ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಸಂದರ್ಶನ

ದೇವನೂರು ಮಹಾದೇವ

ದೇವನೂರ ಮಹಾದೇವ ಸಂದರ್ಶನ ರಹಮತ್ ತರಿಕೆರೆ ಅವರಿಂದ (1999 ರಲ್ಲಿನಡೆದ ಸಂದರ್ಶನವನ್ನುಸಂಗಾತಿಯ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.) (ಕನ್ನಡದ ದೊಡ್ಡ ಲೇಖಕರ ವಿಶಿಷ್ಟತೆ ಎಂದರೆ, ಅವರು ಎಷ್ಟು ದೊಡ್ಡ ಕಲಾವಿದರೋ ಅಷ್ಟೇ ದೊಡ್ಡ ರಾಜಕೀಯ ಸಾಮಾಜಿಕ ಚಿಂತಕರು ಕೂಡ. ಇದಕ್ಕೆ ಕಾರಣ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳೂ ಬಸವಣ್ಣ ಕುವೆಂಪು ಕಾರಂತ ಮುಂತಾದ ಚಿಂತಕ ಲೇಖಕರ ಪರಂಪರೆಯೋ ನಮ್ಮ ಲೇಖಕರ ಸಾಮಾಜಿಕ ಹಿನ್ನೆಲೆಯೊ ಗೊತ್ತಿಲ್ಲ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಚಿಂತಕರು’ ಎಂದು ಪುಣೇಕರ್ ಹೇಳುವುದುಂಟು. ಈ ಮಾತು ದೇವನೂರರಿಗೆ ಅನ್ವಯವಾಗುತ್ತದೆ. ಇಲ್ಲಿರುವ ಅರೆಬರೆ ವಾಕ್ಯಗಳು, ಒಗಟಿನಂತಹ ಹೇಳಿಕೆಗಳು ಅವರ ಚಿಂತನೆಯ ಗೊಂದಲ ಅಥವಾ ಕೊರತೆಯನ್ನು ಸೂಚಿಸುವುದಿಲ್ಲ. ಬದಲಿಗೆ ಈ ಬಗ್ಗೆ ಇನ್ನೂ ಚಿಂತಿಸಬೇಕಾದ್ದಿದೆ; ಅದನ್ನು ಸರಳವಾಗಿ ಹೇಳಲು ಆಗುವುದಿಲ್ಲ ಎಂಬ ಸಂಕೀರ್ಣತೆಯನ್ನೆ ಸೂಚಿಸುತ್ತಿವೆ. ಇದನ್ನು ಸೃಜನಶೀಲತೆಯ ಬಗೆಗಿನ ವ್ಯಾಖ್ಯೆಯಲ್ಲಿ ನೋಡಬಹುದು. ಆದರೆ ಎಲ್ಲೆಲ್ಲಿ ರಾಜಕೀಯವಾಗಿ ಸ್ಪಷ್ಟ ನಿಲುವನ್ನು ತಾಳಬಹುದೊ ಅಲ್ಲೆಲ್ಲ ದೇವನೂರರು ತಾಳುತ್ತಾರೆ. ಉದಾಹರಣೆಗೆ ಜಾಗತೀಕರಣ ಕುರಿತ ವಿಚಾರದಲ್ಲಿ ಕನ್ನಡದಲ್ಲಿ ಶಿಕ್ಷಣ ಕೊಡುವ ವಿಚಾರದಲ್ಲಿ ವಚನ ಚಳವಳಿಯ ಬಗೆಗಿನ ಅವರ ವಿವರಣೆಯು ನೋಡಲು ಸರಳವಾಗಿದೆ. ಆದರೆ ಅದು ಸೃಜನಶೀಲ ಲೇಖಕನೊಬ್ಬ ಸಮಾಜವಾದಿ ಚಿಂತಕನೂ ಆಗಿ ಮಾಡಿದ ಅಪೂರ್ವ ವಿಶ್ಲೇಷಣೆಯಾಗಿದೆ. ಇಲ್ಲಿನ ಚರ್ಚೆಗಳಲ್ಲಿ ಗತದ ಬಗ್ಗೆ ಕಟು ವಿಮರ್ಶೆಯಿದೆ. ವರ್ತಮಾನದ ಬಗ್ಗೆ ಜಾಗೃತ ತಿಳಿವಿದೆ. ಭವಿಷ್ಯದ ಬಗ್ಗೆ ಕನಸಿದೆ. ಈ ಕನಸುಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವವರ ಕಣ್ಣಲ್ಲಿ ದ್ವಂದ್ವ ಅಥವಾ ಗೊಂದಲ ಅನಿಸಬಹುದು. ಆದರೆ ಇಂತಹ ಕನಸುಗಳನ್ನು ಎಲ್ಲ ಸಮಾಜಗಳಲ್ಲಿ ಲೇಖಕರು ಕಾಣುತ್ತಾರೆ. ಹಾಗೆ ಶುದ್ಧವಾಗಿ ಅವರು ರಾಜಕೀಯ ಜೀವಿಗಳಲ್ಲ. ಯಾಕೆಂದರೆ ಸಮಸ್ಯೆಗಳನ್ನು ಲೇಖಕರು ಕೆಲವೊಮ್ಮೆ ಒಟ್ಟು ಮಾನವ ಜನಾಂಗದ ನೈತಿಕತೆಯ ಪ್ರಶ್ನೆಯನ್ನಾಗಿ ಕೂಡ ನೋಡಬಯಸುತ್ತಾರೆ. ಇದನ್ನು ದೇವನೂರರೂ ಮಾಡುತ್ತಾರೆ. ಇಲ್ಲಿ ಪ್ರಧಾನವಾಗಿ ಕಾಣುವುದು ಸಾಮಾಜಿಕ ಚಳುವಳಿಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಪ್ರಾಮಾಣಿಕತೆ ಪರ್ಯಾಯಗಳ ಹುಡುಕಾಟ ಇನ್ನೂ ನಿಂತಿಲ್ಲ ಎಂಬ ಭರವಸೆ. -ರಹಮತ್ ತರೀಕೆರೆ) * ‘ದ್ಯಾವನೂರು’ ಸಂಕಲನದ ಕತೆಗಳನ್ನು ಬರೆವಾಗ ಇದ್ದ ಕನ್ನಡ ಸಾಹಿತ್ಯದ ವಾತಾವರಣ ನೆನಪು ಮಾಡಿಕೊಳ್ತೀರಾ? ನವ್ಯದ ವಾತಾವರಣ ತೀವ್ರವಾಗಿತ್ತು. ಅನಂತಮೂರ್ತಿ ಲಂಕೇಶ್ ತೇಜಸ್ವಿ ಕಂಬಾರ ಮತ್ತು ಅಡಿಗ ಮುಂತಾದವರು, ಸಾಹಿತ್ಯಾನೇ ಜೀವ ಅದೇ ಸರ್ವಸ್ವ ಅಂತ್ಹೇಳಿ ತೊಡಗಿಸಿಕೊಂಡಿದ್ದವರು, ಇದ್ರು. ಈಗ ನಾವು ಸೋಶಿಯಲ್ ಮೂಮೆಂಟ್ಸ್ ಜತೆಗೆ ಇದೂ ಅದೂ ಎರಡೂ ಮಿಕ್ಸ್ ಮಾಡ್ಕೊಳ್ತಾ ಇರ್ತೀವಿ, ಹೌದಲ್ಲ? ಆವಾಗ ಅದೇ ವಿಶ್ವ, ಅದೇ ರಾಜಕೀಯ, ಅದೇ ಬದುಕು, ಅನ್ನೊ ತರದವರು ಸುಮಾರು ಜನ ಇದ್ರು. * ನಿಮಗೆ ‘ಲೋಹಿಯಾವಾದಿ’ ಅಂತ ಗುರುತಿಸ್ತಾರೆ. ಅದನ್ನು ಕೇಳಿದಾಗ ಏನನ್ಸುತ್ತೆ? ಬರೆವಾಗಂತೂ ವಾದಗೀದ ಇರಲ್ಲ ನನ್ಹತ್ರ. ಉದಾಹರಣೆಗೆ ಹೇಳ್ತೀನಿ. ಕಮ್ಯುನಿಸ್ಟರ ಬಗ್ಗೆ ಸ್ವಲ್ಪ ರಿಸರ್ವೇಶನ್ ಇತ್ತು ನನಗೆ. ಆ ಟೈಮಲ್ಲಿ ಬರೆದದ್ದು ‘ಅಮಾಸ’ ಕತೆ. ಅಲ್ಲಿ ಒಂದು ಕ್ಯಾರಕ್ಟರ್ ಬರ್ತದೆ. ಅವನು ಗ್ಯಾಂಗ್‌ಮನ್ ಸಿದ್ದಪ್ಪ. ‘ಲೋಹಿಯಾ ಸಮಾಜವಾದ ಬರಬೇಕು’ ಅಂತ ಅವನ ಬಾಯಲ್ಲಿ ಬರೋಕೆ ಸಾಧ್ಯವಿಲ್ಲ. ಅಲ್ಲಿ ‘ಕಮ್ಯುನಿಸಂ ಬರಬೇಕು’ ಅಂತಾ ಹೇಳ್ತಾನೆ ಅವನು. ಅಂದ್ರೆ ಆ ತರಹದ ಪ್ರಾಮಾಣಿಕತೆ ನನಗೆ ಇದೆ. * ‘ಒಂದು ದಹನದ ಕತೆ’ ‘ದತ್ತ’ ಕತೆಗಳಲ್ಲಿ ಒಂಥರಾ ಅಂತರ್ಮುಖೀ ವಿಕ್ಷಿಪ್ತ ನಾಯಕರ ಲೋಕ ಬರುತ್ತೆ. ಆಮೇಲೆ ‘ಡಾಂಬರು ಬಂದುದು’ ಕತೆಗಳಲ್ಲಿ ಈ ಲೋಕಗಳು ನಾಟಕೀಯ ಅನ್ನೋ ಹಾಗೆ ಬದಲಾಗ್ತವೆ. ಈ ಬದಲಾವಣೆ ಹ್ಯಾಗಾಯ್ತು? ‘ಡಾಂಬರು ಬಂದುದು’ ಬರೆಯೊ ಮುನ್ನ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಬಂದಿತ್ತು. ಅದು ಬಹಳ ಭಿನ್ನವಾಗಿದ್ದ ಕತೆ. ಅದು ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು ಅನ್ಸುತ್ತೆ. ಮತ್ತೆ ಈಗ್ಲೂನೂ ನನ್ನ ಆ ಎರಡು ಕತೆಗಳ ಬಗ್ಗೆ ಭಾಳ ಬೇಜಾರು ಇದೆ (ನಗು). ಅದೇನು ಮಾಡಕಾಗಲ್ಲ. ಒಂಥರಾ ಪ್ಲಾಟ್ ಮಾಡ್ಕೊಂಡು ಬರೆದ ಕತೆಗಳವು. * ಈಗ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿ ಸರಿಯಾಗಿ ೨೦ ವರ್ಷ. ಇದನ್ನು ಶುರು ಮಾಡುವಾಗ ನಿಮಗೆ ಯಾವ ಹಂಬಲಗಳಿದ್ದವು? ವಾಲೀಕಾರ ಅಲ್ಲಿ ನೆಪ ಆದ್ರು. ಆದ್ರೆ ಇದಕ್ಕೆ ಹೆಚ್ಗೆ ರೂಪ ಕೊಟ್ಟೋರು ಡಿ ಆರ್ ನಾಗರಾಜು ಮತ್ತು ಕಾಳೇಗೌಡ ನಾಗವಾರ, ಸಿದ್ಧಲಿಂಗಯ್ಯ ಈ ಥರದ ಗೆಳೆಯರು. ಅವರ್ದೇನು ಆಸೆ, ನೋವು-ಅಸಹಾಯಕತೆ ಈ ತರಹದವಕ್ಕೆಲ್ಲ ಧ್ವನಿಯಾಗಬೇಕು ಅಂತ. ಇದಕ್ಕೆ ನಂದೇನು ಆಕ್ಷೇಪಣೆ ಇರಲಿಲ್ಲ. ಭಾಗವಹಿಸಿದೆ ಅಷ್ಟೆ. ನಾನು ಚಾಲೂ ಮಾಡಿದೋನಲ್ಲ. * ಬಂಡಾಯ ಚಳುವಳಿ ಈಗ ಪಡೆದುಕೊಂಡಿರೊ ರೂಪಕ್ಕೆ ಕಾರಣ ಏನು ಹೇಳಬಹುದು? ಚಳವಳಿಯ ಒಳಗಿನ ಕಾರಣಗಳೋ ಹೊರಗಿನ ಒತ್ತಡಗಳೊ? ಹಂಗೆ ತೂಕ ಮಾಡಕ್ಕೆ ಆಗಲ್ಲ ಅನ್ಸುತ್ತೆ. ಸಮಾಜ ಭಾಳ ಮುಖ್ಯ. ಆ ಕಡೇನೂ ನೋಡ್ಬೇಕು ಅನ್ನೊ ಧೋರಣೆ ಕಡೆ ಇದು ಗಮನ ಕೊಡ್ತು. ಅದೇನಾಗುತ್ತೆ ಅಂತಂದ್ರೆ, ಇನ್ನೊಂದ್ ಕಡೆಗೆ ಇಲ್ಲಿ ಬರೀತಾ ಇದ್ರಲ್ಲ ನಮ್ಮಲ್ಲೆ, ಅವರಿಗೆ ಬರವಣಿಗೆ ಎರಡ್ನೇದಾಯ್ತು. ನವ್ಯ ಮೂಮೆಂಟಲ್ಲೆಲ್ಲ ತಾನೂ ತನ್ನ ಬರವಣಿಗೇನೇ ಮೊದಲ್ನೇದು ಉಳಿದಿದ್ದೆಲ್ಲ ಎರಡ್ನೇದು ಅನ್ನೋದಿತ್ತಲ್ಲ. ಅದು ಸ್ವಲ್ಪ ಉಲ್ಟಾ ಆಯ್ತು. ಇಲ್ಲಿ ಸುಮಾರ್ ಜನ ಬರೀಬಹುದಾದೋರು ಹುಟ್ಕಂಡ್ರು. ಆದ್ರೆ ಭಾಳ ದೊಡ್ಡ ಲೇಖಕರು ಬರಲಿಲ್ಲ ಅನ್ಸುತ್ತೆ. ಮತ್ತೆ ಜತೆಗೆ ಬಂಡಾಯ-ದಲಿತ ಚಳುವಳಿ, ದೊಡ್ಡ ಲೇಖಕರ ಮೇಲೇನೂ ಪರಿಣಾಮ ಮಾಡಿದೆ. ಹಿಂಗೆ ಯೋಚ್ನೆ ಮಾಡ್ಬೇಕು ಅಷ್ಟೇನೆ. * ಕನ್ನಡ ಸಾಹಿತ್ಯ ಪರಂಪರೇಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕರು… ಬೇಂದ್ರೆ, ಕುವೆಂಪು. * ಯಾಕೆ ಅಂತ ವಿವರಿಸಬಹುದಾ? ವಿಮರ್ಶೆ ಮಾಡಕ್ಕೆ ನಂಗೆ ಆಗಲ್ಲ. ‘ಮಲೆಗಳಲ್ಲಿ ಮದುಮಗಳು’ ಅದರ ಬಗ್ಗೆ ಸುಮಾರು ಆಕ್ಷೇಪಣೆಗಳು ಬಂದ್ವು. ಅದಕ್ಕೆ ಕೇಂದ್ರ ಇಲ್ಲ, ಮಣ್ಣು ಮಸಿ ಇಲ್ಲ ಅಂತ. ಆದ್ರೆ ಇವತ್ತಿಗೂ ಈಗ ತಾನೇ ಹುಟ್ಟಿದ ಥರ ಇದೆ ಆ ನಾವೆಲ್ಲು. ಆಮ್ಯಾಲೆ, ಈ ನವ್ಯ ಕಾಲದಲ್ಲಿ ಬಂದ್ವಲ್ಲ, ದಿ ಬೆಸ್ಟ್ ಅನ್ನೋ ಹತ್ತು ಕಾದಂಬರಿಗಳನ್ನ ಒಂದು ತಕ್ಕಡೀಲಿಟ್ರೂ, ಇದಕ್ಕೆ ತಡ್ಕಳೋ ಸಾಮರ್ಥ್ಯ ಇದೆ. ಜೊತೆಗೆ ಕುವೆಂಪು ಅವರ ದೃಷ್ಟಿಕೋನ-ದರ್ಶನ ಇದೆಯಲ್ಲ, ಅದು ಜೀವಸಂಕುಲವೇ ಒಂದು ಅನ್ನೊ ಥರದ್ದು… ಮತ್ತು ಬೇಂದ್ರೆ ಪದ್ಯಗಳು… ಪದ್ಯ ಅಂತಂದ್ರೆ ಹೇಳಕ್ಕೆ ಕಷ್ಟ ಅಲ್ವ? ಪದ್ಯ ಅಂದ್ರೆ ಬೇಂದ್ರೆ ಅನ್ನಿಸುತ್ತೆ. * ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ‘ಶೂನ್ಯ ಸಂಪಾದನೆ’ ಬಗ್ಗೆ ನೀವು ತಲೆ ಹಚ್ಚಿಕೊಂಡಿದ್ರಿ? ಯಾಕೆ ಅದು ಮುಖ್ಯ ಅನಿಸ್ತು? ವಚನ ಆಂದೋಲನ ಇದೆಯಲ್ಲ, ಇಡೀ ಜಗತ್ತಲ್ಲೇ ಹುಡುಕುದ್ರೂ ಸಿಗಲ್ವೇನೋ? ಆ ಥರದ ಒಂದು ಪ್ರಯೋಗ ಕರ್ನಾಟಕದಲ್ಲಿ ಆಗಿದೆ. ಉದಾಹರಣೆಗೆ ಹೇಳ್ತೀನಿ. ಮೊದಲ್ನೇದಾಗಿ ವರ್ಣಕ್ಕೆ ದೊಡ್ಡೇಟು ಕೊಟ್ರು ಅವರು. ಮತ್ತು ಎಲ್ರಿಗೂ ಪ್ರವೇಶ ಇಲ್ದೇ ಇರತಕ್ಕಂಥ ದೇವಸ್ಥಾನ ನಿರಾಕರಿಸಿದ್ರು. ಮತ್ತೆ ಗಂಡು ಹೆಣ್ಣು ಉಂಟಲ್ಲ, ಒಂಥರ ನೋಡಿದ್ರು. ಮತ್ತೆ ಜಾತಿ ಅಂತೂ ಬರಲೇ ಇಲ್ಲ ಅಲ್ಲಿ. ಆಮೇಲೆ ಮೋಕ್ಷಕ್ಕೆ ಕಾಡಿಗೆ ಹೋಗ್ಬೇಕು ತಪಸ್ ಮಾಡ್ಬೇಕು ಆ ಪರಿಕಲ್ಪನೇನೇ ಅವರಲ್ಲಿಲ್ಲ. ಮತ್ತು ಕಾಲ್ದಲ್ಲಿ ಒಳ್ಳೇದೊ ಕೆಟ್ಟದ್ದೊ ಅದಿಲ್ಲ; ಪವಿತ್ರ ಅಪವಿತ್ರ ಅದಿಲ್ಲ; ಸಂಸಾರ ಬಿಡಬೇಕು ಅಂತಿಲ್ಲ. ಸಂಸಾರ ಮಾಡ್ಕಂಡೇ- ಅಥವಾ ಇಬ್ಬರು ಹೆಂಡೀರ ಇಟ್ಕಂಡೇ ಮೋಕ್ಷ ಸಾಧ್ಯ. ಇವೆಲ್ಲ ಸಾಮಾನ್ಯ ಅಲ್ಲ. ಜತೆಗೆ ಕಲೆ ಬಗ್ಗೆ. ಬೇರೆಬೇರೆ ಧರ್ಮಗಳು ಕಲೆ ಒಂಥರ ದಾರಿ ತಪ್ಸದು ಅಂತಿರ್ತವೆ. ವಚನಕಾರರ ಚಿಂತನೆ ಕಾವ್ಯದಲ್ಲಿ ಆಗ್ತದೆ. ಬೌದ್ಧರಲ್ಲೊ ಇಸ್ಲಾಂನಲ್ಲೊ ಈ ಥರ ಬರೆಯೋದು ಧರ್ಮಕ್ಕೆ ಪೂರಕ ಅಲ್ಲ ಅನ್ನೋ ಭಾವನೆ ಇದೆ. ಇವರಲ್ಲಿಲ್ಲ. ಒಂದಾ ಎರಡಾ? ಈ ಥರದ್ದು ಹುಡುಗಾಟಾನ? ಸಾಮಾನ್ಯವಾಗಿ ಬೇರೆಬೇರೆ ಧರ್ಮಗಳಲ್ಲಿ ಒಬ್ಬ ಪ್ರವಾದಿ ಇರ್ತಾನೆ. ಅನುಯಾಯಿಗಳಿರ್ತಾರೆ. ಇಲ್ಲಿ ಎಲ್ರೂ ಸಮಾನರು. ಆದ್ರೂ ಇಡೀ ಚಳುವಳಿಯ ಒಳಗೇನೇ ಅನೇಕ ತಾತ್ವಿಕ ಭಿನ್ನಮತಗಳು ಸಂಘರ್ಷಗಳು ಇದ್ದವು ಅನ್ನೋದು ಮರೆಯೋಕಾಗಲ್ಲ. ಉದಾಹರಣೆಗೆ ಚೆನ್ನಬಸವಣ್ಣ. ಚೆನ್ನಬಸವಣ್ಣ ಚಿಕ್ಕೋನು ಅವನು. ಕೊನೇಲಿ ಬಂದು ಅದುಕ್ಕೆ ಒಂದು ರೂಪ ಕೊಡಕೆ ಪ್ರಯತ್ನಪಟ್ಟೋನು. ‘ಜಾತಿ ಮದುವೆ ಅನಾಚಾರ’ ಅಂತಾನಲ್ಲ. ಇದೊಂದು ಸಾಕಲ್ವ? ಇರಲಿ, ಅಂಥ ಚಳವಳೀನ ಈವತ್ಗೂ ನೆನಸ್ಕಳಕೆ ಆಗಲ್ವಲ್ಲ ನಮಗೆ. * ವಚನ ಪರಂಪರೆಯಲ್ಲಿ ಬಸವಣ್ಣನ ಧಾರೆ, ಅಲ್ಲಮನ ಧಾರೆ ಅಂತ ವಿಂಗಡಿಸಿ ನೋಡೋದಾದ್ರೆ, ನಿಮಗೆ ಯಾವ ಧಾರೆಯ ಜತೆ ಗುರ್ತಿಸಿಕೊಬೇಕು ಅನಿಸುತ್ತೆ? ಇದು ಬಲೇ ಕಷ್ಟ ಆಗುತ್ತೆ. ಮೊದಲ್ನೇದಾಗಿ ಎರಡೂ ಒಟ್ಟಿಗೆ ಹೋಗಬೇಕು ಅಂತ ಆಸೆಪಡಬೇಕು. ನನ್ನ ಆಸೆ ಈವಾಗ ಅಲ್ಲಮ, ಆಯ್ತಾ? ಆದ್ರೆ ಅಲ್ಲಮ ಒಂದು ಸ್ಪಿರಿಟ್ ಥರ. ಗಾಳಿ ಥರ. ಸಮಾಜದ ಮೇಲೆ ಅವನು ಯಾವ ಪರಿಣಾಮ ಮಾಡ್ತಾನೆ? ಯಾರು ಎನ್‌ಲೈಟನ್ಸೊ, ಅವರ ಮೇಲೆ ಪರಿಣಾಮ ಮಾಡ್ತಾನೆ. ಅವನೇನೂ ಕಟ್ಟಲ್ಲ. ಇಲ್ಲಿ ಸಮಾಜದ ಮೇಲೇನೇ ಅಲ್ಲೋಲ ಕಲ್ಲೋಲ ಆಗಬೇಕಲ್ಲ, ಬದಲಾವಣೆಗಳು ಆಗಬೇಕಲ್ಲ, ಅದಕ್ಕೆ ಯಾರ್ ಕಾರಣ? ಇವತ್ತು ನಮಗೆ ಸಂತರ ಜತೆಗೆ ಒಳ್ಳೇ ರಾಜಕಾರಣೀನೂ ಬೇಕು. ಗಾಂಧಿಯಷ್ಟೇ ಅಬ್ರಾಹಿಂ ಲಿಂಕನ್ ಕೂಡ ಬೇಕು. ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಬಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ, ಅಲ್ವಾ? * ‘ಶೂನ್ಯಸಂಪಾದನೆ’ ಮೇಲೆ ಚರ್ಚೆ ಮಾಡ್ತಾ ಇದ್ದಿರಿ… ಶೂನ್ಯಸಂಪಾದನೇನ ಮೊದಲು ಸರಳವಾಗ್ ತಗೊಂಡೆ. ಸಾಹಿತ್ಯದ ದೃಷ್ಟಿಯಿಂದ ನೋಡ್‌ಬಿಟ್ಟಿದ್ದೆ. ಏನೋ ಮಾಡಬಹುದು ಅಂತ ಮಾಡ್ದೆ. ಆಮೇಲೆ ಹಂಗಲ್ಲ ಅನಸ್ತು. ಬೇರೆ ಬೇರೆ ಕೆಲ್ಸದಲ್ಲಿ ಸಿಗಹಾಕ್ಕಂಡು ಓದಕ್ಕಾಗ್ಲಿಲ್ಲ. * ಮಂಟೇಸ್ವಾಮಿ ಮಾದೇಶ್ವರ ಕಾವ್ಯಗಳ ಚರ್ಚೆ ಈಗ ಹೆಚ್ಚಾಗಿ ಆಗ್ತಿದೆ. ಈ ಪರಂಪರೆಗಳ ಜತೆ, ಆಧುನಿಕ ಲೇಖಕರ ಸಂಬಂಧ ಯಾವ ತರಹ ಇರಬೇಕು ಅಂತ? ಇವನ್ನ ವಸ್ತು ಥರ ಬಳಸಬಾರ್ದು. ಸುಮಾರ್ ಜನ ಏನ್ಮಾಡ್ ಬಿಡ್ತಾರೆ, ಒಂದು ಮೆಟೀರಿಯಲ್ ಅಂತ ಭಾವಿಸ್ ಬಿಡ್ತಾರೆ. ಜಾನಪದಾನ ಎಷ್ಟ್ ಜೀರ್ಣಿಸಿಕೊಳ್ಳಕೆ ಸಾಧ್ಯಾನೋ ಅಷ್ಟು ತಗೋಬೇಕು. ತಿಂದ ಆಹಾರ ಆಹಾರವಾಗೇ ಹೋಗಬಾರ್ದು. ರಕ್ತಗತ ಎಷ್ಟು ಸಾಧ್ಯವೊ ಅಷ್ಟನ್ನು ತಗಾಬೇಕು. ಇದೇ ಒಬ್ಬ ರೈಟರ್ ಮಾಡಬಹುದಾದ್ದು. ಇದೇ ಸೀಮೆಯಲ್ಲಿದ್ದ ಕುವೆಂಪು ಅವರಿಗೆ ಯಾವುದೊ ಚಾರಿತ್ರಿಕ ಕಾರಣಗಳಿಂದಾಗಿ ಈ ಪರಂಪರೆಗಳ ಜತೆ ಸಂಪರ್ಕ ಏರ್ಪಡಲಿಲ್ಲ. ಅವರಿಗೆ ಕಾದಂಬರಿ ಬರೆಯೊ ಬಗ್ಗೇನೆ ಹೀನ ಭಾವನೆಯಿತ್ತಂತೆ. ‘ಏನಪ್ಪ ಕವಿಗಳೆಲ್ಲ ಇದ್ನ ಮಾಡೋದಾ’ ಅಂತ. ಯಾಕ್ ಟಾಲ್‌ಸ್ಟಾಯ್ ಕಾದಂಬರಿ ಬರದಾ ಅಂತ ಆಮೇಲೆ ಸ್ವಲ್ಪ ಇದಾಗಿ, ಪುಣ್ಯಕ್ಕೆ ತಾವೂ ಬರೆದ್ರು. * ಪಶ್ಚಿಮದಲ್ಲಿ ಯಾವ ಲೇಖಕರು ನಿಮಗೆ ಮುಖ್ಯ ಆದ್ರು? ಹಾಂ! ಮೊದಲು ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್. ಅದರ ಬಗ್ಗೆ ಸಂಶಯ ಇಲ್ಲ. ಇತ್ತೀಚೆಗೆ ನಾನು ಮಾರ್ಕ್ವೆಜ್‌ನ ಓದಿದೆ. ಬಹಳ ಗ್ರೇಟ್ ರೈಟರ್ ಅವನು. ಸಿಕ್ಕಾಪಟ್ಟೆ ದೊಡ್ಡ ಲೇಖಕ. * ಭಾರತೀಯ ಲೇಖಕರಲ್ಲಿ..? ವೈಕಂ ಓದಿದೀನಿ. ಈಗ ‘ಪಾತುಮ್ಮಳ ಆಡು’. ‘ಒಡಲಾಳ’ದಲ್ಲಿ ಅದರ ಇನ್‌ಫುಯೆನ್ಸ್ ಇರಬಹುದು ನನಗೆ. ಪ್ರೇಮಚಂದ್ ಇನ್‌ಫುಯೆನ್ಸ್ ಇರಬಹುದು. ಇನ್‌ಫುಯೆನ್ಸ್ ಹೆಂಗೆ ಅಂತಂದ್ರೆ, ಇನ್‌ಫುಯೆನ್ಸ್ ಅಂತ ಗೊತ್ತಾದ್ರೆ ತಪುಸ್ತೀನಿ. ಗೊತ್ತಿಲ್ಲದಲೆ ಬಂದಿರೊ ಸಾಧ್ಯತೆ ಇರ್ತದೆ. * ಮಾರ್ಕ್ವೆಜ್ ಯಾಕೆ ಗ್ರೇಟ್ ಅನಿಸಿದ? ಹ್ಞೂಂ! (ತುಂಬಾ ಯೋಚಿಸಿ…) ಮೊದಲ್ನೇದಾಗಿ ಸಮುದಾಯದ ಮನಸ್ಸು ಅವನದು. ಆಮೇಲೆ ಅವನಿಗೆ ಪ್ರಸ್ತುತಾನೆ ಕತೆ ಮಾಡೋ ಅಸಾಮಾನ್ಯವಾದ ಕಲೆ ಇದೆ. ಈಗ ಯಾರೋ ಬಂದ್ರು. ನಾವಿಲ್ಲಿ ಭೇಟಿಯಾದೊ. ಈ ಥರದ್ದು ಒಂದಿದೆ ಅಂತ ಇಟ್ಕೊಳಿ.

ದೇವನೂರು ಮಹಾದೇವ Read Post »

ಅನುವಾದ

ಶರಣಾಗಿ ಬಿಡಲೆ

ಅನುವಾದಿತ ಕವಿತೆ ಮೂಲ ಕನ್ನಡ: ವಸುಂಧರಾ ಕದಲೂರು ಇಂಗ್ಲೀಷಿಗೆ: ಸಮತಾ ಆರ್. ಶರಣಾಗಿ ಬಿಡಲೆ ನಿನ್ನ ಕಂಗಳ ಪ್ರಾಮಾಣಿಕತೆ  ನನ್ನನು ಹಿಂಬಾಲಿಸುತ್ತಿದೆ. ಭದ್ರ ಕೋಟೆ ಗಟ್ಟಿ ಬೇಲಿ ಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡು ನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆ ಇನ್ನೆಷ್ಟು ಕಾಲ ಕಿವುಡಾಗಿರಲಿ ಹಾದಿ ಮರೆವ ಮುನ್ನ ನಾಕು ಹೆಜ್ಜೆ ನಡೆದು ಬರಲೆ ಹನಿ ಮುತ್ತು ಜಲಗರ್ಭದ ಚಿಪ್ಪೊಳಗೆ ಕಾಣೆಯಾಗಲು ಬಿಡಬೇಡ ಮುಳುಗಿ ತೆಗೆ ಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿ ಹೃದಯದಲಿ ನಯವಾಗಿ ನವುರಾಗಿ ಲಯವಾಗಿ ಕಂಪನ ಎಬ್ಬಿಸುತ್ತಿವೆ. ದುಬಾರಿ ಕಾಲ ಸಾಬೀತು  ಪಡಿಸುತ್ತಿದೆ ಕ್ಷಣಕ್ಕೊಮ್ಮೆ ಜಾರಿಹೋದ ನೆನಪುಗಳ ಈಟಿಯಿಂದ ಇರಿಯುತ್ತಾ. ನಾನು ಶರಣಾಗಿ ಬಿಡಲೆ ನಾನೂ ಶರಣಾಗಿ ಬಿಡಲೆ ————————– SHALL    I    SURRENDER The honest yearning of your eyesIs haunting me across,Destructing all the fortress’ and barricades,Now knocking at my heart. You kneel down,You too kneel down. I can’t keep all those whispersUnheard anymore,Shall I tread a few more stepsBefore the path fades. A murmur says to dive deepAnd pick the pearl drop,Before it gets trappedIn the oyster of an aquatic womb. All the echoes are transversingTo reach my heart,And trembling itWith a soft tender rhythm. The precious spear of timeIs piercing me hard,to proveThe innocence of bygone memories,Moment by moment. Shall I get surrenderedShall I too get surrendered. *******************

ಶರಣಾಗಿ ಬಿಡಲೆ Read Post »

ಪುಸ್ತಕ ಸಂಗಾತಿ

ಮೌನಯುದ್ಧ

ಪುಸ್ತಕ ಪರಿಚಯ ಮೌನ ಯುದ್ದ(ಕವನಸಂಕಲನ) ಕವಿ: ಸುರೇಶ್ ಎಲ್. ರಾಜಮಾನೆ ಪ್ರಕಾಶನ: ವಿಶ್ವ ಖುಷಿ ಪ್ರಕಾಶನ, ನವನಗರ ಬಾಗಲಕೋಟ. ಪುಟಗಳು: 92  ಬೆಲೆ: 120/- ಪ್ರಕಟಿತ ವರ್ಷ: 2018 ಕವಿಯ ಸಂಪರ್ಕ ಸಂಖ್ಯೆ: 8105631055          ಗಂಭೀರ ಕಾವ್ಯಾಧ್ಯಯನ ಮೂಲಕ ನಿರಂತರ ಅನುಸಂಧಾನದಲ್ಲಿ ತೊಡಗಿ ಕಾವ್ಯ ರಚನೆ ಕೃಷಿಗೆ ಮುಂದಾಗಿರುವ ರನ್ನಬೆಳಗಲಿಯ ಯುವಕವಿ ಸುರೇಶ್ ರಾಜಮಾನೆಯವರು “ಸುಡುವ ಬೆಂಕಿಯ ನಗು” ಎನ್ನುವ ಕೃತಿಯನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಈಗ “ಮೌನಯುದ್ಧ”ದ ಮೂಲಕ ನಮ್ಮೊಂದಿಗೆ ಮಾತಿಗಿಳಿದಿದ್ದಾರೆ.          ಇಲ್ಲಿ ಕವಿ ಹೇಳುವಂತೆ ‘ನನ್ನ ಭಾವನೆಗಳೊಂದಿಗೆ ಮತ್ತೊಬ್ಬರ ಭಾವನೆಗಳನ್ನು ಮನಸ್ಸಿಗೆಳೆದುಕೊಂಡು ಮಾತಾಗುತ್ತೇನೆ, ಕವಿತೆಯ ಜೊತೆ ನಾನು ನಾನಾಗಿ ಹೋಗುತ್ತೆನೆ. ಭಾವವನ್ನು ಪ್ರೀತಿಸುವಷ್ಟೆ ಭಾವೊದ್ವೇಗವನ್ನು, ಸಂತೋಷವನ್ನು ಪ್ರೀತಿಸುವಷ್ಟೆ ಸಂಕಟವನ್ನು ಪ್ರೀತಿಸಬೇಕೆಂದು’ ಹೇಳುವ ಕವಿಯ ಮಾತು ಹೃದಯಸ್ಪರ್ಶಿಯಾಗಿದೆ. ‘ಬಾಚಿದಷ್ಟು ಅಗಲವಾದ ಹೆಗಲು ಬಗೆದಷ್ಟು ಭಾರವಾದ ಭಾವನೆಗಳ ಒಡಲು ನನ್ನ ಕವಿತೆ’ ಎನ್ನುವ ಕವಿ ಮನಸ್ಸು ‘ಅಂಗಳದಿ ಮಲ್ಲಿಗೆ ಬಾಡಿ ನಿಂತಿದೆ ಮೆಲ್ಲಗೆ ವಿಷದ ನೀರೆರೆದವರು ಯಾರು?’ ಎಂದು ಪ್ರಶ್ನಿಸುತ್ತದೆ. ‘ಬೆಳಗಲಿ ದೀಪ ಬಡವರ ಬಾಗಿಲಲಿ ಗುಡಿಸಲಿನಲಿ’ ಎಂದು ನಿರೀಕ್ಷಿಸುತ್ತದೆ.          “ಮೌನಯುದ್ಧ” ಕವನ ಸಂಗ್ರಹದಲ್ಲಿ ಓಟ್ಟು 56 ಕವಿತೆಗಳಿವೆ. ಕವಿ ಡಾ. ಟಿ. ಯಲ್ಲಪ್ಪ ಅವರ ಮೌಲಿಕವಾದ ಮುನ್ನುಡಿ ಹಾಗೂ ಗುರುಮಾತೆ ಲಲಿತಾ ಹೊಸಪ್ಯಾಟಿ ಅವರ ಬೆನ್ನುಡಿ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರ ನೋವು, ನಿರಾಶೆ, ಹಸಿವು, ಬಡತನ, ಪ್ರೀತಿ-ಪ್ರೇಮ ಹಾಗೂ ಮಾನವೀಯ ಸಂವೇದನೆಗಳು ಕವಿಯ ಜೀವನ ಸಂಗ್ರಾಮದ ಏರಿಳಿತಗಳು ಇಲ್ಲಿನ ಕವಿತೆಗಳ ವಸ್ತು-ವಿಷಯಗಳಾಗಿವೆ.           ವರಕವಿ ಬೆಂದ್ರೆ ಅವರ ಗಾಢ ಪ್ರಭಾವಕ್ಕೆ ಒಳಗಾದ ಎಲ್ಲಾರ್ ಸೂರ್ಯ ಅವರು ‘ನನ್ನೊಳಗಿನ ನಾನು’ ಕವಿತೆಯಲ್ಲಿ ಅಪ್ಪನ ಹಸಿವು ಬಡತನದ ನೆನಪುಗಳನ್ನು ಕವಿತೆಯಾಗಿ ಹಸಿರಾಗಿಸಿದ್ದಾರೆ. ‘ಮಗುವಿನ ನಗುವಿನ ಗೆದ್ದಷ್ಟು ಖುಷಿ ಹಸಿವಿನ ಹೊಟ್ಟೆಗೆ ಉಂಡಷ್ಟು ಖುಷಿ’ ಎನ್ನುವ ಕವಿ ನೈಜ ಬದುಕಿನ ವಾಸ್ತವಿಕತೆಯನ್ನು ಓದುಗರೆದುರು ಬಿಚ್ಚಿಡುತ್ತಾರೆ. ಹಾಗೆಯೇ ನೀರಾಭರಣ ಸುಂದರಿ, ಸ್ವರಭಾರ, ಹೊಟ್ಟೆಯೊಳಗಿನ ಉರಿ ಹಾಗೂ ನನ್ನವ್ವ ಕವಿತೆಗಳು ಓದುಗರನ್ನು ಚಿಂತನೆಗೆ ತೊಡಗಿಸುತ್ತವೆ.          ಸಾಮಾಜಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಕವಿಹೃದಯ “ಮೌನಯುದ್ಧ”ಕ್ಕೆ ಸಿದ್ಧವಾಗಿದೆ. ‘ಸಾಹಸ ಭೀಮ ಶಕ್ತಿಯನು ಸಾಗರವಾಗಿಸಿ ವಿಜಯದ ಕಹಳೆಯ ಮುಗಿಲ ಮುಟ್ಟಿಸಿ’ ಎನ್ನುವಲ್ಲಿ ಶಕ್ತಿಕವಿ ರನ್ನನ ಪ್ರಭಾವ ಎದ್ದು ಕಾಣುತ್ತದೆ.‍          ಕಾವ್ಯದ ಅಂತಃಸತ್ವವನ್ನು ಹೀರಿ ಮೌಲಿಕ ಕವಿತೆಗಳನ್ನು ಬರೆಯುವ ಕವಿ ಸುರೇಶ್ ರಾಜಮಾನೆಯವರಿಗೆ ಬರುವ ನಾಳೆಗಳಲ್ಲಿ ಉಜ್ವಲ ಭವಿಷ್ಯವಿದೆ. ************************ ಬಾಪು ಖಾಡೆ

ಮೌನಯುದ್ಧ Read Post »

ಕಥಾಗುಚ್ಛ

ಅಮ್ಮಿಣಿ

ಕಿರುಗಥೆ ಕೆ. ಎ. ಎಂ. ಅನ್ಸಾರಿ ಅಮ್ಮಿಣಿಗೆ ಒಂದೇ ಚಿಂತೆ… ಸೂರ್ಯೋದಯಕ್ಕೆ ಮೊದಲೇ ಹೊರಡುವ ಗಂಡ ಸುಂದ ವಾಪಸ್ಸು ಬರುವಾಗ ಕತ್ತಲೆಯಾಗುತ್ತದೆ. ಖಂಡಿತಾ ಅವನು ಹೆಚ್ಚಿನ ಸಮಯ ಲಚ್ಚಿಮಿ ಯ ಗುಡಿಸಲಲ್ಲೇ ಕಳೆಯುತ್ತಿರಬಹುದು.  ರಾತ್ರಿ ತನ್ನ ಗುಡಿಸಲು ಸೇರಿದರೆ ಗದ್ದಲ ಬೇರೆ. ಸಾರಾಯಿ ಏರಿಸದೆ ಒಂದು ದಿನವೂ ಬಂದದ್ದಿಲ್ಲ. ಹಾಗೆಂದು ಮನೆ ಖರ್ಚಿಗೆ ಕೊಡುವುದಿಲ್ಲ ಎಂದಲ್ಲ. ಮಕ್ಕಳ ಮೇಲೆ ಪ್ರೀತಿಯಿದೆ .. ಆದರೂ ಆ ಲಚ್ಚಿಮಿ ಯ ಗುಡಿಸಲಲ್ಲಿ ಅವನಿಗೆ ಏನು ಇಷ್ಟು ಕೆಲಸ .. ? ಸೌಂದರ್ಯ ದಲ್ಲಿ ನಾನು ಅವಳಿಗಿಂತ ಕಮ್ಮಿಯೂ ಇಲ್ಲ ಅವಳಾದರೂ ಕರ್ರಗೆ ಕೋಲು ಮುಖದವಳು… ಗಂಡ ಸತ್ತ ಮೇಲೆ ಕೂಲಿ ನಾಲಿ ಮಾಡಿ ಜೀವಿಸುವವಳು. ಇರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಆ ಸಂಪಾದನೆ ಸಾಕೇ ..? ತನ್ನ ಗಂಡ ಸುಂದ ಅವಳಿಗೂ ಖರ್ಚಿಗೆ ಕೊಡುತ್ತಿರಬಹುದೋ…  ?ಅಮ್ಮಿಣಿ ಹೊಸ್ತಿಲಲ್ಲಿ ಕೂತು ಚಿಂತಿಸುತ್ತಲೇ ಇದ್ದಳು. ಅಂಗಳದಲ್ಲಿ ಹಾಸಿದ್ದ ಓಲೆಬೆಲ್ಲವನ್ನು ಕೋಳಿ ಬಂದು ತಿನ್ನದೊಡಗಿದ್ದು ಅಮ್ಮಿಣಿಗೆ ಗೊತ್ತೇ ಆಗಲಿಲ್ಲ. ಪಕ್ಕದ ಮನೆ  ಜಾನಕಿ ಬಂದು ಕೋಳಿಯನ್ನು ಸುಯ್ ಸುಯ್ ಎಂದು ಓಡಿಸುತ್ತಲೇ .. ಅಮ್ಮಿಣಿ  ನೀನು ಏನು ಯೋಚನೆ ಮಾಡ್ತಾ ಇದ್ದೀಯಾ … ಓಲೆ ಬೆಲ್ಲ ಅರ್ಧವೂ ಕೋಳಿ ತಿಂದಾಯಿತು ಎನ್ನುವಾಗಲೇ ಎಚ್ಚರಗೊಂಡು ಎದ್ದು ಬಂದಳು. ಇಬ್ಬರೂ ಮಣೆ ಹಾಕಿ ಕುಳಿತು ಮಾತಿಗೆ ತೊಡಗಿದರು. ಅಲ್ಲ ಜಾನಕಿ .. ಈ ಸುಂದ ಹೋಗಿ ಹೋಗಿ ಆ ಮುಂಡೆ ಲಚ್ಚಿಮಿಯ ಹತ್ತಿರ ಕೂರುತ್ತಾನಲ್ಲ .. ಇದನ್ನು ಹೇಗೆ ತಡೆಯುವುದು  ಎನ್ನುವ ಪ್ರಶ್ನೆಗೆ ಈ ಮೊದಲೇ ವಿಷಯ  ಗೊತ್ತಿದ್ದ ಜಾನಕಿ ಏನೂ ಉತ್ತರಿಸಲಿಲ್ಲ. ಲಚ್ಚಿಮಿ  ಏನೂ ಅಪರಿಚಿತೆಯಲ್ಲ . ಜಾನಕಿಗೆ ದೂರದ ಸಂಬಂದಿ ಕೂಡಾ ಹೌದು.  ಸುಂದ ಮತ್ತು ಲಚ್ಚಿಮಿಯ ನಡುವಿನ ಸಂಬಂಧ ಊರಲ್ಲಿ ಕೂಡಾ ಎಲ್ಲರಿಗೂ ಗೊತ್ತಿರೋ ವಿಷಯವೇ.. ಬೆಳ್ಳಂಬೆಳಿಗ್ಗೆ ತಾಳೆಗೆ ಏರಲೆಂದು ಸುಂದ ಕತ್ತಿ, ಕೊಡ ತೋಳಿಗೇರಿಸಿ ನಡೆದರೆ ವಾಪಸಾಗುವುದು ಸಂಜೆ ಆರರ ನಂತರವೇ.. ಮಧ್ಯಾಹ್ನದ ಊಟ ಕೂಡಾ ಅಲ್ಲಿಯೇ .. “ಅಮ್ಮಿಣಿ … ನಾನೊಂದು ವಿಷಯ ಹೇಳುತ್ತೇನೆ. ನಿನಗದು ಬೇಜಾರು ಆಗಬಹುದು ಆದರೆ ನಾಳೆಯಾದರೂ ನಿನಗೆ ತಿಳಿದೇ ತಿಳಿಯುತ್ತದೆ ಮಾತ್ರವಲ್ಲ ತಿಳಿದಿರಲೇ ಬೇಕು ” …  ತಾ ಕೂತಿದ್ದ ಮಣೆಯನ್ನು ಎಡಗೈಯಿಂದ  ಲಚ್ಚಿಮಿಯ ನೂಕಿ ಇನ್ನೂ ಹತ್ತಿರ ಕುಳಿತಳು ಜಾನಕಿ. ಅಮ್ಮಿಣಿಗೂ  ಕುತೂಹಲ … ಆಕೆ ಮೆತ್ತಗೆ ಕಿವಿಯಲ್ಲಿ .. “ಆ ಲಚ್ಚಿಮಿಗೆ ಈಗ ತಿಂಗಳು ಒಂಭತ್ತು ಅಂತೆ. ನಿನ್ನೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಳಂತೆ. ಈ ತಿಂಗಳ ಕೊನೆಗೆ ಹೆರಿಗೆಯ ತಾರೀಕು ಕೊಟ್ಟಿದ್ದಾರಂತೆ … “ ಅಮ್ಮಿಣಿಗೆ ದುಃಖ ಉಮ್ಮಳಿಸಿ ಬಂತು. ದಿನವೂ ರಾತ್ರಿ ಜಗಳ ಮಾಡುವುದೊಂದೇ ಬಂತು. ತನ್ನ ಯಾವ ಮಾತನ್ನೂ ಕೇಳಿಸಿಕೊಳ್ಳುವ ಗೋಜಿಗೂ ಹೋಗದ ನೀಚ ನನ್ನ ಸುಂದ ಎನ್ನುತ್ತಾ ಕಣ್ಣೀರು ಹಾಕಿದಳು. ಇಂದು ರಾತ್ರಿ ತೀರ್ಮಾನಕ್ಕೆ ಒಂದು ಬರಲೇ ಬೇಕು … ಒಂದೋ ನಾನು ಇಲ್ಲ ಅವಳು .. ಮಧ್ಯಾಹ್ನ ದ ಊಟವೂ ಹೊಟ್ಟೆಗೆ ಹತ್ತಲಿಲ್ಲ …. ಅಂಗಳದಲ್ಲೇ ತಾಳೆಬೆಲ್ಲ ಒಣಗಿಸುತ್ತಾ ಕೂತಿದ್ದಳು .  ಮುಸ್ಸಂಜೆಯ ಹೊತ್ತು ಸುಂದ ಅಂಗಳಕ್ಕೆ ಕಾಲಿಟ್ಟ .. ಸಾರಾಯಿ ವಾಸನೆ ಮೂಗಿಗೆ ಬಡಿಯುತ್ತಲೇ ಇತ್ತು. ಸುಂದನನ್ನು ಒಮ್ಮೆಲೇ ಪ್ರಶ್ನಿಸುವಷ್ಟು ಧೈರ್ಯ ಅಮ್ಮಿಣಿಗೆ ಇರಲಿಲ್ಲ. ಅಮ್ಮಿಣಿ .. ನಾಳೆ 250 ಬೆಲ್ಲ ಪೇಟೆಯ ನಾಯ್ಕರ ಅಂಗಡಿಗೆ ಬೇಕು.. ಕಟ್ಟ ಒಂದಕ್ಕೆ ಹತ್ತರಂತೆ 25 ಕಟ್ಟ ಮಾಡಿಡು. 500 ರೂಪಾಯಿ ಕೊಟ್ಟಿದ್ದಾನೆ. ಉಳಿದದ್ದು ಅಂಗಡಿಯಲ್ಲಿ ಕೊಡುತ್ತಾನೆ. ಈ ಐನೂರು ನೀನೇ ಇಟ್ಟುಕೋ ನನ್ನಲ್ಲಿ ಇಟ್ಟರೆ ಖರ್ಚಾಗಬಹುದು ಎನ್ನುತ್ತಾ ಐನೂರರ ಗರಿ ನೋಟು ಅಮ್ಮಿಣಿಯ ಕೈಗಿಟ್ಟ … ಅಮ್ಮಿಣಿಯ ಕೋಪ ಒಮ್ಮೆಲೇ ಇಳಿಯಿತು. ಇಂದು ಕೇಳುವುದು ಬೇಡ ಎಂದು ತೀರ್ಮಾನಿಸಿ ರಾತ್ರಿಯ ಊಟಕ್ಕೆ ತಯಾರಿ ಮಾಡಲು ಅಡುಗೆ ಮನೆಯತ್ತ ಹೊರಟಳು. ಅಮ್ಮಿಣಿಯ ಚಿಂತೆ ಇನ್ನೂ ದೂರವಾಗಲಿಲ್ಲ. ರಾತ್ರಿ ಊಟವೂ ಆಯಿತು. ಮಕ್ಕಳಿಬ್ಬರೂ ಉಂಡು ಮಲಗಿಯೂ ಆಯಿತು… ಅವನಾಗಿ ಕರೆಯದೆ ಎಂದೂ ಅಮ್ಮಿಣಿ ಆತನ ಬಳಿ ಹೋದವಳಲ್ಲ. ಇಂದು ಸುಂದ ಕರೆಯದಿದ್ದರೂ ಮೆಲ್ಲನೆ ಆತನ ಬಳಿ ಮಲಗಿದಳು ಅಮ್ಮಿಣಿ. ಆತ ಗೊರಕೆ ಹೊಡೆಯುತ್ತಲಿದ್ದ. ಹೇಗೆ ಆರಂಭಿಸುವುದು ಎಂದು ತಿಳಿಯದೆ ಮೆತ್ತಗೆ ಆತನ ಎದೆಯನ್ನು ಸವರತೊಡಗಿದಳು. ಥಟ್ಟನೆ ಎದ್ದು ಕೂತ ಸುಂದ… ಆಹಾ.. ಇವತ್ತೇನು ವಿಷ್ಯಾ… ಸೂರ್ಯ ಪಶ್ಚಿಮದಲ್ಲಿ ಮೂಡಿದ್ದಾನೋ.. ಅಥವಾ ಐನೂರಕ್ಕೆ ಋಣವೋ… ಎಂದು ಮೆತ್ತಗೆ ನಕ್ಕ. “ಅಲ್ಲ ಸುಂದ .. ನನಗೂ ತಾಳೆ ಮರ ಏರುವುದು ಗೊತ್ತು.. ನಾಳೆಯಿಂದ ನಾನೂ ನಿನ್ನೊಂದಿಗೆ ಬರಲಾ …” ಕೂತಿದ್ದ ಸುಂದ ಒಮ್ಮೆಲೇ ನಿಂತು… ನೀ ನನ್ನೊಟ್ಟಿಗೆ ಬಂದ್ರೆ ಮಕ್ಕಳನ್ನು ನಿನ್ನಪ್ಪ ಬಂದು ನೋಡ್ತಾನಾ ಎಂದು ಗುಡುಗಿದ. ಅಮ್ಮಿಣಿ ಶಾಂತವಾಗಿ… “ಮಕ್ಕಳನ್ನು ಸಂಜೆ ತನಕ ನೋಡಿಕೊಳ್ಳುವೆ ಎಂದು ಅಮ್ಮ ಒಪ್ಪಿದ್ದಾಳೆ,,”. ಎಂದಾಗ ಕೋಪ ಇನ್ನೂ ನೆತ್ತಿಗೇರಿತ್ತು. ಅಮ್ಮಿಣಿ ಯನ್ನು ತಳ್ಳಿ ಹಾಕಿ ಚಾವಡಿಯಲ್ಲಿ ಕೂತು ಬೀಡಿಗೆ ಬೆಂಕಿ ಹಚ್ಚಿ ಬಯ್ಯುತ್ತಾ ಕುಳಿತ.. ಅಮ್ಮಿಣಿ ಒಬ್ಬಳೇ ಮಕ್ಕಳ ಬಳಿ ಹೋಗಿ ಮಲಗಿ ಅಳುತ್ತಲೇ ನಿದ್ದೆಗೆ ಜಾರಿದಳು. ಬೆಳಗ್ಗೆ ಸುಂದ ಚಾವಡಿಯಲ್ಲೇ ಮಲಗಿದ್ದ. ಆತನ ಕೋಪ ಇಳಿದಿತ್ತು. ಬೆಳಗ್ಗಿನ ತಿಂಡಿ ತಿನ್ನುತ್ತಲೇ ಮಕ್ಕಳನ್ನು ತನ್ನ ಹತ್ತಿರ ಕುಳ್ಳಿರಿಸಿ ಅವರಿಗೂ ತಿನ್ನಿಸುತ್ತಾ … ಅಮ್ಮಿಣಿ ಎಂದು ಪ್ರೀತಿಯಿಂದ ಕರೆದ. ಅಮ್ಮಿಣಿಗೂ ಆಶ್ಚರ್ಯ.. ಎಂದೂ ಹೀಗೆ ಪ್ರೀತಿಯಿಂದ ಕರೆದವನೋ ಮಾತನಾಡಿಸಿದವನೋ ಅಲ್ಲ. ಸಂಜೆಯಾದರೆ ಬೈಗುಳ. ಮಕ್ಕಳೊಡನೆ ಮಾತ್ರ ಮಾತುಕತೆ.. ಅಮ್ಮಿಣಿ ಒಲೆಗೆ ನಾಲ್ಕು ಸೌದೆ ತುರುಕಿಸಿ ಸೆರಗನ್ನು ಸರಿಮಾಡುತ್ತಾ… ” ಹಾ ಬಂದೆ”  ಎಂದು ಆತನ ಬಳಿ ಹೋಗಿ ಕುಳಿತಳು. ಸುಂದ ಏನೋ ಖುಷಿಯಲ್ಲಿದ್ದ. “ಅಮ್ಮಿಣಿ…  ನೋಡು ಕುಟ್ಟಿಗೌಡ ತನ್ನ ಎಂಟು ತಾಳೆಗಳನ್ನು ನನಗೆ ಕೆತ್ತಲು ವಹಿಸಿಕೊಟ್ಟಿದ್ದಾನೆ. ಬರುವ ವಾರದಿಂದ ಕೆಲಸ ಜಾಸ್ತಿ ಇರಬಹುದು. ಎಲ್ಲಾ ತಾಳೆಗೂ ಇವತ್ತಿಂದಲೇ ಬಿದಿರ ಏಣಿ ಕಟ್ಟಲು ತೊಡಗುತ್ತೇನೆ. ಪೇಟೆಯಲ್ಲೂ ತಾಳೆ ಬೆಲ್ಲಕ್ಕೆ ಡಿಮಾಂಡು ಈಗೀಗ ಜಾಸ್ತಿ ಆಗುತ್ತಿದೆ. ಬರುವ ವಾರದಿಂದ ನಿನ್ನನ್ನೂ ಕರಕೊಂಡು ಹೋಗುತ್ತೇನೆ..”. ಅಮ್ಮಿಣಿ ನಕ್ಕಳು… ಅವಳ ಉತ್ತರಕ್ಕೂ ಕಾಯದೆ ಚಾ ಹೀರುತ್ತಾ ಸುಂದ ಹೊರಡಲು ನಿಂತ. ಲೋಟ ಖಾಲಿಯಾಗುತ್ತಲೇ ಗೋಡೆಯಲ್ಲಿ ತೂಗು ಹಾಕಿದ್ದ ಕತ್ತಿ, ಕೊಡವನ್ನು ಎತ್ತಿ ಹೆಗಲಿಗೇರಿಸಿ ಸುಂದ ಅಂಗಳ ದಾಟಿ ಹೊರಟೇ ಬಿಟ್ಟ. ಅಮ್ಮಿಣಿ ಚಾವಡಿಯಲ್ಲಿ ಕೂತು ಆತನ ನಡಿಗೆಯನ್ನೇ ನೋಡುತ್ತಾ ಕುಳಿತಳು. ದಿನಗಳುರುಳಿತು… ಸುಂದನೊಂದಿಗೆ ಅಮ್ಮಿಣಿಯೂ  ಕೆಲಸಕ್ಕೆ ಹೋಗಲು ಶುರುಮಾಡಿದ್ದಳು. ಹೋಗುವ ದಾರಿಯಲ್ಲೇ ಲಚ್ಚಿಮಿಯ ಮನೆ.  ಅಮ್ಮಿಣಿಯ ಕಣ್ಣು ಆ ಕಡೆ ನೋಡುತ್ತಲೇ ಇತ್ತು. ಗುಡಿಸಲಿಗೆ ಬೀಗ ಜಡಿದಿತ್ತು. ಸಂಜೆಯ ಒಳಗಡೆ ಇಬ್ಬರೂ ಜೊತೆಯಾಗಿ ವಾಪಸ್ಸಾಗುತ್ತಿದ್ದರು. ಸಂಜೆ ಬಂದು ಬಾಣಲೆಗೆ ಹಾಕಿ ಕಳ್ಳು ಬೇಯಿಸತೊಡಗಿದರೆ ಮಧ್ಯರಾತ್ರಿಯ ವರೆಗೂ ಮುಂದುವರಿಯುತ್ತಿತ್ತು. ಅಮ್ಮ ಬಂದು ಸಹಾಯಕ್ಕೆ ನಿಂತಿದ್ದ ಕಾರಣ ಬೆಲ್ಲ ಒಣಗಿಸುವ ಮತ್ತು ಮಕ್ಕಳನ್ನು ನೋಡುವ ಜವಾಬ್ದಾರಿ ಆಕೆಯೇ ವಹಿಸಿಕೊಂಡಂತಾಗಿತ್ತು. ಅದೊಂದು ದಿನ ಬೆಳಿಗ್ಗೆ ಹೊರಟಾಗ ಲಚ್ಚಿಮಿಯ ಗುಡಿಸಲು ತೆರೆದಿತ್ತು. ಮನೆಯಲ್ಲಿ ಪುಟ್ಟ ಮಗುವಿನ ಅಳುವೂ ಕೇಳಿಸುತ್ತಿತ್ತು. ಸುಂದ ಒಂದು ನಿಮಿಷ ಅಲ್ಲೇ ನಿಂತ. ಅಮ್ಮಿಣಿ ಕೋಪದಿಂದ ನಡೀರಿ ಮುಂದೆ ಎನ್ನುತ್ತಾ ದೂಡಿದಳು. ಸುಂದ ಮನಸ್ಸಿಲ್ಲದ ಮನಸ್ಸಿನಿಂದ ಮುಂದೆ ನಡೆಯುತ್ತಿದ್ದ. ಸುಂದ ಮಂಕಾಗಿದ್ದ. ನಾಲ್ಕು ತಾಳೆಮರಕ್ಕೆ ಏರಿದವನು ಸುಸ್ತಾಗಿ ಕೆಳಗೆ ಮಲಗಿದ್ದ. ನಂತರ ಈಗ ಬರುತ್ತೇನೆ ಎಂದು ಹೋದವ ಒಂದು ಗಂಟೆ ಕಾದರೂ ವಾಪಸ್ಸಾಗಲಿಲ್ಲ. ಅಮ್ಮಿಣಿಯ ಕೋಪ ನೆತ್ತಿಗೇರಿತ್ತು… ನೇರವಾಗಿ ಲಚ್ಚಿಮಿಯ ಮನೆಗೆ ಹೆಜ್ಜೆ ಹಾಕಿದಳು. ಸುಂದ ಅದೇ ಗುಡಿಸಲಲ್ಲಿದ್ದ… !!!. ಒಂದುವಾರದ ಹಾಲುಗಲ್ಲದ  ಮಗು ತೊಟ್ಟಿಲಲ್ಲಿ ನಿದ್ರಿಸುತ್ತಿತ್ತು. ಬಾಣಂತಿ ಲಚ್ಚಿಮಿ ಕೂತಿದ್ದಳು. ಅಮ್ಮಿಣಿ ಜೋರಾಗಿ ಕಿರುಚಲು ಪ್ರಾರಂಭಿಸಿದಳು. ಮುಂಡೆ.. ನಿನಗೆ ಇಟ್ಟುಕೊಳ್ಳಲು ನನ್ನ ಗಂಡ ಮಾತ್ರ ಸಿಕ್ಕಿದ್ದಾ… ಹಿಡಿಶಾಪ ಹಾಕುತ್ತಾ ಸುಂದನ ಕೈ ಹಿಡಿದು ಎಳೆಯುತ್ತಾ ಕರೆತಂದಳು. ಲಚ್ಚಿಮಿ ಮಾತನಾಡಲಿಲ್ಲ. ಆದರೆ ಅಳುತ್ತಲೇ ಇದ್ದಳು. ಬಾಣಂತಿ ಹೆಣ್ಣು.. ತನ್ನವರೆಂದು ಆಕೆಗೆ ಯಾರೂ ಇರಲಿಲ್ಲ. ಸುಂದನ ಸಾರಾಯಿ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಅಮ್ಮಿಣಿಗೆ ಈಗ ಇದೊಂದು ಚಿಂತೆ ಬೇರೆ. ಜೊತೆಯಾಗಿ ಹೋಗುವುದೇನೋ ಸರಿ ಆದರೆ ಮಾತಿಲ್ಲ. ಎಲ್ಲವೂ ಕಳೆದುಕೊಂಡವನಂತೆ ಆಲೋಚನೆ ಮಾಡುತ್ತಲೇ ಇರುತ್ತಿದ್ದ. ಒಂದು ಬೆಳಿಗ್ಗೆ ಸುಂದ ಏಳಲೇ ಇಲ್ಲ… !. ಮಾತಿಲ್ಲ. ಎದ್ದೇಳಲೂ ಆಗುತ್ತಿಲ್ಲ.. ಬಲಗೈ ಮತ್ತು ಬಲಗಾಲು ಸ್ವಾಧೀನವನ್ನೂ ಕಳೆದುಕೊಂಡಿತ್ತು.. !. ವೈದ್ಯರು ಬಂದು ಪರೀಕ್ಷೆ ಮಾಡಿಯಾಯಿತು. ದಿನ ಮೂರಾಯಿತು…. ಸುಂದ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ ಎಂದು ಆತನ ಕಣ್ಣುಸನ್ನೆಯಿಂದ ಅರ್ಥವಾಗುತ್ತಿತ್ತು. ಗಂಡ ಮಲಗಿದ್ದಾನೆ.. ತಾನೂ ಮನೆಯಲ್ಲಿ ಕೂತರೆ ಜೀವನ ರಥ ಸಾಗುವುದಾದರೂ ಹೇಗೆ.. ? ಇಂದಿಗೆ ದಿನಗಳು ನಾಲ್ಕಾಯಿತು… ಅಮ್ಮಿಣಿ ನೇರ ತಾಳೆ ಮರದತ್ತ ಹೊರಟಳು. ದಾರಿಯಲ್ಲಿ ನಡೆವಾಗ ಲಚ್ಚಿಮಿಯ ಮನೆಯತ್ತ ನೋಡಲು ಮರೆಯಲಿಲ್ಲ. ಬಾಣಂತಿ ಹೆಣ್ಣು ಅಂಗಳದಲ್ಲಿ ಭತ್ತ ಕುಟ್ಟುತ್ತಲಿದ್ದಳು. ಅಮ್ಮಿಣಿ ಕಂಡೂ ಕಾಣದವಳಂತೆ ಮುಂದೆ ನಡೆದಳು. ಮುಸ್ಸಂಜೆಯಾಯಿತು. ಪೇಟೆಯಿಂದ ಸಾಮಾನು ಮತ್ತು ಒಂದಿಷ್ಟು ಬಟ್ಟೆ ಬರೆಗಳನ್ನೂ ಖರೀದಿಸಿ ಮನೆಗೆ ವಾಪಸ್ಸಾದಳು. ಅಮ್ಮನಲ್ಲಿ ನಾಟಿಕೋಳಿಯೊಂದನ್ನು ಸಾರುಮಾಡಲು ತಿಳಿಸಿ ಹೋಗಲು ಮರೆಯಲಿಲ್ಲ. ಸುಂದ ಅಸಹಾಯಕನಾಗಿ ಅಮ್ಮಿಣಿಯನ್ನೇ ನೋಡುತ್ತಲಿದ್ದ. ಮುಸ್ಸಂಜೆಯಾಯಿತು. ಅಮ್ಮಿಣಿ ಸುಂದನ ಬಳಿ ಬಂದು ಚಿಮಿಣಿ ದೀಪದ ಬೆಳಕು ಏರಿಸುತ್ತಾ… “ಸುಂದ… ನೋಡು ಯಾರು ಬಂದಿದ್ದಾರೆ…,,,” ಎಂದಳು. ಇವರೆಲ್ಲಾ ಇನ್ನು ನಮ್ಮೊಂದಿಗೇ ಇರುತ್ತಾರೆ ಎನ್ನುತ್ತಾ ಹಾಲುಕಂದನನ್ನು ಎದೆಗಪ್ಪಿ ಮುದ್ದಿಸುತ್ತಾ ಸುಂದನ ಮಡಿಲಲ್ಲಿಟ್ಟು ನಗತೊಡಗಿದಳು. ನಗುವಿನ ಹಿಂದೆ ನೂರಾರು ನೋವುಗಳಿತ್ತು. ಸುಂದನ ಕಣ್ಣಿಂದ ಹರಿವ ನೀರು ಲಚ್ಚಿಮಿಗೂ ಸಮಾಧಾನ ಹೇಳುವಂತಿತ್ತು. ********

ಅಮ್ಮಿಣಿ Read Post »

ಇತರೆ

ಸಾಹಿತ್ಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ

ಚರ್ಚೆ (ಈ ಲೇಖನದಲ್ಲಿ ಪ್ರಸ್ತಾಪಿಸಲಾದ ಅಂಶಗಳ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸಲು ಬಯಸುವಿರಾದರೆ ನಿಮ್ಮಬರಹಗಳನ್ನು ಕಳಿಸಬಹುದು-ಸಂ) ಚಂದಕಚರ್ಲ ರಮೇಶ ಬಾಬು ಸಾಹಿತ್ಯದ ಹರಿವು ಬಾಯಿ ಮಾತಿನಿಂದ ಹಿಡಿದು, ಬರವಣಿಗೆ, ಮುದ್ರಣ, ಪುಸ್ತಕ ವಿತರಣ, ಪುಸ್ತಕ ಭಂಡಾರಗಳಲ್ಲಿ ದಾಸ್ತಾನು ಹೀಗೆ ಅನೇಕ ವಿಧಗಳಾಗಿ ನಮಗೆ ಕಂಡಿದೆ. ಬಾಯಿಮಾತಿನಿಂದ ಹರಡಿದ ಸಾಹಿತ್ಯ ದಾಖಲೆಗೊಳ್ಳದೆ ಅನೇಕ ವಚನಗಳು, ಪದಗಳು ಮತ್ತು ಕೃತಿಗಳು ನಮಗೆ ಅಲಭ್ಯವಾಗಿವೆ. ಬರವಣಿಗೆ ಆರಂಭವಾದ ಮೇಲೆ ಈ ಅಡಚಣೆ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂದಿತು. . ತಾಳೆಗರಿಗಳ ಮೇಲೆ ಬರೆಯಲ್ಪಟ್ಟ ಮಹಾನ್ ಕೃತಿಗಳು ಮನುಕುಲಕ್ಕೆ ಓದಲು, ತಿಳಿಯಲು ಸಿಕ್ಕವು. ಆದರೆ ತೊಂದರೆ ಸಂಪೂರ‍್ಣವಾಗಿ ನೀಗಲಿಲ್ಲ. ಗರಿಗಳು ತುಂಬಾ ದಿನಗಳು ನಿಲ್ಲಲಾರದೆ ಹೋಗಿ, ಗೆದ್ದಲು, ಅಗ್ನಿ, ನೆರೆಗಳ ಹಾವಳಿಯಲ್ಲಿ ನಶಿಸಿ ಹೋಗುತ್ತಿದ್ದವು. ಮುದ್ರಣಾ ಸವಲತ್ತು ಬಂದ ಮೇಲೆ ಮುದ್ರಿಸಲ್ಪಟ್ಟ ಪುಸ್ತಕಗಳು ತುಂಬಾ ಸಮಯದ ವರೆಗೆ ಉಳಿದು ಸಾಹಿತ್ಯ ಹರಡಲು ನೆರವಾದವು. ಇಲ್ಲೂ ಅಗ್ನಿ ಮತ್ತು ನೆರೆ ಮುಂತಾದ ಹಾವಳಿಯ ಹೆದರಿಕೆ ಇದ್ದರೂ ಮರುಮುದ್ರಣದ ಅನುಕೂಲವಿರುತ್ತಿದ್ದರಿಂದ ಒಂದು ತರದ ನೆಮ್ಮದಿ ನೆಲೆಸಿತು. ಅಂತರ್ಜಾಲದ ಉಗಮವಾಗಿದ್ದು ಅದರ ವಾಣಿಜ್ಯ ವ್ಯವಹಾರಗಳ ಉಪಯೋಗದ ಜೊತೆಗೆ ಸಾಹಿತ್ಯವೂ ಈ ಮಾದ್ಯಮವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಆರಂಭಿಸಿತು. ಈ ಮಾಧ್ಯಮಕ್ಕೆ ಮತ್ತೊಂದು ಆಕರ್ಷಣೆ ಇತ್ತು. ಉಚಿತ. ಹಾಗಾಗಿ ಇದರ ಉಪಯೋಗ ಅನೇಕ ಪಟ್ಟುಗಳು ವೃದ್ಧಿಗೊಂಡಿತು. ಸ್ಥಳೀಯ ಭಾಷೆಗಳ ತಂತ್ರಾಂಶಗಳ ಆವಿಷ್ಕಾರದ ನಂತರ ಈ ಭಾಷೆಗಳಲ್ಲಿ ಸಹ ಗಣಕಗಳ ಮೇಲೆ ಬರವಣಿಗೆ ಶುರುವಾಗಿ ಅದು ಮಿಂಚಿನ ವೇಗದಲ್ಲಿ ತಲುಪಲು ನೆರವಾಗಿ ಸಾಹಿತ್ಯ ಅನೇಕ ಆಯಾಮದವರಿಗೆ ವೇಗವಾಗಿ ತಲುಪಿ, ಅದರ ಬಗ್ಗೆ ನಿರ‍್ಧಾರಗಳನ್ನು ತಗೆದುಕೊಳ್ಳಲು ಸುಲಭವಾದದ್ದಷ್ಟೇ ಅಲ್ಲದೆ ಒಂದು ಕ್ರಾಂತಿ ಬಂದ ಹಾಗಾಯಿತು. ಸರಕಾರ ಸಹ ತನ್ನದೇ ಆದ ನೆರವು ನೀಡಿ, ತಂತ್ರಾಂಶ ಬಳಸಲು ತನ್ನ ಬೆಂಬಲ ಸೂಚಿಸಿತು. ಅನೇಕ ಜನ ಬರಹಗಾರರು ಇವುಗಳನ್ನು ಕಲಿತು, ಅಳವಡಿಸಿಕೊಂಡು, ಮತ್ತೆ ಮತ್ತೆ ಬರೆದು ತಿದ್ದುವ ಕಸರತ್ತನ್ನು ಕಮ್ಮಿ ಮಾಡಿಕೊಂಡರು. ಬರೆದ ಮೂಲಪ್ರತಿಯನ್ನು ತಲುಪಿಸಲು ಅಂಚೆಯವರ ವಿಳಂಬಕ್ಕೆ ಅಥವಾ ಕಾಣೆಯಾಗುವ ಕಷ್ಟಕ್ಕೆ ನೊಂದಿದ್ದ ತಮ್ಮ ಬರಹಗಳ ಕ್ಷೇಮವಾಗಿ ತಲಪುತ್ತಿರುವುದು ಮತ್ತು ಅದು ತಮಗೆ ತಿಳಿಯುತ್ತಿರುವುದು ಕಂಡು ನಿಟ್ಟುಸಿರೆಳೆದರು. ಹಳೆಯ ಪುಸ್ತಕಗಳನ್ನು ಡಿಜಿಟಲೈಸ್ ಮಾಡಿ ಮುಂದಿನ ತಲೆಮಾರುಗಳಿಗೆ ಒದಗಿಸುವ ಅವಕಾಶ ಸಹ ಬಂದು. ಇದರಿಂದ ಅನೇಕ ಹಳೆಯ ಪುಸ್ತಕಗಳನ್ನು ಜೋಪಾನ ಮಾಡಲು ಸಾಧ್ಯವಾಗಿದೆ. ಈ ಮಾಧ್ಯಮಕ್ಕೆ ಅಂಟಿ ಬಂದ ಅದರದ್ದೇ ಆದ ಲೋಪದೋಷಗಳಿದ್ದರೂ ಅಂತರ್ಜಾಲ ತನ್ನದೇ ಒಂದು ಸ್ಥಾನ ಪಡೆದುಕೊಂಡಿತು. ಆದರೆ ಅಂತರ್ಜಾಲಕ್ಕೆ ಸಾಮಾಜಿಕ ಜಾಲತಾಣದ ಬಿರುದು ಸಿಕ್ಕಿರಲಿಲ್ಲ. ಗಣಕ ಯಂತ್ರದಲ್ಲಿ ಮಾತ್ರ ಉಪಯೋಗಿಸಬಹುದಾದ ಈ ಅಂತರ್ಜಾಲದ ಉಪಯೋಗವನ್ನು ಒಂದು ತಲೆಮಾರಿನ ಜನರು ಅದರ ಶಿಕ್ಷಣವಿಲ್ಲದೇ ಪಡೆಯಲಾರದಾದರು. ಆಗ ಬಂದಿತ್ತು ಮುಖಪುಸ್ತಕವೆನ್ನುವ ಒಂದು ಪ್ರಭಂಜನ. ಕಾಲಿಟ್ಟಾಗ ಪ್ರಭಂಜನವೆನಿಸಿಕೊಂಡಿತೋ ಇಲ್ಲವೋ ಆಗಲಿ ಅದಕ್ಕೆ ನಮ್ಮ ಭಾರತೀಯರು ಮುಗಿಬಿದ್ದದ್ದು ನೋಡಿದರೆ ಅದೊಂದು ಪಥಾನ್ವೇಷಕವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಮಾರ‍್ಕ್  ಜುಕರ್  ಬರ್ಗ್ ಅವರ ಕೂಸಾದ ಈ ಸಾಮಾಜಿಕ ಮಾಧ್ಯಮ ೨೦೦೬ ರಲ್ಲಿ ಬೆಳಕಿಗೆ ಬಂತು. ಬೇಕಾದ ಮಾಹಿತಿಯನ್ನು ಒದಗಿಸುವ ಮೂಲಕ ಯಾರು ಬೇಕಾದರೂ ಖಾತೆಯನ್ನು ತೆರೆಯಬಹುದು. ನಿಮ್ಮ ಖಾತೆ ತೆರೆಯುವುದೆಂದರೆ ಅವರಲ್ಲಿಯ ಒಂದು ಗೋಡೆ ನಿಮ್ಮದಾಗುತ್ತದೆ. ಅದರ ಮೇಲೆ ನೀವು ನಿಮ್ಮ ನೆಚ್ಚಿನ ಅಂಶಗಳನ್ನು ಬರೆಯಬಹುದು, ಹಂಚಿಕೊಳ್ಳಬಹುದು, ಚಿತ್ರಗಳನ್ನು ಹಾಕಬಹುದು ಮುಂತಾದವೆಲ್ಲ ಇವೆ. ಇದು ಮುಂದುವರೆದು ಗುಂಪುಗಳಾಗುವ ಪರಿಯೂ ಬಂತು. ಸಮ ಮನಸ್ಕರ ಅಥವಾ ಕುಟುಂಬದ ಅಥವಾ ಸ್ನೇಹಿತರ ಗುಂಪುಗಳು ಸಹ ಮಾಡಿಕೊಂಡು ಒಂದೇ ಸಂದೇಶ ಅಥವಾ ಚಿತ್ರವನ್ನು ಒಮ್ಮೆ ಹಾಕಿದರೆ ಎಲ್ಲರಿಗೂ ತಲುಪುವ ಸವಲತ್ತನ್ನು ಮುಖಪುಸ್ತಕ ಒದಗಿಸಿಕೊಟ್ಟಿತು. ಈಗ ಪ್ರಪಂಚದಲ್ಲಿ ಮುಖ ಪುಸ್ತಕದ ಖಾತೆ ಹೊಂದಿದವರು ೨.೩ ಬಿಲಿಯನ್ ಇದ್ದಾರಂತೆ. ಅದರಲ್ಲಿ ಭಾರತೀಯರ ಸಂಖ್ಯೆ ೧.೫೩ ಬಿಲಿಯನ್. ಇಷ್ಟೆಲ್ಲ ಸವಲತ್ತುಗಳನ್ನ ಒದಗಿಸಿದ ಮುಖ ಪುಸ್ತಕ ಸಾಹಿತ್ಯಕ್ಕೆ ಯಾವ ರೀತಿ ಸಹಾಯವಾಯಿತು ಎನ್ನುವುದನ್ನು ನೋಡೋಣ. ನಮ್ಮಲ್ಲಿ ತುಂಬಾ ಬರಹಗಾರರಿದ್ದಾರೆ. ಅನಿಸಿದ್ದನ್ನು ಬರವಣಿಗೆಯಲ್ಲಿಟ್ಟು ಪತ್ರಿಕೆಗಳಿಗೆ ಕಳಿಸಿಕೊಟ್ಟು, ಅವರ ಪ್ರಕಟಣೆಗಾಗಿ ಹಾದಿ ಕಾದು ನಿರಾಶೆ ಹೊಂದಿದವರೇ ಬಹಳ. ಮತ್ತೆ ಪತ್ರಿಕೆಗಳು ಸಹ ಬರಹಗಾರರ ದಾಳಿ ತತ್ತರಿಸಿದ್ದು, ಮುಂಚಿನ ತರ ಬಂದ ಬರಹಗಳಿಗೆ ಸೂಕ್ತ ಉತ್ತರ ಅಥವಾ ನಿರಾಕರಣೆ ಕಳಿಸುವ ಸ್ಥಿತಿಯಲ್ಲಿಲ್ಲದಾಗಿದ್ದಾವೆ. ಹಾಗಾಗಿ ತಮ್ಮ ಬರಹ ಅಥವಾ ಕವನ ಬೆಳಕು ಕಾಣದಾದಾಗ ಬೇಸತ್ತು ಬರಹವನ್ನೇ ಬಿಟ್ಟವರು ತುಂಬಾ ಜನ ಉದಯೋನ್ಮುಖ ಬರಹಗಾರರು. ಅಂಥವರಿಗೆ ಮುಖ ಪುಸ್ತಕ ಒಂದು ದಿವ್ಯ ವೇದಿಕೆ. ತಮ್ಮ ಲೇಖನ ಅಥವಾ ಕವನ ಇಡೀ ಆ ಭಾಷೆಯ ಓದುಗರಿಗೆ ತಲುಪದಿದ್ದರೂ, ತನ್ನ ಕೆಲ ದೋಸ್ತುಗಳಿಗಾದರು ತಲುಪಿ ಅವರ ಗಮನಕ್ಕೆ ತರುವಲ್ಲಿ ಮುಖ ಪುಸ್ತಕ ತುಂಬಾ ಸಹಾಯವಾಯಿತು. ಇದರಿಂದ ಅನೇಕ ಕಿರು ಸಾಹಿತಿಗಳಿಗೆ ಒಂದು ತರ ಸಂತೃಪ್ತಿ ಒದಗಿಸುವಲ್ಲಿ ಮುಖಪುಸ್ತಕ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ ಎಂದು ಹೇಳವುದರಲ್ಲ ತಪ್ಪೇನಿಲ್ಲ. ಅದಷ್ಟೇ ಅಲ್ಲದೇ ಪುಸ್ತಕಗಳ ಬಿಡುಗಡೆ, ಅವುಗಳ ಬಗ್ಗೆ ವಿಮರ್ಶೆ ದೊರಕುವ ಸ್ಥಳಗಳ ಬಗ್ಗೆ ಮಾಹಿತಿ ಇವೆಲ್ಲವು ಮುಖಪುಸ್ತಕದಲ್ಲಿ ಸಿಗುವ ಹಾಗೆ ಮಾಡಬಹುದಾದ ಕಾರಣ ಅವು ಸಾಹಿತ್ಯಾಸಕ್ತರಿಗೆ ಉಪಯುಕ್ತವಾಗುತ್ತಿವೆ. ಮುಖ ಪುಸ್ತಕದಲ್ಲಿ ಕಂಡು ಬರುವ ಲೈಕ್ ಗಳ ಬಗ್ಗೆ ತುಂಬಾ ಜೋಕುಗಳು ಸಹ ಹುಟ್ಟಿಕೊಂಡಿವೆ. ಮುಖಪುಸ್ತಕವನ್ನು ಪರಿಚಿಯಿಸಿದವರೇ ಇದರ ಮಿತಿಗಳನ್ನು ಸಹ ಅಧ್ಯಯನ ಮಾಡಿ ಇದರ ಮತ್ತೊಂದು ಸಂಸ್ಕರಿಸಿದ ಮಾಧ್ಯಮವನ್ನು ನೆಟ್ಟಿಗರಿಗೆ ಪರಿಚಯ ಮಾಡಿದರು. ಇದು ಪರಸ್ಪರ ವಿಚಾರ ವಿನಿಮಯಕ್ಕೆ ಮಾತ್ರ ಬಳಸ ಬಹುದಾಗಿರುವ ವಾಟ್ಸಪ್ ಸಾಮಾಜಿಕ ಜಾಲ ತಾಣ. ಮುಖ ಪುಸ್ತಕದ ಗೋಡೆಯಲ್ಲಿ ಮಾಹಿತಿ ಹಾಕಿದರೆ ಅದು ಖಾತಾದಾರನ ಎಲ್ಲ ಸ್ನೇಹಿತರಿಗೂ ಬೇಡವೆಂದರೂ ತಲುಪುತ್ತದೆ. ಹಾಗೆ ಬೇಕಾದವರ ಗುಂಪಿಗೆ ಮಾತ್ರ ತಲುಪಬೇಕಾದರೆ ಆ ಸ್ನೇಹಿತರಲ್ಲೇ ವಿಷಯದ ವಿಂಗಡನೆ ಮಾಡಿ ಮತ್ತೊಂದು ಗುಂಪುಮಾಡಬೇಕು. ಇವೆಲ್ಲವನ್ನು ಮನಗಂಡ ತಯಾರಕರು ವಾಟ್ಸಪ್ ಪರಿಚಯಿಸುತ್ತ ಅದರಲ್ಲಿ ಪರಸ್ಪರ ಮಾತ್ರ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ವೈಯಕ್ತಿಕ ಮಾತುಕತೆಗಾಗಿ ಇದನ್ನು ಬಳಸುವುದು ಆರಂಭವಾಯಿತು. ಈ ವಾಟ್ಸಪ್ ಅನ್ನು ಮೊಬೈಲ್ ನಂಬರಿಗೆ ಆಧಾರವಾಗಿ ಅಳವಡಿಸುವುದರಿಂದ ಬರೀ ಸಂದೇಶಗಳನ್ನಷ್ಟೇ ಕಳಹಿಸುವುದಲ್ಲದೆ, ಎಲ್ಲಿಂದ ಬೇಕಾದರೂ ಮತ್ತೊಬ್ಬರಿಗೆ ಕರೆ ಮಾಡುವ ಸೌಲಭ್ಯ ಸಹ ಸಿಕ್ಕಿತು. ಇವೆಲ್ಲವುಗಳಿಗೂ ತುರಾಯಿ ಎಂದರೆ ಇದು ಸಹ ಉಚಿತ. ಹಾಗಾಗಿ ಈಗ ವಾಟ್ಸಪ್ ಬಳಕೆದಾರರು ( ಯಾರಿಲ್ಲ ಹೇಳಿ ) ಪ್ರಪಂಚದ ಯಾವ ಮೂಲೆಯಿಂದಾದರೂ ಕರೆ ಮಾಡಿ ಮಾತಾಡಬಹುದಾಗಿದೆ. ಇವು ವಾಟ್ಸಪ್ ನ ಪ್ರಯೋಜನಗಳಾದರೆ ಅದು ಸಾಹಿತ್ಯಕ್ಕೆ ಯಾವ ವಿಧವಾಗಿ ಉಪಯೋಗಕರವಾಗಿದೆ ಎನ್ನುವ ಅಂಶವನ್ನು ನೋಡೋಣ. ಪುಸ್ತಕದ ಗಾತ್ರ ಎಷ್ಟೇ ಇರಲಿ ಅದು ವಾಟ್ಸಪ್ ನ ಮೂಲಕ ಮತ್ತೊಬ್ಬರಿಗೆ ಕಳಿಸಬಹುದು. ತಮ್ಮ ಕವನಗಳನ್ನು ತಮಗೆ ಬೇಕಾದ ಮತ್ತೊಬ್ಬರಿಗೆ ಕಳಿಸಿ, ಓದಿಸಿ ಅವರಿಂದ ಅಭಿಪ್ರಾಯ ಪಡೆಯ ಬಹುದು. ಯಾವುದಾದರೂ ಕರಡನ್ನು ಬೇಕಾದವರಿಗೆ ಕಳಿಸಿ ಅದರ ಪರಿಷ್ಕಾರಗೊಂಡಿರುವ ಆವೃತ್ತಿಯನ್ನು ಪಡೆದು ಸರಿಪಡಿಸಬಹುದು. ಪುಸ್ತಕ ಮುದ್ರಣ, ಜಾಹಿರಾತು ಮುದ್ರಣ ಮುಂತಾದವುಗಳಲ್ಲಿ ವಾಟ್ಸಪ್ ತುಂಬಾ ಉಪಯೋಗವಾಗುತ್ತಿದೆ. ಚಿತ್ರಗಳನ್ನು ಕಳಿಸಲು ತುಂಬಾ ಅನುಕೂಲ ಮಾಧ್ಯಮ. ಆದರೆ ಮುದ್ರಣದಾರರು ಚಿತ್ರಗಳನ್ನು ಇದರಲ್ಲಿ ಕಳಿಸುವುದು ಬೇಡವೆನ್ನುತ್ತಾರೆ. ಆ ಮಾತು ಬಿಡಿ. ಕೆಲ ಉತ್ಸಾಹೀ ಸಂಚಾಲಕ ಸಾಹಿತಿಗಳು ತಮ್ಮ ಸಾಹಿತೀ ಮಿತ್ರರ ಸಹಾಯ ಸಹಕಾರ ತೆಗೆದುಕೊಂಡು ಸರಪಳಿ ಕಾದಂಬರಿಗಳನ್ನು ಬರೆಯಲು ಪ್ರೋತ್ಸಹಿಸುತ್ತಿದ್ದಾರೆ. ಇದರಿಂದ ಸಾಹಿತ್ಯ ಕೃತಿ ಎಲ್ಲರ ಬರಹದ ಶೈಲಿಗಳ ತಿರುಳನ್ನು ಒಳಗೊಂಡು ಹೊರಬರುವುದಲ್ಲದೆ ಬೇಗನೆ ಸಹ ಮುಗಿಯಬಲ್ಲದಾಗಿದೆ. ವಾಟ್ಸಪ್ ನ ಮೂಲಕ ಮೂಲ ಕತೆ, ಕವನಗಳ ಅನುವಾದ ನಡೆದು ಅದು ಅನೇಕ ಸಾಹಿತೀ ಮಿತ್ರರಲ್ಲಿ ಹರಿದಾಡುತ್ತ ವಿನಿಮಯವಾಗುತ್ತಿವೆ. ಸಾಹಿತಿಗಳಿಗೆ ಈಗ ಮೊಬೈಲು ಬರೀ ಸಂಪರ್ಕ ಕ್ಕಷ್ಟೇ ಅಲ್ಲದೆ ಅದು ತಾವು ಜೊತೆಗೆ ಕೊಂಡೊಯ್ಯುತ್ತಿರುವ ಸಾಹಿತ್ಯದ ಭಂಡಾರವಾಗಿದೆ. ಈಗ ವಾಟ್ಸಪ್ ಜನ ಜೀವನದಲ್ಲಿ ಎಷ್ಟ ಹಾಸು ಹೊಕ್ಕಾಗಿದೆ ಎಂದರೆ ಅದರ ಬಗ್ಗೆ ಹರಿದಾಡುವ ಜೋಕ್ ಗಳಿಗೆ ಸಹ ಇತಿ ಮಿತಿ ಇಲ್ಲದಾಗಿದೆ. ಇನ್ನೂ ಇನ್ಸ್ಟಾ ಗ್ರಾಮ್, ಟ್ವಿಟ್ಟರ್ ಮುಂತಾದ ಜಾಲತಾಣಗಳಿವೆ. ಇನ್ಸ್ಟಾಗ್ರಾಮ್ ಬರೀ ಚಿತ್ರಗಳಿಗೆ ಮಾತ್ರ ಪರಿಮಿತವಾಗಿದೆ. ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವವರಿಗೆ ಇದು ತುಂಬಾ ಸಹಕಾರಿ. ಟ್ವಿಟ್ಟರ್ ಖಾತೆ ಸಾಮಾನ್ಯ ಜನರಲ್ಲಿ ಅಷ್ಟು ಪ್ರಚಲಿತವಾಗಿಲ್ಲ. ಟ್ವಿಟ್ಟರ್ ಬಗ್ಗೆ ಬರುವ ಕಾಮೆಂಟ್ ಗಳು ನೋಡಿದರ ಅದಕ್ಕಿರುವ ಹ್ಯಾಂಡಲ್ ಬರೀ ದೂರುವುದಕ್ಕೇ ಅಥವಾ ಬಯ್ಯುವುದಕ್ಕೆ ಅಂತ ಆದ ಹಾಗೆ ಕಾಣುತ್ತದೆ. ಎಲ್ಲ ಮಾಧ್ಯಮಗಳ ಹಾಗೆ ಈ ಜಾಲ ತಾಣಗಳಿಗೆ ಸಹ ಕೆಲ ಸೋಂಕುಗಳಿವೆ. ಒಳಿತು ಮಾತ್ರವಲ್ಲದೆ ಕೆಡಕು ಸಹ ಪಕ್ಕದಲ್ಲೇ ಇದ್ದು ಅವುಗಳ ಮಿತಿಯನ್ನು ತೋರಿಸಿಕೊಡುತ್ತದೆ. ಈ ಎರಡು ತಾಣಗಳ ಬಗ್ಗೆ ಇರುವ ಪ್ರಮುಖ ದೂರು ಎಂದರೆ ಮಾಹಿತಿ ಕಳವು. ಕಳವು ಎನ್ನುವುದಕ್ಕಿಂತ ಇದರಲ್ಲಿದ್ದ ವೈಯಕ್ತಿಕ ಮಾಹಿತಿಯನ್ನು ಸಂಸ್ಥೆಯೇ ಬೇರೊಬ್ಬರಿಗೆ ಸಾಗ ಹಾಕುತ್ತಿದೆ ಎನ್ನುವುದು. ಅದರಲ್ಲೂ ಮುಖಪುಸ್ತಕದಲ್ಲಿ ಈ ದೂರು ಇನ್ನೂ ಮಹತ್ವದ್ದಾಗಿದೆ. ಕೆಲ ದೇಶಗಳಲ್ಲಿ ಅಸ್ಮಿತೆಯ ಕಳವು ತುಂಬಾ ಆಗಿದ್ದು ಅನೇಕರು ಮುಖ ಪುಸ್ತಕವನ್ನು ತೊರೆಯುತ್ತಿದ್ದಾರೆ. ಮತ್ತೊಂದು ಅಂಶವೆಂದರೆ ಹರಡುತ್ತಿರುವ ಸುಳ್ಳು ಸುದ್ದಿಗಳು, ದ್ವೇಷ ಹುಟ್ಟಿಸುವ ಭಾಷಣಗಳು. ರಾಜಕೀಯವಾಗಿ ಪ್ರಕ್ಷುಬ್ದ ವಾತಾವರಣವಿರುವಾಗ ಈ ಜಾಲ ತಾಣಗಳಲ್ಲಿ ಕ್ಷಿಪ್ರವಾಗಿ ಹರಡಲು ಸುಲಭವಾದ ಅನೇಕ ಸುಳ್ಳು ಸುದ್ದಿಗಳು ಸಮಾಜದ ಶಾಂತಿಯನ್ನು ಕದಡುತ್ತವೆ ಮತ್ತು ದಂಗೆಗಳಿಗೆ ದಾರಿ ಮಾಡುತ್ತವೆ. ಯಾವುದೋ ಹಳೆಯ ಸುದ್ದಿಯನ್ನು ಮತ್ತೆ ಮತ್ತೆ ಹರಡಿಸಿ ಪ್ರಕೋಪಕ್ಕೆ ಒಯ್ಯುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಸಾಹಿತ್ಯದ ವಿಷಯಕ್ಕೆ ಬಂದರೆ ಕೃತಿಗಳು ಮತ್ತು ಕವನಗಳ ಬಗ್ಗೆ ನಿರ್ದಾಕ್ಷಿಣ್ಯ ವಿಮರ್ಶೆಗಳು ಹೆಚ್ಚಾಗಿವೆ. ಮುಖತಃ ಹೇಳಲು ಸಂಕೋಚವಾಗುವ ವಿಮರ್ಶೆಗಳು ಇವುಗಳ ಮೂಲಕ ಸರಾಗ ಬರೆದವರಿಗೆ ಮುಟ್ಟುತ್ತಿವೆ. ಇದರಿಂದ ಸಹೃದಯ ಮತ್ತು ಸೌಜನ್ಯ ಪರಿಸರ ಕೆಡುತ್ತಿದೆ. ಮತ್ತೆ ಇವುಗಳ ಬಳಕೆಯಿಂದ ಈ ತಾಣಗಳಿಗೆ ಅಭ್ಯಾಸವಾಗಿ ಹೋಗಿ ಕುಡಿತ, ಮಾದಕದ್ರವ್ಯಗಳ ರೀತಿ ಇದರ ಚಟವನ್ನು ಸಹ ಬೆಳೆಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ತಾಣಗಳಲ್ಲಿ ಸಿಗುವ ಲೈಕ್ ಗಳು ಅಥವಾ ಮೆಚ್ಚುಗೆಗಳಿಗೆ ಮಾರುಹೋಗಿ, ಅವುಗಳು ತಾವು ಎಣಿಸಿದ ಪ್ರಮಾಣದಲ್ಲಿ ಸಿಗದಿದ್ದಲ್ಲಿ ಮಾನಸಿಕವಾಗಿ ಅಸ್ವಸ್ಥವಾಗುವ ಅನೇಕ ವರದಿಗಳು ನಮಗೆ ಗೊತ್ತಾಗುತ್ತಿವೆ. ಮತ್ತೆ ತಮ್ಮ ತಮ್ಮ ಫೋನಿನಲ್ಲಿಯ ಜಾಲತಾಣಗಳಲ್ಲಿ ವ್ಯಸ್ತವಾಗಿ ಹೋಗಿ ಮನೆ ಕೆಲಸ, ಕಚೇರಿಯ ಕೆಲಸಗಳನ್ನು ನಿರ‍್ಲಕ್ಷ್ಯ ಮಾಡುತ್ತಿರುವ ಕೆಟ್ಟ ಅಭ್ಯಾಸ ಸಹ ಬೆಳೆದಿರುವುದು ಕಂಡು ಬಂದಿದೆ. ಅದರ ಜೊತೆಗೆ ವ್ಯಕ್ತಿಗಳ ಮಧ್ಯೆ ಇರಬೇಕಾದ ಸಂಪರ್ಕವೇ ಕಡಿದುಹೋಗುತ್ತಿದೆ. ಯಾವುದಾದರೂ ಒಂದು ಸಮಾವೇಶ ಅಥವಾ ಸಂಭ್ರಮಗಳಲ್ಲಿ ನೆರೆದ ಜನರು ಅವರವರ ನಡುವೆ ಮಾತುಕತೆಯೇ ಇಲ್ಲದೆ ಎಲ್ಲರು ತಮ್ಮ ತಮ್ಮಫೋನಿನ ತೆರೆಗಳ ಮೇಲೆ ಕಣ್ಣ ದಿಟ್ಟಿಸಿರುತ್ತಿರುವುದು ಕಂಡು ಬರುತ್ತದೆ. ಇದರಿಂದ ಒಂದು ಆರೋಗ್ಯಕರ ಸಮಾಜ ಇಂದು ಕಾಣುತ್ತಿಲ್ಲ. ಎಲ್ಲಿಂದಲೋ ಬರುವ ಸಂದೇಶಗಳ ಮೇಲೆ ದೃಷ್ಟಿ ನೆಟ್ಟಿದ್ದು, ಮೂಗಿನಡಿಯಲ್ಲಿದ್ದ ಇರುವ ಮನುಷ್ಯನ ಕಷ್ಟಕ್ಕೆ ನೆರವಾಗದಂತಾಗಿದ್ದಾನೆ ಇಂದಿನ ಸಾಧಾರಣ ಮನುಷ್ಯ. ಮತ್ತೆ ತನ್ನ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳಲ್ಲಿರುವ ಸಾರಾಂಶದ ಬಗ್ಗೆ ಮುಖಪುಸ್ತಕ ತನ್ನ ಜವಾಬ್ದಾರಿಯನ್ನು ಕೈ ತೊಳೆದುಕೊಂಡಿದೆ. ಹಾಗಾಗಿ ಯಾವುದೇ ರೀತಿಯ ಅಡೆ ತಡೆ ಇಲ್ಲದೆ ಎಂಥದ್ದಾದರೂ ಸಂದೇಶ ಯಾರಿಗಾದರೂ ಹಾಕಬಹುದಾಗಿದೆ. ಇದರಿಂದ ಸಮಾಜದಲ್ಲಿ ಹಿಂಸೆ ಜಾಸ್ತಿಯಾಗಿದೆ ಎಂದು

ಸಾಹಿತ್ಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ದೇವರ ವಾನಪ್ರಸ್ತ.

ರಾತ್ರಿಯಿಡೀ ಕಗ್ಗತ್ತಲು. ಯಾಕಿಲ್ಲ, ಅಮವಾಸ್ಯೆಯ ರಾತ್ರೆಯದು. ಗುಹೆಯೊಂದರಲ್ಲಿ ಮಲಗಿದ್ದ ಶಿಲಾಮಾನವ ರಾತ್ರೆ ಕಳೆಯುತ್ತಿದ್ದ. ಸುತ್ತ ,ಅಡವಿ. ಅದೊಂದು ನಿದ್ದೆಯಲ್ಲದ ನಿದ್ದೆ. ಗಾಳಿಗೆ ಮರಗಳ ಸುಂಯ್..ಸುಂಯ್.. ಒಂಥರಾ ನೀರವ ಕಗ್ಗತ್ತಲು. ಕಣ್ಣಿಗೇನೂ ಕಾಣಿಸದಾದಾಗ, ಕಿವಿ ಅತ್ಯಂತ ಸೂಕ್ಷ್ಮವಾಗುತ್ತೆ. ದೂರದಿಂದ, ನರಿಗಳು ಊಳಿಡುವ ಶಬ್ಧ, ಪಟ್ಟೆ ಹುಲಿ ನಡೆಯುವಾಗ,ಓಡುವಾಗ ಶಬ್ಧಮಾಡುವುದಿಲ್ಲ. ಸೈಲೆಂಟ್ ಕಿಲ್ಲರ್ ಅದು! ಹ್ಞಾ! ಕೇಳಿಸಿತಲ್ಲ, ಜಿಂಕೆಯ ಮರಣಾಕ್ರಾಂದನ..ಖಂಡಿತಾ ಹುಲಿ ಹಿಡಿದಿರಬೇಕು, ನಾಳೆ ಸಿಗುತ್ತೆ ಅದರ ಅವಶೇಷಗಳು. ಹೇಗಿದ್ದರೂ, ಗುಹೆಯ ಬಾಗಿಲಿಗೆ ಬಂಡೆ ಪಾರ್ಶ್ವದಿಂದ ಮುಚ್ಚಿದೆ. ಹುಲಿಗೂ ಭಯವಿದೆ. ಎಲ್ಲಿ, ನನ್ನ ಈಟಿ ಹತ್ತಿರವೇ ಇದೆಯಲ್ಲ. ಅಂತಹ ಹೋರಾಟದ ರಾತ್ರೆ, ಗಾಢನಿದ್ದೆಗೆ ಬಿದ್ದರೆ, ಹುಲಿಯ ಬಾಯಿಗೆ ತುತ್ತು.ಹ್ಞಾ! ..ಬೆಳಕಿನ ಮೊದಲ ಕಿರಣ ಕಾಡಿನ ಎತ್ತರದ ಮರಗಳ ಎಲೆಗಳ ನಡುವಿಂದ ನುಸುಳಿ ಬಂತಲ್ಲಾ!. ರಾತ್ರಿ ಕಳೆಯಿತು.. ಸೂರ್ಯ ಉದಯಿಸಿದ್ದು ಅಂದರೆ ಹೊಸ ಜೀವ ಬಂದಂತೆಯೇ. ಅಂತಹ ಸೂರ್ಯನಿಗೆ ತನ್ನ ಒರಟು ಕೈಗಳನ್ನು ಎತ್ತಿ, ಈಟಿ ಬೀಸಿ, ಕೇಕೇ ಹಾಕಿ ತನ್ನದೇ ರೀತಿಯಲ್ಲಿ ನಮಸ್ಕರಿಸಿದ ಆ ಶಿಲಾ ಮಾನವ!ಅಂದು ನಕ್ಷತ್ರ ಸೂರ್ಯನಿಗೆ ದೇವರ ದರ್ಜೆ! ಹೀಗೇ ನೀರು,ಗಾಳಿ,ಬೆಂಕಿ,ಆಕಾಶ, ತನ್ನ ವ್ಯಾಪ್ತಿಗೆ ಮೀರಿದ,ಅರಿವಿಗೆ ನಿಲುಕದ ಸೋಜಿಗಗಳೆಲ್ಲಾ ದೇವರೇ.ದೇವರನ್ನು, ನಾವೆಷ್ಟು ಹುಡುಕುತ್ತೇವೋ ಅಷ್ಟೇ, ವಿಚಾರವಾದಿಗಳು,ಸಾಹಿತಿಗಳು ದೇವರ ಪರಿಕಲ್ಪನೆಯನ್ನು,ಅದರ ಮನೋವೈಜ್ಞಾನಿಕ ಹಿನ್ನೆಲೆಯನ್ನು ಹುಡುಕುತ್ತಾರೆ.ಡಿ.ವಿ.ಜಿ.ಅವರ ಕಗ್ಗದಿಂದಲೇ ಶುರುಮಾಡೋಣವೇ?. ಧರ್ಮವೆಂಬುದದೇನು? ಕರ್ಮವೆಂಬುದದೇನು?|ಬ್ರಹ್ಮಾಂಡಕಥೆಯೇನು? ಜೀವಿತವಿದೇನು?||ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ|ಬ್ರಹ್ಮವೇ ಜೀವನವೊ – ಮಂಕುತಿಮ್ಮ||೯೭|| ಆಕಾರಭ್ರಹ್ಮನಿಂದ ನಿರಾಕಾರ ಬ್ರಹ್ಮನವರೆಗೆ ಬೆಳೆದುಬಂದ ಈ ಜ್ಞಾನದ ಅಗಾಧತೆ, ನನ್ನ ಅರಿವಿಗೂ, ವಿದ್ಯೆಗೂ ಮೀರಿದ್ದು. ಈ ಅಬ್ಬಿಯ ಧಾರೆಗೆ, ಕನ್ನಡ ಸಾಹಿತ್ಯದ ಸಂದರ್ಭವನ್ನಷ್ಟೇ ಉಲ್ಲೇಖಿಸುವೆ.ಶಿವರಾಮ ಕಾರಂತರ ಮೂಕಜ್ಜಿಯ ಮಾತುಗಳನ್ನು ಕೇಳಿ. ” ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ.” ಮನಸ್ಸಿನ, ಚಿಂತನೆಯ ತರ್ಕದೊಳಗೆ ದೇವರನ್ನು ಅನ್ವೇಷಿಸುವ ಪ್ರಯತ್ನವದು. ಜಿ.ಎಸ್ ಶಿವರುದ್ರಪ್ಪನವರು “ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆ” ಅಂತ ಬರೆಯುತ್ತಾರೆ. ಕಲ್ಲು ಮಣ್ಣುಗಳ ಗುಡಿಯೊಳಗೆ ದೇವರನ್ನು ಹುಡುಕಬೇಡ, ದೇವರು ಅಲ್ಲಿಲ್ಲ, ಆತ ನಮ್ಮೊಳಗಿನ ಪ್ರೀತಿ,ಬಾಂಧವ್ಯದೊಳಗಿರುವನು, ಎನ್ನುವಾಗ, ಅವರ ಕವಿಸಹಜ ಅನಂತಪ್ರೇಮವೇ ದೇವರ ರೂಪತಾಳುತ್ತದೆ. ಕುವೆಂಪು ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, “ನೂರು ದೇವರನೆಲ್ಲ ನೂಕಾಚೆ ದೂರಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ” ಹಾಗೆ ಬರೆಯುವಾಗ ದೇಶ, ನಾಡು ಮತ್ತು ನೆಲ ಅವರಿಗೆ ದೇವೀ ಸ್ವರೂಪವಾಗುತ್ತೆ. ಹೀಗೆ ಸಾಮಾನ್ಯರು ದೇವರನ್ನು ಬೇರೆ ಬೇರೆ ರೂಪಗಳಲ್ಲಿ, ಕಂಡರೆ, ಕವಿಗಳು,ದಾರ್ಶನಿಕರು ಆತನನ್ನು, ಎಲ್ಲರೊಳಗೂ, ಎಲ್ಲವಲ್ಲೂ, ಮೂರ್ತವಾಗಿ ಹಲವೊಮ್ಮೆ, ಅಮೂರ್ತವಾಗಿ ಕೆಲವೊಮ್ಮೆ ಕಾಣುತ್ತಾರೆ. ಅದಕ್ಕೆ ಸರಿಹೊಂದುವ ಪ್ರಾರ್ಥನಾ ಪದ್ಧತಿ ಜನಜೀವನದ ವಿವಿಧ ಎಸಳುಗಳ ಬಣ್ಣಗಳಂತೆ ವಿವಿಧ ಆಚರಣೆಗಳಾಗಿವೆ.ಹಿಂದೂ ಸಮಾಜದಲ್ಲಿ ಮೂರ್ತಿಪೂಜೆ ಅತ್ಯಂತ ಸಾಮಾನ್ಯ. ಮೂರ್ತಿ ಸಿಗಲಿಲ್ಲವಾದರೆ ದೇವರ ಚಿತ್ರವೂ ನಮಗೆ ಸರಿಯೇ. ಹೈದರಾಬಾದ್ ನ ಕವಯಿತ್ರಿ, ಪ್ರಭಾ ಮಟಮಾರಿ ಅವರ “ದೇವರ ವಾನಪ್ರಸ್ಥ ” ಕವಿತೆಯ ಈ ವಸ್ತು, ಬಹಳ ಗಹನವಾದದ್ದೇ. ” ತನ್ನ ಜೀವನಕೊಂದು ಇರಲೆಂದು ಮಿತಿ.ಮನುಷ್ಯನೇ ಸೃಷ್ಟಿಸಿದಾ ಧರ್ಮನೀತಿ ನಿಷ್ಟೆ ಯಿಂದ ಧರ್ಮವ ಪಾಲಿಸಿದಾತಎನಿಸಿಕೊಂಡ ಧರ್ಮದಾತ. ಮಿತಿ ಮೀರಿ ಮಾಡಿದ ತಪ್ಪುಅಪರಾಧಗಳು ತಿರುಗುಬಾಣಗಳಾದಾಗಮೊರೆ ಹೋದ ದೇವರಬಗೆ ಬಗೆಯ ದೇವರ ಚಿತ್ರಗಳ ತಂದುಗೋಡೆಗೆ ನೇತ್ಹಾಕಿಯೋಮಂಟಪದಲ್ಲಿ ಬಂಧಿಸಿಯೋಫಲಪುಷ್ಪ, ದೀಪ ಧೂಪಗಳಅಟ್ಟಹಾಸದ ಪೂಜೆಗೈದ,ಸುಗ್ರಾಸ ಭೋಜನವ ಮಾಡಿನೈವೇದ್ಯವೆಂದಾತಾನೇ ತಿಂದು ತೇಗಿದಾ. ಸಂಪೂರ್ಣವಾದಾಗ ತನ್ನಾಸೆ ,ತಾಯ್ತಂದೆಯರನಟ್ಟಿ ವೃದ್ಧಾಶ್ರಮಕೆಶ್ರದ್ಧೆಯಿಂದ ಪೂಜೆ ದೇವರ ಪಟಗಳಿಗೆಬಿಟ್ಟಾ,ಊರಾಚೆಯ ನಿರ್ಜನಪ್ರದೇಶದ ಹಳೆಯ ಮರವೊಂದರಡಿಗೆ !ವೃದ್ಧ ಮಾನವನಿಗೆ ನಾಲ್ಕು ಗೋಡೆಗಳಮೇಲೊಂದು ಸೂರಿನ ಛಾಯೆಯದಯಪಾಲಿಸಿದ ದೇವರಿಗೆ,ಮಾನವ ಹೇರಿದ ವಾನಪ್ರಸ್ಥದ ದೀಕ್ಷೆ! ಮರದಕೆಳಗೆ ಹಳೆಯ ದೇವರ ಪಟದಲ್ಲಿಅದೇ ದಿಟ್ಟನೋಟ, ನಸುನಗೆಅಭಯ ವರದ ಹಸ್ತದ ಚಿತ್ರಮಳೆ ಚಳಿ ಗಾಳಿ ಹೆಚ್ಚಾದಾಗ ,ಕೊಚ್ಚಿ ಹೋಗಿ ನೀರಿನೊಡನೆ ,ನಿಸರ್ಗದಲ್ಲಿ ಹಸಿರಾಗಿ ನೀಲಾಕಾಶದಡಿಯಲಿ ಧುಮ್ಮಿಕ್ಕುವ ಜಲಪಾತವಾಗಿ ,ಜುಳು ಜುಳು ಹರಿವ ಹಳ್ಳವಾಗಿ ,ಹೊಳೆಯಾಗಿ ನಳ ನಳಿಸುವಹೂ ಬಳ್ಳಿಯಾಗಿ ಕವಿಯ ಕಣ್ಣಲ್ಲಿದೇವರೂ ಕವಿತೆಯಾದ.” ಅವರ ಕವಿತಾ ಕಥನದ ಆರಂಭದ ಸಾಲುಗಳು, ಕವಿತೆಗೆ ಅವರು ಹಾಕುವ ತಾತ್ವಿಕ ತಳಹದಿ. ಮುಂದಿನ ಸಾಲುಗಳಲ್ಲಿ, ಸ್ವಾರ್ಥಿ ಮನುಷ್ಯ, ತನ್ನ ಆಚಾರದೋಷಗಳ ಪರಿಣಾಮಗಳನ್ನು ಎದುರಿಸಲಾಗದೆ, ದೇವರ ಮೊರೆ ಹೋಗುತ್ತಾನೆ. ಇದು ಒಂದು ನಂಬಿಕೆಯ ಮೇಲೆ ನಿಂತಿರುವ ಸೌಧ. ಪ್ರಾರ್ಥನೆ, ಪೂಜೆ ಇತ್ಯಾದಿ ಆಚರಣೆಗಳಿಂದ ದೇವರು ಪ್ರಸನ್ನನಾಗಿ, ಸಮಸ್ಯೆ ಪರಿಹಾರವಾಗುತ್ತೆ,ಎಂಬುದೇ ಆ ನಂಬಿಕೆ.ಪ್ರಭಾ ಅವರು, ಈ ಆಚರಣೆ, ಸ್ವಾರ್ಥ, ಮತ್ತು ದೇವರ ನಿಜ ಭಕ್ತಿಯ ನಡುವಿನ ತಳಕಾಣದ ಅಂತರವನ್ನು ಮಥಿಸಿ ತೆಗೆಯುತ್ತಾರೆ. ಈ ಸಾಲುಗಳು, ಅಲ್ಲಮ ಪ್ರಭುಗಳ ವಚನವನ್ನು ನೆನಪಿಸುತ್ತೆ. “ಮಾಡಿದ ಓಗರ ಮಾಡಿದಂತೆ ಇದ್ದಿತ್ತುನೀಡಿದ ಕೈಗಳೆಡೆಯಾಡುತ್ತಿದ್ದವುಲಿಂಗಕ್ಕರ್ಪಿತವ ಮಾಡಿದೆನೆಂಬರುಒಂದರಲೊಂದು ಸವೆಯದು ನೋಡಾಲಿಂಗವಾರೋಗಣೆಯ ಮಾಡಿದನೆಂಬರುತಾವುಂಡು ನಿಮ್ಮ ದೂರುವರು ಗುಹೇಶ್ವರ.” ಪ್ರಭಾ ಅವರ ಕವಿತೆಗೆ ಹೊಸ ಹೊಳಹು ಕೊಡುವುದೇ ಮುಂದಿನ ಸಾಲುಗಳು. ಈ ಸಾಲುಗಳಲ್ಲಿ, ಆಧುನಿಕ ನಾಗರಿಕ ಸಮಾಜದ, ವ್ಯಾಪಾರೀ ವ್ಯವಸ್ಥೆಯ ಮನೋಭಾವ ಕಾಣಿಸುತ್ತೆ. ತನ್ನ ಅಗತ್ಯ ಪೂರ್ಣವಾದ ನಂತರ ಮನುಷ್ಯ ಯಾವುದನ್ನೂ ಇಟ್ಟುಕೊಂಡು ನಷ್ಟ ಅನುಭವಿಸಲು ತಯಾರಿಲ್ಲ. ಅದು, ತನ್ನ ವೃಧ್ಧ ತಂದೆತಾಯಂದಿರಿರಬಹುದು, ಹಾಲು ನಿಂತ ದನವಿರಬಹುದು, ದೇವರ ಮೂರ್ತಿಯೇ ಇರಬಹುದು. ತಾಯಿತಂದೆಯರನ್ನು ವೃದ್ಧಾಶ್ರಮಕ್ಕೂ, ದೇವರ ಪಟಗಳನ್ನು ಮರದಡಿಯ ಕಟ್ಟೆಗೂ ( ವಾನಪ್ರಸ್ತಕ್ಕೂ) ಕಳಿಸುವ ಕ್ರಿಯೆಯಲ್ಲಿ ಬಿಂಬ ಪ್ರತಿಬಿಂಬಗಳಿವೆ. ” ಮರದಕೆಳಗೆ ಹಳೆಯ ದೇವರ ಪಟದಲ್ಲಿಅದೇ ದಿಟ್ಟನೋಟ, ನಸುನಗೆ “ ಮನುಷ್ಯನ ಭೌತಜಗತ್ತಿನ ಕ್ರಿಯೆಗಳು, ಪರಮಾತ್ಮ ಪ್ರಜ್ಞೆಯಲ್ಲಿ ಯಾವುದೇ ಬದಲಾವಣೆ ಉಂಟುಮಾಡುವುದಿಲ್ಲ. ಭಾವಾತೀತ ಶಕ್ತಿಯದು ಎಂಬ ಧ್ವನಿ, ಕವಿತೆಯದ್ದು. ಮಳೆಗೆ ಕೊಚ್ಚಿಹೋಗುವ ದೇವರ ಚಿತ್ರ, ಮಳೆಯೇ ಆಗಿ, ಜಲಪಾತವಾಗಿ, ಪ್ರಕೃತಿಯಾಗಿ ಕೊನೆಗೆ ಕವಿತೆಯ ಹಿಂದಿನ ಕಾವ್ಯಪ್ರಜ್ಞೆಯೂ ಆಗಿ ಹರಿಯುತ್ತೆ. ಸ್ಥಿರ,ಸ್ಥಿತ ಚಿತ್ರ ಹರಿಯುವ ಚೇತನವಾಗುತ್ತೆ,ಆಕಾರದಿಂದ ಬಹುರೂಪೀ ಪ್ರಕೃತಿಯಾಗಿ,ಕೊನೆಗೆ ಕಾವ್ಯಪ್ರಜ್ಞೆಯಾಗುವಾಗ, ನಿರಾಕಾರ ಬ್ರಹ್ಮನಾಗಿ, ಪ್ಯೂರ್ ಕಾನ್ಶಿಯಸ್ ನೆಸ್ ಆಗುತ್ತೆ. ಇಲ್ಲಿ ವಾನಪ್ರಸ್ತ ಅನುಭವಿಸುವ ದೇವರ ಚಿತ್ರ, ಮಳೆಗೆ ಕೊಚ್ಚಿಹೋಗುವುದು, ನಶ್ವರವಾದ ದೇಹವನ್ನು ತ್ಯಜಿಸಿ ( ದೇಹದ ಸಾವು) ಆತ್ಮ ಸ್ವತಂತ್ರವಾಗುವ ಕ್ರಿಯೆಯಾಗಿಯೂ ನೋಡಬಹುದು. ಕುವೆಂಪು ಅವರ, “ದೇವರು ರುಜು ಮಾಡಿದನು” ಎಂಬ ಕವಿತೆಯ ಕೊನೆಯ ಸಾಲುಗಳನ್ನು ಗಮನಿಸಿ. ” ಸೃಷ್ಟಿಯ ರಚನೆಯ ಕುಶಲಕೆ ಚಂದಕೆಜಗದಚ್ಚರಿಯಂದದ ಒಪ್ಪಂದಕೆಚಿರಚೇತನ ತಾನಿಹೆನೆಂಬಂದದಿಬೆಳ್ಳಕ್ಕಿಯ ಹಂತಿಯ ಆ ನೆವದಿದೇವರು ರುಜು ಮಾಡಿದನು:ರಸವಶನಾಗುತ ಕವಿ ಅದ ನೋಡಿದನು!” ಕುವೆಂಪು ಅವರ ಕವಿತೆಯಲ್ಲಿ, ಪ್ರಕೃತಿಯ ಪ್ರತೀ ಕ್ರಿಯೆಗಳ ಮೇಲೆ, ದೇವರು ರುಜುಮಾಡುತ್ತಾನೆ ಮತ್ತು ರಸವಶನಾಗುತ,ಕವಿ ಅದನ್ನು ನೋಡುತ್ತಾನೆ.ಪ್ರಭಾ ಅವರ ಕವನ, “ದೇವರ ವಾನಪ್ರಸ್ತ” ದಲ್ಲಿ, ದೇವರು ಅದೆಲ್ಲವನ್ನೂ ಮೀರಿ, ಕಾವ್ಯಪ್ರಜ್ಞೆಯೂ ಆಗುತ್ತಾನೆ. *** ಮಹಾದೇವ ಕಾನತ್ತಿಲ

ದೇವರ ವಾನಪ್ರಸ್ತ. Read Post »

ಕಾವ್ಯಯಾನ

ವಿನಂತಿಯಷ್ಟೇ…

ಕವಿತೆ ಮಧುಸೂದನ ಮದ್ದೂರು ನಿನ್ನ ಒಂದೇ ಒಂದು ಕನಸಿಗೆ ಇಷ್ಟು ಪರಿತಪಿಸ ಬೇಕಿತ್ತೆ…..? ನಿನ್ನ ಕುಡಿಮಿಂಚ ಕಣ್ಣೋಟಎದೆ ಇರಿದಿದ್ದರೆ ಸಾಕಿತ್ತು..ಎದೆಗೆ ನಿನ್ನ ನೆನಪುಗಳ ಭರ್ಜಿಯಿಂದಇರಿದುಕೊಳ್ಳಬೇಕಿರಲಿಲ್ಲ..ನಿನ್ನ ತುಸು ಸ್ಪರ್ಶದ ಕೆನೆಗಾಳಿ ಎದೆಗೆ ಸೊಂಕಿದ್ದರೆ ಸಾಕಿತ್ತು… ನಿನ್ನ ಸಿಹಿ ಮುತ್ತೊಂದು ಸಿಕ್ಕಿದ್ದರೆ ಸಾಕಿತ್ತು..ಮಧುಶಾಲೆಗೆ ಎಡತಾಕಿ ಮತ್ತಿನ ಬಾಟಲಿಗಳಿಗೆ ಮುತ್ತಿಕ್ಕುವ ಪ್ರಮೇಯವೇ ಇರುತ್ತಿರಲಿಲ್ಲ… ನಿನ್ನ ನವಿರು ಬಿಸಿಯುಸಿರು ನನ್ನೆದೆಗೆ ಸುಳಿಗಾಳಿಯಾಗಿದ್ದರೆ ಸಾಕಿತ್ತು..ಧೂಮಲೀಲಾ ವಿನೋದವಳಿಗೆ ಅಗ್ನಿಮಿತ್ರನಾಗುತ್ತಿರಲಿಲ್ಲ.. ಈಗಲೂ ಕಾಲ‌ಮಿಂಚಿಲ್ಲ..ಒಂದೇ ಒಂದು ಬಾರಿ ಕನಸಿಗೆ ಬಂದು ಬಿಡು ಸಾಕುಈ‌ ನನ್ನಿ ವ್ಯಸನಗಳ ಸಾಮ್ರಾಜ್ಯವ ಸೋಲಿಸಿಎದೆಯ ಸಿಂಹಾಸನದ ಪಟ್ಟದ ಸಾಮ್ರಾಜ್ಞಿಯಾಗು…ಇದೀಷ್ಟೇ ಈ ಬಡ ಪಕೀರನ ವಿನಂತಿ ಮಾತ್ರವಷ್ಟೇ… **********

ವಿನಂತಿಯಷ್ಟೇ… Read Post »

You cannot copy content of this page

Scroll to Top