ಪರಿಶ್ರಮದಿಂದ ಗೆಲುವನ್ನು ಕೊಳ್ಳಬಹುದು
ಇಂದಿನ ದಾವಂತದ ಬದುಕಿನಲ್ಲಿ ಎಲ್ಲ ಸುಖಗಳೂ ನಮ್ಮೆಡೆ ತಾವೇ ಬರಲಿ ಎಂದು ಆಶಿಸುತ್ತೇವೆ. ಬೆರಳ ತುದಿಯಲ್ಲಿ ಬೇಕಾದ್ದೆಲ್ಲವೂ ದೊರೆಯುತ್ತಿರುವಾಗ ಗೆಲುವಿಗೆ ಮಾತ್ರ ಇನ್ನಿಲ್ಲದ ಪರಿಶ್ರಮ ಏಕೆ ಪಡಬೇಕು ಎಂದು ಪ್ರಶ್ನಿಸುತ್ತೇವೆ. ‘ಕೆಲಸಕ್ಕೆ ಕರೆಯಬೇಡ್ರಿ ಊಟಕ್ಕೆ ಮರೆಯಬೇಡ್ರಿ.’ ಅನ್ನೋ ಜಾಯಮಾನದವರನ್ನು ಕಂಡರೆ ಯಶಸ್ಸು ಹತ್ತಿರವೂ ಸುಳಿಯುವುದಿಲ್ಲ. ಶ್ರಮವಿಲ್ಲದೇ ಏನೆಲ್ಲವೂ ತಮ್ಮ ಪಾದದ ಕೆಳಗೆ ಬಿದ್ದಿರಬೇಕೆಂಬುದು ನಮ್ಮಲ್ಲಿ ಬಹುತೇಕ ಜನರ ಅಭಿಪ್ರಾಯ. ವ್ಯಕ್ತಿತ್ವ ವಿಕಾಸದಲ್ಲಂತೂ ಪರಿಶ್ರಮ ಮೂಲ ವಸ್ತುವಿನಂತೆ ಕಾರ‍್ಯ ನಿರ‍್ವಹಿಸುತ್ತದೆ. ಶ್ರಮದ ಬೀಜಕ್ಕೆ ಅಗಾಧ ಶಕ್ತಿ ಇದೆ ಎನ್ನುವುದು ಈಗಾಗಲೇ ಮಹಾನ್ ಸಾಧಕರು ತೋರಿಸಿಕೊಟ್ಟಿದ್ದಾರೆ. ಎಷ್ಟು ಶ್ರಮವಹಿಸಿದರೂ ಅಷ್ಟೇ ಬದುಕು ಅದೃಷ್ಟದಾಟ. ಅದೃಷ್ಟದ ಮುಂದೆ ಪರಿಶ್ರಮವೂ ಒಂದು ಆಟಿಗೆಯಂತೆ.ಎಂದು ನಂಬಿ ಜೀವನವನ್ನು ಅದೃಷ್ಟದ ಕೈಗೆ ಕೊಟ್ಟು ಹಗಲು ರಾತ್ರಿ ಹಲಬುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ‘ಪರಿಸ್ಥಿತಿಗೆ ಅಂಜಲಾರೆ. ನಾನೇ ಆ ಪರಿಸ್ಥಿತಿಯ ನಿರ‍್ಮಾತೃ.’ ಎಂಬ ನೆಪೋಲಿಯನ್ ಬೊನಾಪರ‍್ಟೆ ಮಾತಿಗೆ ಅಮೂಲ್ಯವಾದ ಬೆಲೆ ನೀಡಿದ ಮಹಾ ಪುರುಷರು ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ ಯಾವ ಆಸೆ ಆಮಿಷಗಳಿಗೆ ಬಲಿಯಾಗದ,ಎಂಥ ಸಿರಿವಂತಿಕೆಗೂ ದಕ್ಕದ ಗೆಲುವನ್ನು ಪರಿಶ್ರಮದ ಬೆವರಿನಿಂದ ಗಿಟ್ಟಿಸಿಕೊಳ್ಳಬಹುದು. ಅದು ಹೇಗೆ ಎಂಬುದಕ್ಕೆ ಮುಂದಕ್ಕೆ ಓದಿ.
ಪರಿಶ್ರಮ ಎಂದರೆ . . . . ?
ಗೆಲುವಿಗೆ ಬೇಕಾದ ಮೂಲ ಪರಿಕರ. ಮೂಲ ಬೀಜ. ಮೂಲತಃ ಗೆಲುವಿಗೆ ತಿಳಿಯುವ ಚೆಂದದ ಮೂಲ ಭಾಷೆ. ಪರಿಶ್ರಮ ಹೇಳಿದ ಮಾತನ್ನು ಗೆಲುವು ಶಿರಸಾವಹಿಸಿ ಪಾಲಿಸುತ್ತದೆ. ಸ್ವಲ್ಪ ತಡವಾಗಬಹುದು ಅಷ್ಟೆ. ಮನುಷ್ಯನ ಮನಸ್ಸೊಂದು ವಿಚಿತ್ರ. ಅದು ಯಾವ ಯಾವುದೋ ರೂಪದಲ್ಲಿ ರಂಜನೆಯನ್ನು ಪಡೆಯಲು ಸದಾ ಕಾಲ ತುಡಿಯುತ್ತದೆ. ಇನ್ನೂ ವಿಚಿತ್ರವೆಂದರೆ ಪರಿಶ್ರಮವೊಂದನ್ನು ಬಿಟ್ಟು. ಜೇನು ತುಪ್ಪ ಬೇಕಾದವನು ಜೇನುನೊಣಗಳಿಗೆ ಹೆದರಬಾರದು ಎಂಬುದು ದಕ್ಷಿಣ ಆಫ್ರಿಕನ್ ಗಾದೆ. ಗೆಲುವಿನ ಫಲ ಬೇಕೆನ್ನುವವರು ಪರಿಶ್ರಮದ ಬೀಜ ಬಿತ್ತಿ ಸತತ ನೀರೆರೆಯುವುದನು ಮರೆಯಬಾರದು.
ನಡೆಯದು ಅದೃಷ್ಟದಾಟ
ಅದೃಷ್ಟ ಗಾಜಿನಂತೆ: ಹೊಳಪು ಹೆಚ್ಚಿದಂತೆಲ್ಲ ಬೇಗ ಒಡೆಯಬಲ್ಲದು. ಹಗಲಿರುಳೆನ್ನದೇ ಶ್ರಮ ಪಡುತ್ತಿದ್ದರೂ, ಹಣೆಯ ಮೇಲೆ ಬೆವರಿನ ಸಾಲು ಸಾಲುಗಟ್ಟಿದರೂ ಫಲಿತಾಂಶ ಮಾತ್ರ ನನ್ನ ನಿರೀಕ್ಷೆಯನ್ನು ತಲುಪುತ್ತಿಲ್ಲ. ಎಂಬುದು ಕೆಲವರ ಗೊಣಗಾಟ. ವಿಷ್ಣು ಶರ‍್ಮ ಹೇಳಿದಂತೆ,’ಆಪತ್ತು ಬಂದಾಗ ಬುದ್ಧಿಗೆಡಬಾರದು.’ಶೇ ೯೯ ರಷ್ಟು ಪ್ರಯತ್ನಕ್ಕೆ ಶೇ ೧ ರಷ್ಟು ಅದೃಷ್ಟ ಸೇರಿದಾಗ ಗೆಲುವು. ಶ್ರಮ ಎಂಬುದೊಂದು ದೊಡ್ಡ ಭಾರ ಎಂದು ಹೆಸರಿಟ್ಟು ದೂರ ಸರಿಯುವವರೂ ಇಲ್ಲದಿಲ್ಲ.ಇದನ್ನು ಕಂಡು ರವೀಂದ್ರನಾಥ ಟ್ಯಾಗೋರ್ ಹೀಗೆ ಹೇಳಿದ್ದಾರೆ; ಹೊರೆಯೇ ಮುಖ್ಯವಾಗಿರುವಾಗ ಯಾವ ಭಾರವಾದರೇನು? ಇಟ್ಟಿಗೆಯಾದರೇನು? ಕಲ್ಲಾದರೇನು? ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಅಪಾರ ಪರಿಶ್ರಮವಿರುತ್ತದೆ. ಪರಿಶ್ರಮದ ನೋವಿನಲ್ಲೂ ನಲಿವಿದೆ ಗೆಲುವಿದೆ ಹಾಗಾದರೆ ಪರಿಶ್ರಮದ ಬೀಜ ಬಿತ್ತಿ ಗೆಲುವಿನ ಫಲ ಪಡೆಯಬಹುದು. ಭಾಗ್ಯದ ಬೆನ್ನು ಹತ್ತಿ ನಾವು ಓಡುವಂತೆ ಪರಿಶ್ರಮಿಗಳ ಬೆನ್ನು ಹತ್ತಿ ಗೆಲುವು ಓಡುತ್ತದೆ.
ಬೇಡ ಕಣ್ಣೀರಿನ ಉತ್ತರ
ಷೇಕ್ಸಪಿಯರ್ ತನ್ನ ಸಾನೆಟ್ ಒಂದರಲ್ಲಿ ‘ಕಾಲದ ಆಘಾತಕ್ಕೆ ಶಿಲಾ ಪ್ರತಿಮೆಗಳು ಒಡೆಯಬಹುದು. ಹೊನ್ನಲೇಪದ ಸ್ಮಾರಕಗಳು ಉರಳಬಹುದು. ಆದರೆ ಕಾವ್ಯ ಮಾತ್ರ ಮೃತ್ಯು ಹಾಗೂ ವಿಸ್ಮೃತಿಗೆ ಅತೀತವಾದುದು.’ ಎಂದು ಕಾವ್ಯದ ಅಮರತೆಯ ಕುರಿತು ಹೇಳಿದ ಅದೇ ಮಾತನ್ನು ಪರಿಶ್ರಮಕ್ಕೂ ಅನ್ವಯಿಸಬಹುದು. ಹೆಜ್ಜೆ ಹೆಜ್ಜೆಗೂ ಎದುರಾಗುವ ಸೋಲಿಗೆ ಹೆದರಿ ಹತಾಶೆಯಿಂದ ಕಣ್ಣೀರು ಸುರಿಸುತ್ತೇವೆ. ಸೋಲಿಗೆ ಕಣ್ಣೀರಿನ ಉತ್ತರ ನೀಡುತ್ತೇವೆ. ಸೋಲನ್ನು ಕಣ್ಣೀರಿನ ಕೈಯಲ್ಲಿ ಕೊಟ್ಟು ಕೈ ತೊಳೆದುಕೊಂಡು ಬಿಡುತ್ತೇವೆ. ಕತ್ತಲು ಕೋಣೆಯಲ್ಲಿ ಕಣ್ಣೀರು ಕೆಡವಿ ಮತ್ತೆ ಆಲಸ್ಯತನದ ಮರೆಯಲ್ಲಿ ಮಲಗುವ ಅಭ್ಯಾಸ ಮಾಡಿಕೊಂಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರಮವೆಂಬುದು ನಮಗೆ ಕಬ್ಬಿಣದ ಕಡಲೆಯಂತೆ ಕಾಣುತ್ತಿದೆ. ಆಲಸ್ಯವೆಂಬ ಮಾಯೆ ಶ್ರಮವೆಂಬ ಸತ್ಪಥವನ್ನು ನುಂಗಿ ಹಾಕಿ ಬಿಡುತ್ತದೆ. ಶ್ರಮವೆಂಬ ಜಂಜಾಟದಲ್ಲಿ ಬೀಳುವುದಕ್ಕಿಂತ ಕಣ್ಣೀರಿನಲ್ಲಿ ಕೈ ತೊಳೆಯುವುದು ಒಳ್ಳೆಯದು ಎಂದು ಕೊಂಡಿದ್ದೇವೆ. ಮಣ್ಣಿನ ಗಡಿಗೆಯಲಿ ಅಡುಗೆ ಮಾಡಿ ಉಣ್ಣುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದನ್ನೆಲ್ಲ ಪಾಲಿಸೋಕೆ ಸಮಯವೆಲ್ಲಿದೆ? ಶ್ರಮದ ಯೋಚನೆಗಳಿಲ್ಲದೇ ಯೋಜನೆಗಳಿಲ್ಲದೇ ಸ್ಪರ್ಧಾತ್ಮಕ ಯುಗದಲ್ಲಿ ಸುಂದರ ಬದುಕು ಪಡೆಯುವುದು ಕಷ್ಟ.
ಇರಲಿ ಗಟ್ಟಿ ನಿರ್ದಾರ
ಪರಿಶ್ರಮವೆಂಬುದು ಕಿರಿದಾದ ದಾರಿಯಲ್ಲಿ ಅದೂ ಪಾಚಿಗಟ್ಟಿದ ದಾರಿಯಲ್ಲಿ ನಡೆದಂತೆ. ಆದ್ದರಿಂದ ಅದರ ಸಹವಾಸವೇ ಬೇಡ. ಗೆಲುವನ್ನು ಬಾಚಿ ತಬ್ಬಿಕೊಳ್ಳಲು ಸಾಕಷ್ಟು ಅಡ್ಡ ಮಾರ‍್ಗಗಳಿವೆ. ಅವುಗಳನ್ನು ಅನುಸರಿಸುವುದೇ ಸೂಕ್ತ ಎಂದು ಅವುಗಳತ್ತ ಹೆಜ್ಜೆ ಹಾಕಿ ಕೈ ಸುಟ್ಟುಕೊಳ್ಳುತ್ತೇವೆ. ಶಾಶ್ವತ ಗೆಲುವಿನ ನಿಜವಾದ ಕೀಲಿ ಕೈ ಶ್ರಮವೆಂದು ಅರಿಯುವುದರಲ್ಲಿ ಸಾಕಷ್ಟು ಸಮಯ ಸರಿದಿರುತ್ತದೆ. ನೊಂದ ಮನಸ್ಸು ವಿಶ್ರಾಂತಿ ಬೇಕೆಂದು ಅಂಗಲಾಚುತ್ತದೆ. ಆದರೆ ಅದು ವಿಶ್ರಾಂತಿಗೆ ಸಕಾಲವಲ್ಲ. ಪ್ರಖರವಾದ ಪರಿಶ್ರಮಕ್ಕೆ ಒಡ್ಡಿಕೊಳ್ಳಬೇಕಾದ ಕಾಲ.ಮಾಡಿದ ತಪ್ಪಿಗೆ ಬೇರೆ ದಾರಿ ಇಲ್ಲ. ಶ್ರಮದೆಡೆ ಮುಖ ಮಾಡುವುದೊಂದೇ ದಾರಿ. ಪರಿಶ್ರಮವೆಂಬುದು ನಿರಂತರ ಪ್ರಕ್ರಿಯೆ. ಶ್ರಮ ಪಟ್ಟದ್ದು ಸಾಕೆಂದುಕೊಂಡರೆ ಗೆಲುವು ನಿಂತ ನೀರಿನಂತೆ ನಿಲ್ಲುತ್ತದೆ. ಜಗತ್ತಿನ ಸುಪ್ರಸಿದ್ಧ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್, ೬೭ ನೇ ವಯಸ್ಸಿನಲ್ಲಿ ತಾನು ಕಟ್ಟಿ ಬೆಳೆಸಿದ ಫ್ಯಾಕ್ಟರಿ ಹೊತ್ತಿ ಉರಿಯುವುದನ್ನು ಕಂಡು.’ ನಿನ್ನ ತಾಯಿ ಮತ್ತು ಆಕೆಯ ಗೆಳತಿಯರನ್ನು ಕರೆ. ಅವರೆಂದೂ ಇಂಥ ದೊಡ್ಡ ಫ್ಯಾಕ್ಟರಿ ಉರಿಯುವ ದೃಶ್ಯವನ್ನು ಕಂಡಿರಲಾರರು.’ ಎಂದು ತನ್ನ ೨೪ ವರ‍್ಷದ ಮಗ ಚಾರ್ಲ್ಸ್ ಹೇಳುತ್ತಾನೆ. ತಂದೆಯ ಮಾತು ಕೇಳಿದ ಮಗ ಗಾಬರಿಯಾಗಿ ಇದೇನು ಹೇಳುತ್ತಿರುವಿರಿ ನೀವು? ಇಷ್ಟು ದಿನ ಶ್ರಮವಹಿಸಿ ಬೆಳೆಸಿದ ನಿಮ್ಮ ಕನಸು ಹೊತ್ತಿ ಉರಿಯುತ್ತಿದೆ ಎಂದ ಸಖೇದ ಆಶ್ಚರ್ಯದಿಂದ. ಅದಕ್ಕೆ ಥಾಮಸ್ ಕೊಟ್ಟ ಉತ್ತರ ಮಾರ‍್ಮಿಕವಾದುದು. ಪರಿಶ್ರಮ ಪಡುವ ಗಟ್ಟಿ ನಿರ‍್ಧಾರವಿದ್ದರೆ ಇಂಥ ಎಷ್ಟು ಫ್ಯಾಕ್ಟರಿಗಳನ್ನು ಕಟ್ಟ ಬಹುದೆಂದ. ಮರು ದಿನದಿಂದಲೇ ಶ್ರಮದ ಬೆವರು ಸುರಿಸಿದ.
ಪರಿಶ್ರಮವೇ ಕೀಲಿಕೈ
ಭವಿಷ್ಯವನ್ನು ವರ‍್ತಮಾನದಿಂದ ಕೊಳ್ಳಬಹುದು ಎಂದಿದ್ದಾರೆ ಡಾ: ಜಾನ್ಸನ್. ಹಾಗೆಯೇ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು. ವರ‍್ತಮಾನದಲ್ಲಿ ನಾವು ತೊಡಗಿಸಬೇಕಾದ ಬಂಡವಾಳವೆಂದರೆ ಪರಿಶ್ರಮ. ಎಲ್ಲರ ಮನ ಸೆಳೆಯುವ ಬಣ್ಣ ಬಣ್ಣದ ಚಿಟ್ಟೆ ಆಗಬೇಕಾದರೆ ಕಂಬಳಿಹುಳ ಪಡುವ ನೋವು ಅಷ್ಟಿಷ್ಟಲ್ಲ. ಸಾಧಕರ ಯಶೋಗಾಥೆಯನ್ನು ಓದುವಾಗ ಅಥವಾ ಕೇಳುವಾಗ ಸ್ಪಷ್ಟವಾಗುವ ಅಂಶವೆಂದರೆ,’ಕೆತ್ತಿಸಿಕೊಳ್ಳುವ ತಾಳ್ಮೆ ಇಲ್ಲದವರು ವಿಗ್ರಹವಾಗಲು ಹಂಬಲಿಸಬಾರದು. ಕಲ್ಲಾಗಿಯೇ ಇದ್ದು ಬಿಡಬೇಕು.’ ರಭಸವಾದ ಅಲೆಗಳಂತೆ ಬಂದ ಸಮಸ್ಯೆಗಳಿಗೆ ತಮ್ಮ ಛಲ ಬಿಡದ ಪರಿಶ್ರಮದಿಂದಲೇ ಎದೆಯನ್ನೊಡ್ಡಿ ದಿಟ್ಟ ಉತ್ತರ ನೀಡಬೇಕು.. ಆಂಡ್ರೂ ಕರ‍್ನೇಗಿ, ಅಮೇರಿಕದ ಸ್ಟೀಲ್ ರಂಗದಲ್ಲಿ ಬಹು ದೊಡ್ಡ ಹೆಸರು. ಆತ ಹನ್ನೊಂದುವರ‍್ಷದ ಪುಟ್ಟ ಪೋರನಾಗಿದ್ದಾಗ ಕಾರ‍್ಮಿಕನಾಗಿದ್ದ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮವಹಿಸಿ ತಾನು ಶ್ರೀಮಂತನಾಗುವುದಲ್ಲದೇ ನೂರಾರು ಜನ ಬಿಲಿಯನರ್‌ಗಳನ್ನು ಸೃಷ್ಟಿಸಿದ.ಇದನ್ನು ಅವಲೋಕಿಸಿದಾಗ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಬನ್ನಿ ಸೋಲೆಂಬ ಅವಮಾನಕ್ಕೆ ಉತ್ತರವನ್ನು ಪರಿಶ್ರಮದಿಂದ ಕೊಡೋಣ. ಗೆಲುವಿನ ದಾರಿಯಲ್ಲಿ ನಗು ನಗುತ ಹೆಜ್ಜೆ ಹಾಕೋಣ.
************************
ಲೇಖಕರ ಬಗ್ಗೆ
ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
Very good motivating article. Superb
Tnx 4 Ur valuable fdbk
ಉತ್ತಮ ಲೇಖನ. ಹತಾಶೆಯಿಂದ ತೊಳಲಾಡುವವರು ಅದರಿಂದ ಹೊರಬರಲು ನಿಮ್ಮ ಪ್ರತೀ ಅಂಕಣಗಳಲ್ಲೂ ಬಹಳಷ್ಟು ಕಾರಣ ಸಿಗುತ್ತವೆ.
ತಮ್ಮ ಸಹೃದಯಿ ಪ್ರತಿಕ್ರಿಯೆಗೆ
ಭಾವದೊಡಲಿನ ಧನ್ಯವಾದಗಳು