ಬದುಕುಮರುಗುತ್ತಿದೆ
ಸುಜಾತಾ ಲಕ್ಮನೆ
ಬದುಕು ಮರುಗುತ್ತಿದೆ
ಕನಸುಗಳು ಶಿಥಿಲಗೊಂಡು ರಚ್ಚೆ ಹಿಡಿದು
ಮುರುಟ ತೊಡಗಿದಂತೆಲ್ಲ
ಬದುಕ ಭಿತ್ತಿಯ ಆಚೀಚೆ ನೀನು ಎಗ್ಗಿಲ್ಲದೇ ಜಡಿದ ಮೊಳೆಗಳು
ಆಳಕ್ಕಿಳಿದಂತೆಲ್ಲಾ ಹೊರಳಿ ನರಳಿ ಅನಾಮತ್ತಾಗಿ ಹರಡಿ
ಬೆದರುಬೊಂಬೆಗಳಾಗಿ ನಿಲ್ಲುತ್ತವೆ ಭಾವಗಳು !!
ದಿಕ್ಕೆಟ್ಟು, ಸೋತು ಹೆಜ್ಜೆ ಮೂಡಿಸಲಾಗದ ಕೊರಗು ತುಂಬಿ ನಿಂತ
ಈ ಭಾವಗಳ ತಬ್ಬಿದರೆ
ಬರೀ ನಿಟ್ಟುಸಿರ ಮೇಳಗಳು !!
ಧೂಳು ಹೊದ್ದು ಮಸುಕಾದ ಗೋಡೆಗಂಟಿದ ನಮ್ಮೀ
ವಿವಾಹದ ಜೋಡಿ ಪಟದಿಂದ ಒಳಗೊಳಗೇ ನಕ್ಕು ಸೂಸುವ ಹಳವಂಡಗಳು!
ಜೇಡ ನೇಯ್ದ ಬಲೆಯೊಳಗೆ ಬಿದ್ದು ಹೊರಳಾಡುವ ಪಟದ ಬಗ್ಗೆ ನಮಗೇಕೆ ಚಿಂತೆ?
ಬದುಕೇ ಚೌಕಟ್ಟು ಮೀರಿ ಮೂರಾಬಟ್ಟೆಯಾದ ಮೇಲೆ ಇನ್ನೇನಂತೆ ?
ಅದೆಷ್ಟು ಬೆಳ್ಳಗೆಯಲ್ಲಿ ಮುಖವಾಡ ಹೊದ್ದು ಹಗಲು ತಳ್ಳಿದರೂ
ಎದೆ ಸುಡುವ ಮಂಚದ ಮೇಲೆ
ರಾಗ ಲಯಗಳು ಸತ್ತ ಬಾಳು ರಿಕ್ತಗೊಂಡ ಸತ್ಯದರ್ಶನ !
ನಿದ್ದೆ ತಬ್ಬದ ರಾತ್ರಿಗಳಲ್ಲಿ ಕಣ್ಣಾಲಿಗಳ ಸುತ್ತ ಸತ್ತ ಕನಸುಗಳ ಒಸರು
ಗಿರಕಿ ಹೊಡೆಯುವ ತವಕ-ತಲ್ಲಣ !!
ಈ ಉತ್ಕಲಿಕೆ ತಾಳಲಾರದೇ ತಟ್ಟಿ ಮಲಗಿಸಿದಂತೆಲ್ಲಾ
ಉಟ್ಟ ಸೀರೆಯ ಸೆರಗಿನಂಚೇ ಪಿಸುಗುಡಲು ಶುರುವಿಟ್ಟುಕೊಳ್ಳುತ್ತದೆ ನನ್ನಲ್ಲಿ !
ಎದೆಯ ಬೀದಿಯ ಮೇಲೆ ಗೀಚಿದ ಒಲುಮೆ ಅಕ್ಷರಗಳು
ಇದ್ದಕ್ಕಿದ್ದಂತೆ ಮಾಯವಾಗಿದ್ದಾದರೂ ಎಲ್ಲಿ?
ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಹೋಗುವ ಈ ಅನಿವಾರ್ಯತೆಯ
ಆರ್ತನಾದಕ್ಕೆ ಕೊನೆಯಲ್ಲಿ ?
ಸಾಲ್ಗೊಳಿಸಲಾಗದ ಪ್ರೀತಿಯ ವ್ಯಾಖ್ಯೆ ಎಡವಿದಂತೆಲ್ಲ
ಸುಕರಗೊಳ್ಳದ ಬದುಕು ಅನಂತ ಸುಳ್ಳುಗಳಿಂದ ತುಂಬಿ ಅಣಕಿಸುತ್ತಿದೆ!!
ನಿನ್ನ ಮೆಲ್ನುಡಿ, ಮೆಲ್ದನಿ, ಮೆಲ್ನಗೆಗೆ ಹಾತೊರೆದು ಹೀಗೆ ಗೀಚುವ ಕವನ
ಕನಲುತ್ತಿದೆ: ಕರಗುತ್ತಿದೆ: ಕನವರಿಸುತ್ತಿದೆ!!
ಕಂಡೂ ಕಾಣದ ಆಸೆ ಕುಡಿಯು ಚಿಗುರಲಾರದೇ ಇತ್ತ ಸಾಯಲಾರದೇ-
ಗೆಜ್ಜೆಕಟ್ಟಿದ ಹೆಜ್ಜೆ ಪ್ರೀತಿಯ ರಂಗಸ್ಥಳದಲ್ಲಿ ನರ್ತಿಸಲಾರದೇ
ಬದುಕೇ ಮರುಗುತ್ತಿದೆ : ನರಳುತ್ತಿದೆ : ನೋಯುತ್ತಿದೆ !!
ಸಾಂಗತ್ಯ ಗೊಳ್ಳದ ಬದುಕ ಪದುಳಿಸಲು ಒಮ್ಮುಖವಾಗಿ
ನಾನು ಹೆಣಗಿದಂತೆಲ್ಲ ನಿನ್ನ ವಿಮುಖತೆಯೇ ಮೂರ್ತೀಭವಿಸಿ
ದಿನ-ರಾತ್ರಿಗಳು ಬಸವಳಿದು ಚಾದರ ದಡಿಯಲ್ಲಿ ಬಿಕ್ಕುತಿವೆ!!
ನಾನು ನೀನು ದಾಂಪತ್ಯದಲ್ಲಿ ಕಾಲಿಟ್ಟ ಸಂಭ್ರಮದ ಆ ದಿನಕ್ಕೆ
ಬೇಕಿತ್ತೇ ದಿಬ್ಬಣ ಒಡ್ಡೋಲಗ ಮಂತ್ರಗಳ ಘೋಷ ಹೂ ಮಾಲೆ?
ಸನಿಹವಿದ್ದೂ ನಿನ್ನ ಬಿಸುಪೇ ತಾಗದೆ ಸಾಯುವ ನನ್ನ ಭಾವಲಹರಿಯ ಬಿಕ್ಕಿಗೆ
ಇನ್ನೆಷ್ಟು ತೇಪೆ ಹಚ್ಚುವ ಶ್ರಮ –
ಮನಸ್ಸಿಗೆ ಮನಸ್ಸೇ ಬೆಸೆಯದಿದ್ದ ಮೇಲೆ?
ಪ್ರೀತಿ ಇಲ್ಲದ ಮೇಲೆ ಎಲ್ಲ ತೊರೆದು ಕಾರಣವ ಕೊಟ್ಟು ಹೊರಟು ಬಿಡು !
ವಿಕ್ಷೋಭ ವಿಕ್ಲಬಗಳೆಲ್ಲ ದೂರಾಗಿ ಹೋಗಲಿ
ನನ್ನ ಬಿಸಾಕಿ ಬಿಡು ನಿನ್ನ ಬಾಳಿಂದ
ಒಳ ಕುದಿತ ತಹಬಂದಿಗೆ ಬಂದು
ಇನ್ನುಳಿದ ಎನ್ನ ಬಾಳಾದರೂ ಆಗಲಿ ಅಂದ ಚಂದ !!
*******************
ಸೊಗಸಾದ ಕವನ…ಪ್ರೀತಿ ಇಲ್ಲದ ಮೇಲೆ ಹೊರಟುಬಿಡು ತೊರೆದು….
ಇಡೀ ಕವನ ವಿಷಾದದ ಕಡಲಾಗಿದೆ…
ಪ್ರತಿಕ್ರಿಯಿಸಿದ ಸುಜಾತಾ ಮೇಡಂ ಹಾಗೂ ವಸುಂಧರ ಮೇಡಂ ರವರಿಗೆ ತುಂಬು ಧನ್ಯವಾದಗಳು..
ಬಹಳ ತೀವ್ರ ಕವನಗಳು ನಿಮ್ಮ ಬತ್ತಳಿಕೆಯಿಂದ ಉದುರುತ್ತವೆ
ನನಗಂತೂ ಬಹಳ ಇಷ್ಟವಾಗುತ್ತವೆ ನಿಮ್ಮ ಕವನ,☺
ಧನ್ಯವಾದಗಳು ಸ್ಮಿತಾ.. ಧನ್ಯೋಸ್ಮಿ