ನಾಯಿ ಮತ್ತು ಬಿಸ್ಕತ್ತು

ಕಿರು ಕಥೆ

dog beagle

ನಾಗರಾಜ ಹರಪನಹಳ್ಳಿ

ಆತ ದಂಡೆಗೆ ಬಂದು ಕುಳಿತ. ಎಲ್ಲಾ ಕಡೆ ಬಂಧನಗಳಿಂದ ಬಿಗಿದ‌ ಜಗತ್ತು ಸಾಕೆನಿಸಿತ್ತು.‌ ರಸ್ತೆಗಳೆಲ್ಲೆ ಮಕಾಡೆ ಮಲಗಿದ್ದವು. ಜನರ ಸುಳಿವಿಲ್ಲ.‌ಮುಚ್ಚಿದ  ಹೋಟೆಲ್ಲು, ಲಾಡ್ಜು, ಅಂಗಡಿ ಬಾಗಿಲು. ಗೂಡಂಗಡಿಗಳು ಬಲವಾದ ಹಗ್ಗಗಳಿಂದ ಬಂಧಿಸಲ್ಪಟ್ಟಿದ್ದವು.‌‌ ಇಡೀ ನಗರ ಸತ್ತು ಹೋಗಿತ್ತು. ಬಿಕೊ ಅನ್ನುತ್ತಿದ್ದ ಬಸ್ ಸ್ಟ್ಯಾಂಡ್. ‌ಬಿಕ್ಷುಕುರ ಸುಳಿವು ಸಹ ಇಲ್ಲ.ಮನುಷ್ಯರ ಸುಳಿವಿಲ್ಲ. ಪ್ರತಿ ಸರ್ಕಲ್ ‌ನಲ್ಲಿ ಸುರಿವ ಉರಿ ಬಿಸಿಲಲ್ಲಿ ಖಾಲಿ ರಸ್ತೆಗಳನ್ನು ಪೊಲೀಸರು ಕಾಯುತ್ತಿದ್ದರು. ಭೀತಿ ಮತ್ತು ಭಯ ಸ್ಪರ್ಧೆಗೆ ಬಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಕುಣಿದಾಡುತ್ತಿದ್ದವು .ಜನರಿಲ್ಲದೇ ಆಸ್ಪತ್ರೆಗಳು ಸಹ ದುಃಖಿಸುತ್ತಿದ್ದವು. ಔಷಧಿ ಅಂಗಡಿ ಮಾತ್ರ ತೆರೆದು ಕೊಂಡಿದ್ದು ಕೌಂಟರ್ ನಲ್ಲಿ ಒಬ್ಬ ಪೇಪರ್ ಹಿಡಿದು ಆದ್ಹೇನೋ‌ ಜಗತ್ತು ತಲೆ ಮೇಲೆ ಬಿದ್ದಂತೆ ತದೇಕ ಧ್ಯಾನಸ್ಥನಾಗಿ ಅಕ್ಷರದತ್ತ ದೃಷ್ಟಿ ನೆಟ್ಟಿದ್ದ .‌ಇದನ್ನೆಲ್ಲಾ ಕಣ್ತುಂಬಿ‌ ಕೊಂಡ ರಾಮನಾಥ ದಂಡೆಯಲ್ಲಿ ಧ್ಯಾನಿಸುತ್ತಿದ್ದ. ಆಗ ತಾನೇ ಕೋವಿಡ್ ಲ್ಯಾಬ್ ನಲ್ಲಿ ಅ ದಿನ ಬಂದ ಐವತ್ತು ಜನರ ಗಂಟ ದ್ರವ ಪರೀಕ್ಷೆ ಮಾಡಿ, ಜೀವವನ್ನು ಕೈಯಲ್ಲಿ ಹಿಡಿದು ಬಂದಿದ್ದ.‌ ಅಂದು ಬಂದ ಐವತ್ತು ಸಂಶಯಿತ ಕರೋನಾ ಗಂಟಲು ದ್ರವದಲ್ಲಿ ಹದಿನೆಂಟು ಜನರ ಗಂಟಲು ದ್ರವದಲ್ಲಿ ಕೋವಿಡ್ ೧೯ ವೈರಸ್ ಇರುವುದು ದೃಢಪಟ್ಟಿತ್ತು.‌ ತನ್ನ ಜೀವಮಾನದಲ್ಲಿ ಮನುಷ್ಯರು, ವೈದ್ಯರು, ಅಧಿಕಾರಿಗಳು…. ಎಲ್ಲರೂ ಗಡಿಬಿಡಿ , ಒಂಥರಾ ಅವ್ಯಕ್ತಭಯದಲ್ಲಿ ಇದ್ದುದ ರಾಮನಾಥ ಮೊಟ್ಟ ಮೊದಲ ಬಾರಿಗೆ ನೋಡಿದ್ದ.‌ತನ್ನ ಕೆಲಸವನ್ನು ನಿರ್ಲಿಪ್ತತೆಯಿಂದ‌ ಮುಗಿಸಿ ಬಂದಿದ್ದ ಆತ ಜೀವನದ ನಿರರ್ಥಕ ‌ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೋ ಅಥವಾ ವರ್ತಮಾನ ಕುಸಿಯುವುದನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದೇನೋ ಎಂದು ತರ್ಕಿಸುತ್ತಾ ಕುಳಿತಿದ್ದ. ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿ ದುತ್ತನೇ ಎದುರಾಗಿ ಮಾತಿಗಿಳಿದ.‌ “ಏನ್ ಸರ್ ಸರ್ಕಾರ ಮಾಡಿದ್ದು ಸರಿಯಾ? ನಾ ಕುಡಿಯದೇ ಬದುಕಲಾರೆ.‌ ಲಿಕ್ಕರ್ ಶಾಪ್ ಮುಚ್ವಿದ್ದು ಸರಿಯೇ” ಎಂದು ಪ್ರಶ್ನಿಸಿದ.‌ ರಾಮನಾಥಗೆ  ಕಸಿವಿಸಿಯಾಯ್ತು.‌ಬಗೆಹರಿಸಲಾಗದ ಇವನ ಪ್ರಶ್ನೆಗೆ ಉತ್ತರ ಎಲ್ಲಿಂದ ತರುವುದು ಎಂದು? ಸರಿಯಲ್ಲ ಎಂದು ತಲೆ ಅಲ್ಲಾಡಿಸಿ ಮತ್ತೆ ನಿರ್ಲಿಪ್ತನಾದ.‌ ಹಠಾತ್ ಎದುರಾದ ವ್ಯಕ್ತಿ ಅಲ್ಲಿಂದ ನಡೆದು‌‌ಹೋದ.‌ಅವನನ್ನು‌ ನಾಯಿಯೊಂದು ಹಿಂಬಾಲಿಸಿತು.‌ ಮನ ತಣಿಯುವಷ್ಟು ದಂಡೆಯಲ್ಲಿ ಕುಳಿತ ರಾಮನಾಥ ಎದ್ದು ಮನೆ ಕಡೆ ನಡೆದ . ಅವನು ಒಬ್ಬಂಟಿ ಬೇರೆ. ಸಾಂಬರು ಕಟ್ಟಿಸಿಕೊಳ್ಳಲು‌ ಹೋಟೆಲ್ ‌ಗಳು  ಬೇರೆ ಬಂದ್ ಆಗಿವೆ.‌ ಅನ್ನ ಸಾರು ಅವನೇ ಬೇಯಿಸಿ ತಿನ್ನುವುದು ರೂಢಿಯಾಗಿತ್ತು ಲಾಕ್ ಡೌನ್ ಸಮಯದಲ್ಲಿ.‌ಮೊದಲಾದರೆ ಅನ್ನ ಮಾತ್ರ ಬೇಯಿಸಿಕೊಳ್ಳುತ್ತಿದ್ದ. ಇದೇ ಧಾವಂತದಲ್ಲಿ ಹೆಜ್ಜೆ ಹಾಕಿದವನಿಗೆ ದಾರಿಯಲ್ಲಿ ಹಠಾತ್ತನೇ ದಂಡೆಯಲ್ಲಿ ಪ್ರಶ್ನೆ ಎಸೆದ ವ್ಯಕ್ತಿ ಸಿಕ್ಕ. ಆತ ರಸ್ತೆ ಪಕ್ಕ ನಾಯಿಯೊಂದಿಗೆ ಮಾತಾಡುತ್ತಿದ್ದ. ಅದನ್ನೆ  ತನ್ನ ಜೀವದ ಭಾಗವೆಂಬಂತೆ ಅದಕ್ಕೆ ಬಿಸ್ಕತ್ತು ಹಾಕುತ್ತಾ …ತನ್ನ ದುಃಖವನ್ನೆಲ್ಲಾ  ನಾಯಿಯ ಕಣ್ಣಿಗೆ ವರ್ಗಾಯಿಸುತ್ತಾ ಅದ್ಹೇನೋ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಿದ್ದ. ಪ್ರತಿ ಮಾತಿಗೂ ಒಂದೊಂದೇ ಬಿಸ್ಕತ್ತಿನ‌ ತುಂಡುಗಳನ್ನು ಅದಕ್ಕೆ ಹಾಕುತ್ತಿದ್ದ.‌ ಮರದ ಕೆಳಗೆ ಈ‌ ಸಂಭಾಷಣೆ ನಡೆದಿತ್ತು. ಕುತೂಹಲದಿಂದ ರಾಮನಾಥ ಇದನ್ನು ಆಲಿಸತೊಡಗಿದ. ಲಿಕ್ಕರ್ ಹುಡುಕಿ ಹೊರಟ ಆ ಸಾಮಾನ್ಯ ಮೊದಲ ನೋಟಕ್ಕೆ ಕುಡುಕ ಅನ್ನಿಸಿದ್ದ. ಈಚೀಚೆಗೆ ಕೆಲಸವೂ ಇಲ್ಲದೇ, ಉಳಿಯಲು ಸೂರು ಇಲ್ಲದೇ ಅಂದಂದೆ ದುಡಿಯುವವರ  ಆಹಾರಕ್ಕೆ ಅಲೆದ‌ ಈ ಸತ್ತ ನಗರದಲ್ಲಿ‌ ;   ನಾಯಿ‌ ಹಸಿವಿಗೂ ಮಿಡಿವ, ಮನುಷ್ಯನ ಕಂಡು ಮನಸಲ್ಲೇ ಸಮಾಧಾನಿಯಾದ.

ಅಷ್ಟರಲ್ಲಿ ಹಸಿದವರಿಗೆ ಊಟದ ಜೀಪ್ ನಲ್ಲಿ ಅನ್ನ ಸಾರು ತುಂಬಿದ ಪಾತ್ರೆ ಇಟ್ಟುಕೊಂಡು  ಹಸಿದವರಿಗೆ‌ ಹುಡುಕುವ  ಮದರ್  ಥೆರೇಸಾ ಟ್ರಸ್ಟನ ಸ್ಯಾಮಸನ್  ಎದುರಾದರು. ರಾಮನಾಥನನ್ನ ಕಂಡವರೇ   ಕೈ ಬೀಸಿದರು. ಅತ್ತ ನಾಯಿ‌ ಮತ್ತು ಕುಡುಕ ಮನುಷ್ಯ  , ಸ್ಯಾಮಸನರ  ಅನ್ನ ನೀಡುವ  ಜೀಪ್ ಬಂದ ದಿಕ್ಕಿ ನತ್ತ ಹೆಜ್ಜೆ ಹಾಕಿದರು. ಅದೇ‌ ಬೀದಿಯ ಪಿಡಬ್ಲುಡಿ ಕ್ವಾಟರ್ಸನಲ್ಲಿ ಕೊನೆಯ ಮೂಲೆಯ ಮನೆಯಲ್ಲಿದ್ದ ‌ಮೇರಿ  ಥಾಮಸ್  ಎಂಬ ಚೆಲುವೆ  ಬಾಗಿಲ  ಮರೆಯಲ್ಲಿ ನಿಂತು, ಎಂದಿನಂತೆ ರಾಮನಾಥನ ಕಂಡು ತಣ್ಣಗೆ ಮುಗುಳ್ನಕ್ಕಳು…..

*****

 

One thought on “ನಾಯಿ ಮತ್ತು ಬಿಸ್ಕತ್ತು

Leave a Reply

Back To Top