ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. ಹಿಂದೆ ಎಷ್ಟೋ ಆಗಿವೆ, ಮುಂದೆ ಆಗಲಿವೆ. ಕೋವಿಡ್ ೧೯ ರ ದಾಳಿಯಿಂದ, ವಿಶ್ವ ಒಂದು ಅನಿವಾರ್ಯ ಬದಲಾವಣೆ ಮಾಡಲೇ ಕೊಳ್ಳಬೇಕಾದ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಬದಲಾವಣೆ ಅನಿವಾರ್ಯ. ಅದರಲ್ಲಿ ಒಂದು ಮಹತ್ವದ ಕ್ಷೇತ್ರ ಶಿಕ್ಷಣ. ಕೊರೊನಾ ರೋಗ ಹಬ್ಬುವ ವೇಗ ಮತ್ತು ವ್ಯಾಪ್ತಿಯನ್ನು ನೋಡಿದರೆ ಆನ್ ಲೈನ್ ಶಿಕ್ಷಣವೇ ಸೂಕ್ತ ಸಧ್ಯದ ಪರಿಸ್ಥಿತಿಯಲ್ಲಿ. ಸಾಂಕ್ರಾಮಿಕ ರೋಗದ ಉಡಿಯಲ್ಲಿ ಭವಿಷ್ಯದ ಆಸ್ತಿಯಾಗಿರುವ ಮಕ್ಕಳನ್ನು ಹಾಕುವ ರಿಸ್ಕ್ ತೆಗೆದುಕೊಳ್ಳಲಾಗದು. ಶಾಲೆಗಳನ್ನು ಪ್ರಾರಂಭಿಸುವದನ್ನು ಅನಿಶ್ಚಿತ ಅವಧಿಗೆ ತಳ್ಳಲಾಗಿದೆ. ಹೀಗಿರುವಾಗ ಎಲ್ಲರನ್ನೂ ಕಾಡುವ ಪ್ರಶ್ನೆ – ಮುಂದೇನು? ಆನ್ ಲೈನ್ ಶಿಕ್ಷಣಕ್ಕೆ ಅದರದೇ ಆದ ಸಾಧಕ ಭಾದಕಗಳಿವೆ (Bright side and dark side). ಏನೇ ಆದರೂ ಸಧ್ಯಕ್ಕಂತೂ ಕಂಪ್ಯೂಟರ್ ಮುಖಾಂತರ ವಿದ್ಯೆಗೆ ಮಣೆ ಹಾಕಬೇಕು. ಆದರೆ ಯಾವ ವಯಸ್ಸಿನವರಿಗೆ? ದೊಡ್ಡವರು ಈಗಾಗಲೇ ಕಂಪ್ಯೂಟರ್ ಗೆ ಸ್ವಲ್ಪ ಮಟ್ಟಿಗೆ ಪರಿಚಿತರು. ಆದರೆ ಪ್ರಾಥಮಿಕ ಶಿಕ್ಷಣ ಪಡೆಯಬೇಕಾದ ಎಳೆಯರು! ಅವರಿಗೂ ಕೂಡ ಪರಿಚಯಿಸಬೇಕಾದ ಸಂದರ್ಭ. ಇದರ ಪರಿಣಾಮ ಎಲ್ಲ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರಕಾರಕ್ಕೆ ಅಲ್ಲದೆ ಭವಿಷ್ಯಕ್ಕೆ ಆಗಲಿದೆ. ಮೊದಲು ಅನುಕೂಲ ಅನಾನುಕೂಲಗಳನ್ನು ನೋಡೋಣ. *ಬಾಧಕಗಳು *:೧. ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಲಭ್ಯ ಬೇಕು. ಬಡವರಿಗೆ ಅಷ್ಟೇ ಯಾಕೆ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯ.೨. ಸಹಾಯ ಮಾಡಲು ತಂದೆ, ತಾಯಿ ಮತ್ತಾರೋ ಮಗುವಿನ ಒಟ್ಟಿಗೆ ಕೊಡಬೇಕು. ಅವರಿಗೂ ಶಿಕ್ಷಕರಿಗೆ ಇರಬೇಕಾದ ತಿಳುವಳಿಕೆ ಇರಬೇಕು. ಇದು ಎಷ್ಟರಮಟ್ಟಿಗೆ ಸಾಧ್ಯ. ಅಲ್ಲದೆ ದುಡಿಯಲು ಹೊರಗೆ ಹೋಗುವವರು ಇದಕ್ಕೆ ಒಪ್ಪಿಯಾರೇ?೩. ಪೋಷಕರು ಮನೆಯಿಂದ ಹೊರಗೆ ಹೋದರೆ ಚಿಕ್ಕ ಮಕ್ಕಳು ಮನೆಯಲ್ಲಿ ಒಂಟಿಯಾಗಿರಬೇಕಾದ ಸಮಸ್ಯೆ.೪. ಇದೆಲ್ಲಾ ಕೂಡಿ ಬಂದರೂ ಮಗುವಿನ ಮನಸ್ಸು ಮತ್ತು ಬುದ್ಧಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಶಾಲೆಯಲ್ಲಿ ಸ್ನೇಹಿತರೊಂದಿಗೆ ಗುರುವಿನೊಂದಿಗೆ ಇರುವ ತೆರೆದ ವಾತಾವರಣ ಇಲ್ಲಿರುವದಿಲ್ಲ. ಏಕತಾನತೆ ಬೇಸರಕ್ಕೆ ಎಡೆಮಾಡಿಕೊಡುತ್ತದೆ.೫. ತಿಳಿಯದ ವಿಷಯ ಮತ್ತೆ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ.೬. ಸಣ್ಣ ಊರುಗಳಲ್ಲಿ ಬಡ ಮಕ್ಕಳು ಮಧ್ಯಾಹ್ನ ಸಿಗುವ ಬಿಸಿಊಟ ತಪ್ಪಿಸಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಸರಕಾರ ಮನೆಗೆ ಧಾನ್ಯ ಒದಗಿಸುವ ಯೋಜನೆ ಇಟ್ಟುಕೊಂಡಿದೆ. ಆದರೆ ಅದರ ಸದುಪಯೋಗದ ಭರವಸೆ ಕೊಡುವವರು ಯಾರು? ೭. ಜನಸಂಖ್ಯೆ ನಿಯಂತ್ರಿಸುತ್ತಿರುವ ಹೊಸ ಪೀಳಿಗೆಯ ಈ ಕಾಲಮಾನದಲ್ಲಿ ಮಕ್ಕಳಿಗೆ ಸಹಜೀವನ ಇಲ್ಲದೆ ಹಂಚಿಕೊಳ್ಳುವ ಗುಣಕ್ಕೆ ಎರವಾಗಬಹುದು.೮. ಹಳ್ಳಿಗಳಲ್ಲಿ ಮಕ್ಕಳನ್ನು ಓದಿಸುವದರ ಬದಲು ಕೆಲಸಕ್ಕೆ ಕಳಿಸಬಹುದು.೯. ಬರೆಯುವಿಕೆ ಕಡಿಮೆಯಾಗಿ ಲಿಪಿಗಳು ಕಣ್ಮರೆಯಾಗಿ ಹೋಗಬಹುದು.೧೦. ಹೆಚ್ಚು ಸಮಯ ಕಂಪ್ಯೂಟರ್ ಪರದೆ ವೀಕ್ಷಿಸಿ ಮಕ್ಕಳ ಆರೋಗ್ಯದಲ್ಲಿ ದುಷ್ಪರಿಣಾಮ ತಲೆದೋರಬಹುದು.೧೧. ಹೆಣ್ಣು ಹುಡುಗಿಯರಿಗೆ ಶಿಕ್ಷಣ ದುರ್ಲಭವಾಗಬಹುದು. ಅವರನ್ನು ಕೆಲಸಕ್ಕೆ ಹಚ್ಚಬಹುದು ನಂತರ ಆದಷ್ಟು ಬೇಗ ಮದುವೆ ಮಾಡಬಹುದು. ಇದರಿಂದ ಬಾಲ್ಯವಿವಾಹ ಮತ್ತೆ ತಲೆದೋರಬಹುದು.೧೨. ಅಶಿಕ್ಷಿತ ಎಳೆಯ ಹುಡುಗಿಯರನ್ನು ದೈಹಿಕ ಮಾನಸಿಕ ಸಮಸ್ಯೆಗಳ ಒಟ್ಟಿಗೆ ಲೈಂಗಿಕ ಶೋಷಣೆ ಕಾಡಬಹುದು.೧೩. ಸಮಾಜದಲ್ಲಿ ಸಾಕ್ಷರತೆ ಕಡಿಮೆಯಾಗುವ ಭಯ.೧೪. ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಮಾತನ್ನು ಕೇಳಿದಂತೆ ಪಾಲಕರ ಹಿತನುಡಿಯನ್ನು ಕೇಳುವುದಿಲ್ಲ.೧೫. ಪೂರ್ವಭಾವಿ ತಯಾರಿಗೆ ಹಣ ಒದಗಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ. ಇನ್ನು ಅನುಕೂಲಗಳನ್ನು ನೋಡಿದರೆ,೧. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಉತ್ಕರ್ಷಣದಲ್ಲಿರುವ ಆನ್ ಲೈನ್ ಕಲಿಯುವಿಕೆ ಮತ್ತು ಕಲಿಸುವಿಕೆಯ ಓಟದಲ್ಲಿ ನಮ್ಮ ದೇಶ ಕೂಡ ಸೇರಿಕೊಂಡು, ಆಧುನಿಕತೆಯ ಸ್ಪರ್ಧೆಯಲ್ಲಿ ಪಾಲುಗೊಳ್ಳಬಹುದು.೨. ಉನ್ನತ ಶಿಕ್ಷಣ ಇ ಫೀಲ್ಡ್ ನಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿರುವದರಿಂದ ಮುಂದಿನ ಶಿಕ್ಷಣಕ್ಕೆ ಇದು ನಾಂದಿಯಾಗಬಹುದು, ದೊರಕಿಸಿಕೊಳ್ಳುವುದು ಸುಲಭ ಸಾಧ್ಯ.೩. ಮನೆಯಲ್ಲಿಯೇ ಪಾಠ ಇರುವದರಿಂದ ತಮಗೆ ಬೇಕಾದ ವೇಳೆ ಆರಿಸಿಕೊಂಡು ಓದುವುದು ಸಾಧ್ಯ. ೪. ಪುನರ್ಮನನ ಸುಲಭ.೫. ಶಾಲೆ, ಕಾಲೇಜ್ ಗೆ ಹೋಗುವುದು ಇಲ್ಲದ್ದರಿಂದ ವಾಹನಗಳಲ್ಲಿ ಅಡ್ಡಾಡುವುದು ಕಡಿಮೆಯಾಗಿ, ಪ್ರಯಾಣದ ರಿಸ್ಕ್ ಇಲ್ಲ, ಖರ್ಚು ಇಲ್ಲ. ಸುರಕ್ಷತೆ ಹೆಚ್ಚಿದ್ದು ಮನಸ್ಸಿನ ಕಿರಿಕಿರಿ ಕಡಿಮೆಯಾಗಬಹುದು.೬. ಕೆಲವೊಂದು ಖರ್ಚು ಕಡಿಮೆಯಾಗುವ ಸಂಭವ. ಉದಾಹರಣೆಗೆ ಸ್ಕೂಲ್ ಯುನಿಫಾರ್ಮ ಇತ್ಯಾದಿ. ಪುರಾತನ ಸಂಸ್ಕೃತಿಯ ಗುರುಕುಲ ಪದ್ಧತಿ ನಮಗೆ ಶ್ರೇಷ್ಟವೆನಿಸಿದರೂ ಮತ್ತೆ ಅದರಿಂದ ಬದಲಾವಣೆಗೆ ಹೊಂದಿಕೊಂಡಂತೆ ಮುಂದೆ ಕೂಡ ಹೊಸ ಶಿಕ್ಷಣ ಪದ್ಧತಿಗೆ ಜನ ಹೊಂದಿಕೊಳ್ಳಬೇಕಾದೀತು. ಯಾವುದೇ ಹೊಸತನಕ್ಕೆ ವಿರೋಧ ಬರುವುದು ಸಾಮಾನ್ಯ. ಆದರೆ ಅದು ಅನಿವಾರ್ಯವಾಗಿದ್ದಲ್ಲಿ ಬೇರೆ ಆಯ್ಕೆ ಎಲ್ಲಿದೆ? ಸಧ್ಯಕ್ಕಂತೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ. ಹಾಗಿದ್ದರೆ ಸಂತೋಷದಿಂದ ಒಪ್ಪಿ ಅನುಸರಿಸಿದರೆ ಜೀವವಿದೆ, ಜೀವನವಿದೆ ಅಲ್ಲವೇ? **************

ಶಿಕ್ಷಣ ಆನ್ ಲೈನ್! Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು ಹೇಳೋದಾದ್ರೆ ಒಂದರಿಂದ ಐದನೆಯ ತರಗತಿಯವರೆಗೂ ಮಕ್ಕಳು ಸಂಪೂರ್ಣವಾಗಿ ಶಿಕ್ಷಕರ ಮೇಲೆ ಅವಲಂಬಿತವಾಗಿರುವಂತವರು, ಎದುರು ನಿಂತು ತರಗತಿಯಲ್ಲಿ ಬೋಧನೆ ಮಾಡುವುದಕ್ಕೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಪಾಠ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ, ಹಾಗೆಯೇ ಸುಮಾರು ಎರಡರಿಂದ ಮೂರುಗಂಟೆಗಳ ಕಾಲ ಮೊಬೈಲ್ ಪರದೆಯನ್ನ ನೋಡುವ ಪುಟ್ಟ ಮಕ್ಕಳ ಕಣ್ಣುಗಳು ಮುಂದೊಂದು ದಿನ ಹಾನಿಗೊಳಗಾಗುವುದರಲ್ಲಿ ಸಂಶಯವೇ ಇಲ್ಲ, ಇದರ ಜೊತೆಗೆ ಮಕ್ಕಳ ಮೆದುಳಿನ ವಿಕಸನದ ಮೇಲೆ ಪರಿಣಾಮ ಉಂಟಾಗಬಹುದು, ನರಗಳ ಸಮಸ್ಯೆ ಉಂಟಾಗಬಹುದು, ಪುಟ್ಟ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್ಲೈನ್ ಶಿಕ್ಷಣ ಸೂಕ್ತವಲ್ಲ, ಇನ್ನು ಈ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ ಪ್ರೌಡ ಮಕ್ಕಳ ಕುರಿತು ಹೇಳುವುದಾದರೆ ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ, ಹಾಗಾದರೆ ಕಾಲೇಜು ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪೂರಕತೆ ಒದಗಿಸಬಹುದಾ ಅಂತ ನೋಡೋದಾದ್ರೆ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಹಳ್ಳಿಗಾಡಿಗೆ ಸೇರಿದವರು, ಮೊದಲ ಸಮಸ್ಯೆಯೇ ಎಲ್ಲರೂ ಮೊಬೈಲ್ ಫೋನ್ಗಳನ್ನ ಹೊಂದುವಂತದ್ದು, ಈ ಕರೋನಾ ಕಾಲದಲ್ಲಿ ಈಗಾಗಲೇ ಹಳ್ಳಿಗಾಡಿನ ಜನ ಅತಿ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಮಕ್ಕಳಿಗೆ ಮೊಬೈಲ್ ಒದಗಿಸೋದು ಕಷ್ಟದ ವಿಷಯ, ಮನೆಯಲ್ಲಿ ಓದುತ್ತಿರುವ ಎರಡು ಮೂರು ಮಕ್ಕಳಿರುವ ಸಂದರ್ಭದಲ್ಲಿ ಎಲ್ಲರಿಗೂ ಮೊಬೈಲ್ ಕೊಡಿಸುವುದು ಆಗದ ವಿಷಯ, ಒಂದೊಮ್ಮೆ ಕೊಡಿಸಿದರೂ ಸಹ ಹಳ್ಳಿಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಅದೆಷ್ಟು ಸುಲಭವಾಗಿ ಸಿಗುತ್ತದೆ ಎನ್ನುವುದು ಹಳ್ಳಿಯ ವಾಸಿಗಳಿಗಷ್ಟೇ ಗೊತ್ತು, ನೆಟ್ವರ್ಕ್ ಕಾರಣದಿಂದಾಗಿ ಶೇಕಡಾ ಅರ್ಧದಷ್ಟು ಮಕ್ಕಳಿಗೆ ಹೆಚ್ಚಿನ ಮಾಹಿತಿ ತಲುಪಲಾರದು ಹಾಗೂ ಹಾಜರಾತಿ ಕೂಡ ನಿರೀಕ್ಷಿಸಲಾಗದು, ಒಂದೊಮ್ಮೆ ನೆಟ್ವರ್ಕ್ ದೊರೆಯುವ ಸ್ಥಳವಾದರೂ ಕೂಡ ದಿನಕ್ಕೆ ಮೂರರಿಂದ ನಾಲ್ಕು ತರಗತಿಗಳಿಗೆ ಸರಿಯಾಗುವಷ್ಟು ಮೊಬೈಲ್ ಡೇಟಾ ಹಾಕಿಸುವಷ್ಟು ಪೋಷಕರು ಶಕ್ತರಿದ್ದಾರಾ ಎನ್ನುವುದು ಯೋಚಿಸಬೇಕಾದ ವಿಷಯ, ಆನ್ಲೈನ್ ಶಿಕ್ಷಣ ಎನ್ನುವುದು ನಗರವಾಸಿಗಳ ಹಾಗೂ ಉಳ್ಳವರ ಮಕ್ಕಳಿಗಷ್ಟೇ ಒಂದಿಷ್ಟು ಉತ್ತಮ ಅನಿಸಬಹುದಾದರೂ ಹಳ್ಳಿಗಾಡಿನ ಮಕ್ಕಳು ಈ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು, ವೈಜ್ಞಾನಿಕ ತಳಹದಿಯ ಮೇಲೆ ಹೇಳುವುದಾದರೆ ಸಣ್ಣ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಮಾರಕವೇ ಹೊರತು ಪೂರಕವಲ್ಲ, ಕಾಲೇಜು ಹಂತದ ಮಕ್ಕಳ ಆನ್ಲೈನ್ ಶಿಕ್ಷಣದ ಕುರಿತು ಹೇಳುವುದಾದರೆ ಇದು ನಗರವಾಸಿ ಜನ ಹಾಗೂ ಉಳ್ಳವರಿಗಷ್ಟೆ ಒಂದಿಷ್ಟು ಪೂರಕವಾಗಬಹುದು ಹೊರತು ಹಳ್ಳಿಗಾಡಿನ ಜನರಿಗೆ ಆರ್ಥಿಕ ಹೊರೆಯಷ್ಟೆ.. ಒಟ್ಟಾರೆಯಾಗಿ ಸರ್ಕಾರಿ ಶಾಲಾಕಾಲೇಜಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಎನ್ನುವುದು ಹೊರೆಯಾಗದಿರಲಿ. *********

ಆನ್ಲೈನ್ ಶಿಕ್ಷಣ – ಪ್ರಯೋಗ? Read Post »

ಕಾವ್ಯಯಾನ

ಮನಸು ಅರಳುವ ಕನಸು

ಕವಿತಾ ಜಿ.ಸಾರಂಗಮಠ ನಗುವ ಮನ ಹೊಂದಿದ ನೋವಿನ ಕತೆಜೀವನದ ದುಗುಡಗಳ ನೂರೆಂಟು ವ್ಯಥೆನಗು ಮೊಗದಿ ನೋವನೇ ಸೋಲಿಸುವ ನೀರೆಕರುಳ ಕುಡಿಗೂ ಅದನ್ನೇ ಬೋಧಿಸಿದ ತಾಯೆ! ಆಶಾ ಭಾವನೆಗಳ ಹೊತ್ತ ನಗುನೂರು ಕನಸಿನ ಭಾವಗಳ ಹೊತ್ತುಅದೆಷ್ಟೋ ಆಸೆಗಳ ಹತ್ತಿಕ್ಕಿನಾಳೆಗಳ ಸ್ವಾಗತಕೆ ನಗು ಬೀರುವಳು! ಹಗಲಿರುಳು ದುಡಿದು ಬಡತನ ಸೋಲಿಸುವ ಆಸೆ ಧೀರೆಗೆಛಲಬಿಡದ ದೋಣಿಯ ನಾವಿಕಳುಇಂದಲ್ಲ ನಾಳೆ ಗೆಲುವ ಹಠ ಅವಳಿಗೆ! ಅಂದಂದೇ ದುಡಿದು ಅಂದೇ ತಿಂದರೂಸ್ವಾಭಿಮಾನದ ನೆಲೆಗಟ್ಟು ಬಿಡದಾಕೆನಗುನಗುತ ಜೀವನ ಸವೆಸಿನಗುವ ಹೂ ಮಳೆ ಸುತ್ತ ಹರಡುವಾಕೆ! ಅವಳ ತೆರೆದ ಮನದ ನಗುವಿಗೊಂದು ನಮನ!! *****

ಮನಸು ಅರಳುವ ಕನಸು Read Post »

ಕಾವ್ಯಯಾನ

ನಿತ್ಯ ಮುನ್ನುಡಿ ಕವಿತೆ

ಸ್ಮಿತಾ ಭಟ್ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಡೆಗೆ ಬರುವ ಹಲವು ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೊಗಿಲೆಯ ಉಯಿಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದೇ ಬಿಡುತ್ತದೆ. ಮೈಮುರಿದು ಏಳುವಾಗಿನ ತೀವ್ರತೆಗೆತಿಂಡಿ ಪಾತ್ರೆಗಳ ಗಲಬರಿಸುವಾಗ ಸ್ವಲ್ಪ ಕುಂದಾಗಿದೆ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಸಾಲುಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಕರಗಿ,ಅಡುಗೆ ಮನೆಯಿಂದಸೀದಿದ ವಾಸನೆಯೊಂದುಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-ಕರಗಿಸಲೊಂದು ಸಮಾಧಾನ. ಇರಲಿ ರಾತ್ರಿಯವರೆಗೂ ಸಮಯವಿದೆಏನಾದರೊಂದು ಗೀಚಲೇ ಬೇಕು. ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿಬಿಡುಗಡೆಯ ನಿಟ್ಟುಸಿರುಮುದಗೊಂಡ ಮಂದ ಬೆಳಕಿನಲಿಲಹರಿಗೆ ಬಂದ ಸಾಲು ತಡಕಾಡ ಹೋದರೆಹೆಪ್ಪು ಹಾಕಿದ ಪಾತ್ರೆಯ ಧಡಾರ್ ಎಂಬ ಸದ್ದುಸಿಕ್ಕ ಸಾಲನ್ನೂ ಬೆಕ್ಕು ಕದ್ದುಕೈಗೂ ಸಿಗದೇ ಓಟ ಕಿತ್ತಿದೆ. ರಾತ್ರಿ ಕೈ ಮೀರುತ್ತಿದೆ,ಬೆಳಿಗ್ಗೆ ಬೇಗ ಏಳಬೇಕಿದೆ,ಮನಸು ದೇಹ ಎರಡರದೂಕಳ್ಳ ಪೋಲೀಸ್ ಆಟ.ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ. **********

ನಿತ್ಯ ಮುನ್ನುಡಿ ಕವಿತೆ Read Post »

ಅಂಕಣ ಸಂಗಾತಿ, ಕಾವ್ಯವಿಹಾರ

ಕಬ್ಬಿಗರ ಅಬ್ಬಿ – ಸಂಚಿಕೆ – ೨

ಚೊಕ್ಕಾಡಿಯ ಹಾಡುಹಕ್ಕಿ ಮಹಾದೇವ ಕಾನತ್ತಿಲ ಎರಡು ದಶಕಗಳ ಹಿಂದೆ, ಹಿಮಾಲಯದ ತಪ್ಪಲಿನ, ರಾಣೀಖೇತ್ ಎಂಬ ಜಾಗದಲ್ಲಿ, ಚಾರಣ ಮಾಡುತ್ತಿದ್ದೆ.  ಬೆಟ್ಟ ಹತ್ತುತ್ತಾ, ಓರ್ವ ಬೆಟ್ಟದ ಜೀವಿ ಜತೆಯಾದ. ಆತನ ಮನೆ ಬೆಟ್ಟದ ತುದಿಯ ಹತ್ತಿರ. ಬರೇ ಕಾಲುದಾರಿ,ಸುತ್ತೀ ಬಳಸೀ, ಮರ ಹತ್ತುವ ಲತೆಯಂತೆ ಗುಡ್ಡ ಹತ್ತುತ್ತೆ. ಆಸ್ಪತ್ರೆಗೆ ಬೇಕಾದಲ್ಲಿ ಹತ್ತಾರು ಕಿಲೋಮೀಟರ್ ದೂರ. ಆತನ ಹತ್ತಿರ, ನಾನು ಕೇಳಿದೆ, ಅನಾರೋಗ್ಯವಾದಾಗ ಏನು ಮಾಡುತ್ತೀರಿ ಅಂತ. ಆತ ಅಂದ, “ಇಧರ್ ವನಸ್ಪತಿಯೋಂ ಕೀ ಹವಾ ಹೈ, ಹಮ್ ಹಮೇಷಾ ಸ್ವಸ್ತ್ ರೆಹ್ ತೇ ಹೈ” ಅಂತ. ( ಇಲ್ಲಿ ವನಸ್ಪತಿಗಳ ಗಾಳಿ ತುಂಬಿದೆ, ನಾವು ಯಾವಾಗಲೂ ಆರೋಗ್ಯದಿಂದಿರುತ್ತೇವೆ). ಕನ್ನಡ ಕಾವ್ಯ ಸಂದರ್ಭದಲ್ಲಿ, ಚೊಕ್ಕಾಡಿಯವರ ಕಾವ್ಯ, ಹೀಗೆಯೇ ವನಸ್ಪತಿಯ ಗಾಳಿಯ ಹಾಗೆ, ಕಾವ್ಯಲೋಕದೊಳಗೆ ಪ್ರೀತಿ ತುಂಬಿ, ಕವಿಗಳನ್ನು, ಓದುಗರನ್ನು,  ದಷ್ಟಪುಷ್ಟವಾಗಿರಿಸಿ, ಕಾವ್ಯ ಪ್ರಜ್ಞೆಗೂ ಆರೋಗ್ಯ ತುಂಬಿದ ಸತ್ವವದು. ಗಿಡಮರಗಳು ನೆಲದ ಸಾರಹೀರಿ ಬೆಳೆಯುವಂತೆಯೇ, ಕಾವ್ಯವೂ ಕವಿ ಬೆಳೆದ ನೆಲದ ಅಷ್ಟೂ ರಸ ಹೀರಿ ಘಮಘಮಿಸುತ್ತದೆ. ಬೇಂದ್ರೆಯವರ ಕವಿತೆಯಲ್ಲಿ ಧಾರವಾಡ ಫೇಡಾದ ಸಿಹಿ, ರವೀಂದ್ರನಾಥ ಟಾಗೋರ್ ಅವರ ಕವಿತೆಯಲ್ಲಿ ಹೂಗ್ಲೀ ನದಿಯ ಮೆಕ್ಜಲು ಮಣ್ಣಿನ ತತ್ವ , ಹಾಗೇ ಚೊಕ್ಕಾಡಿಯವರ ಕವಿತೆಗಳಲ್ಲಿ ವನಸ್ಪತಿಯ ‘ಹವಾ’ ಈ ಚೊಕ್ಕಾಡಿ, ಪಶ್ಚಿಮ ಘಟ್ಟಗಳ ಮಡಿಲಿನ ಪುಟ್ಟ ಊರು. ಜಗತ್ತಿನ ಅತ್ಯಂತ ವೈವಿಧ್ಯಮಯ ಜೀವಜಾಲಗಳ ತವರು, ಪಶ್ಚಿಮ ಘಟ್ಟಗಳ ಸಾಲುಗಳು ಎಂದು ಪ್ರಕೃತಿ ಸಂಶೋಧನೆ ಹೇಳಿದೆ. ಇಲ್ಲಿ ವರ್ಷದ ನಾಲ್ಕು ತಿಂಗಳು ಸುರಿವ ವರ್ಷಧಾರೆಯಿಂದ, ವ್ಯೋಮಾನಂತಕ್ಕೆ  ಬಾಯಿತೆರೆದು ಬೆಳೆದ ಅಸಂಖ್ಯ ಸಸ್ಯ ಸಂಕುಲ, ಮಣ್ಣು, ಮತ್ತು ವಾತಾವರಣದ ಜೀವ-ತೇವಾಂಶದಲ್ಲಿ ವಂಶ ಚಿಗುರಿಸುವ ಬಗೆ ಬಗೆಯ ಪ್ರಾಣಿಗಳು,  ಬಯೋಡೈವರ್ಸಿಟಿಯ ಪ್ರತೀಕವಾಗಿದೆ. ಇದೆಲ್ಲವೂ ಚೊಕ್ಕಾಡಿಯ ನೆಲದ ಗುಣ ಹೇಗೆಯೋ, ಹಾಗೇ ಕಾವ್ಯದ ಘನವೂ ಹೌದು!. ಕವಿ,ಸುಬ್ರಾಯ ಚೊಕ್ಕಾಡಿಯವರ ಕಾವ್ಯದ ಪ್ರತಿಮೆಗಳು ಈ ವನಜನ್ಯ ಜೀವಜಾಲದ ಗರ್ಭಕೋಶದಲ್ಲಿ ಬಸಿರಾದವುಗಳು. ಅವರ ಪ್ರಕೃತಿ ಎಂಬ ಕವನದ ಸಾಲುಗಳು ಇದನ್ನೇ ಧ್ವನಿಸುತ್ತೆ. “ಹಸುರ ದಟ್ಟಣೆ , ಕೆಳಗೆ ವಿಸ್ಮೃತಿಯ ಪ್ರತಿರೂಪದಂತೆ ಮಲಗಿದ ನೆರಳು ಅಂತಸ್ಥಪದರದಲಿ ಬೀಜರೂಪದ ಹಾಗೆ”  ಮರಗಿಡ ಪ್ರಾಣಿ ಪಕ್ಷಿಗಳನ್ನು ತನ್ನದೇ ಭಾಗವಾಗಿ ನೋಡುವ ಕವಿ, ತನ್ನದೇ ಒಂದು ಪುಟ್ಟ ಪ್ರಪಂಚದಲ್ಲಿ ಬದುಕುತ್ತಾನೆ. ಪ್ರಾಣಿ ಪಕ್ಷಿಗಳ ಲೋಕ ಅಮಾಯಕತೆಯ ನೇರ ಸರಳತೆಯ ಪ್ರತಿಮೆ. ಅವರ “ಪುಟ್ಟ ಪ್ರಪಂಚ” ಹೀಗಿದೆ ನೋಡಿ “ಮರಗಿಡ ಪ್ರಾಣಿಪಕ್ಷಿಗಳ ನನ್ನ ಪುಟ್ಟ ಪ್ರಪಂಚದ ಒಳಗೆ ಒಮ್ಮೊಮ್ಮೆ ಮನುಷ್ಯರೂ ನುಸುಳಿಕೊಳ್ಳುತ್ತಾರೆ ಅನಾಮತ್ತಾಗಿ- ಸುತ್ತ ಸೇರಿದ್ದ ಮರಗಿಡ ಬಳ್ಳಿಗಳು, ಅಳಿಲು, ಗುಬ್ಬಿ, ಬೆಳ್ಳಕ್ಕಿಗಳು ಸುತ್ತ ಮಾಯೆಯ ಬಟ್ಟೆ ನೇಯುತ್ತಿರಲು, ಅಪರಿಚಿತರಾಗಮನಕ್ಕೆ ಗಡಬಡಿಸಿ, ಚೆಲ್ಲಾಪಿಲ್ಲಿಯಾಗುತ್ತಾವೆ. ನಾಚಿಕೆಯಿಂದ ಮುದುಡಿಕೊಳ್ಳುತ್ತಾ, ಅವನತಮುಖಿಗಳಾಗಿ ಕುಗ್ಗುತ್ತ, ಕುಗ್ಗುತ್ತ ಇಲ್ಲವಾಗುತ್ತಾವೆ” ಅಂತಹ ಪ್ರಪಂಚಕ್ಕೆ ಮನುಷ್ಯ ನುಗ್ಗಿದಾಗ, ಬಟ್ಟೆ ನೇಯುತ್ತಿರುವ ಸಸ್ಯ ಪ್ರಾಣಿ ಸಂಕುಲಗಳು ಚಲ್ಲಾಪಿಲ್ಲಿಯಾಗುತ್ತವೆ. ಕುಗ್ಗುತ್ತ ಕುಗ್ಗುತ್ತ ಇಲ್ಲವಾಗುತ್ತವೆ.  ಇಲ್ಲಿ ಮನುಷ್ಯ ಅನ್ಬುವ ಪ್ರತಿಮೆ, ಆಕ್ರಮಣಕಾರಿ. ತನ್ನಷ್ಟಕ್ಕೇ, ಶಾಂತವಾಗಿ, ಮುಕ್ತವಾಗಿ ಸ್ವತಂತ್ರವಾಗಿ ಬದುಕುವ ಒಂದು ಮಲ್ಟಿಪೋಲಾರ್ ವ್ಯವಸ್ಥೆಯನ್ನು ಒಂದು ಆಕ್ರಮಣಕಾರಿ, ಯುನಿಪೋಲಾರ್ ತತ್ವ ಹೇಗೆ ನಾಶಮಾಡುತ್ತೆ,ಎಂಬ ಸಮಾಜ ತತ್ವವನ್ನು ಕವಿ ಚೊಕ್ಕಾಡಿಯ ಪುಟ್ಟ ಪ್ರಪಂಚ ತೆರೆದಿಡುತ್ತೆ. ಒಂದು ನದಿ ಹರಿಯುತ್ತಾ ಅದರ ಪ್ರವಾಹದಲ್ಲಿ ಒಂದು ಎಲೆ ತೇಲಿ,  ವನಕವಿಗೆ ಎಲೆಯೂ  ಕವಿತೆಯಾಗುತ್ತೆ, ಹರಿಯುವ ನದಿ, ನದಿಯ ಇಕ್ಕೆಲದ ದಡಗಳು, ನದಿಯ ಪ್ರವಾಹ ಮತ್ತು ತೇಲುವ ಎಲೆ, ಇವೆಲ್ಲಾ ಕಾವ್ಯದ ಬೀಜಾಕ್ಷರಗಳು. “ಮೇಲೆ ಆಕಾಶಕ್ಕೆ ಹಾರದೆ ಕೆಳಗೆ ತಳಕ್ಕಿಳಿಯದೆ ನದಿ ನಡುವೆ ತಿರುಗಣಿ ಮಡುವಿಗೆ ಸಿಲುಕಿಯೂ ಒಳಸೇರದೆ ಅಂಚಿನಲ್ಲೇ ಸುತ್ತು ಹಾಕುತ್ತಾ ದಂಡೆಯ ಗುಂಟ ಚಲಿಸುತ್ತಿದೆ ದಡ ಸೇರದೆ” ಬದುಕು ಕಾಲದ ಪ್ರವಾಹದಲ್ಲಿ ತೇಲುತ್ತಿದೆಯೇ?, ಭಾವದ ಅಲೆಗಳಲ್ಲಿ ಕವಿ ತೇಲುತ್ತಿದ್ದಾನೆಯೇ?. ಮುಳುಗದೆ, ಆಕಾಶಕ್ಕೆ ಹಾರದೆ ದಂಡೆಯಗುಂಟ ತೇಲಿ ಸಾಗುವ ಎಲೆ, ವಾಸ್ತವ ತತ್ವವೇ, ನಿರ್ಲಿಪ್ತತೆಯೇ?  ಚೊಕ್ಕಾಡಿಯ ಹಳ್ಳಿಯ ಕವಿಗೆ ಕಾಡುಮರದೆಲೆಯೂ, ಮಹಾಕಾವ್ಯ ಬರೆಯಲು ಪತ್ರವಾಯಿತು ನೋಡಿ! ಅವರ ಇನ್ನೊಂದು ಕವಿತೆ ಹಕ್ಕಿ ಮತ್ತು ಮರದ ಬಗ್ಗೆ ( ದ್ವಾ ಸುಪರ್ಣಾ).  ಹಕ್ಕಿ, ಮರದ ಆಸರೆಯಲ್ಲಿ ಗೂಡುಕಟ್ಟಿ ಒಂದರೊಳಗೊಂದಾಗಿ ಜೀವಿಸುವ ವಸ್ತು ಈ ಕವಿತೆಯದ್ದು. ಜಗತ್ತಿನಲ್ಲಿ ಯಾರೂ, ಯಾವ ತತ್ವವೂ ಇಂಡಿಪೆಂಡೆಂಟ್‌ ಅಲ್ಲ, ಇಂಟರ್ಡಿಪೆಂಡೆಂಟ್ ಎಂಬ ಆಧುನಿಕ ಮ್ಯಾನೇಜ್ಮೆಂಟ್ ತತ್ವವೂ ಇದೇ. “ಸ್ಥಗಿತ ಕಾಲದ ಆಚೆ,ಹುತ್ತ ಕಟ್ಟಿದ ಹಾಗೆ ಮರಕ್ಕೆ ಹಕ್ಕಿಯ ರೆಕ್ಕೆ ಎಲೆ ಮೂಡಿ ಹಕ್ಕಿ ದೇಹಕ್ಕೆ ಹಕ್ಕಿ ಮರವಾಗಿ,ಮರವೇ ಹಕ್ಕಿಯಾಗಿ” ಮರ ಸ್ಥಿರ ಚೇತನ, ಹಕ್ಕಿ ಚರ ಚೇತನ. ಮರ ಸ್ಥಿರ ವ್ಯವಸ್ಥೆ,  ಹಕ್ಕಿ  ಹೊಸತಿಗಾಗಿ ಚಾಚುವ ಪ್ರಯೋಗ ಮರ ಸ್ಥಿರ ಮನಸ್ಸು, ಹಕ್ಕಿ ಗಗನಕ್ಕೆ ಲಗ್ಗೆ ಹಾಕುವ ಕನಸು. ಆದರೆ ಇವೆರಡೂ ಒಂದಕ್ಕೊಂದು ಪೂರಕವಾಗಿ ಒಂದರೊಳಗೊಂದು ಅನ್ಯೋನ್ಯವಾಗಿ ಸಹಬಾಳ್ವೆ ನಡೆಸುವ ಸಮತತ್ವ ಪ್ರಕೃತಿಯದ್ದೂ ಚೊಕ್ಕಾಡಿಯ ಕಾವ್ಯದ್ದೂ. ನೆಲ ಹಸನು ಮಾಡಿ, ಮಗು ಬೀಜ ಬಿತ್ತಿ ಮೊಳಕೆ ಬರುವುದನ್ನು,ಬೆರಗುಗಣ್ಣಿಂದ ಕಾದು ನೋಡುತ್ತೆ, ಒಂದೊಂದಾಗಿ ಎಲೆಗಳನ್ನು, ಟಿಸಿಲೊಡೆಯುವ ಗೆಲ್ಲುಗಳನ್ನು ನೋಡಿ ಇದೇಕೆ ಹೀಗೆ ಎಂದು ಅನ್ವೇಷಣೆ ಮಾಡುತ್ತೆ. ಅಂತಹ ಒಂದು ಮಗುವಿನ ಪಕ್ಷಪಾತರಹಿತ ಮುಗ್ಧ ಅನ್ವೇಷಣೆ ಕೂಡಾ ಚೊಕ್ಕಾಡಿಯವರ ಕಾವ್ಯದ ಮೂಲಸೆಲೆ. ಅವರ ‘ಪರಿಚಯ’ ಎಂಬ ಕವಿತೆ, ಇದಕ್ಕೊಂದು ನೇರ ಉದಾಹರಣೆ. ಈ ಕವಿತೆಯಲ್ಲಿ, ಕವಿ, ತನ್ನ ಪಕ್ಕದ ಮನೆಗೆ ಬಾಡಿಗೆಗೆ ಬಂದ ವ್ಯಕ್ತಿಯ ಮನೆಯ ಕದ ತಟ್ಟಿ, ಆತ ಯಾರು, ಎಂದು ತಿಳಿಯುವ ಮುಗ್ಧ ಪ್ರಯತ್ನ ಮಾಡುತ್ತಾನೆ. ಕವಿ ಮತ್ತು ಆ ವ್ಯಕ್ತಿಯ ಸಂಭಾಷಣೆ ಕವಿತೆಯಲ್ಲಿ  ಹೀಗೆ ಕೊನೆಯಾಗುತ್ತದೆ. “ಪೆಚ್ಚುಪೆಚ್ಚಾಗಿ ಕೊನೆಯ ಯತ್ನವಾಗಿ ಕೇಳಿದೆ ಸ್ವಾಮೀ, ಇಷ್ಟಕ್ಕೂ ತಾವು ಯಾರು? ನಾನೇ? – ಅಂದ – ನಾನೇ ನೀನೂ ಅಂದು ಫಳಕ್ಕನೆ ಬಾಗಿಲು ಮುಚ್ಚಿದ ಅಯ್ಯಾ , ನಾನು ಯಾರು?” ನೀವು ಯಾರು? ಎಂದು ಶುರುವಾಗುವ ಕವಿತೆ ಕೊನೆಯಾಗುವುದು, ನಾನು ಯಾರು? ಎಂಬ ಪ್ರಶ್ನೆಯೊಂದಿಗೆ. ಈ ಕವಿತೆಯಲ್ಲಿ ಬರುವ ನಾನು, ನೀನು, ಬಾಡಿಗೆ ಮನೆ, ತಟ್ಟುವ ಕದ, ಮುಚ್ಚುವ ಬಾಗಿಲು, ಸಂವಾದ ಎಲ್ಲವೂ ಆಳಚಿಂತನೆ ಬೇಡುವ ಪ್ರತಿಮೆಗಳಲ್ಲವೇ. ಚೊಕ್ಕಾಡಿಯವರಿಗೆ ಎಂಭತ್ತು ವರ್ಷ ತುಂಬಿ ಕೆಲವೇ ದಿನಗಳು ಕಳೆದವು. ಅಡಿ ಚೊಕ್ಕವಾಗಿದ್ದರೆ, ಶಿರ ಶುಭ್ರ, ಮನಸ್ಸು ನಿರ್ಮಲ ಎಂದು ಬದುಕಿದ, ಹಾಡುಹಕ್ಕಿ ಅವರು. ಹಳ್ಳಿಯಲ್ಲಿ ಗೂಡು ಕಟ್ಟಿ, ಪಟ್ಟಣಕ್ಕೆ, ಸಮಗ್ರ ಹೃದಯ ಪಟ್ಟಣಕ್ಕೆ, ಪ್ರೀತಿರೆಕ್ಕೆ ಬೀಸಿ ಹಾರಿ,  ರಾತ್ರೆಯೊಳಗೆ ಪುನಃ ಗೂಡು ಸೇರುವ ಮತ್ತು ತಮ್ಮ “ವನಸ್ಪತೀ ಹವಾ” ದಿಂದ ಸ್ವಸ್ಥ  ಸಾರಸ್ವತ ಲೋಕದ ವಾತಾವರಣ ನಿರ್ಮಾಣ ಮಾಡಿದ ಅವರಿಗೆ ಎಂಭತ್ತರ ಶುಭಾಶಯಗಳು. **********

ಕಬ್ಬಿಗರ ಅಬ್ಬಿ – ಸಂಚಿಕೆ – ೨ Read Post »

ಕಥಾಗುಚ್ಛ

ಅಬ್ಬರವಿಳಿದಾಗ

ಶೈಲಜಾ ಹಾಸನ್        ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ ಕಾಲುಗಳನ್ನು ಎತ್ತಿಕೊಂಡು ಮೇಲೆ ಇರಿಸಿಕೊಂಡಳು.      ಬಾನಿನಲ್ಲಿ ಬೆಳ್ಳಕ್ಕಿಗಳು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹೋಗುತ್ತಿರುವುದನ್ನು ಕಂಡು ಎದ್ದು ನಿಂತವಳೇ “ಬೆಳ್ಳಿಕ್ಕಿ, ಬೆಳ್ಳಕ್ಕಿ ನನ್ನ ಉಂಗುರ ಕೊಡ್ತಿನಿ ನಿನ್ನ ಉಂಗುರ ಕೊಡು” ಎಂದು ಕೂಗಿದಳು.  ಯಾರಾದರೂ ಕೇಳಿಸಿಕೊಂಡರೇನೊ ಎಂದು ತಟ್ಟನೆ ನಾಚಿ ಸುತ್ತಲೂ ನೋಡಿದಳು. ಸ್ವಲ್ಪವೇ ದೂರದಲ್ಲಿ  ಬಟ್ಟೆಗೆ ಸೋಪು ಹಚ್ಚುತ್ತಿದ್ದ ಶಾಮಣ್ಣನ ಸೊಸೆ ” ಏನೇ ಮಾಧವಿ, ಉಂಗುರ ಕೇಳಿದಿಯಾ ಬೆಳ್ಳಕ್ಕಿಯಾ, ಸ್ವಲ್ಪ ದಿನ ಇರು, ಬೆಳ್ಳಕ್ಕಿಯಂತೆ ಮದ್ವೆ ಗಂಡು ಹಾರಿ ಬಂದು ಚಿನ್ನದುಂಗುರ ತೊಡಿಸುತ್ತಾನೆ.” ಎನ್ನುತ್ತಾ ನಕ್ಕಳು.   “ಥೂ ಹೋಗಕ್ಕ, ನಾನು ಚಿನ್ನದ ಉಂಗುರನೇ ಹಾಕಳಲ್ಲ, ಅದರಲ್ಲೂ  ಮದ್ವೆ ಗಂಡು ತೊಡಿಸುತ್ತಾನೆ ಅಂದ್ರೆ ನಂಗೆ ಬೇಡವೇ ಬೇಡಾ” ಮೂತಿ ಉಬ್ಬಿಸಿದಳು.   “ನೀನು ಬೇಡ ಅಂದ್ರೆ ನಿಮ್ಮಪ್ಪ ಕೇಳುತ್ತಾರಾ, ಆಗ್ಲೆ ಗಂಡು ಹುಡುಕುತ್ತಾ ಇದ್ದಾರೆ. ಈ ವರ್ಷವೇ ನಿಂಗೆ ಮದ್ವೆ ಕಣೇ” ಮಾಧವಿಯನ್ನು ರೇಗಿಸಿದಳು. ” ಥೂ ಎಲ್ಲಿಹೋದರೂ ಮದ್ವೆ ವಿಷಯನೇ, ಮೊದ್ಲು ನೀನು ಬಟ್ಟೆ ಒಗೆಯಕ್ಕ” ಸಿಡಾರನೇ ಸಿಡುಕಿ ಅಲ್ಲಿಂದ ಎದ್ದು ಮನೆಯತ್ತ ಹೊರಟಳು.    ಮನೆಗೆ ಹೊಗಲು ಮನಸ್ಸಾಗದೆ ಸೀದಾ ತೋಪಿನೊಳಗೆ ಹೆಜ್ಜೆ ಹಾಕಿ ಅಲ್ಲಿದ್ದ ಅವಳ ಮೆಚ್ಚಿನ ಮಾವಿನ ಮರವೇರಿ ಕುಳಿತುಕೊಂಡಳು. ಮರದಲ್ಲಿನ ಮಾವಿನ ಕಾಯಿಗಳು ಬಲಿತು ಮಾವಿನ ಸುವಾಸನೆ ಸುತ್ತಲೂ ವ್ಯಾಪಿಸಿತ್ತು. ಆ ವಾಸನೆಗೆ ಅರೆ ಕ್ಷಣ ಮೂಗರಳಿಸಿ ಕಂಪನ್ನು ಒಳಗೆಳೆದುಕೊಂಡಳು. ಮನೆಯೊಳಗೆ ರಾಶಿ ರಾಶಿ ಹಣ್ಣು ಬಿದ್ದಿದ್ದರೂ ತಿನ್ನುವ ಮನಸ್ಸಾಗಿರಲಿಲ್ಲ. ಮನದೊಳಗೆ ಕೊರೆಯುತ್ತಿದ್ದ ಸ್ಕೂಟಿ ವಿಷಯವೇ ಬೃಹದಾಕಾರವಾಗಿ ಎದ್ದು ಕುಣಿಯ ತೊಡಗಿತು. ಹೊಸ ಸ್ಕೂಟಿ ಓಡಿಸುತ್ತಾ ಕಾಲೇಜಿನ ದಾರಿ ಹಿಡಿದು ತಾನು ಹೋಗುತ್ತಿದ್ದರೆ ಎಲ್ಲರ ದೃಷ್ಟಿಯೂ ನನ್ನ ಮೇಲೆಯೇ, ಸ್ಕೂಟಿಯಿಂದ ಹೆಮ್ಮೆಯಿಂದ ಇಳಿದು ಸ್ಟಾಂಡಿನಲ್ಲಿ ನಿಲ್ಲಿಸಿ, ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡು ಕ್ಲಾಸಿನೊಳಗೆ ಹೋಗುತ್ತಿದ್ದರೆ….ರೇ… ರಾಜ್ಯದಲ್ಲಿ ಮುಳುಗಿಹೋಗಿರುವಾಗಲೇ ಅಪ್ಪನ ಕೂಗು ” ಮಾಧವಿ, ಎಲ್ಲಿದ್ದಿಯಾ, ಕತ್ತಲೆ ಆಗ್ತಾ ಇದೆ, ಈ ತೋಪಿನಲ್ಲಿ ಕುಳಿತು ಕೊಂಡು ಏನು ಮಾಡ್ತಾ ಇದ್ದಿಯಾ,ಎದ್ದು ಬಾ ಮನೆಗೆ” ಅಪ್ಪನ ಜೋರು ಧ್ವನಿ ಕೇಳಿಸಿದಾಗ ಅತ್ತ ತಿರುಗಿ ” ಈ ಅಪ್ಪಾ ಇನ್ನೂ ಸ್ವಲ್ಪ ಹೊತ್ತು ಸುಮ್ಮನಿರಬಾರದಿತ್ತಾ, ನನ್ನ ಕನಸು ಅರ್ಧಕ್ಕೆ ನಿಂತು ಹೋಯಿತು ಎಂದು ಬೈಯ್ದುಕೊಳ್ಳುತ್ತಾ ಮರದಿಂದ  ಒಂದೇ ಸಲಕ್ಕೆ ಧುಮುಕಿದಳು.       ತೋಪಿನಿಂದ ಮನೆ ಒಂದು ಕೂಗಳತೆ ಅಂತರ. ಮಗಳು ಕೆರೆ ಏರಿ ಅಥವಾ ತೋಪು ಇವೆರಡು ಜಾಗದಲ್ಲಿಯೇ ಇರುತ್ತಾಳೆ ಅಂತ ಗೊತ್ತಿದ್ದ ಕೇಶವ ಕೆರೆ ಬಳಿ ಮಾಧವಿ ಇಲ್ಲ ಅಂತ ತಿಳಿದು ಕೊಂಡು ತೋಪಿನಲ್ಲಿಯೇ ಇರ ಬೇಕೆಂದು ಕೂಗು ಹಾಕಿದ್ದ.   ಮುಖ ದುಮ್ಮಿಸಿಕೊಂಡೇ ಮನೆಯೊಳಗೆ ಬಂದ ಮಾಧವಿ ಯಾರೊಂದಿಗೂ ಮಾತನಾಡದೆ ಕುರ್ಚಿ ಮೇಲೆ ಕುಳಿತು ಕೊಂಡಳು. ಮಗಳ ಮುದ್ದು ಮುಖ ನೋಡಿದ ವೇದಾ “ಮಾಧವಿ, ಊಟಾ ಮಾಡು ಬಾರೆ” ಕಕ್ಕುಲಾತಿಯಿಂದ ಕರೆದಳು. ಮಧ್ಯಾಹ್ನವೂ ಊಟಾ ಮಾಡದೆ ಹಸಿದಿರುವ ಮಗಳ ಬಗ್ಗೆ ಅಂತಃಕರಣದಿಂದ ಕರೆದಳು. ಮಾಧವಿ ಅಮ್ಮನ ಮುಖವನ್ನು ದುರು ದುರು ನೋಡುತ್ತಾ ತಟ್ಟನೆ ಎದ್ದವಳೇ ರೂಮಿನತ್ತ ನಡೆದು ಧಡಾರನೇ ಬಾಗಿಲು ತೆರೆದು ಒಳನಡೆದು ಬಿಟ್ಟಳು.      “ನೋಡ್ರಿ, ನೋಡ್ರಿ ಅವಳು ಹೇಗಾಡ್ತಾ ಇದ್ದಾಳೆ. ಬೆಳಗ್ಗೆಯಿಂದಲೂ ಏನೂ ತಿಂದಿಲ್ಲ. ಮಧ್ಯಾಹ್ನವೂ ಊಟಾ ಮಾಡಿಲ್ಲ.ಇವಳು ಹೀಗೆ ಹಸ್ಕೊಂಡಿದ್ರೆ ಹೇಗ್ರಿ ನನ್ನ ಗಂಟಲಲ್ಲಿ ಅನ್ನ ಇಳಿಯುತ್ತೆ” ವೇದಾ ನೊಂದುಕೊಂಡಳು.  “ನೋಡು ವೇದಾ, ಅವಳೇನೇ ಹಟ ಮಾಡಿದ್ರೂ ನಾನೂ ಅವಳನ್ನ ಕಾಲೇಜಿಗೆ ಕಳಿಸಲ್ಲ.ಸ್ಕೂಟಿಯನ್ನೂ ಕೊಡಿಸಲ್ಲ.ಅವಳು ಅಷ್ಟು ದೂರ ಗಾಡಿ ಓಡಿಸಿಕೊಂಡು ಕಾಲೇಜಿಗೆ ಹೋಗೋದನ್ನ ನನ್ನ ಕೈಲಿ ನೋಡೋಕೆ ಆಗಲ್ಲ ತಿಳಿತಾ.ನಾಳೆ ಗಂಡಿನ ಕಡೆಯವರು ಬರ್ತಾ ಇದ್ದಾರೆ. ಅವರ ಮುಂದೆ ರಾಮಾಯಣ ಮಾಡದೆ ಮರ್ಯಾದೆಯಿಂದ ಇರೋ ಹಾಗೆ ನಿನ್ನ ಮಗಳಿಗೆ ಬುದ್ದಿಹೇಳು.” ನಿರ್ಧಾರಿತವಾಗಿ ಕೇಶವ ನುಡಿದನು.      “ನಿಮ್ಮ ಅಪ್ಪ ಮಗಳ ಮಧ್ಯೆ ನನ್ನ ಸಂಕಟ ಕೇಳೊರು ಯಾರು? ಅವಳುಕಾಲೇಜಿಗೆ ಹೋಕ್ತಿನಿ ಅಂತ ಹಟ ಮಾಡ್ತಾಳೆ, ನೀವು ಮದ್ವೆ ಮಾಡ್ತಿನಿ ಅಂತ ಹಟ ಮಾಡ್ತಿರಾ, ನಾನು ಯಾರ ಕಡೆಗೆ ಹೇಳಲಿ. ಏನಾದ್ರೂ ಮಾಡಿ ಕೊಳ್ಳಿ, ನನ್ನ ಮಾತನ್ನ ಯಾರು ಕೇಳುತ್ತಿರಿ” ಜೋರಾಗಿಯೇ ಗೊಣಗಾಡುತ್ತಾ ಅಡುಗೆ ಮನೆ ಹೊಕ್ಕಳು. ಮಾಧವಿ ತನ್ನ ಹಟ ಬಿಡಲಿಲ್ಲ. ಅಂದು ಯಾರೂ ಮನೆಯಲ್ಲಿ ಊಟಾ ಮಾಡಲಿಲ್ಲ.    ಬೆಳಗ್ಗೆಯಿಂದಲೆ ಕೇಶವ ಸಡಗರದಿಂದ ಓಡಾಡುತ್ತಿದ್ದ. ಗಂಡಿನವರು ಬೆಳಗ್ಗೆ ಹನ್ನೊಂದು ಗಂಟೆಗೆ ಬರುತ್ತಾರೆ ಎಂದು ತಿಳಿಸಿದ್ದರಿಂದ ವೇದಳಿಗೆ ಬಂದವರಿಗೆ ತಿಂಡಿ ಮಾಡಿ ಸಿದ್ದವಾಗಿರಲು ತಿಳಿಸಿದ. ಮಗಳ ಕೋಪವನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ಪಾಪ ಅದು ಮಗು ಅದಕ್ಕೇನು ತಿಳಿಯುತ್ತದೆ. ಕಾಲೇಜು, ಸ್ಕೂಟಿ ಅಂತ ಕುಣಿಯುತ್ತೆ, ಬಂದ ವರ ಒಪ್ಪಿಕೊಂಡರೆ  ಮದುವೆಯಾಗಿ ಅವನ ಪ್ರೀತಿಯಲ್ಲಿ ಎಲ್ಲವನ್ನು ಮರೆಯುತ್ತಾಳೆ. ನಮಗೆ ತಾನೇ ಯಾರಿದ್ದಾರೆ, ಇರುವ ಒಬ್ಬಳೆ ಮಗಳು ಓದು, ಕಾಲೇಜು ಅಂತ ಯಾಕೆ ಕಷ್ಟ ಪಡ ಬೇಕು ಅನ್ನೋವ ಧೋರಣೆಯಲ್ಲಿ ಕೇಶವನಿದ್ದ.ವೇದಳಿಗೂ ಗಂಡನ ರೀತಿ ಸರಿ ಎನಿಸಿದರೂ ಮಾಧವಿಗೆ ಮದುವೆ ಇಷ್ಟವಿಲ್ಲವಿರುವುದು, ಅವಳಿಗೆ ಮುಂದೆ ಓದಲು ಆಸೆ ಇರುವುದು, ಬಸ್ಸಿನ ಸೌಕರ್ಯ ಇಲ್ಲದಿರುವ ಈ ಊರಿನಿಂದ ಪ್ರತಿ ದಿನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಲು ಮಗಳು ಬಯಸಿರುವುದು ಗೊತ್ತಿದ್ದ ವೇದ ಮಗಳ ಮನಸ್ಸನ್ನೂ ನೋಯಿಸಲಾರಳು. ಗಂಡನನ್ನು ಎದಿರು ಹಾಕಿಕೊಳ್ಳಲಾರಳು. ಇಬ್ಬರ ಮಧ್ಯೆ ಯಾರಿಗೂ ಹೇಳಲಾರದೆ ಒದ್ದಾಡಿ ಹೋಗುತ್ತಿದ್ದಾಳೆ.    ಅಮ್ಮನ ಬಲವಂತಕ್ಕೆ ಗಂಡಿನ ಮುಂದೆ ಕುಳಿತಿದ್ದ ಮಾಧವಿಯ ಮುದ್ದು ಮುಖಕ್ಕೆ ಮದುವೆಯ ಗಂಡು ಕ್ಲೀನ್ ಬೈಲ್ಡ್ ಆಗಿಬಿಟ್ಟಿದ್ದ. ನಾಳೆನೇ  ಮದ್ವೆ  ಅಂದರೂ ತಾಳಿ ಕಟ್ಟೊಕೆ ಸಿದ್ದವಾಗಿಬಿಟ್ಟ. ಆದರೆ ಮಾಧವಿ ಮಾತ್ರಾ ಕತ್ತೆತ್ತಿಯೂ ಹುಡುಗನತ್ತ ನೋಡಿರಲಿಲ್ಲ.     ಹುಡುಗ ತಂದೆ ” ಏನಮ್ಮ ನಮ್ಮ ಹುಡುಗ ಒಪ್ಪಿಗೆಯೇ ನಿನಗೆ, ಈಗ್ಲೇ ಸರಿಯಾಗಿ ನೋಡಿಕೊಂಡು ಬಿಡು, ಆಮೇಲೆ ನೋಡಿಲ್ಲ ಅಂತ  ಹೇಳಬೇಡ” ಕತ್ತು ಬಗ್ಗಿಸಿ ಕುಳಿತಿದ್ದ ಮಾಧವಿಯನ್ನು ಕೇಳಿದರು.    ಆಗಾ ಮಾಧವಿ ತಟ್ಟನೆ ” ಒಪ್ಗೆ ಇಲ್ಲ. ನನಗೆ ಮದ್ವೆ ಆಗೋಕೆ ಇಷ್ಟ ಇಲ್ಲ. ನಮ್ಮ ಅಪ್ಪನ ಬಲವಂತಕ್ಕೆ ಇಲ್ಲಿ ಕೂತಿದೀನಿ” ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಟ್ಟಳು. ಮನದೋಳಗಿನ ನಿರಾಶೆ, ಆಕ್ರೋಷ ತರಿಸಿ ಮಾಧವಿಗೆ ಹಾಗೆ ನುಡಿಯುವಂತೆ ಮಾಡಿ ಬಿಟ್ಟಿತ್ತು. ಈ ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ಗಂಡಿನವರು ದುರ್ದಾನ ತೆಗೆದುಕೊಂಡವರಂತೆ ಪೆಚ್ಚಾಗಿ ಬಿಟ್ಟರು.     ಹುಡುಗನ ತಂದೆ ಎದ್ದು ನಿಂತು ಕೇಶವನತ್ತ ತಿರುಗಿ ” ಅಲ್ಲ ಸ್ವಾಮಿ, ಹುಡುಗನನ್ನು ಕರೆಸುವ ಮುಂಚೆ ನಿಮ್ಮ ಮಗಳ ಒಪ್ಪಿಗೆ ತೆಗೆದು ಕೊಳ್ಳ ಬಾರದಿತ್ತೆ. ಹುಡುಗಿಗೆ ಮದ್ವೆ ಇಷ್ಟ ಇಲ್ಲ ಅಂದ ಮೇಲೆ ಹುಡುಗಿ ನೋಡಿ ಏನು ಪ್ರಯೋಜನ, ನಮ್ಮ ಸಮಯವೂ ಹಾಳೂ, ನಿಮ್ಮ ಸಮಯವೂ ಹಾಳೂ, ನಾವಿನ್ನೂ ಹೊರಡುತ್ತೆವೆ, ಮೊದ್ಲೂ ನಿಮ್ಮ ಹುಡುಗಿಗೆ ನಡವಳಿಕೆ ಕಲಿಸಿ, ಆಮೇಲೆ ಮದುವೆ ಮಾಡುವಿರಂತೆ” ಅಂತ ವ್ಯಂಗ್ಯವಾಗಿ ನುಡಿದು ನಡೀರಿ ಹೋಗೋಣ ಅಂತ ತನ್ನವರೊಂದಿಗೆ ಹೊರಟು ನಿಂತರು.    ” ದಯವಿಟ್ಟು ಕ್ಷಮಿಸಿ ಸ್ವಾಮಿ, ನನ್ನ ಮಗಳು ಇನ್ನೂ ಚಿಕ್ಕವಳು. ಏನೋ ಗೊತ್ತಾಗದೆ ಮಾತಾಡಿ ಬಿಟ್ಟಿದ್ದಾಳೆ. ನಾನು ಆಮೇಲೆ ಅವಳಿಗೆ ಬುದ್ದಿ ಹೇಳುತ್ತೆನೆ. ನೀವು ಬೇಸರ ಮಾಡಿ ಕೊಳ್ಳ ಬೇಡಿ. ಎಲ್ಲಾ ಹೆಣ್ಣು ಮಕ್ಕಳು ಮೊದ್ಲು ಮೊದ್ಲು  ಮದ್ವೆ ಬೇಡಾ ಅಂತಾ ತಾನೇ ಹೇಳೊದು, ಅವಕ್ಕೇನು ಗೊತ್ತಾಗುತ್ತೆ. ನಾವು ಕೊಂಚ ತಿಳಿಸಿ ಹೇಳಿದ್ರೆ ಒಪ್ಪಿಕೊಂಡು ಮದ್ವೆ ಆಗಿ ಸಂಸಾರ ಮಾಡ್ತರೆ. ದಯವಿಟ್ಟು ನೀವು ಕುಳಿತು ಕೊಳ್ಳಿ. ಅನುನಯದಿಂದ ಕೇಶವ ಅವರ ಕೋಪ ಇಳಿಸಲು ನೋಡಿದ.    ಅದ್ಯಾವುದಕ್ಕೂ ಜಗ್ಗದ ಅವರು “ಯಜಮಾನ್ರೆ , ಬಲವಂತಾಗಿ ನಿಮ್ಮ ಮಗಳನ್ನ ಸೊಸೆ ಮಾಡಿಕೊಳ್ಳುವ ದರ್ದು ನಮಗೇನು ಇಲ್ಲ. ನನ್ನ ಮಗನಿಗೆ ಹೆಣ್ಣುಕೊಡಲು ಕ್ಯೂ ನಿಂತಿದ್ದಾರೆ, ಹೆಚ್ಚು ಮಾತು ಬೇಡಾ, ನಾವಿನ್ನು ಬರ್ತಿವಿ” ಅಂದವರೆ  ಮತ್ಯಾವುದಕ್ಕೂ ಅವಕಾಶ ಕೊಡದೆ ತಮ್ಮವರನ್ನು ಏಳಿಸಿಕೊಂಡು ಹೋಗಿಯೇ ಬಿಟ್ಟಾಗ ಅವಮಾನ ತಾಳದೆ ಕೇಶವ ಕುಸಿದು ಕುಳಿತರೆ, ವೇದಾ ಬಾಯಿಗೆ ಸೆರಗುಹಚ್ಚಿ ಬಿಕ್ಕಳಿಸಿದಳು.   ಮಾಧವಿ ಮಾತ್ರ ಏನೂ ಆಗದವಳಂತೆ ಎದ್ದು ರೂಮಿನೊಳಗೆ ಹೋಗಿ ಬಟ್ಟೆ ಬದಲಿಸಿ ನೈಟ್ ಡ್ರಸ್ ಧರಿಸಿದಳು. ಗಂಡಿನವರು ಹೋಗಿದ್ದು ಒಳ್ಳೆಯದೇ ಆಯಿತು ಎಂದು ಕೊಂಡು ಹಾಯಾಗಿ ಹಾಸಿಗೆ ಮೇಲೆ ಉರುಳಿಕೊಂಡಳು. ಅಲ್ಲಿವರೆಗೂ ಕಾಡದಿದ್ದ ಹಸಿವು ಈಗಾ ಧುತ್ತನೆ ಕಾಡಿತು,  ಹೊಟ್ಟೆ ಹಸಿವು ಹೆಚ್ಚಾಗಿ ನೆನ್ನೆಯಿಂದ ತಿನ್ನದೆ ಇದ್ದದ್ದು ಈಗಾ ಕಾಡಲು ತೊಡಗಿದಾಗ ಎದ್ದು ಅಡುಗೆ ಮನೆಗೆ ಹೋಗಿ ಗಂಡಿನವರಿಗೆ ಮಾಡಿದ್ದ ಉಪ್ಪಿಟ್ಟು, ಕೇಸರಿಭಾತನ್ನು ತಟ್ಟೆಗೆ ತುಂಬಿಕೊಂಡು  ಹಾಲಿಗೆ ಬಂದು ಕುಳಿತು ಗಭ ಗಭನೆ ತಿನ್ನ ತೊಡಗಿದಳು.   ಗಂಡಿನವರಿಗೆ ಅವಮಾನ ಮಾಡಿ ಏನೂ ಆಗದವಳಂತೆ ಅವರಿಗಾಗಿ ಮಾಡಿದ್ದ ತಿಂಡಿಯನ್ನು ತಿನ್ನುತ್ತಿರುವ ಮಗಳನ್ನು ನೋಡಿ ಕೇಶವನಿಗೆ ಪಿತ್ತ ಕೆರಳಿತು.ಅಷ್ಟು ಒಳ್ಳೆಯ ಸಂಬಂಧವನ್ನು ತಾನೇ ಕೈಯಾರೆ ದೂರ ತಳ್ಳಿದ ಮಗಳ ಮೇಲೆ  ಮೊದಲೆ ಕ್ರೋಧ ಉಕ್ಕಿತ್ತು. ಈಗಾ ಆ ಕ್ರೋಧ ಮತ್ತಷ್ಟು ಹೆಚ್ಚಾಗಿ ಆವೇಶದಿಂದ ಮಗಳ ಬಳಿ ಬಂದವನೇ “ಹಾಳಾದವಳೆ ನಮ್ಮ ಹೊಟ್ಟೆ ಹುರಿಸೋಕೆ ಹುಟ್ಟಿದ್ದಿಯಾ. ಒಬ್ಳೆ ಮಗಳು ಅಂತ ಮುದ್ದು ಮಾಡಿ ಬೆಳೆಸಿದ್ದಕ್ಕೆ  ಒಳ್ಳೆ ಉಡುಗರೆ ಕೊಟ್ಟು ಬಿಟ್ಟೆ ನೀನು,ಯಾಕಾದ್ರೂ ನನ್ನ ಮಗಳಾಗಿ ಹುಟ್ಟಿದ್ಯೆ” ಎಂದು ಬೈಯುತ್ತಾ ಅವಳು ತಿನ್ನುತ್ತಿದ್ದ ತಟ್ಟೆಯನ್ನು ಕಿತ್ತೆಸೆದು ಮಗಳ ಬೆನ್ನಿಗೆ ದಪ ದಪನೇ ಗುದ್ದಿದ.   ಅಪ್ಪನ ಈ ಅನಿರೀಕ್ಷಿತ ಧಾಳಿಯಿಂದ ಕಂಗೆಟ್ಟು ಮಾಧವಿ ಜೋರಾಗಿ ಅಳತೊಡಗಿದಳು. ಅಪ್ಪನ ಹೊಡೆತ ಇದೇ ಮೊದಲು, ಈ ಆವೇಶ ರೋಷವೂ ಅವಳು ಕಂಡದ್ದು ಇದೇ ಮೊದಲು. ದಿಗ್ಭ್ರಾಂತಳಾಗಿ ಹೋದಳು ಮಾಧವಿ. ಅಪ್ಪ ಕೊಟ್ಟ ಏಟಿಗಿಂತ ಮನಸ್ಸಿಗೆ ನೋವಾಗಿದ್ದು ಅವನ ಮಾತುಗಳಿಂದ. ಮತ್ತಷ್ಟು ಹೊಡೆಯುವ ಉಮೇದಿನಲ್ಲಿದ್ದ ಕೇಶವನನ್ನು ತಡೆಯುತ್ತಾ ವೇದಾ “ಏನಾಯ್ತು ನಿಮಗೆ, ಯಾಕೀಗೆ ಆಡ್ತಾ ಇದ್ದಿರಾ, ಅವಳಂತೂ ಚಿಕ್ಕವಳು, ಗೊತ್ತಾಗದೆ ಏನೋ ಮಾತಾಡಿ ಬಿಟ್ಟಳು. ಅದನ್ನೆ  ಆ ಗಂಡಿನವರು ದೊಡ್ಡದು ಮಾಡಿ ಬಿಟ್ಟರು. ಅಂಥ ಮನೆಗೆ ಮಗಳನ್ನು ಕೊಟ್ಟರೆ ಮುಂದೆ ಬಾಳಿಸುತ್ತಾರಾ, ಅವರ ನಿಜವಾದ ಬಣ್ಣ ಈಗ್ಲೆ ಗೊತ್ತಾಗಿದ್ದು ಒಳ್ಳೆಯದಾಯ್ತು. ನೀವು ಅದಕ್ಕಾಗಿ ಮಗೂನಾ   ಹೊಡಿಬೇಡಿ, ನನ್ನಾಣೆ” ಅನ್ನುತ್ತಾ ಬಂದು ಮಗಳನ್ನು ರಕ್ಷಿಸಿಕೊಂಡಳು. ಪತ್ನಿಯ ವಿರೋಧ ಕಂಡು ಹಿಮ್ಮೆಟ್ಟಿದ ಕೇಸವ ತಪ್ತನಾಗಿ “ಹಾಳಾಗಿ ಹೋಗಿ ಇಬ್ಬರೂ” ಅಂತ ಪೂತ್ಕರಿಸಿ ಹೊರನಡೆದು ಬಿಟ್ಟ.  “ಮಾಧವಿ, ನೀನ್ಯಾಕೆ ಗಂಡಿನವರ ಮುಂದೆ ಅಂಗೆಲ್ಲ ಮಾತಾಡಿದೆ. ನಿಮ್ಮಪ್ಪ ನೋಡು

ಅಬ್ಬರವಿಳಿದಾಗ Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು ಅವು ಭಾವಿಸಿರುವ ಕೆಲಸಗಳನ್ನು ಮಾತ್ರ ನಿರ್ವಹಿಸುತ್ತಿವೆ. ಬ್ಯಾಂಕುಗಳು ವ್ಯವಹಾರಕ್ಕೆ ಇಂಟರ್ನೆಟ್ ಬಳಸಲು ಗ್ರಾಹಕರಿಗೆ ಸಂದೇಶ ಕಳಿಸುತ್ತಿವೆ. ವಿದ್ಯುತ್ ಬಿಲ್ ಕಟ್ಟುವುದು, ಗ್ಯಾಸ್ ಬುಕ್ ಮಾಡುವುದು, ಪ್ರಯಾಣಕ್ಕಾಗಿ ಬಸ್ಸು,ರೈಲು,ವಿಮಾನದ ಟಿಕೆಟ್ ಪಡೆಯುವುದೂ ಸೇರಿದಂತೆ ಅನೇಕ ವಿಚಾರಗಳು ಈಗ ಅಂಗೈ ಅಗಲದ ಮೊಬೈಲಿನಲ್ಲಿ ಸಾಧ್ಯ ಆಗಿ ಅದನ್ನು ಬಳಸುವವರ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು. ಕಾಯ್ದಿರಿಸದ ಅಂದರೆ ಸೀಟು ಗ್ಯಾರಂಟಿ ಇಲ್ಲದ ಓಪನ್ ಟಿಕೆಟ್ ಪಡೆಯುವ ಇಂಡಿಯನ್ ರೇಲ್ವೆಯ ಯಾಪ್ ಇರದ ಮೊಬೈಲ್ ಬಳಕೆದಾರರೂ ಇಲ್ಲವೇ ಇಲ್ಲ. ಬೇಕೆನಿಸಿದಾಗ ಎಲ್ಲಿಗೆ ಬೇಕಾದರೂ ಟಿಕೆಟ್ ಖರೀದಿಸುವ ಅವಕಾಶ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗುವ ಮತ್ತು ಚಿಲ್ಲರೆಗಾಗಿ ಒದ್ದಾಡಬೇಕಿದ್ದ ಸಂಗತಿಗಳಿಂದ ಮುಕ್ತಿ ದೊರಕಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆ ಕಂದಾಯ, ನೀರಿನ ವಾರ್ಷಿಕ ಪಾವತಿ ಕೂಡ ಈಗ ಬ್ಯಾಂಕಿನ ಖಾತೆಗೆ ನೇರ ಪಾವತಿ ಮಾಡಬಹುದಾದ ಅವಕಾಶ ಪುರಸಭೆ, ನಗರಸಭೆಗಳು ಮಾಡಿವೆ. ಬಿಲ್ ಕಲೆಕ್ಟರ್ ಹಿಡಿದು, ದುಡ್ಡು ಪಾವತಿಸಿದರೂ ಸಿಗದೇ ಇದ್ದ ರಸೀತಿ ಈಗ ಕ್ಷಣಾರ್ಧದಲ್ಲಿ ಸಿಕ್ಕುವಂತಾಗಿದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮೆಯ ಪಾವತಿ ಈಗ ಸಲೀಸು. ಅವಧಿಗೆ ಮುನ್ನವೇ ಮೊಬೈಲಿಗೆ ಬಂದು ಬೀಳುವ ಸಂದೇಶವನ್ನದುಮಿ ಕ್ಷಣ ಮಾತ್ರದಲ್ಲಿ ಪೇ ಮಾಡುವುದು ಈಗ ಎಲ್ಲರಿಂದಲೂ ಸಾಧ್ಯವಾಗಿದೆ. ಈ ಎಲ್ಲಕ್ಕೂ ಕಾರಣವಾದದ್ದು ಅಂಡ್ರಾಯಿಡ್ ಫೋನು ಮತ್ತು ಎಲ್ಲರಿಗೂ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕ. ಮೊದಲೆಲ್ಲ ತಂತಿಯ ಮೂಲಕವೇ ನಡೆಯ ಬೇಕಿದ್ದ ಸಂಪರ್ಕ ಸಾಧನಗಳು ಯಾವಾಗ ತಂತಿ ರಹಿತ ಆದವೋ ಆಗಿನಿಂದಲೇ ಈ ಎಲ್ಲವೂ ಸಾಧ್ಯವಾಯಿತು. ಈಗ ಅಂಡ್ರಾಯಿಡ್ ಫೋನು ಗತ್ತಲ್ಲ, ಅನಿವಾರ್ಯ ಸಂಪರ್ಕ ಸೇತು. ಸರ್ಕಾರವು ಕೊಡುವ ತಿಂಗಳ ರೇಷನ್ ಕೂಡ ಒಟಿಪಿ ಇಲ್ಲದೇ ನಡೆಯಲಾರದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ನಿತ್ಯ ಸೌಲಭ್ಯಗಳ ಬಳಕೆಗೆ ಇವತ್ತು ಇಂಟರ್ನೆಟ್ ಅನಿವಾರ್ಯವೇ ಆಗಿ ಬದಲಾಗಿದೆ. ಅದು ಎಂಭತ್ತರ ದಶಕದ ಮಧ್ಯದ ದಿನಗಳು. ಬದುಕಿನ ಅನಿವಾರ್ಯದ ಸಿಲುಕಿಗೆ ಸಿಕ್ಕು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು ಅತಂತ್ರರಾಗಿದ್ದ ಹಲವರ ಕನಸನ್ನ ನನಸು ಮಾಡಿದ್ದು ಸಂಜೆ ಕಾಲೇಜು ಎಂಬ ಸಂಜೀವಿನಿ. ಮೊಟಕಾಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಿ ಪದವಿ ಪಡೆದ ಅನೇಕರು ಈಗ ಉನ್ನತ ಅಧಿಕಾರಿಗಳೇ ಆಗಿದ್ದಾರೆ. ಈ ಸಂಜೆ ಕಾಲೇಜುಗಳು ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದ ಕೈಗಾರಿಕಾ ಪ್ರದೇಶಗಳಲ್ಲೂ ಇದ್ದವು. ಅದರ ಮುಂದಣ ಹೆಜ್ಜೆಯೆಂದರೆ ದೂರ ಶಿಕ್ಷಣ ಎಂಬ ಓಪನ್ ಯೂನಿವರ್ಸಿಟಿಯ ಪರಿಕಲ್ಪನೆ. ಅನೇಕ ಕಾರಣಗಳಿಂದ ಅರ್ಧಕ್ಕೇ ನಿಂತಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸ್ನಾತಕ,ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ನಿಯತ ವಿದ್ಯಾರ್ಥಿಗಳ ಸರಿ ಸಮಕ್ಕೆ ಬರೆದು, ಆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದ ಅನೇಕ ಪ್ರತಿಭಾವಂತರು ನಮ್ಮ ಮುಂದಿದ್ದಾರೆ. ಈ ಸಂಜೆ ಕಾಲೇಜು ಮತ್ತು ದೂರ ಶಿಕ್ಷಣದ ಮೂಲಕ ಅನೇಕ ಪ್ರತಿಭಾವಂತರು ತಮ್ಮ ಬದುಕು ಕಟ್ಟಿ ಕೊಂಡದ್ದು ಆ ಕಾಲದ ಕೊಡುಗೆಯೇ. ಇವತ್ತಿಗೂ ಬಹುತೇಕ ವಿವಿಗಳು ಅಂಚೆ ಮತ್ತು ತೆರಪಿನ ದೂರ ಶಿಕ್ಷಣವನ್ನು ನೀಡುತ್ತ ವಿದ್ಯಾ ದಾಹಿಗಳನ್ನು ಪೊರೆಯುತ್ತಿವೆ. ಎಲ್ಲ ರಂಗಗಳಲ್ಲಿ ಇರುವ ಹಾಗೆಯೆ ಮೋಸ ವಂಚನೆಗಳ ಜಾಲವೂ ಈ ದೂರ ಶಿಕ್ಷಣ ಕ್ಷೇತ್ರದಲ್ಲಿ ನಡೆದು ಕೆಲವು ಖೊಟ್ಟಿ ವಿವಿಗಳು ಈಗಾಗಲೇ ನಿಷೇದದ ಹಣೆಪಟ್ಟಿ ಪಡೆದಿವೆ. ಇಂಟರ್ನೆಟ್ ಎಂಬ ಸಂಪರ್ಕ ವಿಶ್ವದ ಯಾವುದೋ ಮೂಲೆಯನ್ನು ಮತ್ತೊಂದು ಮೂಲೆಯಿಂದ ತಲುಪ ಬಲ್ಲ ದೂರಗಾಮೀ ಸಂವೇದಿ. ಈ ಅಂತರ್ಜಾಲದ ಯುಗ ವಸುದೈವ ಕುಟುಂಬಕಂ ಎಂಬ ಆರ್ಷೇಯ ಕಲ್ಪನೆಗೆ ಮತ್ತೊಂದು ಭಾಷ್ಯವನ್ನೇ ಬರೆದಿದೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ತಿಳಿಯದೇ ಇರುವ ಹಲವು ಸಮಸ್ಯೆಗಳಿಗೆ ಗೂಗಲ್ ಎನ್ನುವ ಸರ್ಚ್ ಎಂಜಿನ್ ತತ್ ಕ್ಷಣವೇ ಉತ್ತರವನ್ನು ಹುಡುಕಿ ಕೊಟ್ಟರೆ ಯಾರೇ ಹೇಳುವ ಸುಳ್ಳನ್ನು ಕ್ಷಣಾರ್ಧದಲ್ಲಿ ಬಯಲು ಮಾಡುವ ಅವಕಾಶ ಕೊಟ್ಟದ್ದೂ ಈ ಅಂತರ್ಜಾಲವೇ. ಈ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜೀವನ ಅನೇಕ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಸುಲಭ ಸಾಧ್ಯವಾಗುತ್ತಿದೆ. ಮೇಲೆ ಹೇಳಿದ ಅನೇಕ ಕೆಲಸಗಳು ಇಂಟರ್ನೆಟ್ ಇಲ್ಲದೇ ನಡೆಯಲಾರವು. ಬ್ಯಾಂಕು, ವಿಮೆ, ಆರ್ಟಿಓ, ಸಾರಿಗೆ, ಪೋಲೀಸ್ ಇಲಾಖೆ ಕೂಡ ಈಗ ಡಿಜಿಟಲೈಸ್. ಅಂದರೆ ಕಂಪ್ಯೂಟರಿಲ್ಲದ ಯಾವ ಕಛೇರಿಯೂ ಇವತ್ತು ಹೊಸ ಕಾಲದ ವೇಗಕ್ಕೆ ತೆರೆದುಕೊಳ್ಳಲಾರವು. ಗ್ರಾಮ ಲೆಕ್ಕಿಗನ ಕೃಪೆ ಇದ್ದರೆ ಮಾತ್ರ ಸಿಗುತ್ತಿದ್ದ ಪಹಣಿ ಈಗ ಹತ್ತು ರೂಪಾಯಿ ಕಟ್ಟಿದ ಕೂಡಲೇ ಕೈಯಲ್ಲಿ ಇರುತ್ತದೆ. ಯವುದೇ ಇಲಾಖೆಯ ಯಾರ ಮೇಲೆ ಬೇಕಾದರೂ ಈಗ ನೇರ ದೂರು ಸಲ್ಲಿಸಬಹುದು. ಅಂಥ ಹಲವು ಸ್ತರಗಳ ಮ್ಯಾನೇಜ್ಮೆಂಟ್ ಸಾಧ್ಯವಾಗಿರುವುದೇ ಆಧುನಿಕ ತಂತ್ರಾಂಶಗಳ ಅಭಿವೃದ್ಧಿಯಿಂದಾಗಿ. ಇವತ್ತು ನಮ್ಮ ಕೈಯಲ್ಲಿ ಮೊಬೈಲ್ ಇರಲಾಗಿ ಪ್ರತಿಭೆ ಇದ್ದೂ ಮುನ್ನೆಲೆಗೆ ಬಾರದೇ ಇದ್ದ ಅದೆಷ್ಟು ಜೀವಗಳು ಎಫ್ಬಿಯಲ್ಲಿ ಮಿಂಚುತ್ತಿವೆ ಎಂದರೆ ಅದು ಕೂಡ ಈ ಕಾಲ ನಮಗೆ ಕೊಟ್ಟ ಬಳುವಳಿಯೇ. ಈಗ ಹಲವು ಇಲಾಖೆಗಳು ಅನಗತ್ಯ ಖರ್ಚು ಮಾಡಿ ನಡೆಸುತ್ತಿದ್ದ ಸಮ್ಮೇಳನಗಳನ್ನು, ತರಬೇತಿಗಳನ್ನು ತಂತ್ರಾಂಶದ ನೆರವು ಪಡೆದು ಇದ್ದಲ್ಲೇ ಆನ್ಲೈನ್ ಸಭೆಗಳ ಮೂಲಕ ನಡೆಸುತ್ತಿವೆ. ಇಂಥೆಲ್ಲ ಅವಕಾಶಗಳೂ ಸಾಧ್ಯತೆಗಳೂ ಇರುವಾಗ ಶಿಕ್ಷಣ ಕ್ಷೇತ್ರದಲ್ಲೂ ಈ ಸೌಲಭ್ಯ ಬಳಸುವುದು ನಿಜಕ್ಕೂ ಅತ್ಯಗತ್ಯ ವಿಚಾರವೇ. ಮೊದಲೆಲ್ಲ ಸಂಗೀತ ಕಲಿಯಲು, ಕಂಪ್ಯೂಟರಿಗೆ ಸಂಬಂಧಿಸಿದ ಹಲವು ಕೋರ್ಸುಗಳನ್ನು ಕಲಿಯಲು ಬೆಂಗಳೂರಿಗೇ ಓಡಬೇಕಿತ್ತು. ಇವತ್ತು ನಮಗೆ ಬೇಕಿರುವ ಯಾವುದೇ ವಿದ್ಯೆಯನ್ನು ಕಲಿಯಲು ಎಲ್ಲಿಗೂ ಹೋಗಬೇಕಾಗಿಲ್ಲ, ಪ್ರಯಾಣ ಮಾಡಬೇಕಿಲ್ಲ, ಸಮಯದ ಹೊಂದಾಣಿಕೆ ಮತ್ತು ಅನಗತ್ಯ ಮಾನಸಿಕ ಒತ್ತಡಗಳೇ ಇಲ್ಲದೆ ನಮಗೆ ನಿಜಕ್ಕೂ ಬೇಕಿರುವುದನ್ನು ಅಂತರ್ಜಾಲದ ತರಗತಿಗಳ ಮೂಲಕ ಕಲಿಯುವುದು ಸಾಧ್ಯವಿದೆ. ಅಲ್ಲದೇ ಕೆಲವೊಂದು ಸಂಸ್ಥೆಗಳು ತಮ್ಮ ಕಲಿಕಾ ತರಗತಿಗಳಿಗೆ ಬೇಕಾದ ಲಿಂಕುಗಳನ್ನು ತರಗತಿಯ ಆರಂಭದಲ್ಲೇ ಕಳಿಸಿ ಆ ತರಗತಿಯು ಪಾಸ್ ವರ್ಡ್ ಕೊಟ್ಟರಷ್ಟೇ ತೆರೆಯುವ ವ್ಯವಸ್ಥೆಯನ್ನೂ ಮಾಡಿ ಕೊಂಡಿವೆ. ಕಂಪ್ಯೂಟರ್ ನೆಟ್ ವರ್ಕಿಂಗ್ ಮತ್ತು RDBMS ಥರದ ಕೋರ್ಸುಗಳು ಯುಟ್ಯೂಬ್ ಛಾನೆಲ್ಲಿನಲ್ಲಿ ಅದೆಷ್ಟಿವೆ ಎಂದರೆ ಆಸಕ್ತಿ ಮತ್ತು ಕಲಿಕೆಯ ಉತ್ಸಾಹವಿದ್ದವರು ತಾವಿದ್ದೆಡೆಯಿಂದಲೇ ಅದನ್ನು ಕಲಿಯಬಲ್ಲರು. ಸದ್ಯ ಚರ್ಚೆಯಲ್ಲಿರುವ ಆನ್ಲೈನ್ ಶಿಕ್ಷಣದ ಅಗತ್ಯತೆ ಇಷ್ಟೆಲ್ಲ ಬರೆದ ಮೇಲೆ ಅತ್ಯಗತ್ಯ ಮಾನ್ಯ ಮಾಡಲೇ ಬೇಕಿರುವ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿಯೇ ಇದೆ ಎನ್ನುವುದು ಸತ್ಯವಾದರೂ ಯಾವ ತರಗತಿಯಿಂದ ಮತ್ತು ಯಾವ ವಯಸ್ಸಿನ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎನ್ನುವುದರಲ್ಲಿ ವಿಭಿನ್ನ ನಿಲುವು ಮತ್ತು ವಿಭಿನ್ನ ವಾದಗಳೂ ಸಹಜವಾಗಿಯೇ ಹುಟ್ಟಿವೆ. ಏಕೆಂದರೆ ಶಿಕ್ಷಣ ತಜ್ಞರ ಪ್ರಕಾರ ಕಲಿಕೆಯು ವಯಸ್ಸು ಮತ್ತು ಕಲಿಕಾ ಪಠ್ಯ ಹಾಗೂ ಕಲಿಕಾ ಸಾಮಗ್ರಿಗಳ ಮೇಲೆ ನಿಂತಿದೆ. ಈ ಸಂಗತಿಯನ್ನು ಗಮನಿಸಿದರೆ ಪ್ರಸ್ತುತ ಇರುವ ಶೈಕ್ಷಣಿಕ ವ್ಯವಸ್ಥೆಯು ಆನ್ಲೈನ್ ತರಗತಿಗೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆಯೇ ಎಂದರೆ ಉತ್ತರ ನಿರಾಶೆಗೆ ತಳ್ಳುತ್ತದೆ. ಏಕೆಂದರೆ ನಮ್ಮ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯುತ್ ಮತ್ತು ಕಂಪ್ಯೂಟರ್ ಇರಲಿ ಶೌಚಾಲಯಗಳು ಮತ್ತು ಅತ್ಯಗತ್ಯ ಬೇಕಿರುವ ನೀರು ಕೂಡ ಇಲ್ಲದಿರುವ ಸ್ಥಿತಿ ಇದೆ. ಹಳ್ಳಿಗಾಡಿನ ಶಾಲೆಗಳ ಶಿಕ್ಷಕರನ್ನೇ ನಿಯಂತ್ರಿಸಲಾಗದ ಶೈಕ್ಷಣಿಕ ವ್ಯವಸ್ಥೆ ನಮ್ಮದು. ಎಲ್ಲ ಇಲಾಖೆಗಳ ಹಾಗೆ ಇಲ್ಲೂ ತುಂಬ ಪ್ರಾಮಾಣಿಕರೂ ನಿಸ್ಪೃಹರೂ ಶಾಲೆ ಎಂದರೆ ತೇದು ಕೊಳ್ಳುವವರೂ ಇದ್ದಾರೆ. ಆದರೆ ಊರಿನ ರಾಜಕೀಯ ಶಾಲೆಗಳ ಮೇಲೂ ಪ್ರಭಾವ ಬೀರುವುದರಿಂದ ಕೆಲವೇ ಕೆಲವರು ಮಾತ್ರ ಇದನ್ನೆಲ್ಲ ಮೆಟ್ಟಿ ನಿಲ್ಲಬಲ್ಲರು. ಎಲ್ಲರೂ ಶ್ರೀರಾಮರೇ ಆದರೆ ರಾವಣನ ಪಾತ್ರ ಯಾರಿಗೆ ಬೇಕು? ವಯಸ್ಸು ಮತ್ತು ಕಲಿಕೆಯ ದೃಷ್ಟಿಯಿಂದ ಗಮನಿಸಿದರೆ ಪಿಯುಸಿ ಮತ್ತು ಅದರಾಚೆಯ ಓದಿಗೆ ಆನ್ಲೈನ್ ತರಗತಿ ಬಳಸಬಹುದು. ಹದಿನಾರರ ನಂತರ ದೈಹಿಕವಾಗಿ ಮಾನಸಿಕವಾಗಿ ಪ್ರಬುದ್ಧತೆ ಕೂಡ ಇರುತ್ತದೆ. ಆದರೆ ಹದಿ ಹರಯದ ವಿದ್ಯಾರ್ಥಿಗಳನ್ನು ಪಾಲಕರು ಆಗಾಗ ಗಮನಿಸುತ್ತ ತರಗತಿ ಇದ್ದಾಗ ಮಾತ್ರವೇ ಮೊಬೈಲ್ ಅಥವ ಲ್ಯಾಪ್ ಟಾಪ್ ಬಳಸುವಂತೆ ತಾಕೀತು ಇರಬೇಕು.ಇಲ್ಲವಾದಲ್ಲಿ ಬೇಡವಾದ ವೆಬ್ ಸೈಟುಗಳನ್ನೇ ಹದಿ ಹರಯದವರು ಕದ್ದು ಮುಚ್ಚಿ ನೋಡುತ್ತಾರೆ. ಇದಕ್ಕೆ ಅವಕಾಶ ಸಿಕ್ಕಲೇ ಬಾರದು. ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಆನ್ಲೈನ್ ತರಗತಿ ವ್ಯರ್ಥ. ಏಕೆಂದರೆ ಕಿರು ವಯಸ್ಸಿನ ಮಕ್ಕಳನ್ನು ಅನುನಯದಿಂದ ಪ್ರೀತಿ ಮತ್ತು ಸ್ಪರ್ಶದಿಂದ ಗೆಲ್ಲುತ್ತಲೇ ಕಲಿಸಬೇಕು. ಮನಸ್ಸನ್ನು ಕೇಂದ್ರೀಕರಿಸದೆ ಪಾಠವನ್ನು ಈ ಮಕ್ಕಳು ಹೇಗೆ ಕಲಿತಾವು? ಮನಸ್ಸನ್ನು ನಿಗ್ರಹಿಸಿ ಎಂದು ಹೇಳುವುದು ಸುಲಭ. ಆದರೆ ಸಣ್ಣ ವಯಸ್ಸಿನ ಹುಡುಗ ಬುದ್ಧಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಆಟದ ಮೂಲಕವೇ ಕಲಿಸಲು ಸಾಧ್ಯ. ನಿಜಕ್ಕೂ ಸರ್ವ ಶಿಕ್ಷಣ ಅಭಿಯಾನದ ಉದ್ದೇಶ ಇಲ್ಲಿ ಸ್ಮರಿಸಲೇ ಬೇಕು. ಇನ್ನು ಪಾಲಕರ ಆರ್ಥಿಕ ಸಾಮರ್ಥ್ಯ ತುಂಬ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಮ ವಸ್ತ್ರ, ಪಠ್ಯ ಪುಸ್ತಕ, ಮಧ್ಯಾಹ್ನದ ಊಟ ಕೊಟ್ಟರೂ ಮಕ್ಕಳ ಸಂಖ್ಯೆ ಕುಸಿಯುತ್ತಲೇ ಇದೆ. ಅತ್ತ ಖಾಸಗಿಯವರ ಆಕರ್ಷಣೆ ಇಂಗ್ಲಿಷ್ ಮೋಹ ಕೂಡ ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿದೆ. ಇನ್ನು ಸರ್ಕಾರವೇ ಆನ್ಲೈನ್ ಎಂದರೆ ಹಳ್ಳಿಗಾಡಿನ ಮಕ್ಕಳು ಸಂಪೂರ್ಣವಾಗಿ ಶಿಕ್ಷಣ ವಂಚಿತರಾಗುತ್ತಾರೆ. *********

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. Read Post »

You cannot copy content of this page

Scroll to Top