ನಾನು ದೀಪ ಹಚ್ಚಿಕೊಂಡರೂ ಬೆಳಕು ಎಲ್ಲರಿಗೂ ಕಾಣಿಸಬೇಕು

`ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ- ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ…’

ಗಣೇಶ್ ಹೆಗಡೆ ಹೊಸ್ಮನೆ  

ಗಣೇಶ್ ಹೆಗಡೆ ಹೊಸ್ಮನೆ  ಶಿರಸಿ ತಾಲೂಕು ಜಾನ್ಮನೆಯವರು. ವೃತ್ತಿಯಿಂದ ಕೃಷಿಕ. ಯಾರೂ ನೆಡದ ಮರ ಇವರ ಮೊದಲ ಕವಿತಾ ಸಂಕಲನ. ಇದಕ್ಕೆ ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಉಗ್ರಾಣ ಪ್ರಶಸ್ತಿ ಲಭಿಸಿವೆ. ನಂತರ ಹರಿದು ಕೂಡುವ ಕಡಲು (ಗಜಲ್) ಸಂಕಲನವನ್ನು ಲಡಾಯಿ ಪ್ರಕಾಶನ ಪ್ರಕಟಿಸಿತು. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. ಕತೆಗಳನ್ನು ಸಹ ಬರೆದು ಪ್ರಕಟಿಸಿದ್ದಾರೆ. ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಕಾರ್ಯಕ್ರಮಗಳಿಗೆ ಬಂದು ಕವಿತೆ ವಾಚಿಸಿದ್ದಾರೆ.  ಕೃಷಿ ಬದುಕಿನಲ್ಲಿ ಕಂಡ ಪ್ರತಿಮೆಗಳನ್ನು ಅದ್ಭುತವಾಗಿ ಗಜಲ್ ಪ್ರಕಾರದಲ್ಲಿ ಗಣೇಶ್ ಬಳಿಸಿದರು. ಅಷ್ಟರ ಮಟ್ಟಿಗೆ ಗಜಲ್‌ನಲ್ಲಿ ಹೊಸ ಪ್ರಯೋಗ ಮಾಡಿದರು. ತಣ್ಣನೆಯ ವ್ಯಕ್ತಿತ್ವದ ಗಣೇಶ್ ಅಪಾರವಾದ ವೈಚಾರಿಕತೆಯನ್ನು ಬಳಸಿಕೊಂಡವರು. ವೇದಿಕೆಗಾಗಿ ಎಂದೂ ಹಂಬಲಿಸದವರು. ಪ್ರಶಸ್ತಿಗಳ ಹಿಂದೆ ಬೀಳದವರು. ಕವನ ವಾಚನಕ್ಕೆ ಕರೆದರೆ, ಸದ್ದಿಲ್ಲದೇ ಬಂದು ಕವಿತೆ ವಾಚಿಸಿ ಹೋಗಿಬಿಡುವ, ಮಾತಿಗೆ ಎಳೆದರೆ ಮಾತ್ರ ಮಾತನಾಡುವ ಅಪರೂಪದ ವ್ಯಕ್ತಿ. ಬೌದ್ಧಿಕತೆ ಮತ್ತು ಪ್ರಾಮಾಣಿಕತೆಗಳ ಮಿಶ್ರಣದಂತಿರುವ ಕೃಷಿಕ ಗಣೇಶ್ ಅಪ್ಪಟ ಕವಿ ಮನಸ್ಸಿನವರು. ಹಳ್ಳಿಯಲ್ಲಿದ್ದು ಕೊಂಡೇ ಅಪಾರ ಜೀವನ ಪ್ರೀತಿಯನ್ನು ಕಟ್ಟಿಕೊಂಡವರು.
……………………………………………………………………………………………………………………………….


* ಕತೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ?


ಉತ್ತರ : ಯಾಕೆ ಬರೆಯುತ್ತೇನೆ ಎಂದು ಹೇಳುವುದು ಕಷ್ಟ. ಅದು ಆಯಾ ಕಾಲಕ್ಕೆ ಸಂದರ್ಭಕ್ಕೆ ಬದಲಾಗುತ್ತಲೇ ಇರುವ ಸಂಗತಿ.ಮೊದಮೊದಲು ನನ್ನ ಪಾಡಿಗೆ ನಾನು ಬರೆದುಕೊಳ್ಳುತ್ತಿದ್ದೆ. ಕ್ರಮೇಣ ಬರವಣಿಗೆಯೊಂದಿಗೆ ಒಂದು ಸಾಮಾಜಿಕ ಸಂಬAಧ- ಜವಾಬ್ದಾರಿ ಇದೆ ಅನಿಸಿತು.ನನಗೆ ಈಗೀಗ ಅನಿಸುವುದು, ನನಗಾಗಿಯೇ ನಾನು ದೀಪ ಹಚ್ಚಿಕೊಂಡAತಿದ್ದರೂ ಬೆಳಕು ಎಲ್ಲರಿಗೂ ಕಾಣಿಸಬೇಕು.



* ಕತೆ  ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ?


ಉತ್ತರ : ಕತೆಯಾಗಲೀ ಕಾವ್ಯವಾಗಲಿ ಹುಟ್ಟಿಕೊಳ್ಳುವ ಇಂಥದೇ ಕ್ಷಣ ಎಂಬುದಿಲ್ಲ. ಯಾವುದೇ ಕೆಲಸಗಳಲ್ಲಿ ತೊಡಗಿದರೂ ಆ ಕೆಲಸ ಬಿಟ್ಟು ಇನ್ನೊಂದರ ಬಗ್ಗೆ ಸಹಾ ಆಲೋಚಿಸುತ್ತಿರುವುದು ನನ್ನ ಸ್ವಭಾವ.ಹಾಗಾಗಿ ನನ್ನ ಬಹುತೇಕ ಕವಿತೆಗಳು ನನ್ನ ಕೆಲಸ ಮತ್ತು ಆಲೋಚನೆಗಳ ನಡುವಿನ ಸಂಬAಧದಿAದ ಹುಟ್ಟಿವೆ.



* ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ?


ಉತ್ತರ : ಇತ್ತೀಚೆಗೆ ನಾನು ಕತೆ ಬರೆದಿಲ್ಲ.ಹಿಂದೆ ಬರೆದ ಕಥೆಗಳಲ್ಲಿ ನನ್ನ ಸುತ್ತಮುತ್ತ ನಿತ್ಯ ಜರುಗಿದ- ಜರುಗುತ್ತಿರುವ ಘಟನೆಗಳ ಪ್ರಭಾವವಿತ್ತು. ಒಂದೆರಡು ಕಾಲ್ಪನಿಕ, ಪತ್ತೇದಾರಿ, ಮತ್ತು ಪುರಾಣ ಕಥೆಗಳನ್ನಾಧರಿಸಿ ಕೆಲವು ಸಣ್ಣ ಸಣ್ಣ ಕಥೆಗಳನ್ನು  ಸಹಾ ಬರೆದಿದ್ದೇನೆ.



* ಕತೆ ಕವಿತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ?


ಉತ್ತರ : ಕವಿತೆಗಳ ಮಟ್ಟಿಗೆ, ಇಣುಕಿದೆ ಎನ್ನುವುದಕ್ಕಿಂತ ಬಾಲ್ಯದ ಪ್ರಭಾವವಿದೆ ಎನ್ನಬಹುದು.ಕಥೆಗಳಲ್ಲಿ ಬಾಲ್ಯದ ನೆನಪು ಕನಸು ಆಸಕ್ತಿ ಕುತೂಹಲಗಳು ಸೇರಿಕೊಂಡಿವೆ. ‘ಹರೆಯ’ದ ಎಂಬ ಪ್ರಭಾವದಿಂದ ನಾನು ಬರೆದಿಲ್ಲ ಎನಿಸುತ್ತದೆ.



* ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?


ಉತ್ತರ : ರಾಜಕೀಯವನ್ನು ಬೇರೆ ಬೇರೆ ಉದ್ದೇಶ- ಹಾದಿಯ ಮೂಲಕ ಬಳಸಿಕೊಳ್ಳಲಾಗುತ್ತಿದೆ.ನನ್ನ ಬಾಲ್ಯದ ದಿನಗಳಿಂದ ಕಂಡAತೆ ಹೇಳುವುದಾದರೆ ಹಿಂದೆ ರಾಜಕೀಯ ಪಕ್ಷಗಳು ಅನಕ್ಷರಸ್ಥರನ್ನು ,ಬಡವರನ್ನು ನಂಬಿಸುವ ಭಾಷಣ ಮತ್ತು ಸಿದ್ಧಾಂತ ಮುಂದಿಡುತ್ತಿದ್ದರು. ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ, ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ. ಇದನ್ನು `ರಾಜಕೀಯ ತಂತ್ರಗಾರಿಕೆ’,  `ತಂತ್ರಗಾರಿಕೆಯ ಶ್ರೇಷ್ಠವಾದದ್ದು’ ಎಂದು ಜನರೂ ಸಹಾ ನಂಬುತ್ತಿದ್ದಾರೆ.ನಮ್ಮ ಸ್ವಾತಂತ್ರ‍್ಯ-ಸAವಿಧಾನ ನೀಡಿದ ಅನುಕೂಲತೆ ಇದ್ದಾಗ್ಯೂ,  ಸಮರ್ಥ ರಾಜಕೀಯ ಸಿದ್ಧಾಂತ ಮುನ್ನೆಲೆಗೆ ಬರದೇ ಹೋಗುತ್ತಿರುವುದು ವಿಷಾದನೀಯ.



* ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?


ಉತ್ತರ : ದೇವರು ಇರುವ ಬಗ್ಗೆ ನನಗೆ ಯಾವುದೇ ಖಾತ್ರಿ ಸಿಕ್ಕಿಲ್ಲ.ಬಾಲ್ಯದಿಂದಲೂ ನನ್ನ ಕೌಟುಂಬಿಕ ಮತ್ತು ಸಾಂಸ್ಕೃತಿಕ ಜವಾಬ್ದಾರಿಯಾಗಿ ನಮ್ಮ ಮನೆ ಊರಿಗೆ ಸಂಬAಧಪಟ್ಟ ದೇವರು-ದಿಂಡರುಗಳ ಪೂಜೆಯನ್ನು ನಾನು ಮಾಡುತ್ತೇನೆ, ಆ ವಿಚಾರ ಬೇರೆ.ಹಾಗೆ ನೋಡಿದರೆ ದೈವ-ದೇವರು ಎಂಬುದು ಅವರವರ ವೈಯಕ್ತಿಕ ವಿಚಾರ.ನಮಗೆ ಸಮಾಧಾನವಾಗುವುದಾದರೆ ನಾವು ಒಂದು ಇರುವೆಯನ್ನೂ ಪೂಜಿಸಿಕೊಳ್ಳಬಹುದು, ಪ್ರಾರ್ಥಿಸಿ ಕೊಳ್ಳಬಹುದು. ನಮ್ಮಲ್ಲಿ ಹುಟ್ಟುವ ಎಲ್ಲ ತೊಡಕುಗಳು ದೇವರಿಂದಲ್ಲ, ಧರ್ಮದಿಂದ.ನನ್ನ ದೃಷ್ಟಿಯಲ್ಲಿ ಎಲ್ಲ ಧರ್ಮಗಳು ಕೂಡ ಆಯಾ ಕಾಲದಲ್ಲಿ ಆಯಾ ಪ್ರದೇಶದ ಜನ ಸಾಮೂಹಿಕವಾಗಿ ಬದುಕುವುದಕ್ಕೆ-ರಕ್ಷಿಸಿಕೊಳ್ಳುವುದಕ್ಕೆ ಕಂಡುಕೊAಡ ಒಂದೊAದು ಹಾದಿಗಳು. ಆ ಮಟ್ಟಿಗೆ ಅದು ಆಯಾಕಾಲದ ಸಂವಿಧಾನ.ಇವತ್ತು, ನಮ್ಮ ಕಾಲಕ್ಕೆ ಯೋಗ್ಯವೆನಿಸುವಂತಹ ಒಂದು ದೇಶವಾಗಿ ಬದುಕುವುದಕ್ಕೆ ಸಾಧ್ಯವಾಗುವಂತಹ ಒಂದು ಸಂವಿಧಾನವನ್ನು ನಮಗೆ ನೀಡಲಾಗಿದೆ. ಅದು ನಮ್ಮ ಧರ್ಮವಾಗಬೇಕು.

* ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?


ಉತ್ತರ : ಹೇಳುವುದು ಕಷ್ಟ. ಮೇಲೆ ನೀವು ಕೇಳಿದ `ಪ್ರಸ್ತುತ ರಾಜಕೀಯ’,  `ಧರ್ಮ ದೇವರು’ ಪ್ರಶ್ನೆಗಳೊಂದಿಗೆ ಇದೂ ಬೆಸೆದುಕೊಂಡಿದೆ.ನೂಲಿನ ಮೇಲೆ ನಡೆದ ಹಾಗೆ, ತುಸು ಆ ಕಡೆ ಜಾರಿದರೆ ರಾಜಕೀಯದೆಡೆಗೂ, ಈ ಕಡೆ ಜಾರಿದರೆ ಧಾರ್ಮಿಕತೆಯೆಡೆಗೂ ಗುರುತಿಸಲ್ಪಡುವ ಅಪಾಯವಿದೆ.



* ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?


ಉತ್ತರ : ಸಾಹಿತ್ಯವಲಯದ ರಾಜಕಾರಣ ಉಸಾಬರಿ ಯಿಂದ ನಾನು ದೂರ. ನನ್ನ ಪಾಡಿಗೆ ನಾನು ಬರೆದುಕೊಂಡಿರುವುದೇ ನನಗಿಷ್ಟ.ನೋಡುತ್ತಿದ್ದರೂ ಕೇಳುತ್ತಿದ್ದರೂ ತಿಳಿಯುತ್ತಿದ್ದರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಾರೆ.



* ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?


ಉತ್ತರ : ದೇಶ ಎಂದರೆ ಏನು, ಹೇಗಿರಬೇಕು? ಎಂದು ಬಾಲ್ಯದಿಂದ ತಿಳಿದುಕೊಂಡು ಬಂದಿದ್ದೆವೋ ಈಗ ಹಾಗಿಲ್ಲ, ಹಾಗಾಗುತ್ತಿಲ್ಲ ಎನಿಸುತ್ತಿದೆ.ದೇಶದ ಅಭಿವೃದ್ಧಿ-ಆರ್ಥಿಕತೆಯ ಹಿನ್ನೆಲೆಯಿಂದ ಅಷ್ಟೇ ಅಲ್ಲ, ದೇಶದೊಳಗಿನ ಜನರ ಮತ್ತು ಸಮುದಾಯಗಳ ನಡುವಿನ ನಂಬಿಕೆ ವಿಶ್ವಾಸಗಳು ಸಡಿಲಗೊಳ್ಳುತ್ತಿದೆಯೇನೋ  ಅನಿಸುತ್ತಿದೆ.




* ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?


ಉತ್ತರ : ನನಗೆ ಇನ್ನೂ ತುಂಬ ಬರೆಯುವುದಿದೆ ಅನಿಸುತ್ತದೆ. ಕತೆ ಕವಿತೆಗಳೊಂದಿಗೆ, ಕೆಲ ಹಾಸ್ಯ ಬರಹಗಳನ್ನು  ಬರೆದೆ. ಎರಡು ಮೂರು ನಾಟಕಗಳನ್ನು ಬರೆದೆ.ಕವಿತೆಯಂತೆ ಮಕ್ಕಳ ಪದ್ಯಗಳನ್ನು ಬರೆಯುವುದು ಸಹ ನನಗೆ ಇಷ್ಟ, ಒಂದು ಪುಸ್ತಕ ವಾಗುವಷ್ಟು ಶಿಶುಗವಿತೆಗಳಿವೆ.ಈ ತನಕ ನಾನು ಬರೆದಿರುವುದು ಏನೂ ಅಲ್ಲ,ಇದಕ್ಕಿಂತಲೂ ಉತ್ತಮವಾಗಿ ಬರೆಯುವ ಸಾಧ್ಯತೆ ಇದೆ ಎಂದು ಆಗಾಗ ಅಂದುಕೊಳ್ಳುತ್ತೇನೆ. ಹಾಗೆ ಬರೆಯುವ ಅವಕಾಶ ಮತ್ತು ಧ್ಯಾನ ನನ್ನ ಬದುಕಿನಲ್ಲಿ ಉಳಿಯುತ್ತದೆ ಎಂದುಕೊAಡಿದ್ದೇನೆ.



* ಕನ್ನಡ  ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ?


ಉತ್ತರ : ಕೇವಲ ೬ನೇ ತರಗತಿ ಓದಿರುವ ನಾನು ಆಂಗ್ಲ ಸಾಹಿತ್ಯವನ್ನು ಓದಲಾರೆ. ಹಲವು ಅನುವಾದಿತ ಸಾಹಿತ್ಯವನ್ನು ಓದಿದ್ದೇನೆ.ನಿರಂಜನರು ಸಂಪಾದಿಸಿದ ‘ವಿಶ್ವಕಥಾಕೋಶ’ದ ಪುಸ್ತಕಗಳು ನನ್ನನ್ನು ತುಂಬ ಕಾಡಿವೆ.ಇಷ್ಟದ ಸಾಹಿತಿಗಳು ಎಂದು ಒಬ್ಬ ಸಾಹಿತಿಯನ್ನು ಗುರುತಿಸಲಾರೆ. ಬೇಂದ್ರೆ, ಕುವೆಂಪು, ಕಾರಂತ, ಕಂಬಾರ, ಅಡಿಗರಿಂದ ಹಿಡಿದು ನನ್ನ ತಲೆಮಾರಿನವರೆಗಿನ ಅನೇಕರ ಕಾವ್ಯ ಕಥೆ ಪ್ರಬಂಧ ವಿಮರ್ಶೆ ಮೊದಲಾದವುಗಳನ್ನು ಇಷ್ಟಪಟ್ಟಿದ್ದೇನೆ.



* ಈಚೆಗೆ ಓದಿದ ಕೃತಿಗಳಾವವು?


ಉತ್ತರ : ಸಮುದಾಯದ ಗಾಂಧಿ, ಬುದ್ಧಚರಿತೆ, ವಿರಕ್ತರ ಬಟ್ಟೆಗಳು, ಜಾಂಬ್ಳಿ ಟುವಾಲು, ನಾನು ಕಸ್ತೂರ್…. ಇತ್ಯಾದಿ.



* ನಿಮಗೆ ಇಷ್ಟವಾದ ಕೆಲಸ ಯಾವುದು?


ಉತ್ತರ : ನಾನು ಒಪ್ಪಿಕೊಂಡ- ಅಪ್ಪಿಕೊಂಡ ನಿತ್ಯದ ನನ್ನ ಕೃಷಿ ಕೆಲಸ, ಓದು ಬರವಣಿಗೆ, ಅಪರೂಪದ ತಿರುಗಾಟ ಎಲ್ಲವೂ ನನಗೆ ಇಷ್ಟವೇ.



* ನಿಮಗೆ ಇಷ್ಟವಾದ ಸ್ಥಳ ಯಾವುದು ?


ಉತ್ತರ : ನನ್ನ ಮನೆ, ನೆಲ, ಊರು, ಬೆಟ್ಟ-ಗುಡ್ಡ, ಹೊಳೆ… ಹಾಗೆ ಹೇಳುವುದಾದರೆ ಇಡೀ ಭೂಮಿಯ ವೈವಿಧ್ಯತೆ ಮತ್ತು ಸಮೃದ್ಧತೆಯ ಬಗ್ಗೆ ನನಗೆ ಅತಿ ಪ್ರೀತಿ-ಕುತೂಹಲವಿದೆ. ಎಲ್ಲವನ್ನು ಕಾಣಬೇಕೆಂಬ ಹಂಬಲವಿದೆ.



* ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು?


ಉತ್ತರ :ಇತ್ತೀಚಿನ ವರ್ಷಗಳಲ್ಲಿ ನಾನು ತುಂಬ ಇಷ್ಟಪಟ್ಟು  ಮತ್ತೆ ಮತ್ತೆ ನೋಡಿದ ಸಿನಿಮಾಗಳೆಂದರೆ ಕನ್ನಡದ ‘ಮೌನಿ’ ಮತ್ತು ‘ಕನಸೆಂಬೋ ಕುದುರೆಯನೇರಿ’ ‘ಬೇಲಿ ಮತ್ತು ಹೊಲ’. ಹಿಂದಿ ಭಾಷೆಯ ‘ಪಿಕೆ’.



* ನೀವು ಮರೆಯಲಾರದ ಘಟನೆ ಯಾವುದು?


ಉತ್ತರ : ಮರೆಯಲಾಗದ ಘಟನೆ ಎಂದು ಯಾವುದೋ ಒಂದನ್ನು ಹೇಳಲಾರೆ.ಸಾಮಾನ್ಯ ಬುದ್ಧಿ ತಿಳಿದಾಗಿನಿಂದ ನನ್ನ ವ್ಯಾಪ್ತಿಯಲ್ಲಿ ನಡೆದ ಘಟನೆಗಳನ್ನು ಸಾಮಾನ್ಯ ನೆನಪಿಟ್ಟುಕೊಳ್ಳುತ್ತ ಬಂದಿದ್ದೇನೆ. ಪ್ರತಿಯೊಂದೂ ನನಗೆ ಮರೆಯಲಾಗದ ಘಟನೆಯೇ, ಕೆಲ ಮಟ್ಟಿಗೆ ಮರೆಯಲಾಗದುದು ನನ್ನ ದೌರ್ಬಲ್ಯವೂ ಹೌದು.  ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಸಾವು. ನಾನು ಆರೇಳು ವರ್ಷದವನಿದ್ದಾಗ ಸಂಭವಿಸಿದ ನನ್ನ ತಂದೆಯ ದುರ್ಮರಣದಿಂದ ಆರಂಭವಾದದ್ದು ಅದು. ಸಾವು ಅನಿವಾರ್ಯ ಮತ್ತು ಸಹಜ ಎಂಬುದು ತಿಳಿದಿದ್ದರೂ, ಪ್ರತಿ ಸಾವಿನ ನಂತರ ಉಂಟಾಗುವ ಶೂನ್ಯದ ಅನುಭವ ನನ್ನನ್ನು ಮತ್ತೆ ಮತ್ತೆ ಕದಡುತ್ತದೆ.
**********************************


ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌


4 thoughts on “

  1. ಅಭಿನಂದನೆಗಳು ಇಬ್ಬರಿಗೂ.ಉತ್ತಮ ಸಂದರ್ಶನ.ಗಣೇಶ್ ಸರ್ ರವರ ಬರಹಗಳನ್ನು ಓದಿಕೊಂಡು ಬಂದವಳು ನಾನು.ವೃತ್ತಿಯಲ್ಲಿ ಶಿಕ್ಷಕರಾಗಿರಬಹುದೆಂದು ಭಾವಿಸಿದ್ದೆ. ಅವರ ಸಂದರ್ಶವನ್ನು ಓದಿ ಅಚ್ಚರಿ ಮತ್ತು ಖುಷಿ ಏಕಕಾಲಕ್ಕೆ ಉಂಟಾಯಿತು. ಅವರ ವಿಧ್ಯಾಭ್ಯಾಸ ಕುಂಠಿತ ಗೊಳ್ಳುವುದ್ದಕ್ಕೆ ಅನೇಕ ಕಾರಣಗಳು ಇದ್ದಿರ ಬಹುದು.ಆದರೆ ಅವರ ಸಾಹಿತ್ಯ ಸಾಧನೆ ನೋಡಿ, ಸಾಹಿತ್ಯ ಆಸಕ್ತಿಗೆ ಅಕಾಡೆಮಿಕ್ ಓದು ಅನಿವಾರ್ಯ ಅಲ್ಲವೆಂದು ದಿಟವಾಯಿತು. ಆಸಕ್ತಿ,ಪ್ರಯತ್ನ,ಸಾಧನೆ , ಸ್ವ ಅಧ್ಯಯನದ ಮೂಲಕ ತಲುಪಬೇಕಾದ ಗುರಿ ತಲುಬಹುದೆಂದು ಖಾತ್ರಿಯಾಯಿತು. ನಿಮ್ಮ ಸಾಹಿತ್ಯ ಸಾಧನೆ ನಿರಂತರವಾಗಿರಲಿ.ಮತ್ತೊಮ್ಮೆ ಅಭಿನಂದನೆಗಳು.

  2. ಮಾನ್ಯ ಗಣೇಶ ಹೆಗ್ಗಡೆಯವರ ವಿಚಾರ, ಅಭಿಪ್ರಾಯ, ಅವರು ಹಂಚಿಕೊಂಡ ಮಾತುಗಳು ಅಪರೂಪವಿನಿಸುವ ವೈಚಾರಿಕತೆ ಮತ್ತು ಪ್ರಾಮಾಣಿಕತೆಯಿಂದ ಮುದ ನೀಡುವಂತಹವು. ಖುಷಿ ಯಾಯಿತು, ಧನ್ಯವಾದಗಳು. ಲೇಖಕರಿಗೆ ಅಭಿನಂದನೆಗಳು.

  3. ಗಣೇಶ ಹೊಸ್ಮನೆಯವರು ಬಹಳ ಪ್ರಾಮಾಣಿಕವಾದ ಉತ್ತರಗಳನ್ನು ನೀಡಿದ್ದಾರೆ. ಕೃತಕತೆಯನ್ನು ಮೀರಿದ ಸ್ಪಷ್ಟ ಪ್ರಶ್ನೋತ್ತರಗಳು. ಬಹಳ ಖುಷಿಯಾಯಿತು.

Leave a Reply

Back To Top