ಅಂಕಣ ಬರಹ

ರಂಗ ರಂಗೋಲಿ – ೪

ಚಾವಡಿಯಲ್ಲಿ ರಂಗ ಗೀತೆ

ಎಂಟನೇ ತರಗತಿಯ ಕ್ಲಾಸಿನಲ್ಲಿ ಪುಟ್ಟ ಗುಬ್ಬಚ್ಚಿ ದೇಹದ ನಾನು ಮೊದಲನೇ ಬೆಂಚಿನಲ್ಲಿ ಮುದುಡಿ ಕುಳಿತಿದ್ದೆ.

” ದೇವದಾಸಿ ಪದ್ದತಿ,ಬಸವಿ ಪದ್ದತಿ,ಗೆಜ್ಜೆಪೂಜೆ ನಿಷೇಧಿಸಿದರು”

ತರಗತಿಯಲ್ಲಿ ಕನ್ನಡದ  ಬಾಲಕೃಷ್ಣ  ಮೇಷ್ಟ್ರು ಕರ್ನಾಟಕದ ಇತಿಹಾಸದ ಬಗ್ಗೆ ಬಿಡುವಿನಲ್ಲಿ ಕಥೆಯ ರೂಪದಲ್ಲಿ ಹೇಳುತ್ತಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಮೈಸೂರಿನ ಕರ್ತೃ. ಜಾರಿಗೆ ತಂದ ಈ ಕಾನೂನುಗಳು ಹೊಸದಾದ ಮನ್ವಂತರಕ್ಕೆ ನಾಂದಿ ಹಾಡಿತ್ತು.

ಥಟ್ಟನೆ ನನ್ನ ಕಣ್ಣೆದುರು, ಆ ದೊಡ್ಡ ಸುಂದರ ಮನೆ, ಒಳಗೆ ಗೋಡೆಗೆ ತೂಗುಹಾಕಿದ ಗೆಜ್ಜೆ, ಹಾಡುತ್ತಿದ್ದ ಭಜನೆ, ಜೊತೆಗೆ ಅವರ ಮುಖಗಳು ಸ್ಥಿರವಾಗಿ ಯಾವುದೋ ತಳಮಳಕ್ಕೊಳಕ್ಕಾಗಿ ಅಂತರ್ಮುಖಿಯಾಗುತ್ತಿದ್ದೆ. ಕಲೆಯ ಬಗೆಗಿನ ಕನಸಿಗೆ ಸೇತುವೆ ಕಟ್ಟಲು ಇವರ ದೇಣಿಗೆ ಚಿಕ್ಕದೇನು?.

ಶಾಲೆಯ ಮೈದಾನದಲ್ಲಿ  ಗೆಳತಿಯರು ಥ್ರೋಬಾಲ್, ಓಟ, ಎಂದು ಆಟದ ಹುಮ್ಮಸ್ಸಿನಲ್ಲಿದ್ದರೆ  ಬದಿಯಲ್ಲಿ ಸಾಲಾಗಿದ್ದ ಮರಗಳಲ್ಲಿ ಒಂದರ ನೆರಳಿಗೆ ಆತುಕೊಂಡು ಆಗಾಗ ಬಾಲ್ಯದಲ್ಲಿ ಆ ಮನೆಯ ಇಂಚು ಇಂಚುಗಳಲ್ಲಿ ಹುದುಗಿಸಿಟ್ಟ ನೆನಪುಗಳನ್ನು ಬೊಗಸೆಗಿಳಿಸಿ ತಾಜಾಗೊಳಿಸುತ್ತಿದ್ದೆ. ಎಂತದೋ ಸುಪ್ತ ನೆನಪುಗಳ ಗುಂಗಿನ ಸುಖ.

ಅದು  ಮುಗ್ಧತೆ ಆವರಿಸಿದ್ದ  ಎಲ್ಲವನ್ನೂ ಕುತೂಹಲದ ಮನಸ್ಸಿನಿಂದ ನೋಡಿ ಅದನ್ನು ಅನುಕರಿಸಿ ಅಭಿನಯಿಸುವ ಬಾಲ್ಯ. ರಾಮಾಯಣ, ಮಹಾಭಾರತ, ಕಥಾಸರಿತ್ಸಾಗರದ ಕಥೆಗಳ ಓದು. ಅಲ್ಲಿ ಕಾಣ ಸಿಕ್ಕಂತಹ ರಾಜಕುಮಾರಿಯರು ನನ್ನ ಕಣ್ಮುಂದೆ ಗೆಜ್ಜೆ ಕಟ್ಟಿ ತಿರುಗುತ್ತಿದ್ದರು. ನಾಯಕಿಯರೆಂದರೆ ದೊಡ್ಡ ಅರಮನೆಯಲ್ಲಿ ಇರುವವರು..ಹಿಂದೆ ಮುಂದೆ ಸಖಿಯರು ಇರಬೇಕು. ಅವರು ನಾಯಕಿಯ ಹಿಂದೆ ಸುತ್ತುವವರು. ಶಾಲೆಯಲ್ಲಿ ನನ್ನ ಗೆಳತಿಯರಿಗೆ ನಾನು ಓದಿದ,ಮರು ಸೃಷ್ಟಿಸಿದ,  ಕಟ್ಟಿದ ಕಥೆಗಳನ್ನು ಹೇಳಿ,ಅದನ್ನು ನಾನೂ ಅನುಭವಿಸುತ್ತಿದ್ದೆ.  ಅಂತರಂಗದಲ್ಲೊಬ್ಬಳು ರಾಜಕುಮಾರಿ. ನಾನು ಒಬ್ಬಳೇ ಇರುವಾಗ ಒಳಲೋಕದ ಭ್ರಮರ ಹೊರಗೂ ಹಾರಿ ನನ್ನ ಹೆಜ್ಜೆಗಳು ರಾಜಕುಮಾರಿಯ ಹೆಜ್ಜೆಗಳೇ ಆಗಿ ರೂಪಾಂತರಗೊಳ್ಳುತ್ತಿತ್ತು. ನಾನು ರಾಜಕುಮಾರಿ. ಹೌದು ಹಾಗೆಂದೇ ಭಾವಿಸಿದ್ದೆ, ಭ್ರಮಿಸಿದ್ದೆ.

ರಂಗು ರಂಗಾದ ರಂಗ ನನ್ನೊಳಗೆ ಪ್ರವೇಶಿಸಿದಾಗ  ನಾಟಕದ ಪಾತ್ರದೊಳಗೆ ಮಾಡುವ ಪರಕಾಯ ಪ್ರವೇಶದ  ಮೊದಲ ಪಾಠ ನನಗರಿವಿಲ್ಲದೇ ಬದುಕು ಕಲಿಸುತ್ತಿತ್ತು.

 ನಾನು ಇದ್ದ ಮನೆ ಹಳೆಯಮನೆ, ಚಿಕ್ಕ ಮನೆ.

ನಮ್ಮ ಈ ಮನೆಯ ಹತ್ತಿರವೇ ನನ್ನ ಕನಸಿನ ಅರಮನೆ ಒಂದಿತ್ತು. ಎದುರು ಉದ್ದದ ಚಾವಡಿ, ಸುಂದರ ಕೆತ್ತನೆಯ ಬಾಗಿಲು, ಆಗಿನ ಕಾಲಕ್ಕೆ ಬಲು ಅಪರೂಪದ ಟೇರೆಸ್ ಹೊದ್ದ ಮನೆಯದು. ಮನೆ ಎದುರು ಹೂವಿನ ಗಿಡಗಳು. ಗಿಡಗಳನ್ನು ಸಿಂಗರಿಸಿದ ಬಗೆಬಗೆಯ ಹೂವುಗಳು. ಬಟನ್ ಸೇವಂತಿಗೆ, ಗುಲಾಬಿ ಬಣ್ಣದ ಗುಲಾಬಿ, ಗಿಡ್ಡ ದೇಹದ ಮಲ್ಲಿಗೆ,  ನಂದಿಬಟ್ಟಲು, ದೇವರಿಗೆ ಏಕಾಂತದಲ್ಲಿ ಶಂಖ ಊದಿ ಎಬ್ಬಿಸುವ ಶಂಖಪುಷ್ಪ ಹೂಗಳು ಎತ್ತರದ ದೇವಮಂದಾರ ಮರಕ್ಕೆ ಸುತ್ತಿ ಹತ್ತಿದ ಬಳ್ಳಿಯಲ್ಲಿ ಅರಳಿದ್ದವು. ಇನ್ನೂ ಅದೆಷ್ಟೋ ಬಣ್ಣಗಳು ಅಲ್ಲಿ ಹೂವಿನ ರೂಪದಲ್ಲಿ ಆ ಮನೆಯ ಅಂದ ಹೆಚ್ಚಿಸಿತ್ತು. ಆ ಹೂವಿನ ಗಿಡಗಳ ಮುಂದೆ ಅದರ ರಕ್ಷಣೆಗೇ ನಿಂತ, ಕಾದು ಕಪ್ಪಾದ ಕಲ್ಲಿನ ಕಾಂಪೌಂಡ್. ದೊಡ್ಡಬೀಗದ ಗೇಟು. 

ಮುಖ್ಯ ರಸ್ತೆಯ ಬಳಿಯಲ್ಲೇ ಇರುವ ನಮ್ಮ ಮನೆಯ ಎದುರು  ನನ್ನ ಗೆಳತಿಯರು ಆಗಾಗ ತಿರುಗಾಡುವುದಿತ್ತು.  ಆಗೆಲ್ಲ ಮನೆಗಳಲ್ಲಿ ಕಠಿಣ ನಿರ್ಬಂಧಗಳು ಇರುತ್ತಿರಲಿಲ್ಲ. ಊರಿಡೀ ಸುತ್ತುವ ಸ್ಚಾತಂತ್ರ್ಯ ನಮಗಿತ್ತು. ಈ ಗೆಳತಿಯರು ಬರುವ ವಿಷಯ ನನಗೆ ತಿಳಿದರೆ, ಎಲ್ಲಿದ್ದರೂ ಓಡಿಹೋಗಿ ಆ ಅರಮನೆಯ ಹೊರಗಿನ ಎತ್ತರದ ಚಾವಡಿ ಹತ್ತಿ ಗಿಡಗಳ ನಡುವಿನಿಂದ ನುಸುಳಿಕೊಂಡು ಆ ಗೇಟಿನ ಒಳಗಡೆ ಗೋಣು ಎತ್ತರಿಸಿ ಗೆಳತಿಯರಿಗೆ ಕಾಣುವಂತೆ  ವಿಶಿಷ್ಟ ಭಂಗಿಯಲ್ಲಿ ನಿಂತಿರುತ್ತಿದ್ದೆ. ಒಂದು ಕೈ ಗೇಟಿನ ಮೇಲಿರಿಸಿ ರಸ್ತೆಯ ಮೇಲೆ ದೃಷ್ಟಿ ಗಟ್ಟಿ ಮಾಡಿ  ಕಾಯುತ್ತಿದ್ದೆ. ಒಮ್ಮೆ ಈ ಹುಡುಗಿಯರ ದಂಡು ಆ ರಸ್ತೆಯಲ್ಲಿ ಮನೆಯೆದುರಿಂದ ಹಾದು ಮರೆಯಾಯಿತೋ  ನಾನು ರಾಜಕುಮಾರಿಯ ಪಾತ್ರದ ಜಂಭದಿಂದ ಅರೆನಕ್ಕು  ನನ್ನ ಗುಡಿಸಲಲ್ಲಿ ಬಂದು  ಹುದುಗಿ ಕೊಳ್ಳುತ್ತಿದ್ದೆ.

ಅಂತಹ ವಿಶೇಷ, ವಿಶಿಷ್ಟ ಅನುಭೂತಿಯನ್ನು ನೀಡಿದಂತಹ ಆ ಮನೆ ಹಾಗೂ ಅದರ ಒಳಗಿರುವ ರಾಣಿಯರು ನನ್ನ  ರಂಗೋಲಿಗೆ ಚುಕ್ಕಿ ಬರೆದವರು. ಹೀಗಾಗಿ ಕನ್ನಡದ ಮೇಷ್ಟ್ರು ಇತಿಹಾಸದ ಕಥೆ ಕಲಿಸಿ ಕೊಟ್ಟಾಗಲೂ ನಿರ್ಧಿಷ್ಟ ವಿಷಯಗಳು ಎದುರು ಸಿಕ್ಕಾಗ ಅವರ ಪಾಶ ಸೆಳೆಯುತ್ತಿತ್ತು. ನಿಮಗೀಗ ಅವರನ್ನು ಪರಿಚಯಿಸುವೆ.

ಅವರು ನಾವು ಇದ್ದ ಬಾಡಿಗೆ ಮನೆಯ ಮಾಲೀಕರು.  ಹೆಂಗಸರು. ಅವರದ್ದು ನಮ್ಮ ಪಕ್ಕದ ಮನೆ. ದೊಡ್ಡ ಮನೆ.

ಅಲ್ಲಿ ಮೂವರು ಮಹಿಳೆಯರು, ಊರಿನ ಅವಿಭಾಜ್ಯ ಪಾತ್ರದಂತಿದ್ದರು. ನಂತರದಲ್ಲಿ ಇಬ್ಬರು. ಅವರನ್ನು ಅಜ್ಜಮ್ಮ, ಸಣ್ಣಜ್ಜಿ, ವತ್ಸಲ ಚಿಕ್ಕಿ ಎಂದು ಕರೆಯುತ್ತಿದ್ದೆ. ಹಾಗೆ ಕರೆಯಲು ಅವರೇ ನನಗೆ ಕಲಿಸಿ ಕೊಟ್ಟದ್ದು. ಅಲ್ಲಿ ಕಾಣುತ್ತಿದ್ದುದು ಶ್ರೀಮಂತ ಬದುಕು. ಗಂಡಸರು ಬಂದು ಹೋದರೂ  ವಾಸ ಇರಲಿಲ್ಲ. ಅಜ್ಜಿ ಪಿಸಪಿಸ ಅಂದಿದ್ದು ಕೇಳಿದ್ದೆ..’ ಅವರಿಗೆ ಮದುವೆ ಇಲ್ಲ’ ಆ ಮನೆ ನನ್ನ ಬಾಲ್ಯಕ್ಕೆ ಅನೂಹ್ಯ ಹಾಸು ಹೊದಿಸಿತ್ತು.

ಅಂಬೆಗಾಲಿನಿಂದ ಬಡ್ತಿಹೊಂದಿ ತಪ್ಪು ಹೆಜ್ಜೆ ಇರಿಸಿ ನಡೆಯಲು ಕಲಿತಾಗ ಆ ಕೆಂಪು ಸಿಮೆಂಟಿನ ತಂಪು ಪಾದಕ್ಕೆ ಅಪ್ತ ಬಂಧ ಬೆಸೆದಿತ್ತು.  ಅಜ್ಜಿಯಿಂದ ಜೋರು, ಮತ್ತು ಪೆಟ್ಟಿನಿಂದ ತಪ್ಪಿಸಿಕೊಂಡು ಓಡಲು ಸಿಗುತ್ತಿದ್ದ ಸುರಕ್ಷಿತ ತಾಣವೂ ಹೌದು. ” ಅಜ್ಜಮ್ಮ” ಅಲ್ಲಿನ ಯಜಮಾನಿ. ಆಗಲೇ ಅವರಿಗೆ ಇಳಿ ವಯಸ್ಸು. ಆದರೂ ರಾಣಿಯ ಗಾಂಭೀರ್ಯ,ಗತ್ತು. ಮಿತ ಮಾತು.

ಅವರು ಯಾವಾಗಲೂ  ಹೂಗಳಿದ್ದ ಬಿಳೀ ತೆಳ್ಳಗಿನ ಹತ್ತಿಯ ಸೀರೆ ಉಡುತ್ತಿದ್ದರು. ಅವರ ಹತ್ತಿರ ಹೋದರೆ ಎಂತದೋ ಸುವಾಸನೆ. ನಾನು ವಿನಾ ಕಾರಣ ಅವರ ಬಳಿ ಹೋಗಿ  ನಾಸಿಕ ಅರಳಿಸಿ ಉಸಿರಿಗೆ ತಾಲೀಮು ನೀಡಿ ಸಂಭ್ರಮಿಸುತ್ತಿದ್ದೆ. ನನಗೆ ಅವರನ್ನು ಮುಟ್ಟುವುದೆಂದರೆ ಎಂತದೋ ಪುಳಕ. ಅದು ರೇಶಿಮೆಯಂತಹ ನುಣುಪು ಸ್ಪರ್ಶ, ಸ್ವಚ್ಛ ಬಿಳಿ ಮೈ ಬಣ್ಣ, ಹದ ಎತ್ತರದ, ತುಸು ದಪ್ಪನೆಯ ಮೈಕಟ್ಟು. ಅಗಲ ಮುಖ.ನನಗೆ ಅವರೆಂದರೆ ಏಕೋ ಕಾಣೆ, ಅಚ್ಚರಿ, ಹೆಮ್ಮೆ, ಪ್ರೀತಿ.

 ಅವರು  ಪ್ರೀತಿಯಿಂದ ಕರೆಯುತ್ತಿದ್ದರು. ತಾವು ತಿಂಡಿ ತಿನ್ನುವಾಗ,ಊಟದ ಸಮಯ ನನ್ನ ಕರೆದು ಹತ್ತಿರ ಕುಳ್ಳಿರಿಸುತ್ತಿದ್ದರು. ದೊಡ್ಡ ಊಟದ ಬಟ್ಟಲು. ತರತರಹದ ವ್ಯಂಜನಗಳು, ಬೆಳ್ಳಿಯ ಲೋಟದಲ್ಲಿ ಹದಬಿಸಿ ಹಾಲು. ಪಕ್ಕದಲ್ಲಿ ಒಂದು ತಂಬಿಗೆ ನೀರು. ಅವರು ಊಟಕ್ಕೆ ಬರುವಾಗ ಇಷ್ಟೂ ತಯಾರು ಮಾಡಿ ಇಡುತ್ತಿದ್ದರು. ಅವರು ನಿಧಾನವಾಗಿ ಅಡುಗೆ ಮನೆಗೆ ಬರುತ್ತಿದ್ದರು. ಮನೆಯ ಹಜಾರದಿಂದ ಅಡುಗೆ ಮನೆ ಒಂದಷ್ಟು ದೂರ. ಅದು ಉದ್ದನೆಯ ಮನೆ. ನಾನು ಅವರ ಹೆಜ್ಜೆಗಳನ್ನು ಅನುಕರಿಸುತ್ತ ಅವರ ಹಿಂದೆ ಹಿಂದೆ ನಡೆಯುತ್ತಿದ್ದೆ.  ಪ್ರತಿಸಲವೂ ಅಷ್ಟೇ ಅಚ್ಚರಿಯಿಂದ ಅವರ ಊಟವನ್ನು ನೋಡುವಾಗ ನನಗೆ ಅದರಲ್ಲಿ ಆಸೆಯಿರುತ್ತಿರಲಿಲ್ಲ. ಆದರೆ ಅದನ್ನು ಕಾಣುವುದು ದೊಡ್ಡ ಸಂಭ್ರಮ.

ಬೆಳಗ್ಗೆ ಸ್ನಾನ ಮಾಡಿ ದೇವರ ಕೋಣೆ ಸೇರುತ್ತಿದ್ದರು. ಆ ಹೊತ್ತಿಗೆ ಅಲ್ಲಿ ಹರಿವಾಣದ ತುಂಬ ಹೂಗಳು, ಬಗೆಬಗೆಯ ಆರತಿ ತಟ್ಟೆಗಳು, ಗಂಧ, ಊದುಬತ್ತಿ, ಅದೆಷ್ಟು ದೇವರ ಪಟಗಳು, ತಾಳೆಗರಿಯ ಕಟ್ಟುಗಳು. ಆ ಸಮಯ ಮಾತ್ರ ಅವರು ಮಣೆ ಇಟ್ಟು ನೆಲದಲ್ಲಿ ಕೂರುವುದು.

ಅವರೇ ಪ್ರಾರ್ಥನೆಯನ್ನು ನನಗೆ ಕಲಿಸಿದ್ದು. ಅದೆಷ್ಟು ಕೀರ್ತನೆಗಳು, ಹಾಡುಗಳು ಅವರಿಗೆ ತಿಳಿದಿತ್ತು.  ಅವರ “ಜೊತೆಗೆ ಕುಳಿತುಕೋ” ಎಂಬ ಮೃದುವಾದ ಅಪ್ಪಣೆ ನನಗೆ ತುಂಬಾ ಪ್ರಿಯ. ನಾನು ಆ ವಯಸ್ಸಿಗೆ ಸಹಜ ಕುತೂಹಲದಿಂದ ನೋಡುತ್ತಿದ್ದೆ. ಅವರು ಒಳಹೋದೊಡನೆ ಆ ಕೋಣೆಯೆಲ್ಲವೂ ಊದುಬತ್ತಿಯ ಸುವಾಸನೆ, ಕರ್ಪೂರದ ಪರಿಮಳ, ಬಗೆಬಗೆಯ ಆರತಿಗಳು, ಯಾವುದೋ ಮಂತ್ರ ಪಠನೆ ಗಳಿಂದ ತುಂಬುತ್ತಿತ್ತು. ಅವರು ಎಲ್ಲವನ್ನೂ ಮುಗಿಸಿ ಅಡ್ಡಬಿದ್ದು ಹೊರಬರುತ್ತಿದ್ದರು. ಅಲ್ಲಿಗೆ ಆ ಕೋಣೆಯ ಬಾಗಿಲು ಮುಚ್ಚುತ್ತಿತ್ತು.

ನಂತರ ಅಲ್ಲಿ ಸಂಜೆ ಭಜನೆ. ಭಜನೆ ಮುಗಿದ ತಕ್ಷಣ ರಾತ್ರಿಯ ಊಟ.  ಇವರಿಂದ ಸಾಲುಸಾಲು ಭಜನೆ ಹಾಡುಗಳು ನನಗೆ ಕಂಠಪಾಠವಾದವು. ನನ್ನಿಂದ ಅವರು ಹಾಡಿಸುತ್ತಿದ್ದರು. ಅವರ ಮನೆಗೆ ಬಂದವರ ಎದುರು ನನ್ನ ಸಂಗೀತ ಕಛೇರಿ ನಡೆಯುತ್ತಿತ್ತು. ಹೆಚ್ಚಾಗಿ ಅವರ ನೆಂಟರು, ಹೆಂಗಸರೇ ಹೆಚ್ಚಾಗಿ ಬರುತ್ತಿದ್ದುದು. ಬರುವವರು ಕಾರಿನಲ್ಲಿ. ನಾನು ತಕ್ಷಣ ಪ್ರಸ್ತುತಿಗೆ ಅನುವಾಗಿ ಕಾಯುತ್ತಿದ್ದೆ. ಅವರು ಜೋರಾಗಿ ನನ್ನ ಕೂಗುತ್ತಿದ್ದರು. ಥಟ್ಟನೆ ನಾನು ಹಾರಿ ಜಿಗಿದು ಹೋಗಿ ದೊಡ್ಡ ಹಜಾರದ ಮೂಲೆಯಲ್ಲಿ ನಿಲ್ಲುತ್ತಿದ್ದೆ.

ಅವರು ನನ್ನ ಪರಿಚಯವನ್ನು ಸೊಗಸಾಗಿ ಮಾಡುತ್ತಿದ್ದರು. ಬಂದವರು ಕಣ್ಣರಳಿಸಿ ನನ್ನ ನೋಡುವುದು. ನಂತರ ಅಜ್ಜಮ್ಮನ ಅಪ್ಪಣೆಯಾಗುತ್ತಿತ್ತು. “ಹಾಡು..ನಾರಾಯಣತೇ ನಮೋನಮೋ..” ಅಪರೂಪಕ್ಕೆ ಕೆಲವೊಮ್ಮೆ ಅತಿಥಿ ಗಳ ಮುಖಚರ್ಯೆಯ ಭಾವಕ್ಕೆ ಹೆದರಿ  ನಾನು ಮತ್ತು  ಹಾಡು  ಬೇರೆಯಾಗುವುದೂ ಇತ್ತು. ಆಗಲೂ ನಡುವೆ ಅವರು ಸರಿಪಡಿಸಿ ನನ್ನ ಪರಾಕುಗಳನ್ನು ಸೊಗಸಾಗಿ ನುಡಿಸುತ್ತಿದ್ದರು. ಸ್ಪಷ್ಟ ಉಚ್ಛಾರಣೆ, ಗಾಯನ, ಹಾಡಿನ ಸಾಲುಗಳನ್ನು ಉರು ಹಚ್ಚಿ ಕಂಠಪಾಠ ಮಾಡುವ ಕಲೆ ಇತ್ಯಾದಿಗಳನ್ನು, ಕಲಿಸಿದ ಚಾವಡಿಯಲ್ಲಿ ನನಗರಿವಿಲ್ಲದೆಯೇ ಕಲಿಸಿದ ಗುರುಮಾತೆ ಅವರು.

ಅಲ್ಲಿ ಹೊಸದೊಂದು ನಂಟು ಬೆಸೆದಿತ್ತು. ಯಾರೂ ಇರದಿದ್ದಾಗ  ಪ್ಲಾಸ್ಟಿಕ್‌ ನ ಬಳ್ಳಿ ಹೆಣೆದ ಮರದ ಚೌಕಟ್ಟಿದ್ದ ಕುರ್ಚಿಯಲ್ಲಿ ಅವರು ಕೂತರೆ ನಾನು ಅವರ ಪಾದದ ಬಳಿ. ತಲೆ ಎತ್ತಿದ್ದರೆ ಬಹಳ ಎತ್ತರಕ್ಕೆ ಅವರು ಇದ್ದಂತೆ ಕಾಣುತ್ತಿತ್ತು. ಅವರ ಜೊತೆಗೆ ಮಾತು.

“ಮೊನ್ನೆ ಬಂದವರ ಹೆಸರು ಹೇಳು”

” ಕಳೆದ ವಾರ ಬಂದವರು”

 “ನಿನ್ನೆ ಊಟಕ್ಕೆ ಏನೆಲ್ಲ ಇತ್ತು”

ನನ್ನ ಉತ್ತರಕ್ಕೆ  ಅವರದ್ದು ಸುಂದರ ನಗು. ನನಗೆ ಅದೇ ದೊಡ್ಡ ಬಹುಮಾನ.

ಅಜ್ಜಮ್ಮನ ಮಲಗುವ ಕೊಠಡಿ ವಿಶಾಲವಾಗಿತ್ತು. ಮಂಚದ ಬಳಿ ಪುಟ್ಟ ಕೆತ್ತನೆ ಇದ್ದ ಸ್ಟೂಲ್ ರೀತಿಯ ಉಪಕರಣ.  ಒಬ್ಬರೇ ಕೂತಿದ್ದರೆ ಮೆಲ್ಲನೆ ದೇವರ ಹಾಡು ಮಣಮಣಿಸುತ್ತಿದ್ದರು. ನಾನು ಅಡಗಿಕೊಂಡು ಕೇಳಲು ಯತ್ನಿಸುತ್ತಿದ್ದೆ. ನನ್ನ ಮುಖ ಕಂಡರೆ ಅವರ ಹಾಡು ನಿಲ್ಲುತ್ತಿತ್ತು. ” ಬಾ ಎದುರು” ಅಪ್ಪಣೆಯಾಗುತ್ತಿತ್ತು. ಇಲ್ಲಿ ಕೂತುಕೋ. “ನನಗೀಗ ನಿನ್ನ ಅಜ್ಜಿ ಹೇಳಿದ ಒಂದು ಕಥೆ ಹೇಳು” ಉಳಿದವರಿಗೆ ಹೇಳಿದಷ್ಟು ಸಲೀಸಾಗಿ ಕಥೆ ಅವರೆದುರು ತೆರೆದುಕೊಳ್ಳುತ್ತಿರಲಿಲ್ಲ. ಒಂದಿಷ್ಟು ಯೋಚನೆ, ಲಜ್ಜೆ, ಸಂಕೋಚ ಪ್ರದರ್ಶನದ ನಂತರ ಕಥೆ ಆರಂಭ. ಅವರದ್ದು ಚೆಂದದಲ್ಲಿ ಗಟ್ಟಿಯಾಗಿ,ಒಂದು ಲಾಲಿತ್ಯದಲ್ಲಿ ಹೂಂಗುಟ್ಟುವಿಕೆ.

.ಜಾತ್ರೆ ಹತ್ತಿರ ಬಂದಾಗ ಅವರು ಹೇಳುತ್ತಿದ್ದರು:

” ನಾಳೆ ಹೋಗುತ್ತೀಯಲ್ವಾ, ದೇವರು ಜಾತ್ರೆಯಲ್ಲಿ ಹೋಗುವಾಗ ದೇವರ ಎದುರು ಝರಿ ಸೀರೆ ಕಚ್ಚೆಹಾಕಿ ಉಟ್ಟ ಹೆಂಗಸು ಇರಬಹುದು. ನೋಡಿ ಬಾ. ಮೊದಲೆಲ್ಲ ನೃತ್ಯದ ಹೆಜ್ಜೆ ಹಾಕುತ್ತ ಹೋಗುತ್ತಿದ್ದೆವು . ದೇವರ “ಬಲಿ” ಹೋಗುತ್ತಿರುವಾಗ ದೇವರ ಎದುರಿನಿಂದ ಚಾಮರ ದೇವರಿಗೆ ಬೀಸುತ್ತ ಹೋಗುವುದು.

ಅದು ನನ್ನ ಹಕ್ಕಾಗಿತ್ತು. ಅದು ನನಗೆ ಸಿಕ್ಕಿದ ಸೌಭಾಗ್ಯವಾಗಿತ್ತು.

ದೇವರ ಬಲಬದಿಯ ಹೆಣ್ಣು ನಾನು.”

ನನಗೆ ಏನೊಂದು ಅರ್ಥ ಆಗುತ್ತಿರಲಿಲ್ಲ.

ಮನೆಗೆ ಬಂದು ನನ್ನ ಅಜ್ಜಿಯ ಬಳಿ ಕೇಳುತ್ತಿದ್ದೆ.

“ಅಮ್ಮಾ..ಬಲಬದಿ ಅಂದರೇನು” 

ಆಕೆ ತನ್ನ ಬಲ ಕೈ ತೋರಿಸಿದರೆ ನಾನು ಪೆಚ್ಚಾಗುತ್ತಿದ್ದೆ.

ಅಜ್ಜಿ ಅನ್ನುತ್ತಿದ್ದಳು.

“ಜಾತ್ರೆಯಲ್ಲಿ ನೃತ್ಯ ಮಾಡುವುದು ದೇವದಾಸೀ   ಸಂಪ್ರದಾಯವಾಗಿತ್ತು. ಈಗ ಅದೆಲ್ಲ ನಿಷೇಧ. ಆದರೂ ಹರಕೆ ತೀರಿಸುವಂತೆ ಬಂದು ಹೋಗುತ್ತಾರೆ. ಅವರು ಮದುವೆಯಾಗುವುದೂ ಇಲ್ಲ. ದೇವಾಲಯದಿಂದ ಅವರಿಗೆ ಕುಂಕುಮ,ತಾಳಿ ಶಾಸ್ತ್ರ ಬದ್ದವಾಗಿ ನೀಡಲಾಗುತ್ತಿತ್ತು. ಈಗ ಅದೆಲ್ಲ ನಿಂತಿದೆ.”

ದೇವರಿಗೇ ಸಮರ್ಪಣೆ ಮಾಡಿಕೊಂಡ ಈ ಮಾತೃ ಪಾತ್ರಗಳು ನನ್ನನ್ನು ಪ್ರೀತಿಸಿದ್ದು,  ಸಮರ್ಪಣಾ ಭಾವದಿಂದ ಬದುಕನ್ನು ಪ್ರೀತಿಸಲು ನನಗೆ ಕಲಿಸಿದ್ದು  ರಂಗೋಲಿಗೆ ಜೀವ, ಭಾವ, ಬಣ್ಣ ತುಂಬಿವೆ.

**************************************************************

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

5 thoughts on “

  1. “ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಳದಿ
    ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ
    ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ
    ನೋಟಕರು ಮಾಟಕರೆ ಮಂಕುತಿಮ್ಮ”

    ನೋಟಕರು ಆಟಕರೆ ಅನ್ನುತ್ತಾರೆ ಡಿ ವಿ ಜಿ.
    ಬಾಲ್ಯದ ಮನಸ್ಸಿನೊಳಗೆ ಒತ್ತಿದ ಅಚ್ಚುಗಳು ಅಭಿನಯಕ್ಕೆ, ಹಾಡುಗಳಿಗೆ ದನಿಯಾಗುವ ಕ್ರಿಯೆಯನ್ನು ಅನಮ್ಯವಾಗಿ ಬರೆದಿದ್ದೀರಿ.

  2. “ನಾನು ರಾಜಕುಮಾರಿ. ಹೌದು ಹಾಗೆಂದೇ ಭಾವಿಸಿದ್ದೆ, ಭ್ರಮಿಸಿದ್ದೆ.”

    ಭ್ರಮೆಯಲ್ಲವೇ ಬೆಡಗಿ.. ನೀನೀಗಲೂ ರಾಜಕುಮಾರಿಯೇ

Leave a Reply

Back To Top