ಕವಿತೆ
ಹೊಸ ದಿಗಂತ
ಅಕ್ಷತಾ ಜಗದೀಶ
ಚುಮ್ಮು ಚುಮ್ಮು ನಸುಕಿನಲಿ
ಮುಂಜಾನೆಯ ನಡಿಗೆ..
ತಾ ಬರುವ ಸೂಚನೆ ನೀಡುತ
ದಿನಕರ ಮೂಡುವ ಘಳಿಗೆ..
ಹಕ್ಕಿಗಳ ಮಧುರ ಇಂಚರ ನಾದ
ತಲೆ ತೂಗುತ ನಿಂತಿವೆ
ನಡೆವ ದಾರಿಯ ಇಕ್ಕೆಲಗಳಲ್ಲಿ
ಹೂ ಗಿಡ ಬಳ್ಳಿಗಳು…..
ಅದೇಕೋ ಏನೋ..
ಕಾಣದಾಗಿದೆ ಇಂದು
ಆ ಸುಂದರ ಕ್ಷಣಗಳು..
ಮುಂಜಾನೆ ನಡಿಗೆ ಇದೆ…
ಮೈ ಕೊರೆಯುವ ಚಳಿಯು ಇದೆ
ದಿನಕರನ ಆಗಮನವು ಆಗುತಿದೆ..
ಆದರೇನು…?
ಹಕ್ಕಿಗಳ ನಾದವಿಲ್ಲ
ದಾರಿಯ ಇಕ್ಕೆಲಗಳಲ್ಲಿ
ಸ್ವಾಗತ ಕೋರುತ ನಿಂತ
ಮರಗಿಡಗಳು ಕಾಣದಾಗಿದೆ…
ಹಾ! ಈಗ ಅರಿವಾಯಿತೆನಗೆ
ನಾ ನಡೆದ ದಾರಿ ಈಗ
ಮರ ಗಿಡಗಳ ನುಂಗಿ ನಗರವಾಗಿದೆ
ಕೆರೆಗಳಿಲ್ಲ ಮರ ಗಿಡಗಳಿಲ್ಲ
ಚಿಲಿಪಿಲಿ ಹಾಡುವ ಹಕ್ಕಿಗಳಿಲ್ಲ
ವಿಪರ್ಯಾಸವೆಂದರೆ …..
ಅದರ ಆಲೋಚನೆ ನಮಗಿಲ್ಲ..
ಹೊಸ ದಿಗಂತದ ಹಾದಿಯಲಿ
ಬಾಡಿಹೋಗಿವೆ ಹೂ ಗಿಡ ಬಳ್ಳಿ..
ಮತ್ತೆ ಮೂಡಣದಲಿ ರವಿ ಮೂಡುತಲಿರುವ…
ಮುಂಜಾನೆಯ ನಡಿಗೆ ಮತ್ತೆ
ನಿರಂತರವಾಗಿ ಸಾಗಿದೆ
ಹೊಸ ದಿಗಂತದೆಡೆಗೆ…..
*********************************