ಪೇಟಿಮಾಂತ್ರಿಕ
ಬೆಳಗಾವಿಯಲ್ಲಿರುವ ಪಂಡಿತ್ ರಾಮಭಾವು ಬಿಜಾಪುರೆ ಅವರನ್ನು ಕಾಣಬೇಕೆಂದು ನನಗೆ ಅನಿಸಿತು. ಮಿತ್ರರಾದ ಕುಸಗಲ್ಲರಿಗೆ ವಿಷಯ ತಿಳಿಸಲು `ನಾವು ಇದೇ ಊರಾಗಿದ್ರೂ ಅವರ ಮನೀಗ್ ಹೋಗಿಲ್ಲ, ಬರ್ರಿ ಸರ’ ಎಂದು ಕರೆದೊಯ್ಯಲು ಒಪ್ಪಿದರು. ಮುಸ್ಸಂಜೆ ಹೊತ್ತಿಗೆ ಶ್ರೀ ಕುಸುಗಲ್ಲ, ಅವರ ಮಗಳು ಕವಿತಾ, ಸ್ನೇಹಿತ ಡಾ. ಕೋಲ್ಕಾರ ಅವರೊಡನೆ ಬಿಜಾಪುರೆ ಅವರಲ್ಲಿಗೆ ಹೊರಟೆ. ಹಳೇ ಬೆಳಗಾವಿಯ ಬೀದಿಗಳು. ಪಶ್ಚಿಮಘಟ್ಟದ ಜಿರ್ರೋ ಮಳೆಧಾರೆ. ಕಚಿಪಿಚಿ ಕೆಸರು. ಹಸುರು ಕಕ್ಕುವ ಗಿಡಮರಪೊದೆ. ಮನೆಯ ಛಾವಣಿ ಕಾಂಪೌಂಡು ಗೋಡೆಗಳು ಹಸಿರು ಸ್ವೆಟರುಟ್ಟಂತೆ ಬೆಳೆದ ಹಾವಸೆ. ಮಬ್ಬುಕವಿದ ಬೂದಿಬಡುಕ ಆಗಸದಲ್ಲಿ ಶಿವಸೇನೆಯ ಮಾರುದ್ದದ ಭಗವಾಧ್ವಜಗಳ ಪಟಪಟ-ಇತ್ಯಾದಿ ಕಣ್ಣೊಳಗೆ ತುಂಬಿಕೊಳ್ಳುತ್ತಿರಲು ಮನೆ ಮುಟ್ಟಿದೆವು. ಸಾಧಾರಣ ಮನೆ. ಬಾಗಿಲು ತೆರೆದವರು ಹಣ್ಣುಹಣ್ಣಾದ ಮುದುಕಿ. ಅದು ‘ಕಷಾ ಸಾಠಿ ಆಲ?’ (ಏನು ಬಂದಿರಿ?) ಎಂದು ಹಣೆಸುಕ್ಕು ಮಾಡಿಕೊಂಡು ಪ್ರಶ್ನೆ ಒಗೆಯಿತು. ‘ಬಿಜಾಪುರೆ ಮಾಸ್ತರನ್ನು ಕಾಣಬೇಕಿತ್ತು’ ಎನ್ನಲು ‘ಹಂಗೇನ್ರಿ. ಬರ್ರಿ, ಒಳಗ ಬರ್ರಿ. ಕುಂದರ್ರಿ. ಮ್ಯಾಲ ಹುಡ್ರುಗೆ ಅಭ್ಯಾಸ ಮಾಡಿಸಲಿಕ್ಕೆ ಹತ್ಯಾರ’ ಎಂದು ಬರಮಾಡಿಕೊಂಡರು. ‘ತಾವು ಬಿಜಾಪುರೆಯವರಿಗೆ..?’ ಎನ್ನಲು ‘ಕಿರೀ ಮಗಳ್ರೀ’ ಎಂದು ಜವಾಬು ಸಿಕ್ಕಿತು. ಮಗಳೇ ಇಷ್ಟು ಹಣ್ಣಾಗಿರಬೇಕಾದರೆ, ಅಪ್ಪ ಇನ್ನೆಷ್ಟು ಕಳಿತಿರಬೇಕು ಎಂದುಕೊಂಡು ಕುಳಿತೆವು. ಹತ್ತು ಮಿನಿಟು ಮುಗಿದಿರಬೇಕು. ‘ಪಾಠ ಮುಗಿದಿದೆ, ಅತಿಥಿಗಳು ಮೇಲೆ ಹೋಗಬಹುದು’ ಎಂದು ಸಂದೇಶ ಬಂತು. ಕರೆಂಟು ಹೋಗಿ ಕತ್ತಲಾಗುತ್ತಿತ್ತು. ಪಾಚಿಹಿಡಿದ ಪಾವಟಿಗೆಗಳನ್ನು ಹುಶಾರಾಗಿ ಹತ್ತಿ ಮೇಲೆ ಹೋದೆವು.ಸಣ್ಣದೊಂದು ಖೋಲಿಯಲ್ಲಿ ಗ್ಯಾಸ್‍ಬತ್ತಿಯ ಬೆಳಕಲ್ಲಿ ಬಿಜಾಪುರೆ ಲೋಡುತೆಕ್ಕೆಗೆ ಒರಗಿದ್ದರು. ಇಬ್ಬರು ಶಿಷ್ಯರು-ಅತಿಥಿ ಸತ್ಕಾರದಲ್ಲಿ ನೆರವಾಗಲೆಂದೊ ಏನೊ-ಅಲ್ಲೇ ಗೋಡೆಗೊರಗಿ ಕುತೂಹಲದ ದಿಟ್ಟಿತೊಟ್ಟು ನಿಂತಿದ್ದರು. ಅವರು ಗುರುಗಳಿಗೆ ಕೋಟು ತೊಡಿಸಲು ನೆರವಾಗಿರಬೇಕು. ತಿಳಿಯಾಗಸ ಬಣ್ಣದ ಕೋಟಿನ ಗುಂಡಿಗಳನ್ನು ಬಿಜಾಪುರೆ ಆಗಷ್ಟೆ ಹಾಕಿಕೊಳ್ಳುತ್ತಿದ್ದರು. ಆ ಕೋಟಿನಲ್ಲಿ ಲಕ್ಷಣವಾಗಿ ಕಾಣುತ್ತಿದ್ದರು. ಆರಡಿ ಎತ್ತರದ, ತಲೆಕೆಳಗಾಗಿ ಹಿಡಿದ ತಂಬೂರಿಯಂತಿದ್ದ ನೆಟ್ಟನೆ ಕಾಯದ ಬಿಜಾಪುರೆ, ವಯೋಸಹಜ ಸೊರಗಿದ್ದರು. ಗಾಂಧಿಕಿವಿ. ವಿಶಾಲ ಹಣೆ. ಕರೀಟೊಪ್ಪಿಗೆ. ಹೊಳೆವ ಕಣ್ಣು. ಪೇಟಿ ಮನೆಗಳ ಮೇಲೆ ಆಡಲೆಂದೇ ಮಾಡಿದಂತಿರುವ ನೀಳ್‍ಬೆರಳು. ಎದುರುಗಡೆ ಅರ್ಧ ಕತ್ತರಿಸಿಟ್ಟ ಕುಂಬಳಕಾಯಿಯ ಹೊಳಕೆಗಳಂತೆ ವಿಶ್ರಾಂತ ಸ್ಥಿತಿಯಲ್ಲಿರುವ ತಬಲಗಳು. ಬಗಲಿಗೆ ಹಾರ್ಮೊನಿಯಂ. ಬಿಜಾಪುರೆ ಭಾರತದ ಬಹುತೇಕ ಹಿಂದೂಸ್ಥಾನಿ ಗಾಯಕರಿಗೆ ಸಾಥಿದಾರರಾಗಿ ಹಾರ್ಮೋನಿಯಂ ನುಡಿಸಿದವರು. ನಾವು ನಮಸ್ಕರಿಸಿ ಸುತ್ತ ಕೂತೆವು. ‘ಹ್ಞಾಂ ಹೇಳ್ರಿ. ಏನ್ ಬಂದದ್ದು? ಎಲ್ಲಿಂದ ಬಂದಿರಿ?’ ಎಂದರು ಬಿಜಾಪುರೆ. ‘ನಿಮ್ಮನ್ನು ಕಾಣಲೆಂದೇ ಬಂದೆವು’ ಎಂದೆವು. ‘ಛಲೋ ಆತು. ಥಂಡಿ ಅದ. ಚಾ ಕುಡಿಯೋಣಲ್ಲ?’ ಎಂದು ಶಿಷ್ಯನತ್ತ ನೋಡಲು ಆತ ಮರಾಠಿಯಲ್ಲಿ `ಈಗ ತಂದೆ’ ಎಂದು ಕೆಳಗೆ ದೌಡಿದನು. “ನಿಮ್ಮ ಆರೋಗ್ಯದ ಗುಟ್ಟು ಏನು?’ ಎಂದೆ. ಆತ್ಮವಿಶ್ವಾಸ ತುಂಬಿದ ಗಟ್ಟಿದನಿಯಲ್ಲಿ `‘ಸಂಗೀತ. ನಮ್ಮ ಸಂಗೀತ ಮಂದಿಯೆಲ್ಲ ದೀರ್ಘಾಯುಷ್ಯದೋರು. ಹಾಡೋದೇ ದೊಡ್ಡ ಪ್ರಾಣಾಯಾಮ ಆಗ್ತದ’’ ಎಂದು ನಕ್ಕರು. ಹಿನ್ನೆಲೆ ಕೆದಕಿದೆ: “ನಮ್ಮ ಮುತ್ಯಾ ಮೂಲಮಂದಿ ಬಿಜಾಪುರದವರಂತ. ನಮ್ಮಪ್ಪ ಸಾಲಿ ಮಾಸ್ತರ ಇದ್ದರು. ದೊಡ್ಡ ಸಾಹಿತಿ. ಸಂಗೊಳ್ಳಿ ರಾಯಣ್ಣ ನಾಟಕ ಬರದೋರು. ಅವರಿಗೆ ಅಥಣಿ ತಾಲೂಕ ಕಾಗವಾಡಕ್ಕ ವರ್ಗ ಆಯ್ತು. ಮುಂದ ಬೆಳಗಾಂವ್ಞಿ ಸೇರಿಕೊಂಡಿವಿ’ ಎಂದರು. ಸಂಗೀತದ ಹಿನ್ನೆಲೆ ಕೇಳಿದೆ: ‘ರಾಮಕೃಷ್ಣ ಬುವಾ ವಝೆ ನನ್ನ ಗುರುಗಳು. ನನಗ ವೋಕಲ್ ಕಲೀಲಿಕ್ಕ ಆಸೆಯಿತ್ತು. ಯಾನ್ ಮಾಡೋದರಿ, ದನಿ ಒಡದಬಿಡ್ತು. ಆವಾಜ್ ಹೋಗಿಬಿಡ್ತು. ಅದಕ್ಕ ಈ ಪೇಟಿ ಕಡಿ ಬಂದಬಿಟ್ಟೆ. ಈಗಲೂ ಥೋಡಥೋಢ ಹಾಡ್ತೀನಿ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಕುಮಾರಗಂಧರ್ವ, ಮಾಣಿಕವರ್ಮ, ಅಮೀರಖಾನ್- ಹೀಂಗ ಬೇಕಾದಷ್ಟ ಮಂದಿಗೆ ಸಾಥ್ ಮಾಡೀನಿ” ಎಂದರು. `ಯಾರ ಜತೆ ಹೆಚ್ಚು ಸಂತೋಷ ಸಿಕ್ಕಿತು’ ಎನ್ನಲು `ಅಮೀರ್‍ಹುಸೇನ್ ಖಾನ್ ಹಾಡಿಕೆಗೆ. ಅವರು ಭಯಂಕರ ಛಲೋ ಹಾಡ್ತಿದ್ದರು’ ಎಂದರು. ಹೀಗೇ ಹೊರಗೆ ಹನಿಯುತ್ತಿದ್ದ ತುಂತುರು ಮಳೆಯಂತೆ ಮಾತುಕತೆ ನಡೆಯಿತು. ಅವರ ಮಾತೊ, ಫಾರಸಿ ಮರಾಠಿ ಕನ್ನಡ ಹದವಾಗಿ ಬೆರೆತದ್ದು. ನಮಗೆ ಅವರು ಪೇಟಿಯ ಮೇಲೆ ಬೆರಳಾಡಿಸಿ ನಾದ ಹೊರಡಿಸಿದರೆ, ಕಿವಿಯ ಮೇಲೆ ಹಾಕಿಕೊಂಡು ಹೋಗಬೇಕು ಎಂದಾಸೆ. ಸಂಗೀತವೇ ಒಂದು ಸಂಕರ ಕಲೆ. ಬೆರಕೆಯಿಲ್ಲದೆ ಅದು ಹುಟ್ಟುವುದೇ ಇಲ್ಲ. ಅದರಲ್ಲಿ ಈ ಹಾರ್ಮೊನಿಯಂ ತಾನು ಹುಟ್ಟಿಸುವ ಸಮಸ್ತ ಸ್ವರಗಳನ್ನು ಬೆರೆಸುವ ಮಾಯಾಮಂಜೂಷ. ಹಿಂದೊಮ್ಮೆ ಅದರ ಕವಚ ತೆಗೆದು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಿದ್ದೆ. ಕುಲುಮೆಯ ತಿದಿಯಂತೆ ಹಿಂಬದಿಯ ತೂತುಗಳ ಮೂಲಕ, ಪ್ರಾಣಾಯಾಮದ ಕುಂಭಕದಂತೆ ಗಾಳಿ ಒಳಗೆ ತುಂಬಿಕೊಳ್ಳುತ್ತದೆ. ಮುಂಭಾಗದಲ್ಲಿರುವ ಕರಿಬಿಳಿ ಮನೆಗಳನ್ನು ಬೆರಳಿಂದ ಒತ್ತಿದರೆ, ತುಂಬಿಕೊಂಡ ಉಸಿರು ಅಗತ್ಯಕ್ಕೆ ತಕ್ಕನಾಗಿ ರಂಧ್ರ್ರವಿರುವ ಕೊಂಡಿಗಳ ತುದಿಗಳಿಂದ ಹೊರಟು ಬಗೆಬಗೆಯ ಏರಿಳಿತಗಳಲ್ಲಿ ನಾದ ಹೊಮ್ಮಿಸುತ್ತದೆ. ಏಕಕಾಲಕ್ಕೆ ಹೊಮ್ಮುವ ಈ ಹಲವು ನಾದಗಳು ಒಂದಾಗುತ್ತ ಹೊಳೆಯಂತೆ ಹರಿಯುತ್ತವೆ. ನಾನು ಶೇಷಾದ್ರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿ ಅವರ ಹಾರ್ಮೋನಿಯಂ ಕೇಳಿರುವೆ. ಪುಟ್ಟರಾಜರು ಪೇಟಿಯನ್ನು ಶಹನಾಯಿ ದನಿ ಹೊರಡುವಂತೆ ನುಡಿಸಬಲ್ಲವರಾಗಿದ್ದರು. ಕಂಪನಿ ನಾಟಕಗಳು ಶುರುವಾಗುವಾಗ ಗವಾಯಿ ಮಾಸ್ತರನು ಪೇಟಿಯ ಮೇಲೆ ಬೆರಳಾಡಿಸಿದರೆ, ಇಡೀ ಥಿಯೇಟರಿನ ಶಾಬ್ದಿಕ ಕಸವನ್ನೆಲ್ಲ ಕಸಬರಿಕೆ ತೆಗೆದುಕೊಂಡು ಗುಡಿಸಿದಂತಾಗಿ, ಮನಸ್ಸೂ ವಾತಾವರಣವೂ ಶುದ್ಧವಾಗಿ, ರಸಿಕರಿಗೆ ನಾಟಕ ನೋಡಲು ಬೇಕಾದ ಸಹೃದಯ ಮನಃಸ್ಥಿತಿ ಸಿದ್ಧವಾಗುತ್ತದೆ. ಪೇಟಿಯಿಲ್ಲದೆ ನಾಟಕವಿಲ್ಲ. ಹರಿಕತೆಯಿಲ್ಲ. ಸಿನಿಮಾ ಗೀತೆಗಳಿಲ್ಲ. ಭಜನೆಯಿಲ್ಲ. ಭಾರತೀಯ ಸಂಗೀತದಲ್ಲಿ ಹಾರ್ಮೋನಿಯಂ ಸರ್ವಾಂತರ್ಯಾಮಿ.ಹೀಗೆ ಬಹುರೂಪಿಯಾದ ಈ ವಾದ್ಯ ಸ್ಥಳೀಕವಲ್ಲ. ಯೂರೋಪಿನಿಂದ ಬಂದಿದ್ದು. ಅದು ವಲಸೆ ಬಂದು ಇಲ್ಲಿನ ಅಗತ್ಯಗಳಿಗೆ ರೂಪಾಂತರ ಪಡೆದ ಕತೆ ರೋಚಕ. ಅದರ ಜತೆ ಮುಕ್ಕಾಲು ಶತಮಾನ ಕಾಲ ಕಳೆದಿರುವ ಬಿಜಾಪುರೆ ಹೇಳಿದರು: ‘ನೋಡ್ರಿ. ಇದು ಪ್ಯಾರಿಸ್ಸಿಂದು. ನಾಟಕಕ್ಕ ಅಂತ ತಂದದ್ದು. ನಮ್ಮ ಹಿಂದೂಸ್ತಾನಿ ಸಂಗೀತಕ್ಕ ಇದರಷ್ಟು ಯೋಗ್ಯ ಟ್ಯೂನಿಂಗ್ ಕೊಡೋದು ಮತ್ತ ಬ್ಯಾರೆ ಯಾವುದು ಇಲ್ಲ’. ಸಂಗೀತ ಕಛೇರಿಯಲ್ಲಿ ತಬಲ ಪೇಟಿ ತಂಬೂರಿ ಮುಂತಾದ ಪಕ್ಕವಾದ್ಯದ ಸಾಥಿದಾರರು ಎಷ್ಟೇ ಪ್ರತಿಭಾವಂತರಿದ್ದರೂ, ಅವರದು ಎರಡನೇ ಸ್ಥಾನ. ಕೇಂದ್ರಬಿಂದು ಹಾಡುಗಾರರು; ವಾದ್ಯಸಂಗೀತವಿದ್ದರೆ ವಾದ್ಯಕಾರರು. ಎರಡನೇ ಸ್ಥಾನದಲ್ಲಿರಬೇಕಾದ ಇಕ್ಕಟ್ಟೇ ಕೆಲವಾದರೂ ಪ್ರತಿಭಾವಂತರನ್ನು ಪ್ರಯೋಗಗಳಿಗೆ ಪ್ರೇರೇಪಿಸಿರಬೇಕು. ವಿಜಾಪುರೆ ಸ್ವತಂತ್ರವಾಗಿ ಪೇಟಿ ಬಾರಿಸುತ್ತ, ಅದರಲ್ಲಿ ಹಾಡುಗಳನ್ನು ನುಡಿಸುತ್ತಿದ್ದರಂತೆ. ಅದನ್ನು ಗಾಯಕಿ ಶೈಲಿ ಎನ್ನುವರು. “ಹಾರ್ಮೊನಿಯಂ ಹಾಡಿನಂಗ ಬಾರಿಸೋನು ನಾನ ಒಬ್ಬನೇ ಉಳದೀನಿ. ಹಾಡಿನ ಧ್ವ್ವನಿ ಬರೋಹಂಗ ಇದರ ಮ್ಯಾಲ ಸಂಶೋಧನ ಮಾಡೀನಿ’ ಎಂದು ಮಗುವಿನಂತೆ ಬಚ್ಚಬಾಯಲ್ಲಿ ನಕ್ಕರು. ನಮಗೆ ಅದೃಷ್ಟವಿರಲಿಲ್ಲ. ವಿಜಾಪುರೆ ಪೇಟಿ ನುಡಿಸಲು ಒಲ್ಲೆನೆಂದರು. ಪಾಠ ಹೇಳಿ ದಣಿದಿದ್ದರೊ, ಅರೆಗತ್ತಲೆಯಲ್ಲಿ ಬೇಡವೆನಿಸಿತೊ ತಿಳಿಯದು. ‘ಈಗ ಬೇಡ. ತಬಲ ಸಾಥಿಯಿಲ್ಲ. ಇನ್ನೊಮ್ಮೆ ಬರ್ರಿ. ಬೇಕಾದಷ್ಟು ನುಡಸ್ತೀನಿ. ನನ್ನ ಶಿಷ್ಯರು ಹಾರ. ಅವರು ಹಾಡ್ತಾರ’ ಎಂದು ಶಿಷ್ಯರಿಗೆ ‘ಭಾಳಾ, ಯೂನಿವರ್ಸಿಟಿಯಿಂದ ಪ್ರೊಫೆಸರ್ ಮಂದಿ ಬಂದಾರ. ಥೋಡ ಹಾಡ್ರಿ’ ಎಂದರು. ಕೇಳಿದರೆ ತಮ್ಮ ಕರುಳನ್ನೂ ಬಗೆದುಕೊಡುವಷ್ಟು ಭಕ್ತಿ ತುಂಬಿದಂತಿದ್ದ ಆ ತರುಣ ತರುಣಿ, ಗುರುವಿನ ಅಪ್ಪಣೆ ನೆರವೇರಿಸುತ್ತಿರುವ ಆನಂದವನ್ನೂ ಅಪರಿಚಿತರ ಮುಂದೆ ಸಂಕೋಚವನ್ನೂ ಸೂಸುತ್ತ, ತಲಾ ಒಂದೊಂದು ಮರಾಠಿ ಅಭಂಗ ಹಾಡಿದರು. ಅದೇ ಹೊತ್ತಿಗೆ ಸಂಗೀತಪಾಠದಿಂದ ಮಗಳನ್ನು ಕರೆದೊಯ್ಯಲು ಬಂದಿದ್ದ ಒಬ್ಬ ತಾಯಿ, ತನ್ನ ಕರುಳಕುಡಿ ಹಾಡುವುದನ್ನು ಮರೆಯಲ್ಲಿ ನಿಂತು ನೋಡುತ್ತ ಆನಂದ ಪಡುತ್ತಿದ್ದುದು ಮಬ್ಬುಬೆಳಕಲ್ಲೂ ಫಳಫಳಿಸುತ್ತಿತ್ತು. ಬಿಜಾಪುರೆ ತಾವು ಕೊಟ್ಟ ಗುಟುಕನ್ನು ತುಪ್ಪುಳಿಲ್ಲದ ಮರಿಗಳು ನುಂಗುವುದನ್ನು ನೋಡುವ ತಾಯ್ ಹಕ್ಕಿಯಂತೆ, ಮಡಿಲಲ್ಲಿ ಮಲಗಿದ ಕೂಸು ತಾನು ಉಚ್ಚರಿಸಿದ ಶಬ್ದಗಳನ್ನು ತೊದಲುತೊದಲಾಗಿ ಅನುಕರಿಸುತ್ತಿರಲು ಗಮನಿಸುವ ಅಜ್ಜಿಯಂತೆ, ಶಿಷ್ಯರ ಮುಖಗಳನ್ನೇ ತದೇಕ ನೋಡುತ್ತಿದ್ದರು. ಚಹ ಬಂತು. ಸಂಗೀತ ಕೇಳಲಾಗದ ನಿರಾಸೆಯಲ್ಲಿ ಚಹ ಸೇವಿಸುತ್ತಿರುವಾಗ, ಬಿಜಾಪುರೆ “ಈಗ ಗುರ್ತಾಯ್ತಲ್ಲ, ಮತ್ತೊಮ್ಮೆ ಬರ್ರಿ. ಇಡೀ ದಿವಸ ಬೇಕಾರ ಕೂಡೋಣು. ಬೇಕಾದಂಗ ಬಾರಸ್ತೀನಿ. ಇನ್ನ ಕರ್ನಾಟಕದೊಳಗ ಗಂಗೂಬಾಯಿ ನಾನೂ ಏಣಗಿ ಬಾಳಪ್ಪ ಮೂವರಿದ್ದಿವಿ. ಗಂಗೂಬಾಯಿ ಹ್ವಾದಳು. ನಾವಿಬ್ಬರು ಉಳದೀವಿ’ ಎಂದರು. ಮುಂದೆ ಅವರು (1917-2010) ಕಳಿತ ಎಲೆ ಚಳಿಗಾಲದಲ್ಲಿ ಸಣ್ಣಸಪ್ಪಳ ಹೊರಡಿಸಿ ಹಗುರಾಗಿ ನೆಲಕ್ಕೆ ಇಳಿಯುವಂತೆ ಹೋಗಿಬಿಟ್ಟರು. ಅವರ ಹಾರ್ಮೊನಿಯಂ ಕೇಳುವ ಕನಸು ಹಾಗೆಯೇ ಉಳಿದುಬಿಟ್ಟಿತು.
(ನಾನು ಹಿಂದೆ ಪಂಡಿತ್ ಬಿಜಾಪುರೆ ಅವರ ಮೇಲೆ ಬರೆದಿದ್ದ ಪುಟ್ಟಲೇಖನವಿದು. ಬೆಳಗಾವಿಯ ಕವಿ ಕವಿತಾ ಕುಸುಗಲ್ಲ ಇದನ್ನು ಓದಬಯಸಿದರು. ಇದು ಆ ಬರೆಹ.)
**********************
ಲೇಖಕರ ಬಗ್ಗೆ:
ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಚೆಂದದ ಸಾಹಿತ್ಯಕ್ಕೆ ಅದ್ಭುತವಾದ ಆದರೆ ಹದವಾದ ರಾಗ ಸಂಯೋಜಿಸಿ ಲಯಗಾರಿಕೆಯಲ್ಲಿ ಹಾಡಿದಾಗ, ಕೇಳಿದ ಮನಸ್ಸು ತಣಿದು ವಾಹ್..! ಎಂದು ತಲೆತೂಗುವಂತೆ ರಹಮತ್ ಸರ್ ಅವರ ಬರಹಗಾರಿಕೆಯ ಸೊಬಗು.. ಅವರು ಚಿತ್ರಿಸುವ ವ್ಯಕ್ತಿ ಚಿತ್ರಣಗಳು ಬಹಳಷ್ಟುಕಾಲ ನೆನಪಿನಲ್ಲುಳಿಯುವುದಕ್ಕೆ ಈ ಕುಸುರಿಯೇ ಬಹಳ ಮುಖ್ಯವಾಗುವ ಅಂಶ. ಧನ್ಯವಾದಗಳು ಸಂಗಾತಿ ಒಳ್ಳೆಯ ಬರಹ ಓದಿಸಿದ್ದಕ್ಕೆ.
ಹಾರ್ಮೋನಿಯಂ ಬಂದದ್ದು ಯುರೊಪ್ ನಿಂದ.ಪಂಡಿತ್ ಬಿಜಾಪುರೆ ಅವರು ಬಳಸುತ್ತಿದ್ದ ಹಾರ್ಮೋನಿಯಂ ಪ್ಯಾರಿಸ್ ನಿಂದ ತಂದದ್ದು ಎಂಬ ಮಾಹಿತಿಗಳು ಕುತೂಹಲ ಹುಟ್ಟಿಸಿದವು. ಬಿಜಾಪುರೆ ಅವರ ಪರಿಚಯದ ಶೈಲಿಯೇ ಕತೆಯ ಸ್ವರೂಪದ್ದು. ಇಷ್ಟವಾಯಿತು ಸರ್. ಸಾಹಿತ್ಯ ಸಂಗಾತಿಗೆ ಥ್ಯಾಂಕ್ಸ. ನಮ್ಮ ನನಾಡಿನಲ್ಲಿ ಮುನ್ನೆಲೆಗೆ ಬರಬೇಕಾದ ಸಂಗತಿಗಳನ್ನು ಸಾಹಿತ್ಯ ಸಂಗಾತಿ ಪ್ರಕಟಿಸುತ್ತಿದೆ ಎಂಬುದು ಮಹತ್ವದ್ದು…..ಥ್ಯಾಂಕ್ಸ ಟು ಮಧುಸೂದನ್ ಸರ್..