ಪರಿಶ್ರಮದಿಂದ ಗೆಲುವನ್ನು ಕೊಳ್ಳಬಹುದು ಇಂದಿನ ದಾವಂತದ ಬದುಕಿನಲ್ಲಿ ಎಲ್ಲ ಸುಖಗಳೂ ನಮ್ಮೆಡೆ ತಾವೇ ಬರಲಿ ಎಂದು ಆಶಿಸುತ್ತೇವೆ. ಬೆರಳ ತುದಿಯಲ್ಲಿ ಬೇಕಾದ್ದೆಲ್ಲವೂ ದೊರೆಯುತ್ತಿರುವಾಗ ಗೆಲುವಿಗೆ ಮಾತ್ರ ಇನ್ನಿಲ್ಲದ ಪರಿಶ್ರಮ ಏಕೆ ಪಡಬೇಕು ಎಂದು ಪ್ರಶ್ನಿಸುತ್ತೇವೆ. ‘ಕೆಲಸಕ್ಕೆ ಕರೆಯಬೇಡ್ರಿ ಊಟಕ್ಕೆ ಮರೆಯಬೇಡ್ರಿ.’ ಅನ್ನೋ ಜಾಯಮಾನದವರನ್ನು ಕಂಡರೆ ಯಶಸ್ಸು ಹತ್ತಿರವೂ ಸುಳಿಯುವುದಿಲ್ಲ. ಶ್ರಮವಿಲ್ಲದೇ ಏನೆಲ್ಲವೂ ತಮ್ಮ ಪಾದದ ಕೆಳಗೆ ಬಿದ್ದಿರಬೇಕೆಂಬುದು ನಮ್ಮಲ್ಲಿ ಬಹುತೇಕ ಜನರ ಅಭಿಪ್ರಾಯ. ವ್ಯಕ್ತಿತ್ವ ವಿಕಾಸದಲ್ಲಂತೂ ಪರಿಶ್ರಮ ಮೂಲ ವಸ್ತುವಿನಂತೆ ಕಾರ‍್ಯ ನಿರ‍್ವಹಿಸುತ್ತದೆ. ಶ್ರಮದ ಬೀಜಕ್ಕೆ ಅಗಾಧ ಶಕ್ತಿ ಇದೆ ಎನ್ನುವುದು ಈಗಾಗಲೇ ಮಹಾನ್ ಸಾಧಕರು ತೋರಿಸಿಕೊಟ್ಟಿದ್ದಾರೆ. ಎಷ್ಟು ಶ್ರಮವಹಿಸಿದರೂ ಅಷ್ಟೇ ಬದುಕು ಅದೃಷ್ಟದಾಟ. ಅದೃಷ್ಟದ ಮುಂದೆ ಪರಿಶ್ರಮವೂ ಒಂದು ಆಟಿಗೆಯಂತೆ.ಎಂದು ನಂಬಿ ಜೀವನವನ್ನು ಅದೃಷ್ಟದ ಕೈಗೆ ಕೊಟ್ಟು ಹಗಲು ರಾತ್ರಿ ಹಲಬುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ‘ಪರಿಸ್ಥಿತಿಗೆ ಅಂಜಲಾರೆ. ನಾನೇ ಆ ಪರಿಸ್ಥಿತಿಯ ನಿರ‍್ಮಾತೃ.’ ಎಂಬ ನೆಪೋಲಿಯನ್ ಬೊನಾಪರ‍್ಟೆ ಮಾತಿಗೆ ಅಮೂಲ್ಯವಾದ ಬೆಲೆ ನೀಡಿದ ಮಹಾ ಪುರುಷರು ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ ಯಾವ ಆಸೆ ಆಮಿಷಗಳಿಗೆ ಬಲಿಯಾಗದ,ಎಂಥ ಸಿರಿವಂತಿಕೆಗೂ ದಕ್ಕದ ಗೆಲುವನ್ನು ಪರಿಶ್ರಮದ ಬೆವರಿನಿಂದ ಗಿಟ್ಟಿಸಿಕೊಳ್ಳಬಹುದು. ಅದು ಹೇಗೆ ಎಂಬುದಕ್ಕೆ ಮುಂದಕ್ಕೆ ಓದಿ. ಪರಿಶ್ರಮ ಎಂದರೆ . . . . ? ಗೆಲುವಿಗೆ ಬೇಕಾದ ಮೂಲ ಪರಿಕರ. ಮೂಲ ಬೀಜ. ಮೂಲತಃ ಗೆಲುವಿಗೆ ತಿಳಿಯುವ ಚೆಂದದ ಮೂಲ ಭಾಷೆ. ಪರಿಶ್ರಮ ಹೇಳಿದ ಮಾತನ್ನು ಗೆಲುವು ಶಿರಸಾವಹಿಸಿ ಪಾಲಿಸುತ್ತದೆ. ಸ್ವಲ್ಪ ತಡವಾಗಬಹುದು ಅಷ್ಟೆ. ಮನುಷ್ಯನ ಮನಸ್ಸೊಂದು ವಿಚಿತ್ರ. ಅದು ಯಾವ ಯಾವುದೋ ರೂಪದಲ್ಲಿ ರಂಜನೆಯನ್ನು ಪಡೆಯಲು ಸದಾ ಕಾಲ ತುಡಿಯುತ್ತದೆ. ಇನ್ನೂ ವಿಚಿತ್ರವೆಂದರೆ ಪರಿಶ್ರಮವೊಂದನ್ನು ಬಿಟ್ಟು. ಜೇನು ತುಪ್ಪ ಬೇಕಾದವನು ಜೇನುನೊಣಗಳಿಗೆ ಹೆದರಬಾರದು ಎಂಬುದು ದಕ್ಷಿಣ ಆಫ್ರಿಕನ್ ಗಾದೆ. ಗೆಲುವಿನ ಫಲ ಬೇಕೆನ್ನುವವರು ಪರಿಶ್ರಮದ ಬೀಜ ಬಿತ್ತಿ ಸತತ ನೀರೆರೆಯುವುದನು ಮರೆಯಬಾರದು. ನಡೆಯದು ಅದೃಷ್ಟದಾಟ ಅದೃಷ್ಟ ಗಾಜಿನಂತೆ: ಹೊಳಪು ಹೆಚ್ಚಿದಂತೆಲ್ಲ ಬೇಗ ಒಡೆಯಬಲ್ಲದು. ಹಗಲಿರುಳೆನ್ನದೇ ಶ್ರಮ ಪಡುತ್ತಿದ್ದರೂ, ಹಣೆಯ ಮೇಲೆ ಬೆವರಿನ ಸಾಲು ಸಾಲುಗಟ್ಟಿದರೂ ಫಲಿತಾಂಶ ಮಾತ್ರ ನನ್ನ ನಿರೀಕ್ಷೆಯನ್ನು ತಲುಪುತ್ತಿಲ್ಲ. ಎಂಬುದು ಕೆಲವರ ಗೊಣಗಾಟ. ವಿಷ್ಣು ಶರ‍್ಮ ಹೇಳಿದಂತೆ,’ಆಪತ್ತು ಬಂದಾಗ ಬುದ್ಧಿಗೆಡಬಾರದು.’ಶೇ ೯೯ ರಷ್ಟು ಪ್ರಯತ್ನಕ್ಕೆ ಶೇ ೧ ರಷ್ಟು ಅದೃಷ್ಟ ಸೇರಿದಾಗ ಗೆಲುವು. ಶ್ರಮ ಎಂಬುದೊಂದು ದೊಡ್ಡ ಭಾರ ಎಂದು ಹೆಸರಿಟ್ಟು ದೂರ ಸರಿಯುವವರೂ ಇಲ್ಲದಿಲ್ಲ.ಇದನ್ನು ಕಂಡು ರವೀಂದ್ರನಾಥ ಟ್ಯಾಗೋರ್ ಹೀಗೆ ಹೇಳಿದ್ದಾರೆ; ಹೊರೆಯೇ ಮುಖ್ಯವಾಗಿರುವಾಗ ಯಾವ ಭಾರವಾದರೇನು? ಇಟ್ಟಿಗೆಯಾದರೇನು? ಕಲ್ಲಾದರೇನು? ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಅಪಾರ ಪರಿಶ್ರಮವಿರುತ್ತದೆ. ಪರಿಶ್ರಮದ ನೋವಿನಲ್ಲೂ ನಲಿವಿದೆ ಗೆಲುವಿದೆ ಹಾಗಾದರೆ ಪರಿಶ್ರಮದ ಬೀಜ ಬಿತ್ತಿ ಗೆಲುವಿನ ಫಲ ಪಡೆಯಬಹುದು. ಭಾಗ್ಯದ ಬೆನ್ನು ಹತ್ತಿ ನಾವು ಓಡುವಂತೆ ಪರಿಶ್ರಮಿಗಳ ಬೆನ್ನು ಹತ್ತಿ ಗೆಲುವು ಓಡುತ್ತದೆ. ಬೇಡ ಕಣ್ಣೀರಿನ ಉತ್ತರ ಷೇಕ್ಸಪಿಯರ್ ತನ್ನ ಸಾನೆಟ್ ಒಂದರಲ್ಲಿ ‘ಕಾಲದ ಆಘಾತಕ್ಕೆ ಶಿಲಾ ಪ್ರತಿಮೆಗಳು ಒಡೆಯಬಹುದು. ಹೊನ್ನಲೇಪದ ಸ್ಮಾರಕಗಳು ಉರಳಬಹುದು. ಆದರೆ ಕಾವ್ಯ ಮಾತ್ರ ಮೃತ್ಯು ಹಾಗೂ ವಿಸ್ಮೃತಿಗೆ ಅತೀತವಾದುದು.’ ಎಂದು ಕಾವ್ಯದ ಅಮರತೆಯ ಕುರಿತು ಹೇಳಿದ ಅದೇ ಮಾತನ್ನು ಪರಿಶ್ರಮಕ್ಕೂ ಅನ್ವಯಿಸಬಹುದು. ಹೆಜ್ಜೆ ಹೆಜ್ಜೆಗೂ ಎದುರಾಗುವ ಸೋಲಿಗೆ ಹೆದರಿ ಹತಾಶೆಯಿಂದ ಕಣ್ಣೀರು ಸುರಿಸುತ್ತೇವೆ. ಸೋಲಿಗೆ ಕಣ್ಣೀರಿನ ಉತ್ತರ ನೀಡುತ್ತೇವೆ. ಸೋಲನ್ನು ಕಣ್ಣೀರಿನ ಕೈಯಲ್ಲಿ ಕೊಟ್ಟು ಕೈ ತೊಳೆದುಕೊಂಡು ಬಿಡುತ್ತೇವೆ. ಕತ್ತಲು ಕೋಣೆಯಲ್ಲಿ ಕಣ್ಣೀರು ಕೆಡವಿ ಮತ್ತೆ ಆಲಸ್ಯತನದ ಮರೆಯಲ್ಲಿ ಮಲಗುವ ಅಭ್ಯಾಸ ಮಾಡಿಕೊಂಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರಮವೆಂಬುದು ನಮಗೆ ಕಬ್ಬಿಣದ ಕಡಲೆಯಂತೆ ಕಾಣುತ್ತಿದೆ. ಆಲಸ್ಯವೆಂಬ ಮಾಯೆ ಶ್ರಮವೆಂಬ ಸತ್ಪಥವನ್ನು ನುಂಗಿ ಹಾಕಿ ಬಿಡುತ್ತದೆ. ಶ್ರಮವೆಂಬ ಜಂಜಾಟದಲ್ಲಿ ಬೀಳುವುದಕ್ಕಿಂತ ಕಣ್ಣೀರಿನಲ್ಲಿ ಕೈ ತೊಳೆಯುವುದು ಒಳ್ಳೆಯದು ಎಂದು ಕೊಂಡಿದ್ದೇವೆ. ಮಣ್ಣಿನ ಗಡಿಗೆಯಲಿ ಅಡುಗೆ ಮಾಡಿ ಉಣ್ಣುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದನ್ನೆಲ್ಲ ಪಾಲಿಸೋಕೆ ಸಮಯವೆಲ್ಲಿದೆ? ಶ್ರಮದ ಯೋಚನೆಗಳಿಲ್ಲದೇ ಯೋಜನೆಗಳಿಲ್ಲದೇ ಸ್ಪರ್ಧಾತ್ಮಕ ಯುಗದಲ್ಲಿ ಸುಂದರ ಬದುಕು ಪಡೆಯುವುದು ಕಷ್ಟ. ಇರಲಿ ಗಟ್ಟಿ ನಿರ್ದಾರ ಪರಿಶ್ರಮವೆಂಬುದು ಕಿರಿದಾದ ದಾರಿಯಲ್ಲಿ ಅದೂ ಪಾಚಿಗಟ್ಟಿದ ದಾರಿಯಲ್ಲಿ ನಡೆದಂತೆ. ಆದ್ದರಿಂದ ಅದರ ಸಹವಾಸವೇ ಬೇಡ. ಗೆಲುವನ್ನು ಬಾಚಿ ತಬ್ಬಿಕೊಳ್ಳಲು ಸಾಕಷ್ಟು ಅಡ್ಡ ಮಾರ‍್ಗಗಳಿವೆ. ಅವುಗಳನ್ನು ಅನುಸರಿಸುವುದೇ ಸೂಕ್ತ ಎಂದು ಅವುಗಳತ್ತ ಹೆಜ್ಜೆ ಹಾಕಿ ಕೈ ಸುಟ್ಟುಕೊಳ್ಳುತ್ತೇವೆ. ಶಾಶ್ವತ ಗೆಲುವಿನ ನಿಜವಾದ ಕೀಲಿ ಕೈ ಶ್ರಮವೆಂದು ಅರಿಯುವುದರಲ್ಲಿ ಸಾಕಷ್ಟು ಸಮಯ ಸರಿದಿರುತ್ತದೆ. ನೊಂದ ಮನಸ್ಸು ವಿಶ್ರಾಂತಿ ಬೇಕೆಂದು ಅಂಗಲಾಚುತ್ತದೆ. ಆದರೆ ಅದು ವಿಶ್ರಾಂತಿಗೆ ಸಕಾಲವಲ್ಲ. ಪ್ರಖರವಾದ ಪರಿಶ್ರಮಕ್ಕೆ ಒಡ್ಡಿಕೊಳ್ಳಬೇಕಾದ ಕಾಲ.ಮಾಡಿದ ತಪ್ಪಿಗೆ ಬೇರೆ ದಾರಿ ಇಲ್ಲ. ಶ್ರಮದೆಡೆ ಮುಖ ಮಾಡುವುದೊಂದೇ ದಾರಿ. ಪರಿಶ್ರಮವೆಂಬುದು ನಿರಂತರ ಪ್ರಕ್ರಿಯೆ. ಶ್ರಮ ಪಟ್ಟದ್ದು ಸಾಕೆಂದುಕೊಂಡರೆ ಗೆಲುವು ನಿಂತ ನೀರಿನಂತೆ ನಿಲ್ಲುತ್ತದೆ. ಜಗತ್ತಿನ ಸುಪ್ರಸಿದ್ಧ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್, ೬೭ ನೇ ವಯಸ್ಸಿನಲ್ಲಿ ತಾನು ಕಟ್ಟಿ ಬೆಳೆಸಿದ ಫ್ಯಾಕ್ಟರಿ ಹೊತ್ತಿ ಉರಿಯುವುದನ್ನು ಕಂಡು.’ ನಿನ್ನ ತಾಯಿ ಮತ್ತು ಆಕೆಯ ಗೆಳತಿಯರನ್ನು ಕರೆ. ಅವರೆಂದೂ ಇಂಥ ದೊಡ್ಡ ಫ್ಯಾಕ್ಟರಿ ಉರಿಯುವ ದೃಶ್ಯವನ್ನು ಕಂಡಿರಲಾರರು.’ ಎಂದು ತನ್ನ ೨೪ ವರ‍್ಷದ ಮಗ ಚಾರ್ಲ್ಸ್ ಹೇಳುತ್ತಾನೆ. ತಂದೆಯ ಮಾತು ಕೇಳಿದ ಮಗ ಗಾಬರಿಯಾಗಿ ಇದೇನು ಹೇಳುತ್ತಿರುವಿರಿ ನೀವು? ಇಷ್ಟು ದಿನ ಶ್ರಮವಹಿಸಿ ಬೆಳೆಸಿದ ನಿಮ್ಮ ಕನಸು ಹೊತ್ತಿ ಉರಿಯುತ್ತಿದೆ ಎಂದ ಸಖೇದ ಆಶ್ಚರ್ಯದಿಂದ. ಅದಕ್ಕೆ ಥಾಮಸ್ ಕೊಟ್ಟ ಉತ್ತರ ಮಾರ‍್ಮಿಕವಾದುದು. ಪರಿಶ್ರಮ ಪಡುವ ಗಟ್ಟಿ ನಿರ‍್ಧಾರವಿದ್ದರೆ ಇಂಥ ಎಷ್ಟು ಫ್ಯಾಕ್ಟರಿಗಳನ್ನು ಕಟ್ಟ ಬಹುದೆಂದ. ಮರು ದಿನದಿಂದಲೇ ಶ್ರಮದ ಬೆವರು ಸುರಿಸಿದ. ಪರಿಶ್ರಮವೇ ಕೀಲಿಕೈ ಭವಿಷ್ಯವನ್ನು ವರ‍್ತಮಾನದಿಂದ ಕೊಳ್ಳಬಹುದು ಎಂದಿದ್ದಾರೆ ಡಾ: ಜಾನ್ಸನ್. ಹಾಗೆಯೇ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು. ವರ‍್ತಮಾನದಲ್ಲಿ ನಾವು ತೊಡಗಿಸಬೇಕಾದ ಬಂಡವಾಳವೆಂದರೆ ಪರಿಶ್ರಮ. ಎಲ್ಲರ ಮನ ಸೆಳೆಯುವ ಬಣ್ಣ ಬಣ್ಣದ ಚಿಟ್ಟೆ ಆಗಬೇಕಾದರೆ ಕಂಬಳಿಹುಳ ಪಡುವ ನೋವು ಅಷ್ಟಿಷ್ಟಲ್ಲ. ಸಾಧಕರ ಯಶೋಗಾಥೆಯನ್ನು ಓದುವಾಗ ಅಥವಾ ಕೇಳುವಾಗ ಸ್ಪಷ್ಟವಾಗುವ ಅಂಶವೆಂದರೆ,’ಕೆತ್ತಿಸಿಕೊಳ್ಳುವ ತಾಳ್ಮೆ ಇಲ್ಲದವರು ವಿಗ್ರಹವಾಗಲು ಹಂಬಲಿಸಬಾರದು. ಕಲ್ಲಾಗಿಯೇ ಇದ್ದು ಬಿಡಬೇಕು.’ ರಭಸವಾದ ಅಲೆಗಳಂತೆ ಬಂದ ಸಮಸ್ಯೆಗಳಿಗೆ ತಮ್ಮ ಛಲ ಬಿಡದ ಪರಿಶ್ರಮದಿಂದಲೇ ಎದೆಯನ್ನೊಡ್ಡಿ ದಿಟ್ಟ ಉತ್ತರ ನೀಡಬೇಕು.. ಆಂಡ್ರೂ ಕರ‍್ನೇಗಿ, ಅಮೇರಿಕದ ಸ್ಟೀಲ್ ರಂಗದಲ್ಲಿ ಬಹು ದೊಡ್ಡ ಹೆಸರು. ಆತ ಹನ್ನೊಂದುವರ‍್ಷದ ಪುಟ್ಟ ಪೋರನಾಗಿದ್ದಾಗ ಕಾರ‍್ಮಿಕನಾಗಿದ್ದ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮವಹಿಸಿ ತಾನು ಶ್ರೀಮಂತನಾಗುವುದಲ್ಲದೇ ನೂರಾರು ಜನ ಬಿಲಿಯನರ್‌ಗಳನ್ನು ಸೃಷ್ಟಿಸಿದ.ಇದನ್ನು ಅವಲೋಕಿಸಿದಾಗ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಬನ್ನಿ ಸೋಲೆಂಬ ಅವಮಾನಕ್ಕೆ ಉತ್ತರವನ್ನು ಪರಿಶ್ರಮದಿಂದ ಕೊಡೋಣ. ಗೆಲುವಿನ ದಾರಿಯಲ್ಲಿ ನಗು ನಗುತ ಹೆಜ್ಜೆ ಹಾಕೋಣ. ************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ವಾರದ ಕವಿತೆ
ಬದುಕುಮರುಗುತ್ತಿದೆ ಸುಜಾತಾ ಲಕ್ಮನೆ ಬದುಕು ಮರುಗುತ್ತಿದೆಕನಸುಗಳು ಶಿಥಿಲಗೊಂಡು ರಚ್ಚೆ ಹಿಡಿದುಮುರುಟ ತೊಡಗಿದಂತೆಲ್ಲಬದುಕ ಭಿತ್ತಿಯ ಆಚೀಚೆ ನೀನು ಎಗ್ಗಿಲ್ಲದೇ ಜಡಿದ ಮೊಳೆಗಳುಆಳಕ್ಕಿಳಿದಂತೆಲ್ಲಾ ಹೊರಳಿ ನರಳಿ ಅನಾಮತ್ತಾಗಿ ಹರಡಿಬೆದರುಬೊಂಬೆಗಳಾಗಿ ನಿಲ್ಲುತ್ತವೆ ಭಾವಗಳು !!ದಿಕ್ಕೆಟ್ಟು, ಸೋತು ಹೆಜ್ಜೆ ಮೂಡಿಸಲಾಗದ ಕೊರಗು ತುಂಬಿ ನಿಂತಈ ಭಾವಗಳ ತಬ್ಬಿದರೆಬರೀ ನಿಟ್ಟುಸಿರ ಮೇಳಗಳು !!ಧೂಳು ಹೊದ್ದು ಮಸುಕಾದ ಗೋಡೆಗಂಟಿದ ನಮ್ಮೀವಿವಾಹದ ಜೋಡಿ ಪಟದಿಂದ ಒಳಗೊಳಗೇ ನಕ್ಕು ಸೂಸುವ ಹಳವಂಡಗಳು!ಜೇಡ ನೇಯ್ದ ಬಲೆಯೊಳಗೆ ಬಿದ್ದು ಹೊರಳಾಡುವ ಪಟದ ಬಗ್ಗೆ ನಮಗೇಕೆ ಚಿಂತೆ?ಬದುಕೇ ಚೌಕಟ್ಟು ಮೀರಿ ಮೂರಾಬಟ್ಟೆಯಾದ ಮೇಲೆ ಇನ್ನೇನಂತೆ ?ಅದೆಷ್ಟು ಬೆಳ್ಳಗೆಯಲ್ಲಿ ಮುಖವಾಡ ಹೊದ್ದು ಹಗಲು ತಳ್ಳಿದರೂಎದೆ ಸುಡುವ ಮಂಚದ ಮೇಲೆರಾಗ ಲಯಗಳು ಸತ್ತ ಬಾಳು ರಿಕ್ತಗೊಂಡ ಸತ್ಯದರ್ಶನ !ನಿದ್ದೆ ತಬ್ಬದ ರಾತ್ರಿಗಳಲ್ಲಿ ಕಣ್ಣಾಲಿಗಳ ಸುತ್ತ ಸತ್ತ ಕನಸುಗಳ ಒಸರುಗಿರಕಿ ಹೊಡೆಯುವ ತವಕ-ತಲ್ಲಣ !!ಈ ಉತ್ಕಲಿಕೆ ತಾಳಲಾರದೇ ತಟ್ಟಿ ಮಲಗಿಸಿದಂತೆಲ್ಲಾಉಟ್ಟ ಸೀರೆಯ ಸೆರಗಿನಂಚೇ ಪಿಸುಗುಡಲು ಶುರುವಿಟ್ಟುಕೊಳ್ಳುತ್ತದೆ ನನ್ನಲ್ಲಿ !ಎದೆಯ ಬೀದಿಯ ಮೇಲೆ ಗೀಚಿದ ಒಲುಮೆ ಅಕ್ಷರಗಳುಇದ್ದಕ್ಕಿದ್ದಂತೆ ಮಾಯವಾಗಿದ್ದಾದರೂ ಎಲ್ಲಿ?ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಹೋಗುವ ಈ ಅನಿವಾರ್ಯತೆಯಆರ್ತನಾದಕ್ಕೆ ಕೊನೆಯಲ್ಲಿ ?ಸಾಲ್ಗೊಳಿಸಲಾಗದ ಪ್ರೀತಿಯ ವ್ಯಾಖ್ಯೆ ಎಡವಿದಂತೆಲ್ಲಸುಕರಗೊಳ್ಳದ ಬದುಕು ಅನಂತ ಸುಳ್ಳುಗಳಿಂದ ತುಂಬಿ ಅಣಕಿಸುತ್ತಿದೆ!!ನಿನ್ನ ಮೆಲ್ನುಡಿ, ಮೆಲ್ದನಿ, ಮೆಲ್ನಗೆಗೆ ಹಾತೊರೆದು ಹೀಗೆ ಗೀಚುವ ಕವನ ಕನಲುತ್ತಿದೆ: ಕರಗುತ್ತಿದೆ: ಕನವರಿಸುತ್ತಿದೆ!!ಕಂಡೂ ಕಾಣದ ಆಸೆ ಕುಡಿಯು ಚಿಗುರಲಾರದೇ ಇತ್ತ ಸಾಯಲಾರದೇ-ಗೆಜ್ಜೆಕಟ್ಟಿದ ಹೆಜ್ಜೆ ಪ್ರೀತಿಯ ರಂಗಸ್ಥಳದಲ್ಲಿ ನರ್ತಿಸಲಾರದೇಬದುಕೇ ಮರುಗುತ್ತಿದೆ : ನರಳುತ್ತಿದೆ : ನೋಯುತ್ತಿದೆ !!ಸಾಂಗತ್ಯ ಗೊಳ್ಳದ ಬದುಕ ಪದುಳಿಸಲು ಒಮ್ಮುಖವಾಗಿನಾನು ಹೆಣಗಿದಂತೆಲ್ಲ ನಿನ್ನ ವಿಮುಖತೆಯೇ ಮೂರ್ತೀಭವಿಸಿದಿನ-ರಾತ್ರಿಗಳು ಬಸವಳಿದು ಚಾದರ ದಡಿಯಲ್ಲಿ ಬಿಕ್ಕುತಿವೆ!!ನಾನು ನೀನು ದಾಂಪತ್ಯದಲ್ಲಿ ಕಾಲಿಟ್ಟ ಸಂಭ್ರಮದ ಆ ದಿನಕ್ಕೆಬೇಕಿತ್ತೇ ದಿಬ್ಬಣ ಒಡ್ಡೋಲಗ ಮಂತ್ರಗಳ ಘೋಷ ಹೂ ಮಾಲೆ?ಸನಿಹವಿದ್ದೂ ನಿನ್ನ ಬಿಸುಪೇ ತಾಗದೆ ಸಾಯುವ ನನ್ನ ಭಾವಲಹರಿಯ ಬಿಕ್ಕಿಗೆಇನ್ನೆಷ್ಟು ತೇಪೆ ಹಚ್ಚುವ ಶ್ರಮ –ಮನಸ್ಸಿಗೆ ಮನಸ್ಸೇ ಬೆಸೆಯದಿದ್ದ ಮೇಲೆ?ಪ್ರೀತಿ ಇಲ್ಲದ ಮೇಲೆ ಎಲ್ಲ ತೊರೆದು ಕಾರಣವ ಕೊಟ್ಟು ಹೊರಟು ಬಿಡು !ವಿಕ್ಷೋಭ ವಿಕ್ಲಬಗಳೆಲ್ಲ ದೂರಾಗಿ ಹೋಗಲಿನನ್ನ ಬಿಸಾಕಿ ಬಿಡು ನಿನ್ನ ಬಾಳಿಂದಒಳ ಕುದಿತ ತಹಬಂದಿಗೆ ಬಂದುಇನ್ನುಳಿದ ಎನ್ನ ಬಾಳಾದರೂ ಆಗಲಿ ಅಂದ ಚಂದ !! *******************
ನಾನು ದೀಪ ಹಚ್ಚಿಕೊಂಡರೂ ಬೆಳಕು ಎಲ್ಲರಿಗೂ ಕಾಣಿಸಬೇಕು `ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ- ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ…’ ಗಣೇಶ್ ಹೆಗಡೆ ಹೊಸ್ಮನೆ ಗಣೇಶ್ ಹೆಗಡೆ ಹೊಸ್ಮನೆ ಶಿರಸಿ ತಾಲೂಕು ಜಾನ್ಮನೆಯವರು. ವೃತ್ತಿಯಿಂದ ಕೃಷಿಕ. ಯಾರೂ ನೆಡದ ಮರ ಇವರ ಮೊದಲ ಕವಿತಾ ಸಂಕಲನ. ಇದಕ್ಕೆ ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಉಗ್ರಾಣ ಪ್ರಶಸ್ತಿ ಲಭಿಸಿವೆ. ನಂತರ ಹರಿದು ಕೂಡುವ ಕಡಲು (ಗಜಲ್) ಸಂಕಲನವನ್ನು ಲಡಾಯಿ ಪ್ರಕಾಶನ ಪ್ರಕಟಿಸಿತು. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. ಕತೆಗಳನ್ನು ಸಹ ಬರೆದು ಪ್ರಕಟಿಸಿದ್ದಾರೆ. ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಕಾರ್ಯಕ್ರಮಗಳಿಗೆ ಬಂದು ಕವಿತೆ ವಾಚಿಸಿದ್ದಾರೆ. ಕೃಷಿ ಬದುಕಿನಲ್ಲಿ ಕಂಡ ಪ್ರತಿಮೆಗಳನ್ನು ಅದ್ಭುತವಾಗಿ ಗಜಲ್ ಪ್ರಕಾರದಲ್ಲಿ ಗಣೇಶ್ ಬಳಿಸಿದರು. ಅಷ್ಟರ ಮಟ್ಟಿಗೆ ಗಜಲ್‌ನಲ್ಲಿ ಹೊಸ ಪ್ರಯೋಗ ಮಾಡಿದರು. ತಣ್ಣನೆಯ ವ್ಯಕ್ತಿತ್ವದ ಗಣೇಶ್ ಅಪಾರವಾದ ವೈಚಾರಿಕತೆಯನ್ನು ಬಳಸಿಕೊಂಡವರು. ವೇದಿಕೆಗಾಗಿ ಎಂದೂ ಹಂಬಲಿಸದವರು. ಪ್ರಶಸ್ತಿಗಳ ಹಿಂದೆ ಬೀಳದವರು. ಕವನ ವಾಚನಕ್ಕೆ ಕರೆದರೆ, ಸದ್ದಿಲ್ಲದೇ ಬಂದು ಕವಿತೆ ವಾಚಿಸಿ ಹೋಗಿಬಿಡುವ, ಮಾತಿಗೆ ಎಳೆದರೆ ಮಾತ್ರ ಮಾತನಾಡುವ ಅಪರೂಪದ ವ್ಯಕ್ತಿ. ಬೌದ್ಧಿಕತೆ ಮತ್ತು ಪ್ರಾಮಾಣಿಕತೆಗಳ ಮಿಶ್ರಣದಂತಿರುವ ಕೃಷಿಕ ಗಣೇಶ್ ಅಪ್ಪಟ ಕವಿ ಮನಸ್ಸಿನವರು. ಹಳ್ಳಿಯಲ್ಲಿದ್ದು ಕೊಂಡೇ ಅಪಾರ ಜೀವನ ಪ್ರೀತಿಯನ್ನು ಕಟ್ಟಿಕೊಂಡವರು.………………………………………………………………………………………………………………………………. * ಕತೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ : ಯಾಕೆ ಬರೆಯುತ್ತೇನೆ ಎಂದು ಹೇಳುವುದು ಕಷ್ಟ. ಅದು ಆಯಾ ಕಾಲಕ್ಕೆ ಸಂದರ್ಭಕ್ಕೆ ಬದಲಾಗುತ್ತಲೇ ಇರುವ ಸಂಗತಿ.ಮೊದಮೊದಲು ನನ್ನ ಪಾಡಿಗೆ ನಾನು ಬರೆದುಕೊಳ್ಳುತ್ತಿದ್ದೆ. ಕ್ರಮೇಣ ಬರವಣಿಗೆಯೊಂದಿಗೆ ಒಂದು ಸಾಮಾಜಿಕ ಸಂಬAಧ- ಜವಾಬ್ದಾರಿ ಇದೆ ಅನಿಸಿತು.ನನಗೆ ಈಗೀಗ ಅನಿಸುವುದು, ನನಗಾಗಿಯೇ ನಾನು ದೀಪ ಹಚ್ಚಿಕೊಂಡAತಿದ್ದರೂ ಬೆಳಕು ಎಲ್ಲರಿಗೂ ಕಾಣಿಸಬೇಕು. * ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ : ಕತೆಯಾಗಲೀ ಕಾವ್ಯವಾಗಲಿ ಹುಟ್ಟಿಕೊಳ್ಳುವ ಇಂಥದೇ ಕ್ಷಣ ಎಂಬುದಿಲ್ಲ. ಯಾವುದೇ ಕೆಲಸಗಳಲ್ಲಿ ತೊಡಗಿದರೂ ಆ ಕೆಲಸ ಬಿಟ್ಟು ಇನ್ನೊಂದರ ಬಗ್ಗೆ ಸಹಾ ಆಲೋಚಿಸುತ್ತಿರುವುದು ನನ್ನ ಸ್ವಭಾವ.ಹಾಗಾಗಿ ನನ್ನ ಬಹುತೇಕ ಕವಿತೆಗಳು ನನ್ನ ಕೆಲಸ ಮತ್ತು ಆಲೋಚನೆಗಳ ನಡುವಿನ ಸಂಬAಧದಿAದ ಹುಟ್ಟಿವೆ. * ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಇತ್ತೀಚೆಗೆ ನಾನು ಕತೆ ಬರೆದಿಲ್ಲ.ಹಿಂದೆ ಬರೆದ ಕಥೆಗಳಲ್ಲಿ ನನ್ನ ಸುತ್ತಮುತ್ತ ನಿತ್ಯ ಜರುಗಿದ- ಜರುಗುತ್ತಿರುವ ಘಟನೆಗಳ ಪ್ರಭಾವವಿತ್ತು. ಒಂದೆರಡು ಕಾಲ್ಪನಿಕ, ಪತ್ತೇದಾರಿ, ಮತ್ತು ಪುರಾಣ ಕಥೆಗಳನ್ನಾಧರಿಸಿ ಕೆಲವು ಸಣ್ಣ ಸಣ್ಣ ಕಥೆಗಳನ್ನು ಸಹಾ ಬರೆದಿದ್ದೇನೆ. * ಕತೆ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ : ಕವಿತೆಗಳ ಮಟ್ಟಿಗೆ, ಇಣುಕಿದೆ ಎನ್ನುವುದಕ್ಕಿಂತ ಬಾಲ್ಯದ ಪ್ರಭಾವವಿದೆ ಎನ್ನಬಹುದು.ಕಥೆಗಳಲ್ಲಿ ಬಾಲ್ಯದ ನೆನಪು ಕನಸು ಆಸಕ್ತಿ ಕುತೂಹಲಗಳು ಸೇರಿಕೊಂಡಿವೆ. ‘ಹರೆಯ’ದ ಎಂಬ ಪ್ರಭಾವದಿಂದ ನಾನು ಬರೆದಿಲ್ಲ ಎನಿಸುತ್ತದೆ. * ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ರಾಜಕೀಯವನ್ನು ಬೇರೆ ಬೇರೆ ಉದ್ದೇಶ- ಹಾದಿಯ ಮೂಲಕ ಬಳಸಿಕೊಳ್ಳಲಾಗುತ್ತಿದೆ.ನನ್ನ ಬಾಲ್ಯದ ದಿನಗಳಿಂದ ಕಂಡAತೆ ಹೇಳುವುದಾದರೆ ಹಿಂದೆ ರಾಜಕೀಯ ಪಕ್ಷಗಳು ಅನಕ್ಷರಸ್ಥರನ್ನು ,ಬಡವರನ್ನು ನಂಬಿಸುವ ಭಾಷಣ ಮತ್ತು ಸಿದ್ಧಾಂತ ಮುಂದಿಡುತ್ತಿದ್ದರು. ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ, ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ. ಇದನ್ನು `ರಾಜಕೀಯ ತಂತ್ರಗಾರಿಕೆ’, `ತಂತ್ರಗಾರಿಕೆಯ ಶ್ರೇಷ್ಠವಾದದ್ದು’ ಎಂದು ಜನರೂ ಸಹಾ ನಂಬುತ್ತಿದ್ದಾರೆ.ನಮ್ಮ ಸ್ವಾತಂತ್ರ‍್ಯ-ಸAವಿಧಾನ ನೀಡಿದ ಅನುಕೂಲತೆ ಇದ್ದಾಗ್ಯೂ, ಸಮರ್ಥ ರಾಜಕೀಯ ಸಿದ್ಧಾಂತ ಮುನ್ನೆಲೆಗೆ ಬರದೇ ಹೋಗುತ್ತಿರುವುದು ವಿಷಾದನೀಯ. * ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ದೇವರು ಇರುವ ಬಗ್ಗೆ ನನಗೆ ಯಾವುದೇ ಖಾತ್ರಿ ಸಿಕ್ಕಿಲ್ಲ.ಬಾಲ್ಯದಿಂದಲೂ ನನ್ನ ಕೌಟುಂಬಿಕ ಮತ್ತು ಸಾಂಸ್ಕೃತಿಕ ಜವಾಬ್ದಾರಿಯಾಗಿ ನಮ್ಮ ಮನೆ ಊರಿಗೆ ಸಂಬAಧಪಟ್ಟ ದೇವರು-ದಿಂಡರುಗಳ ಪೂಜೆಯನ್ನು ನಾನು ಮಾಡುತ್ತೇನೆ, ಆ ವಿಚಾರ ಬೇರೆ.ಹಾಗೆ ನೋಡಿದರೆ ದೈವ-ದೇವರು ಎಂಬುದು ಅವರವರ ವೈಯಕ್ತಿಕ ವಿಚಾರ.ನಮಗೆ ಸಮಾಧಾನವಾಗುವುದಾದರೆ ನಾವು ಒಂದು ಇರುವೆಯನ್ನೂ ಪೂಜಿಸಿಕೊಳ್ಳಬಹುದು, ಪ್ರಾರ್ಥಿಸಿ ಕೊಳ್ಳಬಹುದು. ನಮ್ಮಲ್ಲಿ ಹುಟ್ಟುವ ಎಲ್ಲ ತೊಡಕುಗಳು ದೇವರಿಂದಲ್ಲ, ಧರ್ಮದಿಂದ.ನನ್ನ ದೃಷ್ಟಿಯಲ್ಲಿ ಎಲ್ಲ ಧರ್ಮಗಳು ಕೂಡ ಆಯಾ ಕಾಲದಲ್ಲಿ ಆಯಾ ಪ್ರದೇಶದ ಜನ ಸಾಮೂಹಿಕವಾಗಿ ಬದುಕುವುದಕ್ಕೆ-ರಕ್ಷಿಸಿಕೊಳ್ಳುವುದಕ್ಕೆ ಕಂಡುಕೊAಡ ಒಂದೊAದು ಹಾದಿಗಳು. ಆ ಮಟ್ಟಿಗೆ ಅದು ಆಯಾಕಾಲದ ಸಂವಿಧಾನ.ಇವತ್ತು, ನಮ್ಮ ಕಾಲಕ್ಕೆ ಯೋಗ್ಯವೆನಿಸುವಂತಹ ಒಂದು ದೇಶವಾಗಿ ಬದುಕುವುದಕ್ಕೆ ಸಾಧ್ಯವಾಗುವಂತಹ ಒಂದು ಸಂವಿಧಾನವನ್ನು ನಮಗೆ ನೀಡಲಾಗಿದೆ. ಅದು ನಮ್ಮ ಧರ್ಮವಾಗಬೇಕು. * ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಹೇಳುವುದು ಕಷ್ಟ. ಮೇಲೆ ನೀವು ಕೇಳಿದ `ಪ್ರಸ್ತುತ ರಾಜಕೀಯ’, `ಧರ್ಮ ದೇವರು’ ಪ್ರಶ್ನೆಗಳೊಂದಿಗೆ ಇದೂ ಬೆಸೆದುಕೊಂಡಿದೆ.ನೂಲಿನ ಮೇಲೆ ನಡೆದ ಹಾಗೆ, ತುಸು ಆ ಕಡೆ ಜಾರಿದರೆ ರಾಜಕೀಯದೆಡೆಗೂ, ಈ ಕಡೆ ಜಾರಿದರೆ ಧಾರ್ಮಿಕತೆಯೆಡೆಗೂ ಗುರುತಿಸಲ್ಪಡುವ ಅಪಾಯವಿದೆ. * ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಸಾಹಿತ್ಯವಲಯದ ರಾಜಕಾರಣ ಉಸಾಬರಿ ಯಿಂದ ನಾನು ದೂರ. ನನ್ನ ಪಾಡಿಗೆ ನಾನು ಬರೆದುಕೊಂಡಿರುವುದೇ ನನಗಿಷ್ಟ.ನೋಡುತ್ತಿದ್ದರೂ ಕೇಳುತ್ತಿದ್ದರೂ ತಿಳಿಯುತ್ತಿದ್ದರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಾರೆ. * ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ದೇಶ ಎಂದರೆ ಏನು, ಹೇಗಿರಬೇಕು? ಎಂದು ಬಾಲ್ಯದಿಂದ ತಿಳಿದುಕೊಂಡು ಬಂದಿದ್ದೆವೋ ಈಗ ಹಾಗಿಲ್ಲ, ಹಾಗಾಗುತ್ತಿಲ್ಲ ಎನಿಸುತ್ತಿದೆ.ದೇಶದ ಅಭಿವೃದ್ಧಿ-ಆರ್ಥಿಕತೆಯ ಹಿನ್ನೆಲೆಯಿಂದ ಅಷ್ಟೇ ಅಲ್ಲ, ದೇಶದೊಳಗಿನ ಜನರ ಮತ್ತು ಸಮುದಾಯಗಳ ನಡುವಿನ ನಂಬಿಕೆ ವಿಶ್ವಾಸಗಳು ಸಡಿಲಗೊಳ್ಳುತ್ತಿದೆಯೇನೋ ಅನಿಸುತ್ತಿದೆ. * ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ನನಗೆ ಇನ್ನೂ ತುಂಬ ಬರೆಯುವುದಿದೆ ಅನಿಸುತ್ತದೆ. ಕತೆ ಕವಿತೆಗಳೊಂದಿಗೆ, ಕೆಲ ಹಾಸ್ಯ ಬರಹಗಳನ್ನು ಬರೆದೆ. ಎರಡು ಮೂರು ನಾಟಕಗಳನ್ನು ಬರೆದೆ.ಕವಿತೆಯಂತೆ ಮಕ್ಕಳ ಪದ್ಯಗಳನ್ನು ಬರೆಯುವುದು ಸಹ ನನಗೆ ಇಷ್ಟ, ಒಂದು ಪುಸ್ತಕ ವಾಗುವಷ್ಟು ಶಿಶುಗವಿತೆಗಳಿವೆ.ಈ ತನಕ ನಾನು ಬರೆದಿರುವುದು ಏನೂ ಅಲ್ಲ,ಇದಕ್ಕಿಂತಲೂ ಉತ್ತಮವಾಗಿ ಬರೆಯುವ ಸಾಧ್ಯತೆ ಇದೆ ಎಂದು ಆಗಾಗ ಅಂದುಕೊಳ್ಳುತ್ತೇನೆ. ಹಾಗೆ ಬರೆಯುವ ಅವಕಾಶ ಮತ್ತು ಧ್ಯಾನ ನನ್ನ ಬದುಕಿನಲ್ಲಿ ಉಳಿಯುತ್ತದೆ ಎಂದುಕೊAಡಿದ್ದೇನೆ. * ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಉತ್ತರ : ಕೇವಲ ೬ನೇ ತರಗತಿ ಓದಿರುವ ನಾನು ಆಂಗ್ಲ ಸಾಹಿತ್ಯವನ್ನು ಓದಲಾರೆ. ಹಲವು ಅನುವಾದಿತ ಸಾಹಿತ್ಯವನ್ನು ಓದಿದ್ದೇನೆ.ನಿರಂಜನರು ಸಂಪಾದಿಸಿದ ‘ವಿಶ್ವಕಥಾಕೋಶ’ದ ಪುಸ್ತಕಗಳು ನನ್ನನ್ನು ತುಂಬ ಕಾಡಿವೆ.ಇಷ್ಟದ ಸಾಹಿತಿಗಳು ಎಂದು ಒಬ್ಬ ಸಾಹಿತಿಯನ್ನು ಗುರುತಿಸಲಾರೆ. ಬೇಂದ್ರೆ, ಕುವೆಂಪು, ಕಾರಂತ, ಕಂಬಾರ, ಅಡಿಗರಿಂದ ಹಿಡಿದು ನನ್ನ ತಲೆಮಾರಿನವರೆಗಿನ ಅನೇಕರ ಕಾವ್ಯ ಕಥೆ ಪ್ರಬಂಧ ವಿಮರ್ಶೆ ಮೊದಲಾದವುಗಳನ್ನು ಇಷ್ಟಪಟ್ಟಿದ್ದೇನೆ. * ಈಚೆಗೆ ಓದಿದ ಕೃತಿಗಳಾವವು? ಉತ್ತರ : ಸಮುದಾಯದ ಗಾಂಧಿ, ಬುದ್ಧಚರಿತೆ, ವಿರಕ್ತರ ಬಟ್ಟೆಗಳು, ಜಾಂಬ್ಳಿ ಟುವಾಲು, ನಾನು ಕಸ್ತೂರ್…. ಇತ್ಯಾದಿ. * ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ : ನಾನು ಒಪ್ಪಿಕೊಂಡ- ಅಪ್ಪಿಕೊಂಡ ನಿತ್ಯದ ನನ್ನ ಕೃಷಿ ಕೆಲಸ, ಓದು ಬರವಣಿಗೆ, ಅಪರೂಪದ ತಿರುಗಾಟ ಎಲ್ಲವೂ ನನಗೆ ಇಷ್ಟವೇ. * ನಿಮಗೆ ಇಷ್ಟವಾದ ಸ್ಥಳ ಯಾವುದು ? ಉತ್ತರ : ನನ್ನ ಮನೆ, ನೆಲ, ಊರು, ಬೆಟ್ಟ-ಗುಡ್ಡ, ಹೊಳೆ… ಹಾಗೆ ಹೇಳುವುದಾದರೆ ಇಡೀ ಭೂಮಿಯ ವೈವಿಧ್ಯತೆ ಮತ್ತು ಸಮೃದ್ಧತೆಯ ಬಗ್ಗೆ ನನಗೆ ಅತಿ ಪ್ರೀತಿ-ಕುತೂಹಲವಿದೆ. ಎಲ್ಲವನ್ನು ಕಾಣಬೇಕೆಂಬ ಹಂಬಲವಿದೆ. * ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಉತ್ತರ :ಇತ್ತೀಚಿನ ವರ್ಷಗಳಲ್ಲಿ ನಾನು ತುಂಬ ಇಷ್ಟಪಟ್ಟು ಮತ್ತೆ ಮತ್ತೆ ನೋಡಿದ ಸಿನಿಮಾಗಳೆಂದರೆ ಕನ್ನಡದ ‘ಮೌನಿ’ ಮತ್ತು ‘ಕನಸೆಂಬೋ ಕುದುರೆಯನೇರಿ’ ‘ಬೇಲಿ ಮತ್ತು ಹೊಲ’. ಹಿಂದಿ ಭಾಷೆಯ ‘ಪಿಕೆ’. * ನೀವು ಮರೆಯಲಾರದ ಘಟನೆ ಯಾವುದು? ಉತ್ತರ : ಮರೆಯಲಾಗದ ಘಟನೆ ಎಂದು ಯಾವುದೋ ಒಂದನ್ನು ಹೇಳಲಾರೆ.ಸಾಮಾನ್ಯ ಬುದ್ಧಿ ತಿಳಿದಾಗಿನಿಂದ ನನ್ನ ವ್ಯಾಪ್ತಿಯಲ್ಲಿ ನಡೆದ ಘಟನೆಗಳನ್ನು ಸಾಮಾನ್ಯ ನೆನಪಿಟ್ಟುಕೊಳ್ಳುತ್ತ ಬಂದಿದ್ದೇನೆ. ಪ್ರತಿಯೊಂದೂ ನನಗೆ ಮರೆಯಲಾಗದ ಘಟನೆಯೇ, ಕೆಲ ಮಟ್ಟಿಗೆ ಮರೆಯಲಾಗದುದು ನನ್ನ ದೌರ್ಬಲ್ಯವೂ ಹೌದು. ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಸಾವು. ನಾನು ಆರೇಳು ವರ್ಷದವನಿದ್ದಾಗ ಸಂಭವಿಸಿದ ನನ್ನ ತಂದೆಯ ದುರ್ಮರಣದಿಂದ ಆರಂಭವಾದದ್ದು ಅದು. ಸಾವು ಅನಿವಾರ್ಯ ಮತ್ತು ಸಹಜ ಎಂಬುದು ತಿಳಿದಿದ್ದರೂ, ಪ್ರತಿ ಸಾವಿನ ನಂತರ ಉಂಟಾಗುವ ಶೂನ್ಯದ ಅನುಭವ ನನ್ನನ್ನು ಮತ್ತೆ ಮತ್ತೆ ಕದಡುತ್ತದೆ.********************************** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲೀಕತ್ತು
ಅಲೀಕತ್ತು ಕಥೆ ಕೆ. ಎ. ಎಂ. ಅನ್ಸಾರಿ “ನಮ್ಮ ಮಗಳು ಆಮಿನಾ ಳಿಗೆ ವಯಸ್ಸು ಹನ್ನೆರಡು ಆಯಿತಲ್ಲವೇ…? ಇನ್ನು ಒಂದೆರಡು ವರ್ಷ ಆದ್ರೆ ಮದುವೆ ಗಂಡು ಹುಡುಕಬೇಕು… ಅದಕ್ಕಿಂತ ಮೊದಲು ಅವಳಿಗೆ ಅಲೀಕತ್ತು ತೊಡಿಸಬೇಕಲ್ಲಾ…” ಪೋಕರ್ ಹಾಜಿ ಮಡದಿ ಪಾತುವಿನಲ್ಲಿ ಹೇಳುವುದು ಆಮಿನಾಳಿಗೆ ಕೇಳಿಸುತ್ತಿತ್ತು ಅಲೀಕತ್ತು ಎಂಬ ಪದ ಕೇಳುತ್ತಿದ್ದಂತೆಯೇ ಅಪ್ಪನ ಮಂಚದ ಕೆಳಗೆ ಮಲಗಿದ್ದ ಅಮಿನಾ ನಾಚಿ ನೀರಾದಳು… ಅವಳಿಗೆ ಬಂಗಾರವೆಂದರೆ ಪ್ರಾಣ. ಆಮಿನಾ ಕೇಳಿಸಿಕೊಂಡವಳಂತೆ ನಟಿಸಲಿಲ್ಲ.. ಅವಳಷ್ಟಕ್ಕೆ ಚಾಪೆಯಲ್ಲಿ ಹೊರಳಾಡುತ್ತಿದ್ದಳು… … ರಾತ್ರಿ ಸುಮಾರು ಗಂಟೆ 12 ಕಳೆದಿರಬಹುದು.. ಆಮಿನಾಳಿಗೆ ನಿದ್ದೆಯಿಲ್ಲ. ಅಪ್ಪನ ಗೊರಕೆ ಸದ್ದು ಕೇಳಿಸುತ್ತಿತ್ತು.. ಅಮ್ಮ ತನ್ನ ಪಕ್ಕದಲ್ಲಿ ಗಾಢ ನಿದ್ದೆಯಲ್ಲಿದ್ದಳು.. ಆಮಿನಾ ಎದ್ದು ಮೆಲ್ಲಗೆ ಸದ್ದು ಮಾಡದೆ ಬಚ್ಚಲು ಮನೆಯತ್ತ ನಡೆದಳು… ಬಚ್ಚಲು ಮನೆಗೆ ಹೊರಡುವಾಗ ಅಪ್ಪ ಮೀಸೆ ಕತ್ತರಿಸುವಾಗ ಬಳಸುತ್ತಿದ್ದ ಕನ್ನಡಿ ಒಯ್ಯಲು ಮರೆಯಲಿಲ್ಲ. ಬಚ್ಚಲು ಮನೆಯಲ್ಲಿ ಚಿಮಿಣಿ ದೀಪದ ಬೆಳಕು ಏರಿಸುತ್ತಾ ತನ್ನ ಮೊಗವನ್ನೊಮ್ಮೆ ನೋಡಿದಳು. ಕನ್ನಡಿ ನೋಡಿ ನಕ್ಕಳು… ಕನ್ನಡಿಯಲ್ಲಿ ಕಿವಿಯನ್ನು ನೋಡುತ್ತಾ ಸಂಭ್ರಮಿಸಿದಳು.. ಕತ್ತಲ್ಲಿ ಇದ್ದ ಬೆಳ್ಳಿಯ ಸರವನ್ನು ಸರಿಪಡಿಸಿ ತನ್ನ ಎದೆಯನ್ನೊಮ್ಮೆ ನೋಡಿ ನಾಚಿದಳು. … ಅಪ್ಪನ ಕೆಮ್ಮುವ ಸದ್ದು ಕೇಳಿಸುತ್ತಿದ್ದಂತೆ ಭಯದಿಂದ ಚಿಮಿಣಿ ದೀಪ ಮತ್ತು ಕನ್ನಡಿಯೊಂದಿಗೆ ಜಾಗ ಖಾಲಿ ಮಾಡಿ ಏನೂ ಅರಿಯದವಳಂತೆ ಸ್ವಸ್ಥಾನದಲ್ಲಿ ಬಂದು ಮಲಗಿದಳು.. ನಾಳೆ ಬಟ್ಟೆ ಒಗೆಯಲು ಹೋಗುವಾಗ ಈ ವಿಷಯ ಗೆಳತಿ ಗುಬ್ಬಿಯಲ್ಲಿ ಮತ್ತು ಅತೀಕಾ ಳಲ್ಲಿ ಹೇಳಬೇಕು ಎಂದು ತೀರ್ಮಾನಿಸಿದಳು… .. ರಾತ್ರಿಯ ನಿದ್ದೆ ಕೈಕೊಟ್ಟ ಕಾರಣ ಎಂದಿನ ಸಮಯಕ್ಕೆ ಆಮಿನಾ ಎಚ್ಚರಗೊಳ್ಳಲಿಲ್ಲ. ಅಮ್ಮ ನಮಾಜು ಮಾಡಿ ಬಂದ ನಂತರ ಕರೆದಳು.. ಗಂಟೆ 6 ಕಳೆಯಿತು. ನಮಾಜು ಮಾಡಿ ನಂತರ ಬೇಕಿದ್ದರೆ ಮಲಗು… ಆಮಿನಾ ಥಟ್ಟನೆ ಎದ್ದು ಬಚ್ಚಲು ಕೋಣೆಗೆ ಓಡಿದಳು.. ವುಜೂ ಮಾಡಿ ನಮಾಜಿಗೆ ನಿಂತಳು… ನಮಾಜಿಗೆಂದು ನಿಂತಿದ್ದರೂ ಮನಸ್ಸು ಮಾತ್ರ ನಿನ್ನೆ ರಾತ್ರಿಯ ಸಂಭಾಷಣೆಯ ಪ್ರತಿಫಲನ.. .. “ಅಮ್ಮಾ ಅಪ್ಪ ಎಲ್ಲಿ… ?” “ಅಪ್ಪ ಬೆಳಗ್ಗೆ ಮಸೀದಿ ಹೋದವರು ಬಂದಿಲ್ಲ. ನಿನಗೆ ಅಲೀಕತ್ತು ತೋಡಿಸಬೇಕು. ಉಸ್ತಾದರಲ್ಲಿ ಸಮಯ ನಿಶ್ಚಯಿಸಿ ಅಕ್ಕ ಸಾಲಿಗನ ಹತ್ತಿರ ಹೋಗಿ ಬರುತ್ತಾರೆ…” ಅಮ್ಮ ಪಾತು ದೋಸೆ ಹುಯ್ಯುತ್ತಾ ಉತ್ತರಿಸುತ್ತಿದ್ದಳು. ತನಗೆ ಏನೂ ಅರಿವಿಲ್ಲದಂತೆ ಆಮಿನಾ ದೋಸೆಯ ತುಂಡೊಂದನ್ನು ತೆಗೆದು ತಿನ್ನ ತೊಡಗಿದಳು. .. ಇನ್ನೇನು ಚಹಾ ಕುಡಿದು ಮುಗಿಯಲಿಲ್ಲ.. ಅಷ್ಟ್ಹೊತ್ತಿಗೇ ಆಮಿನಾ ಎಂಬ ಕೂಗು ಕೇಳಿಸಿತು.. ಕೂಗು ಕೇಳಿಸುತ್ತಿದ್ದಂತೆ ಬಕೆಟ್ ತುಂಬಾ ಬಟ್ಟೆ ತುಂಬಿಸುತ್ತಾ.. “ಹಾಂ ಬಂದೆ ಗುಬ್ಬಿ” ಎನ್ನುತ್ತಾ ಗೇಟು ತೆಗೆದು ಹೊರ ನಡೆದಳು. ಇಬ್ಬರೂ ಕೂತು ಬಕೆಟಿನಿಂದ ಬಟ್ಟೆ ತೆಗೆಯುತ್ತಾ ಹೊಳೆದಡದಲ್ಲಿ ಮಾತಿಗಾರಂಭಿಸಿದರು. ರಾತ್ರಿ ನಡೆದ ಸಂಭಾಷಣೆಯನ್ನು ಎಳೆ ಎಳೆಯಾಗಿ ವಿವರಿಸತೊಡಗಿದಳು. ಅಂದ ಹಾಗೆ ಗುಬ್ಬಿ ಈಕೆಯಿಂದ ಎರಡು ವರ್ಷ ದೊಡ್ಡವಳು… ಅಷ್ಟ್ಹೊತ್ತಿಗೆ ಅತೀಕಾ ಕೂಡಾ ಹೊಳೆ ಪಕ್ಕದಲ್ಲಿ ಬಂದು ಸೇರಿದಳು. ಅತೀಕಾ ಮೆತ್ತಗೆ ಆಮಿನಾಳ ಕೆನ್ನೆಗೆ ಚಿವುಟುತ್ತಾ .. “ಹಾಂ ಮದುವೆಗೆ ಮುನ್ನುಡಿ ಆಯ್ತು ಅಂತ ಹೇಳು.. ಅಲೀಕತ್ತು ಬಂದ್ರೆ ಬರುವ ಒಂದೆರಡು ವರ್ಷಗಳಲ್ಲಿ ಮದುವೆ ಗ್ಯಾರಂಟಿ .. ಅನ್ನು.” ಆಮಿನಾ ನಾಚಿ ನೀರಾದಳು.. …. ಮಧ್ಯಾಹ್ನ ಒಗೆದು ತಂದಿದ್ದ ಬಟ್ಟೆಯನ್ನೆಲ್ಲಾ ಒಣಗಲು ಹಾಕುತ್ತಿದ್ದ ಆಮಿನಾಳಿಗೆ ಅಪ್ಪನ ಕೂಗು ಕೇಳಿಸಿತು… ಆಮಿನಾ … ಅಪ್ಪ ಹತ್ತಿರ ಕರೆದು ಬುದ್ದಿ ಮಾತು ಹೇಳತೊಡಗಿದ. ‘ನೀನು ಈಗ ದೊಡ್ಡವಳಾಗಿದ್ದಿಯಾ .. ಮುಂಚಿನ ಹಾಗೆಲ್ಲಾ ಹೊಳೆ ಬದಿಯಲ್ಲಿನ ಬಟ್ಟೆ ಒಗೆತ ಕಡಿಮೆ ಮಾಡಬೇಕು. ನಾಡಿದ್ದು ಗುರುವಾರ ನಿನಗೆ ಅಲೀಕತ್ತು ತೊಡಿಸಲು ದಿನ ನಿರ್ಧರಿಸಲಾಗಿದೆ. ಹಾಂ ಬಾಪಾ … ಮರು ಮಾತನಾಡದೆ ಆಮಿನಾ ತನ್ನ ಕಾಯಕ ಮುಂದುವರಿಸಿದಳು.. … ಆಮಿನಾಳ ಖುಷಿ ಏನೋ ಮಾಯವಾದಂತೆ ಕಂಡಿತು ತಾಯಿ ಪಾತುವಿಗೆ. ಸದ್ಯ ಏನೂ ಕೇಳುವುದು ಬೇಡವೆಂದು ಸುಮ್ಮನಿದ್ದಳು. ಮಧ್ಯಾಹ್ನ ಊಟ ಮಾಡಿ ಮಲಗಿದ ಆಮಿನಾಳಿಗೆ ವಿಪರೀತ ಹೊಟ್ಟೆನೋವು…. ಅಮ್ಮ ಬಂದು ಹೊಟ್ಟೆ ಒತ್ತಿ ನೋಡಿಯಾಯಿತು… ಕಿಬ್ಬೊಟ್ಟೆಯ ಹತ್ತಿರ ಒತ್ತಿ ನೋಡುತ್ತಾ.. ಈಗ ನೋವಿದೆಯಾ ಅಮ್ಮ ಕೇಳಿದಾಗ ಹಾಂ.. ಎಂದು ಉತ್ತರಿಸಿದಳು. ಸರಿ ನೀ ಮಲಗಿರು. ಸ್ವಲ್ಪ ಹೊತ್ತಾದ ಮೇಲೆ ಎಲ್ಲಾ ಸರಿಯಾಗಬಹುದು ಎನ್ನುತ್ತಾ ಮುಗುಳ್ನಕ್ಕು ಪಾತು ಹೊರನಡೆದಳು. ಆಮಿನಾಳಿಗೆ ಒಂದೂ ಅರ್ಥವಾಗಲಿಲ್ಲ. ನಾನಿಲ್ಲಿ ಹೊಟ್ಟೆನೋವಿನಿಂದ ಸಾಯುತ್ತಿದ್ದರೂ ಅಮ್ಮನಿಗೆ ನಗು ಎಂದು ಮನಸ್ಸಲ್ಲೇ ಕೋಪಿಸಿದಳು. ನಂತರ ಕಿಟುಕಿಯಿಂದ ನೋಡಲು ಅಮ್ಮ, ಅಪ್ಪನನ್ನು ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟುವುದು ಕಾಣಿಸಿತು. ಆಮಿನಾ ಮಲಗಿಯೇ ಇದ್ದಳು. ಅಮ್ಮ ಬಂದು ಕಿವಿಯಲ್ಲಿ..,”ನೀನು ದೊಡ್ಡವಳಾಗಿದ್ದಿ ಅಷ್ಟೇ.. ಭಯವೇನೂ ಬೇಡ. ಒಂದೆರಡು ದಿನ ಹೀಗೆ ಇರುತ್ತೆ’ ಎಂದು ಸಮಾಧಾನಪಡಿಸಿದಳು. ಥಟ್ಟನೆ ಅವಳಿಗೆ ಗುಬ್ಬಿ ಮತ್ತು ಅತೀಕಾ ಇದರ ಬಗ್ಗೆ ಹೇಳಿದ್ದು ನೆನಪಿಗೆ ಬಂತು. ಆಮಿನಾ ನಾಚಿ ನೀರಾದಳು. ಜೊತೆಗೆ ಮನಸ್ಸಿಗೆ ಏನೋ ಒಂದು ರೀತಿಯ ಖುಷಿ. ದಿನಗಳು ಓಡತೊಡಗಿತು.. ಅಕ್ಕಸಾಲಿಗ ಬಂದು ಕಿವಿ ಚುಚ್ಚಿ ಅಲೀಕತ್ತು ತೊಡಿಸಿ ಚೀಲದಲ್ಲಿ ವೀಳ್ಯದೆಲೆ, ಅಕ್ಕಿ, ಅಡಿಕೆ ತುಂಬಿಸಿ ದಕ್ಷಿಣೆ ತಗೊಂಡು ಎಲೆ ಅಡಿಕೆ ಜಗಿಯುತ್ತಾ ಹೊರಹೋದ.. ಆಮಿನಾಳಿಗೆ ದಿನಕ್ಕೆ ಹತ್ತು ಹದಿನೈದು ಸಲ ಕನ್ನಡಿ ನೋಡುತ್ತಾ ತನ್ನ ಸೌಂದರ್ಯ ನೋಡುವುದೇ ಅಭ್ಯಾಸವಾಗಿ ಹೋಗಿತ್ತು. ಅಡಿಯಿಂದ ಮುಡಿವರೆಗೆ ತನ್ನನ್ನೇ ಕನ್ನಡಿಯಲ್ಲಿ ನೋಡುತ್ತಾ ಖುಷಿ ಪಡುತ್ತಿದ್ದಳು. ವರುಷ ಒಂದು ಕಳೆಯಿತು. ಒಂದು ದಿನ ರಾತ್ರಿ ಅಪ್ಪ ಪಾತುವಿನಲ್ಲಿ ಹೇಳುತ್ತಿದ್ದ. ಮಗಳಿಗೆ ವರ್ಷ 14 ಆಯಿತು. ಸಯ್ಯದ್ ಬ್ಯಾರಿ ಒಬ್ಬ ಒಳ್ಳೆಯ ಸಂಬಂಧ ಇದೆ ಅಂತ ಹೇಳಿದ್ದಾನೆ. ನಮಗಾದರೆ ಗಂಡಾಗಿ ಹೆಣ್ಣಾಗಿ ಇರುವುದು ಒಂದೇ ಕುಡಿ. ಇನ್ನು ತಡ ಮಾಡುವುದು ಬೇಡ ಎಂದು ತೀರ್ಮಾನಿಸಿ ನಾಡಿದ್ದು ಆದಿತ್ಯವಾರ ಹುಡುಗನ ಕಡೆಯವರನ್ನು ಬರಲು ಹೇಳಿದ್ದೇನೆ. ಅವನೂ ಒಬ್ಬನೇ ಒಬ್ಬ ಮಗನಂತೆ. ಒಳ್ಳೆಯ ತರವಾಡು.. ನಾವು ಹತ್ತಿರದ ಒಂದಿಬ್ಬರು ಸಂಬಂಧಿಕರನ್ನು ಮಾತ್ರ ಕರೆಯೋಣ… ಶನಿವಾರ ಸಂಜೆ ಹೊತ್ತಿಗೆ ಅತೀಕಾ ಮತ್ತು ಗುಬ್ಬಿ ಆಮಿನಾಳ ಮನೆಗೆ ಬಂದರು. ಕೈಗಳಿಗೆ ಮೆಹಂದಿ ಹಚ್ಚುತ್ತಾ ಕೀಟಲೆ ಮಾಡತೊಡಗಿದರು.. “ಹೋಗೇ” ಎಂದು ಬೈದರೂ ಮನಸ್ಸಿನಲ್ಲಿ ಪ್ರಕಟಿಸಲಾಗದ ಖುಷಿಯನ್ನು ಅವಳ ಮುಖಭಾವ ಹೇಳುತ್ತಿತ್ತು. ಆದಿತ್ಯವಾರ ಬೆಳಿಗ್ಗೆಯೇ ಪೋಕರ್ ಹಾಜಿಯ ಇಬ್ಬರು ಅಣ್ಣಂದಿರು ಮತ್ತು ಅವರ ಮಡದಿಯರು ಹಾಜರಾದರು. ತುಪ್ಪದ ಊಟ, ಕೋಳಿ ಸಾರು ಎಲ್ಲಾ ತಯಾರಾಯಿತು. ಮಧ್ಯಾಹ್ನದ ಹೊತ್ತು ಅಂಬಾಸಿಡರ್ ಕಾರಿನಲ್ಲಿ ಮದುಮಗನೊಂದಿಗೆ ಆತನ ಅಪ್ಪ ಅಮ್ಮ ಮತ್ತು ಒಂದಿಬ್ಬರು ಹೆಂಗಸರು ಇಳಿದು ಬಂದರು. ಆಮಿನಾ ಕಿಟುಕಿಯಿಂದ ಇಣುಕಿ ನೋಡುತ್ತಿದ್ದಳು… ಬಿಳಿ ಮೈಬಣ್ಣ, ತಲೆಗೊಂದು ಟೋಪಿ .. ಅಚ್ಚುಕಟ್ಟಾಗಿ ಟ್ರಿಮ್ ಮಾಡಿದ ಗಡ್ಡ…. ಮೊದಲ ನೋಟದಲ್ಲೇ ಇಷ್ಟವಾಯಿತು. ಚಾ ತಿಂಡಿ ಕಳೆದು ಪೋಕರ್ ಹಾಜಿ…. ,, ‘ಪಾತೂ.. ಹುಡುಗನಿಗೂ ನಮ್ಮ ಮಗಳನ್ನೊಮ್ಮೆ ತೋರಿಸು.. ಅವನಿಗೆ ಇಷ್ಟ ಆದ್ರೆ ಅಲ್ಲವೇ ಮುಂದಿನ ಮಾತು…” ನಗುತ್ತಾ ಹೇಳಿದ. ಹುಡುಗನೊಂದಿಗೆ ಬಂದ ಹೆಂಗಸರು ಒಳಗೆ ಕರೆದಾಗ ಹುಡುಗ ಅದನ್ನೇ ಕಾಯುತ್ತಿದ್ದವನಂತೆ ಬೇಗನೆ ಒಳ ನಡೆದ. ತಲೆಗೆ ಮಿನುಗುವ ಶಾಲು. ಆ ಶಾಲನ್ನು ಬೇಕೆಂತಲೇ ಕಿವಿ ಕಾಣುವಂತೆ ತಲೆಗೆ ಹಾಕಿದ್ದಳು. ಕಿವಿ ಮುಚ್ಚಿದರೆ ಅಲೀಕತ್ತು ದರ್ಶನವಾಗದು ಅಲ್ವೇ…? ಹುಡುಗ ಕೊಠಡಿಗೆ ಕಾಲಿಡುತ್ತಿದ್ದಂತೆಯೇ ತನ್ನೆರಡೂ ಕೈಗಳಿಂದ ಮುಖ ಮುಚ್ಚಿದಳು. ಮುಚ್ಚಿದ ಕೈಗಳ ಎಡೆಯಿಂದ ಹೊಳೆವ ಎರಡು ಕಣ್ಣುಗಳು ಕಾಣಿಸುತ್ತಿತ್ತು.. ಹುಡುಗನೊಂದಿಗೆ ಬಂದಿದ್ದ ಹೆಂಗಸರು ಆಕೆಯ ಕೈ ಯನ್ನು ಹಿಂದಕ್ಕೆ ಸರಿಸಿ ಹುಡುಗನಿಗೆ ಮುಖ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು. ಆಮಿನಾಳ ಕಣ್ಣು ಹೊಳೆಯುತ್ತಿತ್ತು.. ಜತೆಗೆ ಮೈಯೆಲ್ಲಾ ಬೆವರಿತ್ತು…. ಮುಖ ದರ್ಶನದ ನಂತರ .. “ನನಗೆ ಇಷ್ಟವಾಯಿತು” ಎಂಬ ಒಂದೇ ಒಂದು ಮಾತು ಹೊರಬಂತು. ಆಮಿನಾಳಿಗೆ ದೇಹವೆಲ್ಲಾ ವಿದ್ಯುತ್ ಸಂಚಾರವಾದ ಅನುಭವ. ಸಂತಸವ ವಿವರಿಸಲು ಪದಗಳಿಲ್ಲ. ಊಟದ ನಂತರ ಮಾತುಕತೆ.. ಎಲ್ಲವೂ ಮುಗಿದು ಎರಡು ವಾರದೊಳಗೆ ಮದುವೆ ಎಂದು ದಿನವೂ ನಿಶ್ಚಯಿಸಲಾಯಿತು. ಆಮಿನಾಳಿಗೆ ನಿದ್ದೆಯಿಲ್ಲದ ರಾತ್ರಿಗಳು. ಕೈ ಬೆರಳಿನಿಂದ ದಿನಗಳನ್ನು ಎಣಿಸುತ್ತಿದ್ದಳು. ಅಪ್ಪನಿಗೂ ಚಿಂತೆ ಇಲ್ಲ ಎಂದಲ್ಲ. ಮದುವೆ ಅಂದಮೇಲೆ ಒಡವೆ ವಸ್ತ್ರಗಳು ಬೇಕು.. ಅಪ್ಪ ಹಣದ ಬಗ್ಗೆ ಲೆಕ್ಕ ಹಾಕುತ್ತಿದ್ದ.. ಅಮ್ಮನಿಗೂ ಬಿಡದ ಚಿಂತೆ.. 14 ವರ್ಷ ಸಾಕಿ ಸಲುಹಿದ ಒಬ್ಬಳೇ ಒಬ್ಬಳು ಮಗಳನ್ನು ಕಳುಹಿಸಿಕೊಡಬೇಕು. ಜೊತೆಗೆ ನಾಲ್ಕು ಹಸುಗಳು.. ಅವುಗಳಿಗೆ ಸರಿಯಾದ ಸಮಯಕ್ಕೆ ಹುಲ್ಲು ಹಾಕಬೇಕು.. ಸಂಜೆ ಹೊತ್ತಿಗೆ ಹಟ್ಟಿಯಲ್ಲೂ ಕಟ್ಟಬೇಕು… ಆಮಿನಾಳು ಗಂಡನ ಮನೆ ಸೇರಿದರೆ ಹಸುವಿನ ಆರೈಕೆಯೂ ಬೇರೆ ಪಾತುವಿನ ಹೆಗಲಿಗೆ ಬರುತ್ತದೆ. ಪಾಲನೆ ಕಷ್ಟ ಆಗುವುದು ಎಂದು ಹಸುವನ್ನು ಮಾರಲೂ ಆಗದು. 20 ಲೀಟರ್ ಹಾಲು.. ಇದೊಂದು ಪ್ರಮುಖ ಆದಾಯ ಮಾರ್ಗ. ಚುಟುಕಾಗಿ ಹೇಳುವುದಿದ್ದರೆ ಮೂವರಿಗೂ ಬೇರೆ ಬೇರೆ ರೀತಿಯ ಚಿಂತೆಗಳು. ಬೆಳಿಗ್ಗೆ ಅಮ್ಮ ಮಗಳ ಮಾತಿನ ನಡುವೆ ಅಮ್ಮಳ ಒಂದು ಚಿಕ್ಕ ಪ್ರಶ್ನೆ… “ಆಮಿನಾ ನಿನಗೆ ಯಾವ ರೀತಿಯ ಒಡವೆ ಇಷ್ಟ ?” ಒಲ್ಲದ ಮನಸ್ಸಿನಿಂದಲೇ ಅಮ್ಮನಲ್ಲಿ ಒಂದು ವಿಷಯ ಹೇಳಿದಳು. “ಅಮ್ಮಾ .. ಒಡವೆ ರೂಪದಲ್ಲಿ ನನಗೆ ಇಷ್ಟವಾಗಿರೋದು ಅಲೀಕತ್ತು ಮಾತ್ರ. ಇರುವ ಅಲೀಕತ್ತು ಚಿಕ್ಕದು. ಮಾಲೆ ಸರ ಏನೂ ಬೇಡ.. ಸ್ವಲ್ಪ ಗಟ್ಟಿಯುಳ್ಳ ಅಲೀಕತ್ತು ಮಾತ್ರ ಸಾಕು.” ಅವಳ ಅಲೀಕತ್ತು ಪ್ರೀತಿಯನ್ನು ಕಂಡು ಆಶ್ಚರ್ಯ ಪಟ್ಟರೂ ತೋರ್ಪಡಿಸದೆ.. ಹಾಗೇ “ಆಗಲಿ. ಅಪ್ಪನಲ್ಲಿ ಹೇಳಿ ಹೊಸದು ಮಾಡಿಸೋಣ” ಎಂದು ಸಮ್ಮತಿ ಸೂಚಿಸಿದಳು. ಮದುವೆ ಅದ್ದೂರಿಯಾಗಿ ನಡೆಯಿತು. ಗಂಡು-ಹೆಣ್ಣಿನ ಕಡೆಯವರಿಂದ ಒಂದೇ ಮಾತು. ಮದುಮಗಳ ಅಲೀಕತ್ತು ಸೂಪರ್… ಈ ಮಾತು ಕೇಳಿಸುತ್ತಿದ್ದಂತೆ ಆಮಿನಾಳಿಗೆ ಮಾತ್ರವಲ್ಲ ಅಮ್ಮನಿಗೂ ಖುಷಿಯಾಗುತ್ತಿತ್ತು. ಅಮೀನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ಸುಮಾರು ಒಂದುವಾರ ಮದುಮಗ ಮನೆಯಲ್ಲಿಯೇ ಇದ್ದ. ಆಮಿನಾಳಿಗೆ ಸ್ವರ್ಗ ಸುಖದ ಅನುಭವ. ದಿನಗಳುರುಳುತ್ತಿತ್ತು. ಪೇಟೆಯಲ್ಲಿ ಅಂಗಡಿ ಇಟ್ಟಿದ್ದ ಗಂಡ ಇಬ್ರಾಹಿಂ ವಾಪಸ್ ಬರುವಾಗ ರಾತ್ರಿ ಗಂಟೆ ಹತ್ತು ಕಳೆಯುತ್ತಿತ್ತು. ಮೊದ ಮೊದಲು ಕಷ್ಟವಾದರೂ ಕ್ರಮೇಣ ಅಭ್ಯಾಸವಾಗಿ ಹೋಗಿತ್ತು. ಈ ನಡುವೆ ಆಮಿನಾ ಕುಟುಂಬಕ್ಕೆ ಮೊದಲ ಶಾಕ್ ಉಂಟಾಯಿತು. ಅಪ್ಪ ಪೋಕರ್ ಹಾಜಿಯ ಅಕಾಲಿಕ ಮರಣ. ಇಡೀ ಕುಟುಂಬವೇ ಕಣ್ಣೀರಲ್ಲಿ ಮುಳುಗಿತು. ಹೇಗೋ ಸುಧಾರಿಸಿ ಜೀವನ ಚಕ್ರ ನಡೆಯುತ್ತಿತ್ತು. ವಾರಕ್ಕೊಂದು ಸಲ ಆಮಿನಾ ಳು ಕೂಡಾ ಅಮ್ಮನ ಮನೆಗೆ ಬಂದು ಹೋಗುತ್ತಿದ್ದಳು. ಪ್ರತಿ ತಿಂಗಳೂ ಅಮ್ಮ ಹಾಗೂ ಅತ್ತೆ ಮನೆಯಿಂದ ಒಂದೇ ಪ್ರಶ್ನೆ… “ಹೀಗೆ ಇಬ್ಬರು ಮಾತ್ರ ಇದ್ದರೆ ಸಾಕಾ…? ಒಂದು ಮಗುವಿನ ಬಗ್ಗೆ ಇನ್ನೂ ಚಿಂತಿಸಿಲ್ಲವೇ ?”. “ದೇವರು ಯಾವಾಗ ಕೊಡುತ್ತಾನೋ ಆವಾಗ ಸಂತೋಷದಲ್ಲಿ ಸ್ವೀಕರಿಸೋಣ” ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ಇಬ್ರಾಹಿಂ. ಜೀವನ ರಥ ಸಾಗುತ್ತಿತ್ತು. ಒಂದು ದಿನ ರಾತ್ರಿ ಗಂಟೆ ಹತ್ತು ಕಳೆದರೂ ಇಬ್ರಾಹಿಂ ಬರಲಿಲ್ಲ. ಚಾವಡಿಯಲ್ಲಿ ಕೂತು ಸುಸ್ತಾದ ಆಮಿನಾಳ ಮೈಯೆಲ್ಲಾ ಬೆವರ ತೊಡಗಿತು. ಗಂಟೆ ಹನ್ನೊಂದು ದಾಟಿತು.. ಇಲ್ಲ… ಇನ್ನೂ ಬರದೇ ಇದ್ದಾಗ ಆಮಿನಾ ಆಗಲೇ ನಿದ್ದೆಗೆ ಜಾರಿದ್ದ ತನ್ನ ಅತ್ತೆ ಮಾವನವರನ್ನು ಕೂಗಿ ಎಬ್ಬಿಸಿದಳು… “ಏನು ಮಾಡುವುದು…?” “ಎಲ್ಲಿ ಹೋಗಿರಬಹುದು..?” “ಇದುವರೆಗೂ ಹೇಳದೆ ಎಲ್ಲೂ ಹೋದವನಲ್ಲ. ಇನ್ನೂ ಸ್ವಲ್ಪ ಕಾಯೋಣ…” ಮೂವರೂ
ನಾಯಿ ಮತ್ತು ಬಿಸ್ಕತ್ತು
ಕಿರು ಕಥೆ ನಾಗರಾಜ ಹರಪನಹಳ್ಳಿ ಆತ ದಂಡೆಗೆ ಬಂದು ಕುಳಿತ. ಎಲ್ಲಾ ಕಡೆ ಬಂಧನಗಳಿಂದ ಬಿಗಿದ ಜಗತ್ತು ಸಾಕೆನಿಸಿತ್ತು. ರಸ್ತೆಗಳೆಲ್ಲೆ ಮಕಾಡೆ ಮಲಗಿದ್ದವು. ಜನರ ಸುಳಿವಿಲ್ಲ.ಮುಚ್ಚಿದ ಹೋಟೆಲ್ಲು, ಲಾಡ್ಜು, ಅಂಗಡಿ ಬಾಗಿಲು. ಗೂಡಂಗಡಿಗಳು ಬಲವಾದ ಹಗ್ಗಗಳಿಂದ ಬಂಧಿಸಲ್ಪಟ್ಟಿದ್ದವು. ಇಡೀ ನಗರ ಸತ್ತು ಹೋಗಿತ್ತು. ಬಿಕೊ ಅನ್ನುತ್ತಿದ್ದ ಬಸ್ ಸ್ಟ್ಯಾಂಡ್. ಬಿಕ್ಷುಕುರ ಸುಳಿವು ಸಹ ಇಲ್ಲ.ಮನುಷ್ಯರ ಸುಳಿವಿಲ್ಲ. ಪ್ರತಿ ಸರ್ಕಲ್ ನಲ್ಲಿ ಸುರಿವ ಉರಿ ಬಿಸಿಲಲ್ಲಿ ಖಾಲಿ ರಸ್ತೆಗಳನ್ನು ಪೊಲೀಸರು ಕಾಯುತ್ತಿದ್ದರು. ಭೀತಿ ಮತ್ತು ಭಯ ಸ್ಪರ್ಧೆಗೆ ಬಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಕುಣಿದಾಡುತ್ತಿದ್ದವು .ಜನರಿಲ್ಲದೇ ಆಸ್ಪತ್ರೆಗಳು ಸಹ ದುಃಖಿಸುತ್ತಿದ್ದವು. ಔಷಧಿ ಅಂಗಡಿ ಮಾತ್ರ ತೆರೆದು ಕೊಂಡಿದ್ದು ಕೌಂಟರ್ ನಲ್ಲಿ ಒಬ್ಬ ಪೇಪರ್ ಹಿಡಿದು ಆದ್ಹೇನೋ ಜಗತ್ತು ತಲೆ ಮೇಲೆ ಬಿದ್ದಂತೆ ತದೇಕ ಧ್ಯಾನಸ್ಥನಾಗಿ ಅಕ್ಷರದತ್ತ ದೃಷ್ಟಿ ನೆಟ್ಟಿದ್ದ .ಇದನ್ನೆಲ್ಲಾ ಕಣ್ತುಂಬಿ ಕೊಂಡ ರಾಮನಾಥ ದಂಡೆಯಲ್ಲಿ ಧ್ಯಾನಿಸುತ್ತಿದ್ದ. ಆಗ ತಾನೇ ಕೋವಿಡ್ ಲ್ಯಾಬ್ ನಲ್ಲಿ ಅ ದಿನ ಬಂದ ಐವತ್ತು ಜನರ ಗಂಟ ದ್ರವ ಪರೀಕ್ಷೆ ಮಾಡಿ, ಜೀವವನ್ನು ಕೈಯಲ್ಲಿ ಹಿಡಿದು ಬಂದಿದ್ದ. ಅಂದು ಬಂದ ಐವತ್ತು ಸಂಶಯಿತ ಕರೋನಾ ಗಂಟಲು ದ್ರವದಲ್ಲಿ ಹದಿನೆಂಟು ಜನರ ಗಂಟಲು ದ್ರವದಲ್ಲಿ ಕೋವಿಡ್ ೧೯ ವೈರಸ್ ಇರುವುದು ದೃಢಪಟ್ಟಿತ್ತು. ತನ್ನ ಜೀವಮಾನದಲ್ಲಿ ಮನುಷ್ಯರು, ವೈದ್ಯರು, ಅಧಿಕಾರಿಗಳು…. ಎಲ್ಲರೂ ಗಡಿಬಿಡಿ , ಒಂಥರಾ ಅವ್ಯಕ್ತಭಯದಲ್ಲಿ ಇದ್ದುದ ರಾಮನಾಥ ಮೊಟ್ಟ ಮೊದಲ ಬಾರಿಗೆ ನೋಡಿದ್ದ.ತನ್ನ ಕೆಲಸವನ್ನು ನಿರ್ಲಿಪ್ತತೆಯಿಂದ ಮುಗಿಸಿ ಬಂದಿದ್ದ ಆತ ಜೀವನದ ನಿರರ್ಥಕ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೋ ಅಥವಾ ವರ್ತಮಾನ ಕುಸಿಯುವುದನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದೇನೋ ಎಂದು ತರ್ಕಿಸುತ್ತಾ ಕುಳಿತಿದ್ದ. ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿ ದುತ್ತನೇ ಎದುರಾಗಿ ಮಾತಿಗಿಳಿದ. “ಏನ್ ಸರ್ ಸರ್ಕಾರ ಮಾಡಿದ್ದು ಸರಿಯಾ? ನಾ ಕುಡಿಯದೇ ಬದುಕಲಾರೆ. ಲಿಕ್ಕರ್ ಶಾಪ್ ಮುಚ್ವಿದ್ದು ಸರಿಯೇ” ಎಂದು ಪ್ರಶ್ನಿಸಿದ. ರಾಮನಾಥಗೆ ಕಸಿವಿಸಿಯಾಯ್ತು.ಬಗೆಹರಿಸಲಾಗದ ಇವನ ಪ್ರಶ್ನೆಗೆ ಉತ್ತರ ಎಲ್ಲಿಂದ ತರುವುದು ಎಂದು? ಸರಿಯಲ್ಲ ಎಂದು ತಲೆ ಅಲ್ಲಾಡಿಸಿ ಮತ್ತೆ ನಿರ್ಲಿಪ್ತನಾದ. ಹಠಾತ್ ಎದುರಾದ ವ್ಯಕ್ತಿ ಅಲ್ಲಿಂದ ನಡೆದುಹೋದ.ಅವನನ್ನು ನಾಯಿಯೊಂದು ಹಿಂಬಾಲಿಸಿತು. ಮನ ತಣಿಯುವಷ್ಟು ದಂಡೆಯಲ್ಲಿ ಕುಳಿತ ರಾಮನಾಥ ಎದ್ದು ಮನೆ ಕಡೆ ನಡೆದ . ಅವನು ಒಬ್ಬಂಟಿ ಬೇರೆ. ಸಾಂಬರು ಕಟ್ಟಿಸಿಕೊಳ್ಳಲು ಹೋಟೆಲ್ ಗಳು ಬೇರೆ ಬಂದ್ ಆಗಿವೆ. ಅನ್ನ ಸಾರು ಅವನೇ ಬೇಯಿಸಿ ತಿನ್ನುವುದು ರೂಢಿಯಾಗಿತ್ತು ಲಾಕ್ ಡೌನ್ ಸಮಯದಲ್ಲಿ.ಮೊದಲಾದರೆ ಅನ್ನ ಮಾತ್ರ ಬೇಯಿಸಿಕೊಳ್ಳುತ್ತಿದ್ದ. ಇದೇ ಧಾವಂತದಲ್ಲಿ ಹೆಜ್ಜೆ ಹಾಕಿದವನಿಗೆ ದಾರಿಯಲ್ಲಿ ಹಠಾತ್ತನೇ ದಂಡೆಯಲ್ಲಿ ಪ್ರಶ್ನೆ ಎಸೆದ ವ್ಯಕ್ತಿ ಸಿಕ್ಕ. ಆತ ರಸ್ತೆ ಪಕ್ಕ ನಾಯಿಯೊಂದಿಗೆ ಮಾತಾಡುತ್ತಿದ್ದ. ಅದನ್ನೆ ತನ್ನ ಜೀವದ ಭಾಗವೆಂಬಂತೆ ಅದಕ್ಕೆ ಬಿಸ್ಕತ್ತು ಹಾಕುತ್ತಾ …ತನ್ನ ದುಃಖವನ್ನೆಲ್ಲಾ ನಾಯಿಯ ಕಣ್ಣಿಗೆ ವರ್ಗಾಯಿಸುತ್ತಾ ಅದ್ಹೇನೋ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಿದ್ದ. ಪ್ರತಿ ಮಾತಿಗೂ ಒಂದೊಂದೇ ಬಿಸ್ಕತ್ತಿನ ತುಂಡುಗಳನ್ನು ಅದಕ್ಕೆ ಹಾಕುತ್ತಿದ್ದ. ಮರದ ಕೆಳಗೆ ಈ ಸಂಭಾಷಣೆ ನಡೆದಿತ್ತು. ಕುತೂಹಲದಿಂದ ರಾಮನಾಥ ಇದನ್ನು ಆಲಿಸತೊಡಗಿದ. ಲಿಕ್ಕರ್ ಹುಡುಕಿ ಹೊರಟ ಆ ಸಾಮಾನ್ಯ ಮೊದಲ ನೋಟಕ್ಕೆ ಕುಡುಕ ಅನ್ನಿಸಿದ್ದ. ಈಚೀಚೆಗೆ ಕೆಲಸವೂ ಇಲ್ಲದೇ, ಉಳಿಯಲು ಸೂರು ಇಲ್ಲದೇ ಅಂದಂದೆ ದುಡಿಯುವವರ ಆಹಾರಕ್ಕೆ ಅಲೆದ ಈ ಸತ್ತ ನಗರದಲ್ಲಿ ; ನಾಯಿ ಹಸಿವಿಗೂ ಮಿಡಿವ, ಮನುಷ್ಯನ ಕಂಡು ಮನಸಲ್ಲೇ ಸಮಾಧಾನಿಯಾದ. ಅಷ್ಟರಲ್ಲಿ ಹಸಿದವರಿಗೆ ಊಟದ ಜೀಪ್ ನಲ್ಲಿ ಅನ್ನ ಸಾರು ತುಂಬಿದ ಪಾತ್ರೆ ಇಟ್ಟುಕೊಂಡು ಹಸಿದವರಿಗೆ ಹುಡುಕುವ ಮದರ್ ಥೆರೇಸಾ ಟ್ರಸ್ಟನ ಸ್ಯಾಮಸನ್ ಎದುರಾದರು. ರಾಮನಾಥನನ್ನ ಕಂಡವರೇ ಕೈ ಬೀಸಿದರು. ಅತ್ತ ನಾಯಿ ಮತ್ತು ಕುಡುಕ ಮನುಷ್ಯ , ಸ್ಯಾಮಸನರ ಅನ್ನ ನೀಡುವ ಜೀಪ್ ಬಂದ ದಿಕ್ಕಿ ನತ್ತ ಹೆಜ್ಜೆ ಹಾಕಿದರು. ಅದೇ ಬೀದಿಯ ಪಿಡಬ್ಲುಡಿ ಕ್ವಾಟರ್ಸನಲ್ಲಿ ಕೊನೆಯ ಮೂಲೆಯ ಮನೆಯಲ್ಲಿದ್ದ ಮೇರಿ ಥಾಮಸ್ ಎಂಬ ಚೆಲುವೆ ಬಾಗಿಲ ಮರೆಯಲ್ಲಿ ನಿಂತು, ಎಂದಿನಂತೆ ರಾಮನಾಥನ ಕಂಡು ತಣ್ಣಗೆ ಮುಗುಳ್ನಕ್ಕಳು….. *****
ಕಾಫೀನೊ -ಚಹಾನೊ
ಚರ್ಚೆ ರಾಮಸ್ವಾಮಿ ಡಿ.ಎಸ್. ಕಾಫಿ ಮೇಲೋ ಚಹಾ ಮೇಲೋ ಎಂದು ಕುಸ್ತಿ ಆಡುತ್ತಿರುವವರ ಫೇಸ್ಬುಕ್ ಪೇಜುಗಳನ್ನು ಬ್ರೌಸ್ ಮಾಡುತ್ತ ಇರುವಾಗ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬ ಹೈಸ್ಕೂಲ್ ದಿನಗಳ ಡಿಬೆಟ್ ವಿಷಯಗಳೇ ನೆನಪಾದುವು. ಕಾಫಿ, ಚಹಾ, ಹೆಣ್ಣು, ಗಂಡು, ಸಾಹುಕಾರಿಕೆ, ಬಡತನ, ಜಾತಿ, ಧರ್ಮ ಅಂತೆಲ್ಲ ನಾವು ಗುದ್ದಾಟ ಮಾಡಿದರೂ ಯಾರಿಗೆ ಯಾವುದು ಮುಖ್ಯ ಅನ್ನಿಸುತ್ತದೋ ಅದನ್ನು ಅವರವರು ಅನುಸರಿಸುತ್ತಾರೆ. ಯಾರೋ ಹೇಳಿದರೆಂದು ಕಾಫಿ ಟೀ ಬಿಟ್ಟು ಈಗ ಎಲ್ಲರ ಮನೆಯಲ್ಲೂ ಅಮೃತ ಬಳ್ಳಿ ಕಷಾಯ ಕುಡೀತಿರೋದನ್ನು ಇವರ್ಯಾರೂ ಹೇಳಲೇ ಇಲ್ಲವಲ್ಲ… Jogi Girish Rao Hatwar ಮತ್ತು Sumithra Lc ಅವರ ಬರಹಗಳನ್ನು ಮತ್ತು ಅವರಿಬ್ಬರೂ ಕಾಫಿಯ ಪರವಾಗಿ ನಡೆಸಿದ ಡಿಬೇಟುಗಳನ್ನೂ ಕಂಡು ಖುಷಿಯಾಗಿ ನನ್ನ ಬರಹವನ್ನೂ ಇಲ್ಲಿ ಸೇರಿಸುತ್ತ ಇದ್ದೇನೆ. ಚಹಾ ಕುಡಿಯೋ ಅಭ್ಯಾಸ ಇರುವವರು ಕಾಫಿಯನ್ನು , ಕಾಫಿಯಷ್ಟೇ ಅಮೃತ ಎಂದು ನಂಬಿದವರು ಟೀಯನ್ನು ದ್ವೇಷಿಸುತ್ತಾರೆ. ಆದರೆ ಇವೆರಡೂ ಒಳ್ಳೆಯದು ಅಲ್ಲವೇ ಅಲ್ಲ ಅಂತ ತಿಳಿದ ಮಲೆನಾಡಿನವರು ಇವತ್ತಿಗೂ ಬೆಳಿಗ್ಗೆ ಮೊದಲು ಕುಡಿಯುವುದು ಕಷಾಯವನ್ನೇ…ಶುಂಠಿ, ಮೆಣಸು, ಬೆಲ್ಲ, ಜೀರಿಗೆ, ದನಿಯ ಪುಡಿಯನ್ನು ಬೆಲ್ಲದ ನೀರಿನ ಅರ್ಧಾಂಶಕ್ಕೆ ಕುದಿಸಿ ಕೊಂಚ ಹಾಲು ಸೇರಿಸಿ ಕುಡಿಯುವುದು ಉತ್ತಮ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಕರೋನಾ ಕಾಲದ ಸತ್ಯ … ಈ ಟೀ ಮಾಡುವುದು ಕೂಡ ಕಷಾಯ ಮಾಡಿದಂತೆಯೇ. ಟಿ ಪುಡಿಯನ್ನು ನೀರು + ಹಾಲಿನ ಜೊತೆ ಕುದಿಸಿ ಕುದಿಸಿ ಸೋಸುವ ಮೊದಲು ಪರಿಮಳಕ್ಕೆ ಶುಂಠಿಯನ್ನು ಕೂಡ ಸೇರಿಸಿ ಶೋಧಿಸಿ ಕುಡಿಯುತ್ತಾರೆ. ಒಪ್ಪಿ ಬಿಡಿ ಯಾವತ್ತೂ ಟೀ ಪಿತ್ತ ಹೆಚ್ಚಿಸುವಂಥದೇ. ಬಹಳ ಟೀ ಕುಡಿಯವರಿಗೆ ಆರೋಗ್ಯ ಇರೋಲ್ಲ ಹೌದೋ ಅಲ್ಲವೋ ನೀವೇ ಹೇಳಿ. ಅಷ್ಟಕ್ಕೂ ಟೀ ಮಾಡೋದು ಬ್ರಹ್ಮ ವಿದ್ಯೆ ಏನಲ್ಲ. ಹಾಲು ಮತ್ತು ಟೀ ಪುಡಿ ಚನ್ನಾಗಿದ್ದರೆ ಕುದಿಸಲಿಕ್ಕೆ ದೊಡ್ಡ ಪಾತ್ರೆ ಇದ್ದರೆ ಸಾಕಾದೀತು. ಆದರೆ ಕುದಿಯುವಾಗ ಅದು ಉಕ್ಕಿ ಸೊಕ್ಕಿ ಸ್ಟೋವನ್ನು ಆರಿಸಬಾರದು ಅಷ್ಟೆ. ಆದರೆ ಕಾಫಿ ಮಾಡೋದು ಎಲ್ಲರಿಂದಲೂ ಆಗೋಲ್ಲ. ಹಾಗಾಗಿ ಎಲ್ಲರೂ ಒಳ್ಳೆಯ ಕಾಫಿ ಕುಡಿಯದೇ ಇರೋದರಿಂದ ಒಳ್ಳೆಯ ಕಾಫಿಯ ರುಚಿ ಮತ್ತು ಸ್ವಾದ ಗೊತ್ತಿರದೇ ಟೀ ಚಂದ ಅನ್ನುತ್ತಾರೆ. ಜೊತೆಗೆ ಟೀ ಎಷ್ಟು ಕುದಿಯುತ್ತೋ ಅಷ್ಟು ರುಚಿ. ಆದರೆ ಕಾಫಿ ಯಾವತ್ತೂ ಕುದಿಯಲೇ ಬಾರದು. ಒಮ್ಮೆ ಕುದಿಯಿತೋ ಅದರ ರುಚಿ ಮತ್ತು ಬಣ್ಣ ಎರಡೂ ಕೆಡುತ್ತವೆ. ಟೀ ಮಾಡಲು ಹಾಲಿನ ಗುಣಮಟ್ಟ ಅಥವ ಟೀ ಪುಡಿಯ ಗುಣ ಮುಖ್ಯ ಆಗುವುದಿಲ್ಲ. ಯಾವುದೇ ಗುಣಮಟ್ಟದ ಹಾಲಲ್ಲೂ ಯಾವುದೇ ಕಂಪನಿಯ ಟೀ ಪುಡಿ ಹಾಕಿ ಕುದಿಸಿ ಮೇಲಷ್ಟು ಏಲಕ್ಕಿಯನ್ನೋ ಶುಂಠಿಯನ್ನೋ ಸೇರಿಸಿದರೆ ಟೀ ಸಿದ್ಧವಾದೀತು. ಆದರೆ ಕಾಫಿ ಮಾಡುವುದು ಅತ್ಯಂತ ಶ್ರದ್ಧೆ ಮತ್ತು ತೀವ್ರ ತಾಳ್ಮೆ ಇರದೇ ಇದ್ದರೆ ಆಗುವುದೇ ಇಲ್ಲ. ಜೊತೆಗೆ ಒಳ್ಳೆಯ ಕಾಫಿ ಪುಡಿ ಮತ್ತು ಹೊಸ ಗುಣ ಮಟ್ಟದ ಹಾಲು ಇಲ್ಲದೇ ಕಾಫಿ ಮಾಡಲಾಗುವುದಿಲ್ಲ. ನಿಮ್ಮಲ್ಲಿ ಬಹಳಷ್ಟು ಟೀ ಪ್ರಿಯರು ಕಾಕ ಹೋಟೆಲ್ಲಿನ ಟೀ ಇಷ್ಟ ಪಟ್ಟು ಕುಡಿಯುತ್ತೀರಿ. ಟೀ ಯಾವುದೇ ಗುಡಿಸಲು ಹೋಟೆಲ್ಲಿನಲ್ಲಿ ಸ್ಟಾರ್ ಹೋಟೆಲ್ಲಿನಲ್ಲಿ ಸಿಗುತ್ತೆ. ಆದರೆ ಒಳ್ಳೆಯ ಕಾಫಿ ಸಿಗುವುದು ಅದನ್ನು ಕುಡಿದು ಗೊತ್ತಿರುವರಿಗಷ್ಟೇ ಗೊತ್ತಿರುವ ಸತ್ಯ. ಜೊತೆಗೆ ಇತ್ತೀಚೆಗೆ ಟೀ ಪುಡಿಯನ್ನೇ ಉಪಯೋಗಿಸದೇ ಮಾಡುವ ವಿವಿಧ ರೀತಿಯ ಟೀಗಳು ಮಾರ್ಕಟ್ಟಲ್ಲಿ ಇರೋದು ಕೂಡ ಪಾಪ ಆ ಟೀ ಪುಡಿಗೆ ಮಾಡಿದ ಅವಮಾನವೇ!! ಗುಲಾಬಿ ಹೂವ ಪಕಳೆಯಲ್ಲಿ, ಹಾಲನ್ನೇ ಹಾಕದ ಲೆಮನ್ ಟೀನಲ್ಲಿ, ಅದೇನು ಖುಷಿ ಇದೆಯೋ ಆ ಟೀ ಪ್ರಿಯರೆ ಹೇಳಬೇಕು. ಕಾಫಿ ಯಾವತ್ತೂ ಉಪಮೆ ಮತ್ತು ಪ್ರತಿಮೆ ತುಂಬಿದ ಕಾವ್ಯದಂತೆ. ಅದನ್ನು ಬರೆಯುವುದೂ ಕಷ್ಟ, ಓದಿ ಅರ್ಥ ಮಾಡಿಕೊಳ್ಳೋದೂ ಕಷ್ಟ. ಆದರೆ ಒಮ್ಮೆ ರುಚಿ ಹತ್ತಿತು ಅಂದರೆ ಕಾವ್ಯ ಹೇಗೆ ಕಾಡುತ್ತದೋ ಹಾಗೆ ಕಾಫಿ ಕೂಡ. ರೋಬೋಸ್ಟಾ ಅರೇಬಿಕಾ ಇತ್ಯಾದಿ ಪ್ರಬೇಧ ಏನೇ ಇರಲಿ ಅದರ ಜೊತೆ ಬೆರಸುವ ಚಿಕೋರಿ ಇಲ್ಲದ ಕಾಫಿ ಕಾಫಿಯೇ ಅಲ್ಲ. ಈ ಚಿಕೋರಿ ಅನ್ನೋದು ಕಾವ್ಯ ಪ್ರಿಯರ ಚಕೋರ ಮತ್ತು ಚಂದ್ರಮರ ಹಾಗೆ, ಕಾಫಿ ಮತ್ತು ಚಿಕೋರಿಗಳು. ಒಂದಿಲ್ಲದ ಮತ್ತೊಂದು ಶೋಭಿಸಲಾರದು. ಅದೂ ಹದವರಿತ ದಾಂಪತ್ಯ ಇರಬೇಕು. ೮೦ ಕಾಫಿ ೨೦ ಚಕೋರಿ ಒಕೆ. ೭೦:೩೦ ಆದರೂ ಪರವಾಯಿಲ್ಲ. ಅದೇನಾದರೂ ೬೦:೪೦ ಅಥವ ೫೦:೫೦ ಆಯಿತೋ ಕಾಫಿ ಕಹಿ ಕಾರ್ಕೋಟಕ ವಿಷವಾಗಿ ಬದಲಾಗುತ್ತೆ. ಚಕೋರಿ ಬೇಡವೇ ಬೇಡ ಅಂದರೆ ಡಿಕಾಕ್ಷನ್ನು ಗಟ್ಟಿಯಾಗದೇ ಕಾಫಿ ಕಳೆಗಟ್ಟುವುದೇ ಇಲ್ಲ. ಕಾಫಿ ಕಾಸುವುದಲ್ಲ, ಅದು ಬೆರಸುವುದು ಮಾತ್ರ. ಹದವಾಗಿ ಕಾಯಿಸಿದ ಗಟ್ಟಿಹಾಲಿಗೆ ಗಟ್ಟಿ ಡಿಕಾಕ್ಷನ್ ಬೆರೆಸಿದರೆ ಅಮೃತವೇ ಸಿದ್ಧ ಆಗುತ್ತದೆ. ಟೀ ಕುದಿಸಿದ ಹಾಗೆ ಕಾಫಿ ಪುಡಿ ಹಾಲು ಸಕ್ಕರೆ ಕುದಿಸಿದರೆ ಯಾವತ್ತೂ ಕಾಫಿ ಆಗುವುದಿಲ್ಲ ಮತ್ತು ಹಾಗೆ ಮಾಡಿದ ಕಾಫಿ ಯಾರೋ ಒಬ್ಬ ಪಾಪಿಯ ಫಸಲು ಅಷ್ಟೆ.. ಕಾಫಿ ತಯಾರಿಕೆಯ ಹದ ಮತ್ತು ಸಮಯ ಬಹು ಮುಖ್ಯ. ಯಾವತ್ತೂ ಹಳೆಯ ಕಾಫಿಯನ್ನು ಬಿಸಿ ಮಾಡಿ ಟೀ ತರಹ ಕುಡಿಯಲು ಆಗುವುದಿಲ್ಲ. ಅದರದೇನಿದ್ದರೂ ಯಾವತ್ತೂ ಫ್ರೆಷ್ & ಪ್ಯಾಷನ್… ನೀರು ಕುದಿಸಿ ಕಾಫಿ ಪುಡಿ ತುಂಬಿದ್ದ ಫಿಲ್ಟರಿಗೆ ಹಾಕುವುದು ಹಳೆಯ ಕ್ರಮ. ಫಿಲ್ಟರಿನ ಮೇಲಂತಸ್ತಿನಿಂದ ಕೆಳಗಿನ ಸ್ಟೋರ್ ರೂಮಿಗೆ ಬಿದ್ದ ಡಿಕಾಕ್ಷನ್ನಿಗೆ ಬೇಕಾದಾಗ ಹಾಲು ಬಿಸಿ ಮಾಡಿ ಬೆರಸುವುದು ಕಾಫಿ ತಯಾರಿಕೆಯ ಆರಂಭದ ಹಂತ. ಯಾವಾಗ ನಮಗೆ ಸಲಕರಣೆ ಮತ್ತು ಸೌಕರ್ಯಗಳು ಬೇಕಾದವೋ ಆಗ ತಯಾರು ಮಾಡಿದ್ದು ಕಾಫಿ ಮೇಕರ್ ಎಂಬ ಎಲೆಕ್ಟ್ರಿಕ್ ಮಷೀನು. ನೀರನ್ನು ಒಲೆಯ ಮೇಲಿಟ್ಟು ಕುದಿಸಿ ಅದನ್ನು ಇಕ್ಕಳ ಹಿಡಿದು ಫಿಲ್ಟರಿಗೆ ಸುರಿಯುವ ಶ್ರಮ ಮತ್ತು ಹೆದರಿಕೆ ಕಳೆದದ್ದೇ ಈ ಕಾಫಿ ಮೇಕರು. ಅರ್ಧ ಲೀಟರು ನೀರು ತುಂಬಿ ಪಕ್ಕದ ಜಾಡಿಗೆ ನಾಲ್ಕು ಚಮಚ ಕಾಫಿ ಪುಡಿ ಸುರಿದು ಸ್ವಿಚ್ ಒತ್ತಿದರೆ ಹತ್ತು ನಿಮಿಷದಲ್ಲಿ ಜಾಡಿಯ ತುಂಬ ಗಟ್ಟಿ ಡಿಕಾಕ್ಷನ್ ಸಿದ್ಧ!! ಪ್ರಿಯಾ, ಪ್ರೆಸ್ಟೀಜ್, ಜಾನ್ಸನ್ ಎಷ್ಟೊಂದು ಕಂಪನಿಗಳ ಅತ್ಯಾಕರ್ಷಕ ಕಾಫಿ ಮೇಕರು ಇದ್ದಾವೆ ಅಂದರೆ ಅದನ್ನು ಅಮೆಜಾನಲ್ಲಿ ಫ್ಲಿಪ್ ಕಾರ್ಟಲ್ಲಿ ನೋಡೇ ತಣಿಯಬೇಕು… ಇನ್ನು ಕಾಫಿಯ ಸ್ಪೆಷಲ್ ಸಂಚಿಕೆ ಬೇಕಾದವರು ಕಾಫಿ ತಯಾರಿಕೆಗೆ ಬಳಸುವುದು ಪರ್ಕ್ಯುಲೇಟರನ್ನು. ಅದನ್ನು ಉರಿವ ಬೆಂಕಿಯ ಮೇಲಾಗಲೀ ಅಥವ ಎಲೆಕ್ಟ್ರಿಕ್ ಮೂಲಕ ಕೂಡ ಆಗಿಸುವ ವಿಧಾನಗಳು ಈಗ ಚಾಲ್ತಿ ಇದೆ. ಕಾಫಿ ನಿಯಂತ್ರಣ ಮಾರುಕಟ್ಟೆ ಇದ್ದಾಗ “ಕಾಫಿ ಬೋರ್ಡ್” ಎಂಬ ಸಂಸ್ಥೆ ತಯಾರಿಸಿ ಕೊಟ್ಟಿದ್ದ ಪರ್ಕ್ಯುಲೇಟರ್ ಅದೆಷ್ಟು ಚನ್ನಾಗಿ ಡಿಕಾಕ್ಷನ್ ಇಳಿಸುತ್ತೆ ಎಂದರೆ ಅದನ್ನು ಇನ್ನೂ ನಾನು ಇವತ್ತಿಗೂ ಬಳಸುತ್ತಿದ್ದೇನೆ. ಕೆಫೆ ಕಾಫಿ ಡೇ ಕೂಡ ₹೫೦೦/ರ ಆಸುಪಾಸಲ್ಲಿ ಸಣ್ಣ ಪರ್ಕ್ಯುಲೇಟರ್ ಮಾರುತ್ತೆ. ಅದು ಕೂಡ ಚನ್ನಾಗೇ ಇದೆ. ಫಿಲ್ಟರು, ಮೇಕರು, ಪರ್ಕ್ಯುಲೇಟರು ಇಲ್ಲದೇ ಕುದಿಕುದಿವ ನೀರಿಗೆ ಕಾಫಿ ಪುಡಿ ಹಾಕಿ, ಮುಚ್ಚಿಟ್ಟು ಐದು ನಿಮಿಷ ಬಿಟ್ಟು ಕೋರಾ ಬಟ್ಟೆಯಲ್ಲಿ ಸೋಸಿ ತಯಾರಿಸಿದ ಡಿಕಾಕ್ಷನ್ ಕೂಡ ತಕ್ಷಣಕ್ಕೆ ಕುಡಿಯಲು ಅಡ್ಡಿ ಇಲ್ಲ. ಫಿಲ್ಟರು ಮತ್ತು ಮೇಕರುಗಳ ಡಿಕಾಕ್ಷನ್ ಅವತ್ತವತ್ತೇ ಖಾಲಿ ಮಾಡಬೇಕು. ತಂಗಳಾದರೆ ಕಾಫಿಯ ರುಚಿ ಮತ್ತು ಘಮ ಎರಡೂ ಕೆಡುತ್ತವೆ. ಆದರೆ ಪರ್ಕ್ಯುಲೇಟರಿನ ಡಿಕಾಕ್ಷನ್ ಯಾವತ್ತಿಗೂ ಸ್ಟಾರ್ ಹೋಟೆಲ್ಲಿನ ಅಂದ ಇದ್ದ ಹಾಗೆ. ಅದು ಕೆಲವರಿಂದಷ್ಟೇ ಆಗುವ ಕೆಲಸ. ಕೆಳಹಂತದಲ್ಲಿ ನೀರು ಕುದಿದು ಆವಿಯಷ್ಟೇ ಮೇಲಂತಸ್ತಿನ ಪುಡಿಯನ್ನು ಮುಟ್ಟಿ ತೊಟ್ಟು ತೊಟ್ಟೇ ಡಿಕಾಕ್ಷನ್ ಇಳಿಯುವಾಗ ಹುಟ್ಟುವ ಘಮ ಇದೆಯಲ್ಲ ಅದೇ ಸಾಕು ಆ ಹೊತ್ತಿನ ಹಸಿವು ಮತ್ತು ಆಯಾಸವನ್ನು ಪರಿಹರಿಸಲು. ಕಾಫಿಯ ರುಚಿ ಸ್ವಾದ ಮತ್ತು ಗುಣ ಗೊತ್ತುರುವವರು ಗೆಳೆಯ Katte Gururaj ಥರ ಗ್ರಹಿಸಬಲ್ಲರು ಮತ್ತು ಜೊತೆಗಿರುವವರನ್ನೂ ತಣಿಸಬಲ್ಲರು… **********************************
ಪೇಟಿಮಾಂತ್ರಿಕ ಬೆಳಗಾವಿಯಲ್ಲಿರುವ ಪಂಡಿತ್ ರಾಮಭಾವು ಬಿಜಾಪುರೆ ಅವರನ್ನು ಕಾಣಬೇಕೆಂದು ನನಗೆ ಅನಿಸಿತು. ಮಿತ್ರರಾದ ಕುಸಗಲ್ಲರಿಗೆ ವಿಷಯ ತಿಳಿಸಲು `ನಾವು ಇದೇ ಊರಾಗಿದ್ರೂ ಅವರ ಮನೀಗ್ ಹೋಗಿಲ್ಲ, ಬರ್ರಿ ಸರ’ ಎಂದು ಕರೆದೊಯ್ಯಲು ಒಪ್ಪಿದರು. ಮುಸ್ಸಂಜೆ ಹೊತ್ತಿಗೆ ಶ್ರೀ ಕುಸುಗಲ್ಲ, ಅವರ ಮಗಳು ಕವಿತಾ, ಸ್ನೇಹಿತ ಡಾ. ಕೋಲ್ಕಾರ ಅವರೊಡನೆ ಬಿಜಾಪುರೆ ಅವರಲ್ಲಿಗೆ ಹೊರಟೆ. ಹಳೇ ಬೆಳಗಾವಿಯ ಬೀದಿಗಳು. ಪಶ್ಚಿಮಘಟ್ಟದ ಜಿರ್ರೋ ಮಳೆಧಾರೆ. ಕಚಿಪಿಚಿ ಕೆಸರು. ಹಸುರು ಕಕ್ಕುವ ಗಿಡಮರಪೊದೆ. ಮನೆಯ ಛಾವಣಿ ಕಾಂಪೌಂಡು ಗೋಡೆಗಳು ಹಸಿರು ಸ್ವೆಟರುಟ್ಟಂತೆ ಬೆಳೆದ ಹಾವಸೆ. ಮಬ್ಬುಕವಿದ ಬೂದಿಬಡುಕ ಆಗಸದಲ್ಲಿ ಶಿವಸೇನೆಯ ಮಾರುದ್ದದ ಭಗವಾಧ್ವಜಗಳ ಪಟಪಟ-ಇತ್ಯಾದಿ ಕಣ್ಣೊಳಗೆ ತುಂಬಿಕೊಳ್ಳುತ್ತಿರಲು ಮನೆ ಮುಟ್ಟಿದೆವು. ಸಾಧಾರಣ ಮನೆ. ಬಾಗಿಲು ತೆರೆದವರು ಹಣ್ಣುಹಣ್ಣಾದ ಮುದುಕಿ. ಅದು ‘ಕಷಾ ಸಾಠಿ ಆಲ?’ (ಏನು ಬಂದಿರಿ?) ಎಂದು ಹಣೆಸುಕ್ಕು ಮಾಡಿಕೊಂಡು ಪ್ರಶ್ನೆ ಒಗೆಯಿತು. ‘ಬಿಜಾಪುರೆ ಮಾಸ್ತರನ್ನು ಕಾಣಬೇಕಿತ್ತು’ ಎನ್ನಲು ‘ಹಂಗೇನ್ರಿ. ಬರ್ರಿ, ಒಳಗ ಬರ್ರಿ. ಕುಂದರ್ರಿ. ಮ್ಯಾಲ ಹುಡ್ರುಗೆ ಅಭ್ಯಾಸ ಮಾಡಿಸಲಿಕ್ಕೆ ಹತ್ಯಾರ’ ಎಂದು ಬರಮಾಡಿಕೊಂಡರು. ‘ತಾವು ಬಿಜಾಪುರೆಯವರಿಗೆ..?’ ಎನ್ನಲು ‘ಕಿರೀ ಮಗಳ್ರೀ’ ಎಂದು ಜವಾಬು ಸಿಕ್ಕಿತು. ಮಗಳೇ ಇಷ್ಟು ಹಣ್ಣಾಗಿರಬೇಕಾದರೆ, ಅಪ್ಪ ಇನ್ನೆಷ್ಟು ಕಳಿತಿರಬೇಕು ಎಂದುಕೊಂಡು ಕುಳಿತೆವು. ಹತ್ತು ಮಿನಿಟು ಮುಗಿದಿರಬೇಕು. ‘ಪಾಠ ಮುಗಿದಿದೆ, ಅತಿಥಿಗಳು ಮೇಲೆ ಹೋಗಬಹುದು’ ಎಂದು ಸಂದೇಶ ಬಂತು. ಕರೆಂಟು ಹೋಗಿ ಕತ್ತಲಾಗುತ್ತಿತ್ತು. ಪಾಚಿಹಿಡಿದ ಪಾವಟಿಗೆಗಳನ್ನು ಹುಶಾರಾಗಿ ಹತ್ತಿ ಮೇಲೆ ಹೋದೆವು.ಸಣ್ಣದೊಂದು ಖೋಲಿಯಲ್ಲಿ ಗ್ಯಾಸ್‍ಬತ್ತಿಯ ಬೆಳಕಲ್ಲಿ ಬಿಜಾಪುರೆ ಲೋಡುತೆಕ್ಕೆಗೆ ಒರಗಿದ್ದರು. ಇಬ್ಬರು ಶಿಷ್ಯರು-ಅತಿಥಿ ಸತ್ಕಾರದಲ್ಲಿ ನೆರವಾಗಲೆಂದೊ ಏನೊ-ಅಲ್ಲೇ ಗೋಡೆಗೊರಗಿ ಕುತೂಹಲದ ದಿಟ್ಟಿತೊಟ್ಟು ನಿಂತಿದ್ದರು. ಅವರು ಗುರುಗಳಿಗೆ ಕೋಟು ತೊಡಿಸಲು ನೆರವಾಗಿರಬೇಕು. ತಿಳಿಯಾಗಸ ಬಣ್ಣದ ಕೋಟಿನ ಗುಂಡಿಗಳನ್ನು ಬಿಜಾಪುರೆ ಆಗಷ್ಟೆ ಹಾಕಿಕೊಳ್ಳುತ್ತಿದ್ದರು. ಆ ಕೋಟಿನಲ್ಲಿ ಲಕ್ಷಣವಾಗಿ ಕಾಣುತ್ತಿದ್ದರು. ಆರಡಿ ಎತ್ತರದ, ತಲೆಕೆಳಗಾಗಿ ಹಿಡಿದ ತಂಬೂರಿಯಂತಿದ್ದ ನೆಟ್ಟನೆ ಕಾಯದ ಬಿಜಾಪುರೆ, ವಯೋಸಹಜ ಸೊರಗಿದ್ದರು. ಗಾಂಧಿಕಿವಿ. ವಿಶಾಲ ಹಣೆ. ಕರೀಟೊಪ್ಪಿಗೆ. ಹೊಳೆವ ಕಣ್ಣು. ಪೇಟಿ ಮನೆಗಳ ಮೇಲೆ ಆಡಲೆಂದೇ ಮಾಡಿದಂತಿರುವ ನೀಳ್‍ಬೆರಳು. ಎದುರುಗಡೆ ಅರ್ಧ ಕತ್ತರಿಸಿಟ್ಟ ಕುಂಬಳಕಾಯಿಯ ಹೊಳಕೆಗಳಂತೆ ವಿಶ್ರಾಂತ ಸ್ಥಿತಿಯಲ್ಲಿರುವ ತಬಲಗಳು. ಬಗಲಿಗೆ ಹಾರ್ಮೊನಿಯಂ. ಬಿಜಾಪುರೆ ಭಾರತದ ಬಹುತೇಕ ಹಿಂದೂಸ್ಥಾನಿ ಗಾಯಕರಿಗೆ ಸಾಥಿದಾರರಾಗಿ ಹಾರ್ಮೋನಿಯಂ ನುಡಿಸಿದವರು. ನಾವು ನಮಸ್ಕರಿಸಿ ಸುತ್ತ ಕೂತೆವು. ‘ಹ್ಞಾಂ ಹೇಳ್ರಿ. ಏನ್ ಬಂದದ್ದು? ಎಲ್ಲಿಂದ ಬಂದಿರಿ?’ ಎಂದರು ಬಿಜಾಪುರೆ. ‘ನಿಮ್ಮನ್ನು ಕಾಣಲೆಂದೇ ಬಂದೆವು’ ಎಂದೆವು. ‘ಛಲೋ ಆತು. ಥಂಡಿ ಅದ. ಚಾ ಕುಡಿಯೋಣಲ್ಲ?’ ಎಂದು ಶಿಷ್ಯನತ್ತ ನೋಡಲು ಆತ ಮರಾಠಿಯಲ್ಲಿ `ಈಗ ತಂದೆ’ ಎಂದು ಕೆಳಗೆ ದೌಡಿದನು. “ನಿಮ್ಮ ಆರೋಗ್ಯದ ಗುಟ್ಟು ಏನು?’ ಎಂದೆ. ಆತ್ಮವಿಶ್ವಾಸ ತುಂಬಿದ ಗಟ್ಟಿದನಿಯಲ್ಲಿ `‘ಸಂಗೀತ. ನಮ್ಮ ಸಂಗೀತ ಮಂದಿಯೆಲ್ಲ ದೀರ್ಘಾಯುಷ್ಯದೋರು. ಹಾಡೋದೇ ದೊಡ್ಡ ಪ್ರಾಣಾಯಾಮ ಆಗ್ತದ’’ ಎಂದು ನಕ್ಕರು. ಹಿನ್ನೆಲೆ ಕೆದಕಿದೆ: “ನಮ್ಮ ಮುತ್ಯಾ ಮೂಲಮಂದಿ ಬಿಜಾಪುರದವರಂತ. ನಮ್ಮಪ್ಪ ಸಾಲಿ ಮಾಸ್ತರ ಇದ್ದರು. ದೊಡ್ಡ ಸಾಹಿತಿ. ಸಂಗೊಳ್ಳಿ ರಾಯಣ್ಣ ನಾಟಕ ಬರದೋರು. ಅವರಿಗೆ ಅಥಣಿ ತಾಲೂಕ ಕಾಗವಾಡಕ್ಕ ವರ್ಗ ಆಯ್ತು. ಮುಂದ ಬೆಳಗಾಂವ್ಞಿ ಸೇರಿಕೊಂಡಿವಿ’ ಎಂದರು. ಸಂಗೀತದ ಹಿನ್ನೆಲೆ ಕೇಳಿದೆ: ‘ರಾಮಕೃಷ್ಣ ಬುವಾ ವಝೆ ನನ್ನ ಗುರುಗಳು. ನನಗ ವೋಕಲ್ ಕಲೀಲಿಕ್ಕ ಆಸೆಯಿತ್ತು. ಯಾನ್ ಮಾಡೋದರಿ, ದನಿ ಒಡದಬಿಡ್ತು. ಆವಾಜ್ ಹೋಗಿಬಿಡ್ತು. ಅದಕ್ಕ ಈ ಪೇಟಿ ಕಡಿ ಬಂದಬಿಟ್ಟೆ. ಈಗಲೂ ಥೋಡಥೋಢ ಹಾಡ್ತೀನಿ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಕುಮಾರಗಂಧರ್ವ, ಮಾಣಿಕವರ್ಮ, ಅಮೀರಖಾನ್- ಹೀಂಗ ಬೇಕಾದಷ್ಟ ಮಂದಿಗೆ ಸಾಥ್ ಮಾಡೀನಿ” ಎಂದರು. `ಯಾರ ಜತೆ ಹೆಚ್ಚು ಸಂತೋಷ ಸಿಕ್ಕಿತು’ ಎನ್ನಲು `ಅಮೀರ್‍ಹುಸೇನ್ ಖಾನ್ ಹಾಡಿಕೆಗೆ. ಅವರು ಭಯಂಕರ ಛಲೋ ಹಾಡ್ತಿದ್ದರು’ ಎಂದರು. ಹೀಗೇ ಹೊರಗೆ ಹನಿಯುತ್ತಿದ್ದ ತುಂತುರು ಮಳೆಯಂತೆ ಮಾತುಕತೆ ನಡೆಯಿತು. ಅವರ ಮಾತೊ, ಫಾರಸಿ ಮರಾಠಿ ಕನ್ನಡ ಹದವಾಗಿ ಬೆರೆತದ್ದು. ನಮಗೆ ಅವರು ಪೇಟಿಯ ಮೇಲೆ ಬೆರಳಾಡಿಸಿ ನಾದ ಹೊರಡಿಸಿದರೆ, ಕಿವಿಯ ಮೇಲೆ ಹಾಕಿಕೊಂಡು ಹೋಗಬೇಕು ಎಂದಾಸೆ. ಸಂಗೀತವೇ ಒಂದು ಸಂಕರ ಕಲೆ. ಬೆರಕೆಯಿಲ್ಲದೆ ಅದು ಹುಟ್ಟುವುದೇ ಇಲ್ಲ. ಅದರಲ್ಲಿ ಈ ಹಾರ್ಮೊನಿಯಂ ತಾನು ಹುಟ್ಟಿಸುವ ಸಮಸ್ತ ಸ್ವರಗಳನ್ನು ಬೆರೆಸುವ ಮಾಯಾಮಂಜೂಷ. ಹಿಂದೊಮ್ಮೆ ಅದರ ಕವಚ ತೆಗೆದು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಿದ್ದೆ. ಕುಲುಮೆಯ ತಿದಿಯಂತೆ ಹಿಂಬದಿಯ ತೂತುಗಳ ಮೂಲಕ, ಪ್ರಾಣಾಯಾಮದ ಕುಂಭಕದಂತೆ ಗಾಳಿ ಒಳಗೆ ತುಂಬಿಕೊಳ್ಳುತ್ತದೆ. ಮುಂಭಾಗದಲ್ಲಿರುವ ಕರಿಬಿಳಿ ಮನೆಗಳನ್ನು ಬೆರಳಿಂದ ಒತ್ತಿದರೆ, ತುಂಬಿಕೊಂಡ ಉಸಿರು ಅಗತ್ಯಕ್ಕೆ ತಕ್ಕನಾಗಿ ರಂಧ್ರ್ರವಿರುವ ಕೊಂಡಿಗಳ ತುದಿಗಳಿಂದ ಹೊರಟು ಬಗೆಬಗೆಯ ಏರಿಳಿತಗಳಲ್ಲಿ ನಾದ ಹೊಮ್ಮಿಸುತ್ತದೆ. ಏಕಕಾಲಕ್ಕೆ ಹೊಮ್ಮುವ ಈ ಹಲವು ನಾದಗಳು ಒಂದಾಗುತ್ತ ಹೊಳೆಯಂತೆ ಹರಿಯುತ್ತವೆ. ನಾನು ಶೇಷಾದ್ರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿ ಅವರ ಹಾರ್ಮೋನಿಯಂ ಕೇಳಿರುವೆ. ಪುಟ್ಟರಾಜರು ಪೇಟಿಯನ್ನು ಶಹನಾಯಿ ದನಿ ಹೊರಡುವಂತೆ ನುಡಿಸಬಲ್ಲವರಾಗಿದ್ದರು. ಕಂಪನಿ ನಾಟಕಗಳು ಶುರುವಾಗುವಾಗ ಗವಾಯಿ ಮಾಸ್ತರನು ಪೇಟಿಯ ಮೇಲೆ ಬೆರಳಾಡಿಸಿದರೆ, ಇಡೀ ಥಿಯೇಟರಿನ ಶಾಬ್ದಿಕ ಕಸವನ್ನೆಲ್ಲ ಕಸಬರಿಕೆ ತೆಗೆದುಕೊಂಡು ಗುಡಿಸಿದಂತಾಗಿ, ಮನಸ್ಸೂ ವಾತಾವರಣವೂ ಶುದ್ಧವಾಗಿ, ರಸಿಕರಿಗೆ ನಾಟಕ ನೋಡಲು ಬೇಕಾದ ಸಹೃದಯ ಮನಃಸ್ಥಿತಿ ಸಿದ್ಧವಾಗುತ್ತದೆ. ಪೇಟಿಯಿಲ್ಲದೆ ನಾಟಕವಿಲ್ಲ. ಹರಿಕತೆಯಿಲ್ಲ. ಸಿನಿಮಾ ಗೀತೆಗಳಿಲ್ಲ. ಭಜನೆಯಿಲ್ಲ. ಭಾರತೀಯ ಸಂಗೀತದಲ್ಲಿ ಹಾರ್ಮೋನಿಯಂ ಸರ್ವಾಂತರ್ಯಾಮಿ.ಹೀಗೆ ಬಹುರೂಪಿಯಾದ ಈ ವಾದ್ಯ ಸ್ಥಳೀಕವಲ್ಲ. ಯೂರೋಪಿನಿಂದ ಬಂದಿದ್ದು. ಅದು ವಲಸೆ ಬಂದು ಇಲ್ಲಿನ ಅಗತ್ಯಗಳಿಗೆ ರೂಪಾಂತರ ಪಡೆದ ಕತೆ ರೋಚಕ. ಅದರ ಜತೆ ಮುಕ್ಕಾಲು ಶತಮಾನ ಕಾಲ ಕಳೆದಿರುವ ಬಿಜಾಪುರೆ ಹೇಳಿದರು: ‘ನೋಡ್ರಿ. ಇದು ಪ್ಯಾರಿಸ್ಸಿಂದು. ನಾಟಕಕ್ಕ ಅಂತ ತಂದದ್ದು. ನಮ್ಮ ಹಿಂದೂಸ್ತಾನಿ ಸಂಗೀತಕ್ಕ ಇದರಷ್ಟು ಯೋಗ್ಯ ಟ್ಯೂನಿಂಗ್ ಕೊಡೋದು ಮತ್ತ ಬ್ಯಾರೆ ಯಾವುದು ಇಲ್ಲ’. ಸಂಗೀತ ಕಛೇರಿಯಲ್ಲಿ ತಬಲ ಪೇಟಿ ತಂಬೂರಿ ಮುಂತಾದ ಪಕ್ಕವಾದ್ಯದ ಸಾಥಿದಾರರು ಎಷ್ಟೇ ಪ್ರತಿಭಾವಂತರಿದ್ದರೂ, ಅವರದು ಎರಡನೇ ಸ್ಥಾನ. ಕೇಂದ್ರಬಿಂದು ಹಾಡುಗಾರರು; ವಾದ್ಯಸಂಗೀತವಿದ್ದರೆ ವಾದ್ಯಕಾರರು. ಎರಡನೇ ಸ್ಥಾನದಲ್ಲಿರಬೇಕಾದ ಇಕ್ಕಟ್ಟೇ ಕೆಲವಾದರೂ ಪ್ರತಿಭಾವಂತರನ್ನು ಪ್ರಯೋಗಗಳಿಗೆ ಪ್ರೇರೇಪಿಸಿರಬೇಕು. ವಿಜಾಪುರೆ ಸ್ವತಂತ್ರವಾಗಿ ಪೇಟಿ ಬಾರಿಸುತ್ತ, ಅದರಲ್ಲಿ ಹಾಡುಗಳನ್ನು ನುಡಿಸುತ್ತಿದ್ದರಂತೆ. ಅದನ್ನು ಗಾಯಕಿ ಶೈಲಿ ಎನ್ನುವರು. “ಹಾರ್ಮೊನಿಯಂ ಹಾಡಿನಂಗ ಬಾರಿಸೋನು ನಾನ ಒಬ್ಬನೇ ಉಳದೀನಿ. ಹಾಡಿನ ಧ್ವ್ವನಿ ಬರೋಹಂಗ ಇದರ ಮ್ಯಾಲ ಸಂಶೋಧನ ಮಾಡೀನಿ’ ಎಂದು ಮಗುವಿನಂತೆ ಬಚ್ಚಬಾಯಲ್ಲಿ ನಕ್ಕರು. ನಮಗೆ ಅದೃಷ್ಟವಿರಲಿಲ್ಲ. ವಿಜಾಪುರೆ ಪೇಟಿ ನುಡಿಸಲು ಒಲ್ಲೆನೆಂದರು. ಪಾಠ ಹೇಳಿ ದಣಿದಿದ್ದರೊ, ಅರೆಗತ್ತಲೆಯಲ್ಲಿ ಬೇಡವೆನಿಸಿತೊ ತಿಳಿಯದು. ‘ಈಗ ಬೇಡ. ತಬಲ ಸಾಥಿಯಿಲ್ಲ. ಇನ್ನೊಮ್ಮೆ ಬರ್ರಿ. ಬೇಕಾದಷ್ಟು ನುಡಸ್ತೀನಿ. ನನ್ನ ಶಿಷ್ಯರು ಹಾರ. ಅವರು ಹಾಡ್ತಾರ’ ಎಂದು ಶಿಷ್ಯರಿಗೆ ‘ಭಾಳಾ, ಯೂನಿವರ್ಸಿಟಿಯಿಂದ ಪ್ರೊಫೆಸರ್ ಮಂದಿ ಬಂದಾರ. ಥೋಡ ಹಾಡ್ರಿ’ ಎಂದರು. ಕೇಳಿದರೆ ತಮ್ಮ ಕರುಳನ್ನೂ ಬಗೆದುಕೊಡುವಷ್ಟು ಭಕ್ತಿ ತುಂಬಿದಂತಿದ್ದ ಆ ತರುಣ ತರುಣಿ, ಗುರುವಿನ ಅಪ್ಪಣೆ ನೆರವೇರಿಸುತ್ತಿರುವ ಆನಂದವನ್ನೂ ಅಪರಿಚಿತರ ಮುಂದೆ ಸಂಕೋಚವನ್ನೂ ಸೂಸುತ್ತ, ತಲಾ ಒಂದೊಂದು ಮರಾಠಿ ಅಭಂಗ ಹಾಡಿದರು. ಅದೇ ಹೊತ್ತಿಗೆ ಸಂಗೀತಪಾಠದಿಂದ ಮಗಳನ್ನು ಕರೆದೊಯ್ಯಲು ಬಂದಿದ್ದ ಒಬ್ಬ ತಾಯಿ, ತನ್ನ ಕರುಳಕುಡಿ ಹಾಡುವುದನ್ನು ಮರೆಯಲ್ಲಿ ನಿಂತು ನೋಡುತ್ತ ಆನಂದ ಪಡುತ್ತಿದ್ದುದು ಮಬ್ಬುಬೆಳಕಲ್ಲೂ ಫಳಫಳಿಸುತ್ತಿತ್ತು. ಬಿಜಾಪುರೆ ತಾವು ಕೊಟ್ಟ ಗುಟುಕನ್ನು ತುಪ್ಪುಳಿಲ್ಲದ ಮರಿಗಳು ನುಂಗುವುದನ್ನು ನೋಡುವ ತಾಯ್ ಹಕ್ಕಿಯಂತೆ, ಮಡಿಲಲ್ಲಿ ಮಲಗಿದ ಕೂಸು ತಾನು ಉಚ್ಚರಿಸಿದ ಶಬ್ದಗಳನ್ನು ತೊದಲುತೊದಲಾಗಿ ಅನುಕರಿಸುತ್ತಿರಲು ಗಮನಿಸುವ ಅಜ್ಜಿಯಂತೆ, ಶಿಷ್ಯರ ಮುಖಗಳನ್ನೇ ತದೇಕ ನೋಡುತ್ತಿದ್ದರು. ಚಹ ಬಂತು. ಸಂಗೀತ ಕೇಳಲಾಗದ ನಿರಾಸೆಯಲ್ಲಿ ಚಹ ಸೇವಿಸುತ್ತಿರುವಾಗ, ಬಿಜಾಪುರೆ “ಈಗ ಗುರ್ತಾಯ್ತಲ್ಲ, ಮತ್ತೊಮ್ಮೆ ಬರ್ರಿ. ಇಡೀ ದಿವಸ ಬೇಕಾರ ಕೂಡೋಣು. ಬೇಕಾದಂಗ ಬಾರಸ್ತೀನಿ. ಇನ್ನ ಕರ್ನಾಟಕದೊಳಗ ಗಂಗೂಬಾಯಿ ನಾನೂ ಏಣಗಿ ಬಾಳಪ್ಪ ಮೂವರಿದ್ದಿವಿ. ಗಂಗೂಬಾಯಿ ಹ್ವಾದಳು. ನಾವಿಬ್ಬರು ಉಳದೀವಿ’ ಎಂದರು. ಮುಂದೆ ಅವರು (1917-2010) ಕಳಿತ ಎಲೆ ಚಳಿಗಾಲದಲ್ಲಿ ಸಣ್ಣಸಪ್ಪಳ ಹೊರಡಿಸಿ ಹಗುರಾಗಿ ನೆಲಕ್ಕೆ ಇಳಿಯುವಂತೆ ಹೋಗಿಬಿಟ್ಟರು. ಅವರ ಹಾರ್ಮೊನಿಯಂ ಕೇಳುವ ಕನಸು ಹಾಗೆಯೇ ಉಳಿದುಬಿಟ್ಟಿತು. (ನಾನು ಹಿಂದೆ ಪಂಡಿತ್ ಬಿಜಾಪುರೆ ಅವರ ಮೇಲೆ ಬರೆದಿದ್ದ ಪುಟ್ಟಲೇಖನವಿದು. ಬೆಳಗಾವಿಯ ಕವಿ ಕವಿತಾ ಕುಸುಗಲ್ಲ ಇದನ್ನು ಓದಬಯಸಿದರು. ಇದು ಆ ಬರೆಹ.) ********************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಕೂರಿಗಿ ತಾಳು
ಪುಸ್ತಕ ಪರಿಚಯ ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು.ಕಾವ್ಯವೆನ್ನುವುದು ಹುಡುಕಾಟವಲ್ಲ, ಅದೊಂದು ಮಿಡುಕಾಟ. ಕಾವ್ಯದಲ್ಲಿ ಮನರಂಜನೆ, ಶ್ರೀಮಂತಿಕೆ ಮತ್ತು ಉದಾತ್ತತೆ ಇರಬೇಕು. ಅದನ್ನು ಓದಿದವರು ಮೊದಲಿಗಿಂತ ಬೇರೆಯದ್ದೇ ವ್ಯಕ್ತಿತ್ವ ಹೊಂದಿದವರಾಗಿರಬೇಕು. ಅಂತಹ ಕಾವ್ಯ ಶ್ರೇಷ್ಠ ಕಾವ್ಯ ಎನಿಸಿಕೊಳ್ಳುತ್ತದೆ . ಕಾವ್ಯದಲ್ಲಿ ಭಾವದ ಅತೀ ಸಾಮಾನ್ಯತೆ ಇದ್ದರೆ ಅದು ಕಾವ್ಯದ ದೋಷ. ಇದರ ಸೀಮೋಲ್ಲಂಘನ ಮಾಡಬೇಕು. ಅಂತೆಯೇ ಕಾವ್ಯದಲ್ಲಿ ಅಲಂಕಾರ ಅತಿಯಾದರೆ ಅದೂ ಕೂಡ ದೋಷ. ಧ್ವನಿ ಅತಿಯಾದರೆ ಕಾವ್ಯದ ಪ್ರಭಾವ ಕುಗ್ಗುತ್ತದೆ. ಈ ವಾಸ್ತವತೆಯ ಅರಿವು ಪ್ರತಿಯೊಬ್ಬ ಕವಿಗೂ ಇರಲೇ ಬೇಕಾಗುತ್ತದೆ. ಅತಿಯಾದ ಕಾವ್ಯಪ್ರೀತಿ ,ಭೂಮಿ ಪ್ರೀತಿ, ಮನುಷ್ಯ ಪ್ರೀತಿ ಹೊಂದಿರುವ ರಾಮಣ್ಣ ಅಲ್ಮರ್ಸಿಕೇರಿಯವರು’ಕೂರಿಗೆ ತಾಳು’ ಅನ್ನುವ ವಿಶಿಷ್ಟವಾದ ಹಾಗು ಅಪ್ಪಟ ಗ್ರಾಮ್ಯ ಭಾಷೆಯ ಸೊಗಡು ಇರುವ ಕಾವ್ಯ ಸಂಕಲನ ಹೊರತಂದಿದ್ದಾರೆ. ಸಂಕಲನದ ಹೆಸರೇ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡಿ.ರಾಮಣ್ಣ ಅಲ್ಮರ್ಸಿಕೇರಿಯವರ ಈ ಸಂಕಲನ ಅವರ ಅನುಭವ, ಕೃಷಿ ಬದುಕಿನ ಒಡನಾಟ, ತನ್ನೂರಿನ ಅದಮ್ಯ ಪ್ರೇಮ,ಭವಬಂಧನದ ರೀತಿನೀತಿಗಳನ್ನು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.ಕೊಯ್ದು,ಕೊರೆದು,ಕೂಡಿಟ್ಟುಒಕ್ಕಲಿಮಾಡಿ,ಸುಗ್ಗಿ ಮಾಡುತಹಂತಿ ಹಾಡು ಹಾಡಿಬಂಡಿಗೆ ಬಲವಾದ ಹೋರಿ ಹೂಡಿನೂರು ಚೀಲದ ಹಗೇವು ತುಂಬಿಸಿಗರ್ವದಿಂದ ಬೀಗುತ್ತಿದ್ದರು ನನ್ನೂರಿನ ಜನರು”ಅಂತ ತನ್ನೂರಿನ ಜನರ ಬಗ್ಗೆ ಅಭಿಮಾನದಿಂದ ಕವಿ ಹೇಳಿದ್ದಾರೆ. ಜನ್ಮಕ್ಕೆ ಕಾರಣನಾದ ಅಪ್ಪನೆಂದರೆ ಎಲ್ಲಾ ಮಕ್ಕಳಿಗೂ ಅಪ್ಯಾಯಮಾನ. ತೋಳುಗಳಲ್ಲಿ ಅಪ್ಪಿ ಬದುಕಿನಲಿ ಭದ್ರತೆಯ ಭಾವ ಬಿಂಬಿಸಿ, ಕೈ ಹಿಡಿದು ತಪ್ಪು ಹೆಜ್ಜೆಯ ಜೊತೆ ಹೆಜ್ಜೆ ಬೆರೆಸಿ ಹೊರ ಜಗತ್ತಿಗೆ ತಮ್ಮನ್ನು ಪರಿಚಯಿಸುವ ಅಪ್ಪನೆಂದರೆ ಪುಳಕ, ಅಪ್ಪನೆಂದರೆ ಜಗದ ಸಿರಿಯನ್ನೆಲ್ಲ ಬೊಗಸೆ ಬೊಗಸೆಯಲಿ ಮೊಗೆದು ಕೊಟ್ಟವನು. ಅಪ್ಪನೆಂದರೆ ಬದುಕಿನಲಿ ಚೈತನ್ಯ ತುಂಬಿದವನು. ಅಪ್ಪನೆಂದರೆ ಬೆರಗುಗಣ್ಣಿನಲಿ ಪ್ರಪಂಚ ನೋಡುವಂತೆ ಮಾಡಿದವನು , ತಪ್ಪು ತಪ್ಪು ಹೆಜ್ಜೆ ಇರಿಸುವಾಗ ಕೈ ಹಿಡಿದು ನಡೆಸಿದವನು, ಹೆಗಲ ಮೇಲೆ ಕೂರಿಸಿಗೊಂಡು ಹಾದಿಯುದ್ದಕ್ಕೂ ನಡೆದವನು, ಬಿದ್ದು ಗಾಯ ಗೊಂಡಾಗ ಮೈ ದಡವಿ ರಮಿಸಿದವನು, ಹೊಳೆಯಲ್ಲಿ ಈಜು ಕಲಿಸಿದವನು, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ಅಮ್ಮನಂತೆ ಸೇವೆ ಮಾಡಿದವನು ಹೀಗೆ ಬದುಕಿನ ಒಂದೊಂದು ಮಜುಲುಗಳಲ್ಲೂ ತನ್ನ ಛಾಪು ಮೂಡಿಸಿ “ನಿನ್ನಂತ ಅಪ್ಪ ಇಲ್ಲಾ” ಅಂತ ಅನ್ನಿಸಿಕೊಂಡಂತಹ ಅಪ್ಪ ಕವಿಯ ಬದುಕಿನಲ್ಲು ಮಹತ್ವದ ಸ್ಥಾನ ಪಡೆದು ಗೆಳೆಯನಂತೆ, ತಾಯಿಯಂತೆ, ಗುರುವಂತೆ, ಮಾರ್ಗದರ್ಶಿಯಂತೆ, ಹಿತೈಷಿಯಂತೆ ಮಕ್ಕಳ ಬಾಳಿನಲ್ಲಿ ಬೆಳಕಾಗಿ ಬೆಳಕು ತಂದವರು.ಮಗನಿಗಾಗಿ ಏನೆಲ್ಲಾ ಕಷ್ಟಪಟ್ಟ ಅಪ್ಪ ಕೊನೆಗೆ“ಹೂಡುವ ಎತ್ತು ಮಾರಿ ಮನೆಯ ಹೊಸ್ತಿಲುದಾಟುವಾಗ ಎಡವಿ ಬಿದ್ದು ನಿಟ್ಟುಸಿರು ಬಿಟ್ಟುಕಣ್ಣು ಮುಚ್ಚಿ ನನ್ನ ಮಗ ಚೆನ್ನಾಗಿ ಓದಬೇಕೇಂದುಕನವರಿಸುತ್ತಾ ಜೀವಬಿಟ್ಟ ಅಪ್ಪನಹತ್ತಾರು ಪ್ರಶ್ನೆಗಳಿಗೆಮಗ ಮಾತ್ರ ಉತ್ತರ”ಹೃದಯ ವಿದ್ರಾವಕ ಈ ಸನ್ನಿವೇಶ,ಸಂದರ್ಭ ಓದುಗರ ಮನಸ್ಸನ್ನು ಕರಗಿಸಿ ಕಣ್ತುಂಬಿಸಿ ಬಿಡುತ್ತದೆ.ಛಲಗಾತಿ ಗೆಳತಿಯೆಂದರೆ ಕವಿಗೆ ಪ್ರೀತಿಯ ಕಡಲು,ಚಂದ್ರಮಾನ ಬೆಳಕು ಚೆಲ್ಲಿದವಳು,ಎದೆ ಸೆಟೆದು ನಿಂತ ಛಲಗಾತಿ ಗೆಳತಿ , ಹೀಗೆಲ್ಲ ಇರುವ ಗೆಳತಿಗೆ ಹೀಗೆ ಹೇಳುತ್ತಾರೆ.ಬೆಳೆದು ಬೆಟ್ಟವಾಗಬೇಕೆಂಬಮಹದಾಸೆಯ ಕನಸು ಹೊತ್ತುನಡೆವ ಅವಳು ನಿಗಿನಿಗಿಕೆಂಡದಂತಹ ಸೂರ್ಯನಾಗುವಾಸೆಕಡುಕಷ್ಟ ಪೊರೆದು ಸುಖದೆಡೆಗೆಹೆಜ್ಜೆ ಹಾಕುವ ಗಳಿಗೆನಾ ಸಾಕ್ಷಿ ಆಗಬೇಕೆಂಬ ಆಸೆ ಹೊತ್ತವನು ಎಂದು ಬಯಸುತ್ತಾರೆ.ಜಾತಿ ಭೂತದ ಬಗ್ಗೆಯು ಕವಿಗೆ ತೀವ್ರ ಅಸಮಾಧಾನವಿದೆ.ಮುಗ್ಧಮನಸ್ಸುಗಳನ್ನು ಒಡೆಯುವ ಮತಾಂಧರನ್ನು ಕಂಡಾಗ ಕೆರಳಿ ಕೆಂಡವಾಗುವ ಕವಿಹಗಲೆಲ್ಲ ನಮ್ಮನ್ನಗಲದಹಾಲು ಬಾನುಂಡು ಅಕ್ಕರೆಯ ಮಾತಾಡಿದಿನವಿಡಿ ದುಡಿಸಿಕೊಂಡುಕತ್ತಲ ರಾತ್ರಿಯಲ್ಲಿ ಜಾತಿ ಲಾಬಿ ಮಾಡುವರಾಕ್ಷಸರನ್ನು ಕಂಡು ನಡುಗಿ ಹೋಗಿದ್ದೇನೆಎಂದು ಭೀತರಾಗಿ ಸ್ವಾರ್ಥ ಅವಕಾಶವಾದಿಗಳ ಕಂಡು ದಂಗು ಬಡಿದು ನಯವಂಚಕರ ವಂಚನೆಗೆ ರೋಸಿಹೋಗಿದ್ದಾರೆ.ಬರೀ ನಿರಾಸೆ,ಸಂಕಟ ನೋವು ಮಾತ್ರ ತೋರಿದೆ ಆಶಾವಾದಿಯಾಗುತ್ತಾ ಹೋಗುತ್ತಾರೆ. ಈ ಪ್ರಪಂಚದ ಎಲ್ಲಾ ದ್ವೇಷ, ಅಸೂಯೆ, ಸ್ವಾರ್ಥ,ಮೋಹ , ಮತ್ಸರ ಮಾಯವಾಗಿ, ಕೋಮುಗಲಭೆ,ಜಾತಿಸಂಘರ್ಷಗಳ ದುರಂತ ದೂರಾಗಿ ಪ್ರೀತಿ ,ಮಮತೆ ಮಾನವೀಯತೆ ಹೊಳೆಯಾಗಿ ಹರಿದುಅಣ್ವಸ್ತ್ರಗಳು ಸುಟ್ಟು ಬೂದಿಯಾಗಿಬಂದೂಕಿನ ಬಾಯಿಯ ಸದ್ದಡಗಿಯಾರಿಗೂ ಬೇಕಿಲ್ಲದ ಯುದ್ಧಗಳು ಕೊನೆಯಾಗಿ ಅನ್ನ ನೀರು ಅರಿವೆ ಅಕ್ಷರಸೂರು ಸರ್ವರಿಗೂ ಸಿಗುವಂತಾಗಲಿಎಂದು ಕವಿ ಆಶಿಸುತ್ತಾರೆ.ಮಾನವೀಯತೆ, ಮಾನವೀಯ ಜೀವ ಸೆಲೆ ಬತ್ತಿಹೋದ ವರ್ತಮಾನದ ಮರುಭೂಮಿಯಲ್ಲಿ ಮನುಷ್ಯ ಸಂಬಂಧಗಳನ್ನು ಹುಡುಕಿ ಕಾವ್ಯದ ಮೂಲಕ ಪ್ರೀತಿಯನ್ನು ಹಂಚಿ ಮನಸುಗಳ ಬೆಸೆಯುವ ಬಯಕೆ ಕವಿ ರಾಮಣ್ಣನವರದು .ಪ್ರತಿಯೊಬ್ಬ ಕವಿಯು ಪ್ರೀತಿ, ವಿಶ್ವಾಸ ಹಾಗೂ ಮನುಷ್ಯ ಪ್ರೀತಿಯನ್ನು ಎದೆಯಲ್ಲಿ ಕಾಪಿಟ್ಟುಕೊಳ್ಳುವ ಮನೋಧರ್ಮ ಹೊಂದಬೇಕಾಗಿದೆ ಎನ್ನುವ ಇವರ ವಿಶ್ವಪ್ರೇಮದ ಭಾವ ಆದರ್ಶ ಹಾಗೂ ಅನುಕರಣೀಯವಾಗಿದೆ.ದೀರ್ಘ ಕವಿತೆ ಬರೆಯುವ ಶಕ್ತಿ ಹೊಂದಿರುವ ಕವಿ ರಾಮಣ್ಣ ರವರಿಗೆ ಕಂಡುಕೊಂಡ ಎಲ್ಲವನ್ನೂ ಕವಿತೆಯಾಗಿಸುವ ತವಕ, ಹಾಗಾಗಿ ಕೆಲವೊಮ್ಮೆ ವಾಚ್ಯವಾಗುವ ಲಕ್ಷಣಗಳು ಕಂಡರೂ ಅವರ ಅನುಭವ, ನಿರಂತರ ಅಧ್ಯಯನ,ಕಾವ್ಯ ಶ್ರದ್ಧೆ, ಆಸಕ್ತಿ ಇವೆಲ್ಲವೂ ಅವರನ್ನು ಕವಿಯ ಸಾಲಿನಲ್ಲಿ ನಿಲ್ಲಿಸಲಡ್ಡಿ ಮಾಡದು.ಇವರ ಈ ಉತ್ಸಾಹ, ಧ್ಯಾನಸ್ಥತೆ, ಅಧ್ಯಯನ ಶೀಲತೆ ಮತ್ತಷ್ಟು ಹೆಚ್ಚಾಗಿ ಶ್ರೇಷ್ಠ ಕಾವ್ಯದ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ದಕ್ಕಲಿ ಎಂದು ಆಶಿಸುತ್ತೇನೆ. ****** ಎನ್ ಶೈಲಜಾ ಹಾಸನ
ಅಪ್ಪನ ಆತ್ಮ
ಕವಿತೆ ಫಾಲ್ಗುಣ ಗೌಡ ಅಚವೆ. ಇಲ್ಲೇ ಎಲ್ಲೋಸುಳಿದಾಡಿದಂತೆ ಭಾಸವಾಗುವಅಪ್ಪನ ಅತ್ಮನನ್ನ ತೇವಗೊಂಡ ಕಣ್ಣುಗಳನ್ನುನೇವರಿಸುತ್ತದೆ. ಅಪ್ಪನ ಹೆಜ್ಜೆ ಗುರುತುಗಳಿರುವಗದ್ದೆ ಹಾಳಿಯ ಮೇಲೆನಡೆದಾಡಿದರೆಇನ್ನೂ ಆಪ್ತವಾಗಿಸುಪ್ತ ಭಾವನೆಗಳನ್ನುಆಹ್ಲಾದಕರಗೊಳಿಸುತ್ತದೆ. ನಾನು ನಡೆದಲ್ಲೆಲ್ಲನೆರಳಿನಂತೆ ಬರುವ ಅದುನನಗೆ ಸದಾ ಗೋಚರಿದಂತೆ ಭಾಸ! ನನ್ನನ್ನೇ ಕುರಿತು ನೇರಬೊಟ್ಟು ಮಾಡಿ ತೋರಿಸಿದಂತೆಏನನ್ನೋ ಹೇಳುತ್ತದೆ!ದ್ವೇಷದ ಬೆಂಕಿಯಲ್ಲಿಮಗನ ಮುಖವ್ಯಗ್ರವಾಗಿರುವುದ ಕಂಡುಬೇಸರಿಸಿಕೊಂಡಿದೆಆತ್ಮದ ಮ್ಲಾನ ವದನ!! ಅನ್ಯರಿಗೆ ಅಗೋಚರವೆನಿಪಅಪ್ಪನ ಅತ್ಮಕ್ಕೂ ನನಗೂಅದೆಂಥದೋಅಲೌಕಿಕ ನಂಟು! ಅವನ ನೆನಪಿನೊಂದಿಗಿನಮುಕ್ತ ತಾದಾತ್ಮ್ಯವೇನನ್ನ ಅದ್ಯಾತ್ಮ!!! ********
ನನ್ನಜ್ಜ
ಕವಿತೆ ಚೈತ್ರಾ ಶಿವಯೋಗಿಮಠ ಬಸ್ಟ್ಯಾಂಡ್ ನ್ಯಾಗ ನಿಂತುಬಾರಕೋಲು ಬೇಕಾ ಅಂದಾಗಮಂದಿ ಬೇಡಿ ಕೊಡಿಸ್ದಾವ ನನ್ನಜ್ಜಇದ ಕಥಿ ನೂರ ಸರತಿ ಹೇಳಿ“ಹಠಮಾರಿ ಚೈತ್ರಾ” ಅಂದಾವ ನನ್ನಜ್ಜ ಹೆಗಲ ಮ್ಯಾಲೆ ಹೊತ್ತು ಓಣಿತುಂಬಾ ತಿರಗ್ಯಾಡಿದಾವ ನನ್ನಜ್ಜಬಾಯಿ ಒಡದರ, ತುಂಬಾ ಬಿಳಿ ಬೀಜಕೆಂಪಗ ಕಾಣೂ ಪ್ಯಾರಲ ಹಣ್ಣ ತರಾವ ನನ್ನಜ್ಜನಿಂಬುಹುಳಿ, ಪೇಪರಮಟ್ಟಿ, ಚಾಕಲೇಟ್ಗಾಂಧಿ ಮುತ್ಯಾನ ಫೋಟೋ ಮುಂದ ನಿಂದರೀಸಿಕಣ್ಮುಚ್ಚಿಸಿ, ಮುತ್ಯಾ ಕೊಟ್ಟ ನೋಡನ್ನವ ನನ್ನಜ್ಜ ಮುದುಕಿ, ನರಿ-ಒಂಟಿ ಅಂತ ನೂರ ಕಥಿಅವನ ಅಂಗಿ ಕಿಶೆದಾಗ. ಸ್ವತಂತ್ರ ಸಿಕ್ಕಾಗನಡುರಾತ್ರಿ ಮಾಸ್ತಾರ ಎಬ್ಬಿಸಿದ್ದನ್ನ ಕಥಿಮಾಡಿ ಹೇಳಿದಾಗ ಹೀರೋ ಗತೆ ಕಂಡಾವ ನನ್ನಜ್ಜಓಡಿಹೋಗಾವ ಇದ್ದೆ ಅಂತರಪಟ ಸರದು ಬೆಳ್ಳನ್ನಚೆಲುವಿ ಕಂಡ್ಲು, ಬದುಕಿದ್ನಪಾ ಅಂತಹೇಳಿ ಅಜ್ಜಿನತಾ ಲಗ್ನಾದ ಕಥಿ ಹೇಳಿ ನಗಸಾವ ನನ್ನಜ್ಜ. ತಾಯಿ ಸೇವಾ ಮಾಡಿ ತುಂಬು ಜೀವನ ಕಂಡುತನಗಿಂತ ಕಿರಿಯರ ಕಣ್ಮುಂದ ಕಳ್ಕೊಂಡುನೂವಿನ ನಂಜೆಲ್ಲಾ ಎದಿಯಾಗಾ ಮಂಜ ಮಾಡಿಗಟ್ಟಿ ಮನಸು, ಗಟ್ಟಿ ಶರೀರದಾವ ನನ್ನಜ್ಜಸೈಕಲ್ ಏರಿ ದೂರದೂರಿಗೆ ಹೋಗಿ ಸಾಲಿಕಲಿಸಿ ಬಂದು, ರಾತ್ರಿ ಹೊಲಕ್ಕ ನೀರ ಕಟ್ತಿದ್ದ ರೈತ ಮಾಸ್ತಾರನನ್ನಜ್ಜ ಸ್ವಚ್ಛ ಆಕಾಶದಾಗ ಹತ್ತಿಯಂತ ಮಾಡ ತೇಲಿಹಚ್ಚ ಹಸುರು ಶ್ರಾವಣ ಬಂತಂತ ಹಿಗ್ಗುಮುಂದಊರಿಗ ಹೊಂಟ್ರ “ಬಾರವಾ ಚೈತ್ರಾ’ ಅಂತಬಚ್ಚ ಬಾಯಿ ತಗದ ಬೆಚ್ಚಗ ಕರಿಯಾಕ ಇನ್ನಿಲ್ಲ ನನ್ನಜ್ಜ.ಮೊಮ್ಮಕ್ಕಳ ಸಾಮ್ರಾಜ್ಯದಾಗಿನ ಮಹರಾಜಾ ನೀ, “ಪ್ರಭುಗಳೆ, ಹೀಗೆ ಬನ್ನಿ” ಅಂತ ಆಡಿಶ್ಯಾಡಿದ್ರನಗಾವ ದೊರೆ ಆಳ್ವಿಕಿ ಮುಗಿಸಿ ಹೊಂಟ ನನ್ನಜ್ಜ! ***************************
