕಟ್ಟಿದ್ದು ಸಹ ತಕ್ಷಣವೇ ಸರಿಯಾಗಿ ತೋರಿಸುತ್ತದೆ. ಅಂದರೆ ತಂತ್ರಜ್ಞಾನ ಎಷ್ಟು ಚೆನ್ನಾಗಿ ಈಗ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ಕಾಣಬಹುದು. ಮೊದಲೇ ಹೇಳಿದಂತೆ ಸಾಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿ ಪಾಲಿಸಿದಾರರಿಂದ ಪಡೆದ ಬಾಂಡುಗಳು ಅವರ ಅರ್ಜಿಗಳು ಸಂಗ್ರಹ ಮಾಡಿ ಇಡುತ್ತೇವೆ. ಲೋನ್ ಡಾಕೆಟ್ ಎಂದು ಇದಕ್ಕೆ ಹೆಸರು. ಸಾಲ ತೆಗೆದುಕೊಂಡಾಗಿನಿಂದ ಹಿಡಿದು ಸಾಲ ವಾಪಸ್ ಆಗುವವರೆಗೆ ಇವುಗಳನ್ನು ಜೋಪಾನ ಮಾಡಬೇಕಾಗುತ್ತದೆ. ಅವರು ನಗದು ತಂದು ಕಟ್ಟಿ ಸಾಲ ತೀರಿಸಿದರೂ ಸಹ ಬಾಂಡುಗಳನ್ನು ಮತ್ತೆ ವಾಪಸ್ ಮಾಡಬೇಕಾಗುತ್ತದೆ. ಹಾಗಾಗಿ ಪಾಲಿಸಿಗಳು ಬೇರೆ ಊರಿನಿಂದ ವರ್ಗವಾಗಿ ಬಂದರು ಅಲ್ಲಿಂದ ಲೋನ್ ಡಾಕೆಟ್ ಗಳನ್ನು ತರಿಸಬೇಕಾಗುತ್ತದೆ. ನಮ್ಮಿಂದ ಹೋಗುವ ಪಾಲಿಸಿಗಳ ಫೈಲ್ ಜೊತೆಯಲ್ಲೂ ಸಾಲದ ಡಾಕೆಟ್ಗಳನ್ನು ಕಳಿಸಬೇಕಾಗುತ್ತದೆ. ಹಾಗಾಗಿ ಇವುಗಳು ಬೇಕಾದ ಸಮಯಕ್ಕೆ ಸರಿಯಾಗಿ ಸಿಗಬೇಕಾದದ್ದು ಅತ್ಯವಶ್ಯ. ಆದರೆ ಕೆಲವೊಮ್ಮೆ ಅವುಗಳು ನಮಗೆ ಬೇಕಾದಾಗ ದೊರೆಯದೆ ಹೋಗುತ್ತಿದ್ದುದು ಒಂದು ಸಮಸ್ಯೆಯಾಗಿತ್ತು. ಸಕಲೇಶಪುರದಲ್ಲಿ ಈ ರೀತಿ ಸಾಲದ ವಿಭಾಗ ಕಂಪ್ಯೂಟರೀಕರಣ ಆದಾಗ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದೆಲ್ಲವನ್ನು ಕಂಪ್ಯೂಟರ್ ಮಾಹಿತಿಗೆ ತುಂಬಿದ ವಿಷಯ ಹೇಳಿದ್ದೆ .ಆ ರೀತಿ ಕೆಲವು ಶಾಖೆಗಳಲ್ಲಿ ಸರಿಯಾಗಿ ಮಾಡದೆ ಹೋದಾಗ ನಮಗೆ ಆ ಪಾಲಿಸಿಗಳು ವರ್ಗವಾಗಿ ಬಂದಾಗ ತೊಂದರೆ ಉಂಟಾಗುತ್ತಿತ್ತು. ಇವುಗಳನ್ನೆಲ್ಲ ನಿವಾರಿಸಲು ಸರಿಯಾದ ಮಾರ್ಗವೆಂದರೆ ಇತ್ತೀಚಿನ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಲೋನ್ ಡಾಕೆಟ್ ಗಳು ಇದೆಯಾ ಎಂದು ಪರಿಶೀಲಿಸುವುದು. ಈ ಕೆಲಸಕ್ಕೆ “ಲೋನ್ ಡಾಕೆಟ್ ಪ್ಯೂರಿಫಿಕೇಶನ್” ಎಂದು ಹೇಳುತ್ತಿದ್ದರು .ನಾನು ಸಾಲದ ವಿಭಾಗದಲ್ಲಿ ಇದ್ದಾಗ ಮಾಮೂಲಿಯ ಕೆಲಸದ ಜೊತೆ ದಿನ ಸ್ವಲ್ಪ ಸ್ವಲ್ಪ ಮಾಡಿ ಈ ರೀತಿ ಸಾಲದ ಪ್ಯೂರಿಫಿಕೇಶನ್ ಕೆಲಸ ಮಾಡಿದ್ದು ಸಹ ಒಂದು ರೀತಿಯ ಹೆಮ್ಮೆಯ ವಿಷಯವೇ. ನಮ್ಮಲ್ಲಿ ಷೆಡ್ಯೂಲಿನಲ್ಲಿ ಇಲ್ಲದೆ ಇರುವ ಡಾಕೆಟ್ಗಳನ್ನು ಬೇರೆ ಶಾಖೆಗಳಿಗೆ ಕಳಿಸುವುದು ಈಗಾಗಲೇ ಪರಿಪಕ್ವ ಅಥವಾ ಸಾವಿನ ದಾವಾ ಗಳು ಇದ್ಯರ್ಥ ಆಗಿದ್ದ ಪಾಲಿಸಗಳ ಸಾಲದ ಡಾಕೆಟ್ಳನ್ನು ನಾಶ ಮಾಡುವುದು ಇವೆಲ್ಲವುಗಳಿಂದ ಜಾಗ ಸಹ ಹೆಚ್ಚು ದೊರೆಯುವಂತೆ ಆಯಿತು. ಹೆಚ್ಚು ಹುಡುಕಾಟ ಮಾಡುವ ಕೆಲಸವು ತಪ್ಪಿತು. ಇಷ್ಟೆಲ್ಲ ಆಗುವ ವೇಳೆಗೆ ಮತ್ತೆ ಶಾಖಾಧಿಕಾರಿಗಳ ಬದಲಾವಣೆ. ಈ ಬಾರಿ ಮಹಿಳಾ ಶಾಖಾಧಿಕಾರಿಗಳು. ಅನುರಾಧ ಎನ್ನುವವರು ಶಾಖಾಧಿಕಾರಿಗಳಾಗಿ ಬಂದರು. ನಮಗೆಲ್ಲ ಅದು ಸಂತಸದ ಹಾಗೂ ಹೆಮ್ಮೆಯ ವಿಷಯವೇ ಆಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರು ದಿನಾಲು ಉಟ್ಟುಕೊಂಡು ಬರುತ್ತಿದ್ದ ಮೈಸೂರು ಸಿಲ್ಕ್ ಸೀರೆ ನಮ್ಮೆಲ್ಲರ ಗಮನ ಸೆಳೆದಿತ್ತು. ಒಂದು ರೀತಿ ನಮಗೆಲ್ಲ ಸ್ಪೂರ್ತಿಯೇ ಆದ ಅವರಿಂದ ನಾವು ಸಹ ಹೆಚ್ಚು ಮೈಸೂರ್ ಸಿಲ್ಕ್ ಸೀರೆಗಳನ್ನು ಕೊಳ್ಳಲು ಆರಂಭಿಸಿದ್ದೆವು. ಅದಕ್ಕೆ ಮತ್ತೊಂದು ಕಾರಣ ಎಂದರೆ ಮೈಸೂರು ಸಿಲ್ಕ್ ಫ್ಯಾಕ್ಟರಿ ಅವರು ತಾವೇ ಶಾಖೆಗೆ ಬಂದು ಕಂತಿನ ರೂಪದಲ್ಲಿ ಸೀರೆಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದು. ಒಂದು ಕಂತು ನಗದು ಕೊಟ್ಟರೆ ಮಿಕ್ಕ ಕಂತುಗಳನ್ನು 9 ಚೆಕ್ ಗಳಾಗಿ ಮುಂಚೆಯೇ ಕೊಟ್ಟರೆ ಆಯಿತು .ಪ್ರತಿ ತಿಂಗಳು ಬ್ಯಾಂಕ್ನಿಂದ ಅದು ಡೆಬಿಟ್ ಆಗಿ ಹೋಗುತ್ತಿತ್ತು .ಒಂದು ರೀತಿ ಒಳ್ಳೆಯ ಅನುಕೂಲವೇ ಆಗಿ ಎಲ್ಲರೂ ಆಗ ಮೈಸೂರು ಸಿಲ್ಕ್ ಖರೀದಿ ಕಡೆ ಮುಖ ತಿರುಗಿಸುವ ಹಾಗೆ ಮಾಡಿತ್ತು. ಶಾಖೆಯಲ್ಲಿ ವಿಮಾ ಉತ್ಸವ ಶಾಖೆ ೫ಕ್ಕೆ ಬಂದಮೇಲೆ ಪ್ರತಿ ಸೆಪ್ಟೆಂಬರ್ ಒಂದರಂದು ನಡೆಸುವ ಜೀವ ವಿಮಾ ನಿಗಮದ ವಾರ್ಷಿಕೋತ್ಸವ ಸಮಾರಂಭಗಳಿಗೆ ಒಂದು ಹೊಸ ಕಳೆ ಬಂದಿತ್ತು. ಇಲ್ಲಿ ಬಹಳ ವಿಜೃಂಭಣೆಯಿಂದ ಅದನ್ನು ಆಚರಿಸುವ ಪದ್ಧತಿ ಅಥವಾ ಎಲ್ಲಾ ಶಾಖೆಗಳಲ್ಲೂ ಆಗ ಆ ರೀತಿ ಆಚರಿಸುವ ಅಭ್ಯಾಸ ಆರಂಭವಾಗಿತ್ತು ಅನ್ನಿಸುತ್ತೆ. ಬೇರೆ ಬೇರೆ ಶಾಲೆಯ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳು, ಸಿಬ್ಬಂದಿ ವರ್ಗದವರಿಗೆ ಸ್ಪರ್ಧೆಗಳು ಹಾಗೂ ಪ್ರತಿನಿಧಿಗಳನ್ನು ಒಳಗೊಂಡು ತುಂಬಾ ಸಂಭ್ರಮದಿಂದ ಸೆಪ್ಟೆಂಬರ್ ಒಂದರಿಂದ ಏಳರವರೆಗಿನ ವಿಮಾ ಸಪ್ತಾಹವನ್ನು ಸಡಗರದಿಂದ ಆಚರಿಸಲಾಗುತ್ತಿತ್ತು. ಅದಕ್ಕೆ ಎಂಟು ಹತ್ತು ದಿನ ಮುಂಚೆ ಬೇರೆ ಬೇರೆ ವಿಭಾಗಗಳಿಗೆ ಕಮಿಟಿಗಳನ್ನು ರಚಿಸಿ ಅವರಿಗೆ ಕೆಲಸಗಳನ್ನು ವಹಿಸಿಕೊಡಲಾಗುತ್ತಿತ್ತು . ಸೆಪ್ಟೆಂಬರ್ ಒಂದರ ಬೆಳಿಗ್ಗೆ ದೀಪ ಹಚ್ಚಲು ರಂಗೋಲಿ ಅಲಂಕಾರದಿಂದ ಹಿಡಿದು ಹೆಂಗಳೆಯರು ಒಂದೊಂದು ದಿನ ಒಂದೊಂದು ಬಣ್ಣದ ಥೀಮ್ ನಲ್ಲಿ ಅಲಂಕರಿಸಿಕೊಂಡು ಬಂದು ಇಡೀ ಶಾಖೆಯೇ ಬಣ್ಣ ಬಣ್ಣವಾಗಿ ತೋರುತ್ತಿತ್ತು. ಸಿಬ್ಬಂದಿಗಳಿಗೆ ಸ್ಪರ್ಧೆಗಳನ್ನು ತಮಾಷೆಯಾಗಿ ಇರುವ ಹಾಗೆ ಇಡುತ್ತಿದ್ದಿದರಿಂದ ಆ ಸ್ಪರ್ಧೆಗಳು ನಡೆಯುವಷ್ಟು ಹೊತ್ತು ಎಲ್ಲರಿಗೂ ಮನರಂಜನೆ. ಗೆಲುವು ಸೋಲು ಮುಖ್ಯವಲ್ಲ, ಎಲ್ಲರೂ ಭಾಗವಹಿಸಿ ಆ ಕ್ಷಣಗಳನ್ನು ಸ್ಮರಣೀಯ ಮಾಡಿಕೊಳ್ಳುತ್ತಿದ್ದು ವಿಶೇಷ. ಹಾಗೆಯೇ ಹಿಂದಿ ದಿನದ ಆಚರಣೆಯು ಸಹ. ಇಲ್ಲಿ ಸಿಬ್ಬಂದಿಗಳಿಗೆ ಪ್ರತ್ಯೇಕ ಸ್ಪರ್ಧೆ ಇರುತಿರಲಿಲ್ಲ ಬೇರೆ ಶಾಖೆಗಳಲ್ಲಿ ಇದ್ದಂತೆ. ಆದರೆ ಒಬ್ಬ ಮುಖ್ಯ ಅತಿಥಿಯನ್ನು ಕರೆದು ಅವರಿಂದ ಹಿಂದಿ ಬಗ್ಗೆ ಮಾತನಾಡಿಸಿ ಅವರಿಗೊಂದು ಉಡುಗೊರೆ ಕೊಟ್ಟು ಕಳಿಸುವುದು ಹಾಗೂ ಇಡೀ ಶಾಖೆಯ ಸಿಬ್ಬಂದಿಗೆ ಸಂಜೆ ಒಂದು ಹೈಟೀ. ಸಾಮಾನ್ಯ ಸೆಪ್ಟೆಂಬರ್ 2ನೆಯ ವಾರದಲ್ಲಿ ಈ ಹಿಂದಿ ದಿನಾಚರಣೆಯನ್ನು ನಡೆಸುತ್ತಿದ್ದು. ನಾನು ಹಿಂದಿ ಕಮಿಟಿಯ ಸದಸ್ಯಳೂ ಆಗಿದ್ದರಿಂದ ಈ ದಿನಾಚರಣೆಯ ಕೆಲಸಗಳಲ್ಲಿ ತುಂಬಾ ಖುಷಿಯಿಂದ ಪಾಲ್ಗೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಿಂದಿ ದಿನದ ಆಚರಣೆಯ ನಿರೂಪಣೆಯನ್ನು ನಾನೇ ನಿರ್ವಹಿಸುತ್ತಿದ್ದೆ.ಒಮ್ಮೆ ಅನುರಾಧ ಅವರ ನೇತೃತ್ವದಲ್ಲಿ ವಿಮಾ ಸಪ್ತಾಹದಲ್ಲಿ ಗಾಡಿ ತೆಗೆದುಕೊಂಡು ಜಾಥಾ ಹೋಗಿದ್ದ ನೆನಪು ಸಹ ಇದೆ. ವಿಮಾ ಸಪ್ತಾಹದ ಒಂದು ನೋಟ ಅಲ್ಲದೆ ವಿಭಾಗೀಯ ಮಟ್ಟದಲ್ಲಿ ಸಿಬ್ಬಂದಿ ವರ್ಗದವರಿಗಾಗಿ ಹಿಂದಿ ಪ್ರಬಂಧ ಮತ್ತು ಪತ್ರಲೇಖನ ಸ್ಪರ್ಧೆಗಳು ನಡೆಸಲು ಆರಂಭಿಸಿದರು. ಮುಂಚೆಯೇ ನೋಂದಾಯಿಸಿಕೊಳ್ಳ ಬೇಕಿತ್ತು. ಸ್ಪರ್ಧೆಗೆ ಐದು ನಿಮಿಷ ಮುಂಚೆ ಇ-ಮೇಲ್ ಮುಖಾಂತರ ವಿಷಯಗಳು ಬರುತ್ತಿತ್ತು ಒಂದು ದಿನ ಪ್ರಬಂಧ ಸ್ಪರ್ಧೆ ಮತ್ತೊಂದು ದಿನ ಕಚೇರಿ ಕೆಲಸಕ್ಕೆ ಸಂಬಂಧ ಪಟ್ಟಂತೆ ನೋಟ್ ಮತ್ತು ಪತ್ರಲೇಖನಗಳು ಹಾಗೂ ವಿಮಾ ಪಾರಿಭಾಷಿಕ ಶಬ್ದಗಳ ಬಗ್ಗೆ ಕ್ವಿಜ್ ಇಷ್ಟು ಇರುತ್ತಿತ್ತು . ಸಾಮಾನ್ಯ ಪ್ರತಿ ವರ್ಷ ನಾನು ಈ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಮೊದಮೊದಲು ಎರಡರಲ್ಲೂ ಬಹುಮಾನ ಸಿಗುತ್ತಿತ್ತು. ನಂತರ ಯಾವುದಾದರೂ ಒಂದರಲ್ಲಿ ಮಾತ್ರ ಬಹುಮಾನ ಎಂದು ನಿಗದಿಪಡಿಸಿದರು. ಅಂತೂ ಭಾಗವಹಿಸಿದಾಗೆಲ್ಲ ಒಂದೊಂದು ಬಹುಮಾನ ಗೆದ್ದ ಖುಷಿ ನನ್ನದು. ಇದಕ್ಕೆ ನಗದು ಬಹುಮಾನ ಅದು ಸಹ ಒಳ್ಳೆಯ ಮೊತ್ತವೇ. ಮೊದಲ ಬಹುಮಾನ ೧೫00 ಎರಡನೆಯ ಬಹುಮಾನ ೧೨೦೦ ಹಾಗೂ ತೃತೀಯ ಬಹುಮಾನ ರೂ.೧೦೦೦. ಬರುತ್ತಿದ್ದ ಹಣದಲ್ಲಿ ಶಾಖೆಗೆ ಸಿಹಿ ಕೊಡಿಸಲು ಅರ್ಧ ಮೊತ್ತ ಖರ್ಚಾಗುತ್ತಿದ್ದು ಅದು ಬೇರೆ ವಿಚಾರ. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಎರಡನೆಯ ಬಾರಿ ವಾಹನ ಸಾಲ ತೆಗೆದುಕೊಂಡು ನನ್ನ ಪತಿಗೆ ಹೀರೋ ಹೋಂಡಾ ಗಾಡಿ ಕೊಡಿಸಿದ್ದು. ಸಾಲವಿಲ್ಲದೆ ನನ್ನ ಮೊಟ್ಟ ಮೊದಲ ಹೊಸ ದ್ವಿಚಕ್ರ ವಾಹನ ಸ್ಟ್ರೀಕ್ ಕೊಂಡಿದ್ದು ಸಹ ಅದಾಗಿ ಒಂದೆರಡು ತಿಂಗಳಿಗೇ… ಈ ವೇಳೆಗೆ ನನ್ನ ತಂಗಿ ಛಾಯಾಳಿಗೆ ಆಡಳಿತ ಅಧಿಕಾರಿ ಪದೋನ್ನತಿ ಸಿಕ್ಕಿ ದೂರದ ಧಾರವಾಡ ವಿಭಾಗದ ಹಾವೇರಿ ಶಾಖೆಗೆ ಹಾಕಿದ್ದರು. ಈಗಾಗಲೇ ಒಮ್ಮೆ ನಿರಾಕರಿಸಿದರಿಂದ ಈ ಪದೋನ್ನತಿ ಮತ್ತೆ ನಿರಾಕರಿಸುವ ಹಾಗೆ ಇರಲಿಲ್ಲ .ಹಾಗಾಗಿ ಅವಳು ಅದನ್ನು ಒಪ್ಪಿಕೊಂಡು ಹೋದಳು ಮತ್ತೆ ಕೆಲವೇ ದಿನಗಳಲ್ಲಿ ಅವಳ ಪತಿ ಪ್ರಸನ್ನ ಅವರಿಗೂ ಅದೇ ಶಾಖೆಗೆ ವರ್ಗ ದೊರೆಯಿತು. ನಾವು ಒಮ್ಮೆ ಹಾವೇರಿಗೆ ಹೋಗಿ ಅಲ್ಲಿ ಸುತ್ತಮುತ್ತಲ ಜಾಗಗಳನ್ನೆಲ್ಲ ನೋಡಿಕೊಂಡು ಒಂದೆರಡು ದಿನ ಇದ್ದು ಬಂದೆವು. ಅವಳಿದ್ದ ಹಾವೇರಿ ಶಾಖೆ ತುಂಬಾ ದೊಡ್ಡದು ಅಲ್ಲಿ ಸಾಲ ತೆಗೆದುಕೊಳ್ಳಲು ಬಂದವರಿಗೆ ಟೋಕನ್ ಕೊಟ್ಟು ಪ್ರತಿದಿನವೂ ನಗದು ಸಾಲ ವಿತರಿಸಲಾಗುತ್ತಿತ್ತು ಈ ರೀತಿ ವಿಶೇಷವಾಗಿ ಟೋಕನ್ ಮೂಲಕ ಸಾಲ ಕೊಡುವ ಶಾಖೆಗಳಲ್ಲಿ ಕರ್ನಾಟಕದಲ್ಲಿ ಅದೊಂದೇ ಅಂತೆ ಆಗ ಇದ್ದದ್ದು. ಈಗಂತೂ ನಗದು ಸಾಲ ಕೊಡುವ ಪದ್ಧತಿಯೇ ಇಲ್ಲ ಎಲ್ಲವೂ ನೆಫ್ಟ್ ಮೂಲಕ ಬ್ಯಾಂಕಿಗೆ ಹಾಕುವ ವ್ಯವಸ್ಥೆ. ಮತ್ತೊಂದು ಖುಷಿ ಇರುವ ಬೆಳವಣಿಗೆ ಎಂದರೆ ನಾವು ಮನೆಗೆ ಹೋಗುವ ದಾರಿಯಲ್ಲೇ ಕಚೇರಿಯ ಪಕ್ಕದ್ದಲ್ಲ ಪಕ್ಕದ ರಸ್ತೆಯಲ್ಲಿ ಜನನಿ ಟೆಕ್ಸ್ಟೈಲ್ ಎಂದು ಮನೆಯಲ್ಲಿಯೇ ಒಂದು ಅಂಗಡಿ ಆರಂಭವಾಗಿದ್ದು ನಮಗೆಲ್ಲ ಆಹ್ವಾನಪತ್ರಿಕೆ ಕೊಟ್ಟು ಹೋದರು. ಮುಖ್ಯ ಆಕರ್ಷಣೆ ಎಂದರೆ ಕಂತಿನಲ್ಲಿ ಬಟ್ಟೆ ತೆಗೆದುಕೊಳ್ಳುವ ಅವಕಾಶ. ಹೊಸ ಸ್ಟಾಕ್ ಬಂದಾಗ ಯಾರಿಗಾದರೂ ಒಬ್ಬರಿಗೆ ಫೋನ್ ಮಾಡಿ ಹೇಳುವರು. ಸಂಜೆ ಮನೆಗೆ ಹೋಗುತ್ತಾ ನೋಡಿಕೊಂಡು ತೆಗೆದುಕೊಂಡು ಹೋಗುವುದು. ಅದರ ಕಂತು ಕಟ್ಟಲು ಹೋದಾಗ ಮತ್ತೆ ತೆಗೆದುಕೊಳ್ಳುವುದು. ಅಂತೂ ಅವರು ಆ ಮನೆ ಬಿಟ್ಟು ಬೇರೆ ಕಡೆ ಹೋಗುವ ತನಕ ನಮ್ಮ ಅಕೌಂಟ್ ಅವರಲ್ಲಿ ಇದ್ದೇ ಇತ್ತು ಅಂದರೆ ನಮ್ಮ ಬಟ್ಟೆಯ ವ್ಯಾಮೋಹ ಅರ್ಥವಾಗಬಹುದು. ಸೀರೆ ಚೂಡಿದಾರ್ ಎಲ್ಲವೂ ಅವರ ಬಳಿಯೇ ತೆಗೆದುಕೊಳ್ಳುತ್ತಿದ್ದುದು. ೧೦೦೦೦ದ ರೇಷ್ಮೆ ಸೀರೆಯಿಂದ ಹಿಡಿದು 300 ರೂಗಳ ಸಾಮಾನ್ಯ ಸೀರೆಯವರೆಗೂ ಅಲ್ಲಿ ದೊರೆಯುತ್ತಿತ್ತು ಮತ್ತು ನಾವೆಲ್ಲ ಅಲ್ಲಿಗೆ ಖಾಯಂ ಗ್ರಾಹಕರು. ಹಳೆಯ ಶಾಖೆಯ ಪಕ್ಕ ಇದ್ದ ಕನಕಗಿರಿ ಟೆಕ್ಸ್ ಟೈಲ್ಸ್ ನಲ್ಲಿ ಆ ಶಾಖೆಯಲ್ಲಿದ್ದಾಗ ತುಂಬಾ ಕೊಳ್ಳುತ್ತಿದ್ದೆವು. ಈ ಕಟ್ಟಡಕ್ಕೆ ಬಂದಮೇಲೆ ಅಲ್ಲಿ ಹೋಗಿ ಕೊಳ್ಳುವುದು ಕಡಿಮೆಯಾಯಿತು. ಆದರೆ ಈ ಹೊಸ ಅಂಗಡಿ ಆ ಕೊರತೆ ನಿವಾರಿಸಿತ್ತು. (ಮುಂದುವರೆಯುವುದು) ಸುಜಾತಾ ರವೀಶ್
ಧಾರಾವಾಹಿ ಸಂಗಾತಿ-34 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್ ಚೇತನ ರಾಷ್ಟ್ರ ಐಕ್ಯತೆ -ಅಖಂಡ ಭಾರತ *ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶವನ್ನು ಭಾಷಾವಾರು ಪ್ರಾಂತಗಳಾಗಿ ಪುನರ್ರಚಿಸುವ ಬೇಡಿಕೆ ಬಲವಾಗಿತ್ತು. ಕನ್ನಡಿಗರು ಕೂಡ ಎಲ್ಲ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಿಸಬೇಕು ಎಂದು ಹೋರಾಟ ನಡೆಸುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಒಂದೆಡೆ ಪಾಕಿಸ್ತಾನದ ವಿಭಜನೆಯ ಪರಿಣಾಮಗಳು, ಮತ್ತೊಂದೆಡೆ ಬಂಗಾಳದ ವಿಭಜನೆ ಮತ್ತು ಗಡಿಭಾಗದ ಸಮಸ್ಯೆಗಳು, ಇನ್ನೊಂದೆಡೆ ಗೋವಾ ವಿಮೋಚನೆಗಾಗಿ ಹೋರಾಟ ನಡೆದಿದ್ದವು.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ರಾಜಕೀಯ ಅಶಾಂತಿ. ಇವೆಲ್ಲವೂ ಭಾರತದ ಏಕತೆಗೆ ಸವಾಲಾಗಿದ್ದವು.ಇಂತಹ ಸಂದರ್ಭಗಳಲ್ಲಿ ಕೇವಲ ಭಾಷೆಯ ಆಧಾರದ ಮೇಲೆ ಪರಸ್ಪರ ಸಂಘರ್ಷ ಮಾಡುವುದು ದೇಶದ ಹಿತಕ್ಕೆ ಮಾರಕವಾಗಬಹುದು ಎಂಬುದು ಜಯದೇವಿ ತಾಯಿಯವರ ಚಿಂತನೆಯಾಗಿತ್ತು .ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಗಡಿಗಳು, ರಾಷ್ಟ್ರೀಯ ಏಕತೆ, ಪ್ರಾದೇಶಿಕ ಸಮಸ್ಯೆಗಳು ಮತ್ತು ಜನರ ಭದ್ರತೆ ಮುಂತಾದ ಅನೇಕ ಪ್ರಶ್ನೆಗಳು ಎದುರಾಗಿದ್ದವು.ಇಂತಹ ಸಮಯದಲ್ಲಿ “ನನ್ನ ಭಾಷೆ ಶ್ರೇಷ್ಠ, ನಿನ್ನ ಭಾಷೆ ಕಡಿಮೆ” ಎಂಬ ರೀತಿಯ ಭಾಷಾ ವೈಷಮ್ಯ ಬೆಳೆಸಿದರೆ, ಅದು ದೇಶದ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಭಾಷೆ ನಮ್ಮ ಅಭಿಮಾನ ಮತ್ತು ಸಂಸ್ಕೃತಿಯ ಸಂಕೇತವಾಗಿರಬೇಕು….ಸಂಘರ್ಷದ ಕಾರಣವಾಗಬಾರದು ಎಂಬ ಸಂದೇಶವನ್ನು ಅವರು ನೀಡಿದರು.ಭಾಷೆ ಮುಖ್ಯ, ಆದರೆ ದೇಶದ ಏಕತೆ ಇನ್ನೂ ಮುಖ್ಯ ಎಂದರು. ಕನ್ನಡಿಗರಿಗೆ ತಮ್ಮದೇ ಆದ ಏಕೀಕೃತ ಕರ್ನಾಟಕ ಬೇಕು.ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಬೇಕು……ಆದರೆ ಅದಕ್ಕಾಗಿ ಇತರ ಭಾಷೆಯ ಜನರನ್ನು ದ್ವೇಷಿಸಬಾರದು.ಭಾಷೆಯ ಹೆಸರಿನಲ್ಲಿ ಜಗಳ, ದ್ವೇಷ ಮತ್ತು ವಿಭಜನೆ ಉಂಟಾಗಬಾರದು. ಎಲ್ಲಕ್ಕಿಂತ ಮೊದಲು ನಾವು ಭಾರತೀಯರು ಎಂಬ ರಾಷ್ಟ್ರೀಯ ಭಾವನೆ ಇರಬೇಕು.ಅಂದರೆ “ಕನ್ನಡವನ್ನು ಪ್ರೀತಿಸಿ, ಆದರೆ ಇತರ ಭಾಷೆಗಳನ್ನು ದ್ವೇಷಿಸಬೇಡಿ” ಎಂಬ ಉದಾತ್ತ ಚಿಂತನೆ ಅವರ ಮಾತಿನಲ್ಲಿ ಕಾಣಿಸುತ್ತದೆ. “ದೇಶದ ಐಕ್ಯತೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಮುಖ್ಯ” ದೇಶದ ಸ್ವಾಭಿಮಾನ, ರಾಷ್ಟ್ರೀಯ ಏಕತೆ, ಸಾರ್ವಭೌಮತ್ವ ಮತ್ತು ಒಗ್ಗಟ್ಟು.ದೇಶವು ಹೊರಗಿನ ಮತ್ತು ಒಳಗಿನ ಹಲವು ಸವಾಲುಗಳನ್ನು ಎದುರಿಸುತ್ತಿರುವಾಗ, ಜನರು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಲ್ಲಿ ಸಿಲುಕಿಕೊಳ್ಳದೆ ರಾಷ್ಟ್ರದ ಹಿತವನ್ನು ಮೊದಲ ಸ್ಥಾನದಲ್ಲಿ ಇಡಬೇಕು ಎಂದು ಅವರು ತಿಳಿಸಿದರು. ಒಂದು ಮನೆಯಲ್ಲಿರುವವರು ಬೇರೆ ಬೇರೆ ಅಭಿಪ್ರಾಯ ಹೊಂದಿದ್ದರೂ ಮನೆ ಒಂದಾಗಿರುವುದು ಮುಖ್ಯ. ಅದೇ ರೀತಿ ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಬಂಗಾಳಿ ಮುಂತಾದ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದರೂ ಭಾರತ ಎಂಬ ರಾಷ್ಟ್ರದ ಏಕತೆ ಉಳಿಯುವುದು ಅತ್ಯಂತ ಮುಖ್ಯ.”ಎಂದು ತಮ್ಮ ಭಾಷಣದಲ್ಲಿ ಹೇಳುತಿದ್ದರು. ಜಯದೇವಿ ತಾಯಿಯವರ ಚಿಂತನೆ ಇಂದಿಗೂ ಬಹಳ ಪ್ರಸ್ತುತವಾಗಿದೆ. ಭಾಷೆ ನಮ್ಮ ಗುರುತು, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ. ಅದನ್ನು ಗೌರವಿಸಬೇಕು ಮತ್ತು ಬೆಳೆಸಬೇಕು. ಆದರೆ ಭಾಷೆಯ ಹೆಸರಿನಲ್ಲಿ ಮತ್ತೊಬ್ಬರನ್ನು ಕೀಳಾಗಿ ಕಾಣುವುದು ಅಥವಾ ದ್ವೇಷಿಸುವುದು ಸರಿಯಲ್ಲ.ಭಾಷಾ ವೈವಿಧ್ಯತೆ ಭಾರತದ ಶಕ್ತಿ….ರಾಷ್ಟ್ರೀಯ ಏಕತೆ ಭಾರತದ ಅಸ್ತಿತ್ವ. “ಭಾಷೆಯನ್ನು ಪ್ರೀತಿಸೋಣ, ಭಾಷಾ ಸಂಸ್ಕೃತಿಯನ್ನು ಉಳಿಸೋಣ…”ಎನ್ನುವರು. ಇದು ಕರ್ನಾಟಕ ಏಕೀಕರಣದ ಹೋರಾಟದಲ್ಲಿದ್ದರೂ ವಿಶಾಲವಾದ ಭಾರತೀಯ ರಾಷ್ಟ್ರೀಯತೆಯನ್ನು ಮರೆಯದ ಜಯದೇವಿ ತಾಯಿಯವರ ದೂರದೃಷ್ಟಿಯನ್ನು ತೋರಿಸುತ್ತದೆ. ಪಾಕಿಸ್ತಾನದವರು ಬಂಗಾಲದ ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳ ಕಾಲ ಹವ್ಯಾಹಾತವಾಗಿ ಸತತ ಆಕ್ರಮಣ ಮಾಡಿದರು ಇಂತಹ ಅಮಾನುಷ ಘಟನೆಯನ್ನು ಪ್ರತಿಭಟಿಸಿ ಅಲ್ಲಲ್ಲಿ ಸಭೆಗಳು ನಡೆದವು ಸೊಲ್ಲಾಪುರದಲ್ಲಿಯೂ ಸರ್ವ ಪಕ್ಷಿಯ ಬಹಿರಂಗ ಸಭೆ ನಡೆಯಿತು ಈ ಸಭೆಗೆ ಸ್ತ್ರೀ ಪುರುಷರು ಬಹುಸಂಖ್ಯಾದಲ್ಲಿ ಉಪಸ್ಥಿತರಿದ್ದರು ಜಯದೇವಿ ತಾಯಿಯವರು ಮಾಡಿದ ಭಾಷಣ ಬಹಳ ಪ್ರಭಾವ ಬೀರಿತ್ತು ಎಲ್ಲ ಪತ್ರಿಕೆಗಳಲ್ಲಿ ವರದಿಯಾದವು. ಬಂಗಾಳದಲ್ಲಿ ನಡೆದ ಅಮಾನುಷ ಹಿಂಸಾಚಾರವನ್ನು ಕಂಡು ಅನುಭವಿಸಿದ ಆಘಾತ, ನೋವು, ಆಕ್ರೋಶ ಮತ್ತು ಮಾನವೀಯ ಕಳಕಳಿ ಅತ್ಯಂತ ತೀವ್ರವಾಗಿ ವ್ಯಕ್ತಪಡಿಸಿದ್ದಾರೆ. “ಬೆಂದಿದೆ ಬಂಗಾಲ” ಕವನ ರಚನೆ ಮಾಡಿದರು*“ಬೆಂದಿದೆ ಬಂಗಾಲ”*“ಹಳ್ಳಿ ಪಟ್ಟಣಗಳು ಸುಟ್ಟು ಬೂದಿ ಮಾಡಿದರು,ಹೆಣಗಳ ರಾಶಿಯೊಟ್ಟಿದರು”“ಕಾಮಾಂಧರು ಕೋಮಲಾಂಗಿಯರ ಶೀಲಸೂರೆಗೈದರು”ಏನಿದ್ದ ಹೊಂಗನಾಡು? ಏನಾಯಿತು?”ಭಾರತೀಯರ ಬಂಗಾಳಿಗಳ ನರನಾಡಿಲಿ ಹರಿವರಕ್ತ ನೀರಾಯಿತೇ……….!!! ಈ ಸಾಲುಗಳಲ್ಲಿ ಬಂಗಾಳದಲ್ಲಿ ನಡೆದ ಭೀಕರ ಹಿಂಸಾಚಾರದ ಚಿತ್ರಣವಿದೆ. ಜನರು ನೆಮ್ಮದಿಯಿಂದ ಬದುಕುತ್ತಿದ್ದ ಹಳ್ಳಿಗಳು ಮತ್ತು ಪಟ್ಟಣಗಳು ಬೆಂಕಿಗೆ ಆಹುತಿಯಾಗಿ ನಾಶವಾದವು. ಜೀವಂತ ಜನರ ವಾಸಸ್ಥಳಗಳು ಸುಟ್ಟು ಬೂದಿಯಾದವು. ಎಲ್ಲೆಡೆ ಸಾವು-ನೋವು ತುಂಬಿ, ಹೆಣಗಳ ರಾಶಿ ಕಾಣುವಂತಹ ದಾರುಣ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಕವಯಿತ್ರಿ ನೋವಿನಿಂದ ಹೇಳುತ್ತಾರೆ.ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರ ದುಸ್ಥಿತಿಯನ್ನು ಚಿತ್ರಿಸಿದ್ದಾರೆ. ಯುದ್ಧ, ಕೋಮು ಹಿಂಸೆ ಅಥವಾ ರಾಜಕೀಯ ಸಂಘರ್ಷದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು ಅತ್ಯಂತ ಅಮಾನುಷವಾದದ್ದು. ಇಂತಹ ಘಟನೆಗಳು ಅವರ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿವೆ. ಮಹಿಳೆಯರ ಗೌರವ ಮತ್ತು ಮಾನವೀಯತೆಯನ್ನೇ ತುಳಿದುಹಾಕಿದ ಕ್ರೌರ್ಯವನ್ನು ಅವರು ಖಂಡಿಸಿದ್ದಾರೆ. ಈ ಪ್ರಶ್ನೆಗಳಲ್ಲಿ ಕವಯಿತ್ರಿಯ ತಳಮಹ, ದುಃಖ ಮತ್ತು ಅಸಹಾಯಕತೆ ವ್ಯಕ್ತವಾಗುತ್ತದೆ. ಒಮ್ಮೆ ಸಮೃದ್ಧಿ, ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ಕೂಡಿದ್ದ ಬಂಗಾಳವು ಇಂತಹ ರಕ್ತಪಾತದ ನೆಲವಾಗಿ ಹೇಗೆ ಬದಲಾಯಿತು? ಜನರು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿದ್ದ ನಾಡಿನಲ್ಲಿ ಇಷ್ಟೊಂದು ದ್ವೇಷ ಮತ್ತು ಹಿಂಸೆ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯ ಕೇಳಿದರು.ಇದು ಕೇವಲ ಬಂಗಾಳದ ದುಃಖವಲ್ಲ ಇಡೀ ಮಾನವ ಸಮಾಜದ ಅಧಃಪತನದ ಬಗ್ಗೆ ಅವರಿಗೆ ಆತಂಕವಿತ್ತು. *ಜಾತಿ ಸೂತಕವಳಿದು ನೀತಿಯೇ ಹಿರಿದೆಂದು ಪ್ರೀತಿಯಿಂದ ಎಲ್ಲರನ್ನು ಕಾಣುತ ಇರಬೇಕುಪತಿತ ಪಾವನ ನೀವು ನಾವಾಗಬೇಕು* ಮತವು ಮನುಷ್ಯನಿಗೆ ನೀತಿ, ದಯೆ, ಪ್ರೀತಿ ಮತ್ತು ಸಹಬಾಳ್ವೆ ಕಲಿಸಬೇಕೇ ಹೊರತು ದ್ವೇಷ ಮತ್ತು ಹಿಂಸೆಯನ್ನು ಕಲಿಸಬಾರದು. ಆದರೆ ಮತದ ಹೆಸರಿನಲ್ಲಿ ಮನುಷ್ಯನೇ ಮನುಷ್ಯನ ಶತ್ರುವಾದಾಗ, ಧರ್ಮದ ನಿಜವಾದ ಉದ್ದೇಶವೇ ನಾಶವಾಗುತ್ತದೆ… ಬಂಗಾಳಿಗಳ ಮೇಲೆ ನಡೆದ ಹತ್ಯಾಕಾಂಡದ ತೀವ್ರತೆಯನ್ನು ವ್ಯಕ್ತಪಡಿಸುತ್ತಾರೆ. “ಬೆಂದಿದೆ ಬಂಗಾಲ” ಪದ್ಯದಲ್ಲಿ ಜಯದೇವಿ ತಾಯಿಯವರು ಮೂರು ಪ್ರಮುಖ ವಿಚಾರಗಳನ್ನು ಅತ್ಯಂತ ಗಾಢವಾಗಿ ವ್ಯಕ್ತಪಡಿಸಿದ್ದಾರೆಹಿಂಸಾಚಾರ ಮತ್ತು ಹತ್ಯಾಕಾಂಡದ ವಿರುದ್ಧದ ತೀವ್ರ ಪ್ರತಿಭಟನೆ ಕೋಮು ದ್ವೇಷದ ವಿರುದ್ಧದ ಎಚ್ಚರಿಕೆ.ಶಾಂತಿ, ಸಹೋದರತ್ವ ಮತ್ತು ಮಾನವೀಯತೆಯ ಪರವಾದ ದೃಢವಾದ ನಿಲುವು.ಹೀಗಾಗಿ ಈ ಪದ್ಯವನ್ನು ಬಂಗಾಳದ ದುರಂತದ ವರ್ಣನೆ ಆದರೂ ಇದು “ಧರ್ಮ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡಬಾರದು…. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡ ಧರ್ಮ” ಎಂಬ ಜಯದೇವಿ ತಾಯಿಯವರ ಉದಾತ್ತ ಸಂದೇಶವನ್ನು ಸಾರುವ ಕವನವಾಗಿದೆ. ಇನ್ನೊಂದೆಡೆ ಭಾರತೀಯರ ಮೇಲೆ ಚೀನಿಯರು ಅಕ್ರಮಣ ನಡೆಯಿತು ಆ ಹೊತ್ತಿಗೆ ಈ ದೇಶದಲ್ಲಿ ಹಲವಾರು ಆಂತರಿಕ ಸಮಸ್ಯೆಗಳು ಎದಿದ್ದವು ಅದನ್ನೇ ದೊಡ್ಡದು ಮಾಡದೇ ದೇಶದ ಭದ್ರತೆಯ ಕಡೆಗೆ ಗಮನವಿಡಲು ಕರೆಕೊಟ್ಟರು .ಗಡಿ ವಿವಾದದ ಮಧ್ಯೆ ಭಾಷಾವಾರು ಪ್ರಾಂತದ ಚಳುವಳಿ ಬೇಡವೆಂದು ಜನತೆಗೆ ಮನವಿ ಮಾಡಿದರು. ರಾಜಕಾರಣಿಗಳು ಇಂಥ ಅವಕಾಶವನ್ನು ದುರುಪಯೋಗ ಪಡಿಸಿ ಕೊಳ್ಳಬಾರದು ಎಂದು ಎಚ್ಚರಿಕೆ ಕೊಟ್ಟರು ರಾಜ್ಯಕ್ಕಿಂತ ರಾಷ್ಟ್ರ ಚಿಂತೆ ಮುಖ್ಯ ಪರಸ್ಥಿತಿಯನ್ನು ಕೆಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಲು ಹೇಳಿದರು. ಇನ್ನೊಂದಡೆ ಗೋವಾ ದೀವ ದಮನ ಪ್ರದೇಶಗಳು ಪೋರ್ಚುಗೀಸರ ವಶವಾಗಿದ್ದವು ದೇಶ ಬಾಂಧವರು ಪರಕೀಯರ ಕೈಯಲ್ಲಿ ತೊಳಲಾಡುವುದು ಹೇಳಿದರು ಶಾಂತಿ ರೀತಿಯ ಹೋರಾಟಕ್ಕೆ ಬೆಂಬಲ ಸೂ ಭಾಷಿಕವಾಗಿ ಮತ್ತು ಸಂಸ್ಕೃತಿಕವಾಗಿ ಕರ್ನಾಟಕಕ್ಕೆ ಉಳಿಸಿಕೊಳ್ಳುವುದು ಸೂಕ್ತ ಪ್ರಯತ್ನಗಳು ಸಾಗಬೇಕು ಮುಂದೋರಣೆಯಿಂದ ಕಾರ್ಯಾಚರಣೆ ಚಟುವಟಿಕೆ ತೊಡಗಬೇಕು ಗತ ವ್ಯುಭವದ ಮೈಸೂರು ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ನಿರ್ವಹಿಸಿದ ಹೊರತು ಅಧಿಕಾರದಲ್ಲಿ ಮುಂದುವರಿಯಲು ನಮ್ಮ ಮುಖಂಡರಿಗೆ ಯಾವ ನೈತಿಕ ಬಲವೂ ಇಲ್ಲ ತಮ್ಮ ಹೇಳಿಕೆಗಳ ಚಾಟಿ ಏಟಿನಿಂದ ಹೀಗೆ ಖಂಡನೆ ಮೇಲಿಂದ ಮೇಲೆ ಮಾಡುತ್ತಿದ್ದರು. ಮಹಾರಾಷ್ಟ್ರವೂ ಗೋವಾ ತನಗೆ ಬೇಕೆಂದು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲು ಕೇಳಿ ಕೊಂಡಿತ್ತು.ಕರ್ನಾಟಕವು ತನಗೆ ಬೇಕೆಂದು ಬೇಡಿಕೆ ಮುಂದಿಟ್ಟಿತ್ತು .ಅಖಂಡ ಕರ್ನಾಟಕ ಏಕೀಕರಣ ಸಂಘದ ಉಪಾಧ್ಯಕ್ಷರಾಗಿ ಜಯದೇವಿ, ತಾಯಿಯವರು ಮೈಸೂರು ಗೋವಾ ಸಂಸ್ಕೃತಿಕ ಸಂಬಂಧ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಎಚ್ಎಫ್ ಕಟ್ಟಿಮನಿ ಮಾಸ್ತರು ,ಎಸ್ ನಿಜಲಿಂಗಪ್ಪ ,ಕೆ ಎಸ್ ಪಾಟೀಲ ಇವರೆಲ್ಲರೂ ಗೋವೆಯನ್ನು ಕರ್ನಾಟಕಕ್ಕೆ ಪಡೆಯುವ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಾಯಿಯವರು ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ಏಕೀಕರಣದ ಕನಸನ್ನು ಹೊತ್ತಿದ್ದರು. ಜೊತೆ ಜೊತೆಗೆ ಅವರು ಯಾವಾಗಲೂ ರಾಷ್ಟ್ರದ ಐಕ್ಯತೆ ಮತ್ತು ಅಖಂಡ ಭಾರತದ ಕನಸು ಜಯದೇವಿ ತಾಯಿಯವರ ಹೃದಯದಲ್ಲಿ ಸದಾ ಧಗಧಗಿಸುವ ಜ್ವಾಲೆಯಂತಿತ್ತು. ಜಾತಿ, ಮತ, ಭಾಷೆ, ಪ್ರಾಂತಗಳ ಎಲ್ಲ ಭೇದಭಾವಗಳನ್ನು ಮೀರಿ, “ನಾವು ಭಾರತೀಯರು” ಎಂಬ ಏಕೈಕ ಭಾವನೆಯೇ ರಾಷ್ಟ್ರದ ನಿಜವಾದ ಶಕ್ತಿ ಎಂಬ ಅಚಲ ನಂಬಿಕೆಯಿಂದ ಅವರು ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಸಮರ್ಪಿಸಿಕೊಂಡರು.ದೇಶದ ಏಕತೆ ಹೃದಯಗಳ ಸಂಗಮ, ಭಾವನೆಗಳ ಸಮನ್ವಯ ಮತ್ತು ರಾಷ್ಟ್ರಪ್ರೇಮದ ಅಖಂಡ ಸಂಕಲ್ಪ ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕ ಸಾರಿದರು. ವಿಭಜನೆಯ ವಿಷಬೀಜಗಳು ಮೊಳಕೆಯೊಡೆಯುತ್ತಿದ್ದ ಸಂದರ್ಭದಲ್ಲಿಯೂ, ಜನಮನಗಳಲ್ಲಿ ದೇಶಪ್ರೇಮದ ಕಿಡಿಯನ್ನು ಹೊತ್ತಿಸಿ, ಒಗ್ಗಟ್ಟಿನ ಜ್ಯೋತಿಯನ್ನು ಬೆಳಗಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸಿದರು. ಜಯದೇವಿ ತಾಯಿಯವರ ಜೀವನ ನಮಗೆ ಸಾರುವ ಸಂದೇಶ ಒಂದೇ….ಭಾರತದ ಅಖಂಡತೆ ನಮ್ಮ ಹೆಮ್ಮೆ, ರಾಷ್ಟ್ರದ ಐಕ್ಯತೆ ನಮ್ಮ ಹೊಣೆ, ದೇಶಪ್ರೇಮ ನಮ್ಮ ಪರಮ ಕರ್ತವ್ಯ. ತಾಯಿನಾಡು ನುಡಿ ನಮ್ಮ ಗೌರವ ಎಂದು ಸಾರಿದರು.ರಾಷ್ಟ್ರಕ್ಕಾಗಿ ಸಮರ್ಪಿತವಾದ ಅವರ ಜೀವನ ಸದಾಕಾಲವೂ ದೇಶಭಕ್ತಿಯ ದಾರಿಯಲ್ಲಿ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಉಳಿಯುತ್ತದೆ. ಸವಿತಾ ದೇಶಮುಖ
ಅಂಕಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಹಾಮಾನವತಾವಾದಿ ಶರಣೆ ಮದರ್ ಥೆರೇಸಾ ಬಡವರ ನಿರ್ಗತಿಕರ ರೋಗಿಗಳ ಪಾಲಿನ ದೇವತೆ ಮಾನವತಾವಾದಿ ಮದರ್ ಥೆರೇಸಾ ಅವರ ಜೀವನವೇ ಒಂದು ದಿವ್ಯಾವದರ್ಶನ. ಮದರ್ ಥೆರೇಸಾ ಅವರು ಜಗತ್ತಿನಾದ್ಯಂತ ದಯೆ, ಕರುಣೆ ಮತ್ತು ನಿಸ್ವಾರ್ಥ ಸೇವೆಗೆ ಹೆಸರಾದ ಒಬ್ಬ ಮಹಾನ್ ಮಾನವತಾವಾದಿ. ಅವರು ತಮ್ಮ ಇಡೀ ಜೀವನವನ್ನು ಅನಾಥರು, ರೋಗಿಗಳು ಮತ್ತು ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ಬಡವರ ಸೇವೆಗಾಗಿ ಮುಡಿಪಾಗಿಟ್ಟರು. ೧. ಆರಂಭಿಕ ಜೀವನ ಮತ್ತು ಬಾಲ್ಯ ನಿಜವಾದ ಹೆಸರು: ಆಗ್ನೆಸ್ ಗೊಂಕ್ಷಾ ಬೊಜಾಕ್ಸಿಯು.ಜನನ: ಆಗಸ್ಟ್ ೨೬, ೧೯೧೦ ರಂದು ಉತ್ತರ ಮ್ಯಾಸಿಡೋನಿಯಾದ ಸ್ಕೋಪ್ಜೆಯಲ್ಲಿ ಜನಿಸಿದರು. ಅಲ್ಬೇನಿಯಾ ಕುಟುಂಬ: ಇವರ ಪೋಷಕರು ನಿಕೊಲಾ ಮತ್ತು ಡ್ರಾನಾಫಿಲ್ ಬೊಜಾಕ್ಸಿಯು ಅಲ್ಬೇನಿಯಾ. ಇವರ ಕುಟುಂಬವು ಬಡವರ ಬಗ್ಗೆ ಅಪಾರ ದಯೆ ಹೊಂದಿತ್ತು. ಧಾರ್ಮಿಕ ಕರೆ: ಆಗ್ನೆಸ್ ಅವರಿಗೆ ಕೇವಲ ೧೨ನೇ ವಯಸ್ಸಿನಲ್ಲಿಯೇ ಧಾರ್ಮಿಕ ಜೀವನವನ್ನು ನಡೆಸುವ ಮತ್ತು ಬಡವರ ಸೇವೆ ಮಾಡುವ ಬಯಕೆ ಮೂಡಿತ. ೨. ಭಾರತಕ್ಕೆ ಆಗಮನ ಮತ್ತು ಶಿಕ್ಷಕಿಯಾಗಿ ಸೇವೆ ೧೮ನೇ ವಯಸ್ಸಿನಲ್ಲಿ ಅವರು ‘ಸಿಸ್ಟರ್ಸ್ ಆಫ್ ಲೊರೆಟೊ’ ಸಂಸ್ಥೆಯನ್ನು ಸೇರಿದರು.೧೯೨೯ರಲ್ಲಿ ಭಾರತಕ್ಕೆ ಬಂದ ಅವರು, ಕೋಲ್ಕೊತ್ತಾದ (ಕಲ್ಕತ್ತಾ) ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಭೂಗೋಳಶಾಸ್ತ್ರ ಶಿಕ್ಷಕಿಯಾಗಿ ಸೇವೆ ಆರಂಭಿಸಿದರು. ನಂತರ ಅಲ್ಲಿಯೇ ಮುಖ್ಯೋಪಾಧ್ಯಾಯಿನಿಯಾಗಿಯೂ ಕಾರ್ಯನಿರ್ವಹಿಸಿದರು ೩. ಮಿಷನರೀಸ್ ಆಫ್ ಚಾರಿಟಿ ಸ್ಥಾಪನೆ ೧೯೪೬ರಲ್ಲಿ ಕೋಲ್ಕೊತ್ತಾದ ಕೊಳೆಗೇರಿಗಳಲ್ಲಿದ್ದ ಬಡವರ ಕಷ್ಟಗಳನ್ನು ಕಂಡು, ಅವರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡಲು ತೀರ್ಮಾನಿಸಿದರು. ೧೯೫೦ರಲ್ಲಿ ವ್ಯಾಟಿಕನ್‌ನ ಅನುಮತಿಯೊಂದಿಗೆ “ಮಿಷನರೀಸ್ ಆಫ್ ಚಾರಿಟಿ” ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು.ಈ ಸಂಸ್ಥೆಯ ಸನ್ಯಾಸಿನಿಯರು ನೀಲಿ ಅಂಚಿನ ಸರಳ ಬಿಳಿ ಸೀರೆಯನ್ನು ತಮ್ಮ ಸಮವಸ್ತ್ರವಾಗಿ ಧರಿಸತೊಡಗಿದರು. ೧೯೫೨ರಲ್ಲಿ ಸಾಯುವ ಸ್ಥಿತಿಯಲ್ಲಿದ್ದವರಿಗಾಗಿ ‘ನಿರ್ಮಲ್ ಹೃದಯ’ ಎಂಬ ಧರ್ಮಶಾಲೆಯನ್ನು ಆರಂಭಿಸಿದರು. ಇಲ್ಲಿ ನಿರಾಶ್ರಿತರು ಘನತೆಯಿಂದ ಕೊನೆಯುಸಿರೆಳೆಯಲು ಆಸರೆಯಾಗುತ್ತಿದ್ದರು. ೪. ಪ್ರಶಸ್ತಿ ಮತ್ತು ಗೌರವಗಳು ಅವರ ನಿಸ್ವಾರ್ಥ ಮಾನವೀಯ ಸೇವೆಯನ್ನು ಗುರುತಿಸಿ ಜಗತ್ತಿನಾದ್ಯಂತ ನೂರಾರು ಪ್ರಶಸ್ತಿಗಳನ್ನು ನೀಡಲಾಯಿತು: ನೊಬೆಲ್ ಶಾಂತಿ ಪ್ರಶಸ್ತಿ (೧೯೭೯). ಭಾರತ ರತ್ನ ಪ್ರಶಸ್ತಿ (೧೯೮೦) – ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ (೧೯೬೨) ೫. ಕೊನೆಯ ದಿನಗಳು ಮತ್ತು ಸಂತ ಪದವಿ ನಿರಂತರ ಕಠಿಣ ಶ್ರಮ ಮತ್ತು ವಯೋಸಹಜ ಕಾಯಿಲೆಗಳಿಂದಾಗಿ ಮದರ್ ಥೆರೇಸಾ ಅವರು ಸೆಪ್ಟೆಂಬರ್ ೫, ೧೯೯೭ ರಂದು ಕೋಲ್ಕೊತ್ತಾದಲ್ಲಿ ನಿಧನರಾದರು.ಭಾರತ ಸರ್ಕಾರವು ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿತು. ಸೆಪ್ಟೆಂಬರ್ ೪, ೨೦೧೬ ರಂದು ವ್ಯಾಟಿಕನ್‌ನ ಪೋಪ್ ಫ್ರಾನ್ಸಿಸ್ ಅವರು ಮದರ್ ಥೆರೇಸಾ ಅವರಿಗೆ ‘ಸಂತ’ (Saint Teresa of Calcutta) ಪದವಿಯನ್ನು ನೀಡಿ ಗೌರವಿಸಿದರು. ಮದರ್ ಥೆರೇಸಾ ಅವರ ನಿಸ್ವಾರ್ಥ ಸೇವೆ, ಕರುಣೆ ಮತ್ತು ಮಾನವೀಯತೆಯನ್ನು ಭಾರತದ ರಾಷ್ಟ್ರೀಯ ನಾಯಕರು, ಕವಿಗಳು ಮತ್ತು ವಿಮರ್ಶಕರು ವಿಭಿನ್ನ ಹಾಗೂ ಗೌರವಾನ್ವಿತ ದೃಷ್ಟಿಕೋನಗಳಿಂದ ಕಂಡಿದ್ದಾರೆ. ಅವರ ಬಗ್ಗೆ ಪ್ರಮುಖರ ಅಭಿಪ್ರಾಯಗಳು ನೋಡೋಣ: 1. ರಾಷ್ಟ್ರೀಯ ನಾಯಕರ ಅಭಿಪ್ರಾಯ ಭಾರತದ ರಾಜಕೀಯ ನಾಯಕರು ಮದರ್ ಥೆರೇಸಾ ಅವರನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಮತ್ತು ಕರುಣೆಯ ಸಾಕಾರ ರೂಪವಾಗಿ ನೋಡಿದ್ದಾರೆ. ಮಹಾತ್ಮ ಗಾಂಧಿ ಮತ್ತು ಅವರ ತತ್ವಗಳ ಹೋಲಿಕೆ: ಅನೇಕ ನಾಯಕರು ಮದರ್ ಥೆರೇಸಾ ಅವರ ಸೇವೆಯನ್ನು ಗಾಂಧೀಜಿಯವರ “ದರಿದ್ರ ನಾರಾಯಣ” (ಬಡವರಲ್ಲಿ ದೇವರನ್ನು ಕಾಣುವುದು) ತತ್ವಕ್ಕೆ ಹೋಲಿಸಿದ್ದಾರೆ. ಇಂದಿರಾ ಗಾಂಧಿ: “ಮದರ್ ಥೆರೇಸಾ ಅವರನ್ನು ಭೇಟಿಯಾಗುವುದೆಂದರೆ ನಂಬಿಕೆ, ಕರುಣೆ ಮತ್ತು ದೈವಿಕ ಶಕ್ತಿಯನ್ನು ಹತ್ತಿರದಿಂದ ಅನುಭವಿಸಿದಂತೆ. ಅವರು ಮಾತನಾಡುವುದು ಕಡಿಮೆ, ಮಾಡುವುದು ಹೆಚ್ಚು” ಎಂದು ಹೇಳಿದ್ದರು. ಡಾ. ಎಸ್. ರಾಧಾಕೃಷ್ಣನ್: “ಅವರು ಜಗತ್ತಿನ ಅತ್ಯಂತ ದೀನ ದಲಿತರಲ್ಲಿ ದೇವರನ್ನು ಕಂಡರು. ಅವರ ಸೇವೆ ಯಾವುದೇ ಧರ್ಮ ಅಥವಾ ದೇಶಕ್ಕೆ ಸೀಮಿತವಾಗಿರಲಿಲ್ಲ, ಅದು ಜಾಗತಿಕವಾಗಿತ್ತು” ಎಂದು ಶ್ಲಾಘಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ: ಮದರ್ ಥೆರೇಸಾ ನಿಧನರಾದಾಗ, “ಭಾರತವು ತನ್ನ ಅತ್ಯಂತ ಪ್ರೀತಿಯ ಮಗಳನ್ನು ಕಳೆದುಕೊಂಡಿದೆ. ಅವರು ಕತ್ತಲೆಯಲ್ಲಿದ್ದ ಕೋಟಿಗಟ್ಟಲೆ ಜನರ ಜೀವನದಲ್ಲಿ ಬೆಳಕಾಗಿದ್ದರು” ಎಂದು ಕಂಬನಿ ಮಿಡಿದಿದ್ದರು. 2. ಕವಿಗಳ ದೃಷ್ಟಿಕೋನ ಕವಿಗಳು ಮದರ್ ಥೆರೇಸಾ ಅವರನ್ನು ಶಾಂತಿ, ಪ್ರೀತಿ ಮತ್ತು ದೈವಿಕ ಕೃಪೆಯ ಸಂಕೇತವಾಗಿ ತಮ್ಮ ಕಾವ್ಯಗಳಲ್ಲಿ ಚಿತ್ರಿಸಿದ್ದಾರೆ.ನಡೆದಾಡುವ ದೇವತೆ: ಕವಿಗಳು ಅವರನ್ನು ಕಲ್ಕತ್ತಾದ ಬೀದಿಗಳಲ್ಲಿ ನಡೆದಾಡಿದ “ಕರುಣೆಯ ದೇವತೆ” ಎಂದು ವರ್ಣಿಸಿದ್ದಾರೆ. ಅಹಿಂಸೆ ಮತ್ತು ಪ್ರೀತಿಯ ಭಾಷೆ: ಕಾವ್ಯಗಳಲ್ಲಿ ಅವರ ಬಿಳಿ ಮತ್ತು ನೀಲಿ ಅಂಚಿನ ಸೀರೆಯನ್ನು ಶಾಂತಿಯ ಧ್ವಜಕ್ಕೆ ಹೋಲಿಸಲಾಗಿದೆ. ಭಾಷೆ ತಿಳಿಯದ ದೇಶಕ್ಕೆ ಬಂದು ಕೇವಲ ‘ಪ್ರೀತಿಯ ಭಾಷೆ’ಯ ಮೂಲಕವೇ ಎಲ್ಲರ ಹೃದಯ ಗೆದ್ದರೆಂದು ಕವಿಗಳು ಕೊಂಡಾಡಿದ್ದಾರೆ. ತ್ಯಾಗದ ಮೂರ್ತಿ: ಸ್ವಂತ ಸಂಸಾರ, ದೇಶವನ್ನು ತೊರೆದು ಪರರ ಕಣ್ಣೀರು ಒರೆಸುವುದನ್ನೇ ಧರ್ಮವಾಗಿಸಿಕೊಂಡ ಅವರ ತ್ಯಾಗವನ್ನು ಕವಿಗಳು ದೈವಿಕ ಮಟ್ಟಕ್ಕೆ ಏರಿಸಿದ್ದಾರೆ. 3. ವಿಮರ್ಶಕರು ಕಂಡಂತೆ ವಿಮರ್ಶಕರು ಮದರ್ ಥೆರೇಸಾ ಅವರ ಕಾರ್ಯವನ್ನು ಸಾಮಾಜಿಕ ಮತ್ತು ತಾತ್ವಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಸಾಂಸ್ಥಿಕ ಸಮಾಜ ಸೇವೆ: ವಿಮರ್ಶಕರ ಪ್ರಕಾರ, ಮದರ್ ಥೆರೇಸಾ ಕೇವಲ ವೈಯಕ್ತಿಕವಾಗಿ ಸೇವೆ ಮಾಡಲಿಲ್ಲ. ಬದಲಿಗೆ ‘ಮಿಷನರೀಸ್ ಆಫ್ ಚಾರಿಟಿ’ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ವ್ಯವಸ್ಥಿತವಾದ ಸೇವಾ ಜಾಲವನ್ನು ನಿರ್ಮಿಸಿದರು. ಇದು ಆಧುನಿಕ ಜಗತ್ತಿಗೆ ಮಾದರಿ.ಮಾನವೀಯತೆಯೇ ಧರ್ಮ: ಕೆಲವರು ಅವರ ಧಾರ್ಮಿಕ ಹಿನ್ನೆಲೆಯನ್ನು ಚರ್ಚಿಸಿದರೂ, ಬಹುತೇಕ ವಿಮರ್ಶಕರು “ಅವರ ಸೇವೆ ಜಾತೀಯತೆ ಮತ್ತು ಧರ್ಮದ ಗಡಿಗಳನ್ನು ಮೀರಿದ್ದು. ರೋಗಿಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅವರು ಕುಷ್ಠರೋಗಿಗಳನ್ನು ತಬ್ಬಿ ಆರೈಕೆ ಮಾಡಿದ್ದು ಕ್ರಾಂತಿಕಾರಿ ಹೆಜ್ಜೆ” ಎಂದು ಒಪ್ಪಿಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿಯ ಸಾರ್ಥಕತೆ: ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಾಗ, “ಈ ಪ್ರಶಸ್ತಿಯಿಂದ ಮದರ್ ಥೆರೇಸಾ ಅವರಿಗೆ ಗೌರವ ಬರಲಿಲ್ಲ, ಬದಲಿಗೆ ಅವರಿಗೆ ನೀಡಿದ್ದರಿಂದ ನೊಬೆಲ್ ಪ್ರಶಸ್ತಿಗೇ ಒಂದು ಸಾರ್ಥಕತೆ ಸಿಕ್ಕಿತು” ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಮದರ ಥೆರೇಸಾ ಎಂಬ ಮಹಾಮಾನವತೆಯ ದೇವತೆ ಹುಟ್ಟಿದ ಅಲ್ಬೇನಿಯಾ ರಾಷ್ಟ್ರ ಮತ್ತು ಕರ್ಮ ಭೂಮಿ ಭಾರತದ ನೆಲದ ಋಣ ತೀರಿಸಿದ ಸಂತೆ ಶರಣೆ. ಮನುಕುಲವು ನೆನಪಿಡುವ ಮಹಾ ಮಾನವತಾವಾದಿ ಸಾವಿಲ್ಲದ ಶರಣೆ _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಸತತವಾಗಿ ಅತ್ತಳು ಸತ್ಯಸತ್ವದ ಸತಿ ಸೀತೆ ಬಿರುಗಾಳಿಯ ಬಿರುಸಿಗೆ ಬಲವಿಲ್ಲದಂತಾದ ಬಾಳೆಗಿಡ ಬುವಿಯನ್ನಪ್ಪಿದಂತೆ ನೆಲಕ್ಕೆ ಬಿದ್ದಳು ಧರಣಿಸುತೆ, ಲಕ್ಷö್ಮಣನ ನುಡಿಯದು ಕಿವಿಗೆ ಬಿದ್ದ ಕ್ಷಣದಲ್ಲಿ. ಲೋಕವನ್ನೇ ಮರೆತಳು ತಕ್ಷಣದಲ್ಲಿ.ಸೀತೆಯ ಸ್ಥಿತಿಗೆ ಮರುಗಿದ ಲಕ್ಷö್ಮಣ ತನ್ನ ಉತ್ತರೀಯದಿಂದ ಅವಳಿಗೆ ಗಾಳಿಯನ್ನು ಬೀಸಿ, ಕಣ್ಣೀರು ಹರಿಸುತ್ತಾ ಅವಳನ್ನು ಸಾಂತ್ವನಗೊಳಿಸುವ ಪ್ರಯತ್ನ ನಡೆಸಿದ.ಕಣ್ಣುಗಳ ತೆರೆದಳು ರಾಮಸತಿ. ನಿಟ್ಟುಸಿರ ಬಿಟ್ಟಳು ಧರಣಿಸುತೆ. ಸುಮಿತ್ರಾಸುತನನ್ನು ನೋಡಿದಳು ಜನಕಸುತೆ.“ಅಪರಾಧವನ್ನೇನೂ ಮಾಡದ ನನ್ನನ್ನು ಹೀಗೆ ಅರಣ್ಯಕ್ಕೆ ಅಟ್ಟುವ ಬದಲು ಖಡ್ಗದಿಂದ ನನ್ನ ಶಿರವನ್ನೇ ಕತ್ತರಿಸಬಹುದಿತ್ತಲ್ಲಾ! ನನ್ನ ಮನೋವಲ್ಲಭನನ್ನು ತೊರೆದು ಈ ಕಾಡಿನಲ್ಲಿರುವಂತಾಯಿತೇ ನಾನು!” ಎಂದು ಅತ್ತಳು ಕೌಸಲ್ಯಾಸುತನ ಸತಿ.“ವಿವಾಹ ಆದಾಗಿನಿಂದಲೂ ನನ್ನ ಜೊತೆ ಸುಖಸುಖವಾಗಿ ಬದುಕಿದವರು, ನಾನು ಅಗಲಿದಾಗ ನೋವು ಅನುಭವಿಸಿದವರು, ನನಗಾಗಿ ಆ ದುಷ್ಟ ರಾವಣನನ್ನು ಕೊಂದವರು ಈಗ ತೊರೆದರೇ ನನ್ನನ್ನು!” ಎಂದು ಹಲುಬಿದಳು ಹಲವು ನಿಮಿಷ.ತನ್ನದೇನೂ ತಪ್ಪಿಲ್ಲ ಎಂದು ರುಜುವಾತುಪಡಿಸುವ ಸ್ವಪ್ರಜ್ಞೆ ಸೀತೆಯಲ್ಲೀಗ ಮೂಡತೊಡಗಿತು. “ಅಂದು ರಾವಣ ಸಂಹಾರದ ನಂತರ ಅಗ್ನಿಪ್ರವೇಶದ ಮೂಲಕ ನನ್ನ ಸತ್ಯವನ್ನು ಸಾಬೀತುಪಡಿಸಿಕೊಂಡವಳು ಈ ಸೀತೆ. ಹಾಗಿದ್ದೂ ನನ್ನನ್ನು ಅಪರಾಧಿ ಎನ್ನಲು ಕಾರಣವೇನು?” ಎಂಬ ಪ್ರಶ್ನೆಯೆತ್ತಿ ಲಕ್ಷö್ಮಣನ ಮುಖವನ್ನೇ ನೋಡಿದಳು.ಕಾಡಿನಲ್ಲಿ ತನ್ನನ್ನು ಬಿಟ್ಟುಹೋಗಲೆಂದು ಬಂದ ಲಕ್ಷ್ಮಣನು ಅವಳ ಕಣ್ಣಿಗೆ ಕಂಡದ್ದು ಕರುಣೆಯಿಲ್ಲದವನಾಗಿ. “ಕಲ್ಲುಮುಳ್ಳುಗಳೇ ಇರುವ ಕಾಡಿನಲ್ಲಿ ಅಂದು ಅಲೆದಾಡುತ್ತಿದ್ದೆವು. ಅಂತಹ ಕಷ್ಟದ ಸ್ಥಿತಿಯಲ್ಲಿ ನಾನು ನಡೆಯಲಾರದೆ ಒದ್ದಾಡುತ್ತಿದ್ದಾಗ ನನ್ನನ್ನು ಉಪಚರಿಸಿದವನು ನೀನು. ನನಗೆ ಸಂಕಟವಿತ್ತು ಘರ್ಜಿಸಿದ ವಿರಾಧನೆಂಬ ಅಸುರರನ್ನು ಕೊಂದವನು ನೀನು. ಅಂದು ಚಿನ್ನದ ಜಿಂಕೆಯ ಬೆನ್ನತ್ತಿಹೋದ ನನ್ನೊಡೆಯರಿಗೆ ಏನೋ ಕೆಡುಕು ಆಗಿದೆಯೆಂದು ನಾನು ವ್ಯಥೆಪಟ್ಟು, ಹೋಗಿ ನೋಡಿ ಬಾ ಎಂದು ನಿನ್ನಲ್ಲಿ ಕೇಳಿಕೊಂಡಾಗ ಅಯೋಧ್ಯಾಪತಿಯನ್ನು ಹುಡುಕಿಕೊಂಡು ಹೋದವ ನೀನು. ನನ್ನಿಷ್ಟದ ಮೈದುನ ನೀನು. ಹಾಗಿರುವಾಗ ನನ್ನನ್ನೊಬ್ಬಳನ್ನೇ ಈ ದುರ್ಗಮ ಕಾಡಿನಲ್ಲಿ ಬಿಟ್ಟುಹೋಗುವ ಮನಸ್ಸು ನಿನಗೆ ಬಂದೀತೇ ಲಕ್ಷö್ಮಣ!” ಎಂದು ದುಃಖವನ್ನು ತೋಡಿಕೊಂಡಳು.ಪತಿಯ ಮುಖವನ್ನು ಕಾಣದೆ ಎಂತಿರಲಿ ಇಲ್ಲಿ ಎಂದು ಪ್ರಲಾಪಿಸಿದಳು. ರಮಣನನ್ನು ರಮಿಸದೆ ಹೇಗಿರಲಿ ಇಲ್ಲಿ ಎಂದು ವಿಲಾಪಿಸಿದಳು. ಆಗಾಗ ಮೈಮರೆಯುತ, ಆಗಾಗ ಎಚ್ಚರವಾಗುತ ಸೋತ ಭಾವದಲ್ಲಿದ್ದಳು ಸೀತೆ, ಹಾವಿನಿಂದ ಕಚ್ಚಿಸಿಕೊಂಡ ಎಳೆಶಿಶುವಿನಂತೆ.ಈ ಬಗೆಯಲ್ಲಿ ಜಾನಕಿಯನ್ನು ಕಂಡ ಲಕ್ಷö್ಮಣ ತೊಳಲಾಟಕ್ಕೆ ಈಡಾದ. ತೊರೆದುಹೋಗಲೇಬೇಕಿತ್ತು ಅವನು ಅವಳನ್ನು ಕಾಡಿನಲ್ಲಿ, ರಾಮನಾಜ್ಞೆಗೆ ಶಿರಬಾಗಿ. ತೊರೆದುಹೋಗದಂತೆ ತಡೆಯಿತದೋ ಮಮಕಾರ, ದುಃಖಿಸಿದ ಅತಿಯಾಗಿ ಆ ಕ್ಷಣವೇ ಎದೆಬೀಗಿ.ಎಂತು ಹೋಗಲಿ ತಾನು, ಹೋಗದೇ ಇರಲೆಂತು ಇನ್ನು ಎಂಬ ದ್ವಂದ್ವ ಭಾವದಲ್ಲಿ ಸಂಕಟವನ್ನು ಸೌಮಿತ್ರಿ ಅನುಭವಿಸುತ್ತಿದ್ದಾಗಲೇ ಸೀತೆ ನುಡಿದಳು ತಪಸ್ವಿನಿಯ ತೆರದಲ್ಲಿ. “ಅಂದು ರೇಖೆಯನೆಳೆದು ರಾಮ ಶೋಧನೆಗೆ ಹೊರಟ ರೀತಿಯಲ್ಲಿಯೇ ಇಂದೂ ಹೊರಡು ಸೌಮಿತ್ರಿ. ನನ್ನ ಅಪರಾಧವಿಲ್ಲದೆ ನನ್ನ ಒಡೆಯರು ಇಂದು ತೊರೆದರೆನ್ನ ಎಂಬ ಸಮಾಚಾರವನ್ನು ಹೇಳಿಬಿಡು ಎನ್ನ ತಾಯಿಸಮಾನರಾದ ಕೌಸಲ್ಯೆಗೆ” ಎಂದಳು ಸೀತೆ.ರಾಮನ ಜೊತೆಗೆ ಯಾರೂ ಇಲ್ಲ ಸಹಾಯಕ್ಕೆ ಎಂಬ ಯೋಚನೆ ಮೂಡಿತು ಅವಳಲ್ಲಿ, ಆ ಕ್ಷಣದಲ್ಲಿ. “ತಡವಾದರೆ ಕೋಪಿಸಿಕೊಳ್ಳಬಹುದು ನಿನ್ನಣ್ಣ. ನನಗಾದರೂ ಈ ಕಾಡಿನಲ್ಲಿ ಕ್ರೂರಮೃಗಗಳ ನೆರವಿದೆ. ಅವರು ಅಲ್ಲಿ ಒಬ್ಬಂಟಿಯಾಗಿದ್ದಾರೆ. ವಿಳಂಬ ಮಾಡದೆ ಸೇರು ಕ್ಷಿಪ್ರವಾಗಿ ಅವರನ್ನು” ಎಂದಳು ಮರ್ಮಾರ್ಥಭರಿತವಾಗಿ.ತನ್ನನ್ನು ತೊರೆದ ರಾಮನದ್ದೇನೂ ತಪ್ಪಿಲ್ಲ. ಹೆಣ್ಣಾಗಿ ಜನಿಸಿದ ತನ್ನದೇ ಅಪರಾಧ ಎಂಬ ಕೀಳರಿಮೆಯ ಮಾತೂ ಹೊರಬಂತು ಅವಳಿಂದ.ಈ ಪರಿಯ ಪರಿತಾಪವನ್ನು ಕಂಡ ಲಕ್ಷö್ಮಣ ದೃಷ್ಟಿ ಹರಿಸಿದ ದೆಸೆದೆಸೆಗೆ. ಕಣ್ಣಿಗೆ ಕಂಡ, ಕಾಣದ ಮೃಗ- ಖಗ, ಕ್ರಿಮಿ- ಕೀಟ, ಗಿಡ- ಮರ, ಗಂಗಾನದಿ, ದಿಕ್ಕುಗಳು, ಪಂಚಭೂತಗಳು ಎಲ್ಲವುಗಳನ್ನೂ ಉದ್ದೇಶಿಸಿ ನುಡಿದ ಉದ್ದಂಡವಾದ ಮಾತನ್ನು.“ಜಾನಕಿಯನ್ನು ರಕ್ಷಿಸುವ ಹೊಣೆಯೀಗ ನಿಮ್ಮದು. ಭೂದೇವಿಯೇ ಪೊರೆಯಬೇಕು ನೀನೇ, ನಿನ್ನ ಈ ಮಗಳನ್ನು”ಅಸಹಾಯಕ ಹೆಣ್ಣನ್ನು ಅನಾಥೆಯ ತೆರದಲ್ಲಿ ಬಿಟ್ಟುಹೋಗಬೇಕಾದ ತನ್ನ ಹೀನಸ್ಥಿತಿಯನ್ನು ನೆನೆದು ಮತ್ತೆ ಮತ್ತೆ ಮರುಗಿದ ಲಕ್ಷö್ಮಣ. ಈ ನಿಷ್ಠುರದ ಬದುಕನ್ನು ತಾನು ನಡೆಸಬೇಕಾಗಿ ಬಂದದ್ದಕ್ಕೆ ತನ್ನ ದೇಹವನ್ನು ಎರಡು ಭಾಗವಾಗಿ ಸೀಳಿಹಾಕಬೇಕು ಎಂದು ತನಗೆ ತಾನೇ ಶಪಿಸಿಕೊಂಡ.ಏನಾದರಾಗಲಿ ಇಲ್ಲಿಂದ ಹೋಗಿಯೇ ಬಿಡುತ್ತೇನೆ ಎಂದು ಮುಂದೆ ಮುಂದೆ ಹೋದ, ಬಿರುಸಾಗಿ. ಏನಂದುಕೊಳ್ಳುವಳೋ ಜನಕಸುತೆ ಎಂದು ಆಲೋಚಿಸಿ ಮತ್ತೆ ಹಿಂದೆ ಹಿಂದೆ ಬಂದ, ಇರಿಸುಮುರುಸಾಗಿ. ಅಣ್ಣನನ್ನು ಸೇರಬೇಕೆಂಬ ತುಡಿತವದು ಮತ್ತೆ ಸೆಳೆಯಿತು ಅವನನ್ನು. ಸೀತೆಯನ್ನು ನೋಡದೆಯೇ ಮುಂದೆ ಹೋದ. ಹೆಂಗಳೆಯ ಮನವನ್ನು ನೋಯಿಸಿದೆ ಎಂಬ ಭಾವವದು ಎಳೆಯಿತು ಅವನನ್ನು. ಸೀತೆಯೆಡೆಗೆ ನೋಡುತ್ತಾ ಹಿಂದೆ ಬಂದ. ಒಮ್ಮೆ ಆ ಕಡೆಗೆ, ಮತ್ತೊಮ್ಮೆ ಈ ಕಡೆಗೆ. ಒಮ್ಮೆ ಮುಂದೆ, ಇನ್ನೊಮ್ಮೆ ಹಿಂದೆ. ತೊರೆಯದಿರಲಾರೆ ಈಗ ಎಂಬ ಭಾವ ಒಮ್ಮೆ. ತೊರೆದುಹೋಗಲಾರೆ ಬೇಗ ಎಂಬ ಭಾವ ಮಗದೊಮ್ಮೆ. ಮುಂದಕ್ಕೂ ಹಿಂದಕ್ಕೂ ಹೊಯ್ದಾಡುವ ಉಯ್ಯಾಲೆಯಂತಾದ ಲಕ್ಷö್ಮಣ.ಅದೋ! ಆ ಕ್ಷಣದಲ್ಲಿ, ಅದೊಂದು ಕ್ಷಣದಲ್ಲಿ, ಆ ಒಂದೇ ಒಂದು ಕ್ಷಣದಲ್ಲಿ ಸೀತೆಯನ್ನು ಅಗಲಿ ಹೋಗಿಯೆಬಿಟ್ಟ ಸೌಮಿತ್ರಿ! ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರಿನಿಂದ ಹಾಸನದತ್ತ ಸುಮತಿಯಪಯಣ ಬಾವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಅವಳ ನೋಟದಲ್ಲಿ ಯಾವುದೋ ಅವ್ಯಕ್ತವಾದ ದೃಢ ನಿರ್ಧಾರದ ಸೂಚನೆ ಬಾವನಿಗೆ ದೊರೆಯಿತು. ಆದರೂ ಅದೇನೆಂದು ತಿಳಿದುಕೊಳ್ಳಲು…. “ಏನು ನಿರ್ಧರಿಸಿದೆಯಮ್ಮಾ… ನೀನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಎಲ್ಲರ ಹಿತ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ ಎಂಬುದು ನನಗೆ ತಿಳಿದಿದೆ…. ವಯಸ್ಸು ಚಿಕ್ಕದಾದರೂ ನಿನ್ನ ಆಲೋಚನಾ ಶೈಲಿ ಬಹಳ ಪ್ರಬುದ್ಧವಾದದ್ದು…. ಎಂದಾಗ, ನಾದಿನಿ…”ಬಾವಾ… ನನ್ನ ನಿರ್ಧಾರ ಸರಿಯೋ ತಪ್ಪೋ ನನಗೆ ತಿಳಿದಿಲ್ಲ…. ಆದರೆ ನನಗೆ ಬೇರೆ ದಾರಿ ತೋಚುತ್ತಿಲ್ಲ….. ವಾರ್ಡಿನಲ್ಲಿ ದಾಖಲಾದ ಅಮ್ಮ ನಮ್ಮನ್ನು ಸಂಪೂರ್ಣವಾಗಿ ನಂಬಿದ್ದಾಳೆ…. ಅವಳ ಮುಖ ಈಗ ಸಂಪೂರ್ಣ ಗೆಲುವಿನಿಂದ ಕೂಡಿದೆ…. ಇಲ್ಲಿಂದ ಚಿಕಿತ್ಸೆ ಪಡೆದು ಹಿಂತಿರುವಾಗ ತಾನು ತನ್ನ ಹಿಂದಿನ ಆರೋಗ್ಯವನ್ನು ಪಡೆದು ಮನೆಗೆ ಹಿಂತಿರುತ್ತೇನೆ ಎಂಬ ಭರವಸೆಯನ್ನು ನನ್ನ ತಾಯಿಯ ಕಣ್ಣುಗಳಲ್ಲಿ ನಾನು ನೋಡಿದೆ… ಎಂದು ಅರ್ಧಕ್ಕೆ ನಿಲ್ಲಿಸಿದಳು. ವಿಷಯವನ್ನು ಪೂರ್ತಿ ಹೇಳದೇ ಏಕೆ ಅರ್ಧಕ್ಕೆ ನಿಲ್ಲಿಸಿದಳು? ಎಂದು ಪ್ರಶ್ನಾರ್ಥಕವಾಗಿ ಬಾವ ನಾದಿನಿಯನ್ನು ನೋಡುತ್ತಾ…. “ಹೌದು ನೀನು ಹೇಳಿದ್ದು ನಿಜ…. ನಾನು ಅದನ್ನು ಗಮನಿಸಿದೆ…. ಇಲ್ಲಿನ ಚಿಕಿತ್ಸೆ ಬಹಳ ದುಬಾರಿ ಎಂಬುದು ತಿಳಿಯಿತು…. ಆದರೆ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಲು ನಮ್ಮಿಂದ ಸಾಧ್ಯವೇ? ಎಂಬ ವಿಚಾರ ನನ್ನನ್ನು ಚಿಂತೆಗೀಡು ಮಾಡಿದೆ…. ನಮ್ಮೆಲ್ಲಾ ದುಡಿಮೆಯ ಹಣವನ್ನು ಸೇರಿಸಿದರೂ ಕೂಡ ಒಂದು ಬಾರಿಯ ಡಯಾಲಿಸಿಸ್ ಸಾಧ್ಯವಾಗುತ್ತದೆಯೇ? ಎಂಬುದು ಕೂಡಾ ನನಗೆ ಸಂಶಯ”… ಎಂದ ಚಿಂತಾಕ್ರಾಂತನಾಗಿ. ಬಾವನ ಪರಿಸ್ಥಿತಿಯು ನಾದಿನಿಗೆ ತಿಳಿದಿತ್ತು. ಎಷ್ಟೋ ಬಾರಿ ತಮಗೆ ಹಣಕಾಸಿನ ತೊಂದರೆ ಬಂದಾಗ ತನ್ನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ನಮಗೆ ಕೊಟ್ಟು ಸಹಾಯ ಮಾಡಿದ್ದಾರೆ ಬಾವ. ಒಮ್ಮೆ ಇನ್ನೇನು ಬದುಕಲು ಬೇರೆ ದಾರಿಯೇ ಇಲ್ಲವೇನೋ? ಎನ್ನುವ ಪರಿಸ್ಥಿತಿಯಲ್ಲಿ ಬಾವನೇ ನಮಗೆ ಸಹಾಯ ಮಾಡಿ ನಮ್ಮೆಲ್ಲರ ಜೀವ ಉಳಿಸಿದ್ದು. ತಮ್ಮ ಕೈಲಿದ್ದರೆ ಖಂಡಿತ ಏನಾದರೂ ಸಹಾಯ ಮಾಡೇ ಮಾಡುತ್ತಾರೆ. ಈಗ ಮಳೆಗಾಲ ಬೇರೆ ಸಮೀಪಿಸುತ್ತಿರುವುದರಿಂದ ಅವರಿಗೆ ಕೆಲಸ ಇರುವುದಿಲ್ಲ ಎನ್ನುವುದು ನಾದಿನಿ ಬಲ್ಲಳು. ನಾದಿನಿ ಏನೂ ಮಾತನಾಡದೆ ಸುಮ್ಮನೆ ಎಲ್ಲೋ ನೋಡುತ್ತಾ ಏನೋ ಆಲೋಚನೆ ಮಾಡುತ್ತಾ ನಿಂತಿರುವುದನ್ನು ಕಂಡು… “ಈಗ ಏನು ಮಾಡುವುದು?…ನೀನು ಏನು ನಿರ್ಧರಿಸಿರುವೆ? ಎಂದು ಬಾವ ಕೇಳಿದಾಗ…. “ಹೇಗೆ ಹೇಳಲಿ ಎಂದು ನನಗೆ ತಿಳಿಯುತ್ತಿಲ್ಲ ಬಾವಾ”…. ಎಂದು ತನ್ನ ಮನದಲ್ಲಿದ್ದ ಆಲೋಚನೆಯನ್ನು ಭಾವನೆಗೆ ತಿಳಿಸಿದಳು. ನಾದಿನಿಯ ಮಾತನ್ನು ಕೇಳಿದ ಬಾವ ಒಮ್ಮೆ ದೀರ್ಘವಾದ ನಿಟ್ಟಿಸಿರನ್ನು ಬಿಟ್ಟು… ₹ಸರಿ ನಡಿ… ಅತ್ತೆಗೆ ತಿಳಿಸೋಣ ಬಾ”…. ಎಂದು ಹೇಳಿ ಮುಂದೆ ಹೆಜ್ಜೆ ಹಾಕಿದ ಬಾವನನ್ನು ನಾದಿನಿ ಹಿಂಬಾಲಿಸಿದಳು. ಇಡುವ ಪ್ರತಿ ಹೆಜ್ಜೆಯೂ ಭಾರವಾದಂತ ಅನಿಸಿತು. ಎಷ್ಟೇ ವೇಗವಾಗಿ ನಡೆದರೂ ಹೆಜ್ಜೆ ಮುಂದಿಡಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಿತವಳಿಗೆ. ತುರ್ತು ಚಿಕಿತ್ಸಾ ಘಟಕ ವಿಭಾಗದ ವಾರ್ಡಿನ ಬಾಗಿಲ ಬಳಿ ಬಂದಾಗ ಅವಳ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಹೆಜ್ಜೆ ಮುಂದಡಲಾಗದೆ ಅವಳು ಬಾಗಿಲ ಬಳಿಯೇ ನಿಂತು ಬಿಟ್ಟಳು. ನಾದಿನಿ ತನ್ನ ಹಿಂದೆ ಬರುತ್ತಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಹಿಂತಿರುಗಿ ನೋಡಿದ ಆತ, ನಾದಿನಿಯ ಕಣ್ಣುಗಳು ತುಂಬಿದ್ದನ್ನು ಕಂಡು… “ಅಳಬೇಡ… ಈಗ ನೀನು ಅಧೀರಳಾಗಬಾರದು…. ನಿನ್ನ ದುಗುಡ, ನೋವು ಏನೆಂದು ನನಗೆ ತಿಳಿದಿದೆ…. ದಯವಿಟ್ಟು ಕಣ್ಣುಗಳನ್ನು ಒರೆಸಿಕೊ….. ನಿನ್ನ ತುಂಬಿದ ಕಣ್ಣುಗಳನ್ನು ಗಮನಿಸಿದರೆ ಅತ್ತೆ ಎಲ್ಲವನ್ನೂ ಊಹಿಸಿಬಿಡುತ್ತಾರೆ…. ನೀನು ಈಗ ಧೈರ್ಯವನ್ನು ತಂದುಕೊಳ್ಳಲೇಬೇಕು…. ನಿನ್ನ ಮನಸ್ಸಿನಲ್ಲಿರುವ ಯೋಜನೆಯ ಪ್ರಕಾರ ಅತ್ತೆಗೆ ಮನನವಾಗುವಂತೆ ತಿಳಿಸಿಬಿಡು.”… ಎಂದು ಬಾವ ಹೇಳಿದ್ದು ಕೇಳಿ, ಹೌದು ಅವರು ನಿಜವನ್ನೇ ಹೇಳುತ್ತಿದ್ದಾರೆ ಎನ್ನುತ್ತಾ ತನ್ನ ಕಣ್ಣು ಒರೆಸಿಕೊಂಡಳು. ಬಾರದ ನಗುವನ್ನು ಮುಖದಲ್ಲಿ ತಂದುಕೊಂಡು ಬಾವನ ಜೊತೆಗೆ ವಾರ್ಡಿನ ಒಳಹೊಕ್ಕಳು. ಅಳಿಯ ವಾರ್ಡಿನ ಒಳಗೆ ಬಂದಿದ್ದನ್ನು ಗಮನಿಸಿದ ಸುಮತಿ…. “ಡಾಕ್ಟರ್ ಏನ್ ಹೇಳಿದರು?… ಎದ್ದು ಕೇಳಿದಳು. ಅತ್ತೆಯ ಪ್ರಶ್ನೆಗೆ ಅಳಿಯ ನಾದಿನಿಯ ಕಡೆ ತಿರುಗಿ, ಹೇಳು ಎನ್ನುವಂತೆ ಸನ್ನೆ ಮಾಡಿದ. ಗಂಟಲುಬ್ಬಿ ಬಂದರೂ, ಕಣ್ಣುಗಳು ಮತ್ತೆ ಹನಿಗೂಡ ತೊಡಗಿದರೂ ಅದನ್ನು ತಾಯಿಗೆ ತೋರಕೊಡದೆ….. “ಅಮ್ಮಾ…. ಡಾಕ್ಟರ್ ಹೇಳಿದರು…. ಇಲ್ಲಿ ದೊರಕುವ ಚಿಕಿತ್ಸೆಯು ನಮ್ಮ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಲಭ್ಯವಿದೆ. ಅಲ್ಲಿಗೆ ಹೋಗಿ ಪಡೆದುಕೊಳ್ಳಬಹುದು…. ಎಂದಿದ್ದಾರಮ್ಮಾ”…. ಎನ್ನುತ್ತಾ ಅಮ್ಮನ ಬಳಿಗೆ ಬಂದಳು. ತನ್ನ ಅಳುವನ್ನು ತಡೆ ಹಿಡಿದುಕೊಳ್ಳಲು ಅವಳು ಹರಸಾಹಸ ಪಡಬೇಕಾಯಿತು. ಸುಮತಿಯನ್ನು ಬಿಗಿಯಾಗಿ ಅಪ್ಪಿಕೊಂಡಳು. “ಆದಷ್ಟು ಬೇಗನೇ ನಾವು ಇಲ್ಲಿಂದ ಹೋಗೋಣ… ಎಂದು ಹೇಳುತ್ತಾ ವಾರ್ಡಿನಲ್ಲಿದ್ದ ನರ್ಸ್ ಬಳಿಗೆ ತೆರಳಿದಳು…. “ಸಿಸ್ಟರ್…. ತಾಯಿಯನ್ನು ಇಲ್ಲಿ ಈಗ ಅಡ್ಮಿಟ್ ಮಾಡುವುದಿಲ್ಲ…. ಇನ್ನೊಂದೆರಡು ದಿನದ ಬಳಿಕ ಬರುತ್ತೇವೆ_…. ಎಂದು ಹೇಳಿದಳು.… “ಓ ಹೌದಾ… ನೀವು ಔಷಧಿಯನ್ನು ತಂದಿದ್ದರೆ ಹಾಗೂ ಇಲ್ಲಿ ಅಡ್ಮಿಟ್ ಮಾಡಿದ್ದರೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದಿತ್ತು…. ಸರಿ ನಿಮ್ಮ ಇಚ್ಛೆ”…. ಎಂದು ಹೇಳಿ ಸುಮತಿಯನ್ನು ವಾರ್ಡಿನಿಂದ ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಿದಳು. ಮಾವನಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ನಾದಿನಿ ಬಾವನನ್ನು ವಿನಂತಿಸಿಕೊಂಡಳು. ಸರಿ ಎಂದು ಹೇಳಿ ಬಾವ ರಿಸೆಪ್ಶನ್ ಗೆ ಹೋಗಿ ಅಲ್ಲಿಂದ ಮಾವನಿಗೆ ಕರೆ ಮಾಡಿ, ಅತ್ತೆಯನ್ನು ಇಲ್ಲಿಂದ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲು ಮಾಡುತ್ತೇವೆ. ಇಲ್ಲಿ ಹೆಚ್ಚು ಸಮಯ ಕಳೆಯಲು ಅತ್ತೆಯಿಂದ ಸಾಧ್ಯವಿಲ್ಲ ಹಾಗಾಗಿ ಇಲ್ಲಿಂದ ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಹಾಸನಕ್ಕೆ ಹೋಗುತ್ತೇವೆ ಎಂಬುದಾಗಿ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ತಮ್ಮನಿಗೆ ಅಳಿಯನ ಮಾತು ಕೇಳಿ ಮನದಲ್ಲಿ ಏನೋ ಕಸಿವಿಸಿ ಉಂಟಾಯಿತು. ಸ್ವಲ್ಪ ಆತಂಕವಾಯಿತು. ಆಸ್ಪತ್ರೆಯಲ್ಲಿ ನಡೆದ ವಿಷಯ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ಪರಿಸ್ಥಿತಿಯ ಅರ್ಥ ಅವನಿಗಾಯಿತು. ಅವನ ಮನಸ್ಸು ಭಾರವಾಯಿತು…”ಸರಿ ಅಕ್ಕನನ್ನು ನೀವು ಕರೆದುಕೊಂಡು ಹೋಗಿ….. ಹಾಸನದಲ್ಲಿ ಅಕ್ಕನಿಗೆ ಚಿಕಿತ್ಸೆ ಕೊಡಿಸಿ…. ನಾನು ಕುಟುಂಬ ಸಮೇತ ಅಲ್ಲಿಗೆ ಬರುತ್ತೇನೆ”….ಎಂದು ಸುಮತಿಯ ತಮ್ಮ ಹೇಳಿದ. ಸುಮತಿಯನ್ನು ಅಲ್ಲಿಂದ ಕರೆದುಕೊಂಡು ಅಳಿಯ ಮತ್ತು ಮಗಳು ಹಾಸನದ ಕಡೆಗೆ ಪ್ರಯಾಣ ಬೆಳೆಸಿದರು.
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್ ಚೇತನ ಸೊಲ್ಲಾಪುರದಿಂದ ದೆಹಲಿಯವರೆಗೆ *ಜವಾಹರ ನೆಹರು ಪಂಡಿತರಿಗೆ ನುಡದೇವಅವರವರ ನುಡಿಯಲಿ ರಾಜ್ಯವ, ನಡೆಯಲಿ ಅವಿಭಾಜ್ಯ ಭಾರತಕೆ ಬಲ ಬರಲಿ||*ಡಾ.ಜಯದೇವಿತಾಯಿ ೧೯೫೨ರ ಸಮಯ…… ಸಾರ್ವತ್ರಿಕ ಚುನಾವಣೆಯ ನಂತರ ವರ್ಷದ ಅಂತ್ಯದವರೆಗೂ ಆಂಧ್ರ ಮತ್ತು ಕರ್ನಾಟಕವನ್ನು ಪ್ರತ್ಯೇಕ ಪ್ರಾಂತ್ಯಗಳಾಗಿ ರಚಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಆರಂಭದಲ್ಲಿ ಮನವಿ, ಅರ್ಜಿ ಮತ್ತು ವಿನಂತಿಗಳ ಮೂಲಕ ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದರೂ, ನಂತರ ಹೋರಾಟ ಮತ್ತು ಪ್ರತಿಭಟನೆಯಂತಹ ಕಾರ್ಯಾಚರಣೆಗಳು ಆರಂಭವಾದವು.ಆಂಧ್ರದ ಪ್ರತ್ಯೇಕ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು. ದೀರ್ಘಕಾಲ ೬೮ ದಿನ ಉಪವಾಸ ಮಾಡಿದರು ….೬೮ ನೆ ದಿನ ಅವರು ನಿಧನರಾದರು. ಅವರ ಸಾವಿನಿಂದ ಆಂಧ್ರದಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು.ಹೈದರಾಬಾದನ ನಾನಲ ನಗರದಲ್ಲಿ ನಡೆದ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ ಸಮಿತಿಯು ಆಂಧ್ರ ಪ್ರಾಂತ್ಯ ರಚನೆಯ ಬೇಡಿಕೆಯನ್ನು ಪರಿಗಣಿಸಿತು. ನಂತರ ಪ್ರಧಾನಿ ನೆಹರು ಸಂಸತ್ತಿನ ಡಿಸೆಂಬರ ಅಧಿವೇಶನದಲ್ಲಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಕರ್ನಾಟಕದ ಬಗ್ಗೆ ಯಾವ ಮಾತನ್ನು ಅವರು ಎತ್ತಲಿಲ್ಲ. ಅದರ ಪರಿಣಾಮವಾಗಿ ಮಾರ್ಚ್‌ನಲ್ಲಿ ಪ್ರತ್ಯೇಕ ಆಂಧ್ರ ಪ್ರಾಂತ್ಯ ರಚನೆಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ರಚನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಇದರಿಂದ ಕನ್ನಡಿಗರಲ್ಲಿ ಅಸಮಾಧಾನ ಮತ್ತು ಆಕ್ರೋಶ ಹೆಚ್ಚಾಯಿತು. ಆಂಧ್ರದ ಬೇಡಿಕೆಗೆ ಸ್ಪಂದಿಸಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದು ಕನ್ನಡಿಗರು ಭಾವಿಸಿದರು. ಪರಿಣಾಮವಾಗಿ ಕನ್ನಡಿಗರು ಕಾಂಗ್ರೆಸ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ, ವಿಶಾಲ ಕರ್ನಾಟಕವನ್ನು ರಚಿಸಬೇಕು ಎಂಬ ಬೇಡಿಕೆಯನ್ನು ಇನ್ನಷ್ಟು ಬಲವಾದದ ಆಶಯ ಮುಂದಿಟ್ಟರು. ಈ ಹೋರಾಟವೇ ಮುಂದೆ ಕರ್ನಾಟಕ ಏಕೀಕರಣ ಚಳವಳಿಗೆ ಮತ್ತಷ್ಟು ವೇಗ ನೀಡಿತು.ಈ ಘಟನೆ ಕರ್ನಾಟಕ ಏಕೀಕರಣ ಚಳವಳಿಯ ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘಟ್ಟವಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಆಡಳಿತಗಳ ಅಡಿಯಲ್ಲಿ ಚದುರಿಹೋಗಿದ್ದವು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮದ್ರಾಸ ಪ್ರಾಂತ್ಯದ ಕನ್ನಡ ಪ್ರದೇಶಗಳು ಹೀಗೆ ಕನ್ನಡಿಗರು ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ರಾಜ್ಯ ನಿರ್ಮಿಸಬೇಕು ಎಂಬ ಹಂಬಲ ಜನರಲ್ಲಿ ಬಲವಾಗುತ್ತಿತ್ತು. ನವೆಂಬರ ೧೯೫೨ರ ಅವಧಿಯಲ್ಲಿ ಈ ಬೇಡಿಕೆ ಕೇವಲ ಸಭೆ, ಮನವಿ ಮತ್ತು ನಿರ್ಣಯಗಳಿಗೆ ಸೀಮಿತವಾಗದೆ ತ್ಯಾಗ ಮತ್ತು ಹೋರಾಟದ ಹಂತಕ್ಕೆ ತಲುಪಿತು. ಅದರಗುಂಟೆ ಶಂಕರಗೌಡರು, ದೊಡ್ಡಮೇಟಿ ಅಂದಾನಪ್ಪ, ತಲ್ಲೂರ ರಾಯಣ್ಣಗೌಡರು ಮುಂತಾದ ಏಕೀಕರಣ ಹೋರಾಟಗಾರರು ಅಖಂಡ ಕರ್ನಾಟಕದ ರಚನೆಗಾಗಿ ಮರಣಾಂತ ಉಪವಾಸ ವ್ರತ ಕೈಗೊಂಡರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಸರ್ಕಾರದ ಗಮನ ಸೆಳೆಯಲು ಅವರು ಮುಂದಾದರು.ಈ ಉಪವಾಸ ಸತ್ಯಾಗ್ರಹವು ಕನ್ನಡಿಗರ ಬಹುದಿನಗಳ ಆಶಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಒಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿತ್ತು. ಉಪವಾಸಿಗರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಂತೆ ಏಕೀಕರಣ ಹೋರಾಟಗಾರರು ಮತ್ತು ಕನ್ನಡಾಭಿಮಾನಿಗಳಲ್ಲಿ ಆತಂಕ ಹೆಚ್ಚಾಯಿತು. ಇಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಹೋರಾಟಗಾರರ ಬೆನ್ನಿಗೆ ದೃಢವಾಗಿ ನಿಂತರು. ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾಗ ಅವರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಅಗತ್ಯವಾಗಿತ್ತು. ಜಯದೇವಿ ತಾಯಿಯವರು* ತಮ್ಮ ರಕ್ತದಿಂದಲೇ ಹಸ್ತಾಕ್ಷರ ಹಾಕಿ ಉಪವಾಸ ಸತ್ಯಾಗ್ರಹಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು* ಎಂಬುದು ಅವರ ಹೋರಾಟದ ತೀವ್ರತೆ ಮತ್ತು ಬದ್ಧತೆಯನ್ನು ತೋರಿಸುವ ಅಪೂರ್ವ ಘಟನೆ. ಇದು “ಕರ್ನಾಟಕ ಏಕೀಕರಣಕ್ಕಾಗಿ ನಡೆಯುವ ನಿಮ್ಮ ಹೋರಾಟಕ್ಕೆ ನನ್ನ ಜೀವದ ಕೊನೆಯ ಹನಿಯವರೆಗೂ ಬೆಂಬಲವಿದೆ” ಎಂಬ ಸಂಕಲ್ಪದ ಸಂಕೇತವಾಗಿತ್ತು. ಅವರ ಈ ನಡೆ ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿತು. ಮಹಿಳೆಯರು ಕೂಡ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು, ಅಗತ್ಯವಾದರೆ ವೈಯಕ್ತಿಕ ತ್ಯಾಗಕ್ಕೂ ಸಿದ್ಧರಾಗಬಹುದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದರು. *ನುಡಿನಾಡ ಮಾಡುವಗ |ಗಡಿನಾಡ ಮರಿಬ್ಯಾಡ್ರಿಬೇಡಿದೆವು ನ್ಯಾಯವ ಕೊಡಿರೆಂತ -ಸರ್ಕಾರಕತೊಡಕ ಇಡಬ್ಯಾಡರಿ ಕಡೆ ತನಕ||*ಎಂದು ಹಾಡುತ್ತಾ ಜಯದೇವಿ ತಾಯಿಯವರು ಸರ್ಕಾರಕ್ಕೆ ಎಚ್ಚರಿಸಲು ಪ್ರಯತ್ನಿಸಿದರು. ಹೋರಾಟದ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೇವಲ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂಬ ಅರಿವು ಮೂಡಿತು. ಕರ್ನಾಟಕದ ಏಕೀಕರಣದ ಪ್ರಶ್ನೆಯನ್ನು ನೇರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ಕೊಂಡೊಯ್ಯಬೇಕಾಗಿತ್ತು. ಆದ್ದರಿಂದ ಜಯದೇವಿ ತಾಯಿಯವರು ತಮ್ಮ ಸಂಗಡಿಗರೊಂದಿಗೆ ಸೊಲ್ಲಾಪುರದಿಂದ ದೆಹಲಿಯವರೆಗೆ ಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದರು. ಪ್ರವಾಸ ಕನ್ನಡಿಗರ ನೋವು, ಅಸಮಾಧಾನ ಮತ್ತು ಅಖಂಡ ಕರ್ನಾಟಕದ ಆಶಯವನ್ನು ದೇಶದ ರಾಜಧಾನಿಗೆ ಕೊಂಡೊಯ್ಯುವ ಪ್ರತೀಕಾತ್ಮಕ ರಾಜಕೀಯ…ಸಾಮಾಜಿಕ ಯಾತ್ರೆಯಾಗಿತ್ತು. ದಾರಿಯುದ್ದಕ್ಕೂ ಕನ್ನಡಿಗರ ಸಮಸ್ಯೆಗಳನ್ನು ಜನರಿಗೆ ತಿಳಿಸುವುದು, ಕರ್ನಾಟಕ ಏಕೀಕರಣದ ಅಗತ್ಯವನ್ನು ವಿವರಿಸುವುದು ಮತ್ತು ಕೇಂದ್ರ ನಾಯಕರ ಗಮನ ಸೆಳೆಯುವುದು ಈ ಪ್ರಯತ್ನದ ಉದ್ದೇಶವಾಗಿತ್ತು. *ನಾಡೊಂದುಗೂಡಿಸಿ ಕೊಡಿರೆಂದು ಹೊಂದಿಸಿಬೇಡ ಹೋದೆವ ದಿಲ್ಲಿಯ ಸರ್ಕಾರಕನುಡಿದೇವ “ಕನ್ನಡ ನಾಡೊಂದೇ “*ಎಂದು ಹಾಡಿದ ಜಯದೇವಿ ತಾಯಿಯವರು ಸೊಲ್ಲಾಪುರದಿಂದ ದೆಹಲಿಯವರೆಗೆ ಸಾಗಿದ ಈ ಪ್ರಯತ್ನವು ಒಂದು ಮಹತ್ವದ ಸಂದೇಶವನ್ನು ನೀಡಿತು….ಕರ್ನಾಟಕ ಏಕೀಕರಣವು ಕನ್ನಡಿಗರ ಸಾಮೂಹಿಕ ಹಕ್ಕು ಮತ್ತು ಭಾವನೆಯಾಗಿದೆ. ಜಯದೇವಿ ತಾಯಿಯವರಂತಹ ಮಹಿಳಾ ಹೋರಾಟಗಾರ್ತಿಯರು ಈ ಹಂತದಲ್ಲಿ ವಹಿಸಿದ ಪಾತ್ರ ವಿಶೇಷವಾದದ್ದು. ಅವರು ಭಾಷಣಗಳನ್ನು ಮಾಡುತ್ತಾ, ಸಮಾಲೋಚನೆಗಳನ್ನು ಆಯೋಜಿಸುತ್ತಾ … ಅಲ್ಲಲ್ಲಿ ಸಭೆಗಳನ್ನು ನಡೆಸಿ,ಉಪವಾಸ ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡುತ…,, ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಕೇಂದ್ರದ ಮಟ್ಟದಲ್ಲಿ ಕರ್ನಾಟಕದ ಧ್ವನಿ ಕೇಳಿಸುವಂತೆ ಮಾಡಲು ಪ್ರಯತ್ನಿಸಿದರು.ಈ ಘಟನೆಯು ಜಯದೇವಿ ತಾಯಿಯವರ ಧೈರ್ಯ ಮತ್ತು ಕೆಚ್ಚೆದೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ನಿರ್ಮಾಣಕ್ಕಾಗಿ ನಡೆಸಿದ ಹೋರಾಟವು ಕನ್ನಡಪರ ಚಿಂತಕರೊಂದಿಗೆ ನಿರಂತರವಾಗಿ ಚರ್ಚಿಸಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರು. ಸರ್ವಶ್ರೀ ಎಸ್. ನಿಜಲಿಂಗಪ್ಪ, ಎಸ್. ಆರ್. ಕಂಠಿ, ಹಳ್ಳಿಕೇರಿ ರುದ್ರಪ್ಪ, ಬಿ. ಡಿ. ಜತ್ತಿ ಮುಂತಾದ ಪ್ರಮುಖ ನಾಯಕರು ಜಯದೇವಿ ತಾಯಿಯವರೊಂದಿಗೆ ಆಗಾಗ ಸಮಾಲೋಚನೆ ನಡೆಸುತ್ತಿದ್ದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು ಎಂಬುದು ಎಲ್ಲರ ಪ್ರಮುಖ ಆಶಯವಾಗಿತ್ತು.ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೋರಾಟವನ್ನು ಹೇಗೆ ಸಂಘಟಿಸಬೇಕು, ಜನರಲ್ಲಿ ಕನ್ನಡ ನಾಡಿನ ಏಕೀಕರಣದ ಬಗ್ಗೆ ಜಾಗೃತಿ ಹೇಗೆ ಮೂಡಿಸಬೇಕು, ಸರ್ಕಾರದ ಮೇಲೆ ಒತ್ತಡ ಹೇಗೆ ತರಬೇಕು, ಕನ್ನಡ ಭಾಷಿಕ ಪ್ರದೇಶಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ಹೇಗೆ ತರಬೇಕು ಎಂಬುದರ ಕುರಿತು ತಾಯಿಯವರು ಮತ್ತು ನಾಯಕರು ಸುದೀರ್ಘವಾಗಿ ಚರ್ಚಿಸುತ್ತಿದ್ದರು. ಜನಜಾಗೃತಿ ಹಾಗೂ ವಿವಿಧ ಹೋರಾಟಗಳ ಮೂಲಕ ಕನ್ನಡಿಗರ ಒಗ್ಗಟ್ಟಿನ ಧ್ವನಿಯನ್ನು ಬಲಪಡಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿತ್ತು.ಇದೇ ಅವಧಿಯಲ್ಲಿ ಭಾರತ ಸರ್ಕಾರವು ಫಜಲ ಅಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗವನ್ನು ರಚಿಸಿತು. ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಯಾವ ರೀತಿಯಲ್ಲಿ ಪುನರ್‌ವ್ಯವಸ್ಥೆಗೊಳಿಸಬೇಕು ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದಾಗಿತ್ತು.ಈ ಸಂದರ್ಭದಲ್ಲಿ ಜಯದೇವಿ ತಾಯಿಯವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸುವುದರ ಜೊತೆಗೆ, ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರು. ರಾಜ್ಯ ಪುನರ ರಚನಾ ಆಯೋಗದ ಸದಸ್ಯರಾಗಿದ್ದ ಶ್ರೀ ಕೆ. ಎಂ. ಫಣಿಕ್ಕರ ಅವರೊಂದಿಗೆ ಜಯದೇವಿ ತಾಯಿಯವರು ಹಲವು ಬಾರಿ ಸುದೀರ್ಘವಾಗಿ ಚರ್ಚಿಸಿದರು. ಕನ್ನಡಿಗರು ಯಾವ ಯಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳ ಭಾಷಾ-ಸಾಂಸ್ಕೃತಿಕ ಸಂಬಂಧಗಳು ಹೇಗಿವೆ, ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕಾದ ಅಗತ್ಯವೇನು, ಜನರ ಆಶಯವೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಕರ್ನಾಟಕದ ಏಕೀಕರಣವು ಆಡಳಿತಾತ್ಮಕ ಬದಲಾವಣೆಯ ಜೊತೆ ಜೊತೆಯಾಗಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಭಾವನಾತ್ಮಕ ಏಕತೆಯ ಪ್ರಶ್ನೆ ಎಂಬುದನ್ನು ತಾಯಿಯವರು ಹೇಳುತ್ತಿದ್ದರು.ಹೀಗೆ ಹಿರಿಯ ನಾಯಕರೊಂದಿಗೆ ನಿರಂತರ ಚರ್ಚೆ, ಜನಜಾಗೃತಿ, ಹೋರಾಟ ಮತ್ತು ರಾಜ್ಯ ರಚನಾ ಆಯೋಗದೊಂದಿಗೆ ವಿಚಾರ ವಿನಿಮಯ ನಡೆಸುವ ಮೂಲಕ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ನಿರ್ಮಾಣದ ಮಹತ್ವದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಅವರ ಪ್ರಯತ್ನ ಚದುರಿಹೋಗಿದ್ದ ಕನ್ನಡಿಗರೆಲ್ಲರೂ ಒಂದೇ ನಾಡಿನ ಅಡಿಯಲ್ಲಿ ಒಂದಾಗಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ದೊರೆಯಬೇಕು ಎಂಬ ಗಾಢವಾದ ಕನ್ನಡಾಭಿಮಾನವಿತ್ತು. ಇಂತಹ ಅನೇಕ ಹೋರಾಟಗಾರರ ನಿರಂತರ ಪ್ರಯತ್ನಗಳ ಫಲವಾಗಿಯೇ ಮುಂದೆ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣದ ಕನಸು ನನಸಾಗುವ ದಾರಿ ಸುಗಮವಾಯಿತು.(ಮುಂದುವರೆಯಲಿದೆ) ಸವಿತಾ ದೇಶಮುಖ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ಪಟ ರಾಷ್ಟ್ರ ಪ್ರೇಮಿ ಜೈ ಹಿಂದ್ ಘೋಷಣೆ ಜನಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ರಾಜ್ಯಗಳ ಧರ್ಮೀಯರ ಕೊಡುಗೆ ಅಪಾರವಾಗಿದೆ. ಮಹಾತ್ಮಾ ಗಾಂಧಿ ನೆಹರು ವಲ್ಲಭಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಹೀಗೆ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಸಂಗ್ರಾಮ ಹೋರಾಟ ನಡೆದಿವೆ. ಇಂತಹ ಒಂದು ಅಪರೂಪದ ಹೋರಾಟವೇ ಭಾರತೀಯ ರಾಷ್ಟ್ರೀಯ ಸೇನೆಯ (INA) ಇದನ್ನು ಸ್ಥಾಪಿಸಿದವರು. ಸುಭಾಷ್ ಚಂದ್ರ ಬೋಸ್. ಇವರ ಕರೆಗೆ ಓಗೊಟ್ಟು ಸಾವಿರಾರು ಯುವಕರು ಭಾರತೀಯ ಸೇನೆಯನ್ನು ಸೇರಿದರು. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಮುಂತಾದ ಬೇರೆ ಬೇರೆ ಧರ್ಮದವರ ನಂಬಿಕೆಯುಳ್ಳ ಯುವಕರ ಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು . ಅವರೆಲ್ಲರ ಆಚರಣೆ ವಿಚಾರ ಭಿನ್ನ ಭಿನ್ನವಾಗಿ ಕಂಡು ಬಂದವು. ಕೆಲವರು ಬೆಳಿಗ್ಗೆ ಎದ್ದು ಕೂಡಲೇ ರಾಮ್ ರಾಮ್ ಎನ್ನುತ್ತಿದ್ದರು ಇನ್ನೂ ಕೆಲವರು ವಾಲೀಕುಂ ಸಲಾಂ ಎನ್ನುತ್ತಿದ್ದರು. ಸಿಖ್ ಜನಾಂಗ ಅಕಾಲಿ ಎನ್ನುತ್ತಿದ್ದರು ಹೀಗೆ ಒಂದೇ ಭಾರತೀಯ ಸೇನಾ ಸಂಸ್ಕೃತಿಯಲ್ಲಿ ಭಿನ್ನ ಭಿನ್ನವಾಗಿ ಸೈನಿಕರು ಘೋಷಣೆ ಅಥವಾ ತಮ್ಮ ತಮ್ಮ ಬೆಳಗಿನ ನಮಸ್ಕಾರಗಳನ್ನು ಹೇಳುತ್ತಿದ್ದರು. ಇದನ್ನು ಏಕ ರೂಪದಲ್ಲಿ ಅಳವಡಿಸಲು ಸುಭಾಷ್ ಚಂದ್ರ ಬೋಸರು ಚಿಂತಿಸ ಹತ್ತಿದರು ಆಗ ಇವರ ನೆರವಿಗೆ ಬಂದವರೇ ಅಬಿದ್ ಹಸನ್ ಸಫ್ರಾನೀ ಎಂಬ. ಮುಸ್ಲಿಂ ಯುವಕ. ಹಲವು ದಿನಗಳ ವರೆಗೆ. ಯೋಚನೆ ಮಾಡಿ ಜೈ ಹಿಂದುಸ್ತಾನಿ ಎಂದು ಆರಂಭದಲ್ಲಿ ಘೋಷಣೆ ಕೂಗಿದರೂ ಸಹಿತ ಮುಂದೆ ಅದನ್ನು ಜೈ ಹಿಂದ್ ಎಂಬ ಘೋಷಣೆಗೆ ಮಾರ್ಪಾಡಿಸಿದವರು ಅಬಿದ ಹಸನ್ ಸಫ್ರಾನಿ . ಅಬಿದ್ ಹಸನ್ ಸಫ್ರಾನಿ (Zain-al-Abdin Hasan) ಅವರು ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಒಡನಾಡಿ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (INA) ಪ್ರಮುಖ ಅಧಿಕಾರಿಯಾಗಿದ್ದರು. ಇಡೀ ದೇಶವನ್ನು ಒಗ್ಗೂಡಿಸಿದ ‘ಜೈ ಹಿಂದ್’ (Jai Hind) ಎಂಬ ಪ್ರಸಿದ್ಧ ಘೋಷಣೆಯನ್ನು ಸೃಷ್ಟಿಸಿದ ರೂವಾರಿ ಇವರೇ ಆಗಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ ಜನನ: ಇವರು 11 ಏಪ್ರಿಲ್ 1911 ರಂದು ಹೈದರಾಬಾದ್‌ನ ಶ್ರೀಮಂತ ಮತ್ತು ಬ್ರಿಟಿಷ್ ವಿರೋಧಿ ನಿಲುವು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಮೂಲ ಹೆಸರು: ಇವರ ನಿಜವಾದ ಹೆಸರು ‘ಝೈನ್-ಅಲ್-ಅಬ್ದಿನ್ ಹಸನ್’.ಶಿಕ್ಷಣ: ಇವರ ತಾಯಿ ಬ್ರಿಟಿಷರ ಮೇಲಿನ ವಿರೋಧದಿಂದಾಗಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಕಳುಹಿಸದೆ ಜರ್ಮನಿಗೆ ಕಳುಹಿಸಿದರು. ಅಲ್ಲಿ ಅಬಿದ್ ಅವರು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನೇತಾಜಿ ಒಡನಾಟ ಮತ್ತು ಐಎನ್‌ಎ (INA) ಪಾತ್ರಪ್ರೇರಣೆ: ಜರ್ಮನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾಷಣದಿಂದ ಪ್ರೇರಿತರಾಗಿ, ತಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಸಬ್‌ಮರೀನ್ ಪ್ರಯಾಣ: ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಅವರೊಂದಿಗೆ ಜರ್ಮನಿಯಿಂದ ಜಪಾನ್‌ಗೆ ಅತ್ಯಂತ ಅಪಾಯಕಾರಿ 90 ದಿನಗಳ ಸಬ್‌ಮರೀನ್ (ಜಲಾವೃತ ನೌಕೆ) ಪ್ರಯಾಣ ಕೈಗೊಂಡ ಏಕೈಕ ಭಾರತೀಯ ಇವರಾಗಿದ್ದಾರೆ.’ಸಫ್ರಾನಿ’ ಹೆಸರಿನ ಹಿನ್ನೆಲೆ: ಐಎನ್‌ಎ ಧ್ವಜ ವಿನ್ಯಾಸದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸೈನಿಕರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಕೋಮು ಸೌಹಾರ್ದತೆಯನ್ನು ಸಾರಲು, ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿಯನ್ನು (Saffron) ಸೂಚಿಸಿ, ತಮ್ಮ ಹೆಸರಿನೊಂದಿಗೆ ‘ಸಫ್ರಾನಿ’ ಎಂದು ಸೇರಿಸಿಕೊಂಡರು. ‘ಜೈ ಹಿಂದ್’ ಘೋಷಣೆಯ ಜನ್ಮ ಭಾರತೀಯ ಸೈನಿಕರನ್ನು ಧರ್ಮ ಮತ್ತು ಪ್ರಾಂತ್ಯಗಳ ಭೇದವಿಲ್ಲದೆ ಒಂದೇ ಗೌರವ ವಂದನೆಯಲ್ಲಿ ಸ್ವಾಗತಿಸಲು ನೇತಾಜಿ ಬಯಸಿದ್ದರು.ಆಗ ಅಬಿದ್ ಹಸನ್ ಅವರು “ಜೈ ಹಿಂದೂಸ್ತಾನ್ ಕಿ” ಎಂಬ ನುಡಿಗಟ್ಟನ್ನು ಸುಧಾರಿಸಿ “ಜೈ ಹಿಂದ್” (ಭಾರತಕ್ಕೆ ಜಯವಾಗಲಿ) ಎಂಬ ಸಂಕ್ಷಿಪ್ತ, ಶಕ್ತಿಯುತ ಘೋಷಣೆಯನ್ನು ಸೃಷ್ಟಿಸಿದರು. ನೇತಾಜಿ ಇದನ್ನು ತಕ್ಷಣವೇ ಒಪ್ಪಿಕೊಂಡು ಐಎನ್‌ಎಯ ಅಧಿಕೃತ ವಂದನೆಯನ್ನಾಗಿ ಮಾಡಿದರು. ರಾಜತಾಂತ್ರಿಕ ವೃತ್ತಿಜೀವನ (Diplomat)ಸ್ವಾತಂತ್ರ್ಯದ ನಂತರ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೋರಿಕೆಯ ಮೇರೆಗೆ ಇವರು ಭಾರತೀಯ ವಿದೇಶಾಂಗ ಸೇವೆಗೆ (IFS) ಸೇರಿದರು.ಈಜಿಪ್ಟ್, ಡೆನ್ಮಾರ್ಕ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ (Ambassador) ಅತ್ಯುತ್ತಮ ಸೇವೆ ಸಲ್ಲಿಸಿ 1969 ರಲ್ಲಿ ನಿವೃತ್ತರಾದರು. Nidhana ಈ ಮಹಾನ್ ದೇಶಭಕ್ತರು 9 ಮೇ 1984 ರಂದು ತಮ್ಮ ಸ್ವಂತ ನಗರವಾದ ಹೈದರಾಬಾದ್‌ನಲ್ಲಿ ನಿಧನರಾದರು. ಇತ್ತೀಚೆಗೆ ಅವರ ಸಾಹಸಮಯ ಜೀವನದ ಕುರಿತು Abid Hasan Safrani Netaji’s Comrade-in-Arms ಎಂಬ ಪುಸ್ತಕವನ್ನು ಅವರ ಕುಟುಂಬದವರು ಪ್ರಕಟಿಸಿದ್ದಾರೆ. ಇಂತಹ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಭಾರತೀಯ ಸೇನಾ ಪಡೆ ಸೇನಾನಿ ಇತಿಹಾಸಗಳ ಪುಟದಲ್ಲೂ ಸೇರ್ಪಡೆಗೊಂಡಿಲ್ಲ. __________________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ






