ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾಫೀನೊ -ಚಹಾನೊ

ಚರ್ಚೆ ರಾಮಸ್ವಾಮಿ ಡಿ.ಎಸ್. ಕಾಫಿ ಮೇಲೋ ಚಹಾ ಮೇಲೋ ಎಂದು ಕುಸ್ತಿ ಆಡುತ್ತಿರುವವರ ಫೇಸ್ಬುಕ್ ಪೇಜುಗಳನ್ನು ಬ್ರೌಸ್ ಮಾಡುತ್ತ ಇರುವಾಗ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬ ಹೈಸ್ಕೂಲ್ ದಿನಗಳ ಡಿಬೆಟ್ ವಿಷಯಗಳೇ ನೆನಪಾದುವು. ಕಾಫಿ, ಚಹಾ, ಹೆಣ್ಣು, ಗಂಡು, ಸಾಹುಕಾರಿಕೆ, ಬಡತನ, ಜಾತಿ, ಧರ್ಮ ಅಂತೆಲ್ಲ ನಾವು ಗುದ್ದಾಟ ಮಾಡಿದರೂ ಯಾರಿಗೆ ಯಾವುದು ಮುಖ್ಯ ಅನ್ನಿಸುತ್ತದೋ ಅದನ್ನು ಅವರವರು ಅನುಸರಿಸುತ್ತಾರೆ. ಯಾರೋ ಹೇಳಿದರೆಂದು ಕಾಫಿ ಟೀ ಬಿಟ್ಟು ಈಗ ಎಲ್ಲರ ಮನೆಯಲ್ಲೂ ಅಮೃತ ಬಳ್ಳಿ ಕಷಾಯ ಕುಡೀತಿರೋದನ್ನು ಇವರ್ಯಾರೂ ಹೇಳಲೇ ಇಲ್ಲವಲ್ಲ… Jogi Girish Rao Hatwar ಮತ್ತು Sumithra Lc ಅವರ ಬರಹಗಳನ್ನು ಮತ್ತು ಅವರಿಬ್ಬರೂ ಕಾಫಿಯ ಪರವಾಗಿ ನಡೆಸಿದ ಡಿಬೇಟುಗಳನ್ನೂ ಕಂಡು ಖುಷಿಯಾಗಿ ನನ್ನ ಬರಹವನ್ನೂ ಇಲ್ಲಿ ಸೇರಿಸುತ್ತ ಇದ್ದೇನೆ. ಚಹಾ ಕುಡಿಯೋ ಅಭ್ಯಾಸ ಇರುವವರು ಕಾಫಿಯನ್ನು , ಕಾಫಿಯಷ್ಟೇ ಅಮೃತ ಎಂದು ನಂಬಿದವರು ಟೀಯನ್ನು ದ್ವೇಷಿಸುತ್ತಾರೆ. ಆದರೆ ಇವೆರಡೂ ಒಳ್ಳೆಯದು ಅಲ್ಲವೇ ಅಲ್ಲ ಅಂತ ತಿಳಿದ ಮಲೆನಾಡಿನವರು ಇವತ್ತಿಗೂ ಬೆಳಿಗ್ಗೆ ಮೊದಲು ಕುಡಿಯುವುದು ಕಷಾಯವನ್ನೇ…ಶುಂಠಿ, ಮೆಣಸು, ಬೆಲ್ಲ, ಜೀರಿಗೆ, ದ‌ನಿಯ ಪುಡಿಯನ್ನು ಬೆಲ್ಲದ ನೀರಿನ ಅರ್ಧಾಂಶಕ್ಕೆ ಕುದಿಸಿ ಕೊಂಚ ಹಾಲು ಸೇರಿಸಿ ಕುಡಿಯುವುದು ಉತ್ತಮ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಕರೋನಾ ಕಾಲದ ಸತ್ಯ … ಈ ಟೀ ಮಾಡುವುದು ಕೂಡ ಕಷಾಯ ಮಾಡಿದಂತೆಯೇ. ಟಿ ಪುಡಿಯನ್ನು ನೀರು + ಹಾಲಿನ ಜೊತೆ ಕುದಿಸಿ ಕುದಿಸಿ ಸೋಸುವ ಮೊದಲು ಪರಿಮಳಕ್ಕೆ ಶುಂಠಿಯನ್ನು ಕೂಡ ಸೇರಿಸಿ ಶೋಧಿಸಿ ಕುಡಿಯುತ್ತಾರೆ. ಒಪ್ಪಿ ಬಿಡಿ ಯಾವತ್ತೂ ಟೀ ಪಿತ್ತ ಹೆಚ್ಚಿಸುವಂಥದೇ. ಬಹಳ ಟೀ ಕುಡಿಯವರಿಗೆ ಆರೋಗ್ಯ ಇರೋಲ್ಲ ಹೌದೋ ಅಲ್ಲವೋ ನೀವೇ ಹೇಳಿ‌. ಅಷ್ಟಕ್ಕೂ ಟೀ ಮಾಡೋದು ಬ್ರಹ್ಮ ವಿದ್ಯೆ ಏನಲ್ಲ. ಹಾಲು ಮತ್ತು ಟೀ ಪುಡಿ ಚನ್ನಾಗಿದ್ದರೆ ಕುದಿಸಲಿಕ್ಕೆ ದೊಡ್ಡ ಪಾತ್ರೆ ಇದ್ದರೆ ಸಾಕಾದೀತು. ಆದರೆ ಕುದಿಯುವಾಗ ಅದು ಉಕ್ಕಿ ಸೊಕ್ಕಿ ಸ್ಟೋವನ್ನು ಆರಿಸಬಾರದು ಅಷ್ಟೆ. ಆದರೆ ಕಾಫಿ ಮಾಡೋದು ಎಲ್ಲರಿಂದಲೂ ಆಗೋಲ್ಲ. ಹಾಗಾಗಿ ಎಲ್ಲರೂ ಒಳ್ಳೆಯ ಕಾಫಿ ಕುಡಿಯದೇ ಇರೋದರಿಂದ ಒಳ್ಳೆಯ ಕಾಫಿಯ ರುಚಿ ಮತ್ತು ಸ್ವಾದ ಗೊತ್ತಿರದೇ ಟೀ ಚಂದ ಅನ್ನುತ್ತಾರೆ. ಜೊತೆಗೆ ಟೀ ಎಷ್ಟು ಕುದಿಯುತ್ತೋ ಅಷ್ಟು ರುಚಿ. ಆದರೆ ಕಾಫಿ ಯಾವತ್ತೂ ಕುದಿಯಲೇ ಬಾರದು. ಒಮ್ಮೆ ಕುದಿಯಿತೋ ಅದರ ರುಚಿ ಮತ್ತು ಬಣ್ಣ ಎರಡೂ ಕೆಡುತ್ತವೆ. ಟೀ ಮಾಡಲು ಹಾಲಿನ ಗುಣಮಟ್ಟ ಅಥವ ಟೀ ಪುಡಿಯ ಗುಣ ಮುಖ್ಯ ಆಗುವುದಿಲ್ಲ. ಯಾವುದೇ ಗುಣಮಟ್ಟದ ಹಾಲಲ್ಲೂ ಯಾವುದೇ ಕಂಪನಿಯ ಟೀ ಪುಡಿ ಹಾಕಿ ಕುದಿಸಿ ಮೇಲಷ್ಟು ಏಲಕ್ಕಿಯನ್ನೋ ಶುಂಠಿಯನ್ನೋ ಸೇರಿಸಿದರೆ ಟೀ ಸಿದ್ಧವಾದೀತು. ಆದರೆ ಕಾಫಿ ಮಾಡುವುದು ಅತ್ಯಂತ ಶ್ರದ್ಧೆ ಮತ್ತು ತೀವ್ರ ತಾಳ್ಮೆ ಇರದೇ ಇದ್ದರೆ ಆಗುವುದೇ ಇಲ್ಲ. ಜೊತೆಗೆ ಒಳ್ಳೆಯ ಕಾಫಿ ಪುಡಿ ಮತ್ತು ಹೊಸ ಗುಣ ಮಟ್ಟದ ಹಾಲು ಇಲ್ಲದೇ ಕಾಫಿ ಮಾಡಲಾಗುವುದಿಲ್ಲ. ನಿಮ್ಮಲ್ಲಿ ಬಹಳಷ್ಟು ಟೀ ಪ್ರಿಯರು ಕಾಕ ಹೋಟೆಲ್ಲಿನ ಟೀ ಇಷ್ಟ ಪಟ್ಟು ಕುಡಿಯುತ್ತೀರಿ. ಟೀ ಯಾವುದೇ ಗುಡಿಸಲು ಹೋಟೆಲ್ಲಿನಲ್ಲಿ ಸ್ಟಾರ್ ಹೋಟೆಲ್ಲಿನಲ್ಲಿ ಸಿಗುತ್ತೆ. ಆದರೆ ಒಳ್ಳೆಯ ಕಾಫಿ ಸಿಗುವುದು ಅದನ್ನು ಕುಡಿದು ಗೊತ್ತಿರುವರಿಗಷ್ಟೇ ಗೊತ್ತಿರುವ ಸತ್ಯ. ಜೊತೆಗೆ ಇತ್ತೀಚೆಗೆ ಟೀ ಪುಡಿಯನ್ನೇ ಉಪಯೋಗಿಸದೇ ಮಾಡುವ ವಿವಿಧ ರೀತಿಯ ಟೀಗಳು ಮಾರ್ಕಟ್ಟಲ್ಲಿ ಇರೋದು ಕೂಡ ಪಾಪ ಆ ಟೀ ಪುಡಿಗೆ ಮಾಡಿದ ಅವಮಾನವೇ!! ಗುಲಾಬಿ ಹೂವ ಪಕಳೆಯಲ್ಲಿ, ಹಾಲನ್ನೇ ಹಾಕದ ಲೆಮನ್ ಟೀನಲ್ಲಿ, ಅದೇನು ಖುಷಿ ಇದೆಯೋ ಆ ಟೀ ಪ್ರಿಯರೆ ಹೇಳಬೇಕು. ಕಾಫಿ ಯಾವತ್ತೂ ಉಪಮೆ ಮತ್ತು ಪ್ರತಿಮೆ ತುಂಬಿದ ಕಾವ್ಯದಂತೆ. ಅದನ್ನು ಬರೆಯುವುದೂ ಕಷ್ಟ, ಓದಿ ಅರ್ಥ ಮಾಡಿಕೊಳ್ಳೋದೂ ಕಷ್ಟ. ಆದರೆ ಒಮ್ಮೆ ರುಚಿ ಹತ್ತಿತು ಅಂದರೆ ಕಾವ್ಯ ಹೇಗೆ ಕಾಡುತ್ತದೋ ಹಾಗೆ ಕಾಫಿ ಕೂಡ. ರೋಬೋಸ್ಟಾ ಅರೇಬಿಕಾ ಇತ್ಯಾದಿ ಪ್ರಬೇಧ ಏನೇ ಇರಲಿ ಅದರ ಜೊತೆ ಬೆರಸುವ ಚಿಕೋರಿ ಇಲ್ಲದ ಕಾಫಿ ಕಾಫಿಯೇ ಅಲ್ಲ. ಈ ಚಿಕೋರಿ ಅನ್ನೋದು ಕಾವ್ಯ ಪ್ರಿಯರ ಚಕೋರ ಮತ್ತು ಚಂದ್ರಮರ ಹಾಗೆ, ಕಾಫಿ ಮತ್ತು ಚಿಕೋರಿಗಳು. ಒಂದಿಲ್ಲದ ಮತ್ತೊಂದು ಶೋಭಿಸಲಾರದು. ಅದೂ ಹದವರಿತ ದಾಂಪತ್ಯ ಇರಬೇಕು. ೮೦ ಕಾಫಿ ೨೦ ಚಕೋರಿ ಒಕೆ. ೭೦:೩೦ ಆದರೂ ಪರವಾಯಿಲ್ಲ. ಅದೇನಾದರೂ ೬೦:೪೦ ಅಥವ ೫೦:೫೦ ಆಯಿತೋ ಕಾಫಿ ಕಹಿ ಕಾರ್ಕೋಟಕ ವಿಷವಾಗಿ ಬದಲಾಗುತ್ತೆ. ಚಕೋರಿ ಬೇಡವೇ ಬೇಡ ಅಂದರೆ ಡಿಕಾಕ್ಷನ್ನು ಗಟ್ಟಿಯಾಗದೇ ಕಾಫಿ ಕಳೆಗಟ್ಟುವುದೇ ಇಲ್ಲ. ಕಾಫಿ ಕಾಸುವುದಲ್ಲ, ಅದು ಬೆರಸುವುದು ಮಾತ್ರ. ಹದವಾಗಿ ಕಾಯಿಸಿದ ಗಟ್ಟಿಹಾಲಿಗೆ ಗಟ್ಟಿ ಡಿಕಾಕ್ಷನ್ ಬೆರೆಸಿದರೆ ಅಮೃತವೇ ಸಿದ್ಧ ಆಗುತ್ತದೆ. ಟೀ ಕುದಿಸಿದ ಹಾಗೆ ಕಾಫಿ ಪುಡಿ ಹಾಲು ಸಕ್ಕರೆ ಕುದಿಸಿದರೆ ಯಾವತ್ತೂ ಕಾಫಿ ಆಗುವುದಿಲ್ಲ ಮತ್ತು ಹಾಗೆ ಮಾಡಿದ ಕಾಫಿ ಯಾರೋ ಒಬ್ಬ ಪಾಪಿಯ ಫಸಲು ಅಷ್ಟೆ.. ಕಾಫಿ ತಯಾರಿಕೆಯ ಹದ ಮತ್ತು ಸಮಯ ಬಹು ಮುಖ್ಯ. ಯಾವತ್ತೂ ಹಳೆಯ ಕಾಫಿಯನ್ನು ಬಿಸಿ ಮಾಡಿ ಟೀ ತರಹ ಕುಡಿಯಲು ಆಗುವುದಿಲ್ಲ. ಅದರದೇನಿದ್ದರೂ ಯಾವತ್ತೂ ಫ್ರೆಷ್ & ಪ್ಯಾಷನ್… ನೀರು ಕುದಿಸಿ ಕಾಫಿ ಪುಡಿ ತುಂಬಿದ್ದ ಫಿಲ್ಟರಿಗೆ ಹಾಕುವುದು ಹಳೆಯ ಕ್ರಮ. ಫಿಲ್ಟರಿನ ಮೇಲಂತಸ್ತಿನಿಂದ ಕೆಳಗಿನ ಸ್ಟೋರ್ ರೂಮಿಗೆ ಬಿದ್ದ ಡಿಕಾಕ್ಷನ್ನಿಗೆ ಬೇಕಾದಾಗ ಹಾಲು ಬಿಸಿ ಮಾಡಿ ಬೆರಸುವುದು ಕಾಫಿ ತಯಾರಿಕೆಯ ಆರಂಭದ ಹಂತ. ಯಾವಾಗ ನಮಗೆ ಸಲಕರಣೆ ಮತ್ತು ಸೌಕರ್ಯಗಳು ಬೇಕಾದವೋ ಆಗ ತಯಾರು ಮಾಡಿದ್ದು ಕಾಫಿ ಮೇಕರ್ ಎಂಬ ಎಲೆಕ್ಟ್ರಿಕ್ ಮಷೀನು. ‌ನೀರನ್ನು ಒಲೆಯ ಮೇಲಿಟ್ಟು ಕುದಿಸಿ ಅದನ್ನು ಇಕ್ಕಳ ಹಿಡಿದು ಫಿಲ್ಟರಿಗೆ ಸುರಿಯುವ ಶ್ರಮ ಮತ್ತು ಹೆದರಿಕೆ ಕಳೆದದ್ದೇ ಈ ಕಾಫಿ ಮೇಕರು‌. ಅರ್ಧ ಲೀಟರು ನೀರು ತುಂಬಿ ಪಕ್ಕದ ಜಾಡಿಗೆ ನಾಲ್ಕು ಚಮಚ ಕಾಫಿ ಪುಡಿ ಸುರಿದು ಸ್ವಿಚ್ ಒತ್ತಿದರೆ ಹತ್ತು ನಿಮಿಷದಲ್ಲಿ ಜಾಡಿಯ ತುಂಬ ಗಟ್ಟಿ ಡಿಕಾಕ್ಷನ್ ಸಿದ್ಧ!! ಪ್ರಿಯಾ, ಪ್ರೆಸ್ಟೀಜ್, ಜಾನ್ಸನ್ ಎಷ್ಟೊಂದು ಕಂಪನಿಗಳ ಅತ್ಯಾಕರ್ಷಕ ಕಾಫಿ ಮೇಕರು ಇದ್ದಾವೆ ಅಂದರೆ ಅದನ್ನು ಅಮೆಜಾನಲ್ಲಿ ಫ್ಲಿಪ್ ಕಾರ್ಟಲ್ಲಿ ನೋಡೇ ತಣಿಯಬೇಕು… ಇನ್ನು ಕಾಫಿಯ ಸ್ಪೆಷಲ್ ಸಂಚಿಕೆ ಬೇಕಾದವರು ಕಾಫಿ ತಯಾರಿಕೆಗೆ ಬಳಸುವುದು ಪರ್ಕ್ಯುಲೇಟರನ್ನು. ಅದನ್ನು ಉರಿವ ಬೆಂಕಿಯ ಮೇಲಾಗಲೀ ಅಥವ ಎಲೆಕ್ಟ್ರಿಕ್ ಮೂಲಕ ಕೂಡ ಆಗಿಸುವ ವಿಧಾನಗಳು ಈಗ ಚಾಲ್ತಿ ಇದೆ. ಕಾಫಿ ನಿಯಂತ್ರಣ ಮಾರುಕಟ್ಟೆ ಇದ್ದಾಗ “ಕಾಫಿ ಬೋರ್ಡ್” ಎಂಬ ಸಂಸ್ಥೆ ತಯಾರಿಸಿ ಕೊಟ್ಟಿದ್ದ ಪರ್ಕ್ಯುಲೇಟರ್ ಅದೆಷ್ಟು ಚನ್ನಾಗಿ ಡಿಕಾಕ್ಷನ್ ಇಳಿಸುತ್ತೆ ಎಂದರೆ ಅದನ್ನು ಇನ್ನೂ ನಾನು ಇವತ್ತಿಗೂ ಬಳಸುತ್ತಿದ್ದೇನೆ‌. ಕೆಫೆ ಕಾಫಿ ಡೇ ಕೂಡ ₹೫೦೦/ರ ಆಸುಪಾಸಲ್ಲಿ ಸಣ್ಣ ಪರ್ಕ್ಯುಲೇಟರ್ ಮಾರುತ್ತೆ. ಅದು ಕೂಡ ಚನ್ನಾಗೇ ಇದೆ. ಫಿಲ್ಟರು, ಮೇಕರು, ಪರ್ಕ್ಯುಲೇಟರು ಇಲ್ಲದೇ ಕುದಿಕುದಿವ ನೀರಿಗೆ ಕಾಫಿ ಪುಡಿ ಹಾಕಿ, ಮುಚ್ಚಿಟ್ಟು ಐದು ನಿಮಿಷ ಬಿಟ್ಟು ಕೋರಾ ಬಟ್ಟೆಯಲ್ಲಿ ಸೋಸಿ ತಯಾರಿಸಿದ ಡಿಕಾಕ್ಷನ್ ಕೂಡ ತಕ್ಷಣಕ್ಕೆ ಕುಡಿಯಲು ಅಡ್ಡಿ ಇಲ್ಲ. ಫಿಲ್ಟರು ಮತ್ತು ಮೇಕರುಗಳ ಡಿಕಾಕ್ಷನ್ ಅವತ್ತವತ್ತೇ ಖಾಲಿ ಮಾಡಬೇಕು‌‌. ತಂಗಳಾದರೆ ಕಾಫಿಯ ರುಚಿ ಮತ್ತು ಘಮ ಎರಡೂ ಕೆಡುತ್ತವೆ. ಆದರೆ ಪರ್ಕ್ಯುಲೇಟರಿನ ಡಿಕಾಕ್ಷನ್ ಯಾವತ್ತಿಗೂ ಸ್ಟಾರ್ ಹೋಟೆಲ್ಲಿನ ಅಂದ ಇದ್ದ ಹಾಗೆ. ಅದು ಕೆಲವರಿಂದಷ್ಟೇ ಆಗುವ ಕೆಲಸ. ಕೆಳಹಂತದಲ್ಲಿ ನೀರು ಕುದಿದು ಆವಿಯಷ್ಟೇ ಮೇಲಂತಸ್ತಿನ ಪುಡಿಯನ್ನು ಮುಟ್ಟಿ ತೊಟ್ಟು ತೊಟ್ಟೇ ಡಿಕಾಕ್ಷನ್ ಇಳಿಯುವಾಗ ಹುಟ್ಟುವ ಘಮ ಇದೆಯಲ್ಲ ಅದೇ ಸಾಕು ಆ ಹೊತ್ತಿನ ಹಸಿವು ಮತ್ತು ಆಯಾಸವನ್ನು ಪರಿಹರಿಸಲು. ಕಾಫಿಯ ರುಚಿ ಸ್ವಾದ ಮತ್ತು ಗುಣ ಗೊತ್ತುರುವವರು ಗೆಳೆಯ Katte Gururaj ಥರ ಗ್ರಹಿಸಬಲ್ಲರು ಮತ್ತು ಜೊತೆಗಿರುವವರನ್ನೂ ತಣಿಸಬಲ್ಲರು… **********************************

ಕಾಫೀನೊ -ಚಹಾನೊ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಪೇಟಿಮಾಂತ್ರಿಕ ಬೆಳಗಾವಿಯಲ್ಲಿರುವ ಪಂಡಿತ್ ರಾಮಭಾವು ಬಿಜಾಪುರೆ ಅವರನ್ನು ಕಾಣಬೇಕೆಂದು ನನಗೆ ಅನಿಸಿತು. ಮಿತ್ರರಾದ ಕುಸಗಲ್ಲರಿಗೆ ವಿಷಯ ತಿಳಿಸಲು `ನಾವು ಇದೇ ಊರಾಗಿದ್ರೂ ಅವರ ಮನೀಗ್ ಹೋಗಿಲ್ಲ, ಬರ್ರಿ ಸರ’ ಎಂದು ಕರೆದೊಯ್ಯಲು ಒಪ್ಪಿದರು. ಮುಸ್ಸಂಜೆ ಹೊತ್ತಿಗೆ ಶ್ರೀ ಕುಸುಗಲ್ಲ, ಅವರ ಮಗಳು ಕವಿತಾ, ಸ್ನೇಹಿತ ಡಾ. ಕೋಲ್ಕಾರ ಅವರೊಡನೆ ಬಿಜಾಪುರೆ ಅವರಲ್ಲಿಗೆ ಹೊರಟೆ. ಹಳೇ ಬೆಳಗಾವಿಯ ಬೀದಿಗಳು. ಪಶ್ಚಿಮಘಟ್ಟದ ಜಿರ್ರೋ ಮಳೆಧಾರೆ. ಕಚಿಪಿಚಿ ಕೆಸರು. ಹಸುರು ಕಕ್ಕುವ ಗಿಡಮರಪೊದೆ. ಮನೆಯ ಛಾವಣಿ ಕಾಂಪೌಂಡು ಗೋಡೆಗಳು ಹಸಿರು ಸ್ವೆಟರುಟ್ಟಂತೆ ಬೆಳೆದ ಹಾವಸೆ. ಮಬ್ಬುಕವಿದ ಬೂದಿಬಡುಕ ಆಗಸದಲ್ಲಿ ಶಿವಸೇನೆಯ ಮಾರುದ್ದದ ಭಗವಾಧ್ವಜಗಳ ಪಟಪಟ-ಇತ್ಯಾದಿ ಕಣ್ಣೊಳಗೆ ತುಂಬಿಕೊಳ್ಳುತ್ತಿರಲು ಮನೆ ಮುಟ್ಟಿದೆವು.  ಸಾಧಾರಣ ಮನೆ. ಬಾಗಿಲು ತೆರೆದವರು ಹಣ್ಣುಹಣ್ಣಾದ ಮುದುಕಿ. ಅದು ‘ಕಷಾ ಸಾಠಿ ಆಲ?’ (ಏನು ಬಂದಿರಿ?) ಎಂದು ಹಣೆಸುಕ್ಕು ಮಾಡಿಕೊಂಡು ಪ್ರಶ್ನೆ ಒಗೆಯಿತು. ‘ಬಿಜಾಪುರೆ ಮಾಸ್ತರನ್ನು ಕಾಣಬೇಕಿತ್ತು’ ಎನ್ನಲು ‘ಹಂಗೇನ್ರಿ. ಬರ್ರಿ, ಒಳಗ ಬರ್ರಿ. ಕುಂದರ್ರಿ. ಮ್ಯಾಲ ಹುಡ್ರುಗೆ ಅಭ್ಯಾಸ ಮಾಡಿಸಲಿಕ್ಕೆ ಹತ್ಯಾರ’ ಎಂದು ಬರಮಾಡಿಕೊಂಡರು. ‘ತಾವು ಬಿಜಾಪುರೆಯವರಿಗೆ..?’ ಎನ್ನಲು ‘ಕಿರೀ ಮಗಳ್ರೀ’ ಎಂದು ಜವಾಬು ಸಿಕ್ಕಿತು. ಮಗಳೇ ಇಷ್ಟು ಹಣ್ಣಾಗಿರಬೇಕಾದರೆ, ಅಪ್ಪ ಇನ್ನೆಷ್ಟು ಕಳಿತಿರಬೇಕು ಎಂದುಕೊಂಡು ಕುಳಿತೆವು. ಹತ್ತು ಮಿನಿಟು ಮುಗಿದಿರಬೇಕು. ‘ಪಾಠ ಮುಗಿದಿದೆ, ಅತಿಥಿಗಳು ಮೇಲೆ ಹೋಗಬಹುದು’ ಎಂದು ಸಂದೇಶ ಬಂತು. ಕರೆಂಟು ಹೋಗಿ ಕತ್ತಲಾಗುತ್ತಿತ್ತು. ಪಾಚಿಹಿಡಿದ ಪಾವಟಿಗೆಗಳನ್ನು ಹುಶಾರಾಗಿ ಹತ್ತಿ ಮೇಲೆ ಹೋದೆವು.ಸಣ್ಣದೊಂದು ಖೋಲಿಯಲ್ಲಿ ಗ್ಯಾಸ್‍ಬತ್ತಿಯ ಬೆಳಕಲ್ಲಿ ಬಿಜಾಪುರೆ ಲೋಡುತೆಕ್ಕೆಗೆ ಒರಗಿದ್ದರು. ಇಬ್ಬರು ಶಿಷ್ಯರು-ಅತಿಥಿ ಸತ್ಕಾರದಲ್ಲಿ ನೆರವಾಗಲೆಂದೊ ಏನೊ-ಅಲ್ಲೇ ಗೋಡೆಗೊರಗಿ ಕುತೂಹಲದ ದಿಟ್ಟಿತೊಟ್ಟು ನಿಂತಿದ್ದರು. ಅವರು ಗುರುಗಳಿಗೆ ಕೋಟು ತೊಡಿಸಲು ನೆರವಾಗಿರಬೇಕು. ತಿಳಿಯಾಗಸ ಬಣ್ಣದ ಕೋಟಿನ ಗುಂಡಿಗಳನ್ನು ಬಿಜಾಪುರೆ ಆಗಷ್ಟೆ ಹಾಕಿಕೊಳ್ಳುತ್ತಿದ್ದರು. ಆ ಕೋಟಿನಲ್ಲಿ ಲಕ್ಷಣವಾಗಿ ಕಾಣುತ್ತಿದ್ದರು. ಆರಡಿ ಎತ್ತರದ, ತಲೆಕೆಳಗಾಗಿ ಹಿಡಿದ ತಂಬೂರಿಯಂತಿದ್ದ ನೆಟ್ಟನೆ ಕಾಯದ ಬಿಜಾಪುರೆ, ವಯೋಸಹಜ ಸೊರಗಿದ್ದರು. ಗಾಂಧಿಕಿವಿ. ವಿಶಾಲ ಹಣೆ. ಕರೀಟೊಪ್ಪಿಗೆ. ಹೊಳೆವ ಕಣ್ಣು. ಪೇಟಿ ಮನೆಗಳ ಮೇಲೆ ಆಡಲೆಂದೇ ಮಾಡಿದಂತಿರುವ ನೀಳ್‍ಬೆರಳು. ಎದುರುಗಡೆ ಅರ್ಧ ಕತ್ತರಿಸಿಟ್ಟ ಕುಂಬಳಕಾಯಿಯ ಹೊಳಕೆಗಳಂತೆ ವಿಶ್ರಾಂತ ಸ್ಥಿತಿಯಲ್ಲಿರುವ ತಬಲಗಳು. ಬಗಲಿಗೆ ಹಾರ್ಮೊನಿಯಂ.  ಬಿಜಾಪುರೆ ಭಾರತದ ಬಹುತೇಕ ಹಿಂದೂಸ್ಥಾನಿ ಗಾಯಕರಿಗೆ ಸಾಥಿದಾರರಾಗಿ ಹಾರ್ಮೋನಿಯಂ ನುಡಿಸಿದವರು. ನಾವು ನಮಸ್ಕರಿಸಿ ಸುತ್ತ ಕೂತೆವು. ‘ಹ್ಞಾಂ ಹೇಳ್ರಿ. ಏನ್ ಬಂದದ್ದು? ಎಲ್ಲಿಂದ ಬಂದಿರಿ?’ ಎಂದರು ಬಿಜಾಪುರೆ. ‘ನಿಮ್ಮನ್ನು ಕಾಣಲೆಂದೇ ಬಂದೆವು’ ಎಂದೆವು. ‘ಛಲೋ ಆತು. ಥಂಡಿ ಅದ. ಚಾ ಕುಡಿಯೋಣಲ್ಲ?’ ಎಂದು ಶಿಷ್ಯನತ್ತ ನೋಡಲು ಆತ ಮರಾಠಿಯಲ್ಲಿ `ಈಗ ತಂದೆ’ ಎಂದು ಕೆಳಗೆ ದೌಡಿದನು. “ನಿಮ್ಮ ಆರೋಗ್ಯದ ಗುಟ್ಟು ಏನು?’ ಎಂದೆ. ಆತ್ಮವಿಶ್ವಾಸ ತುಂಬಿದ ಗಟ್ಟಿದನಿಯಲ್ಲಿ `‘ಸಂಗೀತ. ನಮ್ಮ ಸಂಗೀತ ಮಂದಿಯೆಲ್ಲ ದೀರ್ಘಾಯುಷ್ಯದೋರು. ಹಾಡೋದೇ ದೊಡ್ಡ ಪ್ರಾಣಾಯಾಮ ಆಗ್ತದ’’ ಎಂದು ನಕ್ಕರು. ಹಿನ್ನೆಲೆ ಕೆದಕಿದೆ: “ನಮ್ಮ ಮುತ್ಯಾ ಮೂಲಮಂದಿ ಬಿಜಾಪುರದವರಂತ. ನಮ್ಮಪ್ಪ ಸಾಲಿ ಮಾಸ್ತರ ಇದ್ದರು. ದೊಡ್ಡ ಸಾಹಿತಿ. ಸಂಗೊಳ್ಳಿ ರಾಯಣ್ಣ ನಾಟಕ ಬರದೋರು. ಅವರಿಗೆ ಅಥಣಿ ತಾಲೂಕ ಕಾಗವಾಡಕ್ಕ ವರ್ಗ ಆಯ್ತು. ಮುಂದ ಬೆಳಗಾಂವ್ಞಿ ಸೇರಿಕೊಂಡಿವಿ’ ಎಂದರು. ಸಂಗೀತದ ಹಿನ್ನೆಲೆ ಕೇಳಿದೆ: ‘ರಾಮಕೃಷ್ಣ ಬುವಾ ವಝೆ ನನ್ನ ಗುರುಗಳು. ನನಗ ವೋಕಲ್ ಕಲೀಲಿಕ್ಕ ಆಸೆಯಿತ್ತು. ಯಾನ್ ಮಾಡೋದರಿ,  ದನಿ ಒಡದಬಿಡ್ತು. ಆವಾಜ್ ಹೋಗಿಬಿಡ್ತು. ಅದಕ್ಕ ಈ ಪೇಟಿ ಕಡಿ ಬಂದಬಿಟ್ಟೆ. ಈಗಲೂ ಥೋಡಥೋಢ ಹಾಡ್ತೀನಿ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಕುಮಾರಗಂಧರ್ವ, ಮಾಣಿಕವರ್ಮ, ಅಮೀರಖಾನ್- ಹೀಂಗ ಬೇಕಾದಷ್ಟ ಮಂದಿಗೆ ಸಾಥ್ ಮಾಡೀನಿ” ಎಂದರು. `ಯಾರ ಜತೆ ಹೆಚ್ಚು ಸಂತೋಷ ಸಿಕ್ಕಿತು’ ಎನ್ನಲು `ಅಮೀರ್‍ಹುಸೇನ್ ಖಾನ್ ಹಾಡಿಕೆಗೆ. ಅವರು ಭಯಂಕರ ಛಲೋ ಹಾಡ್ತಿದ್ದರು’ ಎಂದರು. ಹೀಗೇ ಹೊರಗೆ ಹನಿಯುತ್ತಿದ್ದ ತುಂತುರು ಮಳೆಯಂತೆ ಮಾತುಕತೆ ನಡೆಯಿತು. ಅವರ ಮಾತೊ, ಫಾರಸಿ ಮರಾಠಿ ಕನ್ನಡ ಹದವಾಗಿ ಬೆರೆತದ್ದು. ನಮಗೆ ಅವರು ಪೇಟಿಯ ಮೇಲೆ ಬೆರಳಾಡಿಸಿ ನಾದ ಹೊರಡಿಸಿದರೆ, ಕಿವಿಯ ಮೇಲೆ ಹಾಕಿಕೊಂಡು ಹೋಗಬೇಕು ಎಂದಾಸೆ. ಸಂಗೀತವೇ ಒಂದು ಸಂಕರ ಕಲೆ. ಬೆರಕೆಯಿಲ್ಲದೆ ಅದು ಹುಟ್ಟುವುದೇ ಇಲ್ಲ. ಅದರಲ್ಲಿ ಈ ಹಾರ್ಮೊನಿಯಂ ತಾನು ಹುಟ್ಟಿಸುವ ಸಮಸ್ತ ಸ್ವರಗಳನ್ನು ಬೆರೆಸುವ ಮಾಯಾಮಂಜೂಷ. ಹಿಂದೊಮ್ಮೆ ಅದರ ಕವಚ ತೆಗೆದು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಿದ್ದೆ. ಕುಲುಮೆಯ ತಿದಿಯಂತೆ ಹಿಂಬದಿಯ ತೂತುಗಳ ಮೂಲಕ, ಪ್ರಾಣಾಯಾಮದ ಕುಂಭಕದಂತೆ ಗಾಳಿ ಒಳಗೆ ತುಂಬಿಕೊಳ್ಳುತ್ತದೆ. ಮುಂಭಾಗದಲ್ಲಿರುವ ಕರಿಬಿಳಿ ಮನೆಗಳನ್ನು ಬೆರಳಿಂದ ಒತ್ತಿದರೆ, ತುಂಬಿಕೊಂಡ ಉಸಿರು ಅಗತ್ಯಕ್ಕೆ ತಕ್ಕನಾಗಿ ರಂಧ್ರ್ರವಿರುವ ಕೊಂಡಿಗಳ ತುದಿಗಳಿಂದ ಹೊರಟು ಬಗೆಬಗೆಯ ಏರಿಳಿತಗಳಲ್ಲಿ ನಾದ ಹೊಮ್ಮಿಸುತ್ತದೆ. ಏಕಕಾಲಕ್ಕೆ ಹೊಮ್ಮುವ ಈ ಹಲವು ನಾದಗಳು ಒಂದಾಗುತ್ತ ಹೊಳೆಯಂತೆ ಹರಿಯುತ್ತವೆ. ನಾನು ಶೇಷಾದ್ರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿ ಅವರ ಹಾರ್ಮೋನಿಯಂ ಕೇಳಿರುವೆ. ಪುಟ್ಟರಾಜರು ಪೇಟಿಯನ್ನು ಶಹನಾಯಿ ದನಿ ಹೊರಡುವಂತೆ ನುಡಿಸಬಲ್ಲವರಾಗಿದ್ದರು. ಕಂಪನಿ ನಾಟಕಗಳು ಶುರುವಾಗುವಾಗ ಗವಾಯಿ ಮಾಸ್ತರನು ಪೇಟಿಯ ಮೇಲೆ ಬೆರಳಾಡಿಸಿದರೆ, ಇಡೀ ಥಿಯೇಟರಿನ ಶಾಬ್ದಿಕ ಕಸವನ್ನೆಲ್ಲ  ಕಸಬರಿಕೆ ತೆಗೆದುಕೊಂಡು ಗುಡಿಸಿದಂತಾಗಿ, ಮನಸ್ಸೂ ವಾತಾವರಣವೂ ಶುದ್ಧವಾಗಿ,  ರಸಿಕರಿಗೆ ನಾಟಕ ನೋಡಲು ಬೇಕಾದ ಸಹೃದಯ  ಮನಃಸ್ಥಿತಿ ಸಿದ್ಧವಾಗುತ್ತದೆ. ಪೇಟಿಯಿಲ್ಲದೆ ನಾಟಕವಿಲ್ಲ. ಹರಿಕತೆಯಿಲ್ಲ. ಸಿನಿಮಾ ಗೀತೆಗಳಿಲ್ಲ. ಭಜನೆಯಿಲ್ಲ. ಭಾರತೀಯ ಸಂಗೀತದಲ್ಲಿ ಹಾರ್ಮೋನಿಯಂ ಸರ್ವಾಂತರ್ಯಾಮಿ.ಹೀಗೆ ಬಹುರೂಪಿಯಾದ ಈ ವಾದ್ಯ ಸ್ಥಳೀಕವಲ್ಲ. ಯೂರೋಪಿನಿಂದ ಬಂದಿದ್ದು. ಅದು ವಲಸೆ ಬಂದು ಇಲ್ಲಿನ ಅಗತ್ಯಗಳಿಗೆ ರೂಪಾಂತರ ಪಡೆದ ಕತೆ ರೋಚಕ. ಅದರ ಜತೆ ಮುಕ್ಕಾಲು ಶತಮಾನ ಕಾಲ ಕಳೆದಿರುವ ಬಿಜಾಪುರೆ ಹೇಳಿದರು: ‘ನೋಡ್ರಿ. ಇದು ಪ್ಯಾರಿಸ್ಸಿಂದು. ನಾಟಕಕ್ಕ ಅಂತ ತಂದದ್ದು. ನಮ್ಮ ಹಿಂದೂಸ್ತಾನಿ ಸಂಗೀತಕ್ಕ ಇದರಷ್ಟು ಯೋಗ್ಯ ಟ್ಯೂನಿಂಗ್ ಕೊಡೋದು ಮತ್ತ ಬ್ಯಾರೆ ಯಾವುದು ಇಲ್ಲ’.  ಸಂಗೀತ ಕಛೇರಿಯಲ್ಲಿ ತಬಲ ಪೇಟಿ ತಂಬೂರಿ ಮುಂತಾದ ಪಕ್ಕವಾದ್ಯದ ಸಾಥಿದಾರರು ಎಷ್ಟೇ ಪ್ರತಿಭಾವಂತರಿದ್ದರೂ, ಅವರದು ಎರಡನೇ ಸ್ಥಾನ. ಕೇಂದ್ರಬಿಂದು ಹಾಡುಗಾರರು; ವಾದ್ಯಸಂಗೀತವಿದ್ದರೆ ವಾದ್ಯಕಾರರು. ಎರಡನೇ ಸ್ಥಾನದಲ್ಲಿರಬೇಕಾದ ಇಕ್ಕಟ್ಟೇ ಕೆಲವಾದರೂ ಪ್ರತಿಭಾವಂತರನ್ನು ಪ್ರಯೋಗಗಳಿಗೆ ಪ್ರೇರೇಪಿಸಿರಬೇಕು. ವಿಜಾಪುರೆ ಸ್ವತಂತ್ರವಾಗಿ ಪೇಟಿ ಬಾರಿಸುತ್ತ, ಅದರಲ್ಲಿ ಹಾಡುಗಳನ್ನು ನುಡಿಸುತ್ತಿದ್ದರಂತೆ. ಅದನ್ನು ಗಾಯಕಿ ಶೈಲಿ ಎನ್ನುವರು. “ಹಾರ್ಮೊನಿಯಂ ಹಾಡಿನಂಗ ಬಾರಿಸೋನು ನಾನ ಒಬ್ಬನೇ ಉಳದೀನಿ. ಹಾಡಿನ ಧ್ವ್ವನಿ ಬರೋಹಂಗ ಇದರ ಮ್ಯಾಲ ಸಂಶೋಧನ ಮಾಡೀನಿ’ ಎಂದು ಮಗುವಿನಂತೆ ಬಚ್ಚಬಾಯಲ್ಲಿ ನಕ್ಕರು. ನಮಗೆ ಅದೃಷ್ಟವಿರಲಿಲ್ಲ. ವಿಜಾಪುರೆ ಪೇಟಿ ನುಡಿಸಲು ಒಲ್ಲೆನೆಂದರು.  ಪಾಠ ಹೇಳಿ ದಣಿದಿದ್ದರೊ, ಅರೆಗತ್ತಲೆಯಲ್ಲಿ ಬೇಡವೆನಿಸಿತೊ ತಿಳಿಯದು. ‘ಈಗ ಬೇಡ. ತಬಲ ಸಾಥಿಯಿಲ್ಲ. ಇನ್ನೊಮ್ಮೆ ಬರ್ರಿ. ಬೇಕಾದಷ್ಟು ನುಡಸ್ತೀನಿ. ನನ್ನ ಶಿಷ್ಯರು ಹಾರ. ಅವರು ಹಾಡ್ತಾರ’ ಎಂದು ಶಿಷ್ಯರಿಗೆ ‘ಭಾಳಾ, ಯೂನಿವರ್ಸಿಟಿಯಿಂದ ಪ್ರೊಫೆಸರ್ ಮಂದಿ ಬಂದಾರ. ಥೋಡ ಹಾಡ್ರಿ’ ಎಂದರು. ಕೇಳಿದರೆ ತಮ್ಮ ಕರುಳನ್ನೂ ಬಗೆದುಕೊಡುವಷ್ಟು ಭಕ್ತಿ ತುಂಬಿದಂತಿದ್ದ ಆ ತರುಣ ತರುಣಿ, ಗುರುವಿನ ಅಪ್ಪಣೆ ನೆರವೇರಿಸುತ್ತಿರುವ ಆನಂದವನ್ನೂ ಅಪರಿಚಿತರ ಮುಂದೆ ಸಂಕೋಚವನ್ನೂ ಸೂಸುತ್ತ, ತಲಾ ಒಂದೊಂದು ಮರಾಠಿ ಅಭಂಗ ಹಾಡಿದರು. ಅದೇ ಹೊತ್ತಿಗೆ ಸಂಗೀತಪಾಠದಿಂದ ಮಗಳನ್ನು ಕರೆದೊಯ್ಯಲು ಬಂದಿದ್ದ ಒಬ್ಬ ತಾಯಿ, ತನ್ನ ಕರುಳಕುಡಿ ಹಾಡುವುದನ್ನು ಮರೆಯಲ್ಲಿ ನಿಂತು ನೋಡುತ್ತ ಆನಂದ ಪಡುತ್ತಿದ್ದುದು ಮಬ್ಬುಬೆಳಕಲ್ಲೂ ಫಳಫಳಿಸುತ್ತಿತ್ತು. ಬಿಜಾಪುರೆ ತಾವು ಕೊಟ್ಟ ಗುಟುಕನ್ನು ತುಪ್ಪುಳಿಲ್ಲದ ಮರಿಗಳು ನುಂಗುವುದನ್ನು ನೋಡುವ ತಾಯ್ ಹಕ್ಕಿಯಂತೆ, ಮಡಿಲಲ್ಲಿ ಮಲಗಿದ ಕೂಸು ತಾನು ಉಚ್ಚರಿಸಿದ ಶಬ್ದಗಳನ್ನು ತೊದಲುತೊದಲಾಗಿ ಅನುಕರಿಸುತ್ತಿರಲು ಗಮನಿಸುವ ಅಜ್ಜಿಯಂತೆ, ಶಿಷ್ಯರ ಮುಖಗಳನ್ನೇ ತದೇಕ ನೋಡುತ್ತಿದ್ದರು. ಚಹ ಬಂತು. ಸಂಗೀತ ಕೇಳಲಾಗದ ನಿರಾಸೆಯಲ್ಲಿ ಚಹ ಸೇವಿಸುತ್ತಿರುವಾಗ, ಬಿಜಾಪುರೆ “ಈಗ ಗುರ್ತಾಯ್ತಲ್ಲ, ಮತ್ತೊಮ್ಮೆ ಬರ್ರಿ. ಇಡೀ ದಿವಸ ಬೇಕಾರ ಕೂಡೋಣು. ಬೇಕಾದಂಗ ಬಾರಸ್ತೀನಿ. ಇನ್ನ ಕರ್ನಾಟಕದೊಳಗ ಗಂಗೂಬಾಯಿ ನಾನೂ ಏಣಗಿ ಬಾಳಪ್ಪ ಮೂವರಿದ್ದಿವಿ. ಗಂಗೂಬಾಯಿ ಹ್ವಾದಳು. ನಾವಿಬ್ಬರು ಉಳದೀವಿ’ ಎಂದರು. ಮುಂದೆ ಅವರು (1917-2010) ಕಳಿತ ಎಲೆ ಚಳಿಗಾಲದಲ್ಲಿ ಸಣ್ಣಸಪ್ಪಳ ಹೊರಡಿಸಿ ಹಗುರಾಗಿ ನೆಲಕ್ಕೆ ಇಳಿಯುವಂತೆ ಹೋಗಿಬಿಟ್ಟರು. ಅವರ ಹಾರ್ಮೊನಿಯಂ ಕೇಳುವ ಕನಸು ಹಾಗೆಯೇ ಉಳಿದುಬಿಟ್ಟಿತು. (ನಾನು ಹಿಂದೆ ಪಂಡಿತ್ ಬಿಜಾಪುರೆ ಅವರ ಮೇಲೆ ಬರೆದಿದ್ದ ಪುಟ್ಟಲೇಖನವಿದು. ಬೆಳಗಾವಿಯ ಕವಿ ಕವಿತಾ ಕುಸುಗಲ್ಲ ಇದನ್ನು ಓದಬಯಸಿದರು. ಇದು ಆ ಬರೆಹ.) ********************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಪುಸ್ತಕ ಸಂಗಾತಿ

ಕೂರಿಗಿ ತಾಳು

ಪುಸ್ತಕ ಪರಿಚಯ ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು.ಕಾವ್ಯವೆನ್ನುವುದು ಹುಡುಕಾಟವಲ್ಲ, ಅದೊಂದು ಮಿಡುಕಾಟ. ಕಾವ್ಯದಲ್ಲಿ ಮನರಂಜನೆ, ಶ್ರೀಮಂತಿಕೆ ಮತ್ತು ಉದಾತ್ತತೆ ಇರಬೇಕು. ಅದನ್ನು ಓದಿದವರು ಮೊದಲಿಗಿಂತ ಬೇರೆಯದ್ದೇ ವ್ಯಕ್ತಿತ್ವ ಹೊಂದಿದವರಾಗಿರಬೇಕು. ಅಂತಹ   ಕಾವ್ಯ ಶ್ರೇಷ್ಠ ಕಾವ್ಯ ಎನಿಸಿಕೊಳ್ಳುತ್ತದೆ .  ಕಾವ್ಯದಲ್ಲಿ ಭಾವದ ಅತೀ ಸಾಮಾನ್ಯತೆ ಇದ್ದರೆ ಅದು ಕಾವ್ಯದ ದೋಷ. ಇದರ ಸೀಮೋಲ್ಲಂಘನ ಮಾಡಬೇಕು. ಅಂತೆಯೇ ಕಾವ್ಯದಲ್ಲಿ ಅಲಂಕಾರ ಅತಿಯಾದರೆ ಅದೂ ಕೂಡ ದೋಷ. ಧ್ವನಿ ಅತಿಯಾದರೆ ಕಾವ್ಯದ ಪ್ರಭಾವ ಕುಗ್ಗುತ್ತದೆ. ಈ ವಾಸ್ತವತೆಯ ಅರಿವು ಪ್ರತಿಯೊಬ್ಬ ಕವಿಗೂ ಇರಲೇ ಬೇಕಾಗುತ್ತದೆ.                ಅತಿಯಾದ ಕಾವ್ಯಪ್ರೀತಿ ,ಭೂಮಿ ಪ್ರೀತಿ, ಮನುಷ್ಯ ಪ್ರೀತಿ ಹೊಂದಿರುವ ರಾಮಣ್ಣ  ಅಲ್ಮರ್ಸಿಕೇರಿಯವರು’ಕೂರಿಗೆ ತಾಳು’ ಅನ್ನುವ ವಿಶಿಷ್ಟವಾದ ಹಾಗು ಅಪ್ಪಟ ಗ್ರಾಮ್ಯ ಭಾಷೆಯ ಸೊಗಡು ಇರುವ ಕಾವ್ಯ ಸಂಕಲನ ಹೊರತಂದಿದ್ದಾರೆ. ಸಂಕಲನದ ಹೆಸರೇ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡಿ.ರಾಮಣ್ಣ ಅಲ್ಮರ್ಸಿಕೇರಿಯವರ ಈ ಸಂಕಲನ ಅವರ ಅನುಭವ, ಕೃಷಿ ಬದುಕಿನ ಒಡನಾಟ, ತನ್ನೂರಿನ ಅದಮ್ಯ ಪ್ರೇಮ,ಭವಬಂಧನದ ರೀತಿನೀತಿಗಳನ್ನು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.ಕೊಯ್ದು,ಕೊರೆದು,ಕೂಡಿಟ್ಟುಒಕ್ಕಲಿಮಾಡಿ,ಸುಗ್ಗಿ ಮಾಡುತಹಂತಿ ಹಾಡು ಹಾಡಿಬಂಡಿಗೆ ಬಲವಾದ ಹೋರಿ ಹೂಡಿನೂರು ಚೀಲದ ಹಗೇವು ತುಂಬಿಸಿಗರ್ವದಿಂದ ಬೀಗುತ್ತಿದ್ದರು ನನ್ನೂರಿನ ಜನರು”ಅಂತ ತನ್ನೂರಿನ ಜನರ ಬಗ್ಗೆ ಅಭಿಮಾನದಿಂದ ಕವಿ ಹೇಳಿದ್ದಾರೆ. ಜನ್ಮಕ್ಕೆ ಕಾರಣನಾದ ಅಪ್ಪನೆಂದರೆ ಎಲ್ಲಾ ಮಕ್ಕಳಿಗೂ ಅಪ್ಯಾಯಮಾನ. ತೋಳುಗಳಲ್ಲಿ ಅಪ್ಪಿ ಬದುಕಿನಲಿ ಭದ್ರತೆಯ ಭಾವ ಬಿಂಬಿಸಿ, ಕೈ ಹಿಡಿದು ತಪ್ಪು ಹೆಜ್ಜೆಯ ಜೊತೆ ಹೆಜ್ಜೆ ಬೆರೆಸಿ ಹೊರ ಜಗತ್ತಿಗೆ ತಮ್ಮನ್ನು ಪರಿಚಯಿಸುವ ಅಪ್ಪನೆಂದರೆ ಪುಳಕ, ಅಪ್ಪನೆಂದರೆ ಜಗದ ಸಿರಿಯನ್ನೆಲ್ಲ ಬೊಗಸೆ ಬೊಗಸೆಯಲಿ ಮೊಗೆದು ಕೊಟ್ಟವನು. ಅಪ್ಪನೆಂದರೆ ಬದುಕಿನಲಿ ಚೈತನ್ಯ ತುಂಬಿದವನು. ಅಪ್ಪನೆಂದರೆ ಬೆರಗುಗಣ್ಣಿನಲಿ ಪ್ರಪಂಚ ನೋಡುವಂತೆ ಮಾಡಿದವನು , ತಪ್ಪು ತಪ್ಪು ಹೆಜ್ಜೆ ಇರಿಸುವಾಗ ಕೈ ಹಿಡಿದು ನಡೆಸಿದವನು, ಹೆಗಲ ಮೇಲೆ ಕೂರಿಸಿಗೊಂಡು ಹಾದಿಯುದ್ದಕ್ಕೂ ನಡೆದವನು, ಬಿದ್ದು ಗಾಯ ಗೊಂಡಾಗ ಮೈ ದಡವಿ ರಮಿಸಿದವನು, ಹೊಳೆಯಲ್ಲಿ ಈಜು ಕಲಿಸಿದವನು, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ಅಮ್ಮನಂತೆ ಸೇವೆ ಮಾಡಿದವನು ಹೀಗೆ ಬದುಕಿನ ಒಂದೊಂದು ಮಜುಲುಗಳಲ್ಲೂ ತನ್ನ ಛಾಪು ಮೂಡಿಸಿ “ನಿನ್ನಂತ ಅಪ್ಪ ಇಲ್ಲಾ” ಅಂತ ಅನ್ನಿಸಿಕೊಂಡಂತಹ ಅಪ್ಪ ಕವಿಯ ಬದುಕಿನಲ್ಲು ಮಹತ್ವದ ಸ್ಥಾನ ಪಡೆದು ಗೆಳೆಯನಂತೆ, ತಾಯಿಯಂತೆ, ಗುರುವಂತೆ, ಮಾರ್ಗದರ್ಶಿಯಂತೆ, ಹಿತೈಷಿಯಂತೆ ಮಕ್ಕಳ ಬಾಳಿನಲ್ಲಿ ಬೆಳಕಾಗಿ ಬೆಳಕು ತಂದವರು.ಮಗನಿಗಾಗಿ ಏನೆಲ್ಲಾ ಕಷ್ಟಪಟ್ಟ ಅಪ್ಪ ಕೊನೆಗೆ“ಹೂಡುವ ಎತ್ತು ಮಾರಿ ಮನೆಯ ಹೊಸ್ತಿಲುದಾಟುವಾಗ ಎಡವಿ ಬಿದ್ದು ನಿಟ್ಟುಸಿರು ಬಿಟ್ಟುಕಣ್ಣು ಮುಚ್ಚಿ ನನ್ನ ಮಗ ಚೆನ್ನಾಗಿ ಓದಬೇಕೇಂದುಕನವರಿಸುತ್ತಾ ಜೀವಬಿಟ್ಟ ಅಪ್ಪನಹತ್ತಾರು ಪ್ರಶ್ನೆಗಳಿಗೆಮಗ ಮಾತ್ರ ಉತ್ತರ”ಹೃದಯ ವಿದ್ರಾವಕ ಈ ಸನ್ನಿವೇಶ,ಸಂದರ್ಭ ಓದುಗರ ಮನಸ್ಸನ್ನು ಕರಗಿಸಿ ಕಣ್ತುಂಬಿಸಿ ಬಿಡುತ್ತದೆ.ಛಲಗಾತಿ ಗೆಳತಿಯೆಂದರೆ ಕವಿಗೆ ಪ್ರೀತಿಯ ಕಡಲು,ಚಂದ್ರಮಾನ ಬೆಳಕು ಚೆಲ್ಲಿದವಳು,ಎದೆ ಸೆಟೆದು ನಿಂತ ಛಲಗಾತಿ ಗೆಳತಿ , ಹೀಗೆಲ್ಲ ಇರುವ ಗೆಳತಿಗೆ ಹೀಗೆ ಹೇಳುತ್ತಾರೆ.ಬೆಳೆದು ಬೆಟ್ಟವಾಗಬೇಕೆಂಬಮಹದಾಸೆಯ ಕನಸು ಹೊತ್ತುನಡೆವ ಅವಳು ನಿಗಿನಿಗಿಕೆಂಡದಂತಹ ಸೂರ್ಯನಾಗುವಾಸೆಕಡುಕಷ್ಟ ಪೊರೆದು ಸುಖದೆಡೆಗೆಹೆಜ್ಜೆ ಹಾಕುವ ಗಳಿಗೆನಾ ಸಾಕ್ಷಿ ಆಗಬೇಕೆಂಬ ಆಸೆ ಹೊತ್ತವನು ಎಂದು ಬಯಸುತ್ತಾರೆ.ಜಾತಿ ಭೂತದ ಬಗ್ಗೆಯು ಕವಿಗೆ ತೀವ್ರ ಅಸಮಾಧಾನವಿದೆ.ಮುಗ್ಧಮನಸ್ಸುಗಳನ್ನು ಒಡೆಯುವ ಮತಾಂಧರನ್ನು ಕಂಡಾಗ ಕೆರಳಿ ಕೆಂಡವಾಗುವ ಕವಿಹಗಲೆಲ್ಲ ನಮ್ಮನ್ನಗಲದಹಾಲು ಬಾನುಂಡು ಅಕ್ಕರೆಯ ಮಾತಾಡಿದಿನವಿಡಿ ದುಡಿಸಿಕೊಂಡುಕತ್ತಲ ರಾತ್ರಿಯಲ್ಲಿ ಜಾತಿ ಲಾಬಿ ಮಾಡುವರಾಕ್ಷಸರನ್ನು ಕಂಡು ನಡುಗಿ ಹೋಗಿದ್ದೇನೆಎಂದು ಭೀತರಾಗಿ ಸ್ವಾರ್ಥ ಅವಕಾಶವಾದಿಗಳ ಕಂಡು ದಂಗು ಬಡಿದು ನಯವಂಚಕರ ವಂಚನೆಗೆ ರೋಸಿಹೋಗಿದ್ದಾರೆ.ಬರೀ ನಿರಾಸೆ,ಸಂಕಟ ನೋವು ಮಾತ್ರ ತೋರಿದೆ ಆಶಾವಾದಿಯಾಗುತ್ತಾ ಹೋಗುತ್ತಾರೆ. ಈ ಪ್ರಪಂಚದ ಎಲ್ಲಾ ದ್ವೇಷ, ಅಸೂಯೆ, ಸ್ವಾರ್ಥ,ಮೋಹ , ಮತ್ಸರ ಮಾಯವಾಗಿ, ಕೋಮುಗಲಭೆ,ಜಾತಿಸಂಘರ್ಷಗಳ ದುರಂತ ದೂರಾಗಿ ಪ್ರೀತಿ ,ಮಮತೆ ಮಾನವೀಯತೆ ಹೊಳೆಯಾಗಿ ಹರಿದುಅಣ್ವಸ್ತ್ರಗಳು ಸುಟ್ಟು ಬೂದಿಯಾಗಿಬಂದೂಕಿನ ಬಾಯಿಯ ಸದ್ದಡಗಿಯಾರಿಗೂ ಬೇಕಿಲ್ಲದ ಯುದ್ಧಗಳು ಕೊನೆಯಾಗಿ ಅನ್ನ ನೀರು ಅರಿವೆ ಅಕ್ಷರಸೂರು ಸರ್ವರಿಗೂ ಸಿಗುವಂತಾಗಲಿಎಂದು ಕವಿ ಆಶಿಸುತ್ತಾರೆ.ಮಾನವೀಯತೆ, ಮಾನವೀಯ ಜೀವ ಸೆಲೆ ಬತ್ತಿಹೋದ ವರ್ತಮಾನದ ಮರುಭೂಮಿಯಲ್ಲಿ ಮನುಷ್ಯ ಸಂಬಂಧಗಳನ್ನು ಹುಡುಕಿ ಕಾವ್ಯದ ಮೂಲಕ ಪ್ರೀತಿಯನ್ನು ಹಂಚಿ ಮನಸುಗಳ ಬೆಸೆಯುವ ಬಯಕೆ ಕವಿ ರಾಮಣ್ಣನವರದು .ಪ್ರತಿಯೊಬ್ಬ ಕವಿಯು ಪ್ರೀತಿ, ವಿಶ್ವಾಸ ಹಾಗೂ ಮನುಷ್ಯ ಪ್ರೀತಿಯನ್ನು ಎದೆಯಲ್ಲಿ ಕಾಪಿಟ್ಟುಕೊಳ್ಳುವ ಮನೋಧರ್ಮ ಹೊಂದಬೇಕಾಗಿದೆ ಎನ್ನುವ ಇವರ ವಿಶ್ವಪ್ರೇಮದ ಭಾವ ಆದರ್ಶ ಹಾಗೂ ಅನುಕರಣೀಯವಾಗಿದೆ.ದೀರ್ಘ ಕವಿತೆ ಬರೆಯುವ ಶಕ್ತಿ ಹೊಂದಿರುವ ಕವಿ ರಾಮಣ್ಣ ರವರಿಗೆ ಕಂಡುಕೊಂಡ ಎಲ್ಲವನ್ನೂ ಕವಿತೆಯಾಗಿಸುವ ತವಕ, ಹಾಗಾಗಿ ಕೆಲವೊಮ್ಮೆ ವಾಚ್ಯವಾಗುವ ಲಕ್ಷಣಗಳು ಕಂಡರೂ ಅವರ ಅನುಭವ, ನಿರಂತರ ಅಧ್ಯಯನ,ಕಾವ್ಯ ಶ್ರದ್ಧೆ, ಆಸಕ್ತಿ ಇವೆಲ್ಲವೂ ಅವರನ್ನು ಕವಿಯ ಸಾಲಿನಲ್ಲಿ ನಿಲ್ಲಿಸಲಡ್ಡಿ ಮಾಡದು.ಇವರ ಈ ಉತ್ಸಾಹ, ಧ್ಯಾನಸ್ಥತೆ, ಅಧ್ಯಯನ ಶೀಲತೆ ಮತ್ತಷ್ಟು ಹೆಚ್ಚಾಗಿ ಶ್ರೇಷ್ಠ ಕಾವ್ಯದ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ದಕ್ಕಲಿ ಎಂದು ಆಶಿಸುತ್ತೇನೆ. ****** ಎನ್ ಶೈಲಜಾ ಹಾಸನ

ಕೂರಿಗಿ ತಾಳು Read Post »

ಕಾವ್ಯಯಾನ

ಅಪ್ಪನ ಆತ್ಮ

ಕವಿತೆ ಫಾಲ್ಗುಣ ಗೌಡ ಅಚವೆ. ಇಲ್ಲೇ ಎಲ್ಲೋಸುಳಿದಾಡಿದಂತೆ ಭಾಸವಾಗುವಅಪ್ಪನ ಅತ್ಮನನ್ನ ತೇವಗೊಂಡ ಕಣ್ಣುಗಳನ್ನುನೇವರಿಸುತ್ತದೆ. ಅಪ್ಪನ ಹೆಜ್ಜೆ ಗುರುತುಗಳಿರುವಗದ್ದೆ ಹಾಳಿಯ ಮೇಲೆನಡೆದಾಡಿದರೆಇನ್ನೂ ಆಪ್ತವಾಗಿಸುಪ್ತ ಭಾವನೆಗಳನ್ನುಆಹ್ಲಾದಕರಗೊಳಿಸುತ್ತದೆ. ನಾನು ನಡೆದಲ್ಲೆಲ್ಲನೆರಳಿನಂತೆ ಬರುವ ಅದುನನಗೆ ಸದಾ ಗೋಚರಿದಂತೆ ಭಾಸ! ನನ್ನನ್ನೇ ಕುರಿತು ನೇರಬೊಟ್ಟು ಮಾಡಿ ತೋರಿಸಿದಂತೆಏನನ್ನೋ ಹೇಳುತ್ತದೆ!ದ್ವೇಷದ ಬೆಂಕಿಯಲ್ಲಿಮಗನ ಮುಖವ್ಯಗ್ರವಾಗಿರುವುದ ಕಂಡುಬೇಸರಿಸಿಕೊಂಡಿದೆಆತ್ಮದ ಮ್ಲಾನ ವದನ!! ಅನ್ಯರಿಗೆ ಅಗೋಚರವೆನಿಪಅಪ್ಪನ ಅತ್ಮಕ್ಕೂ ನನಗೂಅದೆಂಥದೋಅಲೌಕಿಕ ನಂಟು! ಅವನ ನೆನಪಿನೊಂದಿಗಿನಮುಕ್ತ ತಾದಾತ್ಮ್ಯವೇನನ್ನ ಅದ್ಯಾತ್ಮ!!! ********

ಅಪ್ಪನ ಆತ್ಮ Read Post »

ಕಾವ್ಯಯಾನ

ನನ್ನಜ್ಜ

ಕವಿತೆ ಚೈತ್ರಾ ಶಿವಯೋಗಿಮಠ ಬಸ್ಟ್ಯಾಂಡ್ ನ್ಯಾಗ ನಿಂತುಬಾರಕೋಲು ಬೇಕಾ ಅಂದಾಗಮಂದಿ ಬೇಡಿ ಕೊಡಿಸ್ದಾವ ನನ್ನಜ್ಜಇದ ಕಥಿ ನೂರ ಸರತಿ ಹೇಳಿ“ಹಠಮಾರಿ ಚೈತ್ರಾ” ಅಂದಾವ ನನ್ನಜ್ಜ ಹೆಗಲ ಮ್ಯಾಲೆ ಹೊತ್ತು ಓಣಿತುಂಬಾ ತಿರಗ್ಯಾಡಿದಾವ ನನ್ನಜ್ಜಬಾಯಿ ಒಡದರ, ತುಂಬಾ ಬಿಳಿ ಬೀಜಕೆಂಪಗ ಕಾಣೂ ಪ್ಯಾರಲ ಹಣ್ಣ ತರಾವ ನನ್ನಜ್ಜನಿಂಬುಹುಳಿ, ಪೇಪರಮಟ್ಟಿ, ಚಾಕಲೇಟ್ಗಾಂಧಿ ಮುತ್ಯಾನ ಫೋಟೋ ಮುಂದ ನಿಂದರೀಸಿಕಣ್ಮುಚ್ಚಿಸಿ, ಮುತ್ಯಾ ಕೊಟ್ಟ ನೋಡನ್ನವ ನನ್ನಜ್ಜ ಮುದುಕಿ, ನರಿ-ಒಂಟಿ ಅಂತ ನೂರ ಕಥಿಅವನ ಅಂಗಿ ಕಿಶೆದಾಗ. ಸ್ವತಂತ್ರ ಸಿಕ್ಕಾಗನಡುರಾತ್ರಿ ಮಾಸ್ತಾರ ಎಬ್ಬಿಸಿದ್ದನ್ನ ಕಥಿಮಾಡಿ ಹೇಳಿದಾಗ ಹೀರೋ ಗತೆ ಕಂಡಾವ ನನ್ನಜ್ಜಓಡಿಹೋಗಾವ ಇದ್ದೆ ಅಂತರಪಟ ಸರದು ಬೆಳ್ಳನ್ನಚೆಲುವಿ ಕಂಡ್ಲು, ಬದುಕಿದ್ನಪಾ ಅಂತಹೇಳಿ ಅಜ್ಜಿನತಾ ಲಗ್ನಾದ ಕಥಿ ಹೇಳಿ ನಗಸಾವ ನನ್ನಜ್ಜ. ತಾಯಿ ಸೇವಾ ಮಾಡಿ ತುಂಬು ಜೀವನ ಕಂಡುತನಗಿಂತ ಕಿರಿಯರ ಕಣ್ಮುಂದ ಕಳ್ಕೊಂಡುನೂವಿನ ನಂಜೆಲ್ಲಾ ಎದಿಯಾಗಾ ಮಂಜ ಮಾಡಿಗಟ್ಟಿ ಮನಸು, ಗಟ್ಟಿ ಶರೀರದಾವ ನನ್ನಜ್ಜಸೈಕಲ್ ಏರಿ ದೂರದೂರಿಗೆ ಹೋಗಿ ಸಾಲಿಕಲಿಸಿ ಬಂದು, ರಾತ್ರಿ ಹೊಲಕ್ಕ ನೀರ ಕಟ್ತಿದ್ದ ರೈತ ಮಾಸ್ತಾರನನ್ನಜ್ಜ ಸ್ವಚ್ಛ ಆಕಾಶದಾಗ ಹತ್ತಿಯಂತ ಮಾಡ ತೇಲಿಹಚ್ಚ ಹಸುರು ಶ್ರಾವಣ ಬಂತಂತ ಹಿಗ್ಗುಮುಂದಊರಿಗ ಹೊಂಟ್ರ “ಬಾರವಾ ಚೈತ್ರಾ’ ಅಂತಬಚ್ಚ ಬಾಯಿ ತಗದ ಬೆಚ್ಚಗ ಕರಿಯಾಕ ಇನ್ನಿಲ್ಲ ನನ್ನಜ್ಜ.ಮೊಮ್ಮಕ್ಕಳ ಸಾಮ್ರಾಜ್ಯದಾಗಿನ ಮಹರಾಜಾ ನೀ, “ಪ್ರಭುಗಳೆ, ಹೀಗೆ ಬನ್ನಿ” ಅಂತ ಆಡಿಶ್ಯಾಡಿದ್ರನಗಾವ ದೊರೆ ಆಳ್ವಿಕಿ ಮುಗಿಸಿ ಹೊಂಟ ನನ್ನಜ್ಜ! ***************************

ನನ್ನಜ್ಜ Read Post »

You cannot copy content of this page

Scroll to Top