ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನೀ ಬದಲಾದರೆ ನಾಗರಾಜ್ ಹರಪನಹಳ್ಳಿ ಆಕೆ ಎದುರಾದಾಗ ಹೀಗೆಒಂದು ಪ್ರಶ್ನೆ‌ ಎಸೆದಳುನೀ ಬದಲಾದರೆ…. ನಾ‌ ಸ್ವಲ್ಪ ಹೊತ್ತು ಮಾತಾಡಲಿಲ್ಲ ಆಕೆ ಒತ್ತಾಯಿಸಿದಳುತುಟಿಗೆ ಮುತ್ತಿಟ್ಟು ಮತ್ತೆ ಕೇಳಿದಳುನೀ ಬದಲಾದರೆ ?? ದೀರ್ಘ ನಿಟ್ಟುಸಿರು ಬಿಟ್ಟೆಹಾಗೂ ಹೇಳಿದೆ ;ಕನ್ನಡಿಯ ಎದುರು ನಿಂತು ಪ್ರಶ್ನಿಸಿಕೊ ಎಂದೆ ಮತ್ತೆ ಅವಳೆಡೆಗೆ ಹೊರಳಿಕತ್ತು ಬಳಸಿ ,ಹೆರಳಿನ ಹಿಂಬಾಗಕೆ ಮುತ್ತಿಟ್ಟು ಹೇಳಿದೆ;ಸೂರ್ಯನ ಗಮನಿಸುಆಕಾಶ ಗಮನಿಸುಬಯಲ ಓದುವುದ ಕಲಿಸಮುದ್ರದ ಎದುರು ನಿಂತುಅದರ ರೋಧನವ ಅರಿ ಮನುಷ್ಯರ ಬದುಕಿನ‌‌ ದೇಹದ‌ ನಶ್ವರತೆಯ ಅವಲೋಕಿಸು ಹಾಗೂ ….ಹಾಗೂನನ್ನ ಕಣ್ಣುಗಳ ದಿಟ್ಟಿಸುನನ್ನ ತೋಳಿನಲ್ಲಿ ಸುಮ್ಮನೆ ಕರಗಿ‌ಹೋಗು….. ಚಾಡಿಗಳ ಜಾಡಿಸಿ ಒದೆಕಿವಿ ಕಚ್ಚುವವರ ಕುಡಗೋಲಿನಿಂದ‌ ಕೊಚ್ಚಿಹಾಕುಹಾಳು ಹಡಬೆ ರಂಡೆಯರಮಾತಿಗೆ ಅಡುಗೆ ಮನೆಯ ಲಟ್ಟಣಿಗೆಯಿಂದ ತಿವಿ ನಾನು ಉರಿವ ಕೆಂಡದಂಡೆ ದಿಗ್ಭ್ರಮೆಗೊಳ್ಳುವಂತೆ ಹರಿವ ನದಿ…ಜಗದ ಮೌನ ಗರ್ಭೀಕರಿಸಿಕೊಂಡ ಕಣಿವೆಸುಮ್ಮನೆ ನನ್ನೆದುರು ಕುಳಿತು ಅಪ್ಪಿ ಆಲಂಗಿಸು … ನೀ ಬದಲಾದರೆ ಎಂಬ ಪ್ರಶ್ನೆಗಳ ಹುಟ್ಟಿದಲ್ಲಿ ನೇತು ಹಾಕು ಬಿಮ್ಮನೆ ಘಮ್ಮನೆ ಮಘ ಮಘಿಸುವ ಮಲ್ಲಿಗೆಯಂತೆ ಪ್ರೀತಿಸು, ಪ್ರೀತಿಸು…; ಅಪ್ಪಟವಾಗಿ ಪ್ರೀತಿಸು…ಪ್ರೀತಿ ಬೆಳಕೆಂಬ ಬೆಳಕಿನ ಬೆನ್ನು ಹತ್ತು…. *********************

ಕಾವ್ಯಯಾನ Read Post »

ಇತರೆ, ಜೀವನ

ಪ್ರಸ್ತುತ

ಗುರು-ಶಿಷ್ಯ ಸಂಬಂದ ಪ್ರಜ್ಞಾ ಮತ್ತಿಹಳ್ಳಿ ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ.  ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ ತೆಗೆಯುವವನು ಗುರುವೇ. ತನ್ನ ಜ್ಞಾನದ ಕಿರಣಗಳಿಂದ ಶಿಷ್ಯನ ಚಿತ್ತಬಿತ್ತಿಯ ಮೇಲೆ ಆಕಾಶಗಂಗೆಯ ಹಾಲುಹಾದಿ ತೆರೆಯುವವನೂ ಗುರುವೇ. ಹಾಗಾಗಿ ಗುರು-ಶಿಷ್ಯರ ಸಂಬಂಧ ಎನ್ನುವುದು ಯಾವುದೇ ಗೋಡೆ,ಛಾವಣಿಗಳ ಹಂಗಿಲ್ಲದ ಮಂದಿರದಂತೆ. ಕೊಡುವ ಗುರುವಿನ ಅಂತ:ಸತ್ವದ ಅಗಾಧತೆ ಹಾಗೂ ತೆಗೆದುಕೊಳ್ಳುವ ಶಿಷ್ಯನ ಧಾರಣ ಶಕ್ತಿಗಳನ್ನು ಅವಲಂಬಿಸಿ ಈ ಸಂಬಂಧದ ವ್ಯಾಖ್ಯೆ ಬದಲಾಗುತ್ತದೆ. ಮಮತೆ ಕರುಣೆಗಳ ವಾರಿಧಿಯಂಥ ಗುರು ಸಾಕ್ಷಾತ ಅಮ್ಮನಾಗುತ್ತಾನೆ. ಅವನ ಮಡಿಲಲ್ಲಿ ಶಿಶುವಾಗುವ ಶಿಷ್ಯ ವಾತ್ಸಲ್ಯದ ಗುಟುಕು ಗುಟುಕರಿಸಿ ಅಮೃತಂಗಮಯನಾಗುತ್ತಾನೆ. ಜ್ಞಾನದ ದಾಹದ ಶಿಷ್ಯ ರೋಗಿಯಂತೆ ನರಳುವಾಗ ಗುರು ವೈದ್ಯನಾಗಿ ಸಲಹುತ್ತಾನೆ. ಸಮಾನ ಮನಸ್ಕ-ಸಮಾನ ಆಸಕ್ತ ವಿಷಯಗಳಲ್ಲಿ ಅವರಿಬ್ಬರೂ ಸ್ನೇಹಿತರೇ ಆಗಿಬಿಡುತ್ತಾರೆ. ಆಧ್ಯಾತ್ಮ ಹಾಗೂ ಸಂಗೀತಗಳಲ್ಲಿ ಗುರು ಶಿಷ್ಯರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಸಂಗತಿಗಳಿಗೆ ಎಣೆಯಾಗಲೀ, ಎಣಿಕೆಯಾಗಲಿ, ಎಲ್ಲೆಯಾಗಲೀ ಇಲ್ಲವೇ ಇಲ್ಲ. ರಾಗದ ದಾರಿಯಲ್ಲಿ ಸಾಗುತ್ತ ಸಾಗುತ್ತ ಅವರು ಅಮರರಾಗುತ್ತಾರೆ ನಾದದ ಸಾಧನೆಯಲ್ಲಿ ಲೀನವಾಗುತ್ತ, ಲೀನವಾಗುತ್ತ ಈ ಲೋಕದ ಸೀಮೆಗಳನ್ನು ದಾಟುತ್ತಾರೆ. ಅಲೌಕಿಕವನ್ನು ಅರಸುತ್ತ, ಅರಸುತ್ತ ಪರಸ್ಪರರಿಗೆ ದಾರಿಯಾಗಿ ತೆರೆದುಕೊಳ್ಳುತ್ತಾರೆ.  ಗುರು-ಶಿಷ್ಯಂದಿರು ಪರಸ್ಪರರನ್ನು ಬೆಳೆಸಬಲ್ಲರು. ಶಿಷ್ಯನ ಇಲ್ಲಗಳನ್ನು ತುಂಬುವುದಕ್ಕಾಗಿ ಗುರು ತಾನು ಮೊದಲು ತುಂಬಿಕೊಳ್ಳುತ್ತಾನೆ. ಹೀಗೆ ಇಬ್ಬರೂ ಬೆಳೆಯುತ್ತಾರೆ. ನಿಜವಾದ ಗುರು “ಮಲಗಿ ಪರಮಾದರದಿ ಕೇಳಲು ಕುಳಿತು ಕಲಿಸುವ, ಕುಳಿತು ಕೇಳಲು ನಿಲುವ, ನಿಂತು ಕೇಳಿದರೆ ನಲಿದು ಕಲಿಸುವ” ಉತ್ಸಾಹಿಯಾಗಿರುತ್ತಾನೆ. ಗುರು-ಶಿಷ್ಯರ ನಡುವೆ ಜಾತಿ-ಲಿಂಗ-ವಯಸ್ಸು-ಹಣ ಗಳ ಅಂತರ ಬರುವುದಿಲ್ಲ. ಆಸಕ್ತಿ ಶ್ರದ್ದೆ ಅರಿವಿನ ಎಚ್ಚರಗಳು ಮಾತ್ರ ಪರಿಗಣಿಸಲ್ಪಡುತ್ತವೆ. ಗುರು-ಶಿಷ್ಯರ ಸಂಬಂಧ ಮನುಕುಲದ ಎಲ್ಲ ಸಂಬಂಧಗಳಿಂದಲೂ ಒಂದೊಂದು ರಂಗು ಪಡೆದು ಅರಳುವ ಕಾಮನಬಿಲ್ಲಿನ ಹಾಗೆ. ಅರಳುತ್ತರಳುತ್ತಲೇ ಹಗುರಾಗಿ ಹಂಗು ಕಳಚಿ ಮೇಲೆ ಹಾರುವ ಸ್ವರ್ಗೀಯ ಕುಸುಮದ ಹಾಗೆ. ಅಲ್ಲಮ-ಗುಹೇಶ್ವರ, ಸಂತ ಶಿಶುನಾಳ ಶರೀಫ-ಗೋವಿಂದಭಟ್ಟರು ವಿವೇಕಾನಂದ-ಪರಮಹಂಸರು, ಬುದ್ದ ಮತ್ತವನ ಅಸಂಖ್ಯಾತ ಶಿಷ್ಯರು ಸಾವಿರ ಸಾವಿರ ಮಾದರಿಗಳನ್ನು ಬಿಟ್ಟು ಹೋಗಿದ್ದಾರೆ. ಭಾರತೀಯ ಗುರು ಏನೂ ಆಗಬಲ್ಲ ಎಂದು ಜಗತ್ತಿಗೆ ತೋರಿಸಿದ್ದೇವೆ. ಆದರೂ ಕಲ್ಲು ಗೋಡೆಯ ಪಡಕಿನಲ್ಲಿ ಘಿಲ್ಲನೆ ಅರಳುವ ಗರಿಕೆಯ ಹಾಗೆ ಅಲ್ಲೊಂದು ಇಲ್ಲೊಂದು ಪುಟಾಣಿ ಅನುಬಂಧಗಳು ಪಿಳಿ ಪಿಳಿ ನಗುತ್ತವೆ. ಕ್ರೀಡಾ ಜಗತ್ತಿನಲ್ಲಿ ಅನೇಕ ಗುರುಗಳುತಮ್ಮ ಶಿಷ್ಯರನ್ನು ತಾರೆಗಳಾಗಿ ಬೆಳೆಸಿದ ಉದಾಹರಣೆಗಳಿವೆ. ಅನೇಕ ತಾರೆಗಳು ಬಾನೇರಿ ಜಗಮಗಿಸುವಾಗ ಗುರು ನೇಪಥ್ಯದ ಕತ್ತಲಲ್ಲೇ ಮುಳುಗಿರಲೂಬಹುದು. ಪತ್ರಿಕಾರಂಗದಲ್ಲೂ ಅನೇಕರು ಉತ್ತಮ ಶಿಷ್ಯರನ್ನು ಬೆಳೆಸಿದ್ದಾರೆ. ಕೆಲವರು ತಾವು ತಮ್ಮನ್ನು ಗುರುವಾಗಿ ಗುರುತಿಸದಿದ್ದರೂ ಅವರ ಬದುಕನ್ನು ಸಮೀಪದಿಂದ ಕಂಡವರು ಆಂತರ್ಯದ  ಶಿಷ್ಯತ್ವದಿಂದ ಅವರಿಂದ ಕಲಿತು ಬೆಳೆದಿದ್ದಾರೆ.  ಕಲಿಯುವ ಹಂಬಲವುಳ್ಳ ಮನುಜನಿಗೆ ಕಲಿಸುವ ಸಂಗತಿಗಳೆಲ್ಲ ಗುರುವೇ. ನದಿ-ನದ-ಬಾನು-ಬಯಲು-ಹೂ-ದುಂಬಿ-ಸಾಗರ-ಚುಕ್ಕಿ-ಚಂದ್ರಮರೆಲ್ಲ ಹಲವು ಸಂಗತಿಗಳನ್ನು ಕಲಿಸುತ್ತಲೇ ಇದ್ದಾವೆ. ಪ್ರಕ್ರತಿಯಂತಹ ದೊಡ್ಡ ಗುರು ಇನ್ನೊಂದಿಲ್ಲ. ಬಡವನಿಗೆ ಅವನ ಹಸಿವೇ ಗುರು. ದರಿದ್ರನಿಗೆ ಅವನ ಕೊರತೆಯೇ ಗುರು. ದೀನನಿಗೆ ಅವನ ನೋವೇ ಗುರು. ಹುಟ್ಟಿನಿಂದ ಚಟ್ಟದ ತನಕ ನಾವು ಕಾಣುವ ಸಂಗತಿಗಳೆಲ್ಲ ನಮಗೆ ಗುರುವಾಗಬಲ್ಲವು. ಕಲಿಯುವ ವಿಧೇಯತೆ ನಮಗಿದ್ದರೆ ಮಾತ್ರ.  ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ  ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ  ಪರಮ ತತ್ವವ ಕಂಡ ಗುರುವನರಸುವುದೆಲ್ಲಿ?  ದೊರೆತಂದು ನೀಂ ಧನ್ಯ-ಮಂಕುತಿಮ್ಮ  ಸೂರ್ಯನನ್ನು ನೋಡುವುದಕ್ಕಿಂತ ಅವನ ಕಿರಣಗಳನ್ನು ಅನುಭವಿಸುವುದು ಸುಲಭವಾದದ್ದು. ಶ್ರೇಷ್ಠ ಶಾಸ್ತ್ರಗಳನ್ನು ತಿಳಿದುಕೊಳ್ಳುವುದಕ್ಕಿಂತ ಒ೦ದು ಉದಾಹರಣೆಯನ್ನು ಅರಿಯುವುದು ಸುಲಭ. ಆದರೆ ಪರಮ ತತ್ವವನ್ನು ಕಂಡಿರುವ ಗುರುವನ್ನು ಹುಡುಕುವುದು ಕಷ್ಟ. ಅಂತಹ ಗುರು ಸಿಕ್ಕ ದಿನ ನೀನು-ನಾವು ಎಲ್ಲರೂ ಧನ್ಯರು. ಹೀಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಅಸತ್ಯದಿಂದ ಸತ್ಯದ ಕಡೆಗೆ ಸಾಗುತ್ತಿರುವ ಈ ಪ್ರಯಾಣ ಕೇವಲ ಒಬ್ಬ ಗುರುವಿನಿಂದ ಮುಗಿಯುವುದಿಲ್ಲ. ನಾವೆಲ್ಲರೂ ನಮಗೆಲ್ಲರಿಗೂ ಕಲಿಸುತ್ತ ಕಲಿಯುತ್ತ ಸಾಗುವುದೇ ಬದುಕು. *****************************  

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲು ರಚ್ಚೆ ಹಿಡಿದ ಮಗುವಿನಂತೆ ಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆ ತಾಳಬಲ್ಲೆನೇ ಸವಾರಿ? ಕಣ್ಣಂಚಲಿ ಮುತ್ತಿಕ್ಕುತ್ತಿದೆ ಸೋನೆ ಸುಡುವ ಹರಳಿನಂತೆ ಒರೆಸಿಕೊಳ್ಳಲೇ ಸುಮ್ಮನೆ? ಎಷ್ಟೊಂದು ಸಂಕಟದ ಸಾಲಿದೆ ಸೋಲೆಂಬ ಮೂಟೆಯೊಳಗೆ ನಟ್ಟ ನಡು ಬಯಲಿನಲಿ ಒಂಟಿ ಮತ್ತು ಒಂಟಿ ಮಾತ್ರ ಹರಿಯಬಲ್ಲದೇ ಹರಿದಾರಿ? ನಡೆಯುತ್ತದೆಯೇ ದಿಕ್ಕು ಮರೆತ ನೌಕೆ? ಸುತ್ತ ಹತ್ತೂರಿಂದ ಬಂದ ಪುಂಡ ಗಾಳಿ ಹೊತ್ತೊಯ್ದು ಬಿಡುವುದೇ ನೆಟ್ಟ ಹಗಲಿನ ಕಂಪು? ಯಾವ ದಾರಿಯ ಕೈ ಮರವೂ ಕೈ ತೋರುತ್ತಿಲ್ಲ ಮರೆತು ಹೋಗಿದೆ ದಿಕ್ಸೂಚಿಗೂ ಗುರುತು ಕಗ್ಗತ್ತಲ ಕರ‍್ತಿಕದಲಿ ಹಚ್ಚುವ ಹಣತೆಯೂ ನಂಟು ಕಳಚಿದೆ ಮುಖ ಮುಚ್ಚಿಕೊಂಡೀತೆ ಬೆಳಕು ಬಯಲ ಬೆತ್ತಲೆಗೆ? ಮುಗ್ಗರಿಸಿದ ಮಧ್ಯಹಾದಿಯ ಮಗ್ಗಲು ಬದಲಿಸಲೇ? ನೂರೆಂಟು ನವಿಲುಗರಿಗಳ ನಡುವೆ ಹಾರಿದ ಮುಳ್ಳು ಎದೆ ಚುಚ್ಚಿದೆ, ಕಣ್ಣು ನೆಟ್ಟಿದೆ ಮತ್ತು ನೆತ್ತಿಯನ್ನೂ ಕೂಡ ಸೋಲು ಭಾಷೆ ಬದಲಿಸುವುದಿಲ್ಲ ನನಗೋ ಭಾಷೆಗಳು ಬರುವುದೇ ಇಲ್ಲ..   ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಳೆ ಹಾಡು… ಆಶಾ ಜಗದೀಶ್ ತಾರಸಿಯಿಂದ ಇಳಿಯುತ್ತಿರುವಒಂದೊಂದೇ ಹನಿಗಳನ್ನುನಿಲ್ಲಿಸಿ ಮಾತನಾಡಿಸಿಮೆಲ್ಲಗೆ ಹೆಸರ ಕೇಳಿಹಾಗೇ ಮೆಟ್ಟಿಲ ಮೇಲೆನಯವಾಗಿ ಕೂರಿಸಿಕೊಂಡುಈಗ ಬಿಟ್ಟು ಬಂದವನ ನೆನಪೋಬಂದು ಸೇರಿದವನ ನೆನಪೋಒಮ್ಮೆ ಕೇಳಬೇಕಿದೆ ಜಡಿ ಹಿಡಿದು ಸುರಿವಾಗಯಾರ ಮೇಲಿನ ಮೋಹಆವೇಶವಾಗಿ ಆವಾಹಗೊಳ್ಳುತ್ತದೆಜೀವ ಮರಗುಟ್ಟುವ ಶೀತಲೆತೆಯೊಳಗೆಬೆಂಕಿಯೊಂದನ್ನು ನಂದದಂತೆಹೇಗೆ ತಾನೆ ಬಚ್ಚಿಟ್ಟುಕೊಂಡಿರುವೆಎಂದಾದರೂ ಒಂದು ಸಣ್ಣ ಪ್ರಶ್ನೆಗೆಉತ್ತರ ಕೇಳಿಟ್ಟುಕೊಳ್ಳಬೇಕಿದೆ ಮುಚ್ಚಿದ ಕಿಟಕಿಯ ದಾಟಿ ಹಾಯುವತಂಗಾಳಿ ಮೈ ಸೋಕುವಾಗೆಲ್ಲಒಂದು ಮಳೆಹನಿಯ ಹಟದ ಮುಂದೆಯಾವುದೂ ಸಮವಲ್ಲ ಎನಿಸಿಬಿಡುತ್ತದೆಮತ್ತೆ ಮತ್ತೆ ಇಷ್ಟಿಷ್ಟೆ ಚೈತನ್ಯ ಒಟ್ಟಾಗಿಸಿಕೊಂಡುಹನಿಯುವ ಇಚ್ಛಾಶಕ್ತಿಗೆ ಜಗವೇ ಬಾಗಿದೆಅಂತಲೂ ಋತುಚಕ್ರ ತಿರುಗಿದಾಗಲೆಲ್ಲಾಅನಿಸುತ್ತಲೇ ಇರುತ್ತದೆ ಸಣ್ಣದೊಂದು ಹನಿಯೊಡೆದುಸಹಸ್ರಪಟ್ಟು ಅಧಿಕ ಪಾದಗಳ ಗುರುತುಹನಿಗಳುದುರಿ ಹೋದದ್ದರನೆನಪಿಗೆ ಭುವಿಯ ತುಂಬಾ ಬುಗುಟುಒಂದೊಂದು ಬುಗುಟಿನೊಳಗೂಮಿಡಿವ ಹೃದಯ… ಅದು ಸತ್ತಿಲ್ಲಅದು ಬದುಕಿಯೂ ಇಲ್ಲ *************

ಕಾವ್ಯಯಾನ Read Post »

ಇತರೆ

ಕಾವ್ಯ ವಿಶ್ಲೇಷಣೆ

ಟಿ . ಎಸ್. ಏಲಿಯಟ್ ನ ಕವನ “ಜೆ.ಆಲ್ಫ್ರೆಡ್  ಪ್ರುಫ಼್ರಾಕ್ ನ ಪ್ರೇಮ ಗೀತೆ “ ಆಂಗ್ಲ ಸಾಹಿತ್ಯದಲ್ಲಿ ಸ೦ತೃಪ್ತಿಯ ( ಸ್ಯಾಚುರೇಶನ್ ಪಾಯಿ೦ಟ್ ) ಎಲ್ಲೆಯನ್ನು ಮೀರಿ ಏಕತಾನವಾಗುತ್ತಿದ್ದ ರೊಮ್ಯಾಂಟಿಕ್ ಕಾವ್ಯ ಪ್ರಕಾರವನ್ನು ಸ೦ಪೂರ್ಣವಾಗಿ ನಿರಾಕರಿಸಿ ಮಾಡರ್ನಿಸಂನ ಹಾದಿಯಲ್ಲಿ ಸಾಗುತ್ತಾ ಜಗತ್ತಿನ ಸಾಹಿತ್ಯಕ್ಕೇ ಒಂದು ಹೊಸ ತಿರುವನ್ನು ತಂದುಕೊಟ್ಟದ್ದು ಟಿ.ಏಸ್.ಏಲಿಯಟ್. ಅವನಿಗೆ ಬೆಂಬಲವಾಗಿ ನಿ೦ತವನು ಎಜ಼್ರಾಪೌ೦ಡ್. ಏಲಿಯಟ್ ನ ಪ್ರಾರಂಭಿಕ ಕವನಗಳಲ್ಲಿ ಪ್ರಸಿದ್ಧವಾದ ಒಂದು ಕವನ “ಜೆ.ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ ( ಲವ್ ಸಾಂಗ್ ಆಫ್ ಜೆ.ಆಲ್ಫ್ರೆ ಡ್ ಪ್ರುಫ಼್ರಾಕ್). ೧೯೧೫ ರಲ್ಲಿ ಷಿಕಾಗೋದ “ಪೊಯೆಟ್ರಿ”ಪತ್ರಿಕೆಯಲ್ಲಿ ಈ ಕವನ ಪ್ರಕಟಗೊಂಡಾಗ ಸಾಹಿತ್ಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದವು. ಕೆಲವರು, ಹಿಂದೆಂದೂ ಓದಿರದ ಹೊಸ ಶೈಲಿಯ, ಅರ್ಥವಾಗದಿದ್ದರೂ ಮಿಂಚಿನಂತಹ ಕೆಲವು ಸಾಲುಗಳಿಂದ ಆಕರ್ಷಿಸುತ್ತಿದ್ದ ಕವಿತೆಯನ್ನು ಓದಿ ಆಶ್ಚರ್ಯ ಚಕಿತರಾಗಿ ಹುಬ್ಬು ಮೇಲೇರಿಸಿದರು. ಕೆಲವರು ಅದೊಂದು ಪದ್ಯವೇ ಅಲ್ಲವೆಂದು ಅಲ್ಲಗಳೆದರು. ಆರ್ಥರ್ ವಾ ಎಂಬ ವಿಮರ್ಷಕ “ದಿ ಕ್ರಿಟಿಕಲ್ ಕ್ವಾರ್ಟರ್ಲಿ” ಎಂಬ ಪತ್ರಿಕೆಯಲ್ಲಿ ಕವಿತೆಯನ್ನು ಕುರಿತು ” ಲಯದ ಶಿಸ್ತನ್ನೇ ಅರಿಯದ “ಇದೊಂದು ಅರ್ಥಹೀನ ಪ್ರಲಾಪ” ವೆಂದು ಬರೆದ. ಮುಂದುವರಿದು ಏಲಿಯಟ್ ನನ್ನು ” ಎ.ಡ್ರಂಕನ್ ಹೆಲಾಟ್” ಎ೦ದು ಜರೆದ. ಮುಂದೆ ಏಜ಼್ರಾ ಪೌಂಡ್ ಈ ಕವಿತೆಯನ್ನು ವಿಮರ್ಷಿಸುತ್ತಾ ಕವಿತೆಯ ಶಿಲ್ಪದಲ್ಲಿರುವ ನಾವೀನ್ಯತೆಯನ್ನ ಹೊಸ ವಸ್ತು ವಿನ್ಯಾಸವನ್ನ ಎತ್ತಿ ಹಿಡಿದ. ಮುಂದೆ ಏಲಿಯಟ್ ನೋಬೆಲ್ ಪಾರಿತೋಷಕಕ್ಕೆ ಭಾಜನನಾದ. “ಜೆ. ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ” ಒಂದು ವಿಡಂಬನಾತ್ಮಕ ಕವಿತೆ. ಶೀರ್ಶಿಕೆಯಲ್ಲಿರುವಂತೆ ಇದೊಂದು ಪ್ರೇಮ ಗೀತೆಯಲ್ಲ. ಬದಲಿಗೆ ಒಬ್ಬ ಅಳ್ಳೆದೆಯ,ಹ್ಯಾಮ್ಲೆಟ್ ನ ಹಾಗೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಲಾಗದೇ ಸದಾ ತೊಳಲಾಟದಲ್ಲಿರುವ ವ್ಯಕ್ತಿಯೊಬ್ಬನ ಸ್ವಗತವಾಗಿದೆ. ಷಿಕಾಗೋ ದ “ಪೊಯೆಟ್ರಿ” ಎಂಬ ಪತ್ರಿಕೆಯಲ್ಲಿ ಈ ಕವನ ಮೊದಲು ಪ್ರಕಟವಾದಾಗ ಆ ಪತ್ರಿಕೆಯ ಸಂಪಾದಕಿ “ಹ್ಯಾರಿಯೆಟ್ ಮನ್ರೋ” ಗೆ ಬರೆದ ಪತ್ರದಲ್ಲಿ ಕವಿ ತನ್ನ ಕವಿತೆಗೆ “ಪ್ರೇಮ ಗೀತೆ” ಎನ್ನುವ ಶೀರ್ಷಿಕೆ ಯಾವ ರೀತಿಯಲ್ಲೂ ಹೊಂದಾಣಿಕೆಯಾಗದೆಂದು ತನಗೆ ಗೊತ್ತಿದ್ದರೂ “ರುಡ್ಯಾರ್ಡ್  ಕಿಪ್ಲಿಂಗ್” ನ ಕವಿತೆ “ಲವ್ ಸಾಂಗ್ ಆಫ್ ಹರ್-ದಯಾಲ್” ತನ್ನ ಮನಸ್ಸಿನಲ್ಲಿ ನಿ೦ತು ಬಿಟ್ಟಿದ್ದರಿ೦ದ ಅದರ ಆಕರ್ಷಣೆಗೆ ಒಳಗಾಗಿ ಈ ಶೀರ್ಷಿಕೆಯನ್ನು ತನ್ನ ಕವಿತೆಗೆ ನೀಡಿರುವುದಾಗಿ ತಿಳಿಸಿದ್ದಾನೆ. ಕವಿತೆಯಲ್ಲಿ ಬರುವ ಎಲ್ಲ ಪ್ರತಿಮೆಗಳೂ ಪ್ರುಫ್ರಾಕ್ ನ ಇಬ್ಬಂದಿ ತನದ, ತೊಳಲಾಟದ ಪ್ರತೀಕಗಳೇ ಆಗಿವೆ. ಅವನು ಮುಖ್ಯವಾದ ವಿಚಾರವೊಂದನ್ನು ಹೇಳ ಬೇಕೆಂದು ಕೊಳ್ಳುತ್ತಾನೆ. ಆದರೆ ಹೇಳುವುದಿಲ್ಲ. ಅದು ಯಾರಿಗೆ ಎಂಬುದೂ ಸ್ಪಷ್ಟವಾಗಿಲ್ಲ. ಬಹುಶಃ ಅವನು ಪ್ರೀತಿಸುವ ಹುಡುಗಿಗೆ ಇರಬಹುದು ಎನ್ನುವುದು ಕೆಲವರ ಅಭಿಪ್ರಾಯವಾದರೆ ಮತ್ತೆ ಕೆಲವರು ಅವನು ಯಾವುದೋ ತಾತ್ವಿಕ ಒಳನೋಟವನ್ನೋ ಅಥವಾ ಸಮಾಜದಿಂದ ಉಂಟಾದ ಭ್ರಮನಿರಸನವನ್ನೋ ಹೇಳಲಿಚ್ಛಿಸುತ್ತಿದ್ದಾನೆ ಎಂದು ಅಭಿಪ್ರಾಯ ಪಡುತ್ತಾರೆ. ಒಟ್ಟಿನಲ್ಲಿ ಪ್ರುಫ್ರಾಕ್ ನ ದ್ವಂದ್ವದ ತೊಳಲಾಟ ಆಧುನಿಕ ಸಮಾಜದಲ್ಲಿ ಅರ್ಥಪೂರ್ಣ ಅಸ್ತಿತ್ವದ ಬದುಕನ್ನು ಬದುಕಲಾಗದ ಅಸಹಾಯಕತೆಯನ್ನು ಬಿಂಬಿಸುತ್ತದೆ. ಪ್ರುಫ್ರಾಕ್ ಒಬ್ಬ ಸೂಕ್ಷ್ಮ ಸಂವೇದನೆಯ ವ್ಯಕ್ತಿಯಾಗಿದ್ದು ಪ್ರತಿಯೊಂದನ್ನೂ ತಾರ್ಕಿಕವಾಗಿ ನೋಡುವ, ಜಿಜ್ಞಾಸೆಗೆ ಒಳಪಡುವ, ಹಾಗೆಯೇ ಹಿಂಜರಿಕೆಯ ವ್ಯಕ್ತಿತ್ವವುಳ್ಳವನಾಗಿದ್ದಾನೆ. ಹಾಗಾಗಿ ಯಾವ ತೀರ್ಮಾನವನ್ನೂ ಅವನು ತೆಗೆದುಕೊಳ್ಳಲಾರ. ಅವನ ಪ್ರಪಂಚದಲ್ಲಿ ಸುಂದರವಾದ,ಮನಸ್ಸನ್ನು ಅರಳಿಸುವ ಯಾವ ವಸ್ತುಗಳೂ ಅಥವಾ ಸ್ಥಳಗಳೂ ಇಲ್ಲ. ಅವನಿಗೆ ಸ೦ಜೆಯೆನ್ನುವುದು ಕ್ಲೋರೋ ಫಾರ್ಮಿನ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಆಪರೇಷನ್ ಟೇಬಲ್ಲಿನ ಮೇಲೆ ಮಲಗಿದ ಹಾಗೆ ಕಾಣಿಸುತ್ತದೆ. ಅವನು ಕರೆದೊಯ್ಯುವುದು ಹೊಲಸು ರೆಸ್ಟೋರೆಂಟ್ಗಳಿಂದ ಹೊಮ್ಮುವ ಗಬ್ಬು ವಾಸನೆಯ ಬೀದಿಗಳ ಮೂಲಕ. ವಯಸ್ಸು ಮಿರುತ್ತಿರುವ ಪ್ರುಫ್ರಾಕ್ ಹೋಗ ಬೇಕಾಗಿರುವುದು ಒ೦ದು ದೊಡ್ಡ ಮಹಲಿನಲ್ಲಿರುವ ಸುಂದರಿಯರನ್ನು ಭೇಟಿ ಮಾಡಲು. ಆ ಸುಂದರಿಯರು ತಮ್ಮ ಪ್ರತಿಷ್ಠೆಯನ್ನು ಮೆರೆಯಲು ಒಂದು ಕೋಣೆಯಿ೦ದ ಮತ್ತೊಂದಕ್ಕೆ ವೈಯಾರದಿಂದ ನಡೆದಾಡುತ್ತಾ, ಶ್ರೇಷ್ಠ ಫ್ರೆಂಚ್ ಕಲೆಗಾರ, ಶಿಲ್ಪಿ, ಕವಿ ಮೈಖೆಲೇಂಜಲೋನ ಬಗ್ಗೆ, ತಮಗೆ ಅಷ್ಟಾಗಿ ಗೊತ್ತಿರದಿದ್ದರೂ ಬಹಳ ಗೊತ್ತಿರುವವರ ಹಾಗೆ ಮಾತನಾಡುತ್ತಿರುತ್ತಾರೆ.ಅಲ್ಲಿಗೆ ಈ ಅಳ್ಳೆದೆಯ ಪ್ರುಫ್ರಾಕ್ ಹೋಗಿ ಅವರನ್ನು ಭೇಟಿಯಾಗಬೇಕಾಗಿದೆ ಮತ್ತು ವಿಷಯವೊಂದನ್ನು( ಬಹುಶಃ ಪ್ರೇಮ ನಿವೇದನೆಯಿರ ಬಹುದು) ಪ್ರಸ್ತಾಪಿಸ ಬೇಕಾಗಿದೆ. ಆದರೆ ಆ ಹೆಣ್ಣುಗಳು ತನ್ನನ್ನು ನಿರಾಕರಿಸಿಬಿಟ್ಟರೆ ಎ೦ಬ ಭಯದಿಂದ ಅವನು ಕೊನೆಯವರೆಗೂ ತನ್ನ ಮನದ ಇಂಗಿತವನ್ನು ಹೇಳುವುದೇ ಇಲ್ಲ. ಕವನದಲ್ಲಿ ಸೊಗಸಾಗಿ ಮೂಡಿ ಬಂದಿರುವ ಮಹಲಿನ ಕಿಟಕಿ ಗಾಜುಗಳಿಗೆ ಬೆನ್ನುಜ್ಜುವ ಹಳದಿ ಮಂಜು ಮತ್ತು ಹಳದಿ ಗಾಳಿ, ಅದು ಕೊಳಚೆ ಗಟಾರಗಳ ಮೇಲೆ ಸುಳಿದಾಡಿ ಸುಸ್ತಾಗಿ ಸುರುಳಿ ಸುತ್ತಿಕೊಂಡು ಮಲಗುವ ಚಿತ್ರ ಪ್ರುಫ್ರಾಕ್ ನ ಕಲ್ಪನಾ ಲೋಕ ಅಂತ್ಯವಾಗುವ ರೀತಿಯನ್ನು ಸಾರುತ್ತದೆ. ಪ್ರುಫ್ರಾಕ್ ನಿಗೆ ಆಧುನಿಕ ಸಮಾಜದ ಬದುಕು ನೀರಸವೆನಿಸುತ್ತಿದೆ. ಇಂಥ ಸಮಾಜದಿಂದ ದೂರ ಹೋಗಿಬಿಡಬೇಕೆಂಬುದು ಅವನ ಬಯಕೆ. ಅದಕ್ಕಾಗಿ “ ಮೌನ ಶರಧಿಯ ಮೇಲೆ ಸಲೀಸು ಜಾರಬಲ್ಲಂಥ ಜೋಡಿ ಪಂಜಗಳುಳ್ಳವನು ನಾನಾಗಿದ್ದರೆ” ಎಂದುಕೊಳ್ಳುತ್ತಾನೆ. ಹಿಂಜರಿಕೆಯ ಸ್ವಭಾವದ ಪ್ರುಫ್ರಾಕ್ ತನ್ನ ಪ್ರೇಮ ನಿವೇದನೆಯನ್ನು ಕೊನೆಯವರೆಗೂ ಮಾಡಿಕೊಳ್ಳ ಲಾರದವನಾಗಿ ತನ್ನನ್ನೇ ತಾನು ಹೀಗೆ ಪ್ರಶ್ನಿಸಿ ಕೊಳ್ಳುತ್ತಾನೆ : “ ಆ ಗಳಿಗೆಯನ್ನು ಅದರ ಉತ್ತುಂಗಕ್ಕೆ ಕೊಂಡೊಯ್ಯಬಲ್ಲ ಬಲ ಇದೆಯೇ ನನಗೆ”?. ಅದನ್ನು ಹೇಳುವುದು ಅವನಿಗೆ ಎಷ್ಟು ಕಷ್ಟವೆಂದರೆ “ ಮಾಯಾ ಲಾಂದ್ರವೊಂದು ಸ್ಕ್ರೀನಿನ ಮೇಲೆ ನರಗಳ ವಿವಿಧ ವಿನ್ಯಾಸಗಳನ್ನು” ಮೂಡಿಸಿದ ಹಾಗೆ! ಇಷ್ಟೆಲ್ಲಾ ತೊಳಲಾಟಗಳಿದ್ದರೂ, ಡೋಲಾಯಮಾನ ಸ್ವಭಾವದವನಾಗಿದ್ದರೂ ತಾನು ಮಾತ್ರ ರಾಜಕುಮಾರ ಹ್ಯಾಮ್ಲೆಟ್ ಅಲ್ಲ, ಬದಲಿಗೆ ತಾನು ಅವನ ಪರಿಚಾರಕನೆನ್ನುತ್ತಾನೆ. ತನಗೆ ಅವನಾಗುವ ಯಾವ ಯೋಗ್ಯತೆಯೂ ಇಲ್ಲ ಎಂದು ತನ್ನನ್ನು ತಾನು ವಿಡಂಬನಾತ್ಮಕ ವಿಷ್ಲೇಶಣೆಗೆ ಒಳಪಡಿಸಿಕೊಳ್ಳುತ್ತಾ; ತಾನು ಕೆಲವೊಮ್ಮೆ ಹಾಸ್ಯಾಸ್ಪದ ವ್ಯಕ್ತಿ ಮತ್ತು ಕೆಲವೊಮ್ಮೆ ಪೂರ್ಣ ವಿದೂಷಕ ಎನ್ನುತ್ತಾನೆ. ಪ್ರುಫ್ರಾಕನಿಗೆ ತಾನು ಮುದುಕನಾಗುತ್ತಿದ್ದೇನೆ ಎ೦ಬ ಅರಿವು ಇದೆ. ತನ್ನ ಕಲ್ಪನೆಯ ಕಡಲ ಕಿನಾರೆಯಲ್ಲಿ ನಡೆಯುವಾಗ ಮತ್ಸ್ಯ ಕನ್ಯೆಯರು ಹಾಡುವುದನ್ನು ಕೇಳಿಸಿಕೊಳ್ಳುವ ಪ್ರುಫ್ರಾಕ್ನಲ್ಲಿ ಕಡಲ ಕನ್ಯೆಯರು ತನಗಾಗಿ ಹಾಡಲಾರರು ಎ೦ಬ ಅರಿವೂ ಇದೆ. ತಾನು ಹೇಳಬೇಕಾದ್ದನ್ನು ಹೇಳಲಾಗದ ಪ್ರುಫ್ರಾಕ್ ವಾಸ್ತವವನ್ನು ಎದುರಿಸಲಾಗದೇ ತನ್ನ ಕಲ್ಪನಾ ಸಾಮ್ರಾಜ್ಯದ ಕಡಲ ಕೋಣೆಯಲ್ಲಿ ಮತ್ಸ್ಯ ಕನ್ಯೆಯರ ಜತೆಯಲ್ಲಿ ಕಲ್ಪನಾವಿಹಾರದಲ್ಲಿ ಮುಳುಗಿ ಹೋಗುವುದರೊ೦ದಿಗೆ ಕವಿತೆ ಮುಕ್ತಾಯವಾಗುತ್ತದೆ. ಕವಿತೆಯ ಪ್ರಾರ೦ಭಕ್ಕೆ ಮುನ್ನ ಏಲಿಯಟ್ ಡಾ೦ಟೆಯ “ಡಿವೈನ್ ಕಾಮಿಡಿ” ಯಲ್ಲಿ ಡಾ೦ಟೆ ಮತ್ತು ಗ್ಯಿಡೋಡಾ ಮಾಂಟೆಫೆಲ್ಟ್ರೋರ ಭೇಟಿಯ ಸ೦ದರ್ಭದಲ್ಲಿ ಪೋಪ್ ನ ಮಾರ್ಗದರ್ಶಕ ನಾಗಿದ್ದ ಮಾಂಟೇಫೆಲ್ಟ್ರೋ ಡಾ೦ಟೆಗೆ ಹೇಳುವ ಮಾತುಗಳನ್ನು ಬಳಸಿಕೊ೦ಡಿದ್ದಾನೆ. ಪೋಪ್ ಬೋನಿಫೇಸ್ VIII ಗೆ ಸಲಹೆಗಾರನಾಗಿದ್ದ ಗ್ಯಿಡಾಡೋ ಮಾ೦ಟೆ ಫೆಲ್ಟ್ರೋ ನೀಡಿದ ಸಲಹೆಯ ಮೇರೆಗೆ ಪೋಪ್ ದುಷ್ಟ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ಇದರಿ೦ದಾಗಿ ಮಾಂಟೇ ಫೆಲ್ಟ್ರೋ ನರಕದ ನಾಲ್ಕನೆಯ ವೃತ್ತದಲ್ಲಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ. “ಲಾಜರಸ್ ನಾನು, ಸತ್ತವರ ನಡುವಿ೦ದ ಎದ್ದು ಬ೦ದಿದ್ದೇನೆ……” ಎನ್ನುವ ಸಾಲುಗಳಲ್ಲಿ ಉದ್ದ್ರತವಾಗಿರುವ “ಲಾಜರಸ್” ಬೈಬಲ್ಲಿನಲ್ಲಿ ಬರುವ ಒಬ್ಬ ಭಿಕ್ಷುಕ. ಇನ್ನೊಬ್ಬ ಶ್ರೀಮಂತ ಡೈವ್ಸ್ . ಸತ್ತ ಮೇಲೆ ಲಾಜರಸ್ ಸ್ವರ್ಗಕ್ಕೂ, ಡೈವ್ಸ್ ನರಕಕ್ಕೂ ಹೋಗುತ್ತಾರೆ. ನರಕ ಹೇಗಿದೆ ಎಂದು ತನ್ನ ನಾಲ್ಕು ಜನ ಸೋದರರಿಗೆ ತಿಳಿಸಿ ಅವರನ್ನು ಎಚ್ಚರಿಸಲು ಬಯಸುವ ಡೈವ್ಸ್ ಇದಕ್ಕಾಗಿ ಲಾಜರಸ್ನನ್ನು ಭೂಮಿಗೆ ಕಳಿಸಬೇಕೆ೦ದು ಅಬ್ರಾಹಂನನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಅಬ್ರಾಹಂ ಒಪ್ಪುವುದಿಲ್ಲ. ಮೋಸೆಸ್ ಮತ್ತು ಪ್ರವಾದಿಗಳ ಉಪದೇಶವನ್ನು ಕೇಳದ ಹೊರತು ಸತ್ತವನು ಎದ್ದು ಬಂದು ಹೇಳಿದರೂ ನಿನ್ನ ಸೋದರರು ಬದಲಾಗುವುದಿಲ್ಲ ಎ೦ದು ಅಬ್ರಾಹ್ ಹೇಳುತ್ತಾನೆ. ಅಲ್ಲದೆ ಕವಿತೆಯಲ್ಲಿ ಬರುವ “ಅಮರ ಪರಿಚಾರಕ ನನ್ನ ಕೋಟನ್ನು ಎಳೆದು ಕುಚೋದ್ಯ ಮಾಡಿದ್ದನ್ನು ನೋಡಿದ್ದೇನೆ “ಎನ್ನುವ ಸಾಲುಗಳಲ್ಲಿ ಬರುವ “ಅಮರ ಪರಿಚಾರಕ ಸಾವಿನ ಮೂರ್ತ ರೂಪ. ನಾನು ಮಾಡಿದ ಕವಿತೆಯ ಕನ್ನಡಾನುವಾದ ಇಲ್ಲಿದೆ: ಜೆ.ಆಲ್ಫ್ರೆಡ್ ಪ್ರಫ್ರಾಕ್ ನ ಪ್ರೇಮ ಗೀತೆ ನನ್ನ ಉತ್ತರ ಭೂ ಲೋಕಕ್ಕೆ ಎ೦ದೂ ಮರಳದವನಿಗೆ ಎ೦ದು ಯೋಚಿಸಿದ್ದರೆ, ಈ ಜ್ವಾಲೆ ನಿಶ್ಚಲವಾಗುತ್ತಿತ್ತು. ಆದರೆ ನರಕದ ಈ ಕೂಪದಿ೦ದ ಯಾರೂ ಹಿ೦ದಿರುಗಿಲ್ಲವೆಂಬ ನಾನು ಕೇಳಿದ ಮಾತು ನಿಜವೇ ಆಗಿದ್ದರೆ ಯಾವ ಅಪಕೀರ್ತಿಯ ಭಯವೂ ಇಲ್ಲದೇ ನಾನು ಉತ್ತರಿಸ ಬಲ್ಲೆ…. ( ಪೋಪ್ ಬೋನಿಫೇಸ್ VIII ನ ಸಲಹೆಗಾರ ಗ್ಯಿಡೋಡಾ ಮಾ೦ಟೆ ಫೆಲ್ಟ್ರೋ ಡಾ೦ಟೆ ಗೆ ನರಕದಲ್ಲಿ ಹೇಳಿದ್ದು) ಹಾಗಿದ್ದರೆ ನಡಿ ನಾವಿಬ್ಬರೂ ಹೊರಡೋಣ ಇನ್ನು ಟೇಬಲ್ಲಿನ ಮೇಲೆ ಅರಿವಳಿಕೆ ಔಷಧಿಗೆ ಮೈ ಮರೆತು ಮಲಗಿರುವ ರೋಗಿಯಂತೆ ಸಂಜೆ ಹರಡಿರುವಾಗ ಬಾನಿನ ತುಂಬ ಹಾದು ಹೋಗೋಣ ನಡಿ ಅರ್ಧ ಬರಿದಾದ ಬೀದಿಗಳನ್ನ, ಅಶಾಂತ ರಾತ್ರಿಗಳ ಪಿಸುಮಾತಿನ ಅಡಗು ತಾಣಗಳಾದ ಒಂದು ರಾತ್ರಿಯ ಕಳಪೆ ಹೋಟೆಲುಗಳನ್ನ, ಮೃದ್ವಂಗಿ ಕಪ್ಪೆ ಚಿಪ್ಪುಗಳ ಕೊಳಕು ರೆಸ್ಟೋರಂಟುಗಳನ್ನ ಚಕಿತಗೊಳಿಸುವ ಪ್ರಶ್ನೆಗಳೆಡೆಗೆ ನಿನ್ನನ್ನು ಕರೆದೊಯ್ವ ಕುಟಿಲ ವಾದಗಳ ಹಾಗೆ ನಿನ್ನನ್ನು ಬಳಲಿಸುವ ಬೀದಿಗಳನ್ನ. ಓಹ್! ಕೇಳ ಬೇಡ ಇದೇನೆಂದು ಖುದ್ದಾಗಿ ಹೋಗಿ ನೋಡೋಣ ಬಾ. ಕೋಣೆಯೊಳಗೆ ಹೆಂಗಸರು ಬಂದು ಹೋಗುತ್ತಿದ್ದಾರೆ ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ. ಹಳದಿ ಮಂಜು ಬೆನ್ನುಜ್ಜುತ್ತಿದೆ ಕಿಟಕಿ ಗಾಜಿನ ಮೇಲೆ ಹಳದಿ ಹೊಗೆ ಮೂತಿ ಉಜುತ್ತಿದೆ ಕಿಟಕಿ ಗಾಜಿನ ಮೇಲೆ ನಾಲಿಗೆಯಿಂದ ನೆಕ್ಕಿತದು ಸ೦ಜೆಯ ಮೂಲೆ ಮೂಲೆಗಳನ್ನ. ಸುಳಿದಾಡಿತದು ಕೊಳಕು ನೀರು ಮಡುಗಟ್ಟಿನಿ೦ತ ಚರಂಡಿಗಳ ಮೇಲೆ ತಾರಸಿಯಿಂದ ಕಾಲು ಜಾರಿ ಅನಿರೀಕ್ಷಿತ ನೆಗೆಯಿತದು ಕೆಳಗೆ ಅಕ್ಟೋಬರಿನ ಹಿತಕರ ಸಂಜೆಯನ್ನು ನೋಡಿ ಸುತ್ತಿ ಕೊಂಡಿತದು ಮತ್ತೆ ಮನೆಯ ಸುತ್ತಾ. ಹಾಗೆಯೇ ನಿದ್ದೆ ಹೋಯಿತು. ನಿಜಕ್ಕೂ ಕಾಲವಿದೆ ಮು೦ದೆ ಕಿಟಕಿ ಗಾಜುಗಳಿಗೆ ಬೆನ್ನುಜ್ಜುತ್ತಾ ಬೀದಿಯಲ್ಲಿ ಹಾಯ್ದು ಹೋಗುವ ಹಳದಿ ಹೊಗೆಗೆ ಕಾಲವಿದೆ ಮುಂದೆ, ಖಂಡಿತಾ ಕಾಲವಿದೆ ಮುಂದೆ ನೀನು ಭೇಟಿ ಮಾಡುವ ಮುಖಗಳನ್ನು ಭೇಟಿ ಮಾಡುವ ಮುಖವೊಂದನ್ನು ಸಜ್ಜುಗೊಳಿಸಲು ಕಾಲವಿದೆ ಮುಂದೆ ಹತ್ಯೆಗಯ್ಯಲು ಮತ್ತು ಸೃಷ್ಟಿಸಲು ಕಾಲವಿದೆ, ಧುತ್ತನೇ ಪ್ರಶ್ನೆಯೊಂದನ್ನೆತ್ತಿ ನಿನ್ನ ತಟ್ಟೆಗೆ ಹಾಕುವ ಕೈಯ ಕೆಲಸಗಳಿಗೆ ಮತ್ತು ಅದರ ದಿನಗಳಿಗೆ. ನಿನಗೂ ಸಮಯವಿದೆ , ನನಗೂ ಸಮಯವಿದೆ ಮತ್ತು ಸಮಯವಿದೆ ಇನ್ನೂ ನೂರು ಅನಿಶ್ಚತತೆಯ ತೊಳಲಾಟಗಳಿಗೆ ಮತ್ತು ನೂರು ದಾರ್ಶನಿಕತೆಗೆ, ಮತ್ತು ಪುನರಾವಲೋಕನಕ್ಕೆ ಕಾಲವಿದೆ ಎಲ್ಲದಕ್ಕೂ ಚಹ ಮತ್ತು ಟೋಸ್ಟ್ ಗಳನ್ನು ಸೇವಿಸುವ ಮೊದಲು. ಕೋಣೆಯಲ್ಲಿ ಹೆಂಗಸರು ಬ೦ದು ಹೋಗುತ್ತಿದ್ದಾರೆ ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ. ನಿಜಕ್ಕೂ ಕಾಲವಿದೆ ಮು೦ದೆ ನನಗೆ ಎದೆಗಾರಿಕೆ ಇದೆಯೇ? ಇದೆಯೇ ನನಗೆ ಎದೆಗಾರಿಕೆ! ಎಂದು ಅಚ್ಚರಿ ಪಡಲು. ಕಾಲವಿದೆ, ಕೂದಲುಗಳ ನಡುವೆ ಇಷ್ಟಗಲ ಬೋಳಾದ ತಲೆ ಹೊತ್ತು ಹಿಂದಿರುಗಿ ಮೆಟ್ಟಿಲುಗಳನ್ನಿಳಿಯಲು. ( ಹೇಳುತ್ತಾರವರು : ಅವನ ತಲೆಗೂದಲು ಎಷ್ಟು ತೆಳುವಾಗುತ್ತಿದೆ ! ) ನನ್ನ ಬೆಳಗಿನ ಕೋಟು, ಗದ್ದಕ್ಕೆ ತಗುಲುವ೦ತೆ ಸೆಟೆದು ನಿ೦ತ ನನ್ನ ಕಾಲರ್, ದುಬಾರಿ ಬೆಲೆಯ ಆದರೆ ಸರಳವಾದ, ಸಾಧಾರಣ ಪಿನ್ ನಿಂದ ಧೃಡವಾಗಿ ನಿ೦ತ ನನ್ನ ನೆಕ್ ಟೈ ( ಹೇಳುವರು ಅವರು : ಅವನ ಕೈ ಕಾಲುಗಳು ಅದೆಷ್ಟು ಬಡಕಲಾಗಿವೆ!) ಎದೆಗಾರಿಕೆ ಇದೆಯೆ ನನಗೆ ಲೋಕವನ್ನೇ ಅಲ್ಲೋಲ ಕಲ್ಲೋಲ ಗೊಳಿಸಲು? ಕ್ಷಣದಲ್ಲೇ ಕಾಲವಿದೆ ತೆಗೆದು ಕೊಳ್ಳುವ ತೀರ್ಮಾನಗಳಿಗೆ ಮತ್ತು ಪುನರ್ವಿಮರ್ಷಿತ ಮರು ತೀರ್ಮಾನಗಳಿಗೆ ಮತ್ತು ಮರುಕ್ಷಣವೇ ಅವುಗಳ ಬದಲಾವಣೆಗೆ. ಲಾಗಾಯ್ತಿನಿಂದಲೇ ಗೊತ್ತಿದ್ದಾರೆ ಅವರೆಲ್ಲ ನನಗೆ. ಗೊತ್ತಿದ್ದಾರೆ ಅವರೆಲ್ಲ. ನಾ ಬಲ್ಲೆ ಸಂಜೆಗಳನ್ನು , ಬೆಳಗುಗಳನ್ನು, ಮಧ್ಯಾಹ್ನಗಳನ್ನು.

ಕಾವ್ಯ ವಿಶ್ಲೇಷಣೆ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಚಹಾ ಎನ್ನುವ ಜನುಮದ ಸಾಕಿ ಬುಕ್ ಆಫ್ ಟೀ ಲೇಖಕರು – ಕುಮಾರ್ ಎಸ್ ಬೆಲೆ- -100           ಎಲ್ಲವನ್ನೂ ಬೆಸೆದ ಚಹಾ ಪ್ರೀತಿಗೆ ಎನ್ನುವ ಬರೆಹದೊಂದಿಗೆ ಈ ಪುಸ್ತಕ ನನ್ನ ಕೈ ಸೇರಿದಾಗ ಎಷ್ಟೊಂದು ಖುಷಿಯಾಗಿತ್ತು ಎಂದರೆ ಕುಳಿತಲ್ಲೇ ಒಂದು ಕಪ್ಪು ಬಿಸಿಬಿಸಿ ಚಹಾ ಕುಡಿದಷ್ಟು ರಿಲ್ಯಾಕ್ಸ್ ಆಗಿದ್ದೆ.  ನನ್ನ ಚಹಾ ಪ್ರೀತಿಯೇ ಅಂತಹುದ್ದು. ಕೊಟ್ಟರೆ ಮೊಗಮೊಗೆದು ಕುಡಿಯುತ್ತಲೇ ಇರುವ ಇಲ್ಲದಿದ್ದರೆ ದಿನವಿಡೀ ಕುಡಿಯದ ಪ್ರೀತಿಯಂತಹ ಪ್ರೀತಿ ಈ ಚಹ. ಪ್ರೀತಿಯೂ ಹಾಗೆ. ಪ್ರೇಮ ಸಾಗರದಲ್ಲಿ ಮುಳುಗೇಳು ಎಂದರೆ ‘ಮುಳುಗಿಯೇ ಇರುತ್ತೇನೆ ಬಿಡು’ ಎನ್ನಬಲ್ಲೆ ನಾನು. ‘ಬೇಡ, ಒಂಟಿಯಾಗಿರು’ ಎಂದರೆ ಸರಿ ಬಿಡು ಎನ್ನುತ್ತ ಯಾವುದೋ ಪುಸ್ತಕ ಹಿಡಿದು ಕುಳಿತುಬಿಡಲೂ ಸೈ. ಅದಕ್ಕೇ  ನನಗೆ ಈ ಪ್ರೀತಿ ಮತ್ತು ಚಹಾ ಒಂದೇ ರೀತಿಯದ್ದಾಗಿ ಕಾಣುತ್ತದೆ. ಆದರೆ ಪ್ರೀತಿಯಲ್ಲಿರುವ ಸುಖ ಒಂಟಿಯಾಗಿರುವುದರಲ್ಲೆಲ್ಲಿದೆ ಹೇಳಿ? ಹೀಗಾಗಿಯೇ ಚಹ ಕೊಟ್ಟಷ್ಟೂ ಪ್ರೀತಿಯಿಂದ ಕುಡಿಯುತ್ತಲೇ ಇರುತ್ತೇನೆ. ಹೀಗಾಗಿ ಪುಸ್ತಕ ಕೈ ಸೇರಿದಾಗ ಮತ್ತೊಮ್ಮೆ ಚಹಾ ಕುಡಿದಷ್ಟೇ  ಖುಷಿಯಿಂದ ಓದತೊಡಗಿದೆ.     ಈ ಪುಸ್ತಕವನ್ನು ಕುಮಾರ್ ಅವರು ನನಗೆ ಕಳುಹಿಸಲೂ ಒಂದು ಉದ್ದೇಶವಿದೆ. ನಾನು ಆಗ ದಿನಕ್ಕೊಂದರಂತೆ ಚಹಾ ಕವನಗಳನ್ನು ಬರೆಯುತ್ತಿದ್ದೆ. ಹಿಂದಿನ ದಿನ ರಾತ್ರಿ ಕುಳಿತು ಕವನ ಬರೆಯುವುದು, ಬೆಳಗೆದ್ದು ಒಮ್ಮೆ ಅದನ್ನು ಓದಿ, ತಿದ್ದುವುದಿದ್ದರೆ ತಿದ್ದಿ, ಪೋಸ್ಟ್ ಮಾಡುವುದು. ಪ್ರಾರಂಭದಲ್ಲಿ ಕೇವಲ ಇಬ್ಬರು ಸದಾ ಪ್ರೀತಿಸುವ ಜೀವಗಳ- ಅದು ಪ್ರೇಮಿಗಳೂ ಆಗಿರಬಹುದು ಅಥವಾ ಗಂಡ ಹೆಂಡಿರೂ ಆಗಿರಬಹುದು. – ನಡುವಣ ಪ್ರೇಮ ಸಲ್ಲಾಪಕ್ಕೆ ಚಹಾ ಒಂದು ಮಾಧ್ಯಮ ಎಂಬಂತೆ ಚಿತ್ರಿಸಿ ಬರೆಯುತ್ತಿದ್ದರೆ ನಂತರದ ದಿನಗಳಲ್ಲಿ ಹೆಣ್ಣಿನ ಒಳಕುದಿತವನ್ನು ಕುದಿಯುತ್ತಿರುವ ಡಿಕಾಕ್ಷನ್ಗೆ ಹೋಲಿಸಿ ಬರೆಯುತ್ತಿದ್ದೆ. ಬಹಳಷ್ಟು ಜನರಿಗೆ ಅದು ಬಹಳ ಇಷ್ಟವಾಗುತ್ತಿತ್ತು. (ಕೆಲವರಿಗೆ ಕಿರಿಕಿರಿ ಎನ್ನಿಸಿತೆಂದೂ ನಂತರ ತಿಳಿಯಿತು.) ಹಿರಿಯರಾದ ಎಲ್ ಸಿ ನಾಗರಾಜ್ ಚಹಾದ ಕುರಿತು ಜಪಾನಿ ಹಾಯಿಕುಗಳನ್ನು ಕಳಿಸುತ್ತ ಬರೆಯಿರಿ. ನಾನು ಬೇಕಾದ ಮಾಹಿತಿ ಕೊಡುತ್ತೇನೆ ಎನ್ನುತ್ತ ಜಪಾನಿನ ಪ್ರಸಿದ್ದ ಚಹಾ ಗೋಷ್ಠಿಯ ಕುರಿತು ಮಾಹಿತಿ ನೀಡಿದರು. ಈ ಸಮಯದಲ್ಲಿ ಕುಮಾರ್ ಕೂಡ ಈ ಕವಿತೆಗಳನ್ನು ಓದಿ ಅದೆಷ್ಟು ಖುಷಿಪಟ್ಟರೆಂದರೆ ಚಹಾದ ಕುರಿತಾಗಿ ನನ್ನದೊಂದು ಪುಸ್ತಕವಿದೆ ಎಂದು ಕಳಿಸಿಯೇ ಬಿಟ್ಟರು. ಹೀಗೆ ಚಹಾದ ಘಮದ ಬೆನ್ನು ಹತ್ತಿ ಮನೆಗೆ ಬಂದ ಪುಸ್ತಕ ಇದು.           ಕುಡಿಯುವವರು ಯಾವಾಗಲೂ ಹೇಳುವ ಮಾತೊಂದಿದೆ. ‘ನಾವೇನೂ ಕುಡಿಯುವ ಕಿಕ್ಕಿಗಾಗಿ ಕುಡಿಯುತ್ತೇವೆ ಎಂದುಕೊಂಡಿದ್ದೀರಾ? ಹಾಗೇನಿಲ್ಲ. ಕುಡಿಯುವ ನೆಪದಿಂದ ಸ್ನೇಹಿತರೆಲ್ಲ ಜೊತೆಗೆ ಸೇರ್ತೀವಿ, ಎಲ್ಲರ ಮನದ ಮಾತು ಹೊರಗೆ ಬರುತ್ತದೆ, ಎಲ್ಲರೂ ಪರಸ್ಪರ ಮುನಿಸು ಮರೆತು ಮತ್ತೆ ಒಂದಾಗ್ತೀವಿ ಅದಕ್ಕೇ ಕುಡಿಯೋದು.’ ಆಗೆಲ್ಲ ನಾನು ಅಂದುಕೊಳ್ಳುತ್ತಿದ್ದೆ. ‘ಹೌದಲ್ವಾ? ಕುಡಿಯೋಕೆ ಕುಳಿತರೆ ಎಷ್ಟೆಲ್ಲ ವಿಷಯಗಳು ಹೊರಬರುತ್ತವೆ. ಆದರೆ ಅದಕ್ಕೆ ಅಲ್ಕೋಹಾಲ್ ಯಾಕಾಗಬೇಕು? ಚಹ ಆಗುವುದಿಲ್ಲವೇ?’ ಎಂದುಕೊಳ್ಳುವಾಗಲೇ ಈ ಪುಸ್ತಕ ನನ್ನ ಕೈ ಸೇರಿದ್ದು.  ನಿಮ್ಮ ಜೊತೆಗೆ ಒಂದು ಕಪ್ ಚಹಾದೊಂದಿಗೆ ಇದನ್ನೆಲ್ಲ ಹಂಚಿಕೊಳ್ಳಬಹುದೆಂದುಕೊಂಡೇ ಈ ಬುಕ್ ಆಫ್ ಟೀ’ ನಿಮ್ಮ ಕೂಗಿಡುತ್ತಿದ್ದೇನೆ’ ಎನ್ನುತ್ತ ಕುಮಾರ್ ಚಹಾದ ಜಗತ್ತಿನೊಳಗೆ ನಮ್ಮನ್ನೆಲ್ಲ ಅಕ್ಷರಶಃ ಕೈ ಹಿಡಿದು ಯಾತ್ರೆ ಹೊರಡಿಸುತ್ತಾರೆ. ಚಹಾದ ಬಗ್ಗೆ ಇನ್ನೂವರೆಗೆ ನಾವೆಲ್ಲ ಕಂಡು ಕೇಳರಿಯದ ಎಷ್ಟೊಂದು ವಿಷಯಗಳು ಬರುತ್ತವೆಂದರೆ ನಾವು ಕುಡಿಯುವ ಯಕಶ್ಚಿತ್ ಚಹಾದೊಳಗೆ ಇಷ್ಟೆಲ್ಲ ವಿಷಯ ಇದೆಯಾ? ಎಂದು ಖಂಡಿತವಾಗಿ ನಿಬ್ಬೆರಗಾಗಿ ಬಿಡುತ್ತೇವೆ. ಚಹಾದ ಬಗ್ಗೆ ನಾನು ತಿಳಿದುಕೊಳ್ಳಲೇ ಬೇಕೆಂದುಕೊಂಡ  ಎಲ್ಲ ವಿಷಯಗಳೂ ಇಲ್ಲಿದ್ದು ನನ್ನಂತಹ ಚಹಾದ ಬಯಕೆಯವರಿಗೆ ಇದು ಸಣ್ಣ ಎನ್ಸೈಕ್ಲೋಪೀಡಿಯಾ ಅಂತನ್ನಿಸುವುದರಲ್ಲಿ ಯಾವ ಸಂಶಯವೂ ಇಲ್ಲ.    ಚಿಕ್ಕವಳಿರುವಾಗ ನಾನು ಚಹಾ ಕುಡಿಯುತ್ತಲೇ ಇರಲಿಲ್ಲ. ನನ್ನ ಅಣ್ಣ ಈಗಲೂ ಚಹಾ ಕುಡಿಯುವುದಿಲ್ಲ. ‘ಮಾವ ಇನ್ನೂ ಸಣ್ಣ ಪಾಪು, ಹಾಲು ಕುಡಿತಾನೆ’ ನನ್ನ ಮಕ್ಕಳು ನನ್ನಣ್ಣನನ್ನು ಅವನು ಚಹಾ ಕುಡಿಯದಿರುವುದಕ್ಕಾಗಿ ಕಿಚಾಯಿಸುತ್ತಾರೆ. ಚಿಕ್ಕವಳಿದ್ದಾಗ ಚಹಾ ಬೇಕು ಎಂದರೆ ಮೊದಲೇ ಕಪ್ಪು, ಚಹಾ ಕುಡಿದರೆ ಮತ್ತಿಷ್ಟು ಕಪ್ಪಾಗ್ತೀಯಾ ನೋಡು’ ಅಮ್ಮ ಅತ್ತ ಹೆದರಿಸುವ ದನಿಯೂ ಅಲ್ಲದ, ಇತ್ತ ರೇಗುವ ದನಿಯೂ ಅಲ್ಲದ ಧ್ವನಿಯಲ್ಲಿ ಸೀರಿಯಸ್ ಆಗಿ ಹೇಳುವಾಗಲೆಲ್ಲ ತುಟಿಗಿಟ್ಟ ಚಹಾದ ಲೋಟವನ್ನು ಮರುಮಾತನಾಡದೇ ಕೆಳಗಿಡುತ್ತಿದ್ದೆ. ಥೇಟ್ ಅಪ್ಪನ ಬಣ್ಣವನ್ನೇ ಹೊತ್ತುಕೊಂಡು ಬಂದಿದ್ದ ನನಗೆ ಆ ಕ್ಷಣಕ್ಕೆ ನನ್ನ ಬಣ್ಣ ಹಾಗೂ ಚಹಾದ ಸೆಳೆತ ಎರಡೂ ಒಂದೊಂದು ಕಡೆ ಪಾಶ ಹಾಕಿ ಎಳೆದಂತೆ ಭಾಸವಾಗುತ್ತಿತ್ತು. ಆದರೆ ಬಣ್ಣ ಅನ್ನುವುದು ಯೋಚಿಸಬೇಕಾದ ವಿಷಯವೇ ಅಲ್ಲ, ಅಪ್ಪ ನಾನು ಬಣ್ಣದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಮೂಲೆಗೆ ಸೇರದಂತೆ ಕಿವಿ ಮಾತು ಹೇಳುತ್ತಲೇ ಆತ್ಮವಿಶ್ವಾಸ ತುಂಬುವ ಹೊತ್ತಿಗೆ ಅದ್ಯಾವ ಮಾಯಕದಲ್ಲಿ ನಾನು ಚಹಾದ ಅತ್ಯುಗ್ರ ಅಭಿಮಾನಿಯಾಗಿ ಬದಲಾದೆನೋ ನನಗೆ ಅರ್ಥವೇ ಆಗಲಿಲ್ಲ.         ಚಹಾದ ಸಮಗ್ರ ಇತಿಹಾಸವನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ.  ಚಹಾ ಮೊದಲು ಕೇವಲ ಈಗಿನಂತೆ ಪೇಯವಾಗಿರಲಿಲ್ಲ. ಅದೊಂದು ಔಷಧಿಯಾಗಿತ್ತು ಎನ್ನುತ್ತಲೇ ತಮ್ಮ ಚಹಾದ ಅತಿ ಪ್ರೀತಿಗೊಂದು ಘನತೆಯನ್ನು ತಂದುಕೊಡಲೆತ್ನಿಸುತ್ತ ತಮ್ಮ ಬರೆಹವನ್ನು ಪ್ರಾರಂಭಿಸುತ್ತಾರೆ. ಐದು ಸಾವಿರ ವರ್ಷಗಳ ಹಿಂದೆ ಜಗತ್ತಿನ ಮೊಟ್ಟಮೊದಲ ಚಹಾವನ್ನು ತಯಾರಿಸಿದ್ದು ಚೀನಿ ದೊರೆ ಶೆನ್ ನುಂಗ್ ಕೃಷಿ ದೇವರೆಂದೇ ಆತನನ್ನು ಪೂಜಿಸುತ್ತಿದ್ದ ಚೀನಿಯರಿಗೆ ಆತ ಹೊಸ ಹೊಸ ಕೃಷಿ ಪದ್ದತಿಯನ್ನು ಕಲಿಸಿಕೊಟ್ಟಿದ್ದ ಶೆನ್ ನುಂಗ್ ಒಮ್ಮೆ ಔಷಧಿಯ ಸಸ್ಯಗಳನ್ನು ಹುಡುಕುತ್ತ ಹೋದಾಗ ವಿಶ್ರಾಂತಿಗೆಂದು ತಂಗಿದ್ದ ಕುಟೀರದಲ್ಲಿ ಆತನ ಕುದಿಸುವ ನೀರಿನ ಪಾತ್ರೆಗೆ ಎಲ್ಲಿಂದಲೋ ಚಹಾದ ಎಲೆಯೊಂದು ಹಾರಿ ಬಂದು ಬಿದ್ದಿತ್ತಂತೆ. ಅದು ನೀರಿನ ಬಣ್ಣವನ್ನು ಬದಲಾಯಿಸಿತ್ತು. ಅದನ್ನು ಕುಡಿದ ಶೆನ್ ನುಂಗ್ ದೊರೆಗೆ ಆಯಾಸವೆಲ್ಲ ಪರಿಹಾರವಾಗಿ ಹೊಸ ಚೈತನ್ಯ ಮೂಡಿತ್ತಂತೆ. ಆದರೆ ಈಗಿನ ಚೀನಾ- ಭಾರತದ ನಡುವಣ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಹಾ ಚೀನಿಯದ್ದು ಎಂದು ಹೇಳಲೂ ಭಯವೇ ಆದರೂ ಅದು ನಿಷೇಧೀತ ಪಟ್ಟಿಯಲ್ಲಿಲ್ಲ ಎಂಬುದೇ ಚಹಾದ ತಲುಬಿರುವವರಿಗೆ ಸಮಾಧಾನದ ವಿಷಯ. ಯಾಕೆಂದರೆ ಚಹಾ ಕುಡಿಯುವವರಿಗೆ ಒಮ್ಮೆ ಚಹಾ ಕುಡಿಯಬೇಕು ಎನ್ನಿಸಿದರೆ ತಕ್ಷಣವೇ ಕುಡಿಯಲೇ ಬೇಕು ಅನ್ನಿಸಿಬಿಡುತ್ತದೆ. ಆ ಸಮಯದಲ್ಲಿ ಉಳಿದೆಲ್ಲವೂ ನಗಣ್ಯವಾಗಿ ಬಿಡಬಹುದು.  ಆದರೆ ಮತ್ತೊಂದು ಸಮಾಧಾನದ ವಿಷಯವೇನೆಂದರೆ ಕುಮಾರ್ ಉಲ್ಲೇಖಿಸಿದ ಮತ್ತೊಂದು ಕಥೆಯ ಪ್ರಕಾರ ಚಹಾದ ಮೂಲ ಭಾರತವೇ ಆಗಿರುವುದು. ಬೋಧಿಧರ್ಮ ಸತತ ಒಂಬತ್ತು ವರ್ಷಗಳ ಕಾಲ ನಿರಂತರ ಧ್ಯಾನ ಮಾಡುವ ಶಪಥ ಮಾಡಿದ್ದ. ಆದರೆ ಕೆಲವು ಸಮಯದ ನಂತರ ನಿತ್ರಾಣಗೊಂಡು ನಿದ್ದೆ ಹೋದ. ಎದ್ದಾಗ ತನ್ನ ಕಣ್ಣುಗಳ ಮೇಲೆ ಕೋಪಗೊಂಡು ಮುಚ್ಚಿಕೊಂಡ ರೆಪ್ಪೆಗಳನ್ನು ಕಿತ್ತೆಸೆದ. ಆ ರೆಪ್ಪೆಗಳು ಬೇರು ಬಿಟ್ಟು ಗಿಡವಾಗಿ ಬೆಳೆಯಿತು. ಅದರ ಎಲೆಗಳು ಕಣ್ಣಿನ ರೆಪ್ಪೆಯ ಆಕಾರದಲ್ಲೇ ಇತ್ತು. ಆ ಎಲೆಗಳನ್ನು ತಿಂದಾಗ ಆಯಾಸವೆಲ್ಲ ಪರಿಹಾರವಾಗಿ ಉತ್ಸಾಹ ತುಂಬಿಕೊಂಡಿತ್ತು.  ಈತನೇ ಮುಂದೆ ಈ ಗಿಡವನ್ನು ಚೀನಾಕ್ಕೆ ಒಯ್ದನೆಂದು ಹೇಳಲಾಗುತ್ತದೆ. ನಂತರ ಬೇರೆ ಬೇರೆ ದೇಶಗಳಲ್ಲಿ ಚಹಾದ ಮಹಿಮೆ ಹಬ್ಬಿತು.      ಕ್ರಿಶ 726ರಲ್ಲಿ ಚಹಾ ಜಪಾನನ್ನು ಪ್ರವೇಶಿಸಿತು. ಶೋಮು ಎಂಬ ದೊರೆ ಚಹಾದ ಕೃಷಿಯನ್ನು ಪ್ರಾರಂಭಿಸಿದ. ಚೀನಾದ ಹೊರಗೆ ಚಹಾ ಬೆಳೆದ ಮೊದಲ ದೇಶ ಎಂಬ ಹೆಗ್ಗಳಿಕೆ ದೊರೆಯಿತು. ಚೀನಾದಲ್ಲಿ  ಟಿಯಿಸಂ ಬೆಳೆದ ಹಾಗೆ ಜಪಾನಿನಲ್ಲಿ ಚಹಾ ಸಮಾರಾಧನೆ ಎನ್ನುವ ವಿಶಿಷ್ಟ ಸಂಪ್ರದಾಯವೇ ಬೆಳೆಯಿತು. ಹೇಗೆ ಸಮಾರಾಧನೆಯ ಕೋಣೆಯನ್ನು ಪ್ರವೇಶಿಸಬೇಕು, ಹೇಗೆ ನಿಂತುಕೊಳ್ಳಬೇಕು ಎಂಬುದರಿಂದ ಹಿಡಿದು ಪ್ರತಿಯೊಂದನ್ನೂ ಹೀಗೆಯೇ ಮಾಡಬೇಕು ಎನ್ನುವ ನಿಯಮಗಳನ್ನು ರೂಪಿಸಿ ಮಾಡುವ ಸಮಾರಾಧನೆ ಇದು.               16ನೇ ಶತಮಾನದಲ್ಲಿ ಡಚ್ಚರಿಂದ ಚಹಾ ಯುರೋಪಿಗೆ ಪರಿಚಯಿಸಲ್ಪಟ್ಟಿತ್ತು. ಅವರು ಚೀನಾದ ಪ್ರಮುಖ ಬಂದರಾದ ಅಮೋಯ್ ಎಂಬಲ್ಲಿ. ಅಲ್ಲಿನ ವ್ಯಾಪಾರಿಗಳು ತಮ್ಮ ಆಡು ಭಾಷೆಯಲ್ಲಿ ಟೇ ಎನ್ನುತ್ತಿದ್ದರಂತೆ. ಹೀಗಾಗಿ ಡಚ್ಚರು ಅದನ್ನು ಟೀ ಯನ್ನಾಗಿಸಿದರು. 1650ರಲ್ಲಿ ಚಹಾ ಇಂಗ್ಲೆಂಡಿಗೆ ಕಾಲಿಟ್ಟಾಗ ಅದ್ಭುತವೂ, ವೈದ್ಯರಿಂದ ಪ್ರಮಾಣಿಕೃತವೂ ಆದ ಚೀನಿ ಪೇಯ.’ ಎಂದಿದ್ದು ದಾಖಲೆಯಾಗಿ ಉಳಿದಿದೆ. ಮೊದಮೊದಲು ಚಾ, ಚಾಯ್, ಟು, ಟೆ, ಮಿಂಗ್, ಥಿಯ ಮುಂತಾದ ಪದಗಳಿಂದ ಪರಿಚಿತವಾಗಿದ್ದ ಈ ಪಾನೀಯಕ್ಕೆ ಚಹಾ ಹಾಗೂ ಟೀ ಎನ್ನುವ ಹೆಸೆರು ಸೂಟ್ ಆದಷ್ಟು ಬೇರೆ ಯಾವುದೇ ಹೆಸರೂ ಆಗುವುದಿಲ್ಲ.        ನಾನು ಕೆಲಸ ಸಿಕ್ಕ ಸಂಭ್ರಮದಲ್ಲಿ ಯಾವ ಸ್ಥಳ ಒಳ್ಳೆಯದೆಂದೇ ತಿಳಿಯದೇ ಬೆಳ್ತಂಗಡಿಯ ಒಂದು ಕಾಡೊಳಗಿನ ಹಳ್ಳಿಯನ್ನು ಆರಿಸಿಕೊಂಡಿದ್ದೆ. ಅಲ್ಲಿನ ಹೆಚ್ಚಿನವರಿಗೆ ಕನ್ನಡವೇ ಬರುವುದಿಲ್ಲ. ಆದರೆ ನಮಗೆ ತುಳು ಮಾತನಾಡಲು ಬರದಿದ್ದರೆ ‘ಭಾಷೆ ಇಜ್ಜಿ’ ಎನ್ನುವವರು. ಹೀಗಾಗಿ ತುಳು ಕಲಿಯಲೇ ಬೇಕಾಗಿತ್ತು. ಪ್ರೌಢಶಾಲೆಯಲ್ಲಿ ಉಳಿದ ಶಿಕ್ಷಕರೆಲ್ಲ ತುಳು ಮಾತಾಡುವಾಗ ನಾನು ಮುಖ ಮುಖ ನೋಡುತ್ತ ಕುಳಿತುಕೊಳ್ಳಬೇಕಾಗಿತ್ತು. ಹೀಗಾಗಿ ತುಳು ಕಲಿಯುವ ಪ್ರಯತ್ನದಲ್ಲಿ ನನಗೆ ಸಿಕ್ಕ ಮೊದಲ ವಾಕ್ಯವೇ ‘ಚಾ ಪೆರಿಯಾರ?’ ಮುಂದಿನ ವಾಕ್ಯ ‘ಬಲ್ಲೆ, ಚಾ ಪರ್ಕ’ ಹೀಗಾಗಿ ಚಹಾ ನನಗೆ ನನ್ನನ್ನು ತುಳುನಾಡಿನೊಟ್ಟಿಗೆ ಬೆಸೆಯುವ ಕೊಂಡಿಯಾಗಿದ್ದು. ಮುಂದೆ ಈ ‘ಬಲ್ಲೆ ಚಾ ಪರ್ಕ’ ಎನ್ನುವುದು ತುಳುನಾಡಿನ ಪ್ರಸಿದ್ಧ ನಾಟಕವೊಂದರ ಹೆಸರು ಎಂಬುದೂ ಗೊತ್ತಾಗಿದ್ದು. ನಾಟಕಕ್ಕೂ ಚಹಾ ಕುಡಿಯೋಣ ಬನ್ನಿ ಎಂಬ ಹೆಸರಿಡುತ್ತಾರೆಂದರೆ ಈ ಚಹಾ ನಮ್ಮನ್ನು ಎಲ್ಲಿಂದ ಎಲ್ಲಿಗೆ ಬೆಸೆಯುತ್ತದೆ ನೋಡಿ. ‘ಒಬ್ಬ ಬಾಲ್ಟಿಯೊಂದಿಗೆ ನೀವು ಚಹಾ ಕುಡಿಯುತ್ತಿದ್ದೀರಿ ಎಂದರೆ ನೀವೊಬ್ಬ ಅಪರಿಚಿತ ಅಷ್ಟೆ. ಎರಡನೇ ಸಾರಿ ನೀವು ಅವನೊಡನೆ ಚಹಾ ಸೇವಿಸುತ್ತಿದ್ದೀರಿ ಎಂದರೆ ನೀವು ಆತನ ಅತಿಥಿ, ಮೂರನೇ ಸಲ ನೀವು ಅವನೊಂದಿಗೆ ಚಹಾ ಕಪ್ ಹಂಚಿಕೊಳ್ಳುತ್ತಿದ್ದೀರೆಂದರೆ ಅದರರ್ಥ ನೀವು ಆ ಕುಟುಂಬದ ಸದಸ್ಯ. ನಿಮಗಾಗಿ ಆತ ಸಾಯಲೂ ಸಿದ್ಧ ಎಂದರ್ಥ’ ಈ ಮಾತನ್ನು ಹೇಳಿದ್ದು ಒಬ್ಬ ತಾಲಿಬಾನಿಯಂತೆ. ಅಂದರೆ ಚಹಾದ ಶ್ರೇಷ್ಟತೆಯನ್ನು ಅರ್ಥಮಾಡಿಕೊಳ್ಳಿ. ಇಂತಹ ಚಹಾದ ಹಿರಿಮೆಯನ್ನು ಓದುತ್ತಿದ್ದರೆ ನನಗೆ ನಾನೆಲ್ಲೋ ಕಳೆದು ಹೋಗುತ್ತಿದ್ದೇನೆ ಎಂಬಂತೆ ಭಾಸವಾಗುತ್ತಿತ್ತು. ಚಹಾದ ಕುರಿತಾದ ಲೇಖನಗಳೂ ಅಷ್ಟೇ. ಒಂದೊಂದೂ ಒಂದೊಂದು ತರಹ ಚಹಾದ ಬಗ್ಗೆ ಸಮಗ್ರ ಮಾಹಿತಿ ನೀಡುವಂತಹುದ್ದು. ಚಹಾದ ಮೂಲ, ಎಲ್ಲೆಲ್ಲಿ ಬೆಳೆದ ಚಹಾದ ರುಚಿ ಹೇಗಿರುತ್ತದೆ, ವಿವಿಧ ಚಹಾ ಪ್ರಕಾರಗಳ ಬಗ್ಗೆ, ಟೀ ಬ್ಯಾಗ್ ಕುರಿತು,  ಜಾರ್ಜ್ ಆರ್ವೆಲ್ಲರ ಟೀ ಟಿಪ್ಸ್ ಬಗ್ಗೆ, ಚಹಾದ ಎಲೆಗಳನ್ನು ಸಂಗ್ರಹಿಸುವ ಒಣಗಿಸುವ ಹಾಗೂ ಸಂಸ್ಕರಿಸುವ ವಿಧಾನಗಳನ್ನು ತಿಳಿಸುವ ಲೇಖನಗಳು ಖಂಡಿತಾ ಗಮನ ಸೆಳೆಯುತ್ತವೆ. ಹಲವಾರು ತರಹದ ಚಹಾ ಮಾಡುವ ವಿಧಾನಗಳ ಬಗ್ಗೆಯೂ ಲೇಖಕರು ವಿವರವಾಗಿ ತಿಳಿಸುತ್ತಾರೆ. ಇದರೊಟ್ಟಿಗೆ ಬೇರೆ ಬೇರೆ ದೇಶಗಳ ಚಹಾ ಪ್ರೀಯತೆ ಮತ್ತು ಅವರು ಇಷ್ಟಪಡುವ ಚಹಾದ ವೆರೈಟಿಯನ್ನೂ ತಿಳಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಇಷ್ಟ ಎಂಬುದನ್ನು ಬಹು ಚಂದವಾಗಿ ವಿವರಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಜಪಾನಿನಲ್ಲಿ ನಡೆಯುವ ಚಹಾ ಸಮಾರಾಧನೆಯ ಹಾಗೂ ಸೆನ್ ರಿಕ್ಯೂ ಹೇಳಿದ ಚಹಾದ ನಾಲ್ಕು ತತ್ವಗಳು ತೀರಾ ಆಕಷರ್ಿಸುತ್ತವೆ.    ಹಿಂದೆ ನಮ್ಮ ಹಳ್ಳಿಯ ಕಡೆ ಬೆಳಗೆದ್ದು ಚಹಾ ಕುಡಿಯುತ್ತಾರೆಂದರೆ ಕೀಳು ಎಂಬಂತೆ ಕಾಣುತ್ತಿದ್ದರಂತೆ. ‘ಛೀ ಅಂವಾ ಬೆಳಿಗ್ಗೆನೇ ಚಹಾ ಕುಡಿತಾನೆ’ ಎಂದು ಆಡಿಕೊಳ್ಳುತ್ತಿದ್ದುದೂ ಇತ್ತಂತೆ. ನಾವೀಗ ಹೇಗೆ ‘ಅವನು ಬೆಳಿಗ್ಗೆ ಬೆಳಿಗ್ಗೆನೆ ಕುಡಿತಾನೆ’ ಎಂದು ಕುಡುಕರನ್ನು ಆಡಿಕೊಳ್ಳುತ್ತೇವೋ ಹಾಗೆ. ಹಳ್ಳಿಯ ಯಾವುದೋ ಮನೆಯಲ್ಲಿ ಚಹಾವನ್ನು ಬಳಸಲು ಪ್ರಾರಂಭಿಸಿದಾಗ ಹಳ್ಳಿಯ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಜಾಮಿನಿಯ ನೆನಪಿನಲ್ಲಿ ಈ ಮಳೆಗಾಲದಲ್ಲಿಯೇ ನೆನಪುಗಳು ಹುಟ್ಟಿಕೊಂಡಿರಬಹುದು ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಮೋಡಗಳೊಂದಿಗೆ ತಣ್ಣಗೆ ತೇಲಿಬಂದ ನೆನಪೊಂದು, ಏಕಾಂತ ಬಯಸಿ ಟೆರೇಸಿನಲ್ಲಿ ಕುಳಿತು ಆಕಾಶ ದಿಟ್ಟಿಸುತ್ತಿದ್ದ ಹೃದಯವೊಂದನ್ನು ತಾಕಿ ನೆಲಕ್ಕೆ ಇಳಿದಿರಬಹುದು. ಹಾಗೆ ತಾಕಿದ ನೆನಪು ಒಮ್ಮೆ ಬಾಲ್ಯದ ಬೆರಗಾಗಿ, ಇನ್ನೊಮ್ಮೆ ಹರೆಯದ ಕನಸಾಗಿ, ಮತ್ತೊಮ್ಮೆ ಫ್ರಿಡ್ಜ್ ನಲ್ಲಿಟ್ಟ ಐಸ್ ಕ್ರೀಮಾಗಿ ಎಲ್ಲರ ಅರಿವಿಗೂ ದಕ್ಕಿರಬಹುದು. ಹಾಗೆ ದಕ್ಕಿದ ನೆನಪು ಈಗಷ್ಟೇ ಟ್ರೆಕ್ಕಿಂಗ್ ಮುಗಿಸಿದ ಹುಡುಗನೊಬ್ಬನ ಭಾರವಾದ ಬ್ಯಾಗ್ ನಲ್ಲೋ, ಕಾಡುಪಾಪವೊಂದನ್ನು ಕಷ್ಟಪಟ್ಟು ಕ್ಲಿಕ್ಕಿಸಿದ ಫೋಟೋಗ್ರಾಫರ್ ನ ಕ್ಯಾಮರಾದಲ್ಲೋ, ಸಮುದ್ರದಂಚಿಗೆ ಕಾಲುಚಾಚಿ ಕುಳಿತ ಹುಡುಗಿಯೊಬ್ಬಳ ಉಗುರಿನೊಳಗೆ ಸೇರಿಕೊಂಡ ಮರಳಿನ ಕಣಗಳಲ್ಲೋ ಹೊಸದೊಂದು ರೂಪ ಪಡೆದುಕೊಂಡಿರಬಹುದು. ಹೀಗೆ ಹೊಸ ರೂಪ ಪಡೆದ ನೆನಪುಗಳೆಲ್ಲ ಒಂದೊಂದಾಗಿ ಹಿಂದೆಮುಂದೆ ಸುಳಿದಾಡಿ ಅವನೆಂದರೆ ಇವಳು, ಇವಳೆಂದರೆ ಬದುಕು ಹೀಗೆ ಎಲ್ಲವೂ ಹುಟ್ಟಿಕೊಂಡಿರಬಹುದು.      ಬದುಕು ಸಹ್ಯವಾಗುತ್ತಾ, ಸಲೀಸಾಗುತ್ತಾ ಸಾಗಬೇಕೆಂದರೆ ಅಲ್ಲೊಂದಿಷ್ಟು ಸುಂದರ ನೆನಪುಗಳು ಸರಿದಾಡುತ್ತಿರಬೇಕು. ಅಪ್ಪ ದೀಪಾವಳಿಗೆಂದು ತಂದುಕೊಟ್ಟ ಫ್ರಾಕಿನ ಮೇಲೆ ಪ್ರಿಂಟಾಗಿದ್ದ ಕೀಲಿಕೈಗಳು, ವಾಲಿಬಾಲ್ ಕೋರ್ಟ್ ನೊಳಗಿಂದಲೇ ಕದ್ದು ನೋಡುತ್ತಿದ್ದ ಹತ್ತನೇ ಕ್ಲಾಸಿನ ಹುಡುಗನ ಕಣ್ಣುಗಳಲ್ಲಿರುತ್ತಿದ್ದ ತುಂಟತನ, ಗಾಳಿ ಕೂಡಾ ನುಸುಳಲು ಸಾಧ್ಯವಾಗದಂತೆ ತುಂಬಿರುತ್ತಿದ್ದ ಸಿಟಿಬಸ್ಸನ್ನು ಸೇಫಾಗಿ ಕಾಲೇಜು ತಲುಪಿಸುತ್ತಿದ್ದ ಡ್ರೈವರ್ ಸಲೀಮಣ್ಣನ ಸಹನೆ, ಆಫೀಸಿನ ಗ್ರಾನೈಟ್ ಕಟ್ಟೆಯ ಮೇಲೆ ತಪಸ್ಸಿಗೆ ಕೂತ ಕಾಮಧೇನುವಿನಂಥ ಕಾಫಿ ಮಷಿನ್ನು ಹೀಗೇ ಲಕ್ಷ್ಯಕ್ಕೇ ಬಾರದ ಸಣ್ಣಪುಟ್ಟ ಸಂಗತಿಗಳೆಲ್ಲ ನೆನಪಾಗಿ ದಿನನಿತ್ಯ ಎದುರಾಗುತ್ತಲೇ ಇರುತ್ತವೆ. ಈ ನೆನಪುಗಳೊಟ್ಟಿಗಿನ ಸಾಂಗತ್ಯ ಸಾಧ್ಯವಾಗದೇ ಇದ್ದಿದ್ದರೆ ಪಾರಿವಾಳವೊಂದು ಪತ್ರ ವಿಲೇವಾರಿ ಮಾಡಿದ ಕಥೆಯೊಂದು ಸಿನೆಮಾವಾಗುತ್ತಲೇ ಇರಲಿಲ್ಲ; ಆ ಸಿನೆಮಾದ ಡ್ಯೂಯೆಟ್ ಒಂದು ಬಾತ್ ರೂಮ್ ಸಿಂಗರ್ ಗಳನ್ನು ಹುಟ್ಟುಹಾಕುತ್ತಿರಲಿಲ್ಲ; ಅಪ್ಪ-ಅಮ್ಮನ ವಿರೋಧವನ್ನು ಧಿಕ್ಕರಿಸಿ ಒಂದಾಗುವ ಪ್ರೇಮಿಗಳು ಆದರ್ಶಪ್ರೇಮವೊಂದರ ಉದಾಹರಣೆಯಾಗುತ್ತಿರಲಿಲ್ಲ. ಹೀಗೇ ನವರಸಗಳನ್ನೂ ಒಟ್ಟೊಟ್ಟಿಗೇ ನಮ್ಮೆದುರು ಬಿಚ್ಚಿಡುವ ಸಾಮರ್ಥ್ಯವೊಂದು ಅದು ಹೇಗೋ ಈ ನೆನಪಿಗೆ ಸಿದ್ಧಿಸಿದೆ.      ನೆನಪಿನ ಒಡನಾಟದಲ್ಲಿ ವಿಷಾದವೆನ್ನುವುದು ಇರದಿದ್ದರೆ ಬದುಕು ಇನ್ನಷ್ಟು ವರ್ಣಮಯವೆನ್ನಿಸುತ್ತಿದ್ದಿರಬಹುದು. ಹೊಸ ಸೀರೆಗೊಂದು ಮ್ಯಾಚಿಂಗ್ ಚಪ್ಪಲಿ ಧರಿಸಿ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿಯೊಂದಕ್ಕೆ ಹೋದಾಗ, ಊಟದ ತಟ್ಟೆಯಲ್ಲಿನ ಜಿಲೇಬಿಯೊಂದು ಜಿಲೇಬಿಪ್ರಿಯರನ್ನೆಲ್ಲ ನೆನಪಿಸುವುದುಂಟು. ಹಾಗೆ ಥಟ್ಟನೆ ನೆನಪಿಗೆ ಬರುವವರ ಲಿಸ್ಟ್ ನಲ್ಲಿ ಹೈಸ್ಕೂಲಿನ ಬೆಂಚಿನ ಮೇಲೆ ಊಟ ಹಂಚಿಕೊಂಡು ತಿಂದ ಗೆಳತಿಯೊಬ್ಬಳಿರಬಹುದು; ಮದುವೆ-ಮುಂಜಿಗಳಲ್ಲಿ ಮಾತ್ರ ಭೇಟಿಯಾಗುವ ದೂರದ ಸಂಬಂಧಿಯೊಬ್ಬನಿರಬಹುದು; ಫೇಸ್ ಬುಕ್ ಪೇಜಿನಲ್ಲಿ ಕಾಣಿಸಿಕೊಂಡ ಜಿಲೇಬಿ ತಿನ್ನುತ್ತಿರುವ ಪುಟ್ಟ ಮಗುವೊಂದಿರಬಹುದು. ಆ ಲಿಸ್ಟ್ ನಲ್ಲಿರುವ ಎಲ್ಲರೊಂದಿಗೂ ಕುಳಿತು ಜಿಲೇಬಿ ತಿನ್ನಲಾಗುವುದಿಲ್ಲ ಎನ್ನುವ ಸತ್ಯವೊಂದು ಗೊತ್ತಿದ್ದರೂ, ಅವರ ಊಟದ ತಟ್ಟೆಯಲ್ಲಿಯೂ ಜಿಲೇಬಿ ಲಭ್ಯವಿರುತ್ತದೆಯೆನ್ನುವ ಸಮಾಧಾನವೊಂದು ನೆನಪುಗಳನ್ನು ಸಲಹುತ್ತಿರುತ್ತದೆ. ಆದರೆ ಆ ಲಿಸ್ಟ್ ನಲ್ಲಿದ್ದ ಮುಖವೊಂದು ಇನ್ನೆಂದಿಗೂ ಎದುರಾಗುವುದೇ ಇಲ್ಲವೆನ್ನುವ ವಿಷಾದವೊಂದು ನೆನಪಿನ ರೂಪದಲ್ಲಿ ಜಿಲೇಬಿಯೊಂದಿಗೆ ಪ್ಲೇಟಿನ ತುದಿಯಲ್ಲಿ ಕಾಣಿಸಿಕೊಂಡಾಗ, ಜಿಲೇಬಿಯೆಡೆಗಿನ ಮೋಹ ಇನ್ನಿಲ್ಲದಂತೆ ಮಾಯವಾಗಿಬಿಡುತ್ತದೆ. ಹಾಗೆ ಲಿಸ್ಟ್ ನಿಂದ ಥಟ್ಟನೆ ಅರಿವಿಗೇ ಬಾರದಂತೆ ಕಳೆದುಹೋದವಳು ಜಾಮಿನಿ.      ಮಣಿಪುರದ ಹುಡುಗಿ ಜಾಮಿನಿ ನನ್ನೊಂದಿಗೇ ಕೆಲಸಕ್ಕೆ ಸೇರಿದವಳು. ಮೆತ್ತನೆಯ ಕೂದಲನ್ನು ಮೇಲಕ್ಕೆ ಎತ್ತಿಕಟ್ಟಿ ಜುಟ್ಟು ಅಲ್ಲಾಡಿಸುತ್ತಾ ಫ್ಲೋರ್ ತುಂಬಾ ಓಡಾಡುತ್ತಿದ್ದ ಜಾಮಿನಿ, ಅವಳ ಅಪರೂಪದ ಹೆಸರಿನಿಂದಾಗಿ ಆಫೀಸಿನಲ್ಲೆಲ್ಲ ಫೇಮಸ್ಸಾಗಿದ್ದಳು. ಮೆಲುಮಾತಿನ ಮಿತಭಾಷಿ ಜಾಮಿನಿ ಮನಸ್ಸಿಗೆ ಹತ್ತಿರವಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ತುಂಬುಕುಟುಂಬವೊಂದರ ಕಿರಿಯ ಸೊಸೆಯರಂತೆ ನಾವಿಬ್ಬರೂ ಮನಬಂದಾಗ ಕೆಲಸ ಮಾಡುತ್ತಾ, ಪಾಪ್ ಕಾರ್ನ್ ತಿನ್ನುತ್ತಾ ವರ್ಷಗಳನ್ನೇ ಕಳೆದೆವು. ಮೆಚ್ಚಿದ ಹುಡುಗನನ್ನು ಮದುವೆಯಾದ ಜಾಮಿನಿ ಕೆಲಸ ಬಿಟ್ಟು ಬೇರೆಡೆ ಸೇರಿಕೊಂಡಳು. ನಂತರದ ಐದು ವರ್ಷಗಳಲ್ಲಿ ಒಮ್ಮೆ ಭೇಟಿಯಾಗಿದ್ದು ಬಿಟ್ಟರೆ ಜಾಸ್ತಿ ಮಾತುಕತೆಯೇನೂ ನಮ್ಮಿಬ್ಬರ ಮಧ್ಯೆ ಇರಲಿಲ್ಲ. ಊಟ ಮಾಡುವಾಗಲೋ, ಪಾಪ್ ಕಾರ್ನ್ ತಿನ್ನುವಾಗಲೋ, ಕೆಲವೊಮ್ಮೆ ಮೀಟಿಂಗುಗಳಲ್ಲೋ ಅವಳ ವಿಷಯ ಪ್ರಸ್ತಾಪವಾಗುತ್ತಾ ಫ್ಲೋರ್ ನಲ್ಲಿ ಅವಳ ನೆನಪೊಂದು ಸುಳಿದಾಡುತ್ತಲೇ ಇತ್ತು. ಅಚಾನಕ್ಕಾಗಿ ಒಮ್ಮೆ ಮಧ್ಯಾಹ್ನದ ಹೊತ್ತು ಫೋನ್ ಮಾಡಿದವಳೇ, ಮಾತನಾಡುವುದಿದೆ ಭೇಟಿ ಆಗಬೇಕು ಎಂದಳು. ಅನಿವಾರ್ಯ ಕಾರಣಗಳಿಂದ ಆ ವೀಕೆಂಡ್ ಭೇಟಿ ಸಾಧ್ಯವಾಗಲೇ ಇಲ್ಲ. ಮುಂದಿನ ಶನಿವಾರ ಭೇಟಿಯಾಗುವುದಾಗಿ ಮೆಸೇಜ್ ಕಳಿಸಿ ಸುಮ್ಮನಾಗಿಬಿಟ್ಟೆ. ಅದಾಗಿ ನಾಲ್ಕೇ ದಿನಕ್ಕೆ, ಗುರುವಾರ ಸಂಜೆ ಕ್ಯಾಬ್ ನಲ್ಲಿ ಕುಳಿತು ಮೊಬೈಲ್ ತೆಗೆದರೆ ಜಾಮಿನಿ ಇನ್ನಿಲ್ಲವೆಂಬ ಸುದ್ದಿ ಹರಿದಾಡುತ್ತಿತ್ತು. ಏನಾಗಿತ್ತು, ಏನಾಯಿತು, ಅವಳ ಸಾವಿಗೆ ಕಾರಣವೇನು ಎನ್ನುವ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ಅವಳು ಎರಡು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದಳೆಂಬ ವಿಷಯವೇ ನಮಗೆಲ್ಲ ಅವಳ ಬಗ್ಗೆ ದೊರಕಿದ ಕೊನೆಯ ಮಾಹಿತಿ. ಅವಳ ಮನಸ್ಸಿನಲ್ಲಿ ಏನಿತ್ತು, ಅವಳು ನನ್ನ ಹತ್ತಿರ ಮಾತನಾಡಬೇಕೆಂದಿದ್ದ ವಿಷಯ ಏನಿದ್ದಿರಬಹುದು, ಅವಳ ಸಮಸ್ಯೆಗೆ ನನ್ನಲ್ಲೇನಾದರೂ ಉತ್ತರವಿತ್ತೇ ಎನ್ನುವಂತಹ ಎಲ್ಲ ಪ್ರಶ್ನೆಗಳಿಗೂ ಈಗಲೂ ಉತ್ತರ ಹುಡುಕುತ್ತಲೇ ಇದ್ದೇನೆ. ನಾನು ಆ ವೀಕೆಂಡ್ ಅವಳನ್ನು ಭೇಟಿಯಾಗಿದ್ದರೆ ಅವಳ ಸಾವನ್ನು ತಪ್ಪಿಸಲು ಸಾಧ್ಯವಿತ್ತೇನೋ ಅಥವಾ ಕೊನೆಪಕ್ಷ ಮುಂದೂಡಬಹುದಿತ್ತೇನೋ ಎನ್ನುವ ಎಲ್ಲ ತಪ್ಪಿತಸ್ಥ ಭಾವನೆಗಳು ಈಗಲೂ ಹಾಗೆಯೇ ಇವೆ. ಜಾಮಿನಿಯ ಘಟನೆಯ ನಂತರ ಯಾರಾದರೂ ಭೇಟಿಯಾಗುವ ಪ್ರಸ್ತಾಪವನ್ನಿಟ್ಟರೆ ಕೆಲಸಗಳನ್ನೆಲ್ಲ ಬದಿಗಿಟ್ಟು, ಜೊತೆಗೊಂದು ಮಸಾಲೆದೋಸೆ ತಿಂದು ಬರುತ್ತೇನೆ. ಹಾಗೆ ಜೊತೆಯಾಗಿ ಕುಡಿದ ಕಾಫಿಯೊಂದು ಯಾವುದೋ ದುಃಖವೊಂದರ ಸಮಾಧಾನವಾಗಿರಬಹುದು; ಸಮಸ್ಯೆಯೊಂದಕ್ಕೆ ಪರಿಹಾರವೂ ಆಗಬಹುದು; ಏನಿಲ್ಲವೆಂದರೂ ಅಲ್ಲೊಂದು ಸುಂದರವಾದ ನೆನಪು ಹುಟ್ಟಿಕೊಳ್ಳಬಹುದು; ಆ ನೆನಪು ಜಾಮಿನಿಯಿಲ್ಲದ ನೋವನ್ನು ಕೊಂಚವಾದರೂ ಕಡಿಮೆ ಮಾಡಬಹುದು.      ನೋವಿನೊಂದಿಗಿನ ನೆನಪಿನ ಪಯಣ ಯಾವಾಗಲೂ ದೀರ್ಘ. ಖುಷಿಯಾಗಿ, ಸುಖವಾಗಿ ಕಳೆದ ಗಳಿಗೆಗಳನ್ನು ಎಷ್ಟೋ ಸಲ ಮರೆತೇಹೋಗಿರುತ್ತೇವಾದರೂ, ನೆನಪಲ್ಲಿ ಉಳಿದುಹೋದ ನೋವು ಮಾತ್ರ ಬೇಗ ಮರೆಯಾಗುವಂಥದ್ದಲ್ಲ. ಕಾರಣವೇ ಇಲ್ಲದೇ ಮುರಿದುಬಿದ್ದ ಮೊದಲಪ್ರೇಮ, ಆಪ್ತ ಸಂವಹನವಿಲ್ಲದೇ ಮುಗಿದುಹೋದ ಗೆಳೆತನ, ಅಜ್ಜಿಯ ಸಾವು ಹೀಗೇ ನೋವು ತರುವ ನೆನಪೊಂದು ಎಲ್ಲರ ಬದುಕಿನಲ್ಲೂ ಬೇಡವೆಂದರೂ ಜೀವಂತವಾಗಿರುತ್ತದೆ. ಅಂಥದ್ದೇ ಒಂದು ಅತ್ತ ತೀರಾ ಗಂಭೀರವೂ ಅಲ್ಲದ ಹಾಗಂತ ನಿರ್ಲಕ್ಷ್ಯಿಸಲೂ ಸಾಧ್ಯವಾಗದ, ನೆನಪಿನಿಂದ ಎಂದೂ ಮರೆಯಾಗದ ನೋವೆಂದರೆ ಮನೆಗಳನ್ನು ಬದಲಾಯಿಸುವುದು. ಕೆಲಸಕ್ಕಾಗಿ ಊರು ಬದಲಾಯಿಸುವವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ನಾಲ್ಕೈದು ಮನೆಗಳಾದರೂ ನೆನಪಿನ ಅರಮನೆಗಳಾಗಿ ಉಳಿದುಕೊಂಡಿರುತ್ತವೆ. ಪುಟ್ಟ ಮನೆಯೊಂದರ ಹಾಲ್ ನಲ್ಲಿ ರಾಜಗಾಂಭೀರ್ಯದಲ್ಲಿ ಕುಳಿತಿರುತ್ತಿದ್ದ ಆರಾಮ ಕುರ್ಚಿ, ವಿಶಾಲವಾದ ಮನೆಯಂಗಳದ ಅಂಚಿನಲ್ಲಿ ಯಾರೋ ನೆಟ್ಟು ಬೆಳೆಸಿದ್ದ ಕರಿಬೇವಿನ ಗಿಡ, ಅಪಾರ್ಟ್ಮೆಂಟಿನ ಫ್ಲ್ಯಾಟ್ ನ ಬಾಲ್ಕನಿಯ ಸರಳುಗಳಿಗೆ ಹಬ್ಬಿಕೊಂಡಿದ್ದ ಮನಿಪ್ಲಾಂಟ್ ಹೀಗೇ ಒಂದೊಂದು ಮನೆಯೂ ಸಿಂಪಲ್ಲಾದ ಯಾವುದೋ ನೆನಪಿನೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಮನೆ ಬದಲಾದಾಗ ಲಕ್ಷಗಟ್ಟಲೆ ಸುರಿದು ಸೋಫಾ ಖರೀದಿಸಿ ಮನೆಯನ್ನು ಅಲಂಕರಿಸಿದರೂ ಹಳೆಮನೆಯಲ್ಲಿದ್ದ ಆರಾಮ ಕುರ್ಚಿ ಆಗಾಗ ನೆನಪಿಗೆ ಬಂದು ಸುಖದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿರುತ್ತದೆ. ಹೀಗೆ ಸುಖ-ದುಃಖ, ನೋವು-ನಲಿವು ಎನ್ನುವ ಭಾವನೆಗಳೆಲ್ಲವೂ ನೆನಪಿನ ವ್ಯಾಪ್ತಿಯಲ್ಲಿ ಸ್ಥಾನಪಲ್ಲಟಗೊಳ್ಳುತ್ತಾ, ಹೊಸದಾಗಿ ಸೇರ್ಪಡೆಯಾದ ನೆನಪೊಂದು ಹಳೆಯ ನೆನಪುಗಳೊಂದಿಗೆ ವಾದ-ಸಂವಾದಗಳನ್ನು ನಡೆಸುತ್ತಾ ಬದುಕಿನ ಚಲನೆಯುದ್ದಕ್ಕೂ ನೆನಪಿನ ಹೆಜ್ಜೆಗಳು ಜೊತೆಯಾಗುತ್ತಲೇ ಇರುತ್ತವೆ. ದೀಪಾವಳಿಯ ಫ್ರಾಕಿನ ಮೇಲಿದ್ದ ಕೀಲಿಕೈಗಳೆಲ್ಲ ಬದಲಾಯಿಸಿದ ಮನೆಗಳ ನೆನಪೆಲ್ಲವನ್ನೂ ಜೋಪಾನ ಮಾಡಿದರೆ, ಥಿಯೇಟರಿನಲ್ಲಿ ಹೊಸ ಸಿನೆಮಾ ನೋಡುತ್ತಾ ಪಾಪ್ ಕಾರ್ನ್ ತಿನ್ನುವಾಗ ಜಾಮಿನಿಯ ನೆನಪೊಂದು ಪಕ್ಕದ ಸೀಟಿನಲ್ಲಿ ತಣ್ಣಗೆ ಕುಳಿತಿರುತ್ತದೆ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

You cannot copy content of this page

Scroll to Top