ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನೋಟವು ಒಲವಾಗಿ ಪ್ರೇಮದ ಮಳೆಯು
ಹರಿದು ಬರಲಿ
ಮೀಟಲು ಹೃದಯದ ವೀಣೆಯ ತಂತಿಯು
ಹರುಷ ತರಲಿ

ಕಂಗಳ ನಿವೇದನೆ ಮನವ ಕಾಡದೇ
ಹೇಳು ಒಮ್ಮೆ
ಸಂಗಾತಿ ಬಳಿಯಿರೆ ಹೊಸತು ಕಲ್ಪನೆ
ತೇರನು ಏರಲಿ

ತನುವ ಸೋಕಿದಾಗ ಅವ್ಯಕ್ತ ಕಂಪನ
ಮಧುರ ಅನುಭೂತಿ
ತನನ ಹಾಡುತಿರೆ ಎದೆಯ ಭಾವವು
ನಲ್ಲನ ಸೇರಲಿ

ಅಡಗಿ ಕುಳಿತಿಹ ಸುಪ್ತ ಮನಸ್ಸು
ಸಾಗರದ ಅಲೆಯು
ಮೂಡಿದ ಅನುರಾಗ ಅರಳಿ ಹೂವಂಥ
ನಗುವ ಬೀರಲಿ

ಒಪ್ಪಿದ ಇನಿಯನ ಸೊಬಗಿನ     ನುಡಿಗೆ
ರೆಪ್ಪೆಯು ಬಾಗಿದೆ
ಅಪ್ಪಿದೆ ಕರಗಳು ಬಿಗಿದು ಓರಣದಿ
ಮಧುವ ಹೀರಲಿ

ಮರೆತು ಜಗವನು  ಕರಗಿ ಹೋಗುವ
ಉತ್ಕಟ ಬಯಕೆ
ಬೆರೆತ ಕನಸಿಗೆ ಮೊಳಕೆ ಚಿಗುರಿ
ಮೇಲಕೆ ಹಾರಲಿ

ನಿತ್ಯವೂ ಆರಾಧನೆ ಗುಡಿಯ ಒಳಗೆ
ವಿರಾಜಿಪ ದೇವಗೆ
ಸತ್ಯದ ನಿವೇದನೆ ರಾಧೆಯ ಬಾಳಲಿ
ಶುಭವ ಕೋರಲಿ


About The Author

Leave a Reply

You cannot copy content of this page

Scroll to Top