ಧಾರಾವಾಹಿ ಸಂಗಾತಿ-126
ರುಕ್ಮಿಣಿ ನಾಯರ್
ಒಬ್ಬ ಅಮ್ಮನ ಕಥೆ
ಸುಮತಿಯ ಡಯಾಲಿಸಿಸ್ ಗೆ ಬೆಂಗಳೂರಿಗೆ?

ರಾತ್ರಿ ತಾಯಿಯ ಜೊತೆಗೆ ಆಸ್ಪತ್ರೆಯಲ್ಲಿ ಮಲಗಲು ಬಂದ ಮಗಳು ಮಾರನೇ ದಿನ ಕಾಲೇಜಿಗೆ ರಜೆ ಹಾಕಿ ಬೆಳಗಿನ ಬಸ್ಸಿನಲ್ಲಿ ತನ್ನ ಊರಿಗೆ ಹೊರಟಳು. ಅಲ್ಲಿ ಹೋಗಿ ತೋಟದ ಸಾಹುಕಾರರು ಹಾಗೂ ಅವರ ಪತ್ನಿ ‘ಅಮ್ಮ’ ಅವರನ್ನು ಭೇಟಿ ಮಾಡಿದಳು. ತನ್ನ ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸೂಚಿಸಿರುವ ಬಗ್ಗೆ ಎಲ್ಲಾ ವಿವರಗಳನ್ನು ಅವರಿಗೆ ತಿಳಿಸಿದಳು….ನಿನ್ನ ಅಕ್ಕನಿಗೂ ತಿಳಿಸಿ ಕೊಡಿಸಬೇಕಾದ ಚಿಕಿತ್ಸೆಯನ್ನು ಕೊಡಿಸು….ಇಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ನೀವು ಹೋಗಲು ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಮಾಡುತ್ತೇವೆ…. ಎಂದರು. ಸಾಹುಕಾರರು ಹಾಗೂ ಅವರ ಪತ್ನಿಯ ಮಾತನ್ನು ಕೇಳಿದ ಹುಡುಗಿಗೆ ಸಂಜೀವಿನಿ ಸಿಕ್ಕಷ್ಟು ಸಂತೋಷವಾಯಿತು. ತನ್ನ ತಾಯಿಯ ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಹಾಯಕ್ಕೆ ನಿಲ್ಲುವ ಸಾಹುಕಾರರು ಅವರ ಪತ್ನಿಯ ಬಗ್ಗೆ ಗೌರವ ಹೆಚ್ಚಿತು. ತನ್ನ ಕೃತಜ್ಞತೆಯನ್ನು ತಿಳಿಸಲು ಅವಳಿಗೆ ಪದವಿಲ್ಲದಾಯಿತು.
ಸಾಹುಕಾರರಿಗೆ ಹಾಗೂ ಅವರ ಪತ್ನಿಗೆ ವಂದಿಸಿ ತುಸು ನೆಮ್ಮದಿಯಿಂದ ತಂಗಿಯನ್ನು ಭೇಟಿ ಮಾಡಲು ಮನೆಗೆ ಹೋದಳು. ತಂಗಿ ಶಾಲೆಗೆ ಹೊರಡುವ ತರಾತುರಿಯಲ್ಲಿದ್ದಳು. ಅಕ್ಕ ಇದ್ದಕ್ಕಿದ್ದ ಹಾಗೆ ಮನೆಗೆ ಬಂದಿರುವುದನ್ನು ಕಂಡು, ತಂಗಿಗೆ ಆಶ್ಚರ್ಯವಾಯಿತು. ಆದರೆ ತಾಯಿಗೆ ಹೆಚ್ಚಿನ ಚಿಕಿತ್ಸೆ ದೊರಕುವ ವಿಷಯ ತಿಳಿದು ಅವಳು ಸಂತೋಷ ಕೊಟ್ಟಳು…. “ಹಾಗಾದರೆ ತಾಯಿಯನ್ನು ಹೇಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೀಯಾ?…. ತಾಯಿಗೆ ಹೆಚ್ಚು ನಡೆದಾಡಲು ಸಾಧ್ಯವಿಲ್ಲ ಅಲ್ಲವೇ?…. ನಿನಗೆ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೋಗಿ ಅಭ್ಯಾಸವಿಲ್ಲ… ಯಾರ ಜೊತೆಗೆ ಹೋಗುತ್ತೀಯಾ?…. ಒಬ್ಬಳೇ ಅಮ್ಮನನ್ನು ಕರೆದುಕೊಂಡು ಹೋಗಲು ಸಾಧ್ಯವೇ ನಿನಗೆ? …. ನಾನು ಈ ಕೆಲಸವನ್ನು ಬಿಟ್ಟು ನಿನ್ನ ಜೊತೆ ಬರುವುದು ಸಾಧ್ಯವಿಲ್ಲ…. ಅದೂ ಅಲ್ಲದೇ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಮತ್ತು ಚಿಕಿತ್ಸೆ ಕೊಡಿಸಲು ಹೆಚ್ಚು ಹಣ ಬೇಕಲ್ಲವೇ ನಮ್ಮಲ್ಲಿ ಅಷ್ಟು ಹಣ ಇಲ್ಲವಲ್ಲ”…. ಎಂದು ಚಿಂತಿತಳಾಗಿ ಅಕ್ಕನನ್ನು ಕೇಳಿದಳು.
ತಂಗಿಯು ಕೇಳಿದ ಪ್ರಶ್ನೆಗಳಿಗೆ….”ತೋಟದ ಸಾಹುಕಾರರು ನಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ…. ಅವರ ಕಾರಿನಲ್ಲಿಯೇ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಕೂಡಾ ತಿಳಿಸಿದ್ದಾರೆ…. ನೋಡೋಣ ….ಚಿಕಿತ್ಸೆಯ ಖರ್ಚಿಗೆ ಹಣವನ್ನು ಅವರು ಕೊಡಬಹುದು…. ಅಮ್ಮನನ್ನು ಕರೆದುಕೊಂಡು ಹೋಗಲು ಜೊತೆಗೆ ಬಾವನನ್ನು ಬರುವಂತೆ ಕೇಳಿಕೊಳ್ಳುತ್ತೇನೆ…. ನೀನು ಹೆಚ್ಚು ಯೋಚನೆ ಮಾಡಬೇಡ…. ನೀನೊಬ್ಬಳೇ ಇಲ್ಲಿರುವುದನ್ನು ಯೋಚಿಸಿ ನನ್ನ ಮನಸ್ಸು ಸದಾ ಚಿಂತೆಗೆ ಒಳಗಾಗುತ್ತಿದೆ…. ನಮ್ಮ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀನು ಒಬ್ಬಳೇ ಇಲ್ಲಿದ್ದು ಅಮ್ಮನ ಕೆಲಸವನ್ನು ಕೂಡ ಮಾಡುತ್ತಿದ್ದೀಯಾ….. ನನ್ನ ಜೊತೆಗೆ ಹೆಗಲುಕೊಟ್ಟು ನಿಂತಿರುವ ನೀನು ಇಷ್ಟು ಚಿಕ್ಕ ವಯಸ್ಸಿಗೆ ನನಗಿಂತ ದೊಡ್ಡವಳಾಗಿ ಬಿಟ್ಟೆ”….. ಎಂದು ಹೇಳುತ್ತಾ ತಂಗಿಯನ್ನು ಬಿಗಿಯಾಗಿ ಅಪ್ಪಿಕೊಂಡಳು…. ಅಕ್ಕ ಈಗ ನಮಗೆ ನಾವೇ ಇರುವುದು…. ಹಾಗಾಗಿ ನಾವಿಬ್ಬರೂ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು…. ನೀನು ಧೈರ್ಯವಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ…. ನನಗೆ ಈಗ ಒಬ್ಬಳೇ ಇದ್ದು ಅಭ್ಯಾಸವಾಗಿ ಹೋಗಿದೆ”….ಎಂದಳು. ಇಬ್ಬರ ಕಣ್ಣುಗಳೂ ಹನಿ ಗೂಡಿದವು. ಕೆಲಸಕ್ಕೆ ಹೋಗುವ ಸಮಯವಾಗಿದ್ದರಿಂದ ತಂಗಿ ಮನೆಗೆ ಬೇಗ ಹಾಕಿ ಹೊರಟಳು. ಅಕ್ಕನೂ ಬಸ್ ನಿಲ್ದಾಣದ ಕಡೆಗೆ ಹೊರಟಳು.
ಹಿಂತಿರುಗಿ ಸಕಲೇಶಪುರಕ್ಕೆ ಹೋಗಲು ಮಧ್ಯಾಹ್ನದ ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಹಾಗಾಗಿ ಆ ಹುಡುಗಿ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಕುಳಿತುಕೊಂಡು ತನ್ನ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಆಗ ಅಲ್ಲಿ ಹಾದು ಹೋಗುತ್ತಿದ್ದ ಕೆಲಸಗಾರರು ಈ ಹುಡುಗಿಯನ್ನು ನೋಡಿ…. “ಸುಮತಿ ಟೀಚರ್ ಹೇಗಿದ್ದಾರೆ?”…. ಎಂದು ವಿಚಾರಿಸಿಕೊಳ್ಳುತ್ತಿದ್ದರು…. “ಪರವಾಗಿಲ್ಲ…. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…. ಸುಧಾರಿಸಿಕೊಳ್ಳುತ್ತಿದ್ದಾರೆ”…. ಎಂದು ಉತ್ತರ ಕೊಡುತ್ತಿದ್ದಳು. ಅದೇ ರೀತಿ ತಮ್ಮ ಕುಟುಂಬಕ್ಕೆ ಆಪ್ತರಾದ ಮಲಯಾಳಿ ಡ್ರೈವರ್ ಹಾಗೂ ಅವರ ಪತ್ನಿ ಆ ದಾರಿಯಲ್ಲಿ ಬಂದರು. ಸುಮತಿಯ ಎರಡನೇ ಮಗಳನ್ನು ಕಂಡು ಅವಳ ಬಳಿಗೆ ಬಂದು, ಸುಮತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ಅವರು ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಕಾರಣ ಎಲ್ಲಾ ವಿಚಾರವನ್ನು ಆ ಹುಡುಗಿ ಅವರಿಗೆ ತಿಳಿಸಿದಳು. ಅವರಿಬ್ಬರೂ ಕೂಡ ಎಸ್ಟೇಟಿನ ಸಾಹುಕಾರರು ಹಾಗೂ ಅಮ್ಮನನ್ನು ಕೊಂಡಾಡಿದರು…. “ನೀನು ಯಾವುದಕ್ಕೂ ಹೆದರಬೇಡ…. ನಮ್ಮ ಸಾಹುಕಾರರು ಮತ್ತು ಅಮ್ಮ ಇದ್ದಾರೆ…. ಅವರಿಬ್ಬರೂ ಬಹಳ ಒಳ್ಳೆಯವರು…. ದಯಾಳುಗಳು…. ಎಲ್ಲರಿಗೂ ಸಹಾಯ ಮಾಡುವ ಗುಣ ಉಳ್ಳವರು…. ನೀನು ಧೈರ್ಯವಾಗಿ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ….. ಎಲ್ಲವೂ ಒಳ್ಳೆಯದಾಗಲಿ”…. ಎಂದು ಹೇಳಿ ಆ ಹುಡುಗಿಯ ತಲೆಯನ್ನು ನೇವರಿಸಿ ಅಲ್ಲಿಂದ ಹೊರಟುಹೋದರು.
ಮಧ್ಯಾಹ್ನದ ಹನ್ನೆರಡು ಗಂಟೆಯ ಬಸ್ಸು ಬಂದಿತು. ಬಸ್ಸಿನಲ್ಲಿ ಹುಡುಗಿಯು ಸಕಲೇಶಪುರದ ಕಡೆಗೆ ಹೊರಟಳು. ಅವಳು ಆಶ್ರಮಕ್ಕೆ ಬಂದಾಗ ಅವಳ ಗೆಳತಿ ಮಧ್ಯಾಹ್ನದ ಅಡುಗೆಯನ್ನು ಮಾಡಿ ಮುಗಿಸಿ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದಳು. ಸುಮತಿಯ ಮಗಳನ್ನು ಕಂಡೊಡನೆ, ಹೋದ ವಿಷಯ ಏನಾಯ್ತು ಎಂದು ಉತ್ಸುಕತೆಯಿಂದ ಕೇಳಿದಳು. ಸಾಹುಕಾರರು ಮತ್ತು ಅವರ ಪತ್ನಿ ಹೇಳಿದ ವಿಷಯವನ್ನು ತಿಳಿಸಿದಳು. ಅವಳಿಗೂ ಸಂತೋಷವಾಯಿತು…. “ಸರಿ ನಡಿ ಊಟ ಮಾಡು…. ಆಸ್ಪತ್ರೆಗೆ ಹೋಗಿ ನಿನ್ನ ತಾಯಿಗೆ ಈ ವಿಷಯವನ್ನ ತಿಳಿಸು…. ಅವರಿಗೂ ಬಹಳ ಸಂತೋಷವಾಗುತ್ತದೆ”…. ಎಂದಳು. ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡಿದರು. ನಂತರ ಸುಮತಿಯ ಮಗಳು ತಾಯಿಯನ್ನು ನೋಡಲು ಆಸ್ಪತ್ರೆಗೆ ಹೊರಟಳು. ತಾಯಿಯ ಬಳಿಗೆ ಹೋಗಿ ಈ ಸಂತಸದ ಸುದ್ದಿ ಯಾವಾಗ ತಿಳಿಸುತ್ತೇನೋ ಎನ್ನುವ ತವಕ ಅವಳಲ್ಲಿತ್ತು. ಹಾಗಾಗಿ ಬೇಗನೇ ಹೆಜ್ಜೆ ಹಾಕಿದಳು. ಲಘುಬಗೆಯಿಂದ ಆಸ್ಪತ್ರೆಯ ಮೆಟ್ಟಿಲು ಹತ್ತಿದಳು. ಓಡು ನಡಿಗೆಯಲ್ಲಿ ವಾರ್ಡ್ ತಲುಪಿದಳು. ಸುಮತಿ ಆಸ್ಪತ್ರೆಯಿಂದ ದೊರೆತ ಮಧ್ಯಾಹ್ನದ ಊಟವನ್ನು ಮಾಡಿ, ಸಣ್ಣಗೆ ನಿದ್ರೆ ಮಾಡುತ್ತಿದ್ದಳು. ಯಾರೋ ಬಂದು ನಿಂತದ್ದು ಅರಿವಾಗಿ ಕಣ್ಣುಬಿಟ್ಟಳು. ಮಗಳ ಮುಖವನ್ನು ನೋಡಿದಳು ಅವಳು ಇಂದು ಬಹಳ ಖುಷಿಯಲ್ಲಿ ಇರುವಂತೆ ಕಂಡಿತು. ನಿಧಾನವಾಗಿ ಎದ್ದು ಕುಳಿತು ….”ಮಗಳೇ ಊಟ ಮಾಡಿದೆಯಾ?”…. ಎಂದು ಕೇಳಿದಳು ಅದಕ್ಕುತ್ತರವಾಗಿ ‘ಹೂಂ’ ಎಂದು ಹೇಳಿ ತಾಯಿಯನ್ನು ಬಿಗಿಯಾಗಿ ಅಪ್ಪಿಕೊಂಡಳು.




