ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿಕ್ಷಣ ಬೇರೆಯವರಿಗೆ ನಿಮ್ಮನ್ನು ನೀವು ಹೋಲಿಸಿಕೊಂಡು ಅಯ್ಯೋ! ನಾನು ಅವನ/ಅವಳoತಿಲ್ಲ. ನನ್ನ ಬಳಿ ಅವನ/ಳ ಹಾಗೆ ಉತ್ತಮ ಜಾತಿ ಮತ ಭಾಷೆ ಇಲ್ಲ. ಅವನು ನೀಳವಾಗಿ ಸುಂದರವಾಗಿದ್ದಾನೆ ನಾನು ಕುರೂಪಿಯಾಗಿದ್ದೇನೆ. ಕುಬ್ಜವಾಗಿದ್ದೇನೆ. ಅವಳು ಬಿಳುಪು ಸುರೂಪಿ ನಾನು ಕಪ್ಪು ಕುರೂಪಿ ಎಂದು ಸದಾ ನಿಮ್ಮಲ್ಲಿರುವುದನ್ನು ಬಿಟ್ಟು ಇಲ್ಲದುದರ ಬಗೆಗೆ ಚಿಂತಿಸುತ್ತ ಕುಳಿತರೆ
ಫಲವಿಲ್ಲ. ನಿಮ್ಮ ಹಾಗೆ ಈ ಜಗದಲಿ ಯಾರೂ ಇಲ್ಲ. ನೀವು ಒಬ್ಬ ವಿಶಿಷ್ಟ ವ್ಯಕ್ತಿ. ಎನ್ನುವುದನ್ನು ಮರೆಯದಿರಿ. ನಿಮ್ಮಲ್ಲಿರುವುದನ್ನು ನೀವು ಸದಾ ಅಭಿನಂದಿಸಿಕೊಳ್ಳಬೇಕು. ನೆರೆಮನೆಯರ ಹತ್ತಿರವಿರುವುದು  ಬಂಗಾರದ ಸೂಜಿಯೆಂದು ಅದನ್ನು  ಕಣ್ಣಲ್ಲಿ ಚುಚ್ಚಿಕೊಳ್ಳಲು ಸಾಧ್ಯವೇ? ಹಾಗೆಯೇ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೆ  ಕೆಳಗೆ ಬಿದ್ದು ಮುಳ್ಳು ಕಣ್ಣಲ್ಲಿ ಚುಚ್ಚಿಕೊಳ್ಳದಿರುವುದಕ್ಕೆ ಸಂತಸ ಪಡಬೇಕು.

ಹಿಂದಿ ಚಿತ್ರ ರಂಗದಲ್ಲಿ ಬಿಗ್ ಬಿ ಎಂದು ಕರೆಸಿಕೊಂಡು ತಮ್ಮ ಇಳಿ ವಯಸ್ಸಿನಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಸಂಚಲನ ಮೂಡಿಸಿದ ಇಂಡಿಯನ್ ಐಕಾನ್ ಆಗಿರುವ ಅಮಿತಾಬ್, ನಂಬರ್ ಒನ್ ಆಗಿ ಮೆರೆಯುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಸಬರೊಂದಿಗೆ ತನ್ನನ್ನು ಹೋಲಿಸಿಕೊಂಡು ಟೀಕಿಸಿಕೊಂಡು ಹಿಂದುಳಿಯಲಿಲ್ಲ. ರಾಜಕೀಯ ತನಗೆ ಸರಿ ಹೊಂದದಿದ್ದಾಗ ಅದರ ಬಗ್ಗೆ ಧೇನಿಸುತ್ತ ಕುಳಿತುಕೊಳ್ಳದೇ,  ಕಿರುತೆರೆಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಎನ್ನುವ ಶೋ ನಡೆಸಲು ಬಂದ ಅವಕಾಶ ಕಡೆಗಣಿಸದೇ ಕನ್ನಡಿಯ ಮುಂದೆ ಮನೆ ಮಂದಿಯ ಮುಂದೆ ವಿಮರ್ಶಕರ ಮುಂದೆ ತಿಂಗಳಾನುಗಟ್ಟಲೇ ತಾಲೀಮು ನಡೆಸಿ ತನ್ನಲ್ಲಿರುವದನ್ನು ಮತ್ತಷ್ಟು ಪೋಷಿಸಿ ಬೆಳೆಸಿ ಬೆಳಕಿಗೆ ಚೆಲ್ಲಿದರು. ಆ ಯಶಸ್ಸು ಮತ್ತೆ ಅವರನ್ನು ಚಲನಚಿತ್ರ ರಂಗ ಕೈ ಬೀಸಿ ಕರೆಯುವಂತೆ ಮಾಡಿತು.

ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ

ವಿಜಯಶಾಲಿಗಳನ್ನು ಕಂಡು ಅವರೆಷ್ಟು ಬುದ್ಧಿವಂತರು ಅವರಿಗೆ ಕೊಟ್ಟಷ್ಟು ಬುದ್ಧಿವಂತಿಕೆಯನ್ನು ದೇವರು ನಮಗೆ ಕೊಟ್ಟಿಲ್ಲ. ಎಂದು ಕರಬುವುದು ಸರಿಯಲ್ಲ. ಬುದ್ಧಿವಂತಿಕೆಯೆನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಹಣ ಕೊಟ್ಟರೆ ದೊರೆಯುವಂಥ ವಸ್ತುವೂ ಅಲ್ಲ! ಛಲದಿಂದ ಕೂಡಿದ ಪ್ರಯತ್ನವುಳ್ಳವರು ಅದನ್ನು ಪಡೆಯಬಲ್ಲರು. ಸಾಧಕರನ್ನು ನೋಡಿ ಅವರೆಷ್ಟು  ಅದೃಷ್ಟವಂತರು ಎನ್ನುವುದು ಸುಲಭ. ಆದರೆ ಅವರು ಹಗಲು ರಾತ್ರಿ ಕಷ್ಟ ಪಟ್ಟು ಶ್ರಮ ವಹಿಸಿ ಅದೃಷ್ಟ ಗಳಿಸಿದರು ಎಂಬುದನ್ನು ತಿಳಿಯಬೇಕು. ಪ್ರಖ್ಯಾತ ಕ್ರಿಡಾಪಟುವೊಬ್ಬ ಹೇಳುತ್ತಾನೆ. ನಾನು ಎಷ್ಟು ಹೆಚ್ಚು ಪ್ರಾö್ಯಕ್ಟೀಸ್ ಮಾಡುತ್ತೇನೋ ಅಷ್ಟೇ ಹೆಚ್ಚು ನನಗೆ ಅದೃಷ್ಟ ಉಂಟಾಗುತ್ತದೆ ಎಂದು. ಹೀಗೆ ಮತ್ತೊಬ್ಬರಲ್ಲಿಯ ಶಕ್ತಿಗಳನ್ನು ನೋಡಿ ನಮ್ಮಲ್ಲಿಲ್ಲ ಎಂದು ಕೊರಗುತ್ತ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಬಹು ಪಾಲಿನ ಜನರು ತಮ್ಮಲ್ಲಿನ ಶಕ್ತಿಗಳನ್ನು ಗುರುತಿಸುವುದಿಲ್ಲ. ಎದುರು ವ್ಯಕ್ತಿಗಳಲ್ಲಿ ಇಲ್ಲದ ಶಕ್ತಿಗಳನ್ನು ಇರುವುದಾಗಿ ಭ್ರಮಿಸುತ್ತಾರೆ. ಪ್ರತಿ ವ್ಯಕ್ತಿಯಲ್ಲಿ ನಿಗೂಢ ಶಕ್ತಿಗಳು ಇರುತ್ತವೆ. ಅವುಗಳನ್ನು ಗುರುತಿಸಿ ಹೊರತೆಗೆದು ದಿನನಿತ್ಯ ಸಾಣೆ ಹಿಡಿಯಬೇಕು. ಮತ್ತೊಬ್ಬರ ಒತ್ತಾಯಕ್ಕೆ ಅಥವಾ ಯಾರೋ ಏನೋ ಮಾಡುತ್ತಿದ್ದಾರೆಂದು ಅದರಲ್ಲಿ ನೀವು ತೊಡಗಿಕೊಳ್ಳಲು ಅಶಕ್ತರೆಂದು ಕೊರಗಿದಿರಿ. ನಿಮ್ಮ ಆಸಕ್ತಿ ಅಭಿರುಚಿಗಳನ್ನು ಅರಿತು ಮುನ್ನಡೆಯಿರಿ.

 ನಿಮಗೆ ತಿಳಿದ ರಂಗದಲ್ಲಿ ನಿಷ್ಣಾತರಾಗಿ
 ಅದ್ಭುತಗಳನ್ನು ಸೃಷ್ಟಿಸುವ ಅತ್ಯುದ್ಭುತ ಶಕ್ತಿ ನಿಮ್ಮಲ್ಲಿ ಹುದುಗಿದೆ. ಎಂಬುದನ್ನು ನೆನಪಿನಲ್ಲಿಟ್ಟು ಮುನ್ನುಗ್ಗಿ.

ನಿಮ್ಮಲ್ಲಿರುವ ದೌರ್ಬಲ್ಯಗಳನ್ನು ಶಕ್ತಿಯಾಗಿ ಪರಿವರ್ತಿಸಿ.

ಬಹಳಷ್ಟು ಜನರು ತಮ್ಮಲ್ಲಿನ ದೌರ್ಬಲ್ಯಗಳನ್ನು ಮೇಲಿಂದ ಮೇಲೆ ಸಹಜವಾಗಿ ಹೇಳಿಕೊಳ್ಳುತಿರುತ್ತಾರೆ. ಆದರೆ ಅದರಲ್ಲಿ ಬಹುಪಾಲು ಊಹಿಸಿಕೊಂಡಿರುವುದೇ. ಇಲ್ಲಿ ದೌರ್ಬಲ್ಯಗಳೆಂದರೆ ಕೀಳರಿಮೆ, ಶೀಘ್ರ ನಿರ್ಧಾರ ತೆಗೆದುಕೊಳ್ಳದಿರುವುದು ವಿಫಲತೆಯ ಬಗ್ಗೆ ಆತಂಕ ಗಾಬರಿ ದಾಕ್ಷಿಣ್ಯಗಳೇ ಆಗಿವೆ. ಸಿ ಎನ್ ಎನ್ ಟೆಲಿವಿಸನ್ ಮುಖ್ಯಸ್ಥ  ಟೆಡ್ ಟರ್ನರ್ ಆತ್ಮಹತ್ಯೆ ಮಾಡಿಕೊಂಡಾಗ ಜೂನಿಯರ್ ಟರ್ನರ್ ಆತ್ಮವಿಶ್ವಾಸದಿಂದ ಉನ್ನತ ಸ್ಥಾನಕ್ಕೇರಿ,೨೪ ಗಂಟೆಗಳ ವಾರ್ತೆಗಳನ್ನು ಪ್ರಸಾರ ಮಾಡುತ್ತೇನೆ ಎಂದು ಅದನ್ನು ಸಾಧಿಸಿ ತೋರಿಸಿದರು. ಒಂದು ಸಭೆಯಲ್ಲಿ ಟರ್ನರ್ ಮಾತನಾಡುತ್ತ ಬಡಕುಟುಂಬದಲ್ಲಿ ಹುಟ್ಟುವುದು ನಿರಂತರ ಸಮಸ್ಯೆಗಳನ್ನು ಎದುರಿಸುವುದು ಎದುರೇಟುಗಳು ಬೀಳುವುದು ನನ್ನ ಅದೃಷ್ಟ. ನನ್ನ ತಂದೆ ಉಳ್ಳವನಾಗಿದ್ದು. ನನ್ನನ್ನು ಚೆನ್ನಾಗಿ ಓದಿಸಿದ್ದರೆ ನಾನು ಇಂದು ಈ ಸ್ಥಿತಿಗೆ ಖಂಡಿತ ಬರುತ್ತಿರಲಿಲ್ಲ. ಎಂದಿದ್ದ. ಟರ್ನರ್ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುತ್ತಿರುವುದರ ನನ್ನ ಉದ್ದೇಶವೆಲ್ಲ- ನಿಮ್ಮ ದೌರ್ಬಲ್ಯಗಳನ್ನು ತಿಳಿದು ನೀವೇ ಸ್ವಯಂ ನಿರ್ದಾರ ತೆಗೆದುಕೊಳ್ಳಿ. ಇದು ಸ್ವಯಂ ಪ್ರೇರಣೆಯಿಂದ ಮಾತ್ರ ಸಾಧ್ಯ.

 ಮುನ್ನಡೆಯ ಚಿನ್ಹೆಗಳಿಗಾಗಿ ಗಮನಿಸಿ.

ಅವು ಎಷ್ಟೇ ಚಿಕ್ಕದಾದರೂ ಸರಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಯೋಚಿಸುತ್ತಾರೆ  ಎಂಬ ಚಿಂತೆಯೇ ಕೀಳರಿಮೆ. ಆಶ್ಚರ್ಯವೆಂದರೆ ಇಂಥ ಆಲೋಚನೆಗಳಿಗೆ ಬೇರೆಯವರ ಬಳಿ ಸಮಯವೇ ಇರುವುದಿಲ್ಲ. ಮನುಷ್ಯ ದುರ್ಬಲ ಆಲೋಚನೆಗಳನ್ನು ಪರಿತ್ಯಜಿಸಿದರೆ ಆತನ ದೃಢವಾದ ನಿಶ್ಚಯಗಳಿಗೆ ಸಹಾಯಕವಾಗಲು ಎಲ್ಲ ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಜಾತಿ ಮತ ಬಣ್ಣ ಭಾಷೆ ವಿತಂಡವಾದಗಳ ಹುಚ್ಚನ್ನು ಬೆಂಬಲಿಸುವವರೊoದಿಗೆ ನಿಮಗೆ ಸಂಬoಧಿಸಿದ್ದನ್ನಷ್ಟೇ ಕೇಳಿ ಉಳಿದವುಗಳನ್ನೆಲ್ಲ ಹೊರ ತೂರಿಬಿಡಿ.

ಎಲ್ಲರೊಂದಿಗೆ ನಗು ನಗುತ್ತ ಸ್ನೇಹ ಮಾಡಿ.ಅಂತರoಗದ ಮಾತನ್ನು ಕೇಳುತ್ತಿರಿ ಮಾಡಬಾರದ ಕೆಲಸಗಳನ್ನು ಮಾಡಲು ಹೋದಾಗ ನಿಮ್ಮ ಅಂತರoಗ ಬೇಡವೆಂದು ಎಚ್ಚರಿಸುತ್ತದೆ ಅದನ್ನು ಪರಿಗಣಿಸಿ ಮುಂದುವರೆಯಿರಿ. ನಿಮ್ಮಲ್ಲಿರುವ ಬಲಹೀನತೆಗಳನ್ನು ನಿಯಂತ್ರಿಸುವುದಕ್ಕೆ ನೀವು ಪ್ರಾಮಾಣಿಕವಾಗಿ  ಪ್ರಯತ್ನಿಸಿ.

ಸ್ವಯಂ ಗೌರವ  

ಬೇಕನ್ ಹೇಳುವ ಪ್ರಕಾರ ಆತ್ಮಸಮ್ಮಾನವು ದುರ್ಗಣಗಳನ್ನು ವಶದೊಳಗಿಟ್ಟುಕೊಳ್ಳುವ ಮೊದಲನೆಯ ಕಡಿವಾಣವಾಗಿದೆ. ಮರ್ಯಾದೆ ಇಲ್ಲದ ಮನುಷ್ಯನು ರೆಕ್ಕೆಗಳಿಲ್ಲದ ಹಕ್ಕಿಯಂತೆಯೂ ಒಳ್ಳೆಯ ಬಣ್ಣವಾಗಲಿ  ಸುಗಂಧವಾಗಲಿ ಇಲ್ಲದ ಪುಷ್ಪದಂತೆಯೂ ಆಗುವದುದರಿಂದ ಜನಗಳ ನಡುವೆ ಸರಿಯಾಗಿ ಬಾಳಲಾರನು. ಎಂಬುದು ಜಿ ಕೃಷ್ಣಮೂರ್ತಿಯವರ ಮಾತು. ಬುದ್ಧಿವಂತರೆನಿಸಿಕೊoಡವರೂ ಖುದ್ದಾಗಿ ಏನನ್ನಾದರೂ ಕೈಗೆತ್ತಿಕೊಳ್ಳಬೇಕೆಂದರೆ ಹೆದುರುತ್ತಾರೆ. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಭಯಗೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ಬೆಳೆದು ಬಂದ ಪರಿಸರವಾಗಿರಬಹುದು. ಆದರೆ ಈಗ ಅದು ನಿಷ್ಪಯೋಜಕ. ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಲಲು ನಿಮ್ಮನ್ನು ನೀವು ಸ್ವೀಕರಿಸಿ. ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ. ನಿಮ್ಮ ಭಾವನೆಗಳಲ್ಲಿ ನಂಬಿಕೆಯಿಟ್ಟು ಗೌರವಿಸಿ. ದೌರ್ಬಲ್ಯಗಳನ್ನು ಇತರರೊಂದಿಗೆ ಹೋಲಿಸಬೇಡಿ. ನಿಮಗಿಂತ ಮೇಲೇರಿದವರನ್ನು ಕಂಡು ಅಸೂಯೆ ಪಡಬೇಡಿ. ಅವರಿಂದ ಸ್ಪೂರ್ತಿ ಪಡೆಯುವ ಗುಣ ಬೆಳೆಸಿಕೊಳ್ಳಿ. ಸ್ವ ಗೌರವವು ಯಶಸ್ಸನ್ನು ತಂದು ಕೊಡದಿರಬಹುದು ಆದರೆ ಸೋಲಿನ ಸನ್ನಿವೇಶವನ್ನು ಧೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಖಂಡಿತವಾಗಿಯೂ ತಂದು ಕೊಡಬಲ್ಲುದು. ಪ್ರತಿಯೊಂದನ್ನು ಮಾಡಲು ಶಕ್ತಿಯಿದ್ದರೂ ಪರಾವಲಂಬಿಗಳಾಗಬೇಡಿ. ಕಾರಂತರು ಹೇಳಿದಂತೆ ವಿಶ್ವಾಸವಿದ್ದರೆ ಪ್ರೀತಿ, ಪ್ರೀತಿಯಿದ್ದರೆ ಗೌರವ.

ಪ್ರಾರ್ಥಿಸಿ

ಪ್ರಾರ್ಥನೆಯಲ್ಲಿನ ಅತ್ಯದ್ಭುತ ಶಕ್ತಿ ಅನುಭವಿಸಿದವನಿಗೇ ಗೊತ್ತು ಅಂತೆಯೇ  ಪ್ರಾರ್ಥನೆಯ ಶಕ್ತಿ ಅರಿತ ಹಿರಿಯರು. ಪ್ರಾರ್ಥನೆಯಲ್ಲಿ ಅಗಾಧವಾದ ನಂಬಿಕೆಯಿಟ್ಟ ಗಾಂಧೀಜಿಯವರೇ ಹೇಳಿದಂತೆ ಪ್ರಾರ್ಥನೆ ಬರೀ ನಾಲಿಗೆ ನುಡಿಯಲ್ಲ ಅಂತಃಕರಣದ ಮಹಾರೂಪ. ಪ್ರಾರ್ಥಿಸಿ ನಿಮ್ಮ ಕೀಳರಿಮೆಯ ದಾಕ್ಷಿಣ್ಯದ ವೈಫಲ್ಯತೆಯ ಮನೋಕ್ಲೇಷವನ್ನು ಮಾಯವಾಗಿಸಿ.ಮೆರುಗಿನಿಂದ ಕೂಡಿದ ಅಪ್ಪಟ ಬಂಗಾರದ ಆಭರಣವನ್ನು  ಕೂಡ ಉಪಯೋಗಿಸದೇ ಹೋದರೆ ಅದರ  ಹೊಳಪು ಕಡಿಮೆಯಾಗುತ್ತದೆ.ಅಗತ್ಯವೆನಿಸಿದಾಗ ಮೆರುಗು ಹಾಕಿಸಬೇಕಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ಬಂಗಾರದ ಮೆರುಗಿನಂಥ ಶಕ್ತಿಗಳನ್ನು ನಾವು ಗುರುತಿಸಿ ಉಪಯೋಗಿಸದೇ ಹೋದರೆ ಬೆಲೆ  ಕಳೆದುಕೊಂಡ ನಾಣ್ಯದಂತಾಗುತ್ತೇವೆ. ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯಗಳ ಬಗ್ಗೆ ಹಕ್ಕಿದೆ. ಆದರೆ ಯಾರಿಗೂ ತನ್ನ ಶಕ್ತಿಗಳ ಬಗೆಗೆ ತಪ್ಪಾಗಿರಲು ಹಕ್ಕಿಲ್ಲ. ಹೀಗಾಗಿ ಇರದುದರ ಬಗೆಗೆ ಧೇನಿಸುವ ಬದಲು ಇರುವುದನು ಪೋಷಿಸಿ ಬೆಳೆಸಿ.ಟಾಗೋರ್ ಹೇಳಿದಂತೆ ಒಮ್ಮೆ ನಿರಾಶೆಯಾದರೆ ಜೀವನ ಸೌಖ್ಯಕ್ಕೆ ತಿಲಾಂಜಲಿ ಕೊಡಬೇಡಿ. ಮೇಣದ ತಲೆಯವರು ಬಿಸಿಲಲ್ಲಿ ಅಲೆಯಬಾರದು ಎಂಬ ಆಂಗ್ಲ ಗಾದೆಯoತಾಗದೇ ಉತ್ತಮವಾದುದನ್ನು ನಿರೀಕ್ಷಿಸಿ, ನಿಮ್ಮ ಪರಿಶ್ರಮದ ಮುಖಾಂತರ ಭಾವನೆಗೆ ತಕ್ಕಂತೆ ಫಲ ಪಡೆಯಿರಿ.


About The Author

Leave a Reply

You cannot copy content of this page

Scroll to Top