ಚರ್ಚೆ
ರಾಮಸ್ವಾಮಿ ಡಿ.ಎಸ್.
ಕಾಫಿ ಮೇಲೋ ಚಹಾ ಮೇಲೋ ಎಂದು ಕುಸ್ತಿ ಆಡುತ್ತಿರುವವರ ಫೇಸ್ಬುಕ್ ಪೇಜುಗಳನ್ನು ಬ್ರೌಸ್ ಮಾಡುತ್ತ ಇರುವಾಗ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬ ಹೈಸ್ಕೂಲ್ ದಿನಗಳ ಡಿಬೆಟ್ ವಿಷಯಗಳೇ ನೆನಪಾದುವು. ಕಾಫಿ, ಚಹಾ, ಹೆಣ್ಣು, ಗಂಡು, ಸಾಹುಕಾರಿಕೆ, ಬಡತನ, ಜಾತಿ, ಧರ್ಮ ಅಂತೆಲ್ಲ ನಾವು ಗುದ್ದಾಟ ಮಾಡಿದರೂ ಯಾರಿಗೆ ಯಾವುದು ಮುಖ್ಯ ಅನ್ನಿಸುತ್ತದೋ ಅದನ್ನು ಅವರವರು ಅನುಸರಿಸುತ್ತಾರೆ. ಯಾರೋ ಹೇಳಿದರೆಂದು ಕಾಫಿ ಟೀ ಬಿಟ್ಟು ಈಗ ಎಲ್ಲರ ಮನೆಯಲ್ಲೂ ಅಮೃತ ಬಳ್ಳಿ ಕಷಾಯ ಕುಡೀತಿರೋದನ್ನು ಇವರ್ಯಾರೂ ಹೇಳಲೇ ಇಲ್ಲವಲ್ಲ…
Jogi Girish Rao Hatwar ಮತ್ತು Sumithra Lc ಅವರ ಬರಹಗಳನ್ನು ಮತ್ತು ಅವರಿಬ್ಬರೂ ಕಾಫಿಯ ಪರವಾಗಿ ನಡೆಸಿದ ಡಿಬೇಟುಗಳನ್ನೂ ಕಂಡು ಖುಷಿಯಾಗಿ ನನ್ನ ಬರಹವನ್ನೂ ಇಲ್ಲಿ ಸೇರಿಸುತ್ತ ಇದ್ದೇನೆ.
ಚಹಾ ಕುಡಿಯೋ ಅಭ್ಯಾಸ ಇರುವವರು ಕಾಫಿಯನ್ನು , ಕಾಫಿಯಷ್ಟೇ ಅಮೃತ ಎಂದು ನಂಬಿದವರು ಟೀಯನ್ನು ದ್ವೇಷಿಸುತ್ತಾರೆ. ಆದರೆ ಇವೆರಡೂ ಒಳ್ಳೆಯದು ಅಲ್ಲವೇ ಅಲ್ಲ ಅಂತ ತಿಳಿದ ಮಲೆನಾಡಿನವರು ಇವತ್ತಿಗೂ ಬೆಳಿಗ್ಗೆ ಮೊದಲು ಕುಡಿಯುವುದು ಕಷಾಯವನ್ನೇ…ಶುಂಠಿ, ಮೆಣಸು, ಬೆಲ್ಲ, ಜೀರಿಗೆ, ದನಿಯ ಪುಡಿಯನ್ನು ಬೆಲ್ಲದ ನೀರಿನ ಅರ್ಧಾಂಶಕ್ಕೆ ಕುದಿಸಿ ಕೊಂಚ ಹಾಲು ಸೇರಿಸಿ ಕುಡಿಯುವುದು ಉತ್ತಮ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಕರೋನಾ ಕಾಲದ ಸತ್ಯ …
ಈ ಟೀ ಮಾಡುವುದು ಕೂಡ ಕಷಾಯ ಮಾಡಿದಂತೆಯೇ. ಟಿ ಪುಡಿಯನ್ನು ನೀರು + ಹಾಲಿನ ಜೊತೆ ಕುದಿಸಿ ಕುದಿಸಿ ಸೋಸುವ ಮೊದಲು ಪರಿಮಳಕ್ಕೆ ಶುಂಠಿಯನ್ನು ಕೂಡ ಸೇರಿಸಿ ಶೋಧಿಸಿ ಕುಡಿಯುತ್ತಾರೆ. ಒಪ್ಪಿ ಬಿಡಿ ಯಾವತ್ತೂ ಟೀ ಪಿತ್ತ ಹೆಚ್ಚಿಸುವಂಥದೇ. ಬಹಳ ಟೀ ಕುಡಿಯವರಿಗೆ ಆರೋಗ್ಯ ಇರೋಲ್ಲ ಹೌದೋ ಅಲ್ಲವೋ ನೀವೇ ಹೇಳಿ. ಅಷ್ಟಕ್ಕೂ ಟೀ ಮಾಡೋದು ಬ್ರಹ್ಮ ವಿದ್ಯೆ ಏನಲ್ಲ. ಹಾಲು ಮತ್ತು ಟೀ ಪುಡಿ ಚನ್ನಾಗಿದ್ದರೆ ಕುದಿಸಲಿಕ್ಕೆ ದೊಡ್ಡ ಪಾತ್ರೆ ಇದ್ದರೆ ಸಾಕಾದೀತು. ಆದರೆ ಕುದಿಯುವಾಗ ಅದು ಉಕ್ಕಿ ಸೊಕ್ಕಿ ಸ್ಟೋವನ್ನು ಆರಿಸಬಾರದು ಅಷ್ಟೆ.
ಆದರೆ ಕಾಫಿ ಮಾಡೋದು ಎಲ್ಲರಿಂದಲೂ ಆಗೋಲ್ಲ. ಹಾಗಾಗಿ ಎಲ್ಲರೂ ಒಳ್ಳೆಯ ಕಾಫಿ ಕುಡಿಯದೇ ಇರೋದರಿಂದ ಒಳ್ಳೆಯ ಕಾಫಿಯ ರುಚಿ ಮತ್ತು ಸ್ವಾದ ಗೊತ್ತಿರದೇ ಟೀ ಚಂದ ಅನ್ನುತ್ತಾರೆ. ಜೊತೆಗೆ ಟೀ ಎಷ್ಟು ಕುದಿಯುತ್ತೋ ಅಷ್ಟು ರುಚಿ. ಆದರೆ ಕಾಫಿ ಯಾವತ್ತೂ ಕುದಿಯಲೇ ಬಾರದು. ಒಮ್ಮೆ ಕುದಿಯಿತೋ ಅದರ ರುಚಿ ಮತ್ತು ಬಣ್ಣ ಎರಡೂ ಕೆಡುತ್ತವೆ. ಟೀ ಮಾಡಲು ಹಾಲಿನ ಗುಣಮಟ್ಟ ಅಥವ ಟೀ ಪುಡಿಯ ಗುಣ ಮುಖ್ಯ ಆಗುವುದಿಲ್ಲ. ಯಾವುದೇ ಗುಣಮಟ್ಟದ ಹಾಲಲ್ಲೂ ಯಾವುದೇ ಕಂಪನಿಯ ಟೀ ಪುಡಿ ಹಾಕಿ ಕುದಿಸಿ ಮೇಲಷ್ಟು ಏಲಕ್ಕಿಯನ್ನೋ ಶುಂಠಿಯನ್ನೋ ಸೇರಿಸಿದರೆ ಟೀ ಸಿದ್ಧವಾದೀತು. ಆದರೆ ಕಾಫಿ ಮಾಡುವುದು ಅತ್ಯಂತ ಶ್ರದ್ಧೆ ಮತ್ತು ತೀವ್ರ ತಾಳ್ಮೆ ಇರದೇ ಇದ್ದರೆ ಆಗುವುದೇ ಇಲ್ಲ. ಜೊತೆಗೆ ಒಳ್ಳೆಯ ಕಾಫಿ ಪುಡಿ ಮತ್ತು ಹೊಸ ಗುಣ ಮಟ್ಟದ ಹಾಲು ಇಲ್ಲದೇ ಕಾಫಿ ಮಾಡಲಾಗುವುದಿಲ್ಲ. ನಿಮ್ಮಲ್ಲಿ ಬಹಳಷ್ಟು ಟೀ ಪ್ರಿಯರು ಕಾಕ ಹೋಟೆಲ್ಲಿನ ಟೀ ಇಷ್ಟ ಪಟ್ಟು ಕುಡಿಯುತ್ತೀರಿ. ಟೀ ಯಾವುದೇ ಗುಡಿಸಲು ಹೋಟೆಲ್ಲಿನಲ್ಲಿ ಸ್ಟಾರ್ ಹೋಟೆಲ್ಲಿನಲ್ಲಿ ಸಿಗುತ್ತೆ. ಆದರೆ ಒಳ್ಳೆಯ ಕಾಫಿ ಸಿಗುವುದು ಅದನ್ನು ಕುಡಿದು ಗೊತ್ತಿರುವರಿಗಷ್ಟೇ ಗೊತ್ತಿರುವ ಸತ್ಯ. ಜೊತೆಗೆ ಇತ್ತೀಚೆಗೆ ಟೀ ಪುಡಿಯನ್ನೇ ಉಪಯೋಗಿಸದೇ ಮಾಡುವ ವಿವಿಧ ರೀತಿಯ ಟೀಗಳು ಮಾರ್ಕಟ್ಟಲ್ಲಿ ಇರೋದು ಕೂಡ ಪಾಪ ಆ ಟೀ ಪುಡಿಗೆ ಮಾಡಿದ ಅವಮಾನವೇ!! ಗುಲಾಬಿ ಹೂವ ಪಕಳೆಯಲ್ಲಿ, ಹಾಲನ್ನೇ ಹಾಕದ ಲೆಮನ್ ಟೀನಲ್ಲಿ, ಅದೇನು ಖುಷಿ ಇದೆಯೋ ಆ ಟೀ ಪ್ರಿಯರೆ ಹೇಳಬೇಕು.
ಕಾಫಿ ಯಾವತ್ತೂ ಉಪಮೆ ಮತ್ತು ಪ್ರತಿಮೆ ತುಂಬಿದ ಕಾವ್ಯದಂತೆ. ಅದನ್ನು ಬರೆಯುವುದೂ ಕಷ್ಟ, ಓದಿ ಅರ್ಥ ಮಾಡಿಕೊಳ್ಳೋದೂ ಕಷ್ಟ. ಆದರೆ ಒಮ್ಮೆ ರುಚಿ ಹತ್ತಿತು ಅಂದರೆ ಕಾವ್ಯ ಹೇಗೆ ಕಾಡುತ್ತದೋ ಹಾಗೆ ಕಾಫಿ ಕೂಡ.
ರೋಬೋಸ್ಟಾ ಅರೇಬಿಕಾ ಇತ್ಯಾದಿ ಪ್ರಬೇಧ ಏನೇ ಇರಲಿ ಅದರ ಜೊತೆ ಬೆರಸುವ ಚಿಕೋರಿ ಇಲ್ಲದ ಕಾಫಿ ಕಾಫಿಯೇ ಅಲ್ಲ. ಈ ಚಿಕೋರಿ ಅನ್ನೋದು ಕಾವ್ಯ ಪ್ರಿಯರ ಚಕೋರ ಮತ್ತು ಚಂದ್ರಮರ ಹಾಗೆ, ಕಾಫಿ ಮತ್ತು ಚಿಕೋರಿಗಳು. ಒಂದಿಲ್ಲದ ಮತ್ತೊಂದು ಶೋಭಿಸಲಾರದು. ಅದೂ ಹದವರಿತ ದಾಂಪತ್ಯ ಇರಬೇಕು. ೮೦ ಕಾಫಿ ೨೦ ಚಕೋರಿ ಒಕೆ. ೭೦:೩೦ ಆದರೂ ಪರವಾಯಿಲ್ಲ. ಅದೇನಾದರೂ ೬೦:೪೦ ಅಥವ ೫೦:೫೦ ಆಯಿತೋ ಕಾಫಿ ಕಹಿ ಕಾರ್ಕೋಟಕ ವಿಷವಾಗಿ ಬದಲಾಗುತ್ತೆ. ಚಕೋರಿ ಬೇಡವೇ ಬೇಡ ಅಂದರೆ ಡಿಕಾಕ್ಷನ್ನು ಗಟ್ಟಿಯಾಗದೇ ಕಾಫಿ ಕಳೆಗಟ್ಟುವುದೇ ಇಲ್ಲ.
ಕಾಫಿ ಕಾಸುವುದಲ್ಲ, ಅದು ಬೆರಸುವುದು ಮಾತ್ರ. ಹದವಾಗಿ ಕಾಯಿಸಿದ ಗಟ್ಟಿಹಾಲಿಗೆ ಗಟ್ಟಿ ಡಿಕಾಕ್ಷನ್ ಬೆರೆಸಿದರೆ ಅಮೃತವೇ ಸಿದ್ಧ ಆಗುತ್ತದೆ. ಟೀ ಕುದಿಸಿದ ಹಾಗೆ ಕಾಫಿ ಪುಡಿ ಹಾಲು ಸಕ್ಕರೆ ಕುದಿಸಿದರೆ ಯಾವತ್ತೂ ಕಾಫಿ ಆಗುವುದಿಲ್ಲ ಮತ್ತು ಹಾಗೆ ಮಾಡಿದ ಕಾಫಿ ಯಾರೋ ಒಬ್ಬ ಪಾಪಿಯ ಫಸಲು ಅಷ್ಟೆ..
ಕಾಫಿ ತಯಾರಿಕೆಯ ಹದ ಮತ್ತು ಸಮಯ ಬಹು ಮುಖ್ಯ. ಯಾವತ್ತೂ ಹಳೆಯ ಕಾಫಿಯನ್ನು ಬಿಸಿ ಮಾಡಿ ಟೀ ತರಹ ಕುಡಿಯಲು ಆಗುವುದಿಲ್ಲ. ಅದರದೇನಿದ್ದರೂ ಯಾವತ್ತೂ ಫ್ರೆಷ್ & ಪ್ಯಾಷನ್…
ನೀರು ಕುದಿಸಿ ಕಾಫಿ ಪುಡಿ ತುಂಬಿದ್ದ ಫಿಲ್ಟರಿಗೆ ಹಾಕುವುದು ಹಳೆಯ ಕ್ರಮ. ಫಿಲ್ಟರಿನ ಮೇಲಂತಸ್ತಿನಿಂದ ಕೆಳಗಿನ ಸ್ಟೋರ್ ರೂಮಿಗೆ ಬಿದ್ದ ಡಿಕಾಕ್ಷನ್ನಿಗೆ ಬೇಕಾದಾಗ ಹಾಲು ಬಿಸಿ ಮಾಡಿ ಬೆರಸುವುದು ಕಾಫಿ ತಯಾರಿಕೆಯ ಆರಂಭದ ಹಂತ.
ಯಾವಾಗ ನಮಗೆ ಸಲಕರಣೆ ಮತ್ತು ಸೌಕರ್ಯಗಳು ಬೇಕಾದವೋ ಆಗ ತಯಾರು ಮಾಡಿದ್ದು ಕಾಫಿ ಮೇಕರ್ ಎಂಬ ಎಲೆಕ್ಟ್ರಿಕ್ ಮಷೀನು. ನೀರನ್ನು ಒಲೆಯ ಮೇಲಿಟ್ಟು ಕುದಿಸಿ ಅದನ್ನು ಇಕ್ಕಳ ಹಿಡಿದು ಫಿಲ್ಟರಿಗೆ ಸುರಿಯುವ ಶ್ರಮ ಮತ್ತು ಹೆದರಿಕೆ ಕಳೆದದ್ದೇ ಈ ಕಾಫಿ ಮೇಕರು. ಅರ್ಧ ಲೀಟರು ನೀರು ತುಂಬಿ ಪಕ್ಕದ ಜಾಡಿಗೆ ನಾಲ್ಕು ಚಮಚ ಕಾಫಿ ಪುಡಿ ಸುರಿದು ಸ್ವಿಚ್ ಒತ್ತಿದರೆ ಹತ್ತು ನಿಮಿಷದಲ್ಲಿ ಜಾಡಿಯ ತುಂಬ ಗಟ್ಟಿ ಡಿಕಾಕ್ಷನ್ ಸಿದ್ಧ!! ಪ್ರಿಯಾ, ಪ್ರೆಸ್ಟೀಜ್, ಜಾನ್ಸನ್ ಎಷ್ಟೊಂದು ಕಂಪನಿಗಳ ಅತ್ಯಾಕರ್ಷಕ ಕಾಫಿ ಮೇಕರು ಇದ್ದಾವೆ ಅಂದರೆ ಅದನ್ನು ಅಮೆಜಾನಲ್ಲಿ ಫ್ಲಿಪ್ ಕಾರ್ಟಲ್ಲಿ ನೋಡೇ ತಣಿಯಬೇಕು…
ಇನ್ನು ಕಾಫಿಯ ಸ್ಪೆಷಲ್ ಸಂಚಿಕೆ ಬೇಕಾದವರು ಕಾಫಿ ತಯಾರಿಕೆಗೆ ಬಳಸುವುದು ಪರ್ಕ್ಯುಲೇಟರನ್ನು. ಅದನ್ನು ಉರಿವ ಬೆಂಕಿಯ ಮೇಲಾಗಲೀ ಅಥವ ಎಲೆಕ್ಟ್ರಿಕ್ ಮೂಲಕ ಕೂಡ ಆಗಿಸುವ ವಿಧಾನಗಳು ಈಗ ಚಾಲ್ತಿ ಇದೆ. ಕಾಫಿ ನಿಯಂತ್ರಣ ಮಾರುಕಟ್ಟೆ ಇದ್ದಾಗ “ಕಾಫಿ ಬೋರ್ಡ್” ಎಂಬ ಸಂಸ್ಥೆ ತಯಾರಿಸಿ ಕೊಟ್ಟಿದ್ದ ಪರ್ಕ್ಯುಲೇಟರ್ ಅದೆಷ್ಟು ಚನ್ನಾಗಿ ಡಿಕಾಕ್ಷನ್ ಇಳಿಸುತ್ತೆ ಎಂದರೆ ಅದನ್ನು ಇನ್ನೂ ನಾನು ಇವತ್ತಿಗೂ ಬಳಸುತ್ತಿದ್ದೇನೆ. ಕೆಫೆ ಕಾಫಿ ಡೇ ಕೂಡ ₹೫೦೦/ರ ಆಸುಪಾಸಲ್ಲಿ ಸಣ್ಣ ಪರ್ಕ್ಯುಲೇಟರ್ ಮಾರುತ್ತೆ. ಅದು ಕೂಡ ಚನ್ನಾಗೇ ಇದೆ.
ಫಿಲ್ಟರು, ಮೇಕರು, ಪರ್ಕ್ಯುಲೇಟರು ಇಲ್ಲದೇ ಕುದಿಕುದಿವ ನೀರಿಗೆ ಕಾಫಿ ಪುಡಿ ಹಾಕಿ, ಮುಚ್ಚಿಟ್ಟು ಐದು ನಿಮಿಷ ಬಿಟ್ಟು ಕೋರಾ ಬಟ್ಟೆಯಲ್ಲಿ ಸೋಸಿ ತಯಾರಿಸಿದ ಡಿಕಾಕ್ಷನ್ ಕೂಡ ತಕ್ಷಣಕ್ಕೆ ಕುಡಿಯಲು ಅಡ್ಡಿ ಇಲ್ಲ. ಫಿಲ್ಟರು ಮತ್ತು ಮೇಕರುಗಳ ಡಿಕಾಕ್ಷನ್ ಅವತ್ತವತ್ತೇ ಖಾಲಿ ಮಾಡಬೇಕು. ತಂಗಳಾದರೆ ಕಾಫಿಯ ರುಚಿ ಮತ್ತು ಘಮ ಎರಡೂ ಕೆಡುತ್ತವೆ.
ಆದರೆ ಪರ್ಕ್ಯುಲೇಟರಿನ ಡಿಕಾಕ್ಷನ್ ಯಾವತ್ತಿಗೂ ಸ್ಟಾರ್ ಹೋಟೆಲ್ಲಿನ ಅಂದ ಇದ್ದ ಹಾಗೆ. ಅದು ಕೆಲವರಿಂದಷ್ಟೇ ಆಗುವ ಕೆಲಸ. ಕೆಳಹಂತದಲ್ಲಿ ನೀರು ಕುದಿದು ಆವಿಯಷ್ಟೇ ಮೇಲಂತಸ್ತಿನ ಪುಡಿಯನ್ನು ಮುಟ್ಟಿ ತೊಟ್ಟು ತೊಟ್ಟೇ ಡಿಕಾಕ್ಷನ್ ಇಳಿಯುವಾಗ ಹುಟ್ಟುವ ಘಮ ಇದೆಯಲ್ಲ ಅದೇ ಸಾಕು ಆ ಹೊತ್ತಿನ ಹಸಿವು ಮತ್ತು ಆಯಾಸವನ್ನು ಪರಿಹರಿಸಲು.
ಕಾಫಿಯ ರುಚಿ ಸ್ವಾದ ಮತ್ತು ಗುಣ ಗೊತ್ತುರುವವರು ಗೆಳೆಯ Katte Gururaj ಥರ ಗ್ರಹಿಸಬಲ್ಲರು ಮತ್ತು ಜೊತೆಗಿರುವವರನ್ನೂ ತಣಿಸಬಲ್ಲರು…
**********************************
ನಾವು ಮಲೆನಾಡಿಗರು ಕಾಫಿಯ ಘಮಕ್ಕಿಂತ ಹೆಚ್ಚು ಕಷಾಯದ ಘಮಕ್ಕೆ ಸೋತವರು.
ಕಾಫಿ ಒಂದು ಪ್ಯಾಶನ್ ,
ರಸವತ್ತಾದ ಲೇಖನ
ಎಲ್ಲದರ ಸ್ವಾದ ಹೇಳುತ್ತಿದೆ.
ಬಾವ್ ಸರ್ ನಾನು ಕಾಫಿ ಪ್ರಿಯಳು. ಬೆಳಿಗ್ಗೆ ಜಾವ ಐದು ಗಂಟೆಗೇ ಆಗ ತಾನೇ ನಂದಿನಿ ಕೆಂಪು ಪ್ಯಾಕೆಟ್ಟಿನ ಹಾಲು ಕಾಯಿಸಿ ಗಟ್ಟಿ ಡಿಕಾಕ್ಷನ್ ಬೆರೆಸಿ ದೊಡ್ಡ ಲೋಟದ ತುಂಬ ಹಬೆಯಾಡುವ ಕಾಫಿ ಹಿಡಿದು ಕುಳಿತ ಅನುಭವ ಕೊಟ್ಟಿತು ನಿಮ್ಮ ಬರಹ .
ನೀವೂ ಕಾಫಿಗೇ ಹೆಚ್ಚು ಒಲಿದಿರುವುದರಿಂದ ಮಾಡಿದ ಗುಣಗಾನ ಚೆನ್ನಾಗಿದೆ.