ಅಲೀಕತ್ತು
ಕಥೆ
ಕೆ. ಎ. ಎಂ. ಅನ್ಸಾರಿ
“ನಮ್ಮ ಮಗಳು ಆಮಿನಾ ಳಿಗೆ ವಯಸ್ಸು ಹನ್ನೆರಡು ಆಯಿತಲ್ಲವೇ…?
ಇನ್ನು ಒಂದೆರಡು ವರ್ಷ ಆದ್ರೆ ಮದುವೆ ಗಂಡು ಹುಡುಕಬೇಕು…
ಅದಕ್ಕಿಂತ ಮೊದಲು ಅವಳಿಗೆ ಅಲೀಕತ್ತು ತೊಡಿಸಬೇಕಲ್ಲಾ…”
ಪೋಕರ್ ಹಾಜಿ ಮಡದಿ ಪಾತುವಿನಲ್ಲಿ ಹೇಳುವುದು ಆಮಿನಾಳಿಗೆ ಕೇಳಿಸುತ್ತಿತ್ತು
ಅಲೀಕತ್ತು ಎಂಬ ಪದ ಕೇಳುತ್ತಿದ್ದಂತೆಯೇ ಅಪ್ಪನ ಮಂಚದ ಕೆಳಗೆ ಮಲಗಿದ್ದ ಅಮಿನಾ ನಾಚಿ ನೀರಾದಳು…
ಅವಳಿಗೆ ಬಂಗಾರವೆಂದರೆ ಪ್ರಾಣ.
ಆಮಿನಾ ಕೇಳಿಸಿಕೊಂಡವಳಂತೆ ನಟಿಸಲಿಲ್ಲ.. ಅವಳಷ್ಟಕ್ಕೆ ಚಾಪೆಯಲ್ಲಿ ಹೊರಳಾಡುತ್ತಿದ್ದಳು…
…
ರಾತ್ರಿ ಸುಮಾರು ಗಂಟೆ 12 ಕಳೆದಿರಬಹುದು.. ಆಮಿನಾಳಿಗೆ ನಿದ್ದೆಯಿಲ್ಲ.
ಅಪ್ಪನ ಗೊರಕೆ ಸದ್ದು ಕೇಳಿಸುತ್ತಿತ್ತು..
ಅಮ್ಮ ತನ್ನ ಪಕ್ಕದಲ್ಲಿ ಗಾಢ ನಿದ್ದೆಯಲ್ಲಿದ್ದಳು..
ಆಮಿನಾ ಎದ್ದು ಮೆಲ್ಲಗೆ ಸದ್ದು ಮಾಡದೆ ಬಚ್ಚಲು ಮನೆಯತ್ತ ನಡೆದಳು…
ಬಚ್ಚಲು ಮನೆಗೆ ಹೊರಡುವಾಗ ಅಪ್ಪ ಮೀಸೆ ಕತ್ತರಿಸುವಾಗ ಬಳಸುತ್ತಿದ್ದ ಕನ್ನಡಿ ಒಯ್ಯಲು ಮರೆಯಲಿಲ್ಲ.
ಬಚ್ಚಲು ಮನೆಯಲ್ಲಿ ಚಿಮಿಣಿ ದೀಪದ ಬೆಳಕು ಏರಿಸುತ್ತಾ ತನ್ನ ಮೊಗವನ್ನೊಮ್ಮೆ ನೋಡಿದಳು.
ಕನ್ನಡಿ ನೋಡಿ ನಕ್ಕಳು…
ಕನ್ನಡಿಯಲ್ಲಿ ಕಿವಿಯನ್ನು ನೋಡುತ್ತಾ ಸಂಭ್ರಮಿಸಿದಳು..
ಕತ್ತಲ್ಲಿ ಇದ್ದ ಬೆಳ್ಳಿಯ ಸರವನ್ನು ಸರಿಪಡಿಸಿ ತನ್ನ ಎದೆಯನ್ನೊಮ್ಮೆ ನೋಡಿ ನಾಚಿದಳು.
…
ಅಪ್ಪನ ಕೆಮ್ಮುವ ಸದ್ದು ಕೇಳಿಸುತ್ತಿದ್ದಂತೆ ಭಯದಿಂದ ಚಿಮಿಣಿ ದೀಪ ಮತ್ತು ಕನ್ನಡಿಯೊಂದಿಗೆ ಜಾಗ ಖಾಲಿ ಮಾಡಿ ಏನೂ ಅರಿಯದವಳಂತೆ ಸ್ವಸ್ಥಾನದಲ್ಲಿ ಬಂದು ಮಲಗಿದಳು..
ನಾಳೆ ಬಟ್ಟೆ ಒಗೆಯಲು ಹೋಗುವಾಗ ಈ ವಿಷಯ ಗೆಳತಿ ಗುಬ್ಬಿಯಲ್ಲಿ ಮತ್ತು ಅತೀಕಾ ಳಲ್ಲಿ ಹೇಳಬೇಕು ಎಂದು ತೀರ್ಮಾನಿಸಿದಳು…
..
ರಾತ್ರಿಯ ನಿದ್ದೆ ಕೈಕೊಟ್ಟ ಕಾರಣ ಎಂದಿನ ಸಮಯಕ್ಕೆ ಆಮಿನಾ ಎಚ್ಚರಗೊಳ್ಳಲಿಲ್ಲ.
ಅಮ್ಮ ನಮಾಜು ಮಾಡಿ ಬಂದ ನಂತರ ಕರೆದಳು..
ಗಂಟೆ 6 ಕಳೆಯಿತು. ನಮಾಜು ಮಾಡಿ ನಂತರ ಬೇಕಿದ್ದರೆ ಮಲಗು…
ಆಮಿನಾ ಥಟ್ಟನೆ ಎದ್ದು ಬಚ್ಚಲು ಕೋಣೆಗೆ ಓಡಿದಳು..
ವುಜೂ ಮಾಡಿ ನಮಾಜಿಗೆ ನಿಂತಳು…
ನಮಾಜಿಗೆಂದು ನಿಂತಿದ್ದರೂ ಮನಸ್ಸು ಮಾತ್ರ ನಿನ್ನೆ ರಾತ್ರಿಯ ಸಂಭಾಷಣೆಯ ಪ್ರತಿಫಲನ..
..
“ಅಮ್ಮಾ ಅಪ್ಪ ಎಲ್ಲಿ… ?”
“ಅಪ್ಪ ಬೆಳಗ್ಗೆ ಮಸೀದಿ ಹೋದವರು ಬಂದಿಲ್ಲ. ನಿನಗೆ ಅಲೀಕತ್ತು ತೋಡಿಸಬೇಕು. ಉಸ್ತಾದರಲ್ಲಿ ಸಮಯ ನಿಶ್ಚಯಿಸಿ ಅಕ್ಕ ಸಾಲಿಗನ ಹತ್ತಿರ ಹೋಗಿ ಬರುತ್ತಾರೆ…”
ಅಮ್ಮ ಪಾತು ದೋಸೆ ಹುಯ್ಯುತ್ತಾ ಉತ್ತರಿಸುತ್ತಿದ್ದಳು.
ತನಗೆ ಏನೂ ಅರಿವಿಲ್ಲದಂತೆ ಆಮಿನಾ ದೋಸೆಯ ತುಂಡೊಂದನ್ನು ತೆಗೆದು ತಿನ್ನ ತೊಡಗಿದಳು.
..
ಇನ್ನೇನು ಚಹಾ ಕುಡಿದು ಮುಗಿಯಲಿಲ್ಲ.. ಅಷ್ಟ್ಹೊತ್ತಿಗೇ ಆಮಿನಾ ಎಂಬ ಕೂಗು ಕೇಳಿಸಿತು..
ಕೂಗು ಕೇಳಿಸುತ್ತಿದ್ದಂತೆ ಬಕೆಟ್ ತುಂಬಾ ಬಟ್ಟೆ ತುಂಬಿಸುತ್ತಾ..
“ಹಾಂ ಬಂದೆ ಗುಬ್ಬಿ” ಎನ್ನುತ್ತಾ ಗೇಟು ತೆಗೆದು ಹೊರ ನಡೆದಳು.
ಇಬ್ಬರೂ ಕೂತು ಬಕೆಟಿನಿಂದ ಬಟ್ಟೆ ತೆಗೆಯುತ್ತಾ ಹೊಳೆದಡದಲ್ಲಿ ಮಾತಿಗಾರಂಭಿಸಿದರು. ರಾತ್ರಿ ನಡೆದ ಸಂಭಾಷಣೆಯನ್ನು ಎಳೆ ಎಳೆಯಾಗಿ ವಿವರಿಸತೊಡಗಿದಳು. ಅಂದ ಹಾಗೆ ಗುಬ್ಬಿ ಈಕೆಯಿಂದ ಎರಡು ವರ್ಷ ದೊಡ್ಡವಳು…
ಅಷ್ಟ್ಹೊತ್ತಿಗೆ ಅತೀಕಾ ಕೂಡಾ ಹೊಳೆ ಪಕ್ಕದಲ್ಲಿ ಬಂದು ಸೇರಿದಳು.
ಅತೀಕಾ ಮೆತ್ತಗೆ ಆಮಿನಾಳ ಕೆನ್ನೆಗೆ ಚಿವುಟುತ್ತಾ .. “ಹಾಂ ಮದುವೆಗೆ ಮುನ್ನುಡಿ ಆಯ್ತು ಅಂತ ಹೇಳು.. ಅಲೀಕತ್ತು ಬಂದ್ರೆ ಬರುವ ಒಂದೆರಡು ವರ್ಷಗಳಲ್ಲಿ ಮದುವೆ ಗ್ಯಾರಂಟಿ .. ಅನ್ನು.”
ಆಮಿನಾ ನಾಚಿ ನೀರಾದಳು..
….
ಮಧ್ಯಾಹ್ನ ಒಗೆದು ತಂದಿದ್ದ ಬಟ್ಟೆಯನ್ನೆಲ್ಲಾ ಒಣಗಲು ಹಾಕುತ್ತಿದ್ದ ಆಮಿನಾಳಿಗೆ ಅಪ್ಪನ ಕೂಗು ಕೇಳಿಸಿತು…
ಆಮಿನಾ …
ಅಪ್ಪ ಹತ್ತಿರ ಕರೆದು ಬುದ್ದಿ ಮಾತು ಹೇಳತೊಡಗಿದ. ‘ನೀನು ಈಗ ದೊಡ್ಡವಳಾಗಿದ್ದಿಯಾ .. ಮುಂಚಿನ ಹಾಗೆಲ್ಲಾ ಹೊಳೆ ಬದಿಯಲ್ಲಿನ ಬಟ್ಟೆ ಒಗೆತ ಕಡಿಮೆ ಮಾಡಬೇಕು. ನಾಡಿದ್ದು ಗುರುವಾರ ನಿನಗೆ ಅಲೀಕತ್ತು ತೊಡಿಸಲು ದಿನ ನಿರ್ಧರಿಸಲಾಗಿದೆ.
ಹಾಂ ಬಾಪಾ …
ಮರು ಮಾತನಾಡದೆ ಆಮಿನಾ ತನ್ನ ಕಾಯಕ ಮುಂದುವರಿಸಿದಳು..
…
ಆಮಿನಾಳ ಖುಷಿ ಏನೋ ಮಾಯವಾದಂತೆ ಕಂಡಿತು ತಾಯಿ ಪಾತುವಿಗೆ.
ಸದ್ಯ ಏನೂ ಕೇಳುವುದು ಬೇಡವೆಂದು ಸುಮ್ಮನಿದ್ದಳು.
ಮಧ್ಯಾಹ್ನ ಊಟ ಮಾಡಿ ಮಲಗಿದ ಆಮಿನಾಳಿಗೆ ವಿಪರೀತ ಹೊಟ್ಟೆನೋವು….
ಅಮ್ಮ ಬಂದು ಹೊಟ್ಟೆ ಒತ್ತಿ ನೋಡಿಯಾಯಿತು… ಕಿಬ್ಬೊಟ್ಟೆಯ ಹತ್ತಿರ ಒತ್ತಿ ನೋಡುತ್ತಾ.. ಈಗ ನೋವಿದೆಯಾ ಅಮ್ಮ ಕೇಳಿದಾಗ ಹಾಂ.. ಎಂದು ಉತ್ತರಿಸಿದಳು.
ಸರಿ ನೀ ಮಲಗಿರು. ಸ್ವಲ್ಪ ಹೊತ್ತಾದ ಮೇಲೆ ಎಲ್ಲಾ ಸರಿಯಾಗಬಹುದು ಎನ್ನುತ್ತಾ ಮುಗುಳ್ನಕ್ಕು ಪಾತು ಹೊರನಡೆದಳು.
ಆಮಿನಾಳಿಗೆ ಒಂದೂ ಅರ್ಥವಾಗಲಿಲ್ಲ. ನಾನಿಲ್ಲಿ ಹೊಟ್ಟೆನೋವಿನಿಂದ ಸಾಯುತ್ತಿದ್ದರೂ ಅಮ್ಮನಿಗೆ ನಗು ಎಂದು ಮನಸ್ಸಲ್ಲೇ ಕೋಪಿಸಿದಳು.
ನಂತರ ಕಿಟುಕಿಯಿಂದ ನೋಡಲು ಅಮ್ಮ, ಅಪ್ಪನನ್ನು ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟುವುದು ಕಾಣಿಸಿತು.
ಆಮಿನಾ ಮಲಗಿಯೇ ಇದ್ದಳು.
ಅಮ್ಮ ಬಂದು ಕಿವಿಯಲ್ಲಿ..,”ನೀನು ದೊಡ್ಡವಳಾಗಿದ್ದಿ ಅಷ್ಟೇ.. ಭಯವೇನೂ ಬೇಡ. ಒಂದೆರಡು ದಿನ ಹೀಗೆ ಇರುತ್ತೆ’ ಎಂದು ಸಮಾಧಾನಪಡಿಸಿದಳು.
ಥಟ್ಟನೆ ಅವಳಿಗೆ ಗುಬ್ಬಿ ಮತ್ತು ಅತೀಕಾ ಇದರ ಬಗ್ಗೆ ಹೇಳಿದ್ದು ನೆನಪಿಗೆ ಬಂತು.
ಆಮಿನಾ ನಾಚಿ ನೀರಾದಳು. ಜೊತೆಗೆ ಮನಸ್ಸಿಗೆ ಏನೋ ಒಂದು ರೀತಿಯ ಖುಷಿ.
ದಿನಗಳು ಓಡತೊಡಗಿತು..
ಅಕ್ಕಸಾಲಿಗ ಬಂದು ಕಿವಿ ಚುಚ್ಚಿ ಅಲೀಕತ್ತು ತೊಡಿಸಿ ಚೀಲದಲ್ಲಿ ವೀಳ್ಯದೆಲೆ, ಅಕ್ಕಿ, ಅಡಿಕೆ ತುಂಬಿಸಿ ದಕ್ಷಿಣೆ ತಗೊಂಡು ಎಲೆ ಅಡಿಕೆ ಜಗಿಯುತ್ತಾ ಹೊರಹೋದ..
ಆಮಿನಾಳಿಗೆ ದಿನಕ್ಕೆ ಹತ್ತು ಹದಿನೈದು ಸಲ ಕನ್ನಡಿ ನೋಡುತ್ತಾ ತನ್ನ ಸೌಂದರ್ಯ ನೋಡುವುದೇ ಅಭ್ಯಾಸವಾಗಿ ಹೋಗಿತ್ತು.
ಅಡಿಯಿಂದ ಮುಡಿವರೆಗೆ ತನ್ನನ್ನೇ ಕನ್ನಡಿಯಲ್ಲಿ ನೋಡುತ್ತಾ ಖುಷಿ ಪಡುತ್ತಿದ್ದಳು.
ವರುಷ ಒಂದು ಕಳೆಯಿತು. ಒಂದು ದಿನ ರಾತ್ರಿ
ಅಪ್ಪ ಪಾತುವಿನಲ್ಲಿ ಹೇಳುತ್ತಿದ್ದ.
ಮಗಳಿಗೆ ವರ್ಷ 14 ಆಯಿತು. ಸಯ್ಯದ್ ಬ್ಯಾರಿ ಒಬ್ಬ ಒಳ್ಳೆಯ ಸಂಬಂಧ ಇದೆ ಅಂತ ಹೇಳಿದ್ದಾನೆ. ನಮಗಾದರೆ ಗಂಡಾಗಿ ಹೆಣ್ಣಾಗಿ ಇರುವುದು ಒಂದೇ ಕುಡಿ. ಇನ್ನು ತಡ ಮಾಡುವುದು ಬೇಡ ಎಂದು ತೀರ್ಮಾನಿಸಿ ನಾಡಿದ್ದು ಆದಿತ್ಯವಾರ ಹುಡುಗನ ಕಡೆಯವರನ್ನು ಬರಲು ಹೇಳಿದ್ದೇನೆ.
ಅವನೂ ಒಬ್ಬನೇ ಒಬ್ಬ ಮಗನಂತೆ. ಒಳ್ಳೆಯ ತರವಾಡು..
ನಾವು ಹತ್ತಿರದ ಒಂದಿಬ್ಬರು ಸಂಬಂಧಿಕರನ್ನು ಮಾತ್ರ ಕರೆಯೋಣ…
ಶನಿವಾರ ಸಂಜೆ ಹೊತ್ತಿಗೆ ಅತೀಕಾ ಮತ್ತು ಗುಬ್ಬಿ ಆಮಿನಾಳ ಮನೆಗೆ ಬಂದರು. ಕೈಗಳಿಗೆ ಮೆಹಂದಿ ಹಚ್ಚುತ್ತಾ ಕೀಟಲೆ ಮಾಡತೊಡಗಿದರು..
“ಹೋಗೇ” ಎಂದು ಬೈದರೂ ಮನಸ್ಸಿನಲ್ಲಿ ಪ್ರಕಟಿಸಲಾಗದ ಖುಷಿಯನ್ನು ಅವಳ ಮುಖಭಾವ ಹೇಳುತ್ತಿತ್ತು.
ಆದಿತ್ಯವಾರ ಬೆಳಿಗ್ಗೆಯೇ ಪೋಕರ್ ಹಾಜಿಯ ಇಬ್ಬರು ಅಣ್ಣಂದಿರು ಮತ್ತು ಅವರ ಮಡದಿಯರು ಹಾಜರಾದರು.
ತುಪ್ಪದ ಊಟ, ಕೋಳಿ ಸಾರು ಎಲ್ಲಾ ತಯಾರಾಯಿತು.
ಮಧ್ಯಾಹ್ನದ ಹೊತ್ತು ಅಂಬಾಸಿಡರ್ ಕಾರಿನಲ್ಲಿ ಮದುಮಗನೊಂದಿಗೆ ಆತನ ಅಪ್ಪ ಅಮ್ಮ ಮತ್ತು ಒಂದಿಬ್ಬರು ಹೆಂಗಸರು ಇಳಿದು ಬಂದರು.
ಆಮಿನಾ ಕಿಟುಕಿಯಿಂದ ಇಣುಕಿ ನೋಡುತ್ತಿದ್ದಳು…
ಬಿಳಿ ಮೈಬಣ್ಣ, ತಲೆಗೊಂದು ಟೋಪಿ .. ಅಚ್ಚುಕಟ್ಟಾಗಿ ಟ್ರಿಮ್ ಮಾಡಿದ ಗಡ್ಡ….
ಮೊದಲ ನೋಟದಲ್ಲೇ ಇಷ್ಟವಾಯಿತು.
ಚಾ ತಿಂಡಿ ಕಳೆದು ಪೋಕರ್ ಹಾಜಿ…. ,, ‘ಪಾತೂ.. ಹುಡುಗನಿಗೂ ನಮ್ಮ ಮಗಳನ್ನೊಮ್ಮೆ ತೋರಿಸು.. ಅವನಿಗೆ ಇಷ್ಟ ಆದ್ರೆ ಅಲ್ಲವೇ ಮುಂದಿನ ಮಾತು…” ನಗುತ್ತಾ ಹೇಳಿದ.
ಹುಡುಗನೊಂದಿಗೆ ಬಂದ ಹೆಂಗಸರು ಒಳಗೆ ಕರೆದಾಗ ಹುಡುಗ ಅದನ್ನೇ ಕಾಯುತ್ತಿದ್ದವನಂತೆ ಬೇಗನೆ ಒಳ ನಡೆದ.
ತಲೆಗೆ ಮಿನುಗುವ ಶಾಲು.
ಆ ಶಾಲನ್ನು ಬೇಕೆಂತಲೇ ಕಿವಿ ಕಾಣುವಂತೆ ತಲೆಗೆ ಹಾಕಿದ್ದಳು. ಕಿವಿ ಮುಚ್ಚಿದರೆ ಅಲೀಕತ್ತು ದರ್ಶನವಾಗದು ಅಲ್ವೇ…?
ಹುಡುಗ ಕೊಠಡಿಗೆ ಕಾಲಿಡುತ್ತಿದ್ದಂತೆಯೇ ತನ್ನೆರಡೂ ಕೈಗಳಿಂದ ಮುಖ ಮುಚ್ಚಿದಳು.
ಮುಚ್ಚಿದ ಕೈಗಳ ಎಡೆಯಿಂದ ಹೊಳೆವ ಎರಡು ಕಣ್ಣುಗಳು ಕಾಣಿಸುತ್ತಿತ್ತು..
ಹುಡುಗನೊಂದಿಗೆ ಬಂದಿದ್ದ ಹೆಂಗಸರು ಆಕೆಯ ಕೈ ಯನ್ನು ಹಿಂದಕ್ಕೆ ಸರಿಸಿ ಹುಡುಗನಿಗೆ ಮುಖ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.
ಆಮಿನಾಳ ಕಣ್ಣು ಹೊಳೆಯುತ್ತಿತ್ತು..
ಜತೆಗೆ ಮೈಯೆಲ್ಲಾ ಬೆವರಿತ್ತು….
ಮುಖ ದರ್ಶನದ ನಂತರ .. “ನನಗೆ ಇಷ್ಟವಾಯಿತು” ಎಂಬ ಒಂದೇ ಒಂದು ಮಾತು ಹೊರಬಂತು.
ಆಮಿನಾಳಿಗೆ ದೇಹವೆಲ್ಲಾ ವಿದ್ಯುತ್ ಸಂಚಾರವಾದ ಅನುಭವ.
ಸಂತಸವ ವಿವರಿಸಲು ಪದಗಳಿಲ್ಲ.
ಊಟದ ನಂತರ ಮಾತುಕತೆ..
ಎಲ್ಲವೂ ಮುಗಿದು ಎರಡು ವಾರದೊಳಗೆ ಮದುವೆ ಎಂದು ದಿನವೂ ನಿಶ್ಚಯಿಸಲಾಯಿತು.
ಆಮಿನಾಳಿಗೆ ನಿದ್ದೆಯಿಲ್ಲದ ರಾತ್ರಿಗಳು.
ಕೈ ಬೆರಳಿನಿಂದ ದಿನಗಳನ್ನು ಎಣಿಸುತ್ತಿದ್ದಳು.
ಅಪ್ಪನಿಗೂ ಚಿಂತೆ ಇಲ್ಲ ಎಂದಲ್ಲ.
ಮದುವೆ ಅಂದಮೇಲೆ ಒಡವೆ ವಸ್ತ್ರಗಳು ಬೇಕು..
ಅಪ್ಪ ಹಣದ ಬಗ್ಗೆ ಲೆಕ್ಕ ಹಾಕುತ್ತಿದ್ದ..
ಅಮ್ಮನಿಗೂ ಬಿಡದ ಚಿಂತೆ..
14 ವರ್ಷ ಸಾಕಿ ಸಲುಹಿದ ಒಬ್ಬಳೇ ಒಬ್ಬಳು ಮಗಳನ್ನು ಕಳುಹಿಸಿಕೊಡಬೇಕು.
ಜೊತೆಗೆ
ನಾಲ್ಕು ಹಸುಗಳು.. ಅವುಗಳಿಗೆ ಸರಿಯಾದ ಸಮಯಕ್ಕೆ ಹುಲ್ಲು ಹಾಕಬೇಕು..
ಸಂಜೆ ಹೊತ್ತಿಗೆ ಹಟ್ಟಿಯಲ್ಲೂ ಕಟ್ಟಬೇಕು… ಆಮಿನಾಳು ಗಂಡನ ಮನೆ ಸೇರಿದರೆ ಹಸುವಿನ ಆರೈಕೆಯೂ ಬೇರೆ ಪಾತುವಿನ ಹೆಗಲಿಗೆ ಬರುತ್ತದೆ.
ಪಾಲನೆ ಕಷ್ಟ ಆಗುವುದು ಎಂದು ಹಸುವನ್ನು ಮಾರಲೂ ಆಗದು.
20 ಲೀಟರ್ ಹಾಲು.. ಇದೊಂದು ಪ್ರಮುಖ ಆದಾಯ ಮಾರ್ಗ.
ಚುಟುಕಾಗಿ ಹೇಳುವುದಿದ್ದರೆ ಮೂವರಿಗೂ ಬೇರೆ ಬೇರೆ ರೀತಿಯ ಚಿಂತೆಗಳು.
ಬೆಳಿಗ್ಗೆ ಅಮ್ಮ ಮಗಳ ಮಾತಿನ ನಡುವೆ ಅಮ್ಮಳ ಒಂದು ಚಿಕ್ಕ ಪ್ರಶ್ನೆ…
“ಆಮಿನಾ ನಿನಗೆ ಯಾವ ರೀತಿಯ ಒಡವೆ ಇಷ್ಟ ?”
ಒಲ್ಲದ ಮನಸ್ಸಿನಿಂದಲೇ ಅಮ್ಮನಲ್ಲಿ ಒಂದು ವಿಷಯ ಹೇಳಿದಳು.
“ಅಮ್ಮಾ .. ಒಡವೆ ರೂಪದಲ್ಲಿ ನನಗೆ ಇಷ್ಟವಾಗಿರೋದು ಅಲೀಕತ್ತು ಮಾತ್ರ. ಇರುವ ಅಲೀಕತ್ತು ಚಿಕ್ಕದು. ಮಾಲೆ ಸರ ಏನೂ ಬೇಡ..
ಸ್ವಲ್ಪ ಗಟ್ಟಿಯುಳ್ಳ ಅಲೀಕತ್ತು ಮಾತ್ರ ಸಾಕು.”
ಅವಳ ಅಲೀಕತ್ತು ಪ್ರೀತಿಯನ್ನು ಕಂಡು ಆಶ್ಚರ್ಯ ಪಟ್ಟರೂ ತೋರ್ಪಡಿಸದೆ.. ಹಾಗೇ “ಆಗಲಿ.
ಅಪ್ಪನಲ್ಲಿ ಹೇಳಿ ಹೊಸದು ಮಾಡಿಸೋಣ” ಎಂದು ಸಮ್ಮತಿ ಸೂಚಿಸಿದಳು.
ಮದುವೆ ಅದ್ದೂರಿಯಾಗಿ ನಡೆಯಿತು.
ಗಂಡು-ಹೆಣ್ಣಿನ ಕಡೆಯವರಿಂದ ಒಂದೇ ಮಾತು.
ಮದುಮಗಳ ಅಲೀಕತ್ತು ಸೂಪರ್…
ಈ ಮಾತು ಕೇಳಿಸುತ್ತಿದ್ದಂತೆ ಆಮಿನಾಳಿಗೆ ಮಾತ್ರವಲ್ಲ ಅಮ್ಮನಿಗೂ ಖುಷಿಯಾಗುತ್ತಿತ್ತು.
ಅಮೀನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು.
ಸುಮಾರು ಒಂದುವಾರ ಮದುಮಗ ಮನೆಯಲ್ಲಿಯೇ ಇದ್ದ.
ಆಮಿನಾಳಿಗೆ ಸ್ವರ್ಗ ಸುಖದ ಅನುಭವ.
ದಿನಗಳುರುಳುತ್ತಿತ್ತು.
ಪೇಟೆಯಲ್ಲಿ ಅಂಗಡಿ ಇಟ್ಟಿದ್ದ ಗಂಡ ಇಬ್ರಾಹಿಂ ವಾಪಸ್ ಬರುವಾಗ ರಾತ್ರಿ ಗಂಟೆ ಹತ್ತು ಕಳೆಯುತ್ತಿತ್ತು.
ಮೊದ ಮೊದಲು ಕಷ್ಟವಾದರೂ ಕ್ರಮೇಣ ಅಭ್ಯಾಸವಾಗಿ ಹೋಗಿತ್ತು.
ಈ ನಡುವೆ ಆಮಿನಾ ಕುಟುಂಬಕ್ಕೆ ಮೊದಲ ಶಾಕ್ ಉಂಟಾಯಿತು.
ಅಪ್ಪ ಪೋಕರ್ ಹಾಜಿಯ ಅಕಾಲಿಕ ಮರಣ.
ಇಡೀ ಕುಟುಂಬವೇ ಕಣ್ಣೀರಲ್ಲಿ ಮುಳುಗಿತು.
ಹೇಗೋ ಸುಧಾರಿಸಿ ಜೀವನ ಚಕ್ರ ನಡೆಯುತ್ತಿತ್ತು.
ವಾರಕ್ಕೊಂದು ಸಲ ಆಮಿನಾ ಳು ಕೂಡಾ ಅಮ್ಮನ ಮನೆಗೆ ಬಂದು ಹೋಗುತ್ತಿದ್ದಳು.
ಪ್ರತಿ ತಿಂಗಳೂ ಅಮ್ಮ ಹಾಗೂ ಅತ್ತೆ ಮನೆಯಿಂದ ಒಂದೇ ಪ್ರಶ್ನೆ…
“ಹೀಗೆ ಇಬ್ಬರು ಮಾತ್ರ ಇದ್ದರೆ ಸಾಕಾ…?
ಒಂದು ಮಗುವಿನ ಬಗ್ಗೆ ಇನ್ನೂ ಚಿಂತಿಸಿಲ್ಲವೇ ?”.
“ದೇವರು ಯಾವಾಗ ಕೊಡುತ್ತಾನೋ ಆವಾಗ ಸಂತೋಷದಲ್ಲಿ ಸ್ವೀಕರಿಸೋಣ” ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ಇಬ್ರಾಹಿಂ.
ಜೀವನ ರಥ ಸಾಗುತ್ತಿತ್ತು.
ಒಂದು ದಿನ ರಾತ್ರಿ ಗಂಟೆ ಹತ್ತು ಕಳೆದರೂ ಇಬ್ರಾಹಿಂ ಬರಲಿಲ್ಲ.
ಚಾವಡಿಯಲ್ಲಿ ಕೂತು ಸುಸ್ತಾದ ಆಮಿನಾಳ ಮೈಯೆಲ್ಲಾ ಬೆವರ ತೊಡಗಿತು.
ಗಂಟೆ ಹನ್ನೊಂದು ದಾಟಿತು..
ಇಲ್ಲ…
ಇನ್ನೂ ಬರದೇ ಇದ್ದಾಗ ಆಮಿನಾ ಆಗಲೇ ನಿದ್ದೆಗೆ ಜಾರಿದ್ದ ತನ್ನ ಅತ್ತೆ ಮಾವನವರನ್ನು ಕೂಗಿ ಎಬ್ಬಿಸಿದಳು…
“ಏನು ಮಾಡುವುದು…?”
“ಎಲ್ಲಿ ಹೋಗಿರಬಹುದು..?”
“ಇದುವರೆಗೂ ಹೇಳದೆ ಎಲ್ಲೂ ಹೋದವನಲ್ಲ. ಇನ್ನೂ ಸ್ವಲ್ಪ ಕಾಯೋಣ…”
ಮೂವರೂ ಭೀತಿಯಿಂದ ಹೊರ ಚಾವಡಿಯಲ್ಲಿ ಬಂದು ಕೂತರು.
ಗಂಟೆ ಹನ್ನೆರಡು ಕಳೆದಿರಬಹುದು.
ಟಾರ್ಚ್ ಬೆಳಕಿನಲ್ಲಿ ಇಬ್ಬರು ಮನೆ ಅಂಗಳ ತಲುಪಿದರು.
“ಎಲ್ಲಿ ಇಬ್ರಾಹಿಂ…?”
ಮೂವರು ಒಂದೇ ಸ್ವರದಲ್ಲಿ ಪ್ರಶ್ನಿಸಿದರು…
ಬಂದವರಲ್ಲಿ ಒಬ್ಬರನ್ನೊಬ್ಬರು ಮುಖ ನೋಡುತ್ತಾ…
“ಇನ್ನೇನು ಅಂಗಡಿ ಮುಚ್ಚುವ ಸಮಯವಾಗಿತ್ತು. ಥಟ್ಟನೆ ಕುಸಿದು ಬಿದ್ದ.
ಆಸ್ಪತ್ರೆ ಸೇರಿಸಿ ಬಂದೆವು. ಭಯ ಪಡಬೇಕಾದದ್ದು ಏನೂ ಇಲ್ಲ.
ಏನಿದ್ದರೂ ಬೆಳಿಗ್ಗಿನ ಸ್ಕಾನಿಂಗ್ ರಿಪೋರ್ಟ್ ಬಳಿಕ ರೋಗ ಏನು ಅಂತ ಹೇಳಬಹುದು.
ಇಂಜೆಕ್ಷನ್ ಕೊಟ್ಟಿದ್ದಾರೆ.
ಬೆಳಿಗ್ಗೆ ಹೋದರಾಯಿತು..”
ಆಮಿನಾ ಗೋಳೋ ಎಂದು ಅತ್ತಳು..
ಅಳುವಿನ ಸದ್ದು ಕೇಳಿ ಅಕ್ಕ ಪಕ್ಕದ ಜನರ ಮನೆಯಲ್ಲಿ ದೀಪ ಬೆಳಗಿತು.
ಒಂದೆರಡು ನಿಮಿಷದಲ್ಲೇ ಮನೆ ಅಂಗಳ ತುಂಬಾ ಜನ ತುಂಬಿ ಹೋಗಿತ್ತು.
ಏನಕ್ಕೂ ಸೂರ್ಯೋದಯವಾಗಲಿ. ನಂತರ ಆಸ್ಪತ್ರೆಗೆ ಹೋಗಿ ವಿಚಾರಿಸೋಣ ಎಂದು ತೀರ್ಮಾನಿಸಲಾಯಿತು.
,……
ಒಂದರ್ಧ ಗಂಟೆ ಕಳೆದಾಗ ಒಬ್ಬೊಬ್ಬರೇ ಅವರವರ ಮನೆಗೆ ಹೆಜ್ಜೆಯಿಟ್ಟರು.
ಆಮಿನಾ ಗಡಿಯಾರ ನೋಡಿದಳು. ಗಂಟೆ ಎರಡಾಯ್ತು….
ಮೂವರು ಚಾವಡಿಯಲ್ಲೇ ಕೂತು ಸಮಯ ದೂಡಿದರು.
ಪಕ್ಕದ ಮಸೀದಿಯ ಬಾಂಗು ಮೂವರನ್ನೂ ಎಬ್ಬಿಸಿತು.
ಹತ್ತಿರದ ಆಟೋ ಕರೆದು ಮೂವರೂ ಆಸ್ಪತ್ರೆಯತ್ತ ತೆರಳಿದರು.
….
ICU ನಲ್ಲಿ ಇದ್ದಕಾರಣ ಇಬ್ರಾಹಿಂ ನನ್ನು ನೋಡಲು ಸಾಧ್ಯವಾಗಲಿಲ್ಲ.
ದಾದಿಯರು ಅತ್ತಿಂದಿತ್ತ ಓಡಾಡುತ್ತಿದ್ದರು. ಅವರಿಂದ ಪಡೆದ ಮಾಹಿತಿಯ ಪ್ರಕಾರ ಇಬ್ರಾಹಿಂಗೆ ಇನ್ನೂ ಪ್ರಜ್ಞೆ ಬಂದಿಲ್ಲ. ವೈದ್ಯರು ಬರಲು ಇನ್ನೂ ಒಂದು ಗಂಟೆ ಟೈಮಿದೆ. ಅವರು ರಿಪೋರ್ಟ್ ನೋಡಿ ವಿಷಯ ತಿಳಿಸುವರು…
ಅನ್ನ ಪಾನೀಯ ಇಳಿಸದೆ ಮೂವರೂ ಸುಸ್ತಾಗಿದ್ದರು.. ICU ಹೊರಗಡೆ ವೈದ್ಯರ ಬರುವಿಕೆಗಾಗಿ ಕಾಯತೊಡಗಿದರು.
…..
ಗಂಟೆ ಸುಮಾರು 8 ಆಗುತ್ತಾ ಬಂತು.
ರೋಗಿಗಳು, ಅವರ ಸಂಬಂದಿಕರು ಆಗಮಿಸತೊಡಗಿದರು. ನಂತರ ವೈದ್ಯರ ಆಗಮನ.
ಆಮಿನಾ ಎದ್ದು ನಿಂತು.. “ಡಾಕ್ಟ್ರೆ.. ನನ್ನ ಪತಿಯನ್ನು ಕಾಪಾಡಿ” ಎಂದು ಬೊಬ್ಬಿಡಲು ಪ್ರಾರಂಭಿಸಿದಳು. ದಾದಿಯರು ಸಮಾಧಾನಪಡಿಸಿದರು. ವೈದ್ಯರು ನೇರವಾಗಿ ICU ಗೆ ಹೋಗಿ 10 ನಿಮಿಷ ಕಳೆದು ರಿಪೋರ್ಟ್ ನೊಂದಿಗೆ ಹೊರಬಂದರು.
ಮೂವರನ್ನು ತನ್ನ ಕೊಠಡಿಗೆ ಕರೆದು.. “ಪ್ರಜ್ಞೆ ಇನ್ನೂ ಬಂದಿಲ್ಲ. 24 ಗಂಟೆಯೊಳಗೆ ರೋಗದ ಸಂಪೂರ್ಣ ವಿವರ ತಿಳಿಯಬಹುದು. ಒಂದೆರಡು operation ಬೇಕಾಗಬಹುದು. ಮೇಲ್ನೋಟಕ್ಕೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಸ್ಕ್ಯಾನಿಂಗ್ ರಿಪೋರ್ಟ್ ತೋರಿಸುತ್ತದೆ.
ನೀವು 50000 ರೂಪಾಯಿ ಸದ್ಯಕ್ಕೆ counter ನಲ್ಲಿ ಕಟ್ಟಿಬಿಡಿ. ಇನ್ನೂ ಹಣ ಬೇಕಾಗಬಹುದು.. ಸಂಜೆಯೊಳಗೆ ಒಂದು operation ಮಾಡುತ್ತೇವೆ. ನೋಡೋಣ” ಎಂದು ಸ್ಕೆತೋಸ್ಕೊಪ್ ಹೆಗಲಿಗೇರಿಸಿ ಹೊರನಡೆದರು.
ಆಮಿನಾಳಿಗೆ ಭೂಮಿಯೇ ಕಳಚಿ ಬಿದ್ದಂತಾಯಿತು.
ಈ ನಡುವೆ ವಿಷಯ ತಿಳಿದು ಅಮ್ಮ ಪಾತುವೂ ಬಂದು ಸೇರಿದ್ದಳು.
ಅಷ್ಟೊಂದು ಮೊತ್ತದ ಹಣವನ್ನು ಸಂಜೆಯೊಳಗೆ ಒಪ್ಪಿಸುವುದಾದರೂ ಹೇಗೆ…?
ಮನೆಯಲ್ಲಿ ಉಳಿದಿದ್ದ ಒಂದಿಷ್ಟು ಒಡವೆ ಮಾರುವುದು ಮತ್ತು ಅಂಗಡಿಯಲ್ಲಿ ಜಮಾ ಮಾಡಿದ್ದ ಹಣವೆಲ್ಲಾ ಒಟ್ಟುಗೂಡಿಸಿದರೆ ಹೇಳಿದ ಮೊತ್ತ ಹೊಂದಿಕೆಯಾಗಬಹುದು ಎಂದು ಭಾವಿಸಿ ಅತ್ತೆ ಮಾವನವರು ಕೂಡಲೇ ಮನೆಯತ್ತ ಹೊರಟರು.
ಸಂಜೆ ಹೊತ್ತಿಗೆ ಮೊದಲನೇ ಆಪರೇಷನ್ ಮುಗಿಯಿತು.
ಇನ್ನೂ ಪ್ರಜ್ಞೆ ಬಂದಿಲ್ಲ.
ಇನ್ನೂ ಕೋಮಾ ಸ್ಥಿತಿಯಲ್ಲಿದ್ದ ಇಬ್ರಾಹಿಂ ನನ್ನು ಕಾಣಲು ಸಹ ಸಾಧ್ಯವಾಗದ ದುಃಖ ಎಲ್ಲರ ಮನದಲ್ಲೂ ಎದ್ದು ಕಾಣುತ್ತಿತ್ತು.
ಇಲ್ಲಿ ಪ್ರತಿದಿನವೂ ಆಸ್ಪತ್ರೆ ಬಿಲ್ ಹೆಚ್ಚಾಗುತ್ತಲೇ ಇತ್ತು.
ವಾರ ಎರಡು ಕಳೆಯಿತು. ವೈದ್ಯರಿಂದ ಒಂದೇ ಉತ್ತರ…”ಸದ್ಯ ಏನೂ ಹೇಳಲು ಸಾಧ್ಯವಿಲ್ಲ. ನಮ್ಮಿಂದ ಆಗುವಷ್ಟು ಪ್ರಯತ್ನ ಮಾಡುತ್ತಲೇ ಇದ್ದೇವೆ”.
ಎರಡು ವಾರ ಕಳೆದಾಗ ಕೈ ಬಿಟ್ಟದ್ದು ಬರೋಬ್ಬರಿ 3 ಲಕ್ಷ ರೂಪಾಯಿಗಳು.
ಎಲ್ಲಾ ಕಡೆ ಸಾಲ ಮಾಡಿ ಆಯಿತು. ಮನೆಯಲ್ಲಿದ್ದ ಒಡವೆಯೂ ಖಾಲಿಯಾಯಿತು.
ಇಲ್ಲಿ ನೋಡಿದರೆ ಯಾವುದೇ improvement ಇಲ್ಲ.
ಒಂದು ದಿನ ಊರವರೆಲ್ಲರೂ ಒಂದುಗೂಡಿ ವೈದ್ಯರ ಹತ್ತಿರ ಯಥಾರ್ಥ ತಿಳಿಸಲು ಒತ್ತಾಯಿಸಿದರು.
ಈ ರೀತಿ ಗುಂಪುಗಟ್ಟಿ ಬರುವುದು ವೈದ್ಯರಿಗೂ ಅಪಮಾನವಾಯಿತು. ಪರಿಸ್ಥಿತಿ ತಿಳಿಯಾದ ನಂತರ ವೈದ್ಯರು ಒಬ್ಬರೇ ಇರುವ ಸಮಯ ನೋಡಿ ಆಮಿನಾ ಕೊಠಡಿಯೊಳಗೆ ನುಗ್ಗಿದಳು.
“ಡಾಕ್ಟ್ರೆ .. ನನ್ನ ಪತಿಯನ್ನು ಒಮ್ಮೆ ನೋಡಬೇಕು.
ಬದುಕಿ ಉಳಿಯಬಹುದೇ ಡಾಕ್ಟರ್…”
ವೈದ್ಯರ ಸಿಟ್ಟು ಇಳಿದಿರಲಿಲ್ಲ.
ಆದರೂ ಸಮಾಧಾನ ಮಾಡುತ್ತಾ…
“ಆಮಿನಾ .. ನಿನಗೆಷ್ಟು ವಯಸ್ಸು?” ಎಂದು ಕೇಳಿದ.
ಆಕೆ 25 ಎಂದು ಹೇಳಿದಾಗ..
“ಇಷ್ಟು ಚಿಕ್ಕವಳೇ” ಎನ್ನುತ್ತಾ ಕುಹಕ ನೋಟ ನೋಡಿದ.
“ಡಾಕ್ಟ್ರೇ… ನಾವು ಬಡವರು. ಇದುವರೆಗೂ ಖರ್ಚು 3 ಲಕ್ಷ ದಾಟಿತು. ಇನ್ನೂ ಯಾವುದೇ ದಾರಿ ಕಾಣುತ್ತಿಲ್ಲ. ಬೇಕಿದ್ದರೆ ನನ್ನ ಜೀವವನ್ನೇ ಪಣ ಇಡುತ್ತೇನೆ..
ನನ್ನ ಇಬ್ರಾಹಿಂ ನನ್ನು ನನಗೆ ವಾಪಸ್ ಮಾಡಿ ಡಾಕ್ಟ್ರೇ….”
ಆಮಿನಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
…
ಡಾಕ್ಟರ್ ಆಮಿನಾಳ ಪಕ್ಕ ಬಂದು ನಿಂತಿದ್ದರು..
“ನೋಡು ಕೊನೆಯ ಪ್ರಯತ್ನ ಮಾಡಿ ನೋಡುತ್ತೇವೆ…”
ತನ್ನ ಪಕ್ಕ ನಿಂತು ತನ್ನ ತಲೆಯನ್ನು ನೇವರಿಸುವುದು ಕಂಡಾಗ ಆಮಿನಾಳಿಗೆ ಒಂದು ಕ್ಷಣ ಭಯವಾಯಿತು.
ಆಕೆ ವೈದ್ಯರಿಗೆ ಕೈ ಮುಗಿಯುತ್ತಾ ..”ನನ್ನ ಪ್ರಾಣವಾದ್ರೂ ಕೊಡ್ತೀನಿ.. ಅವರನ್ನು ಮಾತ್ರ ಉಳಿಸಿಬಿಡಿ” ಎಂದು ಹುಚ್ಚಿಯಂತೆ ಅಂಗಲಾಚುತ್ತಿದ್ದಳು.
ಇದ್ದ ಹಣವೆಲ್ಲಾ ಖಾಲಿಯಾಯ್ತು. ಇನ್ನು ಉಳಿದಿದ್ದು ಯಾವುದೂ ಇಲ್ಲ.
ದಯವಿಟ್ಟು ಕಾಪಾಡಿ” ಎಂದು ಮತ್ತೂ ಮತ್ತೂ ಅಂಗಲಾಚುತ್ತಿದ್ದಳು.
ವೈದ್ಯರು ಸಮಾಧಾನ ಹೇಳಿದರು…
“ಸರಿ ಬದುಕಿಸಲು ಪ್ರಯತ್ನಿಸಬಹುದು. ಆದರೆ ಖರ್ಚು ತುಂಬಾ ಆಗಬಹುದು.
ಇನ್ನೂ ಒಂದು ಲಕ್ಷ ಇದ್ದರೆ ಕೊನೆಯ ಪ್ರಯತ್ನ ಮಾಡಬಹುದು. ಆ ಹಣ ಹೊಂದಿಸಲು ಪ್ರಯತ್ನಿಸು”.
ವೈದ್ಯ ತನ್ನ ಬಿಳಿ ಕೋಟನ್ನು ಸರಿಮಾಡುತ್ತಾ ಹೊರ ನಡೆದ.
…..
ಆಮಿನಾ ಳಿಗೆ ದಿಕ್ಕೇ ತೋಚದಂತಾಯಿತು.
ಇನ್ನೂ ಒಂದು ಲಕ್ಷ … !!!
ಹೇಗಾದರೂ ಮಾಡಿ ಇಬ್ರಾಹಿಂ ನ ಪ್ರಾಣ ಉಳಿಸಬೇಕು.
ಆಮಿನಾ ನೇರವಾಗಿ ತನ್ನ ಅತ್ತೆ ಮಾವನವರು ಇದ್ದ ಕೊಠಡಿ ಯತ್ತ ಹೆಜ್ಜೆ ಹಾಕಿದಳು.
….
ದುಃಖಿತರಾಗಿ ಕೂತಿದ್ದ ಅತ್ತೆ, ಮಾವ ಮತ್ತು ಅಮ್ಮ.
ಮಾವ ಕೇಳಿದರು… “ವೈದ್ಯರು ಏನು ಹೇಳಿದರು..?”
ಆಕೆ ನಡುಗುತ್ತಾ… “ಕೊನೆಯ ಪ್ರಯತ್ನ ಮಾಡಬಹುದು ಎಂದು ಹೇಳಿದರು. ಅದಕ್ಕಾಗಿ ಇನ್ನೊಂದು ಆಪರೇಷನ್ ಬೇಕಾಗಬಹುದು. ಅದರ ಖರ್ಚು ಇನ್ನೂ ಒಂದು ಲಕ್ಷ ಆಗಬಹುದಂತೆ.”
ಎಲ್ಲರೂ ಪರಿಭ್ರಾಂತರಾದರು.
ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿದ್ದೇವೆ…”
ಅಮ್ಮ ಹೇಳಿದಳು.
“ಇರುವ 4 ಹಸುವನ್ನು ಮಾರಿಬಿಡೋಣ .. ಜೀವ ಉಳಿಯುವುದಾದರೆ ನಾನು ಹಣ ಹೊಂದಿಸುತ್ತೇನೆ”.
ಆಮಿನಾ ತುಸು ಆಲೋಚಿಸಿ
“ಬೇಡ…
ಈಗ ಉಳಿದಿರುವುದು ಒಂದೇ ದಾರಿ..
ನನ್ನ ಎಂಟು ಅಲೀಕತ್ತು.
ಇದಿಲ್ಲದೆಯೂ ನಾನು ಬದುಕಬಲ್ಲೆ.
ಎಲ್ಲರೂ ಒಂದು ಘಳಿಗೆ ಸ್ತಂಭೀಭೂತರಾದರು. “ಆಮಿನಾ ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಲೀಕತ್ತು…
ಅದನ್ನೇ ತ್ಯಾಗಮಾಡುತ್ತಿದ್ದಾಳೆ” ಎನ್ನುವುದು ಊಹಿಸಲೂ ಅಸಾಧ್ಯವಾಗಿತ್ತು ಅಮ್ಮಳಿಗೆ… !!!
…
ಅವಳು ತೀರ್ಮಾನಿಸಿಯೇ ಬಿಟ್ಟಿದ್ದಳು.
ಮಾವನವರಲ್ಲಿ ವೈದ್ಯರನ್ನು ಭೇಟಿ ಮಾಡಲು ಹೇಳಿ “ಆಪರೇಷನ್ ಗೆ ಬೇಕಾದ ತಯಾರಿ ನಡೆಸಲು ಸಿದ್ಧರಾಗಿ” ಎಂದು ತಿಳಿಸಿದಳು.
….
ಮಾವ ವಾಪಸ್ ಬಂದರು.
ನಾಳೆ ಬೆಳಿಗ್ಗೆ ಆಪರೇಷನ್ ಗೆ ಎಲ್ಲಾ ಸಿದ್ಧತೆ ಮಾಡುತ್ತಾರೆ.
ಹಣ ನಾಳೆ ಸಂಜೆಯ ಒಳಗೆ ಜಮಾ ಮಾಡಬೇಕು.
ಬೇರೇನೂ ಹೇಳದೆ ಕೊಠಡಿಯಿಂದ ಹೊರ ನಡೆದರು.
….
“ಉಮ್ಮಾ…
ನನ್ನ ಅಲೀಕತ್ತು ಬಿಚ್ಚಿ ಬಿಡಿ .. ” ಆಮಿನಾ ಅಳುತ್ತಾ ಅಮ್ಮನಲ್ಲಿ ಹೇಳಿದಳು..
ಒಂದೊಂದು ಅಲೀಕತ್ತು ಬಿಚ್ಚುತ್ತಿದ್ದಂತೆಯೂ ಅಮ್ಮ ಮತ್ತು ಮಗಳ ಕಣ್ಣೀರು ಕೋಡಿಯಾಗಿ ಹರಿಯುವುದು ಕಂಡಾಗ ಅತ್ತೆಯೂ ಕರವಸ್ತ್ರ ಮುಖಕ್ಕಿಟ್ಟು ಅಳಲು ಪ್ರಾರಂಭಿಸಿದಳು.
ಆಮಿನಾ ಅತ್ತೆಗೆ ಧೈರ್ಯ ತುಂಬುತ್ತಿದ್ದಳು.
….
“ನಾಳೆ ಸಂಜೆಯೊಳಗೆ ಹಣ ಕೌoಟರ್ ನಲ್ಲಿ ಕಟ್ಟಿದರಾಯಿತು.
ಇಂದು ಸಂಜೆಯೇ ಚಿನ್ನದ ಅಂಗಡಿಗೆ ಹೋಗಿ ಮಾರಿಬಿಟ್ಟು ಹಣ ಆಸ್ಪತ್ರೆಯಲ್ಲಿ ಇಟ್ಟರಾಯಿತು.
ನಾಳೆ ಹಣ ಕೊಟ್ಟು ರಶೀದಿ ಪಡೆದುಕೊಳ್ಳೋಣ” ಎಂದು ತೀರ್ಮಾನಿಸಲಾಯಿತು.
ಆಮಿನಾಳು ಮೊದಲ ಬಾರಿಗೆ ತನ್ನ ಬೋಳು ಕಿವಿಯನ್ನು ಕನ್ನಡಿಯಲ್ಲಿ ಕಂಡಳು.
ಕಣ್ಣೀರು ತಡೆಯಲಾಗಲಿಲ್ಲ.
ಗೋಳೋ ಎಂದು ಅತ್ತು ಬಿಟ್ಟಳು.
ಒಂದರ್ಧ ಗಂಟೆ ಕಳೆದು ಮಾವನವರ ಆಗಮನ…
ತನ್ನ ಸೊಸೆಯ ಬೋಳು ಕಿವಿ ಕಂಡಾಗ ಆತನಿಗೂ ದುಃಖ ಉಮ್ಮಳಿಸಿ ಬಂತು.
….
ಆಮಿನಾ ತನ್ನ ಅಮ್ಮನ ಮಡಿಲಲ್ಲಿ ತಲೆಯಿಟ್ಟು ನಿದ್ದೆಗೆ ಜಾರಿದ್ದಳು.
ಅಮ್ಮನಾದರೋ ಖುರಾನ್ ಪಠಿಸುತ್ತಾ ಪ್ರಾರ್ಥಿಸುತ್ತಿದ್ದಳು.
…
ಸುಮಾರು ಒಂದು ತಾಸು ಅಮ್ಮನ ಮಡಿಲಲ್ಲಿ ಮಲಗಿ ನಿದ್ರಿಸುತ್ತಿದ್ದ ಆಮಿನಾಳಿಗೆ ಥಟ್ಟನೆ ಎಚ್ಚರವಾಯಿತು.
ಎಚ್ಚರವಾದಾಗ ಒಂದೇ ಸವನೆ ಅಳಲು ಪ್ರಾರಂಭಿಸಿದಳು.
ಆಮಿನಾ ಅಳುತ್ತಾ … “ಉಮ್ಮಾ ನಾನೊಂದು ಕನಸು ಕಂಡೆ. ಇಬ್ರಾಹಿಂ ಕನಸಲ್ಲಿ ಬಂದು ನೀನು ಅಲೀಕತ್ತು ಮಾರಿ ನನ್ನ ಪ್ರಾಣ ಉಳಿಸಬೇಡ. ಅಲೀಕತ್ತು ಇಲ್ಲದ ಆಮಿನಾ ಳನ್ನು ನೋಡಲಾಗಲಿ ಆ ಮೊಗವನ್ನು ಮನಸ್ಸಿನಲ್ಲಿ ಗ್ರಹಿಸುವುದು ಕೂಡಾ ಕಷ್ಟ” ಎಂದು ಹೇಳಿ ಹೋದರು
ಆಮಿನಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
ಆದರೆ ಆಮಿನಾಳ ದೃಢ ನಿರ್ದಾರ ಬದಲಾಗಲಿಲ್ಲ.
…
ಅಲೀಕತ್ತು ಬ್ಯಾಗಿನೊಳಗೆ ಭದ್ರವಾಗಿತ್ತು.
ಮಾವ ಪೇಟೆಗೆ ಹೋಗಲು ತಯಾರಿ ನಡೆಸುತ್ತಿದ್ದರು. ಮುಸ್ಸಂಜೆಯ ಮೊದಲೇ ಚಿನ್ನವನ್ನು ಮಾರಿ ಹಣದೊಂದಿಗೆ ವಾಪಸ್ ಆಗಬೇಕು.
…
ಆಮಿನಾಳು ಮಾವ ಹೊರಗೆ ಹೋಗುವ ಆ ಸಮಯ ಅಲ್ಲಿ ನಿಲ್ಲುವುದಿಲ್ಲ ಎಂದು ತೀರ್ಮಾನಿಸಿ ICU ಹೊರಗಡೆ ಇಟ್ಟಿದ್ದ ಕುರ್ಚಿಯಲ್ಲಿ ಒಬ್ಬಳೇ ಹೋಗಿ ಕೂತಳು.
ಓ ದೇವಾ ನನ್ನ ಇಬ್ರಾಹಿಂ ನನ್ನು ವಾಪಸ್ ಕೊಟ್ಟುಬಿಡು ಎಂದು ದೇವರಲ್ಲಿ ಕಣ್ಮುಚ್ಚಿ ಪ್ರಾರ್ಥಿಸುತ್ತಿದ್ದಳು.
ಆಕೆ ಕಣ್ಣು ತೆರೆದಾಗ ವೈದ್ಯರು ಮತ್ತು ದಾದಿಯರು ತುರ್ತಾಗಿ ಅತ್ತಿಂದಿತ್ತ ಓಡುತ್ತಿದ್ದರು.
ಯಾವುದೋ ಅನಾಹುತ ಆಗಿದೆಯೆಂದು ಆ ದೃಶ್ಯವೇ ಹೇಳುತ್ತಿತ್ತು.
ಆಮಿನಾಳಿಗೆ ಗಾಬರಿಯಾಯಿತು.
ಏನೋ ಒಂದು ಸಂಭವಿಸಿದೆ…
ಆಮಿನಾ ನೇರವಾಗಿ ಕೊಠಡಿಗೆ ಹೋಗಿ ಅಮ್ಮ ಅತ್ತಿಗೆಯನ್ನೂ ಕರೆದಳು. ತುಸು ದೂರ ನಡೆದಿದ್ದ ಮಾವನೂ ಇದನ್ನು ಕಂಡು ವಾಪಸ್ಸಾದರು.
…..
ಹತ್ತು ಹದಿನೈದು ನಿಮಿಷವಾಗಿರಬಹುದು.
ದಾದಿಯೊಬ್ಬಳು ಮಾವನ ಬಳಿಗೆ ಬಂದು ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ಮಾವ ಏನೂ ಮಾತಾಡದೆ ಸೀದಾ ಕೊಠಡಿಯತ್ತ ನಡೆದರು.
ಅತ್ತೆ , ಅಮ್ಮ ಮತ್ತು ಆಮಿನಾ ಮಾವನನ್ನು ಹಿಂಬಾಲಿಸಿದರು.
…
ಮಾವಾ… ದಾದಿ ಏನು ಹೇಳಿದ್ದು…?
ಮಾವನಿಗೆ ಮಾತೇ ಹೊರಡಲಿಲ್ಲ.
ತನ್ನ ಕಯ್ಯಲ್ಲಿದ್ದ ಆಲೀಕತ್ತನ್ನು ಟೇಬಲ್ ಮೇಲೆ ಇರಿಸಿ…
“ಮಗಳೇ.. ಇನ್ನು ಇದನ್ನು ಮಾರುವ ಆವಶ್ಯಕತೆ ಇಲ್ಲ”
ಎಂದು ಸೊಸೆಯನ್ನು ತಬ್ಬಿ ಸಾಂತ್ವನ ಮಾಡತೊಡಗಿದರು.
ಆಮಿನಾಳಿಗೆ ಕಣ್ಣೀರು ಸುರಿಸಲು ಕಣ್ಣಲ್ಲಿ ಒಂದು ಹನಿಯೂ ಬಾಕಿ ಉಳಿದಿರಲಿಲ್ಲ.
(ಅಲೀಕತ್ತು =ಕಾಸರಗೋಡು/ಮಂಗಳೂರು ಭಾಗದ ಮುಸ್ಲಿಂ ಮಹಿಳೆಯರು ಕಿವಿಯ ಮೇಲ್ಭಾಗದಲ್ಲಿ ಧರಿಸುವ ಕಿವಿಯೋಲೆ).
ಸುಂದರವಾಗಿ ಹೇಳಿದ್ದೀರಿ ಕತೆಯನ್ನು.
ಕತೆ ಬಹಳ ಚೆನ್ನಾಗಿದೆ. ಸರಾಗ ಓದಿಸಿಕೊಂಡಿತು.