ನನ್ನಜ್ಜ

ಕವಿತೆ

ಚೈತ್ರಾ ಶಿವಯೋಗಿಮಠ

ಬಸ್ಟ್ಯಾಂಡ್ ನ್ಯಾಗ ನಿಂತು
ಬಾರಕೋಲು ಬೇಕಾ ಅಂದಾಗ
ಮಂದಿ ಬೇಡಿ ಕೊಡಿಸ್ದಾವ ನನ್ನಜ್ಜ
ಇದ ಕಥಿ ನೂರ ಸರತಿ ಹೇಳಿ
“ಹಠಮಾರಿ ಚೈತ್ರಾ” ಅಂದಾವ ನನ್ನಜ್ಜ

ಹೆಗಲ ಮ್ಯಾಲೆ ಹೊತ್ತು ಓಣಿ
ತುಂಬಾ ತಿರಗ್ಯಾಡಿದಾವ ನನ್ನಜ್ಜ
ಬಾಯಿ ಒಡದರ, ತುಂಬಾ ಬಿಳಿ ಬೀಜ
ಕೆಂಪಗ ಕಾಣೂ ಪ್ಯಾರಲ ಹಣ್ಣ ತರಾವ ನನ್ನಜ್ಜ
ನಿಂಬುಹುಳಿ, ಪೇಪರಮಟ್ಟಿ, ಚಾಕಲೇಟ್
ಗಾಂಧಿ ಮುತ್ಯಾನ ಫೋಟೋ ಮುಂದ ನಿಂದರೀಸಿ
ಕಣ್ಮುಚ್ಚಿಸಿ, ಮುತ್ಯಾ ಕೊಟ್ಟ ನೋಡನ್ನವ ನನ್ನಜ್ಜ

ಮುದುಕಿ, ನರಿ-ಒಂಟಿ ಅಂತ ನೂರ ಕಥಿ
ಅವನ ಅಂಗಿ ಕಿಶೆದಾಗ. ಸ್ವತಂತ್ರ ಸಿಕ್ಕಾಗ
ನಡುರಾತ್ರಿ ಮಾಸ್ತಾರ ಎಬ್ಬಿಸಿದ್ದನ್ನ ಕಥಿ
ಮಾಡಿ ಹೇಳಿದಾಗ ಹೀರೋ ಗತೆ ಕಂಡಾವ ನನ್ನಜ್ಜ
ಓಡಿಹೋಗಾವ ಇದ್ದೆ ಅಂತರಪಟ ಸರದು ಬೆಳ್ಳನ್ನ
ಚೆಲುವಿ ಕಂಡ್ಲು, ಬದುಕಿದ್ನಪಾ ಅಂತಹೇಳಿ ಅಜ್ಜಿನ
ತಾ ಲಗ್ನಾದ ಕಥಿ ಹೇಳಿ ನಗಸಾವ ನನ್ನಜ್ಜ.

ತಾಯಿ ಸೇವಾ ಮಾಡಿ ತುಂಬು ಜೀವನ ಕಂಡು
ತನಗಿಂತ ಕಿರಿಯರ ಕಣ್ಮುಂದ ಕಳ್ಕೊಂಡು
ನೂವಿನ ನಂಜೆಲ್ಲಾ ಎದಿಯಾಗಾ ಮಂಜ ಮಾಡಿ
ಗಟ್ಟಿ ಮನಸು, ಗಟ್ಟಿ ಶರೀರದಾವ ನನ್ನಜ್ಜ
ಸೈಕಲ್ ಏರಿ ದೂರದೂರಿಗೆ ಹೋಗಿ ಸಾಲಿ
ಕಲಿಸಿ ಬಂದು, ರಾತ್ರಿ ಹೊಲಕ್ಕ ನೀರ ಕಟ್ತಿದ್ದ ರೈತ ಮಾಸ್ತಾರ
ನನ್ನಜ್ಜ

ಸ್ವಚ್ಛ ಆಕಾಶದಾಗ ಹತ್ತಿಯಂತ ಮಾಡ ತೇಲಿ
ಹಚ್ಚ ಹಸುರು ಶ್ರಾವಣ ಬಂತಂತ ಹಿಗ್ಗುಮುಂದ
ಊರಿಗ ಹೊಂಟ್ರ “ಬಾರವಾ ಚೈತ್ರಾ’ ಅಂತ
ಬಚ್ಚ ಬಾಯಿ ತಗದ ಬೆಚ್ಚಗ ಕರಿಯಾಕ ಇನ್ನಿಲ್ಲ ನನ್ನಜ್ಜ.
ಮೊಮ್ಮಕ್ಕಳ ಸಾಮ್ರಾಜ್ಯದಾಗಿನ ಮಹರಾಜಾ ನೀ, “ಪ್ರಭುಗಳೆ, ಹೀಗೆ ಬನ್ನಿ” ಅಂತ ಆಡಿಶ್ಯಾಡಿದ್ರ
ನಗಾವ ದೊರೆ ಆಳ್ವಿಕಿ ಮುಗಿಸಿ ಹೊಂಟ ನನ್ನಜ್ಜ!

***************************

5 thoughts on “ನನ್ನಜ್ಜ

  1. ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಅಜ್ಜ ನಮಗೂ ಆಪ್ತರಾದರು, ನಿಮ್ಮ ಕವನದ ಮೂಲಕ.

  2. ಬೆಂಗಳೂರಿನಲ್ಲಿ ಬೆಳೆದ ಚೈತ್ರಾಳಿಗೆ ವಿಜಾಪುರ ಜಿಲ್ಲೆಯ ಗ್ರಾಮ್ಯ ಭಾಷೆಯ ಮೇಲಿನ ಪ್ರಭುತ್ವ ಕಂಡು ಸಂತೋಷವಾಯಿತು , ಹೀಗೆ ಬೆಳೀತಿರು .

Leave a Reply

Back To Top