ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಆಗು ಅನಿಕೇತನ…!!

ಆಗು ಅನಿಕೇತನ…!! ಡಾ.ಉದಯ ಧರ್ಮಸ್ಥಳ ಆಹಾ…ಮನುಜ ಮತಿಯೇ…!ಏನೆಂಬೆ ನಿನ್ನ ನಿರ್ಣಯಗಳಿಗೆ…!ಬಡವನಿಗೆ ಮಗನಾಗಿ ಬಂದರೆ ಪ್ರಾರಬ್ದವೆಂಬೆ…ಸಿರಿಮನೆಯ ಸಂತಾನ ಅದೃಷ್ಟವೆಂಬೆ…!ಗೊಡ್ಡು ಪಾಪಿಯವಳಂತೆ ಹೆರದ ಹೆಂಗಸಾಕೆ…!ಹೆಡ್ಡುನಂಬಿಕೆಗಳವು ಹಿಂಬಾಲಿಸುವ ಕಂತೆಯಂತೆ…!ಇದ್ದಕ್ಕಿದ್ದಂತೆ ಎದೆಯೊಡೆದು ಸಾಯೆ ಪುಣ್ಯಮರಣವದಂತೆ…!ಹಲವುದಿನ ನರಳಾಡಿಯೋಡಿದವ ಪಾಪಿಯಂತೆ….!ಹುಚ್ಚು, ಕಾಣದ ಆಚೆ ಸುಖ ದುಃಖಗಳ ಅಲೋಕಗಳಂತೆ…!ನಂಬಿಸುವ ನರಳಿಸುವ ಬಗ್ಗಿಸುವ ಬಾಗಿಸುವ ಹಿಂಸಿಸುವ ಹಿಂಡು ಪುರಾತನ ಸಂತೆ…!ಮನ ಮತಿ ಗತಿ ಜಾತಿ ಭ್ರಾಂತಿ ಭ್ರಮೆಯ ಭ್ರಮಣ ಎಲ್ಲಕ್ಕಿಂತಲೂ ಕತ್ತಲೆಕಳೆವ ಕಾಲವಾಗಲಿ ಸಂಕ್ರಮಣ..!ಕೊರಡು ಕಳೆದೊಗೆಯೆ ಧೃತಿಗದೇನೋ ಕಟ್ಟುಪುರಾಣ…!ಇದ್ದಾಗ ಸಹಕರಿಸುಬಿದ್ದಾಗ ಮೇಲೆತ್ತುಒದ್ದಾಗ ಗುಮ್ಮಿಬಿಡು…!ಸಾವು ಸಹಜ…ಅದಕೂ ಮೊದಲು ಬದುಕೂ ಮುಖ್ಯ ಕಂಡರೆ ಕಾಣುಕಾಣದಿರೆ ಕಣ್ಮುಚ್ಚು…!ಸಹಿಸು ಸಹಿಸುವ ತನಕ…!ಅಸಹ್ಯವಾದಾಗ ಮುಗಿದುಬಿಡು….!ವೃಂದಾವನ ಗದ್ದುಗೆ ಸಮಾಧಿಯಡಿ ಹುದುಗದಿರು….!ನೀರಲ್ಲಿ, ಬೆಂಕಿಯಲಿ, ಮಣ್ಣಲ್ಲಿ ಸೇರಿಬಿಡಲಿ ಭೌಮಿಕ ದೇಹ…!ಗುರುತು ಸಿಗದಿರಲಿ…ಕುರುಹು ಬಿಟ್ಟರೆ ಸತ್ತ ಬದುಕನ್ನೂ ಸಿಗಿದು ಸೊಕ್ಕುವರಯ್ಯಾ ಮುಂದಿನ ನರರು…! ಆ ಗೀತೆ ಸತ್ಯ….ಅದುವೇ ನಿತ್ಯ…. ಆಗು ಅನಿಕೇತನ…!! –

ಆಗು ಅನಿಕೇತನ…!! Read Post »

ಕಾವ್ಯಯಾನ

ಕರುನಾಡು (ಭೋಗಷಟ್ಪದಿ)

ಕರುನಾಡು (ಭೋಗಷಟ್ಪದಿ) ಶುಭಲಕ್ಷ್ಮಿ ಆರ್ ನಾಯಕ (ಮೂರು ಮಾತ್ರೆಯ ಗಣಗಳು) ಎನಿತು ಅಂದ ನಮ್ಮ ನಾಡುಎನಿತು ಮಧುರ ನಮ್ಮ ನುಡಿಯುವೈಭವದ ಇತಿಹಾಸದ ಚೆಲುವ ಕರುನಾಡುಕೆಚ್ಚೆದೆಯ ಕಲಿಗಳ ನಾಡುಹಚ್ಚ ಹಸಿರ ಸೊಬಗ ಬೀಡುವೀರ ಯೋಧರ ತ್ಯಾಗ ಮೆರೆದಿಹ ಕರುನಾಡು//೧// ಸಾಧು ಸಂತರು ಅವತರಿಸಿಪಾವನಗೊಳಿಸಿದರು ನಾಡಕಟ್ಟಿದರು ಅವರು ಸಮತಾಭಾವದಿ ಬೀಡಪುಣ್ಯನದಿಗಳು ಪ್ರವಹಿಸಿಪಾಪ ತಿಕ್ಕಿ ತೊಳೆದು ಧನ್ಯಮಾಡಿವೆ ನಮ್ಮೆಲ್ಲರ ಕರುನಾಡ ಬೀಡಲಿ//೨// ಮಣ್ಣ ಕಣಕಣದಲಿ ಒಲವುಗೆಲುವ ಗೇಯದಲಿ ಒಲುಮೆಯುಕನ್ನಡಿಗರ ಮನದಲಿ ಮಿಡಿದಿಹುದು ನೋಡಿರಿಮಾನ್ಯವಿರಲಿ ನಾಡು ನುಡಿಗೆಬಳಕೆಯಾಗಲಿ ಕನ್ನಡವುಆರದೆ ಉರಿಯಲಿ ಕನ್ನಡದನಾಡ ದೀಪವು//೩// ಹರಿದು ಹೋಗದಿರಲಿ ನಾಡುಮುರಿದು ಹೋಗದಿರಲಿ ಭಾಷೆಹರಡಲಿ ಎಲ್ಲೆಲ್ಲೂ ಕನ್ನಡದ ಪರಿಮಳವುಕನ್ನಡ ಉಲಿವಾಗ ಬೇಡಕೀಳರಿಮೆಯು ಕನ್ನಡಿಗರೆಮುಡಿಪಿಡೋಣ ನಾಡು ನುಡಿಯ ಸೇವೆಗೆ ಜೀವ//೪// ****************************************

ಕರುನಾಡು (ಭೋಗಷಟ್ಪದಿ) Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ದರಾಮ ಹೊನ್ಕಲ್ ಹೇಳಬೇಕಾದ ಮಾತೆಲ್ಲವನು ಹೇಳಿಯಾಯಿತು ಮತ್ತೇನು ಮಾಡಲಿಕೇಳಬೇಕಾದ ಮಾತೆಲ್ಲ ಮತ್ತೆ ಕೇಳಿಯಾಯಿತು ಮತ್ತೇನು ಮಾಡಲಿ ತಿಳಿಯದವರಿಗೆ ತಿಳಿಸಬಹುದು ತಿಳಿದು ಮೌನ ಆದರೇನು ಮಾಡಲಿಮನದ ಬಯಕೆ ಬಾಯಿಬಿಟ್ಟು ಕಂಗಾಲಾಯಿತು ಮತ್ತೇನು ಮಾಡಲಿ ಕಾಯ ಕಾಯಬೇಕು ನಿಜ ಆ ಕಾಯುವಿಕೆಗೆ ಕೊನೆ ಯಾವಾಗಪಿಸುಮಾತು ಬಿಸುಮಾತಾಗಿ ಆಟವಾಯಿತು ಮತ್ತೇನು ಮಾಡಲಿ ಪ್ರೀತಿಯಲಿ ಬಿದ್ದವರೆಲ್ಲ ಹುಚ್ಚರೆಂಬ ಸತ್ಯ ಇಡೀ ಜಗವು ಬಲ್ಲದುಸತ್ಯ ಹುಚ್ಚೆನಿಸಿ ಬಾಗಿಲು ಮುಚ್ಚಿಯಾಯಿತು ಮತ್ತೇನು ಮಾಡಲಿ ಹೇಳಿ ಕೇಳಿ ಬೇಸತ್ತು ಬಸವಳಿದು ಹೋಗಿಹನು ನೀ ಬಲ್ಲೆ ಸಾಕಿತರವಲ್ಲ ತಿಳಿ ನೀ ಬರೀ ಕಾಡುವದಾಯಿತು ಮತ್ತೇನು ಮಾಡಲಿ ತನ್ನ ಪಾಡಿಗಿದ್ದವನ ಸುತ್ತ ಸುಳಿದು ಹುಚ್ಚುಹಚ್ಚಿ ಕೈ ಬಿಡೋದು ನ್ಯಾಯವೆಕಷ್ಟ ಸುಖದ ನಾಲ್ಕುಮಾತು ಇಲ್ಲವಾಯಿತು ಮತ್ತೇನು ಮಾಡಲಿ ಅದಕೆ ಜಿಪುಣತನ ಬಂದರೆ ಬರಗೆಟ್ಟ ಹೊನ್ನು’ ಬದುಕಿಗೆ ಏನರ್ಥ ಸಾಕಿಮನೆ ಮನ ಇಡೀ ಜೀವ ಕಾಯುವದಾಯಿತು ಮತ್ತೇನು ಮಾಡಲಿ *********************************************

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ರೊಕ್ಕದಿ ದಕ್ಕದೊಡವೆ ಅವಳು ನಿನ್ನ ಹೆತ್ತು ಹೊತ್ತವಳು ಹೆಣ್ಣುವಾತ್ಸಲ್ಯದಿ ಸಲಹಿದವಳು ಹೆಣ್ಣುಅವಳ ಮೇಲೆ ಹಸಿದ ಪಿಶಾಚಿಗಳ ಕಣ್ಣುಕಾಮದಬ್ಬರದಿ ಸಿಲುಕಿ ಆದಾಳೋ ಮಣ್ಣು ಹೆಜ್ಜೆ ಹೆಜ್ಜೆಗೂ ಸಜ್ಜಿಕೆಯನ್ನೇರಿಯಶಸ್ಸಿನ ಮುಕುಟ ಧರಿಸಿದರುಕಾಮ ಪಿಪಾಸುಗಳ ಹಸಿವಲಿನಲುಗಿಹಳು ಕಮರಿಹಳು ಬಡಪಾಯಿ ಹೆಣ್ಣ ತಿನ್ನುವಆಸೆ ಏಕೆ ಪಿಪಾಸುಗಳೇಈ ಘೋರ ತುಂಬಿದ ಕೃತ್ಯಕ್ಕೆಬೀದಿ ನಾಯಿ ಕಣ್ಣೀರಿಡುತ್ತಿದೆ ಅವಳ‌ ಹರಿದು ಸೊಕ್ಕಲ್ಲಿಮುಕ್ಕವೆಯಾಹೊಕ್ಕಳಿನ ನಂಟಿಟ್ಟು ಮುತ್ತಿಕ್ಕಿದಸಂಕುಲದವಳು, ರಕ್ಕಸನು ಹೊಕ್ಕಿದನೇನಿನ್ನ ರೊಕ್ಕದಿ ದಕ್ಕಿಸಲಾರದ ಒಡವೆಯವಳು ಅಳಿಸದಿರು ಕಣ್ಣೀರು ತರಿಸದಿರುನಿನ್ನಾಸೆಯ ಹಸಿವಲ್ಲಿ ದಹಿಸದಿರುಅವಳ ಮನಸು ನೋಯಿಸದಿರುಹಸಿವ ಹಿಂಗಿಸಿ ಉಸಿರಾಡಲು ಬಿಡು **************************************** ಚಂದ್ರು ಪಿ.ಹಾಸನ

ಕಾವ್ಯಯಾನ Read Post »

ಇತರೆ

ಲಂಕೇಶ್ ವಿಶೇಷ ಲಂಕೇಶ್ ಪತ್ರಿಕೆಯ ಪ್ರಭಾವ ಚಂದ್ರಪ್ರಭ  ಎಂಭತ್ತರ ದಶಕದ ದಿನಗಳವು. ನಾವೆಲ್ಲ ಮಾಧ್ಯಮಿಕ ಶಾಲಾ ಶಿಕ್ಷಣದ ಹಂತದಲ್ಲಿದ್ದ ಸಮಯ. ಅಪ್ಪನ ಪುಸ್ತಕ ಪ್ರೇಮದಿಂದಾಗಿ ಸಹಜವಾಗಿ ನಾವೆಲ್ಲ ಮಕ್ಕಳು ಆ ಪ್ರಭಾವಕ್ಕೆ ಒಳಗಾಗಿದ್ದ ಸಂದರ್ಭ. ಚಂದಮಾಮ,  ಸುಧಾ ಪತ್ರಿಕೆಗಳು ನಿಯಮಿತವಾಗಿ ಓದಿಗೆ ಸಿಗ್ತಿದ್ದುವು. ಜೊತೆಗೆ ನಿತ್ಯ ಸಂಗಾತಿ ಪ್ರಜಾವಾಣಿ. ಲಂಕೇಶ್ ಪತ್ರಿಕೆ ಎಂಬ ಹೊಸ ಪತ್ರಿಕೆಯೊಂದು ಮನೆ ಪ್ರವೇಶಿಸಿತು. ಅಷ್ಟೇ ಸಲೀಸಾಗಿ ಮನಸ್ಸನ್ನೂ ಪ್ರವೇಶಿಸಿತು. ಮುಖ್ಯವಾಗಿ ಜಾಹೀರಾತುಗಳೇ ಇಲ್ಲದ ಹೊಸ ವಿನ್ಯಾಸ, ಆಕರ್ಷಕ ಶೀರ್ಷಿಕೆಗಳು ಪತ್ರಿಕೆಯ ವೈಶಿಷ್ಟ್ಯವಾಗಿದ್ದವು. ಪುಂಡಲೀಕ ಸೇರ ರ ಹುಬ್ಬಳ್ಳೀಯಾಂವ ನಮ್ಮ ಅಚ್ಚುಮೆಚ್ಚಿನ ಅಂಕಣ.  ಅದೇ ರೀತಿ ಚಿತ್ರವಿಚಿತ್ರ ರೇಖಾಚಿತ್ರಗಳೊಂದಿಗೆ ಬರುತ್ತಿದ್ದ ನೀಲು ಕವಿತೆಗಳು ಅರ್ಥವಾಗದಿದ್ದರೂ ಮಜವಾಗಿ ತೋರುತ್ತಿದ್ದವು.  ಯಾವಾಗಲೂ ಪತ್ರಿಕೆಯ ಸಂಪಾದಕೀಯ ಓದಬೇಕು ಅಂತ ಹೇಳ್ತಿದ್ದ ಅಪ್ಪ ಟೀಕೆ ಟಿಪ್ಪಣಿ ಓದಲು ಹೇಳ್ತಿದ್ದರು. ರಾಜಕೀಯ ಸುದ್ದಿ, ವಿಮರ್ಶೆ, ವೈವಿಧ್ಯಮಯ ಅಂಕಣಗಳ ಪತ್ರಿಕೆ ಬಲು ಜನಪ್ರಿಯವಾಗಿ ಎಲ್ಲೆಲ್ಲೂ ಓದುಗ ವಲಯ ಸೃಷ್ಟಿಸಿಕೊಂಡಿತ್ತು. ತಮ್ಮ ವೈಶಿಷ್ಟ್ಯಪೂರ್ಣ ಲೇಖನಗಳಿಂದ ಪರಿಚಿತರಾದ ಲೇಖಕರಲ್ಲಿ ಪ್ರಮುಖವಾಗಿ ಪೂರ್ಣಚಂದ್ರ ತೇಜಸ್ವಿ, ಸಿ. ಎಸ್. ದ್ವಾರಕಾನಾಥ್, ಕೋಟಗಾನಹಳ್ಳಿ ರಾಮಯ್ಯ, ಶ್ರೀಕೃಷ್ಣ ಆಲನಹಳ್ಳಿ, ನಟರಾಜ್ ಹುಳಿಯಾರ್, ರವಿ ಬೆಳಗೆರೆ, ಅಬ್ದುಲ್ ರಶೀದ್, ವೈದೇಹಿ, ಬಾನು ಮುಷ್ತಾಕ, ಸಾರಾ ಅಬೂಬಕರ ಅಲ್ಲದೆ ಇನ್ನೂ ಅನೇಕರು. ಆಳುವ ಸರ್ಕಾರದ ಧೋರಣೆಗಳನ್ನು ನಿರ್ಭಿಡೆಯಿಂದ  ಕಟು ವಿಮರ್ಶೆಗೆ ಒಳಪಡಿಸುತ್ತಿದ್ದ ಪತ್ರಿಕೆ ನಿಜ ಅರ್ಥದಲ್ಲಿ ವಿರೋಧ ಪಕ್ಷದಂತೆ ಕೆಲಸ ಮಾಡತಿತ್ತು ಅಂತ ಈಗ ಸ್ಪಷ್ಟವಾಗಿ ಅರ್ಥವಾಗ್ತದೆ. ಆಗ ಗುಂಡೂರಾವ್, ಎಸ್. ಬಂಗಾರಪ್ಪ ಅಧಿಕಾರದಲ್ಲಿದ್ದ ಕಾಲ.  ಗುಂ  ಬಂ  ಎಂಬ ಹೃಸ್ವಗಳಿಂದ ಅವರನ್ನು ಸಂಭೋಧಿಸುತ್ತಿದ್ದುದು ಜನಮಾನಸದಲ್ಲಿ ಅಪಾರ ಮೆಚ್ಚುಗೆಗೂ ಸಂಚಲನಕ್ಕೂ ಪಾತ್ರವಾದ ಸಂಗತಿಯಾಗಿತ್ತು.  ಪಿ. ಲಂಕೇಶ್ ತಮ್ಮ ಪ್ರಖರ ಚಿಂತನ ಹಾಗೂ ನಿಷ್ಠುರ ನೋಟದಿಂದ ಸಾಹಿತ್ಯ, ರಾಜಕಾರಣ ಹಾಗೂ ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸಿದವರು. ಯಾವುದೇ ಸಂಗತಿ,  ಸನ್ನಿವೇಶಗಳೊಂದಿಗೆ ರಾಜಿಯಾಗದೆ  ಹಲವರ ಕೆಂಗಣ್ಣಿಗೆ ಗುರಿಯಾದವರು. ಮುಲಾಜಿಲ್ಲದ ಖಡಾಖಂಡಿತ ತಮ್ಮ ಬರಹಗಳು ಹಾಗೂ ಖಚಿತ ನಿಲುವಿನಿಂದಾಗಿ ತಮ್ಮ ವಿರುದ್ಧ ದಾಖಲಾದ ಕಾನೂನು ಕ್ರಮಗಳಿಂದಾಗಿ ಊರೂರು ಸುತ್ತಿದವರು. ಹತ್ತಾರು ಯುವ ಬರಹಗಾರರ ಲೇಖನಿಗೆ ವೇದಿಕೆಯಾಗಿದ್ದು ಲಂಕೇಶ್ ಪತ್ರಿಕೆ. ಅವರೆಲ್ಲ ಈಗ ಕನ್ನಡ ಸಾಹಿತ್ಯದ ಮೇರುವಾಗಿರುವುದು ಕಣ್ಣೆದುರಿನ ಸತ್ಯ. ಪತ್ರಿಕೆಯ ಜೀವಾಳವಾಗಿದ್ದಂಥವು ಚಿಕ್ಕ ಚಿಕ್ಕ ವಾಕ್ಯಗಳ ಪರಿಣಾಮಕಾರಿ ಬರಹಗಳು. ಆಡಂಬರದ ವಿಲಾಸವಿಲ್ಲದ ವಸ್ತುನಿಷ್ಠ  ಬರವಣಿಗೆ ಹಾಗೂ ದಮನಿತರ, ಶೋಷಿತರ ದನಿಯೂ ಆಗಿ ಸಾವಧಾನವಾಗಿ ಹೊರಹೊಮ್ಮಿದ್ದು ಲಂಕೇಶ್ ಪತ್ರಿಕೆ. ಯಾವುದನ್ನು ವಿರೋಧಿಸಿ ಯಾರನ್ನು ಕುರಿತಾಗಿ ಪತ್ರಿಕೆ ಬರೆಯುತ್ತಿತ್ತೊ ಅವರೇ ಪತ್ರಿಕೆಗಾಗಿ ಅತಿ ಹೆಚ್ಚು ದಾರಿ ಕಾಯುತ್ತ ಇರತಿದ್ದರು ಎನ್ನುವುದು ಲಂಕೇಶ್ ಪತ್ರಿಕೆಯ ಹೆಗ್ಗಳಿಕೆ. ಅಧ್ಯಾಪಕ, ಕತೆಗಾರ, ಕವಿ, ಸಿನಿಮಾ ನಿರ್ಮಾಣ, ನಟನೆ – ಹೀಗೆ ಬಹುಮುಖ ಆಯಾಮಗಳ ಲಂಕೇಶ್ ವ್ಯಕ್ತಿಯಾಗಿ ಬಹುಜನರ ಆದರ್ಶವಾದವರು. ಲಂಕೇಶ್ ತರಹ ಬರೆಯಬೇಕು ಎಂಬ ಹಂಬಲ ಇರಿಸಿಕೊಂಡ ಒಂದು ತಲೆಮಾರನ್ನೇ ಗುರುತಿಸಬಹುದು. ದೃಢ ತಾತ್ವಿಕ ನಿಲುವು, ತಾನು ಪ್ರತಿಪಾದಿಸುವ ತತ್ವ ಸಿದ್ಧಾಂತ ಕುರಿತು ಬದ್ಧತೆ, ಒಂದು ಬಗೆಯ ಆಕ್ರಮಣಕಾರಿ ನಡೆ ಇವೆಲ್ಲವೂ ಲಂಕೇಶ್ ವ್ಯಕ್ತಿತ್ವದ ಹೆಗ್ಗುರುತು. ಲಂಕೇಶ್ ತರಹ ಬರೆಯುವುದು ಸಾಧ್ಯವಾಗಬಹುದು ಆದರೆ ಆ ತರಹ ಬದುಕುವುದು ಕರಕಷ್ಟ. ಎದುರು ಹಾಕಿಕೊಳ್ಳುವುದು ಎದೆಗಾರಿಕೆ,  ತಾನು ನಡೆದದ್ದೇ ದಾರಿ ಎಂಬ ನಿರಂಕುಶತ್ವ, ಪ್ರತಿಯೊಂದು ಕ್ಷಣವನ್ನು ಸಂಪೂರ್ಣವಾಗಿ ಬದುಕುವುದು, ಗಡಿಯಾರವೇ ಸುಸ್ತಾಗುವಂತೆ ದೈತ್ಯವಾಗಿ ಕೆಲಸ ಮಾಡುವುದು ಇವೆಲ್ಲ ಒಟ್ಟಿಗೇ ದಕ್ಕುವ ಸಂಗತಿಗಳಲ್ಲ. ಇನ್ನೂ ಬಹುಕಾಲ ಬಾಳಿ ಬದುಕಿ ತಲೆಮಾರುಗಳನ್ನು ರೂಪಿಸಬೇಕಿದ್ದ, ಪ್ರಭಾವಿಸಬೇಕಿದ್ದ ಲಂಕೇಶ್ ಹೇಳದೇ ಕೇಳದೇ ಹೊರಟು ಹೋಗಿದ್ದು ಕನ್ನಡ ನಾಡು ನುಡಿಗೆ ಅಷ್ಟೇ ಅಲ್ಲ ಇಡೀ ಸಮುದಾಯದ ನಷ್ಟ.  ಕೆಲವರು ಹಾಗಿರುತ್ತಾರೆ, ಈಗ ಅವರು ಬದುಕಿರಬೇಕಿತ್ತು ಎಂದು ನೆನಪಿಸಿಕೊಳ್ಳುವಂಥ ಧೀರರು. ಹಾಗೆ ಹೆಜ್ಜೆ ಹೆಜ್ಜೆಗೂ ನೆನಪಾಗುವ ವ್ಯಕ್ತಿ ಮತ್ತು ಶಕ್ತಿ ಲಂಕೇಶ್. ವರ್ಷಗಳುರುಳಿದರೂ ಮತ್ತೆ ಮತ್ತೆ ಕಾಡುವ, ಕಾಯುವ ನೆನಪಾಗಿ   ನಮ್ಮೊಟ್ಟಿಗಿರುವ ಲಂಕೇಶ್ ನೆನಪಿಗೊಂದು ಪುಟ್ಟ ಸಲಾಮು.

Read Post »

ಇತರೆ

ದತ್ತಿ ಪ್ರಶಸ್ತಿವಿಜೇತರು

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪಡೆದ ಸಂಗಾತಿಯ ಬರಹಗಾರರು ವಿಶಾಲಾ ಆರಾಧ್ಯ ಕನ್ನಡ ಸಾಹಿತ್ಯ ಪರಿಷತ್ತಿನ‘ವಸುದೇವ ಭೂಪಾಲಂ’ ದತ್ತಿ ಪ್ರಶಸ್ತಿ ಬೊಂಬಾಯಿ ಮಿಠಾಯಿಮಕ್ಕಳ ಕವಿತೆಗಳು ವಿಭಾ ಪುರೋಹಿತ್ ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ. ಕಲ್ಲೆದೆ ಬಿರಿದಾಗ ( ಕವನಸಂಕಲನ ಹೆಸರು ಎನ್ ಆರ್ ರೂಪಶ್ರೀ ದತ್ತಿನಿಧಿ ಪ್ರಶಸ್ತಿಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿನಿಧಿ ಪ್ರಶಸ್ತಿ. ಪುಸ್ತಕದ ಹೆಸರುನಿನ್ನ ಪ್ರೀತಿಯ ನೆರಳಿನಲ್ಲಿ

ದತ್ತಿ ಪ್ರಶಸ್ತಿವಿಜೇತರು Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಏಕತಾರಿ ಕಣ್ಮರೆ ಹಲವು ವರುಷಗಳಿಂದ ತತ್ವಪದ ಗಾಯಕರನ್ನು ಭೇಟಿಮಾಡುತ್ತ, ಅವರು ಹಾಡುವ ಪದಗಳನ್ನು ಕೇಳುತ್ತ ತಿರುಗಾಡುತ್ತಿದ್ದೇನೆ. ಈ ಗಾಯನದಲ್ಲಿ ಜೀವಾಳದಂತೆ ಬಳಕೆಯಾಗುತ್ತಿದ್ದ ಏಕತಾರಿ ಮರೆಯಾಗುತ್ತಿರುವುದು ಕಾಣುತ್ತಿದೆ. ಯಾಕಿರಬಹುದು? ಇದರ ಪರಿಣಾಮ ಏನಾಗಿದೆ? ವಿಚಾರ ಮಾಡಬೇಕಿನಿಸಿತು. ತಾಡಿಸಿದರೆ ನುಡಿವ ತೊಗಲಿನ ತಮಟೆ, ಡೋಲು, ಮೃದಂಗ, ಢಕ್ಕೆ, ಹಲಗೆ, ದಮಡಿ, ದಪ್ಪು, ಉರುಮೆಗಳಿವೆ; ಗಾಳಿ ವಾದ್ಯಗಳಾದ ಹಾರ್ಮೋನಿಯಂ, ಕೊಳಲು, ಶಹನಾಯಿಗಳಿವೆ; ಮೀಟಿದರೆ ನಾದ ಹೊರಡಿಸುವ ವೀಣೆ, ಕಿನ್ನರಿ, ಚೌಡಿಕೆ, ಏಕತಾರಿ, ಸಾರಂಗಿಯಂತಹ ತಂತಿವಾದ್ಯಗಳೂ ಇವೆ. ಇವುಗಳಲ್ಲಿ ಏಕತಾರಿಯದೇ ಒಂದು ವಿಶಿಷ್ಟ. ಇದು ಏಕ್‍ತಾರ್(ಒಂದು ತಂತಿ) ಎಂಬ ಹಿಂದೂಸ್ತಾನಿ ಪದದಿಂದ ಹುಟ್ಟಿದೆ. ಇದೇ ಶಬ್ದವಿನ್ಯಾಸದಲ್ಲಿ ಸಿತಾರ್ (ಛೇತಾರ್) ಹೆಸರೂ ಬಂದಿರಬೇಕು. ಬಿಗಿದು ಕಟ್ಟಿದ ತಂತಿ ತನ್ನ ಸೆಡವಿನಲ್ಲಿ ಕಡ್ಡಿಯೊ ಬೆರಳೊ ತಾಗಿದರೆ ಝುಂ ಎಂದು ನಾದ ಹೊಮ್ಮಿಸುತ್ತದೆ. ಭಾರತದಾದ್ಯಂತ ಇರುವ ತಂತಿವಾದ್ಯಗಳನ್ನು ದೆಹಲಿಯ ಸಂಗೀತ ಮತ್ತು ನಾಟಕ ಅಕಾಡೆಮಿ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಅವುಗಳ ಕೆಳಗೆ ಅವನ್ನು ಬಳಸುವ ಕಲಾವಿದರ ವಿವರಗಳೂ ಇವೆ. ಪರಿಶೀಲಿಸಿದರೆ, ಹೆಚ್ಚಿನವು ವಿವಿಧ ಗುರುಪಂಥಗಳಿಗೆ ಸಂಬಂಧಿಸಿದವು. ಬಾವುಲರು, ನಾಥರು, ತತ್ವಪದಕಾರರು, ಮಂಟೆಸ್ವಾಮಿಯ ಅನುಯಾಯಿಗಳಾದ ತಂಬೂರಿಯವರು ಇದರ ವಾದಕರು. ಈ ತಂತೀವಾದ್ಯಗಳಿಗೂ ಅನುಭಾವಕ್ಕೂ ಯಾವುದೊ ಬಗೆಯ ಸಂಬಂಧವಿದೆ. ಶಿಶುನಾಳರು ಕೂಡ ‘ತರವಲ್ಲ ತಗೀ ನಿನ ತಂಬೂರಿ’ ಎಂಬಲ್ಲಿ ಸೂಚಿಸುವುದು ತಂತಿವಾದ್ಯವನ್ನೇ. ತಂಬೂರಿ ಚೌಡಿಕೆ ಸಿತಾರ್ ಏಕತಾರಿ ವೀಣೆ ಸರೋದ್ ಮುಂತಾದ ತಂತಿವಾದ್ಯಗಳನ್ನು ಕಲಾವಿದರು ದೇಹಕ್ಕೆ ತಗುಲಿಸಿಕೊಂಡು ನುಡಿಸುವರು ಮತ್ತು ಹಾಡುವರು. ಇದು ಅವರ ದೇಹದಿಂದಲೇ ನಾದ ಹೊರಡುತ್ತಿರುವಂತೆ ತೋರುವುದು. ಮೊದಲಿಂದಲೂ ದೇಹಕ್ಕೂ ತಂತೀವಾದ್ಯಗಳಿಗೂ ಜೈವಿಕ ಸಮೀಕರಣವಿದೆ. ಇದನ್ನು ಬಸವಣ್ಣನವರ `ಎನ್ನ ಕಾಯವ ದಂಡಿಗೆಯ ಮಾಡಯ್ಯ’ ವಚನ ನಾಟಕೀಯವಾಗಿ ಸೂಚಿಸುತ್ತದೆ. ಅಲ್ಲಿ ಮನುಷ್ಯ ಕಾಯದ ಅಂಗಾಂಗಗಳಾದ ಕಾಯ ಶಿರ ಬೆರಳುಗಳು ದಂಡಿಗೆ ಸೋರೆಬುರುಡೆ ಕಡ್ಡಿಗಳಾಗಿ ಪಲ್ಲಟಗೊಂಡು ವಾದ್ಯವಾಗಿ ರೂಪಾಂತರ ಪಡೆಯುತ್ತವೆ. ಕೊನೆಯಲ್ಲಿ ಕೂಡಸಂಗಮದೇವನಿಗೆ ಬತ್ತೀಸರಾಗವನ್ನು ಹಾಡಲು ಕೋರಲಾಗುತ್ತದೆ. ಅಲ್ಲಿರುವುದು `ಉರದಲ್ಲಿ ಒತ್ತಿಬಾರಿಸು’ ಎಂಬ ವಿನಂತಿ. ಉರವು (ಎದೆ)ಭಾವನೆಗಳ ಆಗರವೆನ್ನಲಾಗುವ ಹೃದಯವಿರುವ ಜಾಗ. `ಒತ್ತಿಬಾರಿಸು’ ಎಂಬ ಸೂಚನೆಯಲ್ಲಿ ಶೃಂಗಾರದ ಛಾಯೆಯೂ ಇದೆ.  ಮಾನವ ದೇಹವು ತಂತಿವಾದ್ಯವಾಗಿ ರೂಪಾಂತರಗೊಳ್ಳುವ ಈ ಕ್ರಿಯೆ ಎಲ್ಲಮ್ಮ ಸಂಪ್ರದಾಯದಲ್ಲಿ ಇನ್ನೂ ನಿಚ್ಚಳ. ದೇವಿಯು ಹಗೆಯಾದ ಕಾರ್ತವೀರ್ಯನನ್ನು ಕೊಂದು, ಅವನ ಬೆನ್ನೆಲುಬಿನಿಂದ ಚೌಡಿಕೆಯ ದಂಡವನ್ನೂ ನರದಿಂದ ತಂತಿಯನ್ನೂ ತ¯ಚೆಂಡಿನಿಂದ ಬುರುಡೆಯನ್ನೂ ಬೆರಳಿನಿಂದ ಕಡ್ಡಿಯನ್ನೂ ಮಾಡಿಕೊಂಡು ಹಾಡುತ್ತಾಳೆ. ಸಿದ್ಧರ ಕಥನಗಳಲ್ಲಿ ಅವರು ಕೊಲ್ಲಾಪುರದ ಮಾಯಿಯನ್ನು ಕೊಂದು ಅವಳ ಅಂಗಾಂಗಗಳಿಂದ ವಾದ್ಯಮಾಡಿ ನುಡಿಸುವರು. ಈಗಲೂ ಏಕತಾರಿಯಲ್ಲಿ ಬಳಸುವ ಒಣಸೋರೆಯನ್ನು ಬುರುಡೆ (ಕಪಾಲ) ಎಂದೇ ಕರೆಯುವುದು. ಕಿನ್ನರಿ  ಜೋಗಿಗಳು ಅಥವಾ ನಾಥರು ಕಪಾಲದಲ್ಲಿ ಆಹಾರ ಸ್ವೀಕರಿಸುವ ಪದ್ಧತಿಯಿತ್ತು. ಈಗ ಅವರ ಆಚರಣೆಗಳ್ಲಲಿ ಅದರ ಜಾಗದಲ್ಲಿ ಸೋರೆಯ ಬುರುಡೆ ಬಂದಿವೆ.  ಹೀಗೆ ದೇಹದ ಜತೆ ಸಮೀಕರಣಗೊಳ್ಳುವ ಕಿನ್ನರಿ ಇಲ್ಲವೇ ಏಕತಾರಿ ಹೊರಡಿಸುವ ನಾದವು, ತನ್ನನ್ನು ನುಡಿಸುತ್ತಿರುವ ಕಲಾವಿದನ ದೇಹದ ಜತೆ ಏಕೀಭವಿಸುತ್ತದೆ. ಅವರಿಬ್ಬರ ಮಿಲನದಿಂದ ಹುಟ್ಟುವ ನಾದವು ಯೌಗಿಕ ಪರಿಭಾಷೆಯಲ್ಲಿ ವಿಶಿಷ್ಟ ಅರ್ಥವನ್ನೂ ಪಡೆದಿದೆ. ಏಕತಾರಿ ನುಡಿಸುತ್ತ ಹಾಡುವಾಗ ಹಾಡಿನೊಳಗಿನ ತತ್ವವು ಅಂತರಂಗೀಕರಣಗೊಳ್ಳುತ್ತ, ಕಣ್ಮುಚ್ಚಿ ಹಾಡುವವರು ತಮ್ಮೊಳಗೇ ಸಂವಾದಿಸುತ್ತ  ಮೈಮರೆಯುವರು. ತಮ್ಮನ್ನು ತಾವು ಅರಿತು ತಾವೇ ದೈವವಾಗುವುದು ತತ್ವಪದಗಳ ಒಳಗಿರುವ ತತ್ವಾಶಯ. ಸಾಧನೆಯಲ್ಲಿ ತೊಡಗಿರುವವರು ಉಸಿರಾಟವನ್ನು ನಿಯಂತ್ರಿಸುತ್ತ ಮನಸ್ಸನ್ನು ಗೊತ್ತಿನಲ್ಲಿ ನಿಲ್ಲಿಸುವ ಅವಸ್ಥೆ ತಲುಪಿದಾಗ- ಅಂದರೆ ಸಮಾಧಿ ಅವಸ್ಥೆಯಲ್ಲಿ ಬಗೆಬಗೆಯ ನಾದಗಳು ಕೇಳಿಸುತ್ತವೆಯಂತೆ. ಅಲ್ಲಮ ಈ ಅನುಭವವನ್ನು `ತಾಳೋಷ್ಟ್ರ ಸಂಪುಟವೆಂಬುದು ನಾದಬಿಂದು ಕಳಾತೀತ’ ಎಂದು ಹೇಳುವನು. ಯೋಗದ ಪರಿಭಾಷೆಯಲ್ಲಿ `ಅನಾಹತ ನಾದ’ವೆಂಬ ಮಾತಿದೆ. ನಾದದ ಪ್ರಸ್ತಾಪವು ಯೌಗಿಕ ಸಾಧಕರಲ್ಲಿ ನಾನಾ ಅರ್ಥಗಳಲ್ಲಿ ಕಾಣಿಸುವ ನುಡಿಗಟ್ಟಾಗಿದೆ. ಸಾಧಕರು ತಮ್ಮನ್ನು ತಾವು ಅರಿಯುವ ಸಾಧನೆಯಲ್ಲಿ ಭಾಷಾತೀತವಾದ ನಾದವು ಟ್ರಾನ್ಸ್ ಅವಸ್ಥೆಗೆ ಒಯ್ಯುವ ಸಾಧನವಾಗಿ ದುಡಿಯುತ್ತ ಬಂದಿರುವುದು. ಸೂಫಿಗಳಲ್ಲೂ ಸಂಗೀತವನ್ನು ಸಾಧನೆಯ ಉಪಕರಣವಾಗಿ ಬಳಸುವರು. ಆದರೂ ಅಲ್ಲಿ ತಂತೀವಾದ್ಯ ಕಡಿಮೆ. ಇರಾನ್ ಆಫಘಾನಿಸ್ಥಾನ್ ಬಲೂಚಿಸ್ಥಾನ್‍ಗಳ ಸೂಫಿಗಾಯನದಲ್ಲಿ ತಂತೀವಾದ್ಯವಿದೆ. ಬಂಗಾಲದ ಬಾವುಲರನ್ನು ತಂತೀವಾದ್ಯ ಹೊರತುಪಡಿಸಿ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ಹೀಗೆ ಯೋಗಲೋಕದ ಹಾಡಿಕೆಯಲ್ಲಿ ವಿಶಿಷ್ಟ ಸ್ಥಾನವುಳ್ಳ ಏಕತಾರಿ ಕಣ್ಮರೆಯಾಗುತ್ತಿದೆ. ಹಳೇಮೈಸೂರು ಭಾಗದಲ್ಲಿ ಅದು ಉಳಿದುಕೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಗಾಯಬ್ ಆಗಿದೆ. ಅಪರೂಪಕ್ಕೆ ಏಕತಾರಿಗಳು ಕಂಡರೂ ಅವು ಬುರುಡೆ ಒಡೆದ, ದಂಡ ಮುರಿದ, ತಂತಿ ಹರಿದ ಅವಸ್ಥೆಯಲ್ಲಿವೆ. ಅವುಗಳ ಜಾಗದಲ್ಲಿ ಯೂರೋಪಿನಿಂದ ಆಗಮಿಸಿರುವ ಹಾರ್ಮೋನಿಯಂ ವಿರಾಜಮಾನವಾಗಿದೆ. ಹಳಬರನ್ನು ಕೇಳಿದರೆ, ತಮ್ಮ ಕಾಲದಲ್ಲಿ ಇದ್ದುದು ಏಕತಾರಿ ಮಾತ್ರ ಎನ್ನುವರು.  “ನಾವು ಫಸ್ಟಿಗೆ ತಂಬೂರಿ ಕಾಯೊಳಗೆ ಹಾಡತಿದ್ದಿವಿ. ಈಗ ಅದನ್ನ ಬಿಟ್ಟು 15-20 ವರ್ಷವಾಯಿತು. ತಂಬೂರಿ ಕಾಯೀನೂ ಈಗ ಸಿಗದಂಗಾಗಿದೆ’’ ಎಂದು ಬಲ್ಲಟಗುಡ್ಡದಿಂದ ಬಂದಿದ್ದ ಗಾಯಕ ಅಂಬಾಮಠದ ಜಾತ್ರೆಯಲ್ಲಿ ಹೇಳಿದ. ಆದರೆ ಈಗ ತಂಬೂರಿ ಇಲ್ಲವಾದ ಬಗ್ಗೆ ಅವನಲ್ಲಿ ಆತಂಕವೇನಿರಲಿಲ್ಲ.   ಹಿಂದೂಸ್ತಾನಿ ಸಂಗೀತ ಪದ್ಧತಿಯು ಉತ್ತರ ಕರ್ನಾಟಕದಲ್ಲಿ ಪ್ರವೇಶಿಸಿದ ಬಳಿಕ, ಅದರ ಜತೆ ಹಾರ್ಮೊನಿಯಂ ನುಗ್ಗಿ ಏಕತಾರಿಯನ್ನು ಹಿಂತಳ್ಳಿತು. ಇದರಿಂದ ತತ್ವಪದ ಹಾಡಿಕೆಗೆ ಹಿಂದೂಸ್ತಾನಿ ಸಂಗೀತಗಾರರ ಹಾಗೆ ಕಛೇರಿಯ ರೂಪ ಸಿಕ್ಕಿತು. ಕಲಬುರ್ಗಿ ಸೀಮೆಯ ಬಹಳಷ್ಟು ತತ್ವಪದ ಗಾಯಕರು, ಹಿಂದೂಸ್ತಾನಿ ಸಂಗೀತಗಾರರಂತೆ, ಬೆಂಗಳೂರಿನ ಸುಗಮ ಸಂಗೀತ ಕಲಾವಿದರಂತೆ, ತಾವೇ ಪೇಟಿ ಬಾರಿಸುತ್ತ, ತತ್ವಪದ ಹಾಡುತ್ತ ದೊಡ್ಡ ಸಭೆಗಳಲ್ಲಿ ಹಾಡುವರು. ಏಕತಾರಿಯು ಸಣ್ಣಗುಂಪಿನ ಸಾಧಕರ ನಡುವಿದ್ದರೆ, ಹಾರ್ಮೊನಿಯಂ ತತ್ವಪದಗಳನ್ನು ದೊಡ್ಡ ಸಭಾ ಕಾರ್ಯಕ್ರಮಗಳಿಗೆ ವಿಸ್ತರಿಸಿದೆ. ಏಕತಾರಿ ಹಾಡುವವರಿಗೆ ತತ್ವದೊಳಗಿನ ಅರ್ಥವನ್ನು ಒಳಬಿಟ್ಟುಕೊಂಡು ಅಂತರ್ಮುಖಿಯಾಗಿಸುತ್ತಿದೆ; ಹಾರ್ಮೊನಿಯಂ ತಬಲಗಳು ಹಾಡುವವರನ್ನು ವೃತ್ತಿಪರನನ್ನಾಗಿಸುತ್ತಿವೆ. ಇದಕ್ಕೆ ತಕ್ಕಂತೆ ಸಂಸ್ಕøತಿ ಇಲಾಖೆಯು ಗ್ರಾಮೀಣ ಕಲಾವಿದರನ್ನು ಉತ್ತೇಜಿಸುವ ಭಾಗವಾಗಿ ಹಾರ್ಮೊನಿಯಂ ವಿತರಿಸುತ್ತಿದೆ. ಇವೆಲ್ಲವೂ ಏಕತಾರಿಯ ನಿರ್ಗಮವನ್ನು ತೀವ್ರಗೊಳಿಸಿವೆ. ಒಂದು ವಾದ್ಯದ ಕಣ್ಮರೆಯಿಂದ ಅಥವಾ  ಆಗಮನದಿಂದ ಹಾಡು ಪರಂಪರೆಯಲ್ಲಿ ಏನಾಗುತ್ತದೆ? ತತ್ವಪದ ಸಾಹಿತ್ಯವು ಏಕತಾರಿಯ ಜತೆಗೆ ಸಂಹವನವಾಗುವಂತೆ, ಹಾರ್ಮೊನಿಯಂ ಗದ್ದಲದಲ್ಲಿ ಸಂಹವನವಾಗುವುದಿಲ್ಲ. ಜನ ಕೂಡ ತತ್ವಪದಗಳ ಅರ್ಥದ ಹಂಗಿಲ್ಲದೆ ಒಟ್ಟಾರೆ ಸದ್ದನ್ನು ಆಲಿಸುವಂತೆ ತೋರುತ್ತಿದೆ. ವಾದ್ಯಗಳ ಈ ಆಗಮನ ಇಲ್ಲವೇ ಕಣ್ಮರೆಯು ಸಾಹಿತ್ಯ ಸಂಗೀತ ಮತ್ತು ಅನುಭಾವ ದರ್ಶನದ ಮೂರೂ ಸ್ತರಗಳಲ್ಲಿ  ಪಲ್ಲಟಗಳನ್ನು ತಂದಿದೆ. ಇಂತಹ ಸನ್ನಿವೇಶದಲ್ಲಿ ಏಕತಾರಿಯನ್ನು ಬಿಡದೆಯೂ ಸಾಹಿತ್ಯದ ಅರ್ಥಕ್ಕೆ ಚ್ಯುತಿತಾರದೆ ಕಲಾವಿದರಾಗಿ ವಿಸ್ತರಣೆ ಪಡೆದಿರುವ ಮರೆಪ್ಪದಾಸರ ತಂಡ ವಿಶಿಷ್ಟವೆನಿಸುತ್ತದೆ. ಯಲಬುರ್ಗ ಸೀಮೆಯ ಮಾರೆಪ್ಪ ತಂಡ ಏಕತಾರಿ ಬಳಸುವ ಬಗೆ ಅಪೂರ್ವ. ಅವರು ತಂತಿಗಳನ್ನು ಬೆರಳು ಇಲ್ಲವೇ ಕಡ್ಡಿಯಿಂದ ಮೀಟದೆ, ಸಣ್ಣದೊಂದು ಕೋಲಿಂದ ಬಾರಿಸುತ್ತ ಹಾಡುವರು. ಮತ್ತೂ ವಿಶೇಷವೆಂದರೆ, ಇದರ ಜತೆ ಪಶ್ಚಿಮದ ವಯಲಿನನ್ನು(ಪಿಟೀಲು) ಬಳಸುವುದು. ನಾನು ಕಂಡಂತೆ ಪಿಟೀಲು ಬಳಸಿ ಹಾಡುವ ಏಕೈಕ ತತ್ವಪದ ಗಾಯಕರ ತಂಡವಿದು. ಒಂದೆಡೆ ಯೂರೋಪಿನಿಂದ ಬಂದ, ಹೆಸರಲ್ಲೇ ಸಾಮರಸ್ಯ ಅರ್ಥವುಳ್ಳ ಹಾರ್ಮೋನಿಯಂ, ಏಕತಾರಿಯ ಗಂಟಲನ್ನು ಹಿಸುಕಿದೆ; ಇನ್ನೊಂದೆಡೆ ಯೂರೋಪಿನ ವಯಲಿನ್, ಏಕತಾರಿಯ ಜತೆ ಅಪೂರ್ವ ಗೆಳೆತನ ಸಾಧಿಸಿದೆ. ಯೂರೋಪು ಭಾರತದ ಜತೆ ಸಾವು ಬದುಕಿನ ಆಟವನ್ನು ವಾದ್ಯಗಳ ಜತೆ ಮಾತ್ರವಲ್ಲ, ಇಡೀ ಸಂಸ್ಕøತಿಯ ಜತೆಯೇ ಮಾಡಿದೆ. ಎಂತಲೇ ನಾವದನ್ನು ಇಡಿಯಾಗಿ ದ್ವೇಷಿಸುವ ಇಲ್ಲವೇ ಪ್ರೀತಿಸುವ ಸರಳ ಸನ್ನಿವೇಶದಲ್ಲಿ ನಾವಿಲ್ಲ. ಅಸಮ್ಮತಿ-ಸಮ್ಮತಿಗಳನ್ನು ವಿಷಯವಾರು ಹಾಗೂ ಸಂದರ್ಭಾನುಸಾರ ಮಾಡುವ ಇಕ್ಕಟ್ಟಿನೊಳಗೆ ಸಿಲುಕಿದ್ದೇವೆ. ಈ ಇಕ್ಕಟ್ಟು ಸಾವು ಬದುಕಿನ ಅನುಭವ ಕೊಡುತ್ತಿದೆ. ಚೋದ್ಯವೆಂದರೆ, ಕೆಲವರಿಗೆ ಸಾವಿನ ಅನುಭವವಾಗುವ ಅಂಶವು, ಉಳಿದವರಿಗೆ ಮರುಹುಟ್ಟಿಗೆ ಕಾರಣವಾಗುವುದು. ಎಲ್ಲ ಸಮಾಜಗಳಲ್ಲೂ ಜೀವಂತ ಪರಂಪರೆಗಳು ಕಳೆದುಕೊಳ್ಳುವ ಪಡೆದುಕೊಳ್ಳುವ ದ್ವಂದ್ವಾತ್ಮಕ ಪ್ರಕ್ರಿಯೆಯಲ್ಲಿಯೇ ರೂಪುಗೊಳ್ಳುತ್ತಿರುತ್ತವೆ. ಕಳೆತ ಮತ್ತು ಪಡೆತಗಳ ಫಾಯದೆ ಲುಕ್ಸಾನುಗಳು ಲೆಕ್ಕಕ್ಕೆ ಸಿಗದಷ್ಟು ಸಂಕೀರ್ಣವಾಗಿರುತ್ತವೆ. ********************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ  ಸಾಲುಗಟ್ಟಿದ  ಮನಸ್ಸುಗಳು ಮನೆ ಕಟ್ಟುವಾಗ ಮೊದಲು  ಕಲ್ಲಿನಿಂದ ಗಟ್ಟಿಯಾದ ಅಡಿಪಾಯ, ಆಮೇಲೆ ಕಟ್ಟುವುದೇ ಗೋಡೆ!. ತಳಪಾಯದ ನಾಲ್ಕೂ ಅಂಚುಗಳುದ್ದಕ್ಕೂ ನಾಲ್ಕು ಗೋಡೆಗಳು ಮಧ್ಯದಲ್ಲಿ ಸ್ಪೇಸ್ ಮತ್ತು ಗಾಳಿ ಬಂಧಿಸಲ್ಪಡುತ್ತದೆ. ಒಳಗೆ ಮತ್ತೊಂದಷ್ಟು ಗೋಡೆಗಳು. ಡ್ರಾಯಿಂಗ್ ರೂಂ ಮತ್ತು ಮಲಗುವ ಕೋಣೆ ನಡುವೆ ಗೋಡೆ, ಮನೆಗೆ ಬರುವ ಆಗಂತುಕರಿಂದ ಪ್ರೈವೆಸಿ ಅತ್ಯಗತ್ಯ.  ಆಮೇಲೆ ಅಡುಗೆ ಕೋಣೆ ಮತ್ತು ಡೈನಿಂಗ್ ರೂಂ ನಡುವೆ ಗೋಡೆಗಳು. ಮತ್ತೆ, ದೇವರ ಕೋಣೆ ಎನ್ನಲ್ಪಡುವ ಗೂಡಿನಂತಹ ಚಿಕ್ಕ ಕೋಣೆಗೂ ಗೋಡೆಗಳು, ಒಳಗೆ ದೇವರನ್ನು ಕೂರಿಸಲು. ಸಮಾಜವಾದಕ್ಕೇ ಸವಾಲು, ಈ ಪ್ರೈವೇಟ್ ಎನ್ನುವ ಮನೆ!. ಮನೆಯ ಹೊರಗೆ, ಮನೆಯೂ ಸುರಕ್ಷಿತವಾಗಲಿ ಎಂದು ಕಾಂಪೌಂಡ್ ಗೋಡೆ. ಅದಕ್ಕೆ ಒಂದು ಗೇಟು. ಗೇಟಲ್ಲಿ ಬೋರ್ಡು, ‘ನಾಯಿಗಳಿವೆ ಎಚ್ಚರಿಕೆ’ !.  ಮನೆಯೊಳಗೆ ಸ್ವಂತ ಹಣ, ಚಿನ್ನ ಇತ್ಯಾದಿಗಳನ್ನು ನಗರದ ಕಳ್ಳರಿಂದ, ಢಕಾಯಿತರಿಂದ ಸುರಕ್ಷಿತವಾಗಿ ಬಚ್ಚಿಡಲು ಉಕ್ಕಿನ ಕಪಾಟುಗಳು, ಅದಕ್ಕೆ ದೊಡ್ಡ ಬೀಗ. ಕಳ್ಳರು ಮನೆಯೊಳಗೆ ನುಗ್ಗದಂತೆ ಬಾಗಿಲು. ಅದನ್ನು ಒಳಗಿಂದ ಲಾಕ್ ಮಾಡಲು ಕದ, ಉಕ್ಕಿನ ಚಿಲಕ ಇತ್ಯಾದಿ. ಮನೆ ಮನೆಗಳ ಸಾಲುಗಳು, ಅವುಗಳ ನಡುವೆ ಬೀದಿಗಳು. ಬೀದಿಗಳಿಗೆ ಸಂಖ್ಯೆಗಳು, ಹೆಸರುಗಳೂ ಬೇಕು,ವಿಳಾಸಕ್ಕಾಗಿ. ಮನೆಗಳ ತ್ಯಾಜ್ಯಗಳನ್ನು ನಗರದ ಹೊರಗೆ ಹರಿಯುವ ನದಿಗೆ ಸಾಗಿಸಲು ಕೊಳಚೆ ಚರಂಡಿಗಳು ನೆಲದಡಿಯಲ್ಲಿ. ಆ ಚರಂಡಿಗಳನ್ನು ಮುಚ್ಚಿ ಸುಂದರವಾಗಿ ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ!. ನಗರ ನಿರ್ಮಲವಾಗಿರಬೇಕಲ್ಲ!!. ನಾಗರೀಕತೆ ಅಥವಾ ಸಿವಿಲೈಸೇಷನ್ ಎಂಬ ಪದದ ಜತೆಗೆ ಒಂದು ವ್ಯವಸ್ಥೆ ಇದೆ. ಒಂದರ ಬಗುಲಲ್ಲಿ ಒಂದು ಹೀಗೆ ಅನುಶಾಸಿಸಿ, ಕಟ್ಟಿದ ಸಾಲುಗಳು, ಸಾಲು ಸಾಲುಗಳು , ಒಂದು ಸಾಲಿನ ಮೇಲೆ ಇನ್ನೊಂದಷ್ಟು ಸಾಲುಗಳಾಗಿ ಇಟ್ಟಿಗೆಗಳನ್ನು ಪೇರಿಸಿ ಸಿಮೆಂಟ್ ನಿಂದ ಚೆನ್ನಾಗಿ ಒಂದಕ್ಕೊಂದು ಅಂಟಿಸಿ ಗೋಡೆ ಕಟ್ಟಿ, ಬಾಗಿಲು  ಕೂಡಿಸಿ, ಅಂತಃಕರಣವನ್ನೂ ಒಳಗೆ ಬಂಧಿಸಿದರೆ ಅದು ನಗರದ ಮನೆಯಾಗುತ್ತೆ. ನಗರದ ವ್ಯವಸ್ಥೆಯೊಳಗೆ ನಾಗರಿಕ ಸಮಾಜ ಸಂವಹಿಸಿ ಬದುಕುವಾಗ, ವ್ಯಾಪಾರಿಗಳು, ಕವಿಗಳು, ಕಾರ್ಮಿಕರು, ಆಫೀಸರುಗಳು, ಆಳುವವರು, ಆಳಿಸಿಕೊಳ್ಳುವವರು, ಕಳ್ಳರು, ಹೀಗೆ ಎಲ್ಲರೂ ಉಸಿರಾಡುವ ಪಟ್ಟಣದ ಗಾಳಿ ಒಂದೇ. ನಗರದ ನಿಯಮಗಳು,  ಒಂದು ರೀತಿ ಕವಿತೆಯ ವ್ಯಾಕರಣದ ಹಾಗೆ!. ಬಂಧ, ಛಂದದ ಕೋಶದೊಳಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸಲೇ ಬೇಕು. ನಮ್ಮ ದೇಹದ ಕೋಟ್ಯಂತರ ಜೀವಕೋಶಗಳೂ ಒಂದು ಕ್ರಮಬದ್ಧತೆಗೇ ಒಳಪಟ್ಟು, ಜೀವಕೋಶಗಳ ನಗರವನ್ನೇ ಕಟ್ಟಿಕೊಂಡಿವೆ. ಅಂತಹಾ ದೇಹದ ಸುವ್ಯವಸ್ಥಿತ ಪಟ್ಟಣದೊಳಗೆ ಅಂತರ್ಗತವಾಗಿ ಮನುಷ್ಯ ಚೇತನ ಸದಾ ಕ್ರಿಯಾಶೀಲವಾಗಿದೆ. ಬಸವಣ್ಣ ಹೇಳಿದ ಸ್ಥಾವರದೊಳಗಿನ ಜಂಗಮವದು. ಹಾಗಿದ್ದರೆ, ಹೊಸ ಹೊಸ ಯೋಚನೆಗಳು, ಸೃಜನಶೀಲ ತತ್ವಗಳು ರೂಪ ತಳೆಯುವುದು ಹೇಗೆ!. ಮನುಷ್ಯ ಪ್ರಜ್ಞೆಯ ಚೇತನ ಸ್ವರೂಪಕ್ಕೆ ಮನೆಯ ವ್ಯಾಖ್ಯೆ ಏನು?. ವ್ಯವಸ್ಥೆಯ ಮಿತಿ, ನಿಯಮಗಳನ್ನು ಮೀರಿದ ಚೇತನ ಸ್ವರೂಪವನ್ನು ಕುವೆಂಪು ನೋಡುವ ಬಗೆ ಹೀಗಿದೆ ಅಲ್ಲವೇ. ” ಓ! ನನ್ನ ಚೇತನ ಆಗು ನೀ ಅನಿಕೇತನ || ರೂಪ ರೂಪಗಳನು ದಾಟಿ ನಾಮ ಕೋಟಿಗಳನು ಮೀಟಿ ಎದೆಯ ಬಿರಿಯ ಭಾವದೀಟಿ ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ! ಅನಂತವಾಗಿರು “ ದೇಹ, ಮನಸ್ಸು ಮತ್ತು ಚೇತನ ಇವುಗಳು ಒಂದಾಗಿ ಪ್ರಕಟವಾಗುವುದೇ ಮನುಷ್ಯನ ರೂಪದಲ್ಲಿ. ದೇಹ ಮತ್ತು ಮನಸ್ಸಿಗೆ ಮನೆ ಬೇಕು, ವ್ಯವಸ್ಥೆ ಬೇಕು, ಸಮಾಜ ಬೇಕು. ನಾಗರಿಗತೆಯ ಎಲುಬು ಗೂಡೊಳಗೆ ಸಿದ್ಧಾಂತಗಳೂ ಮನೆಮಾಡುತ್ತವೆ. ಇವುಗಳೆಲ್ಲವೂ ನಮ್ಮ ಬದುಕನ್ನು, ಬದುಕುವ ಬಗೆಯನ್ನು, ಚಿಂತನೆಯನ್ನು ಒಂದು ಚೌಕಟ್ಟಿನೊಳಗೆ ಕೂಡಿಸುವಾಗ, ಅದಕ್ಕೊಂದು ಸ್ಥಿರತೆ, ಸಮತೋಲನ ಪ್ರಾಪ್ತವಾಗುತ್ತೆ. ಆದರೆ, ವಿಕಸನಕ್ಕೆ ತಹತಹಿಸುವ ಸೃಜನಶೀಲತೆಗೆ, ಚೇತನಕ್ಕೆ ಈ ಎಲ್ಲವೂ ಬಂಧನಗಳೇ.  ರೂಪ ಮತ್ತು ಸ್ವರೂಪ ಎಂಬ ಡೆಫೆನಿಷನ್ ನನ್ನು ದಾಟಲು, ಹೆಸರಿನ ಅಚ್ಚೊತ್ತು ಎಂಬ ಸ್ವಚಿತ್ರ ರೇಖೆಗಳನ್ನು ಮೀರಿ, ಎಲ್ಲ ತತ್ವದ ಎಲ್ಲೆ ಮೀರಿ ಅನಂತವೇ ಗುರಿಯಾಗಿ ವಿಸ್ತರಿಸುವುದು ಚೇತನ.  ಮನೆ ಕಟ್ಟುವುದು ಎಂದರೆ, ಈ ಚೈತನ್ಯದ ವಿಕಸನಕ್ಕೆ ಪೂರ್ಣವಿರಾಮ ಹಾಕಿದಂತೆ. ಸದಾ ಚಲನಶೀಲವೇ ಚೇತನ. ಹಾಗಿದ್ದರೆ ಮನುಷ್ಯನಿಗೆ ಮನೆಯೇ ಬೇಡವೇ?.ಹಾಗೆಂದು ಕವಿಯ ಭಾವವಲ್ಲ.  ಸ್ಥಿರ ಮತ್ತು ಚಲನಶೀಲ ಶಕ್ತಿಗಳು ನಮ್ಮೊಳಗೆ ಒಂದಕ್ಕೊಂದು ತಳಕು ಹಾಕಿಕೊಂಡು ಸದಾ ಟಗ್ ಆಫ್ ವಾರ್ ನಡೆಸುತ್ತಲೇ ಇರುತ್ತವೆ.  ಸೃಜನಶೀಲ ಪ್ರಜ್ಞೆ, ಕವಿಯಾಗುತ್ತದೆ, ಕಲಾವಿದನಾಗುತ್ತದೆ. ಸದಾ ವಿಕಸನದತ್ತ ತುಡಿಯುವ ಮನಸ್ಸು ರಾತ್ರೆ ಮನೆಯೊಳಗೆ ಬೆಚ್ಚಗೆ ನಿದ್ರಿಸುತ್ತೆ. ನೇಸರನ ಮೊದಲ ಕದಿರು ಕನಸುಗಾರನ ಕನಸಿಗೆ, ಕಲ್ಪನೆಗೆ,  ಸ್ಪೂರ್ತಿಯಾಗುತ್ತೆ. ಮನೆ ಹಳೆಯದಾದಾಗ ಹೊಸ ಮನೆ ಕಟ್ಟ ಬೇಕಾದರೆ, ಮೊದಲು ಹಳೆಯ ಅಡಿಪಾಯ, ಗೋಡೆಗಳನ್ನು ಮುರಿದು ತೆಗೆದು, ಹೊಸ ಮನಸ್ಥಿತಿಗನುಗುಣವಾಗಿ, ಕನಸು,ಕಲ್ಪನೆಗಳಿಗನುಗುಣವಾಗಿ ಪುನಃ ಇಟ್ಟಿಗೆಗಳನ್ನು ಒಂದೊಂದೇ ಜೋಡಿಸಿ- “ಕಟ್ಟುವೆವು ನಾವು ಹೊಸ ಮನೆಯೊಂದನು!” ನಗರವನ್ನು ಕಟ್ಟುವ ಪ್ರಕ್ರಿಯೆ, ನಗರದ ವ್ಯವಸ್ಥೆ ಇವುಗಳೆಲ್ಲಾ, ಮನಸ್ಸಿನ, ನಾಗರಿಕ ಸಮಾಜಪ್ರಜ್ಞೆಗೆ ಹಿಡಿಯುವ ಕನ್ನಡಿ ತಾನೇ. ಕಂಬಾರರ ಇಟ್ಟಿಗೆಯ ಪಟ್ಟಣದ ಎದೆಬಡಿತ ಹೀಗಿದೆ.  ಇಟ್ಟಿಗೆಯ ಪಟ್ಟಣ ಹಸಿರನಲ್ಲ, ಈ ನಗರದಲ್ಲಿ ಬಿತ್ತಿ ಬೆಳೆಯುತ್ತಾರೆ ಮಣ್ಣಿನಿಟ್ಟಿಗೆಯನ್ನ. ಇಟ್ಟಿಗೆ ಬೆಳೆಯುತ್ತದೆ, ಕಟ್ಟಡವಾಗುತ್ತದೆ. ಕಟ್ಟಡ ಆಕಾಶದವಕಾಶವನ್ನ ಚುಚ್ಚಿ ಬಿಸಿ ಮಾಡುತ್ತದೆ. ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ ಕಿಸಕ್ಕಂತ ಹಲ್ಲು ಕಿರಿದು ಹಳದಿಯ ನಗು ನಗುತ್ತದೆ. ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ ಹಸಿರು ಇಣುಕಿದರೆ, ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ. ಪಾಪಾತ್ಮ ಹಸಿರು ಹುತಾತ್ಮನಾಗದೆ ಸಾಯುತ್ತದೆ. ಗೊತ್ತಾ ನಿಮಗೆ- ಈ ಸಿಟಿಯೊಳಗೆ ಆತ್ಮದ ಮಾರ್ಕೆಟ್ಟಿದೆ. ತಲೆಯ ಕೊಯ್ದು, ತೊಗಲ ಸುಲಿದು ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ. ತಲೆ ತಿಂಬವರಿಗೆ ಸೂಚನೆ: ಅದು ಹಲ್ಕಿರಿದು ಅಣಕಿಸಿದರೆ ಹೆದರಬೇಡಿರಿ. ***  ***  *** ಮಣ್ಣು, ಹಸಿರು ಮತ್ತು ಜನಪದ, ಇವಗಳ ನಡುವೆ ಆತ್ಮಸಂಬಂಧ. ಯಾವ ಶಾಸ್ತ್ರದ, ತಂತ್ರಜ್ಞಾನದ, ಲಿಪಿಯ ಸಹಾಯ ಇಲ್ಲದೇ  ಪೀಳಿಗೆಯಿಂದ ಪೀಳಿಗೆಗೆ ಬಾಯಿಮಾತುಗಳಿಂದ ದಾಟುತ್ತಾ, ಜನಜೀವನದ ಅನುಭವದ ಸತ್ವವನ್ನೂ ಹೀರಿ ಬೆಳೆಯುವ ಜ್ಞಾನ ಪ್ರಕಾರ, ಜಾನಪದ. ಜಾನಪದದ ಒಂದೊಂದು ಹೆಜ್ಜೆಗಳೂ ಒಂದೊಂದು ಪೀಳಿಗೆ. ಇದೆಲ್ಲಾ ಯಾಕೆ ಹೇಳಿದೆ ಎಂದರೆ, ಚಂದ್ರಶೇಖರ ಕಂಬಾರ ಅವರು ಜನಪದದಲ್ಲೇ ಬೇರು ಕಂಡ ಬರಹಗಾರರು. ಅವರ ಕವಿತೆಗಳಲ್ಲಿ, ಅಂತರ್ಗತ ಜನಪದ ಧ್ವನಿಯಿದೆ. ಈ ಕವಿತೆಗಾಗಿ, ಜಾನಪದದ ಇನ್ನೊಂದು ಮುಖವನ್ನೂ ಹೇಳಬೇಕು. ಸಾಮಾನ್ಯವಾಗಿ ಹಳ್ಳಿಯ ಜನ ಮುಗ್ಧರು, ಮನುಷ್ಯ ಮನುಷ್ಯನ ನಡುವೆ ಇರುವ ಸಂಬಂಧ, ಪ್ರೀತಿ ಗೌರವಗಳನ್ನು ಅತ್ಯಂತ ಶುಧ್ಧ ಅಂತಃಕರಣದಿಂದ ಅನುಭವಿಸುವ ಮಂದಿ ಇವರು. ಇಟ್ಟಿಗೆಯ ಪಟ್ಟಣ ಈ ಕವಿತೆಯಲ್ಲಿ, ಇಟ್ಟಿಗೆ ಮೇಲೆ ಇಟ್ಟಿಗೆ ಬೆಳೆದು ಪಟ್ಟಣವಾಗಿ, ಆಕಾಶದವಕಾಶ ನುಂಗುವುದು ಮೊದಲ ಚರಣ. ಬೆಳೆವ ಹಸಿರಿನ ಅವಕಾಶವನ್ನೂ ಆಕಾಶದ ಮೂರೂ ಸ್ವತಂತ್ರ ಆಯಾಮಗಳನ್ನು ಪಟ್ಟಣ ನುಂಗಿದೆ. ಒಂದುಕಡೆ ಜಗತ್ತಿಗೇ ಉಸಿರು ಕೊಡುವ ಹಸಿರು ಕಳೆಯಿತು ಎಂದಾದರೆ, ಅದರ ಜತೆಗೆ ನ್ಯಾಚುರಲ್ ಆದ ಮನುಷ್ಯ ಪ್ರಜ್ಞೆಯೂ, ಮತ್ತು ಜೀವಜಾಲದ ನೈಸರ್ಗಿಕ ವಿಕಾಸಕ್ಕೆ ಅಗತ್ಯವಾದ ಫ್ರೀ ಸ್ಪೇಸ್ ( ಆಕಾಶದವಕಾಶ) ಕೂಡಾ ಸಂಕುಚಿತವಾಗಿದೆ.   ಅಷ್ಟು ಮಾತ್ರವಲ್ಲದೆ, ಕಿಸಕ್ಕನೆ ಹಲ್ಕಿರಿದು ಹಳದಿ ನಗು ನಗುತ್ತದೆ! ಕಾಮಾಲೆ ರೋಗ ಬಂದವರಿಗೆ, ಎಲ್ಲವೂ ಹಳದಿಯಾಗಿ ಕಂಡು, ಹಳದಿಯೇ ಜಗತ್ತು,ಹಳದಿಯೇ ಸತ್ಯ. ಇಟ್ಟಿಗೆ,ಪಟ್ಟಣವಾದಾಗ, ಅದಕ್ಕೆ ಅದರ ಮಾರ್ಗವೇ ಸರಿ ಎನ್ನುವ ಕಾಮಾಲೆ ದೃಷ್ಟಿಯೇ, ಅದಕ್ಕೇ ಹಳದಿ ನಗುವೇ !! ಸಾಧಾರಣವಾಗಿ ಅಶುಭ್ರ ಹಲ್ಲುಗಳು ಹಳದಿಯಾಗಿರುತ್ತವೆ. ಹಾಗೆ ನಕ್ಕಾಗ, ನಗುವಿನಲ್ಲಿ,ಹಳದಿ ಹಲ್ಲು ಇಣುಕುತ್ತವೆ. ಇದು ಹಳದಿ ನಗುವೇ?. ಇಟ್ಟಿಗೆಯ ಪಟ್ಟಣ ಮತ್ತು ಹಾಗೆ ಮೋನೋಕ್ರೊಮ್ಯಾಟಿಕ್, ಬೆಳವಣಿಗೆ, ಅಶುಬ್ರ ಅನ್ನುವ ಧ್ವನಿಯೇ? ಇನ್ನೊಂದು ವಿಷಯ, ಇಟ್ಟಿಗೆಗೆ ನಿರ್ದಿಷ್ಟ ಆಕಾರ, ಇದೆ. ಇಟ್ಟಿಗೆ, ವೆಲ್ ಡಿಫೈನ್ಡ್. ಹಸಿರಿಗೆ ಯಾವಾಗಲೂ ಫ್ರೀ ಡೆಫಿನಿಷನ್.  ಇದೇ ಎಂಬ ಆಕಾರ, ಚಚ್ಚೌಕಾರದ ಆಕೃತಿಗಳಿಂದ ಚೂಪು ಮೂಲೆಗಳಿಂದ ಮೀರಿದ್ದು ಹಸಿರು. ಅದಕ್ಕೇ ಹಸಿರು,ಸ್ವಾತಂತ್ರ್ಯದ ಪ್ರತೀಕ. ಇಟ್ಟಿಗೆ,ಮನುಷ್ಯ ನಿರ್ಮಿತ. fixed ಆಕಾರ, fixed ಚಿಂತನಾವಕಾಶ. ಕಟ್ಟಡದ ಬಿರುಕಿನಲ್ಲಿ, ಹಸಿರು ಚಿಗುರಿದರೆ ಅದನ್ನೂ ಈ ಇಟ್ಟಿಗೆ ನುಂಗಿ ಹಾಕುತ್ತದೆ!. ಕೋಡಗಾನ ಕೋಳಿ ನುಂಗಿತ್ತಾ ಅಂತ ಸಿಕ್ಕಿದ್ದೆಲ್ಲಾ ನುಂಗುತ್ತಾ ಸಾಗುವ ಇಟ್ಟಿಗೆ, ತನ್ನ, ಮತ್ತು ಇನ್ನಿತರ ಇಟ್ಟಿಗೆಗಳ ಅಮಾನುಷ ಬಂಧದಲ್ಲಿ ನೈಸರ್ಗಿಕ ತತ್ವಕ್ಕೆ, ಪ್ರೀತಿ,ಸ್ವಾತಂತ್ರ್ಯಕ್ಕೆ ಜಾಗವನ್ನು ಕೊಡುವುದಿಲ್ಲ, ಮಾತ್ರವಲ್ಲ, ಅದನ್ನು ಕತ್ತು ಹಿಸುಕಿ ಕೊಲ್ಲುತ್ತದೆ. ಪಟ್ಟಣದಲ್ಲಿ ಮನುಷ್ಯಮುಖೀ,ಜೀವನ್ಮುಖೀ ಸತ್ವಕ್ಕೆ ಜಾಗವಿಲ್ಲ, ಮನುಷ್ಯಸಹಜ ಬೆಳವಣಿಗೆಗೆ ಸ್ವಾತಂತ್ರ್ಯವೂ ಇಲ್ಲ. ಹುತಾತ್ಮನಾಗದೆ ಸಾಯುತ್ತದೆ, ಪಾಪಾತ್ಮ ಹಸಿರು!. ಹಸಿರು ಪಾಪಾತ್ಮವಾಗಿ ಕಾಣುವುದು, ಮೇಲಿನ ಚರಣದ ಕಾಮಾಲೆ ದೃಷ್ಟಿಗೆ.  ಯಾವುದೇ ಉದ್ದೇಶ ಸಾಧಿಸದೇ ಕೊಲ್ಲಲ್ಪಟ್ಟಾಗ, ಅ ಸಾವಿಗೆ ಹುತಾತ್ಮ ಪಟ್ಟವೂ ಸಿಗಲ್ಲ. ಈ ಪಟ್ಟಣದಲ್ಲಿ ಆತ್ಮದ ಮಾರ್ಕೆಟ್ ಇದೆ! ಪಟ್ಟಣದ ವ್ಯಾಪಾರೀ ಮನೋಭಾವ, ಆತ್ಮವನ್ನೂ ಮಾಡಿಕೊಳ್ಳಲು ಸಿಧ್ಧ. ವ್ಯಾಪಾರ ಕೇಂದ್ರಿತ, ಬಂಡವಾಳಶಾಹಿ ವ್ಯವಸ್ಥೆ, ಹಣಕ್ಕಾಗಿ, ಆತ್ಮವನ್ನೂ ಮಾರಬಲ್ಲದು. ಆತ್ಮ ಎಂದರೆ ಇಲ್ಲಿ, ಅಧ್ಯಾತ್ಮಿಕ ಅರ್ಥವೇ ಆಗಬೇಕೆಂದಿಲ್ಲ, ಆತ್ಮ ಎಂದರೆ, ಮನುಷ್ಯನೊಳಗಿನ ಜೀವಪ್ರಜ್ಞೆ, ಸ್ವಂತಿಕೆ  ಅಂತಲೂ ಅಂದುಕೊಳ್ಳಬಹುದು. ಅಂತಹ ವ್ಯವಸ್ಥೆಯಲ್ಲಿ, ತಲೆ ಕಡಿದು, ಸಿಪ್ಪೆ ಸುಲಿದು, ಉಲ್ಟಾ ನೇತು ಹಾಕಿದರೂ ಯಾರಿಗೂ ಏನೂ ವೇದನೆಯಿಲ್ಲ, ಸಂವೇದನೆಯೂ ಸತ್ತಿದೆ. ತಲೆ ಕಡಿದದ್ದರಿಂದ, ಯೋಚನಾಶಕ್ತಿಯೂ ವಿವೇಚನಾಶೀಲತೆಯೂ ಗತವಾಗಿದೆ. ‘ಇಟ್ಟಿಗೆಯ ಪಟ್ಟಣ’ ಇಲ್ಲಿ ನಿರ್ದಯೀ, ಅಮಾನುಷ ವ್ಯಾಪಾರೀ ಜಗತ್ತನ್ನು ಪ್ರತಿಧ್ವನಿಸುತ್ತದೆ. ‘ತಲೆ ತಿಂಬವಗೆ’ ಎಂಬ ಪದ, ಅನೇಕ ಯೋಚನೆಗಳಿಗೆ ಮನದ ಕದ ತೆರೆಯುತ್ತದೆ. ಜಾನಪದಕ್ಕೆ ಮನೆ ಕಟ್ಟುವ, ಮನೆಯೊಳಗಿನ ಕಟ್ಟುಪಾಡುಗಳ ಜರೂರತ್ತಿಲ್ಲ. ಅದು ಕುವೆಂಪು ಅವರ ಕವಿತೆಯ, ಚೇತನ ಸ್ವರೂಪಿ. ಹಾಗೆಯೇ ಪ್ರೇಮಸ್ವರೂಪಿ,ಸಂವೇದನಾ ಸ್ವರೂಪಿ ಕೂಡಾ. ಕಂಬಾರರ ಕವಿತೆಯ ಇಟ್ಟಿಗೆಯ ಪಟ್ಟಣ, ಶಿಷ್ಟ ಮನಸ್ಸಿನ ಹಿಡಿತದ  ಮತ್ತು ಜಾನಪದದ ಚೋಮನ ದುಡಿಯ ಬಡಿತದ ನಡುವಿನ ಸಂಘರ್ಷ. ನಗರ ಕಟ್ಟುತ್ತಾ ತನ್ನದೇ ವರ್ತುಲ ಬೆಳೆಸುವ ಮಹತ್ವಾಕಾಂಕ್ಷೆಯ ದಾರಿಯಲ್ಲಿ ಪ್ರಕೃತಿಯ ಇತರ ಎಲ್ಲಾ ಜೀವ ವೇತನಗಳನ್ನು ಶೋಷಿಸುವ, ಕೊಲ್ಲುವ ನಾಗರಿಕ ಸಮಾಜದ ವಿಕೃತ ಮನಸ್ಸನ್ನು ಕವಿತೆ ಚಿತ್ರಿಸುತ್ತದೆ. ಕೊನೆಗೆ “ನಾಗರಿಕತೆ” ಎಂದರೇನು ಎಂಬ ಮೂಲಭೂತ ಪ್ರಶ್ನೆ ನಮ್ಮನ್ನು ತೀವ್ರವಾಗಿ ಕಾಡುತ್ತೆ. ************************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

You cannot copy content of this page

Scroll to Top