ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

 ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು

ಬಿದ್ದ ಕನಸದು ಬೀಳಿಸಿತು ಶ್ರೀರಾಮನನ್ನು ಆರಾಮ, ವಿರಾಮಗಳಿರದ ಚಿಂತೆಯ ಕೂಪದಲ್ಲಿ. ಪ್ರಜಾಪರ ಪುರುಷೋತ್ತಮ ಪ್ರಭುವೆನಿಸಿಕೊಂಡವನು ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದನ್ನೂ ಮರೆತುಬಿಟ್ಟ. ಮೂರು ಹಗಲುಗಳು ಎರಡು ಇರುಳುಗಳು ಕಳೆದುಹೋದವು.
ಮೂರನೆಯ ಇರುಳು ಅರಮನೆಯನ್ನು ಬಿಟ್ಟು ಹೊರಟ ಶ್ರೀರಾಮ ಪ್ರಭು ಗೂಢಚಾರನೊಬ್ಬನನ್ನು ಕಂಡು ಕೇಳಿದ ತನ್ನ ಆಳ್ವಿಕೆಯ ಪರಿಯನ್ನು. ತನ್ನನ್ನು ನಿಂದಿಸುವ, ಹೀಗಳೆಯುವ ಪ್ರಜೆಗಳು ಯಾರಾದರೂ ಇದ್ದಾರೆಯೇ? ಹಾಗೆ ಟೀಕಿಸುವವರಿದ್ದರೆ ಯಾವ ಕಾರಣಕ್ಕೆ ತೆಗಳುತ್ತಿರಬಹುದು ತನ್ನನ್ನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು ಅವನಲ್ಲಿ. “ಕೊಂಕು ಕೊರತೆಗಳೇನಿವೆ ನನ್ನ ಬಗೆಗೆ ಪ್ರಜೆಗಳದ್ದು?” ಎಂದು ಕೇಳಿದ ಗೂಢಚಾರನಲ್ಲಿ.
ಒಳ್ಳೆಯ ರಾಜನ ಲಕ್ಷಣವಿದು. ಅರಸನಾದವನು ತನ್ನನ್ನು ಹೊಗಳುವವರ ಮಾತನ್ನು ಎದೆಗಿಸಿಕೊಂಡರಷ್ಟೇ ಸಾಲದು. ತೆಗಳುವವರ ಕಟು ನುಡಿಗಳನ್ನೂ ತಲೆಗೇರಿಸಿಕೊಳ್ಳಬೇಕು. ಬೈದದ್ದರಲ್ಲಿ ನಿಜಾಂಶವೆಷ್ಟಿದೆ ಎನ್ನುವುದನ್ನು ವಿವೇಚಿಸಿ, ತನ್ನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕು. ಪೂರ್ಣ ಜಗವದು ಹೊಗಳಿ ನಲಿಯುವಂತೆ ಆಡಳಿತ ನೀಡಿದ್ದ ಶ್ರೀರಾಮಚಂದ್ರನೀಗ ತನ್ನ ಆಳ್ವಿಕೆಯ ಲೋಪದೋಷಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದ್ದ.
ಗೂಢಚಾರ ವಿನಯಪೂರ್ವಕವಾಗಿ ನುಡಿದ. “ಪ್ರಭುಗಳೇ, ಸೂರ್ಯನನ್ನು ಮಂಜು ಮುಸುಕಿದ ತಕ್ಷಣವೇ ಸೂರ್ಯನ ಕಾಂತಿಯದು ಮಂಕಾಗುವುದೇ! ಸೂರ್ಯನ ಪ್ರಬಲ ಕಿರಣಗಳಿಗೆ ಮಂಜು ಮಣಿದುಹೋಗುತ್ತದೆಯಷ್ಟೇ” ಎಂಬ ಗೂಢಚಾರನ ಮಾತು ಬಲವಾದ ಸುಳುಹನ್ನು ಒದಗಿಸಿತು, ಶ್ರೀರಾಮನ ಸೂಕ್ಷö್ಮಮತಿಗೆ.
ಸೂರ್ಯನನ್ನು ಮಂಜು ಮುಸುಕಿದೆಯೆಂದು ಗೂಢಚಾರ ಹೇಳಬೇಕಾದರೆ ತನ್ನ ಬಗೆಗೆ ಕೆಟ್ಟ ಮಾತು ವ್ಯಕ್ತವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅಧಿಕ ಸಮಯ ಬೇಕಾಗಲಿಲ್ಲ ಅಯೋಧ್ಯಾಪತಿಗೆ. “ಯಾವ ಟೀಕೆಯ ಮಾತದು ಬಂದಿದೆ ನನ್ನ ಬಗೆಗೆ?” ಎಂದು ಕೇಳಿದ ಅವನನ್ನು.
“ಅಂದು ಗೌತಮ ಋಷಿಯ ಪತ್ನಿ ಅಹಲ್ಯೆಗೆ ಮೋಕ್ಷದ ದಾರಿ ತೋರಿದವರು ನೀವು. ಎಂತಹ ಪರಮಪಾವನರು ನೀವು ಎನ್ನುವುದನ್ನು ಅರಿತುಕೊಳ್ಳಲು ಇನ್ನೇನು ಬೇಕು! ಮೂರ್ಖರೆನಿಸಿಕೊಂಡವರು ನುಡಿದ ಮಾತನ್ನು ನಿಮಗೆ ಹೇಳುವ ಇಚ್ಛೆಯಿಲ್ಲ ನನಗೆ. ಮನ್ನಿಸಬೇಕು ನನ್ನನ್ನು” ಎಂದು ಹೇಳಲು ಹಿಂಜರಿದ ಆ ಗೂಢಚಾರ.
ಶ್ರೀರಾಮ ಕೌತುಕವದು ಕೆರಳಿತು. ಇನ್ನು ಆಲಿಸದಿರಲಾರೆ ಟೀಕೆಯ ಮಾತನ್ನು ಎಂದುಕೊAಡವನು ಗೂಢಚಾರನನ್ನು ಒತ್ತಾಯಪಡಿಸಿದ. “ಅರಸನ ಆಜ್ಞೆಯಿದು. ನುಡಿಯಲೇಬೇಕು ನೀನೀಗ. ಮುಚ್ಚಿಟ್ಟರೆ ನನ್ನ ಮೇಲಾಣೆ” ಎಂದ.
ಅರಸನ ಮೇಲಿನ ಪ್ರೀತಿ ಗೂಢಚಾರನ ಬಾಯಿ ತೆರೆಸಿತು. ತಾನು ಗುಟ್ಟಾಗಿ ಕಂಡದ್ದನ್ನು, ಕೇಳಿದ್ದನ್ನು ಅರುಹತೊಡಗಿದ. “ನಿಮ್ಮ ಮಹಿಮೆಯನ್ನು ಅರಿಯುವ ಸಾಮರ್ಥ್ಯವಿರದ ಅಗಸನೊಬ್ಬ ಆಡಿದ ಮಾತಿದು. ಅವನ ಹೆಂಡತಿ ಅವನ ಮೇಲೆ ಮುನಿಸಿಕೊಂಡು ತವರುಮನೆ ಸೇರಿಕೊಂಡಿದ್ದಳು. ಅವಳ ತಂದೆ ತಾಯಿ ಮಗಳನ್ನು ಮತ್ತೆ ಗಂಡನ ಮನೆಗೆ ಬಿಟ್ಟುಹೋಗುವುದಕ್ಕಾಗಿ ಬಂದಿದ್ದರು. ಆಗ ಆ ಅಗಸ ಕೋಪದಿಂದ “ಬಿಟ್ಟುಹೋದ ಪತ್ನಿಯನ್ನು ಮತ್ತೆ ಆ ರಾಮನಂತೆ ಜೊತೆ ಸೇರಿಸಿಕೊಂಡು ಬದುಕುವವ ನಾನಲ್ಲ” ಎಂದು ಅಬ್ಬರಿಸಿದ. ಇಂಥದ್ದೊAದು ಟೀಕೆ ವ್ಯಕ್ತವಾಗಿದೆ ನಿಮ್ಮ ಬಗೆಗೆ” ಹೀಗೆ ಹೇಳಿದ ಗೂಢಚಾರ.
ಅವನನ್ನು ಕಳುಹಿಸಿದ ಶ್ರೀರಾಮ ಯೋಚನಾಸಾಗರದಲ್ಲಿ ಮುಳುಗಿಹೋದ. ಬಂಧನಕ್ಕೆ ಸಿಲುಕಿದ ಮದಗಜದಂತಾಯಿತು ಅವನ ಸ್ಥಿತಿ. ಪ್ರತೀ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ಅವನಿಗೆ ಬಟ್ಟೆಯನ್ನೊಗೆದು ಮಲಿನವನ್ನು ಇನ್ನಿಲ್ಲವಾಗಿಸುವವನ ಮಲಿನದ ಮಾತು ಬಲವಾಗಿಯೇ ಘಾಸಿಯನ್ನುಂಟುಮಾಡಿತ್ತು. ಒಬ್ಬನ ಮಾತು ಹಲವರ ಮಾತಾಗಿರಬಹುದು. ಹಲವರ ಅಭಿಪ್ರಾಯವದು ಒಬ್ಬನ ಸಿಡಿನುಡಿಯಲ್ಲಿ ವ್ಯಕ್ತಗೊಂಡಿರಬಹುದು ಎನಿಸಿತು ಅವನಿಗೆ. ಸೀತೆಯನ್ನು ತೊರೆಯುವುದೇ ಸೂಕ್ತ ಎಂದುಕೊAಡ ಪ್ರಭು ಶ್ರೀರಾಮಚಂದ್ರ.
ಸಭೆಯನ್ನು ನಡೆಸದೆ, ಯಾರಲ್ಲಿಯೂ ಬೆರೆಯದೆ, ರಾಜರಲ್ಲಿ ಮಾತನಾಡದೆ ಅನ್ಯಮನಸ್ಕನಾಗಿದ್ದ ಅಣ್ಣನ ರೀತಿ ಅಚ್ಚರಿ ಮೂಡಿಸಿತು ಅವನ ತಮ್ಮಂದಿರಲ್ಲಿ. ಅಂತಃಪುರ ಹೊಕ್ಕವರು ಕಂಡದ್ದು, ಆಲಸ್ಯದ ಭಾವದಲ್ಲಿ ಮೈಮರೆತವನಂತೆ ಕುಳಿತಿದ್ದ ಸಹೋದರ ಶ್ರೀರಾಮನನ್ನು. ಕಾಲಿಗೆರಗಿದರು ತಮ್ಮಂದಿರು. ನುಡಿಸುವ ಮನಸ್ಸಾಗಲಿಲ್ಲ.
ರಾಮನೇ ಮಾತನಾಡಿದ ಅವರಲ್ಲಿ. ಮನದ ದುಗುಡವನ್ನು ಬಿಚ್ಚಿಟ್ಟ. ಅಗಸನಾಡಿದ ಮಾತನ್ನು ಅವರಿಗೆ ಅರುಹಿದ. ತನ್ನ ಸತಿ ಸೀತೆ ಪತಿವ್ರತೆ ಎನ್ನುವುದರ ಅರಿವು ತನಗಿದೆ ಎಂದ. ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಅವಳನ್ನು ತೊರೆಯುವವ ತಾನೆಂದ.
ಅಣ್ಣನ ಮಾತು ಅಸಹನೀಯವಾಯಿತು ಆ ಕ್ಷಣವೇ ಅವನ ತಮ್ಮಂದಿರಿಗೆ. ಭರತನ ಕಂಠ ಗದ್ಗದಿಸಿತು ಶೋಕದಿಂದ. ಭಾರ ಹೃದಯದವನಾದ ಭರತ. “ಬುದ್ಧಿ ಇದ್ದವರು ಹಾಲು ಕೊಡುವ ಹಸುವನ್ನು ಕಾಡಿಗೆ ಬಿಡುತ್ತಾರೆಯೇ! ಅಂದು ನಿನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಗಿದೆ. ಆಗಲೇ ಅವಳ ಸತ್ಯ ಸಾಬೀತಾಗಿದೆ. ಹಾಗಿದ್ದೂ ಈಗ ಇಂಥ ನಿರ್ಧಾರವೇಕೆ?” ಎಂದು ಕೈಕೊಡವಿದ ಕೈಕೇಯಿಸುತ.
“ಸರಿ ತಪ್ಪುಗಳ ವಿವೇಚನೆಯಿಲ್ಲದೆ ಮೂರ್ಖನಂತೆ ವರ್ತಿಸಬೇಡ” ಎಂದು ಅಣ್ಣ ರಾಮನ ಮೇಲೆ ಉರಿಉರಿದ ಶತ್ರುಘ್ನ, ಶತ್ರುವಿನಂತೆ.
“ತುಂಬು ಗರ್ಭಿಣಿಯಾದವಳನ್ನು ಪ್ರೀತಿಯಿಂದ ಸಲಹಬೇಕೇ ಹೊರತು ತೊರೆಯುವುದು ಉಚಿತವಲ್ಲ” ಎಂದ ಲಕ್ಷö್ಮಣ.
ತಮ್ಮಂದಿರ ನುಡಿಯ ಹಿಂದಿನ ಒಲವದು ಶ್ರೀರಾಮನಿಗೆ ಮನದಟ್ಟಾಯಿತು. ಆದರೆ ಪರಿಸ್ಥಿತಿಗೆ ಕಟ್ಟುಬಿದ್ದ ಅವನು ಸೀತೆಯನ್ನು ತ್ಯಜಿಸಿ ಬದುಕುವ ದೃಢನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದ. ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರುವ ಹೊಣೆಯನ್ನವನು ವಹಿಸಿದ್ದು ತಮ್ಮ ಲಕ್ಷö್ಮಣನಿಗೆ.


About The Author

Leave a Reply

You cannot copy content of this page

Scroll to Top